ಜಾಗೃತ ಸಾಹಿತ್ಯ ಸಮಾವೇಶ
ಅದು ೧೯೮೯ರ ಸಂದರ್ಭ…
ನಾನು ಛಾಯಾಗ್ರಾಕನಾಗಿ ಅದಾಗಲೇ ಸಾಹಿತ್ಯವಲಯದಲ್ಲಿ ಗುರುತಿಸಿಕೊಂಡಿದ್ದೆ.. ಅದರಲ್ಲೂ ಮಿತ್ರ ಆರ್.ಜಿ.ಹಳ್ಳಿ ನಾಗರಾಜ್ ಮೂಲಕ ಹಲಕೆಲವು ಹಿರಿಕಿರಿಯ ಸಾಹಿತಿಗಳ ಪರಿಚಯವಾಗಿತ್ತು… ಅದರಲ್ಲೂ ಬಂಡಾಯ ಸಾಹಿತ್ಯದಲ್ಲಿ ಗುರುತಿಸಿಕೊಂಡ ಹಲವು ಸಾಹಿತಿಗಳ ಪರಿಚಯವಾಗಿತ್ತು. ಬಂಡಾಯ ಸಾಹಿತ್ಯ ಕಾರ್ಯಕ್ರಮದ ಎಲ್ಲ ಛಾಯಾಚಿತ್ರಗಳನ್ನು ನನಗೆ ತೆಗೆಯಲು ಸೂಚಿಸುತ್ತಿದ್ದುದರಿಂದ ಅಲ್ಲಿ ಪಾಲ್ಗೊಳ್ಳುವವರ ಪರಿಚಯವಾಗುತ್ತಿತ್ತು… ಆಗ ಈಗಿನ ಹಾಗೆ ಮೊಬೈಲ್ ಆಗಲಿ… ಡಿಜಿಟಲ್ ಕ್ಯಾಮರಾಗಳಾಗಲಿ ಇರಲಿಲ್ಲ… ರೋಲ್ ಕ್ಯಾಮರಾ ಬಳಸುತ್ತಿದ್ದೆ.. ಕೇವಲ ೩೬ ಚಿತ್ರ ತೆಗೆಯಲು ಮಾತ್ರ ಸಾಧ್ಯವಾಗುತ್ತಿತ್ತು…ಅದು ಮುಗಿದ ಮೇಲೆ ಬೇರೆ ರೋಲ್ ಹಾಕಬೇಕಿತ್ತು… ಅದಕ್ಕಾಗಿ ಸಾಕಷ್ಟು ರೋಲ್ ಗಳನ್ನು ಬ್ಯಾಗ್ ನಲ್ಲಿ ಇಟ್ಟಿರಬೇಕಾಗಿತ್ತು.
ದಿನಾಲೂ ಚನ್ನೇನಹಳ್ಳಿ(ಜನಸೇವಾ ವಿದ್ಯಾ ಕೇಂದ್ರ)ಯಿಂದ ಸಂಜೆ ಬಂದು ಕಲಾಕ್ಷೇತ್ರಕ್ಕೆ ಭೇಟಿ ನೀಡಿ ಗೆಳೆಯರೊಂದಿಗೆ ಹರಟಿ ನಾಟಕ ತಯಾರಿಯಲ್ಲಿ ಪಾಲ್ಗೊಂಡು ಮತ್ತೆ ರಾತ್ರೆ ೧೧ ಗಂಟೆಗೆ ಚನ್ನೇನಹಳ್ಳಿ ಸೇರುತ್ತಿದ್ದೆ..
ಕಾರ್ಯಕ್ರಮವಿದ್ದರೆ ರಜೆ ಹಾಕಿ ಛಾಯಾಗ್ರಹಣ ಮಾಡುತ್ತಿದ್ದೆ…
೧೯೮೯ರ ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಳ್ಳುವ “ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ” ಹುಬ್ಬಳ್ಳಿಯಲ್ಲಿ ನಿಗದಿಯಾಗಿತ್ತು. ಅದರ ಅಧ್ಯಕ್ಷರಾಗಿ ಆರ್. ಸಿ. ಹಿರೇಮಠ ಅವರು ಆಯ್ಕೆಯಾಗಿದ್ದರು.
