ವೈಕಂ ಮುಹಮ್ಮದ್ ಬಷೀರ್
ಮಲೆಯಾಳದ ಮಹಾನ್ ಕಾದಂಬರಿಕಾರರೂ ಸಣ್ಣ ಕಥೆಗಾರರೂ ಸ್ವಾತಂತ್ರ್ಯ ಹೋರಾಟಗಾರರೂ ಆದ ವೈಕಂ ಮುಹಮ್ಮದ್ ಬಷೀರ್ ೧೯೦೮ ಜನವರಿ ೧೯ರಂದು ಕೋಟ್ಟಯಂ ಜಿಲ್ಲೆಯ, ವೈಕಂ ತಾಲೂಕಿನ ತಲಯೋಲಪ್ಪರಂಬ್ ಗ್ರಾಮದಲ್ಲಿ ಕಾಯಿ ಅಬ್ದುರಹಮಾನ್ ಮತ್ತು ಕುಞ್ಞುಮ್ಮ ದಂಪತಿಗಳ ಆರು ಮಂದಿ ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದರು. ಇವರ ಪ್ರಾಥಮಿಕ ವಿದ್ಯಾಭ್ಯಾಸವು ತಲಯೋಲಪ್ಪರಂಬಿನ ಮಲೆಯಾಳ ಶಾಲೆ ಮತ್ತು ವೈಕಂ ಇಂಗ್ಲಿಷ್ ಶಾಲೆಗಳಲ್ಲಿ ಆಯಿತು.
ಬಷೀರರ ಜೀವನವು ಸಾಹಸಿಕತೆಯಿಂದ ಕೂಡಿದ್ದಾಗಿತ್ತು. ಐದನೇ ತರಗತಿಯಲ್ಲಿ ಓದುತ್ತಿದ್ದಾಗ ಕೇರಳಕ್ಕೆ ಬಂದ ಗಾಂಧೀಜಿಯವರನ್ನು ಕಾಣಲು ಮನೆಯಿಂದ ಓಡಿ ಹೋದದ್ದು ಅವರ ಬದುಕಿನ ತಿರುವಾಗಿ ಪರಿಣಮಿಸಿತು. ಕಾಲು ನಡಿಗೆಯಲ್ಲಿ ಎರ್ನಾಕುಳಂಗೆ ಹೋಗಿ ಎತ್ತಿನ ಗಾಡಿ ಏರಿ ಕಲ್ಲಿಕೋಟೆಗೆ ಹೋದ ಬಷೀರ್ ಸ್ವಾತಂತ್ರ್ಯ ಹೋರಾಟದ ರಂಗಕ್ಕೆ ಧುಮುಕಿದರು. ಗಾಂಧೀಜಿಯವರನ್ನು ತಾನು ಮುಟ್ಟಿದೆ ಎಂದು ಅವರು ಅನಂತರದ ಕಾಲದಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ೧೯೩೦ರಲ್ಲಿ ಕಲ್ಲಿಕೋಟೆಯಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಏಟು ತಿಂದು ಜೈಲು ಸೇರಿದರು. ಅನಂತರ ಭಗತ್ ಸಿಂಗ್‌ರನ್ನು ಅನುಸರಿಸಿ ಕ್ರಾಂತಿಕಾರಿ ಸಂಘಟನೆಯನ್ನು ಕಟ್ಟಿದರು. ಕ್ರಾಂತಿಕಾರಿ ಸಂಘಟನೆಯ ಮುಖವಾಣಿ ಪತ್ರಿಕೆ ’ಉಜ್ಜೀವನ’ದಲ್ಲಿ ಅವರು ಬರೆದ ಕಿಡಿಕಾರುವ ಲೇಖನಗಳೇ ಅವರ ಮೊದಲ ಕೃತಿಗಳು. ಅವತ್ತು ಅವರು ’ಪ್ರಭ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಮುಂದೆ ಸುಮಾರು ಹತ್ತು ವರ್ಷಗಳ ಕಾಲ ಭಾರತದಾದ್ಯಂತ ಸಂಚರಿಸಿದರು. ಅತ್ಯಂತ ಸಾಹಸಮಯವಾದ ಈ ಅವಧಿಯಲ್ಲಿ ಬಷೀರ್ ಕಟ್ಟದ ವೇಷಗಳಿಲ್ಲ. ಉತ್ತರ ಭಾರತದಲ್ಲಿ ಸನ್ಯಾಸಿಗಳ ಜತೆಗೂ ಮತ್ತು ಸೂಫಿಗಳ ಜತೆಗೂ ಜೀವಿಸಿದರು. ಅಡುಗೆಯವರಾಗಿಯೂ, ಮಂತ್ರವಾದಿಯಾಗಿಯೂ ಯಾರದ್ದೋ ಸಹಾಯಕರಾಗಿಯೂ ಕೆಲಸ ಮಾಡಿದರು. ಅರಬ್ ದೇಶಗಳಲ್ಲೂ ಆಫ್ರಿಕಾ ದೇಶಗಳಲ್ಲೂ ಸಂಚರಿಸಿದರು. ಸುಮಾರು ಒಂಬತ್ತು ವರ್ಷಗಳಷ್ಟು ದೀರ್ಘವಾದ ಈ ಯಾತ್ರೆಯಲ್ಲಿ ಅವರು ಹಲವು ಭಾಷೆಗಳನ್ನು ತಿಳಿದುಕೊಂಡರು. ಮನುಷ್ಯನ ಬದುಕಿನ ಎಲ್ಲಾ ಮುಖಗಳನ್ನೂ -ತೀವ್ರ ಬಡತನ, ಮನುಷ್ಯನ ಸಂಕಷ್ಟಗಳು- ನೇರವಾಗಿ ಕಂಡರು. ಅವರ ಜೀವನವೇ ಅವರ ಸಾಹಿತ್ಯವಾಯಿತೆಂದು ಹೇಳಬಹುದು. ಇಷ್ಟೊಂದು ವಿಸ್ತಾರವಾಗಿ ಲೋಕಸಂಚಾರ ಮಾಡಿದ ಲೇಖಕರು ಮಲೆಯಾಳದಲ್ಲಿ ವಿರಳವೆಂದೇ ಹೇಳಬಹುದು. ಲೋಕ ಸುತ್ತಿ ಅವರು ಕಂಡ ಸತ್ಯಗಳು ಮತ್ತು ಪಡೆದ ಅನುಭವಗಳನ್ನೇ ನಾವು ಅವರ ಕೃತಿಗಳಲ್ಲಿ ಕಾಣಬಹುದು.
’ಜಯಕೇಸರಿ’ ಎಂಬ ಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟಿಸಿದ ’ಎಂಡೆ ತಂಗಂ’ ಅವರ ಮೊದಲ ಕಥೆಯಾಗಿತ್ತು. ಉದ್ಯೋಗ ಹುಡುಕಿಕೊಂಡು ಬಷೀರ್ ಆ ಪತ್ರಿಕೆಯ ಸಂಪಾದಕರ ಬಳಿಗೆ ಹೋಗಿದ್ದರು. ಆದರೆ ಕೆಲಸವಿಲ್ಲವೆಂದೂ ಕಥೆ ಬರೆದು ಕೊಟ್ಟರೆ ಸಂಭಾವನೆ ಕೊಡಬಹುದೆಂದೂ ಉತ್ತರ ಸಿಕ್ಕಾಗ ಬಷೀರ್ ಬೇರೆ ವಿಧಿಯಿಲ್ಲದೆ ಒಂದು ಕಥೆ ಬರೆದು ಕೊಟ್ಟರು. ಕರ್ರಗೆ ಕುರೂಪಿಯಾಗಿದ್ದ ನಾಯಕಿಯೂ, ಕುಂಟನೂ ವಡ್ಡನೂ ಗೂನು ಬೆನ್ನಿನವನೂ ಆದ ನಾಯಕನೂ ಇದ್ದ ಕಥೆಯೇ ’ಎಂಡೆ ತಂಗಂ’(ನನ್ನ ಚಿನ್ನ).
