ಅಂಚೆಯಣ್ಣನಿಗೆ ಈಗ ಜವಾಬ್ದಾರಿ ಜಾಸ್ತಿಯಾಗಿದೆ…(ಈಗ ಅಂಚೆಯಕ್ಕನೂ ಬರುತ್ತಿದ್ದಾಳೆ)
ಹಲವು ವರುಷಗಳ ತನಕ ಮನೆ ಮನೆಗೆ ತೆರಳಿ ದೂರದಲ್ಲಿದ್ದ ಮನಸ್ಸುಗಳನ್ನು, ಹೃದಯಗಳನ್ನು ತಾನು ಹೊತ್ತು ತರುವ ಪತ್ರಗಳ ಮೂಲಕ ಹತ್ತಿರವಾಗಿಸುತ್ತಿದ್ದ ಅಂಚೆಯಣ್ಣನಿಗೆ ಹಲವು ವರುಷಗಳ ಕಾಲ ಬಿಡುವಾಗಿತ್ತು..
ಎಲ್ಲರ ಕೈಯಲ್ಲೂ ಮೊಬೈಲ್ ಬಂದ ಮೇಲಂತೂ ಕೇವಲ ಸರಕಾರಿ ಪತ್ರಗಳನ್ನು ಮತ್ತು ಹಲವು ಪತ್ರಿಕೆ/ಪುಸ್ತಕಗಳನ್ನು ಚಂದಾದಾರರ ಮನೆಗಳಿಗೆ ಮಾತ್ರ ತಲುಪಿಸುವ ಕೆಲಸಕ್ಕಷ್ಟೇ ಸೀಮಿತವಾಗಿದ್ದ ಅಂಚೆಯಣ್ಣ ನಿರಾಳವಾಗಿದ್ದ…
ಅವನು ತುಳಿದುಕೊಂಡು ಬರುವ ಸೈಕಲ್ ಬೆಲ್ ಕೇಳದೆ ಹಲವು ವರುಷಗಳೇ ಗತಿಸಿವೆ…
ಆದರೂ ಚಂದಾದಾರರ ಮನೆಗೆ ಮಾತ್ರ ಪುಸ್ತಕ/ಪತ್ರಿಕೆಗಳನ್ಮು ನಿಷ್ಠೆಯಿಂದ ತಲುಪಿಸುತ್ತಿದ್ದ.
ಇನ್ನೇನು ಅಂಚೆ ಇಲಾಖೆ ಬಂದ್ ಆಗಬಹುದು.. ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ ಕೈಗಡಿಯಾರ ಕಾರಖಾನೆ ಮುಚ್ಚಿದಂತೆ ಇದನ್ನೂ ಹಂತ ಹಂತವಾಗಿ ಮುಚ್ಚಬಹುದು ಎಂಬ ಅನುಮಾನದ ಹುತ್ತ ಬೆಳೆದಿತ್ತು…
ಆದರೆ ಕೇಂದ್ರ ಸರಕಾರ ಅದನ್ನೆಲ್ಲ ಮೀರಿ
ತೀರಾ ಬಡವನೂ ಯಾವುದೇ ಬಂಡವಾಳ ಇಲ್ಲದಿದ್ದರೂ ಕೇವಲ ಒಂದು ನೂರು ರೂ. ತುಂಬುವುದರ ಮೂಲಕ ತನ್ನ ಖಾತೆಯನ್ನು ತೆರೆಯಬಹುದು ಹಾಗೂ ಒಂದು ಲಕ್ಷದವರೆಗೂ ಹಣ ಜಮಾ ಮಾಡಬಹುದೆಂಬ ಅಂಚೆ ಕಚೇರಿಗಳಿಗೆ ಆದೇಶ ಕಳಿಸಿತು. ಈ ಹಿನ್ನೆಲೆಯಲ್ಲಿ,
ಕಳೆದ ವರುಷದಿಂದ ಹಲವು ಸಣ್ಣ ಪುಟ್ಟ ಅಂಚೆ ಕಚೇರಿಗಳ ಅಧಿಕಾರಿಗಳು ಈ ಅವಕಾಶವನ್ನು ಜನರಿಗೆ ಮನವರಿಕೆ ಮಾಡಿ ಹಲವು ಜನರಿಂದ ಖಾತೆ ಮಾಡಿಸಿ ಕೆಲವರಿಗೆ (ಮೊದಲು ಬಂದವರಿಗೆ) ATM ಕಾರ್ಡ್ ಕೂಡಾ ಕೊಟ್ಟರು. ಆ ಕಾರ್ಡ್ ಬಳಸಿ ATM ಮೂಲಕ ಹಣ ತೆಗೆಯಬಹುದೆಂಬ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದರು. ನಾನೂ ಖಾತೆ ಮಾಡಿಸಿ ATM ಕಾರ್ಡ್ ಪಡೆದೆ (ಆದರೆ ಇನ್ನೂ ಬಳಕೆ ಮಾಡಿಲ್ಲ)..
