ಬದಲಾದ ಮೌಲ್ಯಗಳಿಗೆ ಕನ್ನಡಿ
ಅತ್ತೆ ಸೊಸೆ ಕುರಿತಾದ ಲೇಖನ ಬರೆದಿದ್ದೇನೆ ಸ್ವಲ್ಪ ದೊಡ್ಡದಾಯಿತು ನೋಡಿ ಎಂದು ಡಾ. ಶಾಂತಾ ನಾಗರಾಜ್ ಅವರು ನಮ್ಮ ಪ್ರಾಫಿಟ್ ಪ್ಲಸ್ ಪತ್ರಿಕೆಯ ಅಂಕಣಕ್ಕೆ ಬರಹ ಕಳುಹಿಸಿದಾಗ, ಅದನ್ನು ಓದಿದವಳಿಗೆ ಇದು ಮಾಮೂಲಿ ಅತ್ತೆ ಸೊಸೆಯ ಲೇಖನಕ್ಕಿಂತ ಭಿನ್ನವಾಗಿದೆ. ಯಾವುದೇ ಉಪದೇಶ ಇರದ ಇಲ್ಲಿನ ಬರವಣಿಗೆ ನಮ್ಮೆಲ್ಲರ ಬದುಕಿನ ಸಹಜ, ಸತ್ಯ ಸಂಗತಿಗಳಿಗೆ ಕನ್ನಡಿ ಹಿಡಿದ ಹಾಗಿದೆ ಎನ್ನಿಸಿತು. ಪತ್ರಿಕೆಯಲ್ಲಿ ಎರಡು ಕಂತುಗಳಲ್ಲಿ ಲೇಖನ ಪ್ರಕಟಿಸುವುದೆಂದು ತೀರ್ಮಾನಿಸಿದೆವು. ಮೊದಲ ಕಂತು ಪ್ರಕಟವಾದಾಗ ಬಹಳಷ್ಟು ಜನ ಚಿಕ್ಕ ವಯಸ್ಸಿನ ಅಂದರೆ ಮದುವೆಯಾಗಿ ಚಿಕ್ಕ ಮಕ್ಕಳಿರುವವರು ಪ್ರ್ರತಿಕ್ರಿಯಿಸಿದ್ದರು. ಇದು ನಮಗೆ ಬೇಕಾಗಿತ್ತು ಎಂದರು. ಎರಡನೇ ಕಂತು ಪ್ರಕಟವಾದಾಗ ವಯಸ್ಸಾದ ಎಷ್ಟೋ ಮಹಿಳೆಯರು ಪ್ರತಿಕ್ರಿಯಿಸಿ ಅತ್ತೆ ಸೊಸೆ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳುವುದಕ್ಕೆ ಏನು ಮಾಡಬೇಕು ಎನ್ನುವುದನ್ನು ಇನ್ನಷ್ಟು ವಿವರವಾಗಿ ಬರೆಯಿರಿ ಎಂದರು. ನಮ್ಮ ಓದುಗರಲ್ಲಿ ಒಬ್ಬರಾದ ಭಾಗೀರಥಿ ಗುರುರಾಜ್ ಅವರು ನೀವು ಯಾಕೆ ಇದನ್ನು ಒಂದು ಸಂವಾದದ ಹಾಗೆ ಮಾಡಬಾರದು. ಇದರಿಂದ ಬಹಳಷ್ಟು ಜನರಿಗೆ ಸಹಾಯವಾಗುತ್ತದಲ್ಲಾ ಎಂದರು. ಅವರ ಸಲಹೆ ನಿಜಕ್ಕೂ ಉತ್ತಮವಾಗಿತ್ತು. ನಾವು ಸಂವಾದ ಕಾರ್ಯಕ್ರಮ ಮಾಡುವುದಕ್ಕೆ ಜಾಗದಿಂದ ಹಿಡಿದು ಎಲ್ಲ ವ್ಯವಸ್ಥೆಯನ್ನೂ ಎಸ್.ಎಸ್.ಎನ್.ಎಂ.ಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾಗಿರುವ ಶಶಿಧರ ಆರಾಧ್ಯ ಹಾಗೂ ಅವರ ತಂಡ ಮಾಡಿಕೊಟ್ಟಿತು. ಕೇವಲ ಆಪ್ತ ಸಲಹೆಯ ನೆಲೆಯಿಂದ ಮಾತ್ರವಲ್ಲ, ಅತ್ತೆ ಸೊಸೆ ಸಂಬಂಧ ಸರಿ ಇರದಿದ್ದರೆ ಅದು ಹೇಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನೂ ವೈದ್ಯರು ವಿವರಿಸಿದರು. ಭದ್ರತೆಯ ಭಾವನೆ ಹೊಂದಿರುವ ಮನೆಯಲ್ಲಿ ಅತ್ತೆ ಸೊಸೆ ಸಂಬಂಧ ಹದಗೆಟ್ಟಾಗ ಆ ಮನೆ ಹೇಗೆ ಅಶಾಂತಿಯ, ಅಸಮಾಧಾನದ ಗೂಡಾಗುತ್ತದೆ ಎನ್ನುವುದನ್ನು ಎಳೆ ಎಳೆಯಾಗಿ ವಿವರಿಸಲಾಯಿತು. ಅತ್ತೆ ಸೊಸೆ ಸಂವಾದ ನಮ್ಮ ಕುಟುಂಬ ವ್ಯವಸ್ಥೆಯ ಬದಲಾದ ಮೌಲ್ಯಗಳಿಗೆ ರಾವುಗನ್ನಡಿ ಹಿಡಿಯಿತು.
ಅತ್ತೆ ಸೊಸೆ ಸಂವಾದದ ಬಗೆಗೆ ಪೇಸ್‌ಬುಕ್‌ನಲ್ಲಿ ಹಾಕಿರುವ ಮಾಹಿತಿ ನೋಡಿದ ಹಂಪಿಯ ಶ್ರೀ ಗಣೇಶ ಯಾಜಿಯವರು ಪುಸ್ತಕ ರೂಪದಲ್ಲಿ ತರುವ ಪ್ರಸ್ತಾವನೆ ಇಟ್ಟರು. ಅದುವರೆಗೂ ಪುಸ್ತಕದ ಸ್ವರೂಪ ಕೊಡಬಹುದೆಂದು ಯೋಚಿಸಿರಲಿಲ್ಲ. ಇದಕ್ಕೊಂದು ಸ್ಪಷ್ಟ ರೂಪ ಕೊಟ್ಟ ಶ್ರೀ ಗಣೇಶ ಯಾಜಿಯವರಿಗೆ ವಂದನೆಗಳು.
ಈ ಪುಸ್ತಕ ಪ್ರತಿ ಮನೆಯಲ್ಲೂ ಇರುವ ಹಾಗಾಗಬೇಕಾದರೆ ಎಲ್ಲ ವರ್ಗದವರೂ ಓದಬೇಕು. ನಮಗೆ ಇಬ್ಬರೂ ಹೆಣ್ಣುಮಕ್ಕಳು, ಸೊಸೆ ಸಮಸ್ಯೆ ಇಲ್ಲ ಎನ್ನುವವರೂ ಹೆಣ್ಣುಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವದನ್ನು ಅರಿಯಲು, ಈಗಾಗಲೇ ಅತ್ತೆ ಆದವರು, ಸೊಸೆ ಆಗುವವರು, ಅತ್ತೆ ಆಗುವವರು, ಮಾವ ಹೀಗೆ ಪ್ರತಿಯೊಬ್ಬರಿಗೂ ಸಹಾಯವಾಗಬಲ್ಲ ಜೀವನದ ಅನುಭವವನ್ನೂ, ಆಪ್ತ ಸಲಹೆಯನ್ನೂ, ನಿತ್ಯದ ಬದುಕಿನಲ್ಲಿ ಎದುರಿಸುವ ಸಮಸ್ಯೆಗಳನ್ನೂ ಇಲ್ಲಿ ಬೇರೆ ಬೇರೆ ವಿಭಾಗಗಳಾಗಿ ವಿಂಗಡಿಸಲಾಗಿದೆ. ಹಾಗಾಗಿ ಇಲ್ಲಿನ ಬರಹಗಳು ಮೂರು ವಿಭಾಗಗಳಲ್ಲಿ ವಿಂಗಡನೆಯಾಗಿದೆ. ಆಪ್ತಸಲಹೆ, ಅನುಭವ ಮತ್ತು ಅನಾವರಣ.
