ಮತ್ತೆ ವಾಜಪೇಯಿ
ಅಟಲ್ ಬಿಹಾರಿ ವಾಜಪೇಯಿಯವರ ಕನ್ನಡ ಅನುವಾದಿತ ಕವಿತೆಗಳ ಸಂಕಲನ ೧೯೯೯ರಲ್ಲಿಯೇ ಪ್ರಕಟವಾಗಿದ್ದಿತು. ಆ ಕಾಲಕ್ಕೆ ವಾಜಪೇಯಿಯವರು ಪ್ರಧಾನಮಂತ್ರಿ ಗಳಾಗಿದ್ದರು. ಅವರ ಕವಿತೆಗಳನ್ನು ಅನುವಾದಿಸುವಾಗ ನಾನು ಅವರ ಪ್ರಧಾನಿಪಟ್ಟವನ್ನು ನೋಡದೆಯೇ ಅವರ ಕಾವ್ಯಶಕ್ತಿಯನ್ನು ಮಾತ್ರ ನೋಡಿದ್ದೆ. ವಾಜಪೇಯಿಯವರು ವಿರೋಧಪಕ್ಷದ ನಾಯಕರಾಗಿದ್ದಾಗ, ವಿದೇಶಾಂಗ ಸಚಿವರಾಗಿದ್ದಾಗ ಹಾಗೂ ಪ್ರಧಾನಿಯಾಗಿದ್ದಾಗ ಅವರ ಜೊತೆಗೆ ಪ್ರವಾಸ ಮಾಡುವ ಯೋಗವೂ ನನ್ನದಾಗಿತ್ತು. ಅಪಾರ ಜನಜಂಗುಳಿಯನ್ನು ಮೋಡಿ ಮಾಡುವ ಅವರ ಮಾತುಗಳು, ಪ್ರತಿ ಮಾತಿನಲ್ಲಿಯೂ ಉದಾಹರಣೆಯಾಗಿ ನೀಡುತ್ತಿದ್ದ ಕವಿತೆಗಳು, ಶಾಯರಿಗಳು ಜನಮಾನಸದ ಮೇಲೆ ಬಹುದೊಡ್ಡ ಪರಿಣಾಮವನ್ನು ಉಂಟುಮಾಡುತ್ತಿದ್ದವು. ಅವರ ಮಾತುಗಳೆಲ್ಲ ಕವಿತೆಯಾಗುತ್ತಿದ್ದವು. ಭಾಷಣವೆಲ್ಲ ಮಹಾ ಕಾವ್ಯವಾಗುತ್ತಿತ್ತು.
ವಾಜಪೇಯಿಯವರ ಹಿಂದೀ ಕವಿತೆಗಳನ್ನು ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ತಂದವನೇ ನಾನು. ೧೯೯೯ರಲ್ಲಿ ಪ್ರಕಟವಾಗಿದ್ದ ಕವನ ಸಂಕಲನ ಈಗ ಮತ್ತೆ ಪ್ರಕಟವಾಗುತ್ತಿದೆ. ನಾನು ಕನ್ನಡಕ್ಕೆ ಅನುವಾದಿಸಿದ ಅವರ ಕವಿತೆಗಳನ್ನು ಕೇಳಿಸಿ ಖುಷಿಪಟ್ಟಿದ್ದರು. ಅನುವಾದವನ್ನು ಮೆಚ್ಚಿಕೊಂಡಿದ್ದರು.
ಈಗ ಅವರ ಮಹಾ ನಿರ್ಗಮನದಿಂದಾಗಿ ಸಾಹಿತ್ಯ ಮತ್ತು ರಾಜಕಾರಣ ಈ ಎರಡೂ ಕ್ಷೇತ್ರಗಳನ್ನು ಸರಿದೂಗಿಸಿಕೊಂಡು ಹೋಗುವಂತಹ ವ್ಯಕ್ತಿಯೇ ಇಲ್ಲವಾಗಿದ್ದಾನೆ. ಸಾಹಿತ್ಯವು ರಾಜಕಾರಣಿಯನ್ನು ಮನುಷ್ಯನನ್ನಾಗಿಸುತ್ತದೆ ಎಂದು ಅವರೇ ಅನೇಕ ಸಲ ಹೇಳಿದ ಮಾತು ನನಗೆ ನೆನಪಾಗುತ್ತದೆ.
ಕವಿತೆಗಳನ್ನು ಪ್ರಕಟಿಸುತ್ತಿರುವ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಹಾಗೂ ಗಣೇಶ್ ಯಾಜಿಯವರಿಗೆ ಕೃತಜ್ಞನಾಗಿದ್ದೇನೆ. ಈ ಕೃತಿಯು ಮರು ಪ್ರಕಟವಾಗಲು ಕಾರಣೀಕರ್ತನಾದ ನನ್ನ ಬಾಲ್ಯದ ಗೆಳೆಯ ರಾಘವೇಂದ್ರ ರಾಮದುರ್ಗನಿಗೂ ವಂದನೆ ಸಲ್ಲುತ್ತದೆ.
ಡಾ. ಸರಜೂ ಕಾಟ್ಕರ್
ರಾಜಕೀಯದ ಮಧ್ಯೆ ಕಾವ್ಯದ ಬೆಡಗು
ತುರ್ತುಪರಿಸ್ಥಿತಿ ಕಾಲದಲ್ಲಿ ಇಂದಿರಾಗಾಂಧಿಯ ಸರ್ವಾಧಿಕಾರಿ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ಹೇರಿದ್ದಿತು. ಆಗ ಭೂಗತ ಸಾಹಿತ್ಯದ ಹಲ ಕೆಲ ಪತ್ರಿಕೆಗಳು ರಹಸ್ಯವಾಗಿ ಪ್ರಕಟವಾಗಿ ಆ ಕಾಲದಲ್ಲಿ ಜೇಲಿಗೆ ದಬ್ಬಲ್ಪಟ್ಟಿದ್ದ ಜಯಪ್ರಕಾಶ್ ನಾರಾಯಣ ರಾದಿಯಾಗಿ ಅನೇಕ ಜನ ನಾಯಕರುಗಳ ಹೇಳಿಕೆಗಳನ್ನು ಪ್ರಕಟಿಸುತ್ತಿದ್ದವು. ನಾನಾಗ ಧಾರವಾಡದಲ್ಲಿ ಎಂ.ಎ. ಓದುತ್ತಿದ್ದೆ. ಹಲ ಕೆಲ ಪತ್ರಿಕೆಗಳು ನನ್ನ ವಿಳಾಸಕ್ಕೂ ರಹಸ್ಯವಾಗಿ ಬರುತ್ತಿದ್ದವು. ಅವುಗಳನ್ನು ಯಾರು ಕಳಿಸುತ್ತಿದ್ದರು, ಅದ್ಹೇಗೆ ಅವು ಪ್ರಸಾರವಾಗುತ್ತಿದ್ದವು ಎಂಬ ಜಿಜ್ಞಾಸೆ ಈಗಲೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.
