ಮುನ್ನುಡಿ
ನನ್ನ ಹಿರಿಯ ವಿದ್ಯಾರ್ಥಿ ಅರವಿಂದ ವಿಮರ್ಶಾ ಕ್ಷೇತ್ರದಲ್ಲಿ ಮುಂದಿಟ್ಟ ಅಡಿ, ಜೊಕ್ಕ ಮಾತ್ರವಲ್ಲ; ಸ್ಪಷ್ಟವೂ, ದೃಢವೂ ಆಗುತ್ತಿರುವುದು ಅವರ ಬದುಕಿನ ಪಥವೀಕ್ಷಕನಾದ ನನಗೆ ಮುದ ನೀಡುತ್ತದೆ. ಅವರ ತುಡಿತ, ತವಕ, ತೀವ್ರತೆಗಳ ಬಾಲ್ಯಕ್ಕೆ ಬಿಚ್ಚಿಕೊಂಡ ಬಾಹುಗಳು ವಿರಳ. ನಿಶ್ಚಲ ಆರ್ಥಿಕ ಹಿನ್ನೆಲೆ, ನಿಷ್ಪಲ ಸಾಮಾಜಿಕ ವ್ಯವಸ್ಥೆಯ ಚೌಕಟ್ಟಿನೊಳಗೆ ಮುದುಡಿ ಹುಟ್ಟು-ಸಾವುಗಳ ಪ್ರಕೃತಿ ನಿಯಮದೊಳಗೆ ಲಯವಾಗುವುದರ ಬದಲು ಛಲವಾಗಿ ನಿಂತು ತನ್ನ ಇರವಿಗೆ ಅರ್ಥ ಕಂಡುಕೊಂಡ ಅರವಿಂದ-ಶಿಕ್ಷಣ, ಅರ್ಥಶಾಸ್ತ್ರ, ಸಾಮಾಜಿಕ ನೆಲೆಗಟ್ಟುಗಳ ಕುರಿತು ಬೆಳಕು ನೀಡುವ ಕೃತಿಗಳನ್ನು ಹೊರ ತರುತ್ತಿರುವುದನ್ನು ಕಂಡು ಬೆರಗಾಗಿದ್ದೇನೆ. ಅದಕ್ಕೆ ಕಾರಣ ಇಷ್ಟೇ-ಕ್ರಿಯಾಶೀಲ ಶಿಕ್ಷಕನಾಗಿ ಸೃಜನಶೀಲತೆಯನ್ನು ಮೈಗೂಡಿಸಿಕೊಂಡ ಅರವಿಂದರ ಸಾಧ್ಯತೆಯನ್ನು ಅವರು ತರಗತಿಯಲ್ಲಿರುವಾಗಲೇ ನಾನು ಊಹಿಸಿದ್ದೆ. ಆದರೆ ಬೇರೆ ಸಾಧ್ಯತೆಗಳ ಮೂಲಕವೂ ಚಾಚಿಕೊಳ್ಳಬಹುದಾದ ಅವರ ಸಾಧ್ಯತೆಗಳನ್ನು ಊಹಿಸಿರಲಿಲ್ಲ.
