ದಲಿತರು, ಸಾಹಿತ್ಯ ಮತ್ತು ಸಾಮಾಜಿಕ ದೃಷ್ಟಿಕೋನದ ವಿಚಿಕಿತ್ಸಕ ಪ್ರಜ್ಞೆ
ಮರಾಠಿ ಸಾಹಿತ್ಯ ಎಂದೊಡನೆ ನಮಗೆ ನೆನಪಾಗುವುದು ಸಂತಮಹಾಂತರು ರಚಿಸಿ ಜನಮನವನ್ನು ಸಾಮಾಜಿಕ ವಾಗಿ ಹೊಸ ಆಯಾಮಕ್ಕೆ ಪ್ರರೂಪಿಸಿದ ಅಭಂಗ ಸಾಹಿತ್ಯ. ಮತ್ತೊಂದು ದಲಿತ ಸಾಹಿತ್ಯ. ಭಾರತಾದ್ಯಂತ ತಮ್ಮ ಸಾಹಿತ್ಯದ ಮೂಲಕ ಹೊಸ ಜಾಗೃತಿಯನ್ನು ಮತ್ತು ದೃಷ್ಟಿಕೋನವನ್ನು ತಂದುಕೊಟ್ಟ ಶ್ರೇಯಸ್ಸು ಮರಾಠಿ ದಲಿತ ಸಾಹಿತ್ಯದ ಲೇಖಕರ ಚಿಂತನೆಗೆ ಇದೆ. ಡಾ. ಬಾಬಾಸಾಹೇಬ ಅಂಬೇಡಕರ ಅವರ ದಲಿತ ಚಿಂತನೆ ಜಾಗತಿಕವಾದ ವಿಶಾಲ ದೃಷ್ಟಿಕೋನದ ಮೇಲೆ ರೂಪುಗೊಂಡಿರುವಂತಹದ್ದು. ಅಮೆರಿಕಾದ ಬ್ಲಾಕ್ ಪ್ಯಾಂಥರ್ಸ್ ಚಳವಳಿ ಮತ್ತು ಚಿಂತನೆಗಳು, ಮಾರ್ಕ್ಸ್‌ವಾದ, ಗೌತಮಬುದ್ಧನ ಚಿಂತನೆಗಳು ಬಾಬಾಸಾಹೇಬರ ಬಹಳ ಪ್ರೀತಿಯ ವಿಷಯಗಳಾಗಿದ್ದವು. ಆದರೆ ಅವುಗಳನ್ನು ಯಥಾವತ್ತಾಗಿ ಸ್ವೀಕರಿಸದೆ ಅವುಗಳನ್ನೆಲ್ಲ ಸುಸೂಕ್ಷ್ಮ ದೃಷ್ಟಿಕೋನದಿಂದ ಪರಿಶೀಲಿಸಿ ಸಮಕಾಲಿನ ಭಾರತದ ಶೋಷಿತ ಜನವರ್ಗಕ್ಕೆ ಬೇಕಾದ ಚಿಂತನೆಗಳನ್ನು ವಿಶಿಷ್ಟವಾಗಿ ನಮ್ಮ ಮುಂದೆ ಪ್ರಚುರಪಡಿಸಿದ ಚಿರಕಾಲದ ವಿಚಾರಗಳು ಬಾಬಾಸಾಹೇಬ ಅಂಬೇಡಕರ ಅವರದಾಗಿರುವುದು ಗಮನಾರ್ಹ. ಅಮೆರಿಕಾದ ಬ್ಲಾಕ್ ಪ್ಯಾಂಥರ್ಸ್ ಚಳವಳಿಗೂ ಭಾರತದ ದಲಿತರ ಚಳವಳಿಗಳಿಗೂ ಇರುವ ಸೂಕ್ಷ್ಮ ವ್ಯತ್ಯಾಸಗಳನ್ನು ಪ್ರಚುರಪಡಿಸುತ್ತಲೇ ಮಾರ್ಕ್ಸ್‌ವಾದವೂ ಸಮಕಾಲೀನ ಭಾರತದ ಸಾಮಾಜಿಕ ಅಸಮಾನತೆಗೆ ಪರಿಹಾರಾತ್ಮಕ ಸಿದ್ಧಾಂತವಲ್ಲ ಎಂಬುದನ್ನು ತಾರ್ಕಿಕವಾಗಿ ಮಂಡಿಸಿದ ಬಾಬಾಸಾಹೇಬ ಅಂಬೇಡಕರ ಅವರ ದೃಷ್ಟಿ ಎಷ್ಟು ಗಂಭೀರವಾಗಿತ್ತು ಎಂಬುದರ ಸ್ಪಷ್ಟ ದ್ಯೋತಕವಾಗಿದೆ. ಅವರ ದಲಿತ ಚಿಂತನೆಗಳೇ ಮುಂದಣ ಮರಾಠಿ ದಲಿತ ಬರಹಗಾರರ ವಿಚಾರಗಳಿಗೆ ಮೂಲ ಪಾತಳಿಯಾಯಿತು ಎಂಬುದನ್ನು ಈ ಮೂಲಕ ನಾವು ಅರ್ಥ ಮಾಡಿಕೊಳ್ಳ ಬೇಕಾಗಿದೆ. ೧೯೪೬ರಲ್ಲಿ ಅಂಬೇಡಕರ ಅವರು ಸ್ಥಾಪಿಸಿದ ಪೀಪಲ್ಸ್ ಎಜುಕೇಶನ್ ಸೊಸೈಟಿಯು ದಲಿತರು ಮತ್ತು ಶೋಷಿತ ಜನವರ್ಗಕ್ಕೆ ವಿದ್ಯಾಭ್ಯಾಸ ಪಡೆಯುವುದಕ್ಕೆ ಅವಕಾಶ ಉಂಟಾಯಿತು. ಅನಂತರ ೧೯೫೦ರಲ್ಲಿ ಸಿದ್ಧಾರ್ಥ ಸಾಹಿತ್ಯ ಸಂಘವು ಹುಟ್ಟಿ ಕೊಂಡಿತು. ಅದೇ ಮುಂದೆ ೧೯೫೩ರಲ್ಲಿ ಮಹಾರಾಷ್ಟ್ರ ದಲಿತ ಸಾಹಿತ್ಯ ಸಂಘ ಎಂಬ ಹೆಸರಿನಲ್ಲಿ ಮರುನಾಮಕರಣಗೊಂಡಿತು. ಈ ಘಟನೆ ದಲಿತರಿಗೆ ಒಂದು ಅಸ್ಮಿತೆಯನ್ನು ಮೂಡಿಸಿತು. ಮರಾಠಿಯ ಆದ್ಯ ದಲಿತ ಲೇಖಕ ಎಂಬ ಗೌರವಕ್ಕೆ ಭಾಜನರಾಗಿರುವ ಅಣ್ಣಾಭಾವು ಸಾಠೆ ಅವರು ದಲಿತರ ಸಮಸ್ಯಾತ್ಮಕವಾದ ವಾಸ್ತವ ಸಾಮಾಜಿಕ ಬದುಕನ್ನು ಮುಖ್ಯವಾಗಿಟ್ಟುಕೊಂಡು ಬರವಣಿಗೆ ಮಾಡುವ ಮೂಲಕ ದಲಿತ ಸಾಹಿತ್ಯಕ್ಕೆ ನಾಂದಿ ಹಾಡಿದರು. ಮುಂದೆ ಹಲವಾರು ಲೇಖಕರು ಇದರಿಂದ ಪ್ರಭಾವಿತರಾಗಿ ದಲಿತ ಸಾಹಿತ್ಯವನ್ನು ಸಾಗರೋಪಾದಿಯಲ್ಲಿ ಸೃಷ್ಟಿಸಿದರು. ಕಾವ್ಯ, ಕಥನ ಸಾಹಿತ್ಯ, ಸಮೀಕ್ಷೆ ಮತ್ತು ಆತ್ಮಕಥನ ಗಳಂತಹ ಅನೇಕ ಪ್ರಕಾರಗಳು ದಲಿತರ ಬದುಕನ್ನು ಸಮಾಜದ ಎಲ್ಲರ ಮನಃಸ್ಥಿತಿಯನ್ನು ಬಡಿದೆಬ್ಬಿಸುವಂತೆ ಮಾಡಿದವು. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಗಂಭೀರ ಶೋಷಣೆಗೆ ಒಳಗಾಗಿದ್ದ ದಲಿತರ ದಯನೀಯವೂ ಸಂಕೀರ್ಣವೂ ಆದ ಬದುಕನ್ನು ಅತ್ಯಂತ ಗಂಭೀರವಾಗಿ ಚಿತ್ರಿಸುವ ಮೂಲಕ ಸಮಾಜದಲ್ಲಿ ತಮ್ಮ ವಾಸ್ತವ ಸ್ಥಿತಿಯನ್ನು ಪ್ರಚುರ ಪಡಿಸಿದರು. ಮಾತ್ರವಲ್ಲ, ತಮ್ಮ ಈ ಪರಿಸ್ಥಿತಿಗೆ ಏನು ಕಾರಣ ಮತ್ತು ಯಾರು ಕಾರಣ ಎಂಬುದನ್ನು ಅತ್ಯಂತ ಧೈರ್ಯದಿಂದ ಸಮಾಜಕ್ಕೆ ಒತ್ತಿ ಒತ್ತಿ ಹಾಗೂ ಕೂಗಿ ಕೂಗಿ ಹೇಳಲಾರಂಭಿಸಿದರು.
ದಲಿತ ಸಾಹಿತ್ಯವನ್ನು ಮರಾಠಿಯಲ್ಲಿ ವಿದ್ರೋಹಿ ಸಾಹಿತ್ಯವೆಂದು ಕರೆಯಲಾಗುತ್ತದೆ. ಎಲ್ಲಾ ಸಾಂಪ್ರದಾಯಿಕ ವಿಚಾರಗಳನ್ನು ವೈಚಾರಿಕವಾಗಿ ವಿರೋಧಿಸಿ ದಲಿತ ಅಥವಾ ಶೋಷಿತ ವರ್ಗದವರ ಕೂಗು ಅವರ ಮನುಷ್ಯ ಪರಿಪ್ರ್ಯೇಕ್ಷದ ಹಕ್ಕೊತ್ತಾಯವಾಗಿದೆ ಎಂಬುದನ್ನು ಬಾಬಾಸಾಹೇಬರು ತಮ್ಮ ವೈಚಾರಿಕ ಬರಹಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿದ್ದಾರೆ. ಅದನ್ನು ಸಾಹಿತ್ಯಕವಾಗಿ ಸಮಾಜದೆದುರು ಮುಂದಿನ ತಲಮಾರಿನ ಲೇಖಕರು ಕಂಡರಿಸುವ ಮೂಲಕ ಹೊಸ ದೃಷ್ಟಿಕೋನವನ್ನು ಜಾಗೃತಗೊಳಿಸಿದರು. ಕೇಶವ ಮೇಶ್ರಾಮ, ದಯಾ ಪವಾರ, ಅರ್ಜುನ ಢಾಂಗಳೆ, ನಾಮದೇವ ಢಸಾಳ, ಶಂಕರರಾವ್ ಖರಾತ, ಬಾಬುರಾವ ಬಾಗೂಲ, ಭಾಸ್ಕರ ಚಂದನಶಿವ, ಶರಣಕುಮಾರ ಲಿಂಬಾಳೆ, ಲಕ್ಷ್ಮಣ ಗಾಯಕವಾಡ, ಬಾಬಾಸಾಹೇಬ ಮಲ್ಹಾರಿ ಮೋರೆ, ಲಕ್ಷ್ಮಣ ಮಾನೆ, ಉತ್ತಮ ಕಾಂಬಳೆ, ಊರ್ಮಿಳಾ ಪವಾರ್, ಪ್ರಜ್ಞಾದಯಾ ಪವಾರ್, ಮಲ್ಲಿಕಾ ಅಮರಶೇಖ, ಬೇಬಿತಾಯಿ ಕಾಂಬಳೆ ಮುಂತಾದ ಲೇಖಕರು ದಲಿತ ಸಾಹಿತ್ಯವನ್ನು ವಿರಾಟ್ ಸ್ವರೂಪದಲ್ಲಿ ರಚಿಸಿದ್ದಾರೆ. ಅವರ ಸಾಹಿತ್ಯದ ವಿಮರ್ಶೆಯು ಸಾಂಪ್ರದಾಯಿಕ ರೀತಿಯಲ್ಲಿ ಆಗಿನ ಮೇಲುವರ್ಗದ ಲೇಖಕರು ಮಾಡಲಾರಂಭಿಸಿ ಇದು ಸಾಹಿತ್ಯವೇ ಅಲ್ಲ; ಇದರಲ್ಲಿ ಸಾಹಿತ್ಯಕ ಸೌಂದರ್ಯವೇ ಇಲ ಎಂಬುದಾಗಿ ಬರೆದರು ಅದರ ಫಲವಾಗಿ ದಲಿತ ಸಾಹಿತ್ಯದ ಸ್ವರೂಪ ಮತ್ತು ಅದರ ಮೌಲ್ಯವನ್ನು ಕಂಡುಕೊಳ್ಳುವುದಕ್ಕೆ ಎಂತಹ ವಿಮರ್ಶಾ ಮಾನದಂಡಗಳು ಬೇಕಾಗುತ್ತವೆ ಎಂಬುದರ ವಿಚಿಕಿತ್ಸಕ ಗಂಭೀರ ಚಿಂತನೆಯ ಕೃತಿಯೇ ಶರಣಕುಮಾರ ಲಿಂಬಾಳೆಯವರು ರಚಿಸಿರುವ ದಲಿತ ಸಾಹಿತ್ಯಾಚ ಸೌಂದರ್ಯಶಾಸ್ತ್ರ. ದಲಿತ ಸಾಹಿತ್ಯದ ಬಗೆಗಿನ ಚಿಂತನೆಯ ಹಲವಾರು ಮಗ್ಗುಲುಗಳನ್ನು ಇಟ್ಟುಕೊಂಡು ಬಾಬಾಸಾಹೇಬ ಅಂಬೇಡಕರ ಅವರ ಚಿಂತನೆಗಳು ಮತ್ತು ದಲಿತ ಸಾಹಿತ್ಯದ ಒಟ್ಟಾರೆ ಸ್ವರೂಪವನ್ನು ಗಂಭೀರವಾಗಿ ರಚಿಸಿದ್ದಾರೆ. ಅವರ ಚಿಂತನೆಗಳು ಇಂದಿಗೂ ಬಹಳ ಪ್ರಮುಖವಾದುವಾಗಿವೆ. ಈ ಕೃತಿಯನ್ನು ಅಧ್ಯಯನ ಮಾಡಿದರೆ ದಲಿತ ಸಾಹಿತ್ಯದ ಹುಟ್ಟು, ಬೆಳವಣಿಗೆ ಮತ್ತು ಸಾಮಾಜಿಕ ಪ್ರಜ್ಞೆಯ ವೈಶಿಷ್ಟ್ಯ ಎಲ್ಲವೂ ಮನದಟ್ಟಾಗುತ್ತದೆ.
