ನಲ್ನುಡಿ
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
-ಸಂತ ಶಿಶುನಾಳ ಶರೀಫ
ಗುಲಾಮ ಎಂದ ತಕ್ಷಣ ಇಲ್ಲಿ ಅನ್ಯಥಾ ಭಾವಿಸಬಾರದು. ಸದ್ಗರು ಹಾಕಿ ಕೊಟ್ಟ ದಾರಿಯಲ್ಲಿ ಕಟ್ಟುನಿಟ್ಟಾಗಿ ಮುನ್ನಡೆಯುವುದೊಂದೇ ಅದರ ಹಿಂದಿರುವ ವಿಶಾಲ ಅರ್ಥ. ಈ ಸಂದೇಶವನ್ನು ಸಂಸ್ಕೃತಿಯ ವಾಹಕಗಳಾದ ಸಾಹಿತ್ಯ, ಕಲೆ, ಜನಪದ, ಜನಾಂಗೀಯ ಅಧ್ಯಯನಗಳ ಸಂಶೋಧನೆಗಳಂಥ ಉತ್ಖನನ’ ಕಾರ್ಯದಲ್ಲಿ ಸ್ವತಃ ತೊಡಗಿಸಿಕೊಂಡ ಪ್ರೊ. ಎಂ.ಎಂ.ಕಲಬುರ್ಗಿ ಮತ್ತು ಹಾಗೆ ತೊಡಗಿಸಿಕೊಳ್ಳುವಲ್ಲಿ ಕಟ್ಟೆಚ್ಚರ ವಹಿಸಿದ ಅವರ ಅಪಾರ ಶಿಷ್ಯ ಬಳಗಕ್ಕೂ ಅನ್ವಯಿಸುವಂತದ್ದು.
ಕನ್ನಡಕ್ಕೊಬ್ಬನೇ ಕಲಬುರ್ಗಿ’ ಎನ್ನುವಂತೆ ಅವರ ಘನ ವ್ಯಕ್ತಿತ್ವ ಹೇಗಿತ್ತೆಂದರೆ ಬಳ್ಳಿಗುರುಡರು ಹೋಗಿ ಆನೆಯ ಮೈ ಸ್ಪರ್ಶಿಸಿದ ಅನುಭವ, ಹತ್ತಿರದಿಂದ ಬಲ್ಲವರಿಗೆ. ಅವರದು ಏನಿದ್ದರೂ ತೆಕ್ಕೆಗೊಗ್ಗದ ಬಹುಮುಖೀ ಪ್ರತಿಭೆಯಾಗಿದ್ದ ಕಾರಣಕ್ಕೆ ಈ ರೂಪಕ. ಬೋಧಕ ಪ್ರಪಂಚದ ಸಂಶೋಧನ ಕ್ಷೇತ್ರದಲ್ಲಿ ತಾವೂ ದಣಿವರಿಯದೆ ದುಡಿಯುತ್ತಿದ್ದ; ತಮ್ಮ ಸಂಪರ್ಕಕ್ಕೆ ಬಂದವರನ್ನೂ ಹಾಗೆ ಸರಿಯಾಗಿ ದುಡಿಯಲು ಹಚ್ಚುತ್ತಿದ್ದ; ಕಾಡುವ ಗುಣ ಉಳ್ಳವ’ರೆಂದೇ ಪ್ರತೀತಿಯಾಗಿದ್ದರವರು. ಒಂದೇ ಮಾತಿನಲ್ಲಿ ಹೇಳುವುದಾದರೆ- ನಮ್ಮ ಪಾಲಿಗೆ ಈ ಕಲಬುರ್ಗಿ ಮಾಸ್ತರನೆಂದರೆ ನಾಡು ಕಂಡ ಬಹು ದೊಡ್ಡ ಆಸ್ತಿ; ಸುಲಭವಾಗಿ ಅವರನ್ನು ಅರಗಿಸಿಕೊಳ್ಳಲು ಆಗದ ಕಾಲಾತೀತ ವ್ಯಕ್ತಿ.
ಈಗ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ, ಕಲಬುರ್ಗಿಯವರ ಆಪ್ತ ಶಿಷ್ಯ ಬಳಗದಲ್ಲಿದ್ದವರೂ ಆದ ಪ್ರೊ. ಎಫ್.ಟಿ.ಹಳ್ಳಿಕೇರಿ ಮೊನ್ನೆ ಫೋನಾಯಿಸಿ ಹತ್ಯೆಯಾದ ತಮ್ಮ ಆ ವಿದ್ಯಾಗುರುಗಳ ಬಗ್ಗೆ, ಜೀವಂತವಾಗಿದ್ದಾಗ ಅವರೊಂದಿಗಿನ ಆ ಆಪ್ತ ಒಡನಾಟ ವನ್ನು ದಾಖಲಿಸುವ ತೆರದಲ್ಲಿ, ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಮಂಡಿಸಿದ ತಮ್ಮ ಬಿಡಿ ಲೇಖನಗಳ ಸಂಗ್ರಹ ಒಂದನ್ನು ಕೃತಿ ರೂಪದಲ್ಲಿ ಕಟ್ಟಿಕೊಡಲು ಸಿದ್ಧಪಡಿಸುತ್ತಿರುವುದಾಗಿಯೂ, ಹಿಂದೆ ನೀವೂ ಅವರ ಹಳೆಯ ವಿದ್ಯಾರ್ಥಿಯಾಗಿದ್ದ ಕಾರಣಕ್ಕೆ ಮುನ್ನುಡಿ ರೂಪದ ಎರಡು ಮಾತು ಬರೆದು ಕೊಡಬೇಕೆಂದು ನನಗೆ ಕೇಳಿಕೊಂಡರು.