ಈಗ ಮನೆಗೇ ಅಂಚೆಯಣ್ಣ ಬಂದು ನಮಗೆ ಹಣ ಕೊಡುವುದು ಮತ್ತು ನಮ್ಮಿಂದ ಹಣ ಪಡೆದು ನಮ್ಮ ಖಾತೆಗೆ ಜಮಾ ಮಾಡುವ ಹೆಚ್ಚಿನ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಇದು ನಂಬಿಕೆಯ ಪ್ರಶ್ನೆ ಕೂಡ…
ಯಾಕೆಂದರೆ ಹಲವು ವರುಷಗಳ ಹಿಂದೆಯೇ ಮನೆಗೆ ಬರುತ್ತಿದ್ದ ಮನಿ ಆರ್ಡರ್ ಗಳನ್ನು ತಲುಪಿಸುತ್ತಿದ್ದ ಹಲ ಕೆಲವು ಅಂಚೆ ಕಚೇರಿಯ ಸಿಬ್ಬಂದಿ; ಅದರಲ್ಲೂ ತೀರಾ ಹಿಂದುಳಿದ ಹಳ್ಳಿಗಳ ಜನರ ಬಳಿ ಕಮೀಶನ್ ಪಡೆಯುತ್ತಿದ್ದ ಸುದ್ದಿ ಹಬ್ಬಿತ್ತು… ಅದು ನಿಜವಾಗಿ… ಕೆಲವರಿಗೆ ವಾಗ್ದಂಡಣೆ ಆದ ಸುದ್ದಿಯೂ ಬಂತು…
ಈಗ ಮತ್ತೆ ಅಂಚೆಯಣ್ಣನ ಬಳಿ ಹಣ ಹರಿದಾಡುತ್ತಿದೆ. ಯಾವ ನಂಬಿಕೆಯ ಹಿನ್ನೆಲೆಯಲ್ಲಿ ಅವರ ಬಳಿ ಹಣ ನೀಡುವುದು ಎಂಬ ಗೊಂದಲವಿದೆ. ಹಾಗೆಯೇ ಅವರನ್ನು ಗುರುತಿಸುವುದು ಹೇಗೆ ಎಂಬಿತ್ಯಾದಿ ಪ್ರಶ್ನೆಗಳು ಜನರ ಮನದಲ್ಲಿ ಮೂಡುತ್ತದೆ..
ಈ ಎಲ್ಲ ಅನುಮಾನ ಗೊಂದಲಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ..
ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಶತ ೫೦ ಜನರು ಸರಾಸರಿ ೪೫ ವರುಷ ಮೇಲ್ಪಟ್ಟವರೇ ಆಗಿದ್ದಾರೆ.. ಅವರಿಗೆ ಹೊಸ ತಂತ್ರಜ್ಞಾನದ ಬಳಕೆ ಅಷ್ಟು ಸುಲಭವಾಗಿ ಕರಗತವಾಗಲಿಕ್ಕಿಲ್ಲ…
ನನ್ನ ಅನುಭವವನ್ನೆ ಇಲ್ಲಿ ದಾಖಲಿಸುವುದಾದರೆ…
ಮಿತ್ರರೊಬ್ಬರಿಗೆ ನಾನೊಂದಿಷ್ಟು ಪುಸ್ತಕಗಳನ್ನು ಕಳಿಸಬೇಕಿತ್ತು. ರಿಜಿಸ್ಟರ್ಡ್ ಪಾರ್ಸಲ್ ಮಾಡಿಸಲು ಅಂಚೆ ಕಚೇರಿಗೆ ಹೋಗಿ ವಿಚಾರಿಸಿದಾಗ ಅಲ್ಲಿನ ಮಹಿಳಾ ಸಿಬ್ಬಂದಿಯೊಬ್ಬರು
“ಇಲ್ಲ ಸರ್ ನಮಗೆ ಅದರ ಬಗ್ಗೆ ಮಾಹಿತಿ ಇಲ್ಲ.. ಮೇಲಿನ ಕಚೇರಿಗೆ ಕರೆ ಮಾಡಿ ತಿಳಿದು ಹೇಳುವೆ” ಎಂದರು.. ಮರುದಿನ ಬರಲು ಸೂಚಿಸಿದರು.
ಬೇಸರವಾಗಿ ಪ್ರೈವೇಟ್ ಕೋರಿಯರ್ ಮೂಲಕ ಪುಸ್ತಕಗಳನ್ನು ಕಳಿಸಲು ಮುಂದಾದೆ.
ಅಂಚೆ ಇಲಾಖೆಯ ಸಿಬ್ಬಂದಿಯ ತಾತ್ಸಾರಮನೋಭಾವವೂ ನಮ್ಮಂತಹವರನ್ನು ಅಲ್ಲಿಂದ ವಿಮುಖರನ್ನಾಗಿಸುತ್ತದೆ… ಅನಿವಾರ್ಯವಾಗಿ ಕೋರಿಯರ್ ಕಂಪನಿಗಳಿಗೆ ದುಂಬಾಲು ಬೀಳಬೇಕಾಗುತ್ತದೆ.
ಕೋರಿಯರ್ ನವರು ಅವರು ಪಡೆಯುವ ಮೊತ್ತಕ್ಕೆ ಮರುದಿನವೇ ಸಂಬಂಧಿಸಿದ ವಿಳಾಸಕ್ಕೆ ನಾವು ಕೊಟ್ಟ ವಸ್ತುಗಳನ್ನು ತಲುಪಿಸುತ್ತಾರೆ.. ಹೆಚ್ಚೆಂದರೆ ಎರಡು ದಿನ ಆಗಬಹುದು.
ಅಂಚೆ ಇಲಾಖೆಯ ಹಿರಿಯ ಸಿಬ್ಬಂದಿಗಳಿಗೆ ತಂತ್ರಜ್ಞಾನದ ಅರಿವನ್ನು ಮೂಡಿಸಬೇಕಿದೆ.. ಅಷ್ಟು ಸುಲಭವಾಗಿ ಆ ಜ್ಞಾನ ಅವರ ಕರಗತವಾಗುವುದಿಲ್ಲ. ಅವರಿಗೆ ಕಠಿಣ ತರಬೇತಿ ನೀಡಿ ಯಾರು ಏನೇ ಪ್ರಶ್ನೆ ಕೇಳಿದರೂ ಉಡಾಫೆಯ ಉತ್ತರ ಕೊಡದಂತೆ ಸೂಚಿಸಬೇಕಾಗಿದೆ..
