ತೋಚಿದ್ದು-ಗೀಚಿದ್ದು

ವಿದ್ಯಾವಾಚಸ್ಪತಿ ಶ್ರೀಬನ್ನಂಜೆ ಗೋವಿಂದಾಚಾರ್ಯ

ಕೆಲ ದಿನಗಳ ಹಿಂದೆ ವೀಣಾ ಮೇಡಂ ಕರೆ ಮಾಡಿ

“ಅಪ್ಪ ಬರೆದ ಕವನಗಳಿವೆ. ಪ್ರಕಟಿಸುವಿರಾ… ಅಪ್ಪ ಒಪ್ಪಿದ್ದಾರೆ” ಎಂದರು.

ಖುಷಿಯಿಂದ ತಕ್ಷಣ ಒಪ್ಪಿಗೆ ಸೂಚಿಸಿದೆವು.

ನಂತರ ಅವರ ಕರೆ ಬರದೇ ಮತ್ತೆ ಸುಮ್ಮನಾದೆ.

ನಾಲ್ಕು ದಿನದ ಹಿಂದೆ ಮೇಡಂ ಕರೆ ಮಾಡಿ

“ಪುಸ್ತಕದ ತಯಾರಿ ನಡೆದಿದೆ. ಅಪ್ಪ ಕರೆಕ್ಷನ್ ಹಾಕುತ್ತಿದ್ದಾರೆ. ನಿಮಗೆ ೨೩ಕ್ಕೆ ಕಳಿಸುತ್ತೇವೆ.. ೨೭ಕ್ಕೆ ಬಿಡುಗಡೆ ಪುಟವಿನ್ಯಾಸ ಮಾಡಿ ತಿದ್ದಿ ಕೊಡಿ ಎಂದು ತಿಳಿಸಿದರು.

ಹೆದರಿಕೆ ಶುರುವಾಯ್ತು.. ದೊಡ್ಡವರ ಕೃತಿ, ಅವಧಿ ಕಡಿಮೆ ಇದೆ. ಆದುದರಿಂದ ಏನು ಮಾಡುವುದೆಂದು ಸವಿತಾಳ ಜೊತೆ ಚರ್ಚಿಸಿ ಒಪ್ಪಿಗೆ ಸೂಚಿಸಿದೆ.

ಮೊನ್ನೆ ಬೆಳಿಗ್ಗೆ ಮೇಲ್ ಮುಖಾಂತರ ಫೈಲ್ ಬಂತು. ಪೇಜ್ ಮೇಕರ್ ಫೈಲ್ ಆದ ಕಾರಣ ಹೆಚ್ಚು ಕಾಲಹರಣ ಮಾಡದೇ ಜೋಡಿಸಿ, ನಮಗೆ ಕಂಡ ತಪ್ಪುಗಳನ್ನು ಗುರುತಿಸಿ, ಕರೆ ಮಾಡಿ ಕೇಳಿ ತಪ್ಪುಗಳನ್ನು ತಿದ್ದಿದೆವು.

ಆಚಾರ್ಯರೇ ಸ್ವತಹ ಕಂಪ್ಯೂಟರ್ ಪಕ್ಕ ಕುಳಿತು ಅಲ್ಲಿಂದಲೇ ಮೊಬೈಲ್ ಮೂಲಕ ಕರೆ ಮಾಡಿ ತಿದ್ದಿಸಿದರು.

ಹಾಗೆಯೇ ಮುಖಪುಟಕ್ಕಾಗಿ ಮೈಸೂರಿನ ಗಂಜೀಫ ಗಣಪತಿ ಭಟ್ ಅವರದೊಂದು ಚಿತ್ರ ಆಯ್ದು ಅದಕ್ಕೆ ಬಣ್ಣ ತುಂಬಿಸಿ ಕಳಿಸಿದ್ದರು.