ಬದುಕಿನ ಅಮೂಲ್ಯ ಸಂಗತಿಗಳನ್ನು, ಅನುಭವಗಳನ್ನು ಅಕ್ಷರರೂಪಕ್ಕಿಳಿಸಿದ ಪುಸ್ತಕದ ಎಲ್ಲ ಲೇಖಕರಿಗೂ ಅನಂತ ವಂದನೆಗಳು. ಅವರೆಲ್ಲರ ಬರಹಗಳು ಪುಸ್ತಕದ ಮೌಲ್ಯ ಹೆಚ್ಚಿಸಿದೆ. ಪುಸ್ತಕದ ವಿನ್ಯಾಸದ ಹೊಣೆ ಮತ್ತು ಪ್ರಕಟಣೆಯ ಹೊಣೆ ಹೊತ್ತ ಸವಿತಾ ಯಾಜಿಯವರ ನಿಷ್ಠೆಗೆ ನಮನ.
ಸುಧಾ ಶರ್ಮಾ ಚವತ್ತಿ
ಗೆರೆಯ ಅಂಗೈಯಲ್ಲಿ ಎಳೆಯ ಕಿರುಬೆರಳು
ನಮ್ಮ ಬದುಕಿನಲ್ಲಿ ಬಂದೊದಗುವ ಸಂಕಷ್ಟಗಳನ್ನು ಮೂರು ವಿಧದಲ್ಲಿ ಮಾತ್ರ ವಿಂಗಡಿಸ ಬಹುದು. ಆರ್ಥಿಕ ಸಂಕಷ್ಟ, ಆರೋಗ್ಯದ ಸಂಕಷ್ಟ ಮತ್ತು ಪರಸ್ಪರ ಸಂಬಂಧಗಳ ಸಂಕಷ್ಟ. ಆರ್ಥಿಕ ಸಂಕಷ್ಟ ನಮಗೆಲ್ಲ ಗೊತ್ತೇ ಇದೆ. ನಮ್ಮ ಕೆಲಸ ಹೋಗಬಹುದು, ಉದ್ಯಮ ನಷ್ಟವಾಗಬಹುದು, ಸಾಲವಾಗಬಹುದು, ಬೆಳೆ ನಾಶವಾಗಬಹುದು ಹೀಗೆ ಒಂದಿಲ್ಲೊಂದು ಸಮಸ್ಯೆ ತಲೆದೋರಬಹುದು. ನಾವು ನಿರೀಕ್ಷಿಸದೇ ಇರುವ ಎಷ್ಟೋ ಹಣಕಾಸಿನ ತೊಂದರೆ ಎದುರಾಗಬಹುದು.
ಅನಾರೋಗ್ಯದ ಸಂಕಷ್ಟ. ಇದೂ ಅಷ್ಟೆ ಅನಾರೋಗ್ಯ ಯಾವ ರೂಪದಲ್ಲಿಯೂ ಬರಬಹುದು. ಯಾವ ವಯಸ್ಸಿನಲ್ಲೂ ಬರಬಹುದು ಆದರೆ ಇಳಿವಯಸ್ಸಿನಲ್ಲಿ ಮಾತ್ರ ಇದು ನಿಶ್ಚಿತ ಎನ್ನುವುದನ್ನು ಮರೆಯುವ ಹಾಗಿಲ್ಲ.
