ನನ್ನ ಮಾತು
ಕನ್ನಡದಲ್ಲಿ ಸಾಹಿತ್ಯ ಸಂಶೋಧನ ವಿಧಾನಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಕೃತಿಗಳು ಪ್ರಕಟವಾಗಿವೆ. ಆದರೆ ಇದು ಕೇವಲ ಕನ್ನಡ ಸಾಹಿತ್ಯ ಕ್ಷೇತ್ರದ ಅಧ್ಯಯನ ವಿಧಾನಗಳಿಗೆ ಮಾತ್ರ ಸೀಮಿತವಾದ ಕೃತಿಯಲ್ಲ. ಇದು ಅಂತರ್‌ಶಿಸ್ತೀಯ ಅಧ್ಯಯನವನ್ನು ಮಾಡುವ ಸಂಶೋಧಕರಿಗೆ ಮಾರ್ಗದರ್ಶನ ನೀಡಬಹುದಾದ ಕೃತಿಯಾಗಿದೆ. ಕನ್ನಡ ವಿಶ್ವವಿದ್ಯಾಲಯವು ಸಹ ಈ ಬಗೆಯ ಕೃತಿಗಳನ್ನು ಪ್ರಕಟಿಸಿ ಸಮಕಾಲೀನ ಸಂಶೋಧಕರಿಗೆ ಮಾರ್ಗದರ್ಶನ ಮಾಡುತ್ತಿದೆ. ಪ್ರಸ್ತುತ ಕೃತಿ ವಿಭಿನ್ನ ಜ್ಞಾನಶಿಸ್ತುಗಳಿಗೆ ಸಂಬಂಧಪಟ್ಟಂತೆ ನಾಡಿನ ಅನೇಕ ಹಿರಿಯರ ತಿಳುವಳಿಕೆಯನ್ನು ಒಳಗೊಂಡಿರುವುದು ವಿಶೇಷ.
ಅನ್ಯಜ್ಞಾನ ಶಿಸ್ತನ್ನು ಅರ್ಥೈಸಿಕೊಳ್ಳುವಾಗ ಕನ್ನಡದ ಜೊತೆಗೆ ಬೇರೊಂದು ಜ್ಞಾನಶಿಸ್ತಿನಲ್ಲಿ ಅಧ್ಯಯನ ಮಾಡುವಾಗ ಇಂತಹ ಲೇಖನಗಳ ಅವಶ್ಯಕತೆಯಿರುತ್ತದೆ. ಜೊತೆಗೆ ಇದಕ್ಕೆ ಪೂರಕವಾಗಿ ಎಚ್.ಎಸ್. ರಾಘವೇಂದ್ರರಾವ್ ಅವರ ‘ನಿಲುವು’(ಲೇಖನ: ಸಾಹಿತ್ಯದ ಅಧ್ಯಯನ ಮತ್ತು ಇತರ ಶೈಕ್ಷಣಿಕ ಶಿಸ್ತುಗಳು) ಕೃತಿಯನ್ನು ಗಮನಿಸಬೇಕು. ಕನ್ನಡದಲ್ಲಿ ಬಹುಶಃ ಈ ಕೃತಿಯನ್ನು ನೋಡದೆ ಇತರ ಜ್ಞಾನಶಿಸ್ತುಗಳ ವಿಮರ್ಶೆಯ ಬಗ್ಗೆ ಮಾತನಾಡುವುದು ಅಷ್ಟೊಂದು ಸಮಂಜಸವಾದುದ್ದಲ್ಲ.
