ದೇಶಭಕ್ತರಿಗೊಂದು ಸೆಲ್ಯೂಟ್
ಈ ಕಾದಂಬರಿಯ ಕಥಾನಾಯಕ ಸತ್ಯಪ್ಪನ ಕಥೆ ಅನೇಕ ದಿನಗಳಿಂದ ನನ್ನ ತಲೆಯಲ್ಲಿ ಸುತ್ತು ಹೊಡೆಯುತ್ತಿತ್ತು. ಹುಬ್ಬಳ್ಳಿಯ ಸರ್ಕಾರಿ ಕನ್ನಡ ಗಂಡುಮಕ್ಕಳ ಎರಡನೆಯ ನಂಬರಿನ ಶಾಲೆಯಲ್ಲಿ ನಾನು ಕಲಿಯುತ್ತಿದ್ದಾಗ ಈ ಸತ್ಯಪ್ಪ ನಮ್ಮ ಓಣಿಯಲ್ಲಿ ಬಲು ಫೇಮಸ್ಸಾಗಿದ್ದ. ಆತ ಮಾಮಲೇದಾರ್(ಈಗಿನ ತಹಸೀಲದಾರ್) ಕಚೇರಿಯಲ್ಲಿ ಅಟೆಂಡರ್‌ನೆಂದು ಕೆಲಸ ಮಾಡುತ್ತಿದ್ದ. ಕಚೇರಿಯಲ್ಲಿ ಪ್ರತಿದಿನ ಮುಂಜಾನೆ ರಾಷ್ಟ್ರಧ್ವಜವನ್ನು ಹಾರಿಸುವ ಮತ್ತು ಸಂಜೆ ಇಳಿಸುವ ಕೆಲಸ ಈತನದ್ದೇ ಆಗಿತ್ತು. ಅದನ್ನು ಆತ ಎಷ್ಟು ಶ್ರದ್ಧೆಯಿಂದ ಮಾಡುತ್ತಿದ್ದನೆಂದರೆ: ಪ್ರತಿದಿನ ಮುಂಜಾನೆ ಸ್ನಾನ ಮಾಡಿ, ಆರು ಗಂಟೆಯೆಂದರೆ ಆತ ಕಚೇರಿಗೆ ಹೋಗಿ ರಾಷ್ಟ್ರಧ್ವಜವನ್ನು ಆರೋಹಿಸುತ್ತಿದ್ದ. ಜನಗಣಮನ, ವಂದೇ ಮಾತರಂ, ಝೆಂಡಾ ಉಂಚಾ ರಹೇ ಹಮಾರಾ, ಏರಲಿ ಹಾರಲಿ ಈ ಮುಂತಾದ ದೇಶಭಕ್ತಿಪರ ಗೀತೆಗಳನ್ನು ದೊಡ್ಡ ಧ್ವನಿಯಲ್ಲಿ ಹಾಡುತ್ತಿದ್ದ. ಸಂಜೆ ಕೈಯನ್ನು ಸ್ವಚ್ಛವಾಗಿ ತೊಳೆದು ಧ್ವಜವನ್ನು ಇಳಿಸುತ್ತಿದ್ದ.
ಈತ ಎಂದೂ ಲಂಚ ತಿನ್ನಲಿಲ್ಲ. ಒಂದೆರಡು ಸಲ ಯಾರೋ ಅವನಿಗೆ ಒಂದಿಷ್ಟು ಹಣವನ್ನು ಕೊಡಲು ಹೋದರು. ಆತ ಅದನ್ನು ನಯವಾಗಿ ತಿರಸ್ಕರಿಸಿದ. ಅವರು ಇದು ಲಂಚವೆಂದು ಭಾವಿಸಬೇಡ; ಭಕ್ಷಿಸೆಂದು ತಿಳಕೋ ಎಂದರು. ಅದಕ್ಕೆ ಆತ ಸ್ವಾಮೀ, ನನ್ನ ಈ ಕೈಗಳು ಪ್ರತಿದಿನ ರಾಷ್ಟ್ರಧ್ವಜವನ್ನು ಮುಟ್ಟುತ್ತವೆ. ರಾಷ್ಟ್ರಧ್ವಜ ಮುಟ್ಟಿದ ಈ ಕೈಗಳು ಹರಾಮದ ಸಂಕೇತವಾಗಿರುವ ಲಂಚವನ್ನಾಗಲೀ, ಬೆವರು ಸುರಿಸದೇ ಗಳಿಸುವ ಭಕ್ಷೀಸನ್ನಾಗಲೀ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದ. ಇಂತಹ ಸತ್ಯಪ್ಪ ಬಡತನದಲ್ಲಿಯೇ ಸತ್ತ. ತನ್ನ ಬಡತನದ ಬಗ್ಗೆ ಆತನೆಂದೂ ಬೇಸರ ಪಟ್ಟುಕೊಂಡಿರಲಿಲ್ಲ. ಆದರೆ ತನ್ನ ಮಗ ಹಾದಿ ಬಿಟ್ಟಿದ್ದರ ಬಗ್ಗೆ ಅವನಿಗೆ ದುಃಖವಿತ್ತು.
