ತೋಚಿದ್ದು-ಗೀಚಿದ್ದು

ಅಖಿಲ ಭಾರತ ಸಾಹಿತ್ಯ ಸಮ್ಮೇಳನ

ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಹತ್ತಿರ ಬರುತ್ತಿದೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ಧಾರವಾಡದಲ್ಲಿ ಜರುಗಲಿದೆ. ಜಿಲ್ಲಾಡಳಿತ ಮತ್ತು ಸಂಘಟಕರು ಅದರ ಸಿದ್ಧತೆಯಲ್ಲಿ ತೊಡಗಿದ್ದಾರೆ… ಹಿಂದಿನ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಘಟನಾವಳಿಗಳನ್ನು ಮುಖಪುಸ್ತಿಕೆಯಲ್ಲಿ ಹಂಚಿಕೊಂಡಿದ್ದೆ. ಮತ್ತೆ ಸಮ್ಮೇಳನ ಬರುತ್ತಿದೆ.

ಈ ಹಿಂದಿನ ತಪ್ಪುಗಳನ್ನು ಸಂಘಟಕರು ಮತ್ತು ಜಿಲ್ಲಾಡಳಿತ ಪರಿಹರಿಸಬಹುದು ಎಂಬ ಆಸೆಯಿಂದ ಮತ್ತೊಮ್ಮೆ ರಾಯಚೂರು ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಅನುಭವಗಳನ್ನು ಹಂಚಿಕೊಳ್ಳುತ್ತಿರುವೆ…

ಸಂಘಟಕರು ದಯವಿಟ್ಟು ಗಮನಿಸಲು ಕೋರಿದೆ.

ರಾಯಚೂರಿನಲ್ಲಿ ನಡೆದ ’82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಮುಗಿದಿದೆ.

ಅದರ ಸಿಹಿ ಕಹಿ ನೆನಪು, ಒಪ್ಪು ತಪ್ಪು, ಲಾಭ ನಷ್ಟ, ಅಲ್ಲಿಯ ವ್ಯವಸ್ಥೆ ಮತ್ತಿತರ ವಿಚಾರವಾಗಿ ಮೂರು ದಿನದಿಂದ ಎದುರಿಗೆ ಸಿಕ್ಕವರೊಡನೆ, WhatsApp, Facebook ಮುಖಾಂತರ ಮೂರು ದಿನಗಳಿಂದ ಸುದ್ದಿ/ಚರ್ಚೆ ಹರಿದಾಡುತ್ತಿದೆ. ಮಾಧ್ಯಮ ಮಿತ್ರರು ಕುಂದುಕೊರತೆಯ ಕುರಿತು ಕೆಲವರನ್ನು ಸಂದರ್ಶಿಸಿ ಅವರ ಅಭಿಪ್ರಾಯ ಸಂಗ್ರಹಿಸಿ ಸುದ್ದಿ ಮಾಡಿದ್ದಾರೆ.

