ಕೊರೊನಾ ಮತ್ತು ಬುದ್ಧ
ರಾಗಂ
ನಮ್ಮ ಕಾಲಕೆ ಎಲ್ಲ ಕಂಡಂತಾಯ್ತು
ಕೊರೊನಾ ಯುಗ ಮಗ್ಗಲು ಬದಲಿಸಿತು -ಪ್ರಕಾಶ ಖಾಡೆ
ಸಾವಿರಾರು ವಿಪ್ಲವಗಳನ್ನು ಕಂಡ ನೆಲ ಭಾರತ. ಅದರ ಇತಿಹಾಸಕ್ಕೆ ಕೈ ಹಾಕುವುದು ಎಂದರೆ, ಉದರಕ್ಕೆ ಅಲ್ಸರ್ ಕಟ್ಟಿಕೊಳ್ಳುವ ಸಾಹಸವೆ. ಮತೀಯವಾದ, ಸಾಮ್ರಾಜ್ಯವಾದ ಮತ್ತು ಮೂಲಭೂತವಾದಗಳಿಂದ ಈ ದೇಶ ಮತ್ತು ಇಲ್ಲಿಯ ಜನಸಮುದಾಯ ಹೊರಬರಲು ಹೋರಾಡಿದ ಪರಿ ಮತ್ತು ಅದಕ್ಕೆ ತೆಗೆದುಕೊಂಡ ಅವಧಿ ತಮಗೆಲ್ಲರಿಗೂ ಗೊತ್ತಿರುವ ಸಂಗತಿಯೇ. ಇದರಾಚೆಯೂ ಕಾಲಕಾಲಕ್ಕೆ ಭಾರತ ಅನೇಕ ಭೀಷಣ ವಾಸ್ತವಗಳಿಗೆ ಮುಖಾ-ಮುಖಿಯಾಗಿದೆ. ಇಂದು ಕರೋನಾ ಎಂಬ ಭೀಕರ?! ರೋಗ ನಮ್ಮ ವರ್ತಮಾನವನ್ನು ಆವರಿಸಿಕೊಂಡಿರುವಂತೆ, ಹಿಂದಿನಿಂದಲೂ ಕೊಲ್ಲುವ ಕೈ ಮತ್ತು ಕಾಯುವ ಕೈಗಳ ಮಧ್ಯದ ಸಂಘರ್ಷದ ಚರಿತ್ರೆ, ನಮ್ಮ ಚರಿತ್ರೆಯ ಬಹುಪಾಲು ಭಾಗವನ್ನು ಆವರಿಸಿಕೊಂಡಿದೆ.
ಚರಿತ್ರೆ ದೀರ್ಘವಾಗಿದೆ, ನಮಗಿಲ್ಲಿ ಪುಟಗಳ ಮಿತಿ ಇದೆ. ಹೀಗಾಗಿ ಕೆಲವನ್ನು ಮಾತ್ರ ನಾನಿಲ್ಲಿ ಚರ್ಚೆಗೆ ಎತ್ತಿಕೊಂಡಿದ್ದೇನೆ. ರಾಜಕೀಯ ಸ್ವಾತಂತ್ರ್ಯದ ಒಂದಿಷ್ಟು ತಿಳುವಳಿಕೆ ಮತ್ತು ಅವಶ್ಯಕತೆಯ ಸಾಂಗಿಕ ಪ್ರಜ್ಞೆ ನಮಗೆ ಬಂದದ್ದು ೧೮ನೇ ಶತಮಾನದಲ್ಲಿ. ೧೮೭೧ರಿಂದ ಇದುವರೆಗಿನ ೧೫೦ ವರ್ಷಗಳ ಭಾರತೀಯ ಇತಿಹಾಸದಲ್ಲಿ ನಾವು ೨೨ ಭೀಕರ ಬರಗಾಲಗಳನ್ನು ಎದುರಿಸಿದ್ದೇವೆ. ಸ್ವಾತಂತ್ರ್ಯ ಪರಿಕಲ್ಪನೆಯ ೧೬೩ ವರ್ಷಗಳ ಇತಿಹಾಸದಲ್ಲಿ ಅದೆಷ್ಟೋ ಬಾರಿ ಸ್ವಯಂಕೃತ ಅಪರಾಧಗಳ ಅಂಧಕಾರದಲ್ಲಿ ಬಿದ್ದು ಒದ್ದಾಡಿದ್ದೇವೆ. ಸ್ವಾತಂತ್ರ್ಯ ಬಂದು ೭೩ ವರ್ಷಗಳು ಕಳೆದರೂ ಯಾರಿಗೆ, ಯಾವ ಸ್ವರೂಪದ? ವಿಸ್ತಾರದ ಮತ್ತು ನೈತಿಕತೆಯ ಸ್ವಾತಂತ್ರ್ಯ ದಕ್ಕಿದೆ ಎನ್ನುವ ಪ್ರಶ್ನೆ ಒಗಟಾಗಿಯೇ ಉಳಿದುಕೊಂಡಿದೆ. ೧೯೬೪ರಿಂದ ಸುಮಾರು ೫೬ ವರ್ಷಗಳ ಚರಿತ್ರೆಯಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದ, ಸೂಫಿ ತತ್ವ ಚಿಂತನೆಗಳ ಬದನೆಕಾಯಿ ತಿನ್ನುತ್ತಲೇ ಒಂಬತ್ತು ಸಾರಿ ಮನುಷ್ಯರು ನಾಚಬೇಕಾದ ಕೋಮು ಗಲಭೆಗಳಲ್ಲಿ ಪರಸ್ಪರರನ್ನು ಹತ್ಯೆ ಮಾಡಿದ್ದೇವೆ. ೧೯೪೭ರ ಜಾತಿ ಆಧಾರಿತ ದೇಶ ವಿಭಜನೆಯಲ್ಲಿ ಎರಡರಿಂದ ೨೦ ಲಕ್ಷ ಹಿಂದೂ-ಮುಸ್ಲಿಂರ ಹತ್ಯೆಯಾಗಿದೆ. ಕೇವಲ ಈ ಒಂದೇ ಘಟನೆಯಲ್ಲಿ ೧೪ ಮಿಲಿಯನ್ ಜನ ನಿರಾಶ್ರಿತರಾಗಿದ್ದಾರೆ. ಇದೆಲ್ಲಕ್ಕೂ ಕನ್ನಡಿಯಂತೆ ಸಾಕ್ಷಿಯಾದದ್ದು ಕಾವ್ಯ. ನಮ್ಮ ಕಾವ್ಯ, ನಮ್ಮ ಬುದ್ಧಿ-ಭಾವಗಳ ದಿವಾಳಿತನಕ್ಕೆ ಅದೆಷ್ಟೋ ಬಾರಿ ಕನ್ನಡಿ ಹಿಡಿದಿದೆ.
೧೯೪೭ರಿಂದ ಇವರೆಗೆ ಮೂರು ಯುದ್ಧಗಳನ್ನು ಪಾಕಿಸ್ತಾನದೊಂದಿಗೆ ಮತ್ತೊಂದು ಯುದ್ಧವನ್ನು ಚೀನಾದೊಂದಿಗೆ ಎದುರಿಸಿದ್ದೇವೆ. ನಮಗೆ ಸಂಬಂಧವಿಲ್ಲದ ವಿಶ್ವದ ಮೊದಲ ಮಹಾಯುದ್ಧದಲ್ಲಿ ೭೪,೧೮೭ ನಮ್ಮ ಸಹೋದರ ಸೈನಿಕರನ್ನು ಕಳೆದು ಕೊಂಡಿದ್ದೇವೆ. ೬೭,೦೦೦ ಗಾಯಾಳುಗಳಿಗೆ ಪರಮವೀರ ಚಕ್ರ ಪುರಸ್ಕಾರ, ಪ್ರಶಸ್ತಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದ್ದೇವೆ. ಹೀಗೆ, ಖಿheಡಿe is ಟಿo ಟimiಣಚಿಣioಟಿ ಜಿoಡಿ ಣhe humಚಿಟಿ mಚಿಜಟಿess.
ಈಗ ಇನ್ನೊಂದು ಘಟ್ಟ ಕರೋನಾದ್ದು. ಗಾಡ್ ಎನ್ನುವ ಪದಕ್ಕೂ ಮೀರಿದ ಪ್ರಸಿದ್ಧಿಯ ಶಬ್ಧ, ಈ ಕಾಲದಲ್ಲಿ ಯಾವುದು? ಎಂದು ಎಂಥ ಎಡಬಿಡಂಗಿಗೆ ಕೇಳಿದರೂ ಸಿಗುವ ಉತ್ತರ ಕರೋನಾ. ಕತ್ತಲೆಯನ್ನು ನಾಚಿಸಿದೆ ಈ ಕರೋನಾ, ಕರುಳುಗಳ ಕಿತ್ತೆಸೆದು ಮನುಷ್ಯನನ್ನು ಖಾಲಿತನದ ನಿರ್ಭಾವುಕ, ನಿರ್ಜೀವ ಕೊಡ ದಂತಾಗಿಸಿದೆ ಕರೋನಾ.