ಮೂರನೆಯ ಇರುವು ಮೇಲು ಮೇಲಿನ ಓದಿಗೆ ಸೀಮಿತವಾದ ಪುಸ್ತಕವಲ್ಲ. ಅಧ್ಯಯನಶೀಲ ಓದುವಿಕೆಯನ್ನು ಬಯಸುವ ಕೃತಿ ಇದು. ಇದನ್ನು ನಾನು ಎರಡು ಭಾಗವಾಗಿ ವಿಂಗಡಿಸಿ ಓದಿಕೊಂಡಿದ್ದೇನೆ. ಮೂರನೆಯ ಇರುವು ಎಂಬ ಮೊದಲ ಲೇಖನ ಒಂದು ಭಾಗ. ಈ ಲೇಖನವು ಒಮ್ಮೆ ಹಾಳಾದರೆ ಸರಿಪಡಿಸಲಾಗದ ವಸ್ತುವನ್ನು ಮುಖ್ಯವಾಗಿ ಇರಿಸಿಕೊಂಡಿದೆ. ಅದೇ ಪೃಥ್ವಿ ಅರ್ಥಶಾಸ್ತ್ರ ಮತ್ತು ಭೂಗೋಳಶಾಸ್ತ್ರಗಳ ಮುಖಾಮುಖಿಯಲ್ಲಿ ಉದ್ಭವಿಸುವ ಪೃಥ್ವಿಯ ಸಂರಕ್ಷಣೆಯ ಪ್ರಶ್ನೆಗೆ ಅರವಿಂದರು ಮೂರನೆಯ ಇರುವಿನಲ್ಲಿ ಉತ್ತರವನ್ನು ಹುಡುಕಿದ್ದಾರೆ. ನನ್ನ ಪ್ರಕಾರ ಪೃಥ್ವಿಯನ್ನು ಆರಾಧನೆಯ ಭಾವದಿಂದ ಕಂಡ ಪ್ರಾಚೀನ ನಾಗರಿಕತೆಗಳು ಪೃಥ್ವಿಯಲ್ಲಿ ನಾವು ಎಂಬ ಪರಿಕಲ್ಪನೆಗೆ ನಿಷ್ಠವಾಗಿದ್ದವು. ಈಗ ನಮ್ಮ ನಾಗರಿಕತೆಯು ಪೃಥ್ವಿಯಿಂದ ನಾನು ಎಂಬ ಪರಿಕಲ್ಪನೆಗೆ ನಿಷ್ಠವಾಗಿದೆ. ಈ ಎರಡರ ನಡುವೆ ಪೃಥ್ವಿಯೊಂದಿಗೆ ನಾವು ಎಂಬ ಪರಿಕಲ್ಪನೆಗೆ ನಿಷ್ಠವಾಗುವ ನಾಗರಿಕತೆ ಬೇಕಾಗಿದೆ. ಆ ಸಾಧ್ಯತೆಗಳನ್ನು ಕಂಡುಕೊಳ್ಳಲು ಈ ಲೇಖನವು ಪ್ರಯತ್ನಿಸುತ್ತಿದೆ. ಇಂತಹ ಸಾಧ್ಯತೆಗಳ ಆಲೋಚನೆಗಳು, ಎಲ್ಲವನ್ನೂ ಲಘುವಾಗಿ ತೆಗೆದುಕೊಂಡು ಬೀಸು ಮಾತುಗಳ ದಾಳಿಯ ಜೀವನ ಧರ್ಮವಾಗಿರುವುದರ ಮತ್ತು ತನ್ನನ್ನು ತಾನು ತೊಡಗಿಸಿಕೊಳ್ಳದೆ ವ್ಯವಸ್ಥೆಯ ಬಗ್ಗೆ ಪುಕ್ಕಟೆಯಾದ ಅಪಕ್ವ ಸಿದ್ಧಾಂತಗಳು ನಿರೂಪಣೆಯಾಗಿರುವುದರ ಮಧ್ಯೆ ಅರವಿಂದರು ವಾಸ್ತವ ಜಗತ್ತಿನ ಪ್ರಾಯೋಗಿಕ ನೆಲೆಯಲ್ಲಿ ಅಭಿಪ್ರಾಯ ಮಂಡಿಸುವ ಕ್ರಮವಾಗಿವೆ. ಅದರ ಮೂಲಕವೇ ಅವರು ಪರಿಹಾರ ಕಂಡುಕೊಳ್ಳುತ್ತಾರೆ. ಬೇರೆ ರೀತಿಯಲ್ಲಿ ಚಿಂತಿಸಲು ಪ್ರೇರಣೆ ಕೊಡುತ್ತಾರೆ. ಲಘುವಾಗಿ ಮಾತನಾಡುವವರಿಗೆ ಅದೇ ವಿಚಾರದ ಬಗ್ಗೆ ನಿಂತು ಗಂಭೀರವಾಗಿ ಆಲೋಚಿಸಲು ತೊಡಗಿಸಬಲ್ಲ ಈ ಬರೆಹದ ಹಿಂದೆ ಅರವಿಂದರ ಅಭ್ಯಾಸ, ಪರಿಶೀಲನೆ, ಅನುಭವಗಳೆಲ್ಲವನ್ನೂ ಕರಗಿಸಿ ತನ್ನದೇ ಆಲೋಚನೆಯ ಎಳೆಗಳಾಗಿ ದಾಖಲಿಸುವ ಶ್ರದ್ಧೆ ಇದೆ. ಭೂಮಿಯ ಸಾವು ನಿಶ್ಚಿತ; ಆದರದು ಹೆಚ್ಚು ದೀರ್ಫಕಾಲಕ್ಕೆ ಮುಂದೂಡಲ್ಪಡಬೇಕು ಎನ್ನುವ ಅರವಿಂದರ ಮಾತುಗಳು, ಈ ಪುಸ್ತಕದ ಮೂಲ ಪರಿಕಲ್ಪನೆಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಂಡಾಗ ಒಂದು ತತ್ವವಾಗಿ ಕಾಣಿಸುವುದಿಲ್ಲ. ಬದಲಿಗೆ ಲೇಖಕ ಬಳಸುವ ತಂತ್ರವಾಗಿ ಕಾಣಿಸುತ್ತದೆ. ಮೊದಲು, ಅತ್ತಿತ್ತ ನೋಡದೆ ಓಡುವ ಓಟದ ವೇಗಕ್ಕೆ ಕಡಿವಾಣ ಹಾಕಿ ನಿಂತು, ಆಲೋಚಿಸುವಂತೆ ಮಾಡುವ ಈ ತಂತ್ರವು ಪೃಥ್ವಿಯನ್ನು ಶಾಶ್ವತವಾಗಿ ಉಳಿಸಬಲ್ಲ ತತ್ವವೇ ಆಗಿದೆ. ಈ ಎಲ್ಲ ಕಾರಣಗಳಿಂದ, ಒಟ್ಟಾರೆ ಬದುಕಿಗೆ ಒಂದು ಶಿಸ್ತನ್ನು ರೂಪಿಸಿಕೊಳ್ಳುವುದರಲ್ಲಿ, ಸೈದ್ಧಾಂತಿಕ ಪರಿಕಲ್ಪನೆಗಳು ರಚನೆಗೊಳ್ಳುವುದರಲ್ಲಿ, ಕೃತಿಯ ಚರ್ಚೆಗಳಿಗೆ ಒಂದು ಚೌಕಟ್ಟನ್ನು ರೂಪಿಸಿ ಕೊಳ್ಳುವುದರಲ್ಲಿ ಮೊದಲನೆ ಲೇಖನವು ಹೆಚ್ಚು ಮಹತ್ವದ್ದಾಗಿದೆ.
ಎರಡನೆ ಭಾಗವು ಉಳಿದ ನಾಲ್ಕು ಲೇಖನಗಳಿಗೆ ಸಂಬಂಧಿಸಿದೆ. ಹಾಳಾದರೆ ಸರಿಪಡಿಸಿ ಕೊಳ್ಳಬಹುದಾದ ವಸ್ತುಗಳು ಇಲ್ಲಿ ಚರ್ಚಿಸಲ್ಪಟ್ಟಿವೆ. ಆದರೆ ಈ ಎಲ್ಲ ಚರ್ಚೆಗಳನ್ನು ನಿರ್ದೇಶಿಸಿರುವುದು ಮೊದಲನೆ ಲೇಖನವೇ ಎಂಬುದು ಗಮನಾರ್ಹ ಅಂಶ. ಮೊದಲನೆಯ ಲೇಖನದಲ್ಲಿ ನಿಂತು ಆಲೋಚಿಸಿದ ಮೇಲೆ, ಮಾಡಬೇಕಾದ್ದೇನು ಎನ್ನುವ ಕಡೆಗೆ ಓದುಗರನ್ನು ಸೆಳೆಯುವುದು ಈ ಲೇಖನಗಳ ಧಾಟಿಯಾಗಿದೆ. ವಸ್ತುಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ಅದಕ್ಕಾಗಿ ಹತಾಶರಾಗಬೇಕಾಗಿಲ್ಲ ಎನ್ನುವ ತತ್ವವನ್ನು ಈ ಲೇಖನಗಳು ನಿರ್ಮಿಸಿಕೊಳ್ಳುತ್ತವೆ. ಆಡಳಿತ ಪರಿಸ್ಥಿತಿಯ ಬಗ್ಗೆ ಎತ್ತಲ್ಪಟ್ಟಿರುವ ಪ್ರಶ್ನೆ ಇಲ್ಲಿ ಚರ್ಚೆಗೆ ಒಳಗಾಗುತ್ತದೆ. ನೆಹರೂ ಅವರು ಪ್ರಜಾಪ್ರಭುತ್ವದ ಯಶಸ್ಸಿನಲ್ಲಿ ಜನಪ್ರತಿನಿಧಿಗಳೊಂದಿಗೆ ನೌಕರಶಾಹಿಯ ಜವಾಬ್ದಾರಿ ಎಷ್ಟು ಮಹತ್ವದ್ದೆಂದು ಹೇಳಿದ್ದರು. ಒಂದು ಸಾಮಾಜಿಕ ಎಚ್ಚರವನ್ನು ಉಂಟು ಮಾಡುವುದರಲ್ಲಿ ಟಿ.