ಬೆಂದ ಬದುಕಿನ ತಂಪನರಸುತ್ತ…
ಎಲ್ಲ ದೃಷ್ಟಿಯಿಂದಲೂ ಹಿರಿಯರಾದವರು ತಮ್ಮ ಪುಸ್ತಕಕ್ಕೆ ಕಿರಿಯರ ಕಡೆಯಿಂದ ಮುನ್ನುಡಿ ಬರೆಸುವ ಸೋಜಿಗ ಕನ್ನಡ ಸಾಹಿತ್ಯ ಲೋಕದಲ್ಲಿ ಆವಾಗಾವಾಗ ನಡೆದಿದೆ. ಇದು ಹಿರಿಯರ ಉದಾರತೆ ಮತ್ತು ದೊಡ್ಡ ಗುಣವಾದರೆ, ಸಣ್ಣವರಿಗೆ ಆತಂಕ ಮತ್ತು ಅಳುಕು. ತಲೆಭಾರವೆನಿಸುವ ಜವಾಬ್ದಾರಿಯನ್ನು ನಿರ್ವಹಿಸಬಲ್ಲೆನೇ ಎನ್ನುವ ಅನುಮಾನ. ಡಾ. ಬಸವರಾಜ ಸಾದರ ಅವರು ನನ್ನ ಕಡೆಯಿಂದ ಅಂತಹ ಕೆಲಸವನ್ನು ಮಾಡಿಸುವುದರ ಹಿಂದಿನ ಉದ್ದೇಶವೆಂದರೆ ಪ್ರೀತಿ, ವಿಶ್ವಾಸ, ಸದಾಶಯ, ಸಹೃದಯತೆ. ಅವರು ಇದುವರೆಗೂ ನನ್ನ ಮೂಲಕ ಮಾಡಿಸಿದ ಕೆಲಸಗಳಿಗಿಂತ ಇದು ಭಿನ್ನ ಮತ್ತು ವಿಶಿಷ್ಟವಾದದ್ದು. ಅವರ ಸಖ್ಯದ ಆಖ್ಯಾನ… ಶೀರ್ಷಿಕೆಯ ಬೇಂದ್ರೆ ಕಾವ್ಯ ಕುರಿತಾದ ಲೇಖನಗಳು ವಿಮರ್ಶೆಯಲ್ಲದ ವಿಮರ್ಶೆಗಳು; ವಿವೇಚನೆಯ, ವಿವೇಕದ, ಸಹೃದಯ ಸ್ಪಂದನಗಳು. ಕೇವಲ ಗುಣದೋಷಗಳ ಪರಿಶೀಲನೆಯ ಉದ್ದೇಶದಿಂದ ಬರೆದವುಗಳಲ್ಲ ಎನ್ನುವುದನ್ನು ಬಿಟ್ಟರೆ, ಇಲ್ಲಿನ ಲೇಖನಗಳಲ್ಲಿ ಬೇಂದ್ರೆ ಕಾವ್ಯವನ್ನು ಸಮಗ್ರ ಜೀವನ ದೃಷ್ಟಿಕೋನದಿಂದ ನೋಡುವ ಹೊಸ ಬಗೆಯ ಮಾರ್ಗವೊಂದು ಗೋಚರಿಸುತ್ತ ಹೋಗುತ್ತದೆ. ತಮ್ಮನ್ನೇ ತಾವು ವಿಮರ್ಶಿಸಿಕೊಳ್ಳುವ ಸಾದರ ಅವರು ಕನ್ನಡದ ಶ್ರೇಷ್ಠ ಕವಿಯ ಮಹತ್ವದ ಬರವಣಿಗೆಯನ್ನು ವಿಮರ್ಶೆಯ ತೊಡಕಿನಿಂದ ಬಿಡಿಸುವ ಕೆಲಸವನ್ನು ಮಾಡಿದ್ದಾರೆಂದು ಹೇಳಿದರೆ ಸರಿಯಾಗಬಹುದೇನೋ. ಇದು ಆಂತರಿಕವೂ ಅಲ್ಲದ, ಬಾಹ್ಯವೂ ಅಲ್ಲದ, ಪ್ರಶಾಂತ ಸರೋವರವನ್ನು ಕದಡದಂತೆ ತಣ್ಣನೆಯ ನೀರನ್ನು ಬೊಗಸೆಯಲ್ಲಿ ಜತನದಿಂದ ಎತ್ತಿಕೊಳ್ಳುವ ನಾಜೂಕಿನ ಕಾರ್ಯ.
ಕಾವ್ಯ, ಕಥೆ, ವಿಮರ್ಶೆ, ಅನುವಾದ ಇತ್ಯಾದಿ ಪ್ರಾಕಾರಗಳಲ್ಲಿ ಕೃಷಿ ಮಾಡಿ ಯಶಸ್ವಿ ಯಾಗಿರುವ ಬಸವರಾಜ ಸಾದರ ಅವರು ನಾಡಿನಲ್ಲಿ ಜನಜನಿತರಾಗಿದ್ದು ಒಬ್ಬ ಪ್ರಸಾರ ತಜ್ಞರಾಗಿ. ಕೇವಲ ಸಾಹಿತ್ಯವನ್ನಷ್ಟೇ ಅಲ್ಲದೇ ಇತರೆ ಸಾಂಸ್ಕೃತಿಕ ವಸ್ತು-ವಿಷಯಗಳನ್ನೂ ಜನಸಾಮಾನ್ಯರ ಮನಸ್ಸಿಗೆ ತಟ್ಟುವಂತೆ ತಟ್ಟೆಯಲ್ಲಿ ಇಟ್ಟುಕೊಟ್ಟವರು. ಆ ಕಾರಣದಿಂದ ಮತ್ತು ಅಂತಹ ಅನುಭವದಿಂದ ಇದು ನಿಜವಾದ ಅರ್ಥದಲ್ಲಿ ಸಖ್ಯದ ಆಖ್ಯಾನವಾಗಿದೆ. ಇಲ್ಲಿ ಯಾವುದೂ ಹೊರಗಿನದಲ್ಲ, ಎಲ್ಲವೂ ನಮ್ಮ ಒಳಗಿನದೇ. ಪ್ರಾಣದ ಕೆಚ್ಚು ಕೆತ್ತಿ ರಚಿಸಿದ ಆ ಗಾರುಡಿಗನ ಕಾವ್ಯವು ಮಾರುಡಿಗೆಯಲಿ ಬಂದು ದರುಶನವನ್ನೂ, ವರವನ್ನೂ ನೀಡಿ ಹೋದ ದೈವ ಪ್ರಕಾಶದಂತೆ. ಮತ್ತಿಲ್ಲಿ ಕಾವ್ಯೋನ್ಮಾದದ ಲೀಲಾವಿಲಾಸವೇ ನಡೆದಿದೆ. ಅದು ಸಾದರ ಅವರಂತಹ ಕಾವ್ಯ-ಪ್ರೇಮಿಯನ್ನು ಕಾಡದಿರದೆ? ಅದರ ಫಲವೇ ಸಖ್ಯದ ಆಖ್ಯಾನ; ಮುಗಿಯದ ವ್ಯಾಖ್ಯಾನ.