ಓ ದೇವರೇ ಬಡವರ ಸಾವಿಗೆ, ನೋವಿಗೆ
ಕೊನೆ ಹೇಳುವವರು ಯಾರೋ
ಉಳ್ಳವರ ಬೊಕ್ಕಸಕೆ ಬಂದು ಬೀಳುವ ಹಣ,
ಬಡವಗೆ ಒಂದು ಹೊತ್ತಿನ ಊಟ ಕೊಡುವವರು ಯಾರೋ
-(ಡಾ ವೈ.ಎಂ.ಯಾಕೊಳ್ಳಿ)
ನಾನು ಯಾರು? ಯಾರಿಗೆ ಎಷ್ಟು ಹತ್ತಿರದವನು/ಳು ಎನ್ನುವ ಮೂಲಭೂತ ಪ್ರಶ್ನೆಯನ್ನು ಪ್ರತಿಯೊಬ್ಬರ ಮುಂದಿರಿಸಿ, ಯಾರು ಯಾರನ್ನೂ ನಂಬದ, ಯಾರು ಯಾರವರೂ ಅಲ್ಲದ ವಾಸ್ತವ ಗೊತ್ತಾಗಿ, ನಿರ್ಲಜ್ಯರಾಗಿ ತಲೆಬಾಗಿಸುವ ನಿಕೃಷ್ಠ ಹಂತಕ್ಕೆ ಮನುಷ್ಯನನ್ನು ತಂದಿರಿಸಿದೆ ಕರೋನಾ. ಈ ಅರ್ಥದಲ್ಲಿ ಕರೋನಾ ಅರಿವೂ ಹೌದು, ಗುರುವೂ ಹೌದು, ಎಚ್ಚರಾಗಿದ್ದವರಿಗೆ ಮಹತ್ವದ ತಿರುವೂ ಹೌದು.
ಪ್ರಪಂಚದ ಯಾವ ದೇಶ, ಜೀವ, ಜನಾಂಗಗಳೂ ರೋಗ, ಮುಪ್ಪು, ಸಾವುಗಳಿಂದ ಅತೀತವಾದವುಗಳಲ್ಲ. ಇಂಥ ಒಂದು ಸತ್ಯವೇ ವಿಶ್ವಕ್ಕೆ ಬುದ್ಧ ಮಹಾರಾಜನನ್ನು ಕೊಟ್ಟಿತು. ಈ ಮೂರು ವಾಸ್ತವಗಳಲ್ಲಿ ನಮ್ಮ ಬುದ್ಧ ಕರೋನಾ ಕಂಡಿದ್ದ. ಪದ ಭಿನ್ನವಾಗಿದ್ದವು, ಆದರೆ ಫಲಿತಾಂಶ ಒಂದೇ ಆಗಿತ್ತು. ಸಾಸಿವೆ ಕೊಡಲು ಸಾವಿಲ್ಲದ ಒಂದು ಮನೆಯೂ ಇಲ್ಲ ಎಂದ ಬುದ್ಧ, ರೋಗ ಮತ್ತು ಸಾವುಗಳಲ್ಲಿ ಯಾರು ಯಾರಿಗೂ ಸಂಗಾತಿಗಳಲ್ಲ ಎಂದು ಹೇಳಿತು ಕರೋನಾ. ಬುದ್ಧನಾಗುವುದೆಂದರೆ, ಸಂಬುದ್ಧನಾಗುವುದೆಂದರೆ ಅರಿವಿಗೆ ನಿಲುಕಿಸಿಕೊಳ್ಳುವುದು ಎಂದು ಅರ್ಥ. ಇದನ್ನು ನೀವು ಒಪ್ಪುತ್ತೀರಿ ಎಂದು ನನ್ನ ನಂಬಿಕೆ. ಕರೋನಾ ಇಂಥ ಓದಿಗೆ ತೆರೆದುಕೊಳ್ಳಲು ನಮಗೊಂದು ಅವಕಾಶ ಮಾಡಿಕೊಟ್ಟಿರುವುದಂತೂ ಸತ್ಯ.
ಕರೋನಾ ಒಂದು ರೋಗವಾಗಿ ಈ ಪ್ರಪಂಚವನ್ನು ಆವರಿಸಿಕೊಂಡಿದ್ದರೆ ನಾವೆಲ್ಲ ಇಷ್ಟೊಂದು ಬರೆಯುತ್ತಿರಲಿಲ್ಲ. ಅದು ನಮ್ಮ ಮುಂದೆ ನಿಂತಿರುವುದು ಪ್ರಶ್ನೆಯಾಗಿ, ನಮ್ಮನ್ನು ಆವರಿಸಿಕೊಂಡಿರುವುದು ಸಂಶಯವಾಗಿ ಹಾಗೂ ನಮ್ಮನ್ನು ಆಳುತ್ತಿರುವುದು ಮೃತ್ಯುವಾಗಿ. ಇದು ರೋಗ ಮಾತ್ರವಾಗಿದ್ದರೆ ನಮ್ಮನ್ನು ಬಾಧಿಸು ತ್ತಿರಲಿಲ್ಲ ಎನ್ನುವುದಕ್ಕೆ ಇತಿಹಾಸ ಸಾಕ್ಷಿ ಇದೆ. ಪ್ಲೇಗ್, ಮಲೇರಿಯಾ, ಸಿಡುಬು, ಸ್ವೈನ್, ಚಿಕನ್ಗುನ್ಯಾ ಹೀಗೆ ೧೬೭ ವರ್ಷಗಳ ಇತಿಹಾಸದಲ್ಲಿ ಏಳು ಬಾರಿ ನಾವು ಮಾರಣಾಂತಿಕ ಸಾಂಕ್ರಾಮಿಕಗಳನ್ನು ಈಗಾಗಲೇ ಎದುರಿಸಿದ್ದೇವೆ. ಆದರೆ ಕರೋನಾದ ಈ ಸ್ಥಿತಿ ಹಿಂದಿನಂತಲ್ಲ, ನಾವೂ ಹಿಂದಿನಂತಿಲ್ಲ.
ಎಲ್ಲವೂ ತಿರುಗು ಮುರುಗಾಗುವ
ಅನೂಹ್ಯ ವಿಸ್ಮಯಗಳ ಸರಮಾಲೆ! -(ಎ.ಎನ್.ರಮೇಶ ಗುಬ್ಬಿ)
ಇಗಲೂ ಅಷ್ಟೆ ನಾವು ಕರೋನಾದ ಕೈಯಲ್ಲಿದ್ದರೆ, ಕರೋನಾ ಇನ್ನಾರದೋ ಬತ್ತಳಿಕೆಯ ಬಾಣವಾಗಿ ನಮ್ಮ ಮೇಲೆ ಪ್ರಯೋಗವಾಗುತ್ತಿದೆ. ಈ ಶತಮಾನದ ಪೂರ್ವಾರ್ಧದವರೆಗೂ ನಮ್ಮನ್ನಾಳಿದ ಐ.ಟಿ, ನಮ್ಮ ಜೀವನಶೈಲಿಯನ್ನು ಪ್ರಭಾವಿಸಿದ್ದು ನಾವೆಲ್ಲರೂ ಮನಗಂಡ ಮಾತು. ನಮ್ಮ ಆಲೋಚನೆ, ಆರೋಗ್ಯ, ಆಧ್ಯಾತ್ಮಗಳೂ ಐ.ಟಿ ಎಂಬ ಬಂಡವಾಳಶಾಹಿಗಳ ವ್ಯವಸ್ಥೆಗೊಳಪಟ್ಟು, ಕೀಲಿಮಣೆ ಹಾಕುವ ರಂಗೋಲಿಯಾಯಿತು ಬದುಕು. ಅದು ಎಳೆದಷ್ಟೇ ಗೆರೆ, ತೋರಿಸಿದಷ್ಟೇ ಬದುಕು. ಐ.ಟಿಯ ಕೃಪಾಶೀರ್ವಾದ ಇಲ್ಲದ ಅಡುಗೆ, ಹೆರಿಗೆ ಮನೆಗಳೂ ಕೂಡ ಅರ್ಥಹೀನ ಎನ್ನಿಸುವ ಭೀಕರ ಭಯಾನಕ ಸಂದರ್ಭವನ್ನು ಸೃಷ್ಟಿಸಲಾಯಿತು. ಹುಟ್ಟುವ ಮಗುವಿನ ಹೆಸರಿನಿಂದ ನುಡಿಯುವ ಪ್ರತಿ ಮಾತಿಗೂ ನಿರ್ದೇಶನ ನೀಡಲಾರಂಭಿಸಿತು ಐ.ಟಿ. ಈಗ ಅದರ ಅಬ್ಬರ ಅಳಿದು ಕರೋನಾ ಎಂಬ ಹೊಸ ವಾಸ್ತವಕ್ಕೆ ಮುಖಾ-ಮುಖಿಯಾಗಿದ್ದೇವೆ.
ಕರೋನಾದ ಈ ಸಂದರ್ಭದಲ್ಲಿ ಬದುಕು ದರ್ಶನಹೀನವಾಗಿ ಸಮಾಜ ಬರೀ ಜೀವಸಮುಚ್ಚಯವಾಗಿದೆ. ಕವಿಮಿತ್ರ ನಾಗೇಶ ಜೆ. ನಾಯಕ ಈ ಸಂದರ್ಭವನ್ನು ತಮ್ಮ ಕವಿತೆಯಲ್ಲಿ ಮನಮಿಡಿಯುವಂತೆ ದಾಖಲಿಸಿದ್ದಾರೆ –
ಮಂದಿರ-ಮಸೀದಿಗಳೆಲ್ಲ
ಬಾಗಿಲು ಮುಚ್ಚಿ ಅದೆಷ್ಟೋ ದಿನಗಳಾಯಿತು
ದೇವರಿಗೂ ದಿಗ್ಭಂಧನ ಹಾಕಲಾಗಿದೆ
ಕಾಯುವವರಾರು ಎಂಬ ಪ್ರಶ್ನೆಗೆ
ನಮ್ಮಲ್ಲೇ ಉತ್ತರ ಹುಡುಕಬೇಕಿದೆ
ಜಗತ್ತಿನ ದೊಡ್ಡಣ್ಣರೆಲ್ಲ ಕೈಚೆಲ್ಲಿ
ಮಂಡಿಯೂರಿ ಕಣ್ತುಂಬಿಕೊಂಡ ಘಳಿಗೆಯಿದು
ಕರುಣೆಗೆಲ್ಲಿಯ ತಾವು?
