ಮುನ್ನುಡಿ
ಅರಿಸ್ಟಾಟಲನ ಪ್ರಕಾರರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ ವಸ್ತುವಾಗಿ ಅಥವಾ ಭಾವವಾಗಿ ನೋಡದೆ ಹೋದರೆ ನಿಜಕ್ಕೂ ಹೊಸದೇನನ್ನೂ ಕಾಣಿಸಲಾಗದು. ಗೆಳೆಯ ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಈ ವಿಷಾದ ಗಾಥೆಯಲ್ಲಿ ವಸ್ತುಗಳು ತಮ್ಮ ಅಸ್ಮಿತೆಯನ್ನು ಒಂದಿಷ್ಟೂ ಕಳೆದುಕೊಳ್ಳದೆ ರೂಪಕಗಳಾಗಿ ತಮ್ಮದೇ ದನಿಯಲ್ಲಿ ಮಾತಾಡುತ್ತವೆ. ಅವುಗಳ ಅಂತಃಶಕ್ತಿ ಅವರ ಭಾಷೆಯ ಸಂರಚನೆಯಲ್ಲೇ ಹೊರಹೊಮ್ಮುವುದರಿಂದ ಅದು ಸಹಜವಾಗಿಯೇ ಅವರ ಶಬ್ದವಿನ್ಯಾಸಕ್ಕೊಂದು ವಿಶಿಷ್ಟ ಧ್ವನ್ಯರ್ಥವನ್ನು ನೀಡುತ್ತದೆ.
ವರ್ತಮಾನವನ್ನು ಭೂತದ ದರ್ಪಣದಲ್ಲಿ ಪರಿಶೀಲಿಸುವ ಈ ಗಾಥೆಗಳ ವಸ್ತು ಮಾನವನ ಇತಿಹಾಸ, ಅವನ ದುರ್ವಿಧಿ, ಪಲ್ಲಟಗೊಂಡಿರುವ ಪ್ರಪಂಚದಲ್ಲಿ ಅವನ ಸ್ಥಿತಿ, ಬದುಕು ಹೀಗೇಕೆ ಎಂಬ ಜಿಜ್ಞಾಸೆ. ಕೌತುಕದ ಜೊತೆಜೊತೆಗೇ ಪ್ರಶ್ನೆಗಳನ್ನೂ ತುಂಬಿಕೊಂಡಿರುವ ಇವು ಸಸ್ಯ ಮತ್ತು ಪ್ರಾಣಿಲೋಕದ ಬಗ್ಗೆ, ನಿಸರ್ಗದ ವಿದ್ಯಮಾನಗಳ ಬಗ್ಗೆ, ಮುಗ್ಧತೆಯ ಬಗ್ಗೆ, ಮುಗ್ಧತೆ ನಷ್ಟವಾಗುವುದರ ಬಗ್ಗೆ, ಹಮ್ಮುಬಿಮ್ಮಿನ ಬಗ್ಗೆ, ಕಳೆದುಹೋದ ಜಗತ್ ಪ್ರಜ್ಞೆಯ ಬಗ್ಗೆ, ಸೋಲಿನ ಬಗ್ಗೆ, ಹಿಂಸೆಯ ಬಗ್ಗೆ ಮಾತಾಡುತ್ತವೆ. ಅರ್ಥಶೋಧನೆಯನ್ನು ಪ್ರತಿನಿಧಿಸುವ ಇವು ಸರಳವಾಗಿರುವಂತೆಯೇ ಶಕ್ತವಾಗಿಯೂ ಇವೆ.
ಅವನನ್ನು ಕೇಳುತ್ತೇನೆ
ಎಲ್ಲವೂ ವಿಷ ಆಗಿದೆ
ಒಂದಷ್ಟು ಜೇನು ತಾರೋ ಮಾರಾಯ
ಅವ ಹೇಳುತ್ತಾನೆ
ಜೇನುಗಳೇ ಬೇಡಿಕೆ ಇಡುತ್ತಿವೆ
ವಿಷ ಬೆರೆತ ಹೂವುಗಳ ಅರಳಿಸದಿರೆಂದು
* * *
ಇಲ್ಲಿನ ಅವನು ಯಾರು? ಕವಿ ಅಥವಾ ನಮ್ಮೆಲ್ಲರ ಹಂಬಲ, ಆಶಯಗಳ ಒಬ್ಬ ಪ್ರತಿನಿಧಿ. ಅವನು ಕಾಣಿಸುತ್ತಿರುವುದು ವಾಸ್ತವದಲ್ಲೇ ಇರುವ ಒಂದು ವಿಪರ್ಯಾಸ. ಜೇನು, ವಿಷ ಈ ಪದಗಳು ಮನುಷ್ಯನ ಕನಸೇನು, ಅವನು ಸೃಷ್ಟಿಸಿಕೊಂಡಿರುವುದು ಎಂಥ ಬದುಕು ಎಂಬುದನ್ನು ಪ್ರತೀಕಾತ್ಮಕವಾಗಿ ಸ್ಪಷ್ಟಪಡಿಸುತ್ತವೆ. ಇದೇ ರೀತಿ ಈ ಕೆಳಗಿನವುಗಳನ್ನೂ ಓದಬಹುದು:
ಎದೆಯ ಸೀಳಿದೆ
ಅವ ಬಿಟ್ಟ ಬಾಣ
ಹಕ್ಕಿಯ ಕಾಂತೆಯ ಜೀವ ತೆಗೆದಿದೆ
ಕಾಡ ನಡುವೆ
ಒಂಟಿ ಹಕ್ಕಿ ರೋದಿಸುತ್ತಿದೆ
ಆ ವೇದನೆ ಅವನಿಗೆಲ್ಲಿ ಕೇಳಿಸುತ್ತದೆ
* * *
ಮಾಯವಾಗಿದೆ ನಿದ್ರೆ
ಅದ ಕಳವು ಮಾಡಿದ್ದಾರೆ
ಇವನ ಕನಸುಗಳನ್ನೂ ಕದ್ದು ಬಿಟ್ಟಿದ್ದಾರೆ
ಕದ್ದ ಕನಸುಗಳು
ಬಣ್ಣ ತುಂಬಿಸಿಕೊಂಡು ಮಾರಾಟಕ್ಕಿವೆ
ನಿದ್ರೆಯ ಕೊಳ್ಳಲು ಆಗದವ ಕಂಗಾಲಾಗಿದ್ದಾನೆ
* * *
ಇವು ಗಾಥೆಗಳು ಹೇಗೆ? ಕವಿತೆಗೆ ಇಂತಿಷ್ಟೇ ಸಾಲುಗಳು ಇರಬೇಕು, ಇರುತ್ತವೆ ಎಂಬ ನಿಯಮವೇನಿಲ್ಲ. ಸಾವಿರ ಸಾಲುಗಳ, ಲಕ್ಷ ಪದಗಳಿಂದ ಆವೃತವಾದ ರಚನೆಗಳೆಲ್ಲಾ ಕವಿತೆಯಾಗಿ ಬಿಡುವುದಿಲ್ಲ…. ನಾನು ಗಾಥೆಗಳಿಗೆ ಇಷ್ಟೇ ಪದಗಳಿರಬೇಕು, ಇಷ್ಟು ಸಾಲುಗಳಿರಬೇಕು ಎಂಬ ಒಂದು ಚೌಕಟ್ಟು ಹಾಕಿಕೊಂಡಿದ್ದೇನೆ ಅಷ್ಟೆ ಎಂದಿದ್ದಾರೆ ಮಲ್ಲಿಕಾರ್ಜುನಸ್ವಾಮಿ. ಈ ಗಾಥೆಗಳ ರಾಚನಿಕ ಸ್ವರೂಪದ ಬಗ್ಗೆ ಹೇಳುವುದಾದರೆ ಆರು ಸಾಲುಗಳ ಪ್ರತಿಯೊಂದು ಗಾಥೆಯಲ್ಲೂ ಎರಡು ಪಾದಗಳಿವೆ. ಒಂದನೆಯ ಮತ್ತು ನಾಲ್ಕನೆಯ ಸಾಲುಗಳಲ್ಲಿ ತಲಾ ಎರಡೆರಡು ಪದಗಳು, ಎರಡನೆಯ ಮತ್ತು ಐದನೆಯ ಸಾಲುಗಳಲ್ಲಿ ತಲಾ ಮೂರು ಮೂರು ಪದಗಳು, ಮೂರನೆಯ ಮತ್ತು ಆರನೆಯ ಸಾಲುಗಳಲ್ಲಿ ತಲಾ ನಾಲ್ಕು ನಾಲ್ಕು ಪದಗಳು. ಹೀಗೆ ಒಟ್ಟು ಹದಿನೆಂಟು ಪದಗಳಿಂದ ಒಂದು ಗಾಥೆ ರೂಪುಗೊಳ್ಳುತ್ತದೆ. ಪದಗಳ ಬಗ್ಗೆ ಹೇಳುವುದಾದರೆ ಕೆಲವು ಪದಗಳಲ್ಲಿ ಒಂದೋ ಎರಡೋ ಅಕ್ಷರಗಳಿದ್ದರೆ, ಇನ್ನು ಕೆಲವು ಪದಗಳಲ್ಲಿ ಮೂರರಿಂದ ಐದಾರು ಅಕ್ಷರಗಳವರೆಗೂ ಇವೆ. ಹಾಗಾಗಿ ಇಡೀ ಗಾಥೆ ಮಾತ್ರಾಲಯವನ್ನು ಬಿಟ್ಟುಕೊಟ್ಟಿದೆ. ಹಾಗೆಂದು ಇಲ್ಲಿ ಲಯವೇ ಇಲ್ಲವೆನ್ನುವಂತಿಲ್ಲ. ವಸ್ತುವನ್ನೋ ಭಾವವನ್ನೋ ಅನುಭವ ವೇದ್ಯಗೊಳಿಸುವುದಕ್ಕೆ ಪೂರಕವಾದ ಲಯ ಉದ್ದಕ್ಕೂಇದೆ. ಈ ಲಯ ಬಹುಮಟ್ಟಿಗೆ ಆಡುಮಾತನ್ನು ಅನುಸರಿಸಿರುವ ಗದ್ಯಲಯ. ನಿರ್ದಿಷ್ಟ ಛಂದೋ ರೂಪಕ್ಕೆ ಬದ್ಧವಾಗದೆ ಇರುವುದರಿಂದಲೇ ಇಲ್ಲಿನ ಗದ್ಯಲಯ ಕವಿಕಲ್ಪನೆಗೆ ವಿಶೇಷ ಸ್ವಾತಂತ್ರ್ಯವನ್ನು ನೀಡಿದೆಯೆನ್ನಬೇಕು.
