ತೋಚಿದ್ದು-ಗೀಚಿದ್ದು

ಎಂ.ಎನ್. ವ್ಯಾಸರಾವ್

15.07.2019

ಕಳೆದ ಕೆಲ ದಿನಗಳಿಂದ ವಾಟ್ಸ್ ಅಪ್ ಗೆ “#ಶುಭೋದಯ” ಎಂಬ ಸಂದೇಶ ಬರಲಿಲ್ಲ.

ವಾಟ್ಸ್ ಅಪ್ ಕಡೆ ಜಾಸ್ತಿ ಗಮನ ಹರಿಸದೇ ಮುಖಪುಸ್ತಿಕೆಗೆ ಅಂಟಿಕೊಂಡ ನನಗೆ ಇದು ತಿಳಿದಿರಲಿಲ್ಲ.

ಬೆಳಿಗ್ಗೆ ಗೆಳೆಯರೊಬ್ಬರ ಸಂದೇಶ ಹೀಗಿತ್ತು: “ನಾನು ಕೇಳಿದ ಸುದ್ದಿ ಸುಳ್ಳಾಗಿರಲಿ” ಎಂದು. ಅದು ನನಗರ್ಥವಾಗಿರಲಿಲ್ಲ. ನಂತರ ಮುಖಪುಸ್ತಿಕೆ ಮತ್ತೆ ತೆರೆದಾಗ ಗೆಳೆಯರಾದ ಎಂ.ಎಸ್.ಮೂರ್ತಿ ಮತ್ತಿತರರು ಹಾಕಿದ ಚಿತ್ರ ಮತ್ತು ಸಂದೇಶಗಳು ನನ್ನನ್ನು ಚಿಂತೆಗೀಡು ಮಾಡಿತ್ತು…

ವಾಟ್ಸ್ ಅಪ್ ತೆರೆದು ನೋಡಿದೆ..

ಅದರಲ್ಲಿ ಅವರ ಮಗ ನಾನು ಮನು ವ್ಯಾಸರಾವ್. ವ್ಯಾಸರಾವ್ ಅವರ ಮಗ. ತಂದೆಯವರು ಮರಣ ಹೊಂದಿದ್ದಾರೆ. ..ಅವರ ಪಾರ್ಥೀವ ಶರೀರವನ್ನು ಕಿಮ್ಸ್ ನಲ್ಲಿ ಇಡುವ ವ್ಯವಸ್ಥೆಯಾಗಿದೆ. ಇದನ್ನು ಗೆಳೆಯರೊಂದಿಗೆ ಹಂಚಿಕೊಳ್ಳಿ ಎಂದು ಸಂದೇಶ ಕಳಿಸಿದ್ದರು… ಎಂ.ಎನ್.ವ್ಯಾಸರಾವ್ ಇನ್ನಿಲ್ಲ ಎಂಬ ದುಃಖದ ಸಂದೇಶವಾಗಿತ್ತು..

ದಿನಾಲೂ ಶುಭೋದಯ ಎಂದು ವಾಟ್ಸ್ ಅಪ್ ಸಂದೇಶ ಕಳಿಸುತ್ತಿದ್ದ ಹಿರಿಯರಾದ ವ್ಯಾಸರಾವ್ ಅವರಿಂದ ಸಂದೇಶ ಬರದೆ ಇಂದಿಗೆ ಸರಿಯಾಗಿ ಒಂದು ತಿಂಗಳಾಗಿತ್ತು.

ಜೂನ್ 15ರಂದು ಅವರು ಕಳಿಸಿದ ಹೂಗಳ ಚಿತ್ರದೊಟ್ಟಿಗೆ “ಶುಭೋದಯ” ಎಂಬ ಸಂದೇಶಗಳು ಇನ್ನು ಮುಂದೆ ಬರುವುದಿಲ್ಲವೆಂದು ತಿಳಿದು ದುಃಖವಾಗುತ್ತಿದೆ.

