ಕಾವ್ಯ, ನಾನು ನಂಬಿರುವಂತೆ…
ಕವಿ ಮತ್ತು ಸಂತನ ಸಮಾಗಮವಾಗದ ಕವಿತೆಗೇನೂ ಅರ್ಥ ಹೇಳಿ? ಕವಿಯಲ್ಲೊಬ್ಬ ಸಂತ, ದಾರ್ಶನಿಕ, ಸಂತನಲ್ಲೊಬ್ಬ ಕವಿ ಮಾತನಾಡಿಕೊಂಡಾಗ ಮಾತ್ರ ಕವಿತೆ. ಪ್ರಾಮಾಣಿಕ ಕವಿತೆ. ಕಾವ್ಯದ ಚಿರ ಅಮರ ಚೆಲುವಿಗೆ ಇವರಿಬ್ಬರೂ ಸೇರಬೇಕು. ಒಂದು ಕವಿತೆ ಕಾಲಾತೀತ ಅರ್ಥವಂತಿಕೆಯನ್ನು, ಚೆಲುವನ್ನು ಉಳಿಸಿಕೊಂಡಿದ್ದರೆ ಅದರಲ್ಲಿ ಇವರಿಬ್ಬರೂ ಸೇರಿದ್ದಾರೆಂದೇ ಅರ್ಥ. ಪ್ರಸಿದ್ಧ ಚಿಂತಕ ಸಾಮರ್‌ಸೆಟ್ ಮಾಮ್‌ನ ಪ್ರಕಾರ ಇವರಿಬ್ಬರೂ ತಮ್ಮ ಅಸ್ತಿತ್ವವನ್ನು ಅಭಿವ್ಯಕ್ತಿಯ, ಪ್ರಾಮಾಣಿಕತೆಯ ಮೂಲಕ ಸಾಧಿಸಿದವರು. ಅವನ ಪ್ರಕಾರ “It is the only artist saint may be the criminal who can choose his own life.”
ಈಗ ನನಗಿರುವ ಪ್ರಶ್ನೆ ಇದು, ನನ್ನನ್ನು ನಾನು ಕವಿ ಎಂದು ಸಾರಿಕೊಂಡಿಲ್ಲ ಎಂದ ಮೇಲೆ, ನಾನು ಸಂತನೂ ಅಲ್ಲ ಎಂದು ಹೇಗೆ ಹೇಳಲಿ? ಅಥವಾ ಹಲವು ಪ್ರಜ್ಞಾಪೂರ್ವಕ ಪ್ರಯತ್ನಗಳಿಂದ, ನಿಯಮ ಪಾಲನೆಗಳಿಂದ ಸಂತತ್ವವನ್ನಾಗಲಿ, ಕವಿತ್ವವನ್ನಾಗಿ ಸಾಧಿಸಲು ಸಾಧ್ಯವೇ? ಅಥವಾ ಅದು ಲೆಕ್ಕಾಚಾರದಿಂದ ಅತೀತವಾದ ಒಂದು ಸಹಜ ಸ್ವಾಭಾವಿಕ ಶ್ರೋತವೇ? ನನಗೆ ಗೊತ್ತಿಲ್ಲ. ಗೊತ್ತಾಗಲೂ ಬೇಕಿಲ್ಲ. ಯಾಕೆಂದರೆ ಈ ಜಗತ್ತಿನಲ್ಲಿ ಒಂದು ಸತ್ಯವೆನ್ನುವುದಿಲ್ಲ, ಹಲವು ಸತ್ಯಗಳಿವೆ.
ನನ್ನ ಪಾಲಿಗೆ ಮೌನ ಎನ್ನುವ ಪದ ಮತ್ತೆ ಮತ್ತೆ ನನ್ನನ್ನು ಸಂತತ್ವದತ್ತ ಎಳೆದುತರುವ ಕೊಂಡಿಯಂತೆ. ಸಂತನ ಸಾವಿನಲ್ಲಿ ಯಾವ ಸುಖವೂ ಇಲ್ಲ ಎಂದು ನಾನು ನಂಬಿರುವೆನಾದರೂ, ತುಡಿ-ತುಡಿವ ಒಬ್ಬ ಯುವ ಪ್ರೇಮಿಯ ದ್ವಂದ್ವ, ಹೋರಾಟ, ಭ್ರಮೆ, ಅಪರಾಧ, ತಪ್ಪೊಪ್ಪಿಗೆಗಳಿಂದ ಕೂಡಿದ ಬದುಕಿನಷ್ಟೇ ಸಂತನೊಬ್ಬನ ಜೀವನ ಕುತೂಹಲಕಾರಿಯಾಗಿದೆ. ಯಾವುದನ್ನೂ ಹುಚ್ಚಾಗಿ ಪ್ರೀತಿಸದ ಹೊರತು ಅವನು ತನ್ನ ಸಂತತ್ವವನ್ನು ಸಾಧಿಸಲಾಗದು. ಸಂತ ಈ ಜಗದಿಂದ ಓಡಿಹೋದವನಲ್ಲ. ಓಡಿಹೋದವ ಸಂತನೂ ಆಗಿರಲಾರ. ಪ್ರೇಮಿಯೂ ಆಗಿರಲಾರ. ಅಂತೆಯೆ ಬುದ್ಧ ಸುಜಾತಳಂಥ ಕುಲಹೀನ(?)ಳ ಕೈ ತುತ್ತುಗಳಲ್ಲಿ, ಪ್ರೀತಿಯಲ್ಲಿ ಸಂತತ್ವದ ಅರ್ಥ ಕಂಡುಕೊಂಡಿರಬೇಕು.
ಶಬ್ದ ಸಂಕೇತ ಮಾತ್ರ
ಕಾವ್ಯದ ಓದುಗನಿಗೆ ಒಂದೊಂದು ಶಬ್ದ, ಸಾಲು. ತನ್ನಂಥದೇ ಆದ, ತನ್ನ ಹೊಳೆಗಂಧಕ್ಕೇರಿದ ಒಂದು ಅನುಭವ, ಸಮಾನವೆನ್ನಿಸಬಹುದಾದ ನೆನಪು, ಧ್ವನಿಗಳನ್ನು ತಿರುಗಿಸುವ, ಅರ್ಥಗಳನ್ನು ಮಡಚುವ, ಪ್ರತಿಮೆಗಳ ದಿಕ್ಕುಗಳನ್ನು ವಿಚಿತ್ರವೆನ್ನಿಸುವಂತೆ ಹೊರಳಿಸುವ-ಯಾವುದೋ ಕವಿತೆ ಕಟ್ಟುವ ಕ್ರಿಯೆಯು ಕೂಡಾ ಒಬ್ಬ ಕವಿಯ/ಕಾವ್ಯದ ಮೋಹಕ್ಕೆ ಕಾರಣವಾಗಬಹುದು. ಯುವತಿಯೊಬ್ಬಳನ್ನು ಪ್ರೀತಿಸುವ ಒಬ್ಬ ಪ್ರೇಮಿಯ ತುಡಿತಕ್ಕೂ ಕಾವ್ಯದ ಆಸ್ವಾದನೆಯಲ್ಲಿರುವ ಒಬ್ಬ ರಸೋಪಾಸಕನ ಮನೋಭಾವಕ್ಕೂ ಬಹಳ ದೊಡ್ಡ ವ್ಯತ್ಯಾಸವಿಲ್ಲ. ಅದು ಸಖಿಯೊಬ್ಬಳ ನೋಟ, ಮಾತು, ನಗೆ, ವಸ್ತ್ರಾಲಂಕಾರ, ಯಾವುದೋ ಒಂದು ಶೈಲಿ, ಯಾವುದಕ್ಕೋ ಮರುಳಾಗಿರುವ ಪ್ರೇಮಿಯೊಬ್ಬ ಅವಳನ್ನು ಸಂಪೂರ್ಣವಾಗಿ ಒಪ್ಪಿಕೊಂಡಂತೆ.
ಸರಿಯಾದ ರಸಗ್ರಹಣದ ಹೊರತು ಒಂದು ಕವನವನ್ನು ಕಲಿಸಲು ಸಾಧ್ಯವಾಗಲಾರದು. ಸಾಲುಗಳ ಎಲುವಿನ ಹಂದರಕ್ಕೆ ಶಬ್ದಾರ್ಥಗಳ ಹಾಗೂ ಧ್ವನಿಯ ರಕ್ತ-ಮಾಂಸವನ್ನು ಆತ ಒದಗಿಸಬಹುದೇ ವಿನಃ ಅರ್ಥಗಳ ಜೀವವನ್ನು ತುಂಬಲಾರ. ಹಾಗೆ ನೋಡಿದರೆ, ಕವಿಯೊಬ್ಬನ ಮೂಲಕಲ್ಪನೆಯನ್ನು ಸಂಪೂರ್ಣವಾಗಿ ಗ್ರಹಿಸುವುದು ಯಾರಿಂದಲೂ ಸಾಧ್ಯವಿಲ್ಲ. ಸಾಧ್ಯವಾಗಬೇಕಾದದ್ದೂ ಇಲ್ಲ. ಕವಿಯ ಮೂರ್ತವಲ್ಲದ ನಾದ, ಲಯ, ಕಲ್ಪನೆಯ ಬೆನ್ನೇರಿ ಬರುವ ಕವನವೊಂದರ ಹಿನ್ನೆಲೆಗೆ ಮೂರ್ತತೆಯನ್ನು ನಿರೀಕ್ಷಿಸುವುದು ಒಂದು ಹುಚ್ಚು ಸಾಹಸವೇ.
ಕಾವ್ಯ ಆಸ್ವಾದಿಸುವುದು ಒಂದು ಮಧುರ ಕಾಯುವಿಕೆ. ಓದಿದ ಸಾಲುಗಳನ್ನು ಮನಸ್ಸಿನ ಉಗ್ರಾಣದಲ್ಲಿ ವರುಷಗಳ ವರೆಗೆ ಕಾಯ್ದಿಟ್ಟು, ಅಂತದ್ದೊಂದು ಅನುಭವಕ್ಕಾಗಿ, ಉದಾಹರಣೆಗಾಗಿ ಕೆಲವು ಬಾರಿ ಕಾಯಬೇಕಾಗುತ್ತದೆ. ಕವಿ ವಡ್ಸ್‌ವರ್ಥ್‌ನನ್ನು ನಾಲ್ಕು ಗೋಡೆಗಳ ಮಧ್ಯ ಕಲಿಸುವುದು, ಕುವೆಂಪು ಅವರ ಕಾದಂಬರಿಗಳನ್ನು ಮಲೆನಾಡ ಹಿನ್ನೆಲೆ ಅರಿಯದೇ ಬಯಲು ಸೀಮೆಯಲ್ಲಿ ಕುಳಿತುಕೊಂಡು ಓದುವುದು, ಸಾಮರ್‌ಸೆಟ್ ಮಾಮ್‌ನನ್ನು ಹಾಸ್ಯದ ಒಂದು ಪರಿಧಿಯಲ್ಲಿ ಆಶಿಸುವುದು ಕೆಲವು ಬಾರಿ ಮೂರ್ಖತನಗಳೇ. ನಿಮ್ಮ ವಯಸ್ಸಿನ ಇಪ್ಪತ್ತಕ್ಕೆ ಸ್ನೇಹಿತನಾಗುವ ವಡ್ಸ್‌ವರ್ಥ್‌ನ ಕಾವ್ಯ ಅರವತ್ತರ ನಿಮ್ಮ ಇಳಿವಯಸ್ಸಿನಲ್ಲಿ ನಿಮ್ಮ ತುಡಿತ ಅಥವಾ ಬದುಕಿನ ದರ್ಶನವಾಗಬಹುದು. ಪ್ರೇಮ-ಕಾಮಗಳ ಹುಚ್ಚು ಹೊಡೆದಾತ ಎನ್ನುವ ಶೇಕ್ಸ್‌ಪಿಯರ್‌ನ ನಾಟಕಗಳು, ಮುಸ್ಸಂಜೆಯ ನಿಮ್ಮ ಬದುಕಿನ ದಿನಗಳಲ್ಲಿ ನೀವು ಸಾಗಿಸಿದ ಬದುಕಿನ ತಿರುಳು ಎನಿಸಬಹುದು. ಹೀಗೆ ಒಬ್ಬೊಬ್ಬ ಲೇಖಕನ, ಕಾವ್ಯದ ಒಂದೊಂದು ಸಾಲು ಹಾಗೂ ಅರ್ಥಗಳಿಗಾಗಿ ಕೆಲವು ಬಾರಿ ತಪಸ್ಸು ಮಾಡಬೇಕಾಗುತ್ತದೆ. ಕವಿ ಏಟ್ಸ್, ಪ್ರೀತಿಗಾಗಿ ಮಾಡ್ಗಾನ್‌ಳ ಮನೆಯ ಬಾಗಿಲಲ್ಲಿ ನಿಂತಂತೆ ನೀವು ಕಾವ್ಯದ ಅರ್ಥ ನವನೀತಕ್ಕಾಗಿ ಕಾಯಬೇಕಾಗುತ್ತದೆ.
ಪ್ರವಾಸಾನುಭವಗಳ, ಪ್ರವಾಹದ ವಿರುದ್ಧ ಈಜುವ ಮನಸ್ಸು, ಸೋಲುಗಳನ್ನು ಪ್ರೀತಿಸುವ ಒಂದು ವಿಶಿಷ್ಟ ದೃಷ್ಟಿಕೋನ ಬೆಳೆಸಿಕೊಳ್ಳದ ಯಾವನೂ ಕಾವ್ಯವನ್ನು ಕಲಿಸಲಾರ ಅಥವಾ ಅರ್ಥೈಸಿಕೊಳ್ಳಲಾರ. ಅನುಭವಗಳಿಂದ ಶ್ರೀಮಂತವಲ್ಲದ, ಪೂರ್ವಾಗ್ರಹಗಳಿಂದ ಮುಕ್ತವಲ್ಲದ ಮನುಷ್ಯನು ಕೂಡಾ ಕಾವ್ಯಕ್ಕೆ ತಕ್ಕವನಲ್ಲ. ಕಾವ್ಯ ಕಲಿಸಬೇಕಾದವರೆಲ್ಲರೂ ಕವಿಗಳಾಗಿರಬೇಕೆಂದು ನನ್ನ ವಾದವಲ್ಲ. ಆದರೆ ಕವಿತ್ವದ ಒಂದಿಷ್ಟು ಗಾಳಿ ಆತನಿಗೆ ಬಡಿದಿದ್ದರೆ ಕಾವ್ಯದ ಸಾರ್ಥಕ ಓದನ್ನು ಆತ ಮಾಡಬಲ್ಲ.
ಕನ್ನಡ ಜನಪದ ಕಾವ್ಯ ಪರಂಪರೆಯನ್ನು ಗಮನದಲ್ಲಿರಿಸಿಕೊಂಡು ಬ್ರೆಂಡ್ ಬ್ರೆಕ್ ಐದು ಮುಖ್ಯವಾದ ಅಂಶಗಳನ್ನು ಚರ್ಚಿಸುತ್ತಾನೆ.
೧. ಸಾಂಪ್ರದಾಯಿಕ ಕವಿಗಳಿಂದ ಇದು ನಟಿಸಲ್ಪಟ್ಟಿದೆ.
೨. ಒಂದು ಪ್ರದೇಶದ ಯಾವುದೇ ಜನಪದ ಕಥಾನಕಕ್ಕೂ ಸಂವಾದಿಯಾಗಿ ಇದನ್ನು ನೋಡಿದಾಗಲೂ ಅವೆಲ್ಲವುಗಳಿಗಿಂತಲೂ ಇದು ದೀರ್ಘವಾಗಿರುತ್ತದೆ.
೩. ಸ್ಥಳಿಯ ದೇವಾಲಯಗಳಲ್ಲಿ ಪೂಜಿಸಲ್ಪಡುವ ದೇವತೆಗಳು ಈ ಕಾವ್ಯದ ನಾಯಕ/ಕಿ ಆಗಿರುತ್ತಾರೆ.
೪. ಒಂದು ಜನಾಂಗದ ಸಂಪ್ರದಾಯಗಳು ಮತ್ತು ಮಹಾಕಾವ್ಯಗಳೊಂದಿಗೆ ಇದು ಸಂಬಂಧವನ್ನು ಸ್ಥಾಪಿಸಿ ಕೊಂಡಿರುತ್ತದೆ.
೫. ಈ ಕಾವ್ಯದ ಕೇಳುಗ ಹಾಗೂ ಹೇಳುಗ ಇಬ್ಬರೂ ಒಂದಾನೊಂದು ಈ ಕಾವ್ಯದಲ್ಲಿನ ಘಟನೆ ಜರುಗಿತ್ತು ಎಂದು ಬಲವಾಗಿ ನಂಬಿರುತ್ತಾರೆ.
ಯಾವುದೇ ಮೌಖಿಕ ಪರಂಪರೆಯು ಭಾರತದ ಅನೇಕ ಜನಾಂಗಗಳಲ್ಲಿ ಆ ಜನಾಂಗದ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಚನೆಯ ಒಂದು ಪ್ರಕಾರದ ಚರ್ಚೆಯಾಗಿದೆ. ಧಾರ್ಮಿಕ ಕೃತಿ ಮೂಲಕೃತಿ ಇದ್ದಂತೆ. ಅದೂ ದ್ವಿತೀಯ ದರ್ಜೆಯ ಸಹಾಯಕ ಅಥವಾ ಅಂತಹ ಕೃತಿಗೆ ಹುಟ್ಟು ಕೊಡುತ್ತದೆ. ಈ ದ್ವಿತೀಯ ದರ್ಜೆಯ ಕೃತಿಯು ಮೂಲಕೃತಿಯ ಮೇಲಿನ ವಿಮರ್ಶೆಯಂತೆ ಕಾರ್ಯ ನಿರ್ವಹಿಸುತ್ತದೆ.