ಸಾಲು ಸಾಲು ಶವಗಳಿಗೂ
ಸಂಸ್ಕಾರ ಕಲ್ಪಿಸದ ನಿಸ್ಸಹಾಯಕತೆ
ನಾವೀಗ ಜೀವಿಗಳಷ್ಟೆ. ಸಾವಿನ ಲೆಕ್ಕವನ್ನು ಅಂದಗೊಳಿಸುವ, ಪೊಲೀಸರ ಲಾಠಿಯನ್ನು ಉದ್ದಮಾಡುವ, ಔಷಧ ವ್ಯಾಪಾರದ ಜಗತ್ತನ್ನು ವಿಸ್ತರಿಸುವ ಜೀವಿಗಳು ನಾವು. ಪ್ರಯೋಗಾಲಯದಲ್ಲಿ ಹೊಸ ಪ್ರಯೋಗಗಳಿಗೆ ಪ್ರತಿರೋಧವಿಲ್ಲದೆ ಸಾಯುವ ಇಲಿ, ಕಪ್ಪೆ, ಜಿರಳೆಗಳಂತೆ ಕರೋನಾ ಎಂಬ ಮಹಾ ಮಾಂತ್ರಿಕನ ಲೋಕದಲ್ಲಿ ಬದುಕುತ್ತಿರುವ ಜೀವಿಗಳು ನಾವು. ಅವನು ಹೇಳಿದಷ್ಟೇ ಬದುಕು, ಅವನು ನೀಡಿದ್ದೇ ಜೀವನ. ಇಂಥ ವಿಕೃತ, ಅಮಾನವೀಯ ಸತ್ಯಕ್ಕೆ ಮತ್ತೆ ತೆರೆದುಕೊಂಡದ್ದು ಕಾವ್ಯವೆ. ಗೆಳೆಯ ಪ್ರಕಾಶ ಖಾಡೆ ಈ ಸಂದರ್ಭದ ಕರೋನಾ ಆಧಾರಿತ ನೂರೆಂಟು ಕವಿತೆಗಳನ್ನು, ಆ ಮೂಲಕ ಕವಿಗಳನ್ನು ಒಂದೆಡೆ ಸೇರಿಸುವ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. ಇದಕ್ಕೊಂದು ವೇದಿಕೆಯನ್ನು ಒದಗಿಸಿಕೊಟ್ಟವರು ಯಾಜಿ ಪ್ರಕಾಶನದ ದಂಪತಿಗಳು. ಪ್ರತಮಥಃ ಇವರೆಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸು ತ್ತೇನೆ.
ಆeಚಿಣh, ಣhe ಟeveಟeಡಿ ಎಂದಿದ್ದಾರೆ. ಕರೋನಾ ಕೃಪೆ ಮಾಡಿದ ಸಾವಿನಲ್ಲಿ ಜಾತಿ-ಮತ ಭೇದಗಳಿಲ್ಲ ಹೆಣ್ಣಿಲ್ಲ, ಗಂಡಿಲ್ಲ, ಬಡವ-ಶ್ರೀಮಂತರಿಲ್ಲ, ಸಾಯುವವರಿಗೆ ಬೆಡ್ ಇಲ್ಲ, ಸತ್ತವರಿಗೆ ನಾಲ್ಕು ಹೆಗಲುಗಳೂ ಇಲ್ಲ, ಶರಣರೆ ನಾವೀಗ ನಮ್ಮ ಮಹಿಮೆಯನ್ನು ಮರಣದಲ್ಲಿ ಹೇಗೆ ತೋರಿಸುವುದು? ತಿಳಿಯುತ್ತಿಲ್ಲ. ಆಕಾಶದಿಂದ ಇದ್ದಕ್ಕಿದ್ದಂತೆ ಬೀಳುವ ಉಲ್ಕೆಗಳಂತೆ ಮನುಷ್ಯರು ಮರೆಯಾಗುತ್ತಿದ್ದಾರೆ. ಯಾರೆ ಸತ್ತರೂ, ಹೇಗೆ ಸತ್ತರೂ, ಎಷ್ಟೇ ಸತ್ತರೂ ಒಂದೇ ಹಣೆಪಟ್ಟಿ ಕರೋನಾ. ಇಡೀ ವಿಶ್ವ ಈ ಪರಿಯಾಗಿ ಸಂಶಯದ ಗಾಳಿಗೆ ಒಳಗಾದ ಇನ್ನೊಂದು ಅವಧಿ ಕಾಣ ಸಿಗಲಾರದು. ಈ ಪರಸ್ಪರ ಅಪನಂಬಿಕೆಯ ವಿಚಿತ್ರ ಸನ್ನಿವೇಶವನ್ನು ಖಾಡೆ ಸಂಪಾದಿತ ಈ ಸಂಕಲನದ ಅನೇಕ ಕವಿತೆಗಳಲ್ಲಿ ನೋಡಬಹುದು. ಉದಾಹರಣೆಗೆ-
ಕಾಮಾಲೆ ಕಣ್ಣುಗಳಿಗೆ
ನಗರಗಳ ನಾಲಿಗೆಗೆ
ಎಚ್ಚರದ ಪಾಠವಾದೆ
ಹಗೆತನದ ಒಡಲಿಗೆ || -(ಅಬ್ಬಾಸ ಮೇಲಿನಮನಿ)
ಇಲ್ಲವೆಂದೆ ಬೆಂಕಿ ಹೊಗೆಯಾಡುವುದು ನಿಲ್ಲುತ್ತಿಲ್ಲ
ಮೊಗ್ಗು ಬಳ್ಳಿ ಕಾಪಿಟ್ಟರೂ ಹೂವಾಗಲಿಲ್ಲ…
ಮಾತು ನೀ ಆಡಿದರೂ ಬಿಟ್ಟರೂ ನಿದ್ದೆಗೆ ಕಣ್ಣು ಮುಚ್ಚಿಕೊಳ್ಳಲಿಲ್ಲ
ನಗದ ದೀನನ ಬದುಕು ಮುಂದಕ್ಕೆ ಹೋಗಲಾಗುತ್ತಿಲ್ಲ
ಕರೋನಾ ಪ್ರಪಂಚವನೆ ಕುಣಿಸಿದ ನಿನ್ನ ಕಾಲು ಸೋಲುತಿಲ್ಲ
-(ಸಿ.ಬಿ ಚಿಲ್ಕರಾಗಿ)
*
ಉಸಿರಿನ ಏರಿಳಿತ ಹೊಸತು ಎಂಬಂತಿಲ್ಲ
ಒಬ್ಬರಿಗೊಬ್ಬರ ಉಸಿರು ಹೊಲೆ ಮೈಲಿಗೆಯಾಗಿದೆ
ಮೂಗು ಮುಚ್ಚಿಕೊಳ್ಳುತ್ತೇನೆ ಬಿಟ್ಟ ಕಣ್ಣುಗಳಿಂದ
ಕೈ ಅವನನ್ನು ಮುಕ್ತವಾಗಿ ಬಳಸಿಕೊಳ್ಳಲೂ ಹಿಂದೇಟು ಹಾಕುತ್ತಿದೆ!
-(ಅಕ್ಷತಾರಾಜ್ ಪೆರ್ಲ)
*
ಮುಗ್ಧ ಜನರ ಪ್ರಾಣಪಕ್ಷಿ
ಕದ್ದೋಯ್ಯುತಿದೆ ಕರೋನಾ -(ಬಾಪು ಖಾಡೆ)
*
ಜಗವೇ ಬೆತ್ತಲಾಗಿದೆ….
ಧರ್ಮ-ಜಾತಿಗಳ, ಮುಕ್ಕೋಟಿ ದೇವತೆಗಳ
ಕಡಿಯೊಳಗಣ ಗಂಟಿಗೆ ರೂಪ ಕೊಟ್ಟ
ತೃಣಮಾತ್ರರ ಸುದ್ದಿಯಡಗಿದೆ -(ಡಾ ಲೀಲಾಸಂಪಿಗೆ)
*
ಯಾಕೆ ಹೀಗೆ ಹಲವಾರು ಪ್ರಶ್ನೆಗಳೇ ಕಣ್ಮುಂದೆ
ಯಾಕೇ ಹೀಗೆ ನನಗನ್ನಿಸುತ್ತದೆ
ಹಗಲು ಕತ್ತಲಾಗಿ ಬದಲಾಗಿದೆ
ದಿನಗಳೆಲ್ಲ ಲಾಕಪ್ಪಿನ ಸರಳುಗಳೊಳಗೆ ದಿಗ್ಭಂದನಗೊಂಡು ಕುಳಿತಿವೆ.
-(ಸುರೇಶ ರಾಜಮಾನೆ)
*
ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ
ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ
ನೋಡಿ
ಸ್ವಲ್ಪ ಕರುಣೆ ಇದ್ದರೆ ನಿಮಗೆ
ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ
ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ (ಜಹಾನ್ ಆರಾ)
*
ಸೃಜನದಷ್ಟೇ ಅಚ್ಚುಕಟ್ಟಾಗಿ ಈ ಸಂಕಲನವನ್ನು ಗೆಳೆಯ ಖಾಡೆ ಸಂಪಾದಿಸಿ ಕೊಟ್ಟಿದ್ದಾರೆ. ನಮ್ಮ ಸಂದರ್ಭದ ಮಹತ್ವದ ಕಲಾವಿದರಾದ ಹಾದಿಮನಿಯವರ ಮುಖಪುಟದಿಂದ ಕೃತಿ ಕಳೆಗಟ್ಟಿದೆ, ಪ್ರಕಾಶಕ ಮಿತ್ರ ಯಾಜಿ ದಂಪತಿಗಳ ಪ್ರಕಟಣಾ ಕೌಶಲ್ಯದ ಬಗೆಗಂತೂ ಅನ್ಯ ಮಾತಿಲ್ಲ.