ಆದರೆ ಯಾಕೆ ಹೀಗೆ ಪ್ರತಿ ಸಮ್ಮೇಳನದಲ್ಲೂ ಹಿಂದೆ ಮಾಡಿದ/ಆದ ತಪ್ಪುಗಳನ್ನು ಸರಿಪಡಿಸಿ ಮುಂದೆ ಆ ತಪ್ಪುಗಳು ಆಗದಂತೆ ತಿದ್ದಿಕೊಳ್ಳುವ ಅವಕಾಶ ಇದ್ದರೂ ಪದೇ ಪದೇ ಅದೇ ತಪ್ಪು ಯಾಕೆ ಮರುಕಳಿಸುತ್ತಿದೆ?! ಇಚ್ಛಾಶಕ್ತಿಯ ಕೊರತೆಯೇ? ಅಥವಾ ಮೇಲಾಧಿಕಾರಿಗಳು/ಸಾಹಿತ್ಯ ಪರಿಷತ್ತಿನ ಹಿರಿಯರ ಮಾತಿಗೆ ಬೆಲೆ ಇಲ್ಲವೆ!? ಅಥವಾ ಸಂಘಟಕರು ಹಿಂದಿನ ಅನುಭವದ ಹಿನ್ನೆಲೆಯಲ್ಲಿ ಆ ತಪ್ಪುಗಳನ್ನು ಮತ್ತೆ ಆಗದಂತೆ ಯಾಕೆ ಎಚ್ಚರ ವಹಿಸಲಿಲ್ಲ. ಪ್ರತಿ ಸಂಘಟಕರೂ ಹಿಂದಿನ ಎಲ್ಲ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿ ಆದ ತಪ್ಪು ಒಪ್ಪುಗಳನ್ನು ಚರ್ಚಿಸಿ ಮುಂದಿನ ಸಮ್ಮೇಳನಕ್ಕೆ ಅಣಿ ಆಗಬೇಕಲ್ಲವೇ.. ಯಾಕೆ ಹೀಗಾಯ್ತು? ಯಾರು ಎಡವಿದ್ದು! ಜಿಲ್ಲಾಡಳಿತ ಎಂದು ಬೆರಳು ಮಾಡುತ್ತಾರೆ. ಆದರೆ ಜಿಲ್ಲಾಡಳಿತದ ಗಮನಕ್ಕೆ ಸಂಘಟಕರು ತರಬಹುದಿತ್ತಲ್ಲ.

ಸಾಹಿತ್ಯ ಸಮ್ಮೇಳನ ಎಂದರೆ ಇಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಸಂಗೀತ,  ಭಾ಼ಷೆ, ಗಡಿ ಸಮಸ್ಯೆ ಹೀಗೆ ಹಲವು ವಿಷಯಗಳು ಚರ್ಚೆಗೊಳ್ಳುವ ಸಂಭ್ರಮದ ಜಾತ್ರೆ. ಇಲ್ಲಿ ಸಾಹಿತಿಗಳು ಬರೆದ  ಕಥೆ, ಕವನ, ಕಾದಂಬರಿ, ಪ್ರವಾಸ ಕಥನ, ಸಂಶೋಧನಾ ಲೇಖನ, ವಿಮರ್ಶಾ ಲೇಖನ ಮತ್ತಿತರ ಕೃತಿಗಳನ್ನು ಲೇಖಕರಿಂದ ಪಡೆದು ಅದನ್ನು ಅಕ್ಷರ ಜೋಡಿಸಿ, ವಿನ್ಯಾಸಗೊಳಿಸಿ, ಮುಖಪುಟ ಕಲಾವಿದರಿಂದ ಮುಖಪುಟ ರಚಿಸಿ ಮುದ್ರಣಕ್ಕೆ ಕಳಿಸಿ ಒಪ್ಪವಾಗಿ ಮುದ್ರಿಸಿ ಓದುಗದೊರೆಯ ಕೈಗಿಡುವುದು ಪ್ರಕಾಶಕರ ಕರ್ತವ್ಯ. ಇದನ್ನು ಹಲವಾರು ವರ್ಷಗಳಿಂದ ಶ್ರದ್ಧಾಭಕ್ತಿಯಿಂದ ಆಗು ಮಾಡುತ್ತ ಬರುತ್ತಿರುವವರ ದೊಡ್ಡ ಪಡೆಯೇ ಇದೆ. ಮೊದಲೆಲ್ಲ ಪ್ರಕಾಶನ ಎಂದರೆ ಲೇಖಕನೇ ಪ್ರಕಾಶಕನಾಗಿ ತನ್ನ ಕೃತಿಯನ್ನು ತಾನೇ ಹೊತ್ತು ಮನೆಮನೆಗೆ ತಲುಪಿಸಿದ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಈಗ “ಪ್ರಕಾಶನ” ಎನ್ನುವುದು ಗೌರವದ ಸಂಕೇತ. ಗಲ್ಲಿಗೊಬ್ಬ ಪ್ರಕಾಶಕರು ಹುಟ್ಟಿಕೊಳ್ಳುತ್ತಿದ್ದಾರೆ (ಆದಾಯದ ಮೂಲ ಕೂಡಾ ಇದೇ ಆದ ಹಿನ್ನೆಲೆಯಲ್ಲಿ).