ಬೇಂದ್ರೆಯನ್ನು ಕಂಡ’ವರು ಬರೆದ ಪುಸ್ತಕದ ಮೇಲೆ, ಬೇಂದ್ರೆಯನ್ನು ಕಾಣದ’ವನು ನಾಕು ಮಾತು ಆಡುವ ಪ್ರಯತ್ನವಿದು. ಇದು ಹೂಗಳ ಒಳಗಿನ ಅಮೃತದ ಬಿಂದುಗಳನ್ನು ಹುಡುಕ ಹೊರಟವರ ಹೆಜ್ಜೆಯನ್ನು ಎಲೆಗಳ ಬಿಂದುವಿನಲ್ಲಿ ಕಾಣುವ ಪ್ರಯತ್ನವೆಂತಲೂ ಹೇಳಬಹುದು. ಈ ಕೃತಿಯ ಶರೀರಕ್ಕೆ ಮೊದಲ ಅಧ್ಯಾಯವೇ ಆತ್ಮವೆಂದರೆ ತಪ್ಪಾಗಲಿಕ್ಕಿಲ್ಲ. ಬೇಂದ್ರೆಯವರ ಸಖೀಗೀತವನ್ನು ವಿಮರ್ಶೆಯ ಪರಿಭಾಷೆಗಿಂತ, ಪಟ್ಟ ಪಾಡು ಹುಟ್ಟು ಹಾಡಾಗುವ ಜೀವಂತ ಪ್ರಕ್ರಿಯೆಯ ಮೂಲಕ ಕಾಣುವ ಸಹೃದಯ ಸ್ಪಂದನೆ ಇಲ್ಲಿನ ಬರೆಹ. ಕಡಗೋಲಿಂದ ಹೃದಯವ ಕಡೆದ ಲೇಖಕರು ಅಂಬಿಕಾತನಯದತ್ತನೆಂಬ ಅವಧೂತ ಪ್ರಜ್ಞೆಯನ್ನು ಬೆಣ್ಣೆಯುಂಡೆಯಂತೆ ತೆಗೆದುಕೊಟ್ಟಿದ್ದಾರೆ. ಬೇಂದ್ರೆಯವರ ಹುಸಿನಗುತ ಬಂದೇವ ಪ್ರಸಿದ್ಧ ಸಾಲುಗಳನ್ನು ಉಲ್ಲೇಖಿಸುತ್ತ, ಲೇಖಕರು ಕವಿಯ ವೈಯಕ್ತಿಕ ದಾಂಪತ್ಯದ ಚಿತ್ರಣದಲ್ಲಿ ನಮ್ಮ ಆಶಯ, ಅಪೇಕ್ಷೆ, ದನಿಗಳಿರುವುದನ್ನು ಗುರುತಿಸಿದ್ದಾರೆ. ಇದು ಕಾವ್ಯದ ರಮ್ಯತೆಯ ಆಳದಲ್ಲಿರುವ ಜೀವಮೂಲವನ್ನೇ ತಾಕುವ ಪ್ರಯತ್ನವಾಗಿದೆ.
ಸಂಸಾರ ಸಾಗರ ಎಂಬ ಪಾರಂಪರಿಕ ಪರಿಕಲ್ಪನೆಯನ್ನು ಕಂಡಿದ್ದಲ್ಲದೇ, ಕಂಡುಂಡೂ ಸಾಗಿ ಬಂದ ಬೇಂದ್ರೆಯವರ ಆತ್ಮಸ್ಥೈರ್ಯವನ್ನು ಎತ್ತಿ ತೋರಲು, ಕೃತಿಕಾರರು ಬಾಳುವಿ ಸುಳ್ಳಾಟಂತ ಹೆದರಲಿಲ್ಲಾ! ಯಾರೂ ಹೆದರಿಸಲಿಲ್ಲಾ ಎನ್ನುವ ಕವಿಯ ಮಾತನ್ನು ಸೂಕ್ತ ಹಂತದಲ್ಲಿ ಉಲ್ಲೇಖಿಸುತ್ತಾರೆ.
ಸಂಸಾರ ಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ, ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಏನಿಹುದೊ ಎಂತಿಹುದೊ ಸಂಸಾರ ಸಾರ
ಕಂಡವರು ಯಾರದರ ಅಂತಪಾರ?
ಇಂಥವೆಲ್ಲ ಕವನೋಕ್ತಿಗಳನ್ನು ಬೇಂದ್ರೆ ಕಾವ್ಯಸಾಗರದಲ್ಲಿ ಬಿಚ್ಚು ಸ್ಮೃತಿಗಳ ಹಾಯಿ ಬೀಸುತ, ಮುತ್ತಿನ ತವರುಮನೆ ಮುಟ್ಟಿ ಬಂದಿದ್ದಾರೆ. ಅನುಭಾವಿ ಕವಿಯಾದರೂ ಸಂಸಾರದ ಬಗೆಗಿನ ಭಯ, ಆತಂಕಗಳನ್ನೂ, ಅದರ ಆಳ-ಅಗಲಗಳಲ್ಲಿ ಸಿಕ್ಕು ಒದ್ದಾಡಿದ ಪರಿಯನ್ನೂ ಹೇಳಲು ಸಾದರ ಅವರು ಮರೆಯುವುದಿಲ್ಲ. ಮಾತನ್ನು ಮಂತ್ರವಾಗಿಸಿದ ಮಾಂತ್ರಿಕ, ಒಳಮುಖ ಚಲನೆಯ ದಾರ್ಶನಿಕನಾದರೂ ಆತ ಕೂಡ ನಮ್ಮ ನಿಮ್ಮಂತೆ ಮನುಷ್ಯನೇ ಎಂಬ ಸತ್ಯವನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಇಟ್ಟು ನೋಡಿಯೇ ಸಿದ್ಧವೆನ್ನುವ ಲೇಖಕರ ಛಲವು ಅವರ ಚಿಕಿತ್ಸಕ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ಸಂಸಾರ ಯಾರಿಗೂ ಕಾಡದೇ ಬಿಟ್ಟಿಲ್ಲ, ಬೇಂದ್ರೆಯಂತಹ ಕಾವ್ಯ ಪಥಿಕ ಅದನ್ನು ಮೀರದೇ ಬಿಟ್ಟಿಲ್ಲ ಎನ್ನುವ ರೋಚಕ ಸಂಗತಿಯನ್ನು ಹೇಳಲು ಅವರು ಬಳಸುವ ವಿಶೇಷ ನುಡಿಗಟ್ಟು ಸಂಸಾರಸಾಹಸಗಾಥೆ’. ಈ ಶಬ್ದದ ಹಿಂದೆ ಎರಡು ರೀತಿಯ ಗ್ರಹಿಕೆಯನ್ನು ಊಹಿಸಬಹುದಾಗಿದೆ. ಸಂಸಾರವನ್ನು ಎದುರಿಸುವುದು ಒಂದು ಸಾಹಸವೇ ಆಗಿದೆ ಎನ್ನುವುದು ಒಂದು ಕಡೆಯಾದರೆ, ಸಾಹಸಿಯಾದವನು ಸಂಸಾರವನ್ನೆದುರಿಸುವ ಛಲ ಮತ್ತು ಬಲವನ್ನು ತನ್ನ ಅಂತಃಸತ್ವದಿಂದಲೇ ಪಡೆದಿರುತ್ತಾನೆಂಬ ಭಾವ ಮತ್ತೊಂದು ಕಡೆಗಿದೆ. ದೈನಂದಿನ ಬದುಕಿನ ಕಟುವಾಸ್ತವ, ಕಾವ್ಯ ಜೀವನದ ದಿಟ ಸೌಷ್ಠವಗಳೆರಡನ್ನೂ ಹಂಸಕ್ಷೀರನ್ಯಾಯದಂತೆ ಶೋಧಿಸುವ ಬಸವರಾಜ ಸಾದರವರು ವರಕವಿಯನ್ನು ನೆರೆಮನೆಯಲ್ಲಿ ಕೂರಿಸುತ್ತಾರೆ; ಭುವನದ ಭಾಗ್ಯನನ್ನು ಸಖಯೋಗ್ಯನನ್ನಾಗಿಸುತ್ತಾರೆ. ಹೀಗಾಗಿ ಪ್ರಸ್ತುತ ಕೃತಿಯು ಬೆಂದ ಬೇಂದ್ರೆಯನ್ನೂ, ಅಂದದ ದತ್ತನನ್ನೂ ಏಕಕಾಲಕ್ಕೆ ತೋರ್ಪಡಿಸುವ ಹೊಣೆಯನ್ನು ತಂತಾನೇ ಆವಾಹಿಸಿಕೊಂಡಿದೆ.
ಸಖಿಗೀತದಲ್ಲಿ ತಮ್ಮ ಜೀವನಕಥೆಯ ಹಂದರದ ಮೇಲೆ ಸಾಮಾನ್ಯ ಸಂಸಾರದ ಸುಖದುಃಖದ ಹಂಬನ್ನು(ಬಳ್ಳಿಯನ್ನು) ಹಬ್ಬಬಿಟ್ಟಿದ್ದಾಗಿ’ ಸ್ವತಃ ಬೇಂದ್ರೆಯವರೇ ಹೇಳಿಕೊಂಡಿದ್ದಾರೆ. ಇಲ್ಲಿ ಸಾಮಾನ್ಯ ಸಂಸಾರವೆಂದರೆ, ಬೇಂದ್ರೆ ಸಂಸಾರ ಅದಕ್ಕೆ ಹೊರತಾದದ್ದು ಎಂದು ಭಾವಿಸಬೇಕಾಗಿಲ್ಲ. ತನ್ನ ಸುತ್ತಣ ಬದುಕು ಎನ್ನುವ ಸಾಮಾನ್ಯೀಕರಿಸಿದ ವಿಚಾರಧಾರೆ ಯಾಗಿದೆ. ಕವಿ ತನ್ನ ಗೀತ’ದ ಮೂಲಕ ವೈಯಕ್ತಿಕ ಮತ್ತು ಸಾಮಾಜಿಕ ಜೀವಯಾನದ ಹಾಡು ಪಾಡುಗಳೆರಡನ್ನೂ ಬಿಚ್ಚಿಟ್ಟಿದ್ದಾನೆ. ಇದನ್ನು ತಮ್ಮ ಸೂಕ್ಷ್ಮಗ್ರಹಿಕೆಯ ಮೂಲಕ ಪರಿಭಾವಿಸಿರುವ ಬಸವರಾಜ ಸಾದರವರು ತಮ್ಮ ಪಠ್ಯದ ಬೆಳವಣಿಗೆಗೆ ಅತ್ಯಂತ ಸೂಕ್ತವೆನಿಸುವ ಬೇಂದ್ರೆ ಸಾಲುಗಳನ್ನು ಬಳಸಿದ್ದಾರೆ.