ಕವಿಗಳು ವ್ಯಕ್ತಿಗತವಾಗಿ ಬರೆಯುವಷ್ಟೇ ಪ್ರಮುಖವಾದುದು, ವಿಷಯಾಧಾರಿತ ಒಂದು ವೇದಿಕೆಯ ಮೇಲೆ ಸಮಕಾಲೀನ ಸಮಾಜದೊಂದಿಗೆ ನಿಲ್ಲುವುದು. ಈ ನಿಟ್ಟಿನಲ್ಲಿ ಪ್ರಸ್ತುತ ಸಂಕಲನ ಅತ್ಯಂತ ಮಹತ್ವದ ಸಂಪಾದನೆಯಾಗಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಭಾರತೀಯ ಕಥಾ ಸಾಹಿತ್ಯ ಇಂಥವೇ ಪ್ರಶ್ನೆಗಳಿಗೆ ಎದೆ ತೆರೆದು, ಸಂಪಾದನೆಗೊಂಡು ಇಂದಿಗೂ ಅವು ಪ್ರಪಂಚದ ಅತ್ಯುತ್ತಮ ಕಥೆಗಳ ಪಂಕ್ತಿಗೆ ಸೇರಿಕೊಂಡಿರುವುದನ್ನು ಗಮನಿಸಬಹುದು.
ಎಲ್ಲರನ್ನು ಸಮಾನವಾಗಿ ಕಾಡುವ ಸಮಸ್ಯೆಗಳು ಎಲ್ಲ ಕಾಲಕ್ಕೂ, ಎಲ್ಲ ದೇಶ-ಧರ್ಮಗಳಲ್ಲಿಯೂ ಹುಟ್ಟುವುದಿಲ್ಲ. ಒಂದುವೇಳೆ ಹುಟ್ಟಿದರೂ ಅವುಗಳ ಸಂಖ್ಯೆ ಬೆರಳೆಣಿಕೆಯಷ್ಟು. ವರ್ಣ ವಿದೇಶಿಗರನ್ನು ಕಾಡಿದರೆ, ಜಾತಿ ನಮ್ಮನ್ನು ಕಾಡಿತು, ಭೌತಿಕತೆ ಪಶ್ಚಿಮದ ಪ್ರಶ್ನೆಯಾದರೆ, ಆಧ್ಯಾತ್ಮ ಪೂರ್ವದ ವ್ಯಸನವಾಯಿತು. ಹೀಗೆ, ಭಿನ್ನ ಪ್ರಶ್ನೆಗಳು ಭಿನ್ನ ಭಿನ್ನ ಜನಾಂಗ ಮತ್ತು ದೇಶಗಳನ್ನು ಕಾಡಿವೆ. ಆದರೆ ಮೊದಲ ಬಾರಿಗೆ ಇಡೀ ವಿಶ್ವವನ್ನು, ಮನುಕುಲವನ್ನು ತಲ್ಲಣಕ್ಕೆ ದೂಡಿದ, ಹತಾಶೆಗೆ ತಳ್ಳಿದ, ಮತಿಭ್ರಮಣೆಗೆ ಸಿಲುಕಿಸಿದ ಸಂದರ್ಭ ಈ ಕರೋನಾದ್ದು. ಇದುವರೆಗೆ ಸೀಳಿಕೊಂಡಿದ್ದ ಮನುಷ್ಯನನ್ನು ಮತ್ತೆ ಹೇಗೋ ಹೊಂದಿಸಬಹುದಿತ್ತು. ಆದರೆ, ಈಗ ಮತ್ತೆ ಇನ್ನೆಂದೂ ಹೊಂದಿಸಲಾಗದಂತೆ ಸ್ಪೋಟಗೊಂಡಿದ್ದಾನೆ ಮನುಷ್ಯ. ಇಲ್ಲಿ ನೋಡಿ-
ಗಾಳಿ ನಂಜು, ನೀರು ನಂಜು, ಸ್ಪರ್ಶ ನಂಜು ಇಲ್ಲಿ
ವಿಷವುಣಿಸಿದ ಮಾರಿಯ ಅವಸಾನ ಮುಖ್ಯ ಈಗ
ರಾಮ ಕೃಷ್ಣ ಯೇಸು ಕ್ರಿಸ್ತ ಅಲ್ಲಾಹ್ ಬೇರೆ ಅಲ್ಲ
ನಾಮ ರೂಪ ಭಿನ್ನ ಶಿವ-ಪ್ರಮಾಣ ಮುಖ್ಯ ಈಗ
-(ಗಿರೀಶ ಜಕಾಪುರೆ)
ಕನ್ನಡದ ಅತ್ಯಂತ ಮಹತ್ವದ ಕವಿ ಪಡೆಯೊಂದು ಈ ಸಂಕಲನದಲ್ಲಿ ನಿಂತಿರುವುದು ಸಂತಸದ ಸಂಗತಿಯಾಗಿದೆ. ದೇಶದ ಗಡಿಯಲ್ಲಿರುವ ಸೈನಿಕನಿಗಿರುವಷ್ಟೇ ಜವಾಬ್ದಾರಿ ದೇಶದೊಳಗಿರುವ ಕವಿಗೂ ಇದೆ. ಸೈನಿಕ ಹೊರಗಿನ ವೈರಿಗಳಿಂದ ನಮ್ಮನ್ನು ರಕ್ಷಿಸಿದರೆ, ಕವಿ ಸಮಾಜದ ಒಳಗಿನಿಂದಲೇ ಹುಟ್ಟುವ ವಿಕಾರ, ವೈರಾಣುಗಳಿಂದ ಮನುಷ್ಯನನ್ನು ಮುಕ್ತಗೊಳಿಸಿ, ಅವನನ್ನು ಅವನೆಲ್ಲ ಕನಸು, ಆಶೆಯ, ಸಂಕಲ್ಪಗಳೊಂದಿಗೆ ಬದುಕಿಸುತ್ತಾನೆ. ಖಡ್ಗವಾಯಿತೊ ಕಾವ್ಯ, ಆಗಲಿಲ್ಲವೋ ಕರೋನಾದ ಸಂದರ್ಭದಲ್ಲಿ ಕವಚವಾಗಿರುವುದಂತೂ ಸತ್ಯ. ಕವಿತೆ ಎಂಬ ಈ ಕನಸು ಒಂಟಿತನದ ಈ ಸಂದರ್ಭದಲ್ಲಿ ನಮ್ಮನ್ನು ಅನೇಕ ರೀತಿಯ ಅಪಮೃತ್ಯುಗಳಿಂದ ಉಳಿಸುತ್ತಿದೆ. ಕರುಣಾಳು ಕೈಯಾಗಿ, ಬೆಳಕು ಭವಿಷ್ಯವಾಗಿ ಮುನ್ನಡೆಸುತ್ತಿದೆ. ಯಾರಿಗೆ ಯಾರೂ ಇಲ್ಲದ ಈ ಶೂನ್ಯ ಕಾಲದಲ್ಲಿ ಕವಿತೆಯೊಂದೇ ಸುಂದರ ಸಂಗಾತಿಯಾಗಿದೆ. ಆಹಾರ ಮಾತ್ರದಿಂದ, ಉಸಿರು ಕಾರಣದಿಂದ ಅಷ್ಟೇ ಬದುಕು ಸಾಧ್ಯ ಎನ್ನುವುದಾಗಿದ್ದರೆ ಈ ಮಾನವ ಸಮಾಜ ಎಂದೋ ಸತ್ತುಹೋಗಿರುತ್ತಿತ್ತು. ಆದರೆ ಕವಿತೆ, ಕನಸು ಮತ್ತು ನಿರಂತರ ಸಂವಾದಗಳೂ ಮನುಷ್ಯ ಜೀವನದ ಚೇತನಾ ಶಕ್ತಿಗಳಾಗಿರುವುದರಿಂದ ಎಂಥ ಸಂಕಷ್ಟದಲ್ಲೂ ಮನುಷ್ಯ ಜೀವಂತವಾಗಿದ್ದಾನೆ. ಹೀಗೆ, ಪುಟಿಯುವ ಜೀವನ ಚೈತನ್ಯದಿಂದ ಅನುಗಾಲವೂ ಕಾವ್ಯ ನಮ್ಮನ್ನು ಬದುಕಿಸಿಟ್ಟಿರಲಿ, ಆಶಾ ಪ್ರದೀಪ ಎಂದಿಗೂ ಆರದಿರಲಿ ಎಂದು ಹಾರೈಸುವೆ.
ಕಾಣದ ಕರೋನಾ ಕತ್ತಲಾಗಿಸಿದೆ ಜಗತ್ತನ್ನು. ಆದರೆ, ಕಾಣುವ-ಕಾಡುವ ಮನುಷ್ಯ ಕರೋನಾ ಎಂಬ ಸಂಶಯದ ಗಾಳಿಗೆ ಉರುಳಿ ಬೀಳುವ ಮರವಾಗದಿರಲಿ.
