ಮುನ್ನುಡಿ
ಖ್ಯಾತ ಸಂಶೋಧಕ ಮತ್ತು ಅನುವಾದಕರಾದ ಡಾ. ಮೋಹನ ಕುಂಟಾರರು ಮಲಯಾಳಂ ಭಾಷೆಯ ಬಹುಚರ್ಚಿತ ಮತ್ತು ಮಹತ್ವದ ಕೃತಿಗಳಾದ ತಕಳಿ ಶಿವಶಂಕರ್ ಪಿಳ್ಳೈ ಅವರ ’ಚೆಮ್ಮೀನು’, ಊರೂಬ್(ಪಿ.ಸಿ.ಕುಟ್ಟಿಕೃಷ್ಣನ್) ಅವರ ’ಸುಂದರಿಯರು ಸುಂದರರು’, ವೈಕಂ ಮಹಮ್ಮದ್ ಬಷೀರ್ ಅವರ ’ಪ್ರೇಮಪತ್ರ’ ಮತ್ತು ಪಿ.ವತ್ಸಲ ಅವರ ’ಆಗ್ನೇಯ’ ಸೇರಿದಂತೆ ಕೆಲವು ಕೃತಿಗಳನ್ನು ನೇರವಾಗಿ ಮಲಯಾಳಂ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅವರು ಅನುವಾದ ಸಾಹಿತ್ಯದ ಕುರಿತು ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಸಿ ಅದರ ಕುರಿತು ಹಲವು ಶಾಸ್ತ್ರಗ್ರಂಥಗಳನ್ನು ಸಹ ಹೊರ ತಂದಿದ್ದಾರೆ. ಇದು ಅವರು ಅನುವಾದ ಮತ್ತು ಸಂಶೋಧನೆಯ ವಿಷಯದಲ್ಲಿ ಹೊಂದಿರುವ ವಿದ್ವತ್ತನ್ನು ತೋರಿಸುತ್ತದೆ. ಈ ದಿಸೆಯಲ್ಲಿ ಕುಂಟಾರರ ’ಕನ್ನಡ ಮಲಯಾಳಂ: ಭಾಷಾಂತರ ಪ್ರಕ್ರಿಯೆ’ ಒಂದು ವಿಶಿಷ್ಟ ಕೃತಿ. ಇದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ೨೦೧೪ರಲ್ಲಿ ಪ್ರಕಟವಾಗಿದೆ. ಕನ್ನಡದಲ್ಲಿ ಭಾಷಾಂತರ ಅಧ್ಯಯನದ ಕುರಿತು ಇಂತಹದೊಂದು ಕೃತಿ ಪ್ರಕಟವಾದದ್ದು ಇದೇ ಮೊದಲು.
ಕುಂಟಾರರ ಹೊಸ ಕೃತಿ ’ಅನುವಾದ: ಒಲವು-ನಿಲುವು’, ಇದು ಭಾಷಾಂತರ ಅಧ್ಯಯನವನ್ನು ಕೇಂದ್ರವಾಗಿಟ್ಟುಕೊಂಡು ವಿಶ್ಲೇಷಣೆ ನಡೆಸಿರುವ ಹದಿನಾಲ್ಕು ಲೇಖನಗಳನ್ನು ಒಳಗೊಂಡಿದೆ. ’ಕನ್ನಡ ಅನುವಾದ: ಒಲವು-ನಿಲುವು’, ’ಕನ್ನಡ ಅನುವಾದ ಸಾಹಿತ್ಯ ಪರಂಪರೆ’ ಮತ್ತು ’ಕನ್ನಡ ಭಾಷಾಂತರ ಸಾಹಿತ್ಯ: ಅಧ್ಯಯನ ವಿಧಾನಗಳು’ ಎಂಬ ಮೂರು ಲೇಖನಗಳಲ್ಲಿ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಬಂದಂತಹ ಅನುವಾದ ಸಾಹಿತ್ಯವನ್ನು ಕೂಲಂಕಷವಾಗಿ ಪರಿಶೀಲಿಸಿರುವ ಕುಂಟಾರರು ಹಳಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಸಂಸ್ಕೃತ ಮತ್ತು ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಇಂಗ್ಲಿಶ್ ಭಾಷೆಗಳು ಅನುವಾದದಲ್ಲಿ ಪ್ರಾಬಲ್ಯ ಸಾಧಿಸಿದ್ದರ ಕುರಿತು ವಿವೇಚಿಸಿದ್ದಾರೆ. ಹಳಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಅನುಸೃಷ್ಟಿ ಮುಖ್ಯವಾದರೆ, ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಅನುವಾದ ಮುಖ್ಯವಾಗಿ ಬೆಳೆದು ಬಂದಿರುವ ಕುರಿತು ಉದಾಹರಣೆಗಳ ಸಮೇತ ಚರ್ಚಿಸಿದ್ದಾರೆ.
ಹೊಸಗನ್ನಡ ಸಾಹಿತ್ಯ ರೂಪುಗೊಂಡ ಆರಂಭದ ಕಾಲಘಟ್ಟದಲ್ಲಿ ಅನುಸೃಷ್ಟಿ, ರೂಪಾಂತರ ಮತ್ತು ಅನುವಾದ ಈ ಮೂರೂ ಬಗೆಯ ಕೃತಿಗಳು ಬಂದವು. ಬರುಬರುತ್ತ ಮೂಲಕ್ಕೆ ನಿಷ್ಠೆ ಕಾಯ್ದುಕೊಳ್ಳುವ ನೇರ ಅನುವಾದಗಳು ಹೆಚ್ಚಾಗಿ ಬರಲಾರಂಭಿಸಿದವು. ಹಳಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಸಂಸ್ಕೃತ ಮತ್ತು ಕನ್ನಡದ ನಡುವಿರುವ ಅವಿನಾಭಾವ ಸಂಬಂಧದ ಕಾರಣ ಅನುಸೃಷ್ಟಿ, ರೂಪಾಂತರ ಮತ್ತು ಅನುವಾದಿತ ಕೃತಿಗಳಲ್ಲಿ ಸಂಸ್ಕೃತ ಭಾಷೆಯದ್ದೇ ಸಿಂಹಪಾಲು. ಹೊಸಗನ್ನಡ ಸಾಹಿತ್ಯದ ಸಂದರ್ಭದಲ್ಲಿ ಸಂಸ್ಕೃತ ಭಾಷೆಯ ಬದಲಾಗಿ ಜಾಗತಿಕ ಭಾಷೆಯಾದ ಇಂಗ್ಲಿಶ್ ಆ ಸ್ಥಾನವನ್ನು ಆಕ್ರಮಿಸಿಕೊಂಡಿತು. ಇಂದಿಗೂ ಬಹುತೇಕ ಭಾರತೀಯ ಭಾಷೆಗಳ ಕೃತಿಗಳು ಇಂಗ್ಲಿಶ್ ಅಥವಾ ಹಿಂದಿಯ ಮೂಲಕವೇ ಕನ್ನಡಕ್ಕೆ ಅನುವಾದವಾಗುತ್ತಲಿವೆ. ಈ ಮೂರೂ ಲೇಖನಗಳು ಅನುವಾದದ ಕುರಿತು ವಿಪುಲ ಮಾಹಿತಿ ಹೊಂದಿದ್ದು ಅನುವಾದ ಸಾಹಿತ್ಯ ಚರಿತ್ರೆಯ ಬಹುಮುಖ್ಯ ಅಧ್ಯಾಯಗಳಂತಿವೆ.
’ಸಂಸ್ಕೃತ-ಕನ್ನಡ ಭಾಷಾಂತರ ಪ್ರಕ್ರಿಯೆ’ ಎಂಬ ಲೇಖನದಲ್ಲಿ ಕುಂಟಾರರು ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯ ಸಂದರ್ಭದಲ್ಲಿ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಕೃತಿಗಳ ಹಿನ್ನೆಲೆ-ಮುನ್ನೆಲೆ ಮತ್ತು ಕನ್ನಡದಲ್ಲಿ ಅವುಗಳಿಗೆ ದೊರೆತ ನೆಲೆ-ಬೆಲೆಗಳ ಕುರಿತು ಚರ್ಚಿಸಿದ್ದಾರೆ. ಸಂಸ್ಕೃತದಿಂದ ಕನ್ನಡಕ್ಕೆ ಸಾಕಷ್ಟು ಕೃತಿಗಳು ಅನುವಾದವಾದರೂ ಸಹ ಅವು ಓದುಗರು ಮತ್ತು ವಿಮರ್ಶಕರ ಗಮನ ಸೆಳೆಯಲಿಲ್ಲ ಎಂಬುದರ ಜೊತೆಗೆ ಸಂಸ್ಕೃತದಿಂದ ಇತರೆ ಭಾಷೆಗಳಿಗೆ ಅನುವಾದವಾಗುವಾಗ ಉಂಟಾಗುವ ಸಮಸ್ಯೆಗಳ ಕುರಿತು ’ಪಂಚತಂತ್ರ’ ಕೃತಿಯನ್ನಿಟ್ಟುಕೊಂಡು ಚರ್ಚಿಸಿರುವ ಕುಂಟಾರರು ಅದಕ್ಕೆ ನೀಡುವ ಕಾರಣಗಳು ಸಹ ಅಷ್ಟೇ ತೂಕದಿಂದ ಕೂಡಿವೆ. ಈ ಲೇಖನ ಸಂಸ್ಕೃತ ಅನುವಾದಗಳನ್ನು ಹೊಸದೃಷ್ಟಿಯಿಂದ ನೋಡಲು ಒತ್ತಾಯಿಸುತ್ತದೆ.
’ಅನುವಾದಗಳ ತಾತ್ವಿಕತೆ’ ಒಂದು ಅಭ್ಯಾಸಪೂರ್ಣ ಲೇಖನವಾಗಿದ್ದು, ಕುಂಟಾರರು ಇಲ್ಲಿ ಅನುವಾದದ ಮೂಲ ಪರಿಕಲ್ಪನೆಗಳನ್ನು ತುಂಬ ಗಂಭೀರವಾಗಿ ವಿಶ್ಲೇಷಿಸಿದ್ದಾರೆ. ಯಾವುದೇ ಕೃತಿಯ ಅನುವಾದ ರೂಪುಗೊಳ್ಳುವ ಬಗೆ ಮತ್ತು ಅದಕ್ಕೆ ಎದುರಾಗುವ ತೊಡಕುಗಳ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ’ಭಾಷಾಂತರದ ವಿಭಿನ್ನ ನೆಲೆಗಳು’ ಎಂಬ ಲೇಖನದಲ್ಲಿ ಎರಡು ಭಿನ್ನ ಭಾಷೆಗಳ ನಡುವೆ ಭಾಷಾಂತರ ನಡೆದಾಗ ಉಂಟಾಗುವ ತಾತ್ವಿಕ, ಭಾಷಿಕ ಮತ್ತು ಸಾಂಸ್ಕೃತಿಕ ಸಮಸ್ಯೆಗಳ ಕುರಿತು ಚಿಂತಿಸಿದ್ದಾರೆ. ಮಲಯಾಳಂನಿಂದ ಕನ್ನಡಕ್ಕೆ ಸಾಕಷ್ಟು ಸೃಜನಶೀಲ ಕೃತಿಗಳನ್ನು ಅನುವಾದಿಸಿರುವ ಕುಂಟಾರರು ಮಲಯಾಳಂ ಭಾಷೆಯ ಖ್ಯಾತ ಲೇಖಕ ಊರೂಬ್ ಅವರ ’ಸುಂದರಿಯರು ಸುಂದರರು’ ಎಂಬ ಕಾದಂಬರಿಯನ್ನು ಅನುವಾದ ಮಾಡಿದ ಸಂದರ್ಭವನ್ನು ಇಟ್ಟುಕೊಂಡು ವಿಶದವಾಗಿ ಚರ್ಚಿಸಿದ್ದಾರೆ. ಭಾಷಾಂತರದ ಪ್ರಾಯೋಗಿಕ ವಿವರಣೆಯಾಗಿ ತಮ್ಮ ಅನುವಾದದ ಬಗೆಗಿನ ಅನುಭವವನ್ನು ನೀಡಿರುವುದು ವಿಶೇಷ. ಕನ್ನಡದಲ್ಲಿ ಭಾಷಾಂತರದ ಕುರಿತು ಪ್ರಾಯೋಗಿಕ ವಿಮರ್ಶಾ ಲೇಖನಗಳು ಬಂದದ್ದು ತೀರ ವಿರಳ.
’ಮಾಧ್ಯಮದಲ್ಲಿ ಭಾಷಾಂತರ’ ಮತ್ತು ’ಮಾಧ್ಯಮ ಭಾಷಾಂತರ: ತಾತ್ವಿಕತೆ’ ಲೇಖನಗಳು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಭಾಷಾಂತರ ವಹಿಸುವ ಪಾತ್ರದ ಕುರಿತು ಜಿಜ್ಞಾಸೆ ನಡೆಸಿದೆ. ಮಾಧ್ಯಮಗಳಲ್ಲಿ ನಡೆಯುವ ಭಾಷಾಂತರ ನಿರಂತರವಾದುದು ಮತ್ತು ಅದು ನಡೆಯುವುದು ಕೂಡ ಮಾಧ್ಯಮಗಳ ಬೇಡಿಕೆಗಳನ್ನು ನಿಗದಿತ ಸಮಯದಲ್ಲಿ ಪೂರೈಸಬೇಕಿರುವ ಹಲವು ಒತ್ತಡಗಳ ನಡುವೆಯಾದ್ದರಿಂದ ಮಾಧ್ಯಮ ಭಾಷಾಂತರ, ಸಾಹಿತ್ಯಕ ಭಾಷಾಂತರಕ್ಕಿಂತ ಭಿನ್ನವಾಗಿ ನಿಲ್ಲುತ್ತದೆ. ಮಾಧ್ಯಮ ಭಾಷಾಂತರವನ್ನು ಕೂಡ ಕುಂಟಾರರು ಭಾಷಾಂತರ ಅಧ್ಯಯನದ ಶಿಸ್ತಿಗೊಳಪಡಿಸಿ ನೋಡಿರುವುದು ಗಮನಾರ್ಹ.
’ಕನ್ನಡ ಪತ್ರಿಕೋದ್ಯಮದ ಭಾಷಾಂತರ ಬಿಕ್ಕಟ್ಟುಗಳು’ ಎಂಬ ಲೇಖನ ಕಾಸರಗೋಡು ಪ್ರದೇಶದ ಪತ್ರಿಕೆಗಳಲ್ಲಿ ಬಳಕೆಯಾಗುತ್ತಿರುವ ಕನ್ನಡ ಭಾಷೆ ಮತ್ತು ಅದರ ಬಿಕ್ಕಟ್ಟುಗಳ ಬಗೆಗಿನದು. ಮೂಲತಃ ಕನ್ನಡ ನಾಡಿನ ಅವಿಭಾಜ್ಯ ಅಂಗವಾಗಿದ್ದ ಕಾಸರಗೋಡು ಜಿಲ್ಲೆ ಈಗ ಕೇರಳಕ್ಕೆ ಸೇರಿ ಹೋಗಿದೆ. ಕಾಸರಗೋಡಿನಲ್ಲಿ ಕನ್ನಡ, ತುಳು, ಕೊಂಕಣಿ, ಮಲಯಾಳಂ, ಮರಾಠಿ ಮತ್ತು ಹವಿಗನ್ನಡ ಭಾಷೆಗಳನ್ನು ಬಳಸುವ ಜನರಿದ್ದಾರೆ. ಹಲವು ಭಾಷೆಗಳ ಸಂಸರ್ಗದಿಂದ ಕಾಸರಗೋಡು ಕನ್ನಡಕ್ಕೆ ಹತ್ತು ಹಲವು ಹೊಸ ಪದ ಮತ್ತು ನುಡಿಗಟ್ಟುಗಳು ಸೇರಿಕೊಂಡಿವೆ. ಗಡಿನಾಡಿನ ಪ್ರದೇಶ ಗಳಲ್ಲಿ ಇಂತಹ ಭಾಷಾ ಸಂಬಂಧೀ ಬೆಳವಣಿಗೆಗಳು ಸಾಮಾನ್ಯ ಮತ್ತು ಅನಿವಾರ್ಯ. ಕುಂಟಾರರು ಇಂತಹ ಬೆಳವಣಿಗೆಗಳು ಉಂಟು ಮಾಡಿದ ಧನಾತ್ಮಕ ಪರಿಣಾಮಗಳ ಕುರಿತು ಲಕ್ಷ್ಯ ವಹಿಸಿದ್ದಾರೆ.
’ಕನ್ನಡದಲ್ಲಿ ಮಲಯಾಳಂ ಸಾಮಾಜಿಕ ಭಾಷಾಂತರ’ ಎಂಬ ಲೇಖನದಲ್ಲಿ ಕುಂಟಾರರು ಬಹುಭಾಷಿಕ ಪರಿಸರವಾದ ಕಾಸರಗೋಡಿನಲ್ಲಿ ಕನ್ನಡ ಮತ್ತು ಮಲಯಾಳಂ ಭಾಷೆಯ ನಡುವಿನ ಕೊಳುಕೊಡುಗೆಗಳು ಯಾವ ರೀತಿಯಲ್ಲಿ ಎರಡೂ ಭಾಷೆಗಳನ್ನು ಪ್ರಭಾವಿಸಿವೆ ಎಂಬುದನ್ನು ಮಾಧ್ಯಮ, ಸಾಹಿತ್ಯ, ಸಂಸ್ಕೃತಿ, ಸಮಾಜ ಮತ್ತು ರಾಜಕೀಯ ಸಂದರ್ಭಗಳ ಹಿನ್ನೆಲೆಯಲ್ಲಿ ನೋಡಿದ್ದಾರೆ.
’ಅನುವಾದಗಳ ಸಾಂಸ್ಕೃತಿಕ ರಾಜಕಾರಣ’ ಈ ಸಂಕಲನದ ಮುಖ್ಯ ಲೇಖನಗಳಲ್ಲೊಂದು. ಸಾಂಸ್ಕೃತಿಕ ರಾಜಕಾರಣ(ಅuಟಣuಡಿಚಿಟ Poಟiಣiಛಿs) ಮತ್ತು ಮಾಧ್ಯಮ ವಿಮರ್ಶೆ(ಒeಜiಚಿ ಅಡಿiಣiಛಿism) ಸದ್ಯ ಪಾಶ್ಚಾತ್ಯ ಸಾಹಿತ್ಯ ಲೋಕದಲ್ಲಿ ತುಂಬ ಚರ್ಚಿತ ವಿಷಯಗಳು. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ಸಾಂಸ್ಕೃತಿಕ ರಾಜಕಾರಣ ಮತ್ತು ಮಾಧ್ಯಮ ವಿಮರ್ಶೆಯ ಕುರಿತು ಹೆಚ್ಚು ಚರ್ಚೆ ನಡೆದಿಲ್ಲ. ಸಾಂಸ್ಕೃತಿಕ ರಾಜಕಾರಣವನ್ನು ಸಾಹಿತ್ಯ ಮತ್ತು ಸಂಸ್ಕೃತಿಯ ಸಂದರ್ಭದಲ್ಲಿ ಈಗಾಗಲೇ ಒಪ್ಪಿತ ವ್ಯವಸ್ಥೆಯೆಂದು ಸ್ವೀಕರಿಸಲಾಗಿದೆ. ಮಾಧ್ಯಮ ವಿಮರ್ಶೆ ಮಾತ್ರ ಭಾರತೀಯ ಸಾಹಿತ್ಯದ ಸಂದರ್ಭದಲ್ಲಿ ಚರ್ಚೆಗೊಳಗಾಗಲೇ ಇಲ್ಲ.
ಇರಲಿ, ಅನುವಾದಗಳು ರೂಪುಗೊಳ್ಳುವ ಬಗೆ ಮತ್ತು ಅಂತಹ ಅನುವಾದಗಳಾಗಲು ಇರುವ ವಿವಿಧ ಬಗೆಯ ಒತ್ತಡಗಳು ಭಾಷಾಂತರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಧಾರ್ಮಿಕ ಒತ್ತಡದಿಂದ ’ಭಗವದ್ಗೀತೆ’, ’ಬೈಬಲ್’ ಮತ್ತು ’ಕುರಾನ್’ನಂತಹ ಕೃತಿಗಳು ವಿವಿಧ ಭಾಷೆಗಳಿಗೆ ಅನುವಾದವಾಗುತ್ತವೆ. ರಾಜಕೀಯ ಒತ್ತಡದಿಂದ ಕಾರ್ಲಮಾರ್ಕ್ಸ್, ಗಾಂಧೀಜಿ, ಅಂಬೇಡ್ಕರ್ ಮತ್ತು ಲೋಹಿಯಾ ಅವರಂತಹವರ ಬರಹಗಳು ಅನುವಾದವಾಗುತ್ತವೆ. ಸಾಹಿತ್ಯಕ ಒತ್ತಡದಿಂದ ಅನೇಕ ಕೃತಿಗಳು ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಮತ್ತು ಕುವೆಂಪು ಭಾಷಾ ಭಾರತಿಯಂತಹ ಸಂಸ್ಥೆಗಳ ಮೂಲಕ ಭಾಷಾಂತರವಾಗುತ್ತವೆ. ಲೇಖಕರು ಮತ್ತು ಅನುವಾದಕರ ವೈಯಕ್ತಿಕ ಹಿತಾಸಕ್ತಿಯ ಕಾರಣಗಳಿಗಾಗಿಯೂ ಸಾಕಷ್ಟು ಕೃತಿಗಳು ಅನುವಾದವಾಗುತ್ತವೆ. ಹೀಗೆ ಸಾಂಸ್ಕೃತಿಕ ರಾಜಕಾರಣ ಅನುವಾದದಲ್ಲಿ ವಹಿಸುವ ಮುಖ್ಯ ಪಾತ್ರದ ಕುರಿತು ವಿಶದವಾಗಿ ಚರ್ಚಿಸಿರುವ ಕುಂಟಾರರು ಅನೇಕ ಹೊಸ ವಿಷಯಗಳತ್ತ ದೃಷ್ಟಿ ಹರಿಸಿದ್ದಾರೆ. ಇದು ಸಾಂಸ್ಕೃತಿಕ ರಾಜಕಾರಣದ ಬಗೆಗೆ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಬಲ್ಲ ಲೇಖನ.
ಡಾ. ಮೋಹನ ಕುಂಟಾರರ ’ಅನುವಾದ: ಒಲವು-ನಿಲುವು’ ಅವರ ಮೂರು ದಶಕಗಳ ಅಧ್ಯಾಪನದ ಅನುಭವ ಮತ್ತು ನಿರಂತರ ಅಧ್ಯಯನದ ಫಲಶ್ರುತಿಯಾಗಿದೆ. ಭಾಷಾಂತರ ಅಧ್ಯಯನದ ಹಲವು ಮಗ್ಗುಲಗಳನ್ನು ವಿವಿಧ ದೃಷ್ಟಿಕೋನದಿಂದ ಪರಾಮರ್ಶಿಸಿ, ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಬರೆದಿರುವ ಇಲ್ಲಿನ ಲೇಖನಗಳು ಸಂಸ್ಕೃತ-ಕನ್ನಡ, ಇಂಗ್ಲಿಶ್-ಕನ್ನಡ ಮತ್ತು ಮಲಯಾಳಂ- ಕನ್ನಡ ಭಾಷೆಗಳನ್ನು ಕೇಂದ್ರದಲ್ಲಿಟ್ಟುಕೊಂಡು ಅನುಸಂಧಾನ ನಡೆಸಿವೆ. ಇಲ್ಲಿನ ಕೆಲವು ಲೇಖನಗಳು ಭಾಷಾಂತರ ಅಧ್ಯಯನದ ಹೊಸ ಸಾಧ್ಯತೆಗಳ ಕುರಿತು ಮುಕ್ತ ಚಿಂತನೆ ನಡೆಸಿದ್ದು, ಹೊಸ ಚರ್ಚೆ ಹುಟ್ಟು ಹಾಕಬಲ್ಲ ಸಾಮರ್ಥ್ಯ ಪಡೆದಿವೆ. ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಮಾಧ್ಯಮ ಭಾಷಾಂತರಗಳ ಕುರಿತು ಹೊಸ ದೃಷ್ಟಿಕೋನದಿಂದ ವಿವೇಚನೆ ನಡೆಸಿರುವ ಈ ಕೃತಿ ಭಾಷಾಂತರ ಅಧ್ಯಯನ ಕ್ಷೇತ್ರಕ್ಕೆ ಒಂದು ಒಳ್ಳೆಯ ಕೊಡುಗೆಯಾಗಿದೆ. ಸಾಹಿತ್ಯದ ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರು ಓದಲೇಬೇಕಾದ ಕೃತಿ ’ಅನುವಾದ: ಒಲವು-ನಿಲುವು’.
–ವಿಕಾಸ ಹೊಸಮನಿ, ವಿಮರ್ಶಕರು
ಅನುನಯದ ನುಡಿ
ಭಾಷಾಂತರವನ್ನು ಕುರಿತಂತೆ ಕಳೆದ ಕೆಲವಾರು ವರ್ಷಗಳಲ್ಲಿ ನಾನು ಬರೆದ ಲೇಖನಗಳು ಬೇರೆ ಬೇರೆ ನಿಯತಕಾಲಿಕೆಗಳಲ್ಲಿ ಹಾಗೂ ಕೆಲವೊಂದು ಪುಸ್ತಕಗಳಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ಆಯ್ದ ಹದಿನಾಲ್ಕು ಲೇಖನಗಳನ್ನು ’ಅನುವಾದ: ಒಲವು ನಿಲುವು’ ಎಂಬ ಶೀರ್ಷಿಕೆಯಲ್ಲಿ ಇಲ್ಲಿ ಸಂಕಲಿಸಲಾಗಿದೆ. ಇಲ್ಲಿನ ಲೇಖನಗಳು ಬೇರೆ ಬೇರೆ ಸಂದರ್ಭದಲ್ಲಿ ಬರೆದವುಗಳು. ಇವುಗಳನ್ನು ಬರೆದುದು ಒಂದು ನಿರ್ದಿಷ್ಟ ಉದ್ದೇಶವನ್ನು ಈಡೇರಿಸುವ ಸಲುವಾಗಿಯೆ ಆಗಿರಬಹುದು. ಕೆಲವೊಂದು ಲೇಖನಗಳನ್ನು ವಿಚಾರ ಸಂಕಿರಣಗಳ ವಿಷಯ ಮಂಡನೆಗಾಗಿ ಸಿದ್ಧಪಡಿಸಲಾಗಿದೆ. ಮತ್ತೆ ಕೆಲವೊಂದನ್ನು ನಿರ್ದಿಷ್ಟ ಯೋಜನೆಯ ಭಾಗವಾಗಿ ರೂಪಿಸಲಾಗಿದೆ. ಹೀಗೆ ನನ್ನಿಂದ ಲೇಖನಗಳನ್ನು ಬರೆಯಿಸಿದವರು ಅನೇಕರು. ಅವುಗಳನ್ನು ಸಾಂದರ್ಭಿಕವಾಗಿ ಆಗಾಗ ಪ್ರಕಟ ಮಾಡಲಾಗಿದೆ. ಹಾಗೆಯೇ ಲೇಖನಗಳನ್ನು ಬರೆದ ಸಂದರ್ಭವನ್ನು ಹಾಗೂ ಪ್ರಕಟಣೆಯ ವಿವರಗಳನ್ನು ಆಯಾ ಲೇಖನಗಳ ಕೊನೆಯಲ್ಲಿ ನೀಡಲಾಗಿದೆ. ಹೀಗೆ ನನ್ನಿಂದ ಲೇಖನಗಳನ್ನು ಬರೆಯಿಸಿದ ಹಾಗೂ ಪ್ರಕಟಿಸಿದ ಎಲ್ಲರಿಗೂ ಪ್ರೀತಿಯ ಧನ್ಯವಾದಗಳು. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಕಾರಣಕ್ಕಾಗಿ ಲೇಖನಗಳಲ್ಲಿ ಕೆಲವೊಂದು ಪುನರಾವರ್ತನೆಗಳು ಆಗಿವೆ ಎಂಬುದೂ ಗಮನದಲ್ಲಿ ಇದೆ. ಆದರೆ ಅವುಗಳನ್ನು ಪರಿಷ್ಕರಿಸುವ ಕೆಲಸ ಮಾಡಿಲ್ಲ. ಏಕೆಂದರೆ ಪ್ರತಿಯೊಂದು ಕೂಡಾ ಸ್ವತಂತ್ರವಾದ ಲೇಖನಗಳು ಎಂಬುದೂ ಮುಖ್ಯ.
ಭಾಷಾಂತರ ಎಂಬುದು ಪ್ರಸ್ತುತ ದಿನಮಾನಗಳಲ್ಲಿ ವಿಶ್ವವಿದ್ಯಾಲಯಗಳ ಅಧ್ಯಯನ ಶಿಸ್ತಿನ ಭಾಗವೂ ಆಗಿರುವುದರಿಂದ ಆಸಕ್ತ ವಿದ್ಯಾರ್ಥಿಗಳೂ ಸಹ ಈ ಬಗೆಯ ಬರೆಹಗಳನ್ನು ಕುತೂಹಲದಿಂದ ನೋಡುತ್ತಿರುತ್ತಾರೆ. ಇಲ್ಲಿನ ಲೇಖನಗಳು ನಾನು ತರಗತಿಗಳಲ್ಲಿ ಪಾಠ ಹೇಳಲು ನಡೆಸಿದ ಸಿದ್ಧತೆಗಳ ಪರಿಣಾಮಗಳೇ ಆಗಿವೆ. ಹಾಗೆಯೇ ಓದುವ, ಪಾಠ ಹೇಳುವ ಹಾಗೂ ಬರೆಯುವ ಕೆಲಸಗಳು ನಿರಂತರವಾಗಿ ಸಾಗಿ ಬಂದ ದಾರಿಯ ಹೆಜ್ಜೆ ಗುರುತುಗಳೂ ಆಗಿವೆ. ಹಾಗೆಯೇ ಈ ಲೇಖನಗಳು ಭಾಷಾಂತರವನ್ನು ಕುರಿತ ನನ್ನ ಬರೆಹಗಳ ಮುಖ್ಯ ದಾಖಲೆಗಳೇ ಆಗಿವೆ. ಇಲ್ಲಿನ ಲೇಖನಗಳು ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟಿನಲ್ಲಿ ರೂಪುಪಡೆದಿವೆಯೆಂದು ಹೇಳುವುದು ಸಾಧ್ಯವಿಲ್ಲ. ಆಸಕ್ತಿಗನುಗುಣ ವಾಗಿ ಸಾಂದರ್ಭಿಕವಾಗಿ ದೊರೆತ ಆಕರಗಳನ್ನು ಆಧರಿಸಿದ ವಿಶ್ಲೇಷಣೆಗಳು ಕೆಲವೊಮ್ಮೆ ವಿವರಣೆಗಳು ಮುಖ್ಯವಾಗಿ ಇವು ರೂಪುಗೊಂಡಿವೆ. ಅಧ್ಯಯನಾಸಕ್ತರಿಗೆ ಇಲ್ಲಿನ ಲೇಖನಗಳು ಹೊಸ ತೋರುದಾರಿಯಾಗಬಹುದು ಎಂಬುದು ಮಾತ್ರ ಇಲ್ಲಿನ ಲಕ್ಷ್ಯ.
ಲೇಖನಗಳನ್ನು ಡಿಟಿಪಿಗೆ ಅಳವಡಿಸಿದ ಶ್ರೀ ಆಂಜನೇಯ, ಡಾ. ನಾಗವೇಣಿ ಮೊದಲಾದವರ ಸಹಕಾರವನ್ನು ಪ್ರೀತಿಯಿಂದ ನೆನೆಯುತ್ತೇನೆ. ಲೇಖನ ರಚನೆಯ ಸಂದರ್ಭದಲ್ಲಿ ಸಂವಾದದ ಮೂಲಕ ನೆರವಾದ ಮಿತ್ರ ಸಿ.ವೆಂಕಟೇಶ್ ವಿಭಾಗದಲ್ಲಿ ಸಹೋದ್ಯೋಗಿಗಳಾಗಿದ್ದ ಡಾ. ಕರೀಗೌಡ ಬೀಚನಹಳ್ಳಿ, ಡಾ. ವಿಠಲರಾವ್ ಟಿ. ಗಾಯಕ್ವಾಡ್, ಡಾ. ಎಂ.ಉಷಾ, ಡಾ. ವಿ.ಬಿ.ತಾರಕೇಶ್ವರ್ ಇವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು. ನನ್ನ ಪುಸ್ತಕಗಳನ್ನು ಓದುವ ಹಾಗೂ ಅನೇಕ ಬಗೆಯಲ್ಲಿ ಸಂವಾದಗಳನ್ನು ನಡೆಸುವ ಕಿರಿಯ ಮಿತ್ರ ವಿಮರ್ಶಕ ಹಾವೇರಿಯ ವಿಕಾಸ ಹೊಸಮನಿ ಅವರು ಮುನ್ನುಡಿಯ ಮಾತುಗಳನ್ನು ಬರೆದುಕೊಟ್ಟಿದ್ದಾರೆ. ಅವರ ಪ್ರೀತಿಗೆ ಧನ್ಯವಾದಗಳು. ಮನೆಯಲ್ಲಿ ಅಧ್ಯಯನದ ವಾತಾವರಣವನ್ನು ಕಾಯ್ದುಕೊಡುವ ಮಡದಿ ಶ್ರೀದೇವಿ ಮಕ್ಕಳಾದ ಅಭಿಮಾನ್, ನಿಶಿತಾ ಎಲ್ಲರನ್ನು ಪ್ರೀತಿಯಿಂದ ನೆನಪು ಮಾಡಿಕೊಳ್ಳುತ್ತೇನೆ.
ಲೇಖನಗಳನ್ನು ಬರೆಯಲು ಕಾರಣವಾದ ವಿಚಾರಸಂಕಿರಣಗಳ ಸಂಘಟಕರಿಗೆ, ಪ್ರಕಟಿಸಿದ ನಿಯತಕಾಲಿಕೆಗಳ ಹಾಗೂ ಪುಸ್ತಕಗಳ ಸಂಪಾದಕರುಗಳಿಗೆ ಕೃತಜ್ಞತೆಗಳು. ಪುಸ್ತಕದ ಸೌಂದರ್ಯವನ್ನು ಹೆಚ್ಚಿಸಲು ಕಾರಣರಾದ ಪುಟವಿನ್ಯಾಸ ಮಾಡಿದ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಹಾಗೂ ಶ್ರೀ ಗಣೇಶ ಯಾಜಿ ಇವರಿಗೆ ಹೃತ್ಪೂರ್ವಕವಾದ ಕೃತಜ್ಞತೆಗಳು.
ಮುಖಪುಟ ರಚಿಸಿದ ಕಲಾವಿದರು ಹಾಗೂ ಮುದ್ರಣಾಲಯದ ಸಿಬ್ಬಂದಿಗಳು ಎಲ್ಲರೂ ಕೃತಜ್ಞತೆಗೆ ಅರ್ಹರು. ಹಾಗೆಯೇ ಸುಂದರವಾಗಿ ಪ್ರಕಟಿಸುತ್ತಿರುವ ಯಾಜಿ ಪ್ರಕಾಶನ ಬಳಗದ ಎಲ್ಲರಿಗೂ ಅನುನಯದ ಕೃತಜ್ಞತೆಗಳು. ನನ್ನ ಅನುವಾದ ಹಾಗೂ ಅನುವಾದ ಸಂಬಂಧಿ ಬರೆಹಗಳನ್ನು ಓದುವ ಸಹೃದಯರಾದ ನಿಮಗೂ ಧನ್ಯವಾದಗಳು.
–ಡಾ. ಮೋಹನ ಕುಂಟಾರ್
ಪರಿವಿಡಿ
ಸವಿನುಡಿ / ೩
ಮುನ್ನುಡಿ / ೫
ಅನುನಯದ ನುಡಿ / ೯
೧. ಕನ್ನಡ ಅನುವಾದ: ಒಲವು-ನಿಲುವು / ೧೩
೨. ಕನ್ನಡ ಅನುವಾದ ಸಾಹಿತ್ಯ ಪರಂಪರೆ / ೩೧
೩. ಅನುವಾದಗಳ ತಾತ್ವಿಕತೆ / ೫೫
೪. ಅನುವಾದಗಳ ಸಾಂಸ್ಕೃತಿಕ ರಾಜಕಾರಣ / ೭೫
೫. ಕನ್ನಡ ಭಾಷಾಂತರ ಸಾಹಿತ್ಯ: ಅಧ್ಯಯನ ವಿಧಾನಗಳು / ೯೧
೬. ಭಾಷಾಂತರದ ವಿಭಿನ್ನ ನೆಲೆಗಳು / ೧೦೬
೭. ಮಾಧ್ಯಮದಲ್ಲಿ ಭಾಷಾಂತರ / ೧೨೯
೮. ಮಾಧ್ಯಮ ಭಾಷಾಂತರ: ತಾತ್ವಿಕತೆ / ೧೪೬
೯. ಕನ್ನಡ ಪತ್ರಿಕೋದ್ಯಮದ ಭಾಷಾಂತರ ಬಿಕ್ಕಟ್ಟುಗಳು / ೧೬೪
೧೦. ಭಾಷಾಂತರ ಪ್ರಕ್ರಿಯೆಯ ನೆಲೆಗಳು / ೧೭೨
೧೧. ಮಲಯಾಳಂ-ಕನ್ನಡ ಭಾಷಾಂತರದ ಸ್ವರೂಪ / ೧೮೦
೧೨. ಕನ್ನಡದಲ್ಲಿ ಮಲಯಾಳಂ ಸಾಮಾಜಿಕ ಭಾಷಾಂತರ / ೧೯೧
೧೩. ಸಂಸ್ಕೃತ-ಕನ್ನಡ ಭಾಷಾಂತರ ಪ್ರಕ್ರಿಯೆ / ೨೦೪
೧೪. ಅನುವಾದ ಸಂವಾದ / ೨೧೫
Reviews
There are no reviews yet.