ಸಂಸಾರಯಾತ್ರೆಯು ಸಾಗರದೊಡನಾಟ
ಲವಣೋವಧಿಯಲ್ಲಿ ಜಲ-ಪಯಣ
ಎಲ್ಲಿಗೈತಂದರೂ ಬರದೊಂದು ಬಂದರು’
ಪೃಥ್ವಿ ಪ್ರದಕ್ಷಿಣೆಯ ನಿತ್ಯಕ್ರಮ
ಸಂಸಾರ ಯಾತ್ರೆ ಎಂಬುದು ಬಂದರು ಸಿಗದ ನಿತ್ಯ ಸಮುದ್ರಯಾನ ಎನ್ನುವ ಕವಿಯ ಭಾವವನ್ನು ಸರಿಯಾಗಿಯೇ ಗುರುತಿಸಿದ್ದಾರೆ. ಆದರೆ ಬೇಂದ್ರೆ ಎನ್ನುವ ಜಿದ್ದಿ’ ಮನುಷ್ಯ ಈ ಸತ್ಯವನ್ನು ಬೇರೆ ಎಲ್ಲರಿಗಿಂತ ಚೆನ್ನಾಗಿ ಅರಿತುಕೊಂಡರೂ ಪಯಣವನ್ನು ನಿಲ್ಲಿಸಲಿಲ್ಲ ಎಂಬುದನ್ನು ಲೇಖಕರು ಹೇಳದೇ ಬಿಟ್ಟಿಲ್ಲ. ಬಂದರಿನ ಅನ್ವೇಷಣೆ ಎನ್ನುವುದು ಹರಿಗಡೆಯದ ಹುಡುಕಾಟ ಎನ್ನುವ ಸಾರ್ವಕಾಲಿಕ ಸತ್ಯವನ್ನೇ ಹೇಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ರಸಕವಿ-ಋಷಿಕವಿ ಕೂಡ ನಿತ್ಯಬದುಕಿನ ಜಂಜಾಟದ ಹುದುಲಿನಲ್ಲಿ ಸಿಕ್ಕು ಒದ್ದಾಡಿದವನೇ ಅಂತ ಹೇಳಲು ಹಿಂಜರಿದಿಲ್ಲ. ಇಡೀ ಪುಸ್ತಕದಲ್ಲಿ ಸಾದರ ಅವರ ವಾಸ್ತವಿಕ ನೆಲಗಟ್ಟಿನ ಸಾಹಿತ್ಯಾವಲೋಕನವೇ ಇದೆ. ಹಾಗೆ ನೋಡಿದರೆ ಇದೊಂದು ಅಪ್ಪಟ ಕೃತಿನಿಷ್ಠ ನಿಲುವಿನ ಪರಿವೀಕ್ಷಣೆಯಾಗಿದೆ. ಬೇಂದ್ರೆ ಬಗೆಗಿನ ತಮ್ಮ ಪ್ರೀತಿಯನ್ನು ಅವರು ಸಹೃದಯ ಸ್ಪಂದನೆಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಮತ್ತು ಅದು ವ್ಯಕ್ತಿಗತ ಆರಾಧನೆಯಾಗದಂತೆ ಎಚ್ಚರ ವಹಿಸಿದ್ದಾರೆ. ನಾನು ಕೂಡ ಈ ಚೌಕಟ್ಟಿನಲ್ಲೇ ಕೃತಿಯನ್ನು ಪರಾಂಬರಿಸಬೇಕಾಗಿದೆ. ಕವಿಗೆ ವಿಮರ್ಶಕ ಪತ್ತುಗೆಗಾರನಾದಾಗಲೇ ಕಾವ್ಯದಾಳದ ತಿರುಳ ಸವಿಯನ್ನು ಸಹೃದಯರಿಗೆ ಹಂಚಬಲ್ಲ. ಅದರಲ್ಲೂ ಬೇಂದ್ರೆಯೆಂಬ ಕವಿ ಮಾಡಿದಾಟ ಅಂತಿಂಥದ್ದಲ್ಲ. ಆಡಿದ ಆಟ, ಹೂಡಿದ ಹೂಟ’ದ ನೆಲೆಯನ್ನು ಅರಿಯಬೇಕಾದರೆ ನಮ್ಮ ಗ್ರಹಿಕೆಯ ದೃಷ್ಟಿಯನ್ನು ಅರಿವಿನ ಸಾಣೆಗಲ್ಲಿಗೆ ಮಸೆಯಲೇಬೇಕು. ಇಲ್ಲದಿದ್ದರೆ ಅವರ ಕಾವ್ಯ ಝರಿಯು ಒಂದು ಭಾವಗೀತೆಯಾಗಿಯೋ, ಜನಪದ ಹಾಡಾಗಿಯೋ, ವಾತ್ಸಲ್ಯದ ನುಡಿಯಾಗಿಯೋ, ಪ್ರಕೃತಿ ವರ್ಣನೆಯಾಗಿಯೋ ಕಂಡುಬಿಡುವ ಸಾಧ್ಯತೆಯಿದೆ. ಅವರ ಪದ್ಯದ ಲಯ, ನಾದದ ಗುಂಗುಗಳಾಚೆಗೆ ನಾಗರಿಕ ಮನುಷ್ಯನ ಅಂತಃಶೋಧನೆಯ ಸರಣಿ ಅವಕಾಶಗಳಿವೆ. ಇಂತಹ ಸಾಧ್ಯತೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಎತ್ತಿ ತೋರಿಸಿದ ಈ ಸಂಕಲನದ ಲೇಖನವೆಂದರೆ ಅದಕು ಇದಕು ಎದಕು’. ಗಹನತೆಯನ್ನೊಳಗೊಂಡ ದಾಂಪತ್ಯ ಸಖ್ಯದ ಆಖ್ಯಾನ’ ಸುದೀರ್ಘವಾದ ವಿವರಣೆಯನ್ನು ನೀಡಿದರೆ, ಆಪ್ತತೆಯನ್ನು ಉಸುರುವ ಅದಕು ಇದಕು ಎದಕು’ ಚಿಕ್ಕ ಚೊಕ್ಕ ಚರ್ಚೆಯನ್ನು ನಡೆಸುತ್ತದೆ. ಬಸವರಾಜ ಸಾದರವರು ಬೇಂದ್ರೆಯವರ ದೇಶೀದರ್ಶನವನ್ನು ಧಾರವಾಡದ ದೇಸಿ ಭಾಷೆಯಲ್ಲಿ ಅಗದೀ ಮನಸಿಗ ನಾಟೂವಂಗ ಹೇಳ್ಯಾರ’ ಎಂದೇ ಹೇಳಬೇಕಾಗುತ್ತದೆ. ಕಲಾವಿದರ ಬಾಯಿಂದ ಕೇಳಿ ನಾಕು ದಿನ ಗುನುಗುನಿಸಿ ತೃಪ್ತಿಪಡಬಹುದಾಗಿದ್ದ ನಾನು ಬಡವಿ ಆತ ಬಡವ, ಒಲವೆ ನಮ್ಮ ಬದುಕು’ ಕವನದ ಆಳಕ್ಕಿಳಿದ ಲೇಖಕರು, ಬೇಂದ್ರೆ ಬರವಣಿಗೆಯ ಮೂಲ ದ್ರವ್ಯವನ್ನೇ ಬೊಗಸೆಯಲ್ಲಿ ತುಂಬಿ ಕೊಟ್ಟಿದ್ದಾರೆ. ವಿಶೇಷವಾಗಿ ಈ ಲೇಖನವನ್ನು ಓದಿದ ಕೆಲವರಾದರೂ, ಬೇಂದ್ರೆ ಕಾವ್ಯದ ತಮ್ಮ ಅನುಸಂಧಾನ ಮಾರ್ಗವನ್ನು ಬದಲಿಸಿಕೊಳ್ಳು ತ್ತಾರೆಂದು ನನಗೆ ತೀವ್ರವಾಗಿ ಅನಿಸುತ್ತಿದೆ. ಸ್ವತಃ ನನ್ನಲ್ಲೇ ಅಂಥ ಅನುಭವವಾಗಿದ್ದರಿಂದ ಈ ಮಾತನ್ನಿಲ್ಲಿ ಹೇಳಬೇಕಾಗಿದೆ. ಕೇವಲ ಪಾಂಡಿತ್ಯಪೂರ್ಣ ವಿಮರ್ಶೆಯಿಂದಲೇ ಮಹತ್ವದ ಕವಿಯ ಬರವಣಿಗೆಯ ಹೂರಣವನ್ನು ಅರಿಯಬೇಕಾಗಿಲ್ಲ, ಸಹೃದಯ ಓದಿನಿಂದ ಏನೆಲ್ಲ ಕಾಣಬಹುದೆಂಬುದನ್ನು ಲೇಖಕರು ತೋರ್ಪಡಿಸಿದ್ದಾರೆ. ಇಲ್ಲಿನ ಅದಕು ಇದಕು ಎದಕು’ ಮತ್ತು ಬದುಕು’ ಯಾವ ಮಟ್ಟದ ಆಳ ಅಗಲಗಳನ್ನು ಪಡೆದಿವೆ ಎನ್ನುವುದು ಲೇಖನ ಓದಿದಾಗಲೇ ತಿಳಿಯುತ್ತದೆ. ಕೃತಿಯ ಓದುಗರು ತಮ್ಮ ಇಚ್ಛಾನುಸಾರ ಈ ಲೇಖನಕ್ಕೆ ಪ್ರವೇಶ ಪಡೆಯಲಿ ಮತ್ತು ಅದರೊಳಗೆ ಹೊಕ್ಕು ವಿಹರಿಸಲಿ ಎನ್ನುವ ಉದ್ದೇಶದಿಂದ ನಾನು ಹೆಚ್ಚಿನ ವಿವರಣೆಯನ್ನು ಇಲ್ಲಿ ನೀಡುತ್ತಿಲ್ಲ. ಸಾದರವರ ನೆಲಮೂಲ ಭಾಷೆಯ ಸಿಹಿಯನ್ನು ಓದುಗರು ಸವಿಯಲಿ ಎಂಬುದು ನನ್ನ ಉದ್ದೇಶ.
ಆದರೆ ಬೇಂದ್ರೆ ಕಾವ್ಯಶಕ್ತಿ ಎಂಥದ್ದೆಂದರೆ, ಅದು ಭೂತವನ್ನು ಕೆಣಕುತ್ತದೆ, ವರ್ತಮಾನವನ್ನು ಪ್ರಭಾವಿಸುತ್ತದೆ, ಭವಿಷ್ಯತ್ತನ್ನು ಪ್ರೇರೇಪಿಸುತ್ತದೆ. ಅವರು ಕಾಲತತ್ವವನ್ನೇ ಒಂದು ಪಕ್ಷಿಯ ರೂಪಕದಲ್ಲಿ ಇಡಿಯಾಗಿ ಹಿಡಿಯಲು ಪ್ರಯತ್ನಿಸಿದ್ದಾರೆ.
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ?
ಕಾಲದ ಕಟ್ಟುವ ಮತ್ತು ಕೆಡವುವ ಎರಡೂ ಶಕ್ತಿಗಳನ್ನು ಇಲ್ಲಿ ಅಭಿವ್ಯಕ್ತಿಸಿ ಮುಂದೆ ಬಲ್ಲರು ಯಾರಾ ಹಾಕಿದ ಹೊಂಚ’ ಎಂಬ ನುಡಿಯೊಂದಿಗೆ ಕಾಲದ ಅನಿಶ್ಚಿತತೆಯನ್ನು ನಿರ್ಣಾಯಕ ಹಂತಕ್ಕೆ ತರುತ್ತಾರೆ. ತಾಲದಿ ಕಾಲವ ಸೊಲ್ಲಿಸುವಂತಿದೆ ಈ ಭಂಗಿ (ಏಲಾಗೀತೆಗಂಗಾವತರಣ) ಎಂದು ಕಾಲದೊಂದಿಗೆ ಮಾತನಾಡಬೇಕೆನ್ನುವ ಮನುಷ್ಯನ ನಿರಂತರ ಯತ್ನವನ್ನು ಕಾಣಿಸುತ್ತಾರೆ. ಅದಕು ಇದಕು ಎದಕು’ ಎನ್ನುತ್ತ ಬದುಕಿನುದ್ದಕ್ಕೂ ನಾವು ನವನವೋನ್ಮೇಷಶಾಲಿನಿಯಾದ ಅರ್ಥಗಳನ್ನು ಹುಡುಕಲು ದತ್ತಕಾವ್ಯ ಮುಂದೆಯೂ ಪ್ರೇರೇಪಿಸುತ್ತಲೇ ಇರುತ್ತದೆ. ನನ್ನ ಕಾವ್ಯದ ಅರ್ಥವನ್ನು ತಿಳಿಯುವುದು ಭವಿಷ್ಯತ್ತಿನಲ್ಲಿದೆ’ ಎಂದು ಅವರೇ ಒಂದೆಡೆ ಹೇಳಿದ್ದಾರೆ.
ಮೊದಲೆರಡು ಲೇಖನಗಳ ಗಾಂಭೀರ್ಯತೆಯ ಭಾರವನ್ನು ಇಳಿಸಲೆಂದೇ ಸೇರಿಸಿದ್ದಾರೇನೊ ಎನ್ನುವ ರೀತಿಯಲ್ಲಿ ಬಸವರಾಜ ಸಾದರವರು ಉಂಡಮ್ಯಾಲೆ’ ಎನ್ನುವ ಅಧ್ಯಾಯವನ್ನು ಮೂರನೆಯದಾಗಿ ಸೇರಿಸಿದ್ದಾರೆ. ಪ್ರಬಂಧ ಮಾದರಿಯ ಬರವಣಿಗೆಯನ್ನೂ ಅವರು ಸಿದ್ಧಿಸಿಕೊಂಡಿದ್ದಾರೆ ಎಂಬುದನ್ನು ಓದುಗರು ಗಮನಿಸದಿರಲಾರರು. ವಿಶ್ವವಿದ್ಯಾಲಯದ ಅಧ್ಯಯನ ವಿಭಾಗದಲ್ಲಿ ಕನ್ನಡ ಸಂಘದ ವಾರ್ಷಿಕೋತ್ಸವಕ್ಕೆ ಅತಿಥಿಗಳನ್ನು ಆಯ್ಕೆ ಮಾಡುವ ಚರ್ಚೆಯನ್ನೊಳಗೊಂಡ ಈ ಲೇಖನ ಅಂದಿನ ಧಾರವಾಡ ಪರಿಸರದ ತುಂಟಸ್ವಾರಸ್ಯವನ್ನು ತೆರೆದಿಡುತ್ತದೆ. ಗೆಳೆಯರ ನಡುವಿನ ಜೀವಜೀವಂತ ಚರ್ಚೆ ನಮ್ಮನ್ನಿಲ್ಲಿ ಕಾಲೇಜು ದಿನಗಳ ಕಡೆಗೆ ಕೊಂಡೊಯ್ಯುವುದರಲ್ಲಿ ಸಂಶಯವೇ ಇಲ್ಲ. ಅತಿಥಿಯನ್ನಾಗಿ ದ.ರಾ.ಬೇಂದ್ರೆಯವರನ್ನು ಆಹ್ವಾನಿಸಲು ಹೋದ ಸಂದರ್ಭವನ್ನು ಲೇಖಕರು ವಿಡಂಬನಾತ್ಮಕ ವಾಗಿಯೇ ಚಿತ್ರಿಸಿದ್ದಾರೆ. ಈ ಸಂದರ್ಭದಲ್ಲಿ ಸಹಪಾಠಿಯೊಬ್ಬ ಬೇಂದ್ರೆಯವರಿಗೆ ಕೇಳಿದ ಸಹಜ ಕುತೂಹಲ ಪ್ರಶ್ನೆಗೆ, ಎಂದಿನಂತೆ ಅವರು ನೀಡಿದ ಮಾರ್ಮಿಕ ಉತ್ತರವೇ ಉಂಡಮ್ಯಾಲೆ’.
