ತೋಚಿದ್ದು-ಗೀಚಿದ್ದು

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಸಂಸ್ಥೆಯ ಮೂಲಕ ಪುಸ್ತಕ ಖರೀದಿ ಕುರಿತು

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಸಂಸ್ಥೆಯ ಮೂಲಕ ಪುಸ್ತಕ ಖರೀದಿ ಕುರಿತು

 

ಕಳೆದ ಏಳು ವರ್ಷಗಳಲ್ಲಿ ಯಾಜಿ ಪ್ರಕಾಶನ ಹಲವು ಏಳುಬೀಳುಗಳನ್ನು ಕಂಡಿದ್ದು.. ಮೌಲ್ಯಯುತ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ತನ್ನದೇ ಛಾಪನ್ನು ಮೂಡಿಸಿದೆ.. ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಮೂರು ಅಕಾಡೆಮಿಗಳಿಂದ ಪುಸ್ತಕ ಬಹುಮಾನ ಪಡೆದು ಹ್ಯಾಟ್ರಿಕ್ ಸಾಧನೆಗೆ ಭಾಜನವಾಗಿದೆ… ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಗೆ ಒಳಪಟ್ಟ ನಮ್ಮ ಪ್ರಕಾಶನಕ್ಕೆ ಈ ಬಾರಿ ಕುವೆಂಪು ಭಾಷಾಭಾರತಿ ಕೊಡಮಾಡುವ ಪುಸ್ತಕ ಬಹುಮಾನ ಯಾಜಿ ಪ್ರಕಾಶನದ ಪ್ರಕಟಣೆಯಾದ ದಲಿತ ಸಾಹಿತ್ಯದ ಸೌಂದರ್ಯ ಪ್ರಜ್ಞೆ ಕೃತಿಗೆ ಸಂದಿದೆ(ಮರಾಠಿ ಮೂಲ. ಅನುವಾದ ಡಾ. ವಿಠ್ಠಲ ರಾವ್ ಟಿ ಗಾಯಕ್ವಾಡ). ಈ ಎಲ್ಲ ಖುಷಿಯ ಜೊತೆಗೆ ಹಲವು ನೋವುಗಳು ಕಾಡುತ್ತಿದೆ…

ಯಾವ ಪ್ರಕಾಶಕ/ಮಾರಾಟಗಾರರನ್ನು ಕೇಳಿದರೂ ಒಂದೇ ಉತ್ತರ…

ಪುಸ್ತಕ ಮಾರಾಟವಾಗುತ್ತಿಲ್ಲ..(ಕೆಲವರು ಅಪವಾದ)… ಹಾಗಾದರೆ ಮುಂದೆ ಹೇಗೆ ಎಂದು ಮಂಡೆ ಬಿಸಿಯಾಗಿದೆ..

ಕಳೆದ ವರ್ಷಗಳಿಂದ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡ ಹೈದ್ರಾಬಾದ್ ಕರ್ನಾಟಕದ ಆರು ಜಿಲ್ಲೆಗಳ ಲೇಖಕರ (ಸ್ಥಳೀಯರು ಎಂಬ ದಾಖಲೆ ಒದಗಿಸಬೇಕು) ಪುಸ್ತಕಗಳನ್ನು ಸಗಟು ಖರೀದಿಗೆ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯು ಮುಂದಾಯ್ತು.. ಅದರ ಕೇಂದ್ರ ಕಚೇರಿ ಗುಲ್ಬರ್ಗಾದಲ್ಲಿದ್ದುದರ ಹಿನ್ನೆಲೆಯಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ಲೇಖಕ/ಪ್ರಕಾಶಕರಿಂದ ೨೦೧೩ರಲ್ಲಿ ಪ್ರಕಟಣೆಯಾದ ಪುಸ್ತಕಗಳನ್ನು ತರಿಸಿಕೊಂಡಿತ್ತು..