ಜನಪದ ಕಾವ್ಯವು ಧಾರ್ಮಿಕ ವಿವರಣಾತ್ಮಕ ಕೃತಿ. ಲಿಖಿತವಾಗಿರಬಹುದು, ಇಲ್ಲಾ ಅಲಿಖಿತವಾಗಿರಬಹುದು ಅಥವಾ ಎರಡೂ ರೀತಿಯಲ್ಲಿದ್ದಿರಬಹುದು. ಯಾಕೆಂದರೆ ಸಾಂಸ್ಕೃತಿಕ ಕೃತಿಯೊಂದು ಯಾವಾಗಲೂ ಮೌಖಿಕವಾಗಿ, ಧಾರ್ಮಿಕವಾಗಿ ಅಥವಾ ಎರಡೂ ರೀತಿಗಳನ್ನು ಅನ್ವಯಿಸಿ ರಚಿಸಲ್ಪಟ್ಟಿರುತ್ತದೆ. ಸಾಮಾಜಿಕ ಮೌಲಿಕ ಕೃತಿ ಹಾಗೂ ಸಂಸ್ಕೃತಿಯ ಮಧ್ಯದ ವ್ಯತ್ಯಾಸಗಳನ್ನು ಧಾರ್ಮಿಕ ವಿವರಣಾತ್ಮಕ ಕೃತಿಯೂ ಕತ್ತರಿಸಿ ಹಾಕುತ್ತದೆ. ಯಾಕೆಂದರೆ ಮೌಖಿಕ ಪರಂಪರೆಯೊಂದರಿಂದ ಸೂಚಿತವಾದ ಸೋಶಿಯೋ-ಸಾಂಸ್ಕೃತಿಕ ನಿಯಮಗಳ ಮೇಲೆ ಅಪಾರವಾಗಿ ಅವಲಂಬಿತವಾದ ಒಂದು ಸಾಮಾಜಿಕ ಪಂಗಡವು ಅವುಗಳಿಂದಲೇ ಮುಂದುವರೆಯಲ್ಪಟ್ಟಿರುತ್ತದೆ. ಅವರ ಪ್ರತಿನಿತ್ಯದ ವರ್ತನೆಗಳನ್ನು ಕೂಡಾ ಅದು ನಿಯಂತ್ರಿಸುತ್ತದೆ.
ಭಾಷೆಯೊಂದು ಬರೀ ಚೌಕಟ್ಟು ಎಂಬ ಪರಿಗಣನೆ ಕಾರಣ. ನಮ್ಮೆಲ್ಲ ಬೌದ್ಧಿಕ ಹೋರಾಟ, ಪ್ರಯತ್ನಗಳು ನಿಲ್ಲಬೇಕಾಗಿಲ್ಲ. ಭಾಷೆಯನ್ನು ಒಂದು ನಟನೆ ಹಾಗೂ ಘಟನೆ ಎಂದು ಪರಿಗಣಿಸಿದಾಗ ಮಾತ್ರ ಹೆಚ್ಚು ಅರ್ಥಪೂರ್ಣ ವಾಗಿರುತ್ತದೆ.
ಒಂದು ಸಾಂಪ್ರದಾಯಿಕ ಕಾವ್ಯವು ಗತಕಾಲದ ಮೌಲ್ಯಗಳನ್ನು, ಘಟನೆಗಳನ್ನು ಹಾಗೂ ಕಾಲಪ್ರವಾಹವನ್ನು ಬದಲಾಯಿಸುತ್ತ ಹೋಗುತ್ತದೆ. ಹೀಗಾಗಿ ಅವು ಬರೀ ವಾಹನ ಪ್ರಬೇಧಗಳಲ್ಲ, ಬದಲಾಗಿ ಪೂರ್ಣತೆಯನ್ನು ಸಾಧಿಸುವ ವಾಹಿಕ ಪ್ರಭೇದಗಳು. ಮೌಖಿಕ ಕಾವ್ಯಗಳಲ್ಲಿ ವರ್ತಮಾನದ ಘಟನೆಗಳನ್ನು ಎಳೆದು ತರುವ ಕ್ರಿಯೆ ಒಂದೇ ನಡೆದಿರುವುದಿಲ್ಲ. ಬದಲಾಗಿ ಭೂತದ ಘಟನೆಗಳನ್ನು ವರ್ತಮಾನದ ಮೌಲ್ಯಗಳೊಂದಿಗೆ ನೋಡುವ ಕಾರ್ಯವೂ ನಡೆದಿರುತ್ತದೆ. ಹೀಗಾಗಿ ಸಮಯದ ಪರಿಕಲ್ಪನೆಯು ಕೂಡಾ ಹಿಂದು-ಮುಂದಾಗಿ ಕೊನೆಗೆ ಸಮಕಾಲೀನವಾಗುತ್ತದೆ. ಮೌಖಿಕ ಕಾವ್ಯಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬೆಳೆದ ಪಾತ್ರಗಳು ಇರುವುದಿಲ್ಲ. ದೇವತೆಗಳೂ ಕೂಡ ಮೌಲ್ಯಗಳ ಸಂಪೂರ್ಣ ಪ್ರತಿನಿಧಿಗಳಲ್ಲ. ಅವು ಕೂಡಾ ಅಪಕ್ವ, ಅಪೂರ್ಣ ಹಾಗೂ ಬೆಳವಣಿಗೆಯ ಹಂತದಲ್ಲಿರುವವೇ ಆಗಿರುತ್ತದೆ. ಕೆಲವು ಬಾರಿ ಈ ದೇವತೆಗಳು ಕೂಡಾ ಮನುಷ್ಯರ ಇಲ್ಲವೆ ರಾಜರ ಪರ ವಹಿಸುವ ಸಾಧ್ಯತೆಗಳಿವೆ. ಅವು ಕೂಡಾ ಯಾವುದೇ ನೈತಿಕ ಮಾರ್ಗವನ್ನು ಅನುಸರಿಸುವುದಿಲ್ಲ.
ಸಾಂಪ್ರದಾಯಿಕ ಮಹಾಕಾವ್ಯಗಳಲ್ಲಿ ಜ್ಞಾನದ ಬದಲಾಗಿ ನೆನಪು ಅತಿ ಮುಖ್ಯವಾದ ಪಾತ್ರವನ್ನಾಡುತ್ತದೆ. ಮತ್ತು ಅದುವೇ ಸೃಜನಶೀಲ ಭಾವಗಳ ಶಕ್ತಿಯ ಹಿಂದಿನ ಆಕರ. ಇದು ಸ್ಮರಣೆಯ ಮೇಲೆ ಅವಲಂಬಿಸಿರುವುದರಿಂದ ವರ್ತಮಾನದಿಂದ ಪ್ರತ್ಯೇಕಿಸಲ್ಪಟ್ಟಿರುತ್ತದೆ. ಆದರೆ ಮೌಖಿಕ ಕಾವ್ಯಗಳಲ್ಲಿ ವರ್ತಮಾನದ/ನೆನಪು ಹಾಗೂ ಜ್ಞಾನಗಳೆರಡೂ ಸೃಜನಶೀಲ ಸಂವೇದನೆಯನ್ನು ಸಾಧಿಸುತ್ತವೆ. ವೈಯಕ್ತಿಕ ಹಾಗೂ ವ್ಯಕ್ತಿಯ ದೃಷ್ಟಿಕೋನಗಳನ್ನು ಸ್ವಭಾವತಃ ಕಾವ್ಯವು ಸಮ್ಮತಿಸುವುದಿಲ್ಲ. ಯಾಕೆಂದರೆ ಅದು ಮೂಲತಃ ಧಾರ್ಮಿಕ ಭಯದಿಂದ ಮುಕ್ತ, ಪವಿತ್ರ ಹಾಗೂ ಪೂರ್ಣಪ್ರಮಾಣದಲ್ಲಿ ಸಾಂಪ್ರದಾಯಿಕವಾಗಿರುತ್ತದೆ. ಆದರೆ ವ್ಯಕ್ತಿಗತ ದೃಷ್ಟಿಕೋನ, ಹೊಸ ಹೊಳಹುಗಳಿಗೆ ಜನಪದ ಕಾವ್ಯಗಳಲ್ಲಿ ಅವಕಾಶವಿದೆ. ಯಾಕೆಂದರೆ ಜನಪದ ಕಾವ್ಯವು ವ್ಯಕ್ತಿಗತ ಬೆಳವಣಿಗೆಯ ಹಾಗೂ ಅಭಿವ್ಯಕ್ತಿಯ ಪ್ರತಿ ಸಂದರ್ಭದಲ್ಲಿಯೂ ಬದಲಾವಣೆಯಾಗುತ್ತಲೇ ಇರುತ್ತದೆ. ಯಾಕೆಂದರೆ ಅಭಿನಯದ ಪ್ರತಿ ಸಂದರ್ಭದಲ್ಲಿಯೂ ಅದು ಪೂಜಿಸಲ್ಪಡುತ್ತದೆ. ಕೃತಿಯ ಚೌಕಟ್ಟಿನೊಳಗೆ ಎಷ್ಟಾದರೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ತೋರಿಸಬಹುದು. ಹೀಗಾಗಿ ಇಲ್ಲಿಯ ಭಾಷೆ ನಿರ್ಜೀವವು ಅಲ್ಲ ಅಥವಾ ಅಪರಿಚಿತವೂ ಅಲ್ಲ.
ಕಾವ್ಯದ ಪ್ರವಾಸ
ಏಳೆಂಟು ದಶಕಗಳ ಸ್ವಾತಂತ್ರ್ಯೋತ್ತರದ ಕಾಲವನ್ನು ಉರುಳಿಸಿದ್ದೇವೆ. ತುಕ್ಕು ಹಿಡಿದ ಸಾಮಾಜಿಕ ವ್ಯವಸ್ಥೆಗಳಲ್ಲಿಯೇ ಉಳಿದ ನಮ್ಮ ಕಾವ್ಯವನ್ನು ಓದಿದ್ದೇವೆ. ಹೀಗೆಲ್ಲ ಓದುತ್ತಿದ್ದಾಗ ಸ್ವಾತಂತ್ರ್ಯದ ಬಾವುಟವನ್ನು ಹಾರಿಸಲು ನಮ್ಮ ಕೈಗಳು ಏಳುವುದಿಲ್ಲ. ಸಾರೆ ಜಹಾಂಸೆ ಅಚ್ಚಾ ಶಬ್ದಗಳ ಜಾಲ ಎನಿಸುತ್ತದೆ, ಉದಯವಾಗಲಿ ನಮ್ಮ ಚೆಲುವ ಕನ್ನಡ ಕಾವ್ಯ ಎಂದು ತಿದ್ದಿ ಪ್ರಾರ್ಥಿಸಬೇಕಾಗುತ್ತದೆ. ರಾಜಾಶ್ರಯದ ಕಾಲ ಬದಲಾದರೂ ನಮ್ಮ ಕವಿಗಳಲ್ಲಿ ಜಾತಿ, ಮತ, ಅಧಿಕಾರ, ಪ್ರಶಸ್ತಿ-ಪ್ರಚಾರಗಳ, ಆಶ್ರಯದ ಹಂಬಲ ಕಡಿಮೆಯಾಗಲಿಲ್ಲ ಎನಿಸುತ್ತದೆ. ಕವಿ, ಕಾವ್ಯ, ಕವನ ಸಂಕಲನ, ಕವಿಗೋಷ್ಠಿ ಎಲ್ಲಾ ಒಂದು ರೀತಿಯ ಹೈಡ್ರಾಮಾ ಎನ್ನಿಸುತ್ತವೆ.
ಒಂದು ಕಡೆ ಸಾವಿರ-ಸಾವಿರ ಸಂಖ್ಯೆಯಲ್ಲಿ ಬರುವ ಕವನ ಸಂಕಲನಗಳು, ಇನ್ನೊಂದು ಕಡೆಗೆ ನೆನಪಿನಲ್ಲುಳಿಯದ, ಮನ ಸೆಳೆಯದ ಒಂದು ಕವನ, ಹೀಗಾಗಿ ವರ್ತಮಾನದಲ್ಲಿ ಕಾವ್ಯ ಸಾಧನೆಗಿಂತ ಯಾವುದು ಕಾವ್ಯ? ಯಾರು ಕವಿಗಳು? ಎಂಬುವವೇ ಗಮನಾರ್ಹ ಪ್ರಶ್ನೆಗಳಾಗಿವೆ.
ಕಾವ್ಯವನ್ನು ಕುರಿತು, ಅದರ ಪೂರ್ವಾಪರವನ್ನು ಕುರಿತು ಚಿಂತಿಸುವುದು ನಮ್ಮ ಬದುಕಿನ ಬಗೆಗೆ ಚಿಂತಿಸಿದಂತೆಯೇ. ಮಾನವ, ಪಶು-ಪಕ್ಷಿ, ಗಿಡ-ಮರಗಳ ಜೀವ ಸಂಚಲನೆಯೊಂದಿಗೆ ಪ್ರಾರಂಭವಾದ ಕಾವ್ಯದ ಪ್ರವಾಸ ನಮ್ಮಷ್ಟೇ ಹಳೆಯದಾದುದು. ಆಕೃತಿ ಪಡೆಯದ, ಹೆಸರಿಸಲಾಗದ, ಬರೀ ಧ್ವನಿಯಿಂದ, ಶಬ್ದದಿಂದ, ಸಂಕೇತದಿಂದ ಗುರ್ತಿಸುವುದರಿಂದ ಹಿಡಿದು ದೊಡ್ಡ, ಅರ್ಥ ಜಗತ್ತಿನ ಕಾವ್ಯಗಳವರೆಗೂ ಕಾವ್ಯದ ಪ್ರಸ್ತುತ ವಿಸ್ತೃತಲೋಕ. ಕಾವ್ಯದ ಸಂಪೂರ್ಣ ಗಂಭೀರತೆಯನ್ನು, ಚಿಂತನೆಯ ಆಳವನ್ನು ಗರ್ಭೀಕರಿಸಿಕೊಳ್ಳದ ಯಾವುದೇ ವ್ಯಾಖ್ಯಾನ ಕಾವ್ಯದ ಬಗೆಗಿನ ಬಹಳಷ್ಟು ತೇಲು-ತೇಲಾದ ಮಾತಾಗುತ್ತದೆ. ಕಾವ್ಯ ಬರೀ ಸುಂದರವಾಗಿ, ಪರಿಣಾಮಕಾರಿಯಗಿ ಅಭಿವ್ಯಕ್ತಿಸುವ ಒಂದು ಯಾಂತ್ರಿಕ ಕಾರ್ಯವಷ್ಟೇ ಅಲ್ಲ, ಇದನ್ನು ಮೀರಿದ ಗಹನ ನೆಲೆಗಳನ್ನು ಕಾವ್ಯ ಹೊಂದಿದೆ.
ಜೀವನವನ್ನು, ನಿಸರ್ಗವನ್ನು, ದೇವರನ್ನು ಕುರಿತು ಮಾಡುವ ಪ್ರತಿ ವ್ಯಾಖ್ಯಾನವು ಎಷ್ಟು ಅಪೂರ್ಣವೋ ಕಾವ್ಯದ ಬಗೆಗಿನ ವ್ಯಾಖ್ಯಾನವೂ ಅಷ್ಟೇ ಅಪೂರ್ಣ. ಕಾವ್ಯ ನದಿಯಂತೆ, ಸಮುದ್ರದಂತೆ, ಪಕ್ಷಿಯಂತೆ, ಆಕಾಶ-ಭೂಮಿಯಂತೆ, ಫಲಭಾರದಿಂದ ಬಾಗಿದ ಮರದಂತೆ, ಗಾಳಿಯಲ್ಲಿ ತೇಲಿ ಬರುವ ಪರಿಮಳದಂತೆ. ಇಲ್ಲಿ ಪೂರ್ಣತೆಯ ಸಾಧನೆ ಮೂರ್ಖತನದ ವಾದ, ಪ್ರತಿ ಪ್ರಚಲಿತ ಕಾವ್ಯ, ಪರಂಪರೆಯ ಬಿಳಿಲುಗಳ ನೆರಳಿನ ಕೆಳಗಡೆಯೇ ಬೆಳೆದಿರುತ್ತದೆ. ಅದೇ ತೆರನಾಗಿ ಭವಿಷ್ಯದ ಆಶೋತ್ತರಗಳನ್ನು ಇರಿಸಿಕೊಂಡಿರುತ್ತದೆ. ರಮ್ಯವಾದಿಗಳು ಒಂದು ನಿಶ್ಚಿತ ಕಾಲದಲ್ಲಿ ಬದುಕಿದ್ದರೂ ಅವರ ಮನಸ್ಸಿನ ಓಘವೆಲ್ಲವೂ ಹಿಮ್ಮುಖವಾಗಿತ್ತು. ಹೀಗೆ ಘಂಟೆಯೊಳಗಿನ ಲೋಲಕದಂತೆ ಹೊಯ್ದಾಡುವ ಕವಿ ಮನಸ್ಸು ಮತ್ತು ಕಾವ್ಯ ಯಾವಾಗಲೂ ಅನಿಶ್ಚಿತ ಕಾಲಕ್ಕಾಗಿ ನಿಶ್ಚಿತವಾಗಿರುತ್ತದೆ. ವಚನಗಳು ಇಂದಿಗೂ ಪ್ರಸ್ತುತ, ಕಾವ್ಯದೊಳಗಿನ ನಮ್ಮ ಪುಷ್ಪಕ ವಿಮಾನಗಳು ಈಗ ಪ್ರಚಲಿತ, ಹೀಗೆ ಎಲ್ಲವೂ ಹಿಂದು-ಮುಂದು, ಹಿಗ್ಗು-ಮುಗ್ಗು.