ಆ ಚಿತ್ರವನ್ನು ಅರುಣಕುಮಾರ್ ಅವರಿಗೆ ಕಳಿಸಿದೆ. ಅವರು ಎರಡೇ ದಿನದಲ್ಲಿ ಮುಖಪುಟ ರಚಿಸಿ ಕೊಟ್ಟರು.

ಆಗಲೇ ಗಂಟೆಗಳ ಮೇಲೆ ಗಂಟೆಗಳು ಕಳೆದು ದಿನವೆರಡು ಕಳೆದವು. ನಮಗೆ ಆತಂಕ ಶುರುವಾಯ್ತು. ಎರಡು ದಿನ ರಜೆ ಬಂದಿದ್ದು ನಮ್ಮ ಆತಂಕಕ್ಕೆ ಕಾರಣವಾಗಿತ್ತು.

ಕಳೆದ ಐದು ವರ್ಷಗಳಿಂದ ಒತ್ತಡದಲ್ಲೇ ಕೆಲಸವನ್ನು ಅಚ್ಚುಕಟ್ಟಾಗಿ ನೇರವೇರಿಸಿ ಕೊಡುತ್ತಿದ್ದ ಗೆಳೆಯ ಇಳಾ ಗುರುಮೂರ್ತಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿದೆ. ಪ್ರಯತ್ನಿಸುವುದಾಗಿ ತಿಳಿಸಿದ. ಆದರೂ ಆತಂಕ ಕಡಿಮೆಯಾಗಲಿಲ್ಲ. ಏನಾಗುತ್ತೋ ಎಂಬ ಭಯ ಆವರಿಸಿತು. ಗಂಟೆಗೊಮ್ಮೆ ಪರಿಸ್ಥಿತಿಯ ಕುರಿತು ಕರೆ ಮಾಡಿ ಗೆಳೆಯ ಇಳಾ ಗುರುವಿನ ತಲೆತಿಂದೆ.

ಮರುದಿನ ‘ಇಂದು ಸಿದ್ಧಗೊಳ್ಳುತ್ತಿದೆ’ ಎಂಬ ಸುದ್ದಿ ಮುಟ್ಟಿಸಿದ. ಗುರುವಿಗೆ ಧನ್ಯವಾದ ಅರ್ಪಿಸಿದೆ. ಪುಸ್ತಕ ಇಂದೇ ಬೇಕೆಂದು ದುಂಬಾಲು ಬಿದ್ದೆ. ನಾಳೆ ಬೆಳಿಗ್ಗೆ ಕೊಡುವುದಾಗಿ ತಿಳಿಸಿದ.

ಕನ್ನಡ ವಿಶ್ವವಿದ್ಯಾಲಯದಲ್ಲಿ ಸತತ ಕಾರ್ಯಕ್ರಮಗಳ ನಡುವೆಯೂ ಬಿಡುವು ಮಾಡಿಕೊಂಡು ಈ ಕೆಲಸಗಳನ್ನಿ ನಿಭಾಯಿಸುತ್ತಿದ್ದೆ. ಸವಿತಾ ಮನೆಯಿಂದಲೇ ಕೆಲಸ ಸುಗಮವಾಗುವಂತೆ ಆಸ್ಥೆ ವಹಿಸುತ್ತಿದ್ದಳು.

ಇಂದು ವೀಣಾ ಮೇಡಂ ಕರೆ ಮಾಡಿ ನಾಳೆ ಸಪತ್ನಿಕರಾಗಿ ಬರಬೇಕೆಂದರು. ನಾನು ಪ್ರಕಾ

ಲಶಕರು ಬರುತ್ತಾರೆ, ನನಗೆ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮವಿದೆ ಎಂದೆ. ಬರಲೇ ಬೇಕು ಎಂದು ಆಗ್ರಹಿಸಿದರು. ಪ್ರಯತ್ನಿಸುವುದಾಗಿ ತಿಳಿಸಿದೆ.