ನಮ್ಮ ಪರಸ್ಪರ ಸಂಬಂಧಗಳ ತೊಂದರೆ. ಇದು ಮೊದಲಿಗಿಂತ ಬಹುಮುಖ್ಯ ಮತ್ತು ಪರಿಣಾಮಕಾರಿ. ನಮ್ಮ ಪರಸ್ಪರ ಸಂಬಂಧಗಳು ಎಂದರೆ ನಾವು ನಿತ್ಯವೂ ವ್ಯವಹರಿಸುವವರು, ಒಡನಾಡುವವರು, ನಮ್ಮ ಜೊತೆಗೇ ಇರುವವರು. ಮನೆಯಲ್ಲಿ ತಂದೆ ತಾಯಿ, ಗಂಡ ಹೆಂಡತಿ ಮಕ್ಕಳು, ಅಣ್ಣ ತಮ್ಮ ಅಕ್ಕ ತಂಗಿ ಆಫೀಸಿನಲ್ಲಿ ಸಹೋದ್ಯೋಗಿಗಳು, ಬಾಸ್, ಆಫೀಸಿನ ಇತರ ಸಹೋದ್ಯೋಗಿಗಳು ನಿತ್ಯವೂ ನಮ್ಮ ಒಡನಾಟಕ್ಕೆ ಬರುವವರು.
ಈ ಮೂರು ರೀತಿಯ ಸಂಕಷ್ಟಗಳಲ್ಲಿ ಅತ್ಯಂತ ಮುಖ್ಯವಾದದ್ದು ನಮ್ಮ ಪರಸ್ಪರ ಸಂಬಂಧಗಳ ಸಮಸ್ಯೆ. ನಮ್ಮ ಆರ್ಥಿಕ ಸಮಸ್ಯೆಯನ್ನು ಎದುರಿಸುವ ಸಂದರ್ಭದಲ್ಲಿ ನಮ್ಮ ಪರಸ್ಪರ ಸಂಬಂಧಗಳು ಚೆನ್ನಾಗಿದ್ದರೆ ನಾವು ಆರ್ಥಿಕ ಸಂಕಷ್ಟದಿಂದ ಹೊರ ಬರಬಹುದು. ಅನಾರೋಗ್ಯ ಎದುರಾದಾಗಲೂ ನಮ್ಮ ಪರಸ್ಪರ ಸಂಬಂಧಗಳು ಚೆನ್ನಾಗಿ ಇದ್ದಾಗ ಅನಾರೋಗ್ಯದ ಸನ್ನಿವೇಶವನ್ನೂ ಹೇಗೂ ಎದುರಿಸಬಹುದು. ಆದರೆ ನಮ್ಮ ಪರಸ್ಪರ ಸಂಬಂಧಗಳೇ ಸರಿ ಇರದಿದ್ದರೆ ಮೊದಲು ನಮ್ಮ ಮನಸ್ಸು ಸರಿ ಇರುವುದಿಲ್ಲ. ಮನಸ್ಸು ಖುಷಿಯಾಗಿ, ಸಂತೋಷದಿಂದ ಇರದಿದ್ದರೆ ಅದು ನಮ್ಮ ಉದ್ಯೋಗ, ದುಡಿಮೆ ನಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನಮ್ಮ ಪರಸ್ಪರ ಸಂಬಂಧಗಳು ಚೆನ್ನಾಗಿ ಇರದಿದ್ದರೆ ಅದು ನಮ್ಮ ಆರ್ಥಿಕತೆ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಅಂದರೆ ನಮ್ಮ ಎಲ್ಲ ಸಮಸ್ಯೆಗಳ ಮೂಲ ಇರುವುದು ನಮ್ಮ ಪರಸ್ಪರ ಸಂಬಂಧಗಳ ಮೇಲೆ.
