ಮುನ್ನುಡಿ
ಸಾಹಿತ್ಯ ಜನಜೀವನದ ಗತಿಬಿಂಬವೆಂಬ ಮಾತಿದೆ. ಇದು ರಂಗಭೂಮಿಗೆ ಹೆಚ್ಚು ಅನ್ವಯಿಸುತ್ತದೆ ಎಂದರೆ ತಪ್ಪಾಗಲಾರದು. ಕನ್ನಡ ರಂಗಭೂಮಿಯ ಮಹತ್ವದ ಭಾಗವಾಗಿರುವ ಜನಪದ ಗ್ರಾಮಿಣ ವೃತ್ತಿರಂಗಭೂಮಿಗಳು ಇಂದಿಗೂ ಕನ್ನಡ ಜನಮನವನ್ನು ಹಿಡಿದಿಟ್ಟಿವೆ; ಮಾತ್ರವಲ್ಲ ಜನಪ್ರಿಯ ಚಲನಚಿತ್ರವನ್ನು ಗಾಢವಾಗಿ ಪ್ರಭಾವಿಸುತ್ತಿವೆ. ಆದುದರಿಂದ ಕನ್ನಡ ರಂಗಭೂಮಿಯ ಅಧ್ಯಯನವೆಂದರೆ ಕನ್ನಡ ಸಂಸ್ಕೃತಿಯ ಅಧ್ಯಯನವೆಂದೇ ತಿಳಿಯಬೇಕಾಗುತ್ತದೆ.
ಈ ಹಿನ್ನೆಲೆಯಲ್ಲಿ ಕನ್ನಡ ವೃತ್ತಿರಂಗಭೂಮಿಯ ಉಗಮ ಮತ್ತು ವಿಕಾಸದ ಮೇಲೆ ಆಗಿರುವ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಲು, ಅದು ಹುಟ್ಟಿ ಬೆಳೆದುಬಂದ ಕಾಲದ ಅರಿವು ಮುಖ್ಯವಾಗುತ್ತದೆ. ಭಾರತಿಯ ಪುನರುಜ್ಜೀವನ ಪ್ರಕ್ರಿಯೆಯ ಅಂಗವಾಗಿಯೆ ಆಧುನಿಕ ರಂಗಭೂಮಿ ವಿಕಾಸ ಹೊಂದಿರುವುದು ಕೇವಲ ಆಕಸ್ಮಿಕವೆಂದು ತಿಳಿಯು ವಂತಿಲ್ಲ. ಬ್ರಿಟಿಷರ ಆಡಳಿತ, ಇಂಗ್ಲಿಷ್ ಭಾಷಾ ಬಳಕೆಯು ಭಾರತೀಯ ಸಾಮಾಜಿಕ ಬದುಕನ್ನು ಪ್ರಭಾವಿಸಿದ ಫಲವಾಗಿ ಒಂದು ಹೊಸ ದೃಷ್ಟಿ ಬೆಳೆಯಿತು. ಭಾರತೀಯ ಸಂಸ್ಕೃತಿಯ ಸಂಕ್ರಮಣ ಕಾಲವೆಂದು ಇದನ್ನು ಇತಿಹಾಸಕಾರರು ಕರೆದಿದ್ದಾರೆ. ಕಲೆ, ಸಾಹಿತ್ಯ, ಸಮಾಜ- ಹೀಗೆ ಹಲವು ನೆಲೆಯಿಂದ ಈ ಬದಲಾವಣೆಯನ್ನು ಗುರುತಿಸಲಾಗಿದೆ,
ಇಂಗ್ಲಿಷ್ ವಸಾಹತುಶಾಹಿಯು ಹತ್ತೊಂಬತ್ತನೆಯ ಶತಮಾನದ ಭಾರತವನ್ನು ವ್ಯಾಪಿಸುತ್ತಿರುವಾಗಲೇ ಅದರ ಪ್ರಭಾವ ಕಲೆ, ಸಾಹಿತ್ಯ, ರಂಗಭೂಮಿಯನ್ನು ಆವರಿಸುವುದು ಸಹಜವಾದ ಬೆಳವಣಿಗೆ ಎನ್ನಬಹುದಾಗಿದೆ. ಹತ್ತೊಂಭತ್ತನೆಯ ಶತಮಾನದ ಮಧ್ಯ ಭಾಗದಲ್ಲಿ ಷೇಕ್ಸಪಿಯರ್ ನಾಟಕಗಳ ರೂಪಾಂತರಗಳ ಮೂಲಕ ಆಧುನಿಕ ಕನ್ನಡ ನಾಟಕದ ಅರುಣೋದಯವಾದಂತೆ, ಇಂಗ್ಲೆಂಡಿನ ವೃತ್ತಿರಂಗಭೂಮಿಯ ಪ್ರಭಾವದಿಂದ ಭಾರತೀಯ ತನ್ಮೂಲಕ ಕನ್ನಡ ವೃತ್ತಿರಂಗಭೂಮಿ ಉದಯಿಸಿತು. ಭೌತಿಕವಾಗಿ ಪಾಶ್ಚಾತ್ಯ ಪ್ರಭಾವವಿದ್ದರೂ ಕನ್ನಡ ವೃತ್ತಿರಂಗಭೂಮಿಯ ಆಂತರಿಕ ಸತ್ವ ಮಾತ್ರ ಭಾರತೀಯವಾದದು. ನಮ್ಮ ಪುರಾಣ, ಜನಪದ ಐತಿಹ್ಯ, ಚರಿತ್ರೆ, ಸಂಸ್ಕೃತ ನಾಟಕ ಪರಂಪರೆ ಇದೆಲ್ಲ ನಮ್ಮ ಕಂಪನಿ ನಾಟಕಗಳನ್ನು ರೂಪಿಸಿದೆ. ಸಮಕಾಲೀನ ರಾಜಕೀಯ ಹಾಗೂ ಸಾಮಾಜಿಕ ಸಮಸ್ಸೆ ಹೋರಾಟಗಳೂ ಅಲ್ಲಿ ಅವಕಾಶ ಪಡೆದಿವೆ.