ವಿಶ್ವವಿದ್ಯಾಲಯಕ್ಕೆ ಹೋದ ಮೇಲೆ ಕುಲಪತಿಯವರನ್ನು ಭೇಟಿ ಮಾಡಿ ವಿಷಯ ತಿಳಿಸಿದೆ. ‘ಇಲ್ಲಿನ ಕಾರ್ಯಕ್ರಮಕ್ಕೆ ಛಾಯಾಗ್ರಾಹಕರನ್ನು ಸಿದ್ಧಗೊಳಿಸಿ ಹೋಗು’ ಎಂದು ಒಪ್ಪಿಗೆ ಸೂಚಿಸಿದರು.

ಸರಿ ಎಂದು ಸುನಿಲ್ ಅವರಿಗೆ ಜವಾಬ್ದಾರಿ ನೀಡಿ, ಬೆಂಗಳೂರಿಗೆ ಹೊರಡಲು ಸಿದ್ಧತೆ ಮಾಡಿಕೊಂಡೆವು.

ಕಳೆದ ವರ್ಷ ಡಿಸೆಂಬರ್ ತಿಂಗಳು ಡಾ. ವೀಣಾ ಬನ್ನಂಜೆ ಅವರು ಕರೆ ಮಾಡಿ “ಯಾಜಿಯವರೇ ನನ್ನ ಅಪ್ಪನ ಕೆಲವು ಕವನಗಳನ್ನು ಪ್ರಕಟಿಸುವಿರಾ” ಎಂದು ಕೇಳಿದರು..

ವಿದ್ಯಾವಾಚಸ್ಪತಿ ಬನ್ನಂಜೆ ಅವರ ಕವನ ಸಂಕಲನ ಯಾಜಿ ಪ್ರಕಾಶನ ಪ್ರಕಟಿಸುವುದು ಎಂದು ಕೇಳಿದಾಗ ನಿಜವಾಗಲೂ ಖುಷಿ ಆಯ್ತು. ತಕ್ಷಣ ಸವಿತಾಳ ಹತ್ತಿರ ಚರ್ಚಿಸಿ ಒಪ್ಪಿಗೆ ಸೂಚಿಸಿದೆ.

೧೬ರಂದು ಫೈಲ್ ಕಳಿಸಿದರು.. ಲೇಔಟ್ ಮಾಡಿ ಕಳಿಸಿದೆವು…

“ಲೋಕಾರ್ಪಣೆಯ ದಿನಾಂಕ ಗೊತ್ತುಪಡಿಸಲಾಗಿದೆ. ಇದೇ ತಿಂಗಳು ೨೭ಕ್ಕೆ ಬೆಂಗಳೂರಲ್ಲಿ ಬಿಡುಗಡೆ ಆಗತ್ತಾ” ಎಂದು ಕೇಳಿದರು.

ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದೆವು.