ನನ್ನ ಕಿರಿಯ ಮಿತ್ರರೂ ಆತ್ಮೀಯರೂ ಆದ ಡಾ. ವಿಠಲರಾವ್ ಟಿ. ಗಾಯಕ್ವಾಡ್ ಅವರು ನನಗೆ ಬಹಳ ಅಚ್ಚುಮೆಚ್ಚಿನವರಾದ ಮರಾಠಿಯ ಸುಪ್ರಸಿದ್ಧ ಲೇಖಕರೂ ವಿಮರ್ಶಕರೂ ಆದ ಡಾ. ಶರಣಕುಮಾರ ಲಿಂಬಾಳೆಯವರ ಹೆಸರು ಕನ್ನಡ ಓದುಗ ಲೋಕಕ್ಕೆ ಚಿರಪರಿಚಿತ. ಅವರ ಅಕ್ಕರಮಾಶಿ(ಅಕ್ರಮ ಸಂತಾನ) ಎಂಬ ದಲಿತ ಆತ್ಮಕಥನವು ದು.ನಿಂ. ಬೆಳಗಲಿ ಅವರು ಕನ್ನಡಕ್ಕೆ ಅನುವಾದಿಸಿದಾಗ ನನ್ನಂತಹ ಅನೇಕ ಕನ್ನಡ ಓದುಗರು ತೀವ್ರವಾಗಿ ವಿಸ್ಮಯಕ್ಕೆ ಒಳಗಾದರು. ದಲಿತ ಲೇಖಕರ ಆತ್ಮಕಥನಗಳು ಸಮಾಜದ ಜಡ ಮನಸ್ಸನ್ನು ಬಡಿದೆಬ್ಬಿಸಿದವು. ಮರಾಠಿಯಲ್ಲಿ ಇಂದು ಹತ್ತಿರ ಹತ್ತಿರ ನೂರೈವತ್ತಕ್ಕಿಂತಲೂ ಹೆಚ್ಚು ದಲಿತ ಆತ್ಮಕಥನಗಳಿವೆ. ಡಾ. ಶರಣಕುಮಾರ ಲಿಂಬಾಳೆಯವರ ದಲಿತ ಸಾಹಿತ್ಯಾಚ ಸೌಂದರ್ಯಶಾಸ್ತ್ರ ಎಂಬ ಅಪರೂಪದ ಮತ್ತು ಬಹಳ ಮುಖ್ಯವಾದ ಪುಸ್ತಕವನ್ನು ದಲಿತ ಸಾಹಿತ್ಯದ ಸೌಂದರ್ಯಪ್ರಜ್ಞೆ ಎಂಬ ಶೀರ್ಷಿಕೆಯಲ್ಲಿ ಬಹಳ ಶ್ರದ್ಧೆ ಮತ್ತು ಗಂಭೀರವಾಗಿ ಅನುವಾದ ಮಾಡಿ ಕನ್ನಡ ಓದುಗಲೋಕದ ಮುಂದೆ ಇಡುವ ಕಾರ್ಯ ಮಾಡಿದ್ದಾರೆ. ಈಗಾಗಲೇ ಮರಾಠಿಯಿಂದ ಹಲವಾರು ಕೃತಿಗಳನ್ನು ಅನುವಾದಿಸಿರುವ ಇವರ ಸಾಹಿತ್ಯವನ್ನು ಕನ್ನಡ ಓದುಗ ವರ್ಗ ಗಮನಿಸಿದೆ ಎಂಬುದಾಗಿ ಭಾವಿಸಿದ್ದೇನೆ. ಅವರಿಂದ ಇಂತಹ ಇನ್ನೂ ಗಮನಾರ್ಹ ಕೃತಿಗಳು ಅನುವಾದಗೊಂಡು ಹೊರಬರಲಿ ಎಂಬುದಾಗಿ ಹಾರೈಸುತ್ತೇನೆ.
ಡಾ. ಸರಜೂ ಕಾಟ್ಕರ್
ದಲಿತ ಸಾಹಿತ್ಯದ ಸೌಂದರ್ಯಶಾಸ್ತ್ರದ ವಿಷಯ
ದಲಿತ ಸಾಹಿತ್ಯ ಎಂದರೆ, ದಲಿತ ಲೇಖಕರು ಪ್ರಜ್ಞಾಪೂರ್ವಕವಾದ ಅರಿವಿನಿಂದ ಬರೆದಂತಹ ದಲಿತರ ವಿಷಯವಾಗಿನ ಬರವಣಿಗೆಯಾಗಿದೆ. ದಲಿತ ಸಾಹಿತ್ಯದ ಸ್ವರೂಪವು ಅದರ ಅಂಗಭೂತವಾಗಿರುವ ದಲಿತತ್ವದಲ್ಲಿ ನೆಲೆಗೊಂಡಿದೆ; ಅದರ ಪ್ರಯೋಜನವೂ ಸಂಪೂರ್ಣ ವಾಗಿ ಸ್ಪಷ್ಟವಾಗಿಯೇ ಇದೆ. ದಲಿತ ಸಮಾಜಕ್ಕೆ ಗುಲಾಮತ್ವದ ಅರಿವನ್ನು ತರುವುದು ಮತ್ತು ಸವರ್ಣ ಸಮಾಜಕ್ಕೆ ನಮ್ಮ ವ್ಯಥೆ-ವೇದನೆಗಳನ್ನು ನಿವೇದನೆ ಮಾಡಿಕೊಡುವುದು ದಲಿತ ಸಾಹಿತ್ಯದ ಮುಖ್ಯ ಉದ್ದೇಶವಾಗಿದೆ.