ಸಂದರ್ಭವನ್ನು ವಿರೋಧಿಸಿ, ಹೊಸದೇನನ್ನೋ ಸ್ಥಾಪಿಸುತ್ತೇವೆ ಎನ್ನುವುದು ಪ್ರತಿ ಬರಹಗಾರನ ಆಂತರಿಕ ಹವಣಿಕೆ. ಕಾವ್ಯದಿಂದ ನಾನೇನೂ ಸಾಧಿಸಲಾರೆ ಎಂದು ಯಾರೂ ಬರೆಯ ಹೊರಟವರಲ್ಲ. ಆರ್ಟ್ ಫಾರ್ ಆರ್ಟ್ ಸೇಕ್ ಎನ್ನುವ ವಾದ ಎಷ್ಟೇ ಬಲಿಷ್ಟವಾಗಿದ್ದರೂ ಈ ರೀತಿ ಪ್ರತಿಪಾದಿಸುವ ಬರಹಗಾರರೂ ಕೂಡಾ ಕನಿಷ್ಟ ತಮ್ಮ ಆತ್ಮತೃಪ್ತಿಯನ್ನಾದರೂ ಅದರಿಂದ ಸಾಧಿಸಲೆಂದೇ ಹೊರಟವರು. ಮನುಷ್ಯನ ಪ್ರತಿ ಕ್ರಿಯೆಯೂ ಉದ್ದೇಶಿತ. ಹಾಗೆಯೇ ಕಾವ್ಯವೂ ಪ್ರಾಥಮಿಕ ಹಂತದಲ್ಲಿ ಒಂದು ಕ್ರಿಯೆ ಆಗಿರುವುದರಿಂದ ಇದು ಉದ್ದೇಶಿತವೇ.
ಸಮಕಾಲೀನ ಅಥವಾ ಪ್ರಚಲಿತ ಕನ್ನಡ ಕಾವ್ಯ ಇನ್ನೂ ಒಂದು ನಿಶ್ಚಿತ ರೂಪವನ್ನು ತಾಳದೆ, ನಿರಾಕಾರದ ಅಥವಾ ಅಸ್ಪಷ್ಟತೆಯ ಆಕಾರದಲ್ಲಿ ಉಳಿಯಬೇಕಾದರೆ ಕಾವ್ಯದಿಂದ ಏನನ್ನು ನಿರೀಕ್ಷಿಸಬೇಕು ಮತ್ತು ಏನನ್ನು ನಿರೀಕ್ಷಿಸಲಾಗದು ಎಂಬುದರ ಬಗೆಗೆ ಒಂದು ಸ್ಪಷ್ಟ ತಿಳುವಳಿಕೆ ಇಲ್ಲದೇ ಇರುವುದು ಎಂದು ನನ್ನ ಅಭಿಮತ. ಹಾಗೆ ನೋಡಿದರೆ ಇದು ಅತ್ಯುತ್ತಮ ಕವಿಗಳನ್ನು ಹೊಂದಿರುವ, ಆದರೆ ಉತ್ತಮ ಕವನಸಂಕಲನಗಳನ್ನು ಹೊಂದಿರದ ಯುಗ.
ಕಾವ್ಯ ಅಖಾಡವಲ್ಲ
ಪರಂಪರೆಯ ಹಿನ್ನೆಲೆಯಿಂದ ನೋಡುವುದಾದರೆ ಒಟ್ಟು ಭಾರತೀಯ ಕಾವ್ಯವೇ ಪಾರ್ಶ್ವವಾಯು ಪೀಡಿತವಾಗಿದೆ. ಅದರಲ್ಲೂ ಕನ್ನಡ ಕಾವ್ಯ ರೋಡ್ ನಾಟ್ ಟೇಕನ್ ಹಂತದಲ್ಲಿದೆ. ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯು ಪ್ರಾರಂಭವಾದ ೨ನೇ ಶತಮಾನದಲ್ಲಿಯ ಕಾವ್ಯದ ತಹತಹಿಕೆಯಾಗಲಿ, ೯ ಮತ್ತು ೧೦ನೇ ಶತಮಾನದಲ್ಲಿಯ ಆರೋಗ್ಯಕರ ಬೆಳವಣಿಗೆಯಾಗಲಿ, ೧೧ ಮತ್ತು ೧೨ನೇ ಶತಮಾನದಲ್ಲಿಯ ಜನಪರ ಹೊಸತನಗಳಾಗಲಿ, ೧೩ನೇ ಶತಮಾನದ ಸೂಫಿಗಳ ನಿತಾಂತತೆಯಾಗಲಿ ಇಪ್ಪತ್ತನೆಯ ಶತಮಾನದಲ್ಲಿಯ ಮಹಾಕಾವ್ಯವನ್ನು ಕೆಣಕಿ ನೋಡುವ ಎದೆಗಾರಿಕೆ ಯಾಗಲಿ, ನವೋದಯ ಮತ್ತು ನವ್ಯೋತ್ತರದವರ ಪರೀಕ್ಷಾ ದೃಷ್ಟಿಯಾಗಲಿ ಮತ್ತು ಪ್ರಗತಿಶೀಲದವರ ಸಮಾಜಪರ ದೃಷ್ಟಿಕೋನಗಳಾಗಲಿ, ಪ್ರಚಲಿತ ಕನ್ನಡ ಕಾವ್ಯದಲ್ಲಿ ನೋಡ ಸಿಗದು.
ಕವಿಗಳ ಪಟ್ಟಿಯನ್ನೇ ಮಾಡಿದರೂ ಕೂಡ ಅವೆಲ್ಲವುಗಳಲ್ಲಿ ಆಪತ್ಕಾಲೀನ ಕವಿಗಳು ಮತ್ತು ಆಪತ್ಕಾಲೀನ ಕವಿತೆಗಳು ಎಂದು ಉದಾಸೀನ ತಾಳಬಹುದಾದಷ್ಟು ಗಟ್ಟಿತನವಿದೆ. ದಲಿತದ ಸೋಗಲಾಡಿತನ, ಬಂಡಾಯವೆಂಬ ಬುಡವಿಲ್ಲದ ಮಾಸಲು ಚಳುವಳಿ, ಎಲ್ಲಿಯೂ ಕೆನೆಗಟ್ಟದೆ ಉಳಿದ ಉಪಮೆಗಳು ಇವುಗಳೊಂದಿಗೆ ನಡೆದ ಪ್ರತಿಮಾವಾದ, ಸಂಕೇತವಾದ, ಅಸ್ತಿತ್ವವಾದ ಮತ್ತು ನವ್ಯವಾದದ ಅನುಕರಣೆ ಎಲ್ಲ ಮ್ಯೂಸಿಯಂದ ಚಿತ್ರಗಳು.
ನಮ್ಮೆಲ್ಲ ಸೃಜನಶೀಲ ಕ್ರಿಯೆಗಳಲ್ಲಿಯೇ ಕಾವ್ಯ ಮನಸ್ಸಿಗೆ ತೀರ ಹತ್ತಿರವಾದ ಒಂದು ಪ್ರಕಾರ. ನಮ್ಮ ಕನವರಿಕೆ, ಕನಸು, ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಗಳು ಹೊರಬರಲು ಇರುವ ಒಂದು ಸಮರ್ಥ ಪ್ರಕಾರ. ಕಾವ್ಯ ಎಂದರೆ ಪೂರ್ವ ಕವಿಗಳಿಂದ ನಿರ್ಮಿತವಾದ ಕಾವ್ಯೇತಿಹಾಸಗಳ ಅಧ್ಯಯನ. ಕವಿ ಪ್ರತಿಭೆ ಈ ಸಂಸ್ಕಾರ ವಿಶೇಷದಿಂದ ಪುಷ್ಟವಾಗದಿದ್ದಲ್ಲಿ ಪುಟವೇರಲಾರದು. ಉತ್ತಮ ಕವಿ-ಕೃತಿ ಈ ಅನುಭವಗಳ ಪರಿಪಾಕದಿಂದ ಮೂಡಿದ ಕಾರಣ ಘನವಾಗುತ್ತವೆ, ಮಾನ್ಯವಾಗುತ್ತವೆ. ಕವಿ ಸಮಯವನ್ನು ಕುರಿತು ಹೇಳಿದ ಈ ಎಲ್ಲ ಸಾಲುಗಳು ಕಾವ್ಯ ಬೆಳೆಯಬೇಕಾದ ರೀತಿಯನ್ನು ಸೂಚಿಸುತ್ತವೆ. ಅಂದ ಮಾತ್ರಕ್ಕೆ ಕಾವ್ಯ ಕೇವಲ ಪ್ರಯೋಗಗಳ ಹೆಣಭಾರ ಹೊರಲು, ಸಿದ್ಧಾಂತಗಳನ್ನು ಉದ್ದೇಶಪೂರ್ವಕ ತೋರಲು, ವಾದಗಳ ವೈರುಧ್ಯ ತೋರಿಸಲು ಕಾವ್ಯಕ್ಷೇತ್ರ ಒಂದು ಅಖಾಡ ಅಲ್ಲವೇ ಅಲ್ಲ.
ಪ್ರಯೋಗಶೀಲತೆ ಎನ್ನುವುದು ಕಾವ್ಯದ ಒಳ ನಿಧಾನಕ್ಕೆ ಅನ್ವಯಿಸಬೇಕಾದುದು. ಅದೂ ಯುಗಧರ್ಮದ ಮೂಲಕ ಲೇಖಕನ ಮನಸ್ಸಿನಿಂದ ಒಡಮೂಡಬೇಕಾದ ಅಂಶ. ಕವಿ ಬದುಕಿದ ಕಾಲದ ಬೆಳವಣಿಗೆಗಳು ಕವಿಯ ಬೌದ್ಧಿಕ ಆಳ, ಕವಿಯ ವೈಯಕ್ತಿಕ ಆಗುಹೋಗುಗಳು ಈ ಎಲ್ಲವೂ ಕಾವ್ಯದ ಭಾಗಗಳೇ ಹೊರತು ಅವೇ ಇಡೀ ಕಾವ್ಯವಲ್ಲ. ಕಾವ್ಯ ಕವಿಯೊಬ್ಬ ಜಗತ್ತನ್ನು ಪ್ರೀತಿಸುವ, ದ್ವೇಷಿಸುವ, ನೋಡುವ ರೀತಿಯೇ ವಿನಃ ವಿಮರ್ಶಿಸುವ ಮಾರ್ಗವಲ್ಲ.
ಕವಿ, ಕಾಲದ ಗರ್ಭದೊಳಗಿನ ಆಗು-ಹೋಗುಗಳ ಕೂಸಷ್ಟೇ ಅಲ್ಲ, ಅವುಗಳನ್ನು ಮೀರಿದ ಒಂದು ಅನಿರ್ಭಂದಿತ ಮನಸ್ಸು ಎಂದು ಒಪ್ಪುವುದಾದರೆ ಆಕ್ರೋಶದ ಆಯುಧಕ್ಕೆ ಬಲಿಯಾದ ಶಬ್ದಸಾಲು ಗಳಾಗುವ ಬದಲಾಗಿ ನವಿರಾದ ಸಂಬಂಧಗಳನ್ನು ಸಾಬೀತುಗೊಳಿಸುವ ಅದ್ಭುತ ಕವನಗಳಾಗುತ್ತವೆ.
ಹೀಗೆ ಒಂದೊಂದು ಸಮಯದಲ್ಲಿ ಉದ್ದೇಶಪೂರಿತ ಕಾವ್ಯ ಎನ್ನುವ ರೀತಿ ಕಾವ್ಯ ಹುಟ್ಟಿ ಬಂದರೂ ಕೂಡ ಕೆಲವು ಸರ್ವಕಾಲಿಕ ಪ್ರತಿಭೆಗಳನ್ನು ಕೂಡ ಅದರೊಳಗೆಯೇ ನಾವು ನೋಡಬಹುದು. ಅವರ ಆ ವಿಶಾಲ ಚಿಂತನೆಗಳನ್ನು, ಭಾವನೆಗಳನ್ನು ಅನುಭವಿಸಬಹುದು.
ಪ್ರಚಲಿತ ಕಾವ್ಯವನ್ನೆಲ್ಲ ಚರ್ಚಿಸುವುದಾದರೆ ಸಿಗುವ ಫಲಿತಾಂಶ ಇನ್ನೂ ಚಿಂತಾಜನಕ. ಯಾಕೆಂದರೆ ನಮ್ಮ ಕಾವ್ಯ ಮತ್ತು ಕವಿಗಳು ಮುಗ್ಧತೆಯ ಎಲ್ಲಾ ಮೆಟ್ಟಿಲುಗಳನ್ನು ದಾಟಿ ರಾಜಕಾರಣ, ಸ್ವಾರ್ಥ, ಸ್ವಜಾತಿಯ ಗುರಿಗಳತ್ತ ದಾಪುಗಾಲು ಹಾಕುತ್ತಿದ್ದಾರೆ. ಹಿಂದಿನ ಕಾವ್ಯ ಸಂದರ್ಭವನ್ನು ಪ್ರಯೋಗ, ಪ್ರಾವೀಣ್ಯ ಮತ್ತು ವಾದಗಳ ಹಿನ್ನೆಲೆಯಲ್ಲಿ ಗುರ್ತಿಸಿದಂತೆ ಪ್ರಚಲಿತ ಕಾವ್ಯವನ್ನು ಮತ್ತು ಕವಿಗಳನ್ನು ೧. ರಾಜ್ಯೋತ್ಸವ ಕವಿಗಳು ೨. ಆಪತ್ಕಾಲೀನ ಕವಿಗಳು ೩. ಸಮ್ಮೇಳನ ಕವಿಗಳು ೪. ಸರ್ಕಾರಿ ಕವಿಗಳು ಎಂದು ನಾಲ್ಕು ಮುಖ್ಯ ಪ್ರಕಾರಗಳಲ್ಲಿ ವಿಂಗಡಿಸಬಹುದಾಗಿದೆ. ಈ ವಿಂಗಡನೆ ಒಂದು ತಳ್ಳಲಾರದ ಸತ್ಯವಾಗಿದ್ದು, ಕಳೆದ ಮೂವತ್ತು ವರ್ಷಗಳಿಂದ ನಮ್ಮ ಕಾವ್ಯ ಕೃಷಿಯನ್ನು ಹಾಳುಗೆಡವುತ್ತಿದ್ದರೂ ಕೂಡ, ಪರಾಕು ಹೇಳುವುದರಲ್ಲಿಯೇ ಮಗ್ನರಾದ ನಮ್ಮ ಹಿರಿ-ಕಿರಿಯ ವಿಮರ್ಶಕರಿಗೆ ಇನ್ನೂ ಅದ್ಭುತವಾದ, ಗಟ್ಟಿಯಾದ, ಶತಮಾನದ ಅಂಚಿನ, ಮಿಂಚಿನ ಕವಿಗಳು ಸಿಗುತ್ತಿದ್ದಾರೆ ಎಂದು ವಿಷಾದದಿಂದ ಹೇಳಬೇಕು. ಆತ ಬರೀ ಒಬ್ಬ ಕವಿ ಎನ್ನುವುದೇ ಆತನನ್ನು ಅಂತಿಮವಾಗಿ ಗುರುತಿಸುವ ರೀತಿಯಾಗಬೇಕು. ಆದರೆ ನಮ್ಮ ಪ್ರಚಲಿತ ಕವಿಗಳ ಕಾವ್ಯ ನಮ್ಮ ರಾಜಕಾರಣಿಗಳ ಭಾಷಣಗಳನ್ನು ನಾಚಿಸುವಂತಿದೆ.
ಆತ್ಮದ ಅಳಲು: ದೌರ್ಬಲ್ಯದ ಸಾಲು
ನಮ್ಮದು ಪಾಶ್ಚಾತ್ಯ ಕಾವ್ಯ ಮೀಮಾಂಸೆಯಲ್ಲ, ಕವಿಗಿಂತಲೂ ಎಲ್ಲ ಕಾಲಕ್ಕೂ ಕಾವ್ಯ ದೊಡ್ಡದು ನಮ್ಮ ಪಾಲಿಗೆ. ಪಾಶ್ಚಾತ್ಯ ಸಾಹಿತ್ಯ ಇತಿಹಾಸದಲ್ಲಿ ಕವಿ ಮತ್ತು ಅವನ ಕಾವ್ಯವನ್ನು ಸಮಸಮನಾದ ಒತ್ತು ಕೊಟ್ಟು ಓದಿದರೂ ಕವಿಯ ವೈಯಕ್ತಿಕ ಬದುಕನ್ನು ಬದಿಗಿಟ್ಟು ಆತನ ಕಾವ್ಯವನ್ನು ಕುರಿತು ಚಿಂತಿಸುವ ಮಾನಸಿಕ ಸ್ಥಿತಿ ಉಂಟು. ಪಾಶ್ಚಾತ್ಯ ಓದುಗನಲ್ಲಿ ಈ ಜಾಣ್ಮೆ ಮೈಗೂಡಿದೆ. ಆದರೆ ಭಾರತೀಯ ಸಂದರ್ಭದಲ್ಲಿ ಬೇರೆ. ಬರೀ ರಾಜರು, ದೇವರು, ಧರ್ಮಗಳನ್ನು ವಿವರಿಸುತ್ತ ಬರೆದ ನಮ್ಮ ಹಿರಿಯ ಕವಿಗಳು ಲೌಕಿಕವಾದವುಗಳನ್ನು ಕಾವ್ಯದಲ್ಲಿ ಸೇರಿಸದೆ ಸಂತಸದೃಶ್ಯರಾಗಿಬಿಟ್ಟರು. ಈಗ ಕಾಲ ಬದಲಾಗಿದೆ ಎಂದು ಕೆಲವು ಚಿಂತಕರ ವಾದ. ಕವಿಯ ವೈಯಕ್ತಿಕವಾದ ಶೋಕ, ಪ್ರೀತಿ, ಕೋಪ ಇತ್ಯಾದಿ ಭಾವನೆಗಳು ಲೌಕಿಕ ಭಾವಗಳು ಕಾವ್ಯವಾಗಬಲ್ಲವೆ? ಎಂಬುದು ಮುಖ್ಯವಾಗಿ ಇಲ್ಲಿ ಎತ್ತಲಾಗಿರುವ ಪ್ರಶ್ನೆ. ನಮ್ಮ ಕವಿಗಳು ಮುಕ್ತವಾದ ತಮ್ಮ ವೈಯಕ್ತಿಕ ವಿಷಯಗಳಲ್ಲಿಯೂ ಹೇಳಿಕೊಳ್ಳಬೇಕಾದ ಮುಕ್ತವಾದ ವೈಯಕ್ತಿಕ ವಿಷಯಗಳು ಮತ್ತು ಬಚ್ಚಿಡಬೇಕಾದ ವಿಷಯಗಳು ಎಂದು ಎರಡು ಭಾಗ ಮಾಡಿದ್ದಾರೆ. ತಾನು ದಾನಿಯಂತೆ ಮಾಡಿದ ಘನಕಾರ್ಯಗಳನ್ನು, ತಾನು ಆದರ್ಶಮಾನವ ಎಂದು ಸಾಬೀತುಗೊಳಿಸಲು ಬೇಕಾದ ವಿಷಯಗಳನ್ನು ಬಚ್ಚಿಟ್ಟಷ್ಟು ತನ್ನ ಸಣ್ಣ-ಪುಟ್ಟ ಮಾನವೀಯ ಅಸಮರ್ಥತೆಗಳನ್ನೆಲ್ಲೂ ಹೇಳಿಕೊಳ್ಳಲಾರ.
