ತುಂಗಭದ್ರಾ ಡ್ಯಾಂ
ಹೊಸಪೇಟೆಯಿಂದ ಕೇವಲ ೮ ಕೀ.ಮಿ. ದೂರದಲ್ಲಿರುವ ತುಂಗಭದ್ರಾ ಡ್ಯಾಂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಳೆಗಾಲ ಬಂತೆಂದರೆ ಅಲ್ಲಿಯ ಅಧಿಕಾರಿ ವರ್ಗಕ್ಕೆ ಕೆಲಸದ ಒತ್ತಡ. ಚುರುಪಾರು ರಿಪೇರಿ ಮತ್ತಿತರ ಕೆಲಸಗಳನ್ನು ಜುಲೈ ತಿಂಗಳ ಮೊದಲೇ ಪೂರೈಸಿಕೊಂಡಿರುತ್ತಾರೆ.
ಕಳೆದ ೯ ವರ್ಷಗಳಿಂದ ಕರ್ನಾಟಕದಲ್ಲಿ ಅದರಲ್ಲೂ ತುಂಗಭದ್ರಾ ಹಿನ್ನೀರಿನ ಮಳೆಯಾಗುವ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಡ್ಯಾಂಗೆ ನೀರೇ ಬಂದಿರಲಿಲ್ಲ. ನೀರು ಬಂದು ಡ್ಯಾಂ ಭರ್ತಿ ಆದರೆ ಮಾತ್ರ ರೈತರಿಗೆ, ಅಧಿಕಾರಿ ವರ್ಗಕ್ಕೆ, ಪ್ರವಾಸಿಗರಿಗೆ, ವ್ಯಾಪಾರಸ್ಥರಿಗೆ, ವಸತಿಗೃಹ, ಹೊಟೇಲ್ ಉದ್ಯಮದವರಿಗೆಲ್ಲ ಖುಷಿಯ ಸಂಗತಿ… ಡ್ಯಾಂ ತುಂಬಿದ ನಂತರ ನದಿಗೆ ಬಿಡುವ ನೀರನ್ನು ನೋಡುವುದೇ ಒಂದು ಸೊಬಗು. ಹತ್ತಿರದಿಂದ ನೋಡುತ್ತಿದ್ದರೆ ಮೈಮರೆಯುತ್ತೇವೆ… ಗಾಳಿಯ ರಭಸಕ್ಕೆ ಇನ್ನೇನು ಡ್ಯಾಂ ಕುಸಿಯುತ್ತೇನೋ ಎಂಬ ಆತಂಕ ಡ್ಯಾಂ ಮೇಲೆ ಓಡಾಡಿದಾಗ ಆಗುತ್ತದೆ. ನೀರು ರಭಸವಾಗಿ ದುಮ್ಮಿಕ್ಕುವ ಸೌಂದರ್ಯವನ್ನು ಹತ್ತಿರದಿಂದ ಅನುಭವಿಸಬೇಕು..
ಪ್ರತಿ ವರ್ಷ ಆಗಸ್ಟ್ ತಿಂಗಳಿಗೆ ಡ್ಯಾಂ ತುಂಬುತ್ತಿತ್ತು.