ಸಂಪಾದಕರ ನುಡಿ
ಕೊವಿಡ್–೧೯
ಡಾ. ಪ್ರಕಾಶ ಗ. ಖಾಡೆ
ಕಣ್ಣಿಗೆ ಕಾಣದ ವೈರಸ್ಸು ಒಂದು ಇಡೀ ವಿಶ್ವವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಆಟವಾಡಿದ ಮರೆಯಲಾಗದ ಒಂದು ಮಹಾನ್ ಕಾಲ ಘಟ್ಟ, ಅದು ಕೊರೊನಾ ಕಾಲ. ಇದು ನಿಧಾನಕ್ಕೆ ವಿಶ್ವವನ್ನು ವ್ಯಾಪಿಸಿಕೊಂಡದ್ದು ೨೦೧೯ರ ಕೊನೆಗೆ, ೨೦೨೦ರ ಮಾರ್ಚ್ ಹೊತ್ತಿಗೆ ವಿಶ್ವವನ್ನಲ್ಲದೇ ಇಡೀ ಭಾರತವನ್ನು ತುದಿಗಾಲ ಮೇಲೆ ನಿಲ್ಲಿಸಿದ ವೈರಸ್ಸು ಉಂಟು ಮಾಡಿದ ತಲ್ಲಣ, ನೆನೆಸಿಕೊಂಡರೇನೆ ಮೈ ರೋಮಾಂಚನ ಗೊಳ್ಳುತ್ತದೆ. ಈ ಮಾತುಗಳನ್ನು ಬರೆವ ಹೊತ್ತಿಗೂ ಇದು ತನ್ನ ಕಬಂಧಬಾಹುಗಳನ್ನು ಚಾಚಿಕೊಳ್ಳುತ್ತಾ ಸಾಗಿದೆ.
ಆಧುನಿಕ ಸಂದರ್ಭದಲ್ಲಿ ಎಲ್ಲ ಸೌಲಭ್ಯಗಳು ಇರುವ ಈ ಹೊತ್ತಿನಲ್ಲಿ ನಮ್ಮ ಸರಕಾರಗಳು ತೀವ್ರವಾಗಿ ಸ್ಪಂದಿಸಿದ ಕಾರಣವಾಗಿ ವೈರಸ್ಸು ವ್ಯಾಪಕಗೊಳ್ಳುವುದನ್ನು ತಡೆಹಿಡಿಯಲಾಯಿತು. ಮೊದಲು ಮಾಡಿದ ಕೆಲಸ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು, ಜನ ಸೇರುವ ಜಾತ್ರೆ, ಸಂತೆ, ಮದುವೆ ಸಭೆ, ಸಮಾರಂಭಗಳನ್ನು ರದ್ದು ಮಾಡಿ, ಎಲ್ಲರೂ ಮನೆಯಲ್ಲಿದ್ದೇ ಜೀವವನ್ನು ಕಾಪಾಡಿಕೊಳ್ಳಬೇಕೆಂದು ಸಾರಲಾಯಿತು, ಸದಾ ಜನ ಸಂದಣಿಯಿಂದ ತುಂಬಿ ತುಳುಕುತ್ತಿದ್ದ ಚಿತ್ರಮಂದಿರ, ಅಂಗಡಿ ಮುಂಗಟ್ಟುಗಳು, ಬಾರ್, ಮಾಲು, ರೈಲು, ಬಸ್ಸು, ವಿಮಾನ ಸೇವೆಗಳನ್ನೂ ಬಂದ್ ಮಾಡಲಾಯಿತು. ಕಾರ್ಖಾನೆಗಳು ಮುಚ್ಚಿದವು, ಶಾಲೆ ಕಾಲೇಜುಗಳನ್ನು ಮುಚ್ಚಲಾಯಿತು, ಪರೀಕ್ಷೆಗಳನ್ನು ರದ್ದು ಪಡಿಸಲಾಯಿತು, ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಬಿಟ್ಟು ಎಲ್ಲರನ್ನೂ ಪಾಸ್ ಮಾಡಲಾಯಿತು. ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಯಿತು. ಪ್ರತಿ ರಾಜ್ಯ, ಜಿಲ್ಲೆ, ತಾಲೂಕು ಅಷ್ಠೇ ಏಕೆ ನಗರ, ಗ್ರಾಮಗಳನ್ನೂ ಬೀದಿ ಬೀದಿಗಳನ್ನು ಸೀಲ್ಡೌನ್ ಮಾಡಲಾಯಿತು.
ವೈರಸ್ಸು ವ್ಯಾಪಕಗೊಳ್ಳುವುದನ್ನು ತಡೆಯಲು ಏನೆಲ್ಲಾ ಪ್ರಯೋಗಗಳು ಶುರುವಾದವು, ಈ ಸಂದರ್ಭದಲ್ಲಿ ನಿಜವಾಗಿಯೂ ಅತಂತ್ರರಾದವರು, ಬೀದಿ ಪಾಲಾದವರು, ನಮ್ಮ ದುಡಿಯುವ ವರ್ಗ. ವಲಸೆ ಹೋದ ಕಾರ್ಮಿಕರು ಹೇಗಾದರೂ ಮಾಡಿ ತಾವು ಹುಟ್ಟಿದ ಊರು ಸೇರಿಕೊಳ್ಳಬೇಕು, ತಮ್ಮವರನ್ನು ಕೂಡಿಕೊಳ್ಳಬೇಕೆಂದು ಕಾಲ್ನಡಿಗೆಯಲ್ಲಿಯೇ ಕುಟುಂಬ ಕಟ್ಟಿಕೊಂಡು ಹೊರಟ ಸಂದರ್ಭವಂತೂ ಯಾವ ಇತಿಹಾಸವೂ ಮರೆಯಲಾಗದು. ರಸ್ತೆ, ರಸ್ತೆಗಳಲ್ಲಿ ಜನವೋ ಜನ, ನಡೆದು, ನಡೆದು ಕಾಲಲ್ಲಿ ಗುಳ್ಳೆ ಎದ್ದು, ರಕ್ತ ಸೋರಿ, ನಿತ್ರಾಣವಾಗಿ ಜೀವ ಬಿಟ್ಟ ಅನೇಕ ಘಟನೆಗಳು ಚರಿತ್ರೆಯನ್ನು ಕೆಂಪು ರಕ್ತದಿಂದ ಬರೆಯುವಂತಾಯಿತು.
ಕೊರೊನಾ ವೈರಸ್ಸು ಓಡಿಸುವಲ್ಲಿ, ಸೋಂಕಿತರನ್ನು ಉಪಚರಿಸುವ ಕಾರ್ಯ ಯುದ್ಧೋಪಾದಿಯಲ್ಲಿ ಜರುಗಿತು. ದೇಶಕ್ಕೆ ಗಂಡಾಂತರ ಬಂದಾಗ ನಮ್ಮ ಸೈನಿಕರು ನಮ್ಮ ರಕ್ಷಣೆಗೆ ನಿಲ್ಲುತ್ತಾರೆ. ಆದರೆ ಇಲ್ಲಿ ವೈದ್ಯರೊಂದಿಗೆ ಪೊಲೀಸರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಶಿಕ್ಷಕರು, ಆಡಳಿತಗಾರರು, ಮಾಧ್ಯಮದವರು ಮೊದಲಾದವರು ಸೈನಿಕರಂತೆ ಯುದ್ಧ ಗೆಲ್ಲುವ ಪಣತೊಟ್ಟವರಂತೆ ಕಾರ್ಯತತ್ಪರರಾದರು. ಇಂಥ ದುರಿತ ಕಾಲವೊಂದು ನಮ್ಮ ಕಾಲಕ್ಕೇ ಕಂಡತಾಯ್ತು. ಆತಂಕದ ಕಾಲದಲ್ಲೂ ಜೀವವಿದ್ದರೆ ಜೀವನವಿರುತ್ತದೆ ಎಂಬ ಸಂದೇಶದೊಂದಿಗೆ ಜನಸಮುದಾಯ ಬದುಕುವಂತಾಯಿತು. ಪ್ರಕೃತಿಯಲ್ಲೂ ಬದಲಾವಣೆ ಕಾಣುವಂತಾಯಿತು. ಮಾಲಿನ್ಯದಿಂದ ಮೂಲತೆಯನ್ನು ಕಳಕೊಂಡ ಪ್ರಕೃತಿ ಹೊಸತನಕೆ ತೆರೆದುಕೊಳ್ಳುವಂತಾಯಿತು. ನಮ್ಮ ಕವಿಗಳು, ಗಾಯಕರು, ಚಿತ್ರ ಕಲಾವಿದರು ಮನೆಯಲ್ಲಿಯೇ ಕುಳಿತು ತಮ್ಮ ಸೃಜನಶೀಲತೆಗೆ ಮುಂದಾದರು. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಮುಖಾಮುಖಿಯಾದರು. ಸಾಮಾಜಿಕ ಜಾಲತಾಣ ಜನಸಾಮಾನ್ಯರ ವಿಶ್ವವಿದ್ಯಾಲಯ ವಾಯಿತು. ಮನೆಯಲ್ಲಿಯೇ ಕುಳಿತ ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠಗಳು ಶುರುವಾದವು. ಝೂಮ್ ಮೀಟಿಂಗ್ಗಳು ಆರಂಭವಾದವು. ಫೇಸ್ಬುಕ್, ವಾಟ್ಸಾಪ್ಗಳಲ್ಲಿ ಕತೆ, ಕವಿತೆಗಳು ಕೊರೊನಾ ಕುರಿತು ಹರಿದಾಡುವಂತಾಯಿತು. ಈ ಸಾಮಾಜಿಕ ಜಾಲತಾಣವನ್ನು ಮೊದಲು ನಿಕೃಷ್ಠವಾಗಿ ಕಂಡ ಪಂಡಿತ ಮಂಡಳಿ ಈಗ ಇದನ್ನೇ ಆಶ್ರಯಿಸ ಬೇಕಾಯಿತು. ಸಭೆ, ಸಮಾರಂಭಗಳಿಲ್ಲದೇ ಎಲ್ಲಿ ತಮ್ಮ ಅಸ್ತಿತ್ವವೇ ಹೋಗಿಬಿಡುತ್ತದೆ ಎಂಬ ಆತಂಕದಲ್ಲಿ ದಂತಗೋಪುರದ ಚಿಂತಕ ಸಾಹಿತಿ, ಕವಿಗಣ ಸಾಮಾಜಿಕ ಜಾಲತಾಣಗಳನ್ನು ತಡಕಾಡುವಂತಾಯಿತು. ಹೊಸತನಗಳ ನಡುವೆ ಹಳತೂ ವಿಜೃಂಭಿಸಿತು. ಹೀಗೆ ತರಾವರಿ ಬೆಳವಣಿಗೆಗಳು ನಡೆಯುತ್ತಿರುವಾಗ ನನ್ನಲ್ಲೂ ಒಂದು ಯೋಚನೆ ಮೂಡಿತು. ಸಾಮಾಜಿಕ ಜಾಲ ತಾಣಗಳಲ್ಲಿ ತಮ್ಮ ಕವಿತೆಗಳ ಮೂಲಕ ಸಕ್ರಿಯರಾದ ಕವಿಗಳ ಕವಿತೆಗಳನ್ನು ಗಮನಿಸುತ್ತಿದ್ದೆ. ಇವೆಲ್ಲ ಒಂದೆಡೆ ಸೇರಿಸಿ ಕೊರೊನಾ ಕಾಲದ ಕವಿತೆಗಳು ಹೆಸರಿನಲ್ಲಿ ಒಂದು ಕವನ ಸಂಕಲನವನ್ನೇಕೆ ತರಬಾರದು ಎಂದು ಯೋಚಿಸಿ, ಕಾರ್ಯೋನ್ಮೂಖನಾದೆ. ಹೀಗೆ ಮೂಲ ಕವಿಗಳ ಒಪ್ಪಿಗೆ ಪಡೆಯುತ್ತಾ ಸಂಗ್ರಹಿಸುತ್ತಾ ಹೋದೆ. ವಾಟ್ಸಾಪ್ದಲ್ಲಿ ಸಕ್ರಿಯರಾದ ಸಂಗಾತಿಗಳಿಗೂ ವಿಷಯ ತಿಳಿಸಿ ಕೊರೊನಾ ಕುರಿತು ಕವಿತೆ ಕಳಿಸಲು ಕೋರಿದೆ. ಅಪೂರ್ವ ಸ್ಪಂದನೆ ದೊರೆಯಿತು. ಸರಿ ಸುಮಾರು ಅರವತ್ತು ಕವಿತೆಗಳು ಸೇರಿದವು.