ಡಾ. ಪ್ರಕಾಶ ಗರುಡರ ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ ಎಂಬ ಕೃತಿಯ ಮೊದಲ ಅಧ್ಯಾಯದಲ್ಲಿಯೇ ಪಾಶ್ಚಾತ್ಯ ದೇಶಗಳ ರಂಗಭೂಮಿಯಲ್ಲಿ ವೃತ್ತಿಪರತೆ ಬೆಳೆದುಬಂದ ರೀತಿಯ ಬಗೆಗೆ ಪ್ರಸ್ತಾವನೆ ಇದೆ. ಕನ್ನಡ ವೃತ್ತಿರಂಗಭೂಮಿಯ ಅಧ್ಯಯನಕ್ಕೆ ಇದು ಬುನಾದಿ ಹಾಕುತ್ತದೆ. ಪರಂಪರೆಯ ನೆನಪನ್ನು ಆಶಯದ ನೆಲೆಯಲ್ಲಿ ಉಳಿಸಿ ಕೊಂಡರೂ ಆ ಕೃತಿಯ ಮಟ್ಟಿಗೆ ಕನ್ನಡ ರಂಗಭೂಮಿಯು ಪಡೆದ ಸ್ಥಿತ್ಯಂತರದ ಕಾಲವನ್ನು ಒಂದು ಮಹತ್ವದ ಘಟ್ಟವೆಂದೇ ತಿಳಿಯಬೇಕಾಗಿದೆ. ಆಧುನಿಕ ಭಾರತೀಯ ರಂಗಭೂಮಿಯ ಜೊತೆಜೊತೆಗೇ ಕನ್ನಡ ವೃತ್ತಿರಂಗಭೂಮಿಯು ಬೆಳೆಯುತ್ತಲೇ ಕನ್ನಡತನವನ್ನು ಅದು ಹೇಗೆ ಕಾಪಾಡಿಕೊಂಡು ಬಂದಿತೆಂಬುದನ್ನು ಗರುಡರು ನಿದರ್ಶನ ಸಹಿತ ನಿರೂಪಿಸಿದ್ದಾರೆ. ಮೈಸೂರು ಪ್ರದೇಶದ ವೃತ್ತಿರಂಗಭೂಮಿಯ ಚಟುವಟಿಕೆಗಳ ಸ್ಥೂಲ ನೋಟವನ್ನು ನೀಡುವ ಮೂಲಕ ಕನ್ನಡ ವೃತ್ತಿರಂಗಭೂಮಿಯ ಬಗೆಗೆ ಚರ್ಚೆಯನ್ನು ಆರಂಭಿಸಿದರೂ, ಅವರು ತಮ್ಮ ಅಧ್ಯಯನದ ಬಹುಭಾಗವನ್ನು ಉತ್ತರ ಕರ್ನಾಟಕದ ವೃತ್ತಿರಂಗಭೂಮಿಗೆ ಮೀಸಲಿರಿಸಿದ್ದಾರೆ. ಮೈಸೂರು ಪ್ರದೇಶದ ಕಂಪನಿ ನಾಟಕಗಳಲ್ಲಿ ವಸ್ತು ವೈವಿಧ್ಯತೆ ಅಷ್ಟಾಗಿ ಗೋಚರಿಸುವುದಿಲ್ಲವೆಂಬ ಅವರ ಅಭಿಪ್ರಾಯ ಸತ್ಯಕ್ಕೆ ಸಮೀಪವಿದೆ. ಮೈಸೂರು ಪ್ರದೇಶದ ನಾಟಕ ಕಂಪನಿಗಳಿಗೆ ಲಭ್ಯವಾದ ರಾಜಕೀಯ, ಸಾಮಾಜಿಕ ಸ್ಥಿರತೆಯಿಂದಾಗಿ ಗುಬ್ಬಿ ಕಂಪನಿಯಂತಹ ವರ್ಣರಂಜಿತ ದಾಖಲೆಗಳನ್ನು ಕಾಣಿಸಿದರೂ ಸಾಮಾಜಿಕವಾಗಿ ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯಂತೆ ಜನಜೀವನದೊಂದಿಗೆ ಹಾಸುಹೊಕ್ಕಾಗಿ ಬೆಳೆಯಲಿಲ್ಲವೆಂಬುದು ಗಮನಾರ್ಹವಾಗುತ್ತದೆ. ಬ್ರಿಟೀಷರ ನೇರ ಆಡಳಿತದಲ್ಲಿದ್ದ ಉತ್ತರ ಕರ್ನಾಟಕದ ರಾಜಕೀಯ ಹೋರಾಟ ಹಾಗೂ ಸಾಮಾಜಿಕ ಅಸ್ಥಿರತೆ ಅಲ್ಲಿನ ರಂಗಭೂಮಿಯನ್ನು ಪ್ರಭಾವಿಸಿ, ಸಂಘರ್ಷದ ಮೂಲಕವೇ ಸ್ವಂತಿಕೆಯನ್ನು ಅವು ಕಾಪಾಡಿಕೊಳ್ಳುವುದನ್ನು ನಾವು ಕಾಣಬಹುದಾಗಿದೆ. ಅದೇನಿದ್ದರೂ ಗರುಡರು ತಮ್ಮ ಅಧ್ಯಯನದ ವ್ಯಾಪ್ತಿಯಲ್ಲಿ ಮೈಸೂರು ಪ್ರದೇಶ ಹಾಗೂ ಉತ್ತರ ಕರ್ನಾಟಕದ ಬಹುಪಾಲು ಮುಖ್ಯ ತಂಡಗಳ ವೈಶಿಷ್ಟ್ಯವನ್ನು ಗುರುತಿಸಿದ್ದಾರೆ. ಪ್ರಮುಖ ನಟರು, ನಾಟಕಗಳು, ಸಂಘಟಕರು ಕಂಪನಿಗಳ ವಿವರಪೂರ್ಣ ಮಾಹಿತಿ ನೀಡಿದ್ದಾರೆ. ಉಚ್ಚ್ರಾಯ ಕಾಲ, ಮಧ್ಯಕಾಲ, ಅವನತಿ ಹಾದಿ-ಹೀಗೆ ಮೂರು ಕಾಲಘಟ್ಟಗಳಲ್ಲಿ ವಿಂಗಡಿಸಿಕೊಂಡು ಕನ್ನಡ ವೃತ್ತಿರಂಗಭೂಮಿಯ ಅಧ್ಯಯನವನ್ನು ನಡೆಸಿರುವ ಅವರು ಆಯಾ ಕಾಲದ ವೈಶಿಷ್ಟ್ಯಗಳು, ಸಂದರ್ಭಗಳು, ಪ್ರಮುಖ ಕಲಾವಿದರು, ಇದೆಲ್ಲವನ್ನೂ ಸೂಕ್ಷ್ಮವಾಗಿ ಗ್ರಹಿಸಿ ದಾಖಲಿಸಿದ್ದಾರೆ. ವೃತ್ತಿಪರತೆಯೇ ವೃತ್ತಿರಂಗಭೂಮಿಯ ಲಕ್ಷಣ ವಾಗಿರುವಾಗ ಅವನತಿಯ ಹಾದಿಯಲ್ಲಿರುವ ಇಂದಿನ ಕಂಪನಿ ರಂಗಭೂಮಿಯನ್ನು ವಾಣಿಜ್ಯ ರಂಗಭೂಮಿಯೆಂದು ಅವರು ಕರೆದಿರುವುದು ನ್ಯಾಯವಾಗಿಯೇ ಇದೆ.