ಅಂಥ ಪತ್ರಿಕೆಗಳಲ್ಲಿ ಆಗ ಜೇಲಿನಲ್ಲಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ(ಜೇಲಿ ನಲ್ಲಿಯೇ ಬರೆದ) ಕವಿತೆಗಳೂ ಪ್ರಕಟವಾಗಿರುತ್ತಿದ್ದವು. ಜೇಲಿನಲ್ಲಿದ್ದ ವಾಜಪೇಯಿಯವರ ಭಾವನೆ, ಸಿಟ್ಟು-ಸೆಡವುಗಳೇ ಕಾವ್ಯದ ರೂಪವಾಗಿ ಹೊರಹೊಮ್ಮುತ್ತಿದ್ದವು. ಆ ತಮ್ಮ ಕವಿತೆಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ತಮ್ಮನ್ನು ತಾವು ಕೈದಿ ಕವಿರಾಯನೆಂದು ಕರೆದುಕೊಂಡಿದ್ದಾರೆ. ಆ ಕಾಲದಿಂದಲೂ ನಾನು ವಾಜಪೇಯಿಯವರ ಕವಿತೆಗಳನ್ನು ಗಮನಿಸಿದ್ದೇನೆ. ಮುಂದೆ ವಾಜಪೇಯಿ ಜನತಾ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ದ್ದಾಗಲೂ ಬಹಳಷ್ಟು ಕವಿತೆಗಳನ್ನು ಬರೆದರು. ಅವುಗಳಲ್ಲಿ ತುರ್ತುಪರಿಸ್ಥಿತಿ ಕಾಲದ ರಾಜಕೀಯ ಸ್ಥಿತಿ ಹಾಗೂ ಅನಂತರ ಆದ ಸ್ಥಿತ್ಯಂತರದ ಚಿತ್ರಣ ಇದೆ. ಇವುಗಳಲ್ಲಿ ಹತ್ತು ಕವಿತೆಗಳನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೆ. ಅವುಗಳು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು.
ಅಟಲ್ ಬಿಹಾರಿ ವಾಜಪೇಯಿಯವರ ೫೧ ಕವನಗಳ ಸಂಕಲನ ಮೇರಿ ಇಕ್ಯಾವನ್ ಕವಿತಾಯೇಂ ಹಾಗೂ ಗೀತ್ ನಯಾ ಗಾತಾ ಹೂಂ ಎಂಬ ಇನ್ನೊಂದು ಸಂಕಲನವೂ ಇತ್ತೀಚಿಗೆ ಪ್ರಕಟವಾಗಿದೆ. ಕೈದಿ ಕವಿರಾಯ ಕೀ ಕುಂಡಲಿಯಾ ಹಾಗೂ ಕವಿ ರಾಜನೇತಾ ಅಟಲ್ ಬಿಹಾರಿ ವಾಜಪೇಯಿ ಹಲಕೆಲ ಪುಸ್ತಕಗಳು ಅಟಲ್ ಬಿಹಾರಿ ವಾಜಪೇಯಿ ಯವರ ಕವಿತೆಗಳ ಬಗ್ಗೆ ವಿಮರ್ಶಾತ್ಮಕವಾಗಿ ಪ್ರಕಟವಾಗಿವೆ. ವಾಜಪೇಯಿಯವರ ಕವಿತೆಗಳ ಸಂಕಲನಗಳು ಹಾಗೂ ಉಳಿದ ಗ್ರಂಥಗಳು ಹಿಂದಿಯಲ್ಲಿರುವದರಿಂದ ದಕ್ಷಿಣದಲ್ಲಿ ಅವು ಅಷ್ಟೇನೂ ಪ್ರಚಾರದಲ್ಲಿಲ್ಲ. ಉತ್ತರ ಭಾರತದಲ್ಲಿ ಅಥವಾ ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಅಟಲ್ ಬಿಹಾರಿ ವಾಜಪೇಯಿ ರಾಜನೀತಿಜ್ಞರಂತೆಯೆ ಕವಿಯೆಂದೂ ಗುರುತಿಸಲ್ಪಡುತ್ತಾರೆ. ಒಬ್ಬ ರಾಜಕಾರಣಿಗೆ ಸಿಗುವ ಅಪರೂಪದ ಗೌರವ ಇದು.
ಅಟಲ್ ಬಿಹಾರಿ ವಾಜಪೇಯಿಯವರ ಕವಿತೆಗಳು ಇತ್ತೀಚಿಗೆ ಕ್ಯಾಸೆಟ್ ರೂಪದಲ್ಲಿಯೂ ಬಂದಿವೆ. ಮಹಾರಾಷ್ಟ್ರದ ಪ್ರಸಿದ್ಧ ಗಾಯಕಿ ಪದ್ಮಜಾ ಫೇಣಾಣಿ- ಜೋಗಳೇಕರ್ ಈ ಹಾಡುಗಳನ್ನು ಹಾಡಿದ್ದಾರೆ. ಇನ್ನೊಂದು ಕ್ಯಾಸೆಟ್ ಆಶಾ ಭೋಸಲೆಯವರ ಧ್ವನಿಯಿಂದ ತಯಾರಾಗುತ್ತಲಿದೆ.