ನಮ್ಮ ಕಾಲದ ನಾಡಿಯೇ ಮಿಡಿಯುತ್ತಿರುವ ಇಲ್ಲಿನ ಗಾಥೆಗಳು ಒಂದಿಡೀ ಕಾಲಧರ್ಮದ ಧ್ವನಿಯನ್ನು ನಿರ್ಣಯಾತ್ಮಕ ರೀತಿಯಲ್ಲಿ ಹಿಡಿದುಕೊಡುತ್ತವೆ. ಮಲ್ಲಿಕಾರ್ಜುನಸ್ವಾಮಿಯವರದು ಸಮಕಾಲೀನ ಪ್ರಜ್ಞೆಯಷ್ಟೇ ಅಲ್ಲ, ಆಧುನಿಕವೂ ಕೂಡ. ಮನುಷ್ಯನ ಘನತೆಯ ಬಗ್ಗೆ, ನೈತಿಕತೆಯ ಹಂಬಲದ ಬಗ್ಗೆ, ಮಾನವನ ಅಮಾನವೀಯ ಗುಣದ ಬಗ್ಗೆ ಇವರು ಬರೆದಿರುವುದು ಸಾಮಾನ್ಯ ವಸ್ತು ವಿಶೇಷಗಳಷ್ಟೇ ಅಲ್ಲ, ಸತತವಾಗಿ ಕಾಡಿದಂಥ ವೈಯಕ್ತಿಕ ಅನುಭವಗಳು ಕೂಡ.
ಮಹಾಮನೆಯವರ ಯಶಸ್ಸಿರುವುದು ಭಾಷೆಯನ್ನು ಪುನರ್ರೂಪಿಸುವುದರಲ್ಲಿ ಅಲ್ಲ, ಅದಕ್ಕೊಂದು ಹೊಸ ದೃಷ್ಟಿ ನೀಡುವುದರಲ್ಲಿ. ಅವರ ಪ್ರಯತ್ನವಿರುವುದು ಆಡುಮಾತಿನ ಲಯದಲ್ಲೇ ಹೊರತು ಗೇಯತೆಯಲ್ಲಲ್ಲ. ನಮ್ಮ ಅನುಭವ ಬೇರೆಯವರಿಗೂ ಮೌಲಿಕವಾಗಬೇಕಾದರೆ ಆ ಅನುಭವಕ್ಕೆ ಸೂಕ್ತವಾದ ಭಾಷೆ, ವಿಹಿತ ಲಯ ಅತ್ಯಗತ್ಯವಷ್ಟೆ. ಅಮೆರಿಕನ್ ಕವಿ ವ್ಯಾಲೆಸ್ ಸ್ಟೀವನ್ಸ್… ಕವಿಗೆ ಮುಖ್ಯವಾದದ್ದು ಬಾಹ್ಯ ಒತ್ತಡವನ್ನು ಹತ್ತಿಕ್ಕಬಲ್ಲ ಆಂತರಿಕ ಒತ್ತಡ ಎಂದ. ಅವನ ಪ್ರಕಾರ ಆಂತರಿಕ ಒತ್ತಡ ಕ್ರಿಯಾಶೀಲವಾಗುವುದು ಪ್ರತಿಭೆಯಿಂದ. ಮತ್ತೆ ಈ ಪ್ರತಿಭೆ ಯೆನ್ನುವುದು ಶಬ್ದಗಳ ಧ್ವನಿಯಿಂದ ಸ್ಫುರಣಗೊಂಡು ಅನುಭವದ ಹಲವು ಮಗ್ಗುಲುಗಳನ್ನು ಧ್ವನಿಸಬಲ್ಲದು. ಕವಿಯ ಪ್ರತಿಭೆ ಅವನ ಆತ್ಮದ ದನಿಯೂ ಆದಾಗ ಅದು ಹೊರಜಗತ್ತಿನ ಜೊತೆ ಸಂಪರ್ಕ ಸಾಧಿಸುತ್ತ ಒಂದಿಡೀ ಕಾಲಧರ್ಮವನ್ನೇ ಸೂಚಿಸಿಬಿಡುತ್ತದೆ.
ಇಲ್ಲಿನ ಗಾಥೆಗಳಲ್ಲಿ ವಸ್ತುಸ್ಥಿತಿಯನ್ನು ರೂಪಾಂತರಗೊಳಿಸುವ ಕಾವ್ಯ ಪ್ರಕ್ರಿಯೆಯಿದೆ. ಎರಡು ವಿಭಿನ್ನ ಚಿತ್ರಗಳನ್ನು ಅಥವಾ ದೃಶ್ಯಗಳನ್ನು ಪಕ್ಕಪಕ್ಕದಲ್ಲಿಟ್ಟು ಹೊಸದೊಂದೇ ಧ್ವನಿಯನ್ನು ಹೊಮ್ಮಿಸುವ ನೈಪುಣ್ಯವಿದೆ. ಅಮೂರ್ತ ಅನುಭವವನ್ನು ದೃಶ್ಯೀಕರಿಸುವ ಪ್ರತಿಭೆಯಿದೆ. ಸಮಕಾಲೀನ ವಿದ್ಯಮಾನಗಳ ಹಿಂದಿರುವ ಕಟು ವಾಸ್ತವವನ್ನು ಅನಾವರಣಗೊಳಿಸುವ ಶಕ್ತಿಯಿದೆ.