ಈ ಹಿಂದೆ ಕನ್ನಡ ವಿಶ್ವವಿದ್ಯಾಲಯದ ಸುಮಾರು ೫೦೦ ಪುಟಗಳ ಬಾದಾಮಿ ಚಾಲುಕ್ಯರು” ಪುಸ್ತಕವನ್ನು ಸವಿತಾ ಒಂದು ಕಂಪ್ಯೂಟರ್ ನಾನು ಇನ್ನೊಂದು ಕಂಪ್ಯೂಟರ್‌ ನಲ್ಲಿ ಬೆಳಿಗ್ಗೆ ೬ ಗಂಟೆಗೆ ಶುರು ಮಾಡಿದವರು (ಊಟ, ಶೌಚ ಹೊರತುಪಡಿಸಿ) ಮರುದಿನ ಬೆಳಿಗ್ಗೆ ೬ ಗಂಟೆಗೆ ಟ್ರೇಸಿಂಗ್ ಶೀಟ್ ಕೊಡುವ ಮೂಲಕ ಸತತ ೨೪ ಗಂಟೆ ಕೆಲಸ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಒಪ್ಪಿಗೆ ಸೂಚಿಸಿದ್ದೆವು. ಸವಿತಾ ಪ್ರತಿ ಸಾಲನ್ನು ಓದಿ ತಪ್ಪಿದ್ದದ್ದನ್ನು ಮಾರ್ಕ್ ಮಾಡಿ ಇಟ್ಟುಕೊಂಡಳು. ಆಚಾರ್ಯರು ಒಂದೆರಡು ದಿನ ಮಾತಿಗೆ ಸಿಗಲೇ ಇಲ್ಲ… ಆಗಲೇ ೨೨ನೇ ದಿನಾಂಕ ಬಂದಿತ್ತು… ಇಂದು ಮುಗಿಸಲೇ ಬೇಕು ಎಂದು ಆಚಾರ್ಯರ ಕರೆಗಾಗಿ ಕಾದೆವು.. ಅವರು ತಮ್ಮ ಕಂಪ್ಯೂಟರ್ ಮುಂದೆ ಕುಳಿತು ಓದಿ ತಪ್ಪನ್ನು ಸರಿಪಡಿಸುತ್ತಿದ್ದರು. ನಾವು ನಮ್ಮ ಕಂಪ್ಯೂಟರ್ ನ ಫೈಲ್ ಸರಿಪಡಿಸುತ್ತಿದ್ದೆವು.. ಅಂದು ಕೆಲಸ ಮುಗಿಯಲೇ ಇಲ್ಲ. ಮರುದಿನ ಅಂದರೆ ೨೩ ಡಿಸೆಂಬರ್ ಶನಿವಾರ ರಾತ್ರೆ ೧೧ ಗಂಟೆಗೆ ಕರೆ ಮಾಡಿ “ಎಲ್ಲ ಸರಿ ಇದೆ.. ಮುದ್ರಣಕ್ಕೆ ಕಳಿಸಿ” ಎಂದು ಆಚಾರ್ಯರು ಒಪ್ಪಿಗೆ ಸೂಚಿಸಿದರು. ಮುಖಪುಟದ ಚಿತ್ರವನ್ನು ಗಂಝೀಫಾ ರಘುಪತಿ ಭಟ್ ಅವರಿಂದ ಪಡೆದು, ಅರುಣಕುಮಾರ ವಿನ್ಯಾಸ ಮಾಡಿ ಕೊಟ್ಟಿದ್ದರು.

ಮರುದಿನ ಭಾನುವಾರ. ಅದಕ್ಕೂ ಮರುದಿನ ಕ್ರಿಸ್ ಮಸ್ ರಜೆ. ಇಳಾ ಗುರುಮೂರ್ತಿಗೆ ಕರೆ ಮಾಡಿ ಸಿದ್ಧವಾಗಿರು. ಮಂಗಳವಾರ ಪ್ರಿಂಟ್ ಬೇಕೆಂದು ತಿಳಿಸಿದೆ. ಗೆಳೆಯ ಒಪ್ಪಿಗೆ ಸೂಚಿಸಿದ. ಸೋಮವಾರ ಬೆಳಿಗ್ಗೆ ಮೇಲ್ ಮೂಲಕ ಫೈಲ್ ಕಳಿಸಿದೆವು. ಗುರುಮೂರ್ತಿ ಮುಖಪುಟ ಸಿದ್ಧಗೊಳಿಸಿ, ಪುಸ್ತಕ ಮುದ್ರಿಸಿ ಮಂಗಳವಾರ ಸಂಜೆ ಕರೆ ಮಾಡಿ “ಪುಸ್ತಕ ಸಿದ್ದವಿದೆ, ಎಲ್ಲಿಗೆ ತಲುಪಿಸಲಿ” ಎಂದು ಕೇಳಿದ ನನಗೋ ಆಶ್ವರ್ಯ. ಎರಡೇ ದಿನದಲ್ಲಿ ಮಾತಿನಂತೆ ೨೫೦ ಪುಸ್ತಕ ಸಿದ್ಧಗೊಳಿಸಿ ಕೊಟ್ಟ. ಅವನಿಗೆ ಅಭಿನಂದನೆ ತಿಳಿಸಿದೆ.