ಭಾರತದ ರಾಜಕಾರಣದಲ್ಲಿ ಸಾಹಿತ್ಯದ ಸ್ಪರ್ಶವಿರುವ ರಾಜಕಾರಣಿಗಳು ತೀರಾ ಕಡಿಮೆ. ಡಾ. ರಾಮ ಮನೋಹರ ಲೋಹಿಯಾ, ಜವಾಹರಲಾಲ ನೆಹರೂ, ಮಹಾತ್ಮಾ ಗಾಂಧೀ, ಮಧು ಲಿಮಯೆ ಮುಂತಾದವರು ರಾಜಕಾರಣದ ಜೊತೆಗೆ ಸಾಹಿತ್ಯವನ್ನೂ ಪ್ರೀತಿಸಿದ್ದಾರೆ. ಹಲ ಕೆಲ ಗ್ರಂಥಗಳೂ ಅವರಿಂದ ರಚಿತವಾಗಿವೆ. ಅದೇ ಸಾಲಿನಲ್ಲಿ ಬರುವ ಅಟಲ್ ಬಿಹಾರಿ ವಾಜಪೇಯಿ ಕವಿತೆಗಳನ್ನು ಬರೆದಿದ್ದಾರೆ. ಜಗತ್ತಿನ ಕೆಲವೇ ಕೆಲವು ಅತ್ಯುತ್ತಮ ವಾಗ್ಮಿಗಳಲ್ಲಿ ಒಬ್ಬರಾಗಿರುವ ಅಟಲ್ ಬಿಹಾರಿ ವಾಜಪೇಯಿಯವರ ಮಾತುಗಳಿಗೂ ಕಾವ್ಯದ ಲೇಪವಿರುವುದು ಎಲ್ಲರಿಗೂ ಗೊತ್ತು.
ಅಟಲ್ ಬಿಹಾರಿ ವಾಜಪೇಯಿ, ಸಹಜವಾಗಿ ತಮಗೆ ಅನ್ನಿಸಿದ್ದನ್ನು ಕವಿತೆಗಳನ್ನಾಗಿ ಮಾಡಿದ್ದಾರೆ. ಹೀಗಾಗಿ ಕೆಲವು ಸಲ ಅವರ ಕವಿತೆಗಳಲ್ಲಿ ವಾಚ್ಯತೆ ಇಣುಕುವುದು ಸ್ವಾಭಾವಿಕವಾಗಿದೆ. ಅವರ ಪ್ರತಿಯೊಂದು ಸಾಲುಗಳನ್ನು ಕಾವ್ಯದ ವ್ಯಾಖ್ಯೆಯ ಮೂಸೆಯಲ್ಲಿ ನೋಡುವ ಕಾರಣವಿಲ್ಲ; ಭಾವನೆಗಳು ಸಹಜವಾಗಿ, ಸ್ವಾಭಾವಿಕವಾಗಿ ಹಾಗೂ ಪ್ರಾಮಾಣಿಕ ವಾಗಿರುವುದರಿಂದ ಈ ಸಾಲುಗಳಿಗೆ ಮಹತ್ವವಿದೆ.
ಇಲ್ಲಿಯ ಕವಿತೆಗಳನ್ನು ಅಟಲ್ ಬಿಹಾರಿ ವಾಜಪೇಯಿಯವರ ಮೇರಿ ಇಕ್ಯಾವನ್ ಕವಿತಾಯೇಂ ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಅನುವಾದದ ಅನುಮತಿಗಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಬಾಬಾಗೌಡಾ ಪಾಟೀಲ, ಕಪಾರ್ಟ್ ಅಧ್ಯಕ್ಷರಾದ ಬಿ.ಎಲ್.ಪಾಟೀಲ ಅವರುಗಳು ಸಹಾಯ ಮಾಡಿದ್ದಾರೆ. ಇವರಿಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ.
ಕನ್ನಡದ ಖ್ಯಾತ ವಿಮರ್ಶಕರಾದ ಡಾ. ಜಿ.ಎಸ್.ಆಮೂರ ಈ ಅನುವಾದ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಎಡಪಂಥೀಯ ವಿಚಾರದವನಾದ ನಾನು ಅಟಲ್ ಬಿಹಾರಿ ವಾಜಪೇಯಿಯವರ ಕವಿತೆಗಳನ್ನು ಅನುವಾದಿಸಿದ್ದರ ಬಗ್ಗೆ ಕೆಲವರಿಗೆ ಬೇಸರ, ಆತಂಕ, ದುಃಖ, ದಿಗ್ಭ್ರಮೆ, ಸಿಟ್ಟು ಬರಲೂಬಹುದು. ಇಂಥವರಿಗೆ ಕವಿ ಅಥವಾ ಕಾವ್ಯದ ಬಗ್ಗೆ ಏನೂ ಗೊತ್ತಿಲ್ಲವೆಂದೇ ಹೇಳಬೇಕಾಗುತ್ತದೆ. ಅಟಲ್ ಬಿಹಾರಿ ವಾಜಪೇಯಿಯವರ ರಾಜಕೀಯ ಒಲವು ನಿಲುವುಗಳು, ಏನೇ ಇದ್ದರೂ ಅವರೊಬ್ಬ ಪ್ರತಿಭಾವಂತ ಕವಿಯೆಂಬುದು ಸುಳ್ಳಲ್ಲ. ಅವರ ರಾಜಕೀಯ ಸಿದ್ಧಾಂತಗಳನ್ನು ಒಪ್ಪುವವರಿಗಿಂತಲೂ ಅದನ್ನು ಒಪ್ಪದೇ ಇರುವವರೇ ಅವರನ್ನು ಹೆಚ್ಚು ಸಮರ್ಥವಾಗಿ ಹಾಗೂ ಪ್ರಾಮಾಣಿಕವಾಗಿ ಅನುವಾದಿಸಬಲ್ಲರು. ಅವರ ಕಾವ್ಯ ಪ್ರತಿಭೆ ಕನ್ನಡಿಗರಿಗೂ ಗೊತ್ತಾಗಬೇಕೆಂಬುದೇ ಇಲ್ಲಿನ ಮೂಲ ಉದ್ದೇಶವಾಗಿದೆ. ವಾಜಪೇಯಿಯವರ ರಾಜಕೀಯ ತತ್ವಗಳನ್ನು ಒಪ್ಪದವರೂ ಅವರ ಕಾವ್ಯಶಕ್ತಿಯನ್ನು ಒಪ್ಪಿಕೊಂಡಿದ್ದಾರೆ. ದಿಲ್ಲಿ-ಲಾಹೋರ್ ಬಸ್ ಪ್ರಸಂಗದಲ್ಲಿ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫರು ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾಷಣದ ಬದಲು ಒಂದು ಕವಿತೆಯನ್ನು ಓದಬೇಕೆಂದು ಹೇಳಿದ್ದರು. ವಾಜಪೇಯಿಯವರಿಗೆ ಕವಿತೆಯ ಸಾಲುಗಳು ನೆನಪಾಗದಾದಾಗ ನವಾಜ್ ಶರೀಫರೇ ಆ ಕವಿತೆಯ ಸಾಲುಗಳನ್ನು ನೆನಪಿಸಿಕೊಟ್ಟಿದ್ದನ್ನು ಅನೇಕರು ಟಿವಿಯಲ್ಲಿ ಕಂಡಿರಲು ಸಾಕು. ಒಂದು ದೇಶದ ಪ್ರಧಾನಿಯ ಕವಿತೆಗಳು ವೈರಿ ದೇಶವೆಂದು ಭಾವಿಸಿರುವ ಇನ್ನೊಂದು ದೇಶದ ಪ್ರಧಾನಿ ನೆನಪಿಟ್ಟುಕೊಂಡಿರುವುದು ರಾಜಕಾರಣದಲ್ಲಿಯ ಒಂದು ಅಪರೂಪದ ದಾಖಲೆ.