ನಾಡಿನ ಪುಸ್ತಕೋದ್ಯಮದಲ್ಲಿ ಕಡಿಮೆ ಅವಧಿಯಲ್ಲಿಯೇ ಅಪಾರ ಕೆಲಸ ಮಾಡಿರುವ ಪ್ರಗತಿಪರವಾಗಿ ಮತ್ತು ಸಾಮಾಜಿಕವಾಗಿ ಚಿಂತಿಸುವ ಹೊಸಪೇಟೆಯ ಯಾಜಿ ಪ್ರಕಾಶನದ ಗಣೇಶ ಯಾಜಿ ಮತ್ತು ಅವರ ಶ್ರೀಮತಿ ಸವಿತಾ ಯಾಜಿ ಅವರಿಗೆ ಈ ಕೃತಿಯನ್ನು ತಮ್ಮ ಪ್ರಕಾಶನದಿಂದ ಪ್ರಕಟಿಸಲು ಕೋರಿದೆ. ಅಷ್ಟೇ ಉತ್ಸುಕತೆಯಿಂದ ಒಪ್ಪಿಕೊಂಡು ಕೃತಿ ಪ್ರಕಟಣೆಯ ಪೂರ್ವ ಸಿದ್ಧತೆಗೆ ಅಣಿಯಾದರು. ಮುನ್ನುಡಿ ಬರೆಯಲು ಪ್ರಖರ ಚಿಂತಕ ಸಾಹಿತಿ ಡಾ. ರಾಜಶೇಖರ ಮಠಪತಿ(ರಾಗಂ) ಅವರನ್ನು ಕೋರಲಾಯಿತು. ಲಾಕ್ಡೌನ್ ಸಂದರ್ಭದಲ್ಲಿ ಅವರು ಬೆಂಗಳೂರು ಬಿಟ್ಟು ಜೋಳಿಗೆ’ಗೆ ಬಂದಿದ್ದರು(ಜೋಳಿಗೆ; ಇದು ವಿಜಯಪುರ ಜಿಲ್ಲೆಯ ಹಲಸಂಗಿ ಗೆಳೆಯರು ಬಾಳಿ ಬದುಕಿದ್ದ ಚಡಚಣ ಪ್ರದೇಶದಲ್ಲಿದೆ. ಚಡಚಣ ಹೊರ ವಲಯದಲ್ಲಿ ಐದಾರು ಎಕರೆ ಜಮೀನು ಖರೀದಿಸಿ ಇಲ್ಲಿ ರಾಗಂ ದಂಪತಿಗಳು ಜೋಳಿಗೆ ಹೆಸರಿನಲ್ಲಿ ಅನುಭವ ಮಂಟಪದ ರೀತಿಯಲ್ಲಿ ಮನೆ ಕಟ್ಟಿದ್ದಾರೆ. ಸಾವಿರಾರು ಗಿಡಗಳನ್ನು ನೆಟ್ಟಿದ್ದಾರೆ. ಕೊರೊನಾ ಪೂರ್ವ ಕಾಲದಲ್ಲಿ ಗಾಂಧೀಜಿ ಅವರ ಕುರಿತು ಈ ಜೋಳಿಗೆಯಲ್ಲಿ ನಡೆದ ಗಾಂಧಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾನು ವಹಿಸಿದ್ದೆ. ಇಲ್ಲಿ ನಿರಂತರ ಸಾಹಿತ್ಯ ಕಾರ್ಯಗಳು ನಡೆಯುತ್ತಿರುತ್ತವೆ). ಈ ಜೋಳಿಗೆಯಲ್ಲಿ ಕುಳಿತು ರಾಗಂ ಅವರು ಇದಕ್ಕೆ ಮುನ್ನುಡಿ ಬರೆದರು. ಇದು ಬರೀ ಮುನ್ನುಡಿಯಾಗಿರಲಿಲ್ಲ, ಮಹಾ ಮುನ್ನುಡಿಯೇ ಆಗಿದೆ. ಜೊತೆಗೆ ರಾಗಂ ಅವರು ಇನ್ನಷ್ಟು ಮುಖ್ಯ ಕವಿಗಳು ಹೊರಗುಳಿದಿದ್ದಾರೆ ಅವರನ್ನೂ ಸೇರಿಸಿ ದಾಖಲೆಯ ನೂರು ಕವಿಗಳು ನೂರು ಕವಿತೆಗಳಾಗಲಿ ಎಂದರು. ಇದಕ್ಕೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡವರು ಯಾಜಿ ದಂಪತಿಗಳು, ಕನ್ನಡದ ಮುಖ್ಯ ಕವಿಗಳನ್ನೆಲ್ಲ ಸಂಪರ್ಕಿಸಿ ಮತ್ತಷ್ಟು ಕವಿತೆಗಳನ್ನು ಸೇರಿಸಿ ಈಗ ಇದು ನೂರೆಂಟು ಕವಿಗಳ ಕೊರೊನಾ ಕಾಲದ ಕವಿತೆಗಳು’ ಸಂಕಲನವಾಯಿತು. ಇದಕ್ಕಾಗಿ ನಾನು ಯಾಜಿ ದಂಪತಿಗಳಿಗೆ ಋಣಿಯಾಗಿದ್ದೇನೆ.
ಇದಕ್ಕೊಂದು ಒಪ್ಪುವ ಮುಖಪುಟ ಬಿಡಿಸಿಕೊಟ್ಟು ಉಪಕರಿಸಿದವರು ನಾಡಿನ ಖ್ಯಾತ ಚಿತ್ರಕಲಾವಿರಾದ ಟಿ.ಎಫ್. ಹಾದಿಮನಿ ಅವರು. ಸಂಪಾದಕರ ಚಿತ್ರ ಒದಗಿಸಿದ ಹ.ಸ.ಬ್ಯಾಕೊಡ ಅವರಿಗೂ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ತಮ್ಮ ಕವಿತೆಗಳನ್ನು ಇಲ್ಲಿ ಅಳವಡಿಸಲು ಸಹಕರಿಸಿದ ಹಾಗೂ ಕೇಳಿದ ಕೂಡಲೇ ತಡ ಮಾಡದೇ ತಮ್ಮ ಕವಿತೆಗಳನ್ನು ಬರೆದುಕೊಟ್ಟ ಸಂಗಾತಿಗಳಿಗೆ, ಗಣ್ಯ ಕವಿಗಳು ಇಂಥದೊಂದು ಕಾರ್ಯಕ್ಕೆ ಬೆಂಬಲಿಸಿ ಕವಿತೆ ನೀಡಿದ ಪ್ರೀತಿಗೆ ನನ್ನ ಮತ್ತು ಯಾಜಿ ಪ್ರಕಾಶನದ ದಂಪತಿ ಪರವಾಗಿ ಅನಂತ ಕೃತಜ್ಞತೆಗಳು.
ಕೊರೊನಾ ಕಾಲಘಟ್ಟದಲ್ಲಿ ಬಂದ ಈ ಕೊರೊನಾ ಕಾಲದ ಕವಿತೆಗಳು ಸಂಕಲನವು ಕನ್ನಡ ಕಾವ್ಯ ಕ್ಷೇತ್ರದಲ್ಲಿ ಖಂಡಿತ ಕೊರೊನೋತ್ತರ ಸಂದರ್ಭದಲ್ಲಿ ದಾಖಲಾಗುವ ಎಲ್ಲ ಲಕ್ಷಣಗಳನ್ನು ಹೊಂದಿದೆ. ಇದನ್ನು ಓದಿಗೆ ಎತ್ತಿಕೊಂಡ ತಾವೂ ಹೇಳಲಿದ್ದೀರಿ.
