ಅದು 1996ರ ಅಕ್ಟೋಬರ್ ತಿಂಗಳು. ನಾನು ಹೊಸಪೇಟೆಗೆ ಬಂದು ಆಗಲೇ ಮೂರು ವರ್ಷ ಸಂದಿತ್ತು. ಅಕ್ಟೋಬರ್ 2ರಂದು ಹೆಗ್ಗೋಡಿನ ಚರಕದ ಪ್ರಾರಂಭದಲ್ಲಿ ಪ್ರಸನ್ನ ಅವರಿಗೆ ಜೊತೆಯಾಗಿದ್ದ ಸಾಂಶಿ ಪ್ರಭಾಕರ ಮತ್ತು ಉಮಾಮಹೇಶ್ವರ ಹೆಗಡೆ ಅವರು ತಮ್ಮ ಚರಕದ ಉತ್ಪನ್ನಗಳಾದ ಕೈಮಗ್ಗದಿಂದ ತಯಾರಿಸಿದ ಜುಬ್ಬಾಗಳನ್ನು ಹೊಸಪೇಟೆಯ ಆಸಕ್ತರಿಗೆ ತಲುಪಿಸಲು ಗಾಂಧಿ ಜಯಂತಿಯಂದು ಬಂದಿದ್ದರು. ಆ ಸಂದರ್ಭದಲ್ಲಿ ಕನ್ನಡ ವಿ.ವಿಯ ಮಿತ್ರರೊಂದಿಗೆ ಹೋಗಿದ್ದೆ. ಅವರು ಹೆಗ್ಗೋಡಿನವರೆಂದು ತಿಳಿದು ಇನ್ನೂ ಹತ್ತಿರವಾದೆ. ಹೆಗ್ಗೋಡಿನ ನಂಟು ಇರದಿದ್ದರೂ #ನೀನಾಸಂ ಬಳಗದ ಜಯತೀರ್ಥ ಜೋಶಿ, ಇಕ್ಬಾಲ್ ಅಹ್ಮದ್ ಮತ್ತು ಪುರುಷೋತ್ತಮ ತಲವಾಟ ಅವರ ಪರಿಚಯ ಮೊದಲೇ ಇತ್ತು. ಅಂಬಿಕಾನಗರ(ದಾಂಡೇಲಿ)ದಲ್ಲಿ ಹೂಲಿಶೇಖರ ಅವರು 1982ರಲ್ಲಿ ಹಮ್ಮಿಕೊಂಡ ರಂಗತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಹಿರಿಯರ ಮಾರ್ಗದರ್ಶನ ಪಡೆದಿದ್ದೆ. ಆ ನೆನಪು ಹಸಿರಾಗಿತ್ತು. ‘ಚರಕ’ ತಂಡ ಇಲ್ಲಿಗೆ ಬಂದಾಗ ಸಹಜವಾಗಿಯೇ ಆ ನೆನಪುಗಳೆಲ್ಲ ಒತ್ತರಿಸಿಕೊಂಡು ಬಂದವು. ಅದರ ನೆನಪಲ್ಲೇ ಸಾಂಶಿ ಮತ್ತು ಉಮಾಮಹೇಶ್ವರ ಅವರಿಗೆ ಹತ್ತಿರವಾದೆ. ಎರಡು ದಿನ ಇದ್ದು(ಮನೆಗೆ ಕರೆದಿದ್ದೆ) ಹೊರಟರು. ಹೊರಡುವಾಗ ಈ ಬಾರಿ ಸಂಸ್ಕೃತಿ ಶಿಬಿರಕ್ಕೆ ಬನ್ನಿ ಎಂದು ಆಹ್ವಾನಿಸಿದರು.
ನವೆಂಬರ್ ನಲ್ಲಿ ನಡೆದ ನೀನಾಸಂ ಸಂಸ್ಕೃತಿ ಶಿಬಿರಕ್ಕೆ ಹೊಸಪೇಟೆಯ ವಕೀಲ ಮಿತ್ರ ಸುರೇಶ ಪಂತರ್, ಅಶೋಕ ಜೊತೆಗೆ ಹೊರಟೆ. ಆಗಲೇ ಸುರೇಶ್ ಮತ್ತಿತರ ಗೆಳೆಯರು ಹೆಗ್ಗೋಡಿಗೆ ಚಿರಪರಿಚಿತರಾಗಿದ್ದರು. ಅವರ ಮುಖೇನ ಹಲವು ಗೆಳೆಯರ ಪರಿಚಯವಾಯ್ತು.