ಮಲೆಯಾಳ ಭಾಷೆ ಗೊತ್ತಿರುವ ಯಾವ ಸಾಮಾನ್ಯ ವ್ಯಕ್ತಿಗೂ ಅರ್ಥ ಮಾಡಲು ಸಾಧ್ಯವಾಗುವ ಶೈಲಿ ಬಷೀರ್ ಅವರದ್ದು. ಬಹಳ ಕಡಿಮೆ ಬರೆದರೂ ಬಷೀರ್ ಶೈಲಿ ಅಥವಾ ಬಷೀರ್ ಸಾಹಿತ್ಯವೆಂಬುದು ಮಲೆಯಾಳದ ಒಂದು ಸಾಹಿತ್ಯ ಶಾಖೆಯಾಗಿ ಬೆಳೆದದ್ದು ಅವರ ಜೀವನಾನುಭವದ ಶಕ್ತಿಯಿಂದಾಗಿತ್ತು. ತಮ್ಮ ಹಾಸ್ಯದಿಂದ ಅವರು ಓದುಗರನ್ನು ನಗಿಸಿದರು. ಜತೆಗೆ ಅಳುವಂತೆ ಕೂಡಾ ಮಾಡಿದರು. ಸಮಾಜದ ತಳವರ್ಗದವರ ಕಥೆಗಳನ್ನು ಹೇಳಿ ಅವರು ಅವುಗಳನ್ನು ಕಾಲಾತೀತವಾಗಿಸಿದರು. ಅವರ ಶೈಲಿ. ಜೀವಂತಿಕೆಯಿಂದ ತುಂಬಿತ್ತು. ಕೈದಿಗಳು, ಭಿಕ್ಷುಕರು, ವೇಶ್ಯೆಯರು, ಹಸಿದವರು, ಸಲಿಂಗಕಾಮಿಗಳು ಮೊದಲಾದವರಿಂದ ತುಂಬಿದ ಒಂದು ಫ್ಯಾಂಟಸಿ ಲೋಕವಾಗಿತ್ತು ಅವರದು. ಈ ರೀತಿಯ ಕಥಾಪಾತ್ರಗಳ ಯೋಚನೆಗಳಿಗಾಗಲಿ, ಭಾವನೆಗಳಿಗಾಗಲಿ ಅದುವರೆಗಿನ ಸಾಹಿತ್ಯದಲ್ಲಿ ಸ್ಥಾನವಿರಲಿಲ್ಲ. ಸಮಾಜದ ಕುರುಡು ನಡೆಯನ್ನು ಅವರು ತಮ್ಮ ಕಥೆಗಳಲ್ಲಿ ಸದಾ ಪ್ರಶ್ನಿಸಿದರು. ಸಮಾಜದ ಉನ್ನತ ವರ್ಗದವರು ಮಾತ್ರ ನಾಯಕರಾಗುವುದು, ಮುಸ್ಲಿಂ ಕಥಾಪಾತ್ರಗಳನ್ನು ಖಳನಾಯಕರನ್ನಾಗಿಸುವುದು, ಮೊದಲಾದ ಪ್ರವೃತ್ತಿಗಳಿಂದ ಕಾದಂಬರಿಗಳಿಗೆ ಮುಕ್ತಿ ಕೊಟ್ಟದ್ದು ಬಷೀರ್ ಅವರು. ತೀಕ್ಷ್ಣವಾದ ಅನುಭವಗಳ ತೀವ್ರತೆಯು ಅವರ ಕೃತಿಗಳನ್ನು ಅಮರವಾಗಿಸಿತು. ಮುಸ್ಲಿಂ ಸಮುದಾಯದಲ್ಲಿ ಒಂದು ಕಾಲದಲ್ಲಿ ನೆಲೆನಿಂತಿದ್ದ ಎಲ್ಲಾ ರೀತಿಯ ಕಂದಾಚಾರ-ಮೂಢನಂಬಿಕೆಗಳನ್ನೂ ಅವರು ಟೀಕಿಸಿದರು. ಅದಕ್ಕಾಗಿ ವಿವಾದಕ್ಕೂ ಗುರಿಯಾದರು. ಅವರ ’ಎಂದುಪ್ಪಾಪ್ಪಕ್ಕೊರಾನುಂಡಾರ್ನು’ ಕಾದಂಬರಿಯನ್ನು ಕೇರಳದ ಎಡಪಕ್ಷ ಸರಕಾರವಿದ್ದ ಕಾಲದಲ್ಲಿ ಶಿಕ್ಷಣ ಮಂತ್ರಿ ಜೋಸಫ್ ಮುಂಡಶ್ಶೇರಿಯವರು ಉಪ ಪಠ್ಯವನ್ನಾಗಿಸಬೇಕೆಂದು ಶಿಫಾರಸು ಮಾಡಿದಾಗ ಅನೇಕ ಧಾರ್ಮಿಕ ಸಂಘಟನೆಗಳು ಮತ್ತು ವಿರೋಧ ಪಕ್ಷಗಳು ಅದನ್ನು ವಿರೋಧಿಸಿದರು. ಅದರಲ್ಲಿ ಅಶ್ಲೀಲ ಹಾಗೂ ಧರ್ಮವಿರೋಧಿ ವಿಚಾರಗಳಿವೆ ಎಂಬುದು ಅವರ ವಾದವಾಗಿತ್ತು. ಆದರೆ ಅವರ ’ಶಬ್ದಙ್ಙಳ್’ ಕಾದಂಬರಿಯಲ್ಲಿ ವಿವಾದಕ್ಕೆ ಗುರಿಯಾಗಬಲ್ಲ ಇನ್ನಷ್ಟು ವಿಚಾರಗಳಿವೆ.