ಒಂದು ಮನೆಯ ಬಹುದೊಡ್ಡ ಆಧಾರ ಸ್ತಂಭವಾಗಿರುವ ಇಬ್ಬರು ಮಹಿಳೆಯರು ಅಂದರೆ ಅತ್ತೆ ಸೊಸೆ ಇಡೀ ಕುಟುಂಬದ ಸಾರಥ್ಯ ವಹಿಸುವವರು. ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಿಂದ ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರ ಸ್ಥಿತಿ ಗತಿ ಖಂಡಿತ ಬದಲಾಗಿದೆ. ನಮ್ಮ ಸಂಬಂಧಗಳು ಈಗ ಬಹಳ ಸೂಕ್ಷ್ಮವಾಗಿದೆ. ನಾವು ಸಂಬಂಧಗಳನ್ನು ನಿಭಾಯಿಸುವುದಕ್ಕೆ ಹೆದರುತ್ತಿದ್ದೇವೆ. ಹೌದು ಹೆದರುತ್ತಿದ್ದೇವೆ; ಎಂದರೆ ಆತಂಕಪಡುತ್ತಿದ್ದೇವೆ. ನಾವು ಪಲಾಯನವಾದಿಗಳಾಗುತ್ತಿದ್ದೇವೆ. ಬಹುತೇಕ ಹುಡುಗ ಹುಡುಗಿಯರಿಗೆ ವಿವಾಹ ಎಂದರೆ ಭಯ. ಯಾಕೆಂದರೆ ಹೊಂದಿಕೊಂಡು ಇರಲು ಆಗದಿದ್ದರೆ? ಹಾಗೆಯೆ ವಿವಾಹವಾಗಿ ಎಲ್ಲರೂ ಒಟ್ಟಿಗೇ ಇರುವ ಮನೆಗೆ ಹೋಗುವುದು ಭಯ. ಅತ್ತೆ ಇರುವ ಮನೆಯಲ್ಲಿ ಹೊಂದಿಕೊಳ್ಳುವುದು ಸಾಧ್ಯವೇ ಎನ್ನುವ ಭಯ. ಈ ಭಯ ಅತ್ತೆ ಅಥವಾ ಮಾವ ಕೆಟ್ಟವರು, ಸರಿ ಇಲ್ಲ ಎನ್ನುವುದಕ್ಕಿಂತ ಸ್ವತಃ ಅವರಿಗೆ ಅವರ ಮೇಲೆ ನಂಬಿಕೆಯ ಕೊರತೆ. ತಾವು ಹೊಂದಿಕೊಂಡು ಹೋಗಲಾರೆವೇನೋ ಎನ್ನುವ ಅನುಮಾನ. ಹೀಗೆ ಅನುಮಾನ, ಭಯವನ್ನೇ ಇಟ್ಟುಕೊಂಡು ಮಾಡುವ ಯಾವ ಕೆಲಸವಿರಲಿ, ಪೂರ್ವಾಗ್ರಹದಿಂದ ನೋಡುವ ಯಾವುದೆ ಸಂಬಂಧವಿರಲಿ ಸುಗಮವಾಗಿ ಸಾಗುವುದು ಹೇಗೆ? ಇದಕ್ಕೆ ಪೂರಕವಾಗಿ ನಮ್ಮ ನಂಬಿಕೆಗಳು, ಮಾಧ್ಯಮ ದವರು ಬಿಂಬಿಸುವ ಚಿತ್ರಗಳು. ಸಹಜವಾಗಿ, ಅತ್ಯಂತ ಪ್ರೀತಿ, ಗೆಲುವು ಸಂಭ್ರಮದ ಸಂಬಂಧವೊಂದು ಕುಡಿ ಒಡೆಯುವ ಮೊದಲೇ ಕಮರುವುದಿದೆ.
ಅತ್ತೆ ಸೊಸೆ ಎನ್ನುವ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ಆದರೂ ಅವರಿಬ್ಬರ ದೃಷ್ಟಿ ಬೇರೆ ಅಲ್ಲ. ಇಬ್ಬರೂ ತಮ್ಮ ತಮ್ಮ ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸು ಕಂಡು ಬಂದವರು. ಒಬ್ಬರು ಬಂದ ಸವೆದ ದಾರಿಯಲ್ಲಿ ಇನ್ನೊಬ್ಬರು ಈಗ ಬಂದಿದ್ದಾರೆ. ಹಳೆಯ ದಾರಿಯಲ್ಲಿ ಹೊಸ ಪಾದಗಳ ಹೆಜ್ಜೆಗಳು. ಹಳೆಯ ಹೆಜ್ಜೆಗಳಿಗೆ ಹೊಸ ನಡಿಗೆಯೂ ಅರ್ಥವಾಗಬೇಕು.