ಸಣ್ಣ ಪ್ರಕಾಶಕರನ್ನು ತಾತ್ಸಾರದಿಂದ ನೋಡುವ ಒಂದು ವರ್ಗವೇ ಇದೆ. ಇರಲಿ.

ಸಾಹಿತ್ಯ ಸಮ್ಮೇಳನ ಎಂದರೆ ಸಾಹಿತಿಗಳ ಸಮ್ಮೇಳನ ತಾನೆ..!!!?

ಹಾಗಾದರೆ ಸಾಹಿತಿಗಳು ಬರೆದ ಪುಸ್ತಕಗಳನ್ನು ಹೊತ್ತು ಮಾರುವ ಪ್ರಕಾಶಕರನ್ನು ಕಡೆಗಣಿಸುವುದ್ಯಾಕೆ?

ಹೇಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಸಮಾನಾಂತರ ವೇದಿಕೆ ಎಂಬ  ವೇದಿಕೆ ಇದೆಯೋ, ಹಾಗೆಯೇ ಹಂಪಿ ಉತ್ಸವ, ಸಾಹಿತ್ಯ ಸಮ್ಮೇಳನ ಮತ್ತು ಪುಸ್ತಕ ಮೇಳಗಳಲ್ಲಿ ಭಾಗವಹಿಸುವ ಪುಸ್ತಕ ಮಳಿಗೆಗೂ ಒಂದು ಮಹತ್ವ ತಂದು ಕೊಡುವ ಕೆಲಸ ಆಗಬೇಕಲ್ಲವೇ…

ಪುಸ್ತಕ ಮಳಿಗೆಗಳು ಜ್ಞಾನದೇಗುಲ. ಒಳಬರುವ ಪ್ರತಿಯೊಬ್ಬರೂ ಇಲ್ಲಿ ಜ್ಞಾನದ ಗಂಗೆಯಿದೆ, ಇದನ್ನು ತನ್ನದಾಗಿಸಿಕೊಳ್ಳಬೇಕೆಂದು ಬರಬೇಕೆ ಹೊರತು ಎಲ್ಲರೂ ನುಗ್ಗುತ್ತಾರೆಂದು ಜಾತ್ರೆಯಲ್ಲಿ ನುಗ್ಗಿದಂತೆ ನುಗ್ಗಿದರೆ ನಿಜವಾದ ಪುಸ್ತಕ ಪ್ರೇಮಿಗಳಿಗೆ ತೊಂದರೆಯಾಗುತ್ತದೆ.  ಮಾರಾಟಗಾರರನ್ನು ಯಾಕೆ ತಾತ್ಸಾರದಿಂದ ನೋಡುತ್ತಾರೆ; ತಿಳಿಯುತ್ತಿಲ್ಲ.

ಅವರು ಕನ್ನಡ ಸಾಹಿತ್ಯವನ್ನು ಓದುಗದೊರೆಗೆ ತಲುಪಿಸುವ ಮಧ್ಯವರ್ತಿಗಳು. ಅವರ ಕೈಂಕರ್ಯ ಶ್ಲಾಘನೀಯ ಎಂದು ಯಾಕೆ ಸಂಘಟಕರಿಗೆ ಅನ್ನಿಸುತ್ತಿಲ್ಲ.!!?