ನಮ್ಮ ಕಾಲಕೆ ಎಲ್ಲ ಕಂಡಂತಾಯ್ತು
ಕೊರೊನಾ ಯುಗ ಮಗ್ಗಲು ಬದಲಿಸಿತು.
ಪುಟ ಸರಿದಂತೆ
ಸವಿನುಡಿ / ೩
ಕೊರೊನಾ ಮತ್ತು ಬುದ್ಧ / ೫
ಸಂಪಾದಕರ ನುಡಿ / ೧೨
೧. ಬಿನ್ನಹ -ಜಯಂತ ಕಾಯ್ಕಿಣಿ / ೧
೨. ಅವಳ ಕವಿತೆ ಕ್ವಾರಂಟೈನ ಆಗಿದೆ -ಎಂ.ಆರ್. ಕಮಲಾ / ೨
೩. ಈಗೀಗ ಏನಪ್ಪಾ ಕೆಲಸ ಅಂದ್ರೆ -ಡಾ. ಸರಜೂ ಕಾಟ್ಕರ್ / ೪
೪. ಊಟ ತಯಾರಿದೆ -ಸತೀಶ ಕುಲಕರ್ಣಿ / ೬
೫. ಸಪ್ತಪದಿ -ಡಾ. ವಿಜಯಶ್ರೀ ಸಬರದ / ೭
೬. ಸೋಲೆಂಬ ಗೆಲುವು -ಡಾ. ಬಸವರಾಜ ಸಬರದ / ೮
೭. ಸ್ತಬ್ಧ -ಡಾ. ಜಯಪ್ರಕಾಶ ಮಾವಿನಕುಳಿ / ೧೦
೮. ಏನಂಬೂದು ನೀ ಹೇಳು ಕರೋನಾ-ಬಿ.ಆರ್.ಪೊಲೀಸ್ಪಾಟೀಲ್ / ೧೧
೯. ಕೊರೋನ ನೀನು ಅವತಾರಿ! -ಡಾ. ನಾ. ಸೋಮೇಶ್ವರ / ೧೨
೧೦. ಪರಿಚಯ -ಚಿಂತಾಮಣಿ ಕೊಡ್ಲಕೆರೆ / ೧೫
೧೧. ಲೆಕ್ಕಾಚಾರ… -ಎಲ್.ಎಸ್. ಶಾಸ್ತ್ರಿ / ೧೬
೧೨. ನಾನವ್ವ ಕರೋನಯ್ಯ-ರಾಜಶೇಖರ ಮಠಪತಿ(ರಾಗಂ) / ೧೮
೧೩. ಬಾರೊ ಶ್ರಾವಣ -ಡಾ. ಶ್ರೀಪಾದ ಶೆಟ್ಟಿ / ೨೧
೧೪. ಕೊರೊನಾ ಕ್ರಾಂತಿ -ಮೋಹನ ಕುಂಟಾರ್ / ೨೩
೧೫. ಮುಖ ಮುಖವೂ…. -ವಾಸುದೇವ ನಾಡಿಗ್ / ೨೪
೧೬. ಮಾತು ಮುಗಿದ ಹೊತ್ತಲ್ಲಿ -ಶ್ರೀದೇವಿ ಕೆರೆಮನೆ / ೨೬
೧೭. ಜೀವಕ್ಕೆಷ್ಟು ಬೆಲೆ! ಸಾವಿಗೆಷ್ಟು ಬೆಲೆ -ಡಾ. ಬಿ.ಎಂ. ಪುಟ್ಟಯ್ಯ / ೨೮
೧೮. ಬೆತ್ತಲಾಗಿವೆ ಭ್ರಮೆಗಳು -ಡಾ. ಲೀಲಾ ಸಂಪಿಗೆ / ೩೦
೧೯. ಸಮಾವೇಶ -ಶ್ರೀನಿವಾಸ ಜೋಕಟ್ಟೆ / ೩೨
೨೦. ನಿಜ ಜಗಕೆ ಧಾವಂತವಿಲ್ಲ… -ದೇವಯಾನಿ(ಶುಭಾ ನಾಡಿಗ್) / ೩೪
೨೧. ಬಾನಾಡಿ -ಸತ್ಯೇಶ್ ಬೆಳ್ಳೂರ್ / ೩೬
೨೨. ಹೀಗೊಂದು ಶ್ರಾವಣದ ಮಧ್ಯಾಹ್ನ -ರಾಜು ಹೆಗಡೆ / ೩೭
೨೩. ನೀ ಯಾರು ಕೊರೋನಾ? -ಅನಂತ ವೈದ್ಯ / ೩೮
೨೪. ಮಹಾವಲಸೆ -ಸುಧಾ ಆಡುಕಳ / ೪೦
೨೫. ವೈರಸ್ಸಿಗೊಂದು ಮನವಿ -ಮಮತಾ ಅರಸೀಕೆರೆ / ೪೧
೨೬. ನಾವು ಮಾನವರು ಸಂಘಜೀವಿಗಳು -ನಾಗ ಎಚ್. ಹುಬ್ಳಿ / ೪೩
೨೭. ನಕ್ಷತ್ರ ಕಣ್ಣು -ಆರ್.ಜಿ.ಹಳ್ಳಿ ನಾಗರಾಜ / ೪೫
೨೮. ಇರಲಿಲ್ಲ ನಮಗೆ ಯಾವ ದಾರಿ -ವಸಂತ ಬನ್ನಾಡಿ / ೪೭
೨೯. ಹಾರು ಗರಿಬಿಚ್ಚಿ -ಡಾ. ಗೋವಿಂದ ಹೆಗಡೆ / ೫೦
೩೦. ಯಾರೂ ಊಹಿಸಿರಲಿಲ್ಲ! -ಆನಂದ್ ಋಗ್ವೇದಿ / ೫೨
೩೧. ಅದೇ ಬರಬೇಕಾಯಿತೆ -ತಮ್ಮಣ್ಣ ಬೀಗಾರ / ೫೪
೩೨. ಕೊರೋನಾ -ಎಸ್.ಎಂ. ಹೆಗಡೆ / ೫೬
೩೩. ಇಪ್ಪತ್ತು ಲಕ್ಷ ಕೋಟಿ -ವೀರಣ್ಣ ಮಡಿವಾಳರ / ೫೮
೩೪. ಸವಾಲು -ಚಂದ್ರಶೇಖರ ಕಾಕಾಲ್ / ೬೦
೩೫. ಎನಿತು ಸರಿಸಮವೆ -ಬಿ.ಎಸ್.ಭಾಸ್ಕರರಾವ್ / ೬೧
೩೬. ಎಲ್ಲವೂ ಅಸ್ಪೃಶ್ಯ -ಡಾ. ವಿದ್ಯಾ ಕುಂದರಗಿ / ೬೪
೩೭. ಕಣ್ಣಿಗೆ ಕಾಣದ -ಡಾ. ಶಿವಾನಂದ ಕುಬಸದ / ೬೬
೩೮. ಪಾಪಿ ಹೊಟ್ಟೆಯ ಕಾಯಲು -ಡಾ. ವೈ.ಎಂ. ಯಾಕೊಳ್ಳಿ / ೬೮
೩೯. ದೊರೆಗೆ ಕಣ್ಣು ಕುರುಡೇ? -ಯಮುನಾ ಗಾಂವ್ಕರ್ / ೬೯
೪೦. ಆ ದಿನಗಳಾಚೆ…. -ನಾರಾಯಣ ಯಾಜಿ / ೭೧
೪೧. ಇಂದಾದರೂ ಬಂದೆಯಲ್ಲಾ -ಪ್ರಕಾಶ ಕಡಮೆ / ೭೩
೪೨. ಕೊರೊನಾ ಯುಗ ಮಗ್ಗಲು ಬದಲಿಸಿತು -ಡಾ. ಪ್ರಕಾಶ ಗ. ಖಾಡೆ / ೭೫
೪೩. ಮನುಕುಲದ ಹಾಡು-ಪಾಡು -ಉಮೇಶ ತಿಮ್ಮಾಪುರ / ೭೭
೪೪. ಕರೋನಾ… -ಡಾ. ಸವಿತಾ ರವಿಶಂಕರ್ / ೮೦
೪೫ ಮಿಥ್ಯಗಳ ಬೆತ್ತಲುಗೊಳಿಸಿದ ಕರೋನ… -ರಾಜಕುಮಾರ ಬಡಿಗೇರ / ೮೨
೪೬ ವೈರಾಣುವಿನ ಸುತ್ತಲೇ -ವಿವೇಕಾನಂದ ಎಚ್.ಕೆ. / ೮೪
೪೭. ನಾನು ಸೂಕ್ಷ್ಮಾತಿ ಸೂಕ್ಷ್ಮ -ವ್ಯಾಸ ದೇಶಪಾಂಡೆ / ೮೭
೪೮. ಮರಣ ಮೃದಂಗ… -ಪ್ರೊ. ಚಂದ್ರಶೇಖರ ಹೆಗಡೆ / ೮೯
೪೯. ಕೊರೊನಾ ನಿನ್ನ ಮಹಿಮೆ ಅಪಾರ -ಗುಂಡೂರು ಪವನಕುಮಾರ್/ ೯೧
೫೦. ಜಾತಿ ಧರ್ಮ ಮುಖ್ಯವಲ್ಲ -ಗಿರೀಶ ಜಕಾಪುರೆ / ೯೩
೫೧. ಕ್ವಾರಂಟೈನ್ ಕವಿತೆ -ಗಂಗಾಧರ ದಿವಟರ / ೯೪
೫೨. ಕಾಯಕದ ದಿನ ನಗರ ಸತ್ತು ಹೋಗಿದೆ -ನಾಗರಾಜ ಹರಪನಹಳ್ಳಿ / ೯೬
