
About Yaji Publications
ಹೊಸಪೇಟೆಯ ಯಾಜಿ ಪ್ರಕಾಶನವು ಸೀಮಾತೀತ ಸಾಹಿತ್ಯದ ಪರಿಕಲ್ಪನೆಯನ್ನಿಟ್ಟುಕೊಂಡು ಪ್ರಾರಂಭವಾದುದು. ದೇಶ-ಕಾಲ-ಮತಗಳಾಚೆ ನಿಂತು ಸತ್ವಯುತ ಹಾಗೂ ಸಾರ್ವಕಾಲಿಕವಾದುದನ್ನು ಕುರಿತು ಸಾಹಿತ್ಯ ಸೃಷ್ಟಿಯಾಗಬೇಕು ಎನ್ನುವುದು ನಮ್ಮ ಪ್ರಕಾಶನದ ಕಾಳಜಿ. ಇಲ್ಲಿ ಯಾವಾಗಲೂ ಆದ್ಯತೆ ಇರುವುದು ಆಲೋಚನೆಗೆ. ಇಂಥ ಗುರಿಯನ್ನಿಟ್ಟುಕೊಂಡು ಪ್ರಾರಂಭವಾದ ಪ್ರಕಾಶನ ನಡೆದುಬಂದ ದಾರಿಯೇನೂ ದೀರ್ಘವಾದುದಲ್ಲ. ಆದರೆ ಇರುವಷ್ಟೇ ಅವಧಿಯಲ್ಲಿ ಇಟ್ಟ ಒಂದೊಂದು ಹೆಜ್ಜೆಯೂ ದಿಟ್ಟ ಹಾಗು ದಾಖಲಾರ್ಹ.
2012ರ ಡಿಸೆಂಬರ್‌ನಲ್ಲಿ ಆರಂಭವಾದ ಯಾಜಿ ಪ್ರಕಾಶನಕ್ಕೆ ಹನ್ನೆರಡು ವರ್ಷಗಳೇ ತುಂಬಿತು ಎನ್ನುವುದು ನಿಜವಾಗಿಯೂ ನಮಗೆ ಸಂತೋಷದ ವಿಷಯ. ಈ ಅವಧಿಯಲ್ಲಿ ವಿಷಯ ವೈವಿಧ್ಯಗಳ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟ ಮಾಡುವುದು ಸಾಧ್ಯವಾಗಿದೆ. ಅವುಗಳಲ್ಲಿ ಅನೇಕ ಕೃತಿಗಳು ಒಂದಕ್ಕಿಂತ ಹೆಚ್ಚು ಆವೃತ್ತಿಯನ್ನು ಕಂಡಿವೆ. ಪುಸ್ತಕ ಪ್ರಕಟಣೆಯ ಈ ಹೊಣೆಗಾರಿಕೆಯನ್ನು ಮೇಲ್ನೋಟಕ್ಕೆ ಯಾಜಿ ಪ್ರಕಾಶನವೇ ವಹಿಸಿಕೊಂಡಿರಬಹುದು. ಆದರೆ ಅದರ ಹಿಂದೆ ದುಡಿಯುವ ಅನೇಕರ ಶ್ರಮವಿದೆ ಎಂಬುದನ್ನು ಎಂದೆಂದಿಗೂ ಮರೆಯು ವಂತೆಯೇ ಇಲ್ಲ. ಪುಸ್ತಕ ಬರೆದುಕೊಟ್ಟ ಲೇಖಕರು, ಮುಖಪುಟ ರಚಿಸಿದ ಕಲಾವಿದರು, ಮುದ್ರಿಸಿದ ಮುದ್ರಣಾಲಯಗಳ ಸಿಬ್ಬಂದಿಗಳು, ಕೊಂಡು ಓದುವ ಓದುಗರು -ಇವರೆಲ್ಲರ ಸನ್ಮನಸ್ಸಿನ ಸಹಕಾರದಿಂದ ಇಂತಹ ಒಂದು ಪ್ರಕಾಶನ ಸಂಸ್ಥೆಯನ್ನು ನಡೆಸುವುದು ಸಾಧ್ಯವಾಗಿದೆ. ಯಾಜಿ ಪ್ರಕಾಶನದ ಪುಸ್ತಕಗಳು