ರಾಯಚೂರಿನಲ್ಲಿ ನಡೆದ ಮೂರು ದಿನದ “ಜನಜಾತ್ರೆ”ಯಲ್ಲಿ ಪುಸ್ತಕ ಮಾರಾಟಗಾರರು ಕಳೆದು ಹೋಗಿದ್ದರು. ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣದ ಪೋಷಾಕು, ಸೀರೆ ಮತ್ತಿತರ ಧಿರಸಿನ ಜನರೇ ತುಂಬಿದ್ದರು. ಪುಸ್ತಕ ಮಳಿಗೆಗೂ ಧಾಂಗುಡಿ ಇಡುತ್ತಿದ್ದರು. ಆದರೆ ಅವರ ಬರುವಿಕೆಯಿಂದ ಖುಷಿಗೊಂಡ ಪುಸ್ತಕ ಮಾರಾಟಗಾರ ಎದ್ದು ಅವರಿಗೆ ಪುಸ್ತಕದ ಮಹತ್ವವನ್ನು ಹೇಳುತ್ತಿದ್ದ ದೃಶ್ಯ ಸರ್ವೇಸಾಮಾನ್ಯವಾಗಿತ್ತು. ಆದರೆ ಬಂದವರು ಪುಸ್ತಕ ಮುಟ್ಟಿ ಪುಟ ತಿರುವಿಹಾಕಿ ಅಲ್ಲಿಯೇ ಎಸೆದು ಮುಂದಿನ ಮಳಿಗೆಗೆ ನುಗ್ಗುತ್ತಿದ್ದರು. ಅವರು ಎಸೆದ ಪುಸ್ತಕವನ್ನು ಮತ್ತೆ ಯಥಾ ಸ್ಥಾನದಲ್ಲಿಡುವುದು ಬೇಸರದ ಸಂಗತಿಯಾಗಿತ್ತು. ಮಳಿಗೆಯೊಂದಕ್ಕೆ (10×10) ಮೂರು ದಿನಕ್ಕೆ 2,500/- ರೂ. ಬಾಡಿಗೆ ನೀಡಿ ಏನೂ ವ್ಯವಸ್ಥೆ ಕಲ್ಪಿಸದಿರುವುದು ಎದ್ದು ಕಾಣುತ್ತಿತ್ತು. ಪುಸ್ತಕದ ಮಳಿಗೆಗಳ ನಡುವೆಯೇ ಆಟಿಕೆ ಸಾಮಾನು ವಾಚು ಮತ್ತಿತರ ವಸ್ತುಗಳನ್ನು ಮಾರುವವರು ತಮ್ಮ ವಸ್ತುಗಳನ್ನು ತಂದು ಕೂಗಿ ಕೂಗಿ ವ್ಯಾಪಾರ ಮಾಡುತ್ತಿದ್ದರು. ಇದು ಪುಸ್ತಕ ಮಾರಾಟಗಾರರಿಗೆ ಕಿರಿಕಿರಿಯಾಗುತ್ತಿತ್ತು.

ಧೂಳು ತುಂಬಿದ ಪುಸ್ತಕ ಮಾರಾಟದ ಜಾಗ ಹಲವರ ಆರೋಗ್ಯ ಕೆಡಿಸಿದ್ದಂತೂ ಸತ್ಯ. ಜನ ಓಡಾಡಿದಾಗ ಧೂಳು ಪುಟಿಯುತ್ತಿತ್ತು.