ಕನ್ನಡದಲ್ಲಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಸಂಶೋಧನ ಲೇಖನಗಳು ಸಿಗಬಹುದು. ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಹೀಗೆ ಹಲವು ಶಾಸ್ತ್ರಗಳನ್ನು ಕುರಿತಾದ ಸಂಶೋಧನ ಲೇಖನಗಳಿಗಾಗಿ ಇಂಗ್ಲಿಷನ್ನು ಅವಲಂಬಿಸಬೇಕಾಗಿದೆ. ಆದರೆ ಕನ್ನಡದಲ್ಲಿ ಈ ತರಹದ ಲೇಖನಗಳು ಸಿಗುವುದು ಬಹಳ ಕಡಿಮೆ. ಈ ಕಾರಣಕ್ಕಾಗಿ ಇಂತಹ ಕೃತಿಯನ್ನು ಸಂಪಾದನೆ ಮಾಡಲು ಪ್ರಯತ್ನಿಸಿರುವೆ. ಒಂದು ಮಾತಂತೂ ಸತ್ಯ; ಈ ಹಲವು ಶಾಸ್ತ್ರಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಸಂಶೋಧನೆ ಮಾಡುವ ಪ್ರತಿಯೊಬ್ಬ ಸಂಶೋಧನಾರ್ಥಿಗೂ ಒಂದೊಂದು ಸಂಶೋಧನ ಲೇಖನ ಉಪಯೋಗವಾಗಬಲ್ಲದು ಎಂಬ ಖುಷಿ ನನಗಿದೆ. ಜೊತೆಗೆ ಇದನ್ನು ಸಂಶೋಧನ ವಿದ್ಯಾರ್ಥಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬ ಅಳುಕು ಸಹ ನನ್ನಲ್ಲಿದೆ.
ಪ್ರಸ್ತುತ ಟಿಪ್ಪಣಿಗಳು ಒಂದೊಂದು ವಿಭಿನ್ನ ಆಯಾಮದಲ್ಲಿ ವಿಧಿವಿಧಾನವನ್ನು ಕುರಿತು ತಿಳಿಸುತ್ತವೆ. ಇವು ಕರ್ನಾಟಕ ಅಧ್ಯಯನ ಮಾದರಿಗಳಲ್ಲಿ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮೊದಲಾದ ಶಾಸ್ತ್ರಗಳ ಅಧ್ಯಯನದ ವಿಧಾನದ ಕೆಲವು ತಾತ್ವಿಕ ಸಮಸ್ಯೆಗಳಿಗೆ ಸಂಬಂಧಿಸಿವೆ. ಈ ಸಂದರ್ಭದಲ್ಲಿ ಚಿಂತಕರು ತಮ್ಮದೇ ಆದ ರೀತಿಯಲ್ಲಿ ಇವನ್ನು ಬಿಡಿಸಲು ಪ್ರಯತ್ನ ಮಾಡಿದ್ದಾರೆ. ಜೊತೆಗೆ ಸಂಶೋಧಕರು ತಮ್ಮ ತಮ್ಮ ಅಧ್ಯಯನಗಳ ತಾತ್ವಿಕತೆಯನ್ನು ಕಟ್ಟಿಕೊಳ್ಳಲು ಈ ಟಿಪ್ಪಣಿಗಳು ಸಹಕಾರಿಯಾಗಬಲ್ಲವು. ಆದರೆ ಈ ಹಿರೀಕರು ಸಮಸ್ಯೆಗಳನ್ನು ಬಿಡಿಸಿದ ಹಾಗೆಯೆ, ಹೊಸ ಹೊಸ ಸಮಸ್ಯೆಗಳನ್ನು ನಿರ್ಮಾಣ ಕೂಡ ಮಾಡಿಟ್ಟಿದ್ದಾರೆ. ನಾನು ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಶೋಧನೆಗೆಂದು ಹೋದಾಗ ಅಲ್ಲಿ ಬಂದಿರುವ ಅನೇಕ ವಿಭಾಗದ ಸಂಶೋಧನ ವಿದ್ಯಾರ್ಥಿಗಳು ನನ್ನಂತೆ ತಮ್ಮ ತಮ್ಮ ಥೀಸಿಸ್‌ಗಳಿಗೆ ಅಧ್ಯಯನದ ಸ್ವರೂಪ ಮತ್ತು ವಿಧಾನಗಳನ್ನು ಕಟ್ಟಿಕೊಳ್ಳುವಲ್ಲಿ ಹರಸಾಹಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಕನ್ನಡ ಸಾಹಿತ್ಯಕ್ಕೆ ಹೊರತುಪಡಿಸಿದರೆ ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದ ವಿಷಯಕ್ಕೆ ಮೆಥಡಾಲಜಿಯನ್ನು ಕಟ್ಟಿಕೊಳ್ಳುವಾಗ ಕನ್ನಡದ ಬರೆಹಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದರು. ಇದಕ್ಕೆ ಕಾರಣ ಬಹುತೇಕರು ಗ್ರಾಮೀಣ ಭಾಗದಿಂದ ಬಂದಂತಹ ಸಂಶೋಧಕರಾಗಿದ್ದರು. ಅವರಿಗೆ ಇಂಗ್ಲಿಷ್‌ನಲ್ಲಿದ್ದ ಲೇಖನಗಳ ಭಾಷೆ ಗೊತ್ತಿದ್ದಂತೆ ಕಾಣುತ್ತಿರಲಿಲ್ಲ. ಹಾಗಾಗಿ ಸಂಶೋಧನಾರ್ಥಿಗಳು ಕನ್ನಡದಲ್ಲಿ ಆಯಾ ವಿಷಯಗಳಿಗೆ ಅನುಗುಣವಾಗಿ ವಿಷಯಗಳನ್ನು ಹುಡುಕುತ್ತಿದ್ದರು. ಅವರಿಗೆ ಸಿಕ್ಕಿದ್ದು ಅಷ್ಟಕ್ಕಷ್ಟೆ. ಕನ್ನಡದಲ್ಲಿ ಪ್ರಕಟವಾದ ಕನ್ನಡ ಸಂಶೋಧನ ವಿಧಾನಗಳನ್ನು ಹುಡುಕುವ ಹಿನ್ನೆಲೆಯಲ್ಲಿ ನನಗೆ ಈ ಆಲೋಚನೆ ಆಗಲೇ ಹುಟ್ಟಿತ್ತು. ಕನ್ನಡದಂತೆ ಇನ್ನುಳಿದ ಜ್ಞಾನಶಿಸ್ತುಗಳಲ್ಲಿ ಮುಖ್ಯವಾಗಿ ಕನ್ನಡದಲ್ಲಿ ಪ್ರಕಟವಾದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರದ ವಿಷಯಗಳಿಗೆ ಸಂಬಂಧಿಸಿದ ರಿಸರ್ಚ್ ಮೆಥಡಾಲಜಿಯ ಲೇಖನಗಳು ಸಿಕ್ಕವು. ಜೊತೆಗೆ ಸಂಶೋಧನೆಯಲ್ಲಿ ಟಿಪ್ಪಣಿ ಮಾಡಿಕೊಳ್ಳುವ ವಿಧಾನ ಎಂತಹದ್ದು; ಸಂಶೋಧನೆ ಮತ್ತು ವಿಮರ್ಶೆ ಎರಡೂ ಒಂದೆಯೇ ಎಂಬ ಜಿಜ್ಞಾಸೆಗೆ ಚಿದಾನಂದಮೂರ್ತಿ ಯವರ ಒಂದು ಲೇಖನ ಜಬಾಬು ನೀಡುತ್ತದೆ. ಹೀಗೆ ಆಯಾ ವಿಷಯದ ಕೊರತೆಯನ್ನು ತುಂಬಿಕೊಳ್ಳಲು ಇಲ್ಲಿನ ಲೇಖನಗಳು ನೆರವಾಗುತ್ತವೆ. ಈ ದೃಷ್ಟಿಯಿಂದ ಈ ಬಗೆಯ ವಿಧಿವಿಧಾನಗಳ ಸಂದರ್ಭದಲ್ಲಿ ಸಂಶೋಧಕರು ಹೇಗೆ ಮುಂದುವರಿಯಬೇಕು ಎನ್ನುವ ಬರೆಹಗಳನ್ನು ಸೇರಿಸಿ ಪ್ರಕಟಿಸಲು ಮುಂದಾಗಿರುವೆ.
ಇಂತಹ ಸಮಸ್ಯೆಗಳು ನನ್ನ ಸಂಶೋಧನಾ ಗೆಳೆಯರ ಒಡನಾಟದಲ್ಲಿದ್ದಾಗ ಗೋಚರ ವಾಗುತ್ತಿದ್ದವು. ಮುಖ್ಯವಾಗಿ ಇವು ವೈಯಕ್ತಿಕವಾಗಿ ನಾನು ಮತ್ತು ನನ್ನ ಸಂಶೋಧನ ಸ್ನೇಹಿತರು ದಿನನಿತ್ಯ ಎದುರಿಸುವ ಸಂಗತಿಗಳಾಗಿದ್ದವು. ಸಂಶೋಧನ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸ ವ್ಯಾಪಕವಾಗಿ ನಡೆಯಬೇಕಾಗಿದೆ. ಈ ದೃಷ್ಟಿಯಿಂದ ಈ ಲೇಖನಗಳು ವೈವಿಧ್ಯಮಯವಾಗಿವೆ. ಇಲ್ಲಿನ ಟಿಪ್ಪಣಿಗಳು ಆಯಾ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವಿಸ್ತಾರವಾಗಿ ಚರ್ಚಿಸಿ, ಪರಿಹಾರ ಕಂಡುಹಿಡಿಯುವ ವಿಧಾನಕ್ಕಿಂತ, ಅವುಗಳ ಮೇಲೆ ಪ್ರಶ್ನೆ ಎತ್ತುವ ಮತ್ತು ಸದ್ಯಕ್ಕೆ ಹೊಳೆದ ಹೊಳಹುಗಳನ್ನು ಹಂಚಿಕೊಳ್ಳುವಂತೆ ಆಯಾ ವಿದ್ವಾಂಸರು ಮಾಡಿದ್ದಾರೆ. ಇಲ್ಲಿನ ಲೇಖನಗಳು ಅಧ್ಯಯನಗಳನ್ನು ಹಲವು ಆಯಾಮಗಳಲ್ಲಿ ನಡೆಸಲು ದಿಕ್ಸೂಚಿಗಳಾಗಿವೆ. ಇಂತಹ ಬರೆಹಗಳು ಒಮ್ಮೆ ರಚನೆಯಾಗುತ್ತವೆ. ಅವನ್ನು ಶ್ರದ್ಧೆಯಿಂದ ಪರಿಪಾಲಿಸುವುದು ಮತ್ತು ಅನ್ವಯಮಾಡಿ ಅಧ್ಯಯನಿಸುವುದು ಮಾತ್ರ ತಮ್ಮ ಕೆಲಸ ಎಂಬ ಆಶಯ, ಮಾನವಿಕ ಮತ್ತು ಸಮಾಜ ವಿಜ್ಞಾನ ಕ್ಷೇತ್ರಕ್ಕೆ ಸಂಶೋಧನೆಗೆಂದು ಬರುವವರಲ್ಲಿ ವ್ಯಾಪಕವಾಗಿ ಬೇರು ಬಿಟ್ಟಂತೆ ಕಾಣುತ್ತದೆ. ಅಂತೆಯೇ ಸಂಶೋಧನ ಮಾರ್ಗದರ್ಶಕ ಕೃತಿಗಳು ಯಾವ ಬದಲಾವಣೆಯೂ ಇಲ್ಲದೆ, ಹಲವು ವರುಷಗಳಿಂದ ಮರುಮುದ್ರಣ ಆಗುತ್ತಿರುವುದು. ಇದಕ್ಕೆ ಈ ಲೇಖನಗಳು ಸಹ ಹೊರತಾಗಿಲ್ಲ. ಇವುಗಳಿಂದ ಬಿಡಿಸಿಕೊಂಡು ನಮ್ಮದೇ ನೆಲೆಯಲ್ಲಿ ಸಂಶೋಧನ ವಿಧಾನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಹೀಗಿರುವಾಗ ನಮ್ಮ ಬದುಕು ಮತ್ತು ನಾವು ಬದುಕುವ ಲೋಕ ಬದಲಾಗುತ್ತಿರುವುದರಿಂದ ಅದರ ಸುತ್ತಮುತ್ತ ಆವರಿಸಿರುವ ಘಟನೆಗಳಿಗೂ ಅಧ್ಯಯನ ವಿಧಾನಗಳಿಗೂ ನೇರ ಸಂಬಂಧ ಇದೆ. ಹೀಗಿರುವಾಗ ನಮ್ಮ ನೋಟಗಳು ಹಿಂದಿನವ ರಂತೆಯೇ ಇರಲು ಹೇಗೆ ಸಾಧ್ಯ? ಅವು ನಮ್ಮ ಸಮಕಾಲೀನ ಬದುಕಿನ ಜತೆ ಅರ್ಥಪೂರ್ಣ ವಾಗಿ ಸಂಬಂಧವನ್ನು ಮರುಸ್ಥಾಪಿಸಿಕೊಳ್ಳುವಂತೆ ಹೊಸದಾಗಿ ಭಿನ್ನವಾಗಿ ಇರಬೇಕು. ಹೀಗಿರುವಾಗ ನಮ್ಮ ಅಧ್ಯಯನ ವಿಧಾನಗಳೂ ಬದಲಾಗಬೇಕು. ಅದಕ್ಕೆ ರಹಮತ್ ತರೀಕೆರೆಯವರು ಅವರ ‘ಕನ್ನಡ ಸಂಶೋಧನೆ ತಾತ್ವಿಕ ವಿಚಾರ’ ಎಂಬ ಕೃತಿಯಲ್ಲಿ ಹೇಳುವಂತೆ: “ಅಧ್ಯಯನ ವಿಧಾನವೆಂದರೆ ಮತ್ತೇನು ಅಲ್ಲ. ಕಣ್ಮುಂದಿನ ಲೋಕವನ್ನು ನೋಡುವ ಚಲನಶೀಲವೂ ಸೂಕ್ಷ್ಮವೂ ಸಂವೇದನ ಶೀಲವೂ ಆದ ದೃಷ್ಟಿಕೋನ; ಈ ದೃಷ್ಟಿಕೋನ ನಿರಂತರವಾಗಿ ಜೀವಂತವೂ ಸಮಕಾಲೀನವೂ ಆಗಿರಬೇಕಾದ ಕಾರಣ, ಅಧ್ಯಯನ ವಿಧಾನಗಳ ಹುಡುಕಾಟ ಕೂಡ ನಿರಂತರವಾಗಿರುತ್ತದೆ. ಇದು ಸರಳವಾದ ಆದರೆ ಬಹಳ ಮಹತ್ವದ ವಿಷಯ”(ಅರಿಕೆ, ೨೦೦೯, ಪುಟ viii). ಅಂತಹ ಹುಡುಕಾಟದ ಸಣ್ಣ ಪ್ರಯತ್ನವನ್ನಾದರೂ ಈ ಕೃತಿಗಳಲ್ಲಿರುವ ಲೇಖನಗಳು ಮುಂಬರುವ ಸಂಶೋಧಕರಿಂದ ಮಾಡಿಸುತ್ತವೆ ಎಂಬ ಭರವಸೆ ಇದೆ.
