ಮರೆತೇನೆಂದರೆ ಮರೆಯಲಿ ಹ್ಯಾಂಗ…
ಹೆಗ್ಗೋಡು ಭಾರತದ ಭೂಪಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಕುಗ್ರಾಮವಾದ ಹೆಗ್ಗೋಡಿನ ಕೀರ್ತಿಗೆ ಕಳಶ ಪ್ರಾಯದಂತೆ ಸುಬ್ಬಣ್ಣನವರಿಗೆ ಮ್ಯಾಗ್ಸೇಸೆ ಪುರಸ್ಕಾರ ಸಂದಿದ್ದು. ಬೆಳಗಾಗುವುದರೊಳಗೆ ಹೆಗ್ಗೋಡು ರಾಷ್ಟ್ರ ಪ್ರಸಿದ್ಧಿ ಪಡೆಯಿತು. ಇಂತಹ ಹೆಗ್ಗೋಡೆಂಬ ಹೆಗ್ಗೋಡಿನಲ್ಲಿ ನೀನಾಸಂನ ಪ್ರಾರಂಭದ ದಿನಗಳಲ್ಲಿ ಅದರ ಹಲವು ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಲ್ಲದೇ ಅಲ್ಲಿನ ಕ್ಯಾಂಟೀನ್ ಜವಾಬ್ಧಾರಿಯನ್ನು ಎರಡು ದಶಕಕ್ಕೂ ಹೆಚ್ಚು ಕಾಲ ಮುನ್ನಡೆಸಿದವರು ಶ್ರೀ ಲಕ್ಷ್ಮೀನಾರಾಯಣರಾವ್ ಕಾಕಾಲ್ ಮತ್ತು ಕುಟುಂಬ. (ಅವರ ಮನೆಮಗಳಾದ ಸವಿತಾಳನ್ನು ‘ಯಾಜಿ ಪ್ರಕಾಶನದ ಪ್ರಕಾಶಕಿ’ ಮದುವೆಯಾದದ್ದು ನಂತರದ ದಿನಗಳಲ್ಲಿ).
ಈಗಲೂ ಹಲವರು ಆ ನೆನಪುಗಳನ್ನು ಮೆಲಕು ಹಾಕುತ್ತಾರೆ. ಮಿಕ್ಸಿ ಮತ್ತಿತರ ಸೌಲಭ್ಯವಿಲ್ಲದ ಆ ದಿನಗಳಲ್ಲಿ ಆ ಕುಟುಂಬ ಪಟ್ಟ ಪಾಡು ನೋಡಿದವರಿಗೇ ಗೊತ್ತು. ಬೆಂಗಳೂರಿನಲ್ಲಿ ಈಗ ಹಲವು ಕಡೆ ತನ್ನ ಕಾಕಾಲ್ ಕೈರುಚಿಯ ಮೂಲಕ ತನ್ನ ಛಾಪನ್ನು ಮೂಡಿಸುತ್ತಿರುವ ಶ್ರೀ ಲಕ್ಷ್ಮೀನಾರಾಯಣರಾವ್ ಕಾಕಾಲ್ ಅವರ ಮಗನಾದ ಸತೀಶ್ ಕಾಕಾಲ್ ಮತ್ತು ಅವರ ಕುಟುಂಬ ಆ ದಿನಗಳನ್ನು ಮೆಲಕು ಹಾಕುವಂತೆ ಮಲೆನಾಡಿನ ರುಚಿಗೆ ತನ್ನನ್ನು ಹದಗೊಳಿಸುತ್ತಾ, ಹೊಸ ಹೊಸ ಪ್ರಯೋಗಗಳ ಮೂಲಕ ಬೆಂಗಳೂರಿಗರಿಗೆ ತನ್ನದೇ ಕೈರುಚಿ ಉಣಬಡಿಸುತ್ತಿದೆ.
ಇಂದಿಗೆ ನನ್ನ ಮಾವನವರು ನಮ್ಮನ್ನಗಲಿ 15 ವರ್ಷಗಳಾಗಿವೆ. ಕಳೆದ ಆ ದಿನಗಳನ್ನು ಸವಿತಾ ನೆನಪಿಸುತ್ತಾ ತನ್ನ ಮನದಾಳದ ಮಾತಿಗೆ ಅಕ್ಷರ ರೂಪ ನೀಡಿದ್ದಾಳೆ.