ಯಾವ ಸಾಹಿತ್ಯವು ಮೂಲದಿಂದಲೇ ಪರಿವರ್ತನೆಯಾಗಬೇಕು ಎಂದು ಪ್ರೇರಣಾತ್ಮಕ ವಾಗಿ ಬರೆಯಲಾಗಿದೆಯೋ, ಆ ಸಾಹಿತ್ಯದಿಂದ ಪರಿವರ್ತನೆಯ ಆಶಯವನ್ನು ಬಿಟ್ಟು ಆನಂದದ, ಸೌಂದರ್ಯದ ಅಪೇಕ್ಷೆಯನ್ನಾದರೂ ಏತಕ್ಕೆ ಮಾಡುವುದು? ದಲಿತ ಲೇಖಕರಿಗೆ ನಮ್ಮ ಸಾಹಿತ್ಯದ ವಿಮರ್ಶೆಯು ಸಮಾಜಶಾಸ್ತ್ರೀಯ ಅಂಗದಿಂದಲೇ ಆಗಬೇಕು ಎಂಬುದು ಮುಖ್ಯವಾದ ಭಾವನೆ. ಕಾರಣ ಸಮಾಜಶಾಸ್ತ್ರೀಯ ವಿಮರ್ಶೆಯಾದರೊ ಸೌಂದರ್ಯ ಕ್ಕಿಂತಲೂ ಸಾಮಾಜಿಕ ಮೌಲ್ಯಗಳ ಬಗೆಗೆ ಅಧಿಕ ಚರ್ಚೆ ಮಾಡುವುದಾಗಿದೆ. ಹಾಗಾಗಿ ದಲಿತ ಸಾಹಿತ್ಯದ ಸೌಂದರ್ಯವನ್ನು ಕುರಿತು ಚರ್ಚೆ ಮಾಡುವುದು ಎಂದರೆ,
* ದಲಿತ ಲೇಖಕರ ಮೂಲಭೂತ ಭೂಮಿಕೆಯನ್ನು ನಿರ್ಲಕ್ಷಿಸಿ ಅವರ ಸಾಹಿತ್ಯದ ಚರ್ಚೆಯನ್ನು ಮಾಡುವುದಾಗಿದೆ.
ಹಾಗಾಗಿಯೇ ದಲಿತ ಲೇಖಕರಿಗೆ ತಮ್ಮ ಸಾಹಿತ್ಯದಲ್ಲಿ ಇಂತಹ ಸೌಂದರ್ಯಗಳ ಬಗೆಗೆ ಚರ್ಚೆ ಮಾಡುವುದರ ನೆಲೆಯು ಒಪ್ಪಿಗೆಯಾಗಿಲ್ಲ. ದಲಿತ ಲೇಖಕರು ತಮ್ಮ ಸಾಹಿತ್ಯವು ಜೀವನವಾದಿ, ವಾಸ್ತವವಾದಿ ನೆಲೆಗಳಿಂದ ವಿಮರ್ಶೆಯಾಗಬೇಕು ಎಂಬ ಧೋರಣೆಯುಳ್ಳವರಾಗಿದ್ದಾರೆ. ಅಲ್ಲದೆ ಅದರೊಂದಿಗೆ ದಲಿತ ಸಾಹಿತ್ಯದ ಬಗೆಗೆ ಬೇರೆಯದ್ದೇ ಆದ ಸೌಂದರ್ಯಶಾಸ್ತ್ರವು ನಿರ್ಮಾಣಗೊಳ್ಳಬೇಕು ಎಂಬ ಬೇಡಿಕೆಯನ್ನೂ ಇಟ್ಟಿರುವರು. ಅಂದರೆ,
* ದಲಿತ ಲೇಖಕರು ಪಾರಂಪರಿಕ ಸೌಂದರ್ಯಶಾಸ್ತ್ರವನ್ನು ನಿರಾಕರಿಸುತ್ತಾರೆ. ಬದಲಾಗಿ ಅವರು ತಮ್ಮ ಸಾಹಿತ್ಯಕ್ಕಾಗಿ ಬೇರೆಯದ್ದೇ ಆದ ಸೌಂದರ್ಯಶಾಸ್ತ್ರವಿರಬೇಕು ಎಂಬ ಆವಶ್ಯಕತೆಯನ್ನು ಮಾನ್ಯ ಮಾಡಿದ್ದಾರೆ.
ಇದರ ಅರ್ಥವೇನೆಂದರೆ ದಲಿತ ಲೇಖಕರಿಗೆ ತಮ್ಮ ಸಾಹಿತ್ಯದ ಸೌಂದರ್ಯ ಮೀಮಾಂಸೆಗಾಗಿ ಬೇರೆಯದ್ದೇ ನಿಕಷಗಳ ಆವಶ್ಯಕತೆಯು ಇದೆ ಎಂಬುದು ಅವರ ಗಂಭೀರವಾದ ಪ್ರತಿಪಾದನೆಯಾಗಿದೆ. ಅರ್ಥಾತ್ ನಿಕಷಗಳು ಬದಲಾವಣೆಯಾದಲ್ಲಿ ಸೌಂದರ್ಯ ದೃಷ್ಟಿಯಲ್ಲಿಯೂ ಬದಲಾವಣೆಯಾಗುತ್ತದೆ. ಎಂತಲೇ ಜೀವನವಾದಿ, ವಾಸ್ತವವಾದಿ ವಿಮರ್ಶೆಗಳ ನಿಕಷಗಳ ಅನುಸಾರ ದಲಿತ ಸಾಹಿತ್ಯದ ಸೌಂದರ್ಯ ಮೀಮಾಂಸೆಯನ್ನು ಮಾಡಬೇಕಾಗುತ್ತದೆ ಎಂಬ ಒಂದು ಧೋರಣೆಯು ಇರುವುದು.