ಕವಿಯೊಬ್ಬನಿಗೆ ಇರಬೇಕಾದ ನಿರೀಕ್ಷೆಗಳು ಅಶಾಸಿಕ. ಈ ಸಮಾಜದಿಂದ ಅವನಿಗಿರುವ ಸಣ್ಣ ಪುಟ್ಟ ನಿರೀಕ್ಷೆಗಳಂತೆಯೇ ಈ ಸಮಾಜಕ್ಕೂ ಅವನಿಂದ ಹಾಗೂ ಅವನ ಕಾವ್ಯದಿಂದ ಒಂದಿಷ್ಟು ನಿರೀಕ್ಷೆಗಳಿವೆ. ಅದಕ್ಕೆ ಗೊತ್ತಿಲ್ಲದೆಯೇ ಮೌಲ್ಯಗಳು ಮೌಲ್ಯಗಳ ಮರುಸ್ಥಾಪನೆಯನ್ನು ಸಮಾಜ ಕವಿ ಹಾಗೂ ಅವನ ಕಾವ್ಯದಿಂದ ನಿರೀಕ್ಷಿಸುತ್ತದೆ. ವ್ಯಕ್ತಿ ತಾನು ಸೋತ ಅಥವಾ ತಪ್ಪಿದ ಬದುಕಿನ ಸಂದರ್ಭಗಳಲ್ಲೆಲ್ಲ ಕಾವ್ಯದಿಂದ ಮಾರ್ಗದರ್ಶನವನ್ನು ನಿರೀಕ್ಷಿಸುತ್ತಾನೆ. ಶತಮಾನಗಳು ಉರುಳಿದರೂ ಕೂಡಾ ಕವಿಯೊಬ್ಬ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಜೀವನ ಮೌಲ್ಯಗಳ ಹರಿಕಾರನೇ, ದೇವಾಂಶ ಸಂಭೂತನೇ.
ಅದು ಪ್ರಚಲಿತ ಕಾಲವೋ, ಭೂತವೋ ಇಲ್ಲಾ ಬರಲಿರುವ ಭವಿಷ್ಯವೋ? ಕವಿಯೊಬ್ಬನ ಅಸ್ತಿತ್ವವನ್ನು ಕವಿಯೇ ಸಾರಿ ಹೇಳಬೇಕಿಲ್ಲ. ಬರಹಗಾರನೊಬ್ಬನಲ್ಲಿಯ ಮೊರಲ್ ಪ್ಯುರಿಟಿ(ಶೀಲ ಶುದ್ಧಿ) ಮತ್ತು ಇಂಟಲೆಕ್ಚುವಲ್ ಎಕ್ಸಲೆನ್ಸ್(ಪ್ರತಿಭಾ ಶ್ರೀಮಂತಿಕೆ) ಅವನನ್ನು ಯಾವ ಕಾಲಕ್ಕೂ ಎತ್ತಬಲ್ಲವು. ಆದರೆ ಮೂಲತಃ ಬರಹಗಾರನಾಗಲು ಹೊರಟ ಪ್ರತಿಯೊಬ್ಬನು ಯಾಕೆ ತಾನು ಈ ಕಾರ್ಯವನ್ನು ಎತ್ತಿಕೊಳ್ಳುತ್ತಿದ್ದೇನೆ? ಎಂಬ ಪ್ರಶ್ನೆ ಮಾತ್ರ ತನ್ನ ಮುಂದಿರಿಸಿಕೊಂಡಿರಬೇಕು.
ಆತ್ಮವಿಮರ್ಶೆ ಕವಿಯನ್ನು ಪ್ರಜ್ಞಾವಂತನನ್ನಾಗಿ ಮಾಡುವುದಲ್ಲದೇ ಅವನ ಬರಹವನ್ನು ಗಟ್ಟಿಗೊಳಿಸಬಲ್ಲದು, ಈ ಎಲ್ಲ ಪ್ರಕ್ರಿಯೆಗಳ ನಂತರವೂ, ತನ್ನೆಲ್ಲ ಪ್ರಾಮಾಣಿಕ ಪ್ರಯತ್ನದ ನಂತರವೂ ಆತನ ಸಮಕಾಲೀನ ಸಂದರ್ಭದಲ್ಲಿ ಕೆಲವು ಬಾರಿ ಆತನಿಗೆ ಯಾವುದೇ ಗಣನೀಯ ಸ್ಥಾನ ದೊರೆಯದೇ ಹೋಗಬಹುದು! ಸಾಹಿತ್ಯ ಇತಿಹಾಸದಲ್ಲಿ ಇಂಥದ್ದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಆದರೆ ಕಾಲದ ಪರ್ಯಟನ ನಾವು ತಿಳಿದಷ್ಟು ಕುರುಡಲ್ಲ. ಎಲ್ಲವೂ ಒಂದೊಂದು ಸಂದರ್ಭದಲ್ಲಿ ಪರೀಕ್ಷೆಗೊಳಪಡುತ್ತವೆ. ಅದು ಕೆಲವು ಬಾರಿ ನಮ್ಮ ಜೀವಿತಾವಧಿಯಲ್ಲಿ ಆಗಬಹುದು. ಇನ್ನೂ ಕೆಲವರ ಪಾಲಿಗೆ ಅವರ ಸಾವಿನ ನಂತರ ಬರಬಹುದು. ಖಡ್ಗಕ್ಕೂ ಲೆಕ್ಕಣಿಕೆಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ನಾವು ಮೊದಲಿನಿಂದಲೂ ವಾದಿಸುತ್ತ ಬಂದಿದ್ದೇವೆ. ಅದೇ ರೀತಿ ಕವಿಗೂ ಮತ್ತು ಯೋಧನಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬುದನ್ನು ನಾವಿಲ್ಲಿ ತಿಳಿಯಬೇಕು, ಲೌಕಿಕವಾದ ವಿಜಯಪತಾಕೆ ಎಲ್ಲ ಯೋಧರ ಕಣ್ಮುಂದೆಯೇ ಹಾರುವುದಿಲ್ಲ. ಅದು ಕೆಲವರ ಸಮಾಧಿಯ ಮೇಲೆ ಹಾರುತ್ತದೆ. ಹಾಗಂತ ಯಾವ ಯೋಧನೂ ಹಿಂದೇಟು ಹಾಕಲಾಗದು, ಹಾಗೆ ಕವಿಯೂ ಕೂಡ ಪ್ರಸಿದ್ಧಿ ಮತ್ತು ಪ್ರಚಾರದ ನಿರೀಕ್ಷೆಯಲ್ಲಿ ಏನೇನೋ ಮಾಡಲಾಗದು.
ನೆಮ್ಮದಿಗಾಗಿ ಓಡುವುದೆಲ್ಲಿ?
ಪ್ರಯೋಗಶೀಲತೆ ಕವಿಯ ಇನ್ನೊಂದು ಮುಖ. ಆತ ಸಾಮಾನ್ಯರಂತೆಯೇ ಸಾಗಬಹುದಾದಲ್ಲಿ ಕವಿಯನ್ನು ಪರಿಗಣಿಸಬೇಕಾದ ಪ್ರಮೇಯಗಳೇನೂ ಇಲ್ಲ. ಆತನ ಮಾತಿನಿಂದ ಬರಹದವರೆಗೆ, ವಿಚಾರದಿಂದ ಬದುಕಿನವರೆಗೆ, ಎಲ್ಲವೂ ಸ್ವಲ್ಪ ಅಸಾಂಪ್ರದಾಯಿಕ ಮತ್ತು ಭಿನ್ನ. ಅಂತಲೇ ಇಲ್ಲಿ ಹತ್ತಾರು ಕಾವ್ಯ ಪ್ರಕಾರಗಳು, ಸಾವಿರಾರು ಪ್ರತಿಮೆಗಳು, ನೂರಾರು ದಾರಿಗಳು ನಿರ್ಮಾಣವಾಗಿವೆ. ಹತ್ತೊಂಬತ್ತನೆಯ ಶತಮಾನದ ಅಂತ್ಯದವರೆಗೆ ಅಭಿಜಾತವಾದ, ರಮ್ಯವಾದ ಮತ್ತು ಅನಂತರ ಬಂದ ವಾಸ್ತವವಾದಗಳು ಕಾವ್ಯವನ್ನು ಕವಿದುಕೊಂಡವು. ಮೂಲತಃ ಕಾದಂಬರಿ ಮತ್ತು ಸಣ್ಣ ಕತೆಗಳಲ್ಲಿ ಹುಟ್ಟಿಕೊಂಡ ಪ್ರಗತಿವಾದ, ಚಿತ್ರಕಲೆಯಲ್ಲಿ ಹುಟ್ಟಿಕೊಂಡ ಭಾವ ಮುದ್ರಾವಾದಗಳೂ ನಮ್ಮ ಕಾವ್ಯವನ್ನು ಇನ್ನೂ ದಟ್ಟವಾಗಿ ಆವರಿಸಿಕೊಂಡವು. ಸಧ್ಯದ ಕಾವ್ಯದಲ್ಲಿಯ ಪ್ರಯೋಗಗಳನ್ನಂತೂ ಬರೆಯತೀರದು. ಮನೋಮುದ್ರವಾದ, ಪ್ರತಿಮಾವಾದ, ಸಂಕೇತವಾದ, ಅಸ್ತಿತ್ವವಾದ, ನವ್ಯವಾದ ಮತ್ತು ನವ್ಯೋತ್ತರವಾದಗಳೆಲ್ಲವೂ ನಮ್ಮ ಕಾವ್ಯದ ಗೂಡನ್ನು ಹೊಕ್ಕು, ಮೂಲಧ್ವನಿಯೆಂಬ ಹಕ್ಕಿಯನ್ನೇ ಹೊರಗೆ ಹಾಕಿವೆ. ನಮ್ಮ ಕಾವ್ಯಕ್ಕೂ ರಸಾಯನಶಾಸ್ತ್ರದ ಒಂದು ಸಮಸ್ಯೆಗೂ, ನಮ್ಮ ಕವನಗಳಿಗೂ ಆಫ್ರಿಕಾದ ರಸ್ತೆಯ ನಕ್ಷೆಗಳಿಗೂ, ನಮ್ಮ ಕವನಗಳಿಗೂ ವ್ಯಾಪಾರಿ ಭಾಷೆಗೂ ಯಾವುದೇ ವ್ಯತ್ಯಾಸ ಮಾಡಲಾಗದಷ್ಟು ಅಸಂಬದ್ಧತೆ ನಮ್ಮಲ್ಲಿ ಹುಟ್ಟಿದೆ.
ಥಟ್ಟನೆ ನಿಲ್ಲಿಸುವ, ನಿಬ್ಬೆರಗಾಗಿಸುವ, ಅನಿರ್ವಚನೀಯ ಧ್ವನಿಯನ್ನು, ಸುಖವನ್ನು ಆಲಿಸುವ, ಗೆಳೆಯನಂತೆ ಬಳಿಸಾರುವ ಲಕ್ಷಣ ನಮ್ಮ ಕಾವ್ಯದಲ್ಲಿ ಕಾಣಬೇಕು. ಸಹಜವಾಗಿ ಕಾವ್ಯ ಬರೆಯುತ್ತಲೇ ಒಂದು ಪ್ರಯೋಗ, ಮಾರ್ಗ ನಿರ್ಮಾಣವಾದರೆ ಬೇರೆ, ಆದರೆ ಮಾರ್ಗ ಮತ್ತು ಪ್ರಯೋಗಗಳಿಗಾಗಿಯೇ ಕಾವ್ಯ ಬರೆಯುವುದಾದರೆ ಅದಕ್ಕೇನು ಅರ್ಥ?
ಪ್ರಚಲಿತ ಕಾವ್ಯ ಎರಡು ಅತಿರೇಕಗಳ ಮಧ್ಯ ನರಳುತ್ತಿದೆ. ಒಂದೆಡೆ ಅತೀ ನಿಗೂಢವಾಗಿ ಯಾರಿಗೂ ತಿಳಿಯದಂತೆ ಬರೆಯುವುದೇ ಪ್ರೌಢಿಮೆ ಎಂದು ತಿಳಿದ ಬರಹಗಾರರ ಮಾರ್ಗ ಇನ್ನೊಂದು ಕಡೆ ಯಾವುದೇ ಮಾನಸಿಕ ಕ್ರಿಯೆಗೂ ಅವಕಾಶ ಸಿಗದೇ ಬಟಾಬಯಲಾಗಿ ನಮ್ಮ ಭಾವಬಡತನದ ಪ್ರತಿನಿಧಿಯಾಗಿ ನಿಲ್ಲುವ ಕಾವ್ಯ.
ಪ್ರಯೋಗಶೀಲತೆ ಎನ್ನುವುದನ್ನು ಕಾವ್ಯಕ್ಕೆ ಒಂದು ಫಾರ್ಮುಲಾದಂತೆ ಹೊರಗಿನಿಂದ ಅನ್ವಯಿಸಬೇಕಾದುದಿಲ್ಲ ಅಥವಾ ಕವಿಯೊಬ್ಬ ಪ್ರಯತ್ನಪೂರ್ವಕವಾಗಿ ತನ್ನ ಬರಹವನ್ನು ಅದಕ್ಕೆ ಒಳಪಡಿಸಬೇಕಾದ ತಂತ್ರವು ಅಲ್ಲ. ಕಾವ್ಯವನ್ನು ಗಾಳಿ, ಬೆಳಕು, ನೀರುಗಳಿಗೆ ಹೋಲಿಸುವುದಾದರೆ ಇವುಗಳನ್ನು ಕಟ್ಟುವುದು ಹೇಗೆ? ಇಲ್ಲವಾದರೂ ಕಾವ್ಯದ ಅನಂತರದ ಅವಧಿಯಲ್ಲಿ ಹುಟ್ಟಿಯೂ ಪ್ರಚಲಿತದಲ್ಲಿ ಕಾವ್ಯವನ್ನು ಅಳಿಸಿಯೇ ಬಿಡುವ ಹಂತದವರೆಗೆ ಬೆಳೆದಿರುವುದು ಒಂದು ದುರ್ದೈವ ಅಲ್ಲವೇ?
ನವ್ಯದ ಸಮಯದಲ್ಲಿ ಕನ್ನಡ ಕಾವ್ಯ ಪ್ರತಿಮಾವಾದದ ಕೆಟ್ಟ ಹಾವಳಿಗೆ ಬಲಿಯಾಯಿತು. ಅತೀ ತಾರ್ಕಿಕತೆಯೆಲ್ಲ ಕಾವ್ಯವಾಗಬೇಕು, ನನ್ನ ಮನಸ್ಸಿನೊಳಗಿನ ಸೆಮಿನಾರ್ ಎಲ್ಲ ಕವಿತೆಯಾಗಬೇಕು ಎಂಬ ಹುಮ್ಮಸ್ಸಿನಲ್ಲಿ ಹೊರಟ ನಮ್ಮ ಕಾವ್ಯ ಆಗಲೇ ಬುದ್ಧಿನಿಷ್ಟವಾಗಿದ್ದು ಬೌದ್ಧಿಕ ಚಮತ್ಕಾರವನ್ನು ಮೆರೆಯಲಾರಂಭಿಸಿತು.
ಸೃಜನಶೀಲತೆಯಲ್ಲಿ ತಾರ್ಕಿಕತೆ ಎನ್ನುವುದು ಮನಸ್ಸಿನ ಸುಪ್ತಸ್ತರದಲ್ಲಿ ಹರಿಯುವ ಒಂದು ನಿಶ್ಯಬ್ದ ಪ್ರವಾಹ. ಅದು ಶಬ್ದಶೀಲವಾದರೆ ಒಂದು ಕವನಕ್ಕೂ ಹಾಗೂ ಗಣಿತದ ಸಮಸ್ಯೆಗೂ ಯಾವುದೇ ವ್ಯತ್ಯಾಸ ಉಳಿಯಲಾರದು. ಪ್ರಯೋಗಶೀಲತೆಗೂ ನಮ್ಮದೇ ಆದ ಸಾಮಾಜಿಕ, ಸಾಂಸ್ಕೃತಿಕ ಒತ್ತಡಗಳಿರಬೇಕು. ಅವುಗಳಿಂದ ನಮ್ಮಲ್ಲೊಂದು ಆಯಾಮ ಹುಟ್ಟಿಕೊಂಡಿರಬೇಕು. ಅಂದಾಗ ಅದು ಬಾಳೀತು.
