ಮುನ್ನುಡಿ
ಡಾ. ಪ್ರಕಾಶ ಗ. ಖಾಡೆ ಅವರು ನಮ್ಮ ನಾಡಿನ ಗಣ್ಯ ವಿದ್ವಾಂಸರಲ್ಲಿ ಒಬ್ಬರು. ಕವಿಯಾಗಿ, ವಿಮರ್ಶಕರಾಗಿ, ನಾಟಕಕಾರರಾಗಿ, ಸಂಪಾದಕರಾಗಿ, ವಾಗ್ಮಿಯಾಗಿ, ಸಂಘಟಕರಾಗಿ ತಮ್ಮದೇಯಾದ ಛಾಪು ಮೂಡಿಸಿದವರು. ಸದಾ ಕ್ರಿಯಾಶೀಲರಾಗಿರುವ ಸಾಹಿತ್ಯಿಕ, ಸಾಂಸ್ಕೃತಿಕ ಮನೋಧರ್ಮ ಇವರದು. ಇವರ ಪ್ರವೃತ್ತಿಯ ಚಲನಶೀಲತೆಗೆ, ಬಹುಶ್ರುತತೆಗೆ ಸಾಕ್ಷಿಯಾಗಿ ಇಪ್ಪತ್ತೊಂಬತ್ತು ಕೃತಿಗಳು ಕನ್ನಡಿಗರ ಮುಂದಿವೆ. ಮೂವತ್ತನೆಯ ಕೃತಿ ಬೇಂದ್ರೆ ಕಾವ್ಯದ ದೇಸಿಯತೆ ಇದೀಗ ಹೊಸ ಸೇರ್ಪಡೆ ಯಾಗುತ್ತಿರುವುದು ಡಾ. ಪ್ರಕಾಶ ಗ. ಖಾಡೆಯವರನ್ನು ಅಭಿನಂದಿಸಲು ಅವರ ಅಭಿಮಾನಿಗಳ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ.
ದ.ರಾ.ಬೇಂದ್ರೆ ಆಧುನಿಕ ಕನ್ನಡ ಕಾವ್ಯ ಸಂದರ್ಭದ ಬಹುದೊಡ್ಡ ಕಾವ್ಯ ಪ್ರತಿಭೆ. ಕಾಮನಬಿಲ್ಲಿನ ಬಣ್ಣ ಏಳಾದರೆ, ಬೇಂದ್ರೆ ಕಾವ್ಯದ ಬಣ್ಣ ಎಂಟು. ಹೊಸಗನ್ನಡ ಕಾವ್ಯಕ್ಕೆ ಹೊಸ ಉಸಿರು, ಹೊಸ ಜೀವತುಂಬಿ ಹಸನುಗೊಳಿಸಿ ಅಂದಿನ ಕವಿಗಳಿಗೆ ಮಾತ್ರವಲ್ಲ, ಮುಂದಿನ ಕವಿಗಳಿಗೂ ಮಾರ್ಗದರ್ಶಕ ಕಾವ್ಯಗುರು ಎನಿಸಿದವರು. ತಮ್ಮ ದೇಸಿನುಡಿಯ ಪ್ರಯೋಗಶೀಲತೆಯ ಮೂಲಕ ಹೊಸಗನ್ನಡ ಕಾವ್ಯ ಭಾಷೆಯನ್ನು ಬೆಳೆಸಲು ನಿರಂತರವಾಗಿ, ಅವಿಚಲರಾಗಿ, ಯಶಸ್ವಿಯಾಗಿ ದುಡಿದ ಹಿರಿಯರಲ್ಲಿ ದ.ರಾ.ಬೇಂದ್ರೆ ಮುಖ್ಯರು. ಬೇಂದ್ರೆಯವರ ಕಾವ್ಯ ಸತ್ವವನ್ನು ಪ್ರಭಾವಿಸಿದ ಮಹತ್ವದ ಅಂಶಗಳ ಬಗೆಗೆ ಸುದೀರ್ಘವಾದ ಚರ್ಚೆ ಈಗಾಗಲೇ ನಡೆದಿದೆಯಾದರೂ ಹೊಸ ತಲೆಮಾರಿನ ಪ್ರತಿಕ್ರಿಯೆಗೆ ದ್ಯೋತಕವಾಗಿ ಡಾ. ಪ್ರಕಾಶ ಗ. ಖಾಡೆ ಅವರ ಈ ಕೃತಿ ಹೊರಬರುತ್ತಿದೆ.