ಲೇಖಕನಿಗೆ ಹೇಗೆ ಹೀಗೆ ಬರೆಯಬೇಕು, ಹಾಗೆ ಬರೆಯಬೇಕು ಎಂಬುದು ಅಮಾನ್ಯವಾಗಿರುವುದೋ, ಹಾಗೆಯೇ ವಿಮರ್ಶಕರಿಗೂ ಹೀಗೆ ವಿಮರ್ಶೆ ಮಾಡಬೇಕು, ಹಾಗೆ ವಿಮರ್ಶೆ ಮಾಡಬೇಕು ಎಂಬುದಾಗಿ ನಿರ್ಬಂಧದಿಂದ ಹೇಳುವುದು ಕೂಡಾ ಹಾಗೆಯೇ ತಪ್ಪಾಗುತ್ತದೆ. ಕಲಾಕೃತಿಯು ಒಂದೇ ಆಗಿರುತ್ತದೆ; ಆದರೆ ಅದರ ಮೇಲಿನ ವಿಮರ್ಶೆಗಳು ಮಾತ್ರ ಬೇರೆ ಬೇರೆ ಸ್ವರೂಪದ್ದಾಗಿರುತ್ತವೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಇದರ ಅರ್ಥ,
* ದಲಿತ ಸಾಹಿತ್ಯದಲ್ಲಿ ದಲಿತ ಲೇಖಕರ ಧೋರಣೆಯನ್ನು ಹೇಗೆ ವಿಮರ್ಶೆ ಮಾಡ ಲಾಗುವುದೊ, ಹಾಗೆಯೇ ವಿಮರ್ಶಕರ ಧೋರಣೆಯ ಅನುಸಾರವಾಗಿಯೂ ವಿಮರ್ಶೆ ಯನ್ನು ಮಾಡಲಾಗುವುದು.
ಅಂದರೆ, ಪಾರಂಪರಿಕ ಸೌಂದರ್ಯಶಾಸ್ತ್ರದ ಆಧಾರಗಳಿಂದಲೇ ದಲಿತ ಸಾಹಿತ್ಯದ ವಿಮರ್ಶೆಯು ನಡೆಯುತ್ತಲಿದೆ. ಸಾಮಾನ್ಯವಾಗಿ ಮರಾಠಿ ವಿಮರ್ಶಕರು ದಲಿತ ಸಾಹಿತ್ಯಕ್ಕೆ ಬೇರೆಯದೇ ಆದ ಸೌಂದರ್ಯಶಾಸ್ತ್ರದ ಆವಶ್ಯಕತೆಯು ಇಲ್ಲ ಚಿರಂತನ ಮೌಲ್ಯಗಳ ಆಧಾರದಿಂದ ದಲಿತ ಸಾಹಿತ್ಯದ ವಿಮರ್ಶೆಯನ್ನು ಮಾಡಬಹುದು ಎಂದು ಉಚ್ಚ ಕಂಠದಿಂದ ಘೋಷಣೆ ಮಾಡಿರುತ್ತಾರೆ. ಆದರೆ ಅವರಲ್ಲಿ ಯಾರೇ ಒಬ್ಬರಾದರೂ ದಲಿತ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿ ಹೀಗೆ ದಲಿತ ಸಾಹಿತ್ಯದ ಸೌಂದರ್ಯ ಮೀಮಾಂಸೆಯಾಗಿ ವಿಶ್ಲೇಷಿಸಿರುವುದಿಲ್ಲ. ಹಾಗಾಗಿಯೇ ಭಾಲಚಂದ್ರ ನೇಮಾಡೆ ಅವರು ಮರಾಠಿ ವಿಮರ್ಶೆಯ ಸಾಮರ್ಥ್ಯದ ಮೇಲೆ ಕೊಡಲಿ ಪೆಟ್ಟನ್ನು ಹಾಕಿದ್ದಾರೆ. ದಲಿತ ವಿಮರ್ಶಕರೂ ದಲಿತ ಸಾಹಿತ್ಯದ ಬಗೆಗೆ ಬೇರೆಯದ್ದೇ ಸೌಂದರ್ಯಶಾಸ್ತ್ರವು ಬೇಕೆಂದು ಹೇಳಿರುವರು. ಆದರೆ ಅವರೂ ದಲಿತ ಸಾಹಿತ್ಯವನ್ನು ಗಂಭೀರತೆಯಿಂದ ಸಂಪೂರ್ಣವಾಗಿ ಅಧ್ಯಯನ ಮಾಡಿ ಇಂತಹ ದಲಿತ ಸಾಹಿತ್ಯದ ಸೌಂದರ್ಯಶಾಸ್ತ್ರದ ರೀತಿಯೊಂದನ್ನು ಸಿದ್ಧಪಡಿಸಿ ತೋರಿಸಿರುವುದಿಲ್ಲ. ಇದಕ್ಕೆ ಶರದ ಪಾಟೀಲ ತೇವಡೆ ಅವರನ್ನು ಮಾತ್ರ ಅಪವಾದ ಎಂಬುದಾಗಿ ಹೇಳಬಹುದು.
ದಲಿತ ಸಾಹಿತ್ಯದ ಸೌಂದರ್ಯ ಚರ್ಚೆಯನ್ನು ಮಾಡುವುದೆಂದರೆ ದಲಿತ ಸಾಹಿತ್ಯದ ನಿರ್ಮಿತಿ, ಹಿನ್ನೆಲೆ, ವ್ಯಾಖ್ಯಾನ, ವೈಶಿಷ್ಟ್ಯಗಳು, ಪ್ರೇರಣೆ, ಪ್ರವೃತ್ತಿ, ಸ್ವರೂಪ ಮತ್ತು ಪ್ರಯೋಜನ ಇವುಗಳ ಸಂದರ್ಭವಾಗಿ ವಿಚಾರ ಮಾಡುವುದು ಆವಶ್ಯಕ ಎನಿಸುತ್ತದೆ. ಇಂತಹ ವಿಚಾರಗಳು ದಲಿತ ಸಾಹಿತ್ಯದ ಆರಂಭ ಕಾಲದಿಂದಲೂ ಆಗುತ್ತಲೇ ಬಂದಿವೆ. ಇಂತಹ ಚರ್ಚೆಗಳನ್ನು ಹೊಸದಾಗಿ ಆರಂಭಿಸುವುದಕ್ಕಿಂತಲೂ ದಲಿತ ಸಾಹಿತ್ಯದ ವಿಷಯ ವಾಗಿ ಇಂದಿನವರೆಗೆ ಮಂಡಿಸಿರುವ ವಿಮರ್ಶೆಗಳ ವಿಚಾರಗಳನ್ನು ಅಧ್ಯಯನ ಮಾಡಿ ಅದರ ಸೂಕ್ಷ್ಮ ಪರಿಶೀಲನೆ ಮಾಡದೆ ಹೋದರೆ, ನಮಗೆ ಮುಂದೆ ಹೋಗುವುದಕ್ಕೆ ಸಾಧ್ಯ ವಾಗುವುದೇ ಇಲ್ಲ. ಎಂತಲೇ ಸಂಪೂರ್ಣ ದಲಿತ ಸಾಹಿತ್ಯವನ್ನು ವಿಮರ್ಶೆ ಮಾಡು ವುದು ಅತ್ಯವಶ್ಯವಾಗಿದೆ.