ಕಳೆದ ೧೭ ವರ್ಷದ ನಂತರ ಈ ಬಾರಿ ಜುಲೈ ೨೦ರೊಳಗೆ ಡ್ಯಾಂ ಭರ್ತಿಯಾಗಿ ನಿನ್ನೆಯಿಂದ ೧೦ ಗೇಟ್ ಗಳ ಮೂಲಕ ನದಿಗೆ ನೀರು ಹರಿಸುತ್ತಿದ್ದಾರೆ. ಹಾಗೆಯೇ ಎಡದಂಡೆ ಕಾಲುವೆ ಸಣ್ಣ ಪುಟ್ಟ ಕಾಲುವೆಗಳಿಗೆಲ್ಲ ನೀರು ಹರಿದು ಬರುತ್ತಿದೆ. ಹೊಸಪೇಟೆ ಸುತ್ತಮುತ್ತ ಮೋಡಗಳು ಸಾಗುತ್ತವೆಯೇ ಹೊರತು ಮಳೆ ಕಡಿಮೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಳೆ ಬರುತ್ತಿದೆ. ಆದರೂ ತುಂಗಭದ್ರಾ ಡ್ಯಾಂ ನೀರನ್ನೇ ನಂಬಿ ಭತ್ತ, ಬಾಳೆ, ಕಬ್ಬು ಮತ್ತು ತೆಂಗು ಇನ್ನಿತರ ಕೃಷಿಯೋಗ್ಯ ಬೆಳೆಗಳಿಗೆ ಈ ನೀರು ಅಮೃತ ಸಮಾನ.. ಅದನ್ನೇ ನಂಬಿ ಎಷ್ಟೋ ರೈತ ಕುಟುಂಬಗಳು ಬದುಕುತ್ತಿವೆ.
ಇತ್ತೀಚಿನ ವರ್ಷಗಳಲ್ಲಿ ತುಂಗಭದ್ರಾ ಡ್ಯಾಂನ ನೀರನ್ನು ನಂಬಿ ಹಲವು ಕಾರ್ಖಾನೆಗಳು, ಗಣಿ ಉದ್ಯಮಗಳು ತಲೆ ಎತ್ತಿವೆ.
ಹೊಸಪೇಟೆ ಸಮೀಪವೇ (೧೨ ಕೀ.ಮೀ) ಜಗತ್ಪ್ರಸಿದ್ಧ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಸಾರುವ ‘ಹಂಪಿ’ ಇದೆ.
ಈ ಪ್ರವಾಸಿ ಸ್ಥಳವನ್ನು ನೋಡಲು ಊರಿನವರಲ್ಲದೇ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಪ್ರವಾಸಿಗರು ಹಂಪಿಗೆ ಭೇಟಿ ಕೊಡುತ್ತಾರೆ. ಹಂಪಿಗೆ ಬಂದವರು ಡ್ಯಾಂಗೂ ಭೇಟಿ ಕೊಡುವವರಿದ್ದಾರೆ…
ಹಾಗೆಯೇ ಮಳೆಗಾಲದಲ್ಲಿ ನೀರು ತುಂಬಿದಾಗ ಡ್ಯಾಂ ನೋಡಲಿಕ್ಕಾಗಿಯೇ ಪ್ರವಾಸ ಕೈಗೊಳ್ಳುವವರೂ ಇದ್ದಾರೆ. ಮೂವತ್ತೆರಡು ಗೇಟ್ ಗಳಿಂದ ನೀರು ರಭಸವಾಗಿ ದುಮ್ಮಿಕ್ಕಿದರೆ ಅದನ್ನು ನೋಡುವುದೇ ಆನಂದ.
ಆಗಸ್ಟ್ ೧೫ರಂದು ಹೊಸಪೇಟೆ ಸುತ್ತಮುತ್ತಲಿನವರಲ್ಲದೇ ದೂರದೂರುಗಳಿಂದಲೂ ಪ್ರವಾಸಿಗರು ಡ್ಯಾಂ ನೋಡಲು ಬರುತ್ತಾರೆ. ನೀರು ತುಂಬಿದ್ದರೆ ಅಂದು ಗೇಟ್ ತೆಗೆದು ನದಿಗೆ ನೀರು ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ೩೨ ಗೇಟ್ ಗಳಿಗೂ ವಿದ್ಯುತ್ ದೀಪಾಲಂಕಾರ ಮಾಡಿದ ಕಾರಣ ನೀರು ಗೇಟ್ ನಿಂದ ಹೊರಬರುವಾಗ ಬಣ್ಣ ಬಣ್ಣದ ದೀಪಗಳಲ್ಲಿ ನೋಡುಗರ ಕಣ್ ಸೆಳೆಯುತ್ತದೆ.
