ತೋಚಿದ್ದು-ಗೀಚಿದ್ದು

ಚುನಾವಣಾ ಪ್ರಕ್ರಿಯೆ

ಚುನಾವಣಾ ಪ್ರಕ್ರಿಯೆ

2018ಮೇ 12ರಂದು ರಾಜ್ಯ ವಿಧಾನ ಸಭೆ ಚುನಾವಣೆ ನಡೆಯಿತು…ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಕಳೆದ ನಲವತ್ತು ದಿನಗಳಿಂದಲೂ ಹಗಲು ರಾತ್ರಿಯೆನ್ನದೇ ಸಮರೋಪಾದಿಯಲ್ಲಿ ಕೆಲಸ ಮಾಡಿದ ಫಲವೇ ನ್ಯಾಯುತ ಮತದಾನವಾಗಲು ಕಾರಣ. ಆ ಅಧಿಕಾರಿ ವರ್ಗಕ್ಕೊಂದು #ಹ್ಯಾಟ್ಸ್_ಅಪ್ ಅನ್ನಲೇ ಬೇಕು…

ಅವರ ಕಾರ್ಯ ವೈಖರಿಯನ್ನು ತುಂಬಾ ಹತ್ತಿರದಿಂದ ನೋಡುವ ಅವಕಾಶ ಈ ವರ್ಷ ನನಗೆ ಲಭಿಸಿತು.

ಇದುವರೆಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರಲಿಲ್ಲ… ಇಷ್ಟು ವರ್ಷವೂ ಛಾಯಾಗ್ರಾಹಕನಾದ(ಟೆಕ್ನಿಕಲ್) ಹಿನ್ನೆಲೆಯಲ್ಲಿ ನನಗೆ ಆ ಅವಕಾಶ ಸಿಕ್ಕಿರಲಿಲ್ಲ.. ಈ ವರ್ಷ ಅಚಾನಕ್ ಆಗಿ ಕರೆ ಬಂತು.. ಮೊದಮೊದಲು ಮನಸ್ಸಿನಲ್ಲೇ ಶಪಿಸುತ್ತಾ ೩ನೇ ದಿನಾಂಕ ಕಾರ್ಯಗಾರದಲ್ಲಿ ಭಾಗವಹಿಸಿದೆ… ಪ್ರಥಮ ಅನುಭವವಾದುದರಿಂದ ನಮ್ಮ ಪ್ರಶ್ನೆಗಳು ಅಧಿಕವಾಗಿದ್ದವು… ಅಧಿಕಾರಿಗಳೂ ನಮಗೆ ತಾಳ್ಮೆಯಿಂದಲೇ ಸಮಜಾಯಿಸಿ ಕೊಡುತ್ತಿದ್ದರು. ಅವರೋ ಇಂಥ ಹಲವು ಚುನಾವಣೆ ಎದುರಿಸಿದವರು..ಆ ಅನುಭವದ ಹಿನ್ನೆಲೆಯಲ್ಲಿ ತಿಳಿಸಿ ಹೇಳುತ್ತಿದ್ದರು… ಈ ಬಾರಿ #ವಿವಿಪ್ಯಾಟ್ ಎಂಬ ಹೊಸ ಮತಯಂತ್ರವನ್ನು ಪರಿಚಯಿಸಿದ ಹಿನ್ನೆಲೆಯಲ್ಲಿ ಈಗಾಗಲೇ ನುರಿತಿರುವ(ಶಾಲಾ ಶಿಕ್ಷಕರು, ಕಾಲೇಜು ಅಧ್ಯಾಪಕರು) ಅಧಿಕಾರಿಗಳಿಗೂ ಇದು ಹೊಸ ಅನುಭವ… ಅವರೂ ಕುತೂಹಲದಿಂದ ಆಲಿಸುತ್ತಿದ್ದರು… ಒಂದು ಹಂತದ ತರಬೇತಿಯೊಂದಿಗೆ ಹಡಗಲಿ ಕಾರ್ಯಕ್ಷೇತ್ರಕ್ಕೆ ನಿಯುಕ್ತಿಗೊಳಿಸಿದ ಆರ್ಡರ್ ಕಾಪಿ ಪಡೆದು ಮನೆ ಸೇರಿದೆ…

8.5.2018ರಂದು ಬೆಳಿಗ್ಗೆ 6.30ಕ್ಕೆ ಹೊಸಪೇಟೆಯಿಂದ ಹಡಗಲಿಗೆ ತಲುಪಿದೆವು… ಕನಿಷ್ಟ 10 ಬೂತ್ ಗಳ ಸಿಬ್ಬಂದಿಗೆ ಒಂದು ಕೋಣೆಯಲ್ಲಿ ತರಬೇತಿ..ಅಲ್ಲಿ ಬೇರೆ ಬೇರೆ ಊರುಗಳಿಂದ ಬಂದ PRO, APRO, PO ಹಾಗೂ

ಆಶಾ ಕಾರ್ಯಕರ್ತೆಯರನ್ನು ಒಂದೆಡೆ ಸೇರಿಸಿ ಸಿಬ್ಬಂದಿಗಳ ಮುಖ ಭೇಟಿ ಹಾಗೂ ಪರಿಚಯ ಕಾರ್ಯಕ್ರಮದೊಂದಿಗೆ ತರಬೇತಿ. ಆನಂತರ ಮತ್ತೆ ಚುನಾವಣೆಯ ದಿನ ತೆಗೆದುಕೊಳ್ಳಬೇಕಾದ ಕರ್ತವ್ಯಗಳ ವಿವರಣೆ… ವಿವಿಪ್ಯಾಟ್ ಡೆಮೋ ಹೀಗೆ ಅವಿರತವಾಗಿ ಕಾರ್ಯಗಾರ ಜರುಗಿತು… PRO & APRO ಗಳಿಗೆ ಸತತ ನಾಲ್ಕು ಬಾರಿ  ತರಬೇತಿ ನೀಡಿದ್ದರು. PO ಮತ್ತು ಇತರೆ ಸಿಬ್ಬಂದಿಗಳಿಗೆ ಎರಡು ದಿನ ತರಬೇತಿ.. ಅಣಕು ಮತದಾನದ ವಿಡಿಯೋ ಪ್ರದರ್ಶನ ಹಾಗೂ ಮತದಾನದ ಸಂದರ್ಭದಲ್ಲಿ ಆಗುವ ಅಡೆತಡೆಗಳು, ಮತದಾರ ಮತದಾನ ಮಾಡಿಲ್ಲ ಎಂದು ಚಾಲೇಂಜ್ ಮಾಡಿದಾಗ ಅನುಸರಿಸಬೇಕಾದ ಕ್ರಮಗಳ ಕುರಿತು ಎರಡಕ್ಕಿಂತ ಹೆಚ್ಚಿನ ಅನುಭವಿ ಅಧಿಕಾರಿಗಳು ತರಬೇತಿ ನೀಡಿದರು. ನನಗೋ ಪ್ರಥಮಾನುಭವ.. ಎಲ್ಲವನ್ನು ಪ್ರಶ್ನಿಸಿ ಉತ್ತರ ಪಡೆಯುತ್ತಿದ್ದೆ. ಕೋಪಿಸದೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಅನುಮಾನ ಪರಿಹರಿಸುತ್ತಿದ್ದರು…

ಊಟದ ನಂತರ ಹಡಗಲಿಯ ಕೃಷಿ ಇಲಾಖೆಯ ಜಾಯಿಂಟ್ ಡೈರೆಕ್ಟರ್ ಶ್ರೀ ದಿವಾಕರ್ ಅವರು ಎಲ್ಲ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದರು. ಅವರ ಮಾತು ಕೇಳಿದ ಮೇಲೆ ಚುನಾವಣಾ ಕೆಲಸವನ್ನು ಅತಿ ಸುಲಭವಾಗಿ ಮುತುವರ್ಜಿ ವಹಿಸಿ ನಿರ್ವಹಿಸುವಂತೆ ನನ್ನನ್ನು ಹುರುಪುಗೊಳಿಸಿತು.. ಅವರು ಮಧ್ಯದಲ್ಲಿ ಜೋಕ್ ಮಾಡುತ್ತ ರಂಜಿಸುತ್ತಾ ಚುನಾವಣಾ ಕರ್ತವ್ಯವನ್ನು ನಿಭಾಯಿಸುವ ಪರಿಯನ್ನು ವಿವರಿಸಿದರು. ಆ ಅನುಭವದ ಮಾತು ಕೇಳಿ ಹೊಸಪೇಟೆ ತಲುಪಿದೆ.

11.5.2018ರ ಬೆಳಿಗ್ಗೆ 7 ಗಂಟೆಗೆ ಹೊಸಪೇಟೆಯಿಂದ ಹಡಗಲಿಗೆ ಪ್ರಯಾಣ. ಜೆಎಸ್ಎಸ್ ಶಾಲೆಯಲ್ಲಿ ನಮ್ಮನ್ನು ಪಂಗಡಗಳನ್ನಾಗಿ ವಿಂಗಡಿಸಿ ಪರಿಕರಗಳ ಕುರಿತು ವಿವರಣೆ ನೀಡಿದರು…

ಚುನಾವಣಾ ಸಿಬ್ಬಂದಿಗಳು, ತಾಲೂಕು ಆಡಳಿತ, ನಗರಸಭೆ, ಕೃಷಿ ಇಲಾಖೆ ಮತ್ತಿತರ ಸರಕಾರಿ ಸಿಬ್ಬಂದಿಗಳು ತಿಂಗಳುಗಳ ಕಾಲ ಕೆಲಸ ಮಾಡಿ ಬೂತ್ ಗಳಿಗೆ ಸರಬರಾಜು ಮಾಡಲು ಎಲ್ಲ ಪರಿಕರಗಳನ್ನು(ಗುಂಡುಸೂಜಿ, ದಾರ, ಮೊಂಬತ್ತಿಯಿಂದ ಹಿಡಿದು ಗಡಿ ಗುರುತಿಸುವ ಬಾವುಟಗಳವರೆಗೆ, ಇಂಕ್ ಒರೆಸುವ ಬಟ್ಟೆಯಿಂದ ಹಿಡಿದು ವಿವಿಧ ಬಗೆಯ ಲಕೋಟೆಗಳು ಸೇರಿ ಸರಿಸುಮಾರು 50ಕ್ಕೂ ಹೆಚ್ಚು ವಸ್ತುಗಳನ್ನು ಒಂದು ಬ್ಯಾಗ್ ನಲ್ಲಿ ತುಂಬಿಟ್ಟಿದ್ದರು… ಅದನ್ನು PRO ಪಡೆದು ಪರಿಶೀಲಿಸಿ ಕಡಿಮೆ ಬಂದ ಅಥವಾ ಬಿಟ್ಟು ಹೋದ ವಸ್ತುಗಳನ್ನು ಪಡೆದು ಹೊರಟೆವು.

ನಮ್ಮ ಕಾರ್ಯಕ್ಷೇತ್ರ ಹಡಗಲಿ ಸಮೀಪದ ಉಪನಾಯಕನಹಳ್ಳಿ. ಆ ಊರು ತಲುಪಿದಾಗ ಸಂಜೆ 5 ಗಂಟೆ. ನನ್ನೊಂದಿಗೆ PRO, APRO, PO ಆಶಾಕಾರ್ಯಕರ್ತೆ… ಹಾಗೂ ಒಬ್ಬರು ಹೋಂ ಗಾರ್ಡ್  ಜೊತೆಗಿದ್ದರು… ನಮ್ಮನ್ನು ಅದೇ ಊರಿನ  whater man ನಾಗಪ್ಪ ಅವರು ಕರೆದುಕೊಂಡು ಬಂದು ವ್ಯವಸ್ಥಿತವಾಗಿ ನೋಡಿಕೊಂಡರು… ಊರಿನ ಪೋಲಿಂಗ್ ಎಜೆಂಟರನ್ನು ಕರೆಸಿ ಅವರಿಂದ ಅರ್ಜಿ ಪಡೆದು ಸಹಿಹಾಕಿಸಿ ಕಳಿಸಲಾಯ್ತು… ಬೆಳಿಗ್ಗೆ 5.45ಕ್ಕೆ ಬರಲು ತಿಳಿಸಿದ್ದೆವು…

ಮೊದಲ ಅನುಭವವಾದುದರಿಂದ ಎಲ್ಲವನ್ನೂ ಕುತೂಹಲದಿಂದ ಗಮನಿಸುತ್ತಿದೆ. ನಮ್ಮ pro ಬಳ್ಳಾರಿಯವರು. ಅನುಭವಿ. ತುಂಬಾ ಸರಳವಾಗಿ ಕೆಲಸವನ್ನು ಮಾಡುತ್ತ ತಿಳಿ ಹೇಳುತ್ತಿದ್ದರು..ಇಬ್ಬರು ಮಹಿಳಾ ಸಿಬ್ಬಂದಿಯನ್ನು ಆಯೋಜಿಸಿದ್ದರು..ಒಬ್ಬರು apro ಮತ್ತು po.

ರಾತ್ರೆ ಅಲ್ಲಿಯೇ ತಂಗಿ ಬೆಳಿಗ್ಗೆ  4 ಗಂಟೆಗೆಲ್ಲ ಎದ್ದು ನಿತ್ಯಕರ್ಮ ಮುಗಿಸಿ ಅಣಕು ಮತದಾನಕ್ಕೆ ಸಿದ್ಧತೆ ಮಾಡಿಕೊಂಡೆವು…

ಸರಿಯಾಗಿ 5.45ಕ್ಕೆ ಪೋಲಿಂಗ್ ಏಜೆಂಟರು ಬಂದರು. ಅವರ ಸಮಕ್ಷಮ ಅಣಕು ಮತದಾನ ಮಾಡಿದೆವು.. ನಂತರ 6 ಗಂಟೆಗೆ ಸರಿಯಾಗಿ ಮತದಾನ ಶುರುವಾಯ್ತು… ಉಪನಾಯಕನಹಳ್ಳಿಯಲ್ಲಿ ಒಟ್ಟು 950 ಮತಗಳಿದ್ದವು.

ನನಗೆ ಮತದಾರನ ಸಂಖ್ಯೆ ಗುರುತುಹಾಕಿ, ಅವರ ಸಹಿ ಪಡೆದು, ಪಿಂಕ್ ಚೀಟಿಯಲ್ಲು ಸಂಖ್ಯೆ ಗುರುತಿಸಿ ಸಹಿಯೊಂದಿಗೆ ಆವರಿಗೆ ಆ ಚೀಟಿಯನ್ನು ನೀಡುವುದರ ಜೊತೆಗೆ ಎಡಗೈ ತೋರುಬೆರಳಿಗೆ ಇಂಕ್ ಹಾಕುವ ಕೆಲಸವೂ ಸೇರಿಕೊಂಡಿತ್ತು.. ಮಧ್ಯಾಹ್ನದಷ್ಟೊತ್ತಿಗೆ ಸುಸ್ತಾಗಿ ಹೋಗಿತ್ತು… ತಲೆ ಎತ್ತಿ ಮತದಾರನ ಗಮನಿಸಲೂ ಸಾಧ್ಯವಾಗುತ್ತಿರಲಿಲ್ಲ.

ಆ ನಂತರ ಇಂಕ್ ಹಾಕುವುದನ್ನು ಬೇರೆಯವರಿಗೆ ವಹಿಸಿ ನಾನು ಉಳಿದ ಕೆಲಸ ನಿರ್ವಹಿಸಿದೆ.

ಇಂಕ್ ಹಾಕುವ ಬ್ರಶ್ ಚಿಕ್ಕದಾಗಿದ್ದು ಇಂಕ್ ಬಾಟಲಿಯ ಒಳಗೆ ಸೇರಿಬಿಡುತ್ತಿತ್ತು. ಅದನ್ನು ತೆಗೆಯುವಾಗ ನಮ್ಮ ಬೆರಳಿಗೆ ಇಂಕ್ ತಾಗಿ ಬೆರಳುಗಳು ಕಪ್ಪಾದವು…

ಆಗಾಗ ಅಧಿಕಾರಿಗಳು ಬಂದು ವಿಚಾರಿಸುತ್ತಿದ್ದರು. ಕೆಲಸ ಕಷ್ಟಕರವಾಗಿದ್ದರೂ(ಮತದಾನ ಆದ ಸಂಖ್ಯೆಗೂ ನಾನು ಬರೆದುಕೊಳ್ಳುತ್ತಿದ್ದ 17A ಪುಸ್ತಕದ ಸಂಖ್ಯೆಗೂ ತಾಳೆ ನೋಡಿ ವರದಿ ನೀಡಬೇಕಾಗಿತ್ತು…ಸಂಜೆ 6 ಗಂಟೆಗೆ ಸರಿಯಾಗಿ ಮತದಾನ ನಿಲ್ಲಿಸಿದೆವು… ನಮ್ಮ ಬೂತ್ ನಲ್ಲಿ 785 ಮತದಾರರು ತಮ್ಮ ಹಕ್ಕು ಚಲಾಯಿಸಿದರು.  85% ಮತದಾನ ಉಪನಾಯಕನಹಳ್ಳಿಯಲ್ಲಿ ಆಗಿತ್ತು…

ಮತದಾನ ಮುಗಿದ ನಂತರದ ಕೆಲಸವನ್ನು ಅನುಕ್ರಮವಾಗಿ ಮುಗಿಸಿ PRO ಫಿಯಾಜ್ ಅಹಮದ್ , APRO ವಾಣಿ ಮೇಡಂ ಮತ್ತು PO ಕೌಸಲ್ಯ ಮೇಡಂ ಅವರೊಂದಿಗೆ ಹಡಗಲಿ ಸೇರಿ, ವಿವಿಪ್ಯಾಟ್, ಕಂಟ್ರೋಲ್ ಯುನಿಟ್‌ ಮತ್ತಿತರ ಸಾಮಗ್ರಿಗಳನ್ನು ಒಪ್ಪಿಸಿ, ಊಟ ಮಾಡಿ ರಾತ್ರೆ ಒಂದು ಗಂಟೆಗೆ ಅದ್ಭುತವಾದ ಅನುಭವದೊಂದಿಗೆ ಮನೆ ಸೇರಿದೆ…

ಯಾರು ಗೆಲ್ಲುತ್ತಾರೋ ಯಾರು ಸೋಲುತ್ತಾರೋ ಅದು ಮುಖ್ಯವಲ್ಲ… 45 ದಿನಗಳ ಅಧಿಕಾರಿಗಳ ಶ್ರಮದ ಫಲ ಈಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ..

ಚುನಾವಣಾ ಕಾರ್ಯದಲ್ಲಿ ಪಾಲ್ಗೊಂಡು ಹಗಲಿರುಳೆನ್ನದೇ ಕರ್ತವ್ಯ ಪಾಲಿಸಿದ ಎಲ್ಲ ಮಿತ್ರರಿಗೆ ಹೃದಯಪೂರ್ವಕ ಧನ್ಯವಾದಗಳು…

ಕೊನೆಯ ಮಾತು

ಚುನಾವಣಾ ಅಧಿಕಾರಿಗಳ ಗಮನಕ್ಕೆ

  1. ದಯವಿಟ್ಟು ಇಂಕ್ ಹಚ್ಚುವ ಬ್ರಶ್ ಉದ್ದವಿರಲಿ…
  2. ದೂರದೂರಿಂದ ಬಂದ ಶಿಕ್ಷಕಿಯರು ಮತ್ತು ಆಶಾ ಕಾರ್ಯಕರ್ತೆಯರನ್ನು ಸರಿ ರಾತ್ರಿಯವರೆಗೆ ಕಾಯಿಸುವ ಬದಲು ಅವರನ್ನು ಬೇಗನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿ..
  3. ಕೆಲಸ ಮುಗಿದ ಬಳಿಕ ಸಿಬ್ಬಂದಿಗಳನ್ನು ಕಾಯಿಸದೇ ಬೇಗನೆ ಊರು ತಲುಪುವ ವ್ಯವಸ್ಥೆ ಮಾಡಿ…
  4. ಅಂಚೆ ಮತಪತ್ರ ವಿತರಣೆ ಮತ್ತು ಪಡೆಯುವ ದಿನಾಂಕವನ್ನು ವಿಸ್ತರಿಸಿ…

ನಮಸ್ಕಾರ…

Leave a Reply

Your email address will not be published. Required fields are marked *