ಒಂದು ಸಮರ್ಥವಾದ ಕವನ ನಾವು ಯಾರು, ಎಲ್ಲಿದ್ದೇವೆ ಎಂದು ತಿಳಿಸಿಕೊಡುವುದಲ್ಲದೆ ನಮ್ಮೊಳಗೇ ನಮ್ಮನ್ನೂ ನಮ್ಮ ಜಗತ್ತನ್ನೂ ಸೂಕ್ಷ್ಮವಾಗಿ ಗ್ರಹಿಸಲು ನೆರವಾಗುತ್ತದೆ. ಓದುಗರನ್ನು ಜಿಜ್ಞಾಸೆಗೆ ಹಚ್ಚುವ ಈ ಗಾಥೆಗಳು ಮನುಷ್ಯಾನುಭವದ ಮೂಲೆ ಮೊಡಕುಗಳನ್ನು ಸ್ಪರ್ಶಿಸುತ್ತ, ವಿಚಾರಗಳನ್ನು ಪ್ರತಿಮೆಗಳಾಗಿ ಪರಿವರ್ತಿಸುತ್ತ, ಅನುಭವದ ವಿಭಿನ್ನ ಆಯಾಮಗಳನ್ನು ಕಾಣಿಸುತ್ತ ಹೃದ್ಯವಾಗುತ್ತವೆ. ಇದಕ್ಕಾಗಿ ಈ ಕವಿಗೆ ನಾನು ಕೃತಜ್ಞ.
–ಎಸ್.ದಿವಾಕರ್, ಕತೆಗಾರರು, ವಿಮರ್ಶಕರು
ಮನದ ಮಾತು
ಇವು ಗಾಥೆಗಳು…
ಕನ್ನಡ ಕಾವ್ಯಕ್ಷೇತ್ರದಲ್ಲಿ ಒಂದು ಹೊಸ ಪ್ರಯೋಗ ಅಂದುಕೊಳ್ಳಿ…
ಇವು ಚುಟುಕು ಅಲ್ಲ…
ಇವು ಹನಿಗವಿತೆಗಳೂ ಅಲ್ಲ…
ದ್ವಿಪದಿ… ತ್ರಿಪದಿ…. ಚೌಪದಿಯೂ ಅಲ್ಲ…
ಕಿರುಗವಿತೆಗಳಂತೂ ಅಲ್ಲವೇ ಅಲ್ಲ…
ಹಾಯ್ಕು ಅಲ್ಲ…. ಝನ್ ಅಲ್ಲ… ರುಬಾಯಿ ಅಲ್ಲ…
ಈ ರೀತಿಯ ಅಥವಾ ಪೂರ್ವದ ಯಾವ ಕಾವ್ಯ ಜಾತಿಗೂ ಇವು ಸೇರುವುದಿಲ್ಲ…
ತನ್ನದೇ ಆದ ಲಯ… ನಿಯಮ… ಚೌಕಟ್ಟು ಶೈಲಿ…
ಅಂತರಾತ್ಮವನ್ನು ಹೊಂದಿರುವ ಕವಿತೆಗಳು…
ಕನ್ನಡದ ಅಪ್ಪಟ ದೇಸಿ ಹೊಸ ಕಾವ್ಯ ಮಾರ್ಗ…
ಪುಟ್ಟ ಪುಟ್ಟ ಆರೇ ಆರು ಸಾಲಿನ ಕವಿತೆಗಳು…
ಹಾಗೆಂದು ಷಟ್ಪದಿಗಳೂ ಅಲ್ಲ…
ಇವು ಗಾಥೆಗಳು…
ಒಂದು ಮತ್ತು ನಾಲ್ಕನೇ ಸಾಲುಗಳಲ್ಲಿ ಎರಡೆರಡೇ ಪದಗಳಿರುತ್ತವೆ…
ಎರಡು ಮತ್ತು ಐದನೇ ಸಾಲುಗಳಲ್ಲಿ ಮೂರುಮೂರೇ ಪದಗಳಿರುತ್ತವೆ…
ಮೂರು ಮತ್ತು ಆರನೇ ಸಾಲುಗಳಲ್ಲಿ ನಾಲ್ಕೇನಾಲ್ಕು ಪದಗಳಿರುತ್ತವೆ…
ಮೂರು ಮೂರು ಸಾಲಿನ ಎರಡು ಪಾದಗಳುಳ್ಳ ಹದಿನೆಂಟು ಪದಗಳಲ್ಲಷ್ಟೇ
ಗಾಥೆಗಳು ಮೈದಾಳುತ್ತವೆ… ಮೈದಾಳಬೇಕು…
ಸರಳವಾದ ಬಿಡಿಬಿಡಿ ಪದಗಳು ಹಾಗೂ
ಒಮ್ಮೊಮ್ಮೆ ಸಂಯುಕ್ತಪದಗಳಿಂದಲೂ ಗಾಥೆಗಳು ಕೂಡಿರುತ್ತವೆ…
ಕವಿತೆ ಎನ್ನುವುದು ಶಾಬ್ದಿಕವಾದ, ಭಾಷಿಕವಾದ ರೂಪವೇ…
ಆದರೆ…
ಶಬ್ದ ಮತ್ತು ಪದಗಳಿಂದಷ್ಟೇ ಕವಿತೆಯಾಗುವುದಿಲ್ಲ…
ಆಗಬಾರದು…
ಅವ ಕವಿತೆಗಳು ಎನ್ನಬಾರದು… ಎನ್ನುವುದಿಲ್ಲ…
ಕವಿತೆಗೆ ಇಂತಿಷ್ಟೇ ಸಾಲುಗಳು ಇರಬೇಕು… ಇರುತ್ತವೆ… ಎನ್ನುವ ನಿಯಮವೇನಿಲ್ಲ…
ಸಾವಿರ ಸಾಲುಗಳ ಲಕ್ಷ ಪದಗಳಿಂದ ಆವೃತವಾದ ರಚನೆಗಳೆಲ್ಲಾ ಕವಿತೆಯಾಗಿ ಬಿಡುವುದಿಲ್ಲ…
ಬಿಡಿ. ಆ ಮಾತು ಬೇರೆ…
ಕವಿತೆಗೆ ನಿಯಮಗಳು… ಚೌಕಟ್ಟುಗಳು… ಎಲ್ಲೆಗಳು ಉಂಟೇ…??