ಅದಕ್ಕೆ ಕಾರಣವೂ ಇಲ್ಲದಿಲ್ಲ. ಒಂದು ಕಾಲದಲ್ಲಿ ನಾನೂ ಕಲಬುರ್ಗಿಯವರ ಆಪ್ತ ವಿದ್ಯಾರ್ಥಿಯೆಂಬ ಕಾರಣಕ್ಕೆ ನೀನಲ್ಲದೆ ಇನ್ನಾರು ಬರೆಯಬೇಕು? ಎಂಬ ಅಧಿಕೃತ ಒತ್ತಾಸೆ, ಅಧಿಕಾರವಾಣಿಯೂ ಅದರ ಹಿಂದೆ ಇರಬೇಕು. ನಮ್ಮ ಕಣ್ಣೆದುರಿಗೆ ಇಲ್ಲದಿದ್ದರೂ ಕಲಬುರ್ಗಿ ಗುರುಗಳು ದೂರದಲ್ಲಿ ಎಲ್ಲೋ ಕಾಣದ ಲೋಕದಲ್ಲಿ ಕೂತು ನಮ್ಮ ಪರದಾಟ ಕಂಡು ಹೆಮ್ಮೆಯಿಂದ ಬೀಗುತ್ತಲೇ ನೋಡಿ ನಗುತ್ತಿರುವಂತೆ ಭಾಸವಾಗುತ್ತಿದೆ. ಇದನ್ನೇ ಕಾಡುವ ಗುಣ’ ಅನ್ನುವುದು. ಎಷ್ಟೇ ಆದರೂ ಅವರೇ ಹಾಕಿದ ಮರಗಳಲ್ಲವೆ ನಾವು!
ನನ್ನದೇ ಆದ ಕಾರಣಕ್ಕೆ, ಹಿಂದೆ ಓದಿದ್ದೆಲ್ಲ ಮರೆತುಹೋದ ತಹತಹಿಕೆಯಲ್ಲಿರುವ, ಜೊತೆಗೆ ವೃತ್ತಿಯಲ್ಲಿ ಬೋಧಕೇತರ(ನಾನ್-ಅಕಾಡೆಮಿಕ್) ವಲಯದ ನನಗೆ ವಿಶ್ವವಿದ್ಯಾಲಯದ ಹಳ್ಳಿಕೇರಿಯವರ ನಿರೀಕ್ಷೆಯನ್ನು ನಿಭಾಯಿಸಲು ನನ್ನಿಂದ ಸಾಧ್ಯವಾದೀತೆ ಎಂದು ಗಾಬರಿಯಾಯಿತು. ನನ್ನನ್ನು ನಾನೇ ತಹಬಂದಿಗೆ ತಂದುಕೊಂಡವನಾಗಿ, ಒಂದು ಕಾಲದಲ್ಲಿ ನನಗೂ ವಿದ್ಯಾಗುರು ಗಳಾಗಿದ್ದ, ಪ್ರೊ. ಕಲಬುರ್ಗಿ ಅವರನ್ನು ಈ ನೆಪದಲ್ಲಾದರೂ ನೆನಪಿಸಿಕೊಳ್ಳಲು ಅವಕಾಶವಿತ್ತ ಹಳ್ಳಿಕೇರಿಯವರ ಕಾರ್ಯವನ್ನು ಮೆಚ್ಚಿಕೊಂಡಂತೆ ಇಲ್ಲಿ ನನ್ನೆರಡು ಮಾತು ಜೋಡಿಸಿದ್ದೇನೆ, ನಲ್ನುಡಿ ರೂಪದಲ್ಲಿ. ಬರೆದವರಿಗೂ ಬರೆಸಿಕೊಂಡವರಿಗೂ ಅದು ಗೌರವ ತರುವ ಕೆಲಸವೆಂದೇ ಬಗೆದವನು, ನಾನು. ಮತ್ತೊಬ್ಬರ ಕೃತಿ ಓದುವುದೆಂದರೇನೇ ಅವರ ಅನುಭವ ಲೋಕವನ್ನು ಪ್ರವೇಶಿಸಿದಂತೇ ಎಂದು ಭಾವಿಸಿ ಕೈಯಿಕ್ಕಿದ್ದೇನೆ.