ನನ್ನ ಸಾಹಿತ್ಯ ಸೃಜನಶೀಲತೆಗೆ ಕಾರಣರಾಗಿರುವ ಯು.ಆರ್.ಅನಂತಮೂರ್ತಿ, ಗಿರಡ್ಡಿ ಗೋವಿಂದರಾಜ್, ಹಂಪ ನಾಗರಾಜಯ್ಯ, ಮನು ಬಳಿಗಾರ್, ಎಂ.ಎಂ. ಕಲಬುರ್ಗಿ, ಚಂದ್ರಶೇಖರ ಪಾಟೀಲ, ಬರಗೂರ ರಾಮಚಂದ್ರಪ್ಪ, ಕಾಳೇಗೌಡ ನಾಗವಾರ, ಗುರುಲಿಂಗ ಕಾಪಸೆ, ಚಂದ್ರಶೇಖರ ಕಂಬಾರ, ಸತೀಶ ಕುಲಕರ್ಣಿ, ಅರವಿಂದ ಮಾಲಗತ್ತಿ, ಬಸವರಾಜ ಸಾದರ, ಲತಾ ರಾಜಶೇಖರ, ಕೆ.ಎಂ.ಮುನಿಕೃಷ್ಣಪ್ಪ, ಹೆಚ್. ಇಬ್ರಾಹಿಂ ಸಾಹೇಬ ಅವರುಗಳಿಗೆ ಕೃತಜ್ಞತೆಗಳು.
ಎಂ.ಪಿ.ಪ್ರಕಾಶ್, ಚೆನ್ನಬಸವಣ್ಣ, ರಾಜಶೇಖರ ನೀರಮಾನ್ವಿ, ಕುಂ.ವೀರಭದ್ರಪ್ಪ ಅವರುಗಳ ಪ್ರೀತಿಗೆ ಏನೆಂದು ಹೇಳಲಿ?
ಇಂಡಿಯನ್ ಎಕ್ಸಪ್ರೆಸ್ ಕಂಪನಿಯ ಬೆಳಗಾವಿಯ ಮ್ಯಾನೇಜರ್‌ರಾಗಿರುವ ಪಿ.ಎಸ್. ಸುಧೀಂದ್ರರಾವ್, ಸಹೋದ್ಯೋಗಿಗಳಾದ ತಿಮ್ಮಪ್ಪ ಭಟ್ ಅವರುಗಳಿಗೂ ಕೃತಜ್ಞತೆಗಳು.
ಸಂಕಲನಕ್ಕೆ ಸುಂದರ ಮುಖಪುಟ ರಚಿಸಿದ ಖ್ಯಾತ ಕಲಾವಿದ ಚಂದ್ರನಾಥ ಆಚಾರ್‍ಯ ಅವರಿಗೂ ಅಚ್ಚುಕಟ್ಟಾಗಿ ಮುದ್ರಿಸಿದ ಇಂಪ್ರೇಶನ್ಸ್, ಬೆಳಗಾವಿ ಅವರಿಗೂ ನನ್ನ ವಂದನೆ ಸಲ್ಲಬೇಕು.
ಬಾಳಸಂಗಾತಿ ಸುಮಾ, ಮಕ್ಕಳಾದ ಸಂಸ್ಕೃತಿ, ಶ್ರೇಯಸ್ ಅವರುಗಳಿಗೆ ಪ್ರೀತಿಯ ನೆನಕೆಗಳು.
ಈ ಸಂಕಲನದ ಕವಿತೆಗಳು ಚೆನ್ನಾಗಿ ಬಂದಿದ್ದರೆ ಅದರ ಶ್ರೇಯಸ್ಸು ಅಟಲ್ ಬಿಹಾರಿ ವಾಜಪೇಯಿಯವರಿಗೆ ಸಲ್ಲುತ್ತದೆ; ಏನಾದರೂ ಎಡವಟ್ಟಾಗಿದ್ದರೆ ಅದರ ಹೊಣೆ ನನ್ನದು.