ಎನ್.ಶೇಷನ್ ಅಂತಹವರು ವಹಿಸಿದ ಪಾತ್ರದ ಹಿನ್ನೆಲೆಯಲ್ಲಿ ನೆಹರೂ ಅವರ ಮಾತುಗಳನ್ನು ನಾವು ಹೆಚ್ಚು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಇಂತಹ ಪ್ರಯತ್ನಗಳಿಗೆ ಪ್ರತಿಕ್ರಿಯಿಸುವವರ ಸಂಖ್ಯೆ ಕಡಿಮೆಯಾದಾಗ ಅರಾಜಕತೆ ಸೃಷ್ಟಿಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಮರುರಚನೆಯ ಸಾಧ್ಯತೆಗಳನ್ನು ಈ ಲೇಖನಗಳು ಚರ್ಚಿಸುತ್ತವೆ. ಈ ಸನ್ನಿವೇಶದಲ್ಲಿ ಇನ್ನೆರಡು ವಿಚಾರಗಳಿವೆ. ಮೊದಲಿನ ಭಾಗ ಕಾನೂನಿಗೆ ಸಂಬಂಧಿಸಿದ್ದು. ಈಗಿರುವ ಕಾನೂನು, ನನ್ನ ಸ್ವಾಧೀನದಲ್ಲಿರುವ ಭೂಮಿಯನ್ನು ನನಗೆ ದರ್ಖಾಸ್ತು ಮಾಡಿಕೊಡಬೇಕಾದರೆ ಅದರಲ್ಲಿ ಎಕರೆಗೆ ಹದಿನೆಂಟಕ್ಕಿಂತ ಹೆಚ್ಚು ಸ್ವಾಭಾವಿಕರ ಮರಗಳು ಇರಬಾರದು ಎನ್ನುತ್ತದೆ. ಆಗ, ಅದಕ್ಕಿಂತ ಹೆಚ್ಚು ಮರಗಳು ಇದ್ದರೆ ನಾನೇನು ಮಾಡಬೇಕು? ಮರಗಳನ್ನು ಕಡಿಯಲೇಬೇಕು! ಕೊಲೆ ಮಾಡಲು ಮನಸ್ಸಿಲ್ಲ ದವನನ್ನು ಕೊಲೆ ಮಾಡಲು ಪ್ರಚೋದಿಸುವ ಕಾನೂನು ಇದು. ಇದರ ಬದಲಿಗೆ ನಿಮ್ಮ ಸ್ವಾಧೀನದಲ್ಲಿರುವ ಭೂಮಿಯಲ್ಲಿರುವ ಒಂದು ಮರವೂ ನಾಶವಾಗಬಾರದು. ಹಾಗಿದ್ದರೆ ದರ್ಖಾಸ್ತು ಮಾಡಿಕೊಡಲಾಗುತ್ತದೆ? ಎನ್ನುವ ಕಾನೂನು ಬಂದರೆ ಕೃಷಿಕನಾಗಿ ನನಗೆ ಸಂತೋಷವಾಗುತ್ತದೆ. ಗಿಡಗಳನ್ನು ನೆಟ್ಟು ಬೆಳೆಸಿ ಸೊಪ್ಪನ್ನು ತರಿದು; ಗಿಡಗಳನ್ನು ಹಾಗೇ ಉಳಿಸಿ ಮರಗಳಾಗಿ ಬೆಳೆಸಿ ಕೃಷಿ ಮಾಡಿದವ ನಾನು. ಆ ಮರಗಳನ್ನು ಕಡಿಯದೆ ಭೂಮಿ ನನ್ನದಾಗುವುದಿಲ್ಲ ಎನ್ನುವ ಕಾನೂನು ಕೃಷಿಕನನ್ನು ಖಿನ್ನನನ್ನಾಗಿಸುತ್ತದೆ. ಪೃಥ್ವಿಯ ನಾಶಕ್ಕೆ ಪ್ರಚೋದಕವಾಗುತ್ತದೆ.