ಯಾವುದೇ ಸಮಸ್ಯೆಯನ್ನೂ ಪರಿಹಾರದ ನೆಲೆಯಿಂದ ನೋಡಬೇಕು. ಸಮಸ್ಯೆಯನ್ನು ನೋಡುವ ನಮ್ಮ ಮನೋಭಾವನೆ ಬದಲಾಗಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಬೇರೆಯವರನ್ನು ಬದಲಿಸುವ ಬದಲು, ಬೇರೆಯವರನ್ನು ದೂಷಿಸುವ ಬದಲು ನಾವು ಸುಧಾರಿಸಿಕೊಳ್ಳಬೇಕು ಎನ್ನುವುದು ಸಾರ್ವಕಾಲಿಕ ಸತ್ಯ. ಶ್ರೀಮಾತೆ ಶಾರದಾ ದೇವಿಯವರು ಹೇಳುವ ಹಾಗೆ ಬೇರೆಯವರಲ್ಲಿ ದೋಷವೇ ಕಾಣದ ಹಾಗೆ ಮಾಡು ಎಂದು ಪ್ರಾರ್ಥಿಸಬೇಕು. ಎಲ್ಲಿಯವರೆಗೆ ನಮಗೆ ಬೇರೆಯವರಲ್ಲಿ ದೋಷ ಕಾಣುವುದೋ ಆಗ ನಾವು ಅವರನ್ನು ಮೆಚ್ಚುವುದು ಕಷ್ಟ. ನಮಗೆ ದೋಷದ ಬದಲು ವಿಶೇಷ ಕಂಡಾಗ ಸಹಿಸಿಕೊಳ್ಳುವುದು ಸುಲಭ. ಇಷ್ಟಂತೂ ನಿಜ ಯಾವುದೇ ವ್ಯಕ್ತಿ ಕೇವಲ ಒಳ್ಳೆಯ ಅತ್ತೆ, ಒಳ್ಳೆಯ ಸೊಸೆ ಮಾತ್ರ ಆಗುವುದಿಲ್ಲ. ಅವರು ಮೊದಲು ಒಳ್ಳೆಯ ಮನುಷ್ಯರಾಗಿರುತ್ತಾರೆ. ಒಳ್ಳೆಯ ಮನುಷ್ಯರಾದರೆ ಒಳ್ಳೆಯ ಅತ್ತೆ ಆಗುವುದು ಸೊಸೆ ಆಗುವುದು ಕೇವಲ ಒಳ್ಳೆತನದ ಭಾಗವಾಗುತ್ತದೆ. ಶುದ್ಧ ನೀರನ್ನು ಯಾವ ಪಾತ್ರೆಯಲ್ಲಿ ಇಟ್ಟರೂ ಅದು ಶುದ್ಧವೇ. ಅಂತರ್ಗತ ಒಳ್ಳೆತನವೇ, ನಾನೆಂಬ ಸ್ವಾರ್ಥರಹಿತದಿಂದ ನಾವು ಎನ್ನುವ ನಿಸ್ವಾರ್ಥವಿದ್ದಾಗ ಎಲ್ಲ ಸಂಬಂಧಗಳೂ ಉತ್ತಮವಾಗಿರಲು ಸಹಾಯ. ಇದಕ್ಕೆ ಅತ್ತೆ ಸೊಸೆ ಸಂಬಂಧ ಒಂದು ಉದಾಹರಣೆ.