ಸೃಜನಶೀಲ ಲೇಖಕನಾಗಬೇಕೆಂಬ ಕನಸು ಕಂಡು ಕತೆ, ಕಾದಂಬರಿ, ಕವನ ಬರೆಯ ಹೋಗಿ ಫೇಲಾಗಿ, ಕೊನೆಗೆ ಎಡವಟ್ಟ ನಡೆದದ್ದೇ ದಾರಿ’ ಎಂಬಂತೆ, ಹೊಟ್ಟೆಯ ಸಂಕಟಕ್ಕೆ ಪುಡಿ ಪ್ರಬಂಧಗಳನ್ನೇ ಬರೆಬರೆದು ಅವಕ್ಕೆ ಲಲಿತ ಪ್ರಬಂಧ ಎಂಬೋ ಲೇಬಲ್ ಬಡಿದುಕೊಂಡು ಬದುಕಿ ಉಳಿದವನು. ಸಾಹಿತ್ಯ ಪ್ರಪಂಚದ ಔದಾರ್ಯ ದೊಡ್ಡದು ನನ್ನ ಕೈಹಿಡಿಯಿತು. ಎಷ್ಟೇ ಆದರೂ ಸಾಮಾಜಿಕವಾಗಿ ಹಿಂದುಳಿದ ಜನಾಂಗದ ಅನಕ್ಷರಸ್ಥ ಕುಟುಂಬದಿಂದ ಎದ್ದು ಬಂದವರ ಬೆನ್ನಿಗೆ ಅಗಾಧವಾದ ಅನುಭವಗಳ ಮೂಟೆಯಿರುತ್ತದೆ. ಅದನ್ನೇ ಬಂಡವಾಳ ಮಾಡಿಕೊಂಡು ಬಂದವನು ನಾನು. ವಿಶ್ವವಿದ್ಯಾಲಯ ಮಟ್ಟದಲ್ಲಿನ ಆ ಗಂಭೀರ ಸಂಶೋಧನೆ, ಮಹಾಪ್ರಬಂಧ ಎಂಬ ಗೋಜಲೇ ನನಗೆ ಗೊತ್ತಿಲ್ಲದ ಕಾರಣಕ್ಕೆ ಇಷ್ಟೆಲ್ಲಾ ವಿವರಣೆ.
ಪ್ರೊಫೆಸರ್ ಹಳ್ಳಿಕೇರಿಯವರು ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಇಲ್ಲಿನ ಲೇಖನಗಳಲ್ಲಿ ತಮ್ಮ ವಿದ್ಯಾಗುರುಗಳನ್ನು ನೆನಪಿಸಿಕೊಳ್ಳುವ ರೀತಿಯೇ ಅನನ್ಯವಾಗಿದೆ. ಎಲ್ಲಿಯೂ ಆತ್ಮ ಪ್ರಶಂಸೆಗಿಳಿಯದ ಆಪ್ತ ಧಾಟಿಯಲ್ಲಿ, ತಾವು ನಂಬಿದ್ದ ಮೆಚ್ಚಿನ ಗುರುವಿನ ವಿಪರೀತ ವೈಭವೀಕರಣಕ್ಕೂ ಹೋಗದೆ, ಅವರೊಂದಿಗಿನ ಹಿತವಾದ ಒಡನಾಟದ ನೆನಪುಗಳನ್ನು ಸಹಜವಾಗಿ ಮೆಲುಕು ಹಾಕುತ್ತಾ ಹೋಗಿ, ಕೊಲ್ಯಾಜ್ ಟೈಪ್ ಚದುರಿದ ಚಿತ್ರಗಳನ್ನು ಅಂಟಿಸಿದಂತೆ ನಮಗೆ ಕಲಬುರ್ಗಿಯವರ ಒಟ್ಟಾರೆ ವ್ಯಕ್ತಿ ಚಿತ್ರವನ್ನು ವಿವಿಧ ಬಗೆಯ ಆಯಾಮಗಳಲ್ಲಿ ಇಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ ಪರಿಯೇ ವಿಶಿಷ್ಟವಾಗಿದೆ.
ಅದು ಸಾವಿರದೊಂಬೈನೂರಾ ಎಂಬತ್ತೆರಡು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ ನಾನು. ಅದೇ ವರ್ಷ ಹೊಸದಾಗಿ, ಸಂಶೋಧನಶಾಸ್ತ್ರ’ಕ್ಕೆ ಬೀಜ ಹಾಕಿದಂತೆ ಹೊಸ ವಿಷಯ-ಕೋರ್ಸ್ ಅನ್ನು ಆರಂಭಿಸಲಾಗಿತ್ತು. ಕಲಬುರ್ಗಿ ಗುರುಗಳೇ ಖುದ್ದಾಗಿ ಪಾಠ ಮಾಡುತ್ತಾರೆಂಬ ಕಾರಣಕ್ಕೆ ಅವರ ಘನ ವ್ಯಕ್ತಿತ್ವಕ್ಕೆ ಮಾರುಹೋದವರಾಗಿ, ದಬದಬಾ ಎಂದು ಬಹಳಷ್ಟು ಸಹಪಾಠಿಗಳು ಸೇರಿಕೊಂಡರು. ಕಲಬುರ್ಗಿ ಅವರ ವಿದ್ವತ್ತಿಗೆ ಮಾರುಹೋದ, ಆ ದಿನಗಳಲ್ಲಿ ಪಿಎಚ್.ಡಿ ಮಾಡುತ್ತಿದ್ದ ಸಂಶೋಧನ ಸಹಾಯಕರು ಕೂಡ ಬಂದು ತರಗತಿಯಲ್ಲಿ ಕೂತಿರುತ್ತಿದ್ದರು ನಮ್ಮೊಂದಿಗೆ.