ನನ್ನ ದೇವರಾಯ ಕಾದಂಬರಿ ಇಂಗಳೆಮಾರ್ಗವೆಂದು ಚಲನಚಿತ್ರವಾದಾಗ ಅದನ್ನು ನಿರ್ದೇಶಿಸಿದವರು ಪ್ರತಿಭಾವಂತ ನಿರ್ದೇಶಕರಾದ ವಿಶಾಲ್‌ರಾಜ್. ಇಂಗಳೆಮಾರ್ಗವನ್ನು ನಿರ್ಮಿಸಿದವರು ಬಾಗಲಕೋಟೆಯವರಾದ ಘನಶ್ಯಾಮ ಭಾಂಡಗೆಯವರು. ಘನಶ್ಯಾಮರಿಗೆ ಚಲನಚಿತ್ರರಂಗ ಹೊಸದಾಗಿದ್ದರೂ ಅವರು ಬಹು ಉತ್ಸಾಹದಿಂದ ಚಲನಚಿತ್ರ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸ್ವತಃ ವಿಕಲ ಚೇತನರಾಗಿದ್ದರೂ ಅವರ ಉತ್ಸಾಹ ದೊಡ್ಡದು. ಇಂಗಳೆಮಾರ್ಗವು ರಾಜ್ಯಪ್ರಶಸ್ತಿ, ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. ಚಲನಚಿತ್ರಕ್ಕಾಗಿ ನಾನು ಬರೆದ ಹಾಡು ಪಾನ್ ಪಾನ್ ಪಾನ್ ಮಸ್ತರಂಗೀಲಾಕ್ಕೆ ನೃತ್ಯ ಮಾಡಿದ ರೂಪಿಕಾ ಅವರಿಗೆ ಈ ನೃತ್ಯಕ್ಕಾಗಿಯೇ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದಿತು. ಈ ಎಲ್ಲ ಸಂತೋಷಗಳನ್ನು ಹಂಚಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿಶಾಲ್‌ರಾಜ್ ನನಗೆ ಇನ್ನೊಂದು ಕಾದಂಬರಿಯನ್ನು ತಮ್ಮ ಮುಂದಿನ ಚಲನಚಿತ್ರಕ್ಕಾಗಿ ನೀಡಲು ಕೇಳಿಕೊಂಡರು. ನಾನು ಸತ್ಯಪ್ಪನ ಕಥೆಯನ್ನು ಒಂದು ಲೈನ್ ಕಥೆಯನ್ನಾಗಿ ಹೇಳಿದೆ. ಅವರು ಅದರಿಂದ ಎಷ್ಟು ಪ್ರಭಾವಿತರಾದರೆಂದರೆ ಈ ಕಥೆಯೇ ತಮ್ಮ ಮುಂದಿನ ಚಲನಚಿತ್ರದ ಕಥಾವಸ್ತುವೆಂದು ಹೇಳಿದರು. ನಿರ್ಮಾಪಕರಾದ ಕೆ.ಎಂ. ನಂಜೇಗೌಡ ಹಾಗೂ ಕೆ.ಎಸ್.ಸತೀಶ್ ಇಬ್ಬರೂ ಈ ಕಥೆಯಿಂದ ಪ್ರಭಾವಿತರಾಗಿ ಚಿತ್ರವನ್ನು ನಿರ್ಮಿಸಲು ಮುಂದೆ ಬಂದರು. ನಿರ್ದೇಶಕರಾದ ವಿಶಾಲ್‌ರಾಜ್‌ರಿಗೆ, ನಿರ್ಮಾಪಕರುಗಳಾದ ಕೆ.ಎಂ. ನಂಜೇಗೌಡ ಮತ್ತು ಕೆ.