ಮುಂದಿನದು ಸವಿತಾ ಯಾಜಿಯ ಬರೆಹ…
#ಆತ್ಮೀಯ_ಓದುಗರೇ,
#ನನ್ನ ತಂದೆಯ ಕುರಿತು ನನ್ನದೊಂದು ಪುಟ್ಟ ಬರೆಹ
ನನ್ನ ಮೂಲ ಊರು ಮುಂಡಿಗೇಸರ. ಅದು ದಿ. ಕೆ.ವಿ. ಸುಬ್ಬಣ್ಣನವರ ಊರೂ ಹೌದು. ನನ್ನ ತಂದೆ ದಿ. ಲಕ್ಷ್ಮೀನಾರಾಯಣರಾವ್ ಕಾಕಾಲ್. ನನ್ನ ತಂದೆ ಬದುಕು ಕಟ್ಟಿಕೊಳ್ಳಲು ಕುಟುಂಬ ಸಮೇತ ನನ್ನ ತಾಯಿ, ನಾಲ್ಕು ಜನ ಅಣ್ಣಂದಿರು, ಒಬ್ಬ ಅಕ್ಕ ಹೆಗ್ಗೋಡಿನ ನೀನಾಸಂನ ಕ್ಯಾಂಟಿನ್ ನಡೆಸಲು ತೀರ್ಮಾನಿಸಿ, ಮುಂಡಿಗೇಸರದಿಂದ ಹೆಗ್ಗೋಡಿನತ್ತ ಪಯಣ ಬೆಳೆಸಿದರು. ಆಗ ನಾನು ಆರು ತಿಂಗಳ ಹಸುಗೂಸು.
ಬದುಕಿಗಾಗಿ ಕ್ಯಾಂಟಿನ್‌ನಲ್ಲಿ ನನ್ನ ತಂದೆ, ತಾಯಿ ಹಾಗೂ ಅಣ್ಣಂದಿರು ರಾತ್ರಿ, ಹಗಲು ದುಡಿದರು. ರಾತ್ರಿ 12 ಗಂಟೆಗೆ ಮಲಗಿ ಮುಂಜಾನೆ 4 ಗಂಟೆಗೆ ಎದ್ದು ಅವರು ಕಷ್ಟಪಡುತ್ತಿದ್ದದ್ದನ್ನು ಬಾಲ್ಯದಲ್ಲೆ ಕಂಡು ಮರುಗಿದ ಆ ದಿನಗಳು ಕಣ್ಣ ಮುಂದೆ ಕಟ್ಟಿದ ಹಾಗಿದೆ.
ಕ್ಯಾಂಟಿನ್ ನಡೆಸುತ್ತಲೇ ನನ್ನ ತಂದೆ ತುಂಬಾ ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ವಾಚ್ ಮತ್ತು ಗಡಿಯಾರ ರಿಪೇರಿ, ಅಡಿಕೆ ಫಸಲು ಗುತ್ತಿಗೆ, ಮದುವೆಯ ವರ-ವಧು ಹುಡುಕುವುದು, ಎಮ್ಮೆ ವ್ಯಾಪಾರ ಮಾಡಿಸುವುದು, ಅಡಿಗೆ ಕಂಟ್ರಾಕ್ಟರ್ ಕೆಲಸ, ತಮ್ಮದೇ ಆದ ಬಜಾಜ್ m80 ರಿಪೇರಿ ಮಾಡುವುದು, ನೀನಾಸಂನ ಪ್ರಾರಂಭದ ದಿನಗಳಲ್ಲಿನ ನಾಟಕಗಳಲ್ಲಿ ಪಾತ್ರ ನಿರ್ವಹಣೆ ಇವೆಲ್ಲವುಗಳ ನಡುವೆ ತಮ್ಮ ತಂದೆಯವರಿಂದ ಕಲಿತ ಗಣಪತಿ ತಯಾರಿಕೆಯಲ್ಲೂ ಸಿದ್ಧಹಸ್ತರಾಗಿದ್ದರು. ಅದನ್ನು ಅಣ್ಣನಿಗೂ ಕಲಿಸಿದರು.
ಪ್ರತಿ ವರುಷ 40-50 ವಿವಿಧ ರೀತಿಯ ಗಣಪತಿ ತಯಾರಿಸುತ್ತಿದ್ದರು. -ಹೀಗೆ ಎಲ್ಲಾ ಕೆಲಸದಲ್ಲೂ ಅವರು ಚಟುವಟಿಕೆಯಿಂದ ಇರುತ್ತಿದ್ದರು. ಆಗ ಅವರ ಹೆಗಲಿಗೆ ಹೆಗಲಾಗಿ ನಿಂತವರು ನನ್ನ ಪ್ರೀತಿಯ ಅಮ್ಮ ಜಯಲಕ್ಷ್ಮಿ ಕಾಕಾಲ್ ಹಾಗೂ ನನ್ನ ಅಣ್ಣ ಗಣೇಶ್ ಕಾಕಾಲ್.
ಆಗ ಬರುತ್ತಿದ್ದ ಅವರ ಸಂಪಾದನೆಯಲ್ಲಿಯೇ ಎಲ್ಲಾ ಮಕ್ಕಳನ್ನು ಓದಿಸುತ್ತಿದ್ದರು. ದಿನ ಕಳೆದ ಹಾಗೆ ತಾವೇ ಒಂದು ಸ್ವಂತ ಮನೆ ಕಟ್ಟಿಕೊಳ್ಳಬೇಕು ಎಂಬ ಇಚ್ಛೆಯಿಂದ 1992ರ ಸುಮಾರಿಗೆ ಹೆಗ್ಗೋಡಿನಲ್ಲಿರುವ ಗುಡ್ಡವನ್ನು ಖರೀದಿಸಿ ಅದನ್ನು ಅಗೆದು ತೆಗೆಸಿ, ಗುಡ್ಡದ ಮೇಲೆ ಅದ್ಭುತವಾದ ಮನೆಯನ್ನು ಕಟ್ಟಿದರು. ಇದರ ನಡುವೆ ಹೊನ್ನೇಸರದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ವಹಿವಾಟುದಾರರಾಗಿ ದೇವಸ್ಥಾನವನ್ನು ಸಾಕಷ್ಟು ಅಭಿವೃದ್ಧಿ ಪಡಿಸಿದರು.
ಅವರು ಎಲ್ಲದರಲ್ಲೂ ಅಚ್ಚುಕಟ್ಟು. ತನ್ನ ಜೀವಿತಾವಧಿಯ ಕೊನೆಯ ವರೆಗೂ ತನ್ನ ಬಟ್ಟೆಯನ್ನು ತಾವೇ ಒಗೆದು, ಒಣಗಿಸಿ, ತಾವೇ ಇಸ್ತ್ರಿ ಮಾಡಿಕೊಳ್ಳುತ್ತಿದ್ದರು. ಊಟದ ವಿಷಯದಲ್ಲೂ ಅಷ್ಟೆ, ಅವರಿಗೆ ಎಲ್ಲವೂ ರುಚಿಕಟ್ಟಾಗಿರಬೇಕಿತ್ತು.
ಅವರಿಗೆ ಹೆಂಡತಿಯನ್ನು ಕಂಡರೆ ಎಲ್ಲಿಲ್ಲದ ಪ್ರೀತಿ. ಅವಳಿಗೆ ಏನಾದರೂ ಆರೋಗ್ಯ ಹದಗೆಟ್ಟರೆ ತಕ್ಷಣ ಮನೆಮದ್ದು ತಯಾರಿಸಿ ತಾವೇ ಕೊಡುತ್ತಿದ್ದರು. ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ ಎನ್ನುವ ಪಾಲಸಿ ಅವರದ್ದು. ಅಮ್ಮ ತವರಿಗೆ ಹೋಗಿ ಎರಡು ದಿನ ಬರಲಿಲ್ಲ ಅಂದರೆ ಕೋಪದಿಂದ ವಟಗುಟ್ಟುತ್ತಿದ್ದರು. ಯಾವತ್ತೂ ಅಮ್ಮನನ್ನು ಬಿಟ್ಟು ಇರುತ್ತಿರಲಿಲ್ಲ.
ಇದರ ನಡುವೆ ಮಕ್ಕಳ ಮದುವೆ ಮಾಡಿದರು. ಹೊಸಪೇಟೆಯಲ್ಲಿ ಇರುವ ನನ್ನನ್ನು ನೋಡಲು ಆಗಾಗ ಬರುತ್ತಿದ್ದರು. ಬಂದಾಗ ತಾವೇ ಸ್ವತಃ ರುಚಿಕರವಾದ ಅಡುಗೆ ತಯಾರಿಸಿ ಖುಷಿಯಿಂದ ಸವಿಯುತ್ತಿದ್ದರು. ಅವರಿಗೆ ಹಾಗಲಕಾಯಿ ಪಲ್ಯ, ಅಪ್ಪೆಮಿಡಿ ಉಪ್ಪಿನಕಾಯಿ, ಸೌತೆಕಾಯಿ ಉಪ್ಪುಕಾರ ಅಂದರೆ ಎಲ್ಲಿಲ್ಲದ ಪ್ರೀತಿ.
ಅಪ್ಪನಿಗೆ ದೇವರ ಮೇಲೆ ಅಪಾರ ಭಕ್ತಿ. ಮನೆಯಲ್ಲಿ ಗಂಟೆಗಟ್ಟಲೆ ಪೂಜೆ ಮಾಡುತ್ತಿದ್ದರು. ಹಾಗೇ ವರ್ಷಕ್ಕೆ ಒಂದೆರಡು ಸಾರಿ ಮನೆಯಲ್ಲಿ ಹೋಮ, ಹವನ ಮಾಡಿಸಿ ಮಕ್ಕಳು, ಬಂಧುಗಳು, ಗೆಳೆಯರನ್ನು ಕರೆದು ಊಟ ಹಾಕಿಸಿ ಸಂಭ್ರಮಿಸುತ್ತಿದ್ದರು.
ನೋಡಲು ದಷ್ಟಪುಷ್ಟವಾಗಿದ್ದ ನನ್ನ ಅಪ್ಪನನ್ನು ಕಂಡರೆ ಊರಿನವರಿಗೆಲ್ಲಾ ತುಂಬಾ ಗೌರವ ಹಾಗೂ ಪ್ರೀತಿ. ಅವರೂ ಅಷ್ಟೇ ಮೌನಿ ಹಾಗೂ ಸಿಟ್ಟಿನ ವ್ಯಕ್ತಿ ಕೂಡಾ ಆಗಿದ್ದರು.
ಅಪ್ಪನ ನೆನಪಿನ ಶಕ್ತಿ ಅಪಾರ. ಯಾವತ್ತೂ ಪಟ್ಟಿ ಮಾಡಿಕೊಂಡು ಹೋಗಿ ಮನೆಗೆ ಬೇಕಾದ ಸಾಮಾನನ್ನು ತರಲಿಲ್ಲ. ಹಾಗೆ ಅಮ್ಮ ಹೇಳುವ ಯಾವ ವಸ್ತುವನ್ನು ಮರೆತು ಬರುತ್ತಿರಲಿಲ್ಲ.
ಅಡಿಗೆ ಕಾಂಟ್ರ್ಯಾಕ್ಟ್ ಕೆಲಸ ತೆಗೆದುಕೊಂಡು ಸಮಾರಂಭಗಳಲ್ಲಿ ಸಾವಿರಾರು ಜನರಿಗೆ ಅಡುಗೆ ತಯಾರಿಸುವಾಗ ಅವರು ಕಷ್ಟಪಟ್ಟು ಬೆವರು ಸುರಿಸುತ್ತಿದ್ದುದನ್ನು ಕಣ್ಣಾರೆ ಕಂಡ ನಾನು, ಎಷ್ಟೋ ಬಾರಿ ಕಣ್ಣೀರು ಹಾಕಿ ಅಪ್ಪ ಸಾಕು, ಇನ್ನು ಹೋಗಬೇಡ ಅಂತ ಹೇಳಿದ್ದೇನೆ. ಮುದ್ದಿನ ಮಗಳಾದ ನನ್ನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಆದರೆ ಸುಖಪಡುವ ಕಾಲದಲ್ಲಿ ನಮ್ಮನ್ನೆಲ್ಲಾ ಅಗಲಿದರು.