ಹಾಗೆಯೇ ಸರಕಾರ ಇದನ್ನು ಆಗು ಮಾಡಲು ನುರಿತ ಹೊಸ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ಹೊಸ ಪ್ರತಿಭೆಯನ್ನು ಗುರುತಿಸಿ ಅವರನ್ನು ಈ ಕೆಲಸದಲ್ಲಿ ತೊಡಗಿಸಬೇಕಾಗಿದೆ..
ಎಲ್ಲ ವ್ಯವಹಾರವೂ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಂಚೆ ಇಲಾಖಾ ಸಿಬ್ಬಂದಿಯ ಮೇಲಿದೆ… ಅವರು ನಂಬಿಕೆಯನ್ನು ಹುಸಿಗೊಳಿಸದೇ ಕಾರ್ಯತತ್ಪರರಾದಲ್ಲಿ ಖಾಸಗಿ ಬ್ಯಾಂಕ್ ಗಳಿಗಿಂತಲೂ ಉತ್ತಮ ಸೇವೆ ನೀಡುವ ಅವಕಾಶವಿದೆ..
ಇತ್ತಿಚಿಗೆ ಅಂಚೆ ಇಲಾಖೆಗೆ ಹೊರ ರಾಜ್ಯಗಳ ಜನರನ್ನು ನೇಮಕಾತಿ ಮಾಡುತ್ತಿದ್ದಾರೆ. ಅವರಿಗೆ ಕನ್ನಡ ಬರುವುದಿಲ್ಲ. ಹೊಸತಾಗಿ ಕೆಲಸಕ್ಕೆ ಸೇರಿದ ಸಿಬ್ಬಂದಿಯನ್ನು ಅಂಚೆ ಇಲಾಖೆಯ ಪತ್ರ ಮತ್ತು ಪಾರ್ಸಲ್ ಪಡೆಯುವ ಕೌಂಟರ್ ನಲ್ಲಿ ಕೂಡ್ರಿಸುತ್ತಿದ್ದಾರೆ. ಅವರಿಗೆ ಕನ್ನಡ ಬರುವುದಿಲ್ಲ. ಬೆಂಗಳೂರಿನ ಬಸವನಗುಡಿಯ ಅಂಚೆ ಕಚೇರಿಯಲ್ಲಿ ನಡೆದ ಘಟನೆಯ ವಿಡಿಯೋ ಒಂದು ಜಾಲತಾಣದಲ್ಲಿ ಹರಿದಾಡುತ್ತಿದೆ. ಕನ್ನಡ ಬರದ ಸಿಬ್ಬಂದಿಯನ್ನು ಬದಲಾಯಿಸಿ, ಈ ಕೌಂಟರ್ ನಲ್ಲಿ ಕನ್ನಡ ಬರುವ ಸಿಬ್ಬಂದಿಯನ್ನು ಹಾಕಿ ಎಂದು ಕೇಳಿದರೂ ಇಲಾಖೆಯ ಮುಖ್ಯಸ್ಥರು ಅದಕ್ಕೆ ಪ್ರತಿಕ್ರಿಯಿಸದೇ ಇದ್ದಾರೆಂದು ಹೇಳುತ್ತಿದ್ದರು. ಮೊನ್ನೆ ನಾನು ನಮ್ಮೂರಿನ ಕೇಂದ್ರ ಕಚೇರಿಗೆ ಹೋಗಿ ಪುಸ್ತಕಗಳನ್ನು ರಿಜಿಸ್ಟರ್ಡ್ ಪಾರ್ಸಲ್ಗೆ ಕೊಟ್ಟಾಗ ಕನ್ನಡ ಬರುವುದಿಲ್ಲ ಎಂದು ಅಲ್ಲಿನ ಮಹಿಳಾ ಸಿಬ್ಬಂದಿ ತಿಳಿಸಿದರು. ಯಾವತ್ತೂ ಹೀಗೆ ಆಗದ ನಾನು ಕನ್ನಡ ಕಲಿಯಿರಿ..