ಹಲವು ಪ್ರಕಾಶಕ/ಲೇಖಕರ ಗಮನಕ್ಕೆ ಬರುವ ಹೊತ್ತಿಗೆ ಪುಸ್ತಕಗಳನ್ನು ಸಲ್ಲಿಸುವ ದಿನಾಂಕ ಮುಗಿದಿತ್ತು… ಆ ಹಿನ್ನೆಲೆಯಲ್ಲಿ ನಾವು ಪುಸ್ತಕ ಸಲ್ಲಿಸದೇ ಕೈಚೆಲ್ಲಬೇಕಾಯ್ತು…

ಆ ನಂತರ ಬಂದ ಸುದ್ದಿಯೇನೆಂದರೆ ಕೆಲವೇ ಕೆಲವು ಲೇಖಕ/ಪ್ರಕಾಶಕರು  ಆ ಲಾಭ ಪಡೆದರು ಎಂಬುದು ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ world famous ಆಯ್ತು…

ಈ ವರ್ಷವಾದರೂ ಸಲ್ಲಿಸಬೇಕು ಎಂದು ಕಚೇರಿಗೆ ಕರೆ ಮಾಡಿ ವಿಚಾರಿಸಿದಾಗ ನಿಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಅವರಿಗೆ ಇದರ ಜವಾಬ್ದಾರಿ ನೀಡಿದ್ದೇವೆ… ನೀವು ನಿಮ್ಮ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಅರ್ಜಿ ಹಾಕಿ ಎಂದರು… ಒಪ್ಪಿಗೆ ಸೂಚಿಸಿ ನನ್ನ ಹಲವು ಪ್ರಕಾಶಕ ಮಿತ್ರರಿಗೆ ವಿಷಯ ತಿಳಿಸಿದೆ. ಹಾಗೂ ಅವರಿಗೂ ಅರ್ಜಿ ಹಾಕಲು ಸೂಚಿಸಿದೆ. ಆ ನಂತರ ಖುದ್ದು ಗ್ರಂಥಾಲಯಕ್ಕೇ ಭೇಟಿ ನೀಡಿ ನಮ್ಮ ಪ್ರಕಾಶನದ ಮೂರು ಕೃತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಿ ಬಂದೆವು. ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಎರಡು ಕೃತಿಗಳು ಹಾಗೂ ಬೆಂಗಳೂರಿನಲ್ಲಿ ವಾಸವಿದ್ದು ಬಳ್ಳಾರಿಯವರೇ ಆದ ಮಿತ್ರರೊಬ್ಬರ ಪುಸ್ತಕ ಸೇರಿ ಒಟ್ಟು ಮೂರು ಕೃತಿಗಳನ್ನು ಸಲ್ಲಿಸಿ ಬಂದೆವು..

ಸ್ವಲ್ಪ ದಿನದ ನಂತರ ಪ್ರಕಾಶಕ ಮಿತ್ರರೊಬ್ಬರು ಕರೆ ಮಾಡಿ ನೀವು ಪುಸ್ತಕಗಳನ್ನು ಸಲ್ಲಿಸಿಲ್ಲವೇ ಎಂದು ವಿಚಾರಿಸಿದರು… ಅದಕ್ಕೆ ಸಲ್ಲಿಸಿದ್ದೇವೆ ನಮ್ಮ ಪ್ರಕಾಶನದ್ದು ಮೂರು ಪುಸ್ತಕಗಳಿವೆ ಎಂದುತ್ತರಿಸಿದೆ.. ನಿಮ್ಮ ಪುಸ್ತಕ ಆಯ್ಕೆ ಆಗಿಲ್ಲ. ಲೀಸ್ಟ್ ನಲ್ಲಿ ನಿಮ್ಮದಿಲ್ಲ  ಎಂದರು… ನನಗೆ ಸಖೇದಾಶ್ಚರ್ಯವಾಯ್ತು…

ಮೂರು ಅಕಾಡೆಮಿಗಳೂ ನಾಡಿನ ವಿದ್ವಾಂಸರು ಒಪ್ಪಿದ/ಮೆಚ್ಚಿದ ಕೃತಿಗಳನ್ನು ಇವರು ಯಾಕೆ ಆಯ್ಕೆ ಮಾಡಿಲ್ಲ ಎಂಬ ಕುತೂಹಲ ಕಾಡಿತು… ಏನಾದರೂ ಸರಿ ಆಯ್ಕೆ ಯಾಕೆ ಆಗಿಲ್ಲ ಎಂಬ ಉತ್ತರ ಪಡೆಯಬೇಕೆಂಬ ಉದ್ದೇಶದಿಂದ ಮಿತ್ರರೊಬ್ಬರಿಗೆ ಕರೆ ಮಾಡಿ ವಿಚಾರಿಸಲು ಹೇಳಿದೆ… ಅವರ ಮಾತು ಕೇಳಿ ತುಂಬಾ ಬೇಸರವಾಯ್ತ…