(ಮೊದಲ ಮುದ್ರಣಕ್ಕಾಗಿ ಬರೆದ ನನ್ನ ಮಾತು)
ಡಾ. ಸರಜೂ ಕಾಟ್ಕರ್
ಅಪರೂಪದ ಒಳನೋಟಗಳ ಕಾವ್ಯ
-ಜಿ.ಎಸ್. ಆಮೂರ
ಶ್ರೀ ಅಟಲ್ ಬಿಹಾರಿ ವಾಜಪೇಯಿ ನಮ್ಮ ಕಾಲದ ಶ್ರೇಷ್ಠ ವಾಗ್ಮಿಗಳಲ್ಲೊಬ್ಬರು. ಕಳೆದ ಐವತ್ತು ವರ್ಷಗಳಿಗೂ ಮೇಲ್ಪಟ್ಟು ಅವರ ಸಾರ್ವಜನಿಕ ದನಿ ಭಾರತದಲ್ಲಿ ಮೊಳಗಿದೆ. ಅವರು ಪ್ರಧಾನಮಂತ್ರಿಯಾದ ಮೇಲಂತೂ ಈ ದನಿಯನ್ನು ಕೇಳದವರು ಯಾರೂ ಇರಲಾರರು. ಆದರೆ ನನ್ನ ತರುಣ ಮಿತ್ರರಾದ ಡಾ. ಸರಜೂ ಕಾಟ್ಕರ್ ಅವರು ಕನ್ನಡಿಸಿದ ಈ ನಾಲ್ವತ್ತು ಹಿಂದೀ ಕವಿತೆಗಳಲ್ಲಿ ನಾವು ಕೇಳುವುದು ಈ ಸಾರ್ವಜನಿಕ ದನಿಯಲ್ಲ, ಅವರು ತಮ್ಮ ಮನಸ್ಸಿನೊಂದಿಗೆಯೆ ಮಾತುಕತೆ ನಡೆಸಲು ಬಳಸುವ ಪಿಸುದನಿಯನ್ನು. ಈ ದನಿಯಲ್ಲಿ ಅವರು ತಮ್ಮ ಆಸೆ, ಆಕಾಂಕ್ಷೆಗಳನ್ನೂ, ಸೋಲು ಗೆಲವುಗಳನ್ನೂ, ವ್ಯಥೆಯನ್ನೂ ಅತ್ಯಂತ ಆಪ್ತವಾದ ರೀತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಈ ಎರಡೂ ದನಿಗಳ ಅಂತರವನ್ನು ಅರಿತಿದ್ದಾರೆನ್ನುವುದಕ್ಕೆ ತಿರುವಿನಲ್ಲಿ ಎಂಬ ಕವಿತೆಯ ಈ ಸಾಲುಗಳನ್ನು ನೋಡಬಹುದು:
ನನ್ನ ಎದುರಿಗಿರುವ ಸಭೆಯನ್ನು
ನನ್ನ ಮಾತುಗಳಿಂದ ಗೆಲ್ಲುತ್ತೇನೆ.
ಆದರೆ ಸ್ವಂತ ನಾನೇ ನನ್ನ ಪ್ರಶ್ನೆಗಳಿಗೆ
ಉತ್ತರ ನೀಡುವುದಾಗುವುದಿಲ್ಲ ನನಗೆ
ವಾಜಪೇಯಿಯವರ ಪ್ರಶ್ನೆಗಳು ಸ್ವಂತದವಾದರೂ ಅವುಗಳಿಗೆ ವೈಯಕ್ತಿಕ ಜೀವನದ ಸುಂಕುಚಿತತೆಯಿಲ್ಲ. ಸಾರ್ವಜನಿಕ ಜೀವನಕ್ಕೆಯೇ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿ ಕೊಂಡ ವ್ಯಕ್ತಿಯ ವಿಷಯದಲ್ಲಿ ಇದು ಸಹಜವಾದದ್ದು. ವಾಜಪೇಯಿ ಅವರ ಕಲ್ಪನೆಯಲ್ಲಿ ಮಾನವೀಯತೆಗಿರುವ ಸ್ಥಾನ ಬೇರೆ ಯಾವ ಮೌಲ್ಯಕ್ಕೂ ಇಲ್ಲ:
ಮನುಷ್ಯನಿಗಿಂತ ಶ್ರೇಷ್ಠ
ಜಗತ್ತಿನಲ್ಲಿ ಯಾರೂ ಇಲ್ಲ
ನನಗೆ ಅನ್ನಿಸುತ್ತದೆ
ಮನುಷ್ಯನಿಗಿಂತ ಮಾನವೀಯತೆ ದೊಡ್ಡದು
ಅವರ ಎಲ್ಲ ಕವಿತೆಗಳ ಸ್ಫೂರ್ತಿ ಈ ಮಾನವೀಯತೆಯಲ್ಲಿಯೇ ಇದೆ. ಉದಾಹರಣೆಗೆ ಸ್ವಾತಂತ್ರ್ಯದ ನಂತರ ನಮ್ಮ ದೇಶದಲ್ಲಿ ನಡೆದ ಪ್ರಮುಖ ಘಟನೆಗಳಿಗೆ ಅವರ ಪ್ರತಿಕ್ರಿಯೆ ಗಳನ್ನೊಳಗೊಂಡ ಕವಿತೆಗಳನ್ನು ನೋಡಬಹುದು. ಸ್ವಾತಂತ್ರ್ಯದ ಸವಾಲು ಎಂಬ ಕವಿತೆಯಲ್ಲಿ ದೇಶದ ವಿಭಜನೆಯಿಂದ ಹುಟ್ಟಿಕೊಂಡ ಸಂಕಟ ಪರಂಪರೆಯ ಚಿತ್ರವಿದೆ:
ಲಾಹೋರ್ ಕರಾಚಿ, ಢಾಕಾ
ಎಲ್ಲೆಡೆ ಮೃತ್ಯುವಿನ ಕರಿ ನೆರಳು
ಪಠಾಣ, ಗಿಲ್‌ಗಿತ್‌ಗಳಿಂದ
ದುಃಖದ, ಯಾತನೆಯ ಕೊರಳು.
ತುರ್ತುಪರಿಸ್ಥಿತಿಯ ದಾರುಣತೆಯನ್ನು ತೀವ್ರವಾಗಿ ಅನುಭವಿಸಿದ ಮುಖಂಡರಲ್ಲಿ ವಾಜಪೇಯಿ ಅವರೂ ಮುಖ್ಯರು. ಹಲವಾರು ಕವಿತೆಗಳಲ್ಲಿ ಅವರು ತಮ್ಮ ಈ ಅನುಭವಕ್ಕೆ ಮಾತು ಕೊಟ್ಟಿದ್ದಾರೆ.