ಅಲ್ಲಿಗೆ ಬರುವ ಹಲವು ವಿದ್ವಾಂಸರ ಪರಿಚಯ ನನಗೆ ಮೊದಲೇ ಇತ್ತು. ಛಾಯಾಗ್ರಾಹಕನಾದ ಹಿನ್ನೆಲೆಯೂ ಕೂಡ ಅವರನ್ನೆಲ್ಲ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತು. ಶಿಬಿರ ಮುಗಿಸಿ ಹೊಸಪೇಟೆ ಸೇರಿದೆವು.
ಸಾಗರ ಸುತ್ತಮುತ್ತಲಿನ ಹುಡುಗಿಯನ್ನೇ ಮದುವೆಯಾಗಬೇಕೆಂದು ತಲಾಶ್ ಮಾಡುತ್ತಿದ್ದೆ. ಕವಿಕಾವ್ಯದಲ್ಲಿ ಕೆಸಲ ಮಾಡುತ್ತಿದ್ದ ಸವಿತಾಳನ್ನು ಸಾಂಶಿ ಪ್ರಭಾಕರ ಪರಿಚಯಿಸಿದ್ದರು. ಸವಿತಾಳ ಬಗ್ಗೆ ನನಗೆ ಆಗ ಆ ಭಾವನೆ ಇರಲಿಲ್ಲ. ಭೇಟಿಯಾದಾಗ ಸಹಜ ಮಾತುಗಳಿರುತ್ತಿದ್ದವು. ಶಿಬಿರವಲ್ಲದೆ ರಜಾದಿನಗಳಲ್ಲಿ ಒಂದೆರಡು ಕಡೆ ಹೋಗಿ ಬಂದೆ.
ಸಾಂಶಿ ಒಮ್ಮೆ ಎಲ್ಲೆಲ್ಲೋ ಹುಡುಕುವ ಬದಲು ಸವಿತಾಳನ್ನು ಮದುವೆಯಾಗಬಹುದಲ್ಲ. ಅವರ ತಂದೆಯವರೂ ಹುಡುಗನನ್ನು ಹುಡುಕುತ್ತಿದ್ದಾರೆ ಎಂದರು. ಆ ರೀತಿ ಯೋಚಿಸದ ನಾನು ಆಲೋಚಿಸಿ ತಿಳಿಸುವೆ ಎಂದು ಜಾರಿಕೊಂಡೆ. ಆ ನಂತರ ಯೋಚಿಸಿ ಸವಿತಾಳ ಬಳಿಯೇ ಮಾತಾಡಿದೆ. ಅರೆ ಸಮ್ಮತಿ ಸೂಚಿಸಿ ಅಪ್ಪ ಒಪ್ಪಿದರೆ ಸರಿ ಎಂದಳು.
ಕಾಕಾಲ್ ಅವರ ಮನೆಗೆ ಸಾಂಶಿ ಜೊತೆಗೆ ಹೋದೆ. ಆಗ ಚೌತಿ ಹಬ್ಬದ ಸಮಯ. ದೊಡ್ಡ ಮನೆ. ಮನೆಯ ಒಳಗೆ ಕಾಲಿಡುತ್ತಿದ್ದಂತೆ ಸಿದ್ಧಗೊಂಡ; ಸಿದ್ಧಗೊಳ್ಳುತ್ತಿರುವ ಬಗೆಬಗೆ ವಿನ್ಯಾಸದ ಗಣೇಶನ ಮೂರ್ತಿಗಳು. ಮನೆಯ ಯಜಮಾನರು(ಲಕ್ಷ್ಮೀನಾರಾಯಣರಾವ್ ಕಾಕಾಲ್) ಗಣೇಶ ಮೂರ್ತಿಗಳಿಗೆ ಬಣ್ಣ ತುಂಬುತ್ತಿದ್ದರು; ಅವರೊಂದಿಗೆ ಮಗ ಗಣೇಶ್ ಕಾಕಾಲ್ ಕೂಡ ಬಣ್ಣ ಹಚ್ಚುತ್ತಿದ್ದರು. ನಂತರದ ಬೆಳವಣಿಗೆಯಲ್ಲಿ ಸವಿತಾಳೊಂದಿಗೆ ಮದುವೆಯಾಗಿ ನಾನೂ ಕಾಕಲ್ ಕುಟುಂಬದ ಒಬ್ಬ ಸದಸ್ಯನಾದೆ.