ನಾನು ಗಾಥೆಗಳಿಗೆ ಇಷ್ಟೇ ಪದಗಳಿರಬೇಕು… ಇಷ್ಟು ಸಾಲುಗಳಿರಬೇಕು ಎಂಬ ಒಂದು
ಚೌಕಟ್ಟು ಹಾಕಿಕೊಂಡಿದ್ದೇನೆ…
ಇವೆಲ್ಲವನ್ನು ಭೇದಿಸಿ… ಇವೆಲ್ಲವನ್ನು ಮೀರಿ ಅರಳುವುದೇ ಕವಿತೆ… ಕಾವ್ಯ ಕಣ್ರಿ…
ಕವಿತೆ ಎನ್ನುವುದು ಒಂದು ಅನುಭವ…
ಅರ್ಥೈಸುವ ಅಗತ್ಯ ಇಲ್ಲ ಅನ್ನಿಸುತ್ತೆ…
ಇದು ಈ ರೀತಿಯ ಕಾವ್ಯ ರಚನೆಯ ಲಕ್ಷಣ…
ವಸ್ತುವಿನ ದೃಷ್ಟಿಯಿಂದ, ಸ್ವರೂಪದ ದೃಷ್ಟಿಯಿಂದ, ಕಾಣ್ಕೆಯ ದೃಷ್ಟಿಯಿಂದ ಮತ್ತಷ್ಟು
ಲಕ್ಷಣ ಇರಬಹುದು. ಅದನ್ನು ನೀವೂ ಗುರುತಿಸಿ ಹೇಳಬಹುದು…
ಬದುಕಿನ ದಾರುಣ ಸ್ಥಿತಿಯನ್ನು…
ಪ್ರಕ್ಷುಬ್ಧ ಮನದಲೇಳುವ ಅಲೆಗಳನ್ನು…
ಅತಾರ್ಕಿಕವಾದ ಬದುಕಿನೆಳೆಗಳನ್ನು ಕಾವ್ಯವಾಗಿಸುವ ಹೆಣಗಾಟ…
ಹೆಣೆಯುವ ಆಟ… ಅದೇ ಈ ಗಾಥೆಗಳು…
ಬಾಳು-ಹಾಳು ಭಂಗಗಳ ಗೂಡು… ಅದನ್ನು ಕವಿತೆಯಾಗಿಸಿದ್ದೇನೆ…
ಕತ್ತಲಾಳದೊಳಗೆ ಬೆಳಕಿಗಾಗಿ ಹಂಬಲಿಸುವ ಪ್ರಯತ್ನ ಈ ಗಾಥೆಗಳು…
ಹರಕಲು ಮುರುಕಲು ಚಿತ್ರಗಳ ಜೋಡಿಸಿ…
ಹೆಣೆದು ಮತ್ತೆ ಚಿತ್ರವಾಗಿಸುವ ಪರಿ ಈ ಗಾಥೆಗಳು…
ಅಸಂಗತವಾದದ್ದನ್ನು ಸಂಗತಗೊಳಿಸುವ ಪ್ರಯತ್ನ ಈ ಗಾಥೆಗಳು…
ನಿರ್ವಿಣ್ಣ-ನಿರ್ವರ್ಣ ಬದುಕು ಜೀವದಾಳಿ ಭಾವವಾಗಿ ಹರಿದಿದ್ದೆ ಈ ಗಾಥೆಗಳು…
ಅಕ್ಷರ ಅಕ್ಷರವನ್ನು ದಾಟಿ…
ಶಬ್ದ ಶಬ್ದಗಳನ್ನೂ ಮೀರಿ…
ಪದ ಪದಗಳು ಅದಾವುದೋ ತಾಣದಲಿ ಸೇರಿದಂತೆ ಸೇರಿ…
ಮಿಲನವಾದಂತೆ…
ಸಮಾಗಮವಾದಂತೆ…
ಸಂಯೋಗಗೊಂಡಂತೆ…
ಭಾಸವಾಗಿ…
ಆಗಿಸಿ…
ಅವು ಅಗಣಿತ ಆಯಾಮಗಳ ಪಡೆದು, ಚಿತ್ರವೊಂದು ಕ್ಯಾನ್ವಾಸಿನ ಚೌಕಟ್ಟಿನಾಚೆಗೂ ಒಂದು ಅನುಭವವನ್ನು ಸೃಜಿಸಿದಂತೆ; ಈ ಗಾಥೆಗಳು…
ಅನೂಹ್ಯವಾದ ಭಾವ..ವ್ಯಕ್ತಪಡಿಸಲಾಗದ ಅಭಿವ್ಯಕ್ತಿ..ಅನುಭವಿಸಲಾಗದ ಅನುಭವ..ಇಂತಹ ಮನೋಸ್ಥಿತಿಯನ್ನು ಭಾಷಿಕವಾಗಿ..ಶಾಬ್ಧಿಕವಾಗಿ..ಕಾವ್ಯದ ನೆಲಗಟ್ಟಿನಲ್ಲಿ ಅನಾವರಣಗೊಳಿಸುವುದು. ಆ ಸಂದರ್ಭದಲ್ಲಿ ತಮ್ಮ ಬದುಕಿನ, ನೋವಿನ, ಸಂಕಟದ, ವೇದನೆಯ, ಕಥೆಗಳು..ಸಂದರ್ಭಗಳು ತೆರೆದುಕೊಳ್ಳುವುದು ಹಾಗೂ ಕವಿತೆಗಳು ಅನುಭವಜನ್ಯವಾಗುವ ಸ್ಥಿತಿಯಲ್ಲಿ ಪುರಾಣದ.. ಚರಿತ್ರೆಯ..ಸಮಾಕಾಲಿನ ಕಥನಗಳು..ಘಟನೆಗಳು ಬಿಚ್ಚಿಕೊಳ್ಳವ ಕವಿತೆಗಳನ್ನು ನಾನು ಗಾಥೆ-ಗಾಥಾ ಎಂದು ಹೆಸರಿಸುತ್ತೇನೆ. ಹೊಸ ಲಯದ ಈ ಕವಿತೆಗಳು ಕನ್ನಡ ಕಾವ್ಯಲೋಕದ ಮಟ್ಟಿಗೆ ಹೊಸದೊಂದು ಕಾವ್ಯಮಾರ್ಗ ಎಂದು ಹೇಳಬಯಸುತ್ತೇನೆ..