ಬಷೀರ್ ಮದುವೆಯಾದದ್ದು ಬಹಳ ತಡವಾಗಿ. ಅವರ ೫೦ನೆಯ ವಯಸ್ಸಿನಲ್ಲಿ. ಫಾತಿಮಾ ಬೀವಿ ಅವರ ಪತ್ನಿ. ಅನೀಸ್ ಮತ್ತು ಷಾಹಿನಾ ಇವರ ಮಕ್ಕಳು. ೧೯೯೪ರ ಜುಲೈ ೫ರಂದು ಬಷೀರ್ ಇಹಲೋಕವನ್ನು ತ್ಯಜಿಸಿದರು.
ಬಷೀರ್ ಅವರ ಕೃತಿಗಳು
ಪ್ರೇಮಲೇಖನಂ, ಸರ್ಪಯಜ್ಞಂ, ಬಾಲ್ಯಕಾಲಸಖಿ, ಎಂದುಪ್ಪುಪ್ಪಾಕಕೊರಾನುಂಡಾರ್ನು, ಆನವಾರಿಯುಂ ಪೊನ್ ಕುರಿಶುಂ, ಪಾತುಮ್ಮಯುಡೆ ಆಡ್, ಮದಿಲುಗಳ್, ಭೂಮಿಯುಡೆ ಅವಕಾಶಿಗಳ್(ಸಣ್ಣಕಥಾ ಸಂಕಲನ), ಶಬ್ದಙ್ಙಳ್, ಅನುರಾಗತ್ತಿಂದೆ ದಿನಙ್ಙಳ್(ಡೈರಿ, ಇದನ್ನು ಕಾಮುಕಂದೆ ಡೈರಿ ಎಂದು ಹೆಸರು ಬದಲಾಯಿಸಲಾಯಿತು) ಸ್ಥಲತ್ತೆ ಪ್ರಧಾನ ದಿವ್ಯನ್, ವಿಶ್ವವಿಖ್ಯಾತವಾದ ಮೂಕ್ಕ್(ಸಣ್ಣಕತೆಗಳು) ಭಾರ್ಗವೀನಿಲಯಂ(ಚಿತ್ರಕಥೆ-ನೀಲವೆಳಿಚ್ಚಂ ಎಂಬ ಸಣ್ಣಕಥೆಯಿಂದ), ಕಥಾಬೀಜಂ(ನಾಟಕದಿಂದ ಚಿತ್ರಕಥೆ), ಜನ್ಮದಿನಂ(ಸಣ್ಣಕಥೆಗಳು), ಓರ್ಮಕ್ಕುರಿಪ್ಪ್(ಸಣ್ಣಕಥೆಗಳು), ಅನರ್ಘ್ಯನಿಮಿಷಂ(ಲೇಖನಗಳು), ವಿಡ್ಢಿಗಳುಡೆ ಸ್ವರ್ಗಂ (ಸಣ್ಣಕಥೆಗಳು), ಮರಣತ್ತಿಂದೆ ನಿಳಲ್(ಕಾದಂಬರಿ), ಮೂಪ್ಪೀಟ್ಟುಕಳಿಕ್ಕಾರಂದೆ ಮಗಳ್ (ಕಾದಂಬರಿ), ಪಾವಪ್ಪೆಟ್ಟವರುಡೆ ವೇಶ್ಯ(ಸಣ್ಣಕಥೆಗಳು), ಜೀವಿತ ನಿಳಲ್ ಪಾನುಣಯುಂ (ಕಾದಂಬರಿ), ಓರ್ಮಯುಡೆ ಅರಗಳ್(ನೆನಪುಗಳು), ಆನಪ್ಪಡ(ಸಣ್ಣಕಥೆಗಳು), ಚಿರಿಕ್ಕುನ್ನ ಮಗಳ್ (ಕಾದಂಬರಿ), ಜೀವಿತ ನಿಳಲ್ ಪಾಡುಗಳ್(ಕಾದಂಬರಿ), ವಿಶಪ್ಪ್(ಸಣ್ಣಕಥೆಗಳು), ಒರು ಭಗವದ್ಗೀತಯುಂ ಕುರೆ ಮುಲಗಳುಂ(ಸಣ್ಣಕಥೆಗಳು), ತಾರಾಸ್ಪೆಷಲ್ಸ್(ಕಾದಂಬರಿ), ಮಾಂತ್ರಿಕ ಪೂಚ್ಚ(ಕಾದಂಬರಿ), ಮರಪ್ಪಾವ(ಸಣ್ಣಕಥೆಗಳು), ಎಂ.ಪಿ.ಪಾಲ್(ನೆನಪುಗಳು), ಶಿಂಗಿಡಿ ಮುಂಗನ್(ಸಣ್ಣಕಥೆಗಳು), ಕಥಾಬೀಜಂ(ನಾಟಕ), ಚೆವಿಯೋರ್ಕುಗ! ಅಂತಿಮ ಕಾಹಳಂ! (ಭಾಷಣಗಳು), ಯಾ ಇಲಾಹಿ(ಸಣ್ಣಕಥೆಗಳು), ಸರ್ಪಯಜ್ಞಂ(ಬಾಲಸಾಹಿತ್ಯ), ಬಷೀರಿಂದೆ ಕತ್ತುಗಳ್(ಮರಣಾನಂತರ ಪ್ರಕಟನೆ).