ಗೋಡೆಗಳ ಕಿವಿಗಳು ಬಂದಾಗಿವೆ
ತುಟಿಗೆ ಹೊಲಿಗೆ ಬಿದ್ದಿದೆ
ಎದೆಯ ಮೇಲೆ ಭಯದ ಕತ್ತಿ
ಕನಸುಗಳೆಲ್ಲ ಬಂಧಿಸಲ್ಪಟ್ಟಿವೆ
ಉಸಿರಾಟಕ್ಕೂ ಇಲ್ಲಿ ಕಾವಲು
ಎಲ್ಲೆಡೆ ಭಾವಹೀನ ಸವಾಲು
ಕನಸುಗಳಷ್ಟೇ ಸತ್ಯ ಎಂದು ನಂಬಿದ ವಾಜಪೇಯಿಯವರ ಕವಿ ಮನಸ್ಸಿಗೆ ಜಯಪ್ರಕಾಶರ ಕನಸನ್ನು ಸಾಕಾರಗೊಳಿಸಿದ ಜನತಾಪಕ್ಷ ಛಿದ್ರವಾದುದು ಆಘಾತಕರ ಘಟನೆಯಾಗಿತ್ತು.
ಹಾಲಿನಲ್ಲಿ ಹುಳಿಯು ಬಿದ್ದಿತು
ಕೂಡಿ ಹೊರಟ ನಾಲ್ಕು ಹೆಜ್ಜೆ
ದಾರಿಗಳು ಟಿಸಿಲೊಡೆದವು
ಕಂಡ ಕನಸುಗಳು ಭಗ್ನಗೊಂಡವು
ವಿಶ್ವದ ಎಲ್ಲ ಪ್ರಜ್ಞಾವಂತರನ್ನೂ ಕಲಕಿದ ಹಿರೋಶಿಮಾ ದುರಂತ ವಾಜಪೇಯಿಯವರ ವ್ಯಥೆಗೂ ಕಾರಣವಾಯಿತು. ಹಿರೋಶಿಮಾದ ನೋವು ಎಂಬ ಕವಿತೆಯಲ್ಲಿ ಅವರು ಈ ದುಃಖವನ್ನು ತೋಡಿಕೊಂಡಿದ್ದಾರೆ:
ಅಣುಬಾಂಬ್‌ಗಳನ್ನು ಶೋಧಿಸಿದ
ವಿಜ್ಞಾನಿಗಳು ಹಿರೋಶಿಮಾ ನಾಗಾಸಾಕಿಗಳ
ನರ ಸಂಹಾರದ ಸುದ್ದಿ ಕೇಳಿ
ರಾತ್ರಿ ಹೇಗೆ ನಿದ್ದೆ ಮಾಡಿರಬಹುದು?
ಆದರೆ, ಈ ಪ್ರಶ್ನೆಯನ್ನು ಕೇಳಿದ ಕವಿಯೇ ರಾಜಕಾರಣಿಯಾಗಿ ಪೋಖ್ರಾನ್ ಅಣು ವಿಸ್ಫೋಟದ ನಿರ್ಣಯ ತೆಗೆದುಕೊಂಡಿದ್ದು ಕನಸು-ವಾಸ್ತವಗಳ ನಡುವಿನ ದುರಂತ ವ್ಯಂಗ್ಯದ ದಾರುಣ ಉದಾಹರಣೆಯಾಗಿದೆ. ವಾಜಪೇಯಿಯವರು ನಿರಾಶಾವಾದಿಗಳಲ್ಲ.
ಮನಸ್ಸಿಗೆ ಸಂತೋಷವಾಗುವಂತೆ ಜೀವಿಸಿದ್ದೇನೆ
ಸಾವಿಗೆ ಅದೇಕೆ ಹೆದರಲಿ?
ಎಂದು ಅವರು ಸಾವಿಗೂ ಆಹ್ವಾನ ನೀಡಬಲ್ಲರು. ಅವರು ಜೀವನದಲ್ಲಿ ಆಯ್ದುಕೊಂಡದ್ದು ಋಜುಮಾರ್ಗವನ್ನು:
ಸಹಜವಾಗಿ ಸರಳವಾಗಿ ಮಾಡಿದ
ಯಾವುದೇ ಕೆಲಸಕ್ಕೆ
ಖಂಡಿತವಾಗಿಯೂ
ಸಾರ್ಥಕತೆ ಮತ್ತು ಮೌಲ್ಯವಿರುತ್ತದೆ
ಸಹಜ ಕರ್ಮಿಯ ಜೀವನ
ಸುಫಲ ಮತ್ತು ಸಫಲವಾಗಿರುತ್ತದೆ.
ಹೀಗಿದ್ದರೂ ಅವರ ಕವನಗಳ ಸ್ಥಾಯಿ ಒಂದು ವಿಧವಾದ ತಾತ್ವಿಕ ವಿಷಾದವೇ ಹೊರತು ವಿಜೃಂಭಣೆಯಲ್ಲ ಎನ್ನುವುದು ಗಮನಾರ್ಹವಾಗಿದೆ. ಯಕ್ಷಪ್ರಶ್ನೆಯಂಥ ಕವಿತೆಗಳು ಈ ಮಾತಿಗೆ ಉದಾಹರಣೆಗಳಾಗಿವೆ.
ಇರುವುದು ಇಲ್ಲದಿರುವುದು
ಇವೆರಡೂ ಖಂಡಿತವಾಗಿ ಸತ್ಯಗಳು
ಉಳಿದದ್ದೆಲ್ಲ ಕೇವಲ ವೈಚಾರಿಕ
ಗೊಂದಲ; ಬುದ್ಧಿಯ ಜೊತೆಗೆ ಗುದ್ದಾಟ
ಆದರೆ ಇರುವವ ಇಲ್ಲವಾದಾಗ ಏನು?
ಈ ಪ್ರಶ್ನೆಗೆ ಉತ್ತರವಿಲ್ಲ.
ನಷ್ಟವೇ ಜೀವನದಲ್ಲಿ ಸಾಕಷ್ಟು ಎನ್ನುವಾಗಲೂ ಕೂಡ ಅವರ ದನಿ ವಿಷಾದದ ದನಿಯನ್ನೇ ಮಿಡಿಯುತ್ತದೆ. ಅತ್ತು ಅತ್ತು ರಾತ್ರಿ ಮಲಗಿತು ಈ ದೃಷ್ಟಿಯಿಂದ ತೀರ ವೈಶಿಷ್ಟ್ಯಪೂರ್ಣವಾದ ಕವಿತೆ. ಇಲ್ಲಿ ನಮಗೆ ಕೇಳಿಬರುವ ದನಿ ತನ್ನ ಆಪ್ತತೆ, ಆತ್ಮೀಯತೆಗಳಿಂದಾಗಿ ತೀರ ಹತ್ತಿರದ್ದೆನ್ನಿಸುತ್ತದೆ.
