ತೋಚಿದ್ದು-ಗೀಚಿದ್ದು

ಕೊರೊನಾ_ಸುತ್ತ ಅನುಮಾನದ_ಹುತ್ತ

ಕೊರೊನಾ_ಸುತ್ತ ಅನುಮಾನದ_ಹುತ್ತ

ಇಂದು ವೈದ್ಯರ ದಿನವಂತೆ. ಎಲ್ಲರೂ ಶುಭ ಕೋರುತ್ತಿದ್ದಾರೆ. ನಾನೂ ಎಲ್ಲ ವೈದ್ಯರಿಗೂ ಶುಭ ಕೋರುವೆ.

ವೈದ್ಯೋ ನಾರಾಯಣೋ ಹರಿಃ’ ಎಂಬಂತೆ ಅವರನ್ನು ದೇವರಿಗೆ ಹೋಲಿಸಿದ್ದಾರೆ; ಖಾಯಿಲೆ ಬಿದ್ದವರು, ಅವರನ್ನೇ ದೇವರೆಂದು ನಂಬಿದ್ದಾರೆ.

ಕಳೆದ ಎಂಟು ತಿಂಗಳ ಹಿಂದೆ ಶುರುವಾದ ಕೊರೊನಾ ಮಾರಿಯ ಹಾವಳಿ ಲಕ್ಷಾಂತರ ಜನರನ್ನು ನುಂಗಿ ನೀರು ಕುಡಿದಿದೆ.

ಆರು ತಿಂಗಳ ಹಿಂದೆ ಟಿ.ವಿಯಲ್ಲಿ ನೋಡುತ್ತಿದ್ದ ದೃಶ್ಯ ಈಗ ನಮ್ಮೂರಲ್ಲೇ ಕಾಣಿಸಿಕೊಂಡಿದೆ. ಚಿಕ್ಕ ಊರಾದ ಹೊಸಪೇಟೆಯಲ್ಲಿ 23 ಜನ ಸಾವನ್ನಪ್ಪಿದ್ದಾರೆ. ಮನೆ ಬಾಗಿಲಿಗೆ ಮಾರಿ ಬಂದು ನಿಂತಿದೆ. ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ನಿರೀಕ್ಷಿಸಲಾಗುತ್ತಿಲ್ಲ.

ಕಳೆದ ಹಲವಾರು ದಿನಗಳಿಂದ ನನಗೆ ಕಾಡುತ್ತಿರುವ ಪ್ರಶ್ನೆಯೆಂದರೆ ಈ ಕೊರೊನಾ ವೈರಸ್ಸಿನ ಜೀವಿತಾವಧಿ ಎಷ್ಟು? ಅದು ಎಲ್ಲೆಲ್ಲಿ ಹೇಗೆ ಬದುಕಿರುತ್ತದೆ?!

ಉದಾಹರಣೆಗೆ ಮನುಷ್ಯನ ಬಟ್ಟೆ ಮೇಲೆ ಬಿದ್ದರೆ, ಚೇರು ಟೇಬಲ್ಗಳ ಮೇಲೆ ಇದ್ದರೆ, ಕಬ್ಬಿಣದ ಗೇಟ್ ಮೇಲೆ ಇದ್ದರೆ, ವಾಹನಗಳ ಮೇಲೆ ಇದ್ದರೆ, ಕಟ್ಟಿಗೆ, ಪೇಪರ್, ಹಣ್ಣು, ತರಕಾರಿ ಮತ್ತಿತರ ವಸ್ತುಗಳ ಮೇಲಿದ್ದರೆ ಅದರ ಜೀವಿತಾವಧಿ ಎಷ್ಟು? ಯಾಕೆಂದರೆ ಮಾಧ್ಯಮದಲ್ಲಿ(ಕಳೆದ ಎರಡು ತಿಂಗಳಿಂದ ಟಿ.ವಿ ನೋಡುತ್ತಿಲ್ಲ) ನೋಡಿದರೆ ಕೊರೊನಾ ಬಂದವರೆಲ್ಲ ಸಾಯುತ್ತಾರೆಂಬ ಭಯ ಹುಟ್ಟಿಸುವುದು ಒಂದು ಕಡೆಯಾದರೆ, ಸೋಂಕಿತರ ಸಂಖ್ಯೆ ಜಾಸ್ತಿ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವೇಳೆಗೆ ಸರಿಯಾಗಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆಯಲ್ಲಿಯೂ ಸಾವಿನ ಸಂಖ್ಯೆ ಏರುಗತಿಯತ್ತ ಸಾಗಲು ಕಾರಣವಾಗಿದೆ.