ಪ್ರಕಾಶ ಅವರು ಈ ಕೃತಿಯಲ್ಲಿ ಅನೇಕ ಮಹತ್ವದ ಸಂಗತಿಗಳ ಚರ್ಚೆಗೆ ಮುಂದಾಗಿದ್ದಾರೆ. ಬೇಂದ್ರೆ ಅವರ ಕಾವ್ಯ ಶಿಲ್ಪದ ಒಳ-ಹೊರ ಆವರಣಗಳು ಜಾನಪದದ ನೆಲೆಯಾಗಿವೆ ಎಂಬುದನ್ನು ಕವಿತೆಗಳ ಪ್ರಮಾಣೀಕರಣದಲ್ಲಿ ಶ್ರುತಪಡಿಸುವುದು ಈ ಕೃತಿಯ ಮುಖ್ಯ ಆಶಯ. ಬೇಂದ್ರೆಯವರು ಕಾವ್ಯ ರಚನೆ ಮಾಡಲಾರಂಭಿಸಿದ ಕಾಲವನ್ನು ವಿಶ್ಲೇಷಿಸುವುದೆಂದರೆ ಆಧುನಿಕ ಕನ್ನಡ ಕಾವ್ಯಾರಂಭದ ಘಟ್ಟವನ್ನು ಮುಖಾಮುಖಿಯಾದಂತೆ ಎಂಬ ತಿಳುವಳಿಕೆಯಿಂದಲೇ ಇಲ್ಲಿನ ಚರ್ಚೆಯನ್ನಾರಂಭಿಸಿರುವ ಡಾ. ಪ್ರಕಾಶ ಅವರು ತುಂಬಾ ವಿಸ್ತೃತವಾದ ಪೀಠಿಕೆಯನ್ನು ಒದಗಿಸಿದ್ದಾರೆ. ಮುಖ್ಯವಾಗಿ ಆ ಕಾಲದ ಭಾಷಿಕ ಆಯಾಮದ ಸ್ವರೂಪವನ್ನು ಆರಂಭಿಕ ಹೆಜ್ಜೆಗಳಲ್ಲಿ ಗುರುತಿಸುವಾಗ ಜನಭಾಷೆಯಾದ ಜಾನಪದದ ಪ್ರಭಾವವನ್ನು ಮುಖ್ಯಕೇಂದ್ರವಾಗಿರಿಸಿಕೊಂಡಿದ್ದಾರೆ. ಜನವಾಣಿಯಿಂದ ಬೇಂದ್ರೆ ಮತ್ತಿತರ ಮುಖ್ಯ ಕವಿಗಳು ಪಡೆದುಕೊಂಡಿದ್ದು, ಹೀಗೆ ಪಡೆದಿದ್ದನ್ನು ಸ್ವೋಪಜ್ಞತೆಯ ಮೆರಗಿನೊಂದಿಗೆ ಕಡೆದಿರಿಸಿದ್ದನ್ನು ಈ ಕೃತಿ ಸೊಗಸಾಗಿ ಚರ್ಚಿಸುತ್ತದೆ. ದೇಸಿ’ ನೆಲೆಯ ಅನಾವರಣ ಈ ಬರಹದ ಮುಖ್ಯ ಉದ್ದೇಶವಾದರೂ ಆನುಷಂಗೀಕವಾಗಿ ಬೇಂದ್ರೆ ಅವರ ಕಾವ್ಯವನ್ನು ಪ್ರಭಾವಿಸಿದ ಅನೇಕ ಸಂಗತಿಗಳನ್ನು ವಿವರಿಸುತ್ತಾರೆ. ಹೀಗೆ ಮಾಡುವಾಗ ತಮಗಿಂತ ಹಿಂದಿನ ವಿದ್ವಾಂಸರು ಮಾಡಿರುವ ಚರ್ಚೆಗಳ ಉಲ್ಲೇಖಗಳನ್ನು ಕಾಣಿಸುತ್ತಾ ಕೆಲವನ್ನು ಒಪ್ಪುವ, ನಿರಾಕರಿಸುವ ವಸ್ತುನಿಷ್ಠ ಮನೋಧರ್ಮದಲ್ಲಿ ಸಾಗಿರುವುದು