ಎಸ್. ಸತೀಶ್ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಕಾದಂಬರಿಗೆ ಜುಲೈ ೨೨, ೧೯೪೭ ಎಂದು ಹೆಸರನ್ನಿಟ್ಟಿದ್ದೇನೆ. ಈ ದಿನವೆಂದರೆ ಅದು ರಾಷ್ಟ್ರಧ್ವಜವು ಹುಟ್ಟಿದ ದಿನ. ಉತ್ತರ ಭಾರತದ ಅನೇಕ ಕಡೆಗಳಲ್ಲಿ ಜುಲೈ ೨೨ನ್ನು ರಾಷ್ಟ್ರಧ್ವಜ ಜನ್ಮದಿನವೆಂದು ಆಚರಿಸುತ್ತಾರೆ. ಆ ದಿನವನ್ನೇ ನಾನು ಕಾದಂಬರಿಯ ಹೆಸರನ್ನಾಗಿಸಿದ್ದೇನೆ. ಈ ಕಾದಂಬರಿಯ ಆಧಾರದ ಮೇಲೆ ಚಲನಚಿತ್ರವಾಗುತ್ತಿರುವ ಸಿನೇಮಾಕ್ಕೂ ಅದೇ ಹೆಸರನ್ನು ಇಡಲಾಗಿದೆ.
ಕಾದಂಬರಿಯ ಕೊನೆಗೆ ಕೆಲವು ಯುವಕರು ಟ್ರೇನಿನಲ್ಲಿ ರಾಷ್ಟ್ರಧ್ವಜವನ್ನು ಸೀಟಿನ ಮೇಲೆ ಹಾಸಿ ಅದರ ಮೇಲೆ ಇಸ್ಟೀಟಿನ ಎಲೆಗಳನ್ನು ಹಾಸಿ ಇಸ್ಪೀಟನ್ನು ಆಡಿದ ಘಟನೆಯನ್ನು ಬರೆದಿದ್ದೇನೆ. ಇದು ಕಾಲ್ಪನಿಕವಾದ ಘಟನೆಯಲ್ಲ. ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದ ಉಮಾ ಭಾರತಿಯವರು ಹುಬ್ಬಳ್ಳಿಯ ಈದಗಾ ಮೈದಾನಿನ ರಾಷ್ಟ್ರಧ್ವಜ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ಕೋರ್ಟು ಸಮನ್ಸ್ ಜಾರಿ ಮಾಡಿದಾಗ ಅವರು ತಮ್ಮ ಮುಖ್ಯಮಂತ್ರಿ ಪದಕ್ಕೆ ರಾಜೀನಾಮೆ ನೀಡಿ, ಹುಬ್ಬಳ್ಳಿ ಕೋರ್ಟಿಗೆ ಆರೋಪಿಯಾಗಿ ಹಾಜರಾಗಬೇಕಾಯಿತು. ಆಗ ಅವರು, ಅವರ ಸಂಪುಟದ ಹಲವಾರು ಸಚಿವರು ಮತ್ತು ಅನುಯಾಯಿಗಳು ಟ್ರೇನಿನಲ್ಲಿ ಹುಬ್ಬಳ್ಳಿಗೆ ಬಂದಿಳಿದರು. ಈ ಯಾತ್ರೆಯನ್ನು ತಿರಂಗಾಯಾತ್ರಾ ಎಂಬ ಹೆಸರಿನಿಂದ ಕರೆಯ ಲಾಯಿತು. ಅವರ ಅನುಯಾಯಿಗಳಲ್ಲಿ ಒಂದಿಷ್ಟು ಯುವಕರು ಟ್ರೇನಿನಲ್ಲಿ ರಾಷ್ಟ್ರಧ್ವಜವನ್ನು ಹಾಸಿ ಅದರ ಮೇಲೆ ಮಲಗಿದ, ರಾಷ್ಟ್ರಧ್ವಜವನ್ನು ಸೀಟಿನ ಮೇಲೆ ಹಾಕಿ ಅದರ ಮೇಲೆ ಇಸ್ಟೀಟು ಆಡಿದ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ ಬಿಜೆಪಿಗೆ ಇರಿಸು ಮುರಿಸಾಗಿತ್ತು. ಈ ಬಗ್ಗೆ ಕೆಲವರು ಕೋರ್ಟಿಗೂ ಹೋದರು. ಆ ಘಟನೆಯನ್ನು ಸತ್ಯಪ್ಪನ ಕಥೆಗೆ ಜೋಡಿಸಿ ನಾನು ಕಾದಂಬರಿಯನ್ನು ಮುಗಿಸಿದ್ದೇನೆ.