ತಿಂಗಳೊಪ್ಪತ್ತು ಕಳೆದ ಮೇಲೆ, ಸದರೀ ಸಂಶೋಧನೆ ವಿಷಯದಲ್ಲಿ ಮುಂದೆ ಪರೀಕ್ಷೆ ಬರೆಯಲು ಪಠ್ಯ ಪುಸ್ತಕಗಳೇ ಇಲ್ಲದ, ಅದೇನಿದ್ದರೂ ತರಗತಿಯಲ್ಲಿ ಗುರುಗಳ ಬಾಯಿಯಿಂದ ಬರುತ್ತಿದ್ದ ವಿಷಯ ಮತ್ತು ಅವರು ಕೊಡುತ್ತಿದ್ದ ಸುಳುಹುಗಳ ಮೇಲೆ ಸ್ವಯಂ ಸಿದ್ಧತೆ ಮಾಡಿ ಕೊಳ್ಳಬೇಕಾಗುತ್ತದೆಂದು ಗೊತ್ತಾಗುತ್ತಿದ್ದಂತೆ, ಬಹುತೇಕರು ಆ ರಿಸ್ಕೇ ಬೇಡವೆಂದು ವಿಷಯಾಂತರ’ ಗೈದವರಂತೆ ಕಾಲು ಕಿತ್ತರು.
ಸಂಶೋಧನೆ ಎಂದರೆ ಅಲ್ಪ ವಿರಾಮ, ಅರ್ಧ ವಿರಾಮದಿಂದ ಪೂರ್ಣ ವಿರಾಮದತ್ತ ನಡೆಯುವ ಕ್ರಿಯೆ’ -ಎಂದು. ವಾಹ್ ಕ್ಯಾ ಬಾತ್ ಹೈ! ಅದೂ ಅಕ್ಷರ ರೂಪದಲ್ಲಿ, ವಾಕ್ಯ ರಚನೆಯ ರೂಪಕದಲ್ಲಿ ಅವರು ಸಂಶೋಧನೆಗೆ ರೂಪಿಸಿದ್ದ ಆ ಪರಿಭಾಷೆಯೇ ಅತ್ಯದ್ಭುತ. ಸಂಶೋಧನೆಗೆ ಕೊನೆ ಎನ್ನುವುದು ಇಲ್ಲವೆಂದೂ ಕಾಲಾಂತರದಲ್ಲಿ ಮುಂದೆ ಮತ್ತೊಬ್ಬ ಸಂಶೋಧಕ ಹುಟ್ಟಿಕೊಂಡು ದಾಖಲೆ ಸಮೇತ ಸಾಬೀತುಪಡಿಸಿದಲ್ಲಿ ಅದು ಪರಿಷ್ಕರಣೆಗೆ ಪಕ್ಕಾಗಬಲ್ಲುದೆಂದೂ ಅದರ ಅರ್ಥ. ೧೯೮೨ರಲ್ಲಿ ನಾನು ಅವರ ವಿದ್ಯಾರ್ಥಿಯಾಗಿದ್ದಾಗ ತರಗತಿಯಲ್ಲಿ ಉಗ್ಗಡಿಸುತ್ತಿದ್ದ ವಾಕ್ಯ. ನನ್ನಂತಹರ ಮನಸ್ಸಿನಲ್ಲಿ ಮಾರ್ಗಕಾರ’ನಾಗಿ ಉಳಿದದ್ದೇ ಇಂತಹ ನೀತಿ ನಿರೂಪಣೆ ಯಿಂದಾಗಿ.
ಹಳ್ಳಿಕೇರಿಯವರು, ವಿಶೇಷವಾಗಿ ತಮ್ಮ ಹಸ್ತಪ್ರತಿಶಾಸ್ತ್ರಕ್ಕೆ ಒತ್ತು ನೀಡಿದ್ದಂತೆಯೇ ತಮ್ಮ ಗುರುಗಳಾದ ಕಲಬುರ್ಗಿಯವರ ಸಾಹಚರ್ಯದಲ್ಲಿ, ಅವರ ಮಾರ್ಗದರ್ಶನದಲ್ಲಿ ಪಡೆದ ಅನುಭವದ ಹಿನ್ನೆಲೆಯಲ್ಲಿ, ಆ ಮುಗ್ಧತೆಯಲ್ಲಿ ನಿಷ್ಕಲ್ಮಷ ಪ್ರೀತಿಯಲ್ಲಿ ಅದ್ದಿ ತೆಗೆದಂತೆ, ಅದೊಂದು ಅಪ್ಪಟ ಸ್ಮಾರಕವಾಗುವಂತೆ, ಅಕ್ಷರ ರೂಪದಲ್ಲಿ ಅವರ ಮೂರ್ತಿಯನ್ನು ಕಟೆದಿರಿಸಿದ್ದಾರೆ ಇಲ್ಲಿ.
ಯಾಕೆಂದರೆ ತಮ್ಮ ಕಾಲಘಟ್ಟದಲ್ಲಿ ಕಲಬುರ್ಗಿಯವರ ಸಾಹಚರ್ಯದಲ್ಲಿ ತಮ್ಮ ಸಮಕಾಲೀನ ಯುವ ಮಿತ್ರರ ಸಹಸ್ಪಂದನೆ, ಆ ನಿಟ್ಟಿನಲ್ಲಿ ಕಲಬುರ್ಗಿಯವರಂಥ ದೊಡ್ಡ ಗುಡ್ಡವನ್ನು ದೂರದಲ್ಲಿ ನಿಂತು ನೋಡುವ ಸಾಮಾನ್ಯರಂತಾಗದೆ, ಕಷ್ಟಪಟ್ಟು ಗುಡ್ಡ ಹತ್ತಿ ಇಳಿದ ಚಾರಣಿಗರಿವರು. ಆ ನಿಟ್ಟಿನಲ್ಲಿ ಈ ಕೃತಿಯನ್ನು ಪರಾಂಬರಿಸಬೇಕು. ಅದರಲ್ಲಿಯೇ ಈ ಕೃತಿಯ ವೈಶಿಷ್ಟ್ಯ ಅಡಗಿದೆ ಕೂಡ.