ಈ ಲೇಖನಗಳನ್ನು ಬರೆದ ಲೇಖಕರಲ್ಲಿ ಶ್ರೀನಿವಾಸ ಹಾವನೂರು, ಯು. ಸೂರ್ಯನಾಥ್ ಕಾಮತ್ ಮತ್ತು ಪ್ರೊ. ಎಚ್.ಎಂ.ಮರುಳಸಿದ್ಧಯ್ಯ ಅವರು ಈಗಾಗಲೇ ನಿಧನ ಹೊಂದಿದ್ದಾರೆ. ಅವರ ಕುಟುಂಬದ ಸದಸ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತು. ಆ ವಿದ್ವಾಂಸರು ಬರೆದ ಲೇಖನಗಳನ್ನು ನನ್ನ ‘ಸಂಶೋಧನ ಆಯಾಮಗಳು’ ಸಂಪಾದಿತ ಕೃತಿಯಲ್ಲಿ ಬಳಸಿಕೊಂಡು ಪ್ರಕಟಿಸಬಹುದೇ ಎಂದು ಕುಟುಂಬದ ಸದಸ್ಯರನ್ನು ಕೇಳಿದಾಗ, ಅವರು ಆಸ್ಥೆಯಿಂದ ಒಪ್ಪಿ ಯಥಾವತ್ತಾಗಿ ಬಳಸಿಕೊಳ್ಳಬಹುದು, ಆದರೆ ಅವನ್ನು ಎಡಿಟ್ ಮಾಡಬೇಡಿ ಎಂದು ಸೂಚನೆ ನೀಡಿದರು. ಆಗಲಿ ಎಂದೆ. ಆದರೂ ನನಗೆ ಬಹಳ ಖುಷಿಯಾಯಿತು. ನಂತರ ಚ.ನ. ಶಂಕರ್‌ರಾವ್, ಪ್ರೊ. ಅಬ್ದುಲ್ ಅಜೀಜ್, ಡಾ. ಆರ್.ಎಲ್.ಎಂ. ಪಾಟೀಲ್, ಡಾ. ಕೃಷ್ಣ ಪರಮೇಶ್ವರ ಭಟ್ಟ, ಡಾ. ಎಂ.ಚಿದಾನಂದಮೂರ್ತಿ, ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿ ಹಾಗೂ ಡಾ. ಮೋಹನ ಕುಂಟಾರ್ ಇವರೆಲ್ಲರನ್ನೂ ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಸಹ ಬಹಳ ಪ್ರೀತಿಯಿಂದ ಒಪ್ಪಿಕೊಂಡು ನಮಗೆ ಸಂಪೂರ್ಣವಾದ ಒಪ್ಪಿಗೆಯಿದೆ ಎಂದು ತಿಳಿಸಿದರು. ಪತ್ರವನ್ನು ಸಹ ಬರೆದು ತಾತ್ವಿಕ ಒಪ್ಪಿಗೆಯನ್ನು ನೀಡಿದರು. ‘ಸಂಶೋಧನ ಆಯಾಮಗಳು’ ಕೃತಿ ಪ್ರಕಟವಾದ ಮೇಲೆ ಪ್ರತಿಯನ್ನು ಕಳುಹಿಸಿಕೊಡಲು ಎಲ್ಲಾ ವಿದ್ವಾಂಸರು ಮತ್ತು ಅವರ ಕುಟುಂಬದವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ವಿದ್ವಾಂಸರನ್ನು ಗೌರವದಿಂದ ನೆನೆಯುತ್ತೇನೆ.
ಈ ಕೃತಿ ಹೊರಬರುವುದಕ್ಕೆ ಸ್ನಾತಕೋತ್ತರ ಪದವಿ ಪಡೆದ ಎಂ.ಎ. ಕನ್ನಡದ ವಿದ್ಯಾರ್ಥಿ ಮಿತ್ರರು ಪ್ರಮುಖ ಪಾತ್ರ ವಹಿಸಿದ್ದಾರೆ ಅವರಿಗೆ;
ನನ್ನನ್ನು ಮಮತೆಯಿಂದ ಪೋಷಿಸಿ ಸಲಹಿದ ನನ್ನೆಲ್ಲಾ ಕುಟುಂಬದ ಹಿರಿಯರಿಗೆ, ಕಿರಿಯರಿಗೆ ಅಲ್ಲದೆ ನನ್ನ ಬರವಣಿಗೆಯ ಹಂತದಲ್ಲಿ ಯಾವಾಗಲೂ ಜೊತೆಯಾಗಿ ನಿಂತ ನನ್ನ ಮಡದಿ ಪ್ರಿಯಾ ಸಂಡೂರು, ಮಗ ಎಂ.ಕೌಸ್ತುಭ ಅವರಿಗೆ;
ತುಂಬ ಶ್ರದ್ಧೆಯಿಂದ ಡಿ.ಟಿ.ಪಿ. ಮಾಡಿದ ಪ್ರಿಯಾ ಗ್ರಾಫಿಕ್ಸ್ ಸಂಡೂರು ಅವರಿಗೂ, ಈ ಕೃತಿಯನ್ನು ವಿಶ್ವಾಸದಿಂದ ಪ್ರಕಟಿಸಿದ ಹೊಸಪೇಟೆಯ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಮತ್ತು ಶ್ರೀ ಗಣೇಶ್ ಯಾಜಿ ಅವರಿಗೆ; ಸೂಕ್ತವಾದ ಮುಖಪುಟ ವಿನ್ಯಾಸ ರೂಪಿಸಿ ಮುದ್ರಿಸಿದ ಇಳಾ ಗುರುಮೂರ್ತಿ ಮತ್ತು ಸಿಬ್ಬಂದಿ ವರ್ಗದವರಿಗೂ ಕೃತಜ್ಞತೆಗಳು.