ಇಲ್ಲಿ ಮೂರು ತಲೆಮಾರುಗಳ ಕಥೆಯನ್ನು ಹಿಡಿದಿಟ್ಟಿದ್ದೇನೆ. ರಾಮಪ್ಪ ಕ್ರಾಂತಿಕಾರಿಯಾಗಿದ್ದರೆ ಅವನ ಮಗ ಸತ್ಯಪ್ಪ ನಿಷ್ಟಾವಂತ ಅಪ್ಪಟ ದೇಶಭಕ್ತ. ಆತನ ಮಗ ಮೋಹನ ತಂದೆಯ ವಿರುದ್ಧವೇ ಬಂಡೇಳುತ್ತಾನೆ; ಇಲ್ಲಸಲ್ಲದ್ದನ್ನು ಮಾಡಿ ತಂದೆ ತಾಯಿಗಳ ಮನಸ್ಸನ್ನು ನೋಯಿಸುತ್ತಾನೆ. ಕೊನೆಗೆ ತಂದೆಯ ಮಹತ್ವ ಗೊತ್ತಾಗಿ ಪಶ್ಚಾತ್ತಾಪಕ್ಕೀಡಾಗುತ್ತಾನೆ. ಈ ಮೂರು ತಲೆಮಾರುಗಳನ್ನು ಚಿತ್ರಿಸುವಾಗ ಆಯಾ ಕಾಲದ ವಾತಾವರಣವು ಸಾಕ್ಷಾತ್ಕರಿತವಾಗು ವಂತೆ ಪ್ರಯತ್ನಿಸಿದ್ದೇನೆ. ರಾಜಸ್ಥಾನದ ಗುರ್ಜರ ಮದುವೆಯು ಬೆಳಗಾವಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬಿದ್ದು, ಅದು ಅನೇಕ ಮುಗ್ಧ ಬಡ ಯುವತಿಯರಿಗೆ ಮರಣ ಶಾಸನದಂತೆ ಕಾಡಿಸುತ್ತಿದೆ. ಈ ಬಗ್ಗೆ ಜನಜಾಗೃತಿಯಾಗುವ ಅವಶ್ಯಕತೆ ಇದೆ. ಇಲ್ಲಿ ಒಬ್ಬ ಜ್ವಾಲಾಮಾಲಿನಿ ಉದಾಹರಣೆಯಾಗಿ ಬಂದಿದ್ದಾಳೆ. ಅಲ್ಲಿ ಸಾವಿರಾರು ಜ್ವಾಲಾಮಾಲಿನಿಗಳು ಬಡಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ವಿಕೃತ ಕಾಮದ ಜ್ವಾಲೆಯಲ್ಲಿ ಜೀವಂತ ಸುಡಲ್ಪಡುತ್ತಿದ್ದಾರೆ. ಇಂತಹ ಅನಿಷ್ಟ ಪದ್ಧತಿಗಳು ನಿಲ್ಲಬೇಕೆಂಬುದೇ ಈ ಪ್ರಕರಣವನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ.
ಕಾದಂಬರಿಯಲ್ಲಿ ಬಂದಿರುವ ಹಲವಾರು ಪಾತ್ರಗಳು ಆಯಾ ಕಾಲದಲ್ಲಿ ಇದ್ದ ಪಾತ್ರಗಳೇ ಆಗಿವೆ. ಸ್ವಾತಂತ್ರ್ಯಕ್ಕಾಗಿ ಅವರು ಮಾಡಿದ ತ್ಯಾಗ ಅಪ್ರತಿಮವಾದದ್ದು. ಆ ಪಾತ್ರಗಳ ಹೆಸರುಗಳನ್ನು ನಾನು ಅದೇ ರೀತಿಯಾಗಿ ಇಲ್ಲಿ ಉಳಿಸಿಕೊಂಡಿದ್ದೇನೆ. ಈ ಎಲ್ಲ ಕ್ರಾಂತಿಕಾರಿಗಳಿಗೆ ನನ್ನದೊಂದು ಸೆಲ್ಯೂಟ್ ಸಲ್ಲುತ್ತದೆ.