ಎಷ್ಟೇ ಆದರೂ ಅಕ್ಷರ ಪ್ರಪಂಚ ದೊಡ್ಡದು. ಪ್ರೊಫೆಸರ್ ಕಲಬುರ್ಗಿಯವರೆಂದರೆ ಗ್ರಂಥ ಸಂಪಾದನೆ; ಗ್ರಂಥ ಸಂಪಾದನೆ ಎಂದರೆ ಕಲಬುರಗಿಯವರು ಎನ್ನುವಷ್ಟು ತಾದಾತ್ಮ್ಯ. ಅಕ್ಷರ ಪ್ರಪಂಚದ ಹೆಮ್ಮರವಾಗಿದ್ದು ಅಯೋಗ್ಯರ ಕೈಯಿಂದ ಬಿದ್ದು ಹೋದ ಮರವಾಗಿ ನಮಗೆಲ್ಲ ಬಹು ದೊಡ್ಡ ಮಾದರಿಯಾಗಿದ್ದ ಅವರನ್ನು ತಂಪು ಹೊತ್ತಿನಲ್ಲಿ ನೆನೆಯದೆ ಗತ್ಯಂತರವಿಲ್ಲ.
ಕಲಬುರ್ಗಿ ಸರ್, ಅಗತ್ಯ ಕೆಲಸದ ಮೇಲೆ ಬೆಂಗಳೂರಿಗೆ ಬರಬೇಕಾದಾಗ ಬೆಳಗಿನ ಜಾವದ ರೈಲು ಹತ್ತಿ ಬಂದು ಸಂಜೆಯ ರೈಲಿಗೆ ಧಾರವಾಡಕ್ಕೆ ಮರಳುವ ಪರಿಪಾಠವಿಟ್ಟುಕೊಂಡಿದ್ದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗುವ ಮೊದಲು, ಹಾಗೊಮ್ಮೆ ಬೆಂಗಳೂರಿನ ನನ್ನ ಕಚೇರಿಗೆ ಲಗತ್ತಾಗಿದ್ದ ಭಾಷಾ ಆಯೋಗದ ಸದಸ್ಯರಾಗಿದ್ದ ಕವಿ ಸಾ.ಶಿ.ಮರುಳಯ್ಯ ಅವರನ್ನು ನೋಡಲು ಬಂದಿದ್ದರು. ಕನ್ನಡ ಭಾಷಾಂತರ ಕಚೇರಿ ಎಂದ ಮೇಲೆ, ಮಾತಿನ ನಡುವೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಓದಿದವರು ಇಲ್ಲಿ ಯಾರಾದರು ಇದ್ದಾರೆಯೇ? ಎಂದಿದ್ದಕ್ಕೆ, ನನ್ನ ಹೆಸರು ಕೇಳಿ, ನಾನು ಕೂರುತ್ತಿದ್ದ ಟೇಬಲ್ ಬಳಿ ದಡದಡನೆ ಕೇಳಿಕೊಂಡು ಬಂದೇಬಿಟ್ಟರು, ತಮ್ಮ ವಿದ್ಯಾರ್ಥಿಯೆಂಬ ಅದೇ ಕಕ್ಕುಲಾತಿಯಿಂದ.
ನಾನು ದಿಗ್ಗನೆ ಎದ್ದು ನಿಂತವನಾಗಿ, ಇದೇನ್ರೀ ಸರ್, ಎಲ್ಲಿಂದ ಬಂದ್ರಿ? ಹೇಳದೆ ಕೇಳದೆ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾದ್ರ್ಯಲ್ಲ’ ಎಂದಿದ್ದಕ್ಕೆ; ನೀ ಇಲ್ಲಿ ಸೇರಿಕೊಂಡದ್ದನ್ನು ನನಗ ಹೇಳೇ ಇಲ್ಲಲ್ಲೊ. ಈಗ ಮರುಳಯ್ಯ ಹೇಳಿದ. ಬಾ ಬಾ ಏಳು, ನನ್ನನ್ನು ರೈಲ್ವೆ ಸ್ಟೇಷನ್‌ಗೆ ಬಿಟ್ಟು ಬರುವಂತೀ’ ಅಂದವರೇ ನನ್ನನ್ನು ಹೊರಡಿಸಿದ್ದರು. ಕಚೇರಿಯ ಸಹೋದ್ಯೋಗಿಗಳು ಅವರ ಗುರುತು ಹಿಡಿದು ಇವರು ಕಲಬುರ್ಗಿಯವರಲ್ಲವಾ’ ಎಂದು ತಿರುತಿರುಗಿ ನೋಡಿ ಗುಸು ಗುಸು ಮಾತನಾಡುವುದ ಕೇಳಿ ನನಗೆ ಎರಡು ಕೋಡು. ಗುಡ್ಡವೇ ನನ್ನೆಡೆಗೆ ನಡೆದು ಬಂದಂತೆ!