ನಮಗೆ ಕಾರ್ಯಕ್ರಮಕ್ಕೆ ಹಾಜರಾಗಲೇ ಬೇಕು ಎಂದು ಡಾ. ವೀಣಾ ಾವರು ಒತ್ತಾಯಿಸಿದ್ದರು. ಮಂಗಳವಾರ ರಾತ್ರೆ ಬೆಂಗಳೂರತ್ತ ಹೊರಟು ಸವಿತಾಳ ಅಣ್ಣನ ಮನೆ ಸೇರಿದೆವು.

ಮರುದಿನ ಅಂದರೆ ೨೭.೧೨.೨೦೧೭ ಬುಧವಾರ ಸಂಜೆ ಜಯನಗರದ JSS ಸಭಾಂಭವನದಲ್ಲಿ ಕಾರ್ಯಕ್ರಮ. ನಾವು ಹೋದಾಗ ಜನ ತುಂಬಿದ್ದರು..

ಆಚಾರ್ಯರು ಈ ಪುಸ್ತಕದ ಮುದ್ರಣ ಎರಡು ದಿನದಲ್ಲಿ ಸಾಧ್ಯವಿಲ್ಲ… ಪುಸ್ತಕ ಬಿಡುಗಡೆಗೆ ಆ ಪುಸ್ತಕ ಇಲ್ಲ ಎಂದು ಹೇಳಿದ್ದರಂತೆ. ಮಂಗಳವಾರವೇ ಸಿದ್ಧಗೊಂಡಿದ್ದು ತಿಳಿದು ಖುಷಿಪಟ್ಟರಂತೆ. ಅಂದು ಸಾವಿರಾರು ಜನರೆದುರು ಆ ಘಟನೆಗಳನ್ನು ನೆನಪಿಸಿಕೊಂಡು ನಮಗೆ ಶುಭ ಕೋರಿದರು.. ಅವರಿಗೆ ನಮ್ಮ ನಮಸ್ಕಾರಗಳು…

ಕವನಸಂಕಲನದಲ್ಲಿ ಆಚಾರ್ಯರು ದಾಖಲಿಸಿದ ತಮ್ಮ ಮಾತನ್ನು ಓದಿ….

 