ಅವರ ಮಾತಿನಲ್ಲೇ ಹೇಳುವುದಾದರೆ…

ಈ ಬಾರಿ ೨೫ ಲಕ್ಷ ಹಣ ಬಂದಿತ್ತೆಂದೂ ಆಯ್ಕೆಗೆ ಬಂದ ಪುಸ್ತಕಗಳು ಕೇವಲ ೬೫ ಎಂದೂ ಅದರಲ್ಲಿ ಕನ್ನಡ ವಿಶ್ವವಿದ್ಯಾಲಯದ ಲೇಖಕರನ್ನು ಪರಿಗಣಿಸಲಾಗಿಲ್ಲವೆಂದೂ ಹೇಳಿದ್ದಾರೆ ಎಂದರು..

ಹಾಗಾದರೆ ಕಳೆದ ವರ್ಷ ಈ ಮಾನದಂಡ ಇರಲಿಲ್ಲವೇ ಎಂಬ ಅನುಮಾನ ಕಾಡುತ್ತಿದೆ.. ಯಾಕೆಂದರೆ ಕಳೆದ ವರ್ಷ ನನ್ನ ಮಿತ್ರರೊಬ್ಬರ ಪುಸ್ತಕ ಆಯ್ಕೆ ಆಗಿ ೧೨೦೦ ಪ್ರತಿಗಳನ್ನು ಖರೀದಿಸಿದ್ದರಂತೆ…

ಕಳೆದ ೨೫ ವರ್ಷಗಳ ಹಿಂದೆಯೇ ಊರುಬಿಟ್ಟು ಬಂದ ನಾವೆಲ್ಲರು ಕನ್ನಡ ವಿಶ್ವವಿದ್ಯಾಲಯದ ಪ್ರಾರಂಭ ಹಂತದಲ್ಲಿಯೇ ಇಲ್ಲಿಗೆ ಬಂದು ಈ ಜಿಲ್ಲೆಯವರೊಂದಿಗೆ ಒಂದಾಗಿ… ಇಲ್ಲಿಯ ಸ್ಥಳೀಯರಾಗಿ… ಇಲ್ಲಿಯೇ ಆಧಾರ್ ಕಾರ್ಡ್ ಮತ್ತಿತರ ಸವಲತ್ತು (ಮನೆ ಇತರೆ) ಪಡೆದು  ಎಲ್ಲರೊಳಗೊಂದಾಗಿ ಬಾಳುತ್ತಿದ್ದೇವೆ…

ಆದರೆ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರು ನಮ್ಮನ್ನು ಹೊರಗಿನವರು ಎಂದು ಪರಿಗಣಿಸಿದ್ದು ಇದು ಯಾವ ನ್ಯಾಯ…?!!!!

ಹಾಗೆಯೇ ಇದರ ಹಿಂದಿನ ಕಾಣದ ಕೈಗಳು ಯಾರವು?!!! ತಿಳಿಯುತ್ತಿಲ್ಲ..

ಆಯ್ಕೆ ಸಮಿತಿಗೆ ಬಂದ ೬೫ ಪುಸ್ತಕಗಳಲ್ಲಿ ನಾ ನೋಡಿದ, ನಾವು ಅರ್ಜಿ ಸಲ್ಲಿಸಲು ಹೋದಾಗ ನಮ್ಮೊಂದಿಗೆ ಬಂದವರು ಸಲ್ಲಿಸಿದ ಪುಸ್ತಕಗಳನ್ನು ಅದರ ಗುಣಮಟ್ಟವನ್ನು ನೋಡಿದ ಹಿನ್ನೆಲೆಯಲ್ಲಿ ನಮ್ಮ ಪ್ರಕಾಶನದ ಕೃತಿಗಳು ಎಲ್ಲ ರೀತಿಯಲ್ಲೂ ಉತ್ತಮ ಗುಣಮಟ್ಟದ್ದೇ ಆಗಿದ್ದು ಸ್ಥಳೀಯರಲ್ಲ ಎಂಬ ಹಿನ್ನೆಯಲ್ಲಿ ಆಯ್ಕೆ ಆಗದೇ ಉಳಿದದ್ದು ತುಂಬಾ ಬೇಸರವುಂಟು ಮಾಡಿತು…