ಒಬ್ಬ ವ್ಯಕ್ತಿ ತನಗಿರುವ ಎಲ್ಲ ಉಪಾಧಿಗಳನ್ನು ಮೀರಿ ಬೆಳೆದು, ಸಾಧಕನಾದಾಗ ಅವನಾಡುವ ಒಂದೊಂದು ಮಾತೂ ಸೂಳ್ನುಡಿಗಳಂತೆ ಕಂಗೊಳಿಸುತ್ತವೆ. ಇವತ್ತು ನಾವು ಮತ್ತೆ ಮತ್ತೆ ನಿರುಕಿಸುವ ಪ್ರಭೃತಿಗಳ ಪ್ರಸಿದ್ಧ ಹೇಳಿಕೆಗಳು ಅವರ ಸಹಜ ಅಭಿವ್ಯಕ್ತಿಗಳೇ ಆಗಿವೆ. ಹೋಗುತ್ತ ಬರುತ್ತ ಆಡಿದ ನುಡಿಗಳು ಕಾಲಾಂತರದಲ್ಲಿ ಬ್ರಹ್ಮವಾಕ್ಯಗಳಾಗಿ ನೆಲೆ ನಿಂತುಬಿಡುತ್ತವೆ. ಒಂದು ಸಂಸ್ಕೃತಿ ನಿರ್ಮಾಣದಲ್ಲಿ ಪ್ರವರ್ತಕರಾಗಿ ದುಡಿದು ನಿತ್ಯ ಸೂರ್ಯನಂತೆ ಬೆಳಕು ಚೆಲ್ಲುವ ಅಂತಹ ಮಹಾಮಹಿಮರ ಶಬುದಗಳು ಕಾಲದ ಸಾಣೆಗೆ ಸಿಕ್ಕು ಹೊಳಪು ಹೆಚ್ಚಿಸಿಕೊಳ್ಳುತ್ತವೆ. ಮನುಷ್ಯ ಜಾತಿ ತಾನೊಂದೆ ವಲಂ’ ಎಂಬುದೊಂದು ಅಂತಹ ಉಕ್ತಿ. ಈ ಮಾತಿನ ಅರ್ಥ ಹೊರಡಿಸುವ ಹೇಳಿಕೆ-ಪ್ರತಿಹೇಳಿಕೆಗಳನ್ನು ದಿನಬೆಳಗಾದರೆ ಕೇಳುತ್ತೇವೆ. ಪುಡಿ ರಾಜಕಾರಣಿಗಳೂ ಭೂತದ ಬಾಯಲ್ಲಿ ಅದೇನೋ ಬಂದಂತೆ ಅಪ್ಪಣೆ ಕೊಡಿಸುತ್ತಿರುತ್ತಾರೆ. ಆದರೆ ಮಾಮೂಲಿ(ಇವತ್ತಿನ ಮಾಮೂಲಿ ಅರ್ಥದಲ್ಲಿ) ಮಾತು ಕೂಡ ನುಡಿಸೊಡರಾಗಿ ಗೋಡೆಗೋಡೆಗಳ ಮೇಲೆ ಕಾಣಿಸಿಕೊಳ್ಳುವುದು ಅದನ್ನು ಚೆಲ್ಲುವರಿದ ಮನುಷ್ಯ ಬಾಳಿ ಬದುಕಿದ ರೀತಿಯಿಂದಲೇ ಹೊರತು, ಪಾಂಡಿತ್ಯ ಪ್ರದರ್ಶನದ ಶಬ್ದ ಸಂಭ್ರಮದಿಂದಲ್ಲ. ಉದಾಹರಣೆಗೆ ಬೇಂದ್ರೆಯವರ ಸಮರಸವೇ ಜೀವನ’ ಇಂದಿನ ಸಾಮಾಜಿಕ ಬದುಕಿನಲ್ಲಿ ಛಿommಚಿಟಿಜmeಟಿಣ ರೂಪದಲ್ಲಿ ಪ್ರತಿಷ್ಠಾಪನೆಯಾಗಿದೆ. ಹಾಗೆಯೇ ಮನುಜಮತ ವಿಶ್ವಪಥ’.
ಇಲ್ಲಿನ ಉಂಡಮ್ಯಾಲೆ’ ಅಂಬೋಣದಲ್ಲಿ ವಿಡಂಬನೆಯ ಧ್ವನಿಯಿರುವುದಂತೂ ಸತ್ಯ. ಹೀಗೆ ಅನಾಮಧೇಯರ ಬೆನ್ನು ಚಪ್ಪರಿಸಿ ಅವರು ಆಡಿದ ಮಾತುಗಳಿಂದ ದೀಕ್ಷೆ ಪಡೆದು ಮುಂದೆ ಖ್ಯಾತನಾಮರಾದ ಸಾಹಿತಿಗಳಿಗೇನೂ ಕಡಿಮೆಯಿಲ್ಲ. ಉಂಡಮ್ಯಾಲೆ’ ಆಶೀರ್ವಚನ ಪಡೆದು ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರುವ ಸಾಹಿತಿಗಳೊಬ್ಬರು ಈಗಲೂ ಧಾರವಾಡದಲ್ಲಿದ್ದಾರೆ. ಇವೆಲ್ಲ ಧಾರವಾಡದ ಅನೌಪಚಾರಿಕ ಸಾಹಿತ್ಯ ಚರ್ಚೆಯಲ್ಲಿ ಅವಾಗಾವಾಗ ನಮ್ಮ ಕಿವಿ ಮೇಲೆ ಬಿದ್ದ ಸುದ್ದಿಗಳು. ಅಧಿಕೃತ ದಾಖಲೆಗಳನ್ನು ಕೇಳಿದರೆ ಜಂಗಮಶೀಲವಾದ ನುಡಿಗೆ ಸ್ಥಾವರತ್ವವನ್ನು ಆರೋಪಿಸಿದಂತಾಗುತ್ತದೆ. ಉಂಡಮ್ಯಾಲೆ’ ಸಿಗುವ ಸುಖಾಂತವನ್ನು ಇತರೆ ಓದುಗರೂ ಅನುಭವಿಸಲಿ ಎಂದು ನಾನೂ ಒಬ್ಬ ಓದುಗನಾಗಿ ಆಶಿಸುತ್ತೇನೆ.
