ಭಾರತಂ ಮಿದಂ
ನನ್ನೆದೆಯೊಳಗೆ ದೇಶಾಭಿಮಾನದ ಬುಗ್ಗೆಯೊಂದು ಚಿಮ್ಮಿಸಿದ ಮೊದಲ ರಚನೆ ರಾಷ್ಟ್ರಕವಿ ಕುವೆಂಪು ಅವರ ಭಾರತಾಂಬೆಯೆ ಜನಿಸಿ ನಿನ್ನೊಳು ಧನ್ಯನಾದೆನು ದೇವಿಯೆ. ಈ ರಚನೆಯನ್ನು ನಾನೇ ರಾಗ ಸಂಯೋಜನೆ ಮಾಡಿ ಕಳೆದ ನಾಲ್ಕು ದಶಕಗಳಿಂದ ಗುನುಗುನಿಸುತ್ತ ಬಂದವನು. ಅದರಂಥ ವಾತ್ಸಲ್ಯದ, ವಿನಯದ, ಅಭಿಮಾನದ ಮತ್ತೊಂದು ರಚನೆಯನ್ನು ನಾನು ಕೇಳಿಲ್ಲವೆಂದೇ ಹೇಳಬೇಕು. ಮುಂದೊರೆದು ಈ ಸೊಗಸಿಗೆ ಸೊಗಸಾಗಿ ಸೇರಿದ ಬಕೀಂಚಂದ್ರ ಚಟರ್ಜಿಯವರ ವಂದೇ ಮಾತರಂ, ಗುರುದೇವ ರವೀಂದ್ರನಾಥ ಟ್ಯಾಗೋರ್‌ರ ಜನ ಗಣ ಮನ, ಸರ್ ಮೊಹಮ್ಮದ್ ಇಕ್ಬಾಲ್‌ರ ಸಾರೆ ಜಹಾಂಸೆ ಅಚ್ಛಾ, ಭಾರತೀಯ ಸಾಹಿತ್ಯ ಹಾಗೂ ಸಿನಿಮಾಲೋಕದ ಪ್ರಮುಖ ಗೀತ ರಚನಾಕಾರರಾದ ಕವಿ ಪ್ರದೀಪ್ ಅವರ ಎ ಮೇರೆ ವತನ್ ಕೆ ಲೋಗೊ, ಪ್ರೇಮ ಧವನ್‌ರ ಏ ಮೇರೆ ಪ್ಯಾರೆ ವತನ್, ಸಾಹಿರ್ ಲುಧಿಯಾನ್ವಿಯ ತು ಹಿಂದೂ ಬನೇಗಾ, ನ ಮುಸಲ್ಮಾನ ಬನೇಗಾ, ಮಹೇಂದ್ರ ಕಪೂರ್‌ರ ಮೇರೆ ದೇಶ್ ಕಿ ಧರತಿ, ರಾಜೇಂದ್ರ ಕೃಷ್ಣನ್ನರ ಜಹಾಂ ಡಾಲ್ ಡಾಲ್ ಪರ್, ಹಾಗೂ ಆನಂದ್ ಭಕ್ಷಿಯವರ ಝೆಂಡಾ ಊಂಚಾ ರಹೆ ಹಮಾರಾ, ವಿಜಯಿ ವಿಶ್ವ ತಿರಂಗಾ ಪ್ಯಾರಾಗಳೆಲ್ಲ ನನ್ನೊಳಗೆ ದೇಶಾಭಿಮಾನ ತುಂಬಿದ ಪದ್ಯಗಳು.
