“ಬಿಡಿಸಿಸಿ ಬ್ಯಾಂಕ್” ಈಗ ಶತಸಂವತ್ಸರದ ಸಂಭ್ರಮದಲ್ಲಿದೆ. ಕಳೆದ ಮೂವತ್ತು ವರ್ಷಗಳ ಹಿಂದೆ ಬೆಂಗಳೂರಿನಿಂದ ಕೆಲಸಕ್ಕಾಗಿ ಹಂಪಿ ಕನ್ನಡ ವಿಶ್ವದ್ಯಾಲಯವನ್ನು ಸೇರಿದ ಬಳಿಕ ಹೊಸಪೇಟೆಯಲ್ಲಿ ಮನೆ ಮಾಡಬೇಕಾಯ್ತು. ಪ್ರತಿದಿನ ಕನ್ನಡ ವಿಶ್ವವಿದ್ಯಾಲಯಕ್ಕೆ ಬಸ್ ನಲ್ಲಿ ಪ್ರಯಾಣ. ಬಸ್ ನಿಲ್ದಾಣಕ್ಕೆ ಹೋಗುವಾಗ ಬಿಡಿಸಿಸಿ ಬ್ಯಾಂಕ್ ಮುಂದಿನಿಂದಲೇ ಹಾದುಹೋಗಬೇಕು.. ಮರಳಿ ಬರುವಾಗಲೂ ಅದೇ ದಾರಿ. ಪ್ರತಿದಿನ ಬೆಳಿಗ್ಗೆ ಸಂಜೆ ಅದರ ದರ್ಶನ. ಬ್ಯಾಂಕ್ ಎಪ್ಪತ್ತೈದರ ಹರಯವನ್ನು ದಾಟಿದ ಸಂದರ್ಭದಲ್ಲಿ ನಾವೆಲ್ಲ ಅದನ್ನು ನೋಡಿ ಕಣ್ತುಂಬಿಕೊಡಿದ್ದಿದೆ. ಹಾಗೆಯೇ ಆ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದ ನಾನು ಅಲ್ಲಿನ ಸದಸ್ಯನಾಗಿದ್ದೆ.
ಛಾಯಾಗ್ರಾಹಕನಾಗಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿದ ಮೇಲೆ ಕನ್ನಡ ಸಂಘ ಸಂಸ್ಥೆಗಳ ಹಲವಾರು ಕಾರ್ಯಕ್ರಮಗಳು ಬ್ಯಾಂಕ್ ನ ಸಂಭಾಗಣದಲ್ಲಿ ನಡೆದಾಗ ಆ ಕಾರ್ಯಕ್ರಮಗಳ ಛಾಯಾಚಿತ್ರಗಳನ್ನು ದಾಖಲಿಸಿದ್ದೆ.ಅದಲ್ಲದೇ ಬ್ಯಾಂಕ್ ಪಕ್ಕದಲ್ಲಿರುವ ಬಯಲುರಂಗಮಂದಿರದಲ್ಲಿ ನಡೆಯುತ್ತಿದ್ದ ನವರಾತ್ರಿಯ ಒಂಬತ್ತು ದಿನಗಳು ನಡೆಯುತ್ತಿದ್ದ ವಿದ್ವತ್ ಉಪನ್ಯಾಸ, ಸಂಗೀತ ಮತ್ತಿತರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆ.
ನಮ್ಮ ಕನ್ನಡ ಕಲಾಭಿಮಾನಿ ಸಂಘದಿಂದ ಪ್ರತಿ ವರುಷ ನಡೆಯುವ ಯಕ್ಷಗಾನ ಕಾರ್ಯಕ್ರಮವನ್ನು ಹಲವು ವರುಷ ಅದೇ ಬಯಲುರಂಗಮಂದಿರದಲ್ಲಿ ಆಯೋಜಿಸಿದ್ದೆವು. ಬಯಲುರಂಗಮಂದಿರ ಬಸ್ ನಿಲ್ದಾಣದ ಎದುರೇ ಇದ್ದ ಕಾರಣ ಹಲವರು ಕಾರ್ಯಕ್ರಮ ವೀಕ್ಷಿಸಿ ಆಯೋಜಕರ ಸಾಹಸವನ್ನು ಮೆಚ್ಚುತ್ತಿದ್ದರು. ಹೀಗೆ ಬ್ಯಾಂಕ್ ತನ್ನ ಗ್ರಾಹಕರನ್ನಲ್ಲದೇ ದಾರಿಹೋಕರನ್ನು ತನ್ನ ಬಯಲುರಂಗಮಂದಿರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೈಬೀಸಿ ಕರೆಯುತ್ತಿತ್ತು. ಈಗ ಬ್ಯಾಂಕ್ ತನ್ನ ಶತಕದ ಸಂಭ್ರಮದಲ್ಲಿದೆ. ಹೊಸ ಕಟ್ಟಡದ ಸಿದ್ಧತೆ ನಡೆದಿದೆ. ಇನ್ನು ಮುಂದೆ ಬಯಲುರಂಗಮಂದಿರ ಇದ್ದ ಜಾಗದಲ್ಲಿ ಶತಮಾನೋತ್ಸವದ ನೆನಪಿಗೆ ಹೊಸ ಕಟ್ಟಡ ತಲೆ ಎತ್ತಲಿದೆ. ಮುಂದಿನ ದಿನಗಳಲ್ಲಿ ನವರಾತ್ರಿ ಉಪನ್ಯಾಸ ಮಾಲಿಕೆ, ಸಂಗೀತ ಕಾರ್ಯಕ್ರಮಗಳು ನಡೆಯದೇ ಹೋಗಬಹುದು.. ಅದಕ್ಕೆ ಸೂಕ್ತ ಸ್ಥಳದಲ್ಲಿ ಆಯೋಜಿಸಲು ಅವಕಾಶ ಕಲ್ಪಿಸಬೇಕಾಗಿದೆ.
ಬದಲಾವಣೆ ಜಗದ ನಿಯಮ. ಹಾಗಾಗಿ ಅಂದಂದಿನ ಯೋಜನೆ/ಯೋಚನೆಗಳಿಗೆ ನಾವು ಹೊಂದಿಕೊಳ್ಳುವುದು ಅನಿವಾರ್ಯ.
ಶತಸಂಭ್ರಮದಲ್ಲಿರುವ ಬ್ಯಾಂಕ್ “ಶತಶೃಂಗ“ವಾಗಲಿ ಇದರೊಂದಿಗೆ ಕ್ರಮಿಸಿದ ಎಲ್ಲ ಗಣ್ಯಮಾನ್ಯರಿಗೆ ವಂದಿಸುತ್ತ…ವಿರಮಿಸುವೆ.. ನಮಸ್ಕಾರ.