ದ.ರಾ.ಬೇಂದ್ರೆಯವರು ತಮ್ಮ ಶ್ಲೇಷಾರ್ಥದ ಮಾತಿಗೂ ಅಷ್ಟೇ ಪ್ರಸಿದ್ಧರು. ದಾರಿ ಹೋಕರೊಂದಿಗೆ ನಡೆಸಿದ ಸಹಜ ಸಂಭಾಷಣೆಯಿಂದ ಹಿಡಿದು ಗೆಳೆಯರ ಗುಂಪಿನಲ್ಲಿ ನಡೆಸಿದ ಚರ್ಚೆಯವರೆಗೆ, ಅವೆಲ್ಲವೂ ಕತೆಯಾಗಿ ಬಿಟ್ಟಿವೆ. ಬೇಂದ್ರೆ ಹಾಗಂದರು, ಹೀಗಂದರು ಎಂದು ಅವರ ಮಾತಿನ ಅರ್ಥ, ಶ್ಲೇಷೆ, ಬೆಡಗು, ಮೊನಚು, ಟೀಕೆ, ವಿಡಂಬನೆ ಜೊತೆಗೆ ದರ್ಶನಗಳನ್ನು ಕೂಡ ಸಾಮಾನ್ಯ ಜನರು ಅಲ್ಲಲ್ಲಿ ಮಾತನಾಡಿ ಕೊಳ್ಳುತ್ತಾರೆ. ಗತಿಸಿ ಹೋಗಿ ಐದು ದಶಕಗಳಾಗುತ್ತ ಬಂದರೂ ಅವರು ಗಾಳಿಯಲ್ಲಿ ತೇಲಿ ಬಿಟ್ಟ ಮಾತುಗಳೇ ಇವತ್ತು ದೈವದ ಕಾರಣೀಕಗಳಂತೆ ಜನರ ಬಾಯಲ್ಲಿ ಹರಿದಾಡುತ್ತಿವೆ. ವಾಟ್ಸಾಪ್ ಸಂದೇಶಗಳಲ್ಲಿ ಮನುಷ್ಯ ಮನುಷ್ಯನನ್ನು ತಿಳಿದು ಬದುಕಬೇಕು, ತುಳಿದು ಬದುಕಬಾರದು’ ಇಲ್ಲವೇ ಸಾವು ನನ್ನ ಕಡೆ ಬರೂದಿಲ್ಲ, ಯಾಕಂದ್ರ ಅದು ಬಂದಾಗ ನಾನಿರೂದಿಲ್ಲ’ ಎಂಬಂತ ಹೇಳಿಕೆಗಳು ಇಂದಿಗೂ ಸಂಚರಿಸುತ್ತಿವೆ. ಅವುಗಳ ಅಧಿಕೃತತೆಯ ಬಗ್ಗೆ ಯಾರೂ ಪ್ರಶ್ನಿಸದೆ ಕೈಯಿಂದ ಕೈಗೆ ದಾಟಿಸುತ್ತಾರೆ. ಬೇಂದ್ರೆ ಸ್ವತಃ ಆಧುನಿಕ ಜಾನಪದದ ವಸ್ತುವಾಗಿ ಗಸ್ತು ತಿರುಗುತ್ತಾರೆ. ಊರಿಗೆ ಊರೇ ವಿಚಾರಶೂನ್ಯದಲ್ಲಿ ಸ್ತಬ್ಧವಾಗಿ ಮಲಗಿದ್ದಾಗ ಸೀಟಿ, ಲಾಠಿ ಹಿಡಿದು ಗೂರ್ಖಾನಂತೆ ಸಂಚರಿಸುತ್ತ ಕೇಡನ್ನು ನಿಯಂತ್ರಿಸುತ್ತಾರೆ. ಹೀಗೆ ಅವರು ದೈನಂದಿನ ಕ್ರಿಯಾದಿಗಳನ್ನು ಪೂರೈಸುವ ಸಂದರ್ಭದಲ್ಲಿ ಆಡಿದ ಮಾತು ತಮ್ ಬಿಗಿ(ತಂಬಿಗಿ), ನಮ್ ಬಿಗಿ(ನಂಬಿಗಿ)’ ಇಲ್ಲೊಂದು ಸ್ವತಂತ್ರ ಲೇಖನವಾಗಿದೆ. ಮುಂಜಾನೆದ್ದು ಮಗನೊಂದಿಗೆ ಬಹಿರ್ದೆಸೆಗೆ ಹೋಗುವಾಗ ತೇಲಿಬಿಟ್ಟ ನಗೆಚಾಟಿಕೆಯ ಎಳೆಯನ್ನು ಹಿಡಿದು ಲೇಖಕರು ಒಟ್ಟು ಸಂದರ್ಭವನ್ನು ಬದುಕಿನ ದರ್ಶನದವರೆಗೆ ತೆಗೆದುಕೊಂಡು ಹೋಗಿದ್ದಾರೆ. ಫಜಾರಗಟ್ಟಿ ಮುಟ್ಟೋಣು ಬಾ’ ಎಂಬ ಕವಿತೆ ಕುರಿತಾಗಿ ವಿಶ್ಲೇಷಿಸಿದ ಸಾದರವರು, ಬೇಂದ್ರೆ ಕುರಿತಾದ ತಮ್ಮ ಬರವಣಿಗೆಯನ್ನು ಫಜಾರಗಟ್ಟಿಗೆ (ಪಾದಗಟ್ಟಿಗೆ) ಮುಟ್ಟಿಸಿಯೇ ಬಿಟ್ಟಿದ್ದಾರೆ. ಇದು ನಿಲ್ಲದ ತೇರಿನ ಮೆರವಣಿಗೆ ಎಂಬ ಸೂಚನೆಯನ್ನು ಕೊಟ್ಟಿದ್ದಾರೆ.
ತಮ್ ಬಿಗಿನಮ್ ಬಿಗಿ ಲೇಖನದಲ್ಲಿ ಮನುಷ್ಯನ ವೈಯಕ್ತಿಕ ದಣಿವು, ರಿಕ್ತತೆ ಸಾಮಾಜಿಕ ಬದುಕಿನಲ್ಲಿ ಆವರಿಸುವ ಶೂನ್ಯತೆಗೆ ಕಾರಣವಾಗುವ ಪರಿಯನ್ನು ಎಂದಿನ ಧಾರವಾಡದ ಜವಾರಿ ಭಾಷೆಯಲ್ಲಿ ಹೇಳಲಾಗಿದೆ. ಅಲ್ಲಿಗೇ ನಿಲ್ಲದೆ, ಹಿಡಕೋ ಕೈ, ನಡೀ ಹೋಗೋನು ಬಯಲ್ಕಡೀಗೆ’ ಎಂಬ ಮಾತಿನಲ್ಲಿ ಸಾದರವರು ಮನುಷ್ಯನಲ್ಲಿನ ಪರಸ್ಪರಾವಲಂಬನೆ ಮತ್ತು ಗಮ್ಯ(ಬಯಲ) ಸ್ಥಾನದೆಡೆಗಿನ ಜೀವನಯಾತ್ರೆಯ ಧ್ವನಿಯನ್ನು ಗುರುತಿಸಿದ್ದಾರೆ. ಬದುಕು ಬಯಲಾಗುವ ಶರಣರ ಬದುಕಿನ ಸೂತ್ರವನ್ನು ಕಟ್ಟೀ ಕಲ್ಲು ಕಟ್ಟೀಗ ಸಮ’ ಅನ್ನುವಂತೆ ಕೀಲಿಸಿದ್ದಾರೆ.
ವೈದಿಕ ಮನೆತನದಲ್ಲಿ ಹುಟ್ಟಿ ಅವೈದಿಕ ಮನಸ್ಸನ್ನು ಆವಾಹಿಸಿಕೊಂಡು, ದೇಸೀ ಪರಿಸರದಲ್ಲಿ ಬದುಕು ಮತ್ತು ಬರಹ ನಡೆಸಿದ ಬೇಂದ್ರೆಯನ್ನು ಹೇಗೆ ಬಣ್ಣಿಸುವುದು? ದೇಸಿಯೊಳ್ ಪುಗುವುದು, ಪೊಕ್ಕು ಮಾರ್ಗದೋಳ್ ತಳ್ವುದು’ (ಪಂಪ) ಎನ್ನಬಹುದೇ?
ವರಕವಿಯ ಪ್ರಸಿದ್ಧ ಗೀತೆ(ಹಾಡು ಅಂತಲೇ ಹೇಳಬೇಕು) ನೀ ಹೀಂಗ ನೋಡಬ್ಯಾಡ ನನ್ನ’, ಕುರಿತಾಗಿ ಕೂಡ ಬಸವರಾಜ ಸಾದರ ಅವರು ಬರೆದಿದ್ದಾರೆ. ಕವಿತೆ ಹುಟ್ಟಿದ ಭಾವಸಂದರ್ಭವನ್ನು ಸಂಕ್ಷಿಪ್ತವಾಗಿ ವರ್ಣಿಸಿ, ಅದು ಹೆಕ್ಕಿ ಕೊಡುವ ಸುತ್ತಣ ಜೀವನದ ವಾಸ್ತವತೆಯನ್ನೂ, ನಶ್ವರತೆಯನ್ನೂ ವಿಶದೀಕರಿಸಿದ್ದಾರೆ. ಮಲಗಿರುವ ಕೂಸು ಮಲಗಿರಲಿ ಅಲ್ಲೆ ಮುಂದಿನದು ದೇವರ ಚಿತ್ತ’ ಎಂಬ ಸಾಲಿನ ತಾತ್ಪರ್ಯವನ್ನು ಬಿಡಿಸಿಟ್ಟಿದ್ದಾರೆ. ಸತ್ತಿರುವ ಮಗು ಕವಿಗೆ ಮಲಗಿರುವ ಕೂಸಾಗಿ ಕಾಣುವಲ್ಲಿ, ಮಗುತನದ ಅಮರತ್ವವಿದೆ. ಅರಳು ಮರಳು ಕವಿಯ ಅವಧೂತ ಪ್ರಜ್ಞೆಯ ಮೂಲಕ ಮರಳಿ ಅರಳುವ ಕ್ರಿಯೆಯಾಗುವುದಾದರೆ, ಹುಟ್ಟು-ಸಾವುಗಳೆಂಬ ಲೌಕಿಕತೆಯನ್ನು ಪಾರಮಾರ್ಥಿಕತೆಗೆ ಬೇಂದ್ರೆಯೆಂಬ ದಿಗಂಬರತ್ವ ತೆಗೆದುಕೊಂಡು ಹೋಗಿರುವಲ್ಲಿ ಆಶ್ಚರ್ಯವೇನೂ ಇಲ್ಲ. ಪ್ರಸ್ತುತ ಲೇಖನಕ್ಕೆ ತುಟಿ ಕಚ್ಚಿ ಹಿಡಿಯದಿರು ಬಿಕ್ಕ…’ ಎಂಬ ಶೀರ್ಷಿಕೆ, ಮಗುವನ್ನು ಕಳೆದುಕೊಂಡಾಗ ಕುಟುಂಬದಲ್ಲಿ ಮಡುಗಟ್ಟಿದ ನೋವನ್ನು ಸೂತ್ರೀಕರಿಸಿ ಹೇಳುತ್ತಿದೆ.