ಇದಕ್ಕೆ ಲಂಕೇಶ್ ಮೊದಲ್ಗೊಂಡು ಹಲವು ಬಂಡಾಯ ಸಾಹಿತಿಗಳು ವಿರೋಧ ವ್ಯಕ್ತಪಡಿಸಿ, ಅದಕ್ಕೆ ಪರ್ಯಾಯವಾಗಿ ಬೆಂಗಳೂರಲ್ಲಿ ಪರ್ಯಾಯ ಸಮ್ಮೇಳನ ನಡೆಸುವುದೆಂದು ಅದಕ್ಕೆ “ಗೋಪಾಲಕೃಷ್ಣ ಅಡಿಗ”ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಹುಬ್ಬಳ್ಳಿಯಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನದ ದಿನಾಂಕದಂದೇ ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಿ ಅನೇಕರು ಸಿದ್ಧತೆಗೆ ತೊಡಗಿದ್ದರು…
ಹಿರಿಯರಾದ ಶೂದ್ರ ಶ್ರೀನಿವಾಸ್ ಅವರು ನನ್ನನ್ನು ಕರೆದು “ಯಾಜಿ “ಜಾಗೃತ ಸಾಹಿತ್ಯ ಸಮಾವೇಶದ ಪೂರ್ಣ ಛಾಯಾಚಿತ್ರ ತೆಗೆದುಕೊಡಿ.. ಎರಡೂ ದಿನ ನಮ್ಮೊಟ್ಟಿಗೇ ಇರಬೇಕೆಂದು” ಹೇಳಿದರು. ಹಾಗೆಯೇ ಬೇರೆ ಬೇರೆ ಜಿಲ್ಲೆಯ ನಾನಾ ಸಾಹಿತಿಗಳು ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದ್ದರು. ಸರಿ ಎಂದು ತಿಳಿಸಿದೆ…
ಸಮಾವೇಶದ ದಿನಾಂಕ ಹತ್ತಿರ ಬರುತ್ತಿದ್ದಂತೆ ಒಂದೆರಡು ದಿನ ಮೊದಲು ಶೂದ್ರ ಸರ್ ಕರೆದು
“ಯಾಜಿ, ಲಂಕೇಶ್ ಅವರು ಒಂದು ಅಸಂಗತ ನಾಟಕ ಬರೆದಿದ್ದಾರೆ… ಅದರ ಪ್ರಯೋಗ ಕೊನೆಯ ದಿನ ಇದೆ. ಕೆಲವರು ಆಗಲೇ ಆಯ್ಕೆಯಾಗಿದ್ದಾರೆ.. ಶ್ರೀನಿವಾಸ ಗೌಡ ಅವರು ನಿರ್ದೇಶಿಸುತ್ತಿದ್ದಾರೆ. ನಿಮ್ಮ ಹೆಸರು ಕೊಟ್ಟಿರುವೆ….ಹೇಗೂ ನೀವೂ ನಟರು… ನೀವ್ಯಾಕೆ ಒಂದು ಪಾತ್ರ ಮಾಡಬಾರದು” ಎಂದು ಕೇಳಿದ್ದಲ್ಲದೇ ನೀವು ನಟಿಸಲೇ ಬೇಕು ಎಂದು ಪ್ರೀತಿಯಿಂದ ಒತ್ತಾಯಿಸಿದರು.
ಅದಕ್ಕೆ ನಾನು, “ಅಲ್ಲಾ ಸರ್, ಛಾಯಾಚಿತ್ರ ತೆಗೆಯುತ್ತಾ ರಿಹರ್ಸಲ್ ನಲ್ಲಿ ಪಾಲ್ಗೊಳ್ಳಬೇಕಾಗುತ್ತೆ… ಹಾಗಾಗಿ ಕಷ್ಟ ಆಗುತ್ತೆ” ಎಂದೆ…
ಅದಕ್ಕವರು “ನೀವು ನಿಭಾಯಿಸಬೇಕು” ಎಂದು ಹೇಳಿ ಉತ್ತರಕ್ಕೂ ಕಾಯದೇ ತಮ್ಮ ಚಟುವಟಿಕೆಯಲ್ಲಿ ತೊಡಗಿಕೊಂಡರು… ಮತ್ತೆ ತೊಂದರೆ ಕೊಡುವುದು ಬೇಡವೆಂದು ಸಮ್ಮತಿಸಿದೆ.