ಹಿಂದೊಮ್ಮೆ ಮುಖಪುಸ್ತಿಕೆಯಲ್ಲಿ ಚರ್ಚಿಸಿದಂತೆ HKDBಯವರು ಕೇವಲ ಲೇಖಕರನ್ನು ಮಾತ್ರ ಗಣನೆಗೆ ಪಡೆಯದೇ ಸ್ಥಳೀಯವಾಗಿ ಅಕ್ಷರದಾಸೋಹ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಹಲವು ಸಣ್ಣಪುಟ್ಟ ಪ್ರಕಾಶಕರಿಗೂ ಅನುವಾಗಬೇಕಿದೆ…

HKDB ಅಧಿಕಾರಿಗಳ ಅಭಿಪ್ರಾಯವೇನೆಂದರೆ ಇವು ಹಿಂದುಳಿದ ಜಿಲ್ಲೆಗಳು… ಇಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಉದ್ದೇಶ ನಮ್ಮದು ಎಂಬುದು ಅವರ ಮಾತು..

ಸಂತೋಷ ಸ್ವಾಮಿ ಅಗತ್ಯವಾಗಿ ಈ ಕೆಲಸ ಆಗಬೇಕು..

ಸ್ಥಳೀಯರನ್ನು ಗುರುತಿಸಬೇಕೆಂಬುದಕ್ಕೆ ನಮ್ಮ ಸಹಮತವಿದೆ.. ಇದು ಅವಶ್ಯ ಆಗಲೇಬೇಕು… ಈ ರೀತಿ ಸ್ಥಳಿಯರನ್ನು ಗುರುತಿಸುವ ಹಿಂದೆ ಯಾವ ಉದ್ದೇಶ ಇದೆ ಎಂಬುದು ಸ್ಪಷ್ಟವಾಗಬೇಕು…

ಯಾಕೆಂದರೆ ಬಳ್ಳಾರಿ ವ್ಯಾಪ್ತಿಯ ಲೇಖಕರೊಬ್ಬರು ಬೆಂಗಳೂರಿನ ದೊಡ್ಡ ಪ್ರಕಾಶಕರೊಂದಿಗೆ ಒಪ್ಪಂದ ಮಾಡಿಕೊಂಡು ಅವರ ಮೂಲಕ ಪ್ರಕಟಿಸಿ ಆ ಮೂಲಕ ಮುಂಚೂಣಿಗೆ ಬರುತ್ತಾರೆ… ನಂತರ HKDB ಅವರು ಸ್ಥಳೀಯ ಲೇಖಕರಿಂದ ಅರ್ಜಿ ಕರೆದು ಪುಸ್ತಕ ಪಡೆದು, ಆಯ್ಕೆ ಸಮೀತಿಯ ಒಪ್ಪಿಗೆಯ ಮೇರೆಗೆ ಆಯ್ಕೆ ಆದಾಗ ಅಧಿಕಾರಿಗಳು ಲೇಖಕರಿಗೆ ೧೨೦೦ ಪುಸ್ತಕಗಳನ್ನು ಇಂತಿಷ್ಟು ದಿನದೊಳಗಾಗಿ ಸಲ್ಲಿಸಲು ಸೂಚಿಸುತ್ತಾರೆ…  ಅದಕ್ಕೆ ಆ ಲೇಖಕರು ತಮ್ಮ ಪುಸ್ತಕ ಪ್ರಕಟಿಸಿದ ಪ್ರಕಾಶಕರನ್ನು ಸಂಪರ್ಕಿಸಿ ೧೨೦೦ ಪುಸ್ತಕ ಅವರಿಂದ ಪಡೆದು ಸಲ್ಲಿಸುತ್ತಾರೆ… ಚೆಕ್ ಲೇಖಕರ ಹೆಸರಿಗೆ ವರ್ಗಾಯಿಸಲ್ಪಡುತ್ತದೆ… ಬಂಡವಾಳ ಹಾಕಿ ಕಾದು ಪುಸ್ತಕ ಮುದ್ರಿಸಿ ಲೇಖಕರಿಗೆ ತಲುಪಿಸಿದ ಹಿನ್ನೆಲೆಯಲ್ಲಿ ಆ ಪ್ರಕಾಶಕರು ಆ ಮೊತ್ತವನ್ನು ಪಡೆಯುತ್ತಾರೆ… ಲೇಖಕನಿಗೆ ಸಣ್ಣಪಾಲು ದೊರೆಯುತ್ತದೆ..