ಬಷೀರ್ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿಗಳ ಫೆಲೋಷಿಪ್ ಪಡೆದಿದ್ದರು. ಭಾರತ ಸರಕಾರದಿಂದ ಪದ್ಮಶ್ರೀ ಗೌರವವೂ ಅವರಿಗೆ ಲಭಿಸಿತ್ತು. ಅವರ ಹೆಚ್ಚು ಕಡಿಮೆ ಎಲ್ಲಾ ಕೃತಿಗಳೂ ಇಂಗ್ಲಿಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.
ಮೊದಲ ಮಾತು
ಮಲೆಯಾಳ ಸಾಹಿತ್ಯ ದಿಗ್ಗಜರಾದ ವೈಕಂ ಮುಹಮ್ಮದ್ ಬಷೀರ್ ಅವರ ಎರಡು ಕಾದಂಬರಿಗಳನ್ನು ಅನುವಾದಿಸಿ ಓದುಗರ ಮುಂದಿಡಲು ತುಂಬಾ ಸಂತೋಷವಾಗುತ್ತಿದೆ. ಬಷೀರ್ ಅವರ ಬಹು ವಿವಾದಗಳಿಗೆ ಗುರಿಯಾದ ವಿಶಿಷ್ಟ ವಸ್ತುವನ್ನುಳ್ಳ ’ಶಬ್ದಗಳು’ ಮತ್ತು ಅಸ್ತಿತ್ವವಾದಿ ಕಥಾವಸ್ತುವಿರುವ ’ಸಾವಿನ ನೆರಳಲ್ಲಿ’ ಎಂಬ ಎರಡು ಕಾದಂಬರಿಗಳು. ೨೦ನೆಯ ಶತಮಾನದ ಆರಂಭದ ದಶಕಗಳಲ್ಲಿ ಬದುಕಿದ ಬಷೀರ್ ಅನೇಕ ಹೊಸತುಗಳನ್ನು ಆರಂಭಿಸಿದವರು. ಈ ಕೃತಿಗಳನ್ನು ನಾನು ಅನುವಾದಕ್ಕಾಗಿ ಆಯ್ದುಕೊಳ್ಳಲು ಕಾರಣ ಅವುಗಳಲ್ಲಿ ನಾನು ಕಂಡ ಹಲವು ವೈಶಿಷ್ಟ್ಯಗಳು.