ಇವುಗಳಿಗೆ ಪೂರಕವಾಗಿ ನಾನು ಓದಿದ ಸ್ವಾಮಿ ವಿವೇಕಾನಂದ, ಶ್ರೀ ರಾಮತೀರ್ಥ, ಆನಿಬೆಸೆಂಟ್, ಅಬುಲ್ ಕಲಾಂ ಆಜಾದ್, ರೋಮನ್ ರೋಲಾ, ಹೆರ್ಮನ್ ಹೆಸ್, ಎ.ಪಿ.ಜೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ರಾಷ್ಟ್ರ ಕಲ್ಪನೆಯ ಬರಹಗಳು ಹಾಗೂ ಇವೆಲ್ಲಕ್ಕೂ ಕಳಶವಿಟ್ಟಂತೆ ಓಶೋ ಅವರ ನನ್ನ ಪ್ರಿಯ ಭಾರತ ಈ ಸಂದರ್ಭದಲ್ಲಿ ಸ್ಮರಣಾರ್ಹ.
ಈ ಸನಾತನ ನೆಲದ ಶೋಧದಲ್ಲಿ ಇದು ನಾನು ದಕ್ಕಿಸಿಕೊಂಡ ಬೊಗಸೆ ನೀರಷ್ಟೆ. ಭಾರತ ಅನಂತವಾಗಿದೆ ಈ ದಾಖಲೆಗಳ ಹಿಂದೆಯೂ ಹಾಗೂ ಇದರಾಚೆಗೂ.
–ರಾಗಂ
ಬಾವುಟವಿಲ್ಲದೆ ಭಾರತವೆ?
ಕೋಟ ಶಿವರಾಮ ಕಾರಂತರ ಕಾದಂಬರಿ ಅಳಿದ ಮೇಲೆ ನನ್ನೆದೆಯೊಳಗೆ ಅಳಿಯದ, ಅಳುಕಿಸಲಾಗದ ವಿಷಾದದ ಗೆರೆಯೊಂದನ್ನು ಎಳೆದು ಬಿಟ್ಟಿತು. ಎರಡು ದಶಕಗಳ ಹಿಂದಿನ ಮಾತು. ವಿನಾಕಾರಣದ್ದೊ ಅಥವಾ ಕಾರಣದ್ದೊ ಅದು ಇಂದಿಗೂ ಸ್ಪಷ್ಟವಾಗಿಲ್ಲ. ಅಂಥ ಒಂದು ಸಿಟ್ಟು-ಸಂಕಟ ಹೊತ್ತುಕೊಂಡು ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಹೋಗುವಾಗ, ಫೂಟ್‌ಪಾತ್ ಮೇಲೆ ಹಚ್ಚಿದ ಹಳೆಯ ಪುಸ್ತಕದಂಗಡಿಯಲ್ಲಿ ಇಪ್ಪತ್ತು ರೂಪಾಯಿಗೆ ಅಳಿದ ಮೇಲೆ ಕಾದಂಬರಿಯನ್ನು ಕೊಂಡೆನೇನೊ. ಈಗಲೂ ನನ್ನ ಬಳಿ ಇರುವ ಈ ಕಾದಂಬರಿಯನ್ನು ಎತ್ತಿಕೊಂಡಾಗಲೆಲ್ಲ ಮನಸ್ಸು ಹೇಳುತ್ತಿರುತ್ತದೆ ಇದು ಹಳೆಯದು ಆದರೆ, ಮೇಲ್ಪುಟ ಹರಿದು, ಜೀರ್ಣಾವಸ್ತೆಯಲ್ಲಿರುವ ಕಾದಂಬರಿ ಮಾತ್ರ ಖಂಡಿತವಾಗಿಯೂ ಹಳೆಯದಲ್ಲ.