ಬನ್ನಂಜೆ ಮತ್ತು ಕವನಗಳು

ಜನ ಮರೆತಿದ್ದಾರೆ ಬನ್ನಂಜೆ ಕವನ ಬರೆಯುತ್ತಾನೆ ಎನ್ನುವುದನ್ನು. ಆದರೆ ಬನ್ನಂಜೆ ಮರೆತಿಲ್ಲ; ಕವಿತೆ ರಚಿಸೋದನ್ನು. ಅನೇಕ ಸಂಸ್ಕೃತ ಸೂಕ್ತಗಳು ಕನ್ನಡ ಕವನದ ರೂಪ ಪಡೆದದ್ದು ಇತ್ತೀಚಿನ ದಿನಗಳಲ್ಲಿ. ಅವುಗಳಲ್ಲಿ ಹೆಚ್ಚಿನವು ಇಲ್ಲಿ ಪ್ರಕಟವಾಗಿವೆ. ಆದರೂ ಲೋಕದ ಬಣ್ಣವನ್ನು ಬಿಚ್ಚಿಡುವ ನನ್ನ ಸ್ವಂತದ ತುಡಿತಗಳನ್ನು ತೆರೆದಿಡುವ ಕವಿತೆಗಳು ಸಂಖ್ಯೆಯಲ್ಲಿ ಇಳಿಮುಖವಾಗಿದ್ದು ನಿಜ. ಅದು ಯೌವನದ ಕಾವಿನ ಕಾಲ. ಆಗ ಬನ್ನಂಜೆಯ ಕವನಗಳ ಪ್ರಧಾನ ವಿಷಯವಾಗಿದ್ದದ್ದು Sexosophy. ಪಾಶ್ಚಾತ್ಯರಿಗೆ ಈ ಶಬ್ದ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು Sexology. ಈ Sexosophy ಬನ್ನಂಜೆಯದೇ ಸೃಷ್ಟಿ. ಅವನ ಕವಿತೆಗಳ ಮುಖ್ಯ ವಿಷಯ ಸೆಕ್ಸು ಮತ್ತು ಫಿಲಾಸಫಿ. ವಿಶ್ವಾಮಿತ್ರರಂಥವರನ್ನೂ ಪರಾಶರರಂಥವರನ್ನೂ ಸೆಕ್ಸು ಕಾಡದೆ ಬಿಡಲಿಲ್ಲ ಎಂದ ಮೇಲೆ ಬನ್ನಂಜೆಯದೇನು ಮಹಾ! ಯಾರ ಟೀಕೆಗೂ ಅಂಜದೆ ಬರೆದೇ ಬರೆದ ಬನ್ನಂಜೆ ತನ್ನ ಕಾಮೋದಂತವನ್ನು; ಊರವರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ ತನ್ನನ್ನು ಮೆಚ್ಚಿದವರನ್ನು ಒಲಿಸಲಿಕ್ಕಾಗಿ; ಎಲ್ಲಕ್ಕಿಂತ ಹೆಚ್ಚು ತನ್ನ ಆತ್ಮಸಾಕ್ಷಿಯನ್ನು ಮೆಚ್ಚಿಸುವುದಕ್ಕಾಗಿ. ಸ್ವಾಂತಃಸುಖಾಯ ಎನ್ನುತ್ತಾರಲ್ಲ- ಹಾಗೆ.

ಈಗ ಆ ಕಾವು ಇಳಿದಿದೆ. ಅದಕ್ಕೆ ಕಾರಣ: ವಯಸ್ಸು ಮಾಗಿದ್ದು ಮತ್ತು ಉಪನಿಷತ್ತುಗಳ ಹುಚ್ಚು ಹಿಡಿದದ್ದು. ಸ್ವಲ್ಪ ಮಟ್ಟಿಗೆ ಆ ಹುಚ್ಚು ಬಿಡಿಸಿ ಬನ್ನಂಜೆಯನ್ನು ಮತ್ತೆ ಭೂತಕಾಲದ ಕೋಲಕ್ಕೆ ಅಣಿ ಕಟ್ಟಿಸಿದವರು ಹೊಸಪೇಟೆಯ ಗೆಳೆಯ ಗಣೇಶ ಯಾಜಿಯವರು.

ಯಾಜಿ ದಂಪತಿಗಳ ಸಾಹಸದ ಈ ಪುಣ್ಯಕಾರ್ಯಕ್ಕಾಗಿ ಬನ್ನಂಜೆ ಅವರಿಗೆ ಕೃತಜ್ಞನಾಗಿದ್ದಾನೆ.

ಇದು ಡಾ. ಬನ್ನಂಜೆ ಅಲ್ಲ; ಪದ್ಮಶ್ರೀ ಭೂಷಿತ ಬನ್ನಂಜೆ ಅಲ್ಲ; ಅವನನ್ನು ಮತ್ತು ಅವನ ಕವನಗಳನ್ನು ಕಂಡು ಪ್ರೀತಿಯಿಂದ ಬೆನ್ನು ಚಪ್ಪರಿಸುತ್ತಿರುವ ಜನರ ಬರಿಯ ಬನ್ನಂಜೆ.

ನಿಮ್ಮವನೇ,

#ಬನ್ನಂಜೆ_ಗೋವಿಂದಾಚಾರ್ಯ

Leave a Reply

Your email address will not be published. Required fields are marked *