ವೃತ್ತಿರಂಗಭೂಮಿಯ ಪ್ರಯೋಗಾಂಗಗಳು ಎಂಬ ಅಧ್ಯಾಯದಲ್ಲಿ, ಕಂಪನಿ ನಾಟಕಗಳ ಸ್ವರೂಪವನ್ನು ಕುರಿತ ಚರ್ಚೆಯಿದೆ. ರಂಗಮಂದಿರ, ರಂಗಸಜ್ಜಿಕೆ, ವೇಷ ಭೂಷಣ ಬೆಳಕಿನ ವ್ಯವಸ್ಥೆ, ಪ್ರಸಾದನ ಮುಂತಾದವುಗಳ ವಿವರಪೂರ್ಣ ಮಾಹಿತಿಯನ್ನು ಈ ಅಧ್ಯಾಯದಲ್ಲಿ ನೀಡಲಾಗಿದೆ. ರಂಗಭೂಮಿಯ ಜೀವಾಳವೆನಿಸಿದ ಅಭಿನಯ ಮತ್ತು ಸಂಗೀತದ ಮಹತ್ವವನ್ನು ವಿವರಿಸುತ್ತಾ ಶ್ರೇಷ್ಠ ಕಂಪನಿ ನಟರ ಬಗೆಗೆ ಉಲ್ಲೇಖವಿದೆ. ಪಾತ್ರಗಳ ಹೆಸರಿನಿಂದಲೇ ಗುರುತಿಸಲಾಗುತ್ತಿದ್ದ ಮಹಾನ್ ನಟರ ಒಂದು ಪಟ್ಟಿಯನ್ನೇ ನೀಡಿ, ಇಂದಿನ ಚಲನಚಿತ್ರಗಳ ತಾರಾ ಪದ್ಧತಿಯ ಮೂಲ, ವೃತ್ತಿರಂಗಭೂಮಿಯೆಂದು ಅಭಿಪ್ರಾಯಪಟ್ಟಿದ್ದಾರೆ. ಕಂಪನಿ ನಾಟಕಗಳಲ್ಲಿ ಸಾಹಿತ್ಯಕ್ಕಿಂತ ಪ್ರದರ್ಶನ ಸಾಧ್ಯತೆಗೆ ಮಹತ್ವ ದೊರೆತದ್ದನ್ನು ವಿವರಿಸುತ್ತಾ ಅಲ್ಲಿನ ವಸ್ತು ವಿಸ್ತಾರ, ವೈವಿಧ್ಯವನ್ನು ಗುರುತಿಸಿದ್ದಾರೆ. ಪೌರಾಣಿಕ, ಚಾರಿತ್ರಿಕ, ಸಾಮಾಜಿಕ-ಹೀಗೆ ವಸ್ತು ಯಾವುದಿದ್ದರೂ ಸಹ ನೀತಿ ಪ್ರತಿಪಾದನೆಗೆ ಅಲ್ಲಿ ಆಧ್ಯತೆಯಿರುವುದನ್ನು ಹಾಗೂ ಸರಳ ಕಪ್ಪು ಬಿಳುಪಿನ ಪಾತ್ರಗಳ ಮೂಲಕವೇ ಮೌಲ್ಯ ವಿವೇಚನೆ ನಡೆಸುವುದನ್ನು ಗುರುತಿಸುತ್ತಾರೆ. ಕಂಪನಿ ನಾಟಕಗಳು ಅವನತಿಯ ಹಾದಿಯಲ್ಲಿರುವ ಸಮಕಾಲೀನ ಸಂದರ್ಭದಲ್ಲಿಯೂ ಈ ನೀತಿ ಪ್ರತಿಪಾದನೆಯ ಗುರಿಯಿಂದ ಅವರು ವಿಮುಖರಾಗಿಲ್ಲವೆಂಬುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಜನಪ್ರಿಯ ಚಲನಚಿತ್ರಗಳು ಹಾಗು ಸಮಕಾಲೀನ ಕಂಪನಿ ನಾಟಕಗಳೆರಡೂ ಈ ವಿಚಾರದಲ್ಲಿ ಸಮಾನವಾದ ಆಸಕ್ತಿ ಇಟ್ಟುಕೊಂಡಿವೆ. ಪ್ರೇಕ್ಷಕ ವರ್ಗದ ಮನರಂಜನೆಗೆ ಕೀಳು ಅಭಿರುಚಿಯ ತಂತ್ರಗಳಿಗೆ ಮೊರೆಹೋದರೂ ಅಂತಿಮವಾಗಿ ದುಷ್ಟ ಶಿಕ್ಷೆ, ಶಿಷ್ಟ ರಕ್ಷೆಯ ಸತ್ಯಕ್ಕೇ ಜಯವೆಂಬ ಸೂತ್ರವೇ ಅವರ ಮಂತ್ರವಾಗಿದೆ.
ಎಚ್.ಕೆ.ರಂಗನಾಥ, ಸಿಂದುವಳ್ಳಿ ಅನಂತಮೂರ್ತಿ ಸೇರಿದಂತೆ ಹತ್ತಾರು ವಿದ್ವಾಂಸರು ಈಗಾಗಲೇ ಕನ್ನಡ ವೃತ್ತಿರಂಗಭೂಮಿಯ ಚಾರಿತ್ರಿಕ ಅಧ್ಯಯನವನ್ನು ನಡೆಸಿದ್ದಾರೆ. ಡಾ. ಪ್ರಕಾಶ ಗರುಡರ ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ ಈ ಅಧ್ಯಯನಗಳ ಸಾಲಿಗೆ ಇದೀಗ ಸೇರುತ್ತಿರುವ ಒಂದು ಅಪೂರ್ವ ಕೃತಿಯೆನ್ನಬಹುದು. ಹುಟ್ಟಿನಿಂದಲೇ ರಂಗಭೂಮಿಯ ಬಳುವಳಿಯನ್ನು ಪಡೆದುಕೊಂಡು ಬಂದ ಗರುಡರು ರಂಗಪರಿಸರ ದಲ್ಲಿಯೇ ಬೆಳೆದುಬಂದಿದ್ದಾರೆ. ಆಧುನಿಕ ರಂಗಭೂಮಿಯ ಸಂಪರ್ಕ, ಒಡನಾಟ, ಅವರ ಗ್ರಹಿಕೆಯನ್ನು ಪಕ್ವಗೊಳಿಸಿದೆ. ರೆಪರ್ಟರಿಗಳ ಮೂಲಕ ಆಧುನಿಕ ವೃತ್ತಿರಂಗಭೂಮಿ ರೂಪ ಹೊಂದುತ್ತಿರುವ ಸಮಕಾಲೀನ ಸಂದರ್ಭದಲ್ಲಿ ಕಂಪನಿ ನಾಟಕ ಅರ್ಥಾತ್ ವೃತ್ತಿರಂಗಭೂಮಿ, ಮಾದರಿಯ ಅಧ್ಯಯನಗಳಿಗೆ ವಿಶೇಷ ಮಹತ್ವವಿದೆ. ಡಾ. ಪ್ರಕಾಶ ಗರುಡರಂತಹ ಪ್ರತಿಭಾವಂತ ರಂಗಕರ್ಮಿ ಎರಡೂ ರಂಗಪರಂಪರೆಗಳನ್ನು ಬಲ್ಲವರಾದು ದರಿಂದ ಕನ್ನಡ ರಂಗಭೂಮಿ ಇನ್ನೂ ಹೆಚ್ಚಿನದನ್ನು ಅವರಿಂದ ನಿರೀಕ್ಷಿಸಬಹುದಾಗಿದೆ.