ಕಾಕಲ್ ಕುಟುಂಬ ಹಲವು ವರ್ಷಗಳ ಹಿಂದೆ ಹೆಗ್ಗೋಡಿಗೆ ವಲಸೆ ಬಂದಿದ್ದು, ಈಗ ಹೆಗ್ಗೋಡಿನವರೇ ಆಗಿದ್ದಾರೆ. ತುಂಬಾ ಬಡತನದ ಹಿನ್ನೆಲೆಯ ನಮ್ಮ ಮಾವನವರು ಮಾಡದ ಕೆಲಸವಿಲ್ಲ. ಅಡಿಗೆ ತಯಾರಿಕೆಯಲ್ಲಿ ಸಿದ್ಧಹಸ್ತರು. ತಮ್ಮ ಬಜಾಜ್ M80 ಗಾಡಿಯನ್ನು ಪೂರ್ತಿ ಬಿಚ್ಚಿ ಜೋಡಿಸುವ, ಹಾಳಾದರೆ ಸರಿಪಡಿಸುವ ಕಲೆ ಅವರಿಗೆ ಕರಗತವಾಗಿತ್ತು. ಹಾಗೆಯೇ ಎಮ್ಮೆ ವ್ಯಾಪಾರ, ಫಸಲು ಗುತ್ತಿಗೆ, ಮದುವೆ ಮಾಡಿಸುವುದು, ದೇವಸ್ಥಾನದ ಉಸ್ತುವಾರಿ, ಕೃಷಿ ಚಟುವಟಿಕೆ ಹೀಗೆ ನಾನಾ ವ್ಯವಹಾರಗಳಲ್ಲಿ ಪಳಗಿದ್ದರು. ನೀನಾಸಂನ ಪ್ರಾರಂಭದ ದಿನದಲ್ಲಿ ಅಲ್ಲಿನ ಕ್ಯಾಂಟೀನ್ ಉಸ್ತುವಾರಿ ಮಾಡುವ ಮೂಲಕ ಹೆಗ್ಗೋಡಿನಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಇದಕ್ಕೆ ಸಾಥ್ ಕೊಟ್ಟವರೇ ಪತ್ನಿ ಜಯಲಕ್ಷ್ಮಿ ಮತ್ತು ಮಗ ಗಣೇಶ್ ಕಾಕಾಲ್.
ತಮ್ಮ ತಂದೆಯವರು ಪ್ರಾರಂಭಿಸಿದ ಈ ಕಲೆಯನ್ನು ಲಕ್ಷ್ಮಿನಾರಾಯಣರಾವ್ ಕಾಕಾಲ್ ಅವರು ಹಲವು ವರ್ಷಗಳಿಂದ ಮಾಡುತ್ತಲೇ ಬಂದಿದ್ದಾರೆ. ಮನೆಯಲ್ಲಿಯೇ ಸರಿಸುಮಾರು 50ಕ್ಕೂ ಹೆಚ್ಚು ಗಣಪತಿಗಳನ್ನು ತಯಾರಿಸುತ್ತಿದ್ದರು. ಊರಿನ ಸುತ್ತಮುತ್ತಲ ಮನೆಯವರು, ಸಂಘ-ಸಂಸ್ಥೆಗಳಿಗಾಗಿ ಗಣೇಶಮೂರ್ತಿ ಪಡೆದು ಕೈಲಾದಷ್ಟು ಹಣವನ್ನೋ, ಅಕ್ಕಿಯನ್ನೋ ನೀಡಿ ಗಣಪತಿ ಒಯ್ಯುತ್ತಿದ್ದರು. ಇಷ್ಟೇ ಕೊಡಿ ಎಂದು ಯಾವತ್ತೂ ಕೇಳಿದವರಲ್ಲ. ಕಡಿಮೆ ಕೊಟ್ಟರೆ ದುಸರಾ ಮಾತಾಡದೆ ಗಣಪತಿಯನ್ನು ಅವರು ತಂದ ಬುಟ್ಟಿಯಲ್ಲಿಟ್ಟು ಕಳಿಸಿ ಕೊಡುತ್ತಿದ್ದರು. ಅವರಿಗೆ ನಾಲ್ಕು ಜನ ಗಂಡುಮಕ್ಕಳು. ಇಬ್ಬರು ಹೆಣ್ಣುಮಕ್ಕಳು. ಇಲ್ಲಿಯ ಕಥಾ ನಾಯಕ ಗಣೇಶ್ ಕಾಕಾಲ್.