ಮೆಚ್ಚಲೇಬೇಕಾದ ಅಂಶ. ಬೇಂದ್ರೆ ಕಾವ್ಯದ ಅಭ್ಯಾಸದೊಂದಿಗೆ, ಬೇಂದ್ರೆ ಕಾವ್ಯ ವಿಮರ್ಶೆಯನ್ನು ಈ ಲೇಖಕರು ಅಧ್ಯಯನ ಮಾಡಿರುವರೆಂಬುದೇ ಅನೇಕ ಕಡೆ ಪುರಾವೆಗಳಿವೆ. ಈ ಕೃತಿಯ ಕೊನೆಯಲ್ಲಿ ನೀಡಿರುವ ಅನುಬಂಧದಲ್ಲಿರುವ ಪರಾಮರ್ಶನ ಗ್ರಂಥಗಳ ಪಟ್ಟಿ ನೋಡಿದರೆ ಪ್ರಕಾಶ ಅವರು ನಡೆಸಿರುವ ಓದಿನ ಹರವು ನಮ್ಮ ಊಹೆಗೆ ನಿಲುಕಬಹುದು.
ಬೇಂದ್ರೆಯವರ ’ದೇಸಿ’ ಪ್ರಭಾವವನ್ನು ಚರ್ಚೆ ಮಾಡುವವರಿಗೆ ಇರಲೇಬೇಕಾದ ಸಿದ್ಧತೆ ಕೂಡಾ ಖಾಡೆ ಅವರಿಗೆ ಸಾಧ್ಯವಾಗಿದೆ. ಈ ಕಾರಣದಿಂದಲೇ ಈ ಕೃತಿಯು ವಿಮರ್ಶೆ’ ಎಂದು ಕೃತಿಕಾರರಿಂದ ಸೂಚಿತವಾಗಿದ್ದರೂ ಸಂಶೋಧನಾ ಸ್ವರೂಪ ಪಡೆದುಕೊಂಡಿದೆ. ಈ ಚೆರ್ಚೆಯ ಫಲಿತಗಳನ್ನು ಕಾಣಿಸಿರುವ ರೀತಿ ಕೂಡ ನನ್ನ ಈ ಮಾತನ್ನು ಸಮರ್ಥಿಸುತ್ತವೆ. ತಮ್ಮ ಕವಿತೆಗಳ ಸಂವಹನ ಶಕ್ತಿಯನ್ನು ತೀವ್ರಗೊಳಿಸಲು ಬೇಂದ್ರೆ ನಮ್ಮ ಕಾವ್ಯ ಪರಂಪರೆಯ ಮೂಲ ಬೇರುಗಳಾದ ದಾಸರ ಪದ, ವಚನಗಳು, ಲಾವಣಿಗಳು, ಹಳಗನ್ನಡ, ಅನುಭಾವ ಪದಗಳಿಂದ ನೆರವು ಪಡೆದು, ಕಾವ್ಯ ಭಾಷೆಯನ್ನು ಹುರಿಗೊಳಿಸಿಕೊಂಡಿರುವಂತೆಯೇ ಜಾನಪದವೆಂಬ ತಾಯಿ ಬೇರಿನಿಂದಲೂ ಸತ್ವವನ್ನು ಎರವಲು ಪಡೆದುಕೊಂಡಿದ್ದಾರೆಂಬ ನಿಲುವಿಗೆ ಡಾ. ಪ್ರಕಾಶ ಜಿ. ಖಾಡೆ ಅವರು ಬರುತ್ತಾರೆ. ಪರಂಪರಾಗತ ಮಾರ್ಗ ದೇಸಿಗಳ ಚರ್ಚೆಗೆ ಪೂರಕವಾಗಿದ್ದರೂ ಪ್ರಕಾಶ ಅವರು ಜಾನಪದ, ದೇಸಿ ಮತ್ತು ಆಡುನುಡಿಗಳ ಪಾರಿಭಾಷಿಕ ಪದಗಳನ್ನು ಭಿನ್ನ ಸ್ಥರದಲ್ಲಿ ಬಳಸಿಕೊಳ್ಳುವ ಕೌಶಲ್ಯ ತೋರಿದ್ದಾರೆ.