ಕೆ.ಮರುಳಸಿದ್ದಪ್ಪ
ನನ್ನ ಮಾತು
ಕಳೆದ ಶತಮಾನದ ಸುಮಾರು ಮೂವತ್ತು ನಲವತ್ತರ ದಶಕದಲ್ಲಿಯೇ ಈ ನಾಡಿನ ವೃತಿರಂಗಭೂಮಿಯ ಉಚ್ಛ್ರಾಯಕಾಲದ ಹಲವಾರು ತಂಡಗಳು ಆಧುನಿಕ ರಂಗಭೂಮಿಗೆ ತನ್ನ ಕೊಡುಗೆ ನೀಡಿ ಹೊಸ ರಂಗಪ್ರಕಾರವೊಂದನ್ನು ಹುಟ್ಟುಹಾಕಿ ನೇಪಥ್ಯಕ್ಕೆ ಸರಿದಿವೆ. ಈಗ ನಮ್ಮೆದುರಿಗಿರುವ ವೃತ್ತಿರಂಗಭೂಮಿಯ ತಂಡಗಳೇನಿದ್ದರೂ ಅವು ನಶಿಸಿಹೋದ ವೃತ್ತಿರಂಗಭೂಮಿಯ ಪೇಲಾದ ನಕಲುಗಳು ಮಾತ್ರ. ಹಾಳಾದೂರಿಗೆ ಉಳಿದವನೇ ಗೌಡ ಎಂಬ ರೀತಿಯಲ್ಲಿ ಇವುಗಳ ಕಲಾತ್ಮಕಮಟ್ಟ ಪೇಲಾಗಿದ್ದರೂ ಅವುಗಳನ್ನು ಅನಿವಾರ್ಯವಾಗಿ ವೃತ್ತಿರಂಗಭೂಮಿಯವರು ಎಂದು ಒಪ್ಪಿಕೊಳ್ಳಬೇಕಾಗಿದೆ. ಏಕೆಂದರೆ ಮುಖ್ಯವಾಗಿ ಈ ವೃತ್ತಿರಂಗಭೂಮಿಯವರು ತಮ್ಮ ಹಿಂದಿನವರಂತೆ ಪ್ರೇಕ್ಷಕರ ಪ್ರವೇಶ ಧನವನ್ನೇ ನೆಚ್ಚಿಕೊಂಡು ಅವರ ರಂಜನೆಗಾಗಿ ಪ್ರತಿನಿತ್ಯ ಮುಖಕ್ಕೆ ಬಣ್ಣಹಚ್ಚಿಕೊಂಡು ನಿರಂತರವಾಗಿ ನಾಟಕಗಳನ್ನಾಡುತ್ತಾ, ಊರಿಂದೂರಿಗೆ ಕ್ಯಾಂಪಮಾಡಿ ರಂಗಪ್ರದರ್ಶನಗಳ ನೀಡುತ್ತಾ ಹಾಗೂ ಹೀಗೂ ತಮ್ಮ ಕಂಪನಿ ಎಂಬ ಹಡಗನ್ನು ಮುಳುಗದಂತೆ ತೇಲಿಸಿಕೊಂಡು ಹೋಗುವ ಸಾಹಸ ಮಾಡುತ್ತಿದ್ದಾರೆ. ಅಂದರೆ ಅವರು ನೆಚ್ಚಿಕೊಂಡ ಪ್ರೇಕ್ಷಕರೇ ಆ ರಂಗಭೂಮಿಯನ್ನು ಪೋಷಿಸುತ್ತಿದ್ದಾರೆ. ಆ ಕಾರಣಕ್ಕಾದರೂ ಇವರೂ ವೃತ್ತಿರಂಗಭೂಮಿಯವರು ಎಂದು ಹೇಳಬಹುದು. ಈಗಿನ ಹವ್ಯಾಸಿ ಹಾಗೂ ರೆಪರ್ಟರಿ ರಂಗತಂಡಗಳ ರಂಗಪ್ರದರ್ಶನಗಳಲ್ಲಿ ಕಲಾತ್ಮಕತೆ, ಪ್ರಯೋಗಶೀಲತೆ ಇದ್ದರೂ ಅವು ಬಹುಪಾಲು ಸರಕಾರ ಅಥವಾ ಕಾರ್ಪೋರೇಟ್ ಸಂಸ್ಥೆಗಳು ಕೊಡುವ ಅನುದಾನ ಅಥವಾ ಇನ್ನಿತರ ಪ್ರಾಯೋಜಕತ್ವದ ಧನವನ್ನೇ ನೆಚ್ಚಿಕೊಂಡಿವೆ. ಕಲಾಪೋಷಣೆಯ ದೃಷ್ಟಿಯಿಂದ ಕಾಲಕ್ಕನುಗುಣವಾಗಿ ಈ ರೀತಿಯ ಬದಲಾವಣೆಯನ್ನು ಒಪ್ಪಿಕೊಂಡರೂ ಸಮಕಾಲೀನ ಹವ್ಯಾಸಿ ಹಾಗೂ ರೆಪರ್ಟರಿ ತಂಡಗಳು ವೃತ್ತಿರಂಗಭೂಮಿಯವರಂತೆ ನಿರಂತರತೆಯನ್ನು ಮೈಗೂಡಿಸಿಕೊಂಡು ಪ್ರೇಕ್ಷಕರ ಪೋಷಣೆಯಿಂದಲೇ ಬೆಳೆಯಬೇಕಾದ ಜರೂರಂತೂ ಇದೆ. ರಂಗಕಲೆ ಬೆಳೆಯುವುದು ಪ್ರದರ್ಶನಕಾರರು ನಿರಂತರವಾಗಿ ತನ್ನ ಪ್ರೇಕ್ಷಕರನ್ನು ಹುಡುಕಿಕೊಳ್ಳುತ್ತಾ ಬೆಳೆಸುತ್ತಾ ಅವರಿಗೆ ಮುಖಾಮುಖಿಯಾದಾಗ ಮಾತ್ರ. ಉಚ್ಛ್ರಾಯಕಾಲದ ವೃತ್ತಿರಂಗಭೂಮಿ ಹೀಗೆ ಬೆಳೆಯುತ್ತಾ ತಮ್ಮ ಚೌಕಟ್ಟಿನಲ್ಲೇ ಕಲಾತ್ಮಕವಾಗಿದ್ದು