ರಾಷ್ಟ್ರೀಯ ಹೆದ್ದಾರಿಗೆ ಎದುರಾಗಿರುವುದರಿಂದ ವಾಹನ ಸವಾರರು ಈ ದೃಶ್ಯವನ್ನು ದೂರದಿಂದಲೇ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಎಲ್ಲ ಗೇಟ್ ತೆಗೆದು ನದಿಗೆ ನೀರು ಬಿಟ್ಟ ವಿಷಯ ತಿಳಿದು ತಂಡೋಪತಂಡವಾಗಿ ಸೌಂದರ್ಯವನ್ನು ಆಸ್ವಾದಿಸಲು ಬರುತ್ತಾರೆ. ಅಂದಾಜಿನ ಪ್ರಕಾರ ಒಂದು ಲಕ್ಷಕ್ಕೂ ಹೆಚ್ಚು ಜನ ಅಂದು ಸೇರುತ್ತಾರೆ. ಪೊಲೀಸರು ಹರಸಾಹಸ ಮಾಡಿ ಜನರನ್ನು ನದಿ ಕಡೆ ಹೊಗದಂತೆ ತಡೆಯುತ್ತಾರೆ.
ಈ ವರ್ಷ ಬೇಗ ಡ್ಯಾಂ ತುಂಬಿದೆ.
ನಿನ್ನೆಯಿಂದ ನದಿಗೆ ನೀರನ್ನು ಬಿಡಲಾಗಿದೆ. ಹಲವು ವರ್ಷಗಳಿಂದ ತುಂಬದ ತುಂಗಭದ್ರೆ ಈ ಬಾರಿ ತುಂಬಿ ತುಳುಕುತ್ತಿದೆ. ತುಂಗಭದ್ರಾ ಡ್ಯಾಂನ ವ್ಯೂ ಪಾಯಿಂಟ್ ತುಂಬಾ ಚೆನ್ನಾಗಿದೆ. ನಿಮಗೆ ಕಾಲಿನಲ್ಲಿ ಶಕ್ತಿ ಇದ್ದಲ್ಲಿ ನಡೆದುಕೊಂಡು ಬೆಟ್ಟ ಹತ್ತಿ, ಪಂಪಾದರ್ಶನದಿಂದ (ವಾಚ್ ಟವರ್) ನೋಡಿದರೆ ರಮಣೀಯವಾಗಿರುತ್ತದೆ. ವಾಹನ ವ್ಯವಸ್ಥೆ ಕೂಡಾ ಇರುತ್ತದೆ. ಸ್ವಂತ ವಾಹನ ತಂದವರು ಮುಖ್ಯದ್ವಾರದಲ್ಲೇ ನಿಲ್ಲಿಸಿ ನಡೆದುಕೊಂಡು ಹೋಗಬೇಕು. ಸಮೀಪದಲ್ಲೇ ಗಾರ್ಡನ್ ಇದೆ. ೭ ಗಂಟೆಯಿಂದ ಮ್ಯೂಸಿಕಲ್ ಫೌಂಟೇನ್ (ನೃತ್ಯ ಕಾರಂಜಿ) ವ್ಯವಸ್ಥೆ ಇದೆ. ಬಂದವರು ಅದನ್ನು ನೋಡಿ ಹೊರಡುತ್ತಾರೆ. ಹಾಗೆಯೇ ಪಕ್ಕದಲ್ಲೇ ಜಿಂಕೆ ವನ, ಪಕ್ಷಿ, ಮೊಲ ಮತ್ತಿತರ ಪ್ರಾಣಿಗಳನ್ನು ನೋಡಬಹುದು.
ಅಧಿಕಾರಿಗಳ ಕರೆಯ ಮೇರೆಗೆ ಹಲವು ಬಾರಿ ಡ್ಯಾಂನ ಛಾಯಾಚಿತ್ರ ತೆಗೆದುಕೊಟ್ಟಿದ್ದೆ.