• Home
  • Shop
    • ಅಂಕಣ ಬರಹ
    • ಅನುವಾದ
    • ಆತ್ಮಕತೆ
    • ಕಾದಂಬರಿ
    • ಕಾವ್ಯ
    • ಚರಿತ್ರೆ
    • ಜೀವನಚರಿತ್ರೆ
    • ನಾಟಕ
    • ಮಕ್ಕಳ ಸಾಹಿತ್ಯ
    • ವಿಜ್ಞಾನ
    • ವಿಮರ್ಶೆ
    • ಸಂಕೀರ್ಣ
    • ಸಣ್ಣಕತೆ
    • ಸಂಶೋಧನೆ
    • ಸಾಹಿತ್ಯ
  • Editors Writings
    • ತೋಚಿದ್ದು-ಗೀಚಿದ್ದು
    • ಸಂವೇದನೆ
  • Publications
    • Our Books
    • other publication
  • About us
Yaji Publications
  • Hampi Yaji
  • FAQs
  • Contact us
Login / Register
Search
Wishlist
2 items / ₹260.00
Menu
Search
2 items ₹260.00
-17%
Click to enlarge
Home Authors Dr. Mohana Kuntar M T Vasudevan Nair Kategalu
Purana Kathakosha ₹150.00 Original price was: ₹150.00.₹120.00Current price is: ₹120.00. Rs
Back to products
Buguri (Vidyarthigala Rajeya Rasaayana) ₹380.00 Original price was: ₹380.00.₹300.00Current price is: ₹300.00. Rs

M T Vasudevan Nair Kategalu

₹480.00 Original price was: ₹480.00.₹400.00Current price is: ₹400.00. Rs

Compare
Add to wishlist
Categories: Dr. Mohana Kuntar, Our Books, ಅನುವಾದ, ಸಣ್ಣಕತೆ
Share:
  • Description
  • Reviews (0)
  • Shipping & Delivery
Description

ಎಂ.ಟಿ.ಯವರ ಕತೆಗಳಿಗೆ  ಮುನ್ನುಡಿಯ ಮಾತುಗಳು

ಎಂ.ಟಿ.ವಾಸುದೇವನ್ ನಾಯರ್ ಅವರ ಇಪ್ಪತ್ತೈದು ಕಥೆಗಳ ಈ ಸಂಕಲನ, ’ಎಂಟಿ. ವಾಸುದೇವನ್ ನಾಯರ್ ಕತೆಗಳು’ ಆರೆಂಟು ತಿಂಗಳ ಹಿಂದೆಯೇ ಪ್ರಕಟಗೊಳ್ಳಬೇಕಾಗಿದ್ದಿತು. ಆಗಲೇ ಬಂದಿದ್ದರೆ ಎಂ.ಟಿ. ಅವರಿಗೆ ಕನ್ನಡದಲ್ಲಿ ಅವರ ಇಷ್ಟೊಂದು ಕಥೆಗಳು ಬರುತ್ತಿರುವುದನ್ನು ಕಂಡು ಸಂತೋಷ ವಾಗಬಹುದಿತ್ತು. ಅವರ ಅಂಥ ಸಂತೋಷವನ್ನು ಕಳೆದದ್ದಕ್ಕಾಗಿ ನನಗೆ ವಿಷಾದವೆನಿಸುತ್ತಿದೆ. ನನ್ನ ಅನಾರೋಗ್ಯ ಮತ್ತು ಗೆಳೆಯ ಮೋಹನ ಕುಂಟಾರ್ ಅವರ ಹಟಮಾರಿತನ ಇವೆರಡೂ ಈ ಸಂಕಲನವು ಇಷ್ಟು ತಡವಾಗಿ ಬರುತ್ತಿರುವುದಕ್ಕೆ ಕಾರಣವಾಗಿವೆ. ಪ್ರಿಯ ಶ್ರೀ ಮೋಹನ ಕುಂಟಾರ್ ಅವರು ಎಂ.ಟಿ.ಯವರ ಇಪ್ಪತ್ತೈದು ಕಥೆಗಳನ್ನು ಅನುವಾದಿಸಿ ಅವುಗಳ ಡಿಟಿಪಿ ಪ್ರತಿಯನ್ನು ನನಗೆ ಕಳೆದ ವರ್ಷದ ಫೆಬ್ರುವರಿಯಲ್ಲಿಯೇ ಕಳಿಸಿದ್ದರು. ನಾನು ಈ ಸಂಕಲನಕ್ಕೆ ಮುನ್ನುಡಿಯ ಕೆಲವು ಮಾತುಗಳನ್ನು ಬರೆಯಬೇಕೆನ್ನುವುದು ಅವರ ಆಸೆಯಾಗಿದ್ದಿತು. ಮಲಯಾಳಂ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರುವ ಅಧಿಕೃತವಾದ ಭಾಷಾಂತರಕಾರರೊಬ್ಬರು ಇದ್ದರೆ, ಅದು ಗೆಳೆಯ ಶ್ರೀ ಮೋಹನ ಕುಂಟಾರ್ ಅವರು. ಅವರು ಅನುವಾದಿಸಿದ ವೈಕಂ ಮುಹಮ್ಮದ ಬಷೀರ ಅವರ ಕಥೆಗಳನ್ನು ಓದಿ ನಾನು ತುಂಬ ಸಂತೋಷಪಟ್ಟಿದ್ದೆ. ಆ ಸಂಕಲನಕ್ಕೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಶಸ್ತಿ ಬಂದುದೂ ನನ್ನ ನೆನಪಿನಲ್ಲಿದ್ದಿತು. ಹೀಗಿರುವಾಗ ಕುಂಟಾರ್ ಅವರ ಈ ಭಾಷಾಂತರಿತ, ಅದರಲ್ಲಿಯೂ ಎಂ.ಟಿ.ಯವರ ಈ ಕಥೆಗಳ ಸಂಕಲನಕ್ಕೆ ಯಾವ ಮುನ್ನುಡಿಯೂ ಬೇಕಿರಲಿಲ್ಲ. ನಾನು ಈ ಸಂಗತಿಗಳೆಲ್ಲ ವನ್ನು ಹೇಳಿ, ’ಎಂಟಿ. ವಾಸುದೇವನ್ ನಾಯರ್ ಕತೆಗಳು’ ಸಂಕಲನಕ್ಕೆ ಯಾವ ಮುನ್ನುಡಿಯ ಹುಸಿ ಊರುಗೋಲೂ ಬೇಕಿಲ್ಲ ಎಂದು ಕುಂಟಾರ್ ಅವರನ್ನು ನಂಬಿಸಬಹುದಿತ್ತು. ಆದರೆ, ನಾನೂ ಲೋಭಿಯಾದೆನೆಂದು ತೋರುತ್ತದೆ! ಎಂ.ಟಿ.ವಾಸುದೇವನ್ ನಾಯರ್‌ರಂತಹ ಅತ್ಯುತ್ಕೃಷ್ಟ ಕಥೆಗಾರರ ಕಥೆಗಳೊಂದಿಗೆ ನನ್ನ ಬರಹವೂ ಇರಲಿ ಎಂದು ಬಯಸಿದೆನೋ ಏನೋ! ಬಹುಶಃ ಹಾಗೆಯೇ ಇರಬೇಕು. ಕುಂಟಾರರ ಮೋಹಕ ವಿನಂತಿಯನ್ನು ನಾನು ಒಪ್ಪಿಕೊಂಡು ಬಿಟ್ಟೆ! ಆದರೆ ಅನಾರೋಗ್ಯದ ಪರ್ವವೊಂದು ನನ್ನನ್ನು ಆವರಿಸಿದಾಗ ಕುಂಟಾರರಿಗೆ ನಾನು ನನ್ನ ಅಸಹಾಯಕತೆಯನ್ನು ನಿವೇದಿಸಿಕೊಂಡೆ. ಕುಂಟಾರರು ನನಗೆ ಬೇಗನೇ ಆರೋಗ್ಯ ಹೊಂದಲು ಹಾರೈಸಿದ್ದಲ್ಲದೆ, ನಿಮ್ಮ ಮುನ್ನುಡಿ ಬಂದ ಮೇಲೆಯೇ ಈ ಸಂಕಲನ ಪ್ರಕಟಗೊಳ್ಳುತ್ತದೆ ಎಂದು ಹೇಳಿಬಿಟ್ಟರು! ನನ್ನ ಅನಾರೋಗ್ಯ ಮತ್ತು ಕುಂಟಾರರ ಹಟಮಾರಿತನ ಇವೆರಡರ ಹಗ್ಗ ಜಗ್ಗಾಟದ ನಡುವೆ ನಾವು ಎಂ.ಟಿ.ಯವರನ್ನು ಕಳೆದುಕೊಂಡೇ ಬಿಟ್ಟೆವು! ಇದು ನನ್ನಲ್ಲಿ ಮರೆಯಲಾಗದ ವಿಷಾದದ ಭಾವನೆಯನ್ನು ಮೂಡಿಸಿದೆ. ಇರಲಿ. ಅನಿವಾರ್ಯಗಳನ್ನು ಎದುರಿಸಲೇಬೇಕು!

ಎಂ.ಟಿ.ಯವರು ಏಕಕಾಲಕ್ಕೇ ಹಲವು ಕಲಾಮಾಧ್ಯಮಗಳಲ್ಲಿ ತೊಡಗಿಕೊಂಡವರು. ಸಣ್ಣಕಥೆ, ಕಾದಂಬರಿಗಳು, ಪ್ರಬಂಧಗಳಂತಹ ಅಕ್ಷರ ಮಾಧ್ಯಮಗಳಲ್ಲದೆ ಚಲನಚಿತ್ರ ಮಾಧ್ಯಮದಲ್ಲಿಯೂ ಗಣನೀಯ ಸಾಧನೆ ತೋರಿದವರು. ಅವರ ಸ್ಕ್ರೀನ್-ಪ್ಲೇಗಳಿಗೆ ಕೇರಳ ರಾಜ್ಯದ ಹನ್ನೊಂದು ಬಹುಮಾನಗಳು ಬಂದರೆ, ನಾಲ್ಕು ರಾಷ್ಟ್ರ ಪ್ರಶಸ್ತಿಗಳು ಸಂದಿವೆ. ಅಂದರೆ, ಎಂ.ಟಿ.ಯವರ ಕಥನದ ಬರಹವು ಎಷ್ಟರಮಟ್ಟಿಗೆ ದೃಶ್ಯವನ್ನು ಒಳಗೊಂಡಿರಬಹುದು ಎನ್ನುವುದನ್ನು ಊಹಿಸಬಹುದು. ಅಂದರೆ, ವಾಸುದೇವನ್ ಅವರ ಭಾಷೆಯು ತನ್ನ ಸಹಜ ಶ್ರಾವ್ಯದ ಕರಣದ ಜೊತೆಗೆ ದೃಶ್ಯದ ಇನ್ನೊಂದು ಕರಣವನ್ನೂ ಸಾಧಿಸಿಕೊಂಡಿದ್ದಿತು ಎಂದು. ಎಂ.ಟಿ.ಯವರ ಕಥೆಗಳನ್ನು ಓದುತ್ತಿದ್ದರೆ ಕೇರಳದ ಪರಿಸರದ ದೃಶ್ಯಗಳು ನಮ್ಮ ಕಣ್ಣಮುಂದೆ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಅಲ್ಲಿನ ಬಾಳೆಯ ಎಲೆಗಳ ಮೇಲೆ ಬೀಳುತ್ತಿರುವ ಮಳೆ ಹನಿಗಳ ದೃಶ್ಯ ಮತ್ತು ಸದ್ದು, ಸಮುದ್ರದ ದಂಡೆಯ ಬಂಡೆಗಳು, ಕತ್ತಲಿನ ಆವರಣದಲ್ಲಿ ಅವುಗಳ ಮೇಲೆ ಕುಳಿತ ಗಂಡು ಹೆಣ್ಣುಗಳು, ಮನೆಗಳಲ್ಲಿನ ಬಡಗು, ತೆಂಕು ದಿಕ್ಕುಗಳಲ್ಲಿನ ಕೋಣೆಗಳು, ಕಿಟಕಿಗೆ ಕಟ್ಟಿದ ತೆಂಗಿನ ಗರಿಗಳ ಜಾಲರಿಯ ಮೂಲಕ ಕೋಣೆಗಳೊಳಗೆ ಬೀಳುವ ಬಿಸಿಲಿನ ಗೆರೆಗಳು, ಭರಣಿಯ ತಳದಲ್ಲಿದ್ದ ಎಣ್ಣೆಯನ್ನು ಬಟ್ಟಲಿಗೆ ಬಸಿದುಕೊಂಡ ನಂತರ ಅಲ್ಲಿ ಉಳಿದ ಎಣ್ಣೆಯ ಗಸೆ, ಪಣತ ಮನೆಯ ಮೂರನೆಯ ಮಹಡಿಯ ಕೋಣೆಯಲ್ಲಿ ದೀಪ ಹಚ್ಚಿಟ್ಟಿದ್ದರಿಂದ ಆ ಕೋಣೆಯ ಕಿಟಕಿಗಳು ಮಂಜುಗಣ್ಣು ತೆರೆದು ಇಣಿಕಿ ನೋಡುವುದು, ಗುಡ್ಡಸಾಲುಗಳಾಚೆ ಕಪ್ಪು ಚುಕ್ಕೆಗಳಂತೆ ಕಾಣುವ ಮರಗಳ ಗುಂಪಿನ ನಡುವಲ್ಲಿ ಆಕಾಶದತ್ತ ಎದ್ದುನಿಂತಿರುವ ದೊಡ್ಡ ಶಿಲುಬೆ… ಹೀಗೆ ಏನೆಲ್ಲ ದೃಶ್ಯಗಳನ್ನು ನಮ್ಮ ಮನದ ಮುಂದೆ ಹರಡುತ್ತ ವಾಸುದೇವನ್ ನಾಯರ್ ಅವರು ತಮ್ಮ ಕಥನವನ್ನು ನಮ್ಮಲ್ಲಿ ಅಧಿಕೃತಗೊಳಿಸುತ್ತಾರೆ. ಅವರ ಬಹುತೇಕ ಕಥೆಗಳಲ್ಲಿ ಇಂತಹ ಹಲವಾರು ಸಜೀವ ಶಬ್ದಚಿತ್ರಗಳು ನಮ್ಮ ಕಣ್ಣ ಮುಂದೆ ಹೊಳೆಯುತ್ತವೆ.

ನನಗೆ ಮಲಯಾಳಂ ಭಾಷೆ ಬರುವುದಿಲ್ಲ. ಆದರೆ, ಕುಂಟಾರರ ಇಲ್ಲಿನ ಭಾಷಾಂತರಿತ ಕಥೆಗಳನ್ನು ಓದಿಯೇ ನನಗನಿಸುತ್ತಿರುವುದೆಂದರೆ, ಎಂ.ಟಿ.ವಾಸುದೇವನ್ ನಾಯರ್ ಅವರಿಗೆ ತಾವು ಬಳಸುತ್ತಿದ್ದ ಭಾಷೆಯ ಬಗೆಗೆ ಅಪಾರವಾದ ನಂಬಿಕೆ ಇದ್ದಿರಬೇಕು. ತಾವು ಬಳಸುವ ಕೆಲವೇ ಪದಗಳಿಂದ ಹಲವು ಅರ್ಥಗುಚ್ಛಗಳನ್ನು ಹೊಮ್ಮಿಸುವ ನಂಬಿಕೆ ಎಂ.ಟಿ.ಯವರಿಗೆ ಇದ್ದಿತೆಂದು ತೋರುತ್ತದೆ. ಕೇವಲ ಒಂದು ಉದಾಹರಣೆಯನ್ನು ನಿಮ್ಮ ಮುಂದೆ ಇಡುತ್ತೇನೆ. ’ಹೇಡಿ’ ಕಥೆಯಲ್ಲಿ ಬರುವ ಮಾಸ್ತರರು, ಆಸ್ಪತ್ರೆಯಲ್ಲಿನ ನರ್ಸ್ ಲಕ್ಷ್ಮೀಕುಟ್ಟಿಯನ್ನು ಭೆಟ್ಟಿಯಾಗಿ ತಮ್ಮ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಆಡ್ಮಿಟ್ ಮಾಡಲು ಸಹಾಯ ಕೇಳುತ್ತಾರೆ. ಈ ಲಕ್ಷ್ಮೀಕುಟ್ಟಿ ಮಾಸ್ತರರ ಹಳೆಯ ವಿದ್ಯಾರ್ಥಿನಿ. ಈ ಬರಹಗಾರ ಮಾಸ್ತರರ ಓದಿನ ಆಸಕ್ತಿಯ ಶಿಷ್ಯೆ ಆಕೆ. ಅವರಿಂದ ಕೊಂಡೊಯ್ದ ಪುಸ್ತಕದ ರಕ್ಷಾಪುಟದ ಮೇಲೆ ವಿರಹ ಗೀತೆಯ ಸಾಲುಗಳನ್ನು ಬರೆದು ಅದನ್ನು ಮಾಸ್ತರರಿಗೆ ಮರಳಿಸಿದಾಕೆ. ಈಗ ನರ್ಸ್ ಆಗಿದ್ದ ಆಕೆಯನ್ನು ಮಾಸ್ತರರು ಕೇಳುತ್ತಾರೆ: ’ಲಕ್ಷ್ಮೀಕುಟ್ಟಿ, ನನಗೆ ನಿನ್ನ ಸಹಾಯ ಬೇಕಾಗಿದೆ. ಇವರನ್ನು ಒಮ್ಮೆ ಎಡ್ಮಿಟ್ ಮಾಡಬೇಕಾಗಿದೆ’. ’ಯಾರು ಮಾಸ್ತರೇ ಇವರು?’ ’ನನ್ನ ಹೆಂಡತಿ’. ಲಕ್ಷ್ಮೀ ಕುಟ್ಟಿಯ ಮುಖದಲ್ಲಿ ನಗುವೊಂದು ಪಸರಿಸಿತು. -ಇದಿಷ್ಟು ಇಲ್ಲಿನ ಬರೆಹ. ಇದಿಷ್ಟು ಬರಹ ಲಕ್ಷ್ಮೀಕುಟ್ಟಿಯ ಮನದಲ್ಲಿ ಮೂಡಿರಬಹುದಾದ ಹಲವು ಭಾವನೆಗಳನ್ನು ನಮ್ಮೆದುರು ಮಂಡಿಸಿ ಬಿಡುತ್ತದೆ. ಅದು ಲಕ್ಷ್ಮಿಯ ಮನದಲ್ಲಿ ಮೂಡಿರಬಹುದಾದ ವ್ಯಂಗ್ಯ ಇರಬಹುದು, ವಿಷಾದದ ನೋವು ಇರಬಹುದು; ಇಲ್ಲವೇ ಮಾಸ್ತರರ ಹೆಂಡತಿಯನ್ನು ನೋಡಿ ಹೊರಡಿಸಿದ ಹೊಸ ಪರಿಚಯದ ಸಹಜ ನಗುವೂ ಆಗಿರಬಹುದು. ಎಂ.ಟಿ.ಯವರು ಅವೆಲ್ಲ ಸಾಧ್ಯತೆಗಳನ್ನು ಒಟ್ಟಿಗೆ ಸೇರಿಸಿ ಇಲ್ಲಿ ನಾಲ್ಕು ಶಬ್ದಗಳಲ್ಲಿ ಇಟ್ಟಿದ್ದಾರೆ. ಓದುಗನು ತನ್ನ ಭಾವಾನುಸಾರ/ಶಕ್ತ್ಯಾನುಸಾರ ಈ ಶಬ್ದಗುಚ್ಛವನ್ನು ಅರ್ಥೈಸಿಕೊಳ್ಳಬಹುದು! ’ನರಿಯ ಮದುವೆ’ ಕಥೆಯಲ್ಲಿನ ಕುಂಞನು ಯಾರೋ ಒಬ್ಬ ಆಚಾರಿಗೆ ಹುಟ್ಟಿದವನೆನ್ನುವ ಪ್ರತೀತಿ. ಎಲ್ಲರೂ ಅವನನ್ನು ಗೇಲಿ ಮಾಡುತ್ತಿದ್ದರು. ಸುತ್ತಲಿನ ಜಗತ್ತನ್ನು ಎದುರಿಸುವ ಬಗೆಗೆ ಕುಂಞನಿಗೆ ಹೆದರಿಕೆ. ಯಾರೂ ಕಾಣದ ಗುಹೆಯೊಂದರಲ್ಲಿ ಹೋಗಿ ಕುಳಿತುಕೊಳ್ಳು ತ್ತಾನವನು. ಅಂಥವನು ಆಡುವ ಈ ಮಾತನ್ನು ಕೇಳಿರಿ: ಓತಿಗಳಿಗೆ ಒಳ್ಳೆಯ ಸುಖ. ಬಂಡೆಯ ಸಂದುಗಳಲ್ಲಿ ಹೋದರೆ ಯಾರೂ ಕಾಣಲಾರರು. ಹೊರಗೆ ನೋಡಿಕೊಂಡು ಇರಬಹುದು. ಈ ಒಂದು ವಾಕ್ಯ ಕುಂಞನ ಎಷ್ಟೆಲ್ಲ ಮನೋವ್ಯಾಕುಲಗಳನ್ನು ನಮಗೆ ವಿಸ್ತರಿಸಿ ಹೇಳಬಲ್ಲುದು.

ಆಧುನಿಕ ಸಣ್ಣಕಥೆಯ ಪಾಶ್ಚಾತ್ಯ ಮೀಮಾಂಸಕನೊಬ್ಬ ಸಣ್ಣ ಕಥೆಗಳನ್ನು ಮುಳುಗಡೆ ಯಾಗುತ್ತಲಿರುವ ಜನಾಂಗದ ಕಥನಗಳೆನ್ನುತ್ತಾನೆ. ಸಣ್ಣಕಥೆಗಳು ದುಃಖ, ಆರ್ತತೆ, ಅಸಹಾಯಕತೆ, ಸಂಬಂಧಹೀನತೆ, ಮನೋದೌರ್ಬಲ್ಯದ ಅನಿವಾರ್ಯಗಳು, ಪ್ರೀತಿಯ ಅಸಫಲತೆ, ಅನಾಥಪ್ರಜ್ಞೆ ಈ ಮುಂತಾದ ಮಾನವ ಕ್ಲೇಶಗಳನ್ನು ಎತ್ತಿತೋರಿಸುವ, ಮನನಗೊಳಿಸುವ ಬರೆಹಗಳು ಎನ್ನುತ್ತಾನವನು. ಕಥೆ ಬರೆಯುವ ಒಬ್ಬ ಲೇಖಕನಾಗಿ ನನಗೆ ಬರ್ಗೊಂಜಿಯ (ನಾನು ಮೇಲೆ ಉಲ್ಲೇಖಿಸಿದ, ಸಣ್ಣ ಕಥೆಯ ಪಾಶ್ಚಾತ್ಯ ಮೀಮಾಂಸಕ) ಈ ಮಾತುಗಳು ಬಹಳಷ್ಟು ಮಟ್ಟಿಗೆ ಸರಿ ಎನ್ನಿಸುತ್ತವೆ. ಎಲ್ಲಿಯೋ ಮಾಸ್ತಿಯಂತಹವರ ಕೆಲವು ಕಥೆಗಳು ಸುಖಾಂತದವೂ, ಶಾಂತವನ್ನು ಬಿತ್ತರಿಸುವಂತಹವೂ ಆಗಿರಬಹುದು! ಇರಲಿ. ವಾಸುದೇವನ್ ನಾಯರ್ ಅವರ ಕಥೆಗಳೂ, ಬರ್ಗೊಂಜಿಯ ಇದೇ ಶ್ರೋತವನ್ನಿಟ್ಟುಕೊಂಡು ಬಂದವುಗಳು ಎನ್ನಿಸುತ್ತದೆ. ಈ ಸಂಕಲನದ ಶಾಂತಿಪರ್ವ ಎನ್ನುವ ಕಥೆಯನ್ನು ಸ್ವಲ್ಪಮಟ್ಟಿಗೆ (ಅದೂ ಪೂರ್ಣವಾಗಿ ಅಲ್ಲ! ಅಲ್ಲಿಯೂ ಮದ್ಯದ ಚಟಕ್ಕೆ ಬಿದ್ದು, ಪ್ರೇಯಸಿಯಿಂದ ತಿರಸ್ಕೃತನಾದ ಯುವಕನೊಬ್ಬನಿದ್ದಾನೆ) ಹೊರತುಪಡಿಸಿ, ಉಳಿದೆಲ್ಲ ಕಥೆಗಳೂ ಇಂಥ ಮುಳುಗಡೆಯ ಜನಾಂಗದ ಕಥೆಗಳೇ ಅನ್ನಿಸುತ್ತವೆ. ಬರೀ ಕಥಾವಸ್ತುವಿನ ಬಗೆಗೆ ಮಾತ್ರ ಅಲ್ಲ, ಕಥನದ ಗ್ರಹಿಕೆಯ ಬಗೆಗೂ ಎಂ.ಟಿ.ಯವರು ಇಂಥ ರೀತಿಯನ್ನು ನಂಬಿದ್ದಾರೆ ಎನ್ನಿಸುತ್ತದೆ. ಎಂ.ಟಿ.ಯವರ ’ದುಃಖ ಕಣಿವೆಗಳು’ ಕಥೆಯಲ್ಲಿ ಬರುವ ಗ್ಲೋರಿಯಾ ಆಡುವ ಈ ಮಾತುಗಳನ್ನು ಕೇಳಿರಿ: ’ಯಾಕೆ ಏನನ್ನೂ ಬರೆಯಲಿಲ್ಲ?’ ’ಬರೆಯಬೇಕು’. ’ಬರೆಯಿರಿ ಸ್ವಾರಸ್ಯವಾದುದನ್ನೇ ಬರೆಯಿರಿ. ಯಾವಾಗಲೂ ಅಳು ಬರುವುದನ್ನೇ ಬರೆಯಿರಿ(!)’. ಕಥೆಯ ಅತ್ಯಂತ ಸ್ವಾರಸ್ಯವಾದ ಗ್ರಹಿಕೆಯೆಂದರೆ ಅಳು ತರಿಸುವ ಭಾವದ ಉದ್ದೀಪನೆ ಎಂದು ಎಂ.ಟಿ.ಯವರು ತಮ್ಮ ಪಾತ್ರವೊಂದರ ಮೂಲಕ ಹೇಳಿಸುತ್ತಾರೆ. ಹಾಗೆ ನೋಡಿದರೆ ಆಕೆಗೆ ಈ ಮಾತನ್ನು ಹೇಳುವ ಅಂಥ ಹಿನ್ನೆಲೆ ಯಾವುದೂ ಇಲ್ಲ. ಆಕೆ ಈ ಮಾತನ್ನು ಹೇಳುವುದು ವಾಸುದೇವನ್ ಅವರು ಬಯಸಿದ ಕಾರಣಕ್ಕೆ ಮಾತ್ರ! ಈ ಕಥೆಯಲ್ಲಿ ದುಃಖದ ಎರಡು ಕಣಿವೆಗಳು ನೆಲೆಗೊಳ್ಳುತ್ತವೆ. ಕಥೆಗಾರ ತನಗಾಗಿ ಕಾಯುತ್ತಿರುವ ಸುಂದರಿಯೊಬ್ಬಳಿಗಾಗಿ ತನ್ನನ್ನು ಮನಸಾ ಪ್ರೀತಿಸುತ್ತಿರುವ ಗ್ಲೋರಿಯಾಳನ್ನು ವರಿಸದೇ ಉಳಿಯುತ್ತಾನೆ. ಇನ್ನು ತನಗಾಗಿ ಕಾಯುತ್ತಿದ್ದಾಳೆಂದು ನಂಬಿದ ಆ ಸುಂದರಿ ಮತ್ತೊಬ್ಬನನ್ನು ಮದುವೆಯಾಗಿ ಹೋಗುತ್ತಾಳೆ!

’ಇರುಳಿನ ಆತ್ಮ’ ಕಥೆ ನಮಗೆ ಮನುಷ್ಯನ ಅಸಹಾಯಕತೆಯ, ಅನಾಥಪ್ರಜ್ಞೆಯ ಉತ್ತುಂಗದ ದರ್ಶನವನ್ನು ಮಾಡಿಸುತ್ತದೆ. ವೇಲಾಯುಧ ತಾಯಿ ತಂದೆ ತೀರಿಹೋದ ಒಬ್ಬ ಹುಡುಗ. ತನಗೆ ಸಂಬಂಧಿಸಿದ ಒಂದು ತರವಾಡಿನ ಮನೆಯಲ್ಲಿ ಅವನು ಅನಾಥನಾಗಿ, ಹುಚ್ಚಿನಿಂದ ಬಳಲುತ್ತ ಬದುಕುತ್ತಿದ್ದಾನೆ. ಅವನನ್ನು ಸ್ಥಿಮಿತದಲ್ಲಿಡಲು ಮನೆಯವರು ಅಚ್ಯುತನಾಯರ್ ಎನ್ನುವ ಕ್ರೂರಿಯೊಬ್ಬನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಪ್ರೀತಿ ಅನುಕಂಪೆ ಇಲ್ಲದೇ ಹುಚ್ಚನಾದ ಅವನು ಅಮ್ಮಿಕುಟ್ಟಿಯ ಅನುಕಂಪೆಯನ್ನೂ (ಪ್ರೀತಿ?) ಗುರುತಿಸಲಾರದವನಾಗುತ್ತಾನೆ. ಅವನನ್ನು ನಿಯಂತ್ರಿಸಲು ನಾಯಿಯನ್ನು ಕಟ್ಟಿಹಾಕುವಂತೆ ಕಬ್ಬಿಣದ ಸರಪಳಿಯೊಂದರಿಂದ ಕಟ್ಟಿಹಾಕುತ್ತಾರೆ. ಹೇಗೋ ಮಾಡಿ ಸರಪಳಿಯನ್ನು ಅರ್ಧಕ್ಕೆ ತುಂಡರಿಸಿಕೊಂಡು ಓಡಿ ಹೊರಟ ಅವನು, ಕುಟುಂಬದಾಚೆಗೂ ಪಸರಿಸಿರುವ ಕ್ರೌರ್ಯವನ್ನು ಕಂಡು ಬೆದರಿ, ಮರಳಿ ಓಡಿ, ಮನೆಗೆ ಬರುತ್ತಾನೆ. ಮನೆಗೆ ಬಂದು, ತನ್ನನ್ನು ಸರಪಳಿಯಿಂದ ಕಟ್ಟಿಹಾಕಿಸಿದ ಮಾವನಲ್ಲಿ ಬೇಡಿಕೊಳ್ಳುತ್ತಾನೆ: ’ನನಗೆ ಹುಚ್ಚು! ನನ್ನನ್ನು ಸರಪಳಿಯಿಂದ ಬಿಗಿದು ಕಟ್ಟಿ ಹಾಕಿರಿ’ ಎಂದು! ವೇಲಾಯುಧನೆನ್ನುವ ಒಂದು ಜೀವಿಯ ಏಕಾಂಗಿತನದ, ಅಸಹಾಯಕತೆಯ ಮತ್ತು ಸಂಬಂಧಹೀನತೆಯ ಅತ್ಯುಗ್ರ ಸ್ಥಿತಿಯಿದು! ನನಗೆ ಅನ್ನಿಸುವುದೇನೆಂದರೆ ಈ ವೇಲಾಯುಧನು ಮಾತ್ರ ಇಂಥ ದುಃಖಕ್ಕೆ ಈಡಾದವನೆ? ಇಲ್ಲಿಯ ಮಿಕ್ಕುಳಿದ ಕಥೆಗಳಲ್ಲಿ ಬರುವ, ವಿಧಿಯ ಹಿಡಿತಕ್ಕೆ ಸಿಕ್ಕು ಪಾಡುಪಡು ತ್ತಿರುವ ಮಾನವಕುಲದ ಉಳಿದೆಲ್ಲರೂ, ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿದ್ದಾರೆಯೆ? ಬರೀ ಮಾನವ ಕುಲವಷ್ಟೇ ಎನ್ನುವುದೇಕೆ, ’ಭಾಗ್ಯ’ ಎಂತೆನ್ನುವ ಕಥೆಯಲ್ಲಿ ಬರುವ ರೋಸಿ ಎನ್ನುವ ನಾಯಿ ಮತ್ತು ಅದರ ತಾಯಿಯ ಪಾಡಾದರೂ ಎಂತಹದು?

ಎಂ.ಟಿ.ಯವರ ಇಲ್ಲಿನ ಯಾವುದೇ ಕಥೆಯೂ ಯಾವುದೇ ಸೈದ್ಧಾಂತಿಕತೆಯನ್ನು ಮುಂಚಾಚುವ ಒಂದಿನಿತಾದರೂ ಪ್ರಯತ್ನದಲ್ಲಿ ತೊಡಗುವುದಿಲ್ಲ. ತೀವ್ರವಾದ ಕಮ್ಯುನಿಸ್ಟ್ ಆವರಣದಲ್ಲಿದ್ದು, ತೊಡಗುವ ಎಂ.ಟಿ.ಯವರು ಇಲ್ಲಿನ ಯಾವುದೇ ಕಥೆಯಲ್ಲಿ ಪೊಲಿಟಿಕಲೀ ಕರೆಕ್ಟ್ ಎಂದೆನ್ನಿಸಿ ಕೊಳ್ಳುವ ರೀತಿಯ ಬರೆಹಕ್ಕೆ ತೊಡಗುವುದೇ ಇಲ್ಲ. ಬದುಕಿನ ವಾಸ್ತವ ಮತ್ತು ಅದರ ಅನೂಹ್ಯ ಸಂಭವಿಸುವಿಕೆಗಳು ಮಾತ್ರ ಅವರ ಕಥನದ ಗಮನ ಕೇಂದ್ರಗಳಾಗುತ್ತವೆ. ಅಂತಲೇ ಕುಟುಂಬವು ಎಂ.ಟಿ.ಯವರ ಬಹುತೇಕ ಕಥೆಗಳ ಆವರಣವಾಗುತ್ತದೆ. ಕುಟುಂಬದ ಆವರಣದಲ್ಲಿ ಏರ್ಪಡುವ ಸಂಬಂಧಗಳು ಮತ್ತು ಅವುಗಳ ವಿಘಟನೆ ಇವರ ಕಥೆಗಳಲ್ಲಿ ಮತ್ತೆ ಮತ್ತೆ ಶೋಧಕ್ಕೆ ಒಳಗಾಗುವ ಸಂಗತಿಗಳು. ಮಾತೃಮೂಲೀಯ ಸಂತಾನದ ಕೌಟುಂಬಿಕ ವ್ಯವಸ್ಥೆಯು (ಮ್ಯಾಟ್ರಿಯಾರ್‍ಕಲ್ ಫ್ಯಾಮಿಲಿ ಸಿಸ್ಟೆಮ್) ತನ್ನ ಕಟ್ಟುಪಾಡುಗಳನ್ನು ಕಳೆದುಕೊಂಡು, ತರವಾಡುಗಳೆನ್ನುವ ಕೂಡು ಕುಟುಂಬಗಳು ವಿಘಟನೆಗೊಂಡು ನ್ಯೂಕ್ಲಿಯರ್ ಫ್ಯಾಮಿಲಿ ಮೂಡಿಬರುತ್ತಿರುವಂತಹ ಬದಲಾವಣೆಗಳು ವಾಸುದೇವನ್ ನಾಯರ್ ಅವರ ಅನೇಕ ಕಥೆಗಳ ಹಿನ್ನೆಲೆಯಲ್ಲಿವೆ. ’ಕರ್ಕಾಟಕ’ ಎನ್ನುವ ಕಥೆಯನ್ನು ನೋಡಿರಿ. ಈ ಕಥೆ ಸರಳ ಓದಿಗೆ ಒಂದು ಬಡತನದ ಬಗೆಗಿನ ಕಥೆ ಎನ್ನಿಸಿಬಿಡಬಹುದು. ಇದರ ಸೂಕ್ಷ್ಮ ಓದು ಬಡತನವಲ್ಲದೇ ಮಾತೃಮೂಲೀಯ ಕುಟುಂಬ ವ್ಯವಸ್ಥೆಯ ಮೌಲ್ಯಕ್ಕೆ ಹೊರತಾದ ಮನೋಭಾವದಿಂದ ಉಂಟಾದ ಅವಘಡವನ್ನೂ ತೋರಿಸುತ್ತದೆ. ಬೆಳಿಗ್ಗೆ ಗಂಜಿಯುಂಡು ಹೋದ ಹುಡುಗ ಸಂಜೆ ಶಾಲೆಯಿಂದ ಮರಳಿದ ಮೇಲೆ ತಿನ್ನಲು ಏನೂ ಇರುವುದಿಲ್ಲ. ರಾತ್ರಿಯ ಊಟಕ್ಕೂ ಒಂದಗುಳು ಇಲ್ಲದಾಗಿ, ಆ ಮಗು ಬರಿಹೊಟ್ಟೆಯಲ್ಲಿ ಮಲಗುವಂತಾಗುತ್ತದೆ. ಇದಕ್ಕೆ ಬಡತ ಒಂದು ಕಾರಣವಾದರೆ, ಆ ಹುಡುಗನ ತಾಯಿಯು, ಈ ಮನೆಗೆ ಅಳಿಯನಾಗಿ ಬಂದ, ತನ್ನ ಗಂಡನ ಮನೆ ಮತ್ತು ಸಂಬಂಧಿಗಳ ಬಗೆಗೆ ತೋರುವ ಅತಿಯಾದ ಅಕರಾಸ್ತೆಯೂ ಕಾರಣವಾಗಿದೆ. ಅವಳ ಗಂಡನ ಮನೆಯ ಕಡೆಯಿಂದ ಬಂದ ಶಂಕುಣ್ಣಿ ಮಾವ, ಇವರು ಹಲವೆಡೆಗೆ ಅಲೆದಾಡಿ, ಕಡ ತಂದ ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನವನ್ನೆಲ್ಲ ಗಬಕಾಯಿಸಿ ಬಿಡುತ್ತಾನೆ. ಅಮ್ಮ ಮತ್ತು ಅಜ್ಜಿ ಇಬ್ಬರೂ ಆ ಹುಡುಗನ ತಂದೆಯ ಮನೆಯ ಬಗೆಗೆ ತೋರುವ ವಿಶೇಷ ಅಕರಾಸ್ತೆಯು ಮಾತೃಮೂಲೀಯ ಕುಟುಂಬದ ಮೌಲ್ಯಕ್ಕೆ ಹೊಂದಿಕೊಳ್ಳದಂತಹ ಹೊರತಾದುದು. ಕಥೆಯು ಸೂಕ್ಷ್ಮವಾಗಿ ಮಾತೃ ಮೂಲೀಯ ಕುಟುಂಬದ ಕಟ್ಟುಪಾಡು ಸಡಿಲಗೊಳ್ಳುತ್ತಿರುವುದನ್ನು ತೋರುತ್ತದೆ.

ಎಂ.ಟಿ.ಯವರದು ಮಾನವೀಯತೆಯನ್ನು ಮಿದ್ದಿ ಮಾಡಿದಂತಹ ಮನೋಭಾವ. ಇಲ್ಲಿನ ಅವರ ಕಥೆಗಳಲ್ಲಿನ ಯಾರನ್ನೂ ನೀವು ದುಷ್ಟನೆಂದೋ, ಕೆಟ್ಟವನೆಂದೋ ಅಂದುಕೊಳ್ಳಲಾರಿರಿ. ಕದಿಯುತ್ತಿರುವವನಿಗೂ ಮೀರಲಾಗದ ಅವನ ಕೌಟುಂಬಿಕ ಅನಿವಾರ್ಯಗಳಿರುವುದನ್ನು ನಿಮಗೆ ಒಪ್ಪದೇ ಇರಲಾಗುವುದಿಲ್ಲ. ’ಮಂತ್ರವಾದಿ’ ಕಥೆಯನ್ನು ನೋಡಿರಿ. ಈ ಕಥೆಯ ವಸ್ತುವು ಒಬ್ಬ ಸಾಮಾನ್ಯ ಕಥೆಗಾರನ ಕೈಯಲ್ಲಿ ಮೂಢನಂಬಿಕೆ, ಪೌರೋಹಿತ್ಯದ ಮೋಸ ಮುಂತಾದವುಗಳನ್ನು ದೊಡ್ಡ ದನಿಯಲ್ಲಿ ಹೇಳುವ ಒಂದು ಕಥೆಯಾಗಿ ಬಿಡಬಹುದಿತ್ತು. ಆದರೆ ಎಂ.ಟಿ.ಯವರಲ್ಲಿ ಇದು ಬೇರೊಂದೇ ನೆಲೆಯನ್ನು ತಲುಪುವ ಕಥೆಯಾಗುತ್ತದೆ. ನನಗೆ ಈ ಕಥೆಯನ್ನು ಓದಿದಾಗ, ಮಹಾದೇವ ಅವರ ’ಒಡಲಾಳ’ದ ಸಾಕವ್ವನ ಕುಟುಂಬದ ನೆನಪಾಯಿತು. ಕಡಲೆಕಾಯಿ ಯನ್ನು ಕದ್ದು ತಂದದ್ದು ಅವರ ಕುಟುಂಬದ ಹಸಿವಿನ ಮುಂದೆ ಅತ್ಯಂತ ಸಹಜ ಮಾನವೀಯ ಕ್ರಿಯೆಯೆಂದು ತೋರುವಂತೆಯೇ, ಇಲ್ಲಿ ಶಂಕು ಪಣಿಕ್ಕರ್ ಅವರು ಹೂತಿಟ್ಟ ಮಂತ್ರದ ಚಿನ್ನದ ತಗಡನ್ನು ಕದಿಯುವುದು ಅವರ ಅನಿವಾರ್ಯ ಎಂತೆನ್ನುವಂತೆ ತೋರುತ್ತದೆ. ಎಂ.ಟಿ.ಯವರ ಹಲವು ಕಥೆಗಳಲ್ಲಿ ವಿಫಲ ಪ್ರೇಮ ಮತ್ತು ವಿಷಮ ದಾಂಪತ್ಯವು ವಸ್ತುವಾಗಿದೆ. ಅಲ್ಲಿಯೂ ಯಾರ ಬಗೆಗೂ ಬೆಟ್ಟು ತೋರಿಸಿ -ಇವನದೇ ಅಥವಾ ಇವಳದೇ ತಪ್ಪು ಎಂದು ತೋರಿಸುವುದು ಸಾಧ್ಯವಾಗದಂತಿರುತ್ತದೆ.

* * *

ಮಯಾಳೀ ಸಾಹಿತ್ಯದ ಅತ್ಯುತ್ಕೃಷ್ಟ ಕಥನಕಾರರಾದ ಎಂ.ಟಿ.ಯವರ ಕಥೆಗಳನ್ನು ಭಾಷಾಂತರಿಸುವ ಕೈಂಕರ್ಯವನ್ನು ಸ್ವೀಕರಿಸಿದ ಡಾ. ಮೋಹನ ಕುಂಟಾರರು ಸರಿಯಾದ ನಿರ್ಣಯವನ್ನೇ ಕೈಗೊಂಡಿದ್ದಾರೆ. ಎಂ.ಟಿ.ಯವರು ಕನ್ನಡಕ್ಕೆ ಬರಲೇಬೇಕಾದ ಒಬ್ಬ ಶ್ರೇಷ್ಠ ಲೇಖಕರು. ಜೊತೆಗೆ ಮೋಹನ ಕುಂಟಾರರು ಹುಟ್ಟಾ ದ್ವಿಭಾಷಿಕರು; ಮಲಯಾಳಂ -ಕನ್ನಡ ಎರಡೂ ಭಾಷೆಗಳು ತಮ್ಮ ಸೆರಗುಗಳನ್ನು ಒಂದರಮೇಲೊಂದು ಹರಡಿಕೊಂಡ ಕಾಸರಗೋಡಿನಲ್ಲಿ ಹುಟ್ಟಿ ಬೆಳೆದವರು ಇವರು. ಮಲಯಾಳಂ ಪರಿಸರದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದವರು. ಮಯಾಳಂ ಭಾಷೆಯ ಕೃತಿಗಳನ್ನು ಮೂಲದಲ್ಲಿಯೇ ಓದಬಲ್ಲವರು. ಇಂಥ ದ್ವಿಭಾಷಿಕರೇ ಅರ್ಹ ಭಾಷಾಂತರಕಾರರಾಗ ಬಲ್ಲವರು. ಡಾ. ಜಿ.ಎಸ್.ಆಮೂರರವರು ಆಗಾಗ ಒಂದು ಮಾತು ಹೇಳುತ್ತಿದ್ದರು. ’ಸಹಜ ದ್ವಿಭಾಷಿಕರಾಗಲೀ ಅಥವಾ ವಿಶೇಷ ಕಲಿಕೆಯಿಂದ ಸಜ್ಜುಗೊಂಡ ದ್ವಿಭಾಷಿಕರಾಗಲೀ ಅರ್ಹ ಅನುವಾದಕರಾಗುತ್ತಾರೆ’. ಒಂದು ಉದಾಹರಣೆಯನ್ನೂ ಅವರು ಕೊಡುತ್ತಿದ್ದರು ಪಾಶ್ಚಾತ್ಯ ವಿದ್ಯಾರ್ಥಿಗಳು ರಶಿಯಕ್ಕೆ ಹೋಗಿ, ಅಲ್ಲಿ ರಶಿಯನ್ ಭಾಷೆಯ ಅಧ್ಯಯನವನ್ನು ಕೈಕೊಂಡು, ಆ ಭಾಷೆಯನ್ನು ನೇಟಿವ್‌ಗಳೊಂದಿಗೆ ಮಾತನಾಡ ಬಲ್ಲವರಾಗಿ, ಆ ನಂತರ ಅವರು ದೊಸ್ತೊವ್‌ಸ್ಕಿ, ಟೊಲ್‌ಸ್ಟೊಯ್ ಮುಂತಾದ ರಶಿಯದ ಮಹತ್ವದ ಲೇಖಕರನ್ನು ಅನುವಾದಿಸಿದರಂತೆ. ಕುಂಟಾರ ಅವರಿಗೆ ಇಂಥ ಸೌಲಭ್ಯವು ಅವರ ಬಾಲ್ಯದ ಆವರಣ ದಲ್ಲಿಯೇ ದೊರೆತಿದೆ. ಆದ್ದರಿಂದ ಅವರು ಮಯಾಳಂ ಭಾಷೆಯ ಕೃತಿಗಳನ್ನು ಕನ್ನಡಕ್ಕೆ ತರಲು ಇರುವ ಅರ್ಹ ಭಾಷಾಂತರಕಾರರು. ಎಂ.ಟಿ.ವಾಸುದೇವನ್ ನಾಯರ್‌ರವರ ಕಥೆಗಳ ವಿಶೇಷತೆಗಳನ್ನು ಮತ್ತು ಸ್ವಾರಸ್ಯಗಳನ್ನು ಗುರುತಿಸಿ, ಈ ಮೇಲೆ ದಾಖಲಿಸಿದಂತೆ ಬರೆಯಲು ನನಗೆ ಸಾಧ್ಯವಾದದ್ದು ಕುಂಟಾರ ಅವರು ಭಾಷಾಂತರಿಸಿದ ಈ ಕಥೆಗಳನ್ನು ಓದಿದಾಗಲೇ. ಅಂದರೆ, ಕುಂಟಾರ್ ಅವರ ಭಾಷಾಂತರಗಳು ಬಹುತೇಕವಾಗಿ ಸಫಲವಾಗಿವೆ ಎನ್ನುವುದು ನನ್ನ ಅಭಿಪ್ರಾಯ. ಭಾಷಾಂತರದ ಥಿಯರಿಗಳು ಏನೇ ಇರಲಿ, ಅವುಗಳ ಬಗೆಗೆ ನನಗೆ ಅಂತಹ ವಿಶೇಷ ಅಧ್ಯಯನವೂ ಇಲ್ಲ. ಆ ಎಲ್ಲ ಥಿಯರಿಗಳನ್ನು ಆಚೆಗಿಟ್ಟು ನನಗನಿಸುವುದನ್ನು ಹೇಳುವುದಾದರೆ, ಮೂಲ ಭಾಷೆಯ ಒಂದು ಕೃತಿಯನ್ನು ಟಾರ್ಗೆಟ್ ಭಾಷೆಯೊಂದಕ್ಕೆ ಭಾಷಾಂತರಿಸುವಾಗ ಟಾರ್ಗೆಟ್ ಭಾಷೆಯ ಜಾಯಮಾನವನ್ನು ಅನುಸರಿಸುವುದು ಅವಶ್ಯವೆಂದು ನನಗೆ ತೋರುತ್ತದೆ. ಯಾಕೆಂದರೆ, ಮೂಲ ಕಥೆಯನ್ನು ನಾವೀಗ ಟಾರ್ಗೆಟ್ ಭಾಷೆಯಲ್ಲಿಯೇ ಓದುತ್ತೇವೆ ಮತ್ತು ಅರ್ಥೈಸಿಕೊಳ್ಳುತ್ತೇವೆ. ಆದರೆ ಡಾ. ಮೋಹನ ಕುಂಟಾರ್ ಅವರು ಭಾಷಾಂತರದ ಬೇರೊಂದು ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಅವರು ’ಕತೆಗಳ ಅನುವಾದದ ಬಗೆಗೆ’ ಹೀಗೆ ಹೇಳುತ್ತಾರೆ:

’ಕತೆಗಳನ್ನು ಕನ್ನಡಿಸುವಾಗ ಎಂ.ಟಿ.ಯವರ ಶೈಲಿಯನ್ನು ನೇರವಾಗಿ ಅನುವಾದಿಸಿದ್ದೇನೆ. ಕನ್ನಡದ ಜಾಯಮಾನಕ್ಕೆ ಹೊಂದಿಸಲು ಹೊಸ ಸೇರ್ಪಡೆಯನ್ನೋ, ಕೈಬಿಡುವುದನ್ನು ಮಾಡದೆ, ವಾಕ್ಯ ವಾಕ್ಯಗಳನ್ನು ಪದಶಃ ಅನುವಾದ ಮಾಡಲು ಪ್ರಯತ್ನಿಸಿದ್ದೇನೆ. ಕನ್ನಡದ ಸಂದರ್ಭದಲ್ಲಿ ಅನುವಾದ ಕೃತಕವೆನಿಸಿದರೆ ಅದಕ್ಕೆ ಇದೂ ಒಂದು ಕಾರಣವಾಗಿರಬಹುದು. ಅನುವಾದ ಸೃಜನಶೀಲವಾಗಿ ಓದಿಸಿಕೊಳ್ಳಬೇಕು ನಿಜ. ಆದರೆ, ಮೂಲ ಬರೆಹದಲ್ಲಿ ನಿಷ್ಠೆಯಿರಿಸಿಕೊಳ್ಳ ಬೇಕೆಂಬುದು ಅದಕ್ಕಿಂತ ಹೆಚ್ಚು ಮುಖ್ಯ ಎಂದು ನನಗೆ ಅನ್ನಿಸಿದೆ. ಆಗ ಮಾತ್ರ ನಮ್ಮದಲ್ಲದ ಸಂಸ್ಕೃತಿಯೊಂದನ್ನು ಅನುವಾದದ ಮೂಲಕ ಕೊಡುವುದು ಸಾಧ್ಯ ಎಂದು ಭಾವಿಸಿದ್ದೇನೆ. ಅನುವಾದ ಮಾಡುವಾಗ, ಅನುವಾದಕನ ಭಾಷೆಗಿಂತ ಮೂಲ ಲೇಖಕರ ಶೈಲಿಯ ಪರಿಚಯ ಆಗಬೇಕಾಗಿದೆ. ಇವು ಕನ್ನಡದ ಕತೆಗಳಾಗಿ ಅನುವಾದಗೊಳ್ಳುವುದಕ್ಕಿಂತಲೂ ಮಲಯಾಳಂ ಕತೆಗಳಾಗಿಯೇ ಕನ್ನಡದಲ್ಲಿ ಗ್ರಹೀತವಾಗಬೇಕು ಎಂಬುದು ಇಲ್ಲಿಯ ಉದ್ದೇಶ’.

ಡಾ. ಮೋಹನ ಕುಂಟಾರ್ ಅವರ ಭಾಷಾಂತರದ ಈ ರೀತಿಯ ಬಗೆಗೆ ನನಗೆ ಅನುಮಾನಗಳಿವೆ. ಒಬ್ಬ ಲೇಖಕನ ಶೈಲಿಯನ್ನು ಮತ್ತೊಂದು ವಿಭಿನ್ನ ಭಾಷೆಯಲ್ಲಿ ಸಾಕ್ಷಾತ್ಕರಿಸುವುದು ಕಷ್ಟದ ಸಂಗತಿಯೇ ಹೌದು. ಎಷ್ಟೇ ಪ್ರಯತ್ನಿಸಿದರೂ ಅದು ಸಫಲಗೊಳ್ಳಲಾರದೇನೋ ಎನ್ನುವುದು ನನ್ನ ಅನಿಸಿಕೆ. ಇನ್ನು ನಮ್ಮ ನೆರೆಹೊರೆಯ ದೇಶಭಾಷೆಗಳಲ್ಲಿ ಮೂಲ ಲೇಖಕನ ಶೈಲಿಯ ಛಾಯೆಯನ್ನು ಮೂಡಿಸಲು ಆ ಭಾಷೆಯದೇ ವಿಶಿಷ್ಟ ಡೈಲೆಕ್ಟ್‌ನ್ನು ಬಳಸಿ ಪ್ರಯತ್ನಿಸಬಹುದೇನೋ. ಡಾ. ಮೋಹನ ಕುಂಟಾರ್ ಅವರು ಟಾರ್ಗೆಟ್ ಭಾಷೆಯಾದ ಕನ್ನಡದ ಜಾಯಮಾನಕ್ಕೆ ಬದ್ಧರಾಗದೇ, ಮಲಯಾಳಂ ಭಾಷೆಯ ಜಾಯಮಾನ ಮತ್ತು ಎಂ.ಟಿ.ಯವರ ಬರೆಹದ ಶೈಲಿಗಳಿಗೆ ಬದ್ಧರಾಗಿಯೇ ಭಾಷಾಂತರಿಸಿದ್ದರೂ (ಆ ಕಾರಣವಾಗಿ ಅಲ್ಲಲ್ಲಿ ಕೆಲವು ಅರ್ಥ ಬಿಟ್ಟುಕೊಡದ ವಾಕ್ಯ ಗುಚ್ಛಗಳು ಕಂಡರೂ) ನಾನು ಇವುಗಳನ್ನು ಕನ್ನಡದ ಕಥೆಗಳಾಗಿಯೇ ಓದಿಕೊಂಡಿದ್ದೇನೆ; ಮತ್ತು ಎಂ.ಟಿ.ಯವರ ಇಲ್ಲಿನ ಕಥೆಗಳು ನನಗೆ ಕನ್ನಡದ ಕಥೆಗಳಾಗಿಯೇ ಸಾಕ್ಷಾತ್ಕಾರಗೊಂಡಿವೆ.

ಹೀಗೆ ಸಮರ್ಥವಾಗಿ ಎಂ.ಟಿ.ಯವರ ಈ ಕಥೆಗಳನ್ನು ಕನ್ನಡಕ್ಕೆ ತಂದ ಡಾ. ಮೋಹನ ಕುಂಟಾರರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತೇನೆ.

೧೭ ಜನವರಿ ೨೦೨೫                                                                                                                                                                          –ರಾಘವೇಂದ್ರ ಪಾಟೀಲ

 

 

ಕತೆಯ ತೋರುದಾರಿಗಳು

ಆಯ್ದ ಕತೆಗಳನ್ನು ಮೊದಲು ಪ್ರಕಟಿಸಿದ್ದು ೧೯೬೮ರಲ್ಲಿ. ಅದರ ನಂತರ ಹಲವು ಆವೃತ್ತಿಗಳೂ ಬಂದುವು.

೧೯೪೮ ಮಾರ್ಚ್‌ನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದು ಸಾಮಾನ್ಯ ಉತ್ತಮ ಅಂಕಗಳೊಡನೆ ತೇರ್ಗಡೆಯಾಗಿದ್ದೆ. ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತ್ತು ಎಂಬುದು ಯಾರೂ ಹೇಳದೆಯಿದ್ದರೂ ನನಗೆ ಅರ್ಥವಾಗಿತ್ತು. ಅಪ್ಪ ಸಿಲೋನ್‌ನಲ್ಲಿದ್ದರು. ಅಗತ್ಯಕ್ಕೆ ತಕ್ಕಂತೆ ಹಣ ಕಳುಹಿಸುತ್ತಿದ್ದರು. ಸಿಲೋನ್‌ನಲ್ಲಿ ಬದಲಾದ ಆಡಳಿತದಿಂದ ಅಲ್ಲಿ ಕೆಲಸ ಮಾಡುವ ಅನ್ಯ ದೇಶಿಯರಿಗೆ ಹೊರ ದೇಶಗಳಿಗೆ ಹಣ ಕಳುಹಿಸುವುದಕ್ಕೆ ಕೆಲವೊಂದು ನಿರ್ಬಂಧಗಳು ಜಾರಿಗೆ ಬಂದವು. ಒಬ್ಬರು ಇಪ್ಪತ್ತೈದು ರೂಪಾಯಿಗಳನ್ನು ಮಾತ್ರವೇ ಕಳುಹಿಸಬಹುದಿತ್ತು. ಹೊರ ದೇಶದವರೆಂದರೆ ಹೆಚ್ಚಿನವರೂ ಮಲಯಾಳಿಗಳೇ. ನನ್ನ ನೇರ ಅಣ್ಣ (ಕೊಚ್ಚುಣ್ಣಿಯಣ್ಣ) ಮಂಗಳೂರಿನಲ್ಲಿ ಗವರ್ಮೆಂಟ್ ಕಾಲೇಜಿನಲ್ಲಿ ಇಂಟರ್ ಮೀಡಿಯೆಟ್‌ಗೆ ಓದುತ್ತಿದ್ದ. ಇಬ್ಬರನ್ನು ಕಾಲೇಜಿಗೆ ಕಳುಹಿಸಿ ಓದಿಸುವುದು ಕಷ್ಟ ಎಂಬ ಮಾತುಕತೆಗಳು ಮನೆಯಲ್ಲಿ ನಡೆದಿದ್ದವು. ಮುಂದುವರಿದು ಓದುವುದು ಕಷ್ಟವೆಂದು ತೋರಿದ್ದರಿಂದಲೇ ಇರಬೇಕು ಬಾಲಣ್ಣ ಇಂಟರ್ ಮೀಡಿಯೆಟ್ ಕಳೆದು ಹಲವು ಕಡೆಗಳಿಗೆ ಅರ್ಜಿ ಸಲ್ಲಿಸಿ ಕೊನೆಗೆ ರೈಲ್ವೆಯಲ್ಲಿ ಒಂದು ಉದ್ಯೋಗ ಸಂಪಾದಿಸಿಕೊಂಡಿದ್ದ. ಬಿ.ಟಿ. ಮುಗಿಸಿ ದೊಡ್ಡಣ್ಣ ಡಿಸ್ಟ್ರಿಕ್ಟ್ ಬೋರ್ಡ್ ಅಧ್ಯಾಪಕನಾಗಿದ್ದ. ವಿವಾಹಿತನಾಗಿದ್ದ ದೊಡ್ಡಣ್ಣನಿಗೋ, ಸಣ್ಣ ಉದ್ಯೋಗ ಮಾತ್ರವಿರುವ ಬಾಲಣ್ಣನಿಗೋ ನಮ್ಮನ್ನು ಕಾಲೇಜು ಓದಿಸಲು ಹಣ ಕಳುಹಿಸಿ ಸಹಾಯ ಮಾಡುವುದು ಸಾಧ್ಯವಿರಲಿಲ್ಲ. ಅಮ್ಮ ಮತ್ತು ದೊಡ್ಡಣ್ಣ ಸೇರಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದರು. ಆ ವರ್ಷ ನಾನು ಕಾಲೇಜಿಗೆ ಹೋಗುವುದು ಬೇಡ. ಸ್ಥಿತಿಗತಿಗಳೆಲ್ಲ ತಿಳಿದಿರುವುದರಿಂದ ಒಳಗಿನ ಬೇಗುದಿಯನ್ನು ಹೊರಗೆ ತೋರಗೊಡದೆ ನಾನು ಮನೆಯೊಳಗೆ ಅವಿತುಕೊಂಡೆ. ವಾರಕ್ಕೊಮ್ಮೆ ಕುಮಾರನಲ್ಲೂರಿಗೆ ಹೋಗಿ ಅಕ್ಕಿತ್ತಂ ಅವರ ಮನೆಯಿಂದ ಪುಸ್ತಕಗಳನ್ನು ತರುತ್ತಿದ್ದೆ. ಅವರು ಹೆಚ್ಚಾಗಿ ತೃಶ್ಯೂರಿನಲ್ಲಿರುತ್ತಿದ್ದರು. ಆದರೆ ಅವರ ತಮ್ಮಂದಿರು ಮನೆಯಲ್ಲಿ ಇರುತ್ತಿದ್ದರು. ಪಣತದ ಮನೆಯ ಮಹಡಿಯಲ್ಲಿ ಧಾರಾಳ ಪುಸ್ತಕಗಳನ್ನು ತೆಗೆದುಕೊಂಡು ಪುಸ್ತಕಗಳ ಪಟ್ಟಿಯನ್ನು ವಾಸುದೇವನೋ, ಪರಮೇಶ್ವರನೋ ಬರೆದಿಡುತ್ತಿದ್ದರು. ಒಂದು ವಾರದ ಬಳಿಕ ಓದಿದ ಪುಸ್ತಕಗಳನ್ನು ಹಿಂತಿರುಗಿಸಿ ಇನ್ನೊಂದು ಕಟ್ಟನ್ನು ಓದಲು ತರುತ್ತಿದ್ದೆ. ಹಗಲು ಗುಡ್ಡದಲ್ಲಿ ಅಲೆದಾಡುತ್ತಿದ್ದೆ. ಮನಸ್ಸಿನಲ್ಲಿ ಕವಿತೆಗಳಿಗೆ ರೂಪ ನೀಡಲು ಶ್ರಮಿಸುತ್ತಿದ್ದೆ. ಹಳೆಯ ನೋಟು ಪುಸ್ತಕಗಳ ಬರೆಯದ ಪುಟಗಳಲ್ಲಿ ಅವುಗಳನ್ನು ಬರೆದಿಡುತ್ತಿದ್ದೆ. ಮತ್ತೆ ಓದುವಾಗ ಸರಿಯಾಗಿಲ್ಲವೆಂದು ಅನ್ನಿಸುತ್ತಿತ್ತು. ಅದನ್ನು ಹರಿದು ಹಾಕುತ್ತಿದ್ದೆ. ಕವಿತೆ ಬದಿಗೆ ಸರಿಸಿ ಕತೆ ಬರೆಯಲು ಪ್ರಯತ್ನಿಸಿದೆ. ಅದರಲ್ಲಿ ಕೆಲವನ್ನು ಆಯ್ದು ಮಾಸ ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ನಡುವೆ ಕೆಲವೊಂದು ಲೇಖನಗಳನ್ನು ಬರೆದು ನೋಡಿದೆ.

ಹಳ್ಳಿಯಲ್ಲಿ ನನಗೆ ಹೆಚ್ಚಿನ ಗೆಳೆಯರೇನೂ ಇರಲಿಲ್ಲ. ಒಂಟಿಯಾಗಿ ಸಮಯ ಕಳೆಯಲು ಒಂದು ವಿನೋದ ಎಂಬಂತೆ ನಾನು ಸ್ವಯಂ ಈ ಬರವಣಿಗೆಯ ಕೆಲಸದಲ್ಲಿ ತೊಡಗಿಸಿಕೊಂಡೆ. ಪತ್ರಿಕಾ ಕಚೇರಿಗಳಿಗೆ ಬುಕ್‌ಪೋಸ್ಟ್ ಕಳುಹಿಸಲು ಮುಕ್ಕಾಲು ಆಣೆಯ ಸ್ಟ್ಯಾಂಪ್ ಹಚ್ಚಬೇಕಿತ್ತು. ಮುಕ್ಕಾಲಾಣೆ ಸಿಗುವುದು ಅಷ್ಟು ಸುಲಭ ಇರಲಿಲ್ಲ. ಜೊತೆಗೆ ಓದಿದ ಗೆಳೆಯರಿಗೆ ಪತ್ರ ಬರೆಯಲು ಎಂದು ಅಮ್ಮನಿಗೆ ಮನವರಿಕೆ ಮಾಡಿಸಿ ಹಣ ಪಡೆಯುತ್ತಿದ್ದೆ. ಸಂಜೆ ಹೊತ್ತಿಗೆ ನಡೆದು ಪೋಸ್ಟ್ ಆಫೀಸಿನ ಸಮೀಪ ತಲುಪುತ್ತಿದ್ದೆ. ಅಂಚೆ ಬಟವಾಡೆ ಅದೇ ಸಮಯದಲ್ಲಾಗುತ್ತಿತ್ತು. ಸೀಲು ಹೊಡೆದು ಆದ ಬಳಿಕ ಪೋಸ್ಟ್ ಮಾಸ್ಟರ್ ಬಾಗಿಲಲ್ಲಿ ನಿಂತು ಹೆಸರು ಕೂಗುತ್ತಿದ್ದ. ಪತ್ರಗಳಿಗಾಗಿ ಕಾದು ನಿಂತವರು ಮುಂದೆ ಬಂದು ತೆಗೆದುಕೊಳ್ಳುತ್ತಿದ್ದರು. ನಾನು ಯಾವ್ಯಾವಾಗಲೋ ಬುಕ್‌ಪೋಸ್ಟ್ ಮೂಲಕ ಕಳುಹಿಸಿದ ಬರೆಹ ಪ್ರಕಟವಾಗಿ ಮಾಸಪತ್ರಿಕೆಯೊಂದು ನನ್ನ ಹೆಸರು ಹಿಡಿದು ನನ್ನೆಡೆಗೆ ಬರಬಹುದೆಂಬ ನಿರೀಕ್ಷೆಯಲ್ಲಿಯೇ ನಾನು ನಿಂತಿರುತ್ತಿದ್ದೆ. ಆದರೆ ಅದ್ಭುತಗಳೇನೂ ಸಂಭವಿಸಲಿಲ್ಲ.

ಮದರಾಸಿನಿಂದ ಜಯ ಕೇರಳವಲ್ಲದೆ ಇನ್ನೊಂದು ಮಾಸ ಪತ್ರಿಕೆ ಪ್ರಕಟವಾಗಲಿದೆ ಎಂಬ ಜಾಹೀರಾತು ಮಾತೃಭೂಮಿ ಪತ್ರಿಕೆಯಲ್ಲಿ ನೋಡಿದೆ. ಹೆಸರು ’ಚಿತ್ರ ಕೇರಳ’ ಮಾಸಪತ್ರಿಕೆಗಳ ವಿಳಾಸ ಸಿಗುವುದೇ ಪ್ರಯಾಸ. ಆಗ ಹೀಗೊಂದು ಪ್ರಕಟಣೆ ಕಂಡುದು. ಟಾಗೋರ ಗಾರ್ಡನ್‌ನಿಂದ ಒಂದು ಕವಿತೆ ಅನುವಾದ ಮಾಡಿದೆ. ಅದನ್ನು ಹೊಸ ಮಾಸಪತ್ರಿಕೆಯ ವಿಳಾಸಕ್ಕೆ ಕಳುಹಿಸಿದೆ. ನನ್ನ ಹೆಸರನ್ನು ಕುಡಲೂರು ವಾಸುದೇವನ್ ನಾಯರ್ ಎಂದು ಬರೆದಿದ್ದೆ. ಹಲವು ಬರಹಗಾರರೂ ಊರಿನ ಹೆಸರನ್ನು ಸೇರಿಸಿಯೇ ಅಲ್ಲವೇ ಹೆಸರು ಬರೆಯುವುದು. ಸ್ವಲ್ಪ ದಿನಗಳ ಬಳಿಕ ರಾಜಾಜಿಯ ಜೀವನ ಚರಿತ್ರೆಯ ಪುಸ್ತಕವೊಂದನ್ನು ಓದಿದ್ದರಿಂದ ರಾಜಾಜಿಯ ಕುರಿತು ಒಂದು ಲೇಖನವನ್ನು ಬರೆದೆ. ಅದನ್ನು ’ಚಿತ್ರ ಕೇರಳ’ದ ವಿಳಾಸಕ್ಕೆ ಕಳುಹಿಸಿದೆ. ಅದರಲ್ಲಿ ಹೆಸರು ಬರೆದುದು ವಿ.ಎನ್. ತೆಕ್ಕೆಪ್ಪಾಟ್. ಎಸ್.ಕೆ. ಪೊಟ್ಟಕ್ಕಾಟ್ ಎಂಬಂತೆ. ಮತ್ತೆ ನನ್ನ ಕಾಗದಗಳನ್ನೆಲ್ಲ ನೋಡಿದಾಗ ಒಂದು ಕತೆಯಿತ್ತು. ಅದು ವಿಷುವಿನ ಕುರಿತ ಕತೆ. ಅದನ್ನು ಶುದ್ಧಪ್ರತಿ ಮಾಡಿ ’ವಿಷು ಆಚರಣೆ’ ಎಂಬ ಶೀರ್ಷಿಕೆ ನೀಡಿದೆ. ಅದನ್ನು ಚಿತ್ರ ಕೇರಳಕ್ಕೆ ಕಳುಹಿಸಿದೆ. ಬರೆದ ವ್ಯಕ್ತಿಯ ಹೆಸರು ಎಂ.ಟಿ. ವಾಸುದೇವನ್ ನಾಯರ್. ತುಂಬಾ ದಿನಗಳ ಬಳಿಕ ಅಂಚೆ ಕಚೇರಿಯ ಮುಂದೆ ಪತ್ರಕ್ಕಾಗಿ ಕಾದು ನಿಂತಿದ್ದಾಗ ಪೋಸ್ಟ್‌ಮಾಸ್ಟರ್ ವೇಲಾಯುಧಣ್ಣ ಹೇಳಿದ: ’ನಿನಗೆ ಎರಡು ಮೂರು ರೈಲ್ವೆ ಪಾರ್ಸಲ್ ಬಂದಿದೆ. ಕುಟ್ಟಿಪುರಕ್ಕೆ ಹೋಗಿ ಅಲ್ಲಿಂದ ತೆಗೆದುಕೊಳ್ಳಬೇಕು.’ ನನಗೆ ದಿಗ್ಭ್ರಮೆಯಾಯಿತು. ನನಗೆ ಪಾರ್ಸಲ್?

ಅಂದು ಮನೆಗೆ ಬಂದಾಗ ಬಾಲಣ್ಣ ಬಂದಿದ್ದ. ಬಾಲಣ್ಣ ಮಂಗಳೂರಿನಿಂದ ರಜೆಯಲ್ಲಿ ಬಂದಿದ್ದ. ನಾನು ಸಂಶಯಿಸಿ ಸಂಶಯಿಸಿ ರೈಲ್ವೆ ಪಾರ್ಸೆಲ್ ಬಂದ ಬಗೆಗೆ ಹೇಳಿದೆ. ಮರುದಿನ ಬಾಲಣ್ಣ ಬೇರೆ ಕೆಲಸದ ನಿಮಿತ್ತ ಕುಟ್ಟಿಪುರಕ್ಕೆ ಹೋದವನು ಮೂರು ಪ್ಯಾಕೆಟುಗಳೊಡನೆ ಬಂದನು. ನೋಡಿದರೆ ’ಚಿತ್ರಕೇರಳ’ದ ಹತ್ತತ್ತು ಪುಟಗಳು ಒಂದೊಂದು ಪ್ಯಾಕೆಟ್‌ನಲ್ಲಿದ್ದವು. ಬಿಡಿಸಿ ನೋಡಿದರೆ ಕುಡಲೂರು ವಾಸುದೇವನ್ ನಾಯರ ಕವಿತೆಯೂ, ವಿ.ಎನ್. ತೆಕ್ಕೆಪ್ಪಾಟ್ಟಿನ ಲೇಖನವೂ ಎಂ.ಟಿ. ವಾಸುದೇವನ್ ನಾಯರ ಸಣ್ಣಕತೆಯೂ ಅದರಲ್ಲಿದ್ದುವು. ಮೂರು ಪ್ಯಾಕೇಟುಗಳಲ್ಲಿ ಈ ಲೇಖಕರಿಗೆ ಪತ್ರಗಳು ಇದ್ದವು. ಸಂಪಾದಕ ಕವಿ ಪರಮೇಶ್ವರ ಅಯ್ಯರ್. ಹೊಸ ಮಾಸಪತ್ರಿಕೆಯ ಪ್ರಸಾರಕ್ಕೆ ಬೇಕಾಗಿ ಪ್ರಯತ್ನ ಮಾಡಬೇಕೆಂದು ಬಯಸಿ ಬರೆದ ಪತ್ರ.

ಒಂದು ವರ್ಷ ಶಿಕ್ಷಣ ಮೊಟಕುಗೊಂಡ ದುಃಖ ನನ್ನನ್ನು ಅಷ್ಟೇನೂ ಕಾಡಲಿಲ್ಲ. ಅಕ್ಕಿತ್ತಂ ಅವರ ಮನೆಯಿಂದ ತೆಗೆದುಕೊಂಡು ಬರುತ್ತಿದ್ದ ಪುಸ್ತಕಗಳು ಯಾವಾಗಲೂ ನನ್ನ ಜೊತೆಗೆ ಇರುತ್ತಿದ್ದವು. ಬರೆಯುವುದು ತೃಪ್ತಿಯಾಗದಿದ್ದರೆ ಹರಿದು ಹಾಕಿ ಮತ್ತೆ ಬರೆಯುವುದು. ಹೀಗೆ ಮಾಡಿದ ಕತೆಗಳ ಕಾಗದಗಳು ಪಣತದ ಮನೆಯ ಮೆಟ್ಟಿಲುಗಳ ಮೇಲೆ ನನ್ನ ತಲೆಭಾಗದಲ್ಲಿ ಭದ್ರವಾಗಿವೆ. ನಿರಂತರವಾದ ಪ್ರಯತ್ನಗಳ ನಡುವೆ ಕೆಲವು ಕತೆಗಳು ಪ್ರಕಟವಾದುವು. ಮುಂದಿನ ವರ್ಷ ಕಾಲೇಜು ಸೇರಿದಾಗ ನನ್ನ ಕಬ್ಬಿಣದ ಪೆಟ್ಟಿಗೆಯಲ್ಲಿ ಪ್ರಕಟವಾದ ನನ್ನ ಕೃತಿಗಳಿರುವ ಕೆಲವು ಮಾಸಿಕಗಳೂ ಇದ್ದವು. ಬೇರೆಯವರು ಕಾಣದಂತೆ ನಾನು ವಿಶೇಷವಾಗಿ ಗಮನಹರಿಸಿದೆ. ’ಜಯಕೇರಳ’ ಕೇರಳದಲ್ಲಿ ತುಂಬಾ ಪ್ರಸಾರದಲ್ಲಿದ್ದ ಪ್ರಕಟಣೆಯಾಗಿತ್ತು. ಅದರಲ್ಲಿ ಸ್ವಲ್ಪ ಕತೆಗಳು ಬಂದುವು.  ಕೆ. ಬಾಲಕೃಷ್ಣನ ಕೌಮುದಿಯಲ್ಲಿ ಒಂದು ಸಣ್ಣಕತೆ. ಓದಿನ ನಡುವೆ ನಷ್ಟವಾಗಿ ಹೋದ ಒಂದು ವರ್ಷದ ಬಗೆಗೆ ನಾನೆಂದು ಮತ್ತೆ ಯೋಚಿಸಲಿಲ್ಲ. ಕಾಲೇಜಿನಲ್ಲಿ ಕೊನೆಯ ವರ್ಷ. ಮಾತೃಭೂಮಿಯ ಜಾಗತಿಕ ಮಟ್ಟದ ಕಥಾಸ್ಪರ್ಧೆಗೆ ನಾನೊಂದು ಕತೆ ಕಳುಹಿಸಿದ್ದೆ. ಬಿ.ಎಸ್ಸಿ.ಗೆ ನನ್ನ ಜೊತೆ ಕಲಿಯುತ್ತಿರುವ ಅರವಿಂದಾಕ್ಷನ ಮಾವ ಮ್ಯಾನೇಜರ್ ಆಗಿರುವ ಒಂದು ಸರ್ಕಸ್ ಕಂಪನಿ ಪಾಲಕ್ಕಾಡಿನಲ್ಲಿ ಪ್ರದರ್ಶನ ನಡೆಸುತ್ತಿತ್ತು. ಅರವಿಂದನ ಜೊತೆ ಹಲವು ಬಾರಿ ಸರ್ಕಸ್ ನೋಡಿದೆ. ನಾವು ಟಿಕೇಟು ಪಡೆಯದೆ ಹೋಗಬಹುದಿತ್ತು. ಮತ್ತೆ ಕೆಲವೊಮ್ಮೆ ಹಗಲು ಹೊತ್ತಿನಲ್ಲಿ ಅವರ ಬಿಡಾರಗಳಿಗೆ ಭೇಟಿ ನೀಡಿದೆವು. ಸುಂದರವಾದ ವೇಷಗಳಲ್ಲಿ ರಿಂಗಿನಲ್ಲಿ ಪ್ರತ್ಯಕ್ಷರಾಗುವ ಸರ್ಕಸ್ ತಾರೆಗಳನ್ನು ಹಗಲು ಹೊತ್ತಿನಲ್ಲಿ ಗುಡಾರಗಳಲ್ಲಿ ಕಂಡಾಗ ಅದ್ಭುತವೆನಿಸಿತು. ಹೇಳದೆಯೇ ದೀನಸ್ಥಿತಿಯನ್ನು ಅವರ ಮುಖಗಳಲ್ಲಿಯೇ ಓದಿಕೊಳ್ಳಬಹುದಿತ್ತು. ಅವರ ಬದುಕಿನ ಕುರಿತು ಬರೆದ ಕತೆಯನ್ನೇ ಸ್ಪರ್ಧೆಗೆ ಕಳುಹಿಸಿದ್ದು ’ಸಾಕು ಪ್ರಾಣಿಗಳು’.

ತಿಂಗಳುಗಳ ಬಳಿಕ ಆ ಕತೆಗೆ ಬಹುಮಾನ ಸಿಕ್ಕಿದೆಯೆಂದು ನಾನು ದಿನಪತ್ರಿಕೆಯಲ್ಲಿ ಸುದ್ದಿಯನ್ನು ಓದಿದೆ. ಸ್ಪರ್ಧೆಗೆ ಹಾಗೊಂದು ಕತೆ ಕಳುಹಿಸಿದ್ದನ್ನೇ ನಾನು ಮರೆತಿದ್ದೆ. ಮತ್ತೆ ತುಂಬಾ ಸಮಯ ಕಳೆದ ಬಳಿಕ ಮಾತೃಭೂಮಿ ವಾರಪತ್ರಿಕೆಯಲ್ಲಿ ಪ್ರಕಟವಾಗಿ ಬಂತು. ಕತೆ ಬರವಣಿಗೆಯಲ್ಲಿ ಅದೊಂದು ತಿರುವು ದಾರಿಯಾಗಿತ್ತೆಂದೇ ಹೇಳಬಹುದು. ಐದುನೂರು ರೂಪಾಯಿ ಬಹುಮಾನ. ಅದು ಆ ಕಾಲದಲ್ಲಿ ದೊಡ್ಡದೊಂದು ಮೊತ್ತವೇ ಆಗಿತ್ತು. ಹಲವು ಪ್ರಕಾಶನಗಳಿಂದ ಕತೆಗಳನ್ನು ಬಯಸಿ ಪತ್ರಗಳು ಬರಲಾರಂಭಿಸಿದವು. ಇದೇ ಕಾರಣಕ್ಕೆ ನಾನು ತಿರುವು ದಾರಿಯೆಂದು ಹೇಳಿದುದು. ಕೆಲವರಿಗೆಲ್ಲ ಕತೆ ಕಳುಹಿಸಿದೆ. ಅಪರೂಪಕ್ಕೆ ಪುಟ್ಟ ಸಂಭಾವನೆಯನ್ನು ಕಳುಹಿಸಿಕೊಟ್ಟರು. ಬಿ.ಎಸ್ಸಿ. ಮುಗಿಸಿ ಉದ್ಯೋಗಕ್ಕಾಗಿ ಅರ್ಜಿಗಳನ್ನು ಕಳುಹಿಸುವ ಸಮಯ. ಅದಕ್ಕೆ ಹಣದ ಖರ್ಚಿದೆ. ಯಾವಾಗಲಾದರೂ ಸಿಗುವ ಈ ಹಣದಿಂದ ತುಂಬಾ ಉಪಕಾರವಾಗುತ್ತಿತ್ತು.

ಪಟ್ಟಾಂಬಿ ಹೈಸ್ಕೂಲಿನ ಲೀವ್ ವೇಕೆನ್ಸಿಯಲ್ಲಿ ಅನೇಕ ತಿಂಗಳುಗಳು, ಪಾಲಕ್ಕಾಡಿನ ಎಂ.ಬಿ. ಟ್ಯುಟೋರಿಯಲ್‌ನಲ್ಲಿ ಎರಡು ವರ್ಷ. ಇದರ ನಡುವೆ ಕತೆಗಳನ್ನು ಬರೆಯುತ್ತಿದ್ದೆ. ೧೯೫೬ರಲ್ಲಿ ಮಾತೃಭೂಮಿ ಪತ್ರಿಕೆಯಲ್ಲಿ ಸಬ್ ಎಡಿಟರ್ ಟ್ರೈನಿಯಾಗಿ ನೇಮಕಾತಿ ದೊರೆತು ವಾಸವನ್ನು ಕೋಳಿಕೋಡಿಗೆ ಬದಲಾಯಿಸಿದ ಬಳಿಕ ನಾನು ಹೆಚ್ಚು ಕತೆಗಳನ್ನು ಬರೆದೆ. ಬೆಳಿಗ್ಗೆ ಎರಡು ಗಂಟೆ ಟ್ಯೂಷನ್ ತೆಗೆಯುತ್ತಿದ್ದೆ. ಹತ್ತು ಗಂಟೆಯಿಂದ ಐದು ಗಂಟೆಯವರೆಗೆ ಪತ್ರಿಕಾ ಕಚೇರಿಯಲ್ಲಿ ಕೆಲವು ದಿನಗಳಲ್ಲಿ ಏಳು ಗಂಟೆಯವರೆಗೂ ಇರಬೇಕಾಗುತ್ತಿತ್ತು. ರಾತ್ರಿ ಓದು, ಬರವಣಿಗೆ, ಕೆಲವು ಪತ್ರಿಕೆಗಳು ಓಣಂ ವಿಶೇಷಾಂಕಗಳಿಗಾಗಿ ಕತೆ ಬರೆದು ಕಳುಹಿಸಲು ಒತ್ತಾಯಿಸುತ್ತಿದ್ದುವು. ಹಾಗೆ ತಿಂಗಳಲ್ಲಿ ಎರಡು ಮೂರು ಕತೆಗಳು ಬರೆಯಬೇಕಾಗಿ ಬಂದುದಿದೆ. ಮತ್ತೇ ಸ್ವಲ್ಪ ಕಾಲ ಕೆಲಸದೊತ್ತಡ ಗಳಿಂದ ಬರವಣಿಗೆ ಕುಂಠಿತವಾದುದೂ ಇದೆ. ಉತ್ಸಾಹದಿಂದ ಬರೆಯಲಾರಂಭಿಸುವುದು, ಸ್ವಲ್ಪ ಕಳೆದ ಮೇಲೆ ಸರಿಯಾಗಲಿಲ್ಲ ಎಂದು ಸ್ವಯಂ ವೇದ್ಯವಾಗುವಾಗ ಅದನ್ನು ಕಳೆಯುವುದು. ಮತ್ತೆ ಇನ್ನೊಂದು ರೀತಿಯಲ್ಲಿ ಅದನ್ನೇ ಆರಂಭಿಸುವುದು. ಮನಸ್ಸಿನ ಕಳ್ಳ ಕಿಂಡಿಗಳಲ್ಲಿ ನೆಲೆಸಿರುವ ಬೇರೆ ಪ್ರಮೇಯಗಳನ್ನು ಹೊರ ತೆಗೆದು ರೂಪ ಕೊಡುವುದಕ್ಕೆ ಪ್ರಯತ್ನಿಸುತ್ತಿದ್ದೆ. ಹಾಗೆ ವರ್ಷಗಳು ಸರಿದು ಹೋಗುತ್ತಿವೆ. ಬರಹದಿಂದ ದೂರ ಉಳಿಯಲು ಒಂದೊಂದು ಕಾರಣಗಳನ್ನು ಕಂಡುಕೊಳ್ಳುತ್ತೇವೆ. ’ಎಂತಹ ಸೆಕೆ, ಬೇಸಿಗೆ ಕಾಲ ಕಳೆಯಲಿ’ ಎಂಬುದೊಂದು ಸ್ವಯಂ ಕಂಡುಕೊಂಡ ಅಡಗುದಾರಿ. ಮಳೆಗಾಲ ಬಂದು ಒಳ್ಳೆಯ ಚಳಿ, ಶೀತ ಆಗುವಾಗ ಸುಖಕರವಾದ ಆಲಸ್ಯ. ಓದುತ್ತ ಕುಳಿತುಕೊಳ್ಳುವುದೇ ಸುಖ. ಯಾವಾಗಲೂ ಹೊಸ ಪುಸ್ತಕಗಳು ಕೈಯಲ್ಲಿರುತ್ತಿದ್ದವು.

ನಗರದ ಒತ್ತಡ, ಗದ್ದಲ, ಕೋಲಾಹಲಗಳು ತಲುಪದ ಬರಿದಾದ ಯಾವುದಾದರೂ ಸ್ಥಳದಲ್ಲಿ ತುಂಬಾ ದಿನ ಕುಳಿತರೆ ಮನಸ್ಸಿನಲ್ಲಿ ಯಾವಾಗಲೋ ರೂಪುಗೊಂಡ ಕೆಲವು ಕತೆಗಳನ್ನು ಬರೆಯ ಬಹುದೆಂದು ಅನ್ನಿಸುವುದಿದೆ. ಕೆಲವೊಮ್ಮೆ ಅಂತಹ ಕೆಲವು ಸ್ಥಳಗಳನ್ನು ಕಂಡುಕೊಂಡುದೂ ಇದೆ. ಅಲ್ಲಿಗೆ ಹೋಗಿ ಸ್ವಲ್ಪ ಕಳೆಯುವಾಗ ಏಕಾಂತಬೇಕೆಂದು ಅನ್ನಿಸುತ್ತಿತ್ತು. ಸ್ವಲ್ಪ ಆ ಕಡೆಗೆ ಗದ್ದಲಗಳೇ ಬೇಕು. ನಾನು ಅಜ್ಞಾತವಾಸ ಕೊನೆಗೊಳಿಸಿ ನಗರದ ನನ್ನ ಮಹಡಿಗೆ ಮರಳಿ ಬರುತ್ತಿದ್ದೆ.

ಬರೆಯಬೇಕೆಂದು ಹೊತ್ತುಕೊಂಡು ನಡೆದಿದ್ದ ಹಲವು ಕತೆಗಳು ಈಗ ಮನಸ್ಸಿನ ಮೂಲೆಗಳಲ್ಲಿ ಆರೋಪಿಸುತ್ತ ಪಿಸುಗುಟ್ಟುವುದು ನನಗೆ ಕೇಳಿಸುತ್ತಿದೆ. ಹಳೆಯ ನೋಟು ಪುಸ್ತಕಗಳ ತುಂಬಾ ಪುಟಗಳಲ್ಲಿ ಬರೆದೆ. ಯಾವುದೋ ಕಾರಣ ನೀಡಿ ಕಟ್ಟಿಟ್ಟ ಕತೆಗಳ ಆದಿರೂಪಗಳು ಹಳೆಯ ಕಾಗದದ ಪೊಟ್ಟಣಗಳನ್ನು ತಿರುವಿ ಹಾಕುವಾಗ ನನ್ನ ಮುಂದೆ ಪ್ರತ್ಯಕ್ಷವಾಗುತ್ತವೆ. ಅವುಗಳನ್ನು ಮರಳಿ ರೂಪಿಸಬಹುದೇ ಎಂದು ಯೋಚಿಸುವುದೂ ಇಲ್ಲ. ಏಕೆಂದರೆ ಒಂದು ಕತೆ ಮುಗಿದಾಗ ಇನ್ನೊಂದೊ ಎಂಬ ಆವೇಶದಲ್ಲಿ ನಡೆದ ಕಾಲದಲ್ಲಿ ಅವುಗಳನ್ನು ಬೇಡವೆಂದಿರಿಸಲು ಅದಕ್ಕೆ ತಕ್ಕ ಕಾರಣವೂ ಇದ್ದಿರಬೇಕು. ನೆನಪಿನ ಒರತೆಯ ದಾರಿಗಳ ಕೆಲವು ನೆರಳ ಗುರುತುಗಳಲ್ಲಿ ಎಲ್ಲೆಲ್ಲಿಯೋ ನನಗಾಗಿ ಕಾದು ಇನ್ನೂ ಹಲವು ಕಥಾಪಾತ್ರಗಳು ನಿಂತಿವೆಯೆಂದು ನಾನು ನಂಬಿದ್ದೇನೆ. ಹಾದು ಹೋಗುವ ಅಜ್ಞಾತ ದಾರಿಹೋಕರಲ್ಲಿ ಅವು ಪಿಸುಗುಟ್ಟುವುದಿದೆ. ’ಕತೆಗಾರನನ್ನು ನಂಬಬೇಕೆಂದಿಲ್ಲ. ಆದರೆ ಕತೆಗಳನ್ನು ನಂಬಿ’ ನಾನೂ ಅದನ್ನು ಕೇಳಿಸಿಕೊಳ್ಳುತ್ತಿದ್ದೇನೆ.

ಕೃತಜ್ಞತೆಗಳು: ನನ್ನ ಓದುಗರಿಗೆ, ನನ್ನ ಊರಿಗೆ

ಸಾಹಿತ್ಯ ರಚನೆಯನ್ನು ಕಲಿಯಲು ನಿಗದಿತವಾದ ಪಠ್ಯ ಪುಸ್ತಕಗಳಿಲ್ಲ. ಮತ್ತಿತರ ಹಲವು ಉದ್ಯೋಗಗಳಿಗೂ ನಿಶ್ಚಿತವಾದ ಅಧ್ಯಯನ, ಪದವಿ, ಪ್ರಮಾಣ ಪತ್ರಗಳ ಅಗತ್ಯವಿದೆ. ಎಲ್ಲೊ ಕೆಲವು ಕೃತಿಗಳನ್ನು ಕಂಡು ಅದರಲ್ಲಿ ಗೌರವ, ಆಸಕ್ತಿಗಳು ಹುಟ್ಟಿ ಅದರಂತೆ ಬರೆಯುವುದು ಸಾಧ್ಯವಾಗಬೇಕೆಂಬ ಪ್ರಾರ್ಥನೆಯೊಂದಿಗೆ ಬರೆಹಗಾರನೊಬ್ಬ ಸಾಹಿತ್ಯ ಪ್ರಪಂಚವನ್ನು ಪ್ರವೇಶಿಸುತ್ತಾನೆ. ಮಾನ್ಯತೆ, ಆದಾಯ, ಬಡ್ತಿ ಸಾಧ್ಯತೆ, ಮೊದಲಾದ ಯಾವುವೂ ಈ ವೃತ್ತಿಯ ಪ್ರಾಸ್ಪೆಕ್ಟಸ್‌ನಲ್ಲಿಲ್ಲ. ಅನುಭವಗಳಿಂದ ತನಗೆ ಅಗತ್ಯವೆನಿಸಿದ ವಸ್ತುಗಳನ್ನು ಬರೆಹಗಾರ ಕಂಡುಕೊಳ್ಳುತ್ತಾನೆ ಎಂಬ ಸಾಮಾನ್ಯ ನಿಯಮವನ್ನು ಕೆಲವರು ಹೇಳುವುದಿದೆ. ಆದರೆ ಒಬ್ಬ ಸಾಮಾನ್ಯ ವ್ಯಕ್ತಿಯ ಜೀವನಾನುಭವಗಳು ಸುತ್ತಮುತ್ತಲಿನ ಹಲವರಿಗಿದ್ದರೂ ಅವರು ಬರೆಹಗಾರರಾಗುವುದಿಲ್ಲ. ತೀರಾ ಸಾಮಾನ್ಯವಾದ ಅನುಭವಗಳು ಮಾತ್ರವೇ ಇರುವವರೂ ಹೇಗೆ ಬರೆಹಗಾರರಾಗುತ್ತಾರೆ? ಸಾಧಾರಣವೆಂದು ಮೇಲ್ನೋಟಕ್ಕೆ ತೋರುವ ಒಬ್ಬನಿಗೆ ಬರೆವಣಿಗೆ ಸಾಧ್ಯವಾಗುತ್ತದೆ. ದಾರುಣವೂ, ಭೀಕರವೂ ಆದ ಒಂದು ಘಟನೆಗೆ ಸಾಕ್ಷಿಗಳಾದ ಜನಸಮೂಹದ ಒಬ್ಬೊಬ್ಬ ವ್ಯಕ್ತಿಗೂ ತನ್ನದೇ ಆದ ಒಂದೊಂದು ಮಾನವೀಯ ಸಂವೇದನೆಯಿರುತ್ತದೆ. ಆದರೆ ಬದುಕಿನ ಗೊಂದಲಗಳ ನಡುವೆ ಈ ಸಂವೇದನೆಗಳು ಹುಟ್ಟು ಹಾಕಬಹುದಾದ ತೀಕ್ಷ್ಣಭಾವನೆಗಳು ಕ್ಷಣದಲ್ಲಿಯೇ ಮಾಸಿಯೂ ಹೋಗಬಹುದು.

ಸೃಜನಶೀಲತೆಯ ಅಸ್ವಸ್ಥತೆಗಳು ಹುಟ್ಟಿಕೊಂಡು ಮನಸ್ಸಿನಲ್ಲಿ ಈ ಸಂವೇದನೆ ತಡೆಯೊಡ್ಡಿ ಭಾರವಾಗಿ ತಳವೂರುತ್ತದೆ. ಅದು ಮತ್ತೊಂದು ಗೊಂದಲವಾಗಿ ಹರಡಿಕೊಂಡೇ ಇರುತ್ತದೆ. ಹಾಗೆ ಒಂದಲ್ಲ ಹಲವು ಗೊಂದಲಗಳು ಹಲವು ಪದರಗಳಾಗಿ ಮನಸ್ಸಿನಲ್ಲಿ ನೆಲೆನಿಲ್ಲುತ್ತವೆ. ಒಮ್ಮೆ ಆತ ಕಂಡುಕೊಳ್ಳುತ್ತಾನೆ. ತಮ್ಮ ಮನಸ್ಸಿನಂತೆ ಬದುಕೂ ಕೂಡ ಅಸ್ತವ್ಯಸ್ತ್ಯವಾಗಿದೆ ಎಂದು.

ಅದಕ್ಕೊಂದು ನಿಯಮವೋ, ತತ್ತ್ವವೋ ಕಂಡುಕೊಳ್ಳುವುದಕ್ಕಿರುವ ತೀವ್ರವಾದ ಪ್ರಯತ್ನವೇ ಬರೆವಣಿಗೆಯ ಆರಂಭ. ಅಸ್ತವ್ಯಸ್ತಗಳು ಪ್ರಕೃತಿ ನಿಯಮ. ಅದಕ್ಕೊಂದು ವ್ಯವಸ್ಥೆಯನ್ನುಂಟು ಮಾಡಬೇಕೆಂಬುದು ಮಾನವನ ನಿರಂತರ ಕನಸು.

ಎಳೆಯ ವಯಸ್ಸಿನಲ್ಲಿ ಕಂಡುದುದರಲ್ಲೆಲ್ಲಾ ಕವಿತೆಯಿದೆಯೆಂದು ಕೇಳುವುದರಲ್ಲೆಲ್ಲ ಕತೆಯಿದೆಯೆಂದು ಅನ್ನಿಸಿತ್ತು. ಬಹಳ ಸಮಯಗಳ ಬಳಿಕ ತಿಳಿಯಿತು. ನಾನು ವಸ್ತುಗಳಿಗಾಗಿ ಹುಡುಕುತ್ತಿರುವಾಗ ವಸ್ತುಗಳೇ ಹಲವರನ್ನು ಹುಡುಕುತ್ತಿರುತ್ತವೆ ಎಂದು. ಅವುಗಳಲ್ಲಿ ಕೆಲವು ನನ್ನನ್ನು ಸ್ವಾಗತಿಸಿದವು ಎಂಬುದೇ ಸತ್ಯ.

ನಾನು ಹೆಚ್ಚು ಬರೆದುದು ಕತೆಗಳನ್ನು. ಎಲ್ಲಿಯೋ ನಡೆದ, ನಡೆದಿರಬಹುದಾದ ಮನುಷ್ಯಾವಸ್ಥೆಯ ಕತೆಗಳು. ಸೂಕ್ಷ್ಮವಾಗಿ ಅವಲೋಕಿಸಿದರೆ ಇದರಲ್ಲಿ ಅಸಾಧಾರಣವಾದುದೇನೋ ಇದೆ. ಈ ಮೌನ ಪ್ರೇರಣೆಯು ನನ್ನ ಮನಸ್ಸಿನ ಕಿಟಕಿಗಳ ಗುರುತು ಹಿಡಿದು ದಾಟಿ ಒಳಬಂದಿದೆ. ಹೀಗೆ ನನ್ನನ್ನು ಸ್ವಾಗತಿಸಿದ ವಸ್ತುಗಳಿಗೆ ನಾನು ಕೃತಜ್ಞತೆಗಳನ್ನು ಹೇಳುತ್ತೇನೆ. ಊರ ದಾರಿಗಳಲ್ಲೂ, ಕತ್ತಲೆಯ ಕೋಣೆಗಳಲ್ಲೂ, ಹೊಳೆಯ ಕಡುವುಗಳಲ್ಲೆಲ್ಲ ಕತೆಗಳನ್ನು ಅಡಗಿಸಿಟ್ಟು ಹುಡುಕುವಂತೆ ಮಾಡಿ ಮುಗುಳ್ನಗೆಯೊಂದಿಗೆ ಆಹ್ವಾನ ನೀಡಿ ನನ್ನನ್ನು ಎಂದೆಂದೂ ಕರೆಯುತ್ತಿರುವ ಊರಿಗೆ ನಾನು ಕೃತಜ್ಞತೆಗಳನ್ನು ಹೇಳಲೇ.

ಕತೆ ಎಂದರೆ ನಮ್ಮ ಹಳ್ಳಿಯ ಭಾಷೆಯಲ್ಲಿ ದಂತಕತೆ. ಕಲ್ಪಿಸಿಕೊಂಡೇ ಕಟ್ಟುವ ಕತೆ. ಕಾಶಿಗೆ ಹೋದ ಮಣ್ಣಾಂಗಟ್ಟೆಯ ಮತ್ತು ತರಗೆಲೆಯ ಕತೆಗಳೆಲ್ಲ ತಲೆಮಾರುಗಳ ಬಳಿಕವೂ ಸತ್ಯವಾಗಿ ನೆಲೆ ನಿಂತಿವೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಶಾಸ್ತ್ರ, ರಾಜಕೀಯ ಮೀಮಾಂಸೆಗಳಲ್ಲೆಲ್ಲ ಪರಮಸತ್ಯಗಳೆಂದು ಓದಿದ ಹಲವೂ ಹೊಸ ಅರಿವಿನ ಬೆಳಕಿನಲ್ಲಿ ಅಸತ್ಯಗಳೋ, ಅರ್ಧಸತ್ಯಗಳೋ ಆಗಿ ಬದಲಾದುವು. ಅಚಂದಲವೆಂದೂ, ಅನಿಷೇಗಳೆಂದೂ ತಿಳಿದ ಸಿದ್ಧಾಂತಗಳ ಅಡಿಗಲ್ಲುಗಳೂ ಸಹ ಚದುರಿಹೋದುದನ್ನು ನಾವು ನೋಡಿದ್ದೇವೆ. ಆದರೆ ಷೇಕ್ಸ್‌ಪಿಯರ್, ಟಾಲ್‌ಸ್ಟಾಯ್, ದಾಸ್ತೊವಸ್ಕಿ, ವ್ಯಾಸ, ವಾಲ್ಮೀಕಿ ಮೊದಲಾದವರ ಕಟ್ಟುಕೆಗಳೇ ಮಹಾಸತ್ಯಗಳಾಗಿ ಇನ್ನೂ ನೆಲೆ ನಿಂತಿರುವುದನ್ನು ನಾವು ನೋಡುತ್ತಿದ್ದೇವೆ.

ಆಗ ಕತೆ ನಿಜವಾಗುತ್ತದೆ. ಜೀವನವಾಗುತ್ತದೆ. ಅವುಗಳು ವಿನೋದಕ್ಕಾಗಿ ಪದಗಳನ್ನು ಇಟ್ಟು ಕಟ್ಟಿದ ಆಟದ ಮನೆಗಳಲ್ಲ. ಆದ್ದರಿಂದಲೇ ಬರೆಹಗಾರ ತನ್ನ ಬದ್ಧತೆಗಳನ್ನು ಸಮಕಾಲೀನ ಬದುಕಿನ ಸಂಕೀರ್ಣತೆಗಳನ್ನು, ಅರಿಯುವ ಪ್ರಯತ್ನವನ್ನು ಕುರಿತು ಹೇಳಲುದ್ಯುಕ್ತ ನಾಗುತ್ತಾನೆ. ಪ್ರಬುದ್ಧರಾದ ಬರೆಹಗಾರರು ಹಲವು ಕಾಲಗಳಲ್ಲಿ ಹಲವು ಭಾಷೆಗಳಲ್ಲಿ ಸೃಷ್ಟಿಸಿ ತೋರಿಸಿದ ಅನಂತ ಸಾಧ್ಯತೆಗಳನ್ನು ಕುರಿತು ನೆನಪಿಸಿಕೊಳ್ಳುವಾಗ ಆತನಿಗೆ ಧೈರ್ಯವೂ, ಆವೇಶವೂ ಬರುತ್ತವೆ. ಆತ ಪ್ರಯತ್ನವನ್ನು ಮಾಡಿಕೊಂಡೇ ಇರುತ್ತಾನೆ.

ಜೀವನ ವ್ಯಾಪಾರದಲ್ಲಿ ಕಿವುಡಾಗಿಸುವ ಗದ್ದಲಗಳ ನಡುವೆಯೂ ತನ್ನ ಕಿರುದನಿಯನ್ನು ಕಾಲದ ಬಂಡೆಕಲ್ಲಿನ ಮೇಲೆ ಬೀಳುವ ಮಾತಿನ ಉಳಿಪೆಟ್ಟಿನ ಶಬ್ದವನ್ನು ಕೇಳಲು ಕೆಲವರಾದರೂ ಕಾದಿದ್ದಾರೆ ಎಂಬ ನಂಬಿಕೆ ಬರೆಹಗಾರನಿಗಿದೆ. ಬದುಕಿನ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಬಲ್ಲ ಒಂದು ದಿವ್ಯ ಮಂತ್ರ ತನ್ನ ಕೈಯಲ್ಲಿಲ್ಲ ಎಂಬುದೂ ಅವನಿಗೆ ಗೊತ್ತು. ರೋಗಗ್ರಸ್ಥವಾದ ಸಮಾಜದೊಡಲಿಗೆ ಬೇಗನೆ ಆರೋಗ್ಯವನ್ನು ಕೊಡುವ ಚಿಕಿತ್ಸಾ ವಿಧಾನಗಳೂ ಆತನ ಕೈಯಲ್ಲಿಲ್ಲ. ಆದರೂ ತನ್ನ ಕಿರುದನಿಯ ಮೂಲಕ ತನ್ನ ಕಾಲದ ಮನುಷ್ಯನ ಸ್ಥಿತಿಗತಿಗಳನ್ನು ಕುರಿತಾದ ಆತ್ಮಿಯ ಮಾತು ಭಯ, ನೋವುಗಳನ್ನು ಅವ್ಯಕ್ತ ನಿರೀಕ್ಷೆಗಳೊಂದಿಗೆ ಕೆಲವು ಸಮಾನ ಮನಸ್ಕರೊಂದಿಗೆ ಹಂಚಿಕೊಳ್ಳಲು ಆತ ಹವಣಿಸುತ್ತಿರುತ್ತಾನೆ. ಆ ನಿರಂತರ ಪ್ರಯತ್ನದಲ್ಲಿ ಬದುಕಿಗೆ ಒಂದು ಅರ್ಥವನ್ನು ಕಂಡುಕೊಳ್ಳುವುದು ಆತನಿಗೆ ಸಾಧ್ಯವಾಗುತ್ತದೆ.

ಬರೆಹಗಾರ ಎಂದೂ ಹುಡುಕುತ್ತಲೇ ಇರಬೇಕಾಗುತ್ತದೆ. ಕತೆಯ ಬಾಹ್ಯ ವೇಷ ಧರಿಸಿ ಸತ್ಯ ಹಲವು ಮುಖಗಳಲ್ಲಿ, ಹಲವು ರೂಪಗಳಲ್ಲಿ ಎಲ್ಲೆಲ್ಲೂ ಸುತ್ತಾಡುತ್ತಿರುತ್ತದೆ. ಅದು ತನ್ನನ್ನು ಒಪ್ಪಿತ ಭಾವದಿಂದ ದಯಾಪೂರ್ವಕವಾಗಿ ಕರೆಯುವ ಆ ಕ್ಷಣಕ್ಕಾಗಿ ಕಾಯುತ್ತಾ ಆತ ಅಲೆಯುತ್ತಿರುತ್ತಾನೆ. ಕಾಲದ ಸುದೀರ್ಘವಾದ ಹಾದಿಯಲ್ಲಿ ಜನ ಸಮೂಹದ ನಡುವಿನಿಂದ ಮುಂದಕ್ಕೊ, ಹಿಂದಕ್ಕೊ ಜಗ್ಗುತ್ತಾ ಚಲಿಸುತ್ತಿರುತ್ತಾನೆ. ಅದನ್ನೇ ನಾನೂ ಮಾಡಿದೆ. ಈಗಲೂ ಮಾಡಿಕೊಂಡಿದ್ದೇನೆ.

* * *

ಮೊದಲು ಕತೆ ಬರೆಯಲಾರಂಭಿಸಿದಾಗ, ಜನಗಳು ಇಷ್ಟಪಡುವ, ಬಯಸುವ ಕತೆಗಳು ನನ್ನ ಮೂಸೆಯಲ್ಲಿವೆಯೋ, ಇಲ್ಲವೊ ಎಂಬುದರ ಬಗೆಗೆ ನಾನು ಯೋಚಿಸಿರಲಿಲ್ಲ. ನನ್ನ ಮನಸ್ಸು ಸದಾ ಅಶಾಂತವಾಗಿರುತ್ತಿತ್ತು. ಆ ಅಶಾಂತತೆಯನ್ನು ಅದೆಷ್ಟೋ ವರ್ಷಗಳಿಂದ ಹೊರುತ್ತಲೇ ಬಂದಿದ್ದೇನೆ. ಅದಕ್ಕೊಂದು ಮೂರ್ತರೂಪ ಕೊಡುವುದು ಸಾಧ್ಯವೆ ಎಂಬುದರ ಬಗೆಗೆ ವಿವೇಚಿಸುವುದು ಅಥವಾ ಅದನ್ನು ವ್ಯಾಖ್ಯಾನಿಸುವುದು ಕಷ್ಟ. ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಉರಿಯು ತ್ತಿರುವ ಈ ತೀವ್ರ ಅಶಾಂತತೆಯ ನಡುವೆ ಬರೆಯುವ ಸಿದ್ಧತೆ ನಡೆಸುತ್ತಿದ್ದೆ. ಬದುಕು ಈ ಅಶಾಂತತೆಗೆ ಬೆನ್ನು ಹಾಕಿಕೊಂಡು ಹೋಗುವ ಪ್ರಯತ್ನ. ಕತೆ ಬರೆಯುವಾಗ ಈ ಅಶಾಂತತೆ ತನ್ನ ಉತ್ತುಂಗ ಸ್ಥಿತಿಗೆ ತಲುಪುತ್ತದೆ. ಕತೆ ಕೊನೆಗೊಂಡಾಗ ಅಹ್ಲಾದದ ಅನುಭವವಾಗುತ್ತದೆ. ಆಗ ಪ್ರಪಂಚ ಅಷ್ಟು ಕೆಟ್ಟದ್ದೇನಲ್ಲ ಎಂದೆನ್ನಿಸುತ್ತದೆ. ಕತೆ ಬರೆದಾದ ನಂತರ ಲಭ್ಯವಾದ ಸಂತಸವನ್ನು ಏಕೆ ಆಚರಿಸಬಾರದೆಂದು ಒಮ್ಮೊಮ್ಮೆ ಅನ್ನಿಸುವುದೂ ಉಂಟು. ಆ ಒಂದು ದಿನ ಸಂಜೆ ಗಾಳಿಯಲ್ಲಿ ಹಾರುವ ಹಕ್ಕಿಯಂತೆ ಅಲ್ಲಿ ಇಲ್ಲಿ ಸುತ್ತಾಡಬಹುದು. ಗೆಳೆಯರೊಡನೆ ಸೇರಿ ಚೆನ್ನಾಗಿ ನಗಬಹುದು, ಯಾವುದಾದರೂ ಪ್ರಸಂಗವನ್ನು ತೆಗೆದುಕೊಂಡು ಗೆಳೆಯರೊಡನೆ ಗಂಟೆಗಟ್ಟಲೆ ಮಾತನಾಡಬಹುದು.

ಚಿಕ್ಕಂದಿನಿಂದಲೂ ನಾನು ಒಬ್ಬಂಟಿಯೇ. ನಾಲ್ವರು ಅಣ್ಣತಮ್ಮಂದಿರಲ್ಲಿ ನಾನು ಎಲ್ಲರಿಗಿಂತ ಕಿರಿಯವ. ತಂದೆ ದೂರದ ಶ್ರೀಲಂಕಾದಲ್ಲಿ ಉದ್ಯೋಗದಲ್ಲಿದ್ದರು. ತಾಯಿ ನಮ್ಮ ದೊಡ್ಡ ಕುಟುಂಬದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ನಗುವನ್ನು, ಸಂತೋಷವನ್ನು ಮರೆತೇ ಬಿಟ್ಟಿದ್ದರು. ನಾನು ಆಡುತ್ತ, ನಗುತ್ತ ಕುಣಿದಾಡುತ್ತ ಯಾವುದಾದ ರೊಂದು ಮನೆಗೆ ಹೋಗಿ ಹಿಂತಿರುಗಿ ಬಂದಾಗ ನನ್ನ ಮನಸ್ಸು ತುಂಬಾ ಭಾರವಾಗಿರುತ್ತಿತ್ತು. ನನ್ನ ಮನೆಯ ವಾತಾವರಣ ಯಾತನಾಮಯವಾಗಿತ್ತು. ಖಾಲಿ ಉಗ್ರಾಣ, ಸಾಲ-ಪತ್ರಗಳು ಸಾಹುಕಾರರು ಇವೆಲ್ಲದರ ನಡುವೆ ನಾನು, ನನ್ನಂತಹ ಎಳೆಯನ ಕಣ್ಣಿಂದಲೂ ಮನೆಯ ಪರಿಸ್ಥಿತಿ ಮುಚ್ಚಿಟ್ಟಿದ್ದೇನಾಗಿರಲಿಲ್ಲ.

ಜೀವನದಲ್ಲಿ ಎಂದೂ ನಾನು ನನ್ನ ಹುಟ್ಟು ಹಬ್ಬವನ್ನು ಆಚರಿಸಿಲ್ಲ. ಏಕೆಂದರೆ ನಾನು ಕರ್ಕಾಟಕ ತಿಂಗಳಲ್ಲಿ ಹುಟ್ಟಿದ್ದೆ(ಕೇರಳೀಯರ ಪ್ರಕಾರ ಈ ತಿಂಗಳು ತುಂಬ ಅಶುಭದಾಯಕ ವಾದದ್ದು. ಹೀಗಾಗಿ ಖಾದ್ಯಾನ್ನಗಳ ವಿಚಾರದಲ್ಲಿ ಕೇರಳ ಸ್ವಾವಲಂಬಿಯಲ್ಲ. ಇಲ್ಲಿನ ವ್ಯವಸಾಯದಿಂದ ಎಂಟು-ಒಂಬತ್ತು ತಿಂಗಳ ಕಾಲವನ್ನು ಬಹಳ ಕಷ್ಟದಿಂದ ಕಳೆಯಬಹುದು ಅಷ್ಟೆ). ಹಬ್ಬಗಳ ಬಗೆಗೆ ಆಕರ್ಷಣೆ ಇದ್ದಿರಬಹುದಾದ ವಯಸ್ಸಿನಲ್ಲಿ ಮನೆಯಲ್ಲಿ ಔಷಧಿಗೆ ಬೇಕೆಂದರೂ ಅಕ್ಕಿಕಾಳು ಇರುತ್ತಿರಲಿಲ್ಲ. ಕೊಯಿಲಿನ ಮಹಾ ಸುದಿನ ಬರುವುದನ್ನೇ ಕಾಯುತ್ತಾ ಒಂದೊಂದು ದಿನ ಕಳೆಯುವುದೂ ಅತ್ಯಂತ ದುಸ್ತರವಾಗಿತ್ತು. ನನ್ನ ಒಂದು ಹುಟ್ಟಿದ ಹಬ್ಬ ಈಗಲೂ ನನ್ನ ನೆನಪಿನಲ್ಲಿ ಹಸಿರಾಗಿ ಉಳಿದಿದೆ. ಮೂರು ರೂಪಾಯಿ ಕೊಟ್ಟು ಯಾರಿಂದಲೊ ಭತ್ತ ತೆಗೆದುಕೊಂಡು ಬಂದು, ಕುಟ್ಟಿ ಅಮ್ಮ ಅನ್ನ ಮಾಡಿದ್ದಳು. ಅನ್ನ ಸಿದ್ಧಪಡಿಸುವ ಹೊತ್ತಿಗೆ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಅಷ್ಟು ಹೊತ್ತಿಗೆ ನನ್ನ ಹಸಿವು ತನಗೆ ತಾನೇ ಇಂಗಿಹೋಗಿತ್ತು. ದೊಡ್ಡವನಾದ ಮೇಲೆ ಬಹಳ ವೈಭವದಿಂದಲೇ ನಾನು ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬಹುದಿತ್ತು. ಆದರೆ ಈಗ ಆ ಬಗೆಗಿನ ಎಲ್ಲ ಆಸೆ-ಆಕಾಂಕ್ಷೆಗಳು ತಣ್ಣಗಾಗಿವೆ.

ಆ ದಿನಗಳಲ್ಲಿ ಸಾಹಿತ್ಯ ಸೃಷ್ಟಿ ಎಂದರೆ ಬದುಕಿನಿಂದ ಹಲಾಯನವೆಂದು ಭಾವಿಸಿದ್ದೆ. ರಾತ್ರಿಯ ಹೊತ್ತು ಮಂಕು ದೀಪದ ಮುಂದೆ ಕುಳಿತು ಏನಾದರೂ ಬರೆಯುತ್ತಿರುವಾಗ, ಹಗಲು ಹೊತ್ತಿನಲ್ಲಿ ಬೆಟ್ಟಗಳ ಇಳಿಜಾರುಗಳಲ್ಲಿ ಹಾಗೂ ಮೈದಾನದಲ್ಲಿ ಸುತ್ತುತ್ತಾ ಮನಸ್ಸಿನಲ್ಲೇ ಕತೆ-ಕವಿತೆಗಳನ್ನು ರಚಿಸಿಕೊಳ್ಳುತ್ತಿರುವಾಗ ಬದುಕಿನಿಂದ ದೂರ ಹೋಗುತ್ತಿರುವುದರ ಬಗೆಗೆ ಒಂದು ಬಗೆಯ ತೃಪ್ತಿ ಸಿಗುತ್ತಿತ್ತು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೂ ಸಾಹಿತ್ಯ ಇಂಥದ್ದೇ ಒಂದು ರಹಸ್ಯ ಲೋಕವಾಗಿತ್ತು. ಈ ಗುಹೆಯಲ್ಲಿ ಯಾವಾಗೆಂದರೆ ಆವಾಗ ಹೋಗಿ ಬಚ್ಚಿಟ್ಟುಕೊಳ್ಳಬಹುದೇನೋ ಎಂದು ಅನ್ನಿಸುತ್ತಿತ್ತು.

ಕತೆಗಳನ್ನು, ಕವಿತೆಗಳನ್ನು ಪತ್ರಿಕೆಗಳಿಗೆ ಕಳುಹಿಸುತ್ತಿದ್ದೆ. ಅವುಗಳು ಹಿಂತಿರುಗಿ ಬರುತ್ತಿದ್ದವು. ಹಿಂತಿರುಗಿ ಬಾರದಿದ್ದ ರಚನೆಗಳನ್ನು ಸಂಪಾದಕರು ಪ್ರಕಟಣೆಗೆಂದು ತಮ್ಮಲ್ಲೇ ಇಟ್ಟುಕೊಂಡಿರ ಬಹುದೆಂದು ಭಾವಿಸಿ ಬುಕ್ ಸ್ಟಾಲ್‌ಗಳ ಬಳಿ ಹೋಗಿ ಪತ್ರಿಕೆಗಳ ಪುಟಗಳನ್ನು ತಿರುವಿ ಹಾಕುತ್ತಿದ್ದೆ. ವಾರಗಳು ಕಳೆದರೂ ನನ್ನ ಬರೆಹಗಳು ಮಾತ್ರ ಎಲ್ಲೂ ಗೋಚರಿಸುತ್ತಿರಲಿಲ್ಲ.

ರಜಾ ದಿನಗಳಲ್ಲಿ ನನ್ನ ಕಷ್ಟಗಳು ಹೆಚ್ಚಾಗುತ್ತಿದ್ದವು. ಮೂರು ಮೈಲಿಗಳ ದೂರದಲ್ಲಿದ್ದ ಅಂಚೆ ಕಚೇರಿಗೆ ದಿನವೂ ಹೋಗಬೇಕಾಗುತ್ತಿತ್ತು. ಮರಳಿ ಬರುತ್ತಿದ್ದ ಬರೆಹಗಳು ಬೇರೆಯವರ ಕೈಗೆ ಸಿಗದಂತೆ ನೋಡಿಕೊಳ್ಳಲು ಹೀಗೆ ನಿತ್ಯವೂ ಅಂಚೆ ಕಚೇರಿಗೆ ಹೋಗುವುದು, ಮರಳಿ ಬರುವುದು-ಇದು ನನಗೆ ನಾಚಿಕೆ ಎನ್ನಿಸ ತೊಡಗಿತು. ಹೀಗಾಗಿ ಉಚಿತವಾಗಿ ಪುಸ್ತಕ ಸೂಚಿಯನ್ನು ಕಳುಹಿಸುತ್ತಿದ್ದ ಪುಸ್ತಕ ಪ್ರಕಾಶಕರಿಗೆ ಕಾರ್ಡ್ ಬರೆಯುತ್ತಿದ್ದೆ. ಮೊದಮೊದಲು ಪ್ರತಿ ಭಾನುವಾರ ಹನ್ನೆರಡು ಮೈಲಿ ದೂರ ನಡೆದು ಹೋಗಿ ಓದಲು ಪುಸ್ತಕಗಳನ್ನು ಕೊಂಡು ತರುತ್ತಿದ್ದೆ.

ಯಾವಾಗಲಾದರೂ ಅಲ್ಲೊಂದು ಇಲ್ಲೊಂದು ಬರೆಹ ಪ್ರಕಟವಾದರೂ ಯಾವುದೇ ಸಂಭಾವನೆ ಇಲ್ಲ. ಆ ಸಂಚಿಕೆಯ ಒಂದು ಪ್ರತಿಯೂ ಬರುತ್ತಿರಲಿಲ್ಲ. ಆದರೂ ಮುದ್ರಿತ ಅಕ್ಷರಗಳಲ್ಲಿ ನನ್ನ ಬರೆಹಗಳನ್ನು ಕಂಡಾಗ ಒಂದು ಬಗೆಯ ಪ್ರೇರಣೆ ಪಡೆದುಕೊಳ್ಳುತ್ತಿದ್ದೆ. ಆದರೆ ಮನೆಯ ಮಂದಿಗೆ ನನ್ನ ಬರೆವಣಿಗೆಯ ಬಗೆಗೆ ಯಾವುದೇ ಆಸಕ್ತಿ ಇರಲಿಲ್ಲ.

ಬಿಎಸ್.ಸಿ. ಪಾಸ್ ಮಾಡಿ ಉದ್ಯೋಗವಿಲ್ಲದೆ ಖಾಲಿ ಜೇಬಿನಲ್ಲಿ ಮನೆಯಿಂದ ಹೊರಬಿದ್ದೆ. ಒಂದುದಿನ ಮನೆಯವರೆಲ್ಲರ ಮುಂದೆ ತಂದೆ ಏನೆಂದು ಹೇಳಿದರು ಗೊತ್ತೆ ’ಇವನು ನನ್ನ ಚಿಕ್ಕಮಗ, ಶ್ರದ್ಧೆ-ಭಕ್ತಿ ಏನೊಂದು ಇಲ್ಲ. ಯಾವುದೇ ಕೆಲಸಕ್ಕೂ ಇಲ್ಲ. ಒಂದು ಕೆಲಸ ಇವನು ಮಾಡ್ತಾನೆ-ಹಾದಿ ಬೀದಿಯಲ್ಲಿ ತಿರುಗಾಡುವವರ ತಲೆ-ಬುಡವಿಲ್ಲದ ಕತೆಗಳನ್ನು ಬರೆಯುವುದು, ಬಿಳಿ ಕಾಗದವನ್ನು ಕಪ್ಪು ಮಾಡುವುದು’. ಹೊರಗಿನಿಂದ ಬಂದ ಕೆಲವು ನೆಂಟರು ಸಹ ಅಲ್ಲಿದ್ದರು. ತಟ್ಟೆಗೆ ಬಡಿಸಿದ್ದ ಊಟವನ್ನು ಅರ್ಧದಲ್ಲೇ ಬಿಟ್ಟು ಎದ್ದಿದ್ದೆ ಅಂದು. ಮಾರನೆ ದಿನ ಅರ್ಧಂಬರ್ಧ ಬಣ್ಣ ಎದ್ದಿದ್ದ ಟ್ರಂಕ್ ತೆಗೆದುಕೊಂಡು ಬಸ್‌ಸ್ಟ್ಯಾಂಡ್ ಕಡೆ ಹೊರಟಿದ್ದೆ. ಬಸ್‌ಸ್ಟ್ಯಾಂಡ್‌ನಲ್ಲಿ ನನಗೆ ಪರಿಚಿತನಾಗಿದ್ದ ಕೂಲಿಯೊಬ್ಬನಿಂದ ಎರಡು ರೂಪಾಯಿ ಸಾಲ ತೆಗೆದುಕೊಂಡು ನನ್ನ ಯಾತ್ರೆಯನ್ನು ಆರಂಭಿಸಿದ್ದೆ…

ಯಾವುದೇ ಖಾಯಂ ನೌಕರಿ ಇಲ್ಲ. ಯಾವುದೋ ಒಂದು ಟ್ಯುಟೋರಿಯಲ್ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದೆ. ಮೂರು ದಿನ ಗ್ರಾಮ ಸೇವಕನ ಕೆಲಸವನ್ನೂ ನಿರ್ವಹಿಸಿದೆ. ಕೆಲವು ತಿಂಗಳುಗಳಿಗೆ ಸೀಮಿತವಾಗಿದ್ದ ಈ ಕೆಲಸಗಳನ್ನು ಮಾಡುತ್ತಲೇ ಬರೆವಣಿಗೆಯನ್ನೂ ಮುಂದು ವರಿಸಿದೆ. ಇದರಿಂದ ಸ್ವಲ್ಪ ಸಮಯಕ್ಕಾದರೂ ಸರಿ, ಬದುಕಿನ ಕಹಿಯಿಂದ ಬಿಡುಗಡೆ ಪಡೆಯುತ್ತಿದ್ದೆ.

ಇಂದು ಪುಸ್ತಕಗಳಿಂದ ಹಣ ಬರುತ್ತಿದೆ. ನಾನು ಇಷ್ಟಪಟ್ಟಂತಹ ಕೆಲಸ ಸಿಕ್ಕಿದೆ. ಆದರೂ ನಾನು ಸಂತೋಷದಿಂದ ಇದ್ದೀನೇನು? ಇಲ್ಲ. ನನ್ನ ಅಂತರ್ಯದಲ್ಲಿ ಸಾವಿರಾರು ಕಹಿಗಳಿವೆ. ಪ್ರಪಂಚದ ಕಹಿಗಳು, ನೋವುಗಳು ನನ್ನ ಮನಸ್ಸಿನಲ್ಲಿ ಹೆಪ್ಪುಗಟ್ಟಿವೆ. ನನ್ನ ಕೋಪ-ತಾಪ, ವಿರೋಧದಿಂದ ಏನೂ ಆಗುವುದಿಲ್ಲ ಎಂದು ನನಗೆ ಗೊತ್ತಿದೆ. ನನ್ನ ಪೀಳಗೆಯವರಿಗೂ ಇದು ಗೊತ್ತಿದೆ. ಅಲ್ಸರ್‌ನಿಂದ, ಲಿವರ್ ಡಿಸೀಸ್‌ನಿಂದ ಕೆಲವು ಜನ ಆತ್ಮಾಹುತಿ ಮಾಡಿಕೊಳ್ಳುತ್ತಾರೆ. ಬದುಕಬೇಕೆಂಬ ಆಸೆ ಹೊತ್ತಿರುವ ನಾನು ಆತ್ಮಹತ್ಯೆ ಮಾಡಿಕೊಳ್ಳಲಾರೆ. ನನ್ನ ಕಹಿ ಮತ್ತು ಅಲ್ಸರ್ ಅನ್ನು ಹೊತ್ತು ಸಾಹಿತ್ಯವೆಂಬ ಚಿಕ್ಕ ಪ್ರಪಂಚದಲ್ಲಿ ನಾನು ಕಾಲದ ಕೈದಿಯಂತೆ ಬದುಕುತ್ತಿದ್ದೇನೆ.

* * *

ಹಲವು ವರ್ಷಗಳಿಂದ ನಾನು ಕತೆಗಳನ್ನು ಬರೆಯುತ್ತಿದ್ದೇನೆ. ಇದುವರೆಗೆ ಎಷ್ಟು ಕತೆಗಳನ್ನು ಬರೆದಿದ್ದೇನೆ ಎಂದು ನನಗೆ ಖಚಿತವಾಗಿ ತಿಳಿದಿಲ್ಲ. ಏಕೆಂದರೆ ಅನೇಕ ವರ್ಷಗಳಲ್ಲಿ ಹಲವು ಕತೆಗಳು ಕಳೆದುಹೋಗಿವೆ. ಮೊದಲೆಲ್ಲ ಮಾಸಪತ್ರಿಕೆಗಳ ಸಂಪಾದಕರ ಕಸದ ಬುಟ್ಟಿಗಳಲ್ಲಿ ಪ್ರಕಟವಾದವುಗಳಲ್ಲಿ ಹಲವು ಕಾಣದಾಗಿವೆ. ಪ್ರಸಿದ್ಧವಲ್ಲದ ಕೆಲವು ಮಾಸಪತ್ರಿಕೆಗಳಲ್ಲಾದ್ದರಿಂದ ಆಗಿರಬಹುದು. ಅವುಗಳನ್ನೆಲ್ಲ ಮತ್ತೆ ಹುಡುಕಿ ಸಂಗ್ರಹಿಸಲಾಗಲಿಲ್ಲ.

ಮೊದಲು ಪ್ರಕಟವಾದುದು ನನ್ನದೊಂದು ಲೇಖನ. ಪ್ರಾಚೀನ ಭಾರತದ ರತ್ನ ವ್ಯಾಪಾರದ ಬಗೆಗೆ. ಇದು ೧೯೪೭ರಲ್ಲಿ, ಲೇಖನಗಳನ್ನು ಬರೆದು ನೋಡಿದೆ. ಕವಿತೆ ಬರೆದು ನೋಡಿದೆ. ಕತೆ ಬರೆದು ನೋಡಿದೆ. ೧೯೫೦ರ ಆರಂಭದ ದಿನಗಳಲ್ಲಿ ನನಗೆ ಪ್ರಿಯವಾದ ಅಥವಾ ಬರೆಯಲು ಸ್ವಾರಸ್ಯಕರವಾದ ಸಾಹಿತ್ಯ ಪ್ರಕಾರ ಸಣ್ಣಕತೆ ಎಂದು ತೀರ್ಮಾನಿಸಿದೆ.

ಹೌದು. ಸಣ್ಣಕತೆಯೊಡನೆ ನನಗೆ ಪ್ರತ್ಯೇಕವಾದ ಒಂದು ಪಕ್ಷಪಾತವಿದೆ. ಕವಿತೆಯಂತೆ ಪೂರ್ಣತೆಯೆಡೆಗೆ ತಲುಪಿಸುವ, ಅಲ್ಲವಾದರೆ ಪೂರ್ಣತೆಯನ್ನು ಲಕ್ಷ್ಯವಿರಿಸಿ ಪ್ರವಹಿಸುವ ಒಂದು ಸಾಹಿತ್ಯ ಪ್ರಕಾರ. ಕಾದಂಬರಿಯಲ್ಲಿ ಕೆಲವೊಮ್ಮೆ ಕಾವ್ಯ ಸೌಂದರ್ಯವಿಲ್ಲದ ಅನೇಕ ಭಾಗಗಳನ್ನು ಡಾಕ್ಯುಮೆಂಟೇಶನ್‌ಗಾಗಿ ಬರೆಯಬೇಕಾಗುತ್ತದೆ. ಕಾದಂಬರಿಯ ವಿಸ್ತೃತವಾದ ಕ್ಯಾನ್‌ವಾಸಿನಲ್ಲಿ ಹಲವನ್ನು ಅಳವಡಿಸಲು ಸ್ವಾತಂತ್ರ್ಯವಿದೆ. ಸಣ್ಣಕತೆಗೆ ವಾಸ್ತು, ಶಿಲ್ಪ, ಸೃಷ್ಟಿಯೆಂಬ ತ್ರಿಮಾನಗಳ ಒಂದು ಸುಂದರ ರೂಪವನ್ನು ಕೊಡುವುದು ಸಾಧ್ಯ. ಸಣ್ಣಕತೆಯಲ್ಲಿ ಒಂದು ಪದ, ಕೆಲವೊಮ್ಮೆ ಒಂದು ಮಾತು ಅಧಿಕವಾಗಿರಬಹುದು. ಕಾದಂಬರಿಗಳಲ್ಲಿ ಪುಟಗಳು, ಕೆಲವೊಮ್ಮೆ ಅಧ್ಯಾಯಗಳೇ ಅಧಿಕವಾದರೂ ಸಮಗ್ರ ದೃಷ್ಟಿಯಲ್ಲಿ ಕಾದಂಬರಿಯ ಶಿಲ್ಪಕ್ಕೆ ಅಷ್ಟಾಗಿ ಬಾಧಿಸಿತೆಂದು ಹೇಳಲು ಬರುವುದಿಲ್ಲ. ಲಯವಿಲ್ಲದ ಅಲೆಗಳು ಹಾಗೂ ಸುಳಿಗಳಿಂದಾದ ಅಸ್ವಸ್ಥವೇ ಬದುಕು. ಲಯಭಂಗದಿಂದ ಲಯವನ್ನು ಸೇರುವ ಒಂದು ಸಾಹಸ ಮಾತ್ರ ಸಾಹಿತಿಯದು. ಪೂರ್ಣತೆಯೇ ಲಕ್ಷ್ಯ. ಆದರೆ ಲಕ್ಷ್ಯವನ್ನು ಸೇರುವುದು ಎಂಬ ಒಂದು ಸ್ಥಿತಿಯಿಲ್ಲ. ದಿಗಂತವೆಂದು ಭಾವಿಸಿದ ದೂರಕ್ಕೆ ತಲುಪಿದಾಗ ಅದು ಮತ್ತೊಮ್ಮೆ ದೂರವಿರುತ್ತದೆ. ಬಳಿಕ ಅದಕ್ಕೂ ಹೆಚ್ಚು ದೂರದಲ್ಲಿರುತ್ತದೆ. ಆದರೆ ಈ ಪ್ರಯಾಣ ಎಂಬುದು ಅದರ ಎಲ್ಲಾ ಸಂಕೀರ್ಣತೆಗಳನ್ನು, ಸಮಸ್ಯೆಗಳನ್ನು ಜಯಾಪಜಯಗಳನ್ನು ಇರಿಸಿಕೊಂಡೇ ಸಂತೃಪ್ತಿ ನೀಡುವ ಒಂದು ಅನುಭೂತಿ. ಅದುವೇ ಬರೆಹಗಾರನನ್ನು ಧೃತಿಗೆಡಿಸದೆ ಮುನ್ನಡೆಸುವ ಶಕ್ತಿ.

ನನ್ನ ಸಾಹಿತ್ಯ ಜೀವನದಲ್ಲಿ ನಾನು ಹೆಚ್ಚು ಋಣಿಯಾಗಿರುವುದು ಕುಡಲೂರಿಗೆ. ವೇಲಾಯುಧಣ್ಣ, ಗೋವಿಂದಕುಟ್ಟಿಯಣ್ಣ, ಪಗಡೆ ಆಟಗಾರನಾದ ಕೊಂದುಣ್ಣಿಮಾವ, ಕಿವಿ ತುಂಡರಿಸಿದ ಮೀನಾಕ್ಷಿ ಅಕ್ಕ ಇವರೆಲ್ಲರ ಊರಾದ ಕುಡಲೂರಿಗೆ ಅಪ್ಪ, ಅಮ್ಮ, ಅಣ್ಣ, ಬಂಧುಗಳು, ಪರಿಚಿತರು, ನೆರೆಯವರು-ಇವರೆಲ್ಲರೂ ನನಗೆ ಪ್ರಿಯರಾದ ಕಥಾಪಾತ್ರಗಳು. ನನ್ನ ಪುಟ್ಟ ಅನುಭವ ಕಕ್ಷೆಯಲ್ಲಿ ಬಂದ ಸ್ತ್ರಿ, ಪುರುಷರ ಕತೆಗಳೇ ನನ್ನ ಸಾಹಿತ್ಯದ ಹೆಚ್ಚಿನ ಭಾಗಗಳು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನನ್ನವೇ ಕತೆಗಳು. ಒಂದು ತಮಾಷೆಯೆಂಬಂತೆ ನನಗೆ ಆಗಾಗ ನೆನಪಾಗುವುದಿದೆ. ಅಮ್ಮ ಬದುಕಿದ್ದಿದ್ದರೆ; ಅಪ್ಪನ ಮನೆಯಿಂದ ಬಂದ ಶಂಕುಣ್ಣಿಯಣ್ಣನನ್ನು ಸತ್ಕರಿಸಲು ನನ್ನನ್ನು ಉಪವಾಸ ಮಲಗಿಸಿದ ಕತೆಯನ್ನು ಓದಿದರೆ ಏನನ್ನಿಸುತ್ತಿತ್ತು?

ವರ್ಷಗಳ ಬಳಿಕ ಒಂದು ಕಥಾಪಾತ್ರ, ಒಂದು ಘಟನೆ, ಒಂದು ವಾತಾವರಣ ತಕ್ಷಣ ಮನಸ್ಸಿಗೆ ಬರುವಾಗ ಇನ್ನೊಂದು ಸೃಷ್ಟಿಯ ನೋವಿನ ಆರಂಭ ಈ ನಿಮಿಷವೆಂದು ತಿಳಿಯುವಾಗ-ಆ ವೇಳೆಗೆ ವಿವರಿಸಲಾಗದ ಒಂದು ತೆರನ ಸಾರ್ಥಕ ಭಾವನೆಯುಂಟಾಗುತ್ತದೆ. ಆ ಸಾರ್ಥಕತೆಗಾಗಿ ನಿತಾಂತವಾದ ಅಸ್ವಸ್ಥತೆಯನ್ನು ಹೊತ್ತುಕೊಂಡು ನಡೆಯುವಾಗ ಬರೆಹಗಾರ ನಿರೀಕ್ಷೆಯಿಂದ ಕಾದಿರುತ್ತಾನೆ.

ಉಗಿಬಂಡಿಯ ಎಂಜಿನುಗಳ ಶಬ್ದಕ್ಕೆ ಅದುರುತ್ತಿರುವ ಒಂದು ಹಳೆಯ ಮಹಡಿಯ ವರಾಂಡದಲ್ಲಿ ಕುಳಿತಿರುವಾಗ ಹುಚ್ಚ ವೇಲಾಯುಧಣ್ಣ ಚಿಕ್ಕಂದಿನಲ್ಲಿ ಮನೆಗೆ ಓಡಿ ಬಂದ ದೃಶ್ಯವನ್ನು ತಕ್ಷಣ ನೆನಪಿಸಿಕೊಂಡಾಗ ಆದ ಅಹ್ಲಾದವನ್ನು ನಾನೀಗಲೂ ಮೆಲುಕು ಹಾಕುವುದಿದೆ. ಬಡಗಣ ಮನೆಯಿಂದ ತಪ್ಪಿಸಿಕೊಂಡು ಬಂದು ’ಮಾಳ್ವಕ್ಕ ನನಗೆ ಒಂದಿಷ್ಟು ಅನ್ನಕೊಡಿ’ ಎಂದು ಅಮ್ಮನಲ್ಲಿ ಹೇಳುತ್ತಾ ಕಾಲದೀಪದ ಬೆಳಕಿರುವ ಜಗಲಿಗೆ ಬಂದ ದೃಶ್ಯ. ನನ್ನ ಕತೆಗಳಿಗಿಂತಲೂ ನನಗೆ ಪ್ರಿಯವಾದುದು ನನ್ನ ಕತೆಗಳ ಕತೆಗಳೇ. ಅದೆಲ್ಲವನ್ನು ಇಲ್ಲಿ ವಿಸ್ತರಿಸುವುದಿಲ್ಲ.

ನಾನು ಹೇಳುವುದಿಷ್ಟು; ಕುಡಲೂರು ಎಂಬ ನನ್ನ ಪುಟ್ಟ ಪ್ರಪಂಚದಿಂದ ಬೇರಾಗಿ ನಿಲ್ಲಲು ನನಗೆ ಸಾಧ್ಯವಾಗದು. ಅದರ ನಾಲ್ಕು ಮೇರೆಗಳಾಚೆ ದಾಟುವುದಿಲ್ಲವೇ ಎಂದು ಕೇಳಬಹುದು. ಇಲ್ಲ. ವಿಭಿನ್ನವಾದ ಭೂ ಪ್ರದೇಶಗಳಲ್ಲಿ ನಾನು ಅಲೆದಾಡಿದ್ದಿದೆ. ಹಲವು ಬಾರಿ. ಆದರೆ ಮತ್ತೆ ಮತ್ತೆ ನಾನು ಇಲ್ಲಿಗೇ ಹಿಂತಿರುಗಿ ಬರುತ್ತೇನೆ. ಇದೊಂದು ಮಿತಿಯೇ ಆಗಿರಬಹುದು. ಆದರೆ ಅರಿಯದ ಅದ್ಭುತಗಳನ್ನು ಗರ್ಭದಲ್ಲಿ ಸೇರಿಸಿಕೊಂಡಿರುವ ಅಗಾಧ ಸಮುದ್ರಕ್ಕಿಂತ ಅರಿತಿರುವ ನನ್ನ ನಿಳಾ ನದಿಯೇ ನನಗೆ ಪ್ರಿಯ.

ಕೃತಜ್ಞತೆಗಳು. ನನ್ನ ಓದುಗರಿಗೆ ನನ್ನ ಊರಿಗೆ…

ಸಿತಾರಾ, ಪ್ಯಾಲೇಸ್ ರೋಡ್                                                                                                                                                   –ಎಂ.ಟಿ. ವಾಸುದೇವನ್ ನಾಯರ್

ಕೋಳಿಕ್ಕೋಡ್ ೬೭೩೦೦೬, ಕೇರಳ

 

ಎಂ.ಟಿ.ವಾಸುದೇವನ್ ನಾಯರ್‌ರ ಕಥಾಸಾಹಿತ್ಯ

ಪ್ರಸ್ತಾವನೆ

ಮಲಯಾಳಂ ಭಾಷೆಯಲ್ಲಿ ಕಥಾಸಾಹಿತ್ಯ ವೈವಿಧ್ಯಮಯವಾಗಿ ಬೆಳೆದಿದೆ. ಅದರಲ್ಲೂ ಸಣ್ಣಕತೆಯ ಕ್ಷೇತ್ರ ಅತ್ಯಂತ ಹುಲುಸಾಗಿದೆ. ಭಾವಸ್ಪರ್ಶಿಯಾದ ಕಾವ್ಯ ಪ್ರಕಾರವು ವಿಶಿಷ್ಟವಾಗಿದೆ. ಯಾವ ಸಾಹಿತ್ಯ ಪ್ರಕಾರವೇ ಇರಲಿ ಅಲ್ಲೆಲ್ಲ ಆ ನೆಲದ ಕಂಪು ಕಾಂತಿಯುಕ್ತವಾಗಿದೆ. ಅಗಾಧವಾದ ಅರಬಿ ಸಮುದ್ರದ ಅಲೆಗಳ ಅಬ್ಬರದಲ್ಲಿ ಸಾಹಿತ್ಯ ಪ್ರತಿಸ್ಪಂದಿಸಿದೆ. ಹರಿಯುವ ನೀರಿನ ಜುಳು ಜುಳು ನಾದವನ್ನು ಅಂತರ್ಗತಗೊಳಿಸಿದೆ. ಹಚ್ಚನೆಯ ಹಸುರ ನಡುವೆ ಸುಳಿದಾಡುವ ತಂಗಾಳಿಯ ಲಯ ಪಡೆದು ಪಡಿಮೂಡಿದೆ. ಇದು ಸಾಹಿತ್ಯ ಜನಮನದಲ್ಲಿ ನೆಲೆನಿಂತ ಬಗೆ. ತನ್ನ ನೆಲದ ಪ್ರಾಕೃತಿಕ, ಸಾಂಸ್ಕೃತಿಕ ಲೋಕದಲ್ಲಿ ಬೇರಿಳಿಸಿ ಬೆಳೆದ ಮಲಯಾಳಂ ಸಾಹಿತ್ಯ ಅನೇಕ ವೈಚಾರಿಕ ಸಂಗತಿಗಳಿಗೆ ಪ್ರತಿಸ್ಪಂದಿಸಿ ಆಧುನಿಕವಾಗಿದೆ. ಪರಂಪರಾಗತ ಆಚಾರ ವಿಚಾರಗಳ ನೆಲೆಯಿಂದ ದೇಸೀಯ ಸೊಗಡನ್ನು ಉಳಿಸಿ ಹುಟ್ಟಿದ ನೆಲದ ಹೊಕ್ಕುಳ ಬಾಂಧವ್ಯವನ್ನು ಉಳಿಸಿಕೊಂಡಿದೆ. ಪ್ರಾಚೀನ ಮಲಯಾಳಂ ಸಾಹಿತ್ಯದಿಂದ ಆರಂಭಿಸಿ ಇಂದಿನ ರಚನೆಗಳವರೆಗು ಈ ಮಾತು ಸತ್ಯ. ಇದು ಕೇರಳದ ನಾಡು ನುಡಿಯನ್ನು ಪೋಷಿಸಿದ ಪ್ರಕೃತಿಯ ಮಾತಾಯಿತು.

ಸಂಸ್ಕೃತಿ

ಆಧುನಿಕ ಮಾನವನ ಯೋಜನೆಗಳಿಗೆ ಪ್ರಕೃತಿ ವಿರೂಪಗೊಂಡು ಅಲ್ಲೆಲ್ಲ ಜನ ವಸತಿ ತಲೆಯೆತ್ತಿರಬಹುದು. ಆದರೆ ಕೇರಳದ ಸಾಂಸ್ಕೃತಿಕ ನಿಯಂತ್ರಕ ಶಕ್ತಿ ’ಮಾತೃತ್ವದ ಪರಿಕಲ್ಪನೆ’ ಮಾತ್ರ ಬದಲಾಗಿಲ್ಲ. ಅದು ಭಗವತಿಯಾಗಿ, ಕಡಲಮ್ಮೆಯಾಗಿ ಗೋಚರಿಸಿದೆ. ಸಮುದ್ರವನ್ನು ರಾಜನಾಗಿ, ಪುರುಷ ಸಂಕಲ್ಪವಾಗಿ ನಮ್ಮ ಪುರಾಣಗಳು ಕಂಡಿವೆ. ಕಡಲು ಕೇರಳೀಯರಿಗೆ ತಾಯಿ. ಅನ್ನ, ನೀರು, ಗಾಳಿ ಕೊಟ್ಟು ಪೋಷಿಸುವ ’ಕಡಲಮ್ಮ’ ಕರಾವಳಿಯ ತೀರದುದ್ದಕ್ಕೂ ಜನರಿಗೆ ರಕ್ಷಣೆ ನೀಡುತ್ತಾಳೆ. ಒಳನಾಡುಗಳಲ್ಲಿ ತಾಯಿಯಾಗಿ ಭಗವತಿ ನಾಡಿಗೆ ರಕ್ಷಣೆ ನೀಡುತ್ತಾಳೆ. ಮುನಿದು ರುದ್ರ ಭಯಂಕರಿಯಾದ ಭಗವತಿಯನ್ನು ಶಾಂತಳಾಗಿಸಲು ಪ್ರಯತ್ನಿಸುವ, ಪ್ರಶಾಂತ ವದನೆಯಾದ ಭಗವತಿಯ ಕೃಪೆಗೆ ಪಾತ್ರರಾಗುವ ಜನಜೀವನ ಕೇರಳದ ಸಾಂಸ್ಕೃತಿಕ ತಳಹದಿಯಾಗಿದೆ. ಪಾಂಡ್ಯನಾಡಿನಲ್ಲಿ ಅನ್ಯಾಯಕ್ಕೊಳಗಾದ ಕಣ್ಣಗಿಯ ಶಾಪಕ್ಕೆ ಸುಟ್ಟುಹೋದ ನಾಡಿನ ಬದುಕನ್ನು ಇದು ಸಂಕೇತಿಸುತ್ತಿರಬಹುದು. ಅದೇನೇ ಇರಲಿ, ಕೇರಳದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬದುಕಿನಲ್ಲಿ ತಾಯಿ ಅಥವಾ ಮಾತೃಶಕ್ತಿ ಪ್ರಮುಖ ಪಾತ್ರವಹಿಸುವುದನ್ನು ಕಾಣಬಹುದು. ಮಲಯಾಳಂ ಸಾಹಿತ್ಯದಲ್ಲಿ ತಾಯಿಯ ವಾತ್ಸಲ್ಯ, ಪ್ರೀತಿ, ಸೆಳೆತ ಇವೆಲ್ಲ ಹತ್ತು ಹಲವು ಮುಖಗಳಲ್ಲಿ ದಾಖಲಾಗುತ್ತಲೇ ಬಂದಿವೆ. ತಾಯಿ ಮಕ್ಕಳ ಕರುಳ ಬಾಂಧವ್ಯದಂತೆಯೇ ಕೇರಳದ ಸಂಸ್ಕೃತಿ ಮತ್ತು ಸಾಹಿತ್ಯದ ಬಾಂಧವ್ಯ ನಿರಂತರ ಮುಂದುವರಿದಿದೆ.

ಸಮಕಾಲೀನ ಕೇರಳ ರಾಜಕೀಯವಾಗಿ, ಸಾಮಾಜಿಕವಾಗಿ ಎಚ್ಚರವಾಗಿದೆ. ಬಹುತೇಕ ಅಕ್ಷರಸ್ಥರೇ ನೆಲೆಸಿರುವ ಈ ನಾಡಿನಲ್ಲಿ ಸಾಹಿತ್ಯವನ್ನು, ಸಂಸ್ಕೃತಿಯನ್ನು ಕಟ್ಟೆಚ್ಚರದಿಂದ ನಿರುಕಿಸುವ ವಿಸ್ತೃತವಾದ ಓದುಗ ಸಮುದಾಯವಿದೆ. ಅರಬ್ ರಾಷ್ಟ್ರಗಳ ಹಣದ ಹೊಳೆ ಹರಿದು ಪ್ರಕೃತಿಯ ನಡುವೆ ಎದ್ದು ನಿಂತ ಗಗನಚುಂಬಿ ಕಟ್ಟಡಗಳು ಆಧುನಿಕತೆಯ ಪ್ರತೀಕಗಳಂತಿವೆ. ಇವುಗಳಲ್ಲಿ ಬದುಕು ಸವೆಸುವ ಯಾಂತ್ರಿಕ ಜನವರ್ಗವಿದೆ. ಹೋಮ, ಹವನ ಮೊದಲಾದ ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಾ ಸನಾತನ ಸಂಸ್ಕೃತಿಯನ್ನು ಅವಲಂಬಿಸಿ ಬದುಕುವ ಜನಸಮುದಾಯವಿದೆ. ಇದು ಪೋಷಿಸಿದ ಆರಾಧನಾ ಕಲೆಗಳು, ದೇವಾಲಯಗಳು ಕೇರಳದ ಪರಂಪರಾಗತ ಸಂಸ್ಕೃತಿಯ ಜೊತೆ ಸಂಬಂಧ ಉಳಿಸಿಕೊಂಡಿವೆ. ಇವೆಲ್ಲವುಗಳನ್ನು ವ್ಯವಸ್ಥಿತವಾಗಿ, ಸದಾ ಪೋಷಿಸುತ್ತಾ ಬದುಕುತ್ತಿರುವುದು ಕೇರಳೀಯರ ವೈಶಿಷ್ಟ್ಯಗಳಲ್ಲೊಂದು. ಇದು ಕೇರಳದ ಆಧುನಿಕ ದಿನಗಳ ಮಾತಾಯಿತು. ಆದರೆ, ಆಧುನಿಕ ಸಂಸ್ಕೃತಿಯಲ್ಲೂ ಅನೇಕ ಪಾರಂಪರಿಕ ವಿಚಾರಗಳಿವೆ ಎಂಬುದನ್ನು ಅಲ್ಲಿಯ ಸಾಹಿತ್ಯದ ಓದಿನಿಂದ ತಿಳಿದುಕೊಳ್ಳ ಬಹುದು.

ಮಲಯಾಳಂ ಸಾಹಿತ್ಯ

ಮಲಯಾಳಂ ಸಾಹಿತ್ಯಕ್ಕೆ ಅಂತಹ ಹಳಮೆಯೇನಿಲ್ಲ. ಅದಕ್ಕೆ ಹನ್ನೆರಡನೆಯ ಶತಮಾನದ ಈಚೆಗಿನ ಚರಿತ್ರೆ ಮಾತ್ರವಿದೆ. ಅದಕ್ಕೂ ಹಿಂದಿನ ರಚನೆಗಳು ಮೌಖಿಕ ರೂಪದಲ್ಲಿದ್ದವು. ಅವು ಪಾಟ್ಟುಸಾಹಿತ್ಯ ಎಂದು ಗುರುತಿಸಲಾಗುವ ಜನಪದ ಸಾಹಿತ್ಯ. ಹದಿನೈದನೆಯ ಶತಮಾನದ ತುಂಜತ್ತೆಳುಚ್ಚನ್ ಕವಿಯನ್ನು ಮಲಯಾಳಂ ಭಾಷೆಯ ಆಧುನಿಕ ಕವಿ ಎಂದು ಕರೆಯಲಾಗುತ್ತದೆ. ಈತ ಮಲಯಾಳಂ ಭಾಷೆಯ ಜೊತೆಗೆ ಹಿತಮಿತವಾಗಿ ಸಂಸ್ಕೃತವನ್ನು ಬೆರೆಸಿ ಬರೆದ. ಅದಕ್ಕೂ ಪೂರ್ವದಲ್ಲಿ ತಮಿಳು ಭಾಷೆಯ ದಟ್ಟವಾದ ಪ್ರಭಾವದಲ್ಲಿ ಬೆಳೆದ ಮಲಯಾಳಂ ಭಾಷೆಯೇ ಬರೆವಣಿಗೆಯಲ್ಲಿತ್ತು. ಈ ಶತಮಾನದ ಆರಂಭದಲ್ಲಿ ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆಗಳ ಹಿನ್ನೆಲೆಯಲ್ಲಿ ಗದ್ಯ ಸಾಹಿತ್ಯ ಬೆಳೆಯಿತು. ಅವುಗಳಲ್ಲಿ ಪ್ರಮುಖವಾದ ಪ್ರಕಾರ ಸಣ್ಣಕತೆ. ಇದಕ್ಕೆ ನೂರು ವರ್ಷಗಳ ಸುದೀರ್ಘ ಇತಿಹಾಸವಿದೆ.

ಕಾರೂರು ನೀಲಕಂಠಪಿಳ್ಳೆ, ತಗಳಿ ಶಿವಶಂಕರಪಿಳ್ಳೆ, ಎಸ್.ಕೆ. ಪೊಟ್ಟಕಾಡ್, ವೈಕಂ ಮುಹಮ್ಮದ್ ಬಷೀರ್ ಮೊದಲಾದ ಹಿರಿಯರು ಮಲಯಾಳಂ ಕಥಾಕ್ಷೇತ್ರಕ್ಕೆ ಸುಭದ್ರವಾದ ನೆಲೆಗಟ್ಟೊಂದನ್ನು ಒದಗಿಸಿದ್ದಾರೆ. ಸಾಮಾಜಿಕ ನೆಲೆಯಿಂದ ಹೊರಡುವ ಇವರ ಕತೆಗಳು ಸಮಾಜ ಕೇಂದ್ರಿತವಾಗಿಯೇ ಹುಟ್ಟಿ ವಿಸ್ತಾರಗೊಳ್ಳುತ್ತದೆ. ಈ ಪರಂಪರೆಗೆ ಹೊಸ ತಿರುವೊಂದನ್ನು ಕೊಡುವುದರ ಮೂಲಕ ಎಂ.ಟಿ.ವಾಸುದೇವನ್ ನಾಯರ್ ಮಲಯಾಳಂ ಸಾಹಿತ್ಯ ಕ್ಷೇತ್ರದಲ್ಲಿ ಮುಖ್ಯರಾಗಿದ್ದಾರೆ.

ಎಂ.ಟಿ.ವಿ.ಸಾಹಿತ್ಯ: ಆಧುನಿಕತೆಯ ಹೊಸ ಜೀವನ

ಪ್ರಾದೇಶಿಕ ಭಾಷೆ, ವಿಷಯಗಳ ಹಿನ್ನೆಲೆಯಲ್ಲಿ ಕತೆ ಬರೆದವರಿದ್ದಾರೆ. ಸಮಾಜವನ್ನೇ ಕೇಂದ್ರೀಕರಿಸಿ ಬರೆದ ಬರೆಹಗಾರರಿದ್ದಾರೆ. ನಾಡುನುಡಿಗಳ ಪ್ರೇಮವನ್ನು ಕುರಿತು ಬರೆಯುವವರೂ ಇದ್ದಾರೆ. ಈ ಎಲ್ಲಾ ಸಮಕಾಲೀನ ಲೇಖಕರ ನಡುವೆ ಎಂ.ಟಿ.ಯವರದು ಭಿನ್ನವಾದ ಮಾರ್ಗ. ರೂಢಿಯ ಆಚರಣೆಗಳು, ನಂಬಿಕೆಗಳು, ವಿಧಿನಿಷೇಧಗಳು, ಅವುಗಳ ಹಿಂದಿನ ಜೀವನ ದರ್ಶನಗಳು, ಧಾರ್ಮಿಕ ಭಾವನೆಗಳ ಹಿಂದಿರುವ ಮಾನವೀಯ ನಂಬಿಕೆಗಳು ಆಸಕ್ತಿಯ ಕ್ಷೇತ್ರಗಳಾಗಿ ಇವರ ಕೃತಿಗಳಲ್ಲಿ ದಾಖಲಾಗಿವೆ. ಮನುಷ್ಯ ಮನಸ್ಸಿನ ಆಳದಲ್ಲಿ ಹೆಪ್ಪುಗಟ್ಟಿದ ಭಾವನೆಗಳಿಗೆ ಅಭಿವ್ಯಕ್ತಿ ನೀಡುತ್ತಾ ಸಮೂಹದಲ್ಲಿ ತನ್ನ ಅಸ್ತಿತ್ವವನ್ನು ಸ್ಥಿರಗೊಳಿಸಲು ಹೆಣಗಾಡುವ ವ್ಯಕ್ತಿಗಳನ್ನು ಕುರಿತು ಬರೆದಿದ್ದಾರೆ. ಸಾಹಿತ್ಯವನ್ನು ವ್ಯಕ್ತಿನಿಷ್ಠ ನೆಲೆಯಿಂದ ಪರಿಭಾವಿಸುತ್ತ ದಾಖಲಿಸುವ ಸಂಪ್ರದಾಯವನ್ನು ಮಲಯಾಳಂನಲ್ಲಿ ಸೃಜನಶೀಲವಾಗಿ ಅರ್ಥಪೂರ್ಣಗೊಳಿಸಿದವರಲ್ಲಿ ಎಂ.ಟಿ.ವಿ. ಮೊದಲಿಗರು. ಈ ತೆರನ ಬರವಣಿಗೆಯಿಂದ ಮಲಯಾಳಂ ಕಥಾಸಾಹಿತ್ಯ ರೂಢಿಸಿಕೊಂಡಿದ್ದ ಸಂಕೇತ, ಭಾಷೆ, ಆಶಯಗಳಿಗೆ ಆಧುನಿಕತೆಯ ಹೊಸ ಮೆರುಗು ಬಂತು. ಸಮಕಾಲೀನ ಇತರ ಪ್ರಬುದ್ಧ ಕತೆಗಾರರ ನಡುವೆಯೂ ಭಾಷಿಕವಾಗಿ, ಕಲಾತ್ಮಕವಾಗಿ, ವ್ಯತ್ಯಸ್ಥವಾದ ಬರೆವಣಿಗೆಯ ಮೂಲಕ ಎಂ.ಟಿ. ವಾಸುದೇವನ್ ನಾಯರ್ ಸಾಹಿತ್ಯಕ್ಷೇತ್ರದ ಕೇಂದ್ರ ಬಿಂದುವಾದರು. ಬಹುಮುಖ ಆಸಕ್ತಿಯ ಇವರು ಬಹುಮಾಧ್ಯಮಗಳ ಮೂಲಕ ಮಲಯಾಳಂ ಜನ ಸಂಸ್ಕೃತಿಯ ಆಳ ವಿಸ್ತಾರಗಳನ್ನು ಸಹೃದಯ ಲೋಕಕ್ಕೆ ನೀಡಿದ್ದಾರೆ.

ಎಂ.ಟಿ.ವಾಸುದೇವನ್ ನಾಯರ್ ಅವರ ಕತೆಗಳು ವ್ಯಕ್ತಿ ಕೇಂದ್ರಿತ ನೆಲೆಯಲ್ಲಿ ಹುಟ್ಟಿ ಮನಸ್ಸಿನ ಆಳಕ್ಕೆ ಧುಮುಕಿ ಅಲ್ಲಿಯ ನೋವು ನಿರಾಸೆಗಳ ಅಲೆಗಳನ್ನು ದಾಖಲಿಸುತ್ತವೆ. ಸುತ್ತಲಿನ ಪರಿಸರದಿಂದ ಉಂಟಾದ ಅನಾಥಪ್ರಜ್ಞೆ ಅದರಿಂದುಂಟಾದ ಅಸಹಾಯಕತೆಯ ನೋವಿನ ಕತೆಗಳನ್ನು ಎಂ.ಟಿ.ವಾಸುದೇವನ್ ನಾಯರ್ ಬರೆದರು. ಈ ಮೂಲಕ ಮಲಯಾಳಂ ಸಾಹಿತ್ಯದಲ್ಲಿ ಪರಿವರ್ತನೆಗೆ ನಾಂದಿ ಹಾಡಿದ ಬರೆಹಗಾರರಿವರು. ಪುರಾತನವಾದ, ಪರಂಪರಾಗತವಾದ ಸಾಹಿತ್ಯ, ಸಂಕೇತಗಳಿಂದ ಮುಕ್ತಗೊಳಿಸಿ ಮಲಯಾಳಂ ಸಾಹಿತ್ಯಕ್ಕೆ ಆಧುನಿಕತೆಯ ಹೊಸಜೀವ ತುಂಬಿಕೊಟ್ಟರು.

ಎಂ.ಟಿ.ವಾಸುದೇವನ್ ನಾಯರ್‌ರ ಸಮಕಾಲೀನವಾದ ಅನೇಕ ಕತೆಗಾರರು ಮಲಯಾಳಂ ಭಾಷೆಯಲ್ಲಿ ಬರೆಯುತ್ತಿದ್ದಾರೆ. ವ್ಯಕ್ತಿನಿಷ್ಠ ಕತೆಗಳನ್ನು ಓದುಗರ ದೃಷ್ಟಿಕೋನದಿಂದ ಬರೆದ ಮೊದಲ ಕತೆಗಾರ ಟಿ.ಪದ್ಮನಾಭನ್, ವ್ಯಕ್ತಿಯ ಆಂತರಿಕ ಸಮಸ್ಯೆಗಳಿಗೆ ವೈಚಾರಿಕ ನೆಲೆಗಳನ್ನೊದಗಿಸುವುದು ಪದ್ಮನಾಭನ್ ಅವರ ಬರೆವಣಿಗೆಯಲ್ಲಿ ಕಾಣಬಹುದು. ಎಂ.ಟಿ.ಇವುಗಳನ್ನು ಮಾನವೀಯ ನೆಲೆಯಲ್ಲಿ ಶೋಧಿಸುತ್ತಾರೆ. ಪದ್ಮನಾಭನ್‌ಗೆ ಬೌದ್ಧಿಕ ಕಲೆಯಾದ ಭಾಷೆ ಎಂ.ಟಿ.ಯವರಿಗೆ ಹೃದಯದ ಕಲೆಯಾಗಿದೆ. ಮಾಧವಿಕುಟ್ಟಿ ತಮ್ಮ ಕತೆಗಳಲ್ಲಿ ಹೆಣ್ಣುಗಂಡಿನ ಸಂಬಂಧಗಳ ಕಗ್ಗಂಟುಗಳನ್ನು ಬಿಡಿಸುವಲ್ಲಿ ಹೆಚ್ಚಿನ ಆಸಕ್ತಿವಹಿಸಿದಂತಿದೆ. ಆದರೆ ಎಂ.ಟಿ.ವಿ. ಅವರ ಮನದಾಳಕ್ಕಿಳಿದು ಭಾವನೆಗಳನ್ನು ಹೊರತೆಗೆಯುತ್ತಾರೆ.

ಕೇರಳದ ಸಮಾಜ ಮತ್ತು ಸಂಸ್ಕೃತಿ

ಕೇರಳದ ಸಮಾಜದಲ್ಲಿ ನಾಯರ್ ಜನಾಂಗ ಪ್ರಮುಖವಾದುದು. ನಾಯರ್ ಯುದ್ಧವೀರರು. ನಾಡು-ನುಡಿಗಳ ಸಂರಕ್ಷಣೆಗಾಗಿ ಪ್ರಾಣವನ್ನೆ ಪಣವಿಟ್ಟು ಹೋರಾಡಬಲ್ಲ ಕೆಚ್ಚೆದೆಯ ಬಂಟರು. ಈ ಕಾರಣಕ್ಕಾಗಿ ಸಮಾಜದಲ್ಲಿ ಅವರಿಗೆ ಉನ್ನತವಾದ ಸ್ಥಾನಮಾನಗಳು ಲಭ್ಯವಾಗಿದ್ದವು. ಕೇರಳದ ನಂಬೂದಿರಿ ಬ್ರಾಹ್ಮಣರು ಇವರ ಹೆಣ್ಣುಮಕ್ಕಳನ್ನು ಮದುವೆಯಾಗುವುದರ ಮೂಲಕ ಸಂಬಂಧ ಬೆಳೆಸಿಕೊಂಡರು. ನಾಯರ್ ಜನಾಂಗದ ಮೂಲಕ ಆಸ್ತಿಯಲ್ಲಿ ಹೆಣ್ಣು ಮಕ್ಕಳ ಮೂಲಕ ಹಕ್ಕನ್ನು ಪಡೆದರು. ಇದರಿಂದ ಕೇರಳದಲ್ಲಿ ಅಳಿಯ ಸಂತಾನ ಪ್ರಬಲವಾಯಿತು. ನಾಯರ್ ಜನಾಂಗಗಳವರು ಜಮೀನ್ದಾರರಾಗಿದ್ದು ತರವಾಡಿನ(ಅಳಿಯಕಟ್ಟು ಚಾಲ್ತಿಯಲ್ಲಿರುವ ಅವಿಭಕ್ತ ಕುಟುಂಬದ ಮೂಲ ಮನೆ) ಮನೆಗಳಲ್ಲಿ ಅವಿಭಕ್ತಿ ಕುಟುಂಬಗಳಾಗಿ ವಾಸ ಮಾಡುತ್ತಿದ್ದರು. ಅತ್ತೆ, ಮಾವ, ಅಜ್ಜಿ ಅವರ ಸಹೋದರ ಸಹೋದರಿಯರು ಅಳಿಯಂದಿರು, ಹೀಗೆ ಮನೆಯಲ್ಲಿ ಏಳೆಂಟು ಕುಟುಂಬಗಳೇ ಇರುತ್ತಿದ್ದವು. ಮನೆಯ ಯಜಮಾನ ತನ್ನ ದರ್ಪ, ದೌಲತ್ತುಗಳಿಂದ ಉಳಿದವರನ್ನು ನಡೆಸಿಕೊಳ್ಳುತ್ತಿದ್ದ. ಉಳಿದವರು ಅವರ ಅಡಿಯಾಳಾಗಿ ಬಾಳುತ್ತಿದ್ದರು. ಇಂತಹ ತರವಾಡು ಮನೆಗಳಲ್ಲಿ ಹಕ್ಕುದಾರನಾಗಿ ಬಂದ ಯಜಮಾನನಾದ ಅಳಿಯನದೇ ಕೊನೆಯ ಮಾತು. ಒಂದು ಹುಲ್ಲು ಕಡ್ಡಿಯ ಅಲುಗಾಟಕ್ಕೂ ಅವನ ಅನುಮತಿ ಬೇಕು. ಮನೆಯ ಹೆಣ್ಣುಮಕ್ಕಳನ್ನು ವೃದ್ಧರಾದ ನಂಬೂದಿರಿ ಬ್ರಾಹ್ಮಣನಿಗೆ ಮದುವೆ ಮಾಡಿ ಕೊಡುವಾಗಲೂ ಯಾರೂ ತುಟಿಪಿಟಿಕ್ಕೆನ್ನುವಂತಿಲ್ಲ. ಅದು ಸಂಪ್ರದಾಯ. ಇಂತಹ ಕಟ್ಟಾ ಸಾಂಪ್ರದಾಯಿಕ ಬದುಕಿನ ಹಿಂದಿನ ಅನೇಕ ಮಾನವ ಜೀವಿಗಳ ನೋವು ನಲಿವುಗಳಿವೆ, ಬಡತನ ದಾರಿದ್ರ್ಯಗಳಿವೆ. ಎಂ.ಟಿ.ಯವರ ಕೃತಿಗಳ ಮುಖ್ಯ ಕೇಂದ್ರ ಇಂತಹ ತರವಾಡು ಮನೆಗಳು, ಅಲ್ಲಿಯ ನಡಾವಳಿಗಳು. ತರವಾಡು ಮನೆಗಳ ಕಾರಣವರ ದರ್ಪದೌಲತ್ತುಗಳ ನಡುವೆ ನಲುಗಿ ನೋವುಂಡು ಬದುಕಿ ಬಾಳಿದ ಅನೇಕ ಮಾನವಜೀವಿಗಳನ್ನು ತಮ್ಮ ಬರೆಹಗಳಲ್ಲಿ ಎಂ.ಟಿ. ಸೃಷ್ಟಿಸಿದ್ದಾರೆ. ಸಾಂಪ್ರದಾಯಿಕ ತರವಾಡು ಮನೆಗಳ ಬದುಕಿನ ನಿಗೂಢ ಲೋಕವೊಂದು ಇವರ ಕಥಾಸಾಹಿತ್ಯದ ಮೂಲಕ ಅನಾವರಣಗೊಂಡಿದೆ. ಕೇರಳದ ಸಾಂಪ್ರದಾಯಿಕ ಬದುಕು ಈ ತರವಾಡು ಮನೆಗಳಲ್ಲಿ ಹೆಪ್ಪುಗಟ್ಟಿದ್ದು ಅವು ಹೊಸ ತಲೆಮಾರುಗಳ ಆಸೆ ಆಕಾಂಕ್ಷೆಗಳನ್ನು ನಿರ್ಲಕ್ಷಿಸುವ ಕ್ರೌರ್ಯವನ್ನು ಪ್ರಕಟಿಸುತ್ತಿದ್ದವು. ಇದರಿಂದಾಗಿ ತಲೆಮಾರುಗಳು ಕಳೆದಂತೆ ಅವುಗಳ ಒಳರಚನೆಗಳಲ್ಲಿ ಮಾನವೀಯ ಸಂಬಂಧಗಳು ಮೀರಿ ನಿಂತು ಕ್ರೌರ್ಯಗಳೇ ವಿಜೃಂಭಿಸುತ್ತಿದ್ದವು. ಇದರಿಂದಾಗಿ, ಅನೇಕ ಮಾನವೀಯ ಸಂಬಂಧಗಳು ಅರ್ಥಹೀನವೆನಿಸಿದವು. ತಾಯಿ ಮಕ್ಕಳ ಸಂಬಂಧ, ಆಹಾರ ಮತ್ತು ಹಸಿವಿನ ಸಂಬಂಧ, ಮನೆಯ ಯಜಮಾನ ಮತ್ತು ಕುಟುಂಬದ ಸಂಬಂಧ, ಮನೆ ಮತ್ತು ಮನಸ್ಸಿನ ಸಂಬಂಧ ಇವೆಲ್ಲ ಮಾನವೀಯತೆ ಬತ್ತಿಹೋದ ಬರಡು ಬಂಧಗಳಾಗಿಯೇ ಮುಂದು ವರಿಯುವ ಅನಾಥಸ್ಥಿತಿ ತರವಾಡು ವಾಸಿಗಳದಾಗಿತ್ತು. ಈ ಬರಡು ಬಾಂಧವ್ಯಗಳೇ ಇಡೀ ತರವಾಡು ಮನೆಗಳ ಅಧಃಪತನಕ್ಕೆ ಕಾರಣವಾಗುತ್ತಿರುವುದು ಎಂ.ಟಿ.ಯವರ ಕಥಾಸಾಹಿತ್ಯದಲ್ಲಿ ಢಾಳಾಗಿಯೇ ದಾಖಲಾಗಿದೆ.

ತರವಾಡು ಮನೆಗಳಲ್ಲಿ ತಿರಸ್ಕಾರಕ್ಕೊಳಗಾದ, ತುಳಿತಕ್ಕೊಳಗಾದ ಅನೇಕ ಮಾನವ ಜೀವಿಗಳು ಒಂಟಿತನದ ಅನಾಥ ಬದುಕನ್ನು ಬದುಕಿವೆ. ಅಲ್ಲಿಯ ದಟ್ಟ ಸಾಂಪ್ರದಾಯಿಕ ಬದುಕಿಗೆ ತಮ್ಮನ್ನು ಅನಿವಾರ್ಯವಾಗಿ ಒಗ್ಗಿಸಿಕೊಂಡಿವೆ. ಅನೇಕ ಜೀವಿಗಳು ಸಿಡಿದು ನಿಂತು ಪ್ರತಿಭಟಿಸಿವೆ. ಅದಕ್ಕಾಗಿ ತನ್ನ ಬದುಕಿನ ಅಮೂಲ್ಯ ಕ್ಷಣಗಳನ್ನು ವ್ಯರ್ಥಗೊಳಿಸಿವೆ. ಬದುಕಿನುದ್ದಕ್ಕೂ ಅನಾಥ ಸ್ಥಿತಿಯನ್ನು ಅನುಭವಿಸಿ ಹತಾಶವಾಗಿ ಬಾಳಿವೆ ಎಂಬುದನ್ನು ಎಂ.ಟಿ. ಕತೆಗಳು ಪ್ರಕಟಪಡಿಸುತ್ತವೆ. ತರವಾಡು ಮನೆಗಳದು ಮುಖವಾಡಗಳ ನಿಗೂಢ ಜಗತ್ತು. ಇಲ್ಲಿ ಶ್ರೀಮಂತಿಕೆಯ ಸೋಗು ಇದೆಯಾದರೂ ಹಸಿವೆಯಿಂದ ಬಳಲುವ ಜೀವಿಗಳಿವೆ. ಸಾಂಪ್ರದಾಯಿಕ ನಡೆನುಡಿಗಳನ್ನು ಗೌರವಿಸುವ ತೋರಿಕೆಯಿದೆ ಯಾದರೂ ಅದು ಕೃತಕ ಆಚಾರಗಳಾಗಿ ಮುಂದುವರಿಯುವ ವಿಸ್ಮಯ ಸನ್ನಿವೇಶಗಳಿವೆ. ತಾಯಿಯ ಮೂಲಕ ಆಸ್ತಿಗೆ ಹಕ್ಕುದಾರನಾಗುವ ಸ್ತ್ರೀಪರ ನಿಲುವಿದ್ದರೂ ಆಡಳಿತದ ಸಂಪೂರ್ಣ ನಿಯಂತ್ರಣವಿರುವುದು ಕಾರಣವೆನಿಸಿದ ಅಳಿಯನ ಕೈಯಲ್ಲಿ. ಅಳಿಯನೇ ಯಜಮಾನನಾಗಿ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡರೂ ಅಡುಗೆ ಮನೆಯ ಒಲೆಯಲ್ಲಿ ಬೆಂಕಿ ಉರಿಯಬೇಕಾದರೆ ಮನೆಯ ಹೆಂಗಸರು ಸಾಲ ಸೋಲಗಳಿಗಾಗಿ ಪಡುವ ಪಾಡು ಮರ್ಮಭೇದಕವೆನಿಸುತ್ತದೆ.

ಪ್ರತಿಭಟನೆ

ಈ ಶತಮಾನದ ಆರಂಭದಲ್ಲಿ ಶಿಕ್ಷಣ ಪಡೆದು ಶೋಷಣೆಯ ಅರಿವಾದಾಗ ಅನೇಕ ಯುವಕರು ಸಾಂಪ್ರದಾಯಕ ಬದುಕಿಗೆ ತಿರುಗಿ ಬಿದ್ದಿದ್ದಾರೆ. ತಮ್ಮ ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದಾರೆ. ವಯಸ್ಕ ನಂಬೂದಿರಿಯನ್ನು ಮದುವೆಯಾಗಲೊಪ್ಪದ ಹೆಣ್ಣುಮಕ್ಕಳು ಬಯಸಿದವನ ಜೊತೆ ಸಂಸಾರ ಹೂಡಿದ್ದಾರೆ. ಮನೆಯ ಹಿರಿಯರನ್ನು ಎದುರು ಹಾಕಿಕೊಂಡು ಹಠದ ಬದುಕು ನಡೆಸಿದ್ದಾರೆ. ