ತೋಚಿದ್ದು-ಗೀಚಿದ್ದು

ಬಯಲು ಶೌಚಮುಕ್ತ ಭಾರತ

ಅಕ್ಟೋಬರ 2 ಗಾಂಧಿ ಜಯಂತಿ. ಎಲ್ಲೆಲ್ಲೂ ಸ್ವಚ್ಛತೆಯ ಕುರಿತೇ ಮಾತು. ಸ್ವಚ್ಛ ಭಾರತ ಅಭಿಯಾನ ಎಲ್ಲೆಲ್ಲೂ ನಡೆಯುತ್ತಿದೆ. ಎಲ್ಲರೂ ಸ್ವಚ್ಛತೆಯತ್ತ ವಾಲುತ್ತಿದ್ದಾರೆ. ಒಳ್ಳೆಯ ನಡೆ. ಇದು ಎಂದೋ ಆಗಬೇಕಿತ್ತು. ತಡವಾದರೂ ಜಾರಿಯಾಗುತ್ತಿದೆಯಲ್ಲ ಎಂಬ ಸಮಾಧಾನ. ನಮ್ಮ ಗ್ರಾಮ ಬಯಲುಶೌಚಮುಕ್ತ ಗ್ರಾಮ, ನಮ್ಮದು ಬಯಲುಶೌಚ ಮುಕ್ತ ತಾಲೂಕು ಯಾರೂ ಬಹಿರ್ದೆಸೆಗೆ ಹೊರಗೆ ಹೋಗುವುದಿಲ್ಲ. ಎಲ್ಲರ ಮನೆಯಲ್ಲೂ ಶೌಚಾಲಯವಿದೆ ಎಂದು ಹಲವು ಸಚಿವರು/ಶಾಸಕರು/ಅಧಿಕಾರಿವರ್ಗ ಕಾರ್ಯಕ್ರಮ ನಡೆಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡವರೇ. ಆದರೆ ಇಲ್ಲೊಂದು ಪ್ರಶ್ನೆ. ಎಲ್ಲರೂ ಈ ವಿಷಯದಲ್ಲಿ ಪ್ರಾಮಾಣಿಕರೇ!(ನನ್ನನ್ನೂ ಸೇರಿಸಿ). ಯಾಕೆಂದರೆ ರೈಲು ಪ್ರಯಾಣಿಕರ ನೋಡಿದರೆ ನಾವೆಷ್ಟು ಪ್ರಾಮಾಣಿಕರು ಎಂಬುದು ತಿಳಿಯುತ್ತದೆ. ರೈಲ್ವೆ ಹಳಿಗಳ ಮೇಲೆ, ನಿಲ್ದಾಣಗಳಲ್ಲಿ ಮೂಗು ಮುಚ್ಚಿಕೊಂಡೇ ಇರಬೇಕಾದ ಸ್ಥಿತಿ ಇದೆ. ಮೊದಲು ಅಲ್ಲಿನ ಸ್ವಚ್ಛತೆಗೆ ಹೆಚ್ಚು ಆಧ್ಯತೆ ನೀಡಬೇಕಾಗಿದೆ.

ಮೊನ್ನೆ ಬಸ್ ನಿಲ್ದಾಣದಲ್ಲಿ ಇಬ್ಬರ ಮಾತುಕತೆ ಹೀಗೆ ಸಾಗಿತ್ತು:

ಒಬ್ಬ: “ಅಲ್ಲ, ಸಂಡಾಸ ಕಟ್ಕೊಳ್ಳಿ, ಸಂಡಾಸ್ ಕಟ್ಕೊಳ್ಳಿ… ಅಂತಾರೆ. ಕಟ್ಕಂಡ್ರೆ ಅದಕ್ಕಾಕಾಕೆ ನೀರು ಎಲ್ಲಿಂದ ತರೋದು?

ಒಬ್ಬನಿಗೆ ಏನಿಲ್ಲವೆಂದರೂ ಒಂದೆರಡು ಬಕೆಟ್ ನೀರು ಬೇಕು. ಮನಿಯಾಗ ಓಟು ಮಂದಿಗೆ ಏನಿಲ್ಲ ಅಂದ್ರೂ ಇಪ್ಪತ್ತ್ ಕೊಡ ನೀರ್ ಬೇಕು. ನಮ್ಗೆ ಕುಡಿಯಾಕ ನೀರಿಲ್ಲ. ಇನ್ ತೊಳ್ಯಾಕ ಎಲ್ಲಿಂದ ತರೋದು” ಎಂದ.

ಮತ್ತೊಬ್ಬ: ನಮ್ದೂ ಇದೇ ಸಮಸ್ಯೆ. “ದೂರದಿಂದ ನೀರ ಹೊತ್ಕೊಂಡ್ ಬರ್ಬೇಕು, ಸರಕಾರದೋರು ಕಟ್ಟಿಸಿಕೊಟ್ರೂನೆ ನೀರ್ ಬೇಕಲ್ವ…” ಎಂದ. ಅವರ ಸಂಭಾಷಣೆ ಹೀಗೆ ಸಾಗಿತ್ತು.

ಹೌದಲ್ವೇ ಅನ್ನಿಸಿತು. ಯಾಕೆಂದರೆ ನಾನಿರುವುದು ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ. ಇಲ್ಲಿ ನೀರಿನ ಬರ ಬಲ್ಲವರೇ ಬಲ್ಲರು. ಇಲ್ಲಿರುವುದು ಎರಡೇ ವರ್ಗ. ಒಂದು ಜಮೀನಿನ ಮಾಲಕರು. ಇನ್ನೊಂದು ಆ ಜಮೀನಿನಲ್ಲಿ ದುಡಿಯುವ ಕೂಲಿಯಾಳುಗಳು.

ಕಳೆದ ಇಪ್ಪತ್ತೈದು ವರ್ಷಗಳಿಂದ ಗಣಿ ಉದ್ಯಮ, ತರೇಹವಾರಿ ಕೈಗಾರಿಕೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಬಂದ ಹಿನ್ನೆಲೆಯಲ್ಲಿ ಸ್ವಲ್ಪ ಮಟ್ಟಿಗೆ ಮಧ್ಯಮವರ್ಗದವರು ಹೊರಗಿನಿಂದ ಬಂದು ಇಲ್ಲಿ ನೆಲೆಸಿದ್ದಾರೆ; ನೆಲೆಸುತ್ತಿದ್ದಾರೆ. ಶ್ರೀಮಂತರು ಇನ್ನೂ ಹೆಚ್ಚಿನ ಶ್ರೀಮಂತರಾಗುತ್ತಿದ್ದಾರೆ. ಕೂಲಿಕಾರ್ಮಿಕರ ಸ್ಥಿತಿ ಹಾಗೆಯೇ ಇದೆ. ತುಂಗಭದ್ರಾ ಡ್ಯಾಂ ಇದ್ದ ಹಿನ್ನೆಲೆಯಲ್ಲಿ ಅದರ ಅಂಚಿನಲ್ಲಿರುವವರಿಗೆ ನೀರಿನ ಅಭಾವ ಕಡಿಮೆ. ಆದರೆ ರಾಯಚೂರು, ಕೊಪ್ಪಳ ಬಳ್ಳಾರಿಯ ಕೆಲ ಗ್ರಾಮಗಳಿಗೆ ಕುಡಿಯಲು ಕೂಡ ನೀರು ಸಿಗುವುದು ಕಷ್ಟ. ಅಂತಹ ಊರಿನಲ್ಲಿರುವ ಬಡವರಿಗೆ, ಕೂಲಿ ಕಾರ್ಮಿಕರಿಗೆ ಸರಕಾರ ಕಟ್ಟಿಸಿ ಕೊಡುವ ಶೌಚಾಲಯಕ್ಕೆ ನೀರು ಎಲ್ಲಿಂದ ಬರುತ್ತದೆ? ಅವರೇ ಹೊತ್ತು ತರಬೇಕು. ಹೊತ್ತು ತರುವುದಕ್ಕಿಂತ ತಂಬಿಗೆ ಒಯ್ದರೆ ಕೇವಲ ಒಂದೇ ತಂಬಿಗೆಯಲ್ಲಿ ಬಹಿರ್ದೆಸೆ ಮುಗಿಸಿ ಬರುತ್ತಾನೆ. ಹೀಗಿದ್ದಾಗ ಎರಡು ಕೊಡ ನೀರನ್ನು ಅವನು ವ್ಯರ್ಥ ಮಾಡಲು ಹಿಂದೇಟು ಹಾಕುತ್ತಾನೆ.

ನಮ್ಮ ಮನೆಯ ಸಮೀಪ ರೈಲ್ವೆ ಹಳಿ ಹಾದು ಹೋಗಿದೆ. ಮನೆಯಲ್ಲಿ ಶೌಚಗೃಹವಿದ್ದು, ಬೋರವೆಲ್ ಸೌಕರ್ಯವಿರುವ ಮಧ್ಯಮವರ್ಗದ ಹಲವು ಹಿರಿ ತಲೆಗಳು(ಅದರಲ್ಲಿ ಹಲವರು ಸರ್ಕಾರಿ ಹುದ್ದೆಯಲ್ಲಿದ್ದವರು, ಡಾಕ್ಷರ್ ಕೂಡ) ಈಗಲೂ ಬಾಟಲಿಗಳಲ್ಲಿ ನೀರನ್ನು ಒಯ್ದು ರೈಲ್ವೇ ಹಳಿಯ ಹತ್ತಿರ ಹೋಗಿ ಶೌಚ ಮುಗಿಸಿ ಬರುತ್ತಾರೆ. ಪ್ರಶ್ನೆ ಮಾಡಿದರೆ “ವಾಕಿಂಗ್ ಆಗತ್ತೆ” ಸರ್ ಎಂದು ಹಲ್ಲು ಕಿರಿಯುತ್ತಾರೆ. ಇದಕ್ಕೇನಂತೀರಿ!!

ಶೌಚಗೃಹದ ಕಲ್ಪನೆ ನಮಗೆ ಇಪ್ಪತ್ತನೇ ಶತಮಾನದ ಮಧ್ಯಭಾಗದಲ್ಲಿ ಚಾಲ್ತಿಗೆ ಬಂತೆಂಬುದು ನನ್ನ ಗ್ರಹಿಕೆಯ ವ್ಯಾಪ್ತಿಗೆ ಬಂದಿದ್ದು. ನನಗೆ ತಿಳಿದಂತೆ ಕಳೆದ ನಲವತ್ತು ವರ್ಷಗಳ ಹಿಂದೆ ಹಳ್ಳಿಗಳಲ್ಲಿ ಎಲ್ಲಿಯೂ ಶೌಚಗೃಹವಿರಲಿಲ್ಲ. “ಅಕ್ಷರ”ವೂ ಕೂಡಾ ನಮ್ಮನ್ನು ಸ್ವಚ್ಛತೆಯ ಕಡೆಗೆ ತಂದಿದೆ ಎಂದರೆ ತಪ್ಪಾಗಲಾರದು.

ಈಗಲೂ ಕೊಪ್ಪಳ, ಗದಗ, ಬಾಗಲಕೋಟೆ ಕಡೆ ಸಂಜೆ ಹೊತ್ತು ಅಥವಾ ಬೆಳಗಿನ ಜಾವ ಪ್ರಯಾಣ ಬೆಳೆಸಿದರೆ ವಾಹನದ ಬೆಳಕು ಬಿದ್ದ ತಕ್ಷಣ ರಸ್ತೆಗುಂಟ ಬಹಿರ್ದೆಸೆಗೆ ಕುಳಿತಿದ್ದ ಹಳ್ಳಿ ಹೆಂಗಸರು ಎದ್ದು ನಿಲ್ಲುವುದನ್ನು ನೋಡಬಹುದು. ಅವರು ಕತ್ತಲಾಗುವವರೆಗೆ ಕಾದು ನಂತರ ಬಹಿರ್ದೆಸೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಗಂಡಸರಾದರೋ ಮುಖ ಕೆಳಗೆ ಮಾಡಿ ನನ್ನೇನ್ ನೋಡ್ತಿ ಎನ್ನುವ ಹಾಗೆ ಕುಳಿತುಕೊಂಡಿರುತ್ತಾರೆ.

ಇದು ಸಾಮಾನ್ಯ ಜನರ ಸ್ಥಿತಿಯಾಯ್ತು. ನಾನು ಚಿಕ್ಕವನಿದ್ದಾಗ ನಡೆದ ಘಟನೆ. ನಮ್ಮೂರಿಗೆ ಒಬ್ಬ ಸ್ವಾಮೀಜಿ ಬಂದಿದ್ದರು. ಅವರಿಗೆ ಆ ಊರಿನ ಶ್ರೀಮಂತರ ಮನೆಯಲ್ಲಿ ವಸತಿ ವ್ಯವಸ್ಥೆ. ಅಲ್ಲಿ ಅವರಿಗೆ ಸಕಲೋಪಚಾರ. ಪಾದ ಪೂಜೆ ಮತ್ತಿತರ ಕಾರ್ಯಕ್ರಮ. ಅಂದು ಸಂಜೆಯ ಹೊತ್ತಿಗೆ ಅವರ ಶಿಷ್ಯರು ತೋಟದ ಕಡೆ ಹೊರಟರು. ನಾವು ಚಿಕ್ಕವರಾದ ಕಾರಣ ನಮಗೋ ಕುತೂಹಲ. ಯಾಕೆ ಹೋದರು ಎಂದು. ದೂರದಿಂದಲೇ ಅವರ ಚಟುವಟಿಕೆಗಳನ್ನು ವಿಕ್ಷೀಸುತ್ತಿದ್ದೆವು. ಇಬ್ಬರು ನಾಲ್ಕು ಗೂಟಗಳನ್ನು ಒಬ್ಬರು ಕೈಚಾಚಿ ನಿಲ್ಲವಷ್ಟು ಅಂತರದಲ್ಲಿ ನೆಟ್ಟರು. ಅದಕ್ಕೆ ಸುತ್ತುವರಿದು ಬಟ್ಟೆ ಕಟ್ಟಿದರು. ಪಕ್ಕದಲ್ಲೇ ಇದ್ದ ಬಾಳೆಗಿಡದಲ್ಲಿನ ಒಂದು ಬಾಳೆ ಎಲೆ ಕಡಿದು ಒಳಗೆ ಹಾಸಿದರು. ನಮ್ಮ ಕುತೂಹಲ ಇನ್ನೂ ಹೆಚ್ಚಿತು ಇವರು ಏನು ಮಾಡುತ್ತಿದ್ದಾರೆಂದು. ನಾವಿರುವ ಸುಳಿವರಿತ ಅವರಲ್ಲೊಬ್ಬ ನಮ್ಮನ್ನು ಅಟ್ಟಿಸಿಕೊಂಡು ಬಂದ. ನಾವು ಓಡಿ ಮರೆಯಲ್ಲಿ ನಿಂತು ಮುಂದೇನಾಗುತ್ತದೆ ಎಂದು ಗಮನಿಸುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಸ್ವಾಮೀಜಿಯ ಶಿಷ್ಯರಲ್ಲೊಬ್ಬ ಒಂದು ಕೊಡ ನೀರು ಮತ್ತು ಒಂದು ತಂಬಿಗೆ ತಂದ. ಸ್ವಲ್ಪ ದೂರದಲ್ಲೇ ಸ್ವಾಮೀಜಿ ಬರುವುದು ಕಾಣಿಸಿತು. ನಮಗೆ ಕುತೂಹಲ ತಡೆಯಲಾಗಲಿಲ್ಲ. ಅವರು ಬಂದವರೇ ಬಟ್ಟೆ ಸುತ್ತಿದ್ದರ ಒಳಗೆ ಸೇರಿಕೊಂಡರು. ಒಬ್ಬ ಶಿಷ್ಯ ಕೈಯಲ್ಲಿ ಚೆಂಬು ಹಿಡಿದು ನಿಂತಿದ್ದ. ಸ್ವಲ್ಪ ಹೊತ್ತಿನ ನಂತರ ತಂಬಿಗೆ ಒಳ ಸೇರಿತು. ಕೆಲ ನಿಮಿಷದ ನಂತರ ಸ್ವಾಮೀಜಿ ಹೊರಬಂದರು. ಕೊಡದಲ್ಲಿದ್ದ ನೀರಿನಲ್ಲಿ ಕಾಲು ತೊಳೆದು ಹೊರಟರು. ನಮಗೋ ಕುತೂಹಲ ತಡೆಯಲಾಗಲಿಲ್ಲ. ಹತ್ತಿರದಲ್ಲಿದ್ದವರನ್ನು ಕೇಳಿದೆವು. ಅದಕ್ಕವರು, “ಸ್ವಾಮೀಜಿ ಕಕ್ಕಸಿಗೆ ಹೋಗಿದ್ದರು” ಅಂದರು. ಆಗ ಎಲ್ಲವೂ ಅರ್ಥವಾಯ್ತು.

ನಾವು ಕಕ್ಕಸಿಗೆ ತೋಟದ ಕೊನೆಗೋ, ಹಳ್ಳಕ್ಕೋ ಹೋಗಿ ಬರುತ್ತಿದ್ದದ್ದು ನೆನಪಾಯ್ತು. ಆಗಿನ ಶ್ರೀಮಂತರ ಮನೆಯಲ್ಲೂ ಕಕ್ಕಸ್ಸಿಗೆ ಹೋಗಲು ವ್ಯವಸ್ಥೆ ಇರಲಿಲ್ಲ. ಆ ಮನೆಗಳ ಹೆಂಗಸರೂ ನಮ್ಮ ತಾಯಿ, ಅಜ್ಜಿ ಎಲ್ಲರೂ ಉತ್ತರ ಕರ್ನಾಟಕದ ಹೆಂಗಳೆಯರಂತೆ ಕತ್ತಲಾದ ಮೇಲೆ ಅಥವಾ ಬೆಳಗಿನ ಜಾವ ಹಿತ್ತಲು ಕಡೆ, ತೋಟದ ಅಂಚಿಗೆ ತಂಬಿಗೆಯಲ್ಲಿ ನೀರು ತೆಗೆದುಕೊಂಡು ಹೋಗಬೇಕಿತ್ತು. ಈಗ ಹಳ್ಳಿಗಳಲ್ಲಿ ಹಲವು ಮನೆಗಳನಲ್ಲಿ ಶೌಚಗೃಹ ಬಂದಿದೆ.

ನನ್ನ ಮನಸ್ಸು ಇನ್ನೂ ಹಿಂದಕ್ಕೆ ಓಡುತ್ತಿದೆ. ಯಾಕೆಂದರೆ 50-60 ವರ್ಷದ ಹಿಂದೆಯೇ ಶೌಚಕ್ಕಾಗಿ ಮರೆಯನ್ನು ಅರಸುತ್ತಿದ್ದ ನಮ್ಮ ಸ್ಥಿತಿಯೇ ಹೀಗಿರುವಾಗ ಹಿಂದಿನ ಅರಸರೆಲ್ಲ ಶೌಚಕ್ಕೆ ಎಲ್ಲಿಗೆ ಹೋಗುತ್ತಿದ್ದರು?! ಆಗಿನ ಕಾಲದಲ್ಲಿ ಏನು ವ್ಯವಸ್ಥೆ ಇತ್ತು ಎಂಬ ಕುತೂಹಲ ಕಾಡಿದ್ದು ಸಹಜ. ಈ ಹಿನ್ನೆಲೆಯಲ್ಲಿ ನಾನು ಹಂಪಿಯಲ್ಲಿದ್ದ ಕಾರಣ ವಿಜಯನಗರ ಸಾಮ್ರಾಜ್ಯದಲ್ಲಿ ಹೇಗಿತ್ತು? ಆಗಿನ ರಾಜರು ಶೌಚಕ್ಕೆ ಎಲ್ಲಿಗೆ ಹೋಗುತ್ತಿದ್ದರು ಎಂಬ ಕುತೂಹಲವಿತ್ತು.

ಕಳೆದ 24 ವರ್ಷಗಳ ಹಿಂದೆ ಹಂಪಿಗೆ ಬಂದ ನನಗೆ ಹಂಪಿ ಸಾಕಷ್ಟು ಕಲಿಸಿದೆ; ಕಲಿಸುತ್ತಿದೆ. ನಾನೂ ಇಲ್ಲಿಯವನೇ ಆಗಿರುವೆ. ಮೊದಲೆಲ್ಲ ರಜಾ ಬಂತೆಂದರೆ ಕ್ಯಾಮರಾ ಹೆಗಲಿಗೇರಿಸಿ, ಗೆಳೆಯರೊಂದಿಗೆ ಹಂಪಿ ಸುತ್ತುತ್ತಿದ್ದೆ; ಇಲ್ಲ ರಜಾದಿನಗಳಲ್ಲಿ ಮನೆಗೆ ಬಂದ ಸಂಬಂಧಿಕರನ್ನು, ಸ್ನೇಹಿತರನ್ನು ಕರೆದುಕೊಂಡು ಹೋಗಿ ಹಂಪಿ ಸುತ್ತಿಸುತ್ತಿದ್ದೆ. ಹೀಗೆ ಸುತ್ತುವಾಗ ಅರಮನೆ ಎಲ್ಲಿತ್ತು ಎಂದು ಹಲವರನ್ನು ಕೇಳಿದರೆ ಸಮರ್ಪಕ ಉತ್ತರ ಬರುತ್ತಿರಲಿಲ್ಲ. ನನ್ನದೇ ರೀತಿಯಲ್ಲಿ ಅದನ್ನು ಕಂಡುಹಿಡಿಯಲೇ ಬೇಕು ಎಂದು ತೀರ್ಮಾನಿಸಿ ಅದರತ್ತ ಹೆಚ್ಚು ಗಮನ ಹರಿಸಿದೆ.

ರಾಜ ಅಂದ ಮೇಲೆ ಅವನಿಗೆ ಆಳುಕಾಳು, ರಾಣಿಯರು, ದಾಸಿಯರು ಸರ್ವೇಸಾಮಾನ್ಯ. ವಿಜಯನಗರ ಸಾಮ್ರಾಜ್ಯವಂತೂ ಜಗತ್ ಪ್ರಸಿದ್ಧ. ಅವರೆಲ್ಲ ಶೌಚಕ್ಕೆ ಏಲ್ಲಿ ಹೋಗುತ್ತಾರೆ ಎಂಬ ಕುತೂಹಲ ಹತ್ತಿಕ್ಕಲಾಗದೇ ಏನೋ ಒಂದು ವ್ಯವಸ್ಥೆ ಮಾಡಿಕೊಂಡಿರುತ್ತಾರೆ ಎಂಬ ಬಲವಾದ ನಂಬಿಕೆಯಿಂದ ಹಂಪಿಗೆ ಹೋದಾಗಲೆಲ್ಲ ಅದರತ್ತಲೂ ದೃಷ್ಟಿ ಹಾಯಿಸುತ್ತಿದ್ದೆ. ಆದರೆ ಸಮರ್ಪಕ ಉತ್ತರ ಸಿಗುತ್ತಿರಲಿಲ್ಲ. ನನಗೋ ಕುತೂಹಲ. ರಾಜ ರಾಣಿ ಇಷ್ಟು ಜನರ ನಡುವೆ ಶೌಚಕ್ಕೆ ಎಲ್ಲಿಗೆ ಹೋಗುತ್ತಿದ್ದರು?!! ಅವರಿಗೆ ಹೋಗಲು ಸ್ಥಳವೆಲ್ಲಿ?!! ಎಂಬದು ಮನಸ್ಸಿನಲ್ಲಿ ತಾಕಲಾಡುತ್ತಿತ್ತು. ಯಾಕೆಂದರೆ ಬಾಲ್ಯದಲ್ಲಿ ಮನೆಯ ಸಮೀಪ ನೋಡಿದ ಸ್ವಾಮೀಜಿಯ ರೀತಿಯಲ್ಲೇ ಇರಬಹುದೇ ಎಂಬ ಅನುಮಾನ ಕೂಡ ಇತ್ತು. ಆದರೆ ಆ ಜನರ ಮಧ್ಯೆ ಹೊಗುವುದಾದರೂ ಎಲ್ಲಿಗೆ ಎಂಬ ಪ್ರಶ್ನೆ ಕೂಡಾ ಬಂತು.

ಏನಾದರಾಗಲಿ ಹುಡುಕಲೇ ಬೇಕು ಎಂದು ತೀರ್ಮಾನಿಸಿ ನಾನು ಈ ದಿಕ್ಕಿನತ್ತ ಆಲೋಚಿಸಲು ಪ್ರಾರಂಭಿಸಿ ಹಂಪಿ ಸುತ್ತಿದೆ; ಸುತ್ತುತ್ತಲೇ ಇದ್ದೆ. ಹಠಬಿಡದ ತ್ರಿವಿಕ್ರಮನಂತೆ ಹುಡುಕುತ್ತಲೇ ಇದ್ದೆ. ಹಜಾರಾರಾಮ ಗುಡಿಯ ಪಕ್ಕದಲ್ಲಿರುವ ಸ್ಥಳವೇ ರಾಜನ ಅರಮನೆಯಾಗಿರಬೇಕು ಎಂದು ತೀರ್ಮಾನಿಸಿ ಅದರ ಸುತ್ತಲೇ ಗಿರಕಿ ಹೊಡೆದೆ. ಒಂದು ದಿನ ನನ್ನ ಹುಡುಕಾಟ ಫಲಪ್ರದವಾಯ್ತು. ರಾಜ ರಾಣಿಯರು ಬಳಸುತ್ತಿದ್ದ “ಕಕ್ಕಸ್ಸು” ಕೊನೆಗೂ ಸಿಕ್ಕಿತು. ಆಗಿನ ಕಾಲದಲ್ಲೇ ಕುಳಿತುಕೊಳ್ಳುವ ಆಸನ, ಸರಾಗವಾಗಿ ಹೋಗುವಂತೆ ಇಳಿಜಾರು, ಅದರ ಕೊನೆಗೆ(ಗೋಡೆಯ ಹಿಂಭಾಗ) ದೊಡ್ಡದಾದ ಇಂಗುಗುಂಡಿ. ಹಲವು ಶತಮಾನಗಳು ಕಳೆದರೂ ಹಾಳಾಗದೇ ಇದ್ದು, ಜನರ ಕಣ್ಣಿಗೆ ಹೆಚ್ಚು ಗೋಚರಿಸದ ಕಡೆ ಇತ್ತು. ಅಂಗುಲಂಗುಲವನ್ನು ನೋಡುವ ತವಕದ ಪ್ರವಾಸಿಗರಿಗೆ ಮಾತ್ರ ಇದು ಗೋಚರಿಸಲು ಸಾಧ್ಯ. ಕಕ್ಕಸ್ಸು ಇರುವ ಜಾಗ ಹುಡುಕಿ ಹಲವು ವರ್ಷಗಳು ಕಳೆದಿದ್ದರೂ ಈ ವಿಷಯವನ್ನು ಹಂಚಿಕೊಳ್ಳಲು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದೆ.

ಇಂದು ಮಹಾತ್ಮ ಗಾಂಧಿಯ ಜನುಮದಿನ.

ಆ ಹಿನ್ನೆಲೆಯಲ್ಲಿ ಸರಕಾರ ಕೂಡಾ ಬಹಿರ್ದೆಸೆ ಮುಕ್ತ ಗ್ರಾಮ, ನಗರ ಎಂದು ದೊಡ್ಡ ದೊಡ್ಡ ಜಾಹೀರಾತು ನೀಡಿ ಪತ್ರಿಕೆಯ ಪುಟಗಳನ್ನು ತುಂಬಿಸಿದ್ದು ಕಂಡಿತು. ಅದನ್ನು ನೋಡಿದಾಗ ಇದೆಲ್ಲ ನೆನಪಾಯ್ತು. ನಿಜವಾಗಿಯೂ

“ನಾವು ಬಯಲುಶೌಚ ಮುಕ್ತರೇ!!!”

ಎಂದು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. ಯಾಕೆಂದರೆ ಕಾರು, ಬಸ್ಸು ಮತ್ತಿತರ ವಾಹನಗಳಲ್ಲಿ ದೂರದೂರಿಗೆ ಪ್ರಯಾಣಿಸುವಾಗ ರಸ್ತೆ ಬದಿಗೆ ನಿಲ್ಲಿಸಿ ಗಿಡಗಂಟಿಗಳ ಮರೆಯಲ್ಲಿ ಶೌಚ ಮುಗಿಸಿ ಬರುವ ಹಲವರು(ಹೆಂಗಸರು ಮಕ್ಕಳು, ನನ್ನನ್ನೂ ಸೇರಿ) ನಮ್ಮ ನಡುವೆ ಇರುವಾಗ, ಅದು ಹೇಗೆ ಬಯಲುಶೌಚಮುಕ್ತ ಗ್ರಾಮ, ನಗರವಾಗಲು ಸಾಧ್ಯ?!!! ಅದಕ್ಕೂ ಕಡಿವಾಣ ಬೀಳಬೇಕೆಂದರೆ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಶೌಚಗೃಹ ಕಟ್ಟಿಸಿ, ನೀರಿನ ಮಿತಿ ಹೇರದೆ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕಾದುದು ಆಧ್ಯ ಕರ್ತವ್ಯ. ಸರ್ಕಾರ ಇತ್ತಲೂ ಗಮನಹರಿಸಿದರೆ ಅವರ ಶೌಚಮುಕ್ತ ಹಳ್ಳಿ, ನಗರದ ಕನಸು ನನಸಾಗಬಹುದು. ಇದಕ್ಕೆ ಸಾರ್ವಜನಿಕರೂ ಕೈಜೋಡಿಸಬೇಕಾಗಿದೆ.

ಓದುಗರ ಗಮನಕ್ಕೆ

ಈ ಲೇಖನ ಬರೆದು ಹಲವು ವರ್ಷಗಳಾಗಿವೆ. ಈಗಾಗಲೇ ಹೊನ್ನಾವರದಿಂದ ಪ್ರಕಟವಾಗುವ ನಾಗರಿಕ ಪತ್ರಿಕೆಯಲ್ಲಿ,  ಕನ್ನಡ ವಿಶ್ವವಿದ್ಯಾಲಯದಿಂದ ಪ್ರಕಟವಾಗುವ ‘ವಿಜ್ಞಾನ ಸಂಗಾತಿ’ ಪುಸ್ತಕದಲ್ಲಿ ಮತ್ತು ವಿಕಾಸ ಹೊಸಮನಿ ಅವರ ಸಂಪಾದಕತ್ವದಲ್ಲಿ ಹೊರಬಂದ ‘ಮಂದಹಾಸ’ (ಲಲಿತ ಪ್ರಬಂಧಗಳು-2024) ಕೃತಿಯ 9ನೇ ಲೇಖನವಾಗಿ ಪ್ರಕಟವಾಗಿದೆ.

 

Leave a Reply

Your email address will not be published. Required fields are marked *