ಸಹನೆಯಿಂದಲೇ ಎಲ್ಲವನ್ನು ಪುಸ್ತಕ ಮಾರಾಟಗಾರರು ಸಹಿಸಿಕೊಂಡರು; ಮೌನವಾಗಿಯೇ ಪ್ರತಿಭಟಿಸಿದರು. ಹಾಗೆಯೇ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿಯೇ ಕೆಲ ಮಳಿಗೆಗಳು ತೆರೆದಿದ್ದವು. ಅಲ್ಲಿ ಅವರ ಚೀರಾಟ ಕೂಗಾಟ ಕೂಡಾ ಕಿರಿಕಿರಿಯಾಗುತ್ತಿತ್ತು. ಕೊನೆ ಕೊನೆಗೆ ಅವರೆಲ್ಲ ಹತ್ತು ರೂಪಾಯಿಗೆ ಐದು ಪುಸ್ತಕ ಎಂದು ಕೂಗುತ್ತಿದ್ದರು. ಆದರೂ ಜನ ಬರುತ್ತಿರಲಿಲ್ಲ. ನಂತರ ಅವರಲ್ಲಿಬ್ಬರು ಬೇಡವೆಂದರೂ ಬಂದವರ ಕೈಗೆ ಹಳೆಯ ಮ್ಯಾಗಜಿನ್ ಗಳನ್ನು ಉಚಿತವಾಗಿ ಕೈಗೆ ತುರುಕುತ್ತಿದ್ದ ದೃಶ್ಯ ಮಾಮೂಲಾಗಿತ್ತು. ಪುಸ್ತಕ ಮಾರಾಟ ಈ ಮಟ್ಟಕ್ಕೆ ಬಂತೇ ಎಂದು ದಿಗಿಲುಗೊಂಡೆ.

ಮುಂದಿನ ದಿನಗಳಲ್ಲಿ ಆಟಿಕೆ ಮತ್ತಿತರ ವಸ್ತುಗಳ ಮಾರಾಟಗಾರರನ್ನು ಮತ್ತು ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಪುಸ್ತಕಗಳ ಮಾರಾಟಕ್ಕೆ ಬೇರೆ ವ್ಯವಸ್ಥೆ ಕಲ್ಪಿಸುವ ಮೂಲಕ ಉಳಿಕೆ ಸಾಹಿತ್ಯಾಸಕ್ತರಿಗೆ ಆಗುವ ತೊಂದರೆಯನ್ನು ತಪ್ಪಿಸಬಹುದು.

ಮತ್ತು ಸಾಹಿತಿಗಳಿಗೆ ಹೇಗೆ ಗೌರವ ಇದೆಯೋ ಅದೇ ಸಾಹಿತಿಗಳ ಕೃತಿಗಳನ್ನು ಓದುಗರಿಗೆ ತಲುಪಿಸುವ ಕೈಂಕರ್ಯಕ್ಕೆ ಕಟಿಬದ್ಧರಾದ ಪ್ರಕಾಶಕರನ್ನು ದಯವಿಟ್ಟು ಗೌರವಿಸಿ. ಅವರು ಹಣ ಹಾಕಿ ಸಾಹಿತಿಗಳ ಸಾಹಿತ್ಯವನ್ನು ಮತ್ತು ಅವರ ಕೃತಿಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಕೆಲಸದಲ್ಲಿ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಅರ್ಪಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಾದರೂ ಈ ತಾರತಮ್ಯ ಮನೋಭಾವ ಬಾರದಿರಲಿ. ಮಾರಾಟಗಾರರೂ ಮನುಷ್ಯರು ಎಂಬ ಸತ್ಯ ಸಂಘಟಕರಿಗಿರಲಿ. ಇದು ನನ್ನೊಬ್ಬನ ಬೇಡಿಕೆಯಲ್ಲ. ನನ್ನಂತ ನೂರಾರು ಪ್ರಕಾಶಕ/ಮಾರಾಟಗಾರರ ಒಳತೋಟಿ. ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಅಣಿಗೊಳಿಸುವ ಎಲ್ಲ ಸಂಘಟಕರಲ್ಲೂ ನನ್ನ ಕಳಕಳಿಯ ಮನವಿ. ದಯವಿಟ್ಟು ಸಹಕರಿಸಿ. ಮುಂದಿನ ದಿನಗಳಲ್ಲಿ ವ್ಯವಸ್ಥೆ ಸರಿ ಹೋಗುತ್ತದೆಂಬ ಆಶಾಭಾವ. ನಮಸ್ಕಾರ.

Leave a Reply

Your email address will not be published. Required fields are marked *