ಸಂಪೂರ್ಣ ದಲಿತ ಸಾಹಿತ್ಯದ ವಿಮರ್ಶೆಯನ್ನು ಮಾಡದೆಯೇ ಆವರ್ತನದಲ್ಲಿ ಸಿಲುಕಿರುವ ದಲಿತ ಸಾಹಿತ್ಯದ ವಿಮರ್ಶೆ ಮತ್ತು ದಲಿತ ಸಾಹಿತ್ಯವು ಮುಂದೆ ಸರಿಯುವುದೇ ಇಲ್ಲ. ಒಟ್ಟಾರೆ ದಲಿತ ಸಾಹಿತ್ಯದ ವಿಮರ್ಶೆಯನ್ನು ಅಧ್ಯಯನ ಮಾಡಿದ ಮೇಲೆ:
* ದಲಿತ ಸಾಹಿತ್ಯದಲ್ಲಿನ ಈ ಸೌಂದರ್ಯ ವಿಚಾರವು ಅಂಬೇಡಕರರು ಹೇಳಿದ ವಿಚಾರಗಳಾಗಿವೆ.
* ದಲಿತ ಸಾಹಿತ್ಯದಲ್ಲಿನ ಸೌಂದರ್ಯ ಮೌಲ್ಯಗಳು ಸಾಮಾಜಿಕ ಮೌಲ್ಯಗಳೇ ಆಗಿವೆ ಎಂಬುದಾಗಿ ಹೇಳುವುದಕ್ಕೆ ಸಾಧ್ಯವಿದೆ.
||ಅಸತ್ಯ||
ದಲಿತ, ಅಲೆಮಾರಿ, ವಿಮುಕ್ತ ಮತ್ತು ಆದಿವಾಸಿಗಳ ಜೀವನದಲ್ಲಿ ಇರುವ ಸತ್ಯದ ಸ್ಥಾನವಾದರೂ ಯಾವುದು? ಮೂಲತಃ ಯಾವುದನ್ನು ಸತ್ಯ ಎಂಬುದಾಗಿ ಗೌರವಿಸ ಲಾಗುತ್ತಿದೆಯೋ, ಅದನ್ನು ಸತ್ಯಮೇವ ಜಯತೇ ಎಂಬುದಾಗಿ ಹೇಳಲಾಗುತ್ತಿದೆ, ಅದು ನಿಜವೇನು?
ಬ್ರಾಹ್ಮಣರು ಬ್ರಹ್ಮದೇವನ ಮುಖದಿಂದಲೂ ಮತ್ತು ಶೂದ್ರರು ಪಾದ ಗಳಿಂದಲೂ ಹುಟ್ಟಿದರು ಎಂಬುದು ಸತ್ಯವಾದುದೇ? ಕಳೆದ ಜನ್ಮದಲ್ಲಿ ಪಾಪವನ್ನು ಮಾಡಿದುದರಿಂದಾಗಿ ಈ ಜನುಮದಲ್ಲಿ ಶೂದ್ರನಾಗಿ ಹುಟ್ಟು ವಂತಾಯಿತು ಎಂಬುದು ಸತ್ಯವಾದುದೇನು?
ಒಂದೊಮ್ಮೆ ಇದು ಸತ್ಯವಾಗಿದ್ದರೆ ಮಾತ್ರವಷ್ಟೇ ಅದು ಶಿವವಾಗುವುದು; ಅನ್ಯಥಾ ಅದು ಅಶಿವವೇ.
||ಅಶಿವ||
ಹಿಂದೂ ಧರ್ಮಶಾಸ್ತ್ರಗಳು ದಲಿತ ಜನವರ್ಗದವರ ಸ್ಪರ್ಶ, ನೆರಳು ಮತ್ತು ಮಾತುಗಳನ್ನೆಲ್ಲ ಮೈಲಿಗೆ ಎಂಬುದಾಗಿ ಪ್ರತಿಪಾದಿಸಿವೆ. ಅಸ್ಪೃಶ್ಯನ ಸ್ಪರ್ಶದಿಂದಾಗಿ ಅನ್ನ, ನೀರು ಮುಂತಾದುವುಗಳೇ ಅಲ್ಲದೇ ಮತ್ತು ಮನುಷ್ಯರು ಮೈಲಿಗೆ ಹೊಂದುತ್ತಾರೆ ಎಂಬುದಷ್ಟೇ ಅಲ್ಲ, ಈಶ್ವರನೂ ಕೂಡಾ ಮೈಲಿಗೆಗೆ ಒಳಗಾಗುತ್ತಾನೆ. ಅಸ್ಪೃಶ್ಯರಿಗಾಗಿ ಬೇರೆ ವಸತಿಗಳು, ಬೇರೆಯ ನೀರಿನ ಸ್ಥಳಗಳು, ಬೇರೆ ಸ್ಮಶಾನ ಭೂಮಿಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಅಲೆಮಾರಿಗಳಿಗೆ ನಿರ್ದಿಷ್ಟವಾಗಿ ಒಂದು ಊರು ಎಂಬುದು ಇರುವುದಿಲ್ಲ. ಹಾಗೆಯೇ ಒಂದು ನೆಲೆ, ಮನೆ ಎಂಬುದು ಎಲ್ಲಿಯೂ ಇರುವುದಿಲ್ಲ. ಸದಾ ಅಲೆದಾಟ ಮಾಡುತ್ತಲೇ ಇರುತ್ತಾರೆ. ಭಿಕ್ಷೆ ಬೇಡಿ ಬದುಕು ನಡೆಸಬೇಕಾಗಿರುತ್ತದೆ. ಇದು ಎಂತಹ ಶಿವ? ಇನ್ನೂ ಅಪರಾಧಿ ಪಂಗಡಗಳವರು ಕಳ್ಳತನ ಮಾಡಿಯೇ ಜೀವನ ನಡೆಸುವುದು ಅನಿವಾರ್ಯವಾಗಿರುತ್ತದೆ. ಇಂಥಲ್ಲಿ ಮನುಷ್ಯರನ್ನು ಜನ್ಮತಃ ಅಪರಾಧಿಗಳು ಎಂಬುದಾಗಿ ನಿರ್ಧರಿಸಲಾಗಿರುತ್ತದೆ. ಅಂದರೆ ಇದೆಂತಹ ಶಿವ? ಆದಿವಾಸಿಗಳಾದರೋ ವನ್ಯಪಶುಗಳ ಹಾಗೆಯೇ ಜೀವನ ನಡೆಸುತ್ತಿರುತ್ತಾರೆ. ಇದು ಶಿವನ ಯಾವ ರೂಪ?