ಮರುದಿನವೇ ಕಾರ್ಯಕ್ರಮ. ನಾಟಕದ ತಯಾರಿ ಕಲಾಕ್ಷೇತ್ರದ ಲಾಂಜ್ ನಲ್ಲಿ ನಡೆಯುತ್ತಿತ್ತು.. ನಾಟಕದ ನಿರ್ದೇಶನದ ಹೊಣೆಯನ್ನು ಶ್ರೀನಿವಾಸ್ ಗೌಡ(ಲಂಕೇಶ್ ಪತ್ರಿಕೆಯ ಆಟೋಟ ಅಂಕಣಕಾರರು) ಅವರು ವಹಿಸಿಕೊಂಡಿದ್ದರು… ತುಂಬಾ ಶಿಸ್ತಿನ, ಸಿಟ್ಟಿನ ಮನುಷ್ಯ. ಸಮಯ ಮೀರಿ ಬಂದಲ್ಲಿ ಗದರುತ್ತಿದ್ದರು… ಮರುದಿನ ಕಾರ್ಯಕ್ರಮ ಪ್ರಾರಂಭ… ನಾನು ಕಾರ್ಯಕ್ರಮದ ಪ್ರತಿಯೊಂದು ಕ್ಷಣಗಳನ್ನು ಛಾಯಾಚಿತ್ರಗಳ ಮೂಲಕ ದಾಖಲಿಸುತ್ತಿದ್ದೆ.. ಮಿತ್ರರೊಬ್ಬರು ಬಂದು “ರಿಹರ್ಸಲ್ ಗೆ ಕರೆಯುತ್ತಿದ್ದಾರೆ ಬನ್ನಿ” ಎಂದು ಕಿವಿಯಲ್ಲಿ ಉಸುರಿದರು.. ಕಾರ್ಯಕ್ರಮ ನಡೆಯುತ್ತಿದೆ ಬರುತ್ತೇನೆ ಎಂದು ಹೇಳಿ ತಪ್ಪಿಸಿಕೊಂಡೆ…
ಲಂಕೇಶ್ ಅವರು ಬರೆದ ಅಸಂಗತ ನಾಟಕ ಅದಾಗಿತ್ತು… ದಾವಣಗೆರೆಯಲ್ಲಿ ನಡೆಯುವ ಸಮ್ಮೇಳನದ ವಿರುದ್ಧ ಬರೆದ ನಾಟಕ.. ಅದರಲ್ಲಿ ಸಮ್ಮೇಳನಾಧ್ಯಕ್ಷರನ್ನು ಟೀಕಿಸಿದ್ದರು…
ನಾಟಕದ ಪ್ರಮುಖ ಪಾತ್ರದಲ್ಲಿ ಸುಘತ್ ಶ್ರೀನಿವಾಸರಾಜು, ಸುಧಾ ಬೆಳವಾಡಿ(ಮುಂಗಾರು ಮಳೆ ಗಣೇಶನ ತಾಯಿ ಪಾತ್ರ ಮಾಡಿದವರು), ಮೈಕೊ ಚಂದ್ರು, ಹುಲಿವಾನ್ ಗಂಗಾಧರಯ್ಯ, ನಾನು. ಉಳಿದಂತೆ ಬೇರೆ ಬೇರೆ ತಂಡಗಳ ನಟರು, ಬೆಂಗಳೂರು ವಿವಿ ಎಂ.ಎ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು…
ನಾಟಕದಲ್ಲಿ ಹುಬ್ಬಳ್ಳಿ ಸಾಹಿತ್ಯ ಸಮ್ಮೇಳನವನ್ನು ಅಣಕಿಸುವ ಹಿರೇಮಠ ಮರೀಮಠ … ಹೀಗೆ ಡೈಲಾಗ್ ಬರತ್ತೆ . ಅದನ್ನು ನಾನು ಹೇಳುವುದಾಗಿತ್ತು… ಛಾಯಾಚಿತ್ರಗಳನ್ನು ತೆಗೆಯುತ್ತಲೇ ಸಂಸ ಬಯಲು ರಂಗಮಂದಿರದಿಂದ ಕಲಾಕ್ಷೇತ್ರದ ಲಾಂಜ್ ಗೂ ಓಡುತ್ತಾ ಎರಡೂ ಕಡೆ ನ್ಯಾಯ ಒದಗಿಸಲು ಪ್ರಯತ್ನಪಡುತ್ತಿದ್ದೆ…
ಕೊನೆಯ ದಿನ ನಾಟಕ ಪ್ರಾರಂಭ…
ನನಗೋ ಆತಂಕ.
ಲಂಕೇಶ್ ಮತ್ತಿತರ ಗಣ್ಯಾತಿಗಣ್ಯರು ವೇದಿಕೆಯ ಮುಂಭಾಗದಲ್ಲಿ ಆಸೀನರಾಗಿದ್ದರು. ಕ್ಯಾಮರಾವನ್ನು ಗೆಳೆಯ ಸತ್ಯ ಎಂಬವರಿಗೆ ಕೊಟ್ಟು ಛಾಯಾಚಿತ್ರಗಳನ್ನು ತೆಗೆಯಲು ತಿಳಿಸಿದೆ.. ನಾಟಕ ಯಶಸ್ವಿಯಾಗಿ ಪ್ರಯೋಗಿಸಲ್ಪಟ್ಟಿತು… ನಾನು ನನ್ನ ಪಾತ್ರಪೋಷಣೆಯನ್ನು ತಕ್ಕಮಟ್ಟಿಗೆ ಮಾಡಿದ್ದೇನೆ ಎಂಬ ಖುಶಿಯಲ್ಲಿದ್ದೆ.