ಕಾರಣಗಳು ಹಲವು. ಮುಖ್ಯವಾಗಿ, ಈ ಕಾದಂಬರಿಯ ನಾಯಕ ಯಶವಂತ ತನ್ನ ಹೆಜ್ಜೆ ಗುರುತುಗಳನಿಲ್ಲೇ ಎಲ್ಲಾದರೂ ಬಿಟ್ಟಿರಬಹುದೇ ಎಂದು ಮುಂದೊಂದು ಕಾಲಕ್ಕೆ ಇಡೀ ದಕ್ಷಿಣ ಹಾಗೂ ಉತ್ತರ ಕನ್ನಡಗಳ ಹಳ್ಳಿ-ಕಾಡು-ಕರಾವಳಿಯ ಸುತ್ತುವಂತೆ ಮಾಡಿತು. ಕೋಟಕ್ಕೂ ಹೋಗಿ ಬಂದೆ. ಕಡಲಂತೆ ಕಾಡಿದ ಕಾರಂತರ ನಿತಾಂತ ಬರಹ ಮೋಹಿಸಿ ಬದುಕಿನ ಮುಸ್ಸಂಜೆಯ ಗಳಿಗೆಯಲ್ಲಿದ್ದ ಅವರನ್ನು ಧಾರವಾಡ, ಮೈಸೂರುಗಳಲ್ಲಿ ನೋಡಿದೆ, ಮಾತಾಡಿದೆ ಮತ್ತು ಅನುಭವಿಸಿದೆ. ಫೋಟೊ ತೆಗೆಯಿಸಿಕೊಳ್ಳಲಿಲ್ಲ.
ಕ್ಷಮಿಸಿ, ಅಳಿದ ಮೇಲೆ ಕಾದಂಬರಿಗೆ ಅವರು ಬರೆದ ಮುನ್ನುಡಿಯ ಕೆಲವು ಸಾಲುಗಳ ಕುರಿತು ಚರ್ಚಿಸಬೇಕಾದ ನಾನು ಏನೇನೊ ಮಾತಾಡಿಬಿಟ್ಟೆ. ಬಹುತೇಕ ಕಾದಂಬರಿಯ ಲಕ್ಷಣಗಳಲ್ಲಿ ಒಂದು, ಹೀಗೆ ಲಂಭಿಸುವುದು.
ಮುನ್ನುಡಿಯಲ್ಲಿ ಕಾರಂತರು ಕೇಳುತ್ತಾರೆ, ಕಾದಂಬರಿಯನ್ನೇನೊ ಬರೆಯುತ್ತಿದ್ದೇನೆ. ಆದರೆ ಬರೆದ ಕಾದಂಬರಿಗೆ ಮುನ್ನುಡಿ ಬರೆಯುವುದೆಂದರೆ ಉದಾಸೀನ. ಒಂದು ಕಾದಂಬರಿ ತಿಳಿಸಲಾರದ್ದನ್ನು ಮುನ್ನುಡಿ ತಿಳಿಸಬೇಕೆ? ತಿಳಿಸೀತೆ? ಬರೆದ ಕಾದಂಬರಿಯೇ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಲಾರದೆ ಹೋದರೆ ಬರೆದೇನು ಫಲ? ಎಂದು.
ಹೌದು, ಇದು ಹಾಕಿಕೊಳ್ಳಲೇಬೇಕಾದ ಪ್ರಶ್ನೆ. ಹಾಗೆ ನೋಡಿದರೆ ಪ್ರತಿ ಬರಹವೂ ಏನೋ ಒಂದನ್ನು ತಿಳಿಸುವ ಹಂಬಲದೊಂದಿಗೆ ಪ್ರಾರಂಭವಾಗುತ್ತದೆ. ಆದರೆ ಸೃಜನ ಕ್ರಿಯೆಯ ಇಷ್ಟೊಂದು ವಿಶಾಲ ಲೋಕ ಸಂದರ್ಶಿಸಿ, ಸೃಷ್ಠಿಸಿ ಬಂದಾದ ಮೇಲೂ ನನ್ನನ್ನು ಕಾಡಿದ ಒಂದು ಪ್ರಶ್ನೆ ಬರಹವೆಂದರೇನು? ಅದು ಯಾವುದರ ಫಲಿತಾಂಶ? ನನ್ನೆದೆಯಲ್ಲಿ ಬರಹವೆಂಬ ಕ್ರಿಯೆ ಮುಗಿದ ಮೇಲೂ ಉಳಿಯಿತಲ್ಲ, ಅದು ದಾಖಲಾತಿಯ ಅಸಾಧ್ಯತೆಯ ಪ್ರತಿಫಲವೊ ಅಥವಾ ಅಕ್ಷರಗಳಲ್ಲಿ ಏನೋ ಒಂದಿಷ್ಟು ರವಾನಿಸಿ ಬಿಟ್ಟೆನಲ್ಲ, ನಿಜವಾಗಿ ಅದುವೇ ನಾನು ಹೇಳಬೇಕೆಂದಿರುವುದೊ? ಇಂದಿಗೂ ಈ ಪ್ರಶ್ನೆ ಬಗೆ ಹರಿದಿಲ್ಲ. ಬಹುತೇಕ ಅದು ಬಗೆ ಹರಿಯುವ ವೇಳೆಗೆ ನಾನಿರುವುದಿಲ್ಲ.