ನಾಡಿನೆಲ್ಲೆಡೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರವರೆಗೂ ತಲುಪಿವೆ. ಅವುಗಳ ಹೂರಣದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ನಮ್ಮ ಜೊತೆಗಿರುವ ಬೌದ್ಧಿಕ ತಂಡ ನಮ್ಮನ್ನು ಸರಿದಾರಿಯಲ್ಲಿ ಕ್ರಮಿಸುವಂತೆ ಮಾಡಿದೆ. ಪುಸ್ತಕಗಳನ್ನು ಸುಂದರವಾಗಿ ಅಕ್ಷರ ದೋಷಗಳಿಲ್ಲದೆ ಪ್ರಕಟಿಸಬೇಕು ಎಂಬುದನ್ನು ಪ್ರಮುಖ ಗುರಿಯಾಗಿಸಿಕೊಂಡು ಈ ಕೆಲಸದಲ್ಲಿ ಯಾಜಿ ಪ್ರಕಾಶನ ಸದಾ ಶ್ರಮಿಸಿದೆ. ಅದರ ಪರಿಣಾಮವಾಗಿ ಪುಸ್ತಕದ ಸುಂದರ ಪ್ರಕಟಣೆಗಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ ಪುಸ್ತಕ ಸೊಗಸು ಪ್ರಶಸ್ತಿಯೂ ಪ್ರಕಾಶನಕ್ಕೆ ಲಭಿಸಿದೆ. ಅಲ್ಲದೆ ಪುಸ್ತಕದ ಮೌಲಿಕತೆಯ ಕಾರಣಕ್ಕೆ ಕೇಂದ್ರ ಸಾಹಿತ್ಯ ಅಕಾದಮಿ ಯನ್ನೂ ಒಳಗೊಂಡಂತೆ ರಾಜ್ಯದ ಅನೇಕ ಅಕಾಡೆಮಿ, ಪ್ರಾಧಿಕಾರ, ವಿಶ್ವವಿದ್ಯಾಲಯ ಹಾಗೂ ಇತರೆ ಖಾಸಗೀ ಸಂಘ-ಸಂಸ್ಥೆಗಳ 35 ಕ್ಕೂ ಹೆಚ್ಚು ಪ್ರಶಸ್ತಿ/ಪುರಸ್ಕಾರಗಳು ಯಾಜಿ ಪ್ರಕಾಶನದ ಪುಸ್ತಕಗಳನ್ನು ಅರಸಿ ಬಂದಿವೆ.
ಪುಸ್ತಕ ಪ್ರಕಟಣೆ ಎಂಬುದು ಸಾಂಸ್ಕೃತಿಕ ಜವಾಬ್ದಾರಿ ಎಂಬ ನೆಲೆಯಲ್ಲಿಯೇ ಪ್ರಕಾಶನವನ್ನು ಆರಂಭಿಸಲಾಗಿತ್ತು. ಈಗಲೂ ಅದೇ ದಾರಿಯಲ್ಲಿ ನಡೆಯುವ ಹುಮ್ಮಸ್ಸು ಪ್ರಕಾಶನಕ್ಕಿದೆ. ಪ್ರಕಟಣೆಯ ಖರ್ಚು-ವೆಚ್ಚಗಳನ್ನು ಪುಸ್ತಕ ಮಾರಾಟದಿಂದ ಸರಿದೂಗಿಸುವುದು ಕಷ್ಟ ಸಾಧ್ಯ ಎಂಬುದು ಅನುಭವಕ್ಕೆ ಬಂದಿದೆ. ಆದರೂ ಅದನ್ನು ಮೀರಿ ಯಾಜಿ ಪ್ರಕಾಶನ ನಾಡಿನೆಲ್ಲೆಡೆ ಹೆಸರು ಮಾಡಿದೆ. ಅನೇಕರ ಪ್ರೀತಿಗೆ ಪಾತ್ರವಾಗಿದೆ ಎಂಬ ಸಂತಸ, ಹಿತೈಷಿಗಳ ಹಾರೈಕೆ ಇವುಗಳಿಂದಲೇ ಪ್ರಕಾಶನ ಹನ್ನೆರಡು ವರ್ಷಗಳನ್ನು ಪೂರೈಸಿದೆ.