ನಾಟಕದ ನಂತರ ಲಂಕೇಶ್ ಅವರೊಂದಿಗೆ ಕಲಾವಿದರು, ತಂತ್ರಜ್ಞರು ಮತ್ತು ಸಂಯೋಜಕರು ಛಾಯಾಚಿತ್ರ ತೆಗೆಸಿಕೊಂಡೆವು…
ಅದರ ನೆನಪು ಸದಾ ಹಸಿರಾಗಿರಲು…ಆ ನೆಗೆಟಿವ್ಸ್ ಕಾಪಿಟ್ಟುಕೊಂಡಿದ್ದೆ..
ಇದೆಲ್ಲಾ ಕಳೆದ ಸೋಮವಾರದಿಂದ ಪ್ರಾರಂಭವಾದ ಟಿ.ಎನ್. ಸೀತಾರಾಮ್ ಅವರ ‘ಮಗಳು ಜಾನಕಿ’ ಧಾರಾವಾಹಿಯನ್ನು ನೋಡುತ್ತಿರುವಾಗ ನೆನಪಾಯ್ತು…
ಅಲ್ಲಿ ಸುಧಾ ಬೆಳವಾಡಿ (ಮೇಕಪ್ ನಾಣಿ ಅವರ ಮಗಳು) ಅವರು CSP ಅವರ ತಂಗಿಯ ಪಾತ್ರ ನಿರ್ವಹಿಸುತ್ತಿದ್ದಾರೆ.
29 ವರ್ಷಗಳ ಹಿಂದೆ ನಾನೂ ಅವರೊಟ್ಟಿಗೆ ಪಾತ್ರ ನಿರ್ವಹಿಸಿದ್ದೇನೆಂಬ ಖುಷಿಯಿಂದ ಈ ಚಿತ್ರಗಳನ್ನು ದಾಖಲಿಸುತ್ತಿರುವೆ.
ಮುಂದಿನ ದಿನಗಳಲ್ಲಿ ಇದೇ ರೀತಿಯ ಹಲವಾರು ಘಟನೆಗಳನ್ನು ಮೆಲಕು ಹಾಕುವೆ…
ಹೀಗೆ ಹಳೆಯದನ್ನು ಮೆಲಕು ಹಾಕುತ್ತ ನಾವು ಎಷ್ಟು ಬದಲಾಗಿದ್ದೇವೆ ಎಂದು ತಿರುಗಿ ನೋಡುವತ್ತ ಒಂದು ಸಣ್ಣ ಪ್ರಯತ್ನ…
ಕೆಲವು ಛಾಯಾಚಿತ್ರಗಳನ್ನು ನೆನಪಿಗಾಗಿ ದಾಖಲಿಸಿದ್ದೇನೆ…ಈ ಚಿತ್ರಗಳು ಹಲವರ ನೆನಪನ್ನು ಕೆದಕಬಲ್ಲದು ಎಂಬ ನಂಬಿಕೆ…
ಛಾಯಾಚಿತ್ರ ತೆಗೆದುಕೊಟ್ಟ ಗೆಳೆಯ ಸತ್ಯನಿಗೆ ಧನ್ಯವಾದಗಳು..
ಹಾಗೆಯೇ ಲಂಕೇಶ್ ಅವರ ನಾಟಕದಲ್ಲಿ ನಟಿಸಲು ಅವಕಾಶ ಕಲ್ಪಿಸಿದ ಶೂದ್ರ ಶ್ರೀನಿವಾಸ್ ಸರ್ ಅವರಿಗೆ, ನಟನೆಯನ್ನು ಕಲಿಸಿದ ಶ್ರೀನಿವಾಸ ಗೌಡ ಅವರಿಗೆ ಹಾಗೂ ನನ್ನ ಜೊತೆ ನಟಿಸಿದ ರಂಗಮಿತ್ರರಿಗೆ ಧನ್ಯವಾದಗಳು…
ನಿಮ್ಮನ್ನೆಲ್ಲಾ ೨೯ ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತಿದ್ದೇನೆ…
ಧನ್ಯವಾದಗಳು.