ಈ ಅರ್ಥದಲ್ಲಿ ಮನಸ್ಸು, ಭಾವನೆಗಳನ್ನು ಹೊರಗಿಟ್ಟು ಸಿದ್ಧವಾದ, ತಾರ್ಕಿಕತೆಗಳ ಇಟ್ಟಿಗೆಗಳ ಮೇಲೆ ಕಟ್ಟುತ್ತಿರುವ ಕಾವ್ಯ ಚಟುವಟಿಕೆ ನಿಲ್ಲಬೇಕಾಗಿದೆ. ಬದುಕು ಯಾಂತ್ರಿಕ ಅಭಿವ್ಯಕ್ತಿಗಳ ನೊಗಕ್ಕೆ ಹೆಗಲು ಕೊಟ್ಟಿತು. ಅದೇ ರೀತಿ ಕಾವ್ಯವೂ ಆಗಿಬಿಟ್ಟರೆ ನೆಮ್ಮದಿಗಾಗಿ ಓಡುವುದೆಲ್ಲಿ?
ಪ್ರಚಲಿತ ಕಾವ್ಯದ ಪ್ರಚಲಿತತೆ
ಕಾದಂಬರಿಯೋ, ಕಥೆಯೋ, ನಾಟಕವೋ ಅಥವಾ ಕಾವ್ಯವೋ ಅದರ ವರ್ತಮಾನವನ್ನು ಹಿಂಜಬಹುದು ವಿನಃ ಭವಿಷ್ಯವನ್ನು ನುಡಿಯಲಾಗದು. ಜೀವನದ ಎಲ್ಲಾ ಅನಿಶ್ಚಿತ ಗುಣಗಳು, ಲಕ್ಷಣಗಳು ಸಾಹಿತ್ಯ ಪ್ರಕಾರಗಳಿಗಿವೆ. ಇಲ್ಲಿ ಸಾಧ್ಯಾಸಾಧ್ಯತೆಯ ಮಾತು ಒಂದು ರೀತಿಯಲ್ಲಿ ಮೂರ್ಖ ನಾಟಕವಾದೀತು. ಪ್ರಚಲಿತ ಕಾವ್ಯದ ಪ್ರಚಲಿತತೆಯ ಪ್ರಶ್ನೆಯನ್ನೇ ಎತ್ತಿಕೊಂಡರೂ ಕೂಡ ಉತ್ತರ ಕ್ಲಿಷ್ಟವಾಗಿದೆ. ಓಬೆರಾಯನ ಧಾಟಿಯಲ್ಲಿ ಹಾಡಿದ್ದು, ಅಡ್ಡಗೋಡೆಯ ಮೇಲಿನ ದೀಪದ ಸುತ್ತ ಬರೆದದ್ದು ಕನ್ನಡ ಸಂಸ್ಕೃತಿ ಇಲಾಖೆ, ಪರಿಷತ್ತುಗಳ ಹಣ ನುಂಗಿ ಹಾಕಲು ಮುದ್ರಿಸಿದ ಕವನ ಸಂಕಲನಗಳೆಲ್ಲ ಇದುವರೆಗೆ ಪುರಸ್ಕರಿಸಲ್ಪಟ್ಟಿವೆ.
ಒಂದು ಮಾತನ್ನಿಲ್ಲಿ ಗಮನಿಸಬೇಕು. ಒಂದು ನಿಶ್ಚಿತ ವರ್ಷಗಳಲ್ಲಿ ಬಂದ ಸಂಕಲನಗಳನ್ನೆಲ್ಲ ಪ್ರಚಲಿತ ಕಾವ್ಯ ಎನ್ನಲಾಗದು. ಅಥವಾ ಯಾವುದೋ ಒಂದು ಅವಧಿಯಲ್ಲಿ ಕಾವ್ಯ ಬರೆಯಲ್ಪಟ್ಟಿದ್ದರೂ ಆ ವರ್ಷದ ಆಗು-ಹೋಗುಗಳ ದಾಖಲಾತಿ ಹೊಂದಿದ್ದೆಲ್ಲವನ್ನು ಪ್ರಚಲಿತ ಕಾವ್ಯ ಎನ್ನಲಾಗದು. ಕಾವ್ಯ ಎಲ್ಲ ಕಾಲಕ್ಕೂ ಪ್ರಾಂಜಲವಾಗಿದ್ದರೆ ಅದು ಪ್ರಚಲಿತವೆ. ಸರ್ವಕಾಲಕ್ಕೂ ಅದು ಪ್ರಚಲಿತ ಎನ್ನುವುದಾದರೆ ಇಲ್ಲಿ ಭವಿಷ್ಯದ ಪ್ರಶ್ನೆ ಎಲ್ಲಿಂದ ಬಂತು? ಆದರೆ ಪ್ರಶ್ನೆ ಇರುವುದು ಓದುಗರ ಮನಸ್ಸು ಮತ್ತು ಹೋಂ ಲೈಬ್ರರಿಗಳದ್ದು. ಎಲ್ಲದಕ್ಕೂ ಒಂದು ಮಿತಿ ಇರುವಂತೆ ಓದಿಗೂ ಮತ್ತು ಸಂಗ್ರಹಕ್ಕೂ ಒಂದು ಮಿತಿ ಇದೆ. ಹೀಗಾಗಿ ಬರುವ ನಮ್ಮ ಕಾವ್ಯಸಂಕಲನಗಳು ಮತ್ತು ಕವಿಗಳು ಈ ರೀತಿಯಾಗಿರಲಿ ಎಂಬ ನಿರೀಕ್ಷೆ ಮಾಡುವುದು ಸ್ವಾಭಾವಿಕವಾಗುತ್ತದೆ. ಪ್ರಚಲಿತ ಕಾವ್ಯವಾಗಿರಲಿ ಅಥವಾ ಯಾವುದೇ ಕಾಲದ ಕಾವ್ಯವಾಗಿರಲಿ ಅದರ ಅರ್ಥವೈಶಾಲ್ಯ ಹಾಗೂ ಆರೋಗ್ಯಕರ ಬೆಳವಣಿಗೆಗೆ ಈ ಕೆಲವು ನೀತಿಗಳನ್ನು ಅನುಸರಿಸಬೇಕೆನಿಸುತ್ತದೆ:
೧. ಮೂಲತಃ ಕವಿ ಮತ್ತು ಕಾವ್ಯವನ್ನು ಜಾತಿ, ಜನಾಂಗ ಮತ್ತು ವಾದಗಳ ಹಿನ್ನೆಲೆಯಲ್ಲಿ ಅಭ್ಯಸಿಸುವುದನ್ನು ನಿಲ್ಲಿಸಬೇಕು.
೨. ಯಾವೊಬ್ಬ ಕವಿಯನ್ನೂ ಯುಗಕವಿ, ಅಂತ್ಯಕವಿ, ಪ್ರಚಲಿತ ಕವಿ ಎಂಬ ಉಪಾಧಿಗಳ ಆಧಾರದ ಮೇಲೆ ನೋಡುವುದು ಸರಿಯಲ್ಲ.
೩. ಕವಿತ್ವವೇ ಒಂದು ಬೇರೆ ಲೋಕ ಹಾಗೂ ಮಾನಸಿಕ ಸ್ಥಿತಿಯನ್ನು ಸಂಕೇತಿಸುತ್ತಿರುವಾಗ ಯಾವುದೋ ಸರ್ಕಾರ ಅವನಿಗೆ ವಿಶೇಷ ಒತ್ತು ಕೊಡುವುದು ಸರಿಯಲ್ಲ.
೪. ಕವಿಗಳು ಶಾಸ್ತ್ರಜ್ಞರಲ್ಲ, ತಂತ್ರಜ್ಞರೂ ಅಲ್ಲ. ಹೀಗಾಗಿ ಯಾವುದೋ ಒಂದು ಚಳುವಳಿ, ವಾದ, ತಂತ್ರ ಎಲ್ಲೊ ಬೆಳೆಯಿತೆಂದು ಅದನ್ನು ನೇರವಾಗಿ ತಂದು ಅನ್ವಯಿಸುವುದು ಒಳಿತಲ್ಲ.
೫. ಕವಿ ಸಮಾಜ ಜೀವಿ, ಬರೆಯುವ ಕಾಲದುದ್ದಕ್ಕೂ ಯಾವ ರೀತಿ ಒಂದು ಸಂಕಲನ ಆತನ ತೀರ ವೈಯಕ್ತಿಕ ಆಸ್ತಿಯೋ ಬರೆದು ಮುಗಿಸಿದ ಆ ಕ್ಷಣದಿಂದ ಅಷ್ಟೇ ಅದು ಸಾರ್ವಜನಿಕ ಆಸ್ತಿ.
೬. ಪ್ರಾಮಾಣಿಕ ಕವಿಯೊಬ್ಬ ಎಂದೂ ಸಮನ್ವಯದ ಸಂತನಾಗಲು ಸಾಧ್ಯವಿಲ್ಲ. ಎಲ್ಲದಕ್ಕೂ ಆತ ಪ್ರತಿಕ್ರಿಯಿಸುವ ಮೊದಲ ಮನಸ್ಸು.
೭. ಇವೆಲ್ಲದರ ಜೊತೆಗೆ ಹಿರಿಯ ಕವಿಗಳು, ಕಿರಿಯ ಕವಿಗಳು ಎಂಬ ಬಣಗಳನ್ನು ಮಾಡದೆ ಎಲ್ಲರನ್ನು ಒಂದೇ ವೇದಿಕೆ ಮೇಲೆ ಸೇರಿಸುವ ಕಾರ್ಯವನ್ನು ಸಂಘ-ಸಂಸ್ಥೆಗಳು ಮಾಡಬೇಕು.
ಹೀಗೆ ಒಟ್ಟಾರೆ ಕಾವ್ಯ ಪ್ರಚಲಿತೆಯ ಅರ್ಥವನ್ನು ಪಡೆದುಕೊಳ್ಳಬೇಕಾದರೆ, ನಿಂತ ನೀರಾಗದೇ ನಿರಂತರತೆಯ ಸಂಕೇತವಾಗಿ ಉಳಿಯಬೇಕಾದರೆ, ಹಳತು-ಹೊಸತು ತಲೆಮಾರುಗಳ ಮಿಶ್ರಣ ವಾಗಬೇಕಾದರೆ ಈ ಕೆಲವು ನಿಯಮಗಳ ಪಾಲನೆ ಅವಶ್ಯ ಎನಿಸುತ್ತದೆ. ಇವೆಲ್ಲ ಒಂದು ಮನಸ್ಸಿನ ನಿರ್ದಿಷ್ಟ ಚರ್ಚೆ. ಇಂಥ ಸಾವಿರ-ಸಾವಿರ ಚರ್ಚೆಗಳು ಎಲ್ಲ ಕಾಲಕ್ಕೂ ನಡೆದಿವೆ.
ಕವಿತೆಗೆ ಸಾವಿಲ್ಲ
ನಮ್ಮ ಕವಿಗೋಷ್ಠಿಗಳು ಮುಗಿಯುವುದರಲ್ಲಿ ಕವಿಗಳು ಬರಬೇಕು. ಕವಿತೆಗಳ ಕೇಳಿಸಬೇಕು ಎನ್ನುವ ಆಶಯ ನನ್ನದು, ನಿಮ್ಮದೂ ಕೂಡಾ ಅಲ್ವೆ?
ಎಲ್ಲ ಸೃಜನಶೀಲ ಮನಸ್ಸುಗಳೂ ಸಾಮಾನ್ಯವಾಗಿ ಕವಿತೆಯಿಂದಲೇ ತಮ್ಮ ಪ್ರವಾಸವನ್ನು ಪ್ರಾರಂಭಿಸುತ್ತವೆ. ಹೀಗಾಗಿ ಕವಿತೆಯುಳಿದಿದೆ, ಉಳಿಯುತ್ತದೆ. ಇತಿಹಾಸದಲ್ಲಿ, ವರ್ತಮಾನದಲ್ಲಿ ಕೊನೆಗೆ ಮಾರುಕಟ್ಟೆಯಲ್ಲೂ ಕೂಡಾ. ಎಲ್ಲ ಸಾಹಿತ್ಯ ಸಮ್ಮೇಳನಗಳಲ್ಲೂ ಕವಿಗೋಷ್ಠಿ ಸಾಮಾನ್ಯ. ಆದರೆ ಕವಿತಾ ಸಂಕಲನಗಳ ಮಾರಾಟ ಸಾಮಾನ್ಯವಲ್ಲ. ಇದಕ್ಕೆ ನಾನು ಕಂಡುಕೊಳ್ಳುವ ಉತ್ತರ ಕವಿತೆ ಎಲ್ಲರಿಗೂ ಬೇಕಾಗಿದೆ. ಆದರೆ ಎಲ್ಲರಿಗೂ ದಕ್ಕುವುದಿಲ್ಲ. ಕವಿತೆ ನೆಲದ ಮರೆಯ ನಿಧಾನ, ಮರದೊಳಗಣ ಕಿಚ್ಚು, ಶಿಲೆಯ ಮರೆಯ ಶಿಲ್ಪ, ಅದು ನಾದ, ಅದು ವೇದ. ಅದಕ್ಕೆ ಭೇದ ಗೊತ್ತಿಲ್ಲ. ಅದು ಕ್ರಾಂತಿ, ಅದುವೇ ಶಾಂತಿ, ಅದು ಮಂತ್ರ, ಕೊನೆಗೆ ಅದುವೇ ಮುಗ್ಧತೆ. ಇಂಥ ಕವಿತೆಯ ಕೈ ಹಿಡಿದುಕೊಂಡು ನಾವು ಬಂದೆವೊ, ನಮ್ಮ ಕೈ ಹಿಡಿದುಕೊಂಡು ಕವಿತೆ ಬಂದಿತೊ ಒಟ್ಟಾರೆ ಎಲ್ಲವೂ ಬೆರೆತು, ಕವಿತೆ ಹುಟ್ಟಿದಡೆಲ್ಲಾ ಸೊಬಗು.
ಒಂದು ಪದ್ಯವನ್ನು ಕೇಳಬಹುದು, ಆದರದು ಆಡುವ ಮಾತಿನ ಸದ್ದಲ್ಲ. ಅದನ್ನು ಹಾಡಬಹುದು, ಆದರದು ಸಂಗೀತದ ರಾಗಬದ್ಧವಾದ ಶಬ್ದವಲ್ಲ. ಅದನ್ನು ಓದಬಹುದು, ಆದರದು ಮುದ್ರಿತಾಕ್ಷರಗಳ ನೋಟವಲ್ಲ. ಅದು ಅರ್ಥವತ್ತಾದ ಮಾಹಿತಿ, ಲಯಬದ್ಧ ಭಾಷೆಯಿಂದ ಹೇಳಬಲ್ಲ ಒಂದು ಪ್ರತಿಭಾಶಿಶು, ಕವಿಕಲ್ಪನೆ. ಹಾಡು, ಮಾತು, ಮುದ್ರಾಕ್ಷರಗಳು ಅದಕ್ಕೆ ಬೇರೆ ಬೇರೆಯಾದ ಅರ್ಥವಾಹಕಗಳು. ಸಂಗೀತದ ನಿಯಮಗಳಂತೆ ಪದ್ಯ ರಚಿತವಾಗಿಲ್ಲ. ಆಡುನುಡಿಯಂತೆಯೂ ಅದಿಲ್ಲ. ಅದರ ಭಾಷೆಯನ್ನು ಅಂತಃಕರಣದ ಪ್ರಶಾಂತ ಕಿರಣವೆನ್ನಬಹುದು. ಪದ್ಯವೊಂದು ಅಂತರಂಗದ ಒಳಗತಿಯಾಗಿಬಿಟ್ಟಿದೆ. ನಿಶ್ಯಬ್ಧ ಮನದ ನಿಸರ್ಗಧಾರೆಯಾಗಿದೆ. ಕಾಲ ಹೋದ ಹಾಗೆ ಕವಿತೆ ಅತೀಂದ್ರಿಯವೂ, ಬೌದ್ಧಿಕವೂ, ಆಧ್ಯಾತ್ಮಿಕವೂ ಆಗುತ್ತ ಹೋಗುತ್ತದೆ.
ಇಂಥ ಕವಿತೆಯನ್ನು ಬರೀ ನನ್ನದು ಎನ್ನುವುದು ಎಷ್ಟೊಂದು ಸುಳ್ಳು ಅಥವಾ ತೀರ ವೈಯಕ್ತಿಕವಾದ ಕವಿತೆ ತೀರ ಸಾರ್ವತ್ರಿಕತೆಯನ್ನೂ ಸಾಧಿಸುತ್ತದೆ.
ಆದ್ಯರು ಹೇಳುತ್ತಾರೆ: “ಇತಿಹಾಸಕ್ಕಿಂತಲೂ ಹೆಚ್ಚಿನ ಸತ್ಯವನ್ನು ಪದ್ಯ ಹೇಳುತ್ತದೆ. ಅದು ಜೀವನವನ್ನು ರಚಿಸುತ್ತದೆ. ಹೊರಜಗದ ಮುಖಸಾಮುದ್ರಿಕವನ್ನು, ಚಲನವಲನಗಳನ್ನು, ಐಂದ್ರಿಜಾಲಿಕ ಸೌಲಭ್ಯದಿಂದ ಅರ್ಥೈಸುತ್ತದೆ. ಅದೊಂದು ಜೀವನ ವಿಮರ್ಶೆ, ಮಾತಾಡುವ ಚಿತ್ರ, ಬಾಳಿನ ವೈಯಕ್ತಿಕ ವ್ಯಾಖ್ಯೆ, ಅತ್ಯುತ್ತಮ ಕ್ರಮದಲ್ಲಿ ಬದ್ಧವಾದ ಅತ್ಯುತ್ತಮ ಪದಗಳ ಸಮೂಹ, ಪದನರ್ತನ, ಆತ್ಮಗೀತ, ಮಹಾಮನಗಳ ಬೆಳಗಿನ ಜಾವದ ಕನಸು, ಅದೊಂದು ಸ್ಪೂರ್ತ ವಸ್ತು. ನುಣುಪಿನ ಹೊಳಪು, ಉದಾತ್ತವೂ ಚಿರಸ್ಥಾಯಿಯೂ ಆದ ಎಲ್ಲ ಭಾವಗಳ ಸಮರ್ಪಕವೂ ಸುಂದರವೂ ಆದ ಪೂರ್ಣರೂಪ.