ಗಣೇಶ ಕಾಕಾಲ್ ಅವರ ಸಹೋದರರು ಬೆಂಗಳೂರು ಸೇರಿ ಜೀವನ ಕಂಡುಕೊಂಡರೆ, ಪಾರ್ವತಿ ಪರಮೇಶ್ವರರೇ ತನ್ನ ಸರ್ವಸ್ವ ಎಂದು ನಂಬಿದ್ದ ‘ಗಣೇಶ’ನಂತೆ ಇವರು ತಂದೆಯ ಜೊತೆಗೆ ನೀನಾಸಂ ಕ್ಯಾಂಟೀನ್ ಉಸ್ತುವಾರಿ, ಗಣಪತಿ ತಯಾರಿಕೆ, ತೋಟದ ಕೆಲಸಗಳಿಗೆ ತಂದೆಗೆ ಸಹಾಯ ಹೀಗೆ ಹಲವು ಕಾರ್ಯದಲ್ಲಿ ಕೈಜೋಡಿಸಿದ್ದರು. ಸ್ವಲ್ಪ ದಿನಗಳ ನಂತರ ನೀನಾಸಂ ಕ್ಯಾಂಟೀನ್ ಬಿಟ್ಟು ಸ್ವಂತ ದುಡಿಮೆಗೆ ತೊಡಗಿಕೊಳ್ಳಲು ಉತ್ಸುಕರಾದರು. ಅದಕ್ಕೆ ತಂದೆಯವರ ಸಹಕಾರ ಇತ್ತು.
ತಂದೆ ತಾಯಿ, ಸಹೋದರರ ಸಹಕಾರದೊಂದಿಗೆ 1996ರಲ್ಲಿ ಹೆಗ್ಗೋಡಿನಲ್ಲಿ “ಕಾಕಾಲ್ಉಪ್ಪಿನಕಾಯಿ” ಫ್ಯಾಕ್ಟರಿಗೆ ಬುನಾದಿ ಹಾಕಿದರು. ಮೊದಲ ವರ್ಷ ಮಳೆಗೆ ಇವರು ಹಾಕಿದ ತಗಡಿನ ಕಟ್ಟಡ ಧರಾಶಾಹಿಯಾಯ್ತು. ಎದೆಗುಂದದೆ ಮರಳಿ ಕಟ್ಟಡವನ್ನು ಕಟ್ಟಿ ಕರಗತ ಮಾಡಿಕೊಂಡಿದ್ದ “ಅಪ್ಪೇಮಿಡಿ ಉಪ್ಪಿನಕಾಯಿ”ಯ ರುಚಿಯನ್ನು ಗ್ರಾಹಕರಿಗೆ ಪರಿಚಯಿಸಿದರು. ಸ್ವಂತ ಬಲದಿಂದ ಕಳೆದ 22 ವರ್ಷಗಳಿಂದ ಕಾಕಾಲ್ ಉಪ್ಪಿನಕಾಯಿ ಊರು, ಜಿಲ್ಲೆಗಳನ್ನು ದಾಟಿ ಪರ ರಾಜ್ಯ ಮತ್ತು ವಿದೇಶಗಳಿಗೂ ರಫ್ತಾಗುತ್ತಿದೆ. ಇವರು ತಯಾರಿಸುವ ಹನ್ನೆರಡಕ್ಕೂ ಹೆಚ್ಚಿನ ವಿವಿಧ ಉಪ್ಪಿನಕಾಯಿಗಳು ತಮ್ಮದೇ ರುಚಿಯನ್ನು ಉಳಿಸಿಕೊಂಡಿವೆ.
ಸಾಗರ-ಹೊಸನಗರ ರಸ್ತೆಗಂಟಿಕೊಂಡೇ ಇರುವ ಕಾಕಾಲ್ ಉಪ್ಪಿನಕಾಯಿ ತಯಾರಿಕಾ ಘಟಕಕ್ಕೆ ಹೆಗ್ಗೋಡಿಗೆ ಬರುವ ಪರ ಊರುಗಳ ನೆಂಟರಿಷ್ಟರು, ಪ್ರವಾಸಿಗಳು ಭೇಟಿ ನೀಡಿ ಇಲ್ಲಿನ ಉಪ್ಪಿನಕಾಯಿಗಳನ್ನು ಕೊಂಡು ಮನೆಗೆ ಒಯ್ಯುತ್ತಾರೆ. ಕಾಕಾಲ್ ಉಪ್ಪಿನಕಾಯಿ ಸಿಗಂಧೂರು, ಹೊರನಾಡು, ಧರ್ಮಸ್ಥಳ, ಇಡಗುಂಜಿ ಮತ್ತಿತರ ಪುಣ್ಯಕ್ಷೇತ್ರಗಳಲ್ಲಿಯೂ ಯಾತ್ರಾರ್ಥಿಗಳಿಗೆ ಕೈಗೆಟಕುವಂತೆ ತಮ್ಮ ವ್ಯಾಪಾರದ ಜಾಲವನ್ನು ವಿಸ್ತರಿಸಿದ್ದಾರೆ; ವಿಸ್ತರಿಸುತ್ತಿದ್ದಾರೆ.
ಇಷ್ಟೆಲ್ಲ ಒತ್ತಡಗಳ ನಡುವೆಯೂ ಇವರು ತಮ್ಮ ಮನೆಯ ಕೊಟ್ಟಿಗೆಯ ಕೆಲಸ, ತೋಟದ ಕೆಲಸ, ಫ್ಯಾಕ್ಟರಿಯ ಕೆಲಸ ಹಾಗೂ ಗಣಪತಿ ಹಬ್ಬದ ಸಂದರ್ಭದಲ್ಲಿ ತಂದೆಯವರು ಮಾಡುತ್ತಿದ್ದ ಗಣೇಶಮೂರ್ತಿಗಳನ್ನು ಕರಗತ ಮಾಡಿಕೊಂಡು ಬಿಡುವು ಮಾಡಿಕೊಂಡು ತಿಂಗಳುಗಳ ಕಾಲ ಅದರ ತಯಾರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬರಿಗೈಯಲ್ಲೇ ತಯಾರಿಸಿದ ಇವರ ಗಣಪ ಮನಸೆಳೆಯುವಂತಿದೆ. ಹಾಗೆಯೇ ಈಗಲೂ ಕೂಡ ಹಳೆ ಪದ್ಧತಿಯನ್ನೇ ಮುಂದುವರಿಸಿದ್ದಾರೆ. ಯಾವ ಅಚ್ಚನ್ನೂ ಬಳಸದೇ ತಾವು ತಂದೆಯವರಿಂದ ಕಲಿತ ವಿದ್ಯೆಯನ್ನು ಕರಗತ ಮಾಡಿಕೊಂಡು, ಪತ್ರಿಕೆ ಮತ್ತಿತರ ಕಡೆ ಕಂಡ ಹಲವು ಬಗೆಯ ಗಣೇಶನ ಮೂರ್ತಿಗಳನ್ನು ತಮ್ಮದೇ ಶೈಲಿಯಲ್ಲಿ ತಯಾರಿಸುತ್ತಾರೆ. ಇವರು ಸಿದ್ಧಗೊಳಿಸಿದ ಗಣೇಶನ ಮೂರ್ತಿಗೆ ಉಳ್ಳವರು ಶಕ್ತ್ಯಾನುಸಾರ ಹಣ ಕೊಟ್ಟು ಒಯ್ದರೆ, ಬಡವರ ಬಳಿ ಇವರಾಗಿ ಹಣ ಕೇಳುವುದಿಲ್ಲ. ಅವರು ಕೊಟ್ಟಷ್ಟು ಸ್ವೀಕರಿಸುವ ಗುಣ ಅವರ ಅಜ್ಜನ ಕಾಲದಿಂದಲೂ ಬಂದಿದೆ. ಅದನ್ನೇ ಮುಂದುವರಿಸಿದ್ದಾರೆ.