ಪ್ರೇಕ್ಷಕರ ಧನಬಲದಿಂದಲೇ ರಂಗಭೂಮಿಯನ್ನು ಉಳಿಸಿ ಬೆಳೆಸುವಲ್ಲಿ ತೆಗೆದುಕೊಂಡ ರಿಸ್ಕ ರೋಚಕವಾದದ್ದು. ಹೀಗಾಗಿ ಒಂದೊಂದು ಆಗಿನ ವೃತ್ತಿರಂಗ ತಂಡಗಳ ಕಥೆಗಳು ವಿಭಿನ್ನವಾಗಿವೆ. ಪ್ರತ್ಯೇಕವಾಗಿ ಈಗಾಗಲೇ ಅಂತಹ ತಂಡಗಳ ಅಧ್ಯಯನಗಳಾಗಿವೆ. ಆದರೆ ಅವೆಲ್ಲಾ ತಂಡಗಳೂ ವೃತ್ತಿರಂಗಭೂಮಿ ಎಂಬ ಒಂದು ಮಾದರಿಯ ರಂಗಪ್ರಕಾರದ ಅಡಿಯಲ್ಲಿಯೇ ಕೆಲಸ ಮಾಡಿವೆ. ಪ್ರಸ್ತುತ ಕೃತಿ ಆ ರಂಗಭೂಮಿಯನ್ನು ಒಂದು ರಂಗಪ್ರಕಾರವಾಗಿ ಅಧ್ಯಯನ ಮಾಡುವತ್ತ ಗಮನ ಹರಿಸುತ್ತದೆ. ಅಧ್ಯಯನದ ವ್ಯಾಪ್ತಿಯ ದೃಷ್ಟಿಯಿಂದ ಬಹುತೇಕ ಉದಾಹರಣೆಗಳನ್ನು ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯಿಂದ ಎತ್ತಿಕೊಳ್ಳಲಾಗಿದೆ.
ಎಚ್ಚಮನಾಯಕ ಅರ್ಥಾತ್ ಕನ್ನಡದ ಕಡುಗಲಿ, ಲಂಕಾದಹನ ಅರ್ಥಾತ್ ಸ್ವಜನೋದ್ಧಾರ, ಕಂಸವಧ ಅರ್ಥಾತ್ ಮಾತೃಬಂಧ ವಿಮೋಚನೆ, ವಿಷಮ ವಿವಾಹ ಅರ್ಥಾತ್ ಪಶ್ಚಾತ್ತಾಪ, ನರಗುಂದ ಬಂಡಾಯ ಅರ್ಥಾತ್ ಸರ್ ಮೊಲ್ಕಂವಿಜಯ, ಹಡೆದವ್ವ ಅರ್ಥಾತ್ ಲಂಬಾಣಿ ಹುಡುಗಿ ಹೀಗೆ ಬಹಳಷ್ಟು ಕಂಪನಿ ನಾಟಕಗಳು ಅರ್ಥಾತ್ ಎಂದು ಇನ್ನೊಂದು ಹೆಸರಿನಿಂದಲೂ ಪ್ರದರ್ಶನಗೊಳ್ಳುತ್ತಿದ್ದವು. ಆ ರೂಢಿ ಇನ್ನೂ ಈಗಿನ ವೃತ್ತಿರಂಗಭೂಮಿಯವರಲ್ಲಿಯೂ ಮುಂದುವರೆದಿದೆ. ಕುಂಪಣಿ ಸರಕಾರದ ಕಾಲಾವಧಿಯಲ್ಲಿ ಅವರ ನಾಟಕಗಳಿಂದ ಪ್ರೇರಣೆ ಪಡೆದು ಪಾರ್ಸಿ ವೃತ್ತಿಪರ ರಂಗ ತಂಡಗಳಿಂದ ಈ ದೇಶದಲ್ಲಿಯೂ ಕಂಪನಿ ನಾಟಕಗಳ ಯುಗ ಪ್ರಾರಂಭವಾಯಿತು. ಇದರಿಂದಾಗಿ ನಮ್ಮಲ್ಲಿಯೂ ಆರಂಭವಾದ ವೃತ್ತಿಪರ ರಂಗತಂಡಗಳ ನಾಟಕಗಳಿಗೆ ಕಂಪನಿ ನಾಟಕಗಳೆಂದೂ, ಆ ತಂಡಗಳಿಗೆ ಕಂಪನಿ ನಾಟಕದವರೆಂದೂ ಕರೆಯುವ ರೂಢಿ ಬಹಳ ದಿನಗಳವರೆಗೆ ಇತ್ತು. ಮುಂದೆ ಅಧ್ಯಯನದ ದೃಷ್ಟಿಯಿಂದ ವೃತ್ತಿರಂಗ ಭೂಮಿಯ ನಾಟಕಗಳು ಎಂಬ ಅರ್ಥಾತ್ ಅರ್ಥದಿಂದ ಕರೆಯುವ ಪರಿಪಾಠ ಬೆಳೆಯಿತು. ಕಂಪನಿ ನಾಟಕಗಳು ಎನ್ನುವುದು ವೃತ್ತಿರಂಗಭೂಮಿಯ ನಾಟಕಗಳ ಸ್ವರೂಪದ ಅರ್ಥವನ್ನು ನಿರ್ವಚಿಸಿಕೊಳ್ಳಲು ಸೂಚಿಸಿದರೆ ವೃತ್ತಿರಂಗಭೂಮಿ ಎಂಬುವ ಅರ್ಥಾತ್ ಕನ್ನಡದ ರೂಪವು ಆ ರಂಗಭೂಮಿಯನ್ನು ಒಟ್ಟಾರೆಯಾಗಿ ವೃತ್ತಿಯಾಗಿ ಸ್ವೀಕರಿಸಿ ಆವರೆಗೆ ಕನ್ನಡದಲ್ಲಿಲ್ಲದ ಒಂದು ಹೊಸ ರಂಗಭೂಮಿಯ ಪರಂಪರೆಯನ್ನು ಗ್ರಹಿಸಲು ಹುಡುಕಿಕೊಂಡ ಶಬ್ದವಾಗಿದೆ. ಬಹಳ ದಿನದ ವರೆಗೆ ಆ ರಂಗಭೂಮಿಯಲ್ಲಿ ತೊಡಗಿಸಿ ಕೊಂಡವರು ತಮ್ಮನ್ನು ಕಂಪನಿ ನಾಟಕದವರೆಂದೇ ಗುರುತಿಸಿಕೊಳ್ಳುತ್ತಿದ್ದರು. ಅದೇನೆ ಇರಲಿ ಕಂಪನಿ ನಾಟಕ, ವೃತ್ತಿರಂಗಭೂಮಿ ಇವೆರಡೂ ಈಗ ಬಳಕೆಯಲ್ಲಿದ್ದು ಅದನ್ನೇ ಈ ಕೃತಿಗೆ ಶೀರ್ಷಿಕೆಯಾಗಿ ಬಳಸಿಕೊಂಡಿದ್ದೇನೆ. ನಮ್ಮಲ್ಲಿ ಅಧ್ಯಯನಕ್ಕಾಗಿ ಹವ್ಯಾಸಿ ಅಥವಾ ವಿಲಾಸಿ ರಂಗಭೂಮಿಗಿಂತ ಇದು ಭಿನ್ನ ಎಂದು ಗುರುತಿಸಲು ವೃತ್ತಿರಂಗಭೂಮಿ ಎಂದು ಕರೆದದ್ದೇನೊ ಸರಿ. ಆದರೆ ಹೀಗೆ ಭಿನ್ನತೆಯನ್ನು ಗುರುತಿಸುವ ಭರದಲ್ಲಿ ನಮ್ಮದೇ ಎರಡು ರಂಗಭೂಮಿಯಲ್ಲಿ ಕಂದರವುಂಟಾಗಿ ಕನ್ನಡ ರಂಗಭೂಮಿಯ ಸಾತತ್ಯದ ಬೆಳವಣಿಗೆಗೆ ಪೆಟ್ಟುಬಿದ್ದಿದ್ದಂತೂ ನಿಜ. ಸಮಕಾಲೀನ ರಂಗಭೂಮಿಯಲ್ಲಿ ಪ್ರಾಯೋಗಿಕವಾಗಿಯೂ ತೊಡಗಿಸಿಕೊಂಡ ನನಗೆ ನನ್ನ ಈ ಅಧ್ಯಯನವು ಆ ರಂಗ ಭೂಮಿಯ ವರ್ಣರಂಜಿತ ದಾಖಲಾಗದೇ ಅದನ್ನೊಂದು ರಂಗಪ್ರಕಾರವಾಗಿ ಅರ್ಥ ಮಾಡಿಕೊಳ್ಳುತ್ತಾ ರಂಗಭೂಮಿಯ ಸಾತತ್ಯದ ಬೆಳವಣಿಗೆಗೆ ಪೂರಕವಾಗಿರಬೇಕೆಂಬ ಆಶಯವಿದೆ. ಅದು ಎಷ್ಟರಮಟ್ಟಿಗೆ ಈ ಕೃತಿಯಲ್ಲಿ ಸಿದ್ಧಿಸಿದೆ ಎಂಬುದನ್ನು ಓದುಗರು ಹೇಳಬೇಕು.
ವೃತ್ತಿರಂಗಭೂಮಿಯನ್ನು ಕುರಿತ ಬಹಳಷ್ಟು ಅಧ್ಯಯನಗಳು ಆಗಿನ ಒಂದೊಂದು ಕಂಪನಿಗಳ ಯಶಸ್ಸು ಕಷ್ಟ ನಷ್ಟಗಳ ರಮ್ಯ ಕಥಾನಕಗಳಾಗಿದ್ದು ಆ ರಂಗಭೂಮಿಯನ್ನು ಒಂದು ರಂಗಪ್ರಕಾರವಾಗಿ ದಾಖಲಿಸುವತ್ತ ಅಷ್ಟಾಗಿ ಗಮನ ಹರಿಸಿಲ್ಲ. ಆದರೆ ಇದಕ್ಕೆ ಅಪವಾದವೆನ್ನುವಂತೆ ಕೆಲ ಅರ್ಥಪೂರ್ಣವಾದ ಬಿಡಿಲೇಖನಗಳೂ ಇವೆ. ಒಟ್ಟಾರೆ ಅವೆಲ್ಲಾ ನನಗೆ ಪ್ರಾಥಮಿಕ ಮಾಹಿತಿ ನೀಡುವ ಆಕರ ಕೃತಿಗಳಾಗಿ ಒದಗಿಬಂದಿವೆ. ಅವುಗಳ ಮತ್ತು ಈಗ ಹದಿನೈದು ವರುಷಗಳ ಹಿಂದೆ ನಾನು ಸಂದರ್ಶಿಸಿದ ಹಳೆಯ ತಲೆಮಾರಿನ ಹಿರಿಯ ವೃತ್ತಿರಂಗಭೂಮಿಯ ಕಲಾವಿದರು ನೀಡಿದ ಮಾಹಿತಿಗಳ ಆಧಾರದ ಮೇಲೆ ಯಾವುದೋ ಒಂದು ಕಂಪನಿಯ ಅಥವಾ ಹಲವಾರು ಕಂಪನಿಗಳ ರಮ್ಯಕಥೆ ಹೇಳದೇ ಒಟ್ಟಾರೆಯಾಗಿ ಕಂಪನಿ ನಾಟಕಗಳ ಸ್ವರೂಪವನ್ನು ದಾಖಲಿಸುತ್ತಾ ಅದು ಕಟ್ಟಿಕೊಡುವ ರಂಗವ್ಯಾಕರಣ ಯಾವ ರೀತಿಯದು ಎಂಬುದನ್ನು ಗ್ರಹಿಸಲು ಈ ಕೃತಿ ಯಲ್ಲಿ ಪ್ರಯತ್ನಿಸಿದ್ದೇನೆ. ಆ ದೃಷ್ಟಿಯಿಂದ ಪ್ರಸ್ತುತ ಕೃತಿ ಈ ಹಿಂದೆ ವೃತ್ತಿರಂಗಭೂಮಿ ಕುರಿತಾಗಿ ನಡೆಸಿದ ಅಧ್ಯಯನಗಳಿಗಿಂತ ಭಿನ್ನವಾಗಿದೆ.