೫೩. ಲೋಕವೆಲ್ಲ -ಎ.ಜಿ.ರತ್ನ ಕಾಳೇಗೌಡ / ೯೮
೫೪. ಈಗ ಬಂದಿವೆ ಬಹುರೂಪಿ ರೋಗಗಳು -ನಳಿನಿ ಡಿ. / ೯೯
೫೫. ನಾಲಿಗೆ ಕತ್ತರಿಸಿ ನಡೆದರು -ಜಹಾನ್ ಆರಾ, ಕುಷ್ಟಗಿ / ೧೦೦
೫೬. ಹೊರಟು ಹೋಗೇ ಕೊರೊನಾ -ಅಬ್ಬಾಸ ಮೇಲಿನಮನಿ / ೧೦೨
೫೭. ಕೊರೊನಾ ಕಾಲದಲ್ಲಿ -ಸಿದ್ಧರಾಮ ಹೊನ್ಕಲ್ / ೧೦೪
೫೮. ದನಿ ಕೇಳುತ್ತಿದೆ -ಗುರು ಹಿರೇಮಠ / ೧೦೫
೫೯. ಭಾರತ ಬರಿಗಾಲಲಿ ನಡೆಯುತ್ತಿದೆ -ಎಸ್.ಕೆ.ಮಂಜುನಾಥ / ೧೦೮
೬೦. ಬಯಲಿಗೆ ಬಯಲಾಗು -ರೇಖಾ ರಂಗನಾಥ / ೧೧೦
೬೧. ಕುಣಿಯೋಣ ಬಾರಾ -ಚಂಸು ಪಾಟೀಲ / ೧೧೨
೬೨. ಬೀಗ ಜಡಿದಿರುವೆ -ಸುರೇಶ ಎಲ್. ರಾಜಮಾನೆ / ೧೧೫
೬೩. ಬಿಸಿಲೂರ ದಾರಿ -ಲತಾ ರಮೇಶ ವಾಲಿ / ೧೧೮
೬೪. ಅಗುಳಿ ಹಾಕಬೇಕಿದೆ… -ಮಹಾದೇವ ಬಸರಕೋಡ / ೧೨೦
೬೫. ಎಲ್ಲರ ಬದುಕು ಹಸನಾಗಲಿ -ಎಚ್. ಷೌಕತ್ ಅಲಿ / ೧೨೨
೬೬. ಮಾರಕದ ಅಣುವೊಂದು -ಅನಿತಾ ಪಿ. ಪೂಜಾರಿ / ೧೨೪
೬೭. ಮೌಲ್ಯಗಳು… -ರೂಪಾ ಗುರುರಾಜ / ೧೨೫
೬೮. ಹೇ ಕೊರೊನಾ -ರವಿ ರಾ. ಕಂಗಳ / ೧೨೭
೬೯. ಸೀನಿದರೂ ಹೆದರಿಕೆ -ಮಹಿಮ / ೧೨೯
೭೦. ಹೆದರುತ್ತಿದ್ದೇನೆ -ಶೋಭಾ ನಾಯಕ / ೧೩೦
೭೧. ಮಾರಿಯೆಂದಿರಿ -ವೆಂಕಟೇಶ ರಾ.ಸು. / ೧೩೧
೭೨. ಕನಸಿನ ಕತಿ -ಬಸವಣ್ಣೆಪ್ಪ ಕಂಬಾರ / ೧೩೩
೭೩. ಶಾರ್ವರಿಯ ಗರ್ಭ -ಜಿ.ಕೆ. ಕುಲಕರ್ಣಿ / ೧೩೫
೭೪. ಕಿರೀಟಿಯ ಮೇಲೆ -ಅಶೋಕ ಹಾಸ್ಯಗಾರ / ೧೩೭
೭೫. ಜೇಬಿನಲ್ಲಿ ಚೇಳು -ಪ್ರೊ. ಗುಂಡಣ್ಣ ಕಲಬುರ್ಗಿ / ೧೩೯
೭೬. ಕಸೂತಿ -ಸಹನಾ ಹೆಗಡೆ / ೧೪೧
೭೭. ಕೊರೋನಾದ ಒಳಗುಟ್ಟು -ಡಾ. ಚಿಲ್ಕರಾಗಿ ಸಿ.ಬಿ. / ೧೪೩
೭೮. ಅಪ್ಪಾ ಏನು ತಂದೆ -ಪ್ರಶಾಂತ ಮೂಡಲಮನೆ / ೧೪೪
೭೯. ಹಳಹಳಿಕೆ -ಸಿಂಧು ಚಂದ್ರ ಹೆಗಡೆ / ೧೪೭
೮೦. ಕರಾಳ ಪದ್ಯಗಳು -ಶಶಿಕಾಂತ ಯಡಹಳ್ಳಿ / ೧೪೯
೮೧. ತೋರಣ -ಗಣೇಶ ಜೋಶಿ, ಸಂಕೊಳ್ಳಿ / ೧೫೩
೮೨. ಮಾಯದ ಕಾಯಿಲೆ -ಡಾ. ಶಿವರಾಜ ಬ್ಯಾಡರಹಳ್ಳಿ / ೧೫೪
೮೩. ಕೊರೊನಾ ತಂದ ಮೌನ -ಚಂಪಾ ಶಿವಣ್ಣ / ೧೫೭
೮೪. ಪುಟ್ಟ ಕಣ್ಣುಗಳನ್ನು ಮತ್ತಷ್ಟು ಕಿರಿದಾಗಿಸಿ -ಕವಿತಾ ಗಿರೀಶ ಹೆಗಡೆ / ೧೫೮
೮೫. ಕಾಲ ಲೀಲೆ -ಎ.ಎನ್.ರಮೇಶ, ಗುಬ್ಬಿ / ೧೫೯
೮೬. ಗತಜನುಮಃ -ವಿಭಾ(ವಿಶ್ವಾಸ್ ಭಾರದ್ವಾಜ್) / ೧೬೧
೮೭. ಲಾಕ್ ಡೌನ್ ಗೀತೆ -ಮುಕುಂದಾ ಬೃಂದಾ / ೧೬೩
೮೮. ಖರೇನಾ… -ಗಾಯತ್ರಿ ರವಿ / ೧೬೫
೮೯. ಕ್ವಾರೆಂಟೈನ್ ಕವಿತೆ -ಅಕ್ಷತಾರಾಜ್ ಪೆರ್ಲ / ೧೬೭
೯೦. ಕೊರೊನಾ ಕಬಂಧಬಾಹು -ವೆಂಕಟೇಶ ಗುಡೆಪ್ಪನವರ / ೧೬೮
೯೧. ದೇಶ ಸ್ಮಶಾನವಾಗುವ ಮೊದಲು -ಅಮು ಭಾವಜೀವಿ / ೧೭೦
೯೨. ಅನಂಗ -ಬಿ. ಸುಧಾ ಭಾಸ್ಕರ್ರಾವ್ / ೧೭೧
೯೩. ರಕ್ತದಿಂದ ತೊಯ್ಯಲಿ ಬಿಡಿ -ಅಭಿಷೇಕ ಬಳೆ ಮಸರಕಲ್ / ೧೭೨
೯೪. ಕೊರೊನಾ ಎರಡು ಮಗ್ಗಲು -ಅಂಬಾದಾಸ ವಡೆ / ೧೭೩
೯೫. ಮಾರಿಯೆಂದಿರಿ -ವೆಂಕಟೇಶ ರಾ.ಸು. / ೧೭೬
೯೬. ಲಾಕ್ ಡೌನ್ ಕವಿತೆ -ಸುಮಿತ್ ಮೇತ್ರಿ / ೧೭೮
೯೭. ಕರೋನಾ ಕವನ -ಮಹೇಶ ಬಳ್ಳಾರಿ / ೧೮೧
೯೮. ಕೊರೊನಾ ಹತೋಟಿಗೆ ತರೋಣ -ಬಾಪು ಗ. ಖಾಡೆ / ೧೮೨
೯೯. ಕಾಲ ಮತ್ತು ಕೊರೊನಾ ಸಂವಾದ -ಚಂದ್ರಗೌಡ ಕುಲಕರ್ಣಿ / ೧೮೩
೧೦೦. ಕೊರೊನಾ -ವೀರೇಶ್ ಜಿ. ಮೇಟಿ / ೧೮೫
೧೦೧. ಕೊರೊನಾ ಬಂತು ನಾಡಿಗೆ -ಸುಜಾತಾ ವಿಶ್ವನಾಥ / ೧೮೬
೧೦೨. ಊರು ಬಹಳ ದೂರವಿದೆ -ದುರಾಹ ಬಳ್ಳಾರಿ / ೧೮೭
೧೦೩. ಕೆಮ್ಮಲು ಕವಿಯುವ ಕೊರೋನಾ… -ಜಯಕವಿ / ೧೮೮
೧೦೪. ವಂದನೆ -ಸಿದ್ದಾಚಾರ್ / ೧೯೦
೧೦೫. ಮಾರಕ ಸೋಂಕು -ಈರಣ್ಣ ಬೆಂಗಾಲಿ / ೧೯೧
೧೦೬. ಸ್ಮಶಾನ ಮೌನ -ನಾಗೇಶ ಜೆ. ನಾಯಕ / ೧೯೨
೧೦೭. ಕಹಳೆಯ ಕೂಗು -ಶಿವಕುಮಾರ ಮೋ. ಕರನಂದಿ / ೧೯೪
೧೦೮. ಕರೋನಾ ಕಾಲದ ಕಟ್ಟುಪಾಡು -ಪ್ರಕಾಶ ಡಂಗಿ / ೧೯೭
Reviews
There are no reviews yet.