ಕಾವ್ಯವೆಂಬ ಅವಿನಾಶಿ ಮರದ ಕಥೆ
ಕಾವ್ಯದ ಇತಿಹಾಸ ಮನುಷ್ಯನ ಇತಿಹಾಸದಷ್ಟೇ ದೀರ್ಘ. ಮನುಷ್ಯನಿಗೆ ಅನುಭವಗಳ ಗ್ರಹಿಕೆ ಸಾಧ್ಯವಾದಂತೆ ಕಾವ್ಯಕ್ಕೆ ಅನೇಕ ಹೊಸ ಆಯಾಮಗಳು, ಅರ್ಥಗಳು, ವಾದಗಳು ಸೇರ್ಪಡೆಯಾಗುತ್ತಾ ಬಂದು ಹೊಸ ದಿಕ್ಕು-ದೆಸೆಗಳು ಕಾಣಲಾರಂಭಿಸಿದವು. ಉದಾಹರಣೆಗೆ:
* ಗ್ರೀಕ್ ಮತ್ತು ರೋಮ್ ದೇಶಗಳ ಅಭಿಜಾತ ಕಾವ್ಯಕ್ಕೆ ಪ್ರತಿಭಟನೆಯಾಗಿ, ಯೂರೋಪಿನಲ್ಲಿ “ಬೆರೋಕ್ ಅಂದರೆ ಅತಿರಂಜಕ ಕಾವ್ಯ ಹುಟ್ಟಿಕೊಂಡಿತು.
* ಇದಕ್ಕೆ ಪೂರಕವಾಗಿಯೇ ನೈಸರ್ಗಿಕ ಕಾವ್ಯ ಹುಟ್ಟಿಕೊಂಡಿತು. ಮುಂದುವರೆದಂತೆ ವಿದಾಯಕ ಕಾವ್ಯ ಹುಟ್ಟಿಕೊಂಡಿತು.
* ಕಾವ್ಯದ ವಸ್ತು ಮತ್ತು ತಂತ್ರಗಳನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕಾಗಿ ವಾಸ್ತವಿಕ ಕಾವ್ಯ ಹುಟ್ಟಿಕೊಂಡಿತು.
* ವಾಸ್ತವಿಕ ಕಾವ್ಯಕ್ಕೆ ಪ್ರತಿಧ್ವಂದಿಯಾಗಿ ಆದರ್ಶ ಕಾವ್ಯ ಹುಟ್ಟಿಕೊಂಡಿತು.
* ಕವಿಯ ಅನುಭವ ಪ್ರಾಮಾಣಿಕತೆಯನ್ನು ಭಾವಾವೇಷ ಮತ್ತು ಅನನ್ಯತೆಗಳನ್ನು ಸಾರುವುದಕ್ಕಾಗಿ ಅಭಿವ್ಯಕ್ತಿ ಕಾವ್ಯ ಹುಟ್ಟಿಕೊಂಡಿತು.
* ಕಾವ್ಯದ ವಸ್ತುನಿಷ್ಠತೆಯನ್ನು ಧಿಕ್ಕರಿಸಿ ಅರ್ಥಕ್ಕೆ ಹೆಚ್ಚಿನ ಆದ್ಯತೆಯನ್ನು ಕೊಡುವುದಕ್ಕಾಗಿ ಅಂತಃ ಪ್ರತೀಕ ಕಾವ್ಯ ಹುಟ್ಟಿಕೊಂಡಿತು.
* ಕವಿ ಬಳಸುವ ಪ್ರತೀಕ ಪರಿಭಾಷೆಗೆ, ತಂತ್ರ ರಸಿಕತೆಗೆ ಮಹತ್ವವನ್ನು ನೀಡುವುದಕ್ಕಾಗಿ ನವ್ಯ ಕಾವ್ಯ ಹುಟ್ಟಿತು.
* ಕಾಲಗತಿಸಿದಂತೆ ಕಾವ್ಯ ಶುಷ್ಕವಾಗುತ್ತಿದೆ, ಅದಕ್ಕೊಂದಿಷ್ಟು ಗ್ರಾಮ ಜೀವನದ ಸೊಗಡು ತುಂಬೋಣ ಎನ್ನುತ್ತಾ ಪಶುಪಾಲ ಕಾವ್ಯ ಹುಟ್ಟಿಕೊಂಡಿತು.
* ಎಲ್ಲ ದೇಶ ಕಾಲಗಳಲ್ಲೂ ಅನುಭಾವಿಗಳು ಹುಟ್ಟಿದ್ದಾರೆ. ತರ್ಕಾತೀತ, ವಿಚಾರತೀತ, ಬುದ್ಧಿತೀತ, ಮನಸಾತೀತ, ಆಧ್ಯಾತ್ಮಿಕ ಹಂಬಲವನ್ನು ಸೂಚಿಸುವ ಸಲುವಾಗಿ ಅನುಭಾವ ಕಾವ್ಯ ಹುಟ್ಟಿತು.
* ಇದಕ್ಕೆ ವಿರೋಧವಾಗಿ ಆಡಂಬರ ಕಾವ್ಯ ಹುಟ್ಟಿಕೊಂಡಿತು.
* ಸಾಮಾಜಿಕ ಬೆಂಬಲ ದೈವಾನುಗ್ರಹದ ಮಧ್ಯೆಯೂ ಮನುಷ್ಯ ಅಸಹಾಯ ಜೀವಿ ಎಂದು ವಾದಿಸುತ್ತಾ ಅಸ್ಥಿ ಕಾವ್ಯ ಅಸ್ಥಿತ್ವಕ್ಕೆ ಬಂದಿತು.
* ಬಂಡವಾಳವಾದವನ್ನು ಖಂಡಿಸುತ್ತಾ, ಆರ್ಥಿಕ ಸಾಮ್ಯವನ್ನು ವಾದಿಸುತ್ತಾ ಸಾಮ್ಯ ಕಾವ್ಯ ಹುಟ್ಟಿಕೊಂಡಿತು.
* ಮನುಷ್ಯ ಸಮಸ್ಯೆಗಳನ್ನು ಮನಃಶಾಸ್ತ್ರೀಯ ನೆಲೆಯಲ್ಲಿ ಬಗೆಹರಿಸಿಕೊಳ್ಳಲು ಮನೋವೈಜ್ಞಾನಿಕ ಕಾವ್ಯ ಹುಟ್ಟಿಕೊಂಡಿತು.
* ಮತಕರ್ಮ, ಮತಪುರಾಣ, ಮತೋತ್ತ ಭಕ್ತಿಯನ್ನು ಸಾರಲು ಮತಧಾರ್ಮಿಕ ಕಾವ್ಯ ರಚನೆಯಾಯಿತು.
* ಈ ಧಾರ್ಮಿಕತೆಯನ್ನು ದಿಕ್ಕರಿಸುತ್ತಾ ಲೌಕಿಕ ಕಾವ್ಯ ಬೆಳೆಯಿತು.
* ಅತಿ ನೈತಿಕ ಶುದ್ಧಿಯ ಪ್ರಚಾರಕ್ಕಾಗಿಯೇ ತಾಪಸ ಕಾವ್ಯ ಬಂತು.
* ಇದೆಲ್ಲದರ ಒಟ್ಟು ಸಾರ ಎನ್ನುವಂತೆ ಬೌದ್ಧಿಕ ಕಾವ್ಯ ಉಗಮಗೊಂಡಿತು.
ಸಧ್ಯ ನಾನಂದುಕೊಂಡಿದ್ದೇನೆ, ವ್ಯಕ್ತಿನಿಷ್ಠ ಕಾವ್ಯದ ಪರಮಘಟ್ಟಕ್ಕೆ ನಾವು ಬಂದು ನಿಂತಿದ್ದೇವೆ. ಒಟ್ಟು ಕಾವ್ಯದ ಉಗಮ ಮತ್ತು ಗತಿಶೀಲತೆಯನ್ನು ಗಮನಿಸಿದಾಗ ಕಾವ್ಯ ಒಂದು ವಿಶಾಲ ಮರ. ಅದು ಬಂಜೆಯಲ್ಲ, ಶಾಪಗ್ರಸ್ತವಲ್ಲ. ಹೀಗಾಗಿ ಈ ಮರ ಅವಿನಾಶಿಯೂ ಕೂಡ.
ಈ ಮರ ಎನ್ನುವುದು ಬರಿ ನೆರಳಲ್ಲ, ಹಾಡು-ಹಕ್ಕಿಗಳ ಬರಿ ಕೊರಳಲ್ಲ, ಭರವಸೆಯೂ ಕೂಡ. ಕಾವ್ಯದ ಈ ವಿಶಾಲ ವೃಕ್ಷದಲ್ಲಿ ಸಮಸ್ತ ಬದುಕು ಪಲ್ಲವಿಸಿದೆ. ಅರ್ಥಗಳ ಸಂಭ್ರಮ ಸಾಧ್ಯವಾಗಿದೆ.
ಸಾಹಿತ್ಯ ಮತ್ತು ಕಾವ್ಯಧರ್ಮ
ಕವಿತೆಯಂಥ ರಮಿಸಿಕೊಳ್ಳುವ ಕ್ರಿಯೆ ಈ ಪ್ರಪಂಚದಲ್ಲಿ ಮತ್ತೊಂದಿಲ್ಲ. ಪಶುವಿನಿಂದ ಮನುಷ್ಯನವರೆಗೆ, ಮನುಷ್ಯನಿಂದ ಮಹಂತನವರೆಗೆ ಎಲ್ಲರಿಗೂ ಬೇಕಾದುದೆ ಈ ಕವಿತೆ. ಕಡಲೂ ಕವಿತೆಗಳ ಹಾಡುತ್ತದೆ, ಗಾಳಿಯೂ ಕವಿತೆಗಳ ಕೊರೆಯುತ್ತದೆ, ಕಾನನದ ಬಿದಿರು ಮೇಳಗಳಲ್ಲಿ ಕವಿತೆ ಇದೆ, ಹಕ್ಕಿಗಳ ಉಲಿಯಲ್ಲಿ, ಜೇಡದ ಬಲೆಯಲ್ಲಿ, ಸಾಲಾಗಿ ಸಾಗುವ ಇರುವೆ ಕಾಲಲ್ಲಿ, ಕವಿತೆ ಇದೆ.
ದೇವರಿಲ್ಲದ ದೇಶ-ಕಾಲ-ಧರ್ಮಗಳು ಹೇಗೆ ಅಸಾಧ್ಯವೊ, ಕವಿತೆ ಇಲ್ಲದ ಜೀವನ ವ್ಯವಹಾರವೂ ಅಷ್ಟೇ ಅಸಾಧ್ಯ. ಇದು ನಾಲ್ಕು ದಶಕಗಳ ನನ್ನ ಅನುಭವ, ಎದೆಗೆ ವೇದ್ಯವಾದ ಮಾತು. ಇದಿಲ್ಲದ ನಮ್ಮ ಸಮಾಜ ಏನಾಗಿರುತ್ತಿತ್ತು? ಮನುಷ್ಯನ ಗತಿ-ಸ್ಥಿತಿಗಳೇನಾಗಿರುತ್ತಿದ್ದವು? ಈ ಪ್ರಶ್ನೆಗಳಿಗೆ ಕವಿತೆಯಂತೆಯೆ ರಮಿಸುತ್ತ ಚಿಂತಕನೊಬ್ಬ ಬರೆಯುತ್ತಾನೆ: Without the poetic element in our own being and without our poets and their great poetry, we would be brutes, or what is worse and we are most likely today: vicious automata of self-will.
ಎಷ್ಟೊಂದು ಭಯಾನಕ ಅಲ್ಲವೆ! ಕವಿತೆ ಇಲ್ಲದೆ ಹೋದಲ್ಲಿ ಪಶುಗಳಾಗಿರುತ್ತಿದ್ದೆವು ನಾವು. ಅಸಭ್ಯವಾಗಿರುತ್ತಿತ್ತು ಸಮಾಜ. ಈ ಭೂಮಿ ಎನ್ನುವುದು ಮೃಗಗಳ ದೊಡ್ಡಿಯಾಗಿರುತ್ತಿತ್ತು. ಹಾಗಿದ್ದರೆ, ಕವಿತೆ ನಮ್ಮ ಕೈ ಹಿಡಿದು ಬದುಕನ್ನು ಒಪ್ಪಗೊಳಿಸಿದೆ. ರಮಿಸಿದೆ ತಾಯಿಯಂತೆ. ಹೀಗಾಗಿ ಕವಿತೆ ಕಟ್ಟದ ಮನಸ್ಸು ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಲಾರದು ಎನ್ನುವುದು ಸತ್ಯ. ಅಂತೆಯೆ ಲೇಖಕ ಹೈಡೆಗರ್ ಹೇಳಿದ, Poetry is an indispensable function for human life. It is the creative source of the humanness of the dwelling life of man. ಕವಿತೆಯೊಂದು ಅವಶ್ಯಕ ಕ್ರಿಯೆ. ಅದು ಬಾಳಿನ ಊರ್ಜೆ. ಹೌದು, ಅದಿಲ್ಲದ ಜಗವಿಲ್ಲ, ಯುಗವೂ ಇಲ್ಲ.
ಈ ಕವಿತೆ, ಕವಿ, ಹೆಣ್ಣು, ಮೃತ್ಯು ಮತ್ತು ಮಣ್ಣುಗಳನ್ನು ಕುರಿತು ಧ್ಯಾನಿಸಿದಷ್ಟು ಮತ್ತಿನ್ನೇನೂ ಧ್ಯಾನಿಸಲಿಲ್ಲ ನಾನು. ಬದುಕಿನಲ್ಲಿ ಸಿಗಬೇಕಾದ ಎಲ್ಲ ಶ್ರೇಯ-ಪ್ರೇಯ, ಅದಮ-ಅಪರೂಪ, ಸುಂದರ-ಕುರೂಪ, ವ್ಯಕ್ತಿ-ವಿಚಾರ ಹಾಗೂ ಬದುಕುಗಳು ಈ ಮೇಲಿನ ನಾಲ್ಕೇ ಪದಗಳ ಧ್ಯಾನಿಸುವಲ್ಲಿ ದಕ್ಕಿವೆ ನನಗೆ.
ಒಂದು ಉತ್ಕೃಷ್ಟ ಕಾವ್ಯದ ಗಂತವ್ಯವೇ ಸತ್ಯ, ಸತ್ಯವನ್ನಲ್ಲದೆ ಅದು ಮತ್ತಿನ್ನೇನೂ ಹೇಳುವುದಿಲ್ಲವಾದುದರಿಂದ ಅದು ನಮ್ಮ ನೆನಪುಗಳಿಗೆ ಮತ್ತೆ ಮತ್ತೆ ಹತ್ತಿರವಾಗುತ್ತಿರುತ್ತದೆ.
The function of poetry is the founding of truth. ಹೀಗಾಗಿಯೆ, ಲೋಕವ್ಯವಹಾರದ ಭಾಗವೇ ಆಗಿರುವ ಕವಿ ಸುಳ್ಳಾಡಬಹುದು, ಆದರೆ ಈ ಎಲ್ಲವೂ ಮೀರಿ ಅವನೊಳಗೆ ಘಟಿಸುವ ಕವಿತೆ ಎಂದೂ ಸುಳ್ಳಾಡದು.
ಕವಿತೆಗೆ ಸಾವಿಲ್ಲ, ಯಾಕೆಂದರೆ ಅದು ಹುಟ್ಟಲಿಲ್ಲ. ಇದುವರೆಗಿನ ಎಲ್ಲ ಭಾಷೆಗಳೊಳಗಿನ ಎಲ್ಲ ಕಾವ್ಯವೂ ನಮ್ಮ ಪಠ್ಯಕ್ರಮದ ವಿಭಜನೆಯಷ್ಟೆ. ಕವಿತೆ, ಅದು ಧರ್ಮ. ಹೀಗಾಗಿ ಅದರ ವಿಭಜನೆ ಸಾಧ್ಯವಿಲ್ಲ. ಅದು ಮುಗಿಯದ ದಾರಿ. ಹೀಗಾಗಿ ನಮ್ಮ ವಿಭಜನೆಗಳಾದ ಹಳೆಕಾವ್ಯ, ಹೊಸಕಾವ್ಯ, ಇಂಗ್ಲೀಷ್‌ಕಾವ್ಯ, ನವೋದಯ, ನವ್ಯ, ಪ್ರಗತಿಶೀಲ, ದಲಿತ, ಬಂಡಾಯ, ಬಂಡಾಯೋತ್ತರ ಕಾವ್ಯ ಎನ್ನುವುದು ನಾವೆತ್ತಿಕೊಂಡ ಕಾವ್ಯದ ರಸಯಾತ್ರೆಯಲ್ಲಿ ವಿರಮಿಸಿದ ತಾಣಗಳಷ್ಟೆ. ಅದು ಕಾವ್ಯವೇ ವಿರಮಿಸಿದ ಹಂತವಲ್ಲ. ಕಾವ್ಯಾನುಭವದಲ್ಲಿ ಭಾಷಾಜ್ಞಾನದಷ್ಟೇ ಮುಖ್ಯ ಬದುಕಿನ ಉಗ್ರಾಣದಲ್ಲಿಯ ವಸ್ತುಗಳ ಪರಿಚಯ ಇಲ್ಲದೇ ಹೋದಲ್ಲಿ ಕವಿ ಮತ್ತು ಕಾವ್ಯಾಸಕ್ತನ ಮಾತು ಎರಡು ದಡಗಳ ಮೇಲಿನ ಮಾರ್ದನಿಗಳಾಗುತ್ತವೆ.
ಒಂದು ಪದ್ಯವನ್ನು ಕೇಳಬಹುದು, ಆದರದು ಆಡುವ ಮಾತಿನ ಸದ್ದಲ್ಲ. ಅದನ್ನು ಹಾಡಬಹುದು, ಆದರದು ಸಂಗೀತದ ರಾಗಬದ್ಧವಾದ ಶಬ್ದವಲ್ಲ. ಅದನ್ನು ಓದಬಹುದು, ಆದರದು ಮುದ್ರಿತಾಕ್ಷರಗಳ ನೋಟವಲ್ಲ. ಅದು ಅರ್ಥವತ್ತಾದ ಮಾಹಿತಿ, ಲಯಬದ್ಧ ಭಾಷೆಯಿಂದ ಹೇಳಬಲ್ಲ ಒಂದು ಪ್ರತಿಭಾಶಿಶು, ಕವಿಕಲ್ಪನೆ. ಹಾಡು, ಮಾತು, ಮುದ್ರಾಕ್ಷರಗಳು ಅದಕ್ಕೆ ಬೇರೆ ಬೇರೆಯಾದ ಅರ್ಥವಾಹಕಗಳು. ಸಂಗೀತದ ನಿಯಮಗಳಂತೆ ಪದ್ಯ ರಚಿತವಾಗಿಲ್ಲ. ಆಡುನುಡಿಯಂತೆಯೂ ಅದಿಲ್ಲ. ಅದರ ಭಾಷೆಯನ್ನು ಅಂತಃಕರಣದ ಪ್ರಶಾಂತ ಕಿರಣವೆನ್ನಬಹುದು. ಪದ್ಯವೊಂದು ಅಂತರಂಗದ ಒಳಗತಿಯಾಗಿಬಿಟ್ಟಿದೆ. ನಿಶ್ಯಬ್ಧ ಮನದ ನಿಸರ್ಗಧಾರೆಯಾಗಿದೆ. ಕಾಲ ಹೋದಹಾಗೆ ಕವಿತೆ ಅತೀಂದ್ರಿಯವೂ, ಬೌದ್ಧಿಕವೂ, ಆಧ್ಯಾತ್ಮಿಕವೂ ಆಗುತ್ತ ಹೋಗುತ್ತದೆ.
ಕಾವ್ಯ ಘಟಿಸುವ ಪರಿ
ನಮ್ಮ ಕಾಡುವ ಕವಿ ಹಾಗೂ ಕವಿತೆಗಳು ಹೇಗೆ ಮತ್ತು ಎಲ್ಲಿ ಘಟಿಸುತ್ತಾರೆ? ಅವರ ಕವಿತೆಗಳಲ್ಲಿ ಅದ್ಯಾವ ಅದ್ಭುತ ಲೋಕ ಸೃಷ್ಟಿಯಾಗಿರುತ್ತದೆ? ಎಂದು ಕೇಳಿದರೆ ಕಾವ್ಯ ಚಿಂತಕನೊಬ್ಬ ಹೇಳುತ್ತಾನೆ: Poetry is the original way in which beings are brought into the open clearing of truth, in which world and earth, mortals and gods are bidden to come to their appointed places of meeting. ಸತ್ಯ, ಸೌಂದರ್ಯ ಹಾಗೂ ಸುತ್ತಲಿನ ವಾಸ್ತವಗಳ ದರ್ಶನವೇ ಕವಿ ಹಾಗೂ ಕಾವ್ಯದ ಮಹಾ ಜವಾಬ್ದಾರಿ. ಮನುಷ್ಯನ ಶಬ್ಧ ಹಾಗೂ ಆಲೋಚನೆ ಅರ್ಥಗಳಿಂದ ಗರ್ಭಕಟ್ಟುವ ಸಂದರ್ಭಗಳು ಅವನ ನಿತ್ಯ ವ್ಯವಹಾರದಲ್ಲಿಲ್ಲ. ಇಲ್ಲೆಲ್ಲ ಅವು ಸಾಮಾನ್ಯ ಆಯವ್ಯಯದ ಸರಕುಗಳಷ್ಟೆ. ನಮ್ಮ ಶಬ್ಧ ಹಾಗೂ ಆಲೋಚನೆ ನಮಗೆ ಅಚ್ಚರಿಯನ್ನುಂಟು ಮಾಡುವ ಅರ್ಥಗಳಾಗಿ ಸಿಡಿಯುವುದು ಕವಿತೆ ಹಾಗೂ ಮೌನದಲ್ಲಿ ಮಾತ್ರ.
ಬರಹವನ್ನು ಗದ್ಯ-ಪದ್ಯ ಎಂದು ಸೀಳಲಾಗದು. ಬರಹವನ್ನು ನಾನು ಪ್ರಾರಂಭಿಸಿದಂದಿನಿಂದಲೂ ನನ್ನ ಬಲವಾದ ನಂಬಿಕೆಯಿದು. ಜಗತ್ತಿನ ಶ್ರೇಷ್ಠ ಬರಹಗಾರನಾದ ಪ್ರೇಮಚಂದ, ಕುವೆಂಪು, ಮಾಂಟೊ, ಟ್ಯಾಗೋರ್, ಟಾಲ್‌ಸ್ಟಾಯ್, ದಾಸ್ತೋಯೆವಸ್ಕಿ, ಕಾಮು, ಶರೀಫ, ಓಶೋ ಇವರನ್ನೆಲ್ಲ ನಾನು ಓದಿದ್ದು ಹೀಗೆಯೆ. ಇವರೆಲ್ಲ ನನಗೆ ದಾರ್ಶನಿಕರಂತೆ ದಕ್ಕಿದವರು. ಹೀಗಾಗಿ ಕವಿತೆಯಂತೆ ಕಾಡಿವೆ ಇವರ ಆಲೋಚನೆಗಳು.
ಅಂದಹಾಗೆ, ಒಂದು ಆಲೋಚನೆಯ ಪ್ರಕಾರ The opposite of the poem is not the prose, pure prose is as poetic as any poetry. The voice of thought must be poetic. ಕಪ್ಪು ಶಬ್ದದ ವಿರುದ್ದಾರ್ಥಕ ಹೇಗೆ ಬಿಳಿ ಅಲ್ಲವೊ ಹಾಗೆಯೆ ಆಲೋಚನೆಗಳಾಗಿ ನಮ್ಮ ತಲೆಮಾರುಗಳನ್ನು ಕಾಡುವ ಲೇಖಕರಲ್ಲಿ ಗದ್ಯ ಎಂಬ ಪದಕ್ಕೆ ವಿರುದ್ದಾರ್ಥಕವಾಗಿ ಪದ್ಯ ಎಂಬ ಪರಿಕಲ್ಪನೆ ಹುಟ್ಟುವುದಿಲ್ಲ. ಮನುಕುಲವನ್ನು ಕಾಡಿದ ಯಾವ ಚಿಂತಕನೂ ಗದ್ಯ-ಪದ್ಯಗಳ ಮಾನದಂಡಗಳನ್ನಿಟ್ಟುಕೊಂಡು ಮಾತಾಡಿಲ್ಲ. ಸಾಕ್ರೆಟಿಸ್, ದಾವ್, ಔಸ್ಪೆನಸ್ಕಿ, ಮೋಲಿಯರ್, ಶಂಕರಾಚಾರ್ಯ, ರಾಮಕೃಷ್ಣ ಪರಮಹಂಸ ಎಲ್ಲರೂ ಹೀಗೆಯೆ. ಆದರೆ ಒಂದು ಸತ್ಯ, ಇವರೆಲ್ಲ ಕವಿತೆಯಂತೆ ಆಲೋಚಿಸಿದ್ದಾರೆ ಅಥವಾ ಅವರ ಆಲೋಚನೆಗಳೆಲ್ಲವೂ ಕವಿತೆಗಳಂತೆ ನಮ್ಮನ್ನು ಕಾಡಿವೆ. ಹೀಗಾಗಿ ಅವು ಬರೀ ಅರ್ಥದ ಸೀಮೆಗಳಲಿಲ್ಲ ಬದಲಾಗಿ ಸೀಮಾತೀತವಾದ ಅರ್ಥಲೋಕಗಳನ್ನೇ ಸೃಷ್ಟಿಸಿವೆ.
ಆದರೆ ಬರೀ ವ್ಯಕ್ತಿಗತ ಭಾವನೆಗಳನ್ನೇ ಕೇಂದ್ರವಾಗಿಸಿಕೊಂಡ, ಸೀಮಿತವಾದ ಸಾಹಿತ್ಯ ಪರಿಧಿಯನ್ನಿಟ್ಟುಕೊಂಡ ಇಪ್ಪತ್ತನೆಯ ಶತಮಾನದ ಭಾರತೀಯ ಕವಿಗಳು ಅನುಭವಿಸಿದ ತಲ್ಲಣಗಳನ್ನು ವರ್ತಮಾನದ ಕನ್ನಡ ಕವಿಗಳೂ ಅನುಭವಿಸುತ್ತಿದ್ದಾರೆ. ಅವರ ಉದಯರವಿ ಅವರಿಗೆ ಬೆಳಕು ತರುತ್ತಿಲ್ಲ. ಹೊಟ್ಟೆಪಾಡಿಗಾಗಿ ಹುಟ್ಟಿಕೊಂಡ ಅವರ ಕಾರ್ಖಾನೆಗಳಲ್ಲಿ ಪಾರಿವಾಳಗಳು ಗೂಡು ಕಟ್ಟುತ್ತಿವೆ. ಗ್ಲೋಬಲೈಝೇಶನ್‌ದ ಗಾಳಿಯಲ್ಲಿ ಹಾರಿಹೋದ ಅವರ ತಿರಂಗಾ ತಿರುಗಿ ಬರುವ ಮಾತೇ ಆಡುತ್ತಿಲ್ಲ. ಪೆನ್ನು ತುಕ್ಕು ಹಿಡಿದು ಗೋಲ್ಕೊಂಡಾದ ಕೋಟೆಯೊಳಗೆ ಬಿದ್ದ ತುಪಾಕಿಯಾಗಿದೆ. ನಮ್ಮ ಯುವಕರ ಪ್ರೀತಿಯ ಹುಡುಗಿಯರೆಲ್ಲ ವಿಶ್ವ ಸೌಂದರ್ಯದ ಸ್ಪರ್ಧೆಗಳಲ್ಲಿ, ಫ್ಯಾಶನ್ ಷೋಗಳಲ್ಲಿ, ಜಾಹಿರಾತುಗಳಲ್ಲಿ ಕಳೆದುಕೊಂಡಿದ್ದಾರೆ. ಪ್ರತಿ ಯುವ ಭಾರತೀಯ ಪ್ರೇಮಿಯ ಮನಸ್ಸು ಒಂದು ವಾಣಿಜ್ಯ ಮಳಿಗೆಯಾಗಿ, ತಾವು ಪ್ರೀತಿಸಿದ ಹುಡುಗಿಯರೆಲ್ಲ Reception Counter ನಲ್ಲಿ ನಿಂತ ಹೃದಯ ಹೀನ ಗೊಂಬೆಗಳಂತೆ ಕಾಣುತ್ತಿದ್ದಾರೆ. ವಿಶ್ವಾಸ ರೈಲು ಡಬ್ಬಿಯಾಗಿದೆ.
ಕಳೆದು ಎರಡು ದಶಕಗಳಲ್ಲಿ ನಮ್ಮ ಕನ್ನಡ ಕಾವ್ಯಕ್ಕೆ ಯಾವ ಗ್ರಹಣ ಹಿಡಿದಿತ್ತೋ? ಕೃತಕ ಮೋಡ ಬಿತ್ತಣದಂತೆ, ಅದೆಷ್ಟೋ ಕವಿಗಳು ಕವನ ಸಂಕಲನಗಳನ್ನು ಹೊರ ತಂದರೂ ಕೂಡಾ, ಗರ್ಭಪಾತಗಳೇ ಹೊರತು ಜೀವನದಿಯಾಗುವಂಥ ಒಂದು ಅರ್ಥಪೂರ್ಣ ಮಳೆಗೆ ಕವಿತೆ ಸಿದ್ಧವಾಗಲಿಲ್ಲ. ನಾನು ಸಂದರ್ಭವನ್ನು ದೂಷಿಸುವುದಿಲ್ಲ. ಎಲ್ಲ ಕಾಲಘಟ್ಟದಲ್ಲೂ ಒಂದು Tension ಇದ್ದೇ ಇದೆ. ಅದನ್ನು ಅಸ್ಥಿವಾರವಾಗಿಸಿಕೊಂಡು ಕುವೆಂಪು, ಬೇಂದ್ರೆಯಂಥ, ಎಕ್ಕುಂಡಿ, ಪುರಾಣಿಕರಂಥ ಕವಿಗಳಾದರು ಹುಟ್ಟಿ ಬರಬೇಕು, ಇಲ್ಲ ‘Waste land’ ದಂಥಾ ಕವಿತೆಯಾದರು ಹುಟ್ಟಿ ಬರಬೇಕು. ಹಾಗಂತ ಪ್ರತಿ ಕವನ ಸಂಕಲನವೂ ಬಕುಲ, ಬ್ರಹ್ಮ ಕಮಲಗಳನ್ನು ನೀಡಲೇಬೇಕೆಂದು ನನ್ನ ಹಠವಿಲ್ಲ. ಆದರೆ ಕನಿಷ್ಠ ಒಂದು ಸೃಜನಶೀಲ ಅನ್ವೇಷಣೆಯಾದರು ಅಲ್ಲಿ ನಡೆಯಬೇಕಲ್ಲ?
ಯಾವುದೇ ಕವಿ ಮನಸ್ಸಿಗೆ ಸಾವು ಒಂದು ಸಲ್ಲಾಪದ ಸಂಗಾತಿಯಲ್ಲ. ಬದಲಾಗಿ ಎಲ್ಲವನ್ನೂ ಇಂಗಿಸಿಕೊಳ್ಳಬಲ್ಲ ಒಂದು ರಹಸ್ಯ. ಮೌನದ ಭಯಾನಕ ಸಾಗರ. ಅದರೊಂದಿಗಿನ ಮಾತುಕತೆ ಸ್ವಗತದ ನೆಲೆಯನ್ನು ಮೀರಿ ಬೆಳೆಯುವುದೇ ಇಲ್ಲ. ಅಥವಾ ಸಾವಿನಿಂದ ಬದುಕಿಗೆ ಹೊಸದೇನನ್ನೋ ಕಟ್ಟಿ ಕೊಡುವ ಪ್ರಯತ್ನವೂ ಈ ಪದ್ಯಗಳಿಂದ ಆಗುವುದಿಲ್ಲ. ಬದುಕು ಮುದ್ದಿಸಬೇಕಾಗಿದ್ದ ಕವಿಯ ಬಾಯಿಯಲ್ಲಿ ಮೃತ್ಯುವಿನ ಮಾತು ಈ ವರ್ತಮಾನದ ದುರಂತವೋ ಅಥವಾ ಬರೀ ಕವಿಯೋರ್ವನ ದುರ್ದೈವವೋ ನೀವೇ ನಿರ್ಧರಿಸಬೇಕು. ಯಾಕೆಂದರೆ ಕವಿ ಅಥವಾ ಕಾವ್ಯ ಸ್ವಯಂಭೂ ಅಲ್ಲ. ಅದು ಕಾಲದ ಕೂಸು. ಸಂಸ್ಕಾರಗಳ ಶಿಶು. ಒಂದು ಯುಗಧರ್ಮ ಒಬ್ಬ ಕವಿ ಅಥವಾ ಕಾವ್ಯದ ಮೂಲಕ ಮಾತನಾಡುತ್ತಿರುತ್ತದಷ್ಟೆ.
ನನ್ನ ಕವಿತೆ ನನ್ನ ಮಾತು
ಕವಿತೆ ಎನ್ನುವುದು ಧ್ಯಾನ ಮತ್ತು ಶುದ್ಧ ಹಾರೈಕೆ. ಗೊತ್ತಿರಲಿ ಅದು ಶಬ್ಧಗಳ ಹಾದರವಲ್ಲ.
ನಮ್ಮೊಳಗಿನ ಕಾವ್ಯಕ್ಕೆ ಕೋಟಿ ಮಾರ್ಗಗಳು. ಇದು ಜನ್ಮಜನ್ಮಾಂತರಗಳ ನಂಟೂ ಇರಬಹುದೇನೊ. ಅದೊಂದು ತಳಮಳ, ಒತ್ತಡ. ಆದರೆ ಒಂದೇ ಬಾರಿಗೆ ಕಿತ್ತೋಡಿ ಬಂದು, ಅದು ಬತ್ತಿ ಹೋಗುವುದಿಲ್ಲ. ಒಮ್ಮೆ ಮೊದಲಾದದ್ದೇ ನೆಪ, ನಮ್ಮ ಲೇಖನಿಯಿಂದ ಹರಿಯುತ್ತಲೇ ಇರುತ್ತದೆ, ನಾವು ಹರಿಯುತ್ತಿರುವವರೆಗೆ.
ಕಣ್ಣು-ಬಣ್ಣ, ರಾಗ-ರಂಗು, ಅಳು-ನಗು, ಮೌನ-ಸಮ್ಮಾನ ಯಾವುದೂ ಅದರ ಸಹಾಯಕ್ಕೆ ಸಿಕ್ಕರೆ ಸಾಕು, ಚಿಪ್ಪಿಗೆ ಬಿದ್ದ ಸ್ವಾತಿಯ ಹನಿ ಗಪ್ಪನೆ ಅವಿತು ಕುಳಿತು ಮುತ್ತಾಗುವ ಹಾಗೆ ಎದೆಯ ಹನಿ ಕವಿತೆಯಾಗುತ್ತದೆ. ‘ಶಬ್ದ ಕಾವ್ಯದ ಇನ್ನೊಂದು ಸಾಧ್ಯತೆ ಅಷ್ಟೇ. ಶಬ್ದಗಳೊಂದಿಗೆ ಕೈ-ಕೈಯೊಳಿರಿಸಿ ಕಾವ್ಯ ತನ್ನ ಪಯಣವನ್ನೇನೋ ಆರಂಭಿಸಿಬಿಡುತ್ತದೆ, ಆದರೆ ಈ ಕಾವ್ಯ ಬರೀ ಕಾವ್ಯವನ್ನೆ ಅವಲಂಬಿಸಿರುವುದಿಲ್ಲ.
ಕವಿತೆ ಶಬ್ದಗಳೊಳಗೆ ದಂಗೆಯನ್ನು ತುಂಬುವ, ಪದಗಳ ನೇವರಿಸಿ ಮುದಗೊಳಿಸುವ ಚೈತನ್ಯ ಶಕ್ತಿ. ಕವಿತೆ ಶಬ್ದಗಳೊಂದಿಗೆ ಹೊರಟೂ ಹೊರ ನಿಲ್ಲುವ ಮಹಾಸನ್ಯಾಸಿ. ಶಬ್ದಗಳು ಸ್ತಬ್ದವಾದ ಮೇಲೂ ಸದ್ದು ಮಾಡುವ, ಹೊಯ್ದಾಡುವ ಜ್ವಾಲಾಮುಖಿ. ಹೀಗಾಗಿ ಕವಿತೆ ಕುರಿತಾಡುವ ನಮ್ಮ ಯಾವುದೇ ಮಾತು, ಮುನ್ನುಡಿ, ಬೆನ್ನುಡಿ, ವಿಮರ್ಶೆಗಳು, ಕವಿ ಅಥವಾ ಕವಿತೆಗೆ ಏನನ್ನಾದರೂ ಸೇರಿಸುತ್ತದೆ ಎಂದು ನಾನು ಅಂದುಕೊಂಡಿಲ್ಲ. ನಾನು ಬಹಳ ಹಿಂದೆಯೇ ಕೇಳಿದ್ದೇನೆ, ಕವಿ ಮತ್ತು ಸಂತನ ಸಮಾಗಮವಾಗದ ಕವಿತೆಗೇನು ಅರ್ಥ? ಕವಿಯಲ್ಲೊಬ್ಬ ಸಂತ-ದಾರ್ಶನಿಕ, ಸಂತನಲ್ಲೊಬ್ಬ ಕವಿ, ಮಾತಾಡಿಕೊಂಡಾಗ ಮಾತ್ರ ಕವಿತೆ. ಪ್ರಾಮಾಣಿಕ ಕವಿತೆ. ಕಾವ್ಯದಂಥ ಅಮರ ಚೆಲುವಿಗೆ ಇವರಿಬ್ಬರು ಸೇರಲೇಬೇಕು. ಒಂದು ಕವಿತೆ ಕಾಲಾತೀತ ಅರ್ಥವನ್ನು, ಚೆಲುವನ್ನು ಉಳಿಸಿಕೊಂಡಿದ್ದರೆ ಅದರಲ್ಲಿ ಇವರಿಬ್ಬರೂ ಸೇರಿದ್ದಾರೆಂದೇ ಅರ್ಥ. ಪ್ರಸಿದ್ಧ ಚಿಂತಕ ಸಾಮರ್‌ಸೆಟ್ ಮಾಮ್‌ನ ಪ್ರಕಾರ ಇವರಿಬ್ಬರೂ ತಮ್ಮ ಅಸ್ತಿತ್ವವನ್ನುಅಭಿವ್ಯಕ್ತಿಯ ಪ್ರಾಮಾಣಿಕತೆಯ ಮೂಲಕ ಸಾಧಿಸಿದವರು. ಅವನ ಪ್ರಕಾರ “It is only the artist, saint may be thecriminal who can choose his own life” ರಾತ್ರಿಯೊಂದಿಗೆ ನನ್ನದು ಹಾಲು-ಸಕ್ಕರೆಯ ಸಂಬಂಧ. ಈ ರಾತ್ರಿಗಳು ನನ್ನನ್ನು ಕಾಡಿಸಿದ, ಪೀಡಿಸಿದ ಮತ್ತೆ ನನ್ನ ಕೈ ಹಿಡಿದು ಕಾಪಾಡಿದ ರೀತಿಗೆ, ಅವುಗಳ ಋಣಭಾರಕ್ಕೆ ನಾನು ಸೋತುಹೋಗಿದ್ದೇನೆ. ಅಂದುಕೊಂಡಿದ್ದೇನೆ, ನನ್ನದು ಕತ್ತಲೆಗೆ ಕಪ್ಪಿಟ್ಟ ಕಾವ್ಯವಲ್ಲ ಎಂದು. ಹಗಲ ಹೆಗಲನ್ನು ಎಂದೂ ಎರವಲು ಬಯಸದ ನಾನು, ಕತ್ತಲೆಯ ಸಣ್ಣ ಸಣ್ಣ ನಕ್ಷತ್ರಗಳ ಮಧ್ಯ ಗೆರೆ ಹೊಡೆದುಕೊಂಡು ಬದುಕಿದ್ದೇನೆ. ನಿಶೆಯ ಜೋಗುಳಕ್ಕೆ ನನ್ನ ಕಲ್ಪನಾ ವಿಲಾಸವನ್ನು ವಿಸ್ತರಿಸಿಕೊಂಡಿದ್ದೇನೆ. ಕವಿತೆಯೊಂದಿಗಿನ ನನ್ನ ಈ ಅನುಸಂಧಾನ ನನ್ನ ಪ್ರೀತಿಯೊಂದಿಗಿನ ಸಮಾಗಮವಷ್ಟೇ. ನನ್ನ ಕವಿತೆಯೊಳಗಿನ ಮನುಷ್ಯರು ಬದಲಾಗಿದ್ದಾರೆ. ಬದುಕಿನ ವ್ಯವಹಾರದಲ್ಲಿ ಹಂತಹಂತಕ್ಕೆ ಸೈದ್ಧಾಂತಿಕ ಜಾರತನಕ್ಕೆ ಒಳಗಾಗಿದ್ದಾರೆ. ತಮ್ಮ ಪಾಪದ ಹೇಸಿಗೆಯನ್ನೂ ನನ್ನ ಹಾಗೂ ನನ್ನ ಕವಿತೆಗೆ ಹೊರಸಿ ಶುದ್ಧರಾಗಿದ್ದಾರೆ. ಇಂದು ಆ ಶುದ್ಧಿಯ ವ್ಯಾಪ್ತಿಗೆ ಒಳಪಡದವರು ನಾನು ಮತ್ತು ನನ್ನ ಕವಿತೆ ಮಾತ್ರ. ಹಾಗೆ ನೋಡಿದರೆ ನಾನು ಶುದ್ಧಪಾಪಿ, ಕವಿತೆ ಶುದ್ಧ ಲಜ್ಜಾಹೀನ. ಬಿರುಗಾಳಿಯಂತೆ ಸುತ್ತಿ ಬರುವ ನಾವು ಯಾರಿಗೆ ಪ್ರಿಯರೋ ಆ ದೇವರಿಗೇ ಗೊತ್ತು. ನಾವಿಬ್ಬರೂ ಮಾತ್ರ ಪ್ರೀತಿಯ, ಸಮಾಗಮದ ತೂರ್ಯಾವಸ್ಥೆಯಲ್ಲಿದ್ದೇವೆ.
ಪುಟ ಸರಿದಂತೆ…
ಸವಿನುಡಿ / ೫
ಜಾಡಮಾಲಿಯ ಮಾಳಿಗೆ ಮತ್ತು ಜೋಳಿಗೆ / ೭
ಕಾವ್ಯ ಕಾರಣಕ್ಕೆ… / ೧೧
ಜಗದ ಜಾಡಮಾಲಿ ಈತ… / ೧೩
ಕಾವ್ಯ, ನಾನು ನಂಬಿರುವಂತೆ… / ೧೫
೧.ಶಾಮ್-ಎ-ತಬ್ರೀಝಿ / ೧
*ಪ್ರೀತಿ ನಲವತ್ತು ರೀತಿ
೨. ಫ್ರಿದಾ ಕಾಹಲೊವಾ / ೧೨
*ಪ್ರೀತಿಗೆರಡು ಸಾಕ್ಷಿ
*ಕತ್ತಲೆಯ ಪ್ರತಿಬಿಂಬ ನೀನು
೩.ಅಹಮದ್ ಜಾವೇದ್ / ೧೫
*ಏನೆಂದು ಹಾಡಲಿ?
೪.ಫ್ರಾನ್ಸಿಸ್ ಆಡಮ್ಸ್ / ೧೭
* ಕತ್ತಲೊಂದೇ ಸಂಗಾತಿ
೫. ಸರ್ಮದ್ / ೧೯
* ನೀನೊಂದು ಮಹಾ ನಗ್ನತೆ
೬. ರಾಬಿಯಾ / ೨೨
* ನರಕದಲ್ಲಿಯೇ ಸುಡು ನನ್ನ
೭. ಹರಿವಂಶರಾಯ್ ಬಚ್ಚನ್ / ೨೪
*ನನ್ನ ಮಧುಶಾಲಾ
* ಕಣ್ಣೀರ ವ್ಯಥೆ
೮.ಗಾಲಿಬ / ೨೭
*ಬದುಕೊಂದು, ಬಿಂಬವೆರಡು
೯. ದಾರಾಶಿಕೊ / ೩೦
* ನಾನಾರು?
೧೦. ಆರ್ಶಿ ಪಿಪಾ / ೩೩
*ದೀಪ ಆರಿಸಬೇಡ
೧೧.ಕುಂತೀ / ೩೫
*ನಾವು ಅಮಾಯಕರೆ?
೧೨. ರೀತಿಕಾ ವಾಜಿರಾಣಿ / ೩೭
*ತುಳಿದಾಡಿದ ಸಿಪ್ಪೆ
೧೩. ಹಾಸಿಂ ಶಬಾನಿ / ೩೯
*ಇಷ್ಟು ಸಾಕಲ್ಲವೆ ಸಾವಿಗೆ?
೧೪. ಹಾರ್ಟ್ ಕ್ರೇನ್ / ೪೧
* ಪಶ್ಚಾತಾಪಕ್ಕೆ ಸಮಯವಿಲ್ಲ
* ಮರೆವೆಂಬ ಅರಿವು
೧೫. ಮನ್ಸೂರ್ / ೪೩
* ದೇವರೆಂದರೆ ನೀನೆ
* ಆತ
೧೬.ನಿಖೊಲೆ ಗ್ಯಾಮಿಲಿಯೊ / ೪೬
*ಏಕೆ ಕದಿಯುತ್ತೀರಿ ಏಕಾಂತವನ್ನು?
೧೭. ಬುಲ್ಲೇಷಾ / ೪೯
*ಒಂದೂ ತಿಳಿಯುತ್ತಿಲ್ಲ
೧೮. ಅತಿಕ್ ರಾಹಿಮಿ / ೫೨
*ಗಡಿಪಾರು
*ಸೂರ್ಯಕಾಂತಿ ಅವಳು
*ನೋವಿಗೊಂದು ನೆಮ್ಮದಿ
೧೯. ಡೆಲ್ಮಿರಾ ಅಗಸ್ಟಿನ್ / ೫೫
*ಬಾಯಿ ಇಲ್ಲದ ಸಂಕಟವಿದು!!!
೨೦. ಬೊದಿಲೇರ್ / ೫೮
*ಸಾವೆಂಬ ಕೊಳ
೨೧. ಲೀ ಬೈ / ೬೦
*ಚಂದಿರನಿಗಾಗಿ ಕಾಯುತ್ತ
೨೨. ತಿನ್‌ಮುತ್ / ೬೩
*ಅವಳೇ ಬೇಕಿತ್ತು
೨೩. ಡಾಲ್ಟನ್ ಗಾರ್ಸಿಯಾ / ೬೫
*ಬಂದುಬಿಡು ನನ್ನೊಂದಿಗೆ
*ದೀವಟಿಗೆ ಹಿಡಿಯದೆ
೨೪. ಮಿಸೆಸ್ ಫಿಲಿಫ್ಸ್ / ೬೮
*ಮುಕ್ತರಾಗುವುದೆಂದರೇನು?
೨೫. ಥಾಮಸ್ ಚಟ್ಟರ್‌ಟನ್ / ೭೨
*ಹಾಡುವ ಪಾಠ ಕಲಿಸು
೨೬. ಫೈಜ್-ಅಹಮ್ಮದ್-ಫೈಜ್ / ೭೪
*ಮತ್ತಿನ ಜಾತ್ರೆ
೨೭. ಜಹೀದಾ ಶೇರ್ವಾನಿ / ೭೬
*ಗೋಡೆ ಹಿಂದಿನ ದೀಪ
೨೮. ಖುದಿರಾಮ್ ಭೋಸ್ / ೭೮
*ಕ್ರಾಂತಿಕಾರಿಗಳ ಬಿಂಬ
೨೯. ಮಜಾಜ್ / ೮೦
*ಮರೆಯುವುದು ಸರಿಯೇ?
೩೦. ಡಿ.ಜಿ. ರೋಝೆಟ್ಟಿ / ೮೨
*ಪ್ರೇಮದೃಷ್ಟಿ
೩೧. ಎ.ಸಿ.ಸ್ವೀನ್‌ಬರ್ನ್ / ೮೪
*ನೈವೇದ್ಯ
೩೨. ಎಲಿಸ್ ಮೆನಲ್ / ೮೬
*ಪೂಜಿಸಲೇಬೇಕು
೩೩. ಇ.ಬಿ. ಬ್ರೌನಿಂಗ್ / ೮೭
*ದಾರಿ ಸಾವಿರ ಉಂಟು
೩೪. ಎಫ್.ಥಾಂಪ್ಸನ್ / ೮೯
*ಕಾಡು ಕುಸುಮ
೩೫. ಕಬೀರದಾಸ / ೯೩
*ನನ್ನ ನಾಡೆಂಬುದೇನು?
*ಕಳೆದುಕೊಂಡವಳು
*ಎಲ್ಲ ಆತನೇ
೩೬. ರವೀಂದ್ರನಾಥ ಠ್ಯಾಗೋರ್ / ೯೬
*ದೇವರೊಂದಿಗೆ ಹೋಳಿ
೩೭. ರಶ್ಮಿ ಸಿಂಗ್ / ೯೯
*ಮೌನದ ಭಾಷೆ
೩೮. ಮೀನಾಕುಮಾರಿ / ೧೦೧
*ಹುಚ್ಚು ಹುಡುಕಾಟ
*ಭಿಕಾರಿ ರಾತ್ರಿಗಳು
*ಪಿಸು ಮಾತು
*ಬರೀ ಸುಮ್ಮಾನ
*ಕವಲು ದಾರಿ
*ಮಂಚವ ಸವರಿ
*ಪ್ರೀತಿಗೊಂದು ಪಾರಿತೋಷಕ
೩೯. ಜಾನ್ ಕೀಟ್ಸ್ / ೧೦೬
*ಜಾನ್ ಕೀಟ್ಸ್‌ನ ಕವಿತೆಗಳು
*ಓ ಚಾಟರ್‌ಟನ್
*ಜ್ಞಾನದ ಹಂಬಲ ಬಿಡು
*ಪ್ರಸಿದ್ಧಿ
*ಅವಳ ಮೊದಲ ಹೆಜ್ಜೆಗೆ
*ಕಾಡುದಾರಿ ನೀನು….
*ದಗ್ಧ ಶಕ್ತಿಯದು ಕಾವ್ಯ
*ಮನಸ ಮೈಗೆ ಮಹಾ ಆಯಾಸ
*ನೀನೊಂದು ಬೆಳಗು
*ಮಸ್ತಕವೆಂಬ ಕಪ್ಪು ಪೆಟ್ಟಿಗೆ
*ಒಂಟಿಯಾಗಿದ್ದೇನೆ ಬಾ ಗೆಳೆಯ
*ಆಕಾಶವೆಂಬ ಪಾತ್ರೆಯನ್ನು
ಕಠ್ಮಂಡು ಕವಿತೆಗಳು
೪೦. ಬಿಮಲ್ ಕೊಯಿರಾಲಾ / ೧೧೩
*ಧರ್ಮ ಸಂಕಟ
೪೧. ಅಮರಗಿರಿ / ೧೧೬
*ನದಿ ಮಧ್ಯದಲ್ಲಿ
೪೨. ಕೃಷ್ಣ ಜೋಶಿ / ೧೧೮
*ಶಿಖರ ಮುಟ್ಟುವ ಮುಂಚೆ
೪೩. ಮದನ್ ರೆಗ್ಮಿ / ೧೨೦
*ಹುಟ್ಟುತ್ತಲೇ ಇರುತ್ತೇವೆ ನಾವು
ಮತ್ತಷ್ಟು ಕವಿತೆಗಳು
೪೪. ಓಶೋ / ೧೨೩
*ಮೋಕ್ಷವೆಂದರೆ?
೪೫. ಹೆರ್ಮನ್ ಹೆಸ್ / ೧೨೬
*ಧ್ಯಾನವೆಂಬ ಪಲಾಯನ!!!
೪೬. ಮುನಿಶ್ರೀ ತರುಣ ಸಾಗರ / ೧೨೯
*ದಿಗಂಬರವೆ ದಿವ್ಯಾಂಬರ
೪೭. ಕಿಂಗ್ ಮಾರ್ಟಿನ್ ಲೂಥರ್ ಜೂನಿಯರ್ / ೧೩೧
*ನನಗೊಂದು ಕನಸಿದೆ
Reviews
There are no reviews yet.