ಬೇಂದ್ರೆ ಅವರ ಕಠಿಣವಾದ ಅನೇಕ ರಚನೆಗಳನ್ನು ಇಲ್ಲಿನ ಚರ್ಚೆಗೆ ಒಳಪಡಿಸಲು ಸಾಧ್ಯವಾಗುವುದಿಲ್ಲ. ಐತಿಹಾಸಿಕ ಪ್ರಜ್ಞೆಯಿಂದ ಆವರ್ತನಶೀಲ ಬದುಕಿನ ಪ್ರಜ್ಞೆಯಿಂದ ಹುಟ್ಟುವ ಮೊದಲಗಿತ್ತಿ’, ಕನಸಿನೊಳಗೊಂದು ಕನಸು’, ಅನ್ನಯಜ್ಞ’, ಬುದ್ಧ’ ಮುಂತಾದ ಕವಿತೆಗಳು ಪುರಾಣ, ಜಾನಪದ, ವಿಧ್ಯುಕ್ತ ಕ್ರಿಯೆಗಳಿಂದ ಭಾಷಾ ವಿಗ್ರಹಗಳಂತೆ ಒಡಮೂಡಿರುವುದನ್ನು ಈ ಬಗ್ಗೆ ಅನಂತಮೂರ್ತಿ, ಶಂಕರ ಮೊಕಾಶಿ ಪುಣೇಕರ, ಆಮೂರ, ಕುರ್ತಕೋಟಿ ಮುಂತಾದ ಘಟಾನುಘಟಿಗಳು ನಡೆಸಿರುವ ಚರ್ಚೆಯ ಅರಿವೂ ಡಾ. ಖಾಡೆ ಅವರಿಗಿದೆ. ತಮ್ಮ ಓದು, ಅನುಸಂಧಾನಗಳ ಹತಾರಗಳ ಮುಖಾಮುಖಿಯಲ್ಲಿ ಚರ್ಚೆಗೆ ಮುಂದಾಗುವ ಪ್ರಕಾಶ ಸ್ವತಃ ಕವಿ ಮತ್ತು ವಿಮರ್ಶಕ ರಾಗಿರುವುದರಿಂದ ಸುಲಭವಾಗಿ ಬೇಂದ್ರೆ ಅವರ ಕಾವ್ಯಾಂತರದೊಳಗಣ ಪ್ರವೇಶಿಕೆ ಸಾಧ್ಯವಾಗಿದೆ. ಅಂತೆಯೇ ಜಾನಪದದ ಸಖ್ಯವು ಅವರ ಸಂಶೋಧನೆಯ ಮುಖ್ಯ ವಸ್ತುವಾಗಿರುವುದರಿಂದ ಈ ಬರಹಕ್ಕೆ ಕಸುವು ತುಂಬಿದೆ. ಬೇಂದ್ರೆ ಕಾವ್ಯಕ್ಕೆ ಹೊಸ ತಲೆಮಾರಿನ ಸಂಶೋಧಕ-ವಿಮರ್ಶಕನೊಬ್ಬನ ಅನುಸಂಧಾನದಂತೆ ಈ ಕೃತಿಯನ್ನು ಓದುಗರು ಪ್ರೀತಿಯಿಂದ ಬರಮಾಡಿಕೊಳ್ಳುವರು.