ನಾಕು ತಂತಿಯನ್ನು ಮಿಡಿದ ಬೇಂದ್ರೆಯವರ ಕಾವ್ಯತಂತಿ ಸ್ವರವು ಬಯಲಭಾವ ಹೊರಡಿಸುವುದು ಎದೆಯ ಒಕ್ಕಲಿಗೆ’ ಎಂಬಂತಹ ಆತ್ಮನಿರೀಕ್ಷೆಯ ವಿಷಯ ವಸ್ತುವನ್ನೊಳಗೊಂಡ ಕವನದಲ್ಲಿ. ಅನುಭಾವದ ಕೃಷಿಯ ಕೋರಪಾಲು’ ಎಂಬ ಕೊನೆಯ ಲೇಖನದಲ್ಲಿ ಸಾದರವರು ಈ ಕವಿತೆಯ ಅನುಭಾವಿಕ ಕಾಣ್ಕೆಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದ್ದಾರೆ. ಆತ್ಮನಿರೀಕ್ಷೆ ಮಾತ್ರವಲ್ಲದೇ, ಆತ್ಮಪರಿವರ್ತನೆಗೂ ಬೇಂದ್ರೆಯೊಳಗಿನ ಕವಿ ಮೊರೆ ಹೊಕ್ಕಿದ್ದು ಹೊರಗಿನ ದೈವಕ್ಕಲ್ಲ, ಬದಲಾಗಿ ಮಾನವನ ಅಂತರಂಗದಲ್ಲಿರುವ ಚೈತನ್ಯಶಕ್ತಿಗೆ ಎನ್ನುವ ಸೂಕ್ಷ್ಮ ಸತ್ಯವನ್ನು ಶೋಧಿಸಿದ್ದಾರೆ.
ಎದೆಯ ಒಕ್ಕಲಿಗೆ’ ಕವಿತೆಯನ್ನು ವಿಶ್ಲೇಷಿಸುತ್ತ ಸಾದರವರು ಕೆಲವು ಹೊಸ ವಿಚಾರಗಳನ್ನು ಸಮಕಾಲೀನ ಬದುಕಿಗೆ ಸಮೀಕರಿಸಿ ಹೇಳಿದ್ದಾರೆ. ಕವಿಯ ಭಾವವನ್ನು ಸರಿಯಾಗಿ ಅರ್ಥೈಸಿ ಕೊಂಡು, ಬಾಹ್ಯ ಕೃಷಿಯೊಂದಿಗೆ ಅಂತರಂಗದ ಕೃಷಿಯನ್ನು ಮಾಡಿ ಅನುಭಾವದ ಬೆಳೆ ತೆಗೆಯುವ ಬೆಳಕಿನ ಮಾರ್ಗವನ್ನು ತೋರಿದ್ದಾರೆ. ಬಸವಣ್ಣನಾದಿಯಾಗಿ ಹನ್ನೆರಡನೇ ಶತಮಾನದ ಶರಣರು ನಿಷ್ಠುರ ಆತ್ಮಶೋಧನೆ ನಡೆಸಿ ಬದುಕಿನ ಸಾಕ್ಷಾತ್ಕಾರವನ್ನು ಪಡೆದುಕೊಂಡ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಅಂತೆಯೇ ಲೇಖಕರು ಬಸವಣ್ಣನ ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ’ ಎಂಬ ವಚನವನ್ನು ಕೂಡ ಉಲ್ಲೇಖಿಸಿದ್ದಾರೆ. ಈ ಚರ್ಚೆಯನ್ನು ಹೀಗೆ ಇನ್ನೂ ಬಹಳ ದೂರ ಕೊಂಡೊಯ್ಯುವ ಅವಕಾಶಗಳಿವೆ. ಹನ್ನೆರಡನೇ ಶತಮಾನದ ಕೃಷಿ ಕಾಯಕ ಜೀವಿ ಒಕ್ಕಲಿಗ ಮುದ್ದಣ್ಣ ಅಂಗವೇ ಭೂಮಿಯಾಗಿ ಲಿಂಗವೇ ಬೆಳೆಯಾಗಿ | ವಿಶ್ವಾಸವೆಂಬ ಭತ್ತ ಒಲಿದು ಉಂಡು | ಸುಖಿಯಾಗಿರಬೇಕು’ ಎಂದಿದ್ದಾನೆ. ಹೃದಯದ ಹೊಲಕ್ಕೆ ಉತ್ತಮ ಸಂಸ್ಕಾರ ನೀಡದೇ, ಒಳಗಿನ ಕೃಷಿಯನ್ನು ಲಿಂಗಾಂಗಸಾಮರಸ್ಯದಿಂದ ಮಾಡದೇ ಇದ್ದರೆ ನೀ ಕೊಟ್ಟ ಭೂಮಿಗೆ ಮುಂದೆ ಕರಲು, ಹಿಂದೆ ಇಗ್ಗರಲು | ಅಲ್ಲಿಂದ ಆಚೆ ಮಧ್ಯೆಭೂಮಿ’ ಆಗುವುದು ನಿಶ್ಚಿತ ಅಂತಲೂ ಎಚ್ಚರಿಸಿದ್ದಾನೆ. ಇವರೆಲ್ಲರ ಗುರುವಿನ ಗುರುವಾದ ಅಲ್ಲಮನು ಕೃಷಿ ಪಾರಿಭಾಷಿಕ ಪದಗಳನ್ನು ಬಳಸಿ ದೇಹವೆಂಬ ತೋಟದಲ್ಲಿ ಆಧ್ಯಾತ್ಮವೆಂಬ ಜಾಗರದ ಸಸಿಯನ್ನು ನೆಟ್ಟು ಅನುಭಾವದ ಪೈರನ್ನು ತೆಗೆಯುವ ಸಾಧನಾ ಮಾರ್ಗವನ್ನು ತೋರಿದ್ದಾನೆ. ಇದು ಆತನ ಸುಪ್ರಸಿದ್ಧ ತನುವ ತೋಂಟವ ಮಾಡಿ, ಮನವ ಗುದ್ದಲಿ ಮಾಡಿ | ಅಗೆದು ಕಳೆದೆನಯ್ಯಾ ಭ್ರಾಂತಿನ ಬೇರ’ ಎಂಬ ವಚನದಲ್ಲಿ ಮಾರ್ಮಿಕವಾಗಿ ಬಿಂಬಿತವಾಗಿದೆ.
ಅನುಭಾವದ ಕೃಷಿಯ ಕೋರಪಾಲು’ ಲೇಖನದ ಮತ್ತೊಂದು ವೈಶಿಷ್ಟ್ಯವೆಂದರೆ ನಮ್ಮ ಸಾಹಿತ್ಯ ವಾಙ್ಮಯದ ಪ್ರಭುಸಂಮಿತ, ಮಿತ್ರಸಂಮಿತ, ಕಾಂತಾಸಂಮಿತಗಳೊಂದಿಗೆ ಎದೆಯ ಒಕ್ಕಲಿಗೆ ಕಾವ್ಯದಲ್ಲಿನ ಸ್ವಂತೋಪದೇಶಸಂಮಿತ’ವನ್ನು ಗುರುತಿಸಿ ಮುನ್ನೆಲೆಗೆ ತಂದಿರುವುದು. ಇದು ಬೇಂದ್ರೆ ಕಾವ್ಯ ಕುರಿತ ಹೊಸ ಚರ್ಚೆಗೆ ನಾಂದಿ ಹಾಡುವ ಸಾಧ್ಯತೆಯಿದೆ. ಆದರೆ ಜನಸಾಮಾನ್ಯರು ಬೇಂದ್ರೆಯನ್ನು ಸಂಪಾದಿಸಿಕೊಂಡಿದ್ದು ಕಾವ್ಯಾನುಭವದ ಕಾಂತಾಸಂಮಿತದ ಮೂಲಕವೆಂದೇ ನನ್ನ ಅಭಿಪ್ರಾಯ.