’ಶಬ್ದಗಳು’ ಗಾತ್ರದ ದೃಷ್ಟಿಯಿಂದ ಒಂದು ನೀಳ್ಗತೆಯಂತೆ ಅನ್ನಿಸಿದರೂ ಅದರಲ್ಲಿ ಬಷೀರ್ ಚರ್ಚಿಸುವ ಪರಸ್ಪರ ಸಂಬಂಧಿತ ವಿವಿಧ ವಿಚಾರಗಳು ಅದನ್ನು ಒಂದು ಕಾದಂಬರಿಯನ್ನಾಗಿಸುತ್ತದೆ. ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತ ಹೋಗುವ ಈ ಕೃತಿಯಲ್ಲಿ ಕಥೆಯ ನಿರೂಪಕ ಒಬ್ಬ ಅನಾಥನಾಗಿ ಬೆಳೆದ ವ್ಯಕ್ತಿ. ಆತನೇ ಹೇಳುವಂತೆ ಅವನು ಒಬ್ಬ ಸಾಕುತಂದೆಯ ಆಶ್ರಯದಲ್ಲಿ ಬೆಳೆದವನು. ಸಾಕುತಂದೆಗೆ ಅವನು ನಾಲ್ಕು ರಸ್ತೆಗಳು ಕೂಡುವ ಜಾಗದಲ್ಲಿ ಹೊಸದಾಗಿ ಹುಟ್ಟಿದ ಶಿಶುವಾಗಿ ಹರುಕು ಬಟ್ಟೆಯ ತುಂಡಿನಲ್ಲಿ ಸುತ್ತಿ ರಕ್ತಸಿಕ್ತವಾದ ಸ್ಥಿತಿಯಲ್ಲಿ ಸಿಕ್ಕಿದವನು. ತಂದೆ ತಾಯಿ ಯಾರು, ಅವರೇಕೆ ತನ್ನನ್ನು ಹಾಗೆ ಬಿಸಾಕಿ ಹೋದರು ಅನ್ನುವುದು ಅವನಿಗೆ ತಿಳಿಯದು. ಸಾಕುತಂದೆ ಅವನನ್ನು ಸಾಕಿ ಯಥಾಶಕ್ತಿ ಶಿಕ್ಷಣವನ್ನೂ ಕೊಡಿಸಿದ್ದಾನೆ. ಅನಂತರ ಅವನು ಸೈನ್ಯ ಸೇರಿ ಅಲ್ಲಿಯೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾನೆ. ಎರಡನೆಯ ಮಹಾಯುದ್ಧದಲ್ಲಿ ಯಾರ್‍ಯಾರೋ ಸ್ವಾರ್ಥಿ ದೊರೆಗಳಿಗೋಸ್ಕರ ಕಾದಾಡಿ, ಅವರ ಅಗತ್ಯಗಳು ಮುಗಿದಾಗ ಮತ್ತೆ ಅಲ್ಲಿಂದ ಹೊರದೂಡಲ್ಪಟ್ಟು ಒಂದು ನಗರಕ್ಕೆ ಬಂದು ಅಲ್ಲಿ ಬದುಕನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾನೆ. ನಗರದ ಮುಖ್ಯಸ್ಥನ ಮನೆಯನ್ನು ಬಾಂಬು ದಾಳಿಯಿಂದ ಉಂಟಾದ ಬೆಂಕಿ ಅನಾಹುತದಿಂದ ರಕ್ಷಿಸಿದ್ದಕ್ಕಾಗಿ ಅವನಿಗೆ ಆ ದೊಡ್ಡ ಮನುಷ್ಯನ ಮನೆಯಲ್ಲಿ ವಾಸ ಮಾಡುವ ಅವಕಾಶ ಸಿಗುತ್ತದೆ. ಅಮ್ಮನ ಮೊಲೆಗಳನ್ನೇ ಕಾಣದ ಅವನಿಗೆ ಹೆಣ್ಣಿನ ಮೊಲೆಗಳನ್ನು ಸ್ಪರ್ಶಿಸುವ ಹಂಬಲ. ಆ ತವಕದಲ್ಲಿ ಆತ ಹೆಣ್ಣೆಂದು ತಿಳಿದು ಮೋಸಹೋಗಿ ಒಬ್ಬ ಗಂಡು ವೇಶ್ಯೆಯ ಜತೆಗೆ ಲೈಂಗಿಕ ಕ್ರಿಯೆ ನಡೆಸುತ್ತಾನೆ. ಸೈನ್ಯದಲ್ಲಿದ್ದ ಸಂಕಷ್ಟದ ದಿನಗಳಲ್ಲಿಯೂ ಗುಹ್ಯ ರೋಗಗಳಿಗೆ ಗುರಿಯಾಗದಿದ್ದ ಅವನು ಈಗ ಗೊನ್ಹೋರಿಯಾ ರೋಗಕ್ಕೆ ತುತ್ತಾಗುತ್ತಾನೆ. ಆ ಗಂಡು ವೇಶ್ಯೆ ತನಗೆ ನಗರದ ಮುಖ್ಯಸ್ಥ ಮತ್ತು ಆತನ ಹೆಂಡತಿ ತನ್ನಿಂದ ಲೈಂಗಿಕ ಸುಖ ಪಡೆಯುತ್ತಿದ್ದ ಬಗ್ಗೆ ಹೇಳುತ್ತಾನೆ. ಕಥಾನಾಯಕ ತನ್ನ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಒಂದು ಪಾಳುಬಿದ್ದ ಛತ್ರದ ಬಳಿ ಇದ್ದ ವೇಶ್ಯಾವಾಟಿಕೆ ನಡೆಯುತ್ತಿದ್ದ ಅಡ್ಡಕ್ಕೆ ಬಂದು ಬೀಳುತ್ತಾನೆ. ಅಲ್ಲಿಗೆ ಭೇಟಿ ನೀಡುತ್ತಿದ್ದ ಶ್ರೀಮಂತರು, ಪ್ರತಿಷ್ಠಿತರು, ಜನಸಾಮಾನ್ಯರು ಎಲ್ಲರನ್ನೂ ಗಮನಿಸುತ್ತಾನೆ. ಜೀವನದ ಬಗ್ಗೆಯೇ ಜುಗುಪ್ಸೆಯೆನ್ನಿಸಿ ರೈಲುಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅಲ್ಲಿಯೂ ವಿಫಲನಾಗುವ ಅವನ ದುರಂತ ಕತೆಯೇ ’ಶಬ್ದಗಳು’. ಸೈನ್ಯದಲ್ಲಿ ಸಾಮಾನ್ಯ ಸೈನಿಕರ ಹೀನಾಯ ಬದುಕು, ಯುದ್ಧರಂಗದ ಕ್ರೌರ್ಯ, ನಗರದ ಬದುಕಿನಲ್ಲಿ ಗಂಡು ವೇಶ್ಯೆಗಳ ದುರಂತಮಯ ಹಿನ್ನೆಲೆ, ವೇಶ್ಯೆಯರ ನರಕಸದೃಶ ಜೀವನ ಮೊದಲಾದ ಚಿತ್ರಣಗಳ ಜತೆಗೆ ಸುಂದರ ನಿಸರ್ಗದ ಸುಂದರ ವರ್ಣನೆಯೂ ಇದೆ. ಒಟ್ಟಿನಲ್ಲಿ ಹದತಪ್ಪಿ ಹೋದ ಆಧುನಿಕ ನಾಗರಿಕ ಬದುಕಿನ ಚಿತ್ರಣ ಮನಮುಟ್ಟುವಂತಿದೆ.
ಮಲೆಯಾಳದ ಪ್ರಸಿದ್ಧ ವಿಮರ್ಶಕರಾದ ಎಂ.ಎನ್.ವಿಜಯನ್ ’ಶಬ್ದಗಳು’ ಕಾದಂಬರಿಯ ಬಗ್ಗೆ ಹೀಗೆ ಹೇಳುತ್ತಾರೆ:
’ನಾಗರೀಕತೆಯ ಎಲ್ಲಾ ಸಿದ್ಧಾಂತಗಳನ್ನೂ ಶಿಥಿಲವಾಗಿಸುವ ಜೀವನಸ್ಥಿತಿಗಳು ’ಶಬ್ದಗಳು’ ಕಾದಂಬರಿಯಲ್ಲಿ ಪ್ರತಿಧ್ವನಿಸುತ್ತವೆ. ನಮ್ಮ ಸಂಸ್ಕೃತಿಯ ಎಲ್ಲಾ ಮುಖಗಳನ್ನೂ ಒಂದು ಸ್ಫೋಟದಿಂದ ಬುಡಮೇಲು ಮಾಡುವ ಶಕ್ತಿ ಅದರಲ್ಲಿ ಕಾಣುವ ಎಲ್ಲ ದೃಶ್ಯಗಳಿಗಿದೆ. ಆತ್ಮಹತ್ಯೆಯ ಮೂಲಕವೂ ಬಿಡುಗಡೆ ಪಡೆಯಲು ಅಸಾಧ್ಯವಾಗುವ ಜೀವನವನ್ನು ಅನುಭವಿಸಿಯೇ ತೀರಬೇಕು ಎಂದು ಒಬ್ಬ ಅನಾಥ ವ್ಯಕ್ತಿಗೆ ವಿಧಿಸುವ ಮೂಲಕ ನಮ್ಮ ಮೌಲ್ಯ ವ್ಯವಸ್ಥೆಯನ್ನೇ ಲೇಖಕರು ಇಲ್ಲಿ ಪ್ರಶ್ನಿಸುತ್ತಾರೆ. ನಾವು ಶಬ್ದಗಳಿಗೆ ಭಯಪಡುವುದು ಅವು ನಮ್ಮೊಳಗಿನ ಧ್ವನಿಯನ್ನು ಅಡಗಿಸುವ ಶಬ್ದಗಳಾಗಿದ್ದರಿಂದ ಮಾತ್ರ.’