ಪ್ರಕಾಶ ತುಂಬಾ ಸರಳವೂ ನೇರವೂ ಸುಲಲಿತವೂ ಆದ ಭಾಷೆಯಲ್ಲಿ ಬೇಂದ್ರೆ ಕಾವ್ಯದ ದೇಸಿಯ ನೆಲೆಗಳನ್ನು ಮಥಿಸಿರುವುದರಿಂದ ಈ ಕೃತಿಯ ಓದು ಸುಲಭಗ್ರಾಹಿ ಎನಿಸುತ್ತದೆ. ದಶಕಗಳ ಕಾಲ ಇವರು ಬೇಂದ್ರೆ ಕಾವ್ಯದೊಂದಿಗೆ ಒಡನಾಡಿದ ಸಾರ್ಥಕ್ಯವನ್ನು ಈ ಸಫಲವಾದ ಬರವಣಿಗೆ ಸಾಕ್ಷೀಕರಿಸಿದೆ. ನಾನು ತುಂಬಾ ಆಸಕ್ತಿಯಿಂದ ಈ ಕೃತಿಯನ್ನು ಓದಿ ಆಸ್ವಾಧಿಸಿದೆ. ಇನ್ನಷ್ಟು ವಿಸ್ತಾರವಾಗಿ, ಸಮಗ್ರ ಸ್ವರೂಪದ ಬೇಂದ್ರೆ ಕಾವ್ಯ ವಿಮರ್ಶೆಯನ್ನು ಡಾ. ಪ್ರಕಾಶ ಖಾಡೆಯವರ ಪ್ರತಿಭೆ ನೀಡಬಲ್ಲದು. ಆ ಸಂದರ್ಭ ಬೇಗ ಪ್ರಾಪ್ತವಾಗಲಿ ಎಂದು ಆಶಿಸುತ್ತಾ, ಓದಲಿತ್ತು ಎರಡು ಮುಮ್ಮಾತುಗಳನ್ನು ಬರೆಯಲು ಕೋರಿದ ಇವರ ಹೃದಯವಂತಿಕೆಯನ್ನು ನೆನೆಯುತ್ತಾ, ಸಕಲ ಶುಭಗಳೂ ಈ ಕೃತಿಗೆ ಒದಗಿ ಬರಲೆಂದು ಆಶಿಸುವೆ.
–ಡಾ. ಎಚ್.ಎಸ್. ಸತ್ಯನಾರಾಯಣ
ಖ್ಯಾತ ವಿಮರ್ಶಕರು
ಲೇಖಕರ ನುಡಿ
ಡಾ. ದ.ರಾ.ಬೇಂದ್ರೆ ಅವರು ಜನಿಸಿ ೨೦೨೧ರ ಜನವರಿ ೩೧ಕ್ಕೆ ೧೨೫ ವರುಷಗಳು ತುಂಬುತ್ತಿರುವ ಹೊತ್ತಿನಲ್ಲಿ ಈ ಪುಟ್ಟ ಹೊತ್ತಿಗೆ ಬೇಂದ್ರೆ ಕಾವ್ಯದ ದೇಸಿಯತೆ ಕೃತಿಯನ್ನು ಅವರ ಸ್ಮರಣೆಗೆ ಅರ್ಪಿಸಲು ನನಗೆ ಅತ್ಯಂತ ಖುಷಿಯೆನ್ನಿಸುತ್ತದೆ. ಪ್ರತಿ ವರ್ಷ ಜನವರಿ ೩೧ ಕನ್ನಡಿಗರು ಹೆಮ್ಮೆ ಮತ್ತು ಅಭಿಮಾನಪಡುವ ದಿನ. ಈ ದಿನವಂತೂ ನಾವು ಬೇಂದ್ರೆ ಅವರ ನೆನಪಿಗೆ ಕವಿ ದಿನ’ವಾಗಿ ಆಚರಿಸುತ್ತಿದ್ದೇವೆ.