ಒಂದೆರಡು ಬಾರಿ ಕರೆ ಮಾಡಿದಾಗ ನಮ್ಮ ಪ್ರಕಾಶನದ ವಿಚಾರ ಕೇಳುತ್ತಿದ್ದರು. ನಮ್ಮ ಪ್ರಕಾಶನಕ್ಕೆ ಒಂದು ಕೃತಿ ನೀಡುವುದಾಗಿ ಹೇಳಿದ್ದರು.. ಆದರೆ ಈಗ ಅದು ಗಗನ ಕುಸುಮ..

 

ಅದು 2009ರ ಸಂದರ್ಭ.

ನಾಗಾಭರಣ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು.. ಅಕಾಡೆಮಿಯ ವತಿಯಿಂದ ತಾಲೂಕು/ಜಿಲ್ಲಾ ಕೇಂದ್ರಗಳಿಂದ ಅಭ್ಯರ್ಥಿಗಳನ್ನು ಆಯ್ದು ಅವರಿಗೆ ಎರಡು ದಿನಗಳ ತರಬೇತಿಯೊಂದಿಗೆ ಅವರನ್ನು ಆಯಾ ಜಿಲ್ಲಾ ಕೇಂದ್ರಗಳಲ್ಲಿ/ತಾಲೂಕುಗಳಲ್ಲಿ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಚಿತ್ರ ಪ್ರದರ್ಶನ ಮತ್ತು ವಿಚಾರ ಸಂಕಿರಣ ಮತ್ತಿತರ ಸಿನಿಮಾಗೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಈ ತರಬೇತಿಯನ್ನು ಬೆಂಗಳೂರು ಸಮೀಪ ಏರ್ಪಡಿಸಿದ್ದರು.

ಬಳ್ಳಾರಿ ಜಿಲ್ಲೆಯಿಂದ ನಾನು ಆಯ್ಕೆಯಾಗಿದ್ದೆ. ಅದು ಆಗಸ್ಟ್ 24 ಮತ್ತು 25ರ 2009ರಂದು ನಡೆಯುತ್ತಿದೆ. ನೀವು ಆಯ್ಕೆಯಾಗಿದ್ದೀರಾ ಬರಬೇಕು. ಊಟ ವಸತಿ ವ್ಯವಸ್ಥೆ ಇದೆ ಎಂದು ಪತ್ರ ಕಳಿಸಿದ್ದರು. ಬೆಂಗಳೂರು ಹತ್ತಿರದ ಚಿಂತಾಮಣಿಯಲ್ಲಿನ ಒಂದು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದರು(ಸ್ಥಳ ಮರೆತಿರುವೆ ಕ್ಷಮಿಸಿ).

ಅಲ್ಲಿ ನಾಗಾಭರಣ ಅವರ ನೇತೃತ್ವದಲ್ಲಿ ವ್ಯಾಸರಾವ್, ಪರಮೇಶಿ, ಗಿರೀಶ್ ಕಾಸರವಳ್ಳಿ ಡಾ. ಅಶೋಕ, ಜಿ.ಎನ್.ಮೋಹನ್ ಮತ್ತಿತರ ಘಟಾನುಘಟಿಗಳು ಮೇಳೈಸಿದ್ದರು. ಅಲ್ಲಿಯೇ ವ್ಯಾಸರಾವ್ ಅವರನ್ನು ಮುಖತಃ ಭೇಟಿಸಿದ್ದು…

ಅವರನ್ನು ಬೆಂಗಳೂರಿನಲ್ಲಿದ್ದಾಗ ಹಲವಾರು ಕಾರ್ಯಕ್ರಮದಲ್ಲಿ ಕಂಡಿದ್ದರೂ ಮಾತಾನಾಡಿಸಲು ಶಕ್ಯವಾಗಿರಲಿಲ್ಲ..

ನಾನು ಕ್ಯಾಮರಾ ಒಯ್ದಿದ್ದೆ. ಅವರ ಕೆಲ ಚಿತ್ರ ತೆಗೆದೆ. ಮಾತನಾಡುತ್ತ ಸಲಿಗೆಯಿಂದ ವಿಚಾರಿಸುತ್ತಿದ್ದರು..ನಂತರ ಮರುದಿನ ತರಬೇತಿ ಮುಗಿಸಿ ಬೀಳ್ಕೊಂಡೆವು..