ನಮ್ಮನ್ನು ಒರೆಗಲ್ಲಿಗೆ ಹಚ್ಚಿ ಉಜ್ಜಿ, ನಮ್ಮನ್ನು ಚೊಕ್ಕ ಚಿನ್ನವಾಗಿಸುವ ಶಕ್ತಿ ನಮಗೆ ಒದಗಿ ಬರುವ ಸಂಕಷ್ಟಗಳಿಗೆ ಇದೆ. ಸಂಕಷ್ಟಗಳಿಗಿರುವ ಶಕ್ತಿಯೇ ಇದು. ಅತ್ತೆ ಸೊಸೆ ಸಂಬಂಧ ಪರಸ್ಪರರಲ್ಲಿರುವ ಒಳ್ಳೆತನ ಹೆಕ್ಕಿ ತೆಗೆಯುವ. ಇಬ್ಬರೂ ಆಂತರಿಕ ವಿಕಸನಕ್ಕೆ ತೆರೆದುಕೊಳ್ಳುವ ಅನುಪಮ ಅವಕಾಶ. ನಾವು ಅತ್ತೆಯಲ್ಲಿ ಅಮ್ಮನನ್ನು ನೋಡುತ್ತೇವೆ ಎನ್ನುವ ಅವಾಸ್ತವದ ಆದರ್ಶದ ಮಾತುಗಳನ್ನು ಆಡದೆಯೇ ಅತ್ತೆಯನ್ನು, ಒಂದು ಮನೆ ಬೆಳಗಿದ, ನಾನು ಹೋದ ಮನೆಯನ್ನು ಕಟ್ಟಿ ಬೆಳೆಸಿದವಳನ್ನಾಗಿ, ಬದುಕಿನ ಅರ್ಧ ದಾರಿ ಕಳೆದು ಮುಂದಿನ ದಾರಿಗಾಗಿ ಜೊತೆಗೊಬ್ಬ ಎಳೆಯಳ ಕಿರು ಬೆರಳು ಬಯಸುವ ಸಹಪಥಿಕಳ ಹಾಗೆ ಎಂದು ನೋಡಿದರೂ ಬದುಕು ಸುಂದರವೇ. ಇಂತಹ ಸುಂದರ ಬದುಕಿನ ಮೂಲಕ, ಗುಣಮಟ್ಟದ ಜೀವನವನ್ನು ನಾವೆಲ್ಲರೂ ಹೊಂದಬೇಕು ಎನ್ನುವುದೇ ಈ ಪುಸ್ತಕದ ಆಶಯ.
ಸುಧಾ ಶರ್ಮಾ ಚವತ್ತಿ
ಪುಟ ತೆರೆದಂತೆ…
ಸವಿನುಡಿ / ೩
ಬದಲಾದ ಮೌಲ್ಯಗಳಿಗೆ ಕನ್ನಡಿ / ೫
ಗೆರೆಯ ಅಂಗೈಯಲ್ಲಿ ಎಳೆಯ ಕಿರುಬೆರಳು / ೭
ಆಪ್ತ ಸಲಹೆ
ಡಾ. ಶಾಂತಾ ನಾಗರಾಜ್ ಅವರ ಬರಹ
೧ ಮುಂದೆ ಓದುವ ಮೊದಲು ಬದಲಾಗುತ್ತಿರುವ ದಾಂಪತ್ಯದ ಅರ್ಥಗಳು / ೩
೨ ಅತ್ತೆ-ಸೊಸೆ ಸಂಬಂಧ / ೭
೩ ಕುಟುಂಬದಲ್ಲಿ ಪುರುಷರ ಪಾತ್ರ / ೧೫
೪ ಸಂಬಂಧಗಳು ಸ್ವಾರ್ಥವಾಗಬಾರದು / ೧೮
೫ ಎರಡು ಜಡೆಗಳ ನಡುವಿನ ಒಂದು ಜುಟ್ಟು -ಆರ್. ಶ್ರೀನಾಗೇಶ್ / ೨೨
೬ ತಂಗಿಗೊಂದು ಪತ್ರ -ಶೋಭಾ ಹೆಗಡೆ / ೨೯
೭ ಅಮ್ಮ ವ್ಯಕ್ತಿತ್ವ ನೀಡಿದರು, ಅತ್ತೆ ಸಾಣೆ ಹಿಡಿದರು -ತೇಜಸ್ವಿನಿ ಹೆಗಡೆ / ೩೬
೮ ಮನೋಭಾವ ಬದಲಿಸಿಕೊಳ್ಳೋಣ -ಮಾಲತಿ ಹೆಗಡೆ / ೪೨
೯ ಪರಿಹಾರದ ಮಾರ್ಗಕ್ಕೆ ಸಿದ್ದರಾಗೋಣ -ಡಾ. ಶಾಮಿಲಿ ಕೌಶಿಕ್ / ೪೮