ಶೂದ್ರರೂ ಮೂರು ವರ್ಣಗಳವರ ಸೇವೆಯನ್ನು ಮಾಡಬೇಕು. ಅವರಿಗೆ ಅಧಿಕಾರ, ಸಂಪತ್ತು, ಪ್ರತಿಷ್ಠೆ ಮತ್ತು ವಿದ್ಯೆಯ ಹಕ್ಕು ಇರುವುದಿಲ್ಲ. ಇದು ಎಂತಹ ಶಿವ?
ಇಂದಿಗೂ ದಲಿತರ ಮೇಲೆ ಅವರು ದಲಿತ ಎಂಬ ಕಾರಣದಿಂದ ದೌರ್ಜನ್ಯಗಳು ನಡೆಯುತ್ತವೆ. ದಲಿತ ಸ್ತ್ರೀಯರ ಮೇಲೆ ಅನ್ಯಾಯ-ಅತ್ಯಾಚಾರಗಳು ಆಗುತ್ತಲೇ ಇವೆ. ಇದು ಇಲ್ಲಿನ ಧಾರ್ಮಿಕ ರೀತಿರಿವಾಜುಗಳೇ ಆಗಿಬಿಟ್ಟಿವೆ.
||ಅಸುಂದರ||
ದಲಿತರು ಊರಿನಿಂದ ಹೊರಗಡೆ ವಾಸ ಮಾಡಬೇಕು, ಅವರ ಹೆಸರುಗಳೂ ಕೂಡ ಅಮಂಗಳಕಾರಕವಾಗಿಯೇ ಇರಬೇಕು. ಇನ್ನು ಅವರು ಸಂಪತ್ತನ್ನು ಕ್ರೋಢೀಕರಿಸಬಾರದು, ಕೇವಲ ಕತ್ತೆ-ನಾಯಿಗಳನ್ನು ಮಾತ್ರ ಸಾಕಬಹುದು. ಅವರು ಹೆಣದ ಮೇಲೆ ಹಾಕಿದ್ದ ಬಟ್ಟೆಗಳನ್ನು ವಸ್ತ್ರವಾಗಿ ಧರಿಸಲು ಬಳಸಿಕೊಳ್ಳಬೇಕು. ವೇದಗಳನ್ನು ಓದಬಾರದು, ಸಂಸ್ಕೃತ ವನ್ನು ಕಲಿಯಬಾರದು. ಇವುಗಳಿಂದಾಗಿ ಶೂದ್ರರಿಗೆ ಅವರ ಶೋಷಣೆಯ ಬಗೆಗೆ ಅರ್ಥವಾಗುವುದು! ದಲಿತರು ಅಮಂಗಳ, ಅಭದ್ರ ಮತ್ತು ಅಸ್ಪೃಶ್ಯ ಜೀವನವನ್ನು ನಡೆಸುವಂತೆ ಮಾಡಲಾಗಿದೆ. ಹಾಗೆ ಸಂಪೂರ್ಣವಾಗಿ ಒಪ್ಪಿಕೊಂಡು ಜೀವನ ನಡೆಸದೆ ಹೋದವರ ಮೇಲೆ ಕಠೋರವಾದ ಶಿಕ್ಷೆಯನ್ನು ವಿಧಿಸಲಾಗಿದೆ.
* ಶಂಭೂಕನು ತಪಶ್ಚರ್ಯೆ ಮಾಡಿದನು, ಅವನ ವಧೆ ಮಾಡಲಾಯಿತು.
* ಏಕಲವ್ಯನು ಅಭ್ಯಾಸದಿಂದ ಶಸ್ತ್ರಾಭ್ಯಾಸ ಶಿಕ್ಷಣ ಕರಗತ ಮಾಡಿಕೊಂಡನು, ಅವನ ಹೆಬ್ಬೆರಳನ್ನು ಕತ್ತರಿಸಲಾಯಿತು.
* ಛತ್ರಪತಿ ಶಿವಾಜಿ ಮಹಾರಾಜನು ರಾಜ್ಯಾಭಿಷೇಕದ ಬಗೆಗೆ ಅಧಿಕಾರಯುತವಾಗಿ ಹೇಳಿದನು, ಆದರೆ ಅವನನ್ನು ಶೂದ್ರ ಎಂಬುದಾಗಿ ಸಂಬೋಧಿಸಿ ಪಟ್ಟಾಭಿಷೇಕಕ್ಕೆ ನಿರಾಕರಿಸಲಾಯಿತು.
ದೊಂಬರು ಸಮಾಜದಲ್ಲಿನ ನೃತ್ಯ ಮಾಡುವ ಸ್ತ್ರೀಯರು ಅಲ್ಲಿನ ಪುರುಷರ ಹಾಸಿಗೆಯನ್ನು ಸಜ್ಜು ಮಾಡುತ್ತಾರೆ. ಸವರ್ಣೀಯ ಸಾಹುಕಾರರುಗಳು ದೊಂಬರ ಸ್ತ್ರೀಯರನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿರುತ್ತಾರೆ. ಅನಂತರ ಅವರು ಬಂದು ಹೋಗುವವರ ಎದುರು ಕುಣಿಯುತ್ತಾ ಅವರನ್ನು ಖುಷಿಪಡಿಸುವ ಮೂಲಕ ಅವರ ಕಡೆಯಿಂದ ಬಕ್ಷೀಸನ್ನು ಪಡೆದುಕೊಳ್ಳುತ್ತಾರೆ. ಇಲ್ಲಿ ಹೇಗೆ ಸಾಧ್ಯ ಶೀಲ, ಪಾತಿವ್ರತ್ಯ?
ಸತ್ಯ, ಶಿವ ಮತ್ತು ಸುಂದರ ಎಂಬ ಇವೆಲ್ಲವೂ ಕೇವಲ ಪಕ್ಷಪಾತತನದ ಕಪೋಲ ಕಲ್ಪನೆಗಳಾಗಿವೆ. ಯಾವ್ಯಾವುದೋ ಆಧಾರದಿಂದ ಸರ್ವೆಸಾಮಾನ್ಯ ಜನರನ್ನು ಶೋಷಣೆ ಮಾಡಲಾಗುತ್ತಿದೆ. ಇನ್ನು ಸತ್ಯ, ಶಿವ ಮತ್ತು ಸುಂದರ ಇವು ಸವರ್ಣ ಸಮಾಜದವರ ಸ್ವಾರ್ಥಿ ಕಲ್ಪನೆಗಳಾಗಿವೆ. ಅವುಗಳ ವ್ಯಾಖ್ಯಾನವನ್ನು ಬದಲಾಯಿಸಬೇಕಾದ ಅಗತ್ಯವಿದೆ. ಅವುಗಳಿಗೆ ಅತ್ಯಂತ ಐಹಿಕ ಮತ್ತು ಸಾಮಾಜಿಕೀಕರಣದ ಆಯಾಮವನ್ನು ನೀಡುವಂತಹ ಆವಶ್ಯಕತೆಯೂ ಇದೆ.