ಕಣ್ಣುಗಳು ಮುಚ್ಚುತ್ತಿಲ್ಲ
ನಿದ್ದೆ ಹತ್ತಿರ ಸುಳಿಯುತ್ತಿಲ್ಲ
ಚೈತನ್ಯದ ಸೆಲೆಯು ಬತ್ತಿತು
ಅತ್ತು ಅತ್ತು ರಾತ್ರಿ ಮಲಗಿತು
ವ್ಯಥೆ ಹಳೆಯದು
ಪ್ರಿಯೆಗೆ ಹೊಳೆಯದು
ಮಾತನಾಡುತ್ತಿದ್ದಾಗಲೇ ರಾತ್ರಿ ಸರಿಯಿತು
ಅತ್ತು ಅತ್ತು ರಾತ್ರಿ ಮಲಗಿತು
ಗರ್ಜಿಸಿದರೂ ಮೋಡಗಳು
ಹನಿ ಮಳೆಯೂ ಸುರಿಯಲಿಲ್ಲ
ಧ್ವನಿಯಲ್ಲೂ ದುಃಖ ಒತ್ತರಿಸಿತು
ಅತ್ತು ಅತ್ತು ರಾತ್ರಿ ಮಲಗಿತು
ಹೀಗಿದ್ದರೂ ವಾಜಪೇಯಿಯವರು ಮನಸ್ಸನ್ನು ಕಹಿ ಮಾಡಿಕೊಳ್ಳದಿರುವುದಕ್ಕೆ ಕಾರಣ ಅವರ ಆಶಾವಾದ ಹಾಗೂ ಸೌಂದರ್ಯ ದೃಷ್ಟಿ. ತುರ್ತು ಪರಿಸ್ಥಿತಿಯಲ್ಲಿ ಜೈಲಿನಲ್ಲಿ ದ್ದಾಗಲೂ ಕೂಡ ಈ ಆಶಾವಾದವನ್ನು ಅವರು ಬಿಟ್ಟು ಕೊಡಲಿಲ್ಲ.
ಕತ್ತಲೆಯನ್ನು ಸೀಳಿ
ಸೂರ್ಯ ಮತ್ತೆ
ಬೆಳಗಲಿದ್ದಾನೆ
ಕತ್ತಲೆಯನ್ನು ಓಡಿಸಲಿದ್ದಾನೆ
ಸೌಂದರ್ಯದ ಸಂಕೇತವೇ ಆದ ಮನಾಲಿಯ ಕರೆಯನ್ನು ಅವರೆಂದೂ ಅಲಕ್ಷಿಸುವುದಿಲ್ಲ.
ಸೂರ್ಯ ಒಂದು ಶಾಶ್ವತ ಸತ್ಯ
ಇಬ್ಬನಿ ಇದೂ ಒಂದು ಸತ್ಯವೇ
ಇಬ್ಬನಿಯ ಕ್ಷಣಿಕತ್ವ
ಅದೇ ಅದರ ಮಹತ್ವ
ಈ ಎಲ್ಲ ಕ್ಷಣಗಳನ್ನು
ನಾನೇಕೆ ಆನಂದಿಸಬಾರದು?
ಸುಟ್ಟು ಹೋಗುವ ಕಣಗಳಲ್ಲಿಯೂ
ನಾನೇಕೆ ಸೌಂದರ್ಯ ಕಾಣಬಾರದು?
ಕವಿಗೆ ಸಹಜವಾದ ಅಂತರ್ಮುಖತೆ ಹಾಗೂ ಅಂತಃಪ್ರಜ್ಞೆ ವಾಜಪೇಯಿಯವರಲ್ಲಿ ವಿವೇಕ, ಎಚ್ಚರಗಳನ್ನೂ ಜಾಗ್ರತವಾಗಿರಿಸಿದೆ. ಹೀಗಾಗಿ ಅವರು ಎತ್ತರದ ಮಾನವೀಯ ಗಂಡಾಂತರಗಳನ್ನು ಚೆನ್ನಾಗಿ ಬಲ್ಲರು.
ಹರಿಯುವ ನದಿ
ಹಿಮವಾಗುತ್ತಿರುವಾಗ
ತನ್ನ ದೈವವನ್ನು ಬೈಯುತ್ತಿರುತ್ತದೆ
ಈ ಎತ್ತರ
ತನ್ನ ಸ್ಪರ್ಶದಿಂದಲೇ ನೀರನ್ನು
ಕಲ್ಲನ್ನಾಗಿಸುತ್ತದೆ.
ವಾಜಪೇಯಿಯವರ ವ್ಯಕ್ತಿತ್ವದಲ್ಲಿ ಎದ್ದು ಕಾಣುವ ಸಭ್ಯತೆ, ಸಂಯಮಗಳ ರಹಸ್ಯವೇ ಇಲ್ಲಿದೆ ಎಂದು ಹೇಳಬಹುದು.