ಈ ಕೃತಿ ರೂಪಗೊಳ್ಳಲು ಆ ರಂಗಭೂಮಿಯಲ್ಲಿ ದುಡಿದ ಹಿರಿಯ ಚೇತನಗಳಾದ ಶ್ರೀ ಶ್ರೀಪಾದರಾವ್ ಗರುಡ(ನನ್ನ ತಂದೆ), ನಾಡೋಜ ಏಣಗಿ ಬಾಳಪ್ಪ, ಡಿ.ದುರ್ಗಾದಾಸ, ಹಡಗಲಿ ವಿರಭದ್ರಪ್ಪ ಹೀಗೆ ಮುಂತಾದವರು ಆ ರಂಗಭೂಮಿಯ ಕುರಿತಾದ ನನ್ನ ಅರಿವನ್ನು ಹೆಚ್ಚಿಸಿದ್ದಾರೆ. ಅವರಿಗೆ ನನ್ನ ಮೊದಲ ನಮನಗಳು. ಒಂದು ದೃಷ್ಟಿಯಿಂದ ಈ ಮಹನೀಯರ ಸಂಪರ್ಕ ದೊರತದ್ದು ನನ್ನ ಸೌಭಾಗ್ಯವೆಂದೇ ಹೇಳಬೇಕು. ಈಗ ವೃತ್ತಿರಂಗಭೂಮಿಯ ಕುರಿತಾದ ಅಧ್ಯಯನ ಮಾಡಬೇಕೆಂದರೆ ಬಹಳಷ್ಟು ಆ ರಂಗಭೂಮಿ ಯಲ್ಲಿ ದುಡಿದ ಚೇತನಗಳು ನಮ್ಮಿಂದ ಕಣ್ಮರೆಯಾಗಿದ್ದು ನಮಗೆ ಆ ರಂಗಭೂಮಿ ಕುರಿತಾದ ಅಧಿಕೃತ ಮಾಹಿತಿಗಳು ದೊರೆಯುವುದು ದುರ್ಲಭ ಎಂಬುದನ್ನು ವಿಷಾದ ದಿಂದಲೇ ಹೇಳಬೇಕಾಗುತ್ತದೆ. ನಾನು ಈ ಅಧ್ಯಯನ ಕೈಕೊಂಡಾಗ ಆ ಮಹನೀಯರು ತಮ್ಮ ಇಳಿಗಾಲದಲ್ಲಿಯೂ ಅದ್ಭುತ ಜ್ಞಾಪಕ ಶಕ್ತಿಯಿಂದ ನನಗೆ ಆ ರಂಗಭೂಮಿ ಕುರಿತಾದ ಹಲವಾರು ವಿವರಗಳನ್ನು ತಮ್ಮ ಸ್ಮೃತಿಪಟಲದಿಂದ ಬಿಚ್ಚಿಟ್ಟು ಪ್ರಸ್ತುತ ಕೃತಿಗೆ ಅಧೀಕೃತತೆಯನ್ನು ತಂದುಕೊಟ್ಟಿದ್ದಾರೆಂದು ನಾನು ಪ್ರಾಮಾಣಿಕವಾಗಿ ನಂಬಿದ್ದೇನೆ.
ಈ ಕೃತಿಗೆ ಮುನ್ನುಡಿಯೊಂದನ್ನು ಬರೆದು ಕೊಡಲು ಹಿರಿಯ ರಂಗತಜ್ಞರಾದ ಪ್ರೊ. ಕೆ.ಮರಳಸಿದ್ದಪ್ಪನವರಲ್ಲಿ ಕೇಳಿಕೊಂಡಾಗ ತತಕ್ಷಣ ಒಪ್ಪಿಕೊಂಡು ಮೌಲಿಕವಾದ ಮುನ್ನುಡಿ ಬರೆದುಕೊಟ್ಟು ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದ್ದಾರೆ. ಅವರಿಗೆ ಹಾಗೂ ಬೆನ್ನುಡಿ ಬರೆದುಕೊಟ್ಟು ಒಟ್ಟಾರೆಯಾಗಿ ಈ ಅಧ್ಯಯನಕ್ಕೆ ಬೆನ್ನೆಲುಬಾಗಿ ನಿಂತು ನನಗೆ ಮಾರ್ಗದರ್ಶನ ನೀಡಿದ ಖ್ಯಾತ ವಿಮರ್ಶಕರಾದ ಡಾ. ಗಿರಡ್ಡಿ ಗೋವಿಂದರಾಜ ಇವರಿಗೂ ನನ್ನ ಅನಂತ ಕೃತಜ್ಞತೆಗಳು. ಕಂಪನಿ ನಾಟಕಗಳನ್ನು ಕುರಿತು ಈ ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟು ಸಹಕರಿಸಿದ ಕನ್ನಡ ವಿಶ್ವವಿದ್ಯಾಲಯ ಹಂಪಿ, ಇಲ್ಲಿನ ಎಲ್ಲ ಪದಾಧಿಕಾರಿಗಳಿಗು ಮತ್ತು ರಂಗಭೂಮಿ ಕುರಿತಾದ ಅಪಾರ ಪ್ರೀತಿಯುಳ್ಳ ಆಗಿನ ಕುಲಪತಿಗಳಾಗಿದ್ದ ನಾಟಕಕಾರರೂ ಜ್ಞಾನಪೀಠ ಪ್ರಶಸ್ತಿ ಭಾಜನರಾದ ಡಾ. ಚಂದ್ರಶೇಖರ ಕಂಬಾರ ಇವರನ್ನು ಹೃತ್ಪೂರ್ವಕವಾಗಿ ನೆನೆಯುತ್ತೇನೆ.
ರಂಗಭೂಮಿ ಕುರಿತಾದ ಕೃತಿಗಳನ್ನು ಓದುವವರ್ಗ ಇತರ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ ಕಡಿಮೆ ಇದ್ದರೂ ಇಂತಹದೊಂದು ಕೃತಿಯನ್ನು ಪ್ರಕಟಿಸಲು ಮುಂದಾದ ಯಾಜಿ ಪ್ರಕಾಶನ ಸಂಸ್ಥೆ ಇವರಿಗೂ ನನ್ನ ಅನಂತ ಕೃತಜ್ಞತೆಗಳು. ರಂಗಭೂಮಿಯಲ್ಲಿ ಹೆಚ್ಚಾಗಿ ಪ್ರಾಯೋಗಿಕವಾಗಿ ತೊಡಗಿಸಿಕೊಂಡು ನನಗೆ ಆ ಪ್ರಬಂಧವನ್ನು ಪ್ರಕಟಿಸುವುದರ ಕಡೆಗೆ ಅಷ್ಟಾಗಿ ಆಸ್ಥೆ ವಹಿಸಲಾಗಲಿಲ್ಲ. ಹದಿನೈದು ವರಷಗಳಿಂದ ಈ ಕೃತಿ ಹಾಗೇ ಚೋಪಡಿ(ವೃತ್ತಿರಂಗಭೂಮಿಯ ಪರಿಭಾಷೆಯಲ್ಲಿ ಅಚ್ಚಾಗದ ನಾಟಕದ ಮಾತಿನ ಬರವಣಿಗೆ)ಯಲ್ಲಿ ಅಪ್ರಕಟಿತ ಸ್ಥಿತಿಯಲ್ಲಿತ್ತು. ಆದರೆ ನನ್ನ ರಂಗಚಟುವಟಿಕೆ ಮತ್ತು ಸಾಹಿತ್ಯಾಸಕ್ತಿಯನ್ನು ಪ್ರೋತ್ಸಾಹಿಸಿ ಈ ಕೃತಿಯನ್ನು ಬದಲಾದ ಕಾಲಕ್ಕೆ ತಕ್ಕಂತೆ ಹೊಸ ವಿಚಾರಗಳೊಂದಿಗೆ ಅವಶ್ಯಕವಾದ ಹಲವಾರು ಬದಲಾವಣೆ ಮಾಡಲು ಸೂಚಿಸಿ ಪ್ರಕಟಣೆಗೆ ಒತ್ತಾಯಿಸಿ ಬೆಂಬಲಿಸಿದ ಗೆಳೆಯ ಡಾ. ಮೋಹನ ಕುಂಟಾರ್ ಮತ್ತು ಕೃತಿಯ ತಿದ್ದುಪಡಿಗೆ ಸಹಕರಿಸಿದ ಇನ್ನೊರ್ವ ಗೆಳೆಯ ಡಾ. ಶಶಿಧರ ನರೇಂದ್ರ ಇವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಇದರ ಮುಖಪುಟ ಡಿ.ಟಿ.ಪಿ. ಕೆಲಸ ಭಾವಚಿತ್ರ ಹೀಗೆ ಹಲವಾರು ನಿಟ್ಟಿನಲ್ಲಿ ಈ ಕೃತಿ ಅಂದವಾಗಿ ಮೂಡಿಬರಲು ಸಹಕರಿ ಸಿದ್ದಾರೆ ಅವರೆಲ್ಲರಿಗೂ ಅನಂತ ಅನಂತ ಧನ್ಯವಾದಗಳು.
ಡಾ. ಪ್ರಕಾಶ ಗರುಡ
ಪರಿವಿಡಿ
ಸವಿನುಡಿ
ನನ್ನ ಮಾತು
ಮುನ್ನುಡಿ
೧. ರಂಗಭೂಮಿಯವೃತ್ತಿ-ವೃತ್ತಿರಂಗಭೂಮಿ / ೧
೧.೧. ಪಾಶ್ಚಾತ್ಯ ದೇಶಗಳಲ್ಲಿ ರಂಗಭೂಮಿಯವೃತ್ತಿ ಬೆಳೆದುಬಂದ ರೀತಿ; ಪ್ರೊಸೀನಿಯಂ(ಚಿತ್ರಚೌಕಟ್ಟು) ಮತ್ತು ಪರ್‍ಸಪೆಕ್ಟಿವ್(ಪ್ರತ್ಯಂತರ) ರಂಗಪರಿಕಲ್ಪನೆ, ಇಂಗ್ಲೆಂಡಿನಲ್ಲಿ ರಂಗಭೂಮಿಯ ವೃತ್ತಿ, ಮೆಲೋಡ್ರಾಮಾಗಳ ಸ್ವರೂಪ
೧.೨. ಭಾರತದಲ್ಲಿ ಆಧುನಿಕ ರಂಗಭೂಮಿ; ಬಂಗಾಲಿ, ಪಾರ್ಸಿ ಹಾಗೂ ಮರಾಠಿ ವೃತ್ತಿಪರ ರಂಗಚಟುವಟಿಕೆಗಳು
೧.೩. ಇಂದ್ರಸಭಾ -ಲೋಕಪ್ರಿಯ ಉರ್ದು ನಾಟಕ
೨. ಕರ್ನಾಟಕದಲ್ಲಿ ವೃತ್ತಿರಂಗಭೂಮಿ / ೪೦
೨.೧. ಕರ್ನಾಟಕದಲ್ಲಿ ಆಧುನಿಕ ರಂಗಭೂಮಿ; ಮೈಸೂರು ಪ್ರಾಂತದ ವೃತ್ತಿರಂಗಭೂಮಿಯ ಚಟುವಟಿಕೆಯ ಸ್ಥೂಲ ನೋಟ
೨.೨. ಉತ್ತರ ಕರ್ನಾಟಕದಲ್ಲಿ ವೃತ್ತಿರಂಗಭೂಮಿಯ ಆರಂಭದ ಹೆಜ್ಜೆಗಳು; ಚುರುಮರಿ ಶೇಷಗಿರಿರಾಯರ ಶಾಕುಂತಲ ನಾಟಕ ಮತ್ತು ಶಾಂತಕವಿಗಳ ರಂಗಚಟುವಟಿಕೆಯ ಸ್ವರೂಪ
೨.೩. ಉತ್ತರ ಕರ್ನಾಟಕದ ವೃತ್ತಿರಂಗಸಂಸ್ಥೆಗಳು ನಡೆದು ಬಂದ ದಾರಿ
೩. ವೃತ್ತಿರಂಗಭೂಮಿಯ ಪ್ರಯೋಗಾಂಗಗಳು / ೧೧೪
೩.೧. ರಂಗಮಂದಿರ, ರಂಗಸಜ್ಜಿಕೆ, ರಂಗ ಚಮತ್ಕಾರಗಳು, ರಂಗಪರಿಕರ, ಬೆಳಕಿನ ವ್ಯವಸ್ಥೆ
೩.೨. ಉತ್ತರ ಕರ್ನಾಟಕದ ವೃತ್ತಿರಂಗಭೂಮಿಯ ಅಭಿನಯದ ಸ್ವರೂಪ ಮತ್ತು ರಂಗಪ್ರಸ್ತುತಿ
೩.೩. ವೃತ್ತಿರಂಗಭೂಮಿಯ ಸಂಗೀತದ ಸ್ವರೂಪ
೩.೪. ವೃತ್ತಿರಂಗಭೂಮಿಯ ವೇಷಭೂಷಣ ಹಾಗೂ ಪ್ರಸಾದನ ಸ್ವರೂಪ
೩.೫. ನಾಟಕಗಳು-ನಾಟಕಕಾರರು
೩.೬. ಸಂಘಟನೆ, ನಿರ್ವಹಣೆ ಮತ್ತು ಪ್ರೇಕ್ಷಕವರ್ಗ
ಉಪಸಂಹಾರ / ೨೪೯
ಗ್ರಂಥಸೂಚಿ / ೨೫೨
ಛಾಯಾಚಿತ್ರಗಳು
Reviews
There are no reviews yet.