೧೦ ಅತ್ತೆಯನ್ನು ಅರ್ಥ ಮಾಡಿಸುವ ಅಪ್ಪ ಅಮ್ಮ -ಸುಮಾ ಗಿರಿಧರ್ / ೫೨
೧೧ ಅತ್ತೆ ಸೊಸೆ ಸಂಬಂಧ: ಹಲವು ಆಯಾಮಗಳು -ಸಹನಾ ಹೆಗಡೆ / ೫೭
ಅನುಭವ
೧ ಅತ್ತೆಯೆಂಬ ಭೂಮಿತೂಕದ ಆಯಿ -ಭಾರತಿ ಹೆಗಡೆ / ೬೯
೨ ಅತ್ತೆ ಎಂಬ ಆತ್ಮಬಂಧು -ವಸುಂಧರಾ ಕೆ.ಎಂ. / ೭೫
೩ ಸಂಬಂಧದ ಸಂಕಲೆಯೊಳಗೆ ಅತ್ತೆ-ಸೊಸೆ ಬಂಧ -ಸರೋಜ ಪ್ರಭಾಕರ್ / ೭೮
೪ ಅವರಿಗೆ ಅವರೇ ಸಾಟಿ -ಮಮತ ಹರೀಶ್ / ೮೫
೫ ಸೊಸೆಯಾಗುವುದು -ಶೈಲಜಾ ಗೋರನ್ಮನೆ / ೮೮
೬ ಮಲ್ಲಿಗೆಯ ಮೃದುತ್ವ; ಭೂಮಿತೂಕದ ವ್ಯಕ್ತಿತ್ವ -ಮಾಲತಿ ಭಟ್ / ೯೬
೭ ಅರ್ಥೈಸಿಕೊಳ್ಳುವ ಅನನ್ಯ ವ್ಯಕ್ತಿತ್ವ -ಸಂಧ್ಯಾ ಮಂಜುನಾಥ್ / ೧೦೧
೮ ಎನ್ನ ಕನಸಿನಲ್ಲಿ ನೀನು ಬೈಂದೆ -ಉಷಾ ಕಟ್ಟೆಮನೆ / ೧೦೫
೯ ಧಾರ್ಮಿಕ ಮನೋಭಾವದ ಅತ್ತೆ ದಿಟ್ಟ ನಡೆಯ ಸೊಸೆ -ಡಾ. ಕೆ. ಶರೀಫಾ / ೧೧೫
೧೦ ತಾಳ್ಮೆ ಕಾಪಾಡಿತು -ಹರಿಣಾಕ್ಷಿ / ೧೨೦
೧೧ ಒಳ್ಳೆತನ ಮುಖ್ಯ -ಅನಾಮಿಕ / ೧೨೨
೧೨ ಹೊಂದಾಣಿಕೆಯೇ ಮೂಲಮಂತ್ರ -ಶ್ರೀದೇವಿ ಕೆರೆಮನೆ / ೧೨೬
೧೩ ಹಾಲು ನೀರು ಬೆರೆತ ಹಾಗೆ -ಎಸ್. ಇಂದ್ರಾಣಿ ಪ್ರಕಾಶ / ೧೩೧
೧೪ ಅತ್ತೆ ಅಮ್ಮನಾಗುವ ಪರಿ! -ಡಾ. ವಸುಂಧರಾ ಭೂಪತಿ / ೧೩೫
೧೫ ಅತ್ತೆಯೆಂಬ ತ್ಯಾಗಿ -ಸಂಧ್ಯಾ ಹೆಗಡೆ, ಆಲ್ಮನೆ / ೧೪೪
೧೬ ಅವರೇ ನಮ್ಮ ಸಂಸ್ಕೃತಿ -ಪದ್ಮಶ್ರೀ ರಾಗಂ / ೧೪೮
೧೭ ಅತ್ತೆ ಸೊಸೆ ಹೊಂದಾಣಿಕೆ: ಗ್ರಹಿಕೆ, ವಾಸ್ತವತೆ ಹಾಗೂ ಪ್ರೀತಿಯ ನೆರಳಲ್ಲಿ -ಕಲ್ಗುಂಡಿ ನವೀನ್ / ೧೫೩
ಅನಾವರಣ
ಸುಧಾ ಶರ್ಮಾ ಚವತ್ತಿ ಅವರ ಬರಹ
೧. ಈಚೆ ದಡದಲಿ ನಿಂತು… / ೧೬೫
೨. ಹಿರಿಯರ ಆತಂಕ; ಕಿರಿಯರ ಧಾವಂತ / ೧೭೬
೩. ಯೋಗಕ್ಷೇಮ ಭರವಸೆ / ೧೭೮
Reviews
There are no reviews yet.