ಉಳಿದಂತೆ, ತಮ್ಮ ವೃತ್ತಿಯ ಅಪಾರ ಅನುಭವದ ಮೂಲಕ ಒಬ್ಬ ಉತ್ತಮ ಪ್ರಸಾರ ತಜ್ಞರಾಗಿ ಹೆಸರು ಮಾಡಿರುವ ಸಾದರವರು ಬೇಂದ್ರೆ ಶತಮಾನೋತ್ಸವ ಸಂದರ್ಭದಲ್ಲಿ ನಡೆಸಿಕೊಟ್ಟ ಇದು ಬರಿ ಬೆಳಗಲ್ಲೊ ಅಣ್ಣಾ…’ ಎನ್ನುವ ಆಕಾಶವಾಣಿ ಕಾರ್ಯಕ್ರಮದ ಕುರಿತಾಗಿ ವಿಸ್ತೃತ ಲೇಖನವನ್ನು ಬರೆದಿದ್ದಾರೆ. ಇದು ಹಿನ್ನೆಲೆ, ಮುನ್ನೆಲೆ ಮತ್ತು ಆ ಸಂದರ್ಭದ ಸವಾಲು-ಪರಿಹಾರಗಳ ಕುರಿತಾದ ಲೇಖನವಾಗಿರುವುದರಿಂದ ಸಾಕಷ್ಟು ಮಾಹಿತಿಪೂರ್ವಕ ಸಂಗತಿಗಳಿವೆ. ಅವರು ನಡೆಸಿದ ಪ್ರಯೋಗಕ್ಕೆ ಜನಮನ್ನಣೆಯ ಜೊತೆಗೆ, ಆಕಾಶವಾಣಿಯ ಶ್ರೋತೃ ಸಂಶೋಧನಾ ವಿಭಾಗದಿಂದ ನೂತನ ಮಾದರಿಯ ಪ್ರಪ್ರಥಮ ಕಾರ್ಯಕ್ರಮ ಎಂಬ ಮುದ್ರೆಯೂ ಬಿದ್ದಿದೆ. ಇದು ಅವರಲ್ಲಿ ಸಾರ್ಥಕ ಭಾವವನ್ನು ಮೂಡಿಸಿದೆ.
ಬೇಂದ್ರೆ ಪ್ರೀತಿ ಎಂದರೆ ಜೀವನ ಪ್ರೀತಿಯೇ. ಬಸವರಾಜ ಸಾದರ ಅವರು ಬೇಂದ್ರೆ ಅಜ್ಜನನ್ನು ಮನೆಯ ಅಜ್ಜನಂತೆಯೇ ಮನಸ್ಸಿಗೆ ಹಚ್ಚಿಕೊಂಡು ಬರೆದಿದ್ದಾರೆ. ಹಾಗೆಂದು ಕೇವಲ ಆರಾಧನಾ ಭಾವನೆಯಿಂದ ಹಾಡಿಹೊಗಳುವ ಅನುತ್ಪಾದಕ ಸ್ಥಿತಿಗಿಳಿಯದೇ ಸಾಹಿತ್ಯದ ವಿದ್ಯಾರ್ಥಿಯ ವಿನಯ ಮತ್ತು ಶಿಸ್ತಿನಿಂದ ಕಾವ್ಯಾನುಸಂಧಾನ ನಡೆಸಿದ್ದಾರೆ. ಕೆಲವೆಡೆ ತಮಗೆ ಒದಗಿ ಬಂದ ಭಾವನಾತ್ಮಕ ಸನ್ನಿವೇಶಗಳನ್ನು ಹಂಚಿಕೊಂಡಿದ್ದಾರೆ. ಏನೇ ಆದರೂ ಬೇಂದ್ರೆಯನ್ನು ಸ್ವತಃ ಕಂಡವರು, ಬೇಂದ್ರೆಯನ್ನು ಕೇವಲ ಕೇಳಿದ ಜನಾಂಗಕ್ಕೆ, ಬೇಂದ್ರೆ ಇರುವನ್ನು ತೋರಿಸಿ, ಬೇಂದ್ರೆ ಅರಿವನ್ನು ಮೂಡಿಸಿ, ಬೇಂದ್ರೆ ಹರಿವನ್ನು ದಾಟಿಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ವ್ಯವಹಾರಿಕ ಜಗತ್ತಿನ ನಿರ್ಮೋಹಿ, ಕಾವ್ಯ ಜಗತ್ತಿನ ಕಡುಮೋಹಿಯಾದ ದತ್ತಾವಧೂತನನ್ನು ಲೇಖನಗಳಲ್ಲಿ, ಪುಸ್ತಕಗಳಲ್ಲಿ ಹಿಡಿದಿಡುವುದು ಸುಲಭದ ಮಾತಲ್ಲ. ಅಂತಹ ಸಾಹಸಕ್ಕೆ ಕೈ ಹಾಕಿದ ಬಸವರಾಜ ಸಾದರವರ ಬರವಣಿಗೆಯಲ್ಲಿ ಬೆಚ್ಚನೆಯ ಆತ್ಮತೃಪ್ತಿಯೊಂದು ಕಾಣುತ್ತಿದೆ. ತಮಗೆ ಸಿಕ್ಕ ಬೆಳಕನ್ನು ಇತರರಿಗೂ ಹಂಚುವ ಅವರ ಕೆಲಸ ಸ್ತುತ್ಯಾರ್ಹವಾಗಿದೆ. ಕಾಮನಕಟ್ಟೆ ಮಾತು, ಸಾಧನಕೇರಿ ಹಾಡು, ಗೆಳೆಯರ ಗುಂಪಿನ ಹರಟೆ, ಸಮುದ್ರ ದಾಟದ ನಡಿಗೆ, ಇಷ್ಟರಲ್ಲೇ ವಿಶ್ವಮೈತ್ರಿ ಸಾಧಿಸಿದ ಶತಮಾನದ ಕವಿ ಈ ಶಬ್ದಗಾರುಡಿಗ. ಯಾರೋ ಓದುತ್ತಾರೆ, ಮತ್ತ್ಯಾರೋ ಬರೆಯುತ್ತಾರೆ, ಇನ್ಯಾರೋ ಹಾಡುತ್ತಾರೆ ಈ ಹರಿಗಡಿಯದ ಪ್ರಜ್ಞಾಪ್ರವಾಹವನ್ನು.
ಪುಸ್ತಕದ ವಿನ್ಯಾಸದ ದೃಷ್ಟಿಯಿಂದ ಇದುವರೆಗಿನ ನನ್ನ ಪ್ರಲಾಪವನ್ನು ಮುನ್ನುಡಿಯೆಂದು ಹೇಳಬಹುದೇನೋ. ತೀರ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮುನ್ನುಡಿಯ ಹಂಗಿಲ್ಲದ ಬರವಣಿಗೆಯಿದು. ಸಹೃದಯ ಬರಹದ ಸಹೃದಯ ಓದು ಎಂದುಕೊಂಡರೆ ಧನ್ಯ.
ಬಸವರಾಜ ಸಾದರ ಅವರನ್ನು ಅಭಿನಂದಿಸಲೇಬೇಕು.
–ಚನ್ನಪ್ಪ ಅಂಗಡಿ, ಧಾರವಾಡ
ಪುಟ ತೆರೆದಂತೆ…
ಸವಿನುಡಿ / ೩
ಬೆಂದ ಬದುಕಿನ ತಂಪನರಸುತ್ತ… / ೫
ಸಾಗರದೊಂದು ಹನಿಯ ಸ್ಪರ್ಶ / ೧೫
೧. ದಾಂಪತ್ಯ ಸಖ್ಯದ ಆಖ್ಯಾನ… / ೨೧
೨. ಅದಕು ಇದಕು ಎದಕು / ೬೧
೩. ಉಂಡಮ್ಯಾಲೆ… / ೬೭
೪. ಗಟ್ಟ್ಯಾಗಿರಬೇಕು ತಮ್ ಬಿಗಿ(ತಂಬಿಗಿ), ನಮ್ ಬಿಗಿ(ನಂಬಿಗಿ) / ೭೫
೫. ತುಟಿ ಕಚ್ಚಿ ಹಿಡಿಯದಿರು ಬಿಕ್ಕ… / ೭೮
೬. ಇದು ಬರಿ ಬೆಳಗಲ್ಲೊ ಅಣ್ಣಾ… / ೮೧
೭. ಅನುಭಾವದ ಕೃಷಿಯ ಕೋರಪಾಲು / ೯೮
Reviews
There are no reviews yet.