ಹಂಪಿಗೆ ಬಂದ ನಂತರ ಛಾಯಾಚಿತ್ರಗಳನ್ನು ಅವರಿಗೆ ಕಳಿಸಿದೆ. ಖುಷಿಗೊಂಡು ಆಗಾಗ ಸಂದೇಶ ಕಳಿಸುತ್ತಾ ಇದ್ದರು..

ಯಾಜಿ ಪ್ರಕಾಶನದ ಎರಡನೇ ಕಂತಿನ ಪುಸ್ತಕಗಳ ಲೋಕಾರ್ಪಣೆಗೆ ಡಾ. ವೀಣಾ ಬನ್ನಂಜೆ ಅವರ ಕರೆಯ ಮೇರೆಗೆ ನಮ್ಮ ಕಾರ್ಯಕ್ರಮಕ್ಕೆ ಬಂದಿದ್ದರು. ಆಗ ಕೂಡಾ ನಮ್ಮ ನಡುವೆ ಮಾತುಕತೆ ನಡೆದಿತ್ತು..

ನಂತರ ಯಾಜಿ ಪ್ರಕಾಶನ ಪ್ರಕಟಿಸಿದ್ದ ಗೋಪಾಲ ವಾಜಪೇಯಿ ಅವರ ಸಂತ್ಯಾಗ ನಿಂತಾನ ಕಬೀರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಪುಸ್ತಕದ ಕುರಿತು ಮಾತನಾಡಲು ಆಗಮಿಸಿದ್ದರು. ಮತ್ತೆ ಅದೇ ವಿಚಾರ ವಿನಿಮಯ. ನಮ್ಮ ಮತ್ತು ವ್ಯಾಸರಾವ್ ಸರ್ ನಡುವೆ ಯಾವುದೋ ಅವಿನಾಭಾವ ಸಂಬಂಧ ಇತ್ತು.

 

ಇತ್ತೀಚೆಗಂತೂ ಎರಡು ದಿನಕ್ಕೊಮ್ಮೆಯಾದರೂ ವಾಟ್ಸ್ ಅಪ್ ಸಂದೇಶ ಬರುತ್ತಿತ್ತು. ನಮ್ಮ ಪ್ರಕಾಶನ ಕುರಿತ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಬರುತ್ತಿರುವ ಪುಸ್ತಕ ಬಹುಮಾನದ ಸುದ್ದಿಯನ್ನು ಹಂಚಿಕೊಂಡಾಗೆಲ್ಲ ದೂರದಿಂದಲೇ ಹಾರೈಸುತ್ತಿದ್ದರು.

ಅವರು ಯಾರಿಗೆ ಗೊತ್ತಿಲ್ಲ?!!

ಅವರ ಹೆಸರು ಕೇಳದವರೂ ಕೂಡ ಅವರು ಬರೆದ

ನಾಲ್ಕ ಒಂದ್ಲೆ ನಾಲ್ಕು

ನಾಲ್ಕೆರಡ್ಲೆ ಎಂಟು

ಇಷ್ಟೇ ಲೆಕ್ಕದ ನಂಟು

ಇಷ್ಟೇ ಲೆಕ್ಕದ ಗಂಟು

ಎಂದು ರಚಿಸಿದ ಸಿನಿಮಾ ಹಾಡು ಕೇಳದವರಿಲ್ಲ..ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿಯೂ ಸಾಹಿತ್ಯದಲ್ಲಿ ತೊಡಗಿಸಿಕೊಂಡು  ಕನ್ನಡ ಸಾರಸ್ವತಲೋಕಕ್ಕೆ ಮಹತ್ತರ ಕೊಡುಗೆ ನೀಡಿ ಕಾಲನ ಕರೆಗೆ ಓಗೊಟ್ಟ ಇನ್ನು ನೆನಪು ಮಾತ್ರ ಆಗಿರುವ

ಶ್ರೀಯುತ ಎಂ.ಎನ್. ವ್ಯಾಸರಾವ್ ಅವರಿಗೊಂದು ನುಡಿನಮನ.

 

Leave a Reply

Your email address will not be published. Required fields are marked *