ಎರಡನೆ ಭಾಗ ಕಾನೂನಿನ ಸಮಸ್ಯೆಯಲ್ಲ. ಕರ್ನಾಟಕದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ತೀವ್ರತೆ, ಗಣಿಧಣಿಗಳ ಅಬ್ಬರ-ಕಾನೂನಿನ ತಿರಸ್ಕಾರಗಳೆಲ್ಲವೂ ಪೃಥ್ವಿಯನ್ನು ವಿನಾಶಕ್ಕೆ ಅತಿ ಶೀಘ್ರವಾಗಿ ಒಯ್ಯುತ್ತವೆ. ಇದು ಕಾನೂನಿನ ಸಮಸ್ಯೆಯಲ್ಲ. ರಾಜಕೀಯ ವ್ಯವಸ್ಥೆಯ ಸಮಸ್ಯೆ ಇದು. ಈ ರಾಜಕೀಯದ ನಿರ್ವಹಣೆಯನ್ನು ಮಾಡಿರುವ ಮತ್ತು ಮಾಡುತ್ತಿರುವ ಕೈಗಳೆಲ್ಲವೂ ಪೃಥ್ವಿಯ ನಾಶದ ಕೊಲೆಪಾತಕ ರಕ್ತಸಿಕ್ತ ಕೈಗಳೇ ಆಗಿವೆ. ಇಲ್ಲಿನ ಲೇಖನಗಳು ಕಾನೂನು ಮತ್ತು ರಾಜಕೀಯವೆರಡರ ಮಿತಿ ಮತ್ತು ಸಾಧ್ಯತೆಗಳನ್ನು ಪರಿಶೀಲಿಸುತ್ತಾ ಸಾಗಿ ಹೊಸ ಸಾಧ್ಯತೆಗಳ ಕಡೆಗೆ ಓದುಗರನ್ನು ಸೆಳೆಯುತ್ತವೆ. ಈ ಲೇಖನಗಳನ್ನು ನಿರ್ದಿಷ್ಟ ಜ್ಞಾನ ಶಿಸ್ತಿನಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಶಿಕ್ಷಣ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ ಸಂಸ್ಕೃತಿ -ಹೀಗೆ ಎಲ್ಲವನ್ನೂ ಒಳಗೊಳ್ಳುತ್ತಾ ಒಳಗೊಳಿಸಿಕೊಳ್ಳುತ್ತಾ ಸಾಗುವ ಸ್ವತಂತ್ರ ಆಲೋಚನಾ ಪ್ರವೃತ್ತಿಯ ಈ ಲೇಖನಗಳು ಭವಿಷ್ಯದ ಭಯಾನಕ ಸಾಧ್ಯತೆಗಳನ್ನು ಕೂಡ ಮನವರಿಕೆ ಮಾಡಿಕೊಡುತ್ತಾ ಓದುಗರ ಆಲೋಚನೆಯನ್ನು ಉನ್ನತೀಕರಿಸುತ್ತವೆ. ವರ್ತನೆಗಳಲ್ಲಿ ಪರಿವರ್ತನೆಯನ್ನು ನಿರೀಕ್ಷಿಸುತ್ತವೆ.
ಹರಿಯುವ ನದಿಗೆ ಆರ್ಭಟ, ಗದ್ದಲ, ರಭಸಗಳಿರುತ್ತವೆ. ಆಳ ಸಮುದ್ರಕ್ಕೆ ಗಾಂಭೀರ್ಯ, ಘನತೆಯ ಮೌನವಿರುತ್ತದೆ. ಸದ್ಯ ಎರಡನೆ ಹಂತಕ್ಕೆ ಸಾಗಿ ಬಂದಿರುವ ಅರವಿಂದರ ಪ್ರಬುದ್ಧ, ಪಕ್ವತೆಯ ಬರಹಗಳ ಝರಿಗೆ ಓದುಗರು ಲಾಂವಚನದ ಬೇರುಗಳಾಗಲಿ ಎಂದು ಹಾರೈಸುತ್ತೇನೆ.