ಡಾ. ಮಲ್ಲಯ್ಯ ಸಂಡೂರು
ಪರಿವಿಡಿ
ಸವಿನುಡಿ / ೫
ನನ್ನ ಮಾತು / ೭
೧. ಸಾಹಿತ್ಯ ಸಂಶೋಧನೆ: ವಿಧಿ ವಿಧಾನಗಳು – ಡಾ. ಶ್ರೀನಿವಾಸ ಹಾವನೂರು / ೧
೨. ಕನ್ನಡ ಭಾಷಾಂತರ ಸಾಹಿತ್ಯ: ಅಧ್ಯಯನ ವಿಧಾನಗಳು -ಡಾ. ಮೋಹನ ಕುಂಟಾರ್ / ೧೩
೩. ಕನ್ನಡ ರಂಗಭೂಮಿ: ಸಂಶೋಧನೆಯ ವಿಧಾನಗಳು ಡಾ. ಮಲ್ಲಯ್ಯ ಸಂಡೂರು / ೨೯
೪. ಇತಿಹಾಸದಲ್ಲಿ ಸಂಶೋಧನ ವಿಧಿ ವಿಧಾನಗಳು -ಡಾ. ಯು.ಸೂರ್ಯನಾಥ್ ಕಾಮತ್ / ೫೧
೫. ಸಮಾಜ ವಿಜ್ಞಾನ: ಸಮಾಜ ಕಾರ್ಯದಲ್ಲಿ ಸಂಶೋಧನ ವಿಧಿ ವಿಧಾನದ ಸ್ವರೂಪ -ಪ್ರೊ. ಎಚ್.ಎಂ.ಮರುಳಸಿದ್ಧಯ್ಯ
/ ೫೮
೬. ಸಮಾಜಶಾಸ್ತ್ರ: ಸಾಮಾಜಿಕ ಸಂಶೋಧನೆಯ ವಿಧಿ ವಿಧಾನಗಳು -ಚ.ನ.ಶಂಕರ್‌ರಾವ್ / ೭೩
೭. ಅರ್ಥಶಾಸ್ತ್ರದಲ್ಲಿ ಸಂಶೋಧನ ವಿಧಿ ವಿಧಾನಗಳು -ಪ್ರೊ. ಅಬ್ದುಲ್ ಅಜೀಜ್ / ೮೩
೮. ರಾಜ್ಯಶಾಸ್ತ್ರದಲ್ಲಿ ಸಂಶೋಧನ ವಿಧಿ ವಿಧಾನಗಳು -ಡಾ. ಆರ್.ಎಲ್.ಎಂ.ಪಾಟೀಲ್ / ೯೨
೯. ಟಿಪ್ಪಣಿ ಮಾಡುವ ವಿಧಾನ -ಡಾ. ಕೃಷ್ಣ ಪರಮೇಶ್ವರ ಭಟ್ಟ / ೯೮
೧೦. ಸಂಶೋಧನೆ ಮತ್ತು ವಿಮರ್ಶೆ -ಡಾ. ಎಂ.ಚಿದಾನಂದಮೂರ್ತಿ / ೧೦೭
೧೧. ಸಂಶೋಧನೆ: ಇಂದು -ಡಾ. ಟಿ.ವಿ.ವೆಂಕಟಾಚಲ ಶಾಸ್ತ್ರಿ / ೧೧೮
ಲೇಖಕರ ವಿಳಾಸ / ೧೨೬
Reviews
There are no reviews yet.