ಇಲ್ಲಿನ ಎಲ್ಲರಿಗೂ ಹಿಂದಿ ಬರುವುದಿಲ್ಲ..ಎಂದಾಗ ನಾನು ಅನಿವಾರ್ಯವಾಗಿ ಕನ್ನಡದಲ್ಲಿ ಬರೆದ ವಿಳಾಸವನ್ನು ಓದಿ ಹೇಳಿದೆ. ನಂತರ ಮೇಲಧಿಕಾರಿಗೆ ತಿಳಿಸೋಣವೆಂದು ಹೋದರೆ ಅವರು ರಜೆಯಲ್ಲಿದ್ದರು. ಮಿತ್ರರೊಬ್ಬರ ಗಮನಕ್ಕೆ ತಂದಾಗ ನಾವೇನೂ ಮಾಡಲು ಸಾಧ್ಯವಿಲ್ಲ, ಇಲ್ಲಿನವರನ್ನು ಹೊರ ರಾಜ್ಯಕ್ಕೂ ಹೊರ ರಾಜ್ಯದವರನ್ನು ಇಲ್ಲಿಗೂ ನೇಮಕಾತಿ ಮಾಡುತ್ತಿದ್ದಾರೆ. ನೀವು ಮೇಲಿನವರಿಗೆ ಕಂಪ್ಲೇಂಟ್ ಕೊಡಿ ಎಂದುತ್ತರಿಸಿದರು. ಸರಿ ಎಂದು ಹೊರಟು ಬಂದೆ.
ಹೊರ ರಾಜ್ಯದವರನ್ನು ನೇಮಕಾತಿ ಮಾಡಿದ ಮೇಲೆ ಅವರಿಗೆ ಕನ್ನಡ ( ಆಯಾ ರಾಜ್ಯದ ಆಡು ಭಾಷೆ) ವನ್ನು ಕನಿಷ್ಠ ಮೂರು ತಿಂಗಳು ಓದಲು ಬರೆಯಲು ಕಲಿಸಿ, ಅವರು ಕಲಿತ ನಂತರ ಈ ಕೌಂಟರ್ ಗೆ ಕಳಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇಲ್ಲವಾದಲ್ಲಿ ದಿನ ಬೆಳಗಾದರೆ ಆ ಕೌಂಟರ್ ನಲ್ಲಿ ಹಿಂದಿ/ಇಂಗ್ಲಿಶ್ ಗೊತ್ತಿಲ್ಲದ ಜನಸಾಮಾನ್ಯರು ಆ ಸಿಬ್ಬಂದಿ ಜೊತೆ ಜಗಳಾಡಿ ತಮ್ಮ ಕೆಲಸ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಈ ಅನುಭವ ಹಲವರಿಗೆ ಆಗಿರಬಹುದು. ಅಲ್ಲಿನ ಅಂಚೆ ವ್ಯವಸ್ಥಾಪಕರು ಈ ಕಾರ್ಯ ಮಾಡಲು ಉತ್ಸುಕರಾಗಬೇಕು. ಉಳಿದ ಸಿಬ್ಬಂದಿಗಳು ಹೊಸಬರಿಗೆ ಸಲಹೆ-ಸೂಚನೆ ಕೊಟ್ಟು ಕನ್ನಡದಲ್ಲೇ ಮಾತನಾಡುತ್ತ ಅವರಿಗೆ ಕನ್ನಡ ಅರ್ಥವಾಗುವಂತೆ ಅವರೊಡನೆ ವ್ಯವಹರಿಸಬೇಕು.
ಅಂಚೆ ಇಲಾಖೆ ಮಿತ್ರರು ಈ ಕಾರ್ಯದಲ್ಲಿ ಯಶ ಗಳಿಸಲಿ ಎಂದು ಆಶಿಸುವೆ..