* ಮನುಷ್ಯನು ಎಲ್ಲಕ್ಕಿಂತಲೂ ಮೊದಲು ಮನುಷ್ಯನಾಗಿದ್ದಾನೆ ಎಂಬುದು ಸತ್ಯವಾಗಿದೆ.
* ಮನುಷ್ಯನ ಸ್ವಾತಂತ್ರ್ಯವೇ ಶಿವ ಆಗಿದೆ.
* ಮನುಷ್ಯನಲ್ಲಿನ ಮಾನವೀಯತೆಯು ಸೌಂದರ್ಯವಾಗಿದೆ.
ಕಾಲ್ಪನಿಕ ಸತ್ಯ, ಕಾಲ್ಪನಿಕ ಶಿವ, ಕಾಲ್ಪನಿಕ ಸೌಂದರ್ಯ ಎಂಬ ಇವುಗಳು ಹುಚ್ಚು ಕಲ್ಪನೆಗಳಾಗಿವೆ. ವಿಶ್ವದಲ್ಲಿ ಮನುಷ್ಯರಷ್ಟು ಸತ್ಯ ಮತ್ತು ಸುಂದರ ಎಂಬ ಬೇರೆ ಯಾವುದೇ ಸಂಗತಿಗಳು ಇಲ್ಲ. ಹಾಗಾಗಿಯೇ ಈ ಮನುಷ್ಯರ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಬಂಧುತ್ವ ಭಾವನೆಗಳ ಬಗೆಗೆ ಚರ್ಚೆ ಮಾಡುವುದು ಅತ್ಯವಶ್ಯವಾಗಿದೆ. ಈ ಚರ್ಚೆಯು ನಿಜವಾದ ಅರ್ಥದಲ್ಲಿ ದಲಿತ ಸಾಹಿತ್ಯದ ಸೌಂದರ್ಯಶಾಸ್ತ್ರದ ಚರ್ಚೆಯೇ ಆಗಿರುತ್ತದೆ, ಎಂಬುದಾಗಿ ನನಗೆ ಅನ್ನಿಸುತ್ತದೆ.
||ಶ್ರೇಯ||
ನನ್ನ ಬೀಗರಾದ ಅರುಣ ಮ. ಕಾಂಬಳೆ ಅವರ ಪತ್ನಿ ಕಾಂತಾ ಎಂಬುವವರು ಇತ್ತೀಚೆಗೆ ಬಾಣಂತಿತನದಲ್ಲಿಯೇ ದುಃಖಾಂತವಾಗಿ ಮರಣವನ್ನು ಹೊಂದಿದರು. ಅವರು ತಮ್ಮ ಹೆಂಡತಿಯ ಸ್ಮರಣಾರ್ಥವಾಗಿ ನನ್ನ ಗ್ರಂಥವನ್ನು ಪ್ರಕಾಶನ ಮಾಡಲು ನಿರ್ಧರಿಸಿದರು. ತನ್ನ ಪ್ರಿಯ ಪತ್ನಿಯ ನೆನಪಿಗಾಗಿ ತಾಜಮಹಲನ್ನು ಕಟ್ಟಿಸಿದ ಶಹಾಜಹಾನನು ಆಗ ನನಗೆ ನೆನಪಾದನು. ನನ್ನ ಜೀವನದಲ್ಲಿ ಸದಾ ನೆರಳಿನ ಹಾಗೆ ನೆರವಾಗಿ ನಿಂತಿರುವಂತಹ ನನ್ನ ಸ್ನೇಹಿತ ನಾ.ಮ. ಶಿಂದೆ ಮತ್ತು ಹೃಷಿಕೇಶ ಅಯಾಚಿತ ಅವರು ನನಗೆ ಸದಾ ಬೆಂಬಲವನ್ನು ನೀಡುತ್ತಾ ಬಂದಿದ್ದಾರೆ.
ಗ್ರಂಥವನ್ನು ಪ್ರಕಟಣೆ ಮಾಡುವಾಗ ನನ್ನ ಅಧಿಕಾರಿಗಳಾದ ಶರಚ್ಚಂದ್ರ ಬಡೋದೆಕರ ಅವರು ಅತ್ಯಂತ ಒಳ್ಳೆಯ ಸೂಚನೆಗಳನ್ನು ನೀಡಿದ್ದರು. ನನ್ನ ಸಹಕಾರಿಗಳಾದ ಆನಂದ ಯಾದವ ಮತ್ತು ಪ್ರಮೋದ ಕುಲಕರ್ಣಿ ಅವರ ಸಹಕಾರವೂ ನನಗೆ ಲಭಿಸಿದೆ. ಮುದ್ರಣಾದಿ ಕಾರ್ಯಗಳ ಜವಾಬ್ದಾರಿಯನ್ನು ವಿಜಯ ಚವ್ಹಾಣ ಅವರು ಸ್ವೀಕರಿಸಿದ್ದರು. ಅತ್ಯಂತ ತತ್ಪರತೆಯಿಂದ ಅಕ್ಷರಗಳನ್ನು ಜೋಡಿಸುವ ಕಾರ್ಯವನ್ನು ಸೌ. ಅನಿತಾ ಸುನೀಲ ಕೋಠವದೆ ಅವರು ಮಾಡಿದ್ದಾರೆ. ಇವರೆಲ್ಲರ ಪ್ರೇಮಯುತ ಪ್ರೋತ್ಸಾಹದಿಂದ ಮತ್ತು ಸಹಕಾರದಿಂದ ಸದರಿ ಗ್ರಂಥವು ವಾಚಕರ ಕೈಗೆ ನೀಡುವುದಕ್ಕೆ ಸಾಧ್ಯವಾಯಿತು.
ಡಾ. ಶರಣಕುಮಾರ ಲಿಂಬಾಳೆ
ಪರಿವಿಡಿ
೧. ದಲಿತ ಸಾಹಿತ್ಯ: ಸ್ವರೂಪ ಮತ್ತು ಪ್ರಯೋಜನ / ೧
೨. ದಲಿತ ಸಾಹಿತ್ಯ ಮತ್ತು ಅಂಬೇಡಕರವಾದ / ೨೮
೩. ದಲಿತ ಸಾಹಿತ್ಯ ಮತ್ತು ಮಾರ್ಕ್ಸ್‌ವಾದ / ೫೯
೪. ದಲಿತ ಸಾಹಿತ್ಯ ಮತ್ತು ಅಮೆರಿಕನ್ ನೀಗ್ರೋ ಸಾಹಿತ್ಯ / ೯೦
೫. ದಲಿತ ಸಾಹಿತ್ಯದ ಸೌಂದರ್ಯಪ್ರಜ್ಞೆ / ೧೧೭
೬. ಸಮಾರೋಪ / ೧೪೯
Reviews
There are no reviews yet.