ಬೇಂದ್ರೆ ಅವರು ಕನ್ನಡ ಭಾಷೆಯ ಶಕ್ತಿ, ಸಿರಿವಂತಿಕೆಯನ್ನು ಕಟ್ಟಿಕೊಟ್ಟವರು. ಕಾವ್ಯ ಭಾಷೆಯಾಗಿ ಕನ್ನಡ ತೋರುವ ವಿಸ್ಮಯಗಳನ್ನು ಅನಾವರಣಗೊಳಿಸಿದವರು. ಗ್ರಾಮ್ಯ ಕನ್ನಡ, ಬಳಕೆ ಕನ್ನಡ, ಬದುಕಿನ ಕನ್ನಡ, ಅನ್ನದ ಕನ್ನಡವಾಗಿ ಇಂದು ಜಗದಗಲ ಹಬ್ಬಿ ನಿಂತಿರುವ ಕನ್ನಡ ಭಾಷೆಗೆ ಕಸುವು ತುಂಬಿದ ಕೀರ್ತಿ ದ.ರಾ.ಬೇಂದ್ರೆ ಅವರಿಗೆ ಸಲ್ಲುತ್ತದೆ. ಅವರೊಬ್ಬ ದೈತ್ಯ ಪ್ರತಿಭೆ. ಭಾಷೆಯನ್ನು ಕುಣಿಸಿದವರು. ಭಾಷೆಯ ಸತ್ವವನ್ನು ತುಂಬಿ ತುಂಬಿ ಕೊಟ್ಟವರು. ಅವರ ಕವಿತೆಗಳೇ ಕನ್ನಡಿಗರ ಮನೆ ಮಾತಾದ ಬೆಡಗುಗಳು. ಅವರು ಶಬ್ಧ ಗಾರುಡಿಗರು, ಕನ್ನಡದ ಮಾಂತ್ರಿಕ ಶಕ್ತಿ ಅವರ ಕವನಗಳು.
ಬೇಂದ್ರೆ ಅವರ ಕಾವ್ಯದ ಬಗ್ಗೆ ಅನೇಕ ಅಧ್ಯಯನಗಳು ಕನ್ನಡವೂ ಸೇರಿದಂತೆ ಅನೇಕ ಭಾಷೆಗಳಲ್ಲಿ ನಡೆದಿವೆ. ನಾನು ಬಹುಮುಖ್ಯವಾಗಿ ಬೇಂದ್ರೆ ಅವರ ಕಾವ್ಯದ ದೇಸಿಯತೆಯ ಸೊಗಡನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದೇನೆ. ಹಾಗೂ ಬೇಂದ್ರೆ ಅವರ ಕಾವ್ಯಧೋರಣೆ ಜಾನಪದೀಯವಾಗಲು ಉಂಟಾದ ಆರಂಭಿಕ ಸಂದರ್ಭಗಳನ್ನು ದಾಖಲಿಸುತ್ತಾ ಕನ್ನಡ ನವೋದಯ ಕಾವ್ಯಕ್ಕೆ ದೇಸಿ ಸತ್ವ, ಶಕ್ತಿ ತುಂಬಿದ ಪರಿಯನ್ನು ತುಂಬಾ ವಿಸ್ತೃತವಾಗಿಯೇ ಚರ್ಚಿಸಿದ್ದೇನೆ.
