ಯಾಕೋ ಏನೋ ಓದಿದವರೇ
ದಡ್ಡರಾಗುತ್ತಿದ್ದಾರಾ!!!!
ಇಂದು ನವೀನ್ ಅವರು ಹಾಕಿದ ಸ್ಟೇಟಸ್ ಮತ್ತು ಫೋಟೊ ಮನಕಲಕಿತು.
ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಾದ ರಾಮಚಂದ್ರರಾಯರು ಆಸ್ಪತ್ರೆಗಳಿಗೆ “ಶವ” ದಾನದ ಹಿಂದೆ ಬಿದ್ದು ಅದರಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ.
ಉತ್ತಮ ಅಂಕ ಗಳಿಸಿದ ಸಿರಿವಂತರ ಮಕ್ಕಳು ಅಥವಾ ಮೆರಿಟ್ ಮೂಲಕ ಡಾಕ್ಟರ್ ಆಗಬೇಕೆಂದು ಕನಸುಕಟ್ಟಿಕೊಂಡು ಬರುವ ವಿದ್ಯಾರ್ಥಿಗಳಿಗೆ ಮೆಡಿಕಲ್ ಕಾಲೇಜುಗಳಲ್ಲಿ ಬರಿ ಥಿಯರಿ ಓದಿದರೆ ಸಾಲದು, ಅವರಿಗೆ ಪ್ರಾಕ್ಟಿಕಲ್ ಮುಖ್ಯ. ಅದಕ್ಕೆ ಬೇಕಾದ ಮಾನವನ ದೇಹ ಮುಖ್ಯ.
ಇತ್ತೀಚಿನ ದಿನಗಳಲ್ಲಿ ದೇಹ ಸಿಗುವುದೇ ಅಪರೂಪ. ಮೊದಲಾದರೆ ಅನಾಥ ಶವಗಳನ್ನು ತಂದು ವಿದ್ಯಾರ್ಥಿಗಳ ಓದಿಗೆ ಅನುಕೂಲ ಕಲ್ಪಿಸುತ್ತಿದ್ದರು. ಈಗ ಕಾನೂನಿನ ಹಿಡಿತ ಮತ್ತು ಮಿಡಿಯಾದವರ ಹದ್ದಿನ ಕಣ್ಣು ಅನಾಥ ಶವಗಳಿಗೆ “ಮುಕ್ತಿ” ಒದಗಿಸುತ್ತಿದೆ. ಹಾಗಾಗಿ ಡಾಕ್ಟರ್ ಆಗಬೇಕೆಂದು ಕನಸುಕಟ್ಟಿಕೊಂಡು ಬರುವ ವಿದ್ಯಾರ್ಥಿಗಳಿಗೆ ಕೊಯ್ಯಲು ಶವ ಸಿಗುತ್ತಿಲ್ಲ…ಸಾವಿರಾರು ರೂ. ಕೊಟ್ಟರೂ ಶವ ಸಿಗದ ಈ ಸ್ಥಿತಿಯಲ್ಲಿ ಆ ಹುಡುಗರು ಮುಂದೆ ಡಾಕ್ಟರ್ ಆಗಿ ಹೇಗೆ ನಿಭಾಯಿಸಬಹುದು ಎಂಬುದು ಊಹೆಗೂ ನಿಲುಕದ ಪ್ರಶ್ನೆ.
ಹೀಗಿರುವಾಗ ರಾಮಚಂದ್ರರಾಯರ ಶ್ರಮ ಅವರ ಕಾಳಜಿಗೆ ಮನದುಂಬಿ ಹರಸಲೇಬೇಕು. ಕಾಡಿ ಬೇಡಿ ಈ ಕೆಲಸಕ್ಕೆ ಪರಿಚಿತರನ್ನು ಒಪ್ಪಿಸಿ, ಶವಗಳನ್ನು ಆಸ್ಪತ್ರೆ, ಮೆಡಿಕಲ್ ಕಾಲೇಜುಗಳಿಗೆ ತಲುಪಿಸುವ ಇವರ ಕೈಂಕರ್ಯ ಮೆಚ್ಚತಕ್ಕದ್ದೆ.
ಕೆಲ ದಿನಗಳ ಹಿಂದೆ ಗೆಳೆಯರೊಬ್ಬರು ಮನೆಗೆ ಬಂದಿದ್ದರು. ಉಭಯಕುಶಲೋಪರಿಯ ಜೊತೆ ಇದೆ ಚರ್ಚೆ ಬಂತು. ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ನನ್ನ ಅಮ್ಮ ತಕ್ಷಣ ನಮ್ಮ ಮಾತಿನ ನಡುವೆ ನನ್ನನ್ನುದ್ದೇಶಿಸಿ
ಮಗಾ, “ನಾನು ಸತ್ತಾಗ ನನ್ನ ಶವಸಂಸ್ಕಾರ ಮಾಡಬೇಡ, ಶವವನ್ನು ಆಸ್ಪತ್ರೆಗೆ ಅಥವಾ ಮೆಡಿಕಲ್ ಕಾಲೇಜಿಗೆ ಕೊಡು. ಇದು ನನ್ನ ಆಸೆ. ಇದೊಂದನ್ನು ಈಡೇರಿಸು” ಎಂದರು. ನನಗೆ ಮತ್ತು ನನ್ನ ಮಿತ್ರನಿಗೆ ಸಖೇದಾಶ್ಚರ್ಯ.