ಕೆಂಪೇಗೌಡ ರಸ್ತೆಗಿಳಿದು ಕೈ ಮಾಡಿ ಎಷ್ಟು ಅಂಗಲಾಚಿದರೂ ಅಲ್ಲಿಂದ ರೈಲ್ವೇ ಸ್ಟೇಷನ್ ಹತ್ತಿರವೆಂಬ ಕಾರಣಕ್ಕೆ, ಆಟೋದವರು ಯಾರೂ ಬರಲೊಲ್ಲರು. ಅಂಥಾ ದೂರೇನೂ ಆಗೂದಿಲ್ಲ. ಮಾತಾಡಿಕೊಂಡು ನಿಧಾನವಾಗಿ ಹೋಗಾಣ್ರಿ ಸಾರ್ ’ ಅಂದೆ. ಆಯ್ತು ನಡಿ’ ಅಂದರು. ನಡೆದುಕೊಂಡೇ ಹೊರಟೆವು.
ಮಾತಿನ ನಡುವೆ ನಿಮ್ಮಂಥ ಹುಡುಗ್ರು ಟೀಚಿಂಗ್ ಲೈನ್‌ಗೆ ಹೋಗಿದ್ದರ ಭಾಳ್ ಚಲೋ ಇರುತಿತ್ತು’ ಅಂದರು. ಪ್ರತಿಯಾಗಿ ಎಲ್ಲಿ ಸರ್, ನನಗ ಹೈಯರ್ ಸೆಕೆಂಡ್ ಕ್ಲಾಸೂ ಕೊಡಲಿಲ್ಲಾ ನೀವು’ ಅಂದೆ. ನಿನಗೇನೂ ಮೋಸಾಗಿಲ್ಲ ಬಿಡು. ಮುಂದ ನಿನ್ನ ಕಚೇರಿಗೆ ನೀನೂ ಹೆಡ್ ಆಕ್ಕೀಯಂತ. ಈಗ ಮರುಳಯ್ಯ ಹೇಳಿದರು’ ಎಂದು ಸಮಾಧಾನ ಹೇಳಿದ್ದರು, ನನಗೆ. ಈ ಯು.ಜಿ.ಸಿ. ಸ್ಕೇಲು ಸಂಬಳ ಬಂದ ಮ್ಯಾಲೆ ಓದೋದು ಬಿಟ್ಟು ಚೈನಿಗೆ ನಿಂತ್ರು, ಡಿಗ್ರೀ ಕಾಲೇಜು ಲೆಕ್ಚರರ್ ಗೋಳು’ ಎಂದು ಆಗಾಗ ಕನಲುತ್ತಿದ್ದರು. ಹೌದು ನಾವೀಗ ಏನು ಮಾಡುವ ಹಾಗಿದ್ದೇವೆ? ನಮ್ಮ ವರ್ತಮಾನವೇ ವಿಷಾದ ಪರ್ವ!
ಹತ್ತನೇ ನಂಬರ್ ಪ್ಲಾಟ್ ಫಾರ್ಮ್‌ಗೆ ಹೋಗೋ ಅಷ್ಟೊತ್ತಿಗೆ ಸುಸ್ತಾಗಿದ್ದರು. ಅವರೇ ಎರಡು ಬಾಳೆ ಹಣ್ಣು ಕೊಂಡು ನನಗೂ ಒಂದು ಕೊಟ್ಟು ಸುಧಾರಿಸಿಕೊಂಡರು. ಇಷ್ಟು ದೂರ ನಡಿಸಿಬಿಟ್ಟೆಲ್ಲೊ, ಇನ್ನೂ ನನ್ನ ಹುಡುಗ ಅಂದುಕೊಂಡಿಯೇನು’. ಮೈಸೂರು ಬ್ಯಾಂಕ್ ಸರ್ಕಲ್ಲಿಂದ ಒಂದೇ ಸ್ಟಾಪ್ ರೀ ಸರ್. ನೀಂವಾ ನೋಡಿದ್ರೆಲ್ಲ. ತೀರಾ ಹತ್ತಿರ ಇರುವುದರಿಂದ ತಮಗೆ ಗೀಟುದಿಲ್ಲಂತ ಆಟೋದವರು ಯಾರೂ ಬರೂದಿಲ್ಲ. ಬಸ್ ಹತ್ತಿದರೂ ರೈಲವೇ ಸ್ಟೇಶನ್‌ಕ ಮತ್ತೇ ನಡೀಬೇಕು’ ಎಂದೆಲ್ಲ ಸಮಜಾಯಿಷಿದ್ದೆ. ಅವರಿಗೇನು ಗೊತ್ತು ಪಾಪ, ನಮ್ಮ ಬೆಂಗಳೂರಿನ ದುಸ್ಸಾಹಸ.
ಮತ್ತೆ ಕೆಲ ವರ್ಷಗಳ ನಂತರ ಅವರ ಹತ್ಯೆಯಾಗಿತ್ತು. ಯಾರಿಗೆ ಗೊತ್ತಿತ್ತು, ಅದೇ ನನ್ನ ಮತ್ತು ಅವರ ಕೊನೆಯ ಭೆಟ್ಟಿ ಆಗುತ್ತಿದೆಯೆಂದು. ದೊಡ್ಡ ಖುರ್ಚಿಯಲ್ಲಿ ಕೂತಿದ್ದ ನನ್ನನ್ನು ಕಂಡು ಅದೆಷ್ಟು ಖುಷಿಪಡುತ್ತಿದ್ದರೊ ಆ ಶಿಷ್ಯಪ್ರೇಮಿ. ಅವರ ನಿಷ್ಠುರ ಸತ್ಯವೇ ಅವರ ಬಲಿ ತೆಗೆದುಕೊಂಡದ್ದು ಅದೆಂಥಾ ಅನ್ಯಾಯ! ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು ನಮಗೆ.