ಇವೇ ಗಾಥೆಗಳು…
ನಾನು ಆಗಾಗ ಈ ಗಾಥೆಗಳನ್ನು ನನ್ನ ಎಫ್‌ಬಿ(ಮುಖಪುಟದಲ್ಲಿ) ಹಾಗೂ ವಾಟ್ಸಾಪ್ನಲ್ಲಿ ಪ್ರಕಟಿಸುತ್ತಿದ್ದೆ…. ಆಗ ಇವುಗಳನ್ನು ಓದಿದ ಹಿರಿಯ ಕಿರಿಯ ಮಿತ್ರರು, ಕವಿಗಳು, ವಿಮರ್ಶಕರು, ಕಲಾವಿದರು, ರಂಗಭೂಮಿಯವರು, ಸಾಹಿತ್ಯಾಸಕ್ತರು ತಮ್ಮ ತಮ್ಮ ಅಭಿಪ್ರಾಯ, ಅನಿಸಿಕೆ, ಮೆಚ್ಚಿಗೆ…. ಅದರ ಹೊಳವು…. ಅರ್ಥವಿಸ್ತಾರ… ಸ್ವರೂಪ…. ಇವುಗಳನ್ನು ವ್ಯಕ್ತಪಡಿಸುತ್ತಿದ್ದರು… ಅವುಗಳನ್ನು ತಮ್ಮ ಮುಂದಿಡಬೇಕೆಂಬುದು ನನ್ನ ಮನದಾಸೆ… ಮಹದಾಸೆ….
ನೀವು ನನ್ನ ಮಾತಿನ ಜೊತೆಗೆ; ಸಹೃದಯರ ಮಾತುಗಳನ್ನು ಓದಬೇಕು…
ಅವಳು ಕರೆದಳು
ಎಲ್ಲಿಗೆಂದು ನಾನು ಕೇಳಿದೆ
ನರಕದಲ್ಲೊಂದು ಸ್ವರ್ಗ ಕಟ್ಟೋಣ ಎಂದಳು
ಮೂರೇ ಮೂರು ಸಾಲುಗಳು ಸಾಕು ವಿಷಾದ ಗಾಥೆಯ ಅಳಲು, ಅಂತರಂಗ, ಪದ ಪದಗಳು, ಏನೆಲ್ಲ ತೆರೆದಿಡುತ್ತವೆ. ಮಾನಿಷಾದ ಅನುರಣಿಸುವ ಕರುಳಿನ ಕಾವ್ಯ, ಕುರುಡು ಗಾಳಿ, ಮೂಕ ಕವಿತೆ, ಬೆಳಕ ಗೋರಿಗಳ ಕಟ್ಟಿದಂತಿದೆ.
–ಸತೀಶ್ ಕುಲಕರ್ಣಿ
ಇವು… ಒಳಗುದಿಯೇ ಪದಪದವಾಗಿವೆ ಅನ್ನಿಸುತ್ತದೆ….
–ಲಲಿತಾ ಸಿದ್ಧಬಸಪ್ಪ
ವಿಷಾದ ಬದುಕಿನಲ್ಲಿ ಸಹಜ ಮತ್ತು ಅನಿವಾರ್ಯವೂ ಸಹ. ಮಲ್ಲಿಕಾರ್ಜುನ ಮಹಾಮನೆಯವರು ತಮ್ಮ ಬದುಕಿನ ವಿಷಾದದ ಕ್ಷಣಗಳನ್ನು ಅನುಭವಿಸುತ್ತಾ ಸಾಗಿದ್ದಾರೆ. ಅದು ಅವರಿಗೆ ಅನಿವಾರ್ಯ. ವಿಷಾದ ಅವರ ಬದುಕಿನ ಬಾಳಸಂಗಾತಿ. ಆ ಸಂಗಾತಿಯನ್ನು ಅವರು ಕಾವ್ಯಕನ್ನಿಕೆಯನ್ನಾಗಿ ಮಾರ್ಪಾಡು ಮಾಡಿಬಿಡುತ್ತಾರೆ. ಪ್ರೀತಿ, ಪ್ರಕೃತಿ, ಸಾಮಾಜಿಕ ಸ್ಪಂದನೆಯ ಕವನಗಳಿಗಿಂತ ವಿಷಾದ ಗಾಥೆ ಎಂಬ ಈ ಕವನಗಳು ಕೇವಲ ಮಹಾಮನೆಗೇ ಅಲ್ಲ, ಬದುಕಿನಲ್ಲಿ ವಿಷಾದವನ್ನು ಅನುಭವಿಸುತ್ತಿರುವವರೆಲ್ಲರ ಗಾಥೆಗಳೇ. ಇವನ್ನು ಓದುತ್ತಾ ಹೋದಂತೆಲ್ಲ ನಶೆ ಏರಿ ಗಾಥೆಯ ಓದುವಿಕೆ ಅನಿವಾರ್ಯ ಅನ್ನಿಸಿ ಬಿಡುತ್ತದೆ. ಈ ಗಾಥೆಗಳಲ್ಲಿ ಬದುಕಿನ ತತ್ವ, ಸೂತ್ರ ಮುಂತಾದ ಪುಕ್ಕಟ್ಟೆ ಸಲಹೆಗಳು ಇಲ್ಲ. ಬದಲಿಗೆ ವೈಯಕ್ತಿಕ ಬದುಕಿನ ವಿಷಾದವನ್ನು ಒಪ್ಪಿಕೊಂಡು ಹೇಗೆ ಮುನ್ನಡೆಯಬೇಕು ಎನ್ನುವ ವಿನೂತನ ಸಿದ್ಧಾಂತವಿದೆ.
ಮಹಾಮನೆಯವರ ವಿಷಾದ ಗಾಥೆ ಪುಸ್ತಕ ಎಂದೋ ಬರಬೇಕಿತ್ತು; ಗೆಳೆಯರ ಒತ್ತಾಸೆ ಬಹಳಷ್ಟು ಇದ್ದರೂ ಸಹ ಅವರು ಪ್ರಕಟಣೆಗೆ ಮನಸ್ಸು ಮಾಡಿರಲಿಲ್ಲ; ಈಗ ಅವರ ಈ ತೀರ್ಮಾನ ಸ್ವಾಗತಾರ್ಹ, ನನ್ನಂತಹ ನೂರಾರು ಜನಗಳಿಗೆ ತೀವ್ರವಾಗಿ ಮನ ಮುದುಡಿದಾಗ, ಮಹಾಮನೆಯವರ ವಿಷಾದ ಗಾಥೆ ಓದುವುದರಿಂದ ಮನಸ್ಸು ಸ್ಥಿಮಿತಗೊಳ್ಳುತ್ತದೆ. ಅಂತಹ ಕ್ಷಣಗಳ ನಿರೀಕ್ಷೆಯಲ್ಲಿ ನಾನಂತೂ ಇದ್ದೇನೆ.
–ಗುಂಡಣ್ಣ ಚಿಕ್ಕಮಗಳೂರು
ಸುಂದರವಾದ, ಪ್ರಶಾಂತವಾದ ನದಿಯ ಗರ್ಭದಲಿ ಅಡಗಿರುವ ತೀವ್ರತೆಯನ್ನು ಈ ವಿಷಾದಗಾಥೆಗಳು ಬಿಂಬಿಸುತ್ತವೆ.
–ಜ.ಬ.ಪರೇಶ್
ವಿಷಾದವನ್ನು ಗೀತೆಯಾಗಿಸುವುದು ಸುಲಭವಲ್ಲ. ಅಕ್ಷರಕ್ಕೆ ಇಳಿಸಹೊರಟರೆ ಎದೆಯ ಅಳಲೇ ಶಾಯಿಯಾಗುವಾಗ ಬರೆಯುವುದು ಸುಲಭವಿಲ್ಲ. ಆದರೆ ಮನುಷ್ಯರಲ್ಲಿ ಕೆಲವರು ನೋವಿನ ಲೇಖನಿಯಿಂದ ಕಲೆಯ ಜೀವದನಿಯನ್ನು ಮೂಡಿಸುತ್ತಾರೆ. ಶ್ರೀ ಮಲ್ಲಿಕಾರ್ಜುನ ಮಹಾಮನೆ ಇಂತಹ ಅಪರೂಪದ ಪ್ರತಿಭಾವಂತರಲ್ಲಿ ಒಬ್ಬರು.
ಕಾಲ ಬೇಯುವಾಗ, ನಿದ್ರೆ ದೂರವಾದಾಗ, ಮನದ ನಕ್ಷತ್ರಗಳನ್ನು ಬಾನಿನಲ್ಲಿ ಹುಡುಕ ಬೇಕಾದಾಗ, ಹೊರಗಿನ ಕತ್ತಲು ಮತ್ತು ಒಳಗಿನ ಕತ್ತಲು ಬೆರೆಯುತ್ತಿರುವಾಗ, ಅಮ್ಮನ ಕಣ್ಣೀರು ಕಡಲನ್ನು ಸೇರುತ್ತಾ ಅದನ್ನೇ ಉಪ್ಪಾಗಿಸುತ್ತಿರುವಾಗ, ನೋವುಗಳ ಮಗ್ಗದಲ್ಲಿ ಕವಿತೆಯ ನವನವಿರು ಬಟ್ಟೆ ನಿರ್ಮಿಸಿದ್ದಾರೆ. ಕುವೆಂಪು ಅಂದರು ದುಕ್ಕಿಗೆ ನೆರಂದುಕ್ಕಿ ಎಂದು. ಮಹಾಮನೆಯವರೆಂದರು ದುಕ್ಕಿಗೆ ನೆರಂದುಕ್ಕ.(ದುಃಖ) ಪಟ್ಟ ಪಾಡನ್ನು ನಿರತ ಹಾಡಾಗಿಸುವ ಈ ವಿಷಾದ ಗೀತೆಕಾರನಿಗೆ ನೂರು ನಮನಗಳು.