ಭಾರತದ ಪ್ರಥಮ ಪ್ರಧಾನಿಗಳಾಗಿದ್ದ ಜವಾಹರಲಾಲ ನೆಹರೂ ಕೂಡ ತಮ್ಮ ಕವಿ ಮನಸ್ಸನ್ನು ಜಾಗೃತಾವಸ್ಥೆಯಲ್ಲಿ ಉಳಿಸಿಕೊಂಡಿದ್ದರು. ಕ್ರಿಯೆಯ ಮೂಲಕವೇ ಮನುಷ್ಯ ನಿಜವಾಗುತ್ತಾನೆ ಎಂದು ಅವರು ನಂಬಿದ್ದರು; ಕಾವ್ಯವನ್ನು ಅವರು ಆತ್ಯಂತಿಕವಾಗಿ ಪ್ರೀತಿಸಿದರು. ಅವರ ಆತ್ಮಚರಿತ್ರೆಯ ಉದ್ದಕ್ಕೂ ಅವರ ಕಾವ್ಯ ಪ್ರೀತಿಯ ನಿದರ್ಶನಗಳಿವೆ. ನೆಹರೂ ಶ್ರೇಷ್ಠ ಬರಹಗಾರರೂ ಆಗಿದ್ದರು. ಇಂಗ್ಲಿಷು ಅವರ ಸಹಜ ಮಾಧ್ಯಮ ವಾಗಿದ್ದರೂ ಅನುವಾದಗಳ ಮೂಲಕ ಅವರ ಬರಹಗಳು ಸಾವಿರಾರು ಜನರನ್ನು ತಲುಪಿದವು. ಭಿನ್ನ ವಾತಾವರಣದಲ್ಲಿ ಬೆಳೆದು ಬಂದ ವಾಜಪೇಯಿಯವರಿಗೆ ಹಿಂದೀ ಸಹಜ ಮಾಧ್ಯಮವಾಗಿದೆ. ಹಿಂದೀ ಭಾಷಿಕರಿಗೆ ಅವರ ಕಾವ್ಯದ ಪರಿಚಯ ಹಳೆಯದು. ತಮ್ಮ ಸಮರ್ಥ ಅನುವಾದಗಳ ಮೂಲಕ ಡಾ. ಸರಜೂ ಕಾಟ್ಕರ್ ಅವರು ಕನ್ನಡ ಜನತೆಗೂ ಅದರ ಸವಿ ಉಣಿಸಿದ್ದಾರೆ. ವಾಜಪೇಯಿಯವರ ಘನ ವ್ಯಕ್ತಿತ್ವವನ್ನು ಅವರ ಕಾವ್ಯ ಇಡಿಯಾಗಿ ಒಳಗೊಳ್ಳದಿದ್ದರೂ ಅಪರೂಪದ ಒಳನೋಟಗಳನ್ನೊದಗಿಸುವ ಮೂಲಕ ಅದು ನಮಗೆ ಮಹತ್ವದಾಗಿರುತ್ತದೆ. ವಾಜಪೇಯಿಯವರೊಡನೆ ರಾಜಕೀಯ ಮತಭೇದವಿದ್ದವರೂ ಕೂಡ ಅವರ ಕಾವ್ಯವನ್ನು ಸ್ವಾಗತಿಸುತ್ತಾರೆ ಎನ್ನುವುದರಲ್ಲಿ ಸಂಶಯವಿರಲಾರದು.
ಪುಟ ತೆರೆದರೆ
ಸವಿನುಡಿ / ೩
ಮತ್ತೆ ವಾಜಪೇಯಿ / ೫
ರಾಜಕೀಯದ ಮಧ್ಯೆ ಕಾವ್ಯದ ಬೆಡಗು / ೬
ಅಪರೂಪದ ಒಳನೋಟಗಳ ಕಾವ್ಯ / ೯
೧. ಹೊಸ ಹಾಡನ್ನು ಹಾಡುವೆನು / ೧
೨. ಮನಸ್ಸಿನ ಜೊತೆಗೆ ಮಾತುಕತೆ / ೨
೩. ಇಲ್ಲಿ ಮನಸ್ಸಿನೊಳಗಿದ್ದುದನ್ನು ಮಾತಾಡುತ್ತೇನೆ / ೪
೪. ಯಾರು ಕೌರವರು ಯಾರು ಪಾಂಡವರು? / ೫
೫. ಕ್ಷಮೆಯಾಚನೆ / ೬
೬. ಹಾಡು ಹಾಡುವುದಿಲ್ಲ / ೭
೭. ಸ್ವಾತಂತ್ರ್ಯದ ಸವಾಲು / ೮
೮. ಮೈಲುಗಲ್ಲು / ೧೦
೯. ಹಾಲು ಹಾಲಾಹಲ / ೧೧
೧೦. ಸಾವಿನ ಜೊತೆಗೆ ಹೋರಾಟ / ೧೨
೧೧. ನಾನು ಬದುಕುತ್ತಿದ್ದೇನೆ / ೧೪
೧೨. ಮನಾಲಿ ಕರೆಯುತ್ತಿದ್ದಾಳೆ / ೧೫
೧೩. ಮನಾಲಿಗೆ ಹೋಗಬೇಡ / ೧೬
೧೪. ಬಾಗಲಾರೆ ನಾನು / ೧೭
೧೫. ಅಧಿಕಾರ / ೧೮
೧೬. ಮಂತ್ರಿಗಿರಿ / ೨೦
೧೭. ಅಂತರ್ ದ್ವಂದ್ವ / ೨೧
೧೮. ನಾನು ವಿಚಾರ ಮಾಡಹತ್ತುವೆ / ೨೨
೧೯. ಯಕ್ಷ ಪ್ರಶ್ನೆ / ೨೪
೨೦. ಗುರುತು / ೨೬
೨೧. ಕಾಲಮಹಿಮೆ / ೩೦
೨೨. ಹಸಿರು ಹುಲ್ಲಿನ ಮೇಲೆ / ೩೧
೨೩. ನಾನು ಶಾಂತನಲ್ಲ, ನಾನು ಹಾಡುವುದಿಲ್ಲ / ೩೩
೨೪. ಹಿರೋಶಿಮಾದ ನೋವು / ೩೪
೨೫. ಭಗ್ನವಾದ ಕನಸು / ೩೬
೨೬. ದೂರದಲ್ಲಿ ಯಾರೋ ಕಣ್ಣೀರು / ೩೭
೨೭. ತಿರುವಿನಲ್ಲಿ / ೩೯
೨೮. ಯಾವ ಹಾದಿಯಿಂದ ಹೋಗಲಿ? / ೪೧
೨೯. ಹೊಸ ಬಂಧನ / ೪೨
೩೦. ಕಾವಲು / ೪೩
೩೧. ಒಂದು ವರ್ಷ / ೪೪
೩೨. ಯಾರವನು? / ೪೫
೩೩. ಜೈಲಿನಲ್ಲಿಯ ಅನುಕೂಲತೆ / ೪೬
೩೪. ರಾವಣ ದಹನ / ೪೭
೩೫. ಅತ್ತು ಅತ್ತು ರಾತ್ರಿ ಮಲಗಿತು / ೪೮
೩೬. ದೀಪಾವಳಿ / ೪೯
೩೭. ಮತ್ತೆ ಸೂರ್ಯ ಬೆಳಗಲಿದ್ದಾನೆ / ೫೦
೩೮. ಜೀವನ ಸಂಜೆ / ೫೧
೩೯. ತೃಪ್ತಿ / ೫೨
೪೦. ಎತ್ತರ / ೫೫
Reviews
There are no reviews yet.