* * *
ಇದೇ 2018 ಅಕ್ಟೋಬರ್ 29ಕ್ಕೆ(ಇಂದಿಗೆ) ನನ್ನ ತಂದೆ ನಮ್ಮನ್ನಗಲಿ 15 ವರ್ಷ ಆಯಿತು. ದೀಪಾವಳಿ ಆಗಿ 3ನೇ ದಿವಸಕ್ಕೆ ಅವರು ನಮ್ಮಿಂದ ದೂರವಾದರು. ಆದರೆ ಇಂದಿಗೂ ಅವರು ನಮ್ಮಿಂದ ದೂರ ಆಗಿದ್ದಾರೆ ಅನಿಸುತ್ತಿಲ್ಲ.
ಅಪ್ಪ ನನ್ನದೊಂದು ಪ್ರಶ್ನೆ ಇದೆ ನಿನಗೆ?
ಅಪ್ಪ ಗಟ್ಟಿಮುಟ್ಟಾಗಿದ್ದ ನೀನು ನಿನ್ನ 69ನೇ ವಯಸ್ಸಿಗೆ ನಮ್ಮನ್ನೆಲ್ಲಾ ಬಿಟ್ಟು ಹೋಗಲು ಮನಸ್ಸಾದರೂ ಹೇಗೆ ಬಂತು? ಒಂದು ದಿನ ಆರಾಂ ಇಲ್ಲ ಎಂದು ಮಲಗಲಿಲ್ಲ, ಯಾರ ಹತ್ತಿರಾನು ಏನೂ ಸೇವೆ ಮಾಡಿಸಿಕೊಳ್ಳದೆ ದೂರಾದೆ.
ಅಕ್ಟೋಬರ್ 29-2003 ನಮಗೆ ಕರಾಳ ದಿನ. ನಮ್ಮ ಜೊತೆ ಅಂದರೆ ನನ್ನ ಗಂಡ ಮಗಳು ಹಾಗೂ ನನ್ನ ತಂದೆ ನಮ್ಮ ಮನೆಯ ಆಸ್ತಿಯ ವಿಚಾರ ಮಾತಾಡಲು ಹೊನ್ನಾವರಕ್ಕೆ ಹೋಗಿದ್ದೆವು. 28ರ ರಾತ್ರಿ ಅವರಿಗೆ ವಿಪರೀತ ಎದೆ ನೋವು ಕಾಣಿಸಿಕೊಂಡಿತು. ಪರೀಕ್ಷಿಸಿದ ವೈದ್ಯರು ಗ್ಯಾಸ್‌ಟ್ರಿಕ್ ಆಗಿದೆ ಅಂದರು. ತಂದೆಯವರು ರಾತ್ರಿಯೆಲ್ಲಾ ನೋವಿನಿಂದ ಒದ್ದಾಡುತ್ತಿದ್ದರು.
29ರ ಬೆಳಿಗ್ಗೆ ಪರೀಕ್ಷಿಸಿದ ಹೊನ್ನಾವರದ ವೈದ್ಯರು ತಡವಾಗಿ ಅವರಿಗೆ ಹಾರ್ಟ್ ಆಟ್ಯಾಕ್ ಆಗಿದೆ ಇಮ್ಮಿಡಿಯೇಟ್ ಅವರನ್ನು ಮಂಗಳೂರಿಗೆ ಕರೆದುಕೊಂಡು ಹೋಗಿ ಅಂದರು. ಆ ದಿನಗಳಲ್ಲಿ ನಮ್ಮ ಹತ್ತಿರ ಮೊಬೈಲ್ ಕೂಡಾ ಇರಲಿಲ್ಲ. ಹಾಗೆಯೇ ಗಾಬರಿಯಲ್ಲಿ ಅಣ್ಣಂದಿರಿಗೆ ವಿಷಯ ತಿಳಿಸಲು ಲ್ಯಾಂಡ್‌ಫೋನ್ ನಂಬರ್ ಕೂಡಾ ನೆನಪಾಗದೆ ಒದ್ದಾಡಿದ ಆ ಘಟನೆ ನೆನೆಸಿಕೊಂಡರೆ ಮೈ ಜುಮ್ಮೆನ್ನುತ್ತೆ.