ಅವನು ಕೇಳಿಯೇ ಬಿಟ್ಟ “ಅಮ್ಮಾ ತಮಾಷೆ ಮಾಡ್ಬೇಡಿ” ಎಂದ. ಅದಕ್ಕೆ ನನ್ನಮ್ಮ “ಇಲ್ಲ ತಮಾಷೆ ಅಲ್ಲ. ನಿಜವಾಗಿಯೂ ಒಪ್ಪಿಗೆ ಸೂಚಿಸುತ್ತಿರುವೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊ. ಸಹಿ ಹಾಕಬೇಕಂತೆ. ಆಧಾರ ಕಾರ್ಡ್ ಬೇಕಂತೆ. ತರಿಸು” ಎಂದರು. ನನಗೆ ದಿಗಿಲಾಯಿತು.
ಅಮ್ಮ ತನ್ನ ದೇಹವನ್ನು ದಾನ ಮಾಡಲು ಮೊದಲೇ ತೀರ್ಮಾನಿಸಿದಂತಿತ್ತು. ನೋಡೋಣ ಎಂದು ಸುಮ್ಮನಿರಿಸಿದೆ…
ನನ್ನಮ್ಮನಿಗೆ ಹೊಳೆದದ್ದು ನಮಗ್ಯಾಕೆ ಹೊಳೆಯುತ್ತಿಲ್ಲ…ನಾವ್ಯಾಕೆ ಊರು ಉದ್ಧಾರ ಮಾಡುವ ಮಾತನಾಡುತ್ತ ಇತ್ತಕಡೆ ಗಮನಹರಿಸುತ್ತಿಲ್ಲ.. ಸತ್ತ ಮೇಲೆ ಅದು ಶವ ಮಾತ್ರ… ಅದನ್ನು ಬೂದಿ ಮಾಡುವ ಅಥವಾ ಹೂಳುವ ಪದ್ಧತಿಗೆ ಯಾಕೆ ಅಂಟಿಕೊಂಡಿದ್ದೇವೆ?
“ಓದಿದವರು”, “ಬುದ್ಧಿಜೀವಿಗಳು” ಎಂದು ಅನ್ನಿಸಿಕೊಂಡವರ ಶವಸಂಸ್ಕಾರ ಯಾವ ರೀತಿ ನಡೆಯುತ್ತೆ ಎಂಬುದು “ಮೀಡಿಯಾ”ದವರ ಮೂಲಕ ಜಗಜ್ಜಾಹಿರಾಗಿರುವ ಈ ಸಂದರ್ಭದಲ್ಲಿ “ತನ್ನ ದೇಹವನ್ನು ದಾನ ಮಾಡು” ಎಂದು ತುಂಬು ಮನಸ್ಸಿನಿಂದ ಹೇಳುವ ನನ್ನಮ್ಮ; ಹಾಗೆಯೇ ಯಾರದಾದರೂ ಸರಿಯೇ ದೇಹ ದಾನ ಮಾಡುವಂತೆ ಮನ ಒಲಿಸುತ್ತಿರುವ ರಾಮಚಂದ್ರರಾಯರ ನಡುವೆ ನಾವು ಕುಬ್ಜರಾಗುತ್ತಿದ್ದೇವೆನೋ ಅನ್ನಿಸುತ್ತಿದೆ…
ನಾನೂ ನನ್ನಮ್ಮನ ದಾರಿಯನ್ನೇ ತುಳಿಯುವುದು….ನನ್ನ ಮನೆಯಲ್ಲಿ ಎಲ್ಲರೂ ಈ ತೀರ್ಮಾನಕ್ಕೆ ಬರುವುದರತ್ತ ಚರ್ಚಿಸುತ್ತಿರುತ್ತೇವೆ.
ಈ ರೀತಿ ನನ್ನ ದೇಹ ದಾನ ಮಾಡಿ ಎಂದ ರಾಜಕಾರಣಿಗಳನ್ನಾಗಲಿ, ಓದಿಕೊಂಡವರಾಗಲಿ ಹೇಳಿದ್ದು ನಾನಂತೂ ಕೇಳಿಲ್ಲ..
ಆಶಾದಾಯಕವೆಂದರೆ ಕೆ.ಎಸ್.ಎಲ್.ಸ್ವಾಮಿ (ರವಿ) ಅವರು ಮತ್ತು ಅವರ ಶ್ರೀಮತಿ ರಾಧಾ ಅವರು ತಮ್ಮ ದೇಹವನ್ನು ದಾನ ಮಾಡಿದರು..
ಲಕ್ಷಕ್ಕೊಬ್ಬರಾದರೂ ನಮ್ಮ ನಡುವೆ ಇದ್ದಾರಲ್ಲ ಎಂಬುದೇ ಸಮಾಧಾನಕರ ವಿಷಯ.
ಇಂತಹ ಕೆಲಸದಲ್ಲಿ ಅಹರ್ನಿಶಿ ತಮ್ಮನ್ನು ತೊಡಗಿಸಿಕೊಂಡಿರುವ ರಾಮಚಂದ್ರರಾಯರು, ಅವರ ಕೆಲಸವನ್ನು ಗುರುತಿಸಿ ಜನರನ್ನು ಎಚ್ಚರಿಸುತ್ತಿರುವ ಗೆಳೆಯರಾದ ನವೀನ್ ಅವರನ್ನು ಅಭಿನಂದಿಸುವೆ.
ಹಾಗೆಯೇ ನನ್ನಮ್ಮನ ರೀತಿ ದೇಹ ದಾನ ಮಾಡಲು ಪ್ರೇರೇಪಿಸವಂತೆ ನಿಮ್ಮ ಮನಸ್ಸು ಹದಗೊಳಿಸಿ. ಮುಂದಿನ ಯುವಪೀಳಿಗೆಗಾಗಿ ನಾವು ಕೆಲವರಾದರೂ ಈ ದಿಶೆಯತ್ತಲೂ ಗಮನಹರಿಸೋಣ.
ನಮಸ್ಕಾರ.
ಹಂಪಿಯಾಜಿ
ReplyForward
|