ಅಗೇನ್ ಕೆರೆಯ ನೀರು ಕೆರೆಗೇ ಹೋಯ್ತು… ಆ ಹಣ ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಉಳಿಯಲಿಲ್ಲ…

ಅವರಿಗೂ ಅವಕಾಶ ಮಾಡಿಕೊಟ್ಟಂತೆ… HKDB ವ್ಯಾಪ್ತಿಯೊಳಗಿದ್ದ ಹಲವು ವರ್ಷಗಳಿಂದ ಅಕ್ಷರದಾಸೋಹದಲ್ಲಿ ತಮ್ಮನ್ನು ತೊಡಗಿಸಿಕೊಂಡು ಎಲೆಮರೆಯಕಾಯಿ ಆಗಿಯೇ ಉಳಿದ ಸ್ಥಳೀಯ ಸಣ್ಣಪುಟ್ಟ ಪ್ರಕಾಶಕರನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಗ್ರಂಥಾಲಯವು ಆಯ್ಕೆ ಮಾಡಿದ ಉತ್ತಮ ಪುಸ್ತಕಗಳನ್ನು ಸ್ಥಳೀಯ ಪ್ರಕಾಶಕರಿಂದ ಖರೀದಿಸುವತ್ತ HKDBಯವರು ಗಮನ ಹರಿಸಬೇಕು…

೧೨೦೦ ಪುಸ್ತಕಗಳಿಗೇ ಸ್ಟಿಕ್ ಆನ್ ಆಗದೇ ಅವಾರ್ಡ್ಗಳು ಬಂದ ಪುಸ್ತಕಗಳನ್ನಾದರೂ ಸ್ಥಳೀಯ ಪ್ರಕಾಶಕರಿಂದ ಖರೀದಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು… ಹಾಗೂ ಸರ್ವರಿಗೆ ಸಮಪಾಲು ಎಂಬ ಸದುದ್ದೇಶ ಇಲ್ಲಿ ಕಾರ್ಯಗತಗೊಳ್ಳಬೇಕು. ಸಣ್ಣ ಮೊತ್ತದ ಬಂಡವಾಳದೊಂದಿಗೆ ಪ್ರಾರಂಭಿಸಿದ ಸಣ್ಣಪುಟ್ಟ ಪ್ರಕಾಶಕರಿಗೆ ಇದು ಖುಷಿ ಕೊಡುವ ವಿಚಾರವಾಗುತ್ತದೆ…

ಮುಂದಿನ ದಿನಗಳಲ್ಲಾದರೂ HKDB ವ್ಯಾಪ್ತಿಗೆ ಬರುವ ಲೇಖಕರೊಂದಿಗೆ ಸ್ಥಳೀಯ ಪ್ರಕಾಶಕರನ್ನೂ ಈ ವ್ಯಾಪಿಗೆ ಒಳಪಡಿಸಿ ಒಬ್ಬ ಪ್ರಕಾಶಕರ ಕನಿಷ್ಠ 5 ಕೃತಿಗಳು ಗರಿಷ್ಠ 8 ಕೃತಿಗೆ ಸೀಮಿತಗೊಳಿಸಿ HKDB ವ್ಯಾಪ್ತಿಗೆ ಬರುವ ಲೇಖಕ/ಪ್ರಕಾಶಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮುಖಪುಸ್ತಿಕೆಯ ಮೂಲಕ ಯಾಜಿ ಪ್ರಕಾಶನ ಬಳಗ ಕೋರುತ್ತದೆ….

 

Leave a Reply

Your email address will not be published. Required fields are marked *