ಜಗದ್ವಂದ್ಯ ಭಾರತಂ ಬಾವುಟದಂತೆಯೇ ಎದ್ದು ನಿಂತ ಒಂದು ಆಲೋಚನೆ. ಹಾಗೆ ನೋಡಿದರೆ ಬುದ್ಧ ಮಹಾರಾಜನ ಕುರಿತು ಕಾದಂಬರಿಯೊಂದನ್ನು ಬರೆಯಬೇಕು, ಅದೂ ಬೆಂಗಳೂರಿನಲ್ಲಿರುವಾಗಲೇ ಎಂದುಕೊಂಡವ. ಆದರೆ ನಾವು ಅಂದುಕೊಳ್ಳುವುದಷ್ಟೇ, ನಿರ್ಧಾರ ಅದ್ಯಾವುದೋ ಬೇರೆಯದೇ ಶಕ್ತಿಯಾಗಿರುತ್ತದೆ. ನಮ್ಮನ್ನು ಕೇವಲ ಸಾಧನವಾಗಿಸಿ ಕೊಳ್ಳುವ ಆ ಶಕ್ತಿಗೆ ಅದರದೇ ಉದ್ದೇಶ ಹಾಗೂ ಗುರಿಗಳಿವೆ. ಹೀಗಾಗಿಯೇ ಇರಬಹುದು ನನ್ನ ಕಾದಂಬರಿಯ ಪಯಣ ಭಾರತದ ಬಾವುಟದೊಂದಿಗೆ ಆರಂಭವಾಗಿದೆ.
ಒಂದು ಕಾಲಕ್ಕೆ ನನ್ನ ಶಿಕ್ಷಣ ಹಾಗೂ ಲೋಕ ಜೀವನದ ಆರಂಭದ ಪುಟವಾದ ಧಾರವಾಡ ಹಾಗೂ ಅಲ್ಲಿ ಮೈದಾಳುವ ಬಾವುಟವನ್ನು ಓದದೆ ಬಿಹಾರಕ್ಕೆ ಹೋಗಿ ಬುದ್ಧನನ್ನು ಬರೆಯುವುದೆಂದರೇನು? ತಪ್ಪು ಕ್ರಮ ಎನ್ನಿಸಿರಬೇಕು. ಹೀಗಾಗಿ ಬಾವುಟಕ್ಕೆ ಬಾಗಿದೆ. ಬುದ್ಧನನ್ನು ಬದಿಗಿರಿಸಿ ರಾಜಧಾನಿ ಬೆಂಗಳೂರಿನಲ್ಲಿ ಕುಳಿತು ಕರ್ನಾಟಕದ ರಾಜಕೀಯ ನಿರ್ಲಜ್ಜ ನಾಟಕವನ್ನು ನೋಡುತ್ತ ಈ ಕಾದಂಬರಿಯನ್ನು ಬರೆದೆ. ಅಂದಿನ ಕರ್ನಾಟಕದ ರಾಜಕೀಯ ಸಂದರ್ಭ ಬರಹಗಾರನ ಪಾಲಿಗೆ ತಲ್ಲಣದ್ದೂ ಅಲ್ಲ ತಾಕಲಾಟದ್ದೂ ಅಲ್ಲ, ನಿರ್ವೀಣ್ಯದ್ದು. ಪ್ರಸ್ತುತ ಕಾದಂಬರಿ ಇದೆಲ್ಲವನ್ನೂ ಗಮನಿಸಿದೆಯೇ ವಿನಃ ಗರ್ಭೀಕರಿಸಿ ಕೊಂಡಿಲ್ಲ. ಅದರ ಕಾಳಜಿ ಮತ್ತು ಗುರಿ ಅದರ ಕಥನವಷ್ಟೆ.