’ಸಾವಿನ ನೆರಳಲ್ಲಿ’ ಬಷೀರರ ಇತರ ಕಥೆಗಳಿಗಿಂತ ಭಿನ್ನ ಶೈಲಿಯಲ್ಲಿರುವ ಕಾದಂಬರಿ. ಬದುಕಿನ ಅರ್ಥ ಮತ್ತು ಉದ್ದೇಶಗಳನ್ನು ಶೋಧಿಸುವ ಈ ಕಾದಂಬರಿಯ ನಿರೂಪಕ ತಾನು ಹೇಳ ಬಯಸಿದ್ದನ್ನು ಮಿತ್ರನಿಗೆ ಪತ್ರ ರೂಪದಲ್ಲಿ ಹೇಳುತ್ತಾನೆ. ಪ್ರತಿಕ್ಷಣವೂ ಸಾವಿನ ನೆರಳಲ್ಲೇ ಭಯಪಡುತ್ತ ಬದುಕುವ ಮನುಷ್ಯ ತನ್ನ ನಿರ್ಲಕ್ಷ್ಯದಿಂದಾಗಿ ತಾನು ಪ್ರತಿಪಾದಿಸುವ ಸಿದ್ಧಾಂತಗಳ ವಿರುದ್ಧ ತಾನೇ ನಡೆಯುತ್ತ ತನ್ನ ಸಾವನ್ನು ತಾನೇ ತಂದುಕೊಳ್ಳುತ್ತಾನೆ. ಇಲ್ಲಿ ಬಷೀರ್ ಅವರು ಸಾವಿನ ಕುರಿತಾಗಿ ಮಾತ್ರವಲ್ಲದೆ ಸಾಹಿತಿಯ ಬದುಕನ್ನೂ ವಿಶ್ಲೇಷಿಸುತ್ತಾರೆ. ಒಬ್ಬ ಸಾಹಿತಿ ಕತೆಗಳನ್ನು ಬರೆದು ಜನಪ್ರಿಯನಾಗಿ ಜನರ ದೃಷ್ಟಿಯಲ್ಲಿ ತಾರೆಯಾದರೂ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದ ವಿಪರ್ಯಾಸವನ್ನೂ ಆಧುನಿಕತೆಯ ಹೆಸರಿನಲ್ಲಿ ಶ್ರೀಮಂತರು ತಮ್ಮ ಪ್ರತಿಷ್ಠೆಗೋಸ್ಕರ ಹಣ ಚೆಲ್ಲುತ್ತ ತಮ್ಮ ಹೊಟ್ಟೆಯುಬ್ಬರಿಸುವಷ್ಟು ತಿಂದು-ಕುಡಿದು ತಮ್ಮ ಗುಂಡಿಯನ್ನು ತಾವೇ ತೋಡಿಕೊಳ್ಳುವ ದುರಂತವನ್ನೂ ತಮ್ಮ ಎಂದಿನ ಹಾಸ್ಯಪೂರ್ಣ ಕಥನಶೈಲಿಯಲ್ಲಿ ಮತ್ತು ಆಡುಭಾಷೆಯ ಸೊಗಡಿನ ಸಂಭಾಷಣೆಗಳೊಂದಿಗೆ ಮನಮುಟ್ಟುವಂತೆ ಚಿತ್ರಿಸುತ್ತಾರೆ. ಕನ್ನಡದ ಓದುಗರಿಗೆ ಈ ಕಾದಂಬರಿಗಳು ಓದಿನ ಸುಖವನ್ನು ನೀಡಿಯಾವು ಎಂಬ ಭರವಸೆಯೊಂದಿಗೆ ನಾನು ವಿರಮಿಸುತ್ತೇನೆ.
ಕುಂದಾಪುರ ಡಾ. ಪಾರ್ವತಿ ಜಿ. ಐತಾಳ್
ಪರಿವಿಡಿ
೧. ಶಬ್ದಗಳು / ೧
೧. ನಡುರಾತ್ರಿಯ ಆಗಂತುಕ
೨. ನಾಲ್ಕು ದಾರಿ ಸೇರುವಲ್ಲಿ
೩. ಭೂಮಿಯ ರಕ್ತ
೪. ಪ್ರೇಮಭಾಜನ ಹೆಣ್ಣು!
೫. ಪ್ರೇಮಿ
೬. ಪ್ರೇಮದ ಸ್ವರೂಪ
೭. ಸುವಾಸನಾಭರಿತ ಕರವಸ್ತ್ರ
೮. ಗಂಡು ವೇಶ್ಯೆ
೯. ಅಮ್ಮನೂ ಮಗನೂ
೧೦. ಒಬ್ಬ ಭಾವಿಪ್ರಜೆ
೧೧. ಅನಂತದ ಅಂಚಿನಲ್ಲಿ
೧೨. ರೈಲುಗಳು ಮೊಳಗುತ್ತಿವೆ
೨. ಸಾವಿನ ನೆರಳಲ್ಲಿ / ೪೫
Reviews
There are no reviews yet.