–ಡಾ. ಎಲ್.ಜಿ.ಮೀರಾ
ಹೀಗೆ ಅನೇಕ ಗೆಳೆಯರು ಈ ಕೃತಿ ಕುರಿತು ಪ್ರತಿಕ್ರಿಯಿಸಿದ್ದಾರೆ. ಅವರೆಲ್ಲರಿಗೂ ಹಾಗೂ ಈ ಗಾಥೆಗಳನ್ನು ಪ್ರಕಟಣಾಪೂರ್ವದಲ್ಲಿ ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ ಗೆಳೆಯರಾದ ಅವಧಿಯ ಶ್ರೀ ಜಿ.ಎನ್.ಮೋಹನ್ ಹಾಗೂ ಕೆಂಧೂಳಿಯ ತುರುವನೂರು ಮಂಜುನಾಥ್ ಅವರಿಗೆ ನನ್ನ ನಮನಗಳು.
ಈ ಕೃತಿಯ ಅರ್ಪಣೆಗೆ ಒಪ್ಪಿದ ಗುರುಗಳಾದ, ಸಾಂಸ್ಕೃತಿಕ ಚಿಂತಕರೂ ಆದ ಪ್ರೊ. ಬರಗೂರು ರಾಮಚಂದ್ರಪ್ಪ ಅವರಿಗೆ ಹಾಗೂ ಈ ಕೃತಿಗೆ ಮುನ್ನುಡಿಯನ್ನು ಬರೆಯಲು ಒಪ್ಪಿ, ಅರ್ಥಪೂರ್ಣ ಮುನ್ನುಡಿಯನ್ನು ಬರೆದಿರುವ ಖ್ಯಾತ ವಿಮರ್ಶಕರು ಹಾಗೂ ಕವಿಗಳೂ ಆದ ಶ್ರೀ ಎಸ್. ದಿವಾಕರ್ ಅವರಿಗೆ ನನ್ನ ನಮಸ್ಕಾರಗಳು.
ಈ ಕೃತಿಯ ಪ್ರತಿ ಗಾಥೆಗೂ ರೇಖಾಚಿತ್ರಗಳನ್ನು ಬರೆಯುವುದರ ಜೊತೆಗೆ ಮುಖಪುಟವನ್ನು ಸಹ ವಿನ್ಯಾಸಗೊಳಿಸಿರುವ ಚಿತ್ರಕಾರ-ಕವಿ ಜಬೀವುಲ್ಲಾ ಎಂ. ಅಸದ್, ಮುಖಪುಟಕ್ಕೆ ನನ್ನ ಫೋಟೋವನ್ನು ತೆಗೆದ ಕೆ.ಮಹಾಲಿಂಗು, ಅಂದವಾಗಿ ಅಕ್ಷರಜೋಡಿಸಿ ಕೊಟ್ಟ ಉಷಾ ಗ್ರಾಫಿಕ್ಸ್‌ನ ಜಿ.ವಿ.ಧನಂಜಯ ಹಾಗೂ ಈ ಕೃತಿಯನ್ನು ಯಾಜಿ ಪ್ರಕಾಶನದ ಮುಖಾಂತರ ಪ್ರಕಟಿಸುತ್ತಿರುವ ನಿಡುಗಾಲದ ಮಿತ್ರ ಶ್ರೀ ಗಣೇಶ ಯಾಜಿ, ಶ್ರೀಮತಿ ಸವಿತಾ ಯಾಜಿ ಇವರೆಲ್ಲರಿಗೂ, ನನ್ನೂರು ದೇವಲಾಪುರ, ಅಲ್ಲಿಯ ಬಂಧು-ಬಾಂಧವರು, ಮಿತ್ರರಿಗೆ ಮತ್ತು ನಾನು ನೆಲೆನಿಂತಿರುವ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ೧ನೇ ಬಡಾವಣೆಯ ಮಿತ್ರರಿಗೆ ನನ್ನ ನಮನಗಳು.
ಜೊತೆಗೆ ನನ್ನ ಆಪ್ತಮಿತ್ರರು, ಸ್ನೇಹಿತರು, ರಂಗಮಿತ್ರರು ಹಾಗೂ ನನ್ನ ತಾಯಿ ಸಿ.ಆರ್. ಮಂಗಳಗೌರಮ್ಮ, ನನ್ನ ತಂದೆ ದಿ. ಡಿ.ಎಸ್.ಬಸೆಟ್ಟಪ್ಪ, ಮಡದಿ ದಿ. ಕೆ.ಎಸ್.ಗಂಗಾಂಬಿಕೆಗೆ, ದಿ. ಜಿ.ಎನ್.ವೀಣಾ, ಮಕ್ಕಳಾದ ದಿ. ಎಂ.ಡಿ.ಕವಿತಾವರ್ಷ ಮಹಾಮನೆ, ದಿ. ಎಂ.ಡಿ.ಸಿಂಧುಭಾರತಿ ಮಹಾಮನೆ ಮತ್ತು ನನ್ನೆಲ್ಲಾ ಬಂಧು-ಬಳಗ ಹಾಗೂ ಕುಟುಂಬದ ಎಲ್ಲರಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು.
–ಡಿ.ಬಿ.ಮಲ್ಲಿಕಾರ್ಜುನಸ್ವಾಮಿ ಮಹಾಮನೆ
Reviews
There are no reviews yet.