ಈ ಎಲ್ಲ ಕೆಲಸಗಳ ನಡುವೆ ಹೆಗ್ಗೋಡಿನ ಸೊಸೈಟಿ ಚುನಾವಣೆಗೆ ಹಲವರ ಒತ್ತಾಯದ ಮೇರೆಗೆ ನಿಂತು, ಆರಿಸಿ ಬಂದರು. ಅವರ ಅಧ್ಯಕ್ಷತೆಯಲ್ಲಿ ಸುವರ್ಣ ಮಹೋತ್ಸವ ನಡೆಯಿತು. ಈ ವರ್ಷ ಮತ್ತೆ ಸೊಸೈಟಿ ಚುನಾವಣೆ ಘೋಷಣೆಯಾದಾಗ ಇವರು ಅವಿರೋಧವಾಗಿ ಆಯ್ಕೆಯಾದರು. ಇವರ ಕಾರ್ಯತತ್ಪರತೆಯೇ ಇವರನ್ನು ಅವಿರೋಧವಾಗಿ ಆಯ್ಕೆಗೊಳ್ಳಲು ಕಾರಣವಾಯಿತು ಎಂಬುದು ಅತಿಶಯೋಕ್ತಿಯಾಗಲಾರದು.
ಕೆಲಸಗಳ ಒತ್ತಡದ ನಡುವೆಯೂ ‘ಅಪ್ಪೇಮಿಡಿ ಬೆಳೆ’ಯನ್ನು ಉತ್ತೇಜಿಸುವ ಸಲುವಾಗಿ ತಮ್ಮ ಬ್ಯಾಣದಲ್ಲೇ ಹಲವು ರೀತಿಯ ಅಪ್ಪೇಮಿಡಿ ಗಿಡ ಬೆಳೆಸಿ, ಸಾಗರ ತಾಲೂಕಿಗೆ ಮಾದರಿಯಾಗಿದ್ದಾರೆ. ಅಪ್ಪೇಮಿಡಿ ಕುರಿತು ಕರಾರುವಾಕ್ಕಾಗಿ ಮಾತಾಡಬಲ್ಲ ಕೆಲವೇ ಕೆಲವರಲ್ಲಿ ಹೆಗ್ಗೋಡಿನ ಗಣೇಶ್ ಕಾಕಾಲ್ ಕೂಡಾ ಒಬ್ಬರು.
ಮುಂಡಿಗೇಸರ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಯಾಗಿ ನೆರವೇರಿಸಿದ್ದು ಶ್ಲಾಘನೀಯ ಕಾರ್ಯ. ಇವರಿಗೆ ದಿನಕ್ಕೊಂದೆರಡು ಎಲೆ ಅಡಿಕೆ ಹಾಕುವ ಹವ್ಯಾಸವಿದೆ. ತಂದೆಯವರಂತೆ ಆಪ್ತೇಷ್ಟರನ್ನು ವರುಷಕ್ಕೊಮ್ಮೆಯಾದರೂ ಮನೆಗೆ ಕರೆಸಿ ಊಟ ಹಾಕಿ ಸಂತೋಷಿಸುವ ಗುಣವಿದೆ. ಆಗಾಗ ಗಣಹೋಮ ಮತ್ತಿತರ ದೇವತಾಕಾರ್ಯದ ಹೆಸರಲ್ಲಿ ಆಪ್ತೇಷ್ಟರನ್ನು ಮನೆಗೆ ಕರೆಸಿ, ಊಟ ಬಡಿಸಿ ಸಂತಸಪಡುತ್ತಾರೆ.