ಶ್ರೀಸಾಮಾನ್ಯನಿಗೆ ಧೈರ್ಯ ತುಂಬಬೇಕಾದ ಮಾಧ್ಯಮ ಮಿತ್ರರು ಭಯವನ್ನು ತುಂಬುತ್ತಿದ್ದಾರೆ. ಹೃದಯ ರೋಗವಿದ್ದವರು ಟಿವಿ ನೋಡಿದರೆ ಹೃದಯಸ್ತಂಭನ ಆಗುವುದು ಖಚಿತ. ಆ ರೀತಿಯಲ್ಲಿ ಹೆದರಿಕೆಯನ್ನು ಹುಟ್ಟಿಸುತ್ತಿದ್ದಾರೆ(ಮುಖಪುಸ್ತಿಕೆಯಲ್ಲಿ ಕಂಡ ದೃಶ್ಯ).

ಸಾಮಾನ್ಯರಿಗೆ ಅನುಕೂಲವಾಗುವಂತೆ ಕೊರೊನಾ ವೈರಸ್ಸಿನ ಜೀವಿತಾವಧಿ ತಿಳಿಸಿದರೆ(ಮೇಲೆ ತಿಳಿಸಿದ ವಸ್ತುಗಳ ಮೇಲೆ ಇದ್ದಾಗ ಅದರ ಆಯಸ್ಸು) ನಾವು ಜಾಗೃತವಾಗಿರಲು ಸಾಧ್ಯ. ಹತ್ತು ಅಡಿಗಿಂತ ಹೆಚ್ಚು ದೂರ ಕ್ರಮಿಸಲಾರದ ಅದನ್ನು ಹೊಗಲಾಡಿಸಲು ಇಡೀ ಊರನ್ನೇ ಸ್ಯಾನಿಟೈಸ್ ಮಾಡಬೇಕೆ? ಅದು ಸ್ಯಾನಿಟೈಸ್ ಹಾಕಿದರೆ ಸಾಯುತ್ತದೆಯೇ? ಅಥವಾ ಆ ಕಂಪನಿಗೆ ಈ ಮೂಲಕ ನಾವುಗಳು ಸಹಾಯ ಮಾಡುತ್ತಿದ್ದೇವೆಯೇ? ತಿಳಿಯುತ್ತಿಲ್ಲ.  ಭಾರತದ ವೈದ್ಯ ಪದ್ಧತಿ ಸಾವಿರಾರು ವರುಷಗಳ ಅಧ್ಯಯನದ ಫಲ. ಅದನ್ನು ಅಲ್ಲಗಳೆದು ವಿದೇಶದ ಔಷಧಿ ಮಾಫಿಯಾಕ್ಕೆ ಬಲಿಯಾಗುತ್ತಿದ್ದೇವಾ? ಅರ್ಥ

ಮಾರಿ ಮನೆಯ ಮೆಟ್ಟಿಲಿಗೆ ಬಂದು ನಿಂತಿದೆ. ಒಳಗೆ ಬರಮಾಡಿಕೊಂಡರೆ ಅನಾಹುತ ಶತಃಸಿದ್ಧ. ಅದನ್ನು ಉಪಾಯದಿಂದ ದೃಢಮನಸ್ಸಿನಿಂದ ದೂರ ತಳ್ಳಬೇಕಾಗಿದೆ. ಇದಕ್ಕಾಗಿ ಊರಿಗೆ ಬಂದಿದೆ ನಮ್ಮ ಮನೆಗೆ ಬಂದಿಲ್ಲ ಎಂಬ ಉದಾಸೀನಭಾವ ತಾಳದೆ ವೈದ್ಯರ ಸಲಹೆಯ ಮೇರೆಗೆ ನಾವು ಅಂತರ ಕಾಯ್ದುಕೊಂಡು ಕೊರೊನಾ ಎಂಬ ಹೆಮ್ಮಾರಿಯನ್ನು ಒದ್ದೋಡಿಸಬೇಕಾಗಿದೆ. ಅದಕ್ಕೆ ಎಲ್ಲರೂ ಸಹಕರಿಸಿದರೆ ಆಗುಮಾಡಬಹುದು. ಇಲ್ಲವಾದರೆ ಊರಿಗೆ ಬಂದ ಮಾರಿ ಮನೆಯೊಳಕ್ಕೆ ಬರುವುದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಜಾಗೃತರಾಗಿರೋಣ. …

ದಯವಿಟ್ಟು ಕೊರೊನಾ ಜೀವಿತಾವಧಿಯನ್ನು ತಿಳಿಸುವ ಕೃಪೆ ಮಾಡಿ..

 

Leave a Reply

Your email address will not be published. Required fields are marked *