ಮನೆಗೆ ವಿಷಯ ತಿಳಿಸಿ ಅಂಬುಲೆನ್ಸ್‌ನಲ್ಲಿ ಹೊರಡುವಾಗ ತಾವೇ ಒಂದು ಲೋಟ ಕಾಫಿ ಕುಡಿದು ಸ್ಟ್ರಕ್ಚರ್ ಮೇಲೆ ಮಲಗಿದರು. ಸರಿಯಾಗಿ ಪರೀಕ್ಷಿಸದ ವೈದ್ಯರ ನಿರ್ಲಕ್ಷ್ಯವೇ ನನ್ನ ತಂದೆಯ ಸಾವಿಗೆ ಕಾರಣ. ಆ ಸಮಯದಲ್ಲಿ ಅವರಿಗೆ ನಿದ್ರೆಯ ಇಂಜೆಕ್ಷನ್ ಕೊಡಲಾಗಿತ್ತು. ಕೊನೆಯ ಘಳಿಗೆಯಲ್ಲಿ ನಮಗೆ ಅವರ ಹತ್ತಿರ ಮಾತಾಡಲು ಕೂಡಾ ಆಗಲಿಲ್ಲ.
ನಾವು ಮೂವರೇ ಅಂಬುಲೆನ್ಸ್‌ನಲ್ಲಿ ಇದ್ದ ಕಾರಣ, ಅವರ ಪ್ರಾಣ ಹೋಗುವುದನ್ನು ನೋಡುತ್ತಿದ್ದ ನಮಗೆ ಏನು ಮಾಡುವುದೆಂದು ತೋಚದೆ ವಾಹನ ಚಾಲಕರ ಬಳಿ ಕೇಳಿ, ಅವರ ಸೂಚನೆಯಂತೆ ಯಾಜಿಯವರು ನಮ್ಮ ತಂದೆಯ ಎದೆಯ ಭಾಗವನ್ನು ಒತ್ತುತ್ತಾ ಇದ್ದರು. ಆಕ್ಸಿಜೆನ್ ಇಲ್ಲದ ಅಂಬುಲೆನ್ಸ್‌ನಲ್ಲಿ ಹೋಗುವಾಗ ನನ್ನ ತಂದೆ ಭಟ್ಕಳದ ಹತ್ತಿರ ಚಿರನಿದ್ರೆಯಲ್ಲಿಯೇ ನಮ್ಮನ್ನೆಲ್ಲಾ ಅಗಲಿದರು. ಅದನ್ನು ಬಿಟ್ಟು ಬೇರೆ ಏನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ನನ್ನ ಮೂರು ವರ್ಷದ ಮಗಳು ಭೂಮಿಕಾ ಅಜ್ಜನ ಶವ ನೋಡುತ್ತಾ ಅಜ್ಜನಿಗೆ ಏನಾಗಿದೆ ಎಂದು ಕೇಳುತ್ತಾ ಊರು ತಲುಪುವವರೆಗೆ ನೀರು ಸಹ ಕುಡಿಯದೇ ಆ ವಯಸ್ಸಿನಲ್ಲಿ ಅಜ್ಜನಿಗಾಗಿ ಮರುಗಿದಳು. ಆ ಘಟನೆಯನ್ನು ನೆನೆದಾಗ ದುಃಖ ಉಮ್ಮಳಿಸಿ ಬರುತ್ತದೆ.
ವಿಷಯ ಊರಿಗೆ ತಿಳಿಸಿ, ಅಪ್ಪನ ಶವ ತೆಗೆದುಕೊಂಡು ಊರು ತಲುಪಿದಾಗ ಆಗಲೇ ಅಲ್ಲಿ ನೂರಾರು ಜನ ಸೇರಿದ್ದರು. ನಾನು ಹಾಗೂ ನನ್ನ ಪತಿ ಗಣೇಶ್ ಯಾಜಿ ಅವರು ಅಮ್ಮನ ಕಾಲಿಗೆ ಬಿದ್ದು ದಯವಿಟ್ಟು ಕ್ಷಮಿಸು ನಮ್ಮ ಜೊತೆ ಬಂದು ಹೀಗಾಯಿತು ಎಂದು ಗೋಳಾಡಿದೆವು. ನನ್ನ ಅಮ್ಮ ತನ್ನ ದುಃಖದ ನಡುವೆಯೂ ನಿಮ್ಮ ಪ್ರಯತ್ನ ನೀವು ಮಾಡಿದ್ದೀರಿ ಅವರಿಗೆ ಉಳಿಯುವ ಯೋಗವಿಲ್ಲ ಅಂತ ಅವರೇ ನಮ್ಮನ್ನು ಸಮಾಧಾನಿಸಿದ ಕರುಣಾಮಯಿ ಅವರು.