ನಾನು ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಅಧ್ಯಯನ ಮಾಡುವಾಗ ಬೇಂದ್ರೆ ಅವರ ಒಟ್ಟು ಕಾವ್ಯವನ್ನು ಓದುವ, ಅರ್ಥ ಮಾಡಿಕೊಳ್ಳುವ, ಚರ್ಚಿಸುವ, ಟಿಪ್ಪಣಿ ಮಾಡುವ ಒಂದು ಸದಾವಕಾಶ ಕಳೆದ ಹದಿನೈದು ವರ್ಷಗಳ ಹಿಂದೆ ಒದಗಿಬಂದಿತ್ತು. ಆಗ ನಾಡಿನ ಹಿರಿಯ ವಿದ್ವಾಂಸರು ನನ್ನ ಮಾರ್ಗದರ್ಶಕರಾದ ಪ್ರೊ. ಎ.ವಿ.ನಾವಡ ಅವರು ನೀಡಿದ ಪ್ರೋತ್ಸಾಹ ದೊಡ್ಡದು. ಬೇಂದ್ರೆ ಅವರ ಕಾವ್ಯದ ಅಂದಿನ ಓದು ಇಂದು ಈ ಕೃತಿಗೆ ಕಾರಣವಾಯಿತು. ಕೊವಿಡ್-೧೯ ಕೊರೊನಾ ಕಾಲಘಟ್ಟದಲ್ಲಿ ಲಾಕ್‌ಡೌನ್ ಜಾರಿಯಾದಾಗ, ಮನೆಯಲ್ಲಿದ್ದೇ ಸಾಮಾಜಿಕ ಜಾಲತಾಣಗಳ ಮೂಲಕ ಬೇಂದ್ರೆ ಅವರ ಕಾವ್ಯದ ಕುರಿತು ನಿರಂತರವಾಗಿ ಉಪನ್ಯಾಸ ನೀಡಿದೆ. ಆ ಎಲ್ಲವನ್ನು ಸೇರಿಸಿ ಈ ಕೃತಿ ರೂಪುಗೊಂಡಿತು.
ಪ್ರಕಟಣೆಗೆ ನೆರವಾದ ಬಾಗಲಕೋಟೆ ವಿದ್ಯಾ ಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷರಾದ ಶ್ರೀಮತಿ ಶ್ರೀಲತಾ ಹೆರಂಜಲ, ಬಾಗಲಕೋಟೆ ಅರ್ಬನ್ ಬ್ಯಾಂಕ್ ಅಧ್ಯಕ್ಷರಾದ ಜಯಂತ ಕುರಂದವಾಡ, ಅವರಿಗೆ ಕೃತಜ್ಞತೆಗಳು. ಸದಾ ಪ್ರೋತ್ಸಾಹಿಸುವ ಅಣ್ಣ ಅಶೋಕ ಖಾಡೆ, ತಮ್ಮ ಬಾಪು ಖಾಡೆ, ಮನದನ್ನೆ ಅನ್ನಪೂರ್ಣ ಖಾಡೆ, ಪುತ್ರ ಅಭಿನವ ಮತ್ತು ಎಲ್ಲ ಕುಟುಂಬ ವರ್ಗದವರಿಗೂ, ವಿದ್ವಾಂಸರಾದ ಡಾ. ವೀರೇಶ ಬಡಿಗೇರ, ಡಾ. ರಾಜಶೇಖರ ಮಠಪತಿ(ರಾಗಂ), ಮಿತ್ರರಾದ ಉಮೇಶ ತಿಮ್ಮಾಪುರ, ಶ್ರೀಕಾಂತ ದಾಸರ, ಕಿರಣ ಬಾಳಾಗೋಳ, ತಿರುಪತಿ ಬಂಗಿ, ಸೂರ್ಯಕಾಂತ ತೇಲಿ ಮತ್ತು ಅಪಾರ ಗೆಳೆಯರಿಗೆ ಧನ್ಯವಾದಗಳು.