ಕಾದಂಬರಿಯನ್ನು ನನ್ನ ಪ್ರೀತಿಯ ಕಾದಂಬರಿಕಾರರಾದ ಬಸವರಾಜ ಕಟ್ಟೀಮನಿ ಅವರಿಗೆ ಅರ್ಪಿಸಿದ್ದೇನೆ. ಕಟ್ಟೀಮನಿಯವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರ ಮಾಡಿ ಮಡಿದವರು ಕಾದಂಬರಿ ಅವರ ಸ್ವಾತಂತ್ರ್ಯ ಚಳುವಳಿಯ ಅನುಭವದ ಸಾರದ ಮೇಲೆಯೇ ರಚಿಸಲ್ಪಟ್ಟಿದೆ. ಕನ್ನಡ ಸಾಹಿತ್ಯಲೋಕಕ್ಕೆ ಅವರು ಮೌಲಿಕವಾದ ೬೩ ಕೃತಿಗಳನ್ನು ನೀಡಿದ್ದಾರೆ. ಹೋರಾಟ ಮತ್ತು ಅಕ್ಷರ ಎರಡನ್ನೂ ಯಶಸ್ವಿಯಾಗಿ ಸಾಧ್ಯಮಾಡಿ ತೋರಿಸಿದ ಕಟ್ಟೀಮನಿ ಯವರು ಸಾಹಿತ್ಯ ರಚನೆಯಲ್ಲಿ ನನ್ನ ಸ್ಫೂರ್ತಿಯಾಗಿದ್ದವರು. ಅವರ ದಿವ್ಯಸ್ಮೃತಿಗೆ ಈ ಕೃತಿಯನ್ನು ಅರ್ಪಿಸುತ್ತಿದ್ದೇನೆ.
ಕಾದಂಬರಿಯನ್ನು ಬರೆಯುವಾಗ ಸತೀಶ ಕುಲಕರ್ಣಿ, ಮನು ಬಳಿಗಾರ್, ಶಿರೀಷ ಜೋಶಿ, ರವಿ ಕೋಟಾರಗಸ್ತಿ, ರಾಮಕೃಷ್ಣ ಮರಾಠೆ, ಎ.ಬಿ. ಘಾಟಗೆ, ಮಹಾಂತೇಶ ಚಲವಾದಿ ಮುಂತಾದ ಗೆಳೆಯರು ಮೌಲಿಕವಾದ ಸಲಹೆಗಳನ್ನು ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ. ಗೆಳೆಯ ಪ್ರಕಾಶ ಗಿರಿಮಲ್ಲನವರ ಅಚ್ಚುಕಟ್ಟಾಗಿ ಡಿಟಿಪಿ ಮಾಡಿದ್ದಾನೆ. ಅವನಿಗೂ ನನ್ನ ಕೃತಜ್ಞತೆಗಳು.
ಕಾದಂಬರಿಯನ್ನು ಪ್ರಕಟಿಸಿದ ಹೊಸಪೇಟೆ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಮತ್ತು ಗೆಳೆಯ ಗಣೇಶ ಯಾಜಿ ಅವರಿಗೆ, ಮುಖಪುಟ ಚಿತ್ರ ಬಿಡಿಸಿದ ಲಕ್ಕಿ ಜಾಫರ್ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಪತ್ನಿ ಸುಮಾ, ಮಕ್ಕಳಾದ ಸಂಸ್ಕೃತಿ, ಶ್ರೇಯಸ್, ರಾಕೇಶ್ ಹಾಗೂ ಮೊಮ್ಮಗಳು ಪ್ರಿಶಾ ಅವರಿಗೆ ಪ್ರೀತಿಯ ನೆನಕೆಗಳು.
ಸರಜೂ ಕಾಟ್ಕರ್
Reviews
There are no reviews yet.