** *
ಅಪ್ಪಾ… ದಿನಗಳು ಉರುಳಿ ವರ್ಷಗಳು ಕಳೆದು ಇಂದಿಗೆ ನೀನು ಹೋಗಿ 15 ವರ್ಷ ಆಯಿತು. ಈಗ ನಿನ್ನ ಎಲ್ಲಾ ಮಕ್ಕಳು ಒಳ್ಳೆಯ ಸ್ಥಾನದಲ್ಲಿದ್ದಾರೆ. ನಿನ್ನ ಆಸೆಯಂತೆ ನಿನ್ನ ಮಗ ಸತೀಶ್ ಕಾಕಾಲ್ ಹಾಗೂ ಛಾಯಾ ಕಾಕಾಲ್ ಹೋಟೆಲ್ ಉದ್ಯಮ ಪ್ರಾರಂಭಿಸಿ ಇವತ್ತು ಇಡೀ ಕರ್ನಾಟಕದಲ್ಲಿಯೇ ಮನೆ ಮಾತಾಗಿದ್ದಾರೆ. ಆದರೆ ಅದನ್ನು ನೋಡುವ, ಸವಿಯುವ ಭಾಗ್ಯ ನಿನಗೆ ಇಲ್ಲದಾಯಿತು. ಇರಲಿ ಅಪ್ಪ ಅಲ್ಲಿಂದಲೇ ಆಶೀರ್ವದಿಸು.
ಒಂದು ಮಾತು ಅಪ್ಪ. ಈಗ ನಿನ್ನ ಸ್ಥಾನದಲ್ಲಿ ಅಮ್ಮ ಇದ್ದಾಳೆ. ಅವಳ ಬಗ್ಗೆ ಹೇಳಲು ನನ್ನಲ್ಲಿ ಶಬ್ಧಗಳಿಲ್ಲ. ನನ್ನ ಪ್ರಕಾರ ನನಗೆ ದೊರೆತಿರುವ ಅಮ್ಮ ಸಾಕ್ಷಾತ್ ದೇವತೆ. ನಾನು ಹುಟ್ಟಿ ಇಷ್ಟು ವರ್ಷವಾದರೂ ಅವಳಿಗೆ ಸಿಟ್ಟು ಬಂದಿದ್ದು ನಾನು ನೋಡಿಲ್ಲ. ಜೀವನದ ಮೊದಲ ಗೆಳತಿ ಅವಳು ನನಗೆ. ತನ್ನ 76ನೇ ವಯಸ್ಸಿನಲ್ಲೂ ಮನೆಯ ಕೆಲಸವನ್ನು ಮಾಡಿ ಬಂದವರನ್ನು ಸತ್ಕರಿಸುವ ರೀತಿ ನೋಡಿ ದಂಗಾಗಿದ್ದೇನೆ. ಇಂಥ ಅಮ್ಮನನ್ನು ಪಡೆದ ನಾನೇ ಧನ್ಯ. ಅವಳ ತಾಳ್ಮೆಯ ಒಂದು ಭಾಗ ನನಗೆ ಬರಲಿಲ್ಲ.
ಮುಂದಿನ ಜನ್ಮ ಇದ್ದರೆ ಮತ್ತೆ ನಿಮ್ಮ ಮಗಳಾಗಿ ಹುಟ್ಟಿ ಅಮ್ಮನ ತಾಳ್ಮೆಯನ್ನು ಪಡೆಯಬೇಕೆಂಬುದು ನನ್ನ ಆಸೆ ಅಪ್ಪ. ನೀನು ನಮ್ಮನ್ನಗಲಿ 15 ವರ್ಷ ಕಳೆದರೂ ನಿನ್ನ ನೆನಪು ಸದಾ ಅಮರ. ಇದೋ ನಿನಗೆ ನನ್ನ ‘ಅಕ್ಷರ_ನಮನ’.
ನಿನ್ನ ಪ್ರೀತಿಯ ಮಗಳು
ಸವಿತಾ ಯಾಜಿ