ಈ ಕೃತಿಗೆ ಮೌಲಿಕವಾದ ಮುನ್ನುಡಿ ಬರೆದುಕೊಟ್ಟ ನಾಡಿನ ಖ್ಯಾತ ವಿಮರ್ಶಕರಾದ ಡಾ. ಎಚ್.ಎಸ್.ಸತ್ಯನಾರಾಯಣ ಅವರಿಗೆ, ಬೆನ್ನುಡಿ ಬರೆದು ಪ್ರೀತಿತೋರಿದ ಸಾಹಿತಿಗಳು ಮತ್ತು ಆಕಾಶವಾಣಿ ಧಾರವಾಡ ಕೇಂದ್ರದ ನಿರ್ದೇಶಕರಾದ ಡಾ. ಬಸು ಬೇವಿನಗಿಡದ ಅವರಿಗೆ. ಮತ್ತೆ ಎಂದಿನಂತೆ ಪ್ರೀತಿತೋರಿ ಯಾಜಿ ಪ್ರಕಾಶನದಿಂದ ಈ ಕೃತಿಯನ್ನು ಪ್ರಕಟಿಸುತ್ತಿರುವ ಗಣೇಶ ಯಾಜಿ, ಸವಿತಾ ಯಾಜಿ ದಂಪತಿಗಳಿಗೆ, ಆಕರ್ಷಕ ಮುಖಪುಟ ರಚಿಸಿಕೊಟ್ಟ ಖ್ಯಾತ ಕಲಾವಿದರಾದ ಎಫ್.ಟಿ ಹಾದಿಮನಿ ಅವರಿಗೆ, ಸುಂದರವಾಗಿ ಮುದ್ರಿಸಿದ ಓಂಕಾರ ಆಫಸೆಟ್ ಪ್ರಿಂಟರ್‍ಸ್ ಬೆಂಗಳೂರು ಅವರಿಗೆ, ಓದಿಗೆ ಈ ಕೃತಿಯನ್ನು ಪ್ರೀತಿಯಿಂದ ಎತ್ತಿಕೊಂಡ ನಿಮ್ಮ ವಿಶಾಲ ಹೃದಯಕ್ಕೆ ಕೃತಜ್ಞತೆಗಳು.
೧೭.೧೨.೨೦೨೦ –ಡಾ. ಪ್ರಕಾಶ ಗ. ಖಾಡೆ, ಬಾಗಲಕೋಟೆ
ಪರಿವಿಡಿ
ಸವಿನುಡಿ / ೭
ಮುನ್ನುಡಿ / ೯
ಲೇಖಕರ ನುಡಿ / ೧೨
೧. ಸಾಧನಕೇರಿಯ ಸೊಗಡು / ೧
೨. ಜಾನಪದ ನೆಲೆ / ೪
೩. ಮರಾಠಿ ಕವಿಗಳ ಮಾದರಿ / ೮
೪. ಬೆರೆಕೆ ಇಲ್ಲದ ಮೂಲಸತ್ವ / ೧೨
೫. ಕೇಳವರ ಕಿವಿಯಾಗಿ ಹೇಳವರ ದನಿಯಾಗಿ / ೧೫
೬. ಬಯಲಂಗಡಿಗೆ ಕದಾಗಿದಾಯಾಕ / ೨೨
೭. ತೊಳೆಯದ ಬಾಚದ ಶಬ್ಧಗಳ ಕಾವ್ಯಶಿಲ್ಪ / ೨೮
೮. ಜಾನಪದ ಗಾರುಡಿಗ / ೩೧
೯. ಕನ್ನಡ ಭಾಷೆಯ ಹೊಸ ಸಾಧ್ಯತೆಗಳು / ೩೪
೧೦. ಆಡು ಮಾತಿನಧಾಟಿ ಮತ್ತು ಸಂವಹನಶೀಲತೆ / ೩೭
೧೧. ವ್ಯಕ್ತಿನಿಷ್ಟ ಕೃತಿನಿಷ್ಟ ಸೋಪಜ್ಞತೆ / ೪೦
೧೨. ಪದ ನುಡಿಗಟ್ಟುಗಳ ಕಾವ್ಯಾಭಿವ್ಯಕ್ತಿ / ೪೩
ಅಡಿಟಿಪ್ಪಣಿಗಳು / ೪೬
ಡಾ. ಪ್ರಕಾಶ ಗ. ಖಾಡೆ ಅವರ ಕೃತಿಗಳು / ೪೯
ಯಾಜಿ ಪ್ರಕಾಶನದ ಪ್ರಕಟಣೆಗಳು / ೫೧
Reviews
There are no reviews yet.