ಪ್ರೊಫೆಸರ್ ಕಲಬುರ್ಗಿಯವರಲ್ಲಿ ನೂರಕ್ಕೆ ನೂರು ಅಲ್ಲದಿದ್ದರೂ ಪ್ರತಿಭಾವಂತ ಹುಡುಗ/ಹುಡುಗಿಯರನ್ನು ಕಂಡರೆ ಅವರ ಜಾತಿಗೀತಿ ನೋಡದೆ ತುಸು ಅಂತಃಕರಣ ಹರಿಸುವ ತಾಯಿ ಪ್ರೀತಿ ತೋರಿಸುವ ಸ್ವಭಾವದವರಾಗಿದ್ದರು. ಹೀಗಾಗಿ ಅವರು ನಾಡಿನಾದ್ಯಂತ ಅಪಾರ ಶಿಷ್ಯ ಬಳಗವನ್ನು ಗಳಿಸಿದ್ದರು. ಮೈಸೂರಿನಲ್ಲಿ ಕುವೆಂಪು ಅಪ್ಟಟ ಪ್ರತಿಭೆಯಿಂದ ಮೆಟ್ಟಿ ನಿಂತು ಆಕಾಶದೆತ್ತರ ಬೆಳೆದರೆ; ಧಾರವಾಡದಲ್ಲಿ ಕಲಬುರ್ಗಿಯವರು ಸತತ ಪರಿಶ್ರಮದಿಂದ ಅಟ್ಟ ಹತ್ತಿ ಮೆರೆದವರು.
ಹಾಗೆಯೇ ಕೆಳಗಿದ್ದವರಿಗೆ ಏರಲು ನೆರವಿನ ಹಸ್ತ ಚಾಚುತ್ತಿದ್ದವರು. ಅವರ ನಿಷ್ಟುರ ವಿಚಾರ ಧಾರೆಯೇ ಅವರ ಬಲಿ ತೆಗೆದುಕೊಂಡದ್ದು ದುರಂತ! ಆನೆ ನಡೆದದ್ದೇ ದಾರಿ’ ಎನ್ನುವಂತೆ ಅವರು ನಾಡಿನ ಎಂದೆಂದಿಗೂ ಮರೆಯದ ಮಾರ್ಗ’ದರ್ಶಿಯಾದದ್ದು. ಅವರಿಗೆ ಏನು ತಾನೆ ಕೊಡಬಲ್ಲೆವು? ಅವರು ತೋರಿದ ದಾರಿಯಲ್ಲಿ ನಡೆಯುವುದರಲ್ಲಿಯೇ ನಮ್ಮ ಶ್ರೇಯಸ್ಸು ಅಡಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಪ್ರೊಫೆಸರ್ ಕಲಬುರ್ಗಿಯವರ ಸುದೀರ್ಘ ಸಾಹಚರ್ಯ ಪಡೆದ ಹಳ್ಳಿಕೇರಿಯವರು ಸುದೈವಿ.
ವಿವಿಧ ಬಗೆಯ ಅಧ್ಯಯನ ಶಿಸ್ತುಗಳನ್ನು ಬೇಡುವ ಗ್ರಂಥ ಸಂಪಾದನೆ; ಕನ್ನಡ ವಿಶ್ವವಿದ್ಯಾಲಯಕ್ಕೆ ಹೃದಯ ಭಾಗದಂತೆ ಇರಲೇಬೇಕಾದ ಪ್ರತ್ಯೇಕ ಹಸ್ತಪ್ರತಿಶಾಸ್ತ್ರ ವಿಭಾಗ’ವನ್ನು ತಮ್ಮ ಕನಸಿನ ಕೂಸಾಗಿ ಹುಟ್ಟು ಹಾಕಿದ ಮತ್ತು ಅದರ ಏಳಿಗೆಗೆ ಹಳ್ಳಿಕೇರಿಯವರಂಥ ಯುವ ಸಂಶೋಧಕರನ್ನು ಕಾವಲು ಪಡೆಯಂತೆ ತರಬೇತಿ ನೀಡಿ ನಿಯಮಿಸಿದ್ದು ಕಲಬುರ್ಗಿ ಗುರುಗಳ ದೂರದೃಷ್ಟಿ. ಪ್ರೊಫೆಸರ್ ಹಳ್ಳಿಕೇರಿಯವರು ಕೂಡ ಗುರುಗಳ ವಾರಸುದಾರರಂತೆ ಅವರು ಮಾರ್ಗ’ದಲ್ಲಿಯೇ ಅಡಿಯಿಡುತ್ತಿದ್ದಾರೆ. ಈ ಕೃತಿಯ ಪ್ರತಿಯೊಂದು ಲೇಖನವೂ ಕಲಬುರ್ಗಿಯವರ ಆತ್ಮದ ಮಿಡಿತವಿದೆ. ಈ ಹಿನ್ನೆಲೆಯಲ್ಲಿ ಹಳ್ಳಿಕೇರಿಯವರ ಈ ಕೃತಿಗೆ ಅದರದೇ ಆದ ಮಹತ್ವವಿದೆ.