ಬಾವುಟವಿಲ್ಲದ ಭಾರತದ ಪರಿಕಲ್ಪನೆ ಅಸಂಭವವೆ? ಹೌದು. ಜಗತ್ತಿನ ಅತ್ಯಂತ ಪುರಾತನ ನಾಗರಿಕತೆಗಳಲ್ಲಿ ಒಂದಾದ ಭಾರತ ಮಹಾಕಾವ್ಯಗಳ ಕಾಲದಿಂದಲೂ ಬಾವುಟವನ್ನು ಕುರಿತು ಪ್ರಸ್ತಾಪಿಸುತ್ತದೆ. ಗುಪ್ತರ ಕಾಲದಿಂದ ಮಧ್ಯಯುಗೀನ ಮುಸ್ಲಿಂ ಆಳ್ವಿಕೆಯವರೆಗಿನ ಬಾವುಟಗಳ ಕಥೆ ಒಂದಾದರೆ, ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಸಂಪೂರ್ಣ ಸ್ವರಾಜ್ಯದ ಹೋರಾಟದವರೆಗಿನ ಬಾವುಟದ ಕಥೆ ಮತ್ತೊಂದು ರೀತಿಯದು. ಭಾರತದ ರಾಜಕೀಯ ಸ್ಥಿತ್ಯಂತರಗಳೊಂದಿಗೆ ಬಾವುಟದ ವಿನ್ಯಾಸ-ವಿಕಾಸದಲ್ಲಿಯೂ ಕೂಡಾ ಎಷ್ಟೆಲ್ಲಾ ಬದಲಾವಣೆಗಳಾಗಿವೆ. ಇಡೀ ಭಾರತವನ್ನು ಆಳಿದ ಮೌರ್ಯರ ಬಾವುಟ ಒಂದು ತೆರನಾದರೆ ಮೊಘಲ್ ಹಾಗೂ ಬ್ರಿಟಿಷ್ ಭಾರತದ ಬಾವುಟ ಮತ್ತೊಂದು ರೀತಿಯದಾಗಿದ್ದವು. ಸ್ವಾತಂತ್ರ್ಯ ಸಂಗ್ರಾಮದ ಹಲವು ಹಂತಗಳಲ್ಲಿ ದೇಶದ ರಾಜಕೀಯ ಹಾಗೂ ಭೌಗೋಳಿಕ ಪರಿಕಲ್ಪನೆಯಷ್ಟೇ ಗಂಭೀರವಾಗಿ ಚರ್ಚೆಯಾದ ಬಾವುಟ ತಿರಂಗಾ ಈಗ ನಮ್ಮೆಲ್ಲರ ಅಭಿಮಾನ, ಸ್ವಾತಂತ್ರ್ಯ ಹಾಗೂ ಆತ್ಮೋನ್ನತಿಯ ಸಂಕೇತವಾಗಿ ಹಾರಾಡುತ್ತಿದೆ. ಈ ನಿಟ್ಟಿನಲ್ಲಿ ಭಾರತದ ಕಥೆ ಎನ್ನುವುದು ಬಾವುಟದ ಕಥೆಯೇ ಆಗಿದೆ. ಪ್ರಸ್ತುತ ಕಾದಂಬರಿ ಜಗದ್ವಂದ್ಯ ಭಾರತಂ ಬಾವುಟದ ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿದೆ.
ರಾಗಂ
ಪರಿವಿಡಿ
ಸವಿನುಡಿ / vii
ಭಾರತಂ ಮಿದಂ / ix
ಬಾವುಟವಿಲ್ಲದೆ ಭಾರತವೆ? / x
ಶಿರಸಾ ನಮಾಮಿ / xiii
ಜಗದ್ವಂದ್ಯ ಭಾರತಂ / ೧
Reviews
There are no reviews yet.