–ವಿ.ಸುಬ್ರಾಯ, ಓಣಿಯಡ್ಕ
ನನ್ನ ಮಾತುಗಳು
೨೦೦೯ರಲ್ಲಿ ಪ್ರಕಟವಾದ ಮೂರನೆಯ ಇರುವು ತಿರುವಳ್ವರ್ ಅವರ ಆರ್ಥಿಕ ಚಿಂತನೆಗಳ ತಳಹದಿಯಲ್ಲಿ ೨೦೦೯ರ ಆರ್ಥಿಕ ಸ್ಥಿತಿಗಳನ್ನು ವಿಮರ್ಶಿಸಿದ ಕೃತಿಯಾಗಿದೆ. ಈಗ ಅದು ಮರುಮುದ್ರಣವಾಗುತ್ತಿರುವುದು ಕೃತಿಯ ಮೌಲ್ಯೀಕರಣಕ್ಕೂ ಸಹಾಯವಾಗುತ್ತದೆ.
೨೦೦೯ರಲ್ಲಿ ಈ ಕೃತಿಯನ್ನು ಲೋಹಿಯಾ ಪ್ರಕಾಶನದ ಹಿರಿಯಮಿತ್ರ ಶ್ರೀ ಸಿ. ಚೆನ್ನಬಸವಣ್ಣ ಅವರು ಪ್ರಕಟಿಸಿದ್ದರು.
ಈ ಪುಸ್ತಕಕ್ಕೆ ಮುನ್ನುಡಿಯ ಮಾತುಗಳನ್ನು ನನ್ನ ವಿದ್ಯಾ ಗುರುಗಳಾದ ಶ್ರೀ ಓಣಿಯಡ್ಕ ಸುಬ್ರಾಯರು ಬರೆದಿದ್ದಾರೆ.
ಈ ಪುಸ್ತಕಕ್ಕೆ ಬೆನ್ನುಡಿಯ ಮಾತುಗಳನ್ನು ಈಗ ನಮ್ಮೊಂದಿಗಿಲ್ಲದ, ಡಾ. ಯು.ಆರ್. ಅನಂತಮೂರ್ತಿ ಅವರು ಬರೆದಿದ್ದಾರೆ.
ಮೊದಲ ಪುಸ್ತಕದ ರಕ್ಷಾಪುಟವನ್ನು ಸುಧಾಕರ ಧರ್ಬೆ ಮತ್ತು ಈಗಿನ ಪುಸ್ತಕದ ರಕ್ಷಾಪುಟವನ್ನು ರಘುಪತಿ ಶೃಂಗೇರಿಯವರು ಮಾಡಿದ್ದಾರೆ.
ಹೊಸಪೇಟೆಯ ಯಾಜಿ ಪ್ರಕಾಶನದವರು ಈಗಿನ ಮರುಮುದ್ರಣವನ್ನು ಪ್ರಕಟಿಸುತ್ತಿದ್ದಾರೆ.
ಎರಡೇ ವರ್ಷಗಳಲ್ಲಿ ಮೊದಲ ಮುದ್ರಣದ ಪುಸ್ತಕಗಳು ಖಾಲಿಯಾದ ಮೇಲೆ ಇಂದಿನ ವರೆಗೂ ಸತತವಾಗಿ ಪುಸ್ತಕ ಬೇಕು ಎಂದು ಓದುಗರು ಕೇಳುತ್ತಲೇ ಇದ್ದರು.
ಮೇಲಿನ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ.
೨೪ನೆಯ ಮೇ ೨೦೨೨ ಅರವಿಂದ ಚೊಕ್ಕಾಡಿ, ಮೂಡುಬಿದಿರೆ
ಪುಟ ತೆರೆದಂತೆ…
೧. ಮೂರನೆಯ ಇರುವು / ೧
೨. ಪ್ರಾದೇಶಿಕ ಪಕ್ಷಗಳ ಔಚಿತ್ಯದ ಪ್ರಶ್ನೆ / ೨೦
೩. ಪ್ರತ್ಯೇಕತೆಯ ಹಂಬಲ-ಆಡಳಿತ ಪರಿಸ್ಥಿತಿ ಮತ್ತು ಅಭಿವೃದ್ಧಿಯ ಬಿಕ್ಕಟ್ಟು / ೩೮
೪. ಕೃಷಿ ಕೇಂದ್ರಿತ ಅಭಿವೃದ್ಧಿ / ೫೭
೫ ರಾಜನಾಗಬೇಕಾದ ಪಂಚಾಯತ್‌ರಾಜ್ / ೭೭
Reviews
There are no reviews yet.