ಕಳೆದ ಮೂರು ವರ್ಷಗಳಿಂದ ಹೆಗ್ಗೋಡಿನ ಸಮೀಪದಲ್ಲಿ ‘ಆಲೆಮನೆ ಹಬ್ಬ’ವನ್ನು ಆಯೋಜಿಸಿ ತಮ್ಮ ಬಂಧುಗಳನ್ನು, ಮಿತ್ರರನ್ನು, ಉಪ್ಪಿನಕಾಯಿ ಗ್ರಾಹಕರನ್ನು ಕರೆದು ಹೊಟ್ಟೆ ತುಂಬಾ ಕಬ್ಬಿನಹಾಲು, ತಿನ್ನುವಷ್ಟು ಬಿಸಿ ಜೋನಿಬೆಲ್ಲ, ಮಿರ್ಚಿ, ಮಂಡಳ, ಕಬ್ಬು ಹೀಗೆ ತರೆಹವಾರಿ ಉಪಚಾರವನ್ನು ತಮ್ಮ ಸ್ವಂತ ಹಣದಿಂದ ಮತ್ತು ಕೆಲವು ಗೆಳೆಯರೊಂದಿಗೆ ಸೇರಿ ಮಾಡುತ್ತಾ ಬಂದಿದ್ದಾರೆ. ಈ ಸುದ್ದಿ ತಿಳಿದು ೫೦೦ಕ್ಕೂ ಹೆಚ್ಚು ಜನ ಪಾಲ್ಗೊಂಡು ಇದರ ಸಂಘಟಕರಾದ ಗಣೇಶ್ ಅವರಿಗೆ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಕೊಡುಗೈ ದಾನಿಗಳು ಇವರ ಜೊತೆ ಕೈಜೋಡಿಸಿದ್ದಾರೆ.. ಮೊದಲ ವರ್ಷ ಐವತ್ತು ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ನಂತರದ ವರ್ಷ ಬರಲಾಗದವರು ‘ಗಣೇಶಾ ಈ ವರ್ಷ ಬಪ್ಲ್ ಆಯ್ದಿಲ್ಯೋ… ಮುಂದಿನ ವರ್ಷ ಮೊದ್ಲೇ ಹೇಳೋ ಮಾರಾಯಾ ನಂಗೋನೂ ಬತ್ತಿ’ ಎಂಬ ಸಣ್ಣ ಹಕ್ಕೊತ್ತಾಯವನ್ನು ನೆಂಟರಿಷ್ಟರು ಮಾಡಿದ್ದನ್ನು ಕೇಳಿದ್ದೇನೆ. ನಾನೂ ಒಂದು ಬಾರಿ ಹೋಗಿ ಆ ಸೊಬಗನ್ನು ಉಂಡಿದ್ದೇನೆ.
ಇವರ ಎಲ್ಲ ಕೆಲಸಗಳಿಗೆ ಸಹಕಾರಿಯಾಗಿ ತಾಯಿ ಜಯಲಕ್ಷ್ಮೀ ಕಾಕಾಲ್, ಹೆಂಡತಿ ರಾಜೇಶ್ವರಿ ಕಾಕಾಲ್, ಮಗ ಶ್ರೀರಾಮ ಇದ್ದಾರೆ.
ಈಗ ಮಗಳು ಮಂಗಳಾ ಕಾಕಾಲ್ ಓದು ಮುಗಿಸಿ ಕೆಲದಿನ ತಂದೆಗೆ ಸಹಾಯ ಮಾಡಲು ಕಟಿಬದ್ಧಳಾಗಿದ್ದಾಳೆ. ಅವಳ ಆಗಮನದ ನಂತರ ಫ್ಯಾಕ್ಟರಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ; ಆಗುತ್ತಿದೆ.
ಇಷ್ಟೆಲ್ಲಾ ಕೆಲಸವನ್ನು ಇವರು ಹೇಗೆ ನಿಭಾಯಿಸುತ್ತಾರೆ ಎಂಬುದು ನನಗಂತೂ ಸಖೇದಾಶ್ಚರ್ಯವನ್ನುಂಟು ಮಾಡಿದೆ. ಧಣಿವರಿಯದ ಜೀವ ನೂರ್ಕಾಲ ಆರೋಗ್ಯವಂತರಾಗಿ ಬಾಳಲಿ ಎಂದು ಆಶಿಸುವೆ.