ಫ.ಗು.ಹಳಕಟ್ಟಿ ಅವರ ಸಮಗ್ರ ಸಾಹಿತ್ಯ ಸಂಪುಟ, ಶರಣ ಸಾಹಿತ್ಯದ ಸಮಗ್ರ ವಚನ ಸಂಪುಟಗಳು, ದಾಸಸಾಹಿತ್ಯದ ಸಂಪುಟಗಳು, ಕನ್ನಡ ವಿಶ್ವವಿದ್ಯಾಲಯದಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗದ ಸ್ಥಾಪನೆ, ಗ್ರಂಥಸಂಪಾದನೆಯಂಥ ಗುರುತರವಾದ ಕಾರ್ಯದಲ್ಲಿ ತೊಡಗಿಸಿಕೊಂಡ ಯುವಕರ ಪಡೆಗೆ ನೀಡಿದ ತರಬೇತಿ/ಮಾರ್ಗದರ್ಶನ ಇವುಗಳ ಹಿಂದೆ ಪ್ರೊಫೆಸರ್ ಕಲಬುರ್ಗಿಯವರ ಅಗಣಿತ ಶ್ರಮವಿದೆ. ಈ ಎಲ್ಲ ಹಿನ್ನೆಲೆಯಲ್ಲಿ ಅವರು ದಣಿವರಿಯದ ಗುರುವಾಗಿ ಬಹು ದೊಡ್ಡ ಮಾದರಿಯಾಗಿದ್ದರು ನಿಜ.
ಈರಪ್ಪ ಎಂ. ಕಂಬಳಿ
ನಿವೃತ್ತ ನಿರ್ದೇಶಕರು
ಭಾಷಾಂತರ ನಿರ್ದೇಶನಾಲಯ, ಬೆಂಗಳೂರು
ಪರಿವಿಡಿ
ಸವಿನುಡಿ / ೫
ನಲ್ನುಡಿ / ೭
ಗುರುವಂದನೆ / ೧೩
೧. ದಣಿವರಿಯದ ಗುರು- ಎಂ.ಎಂ.ಕಲಬುರ್ಗಿ / ೧೭
೨. ನುಡಿದಂತೆ ನಡೆದವರು- ನನ್ನ ಗುರುಗಳು / ೨೫
೩. ಯುವ ಸಂಶೋಧಕರು ಮತ್ತು ಎಂ.ಎಂ.ಕಲಬುರ್ಗಿ / ೩೫
೪. ಹಸ್ತಪ್ರತಿಶಾಸ್ತ್ರ ಮತ್ತು ಎಂ.ಎಂ.ಕಲಬುರ್ಗಿ / ೪೪
೫. ಹಸ್ತಪ್ರತಿ ಸಂಶೋಧಕ ಎಂ.ಎಂ.ಕಲಬುರ್ಗಿ / ೫೭
೬. ಗ್ರಂಥ ಸಂಪಾದನಶಾಸ್ತ್ರ ಮತ್ತು ಎಂ.ಎಂ.ಕಲಬುರ್ಗಿ / ೬೧
೭. ಹಾಲುಮತ ಸಾಹಿತ್ಯ-ಸಮಾಜ-ಸಂಸ್ಕೃತಿ ಶೋಧಕ ಎಂ.ಎಂ.ಕಲಬುರ್ಗಿ / ೭೫
೮. ರೇವಣಸಿದ್ಧ: ಎಂ.ಎಂ.ಕಲಬುರ್ಗಿ ಅವರ ಶೋಧಗಳು / ೯೧
೯. ಎಂ.ಎಂ.ಕಲಬುರ್ಗಿ ಅವರ ಬರಹಗಳ ಅವಲೋಕನ / ೧೦೨
೧೦. ಪಂಪ ಪ್ರಶಸ್ತಿ ಪುರಸ್ಕೃತ ಸಂಶೋಧಕ ಎಂ.ಎಂ.ಕಲಬುರ್ಗಿ / ೧೧೧
೧೧. ಬಸವಣ್ಣನವರ ವಚನ ಸಂಪುಟ: ಅವಲೋಕನ / ೧೨೫
೧೨. ಡಾ. ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ-ಕಾವ್ಯ ಸಾಹಿತ್ಯ ಭಾಗ ೪: ಪ್ರಸ್ತಾವನೆ / ೧೩೧
೧೩. ಡಾ. ಎಂ.ಎಂ.ಕಲಬುರ್ಗಿ ಸಮಗ್ರ ಸಾಹಿತ್ಯ-ಕಾವ್ಯ ಸಾಹಿತ್ಯ ಭಾಗ ೫: ಪ್ರಸ್ತಾವನೆ / ೧೩೬
೧೪. ನಾಡೋಜ ಎಂ.ಎಂ.ಕಲಬುರ್ಗಿ ನುಡಿನಮನ ವಿಚಾರ ಸಂಕಿರಣ: ಪ್ರಾಸ್ತಾವಿಕ ನುಡಿ / ೧೪೧
ಅನುಬಂಧಗಳು
೧. ಡಾ. ಎಂ.ಎಂ.ಕಲಬುರ್ಗಿ ಅವರ ಪತ್ರಗಳು / ೧೪೫
೨. ಲೇಖನಗಳ ಸಂದರ್ಭ ಸೂಚೀ / ೧೫೨
Reviews
There are no reviews yet.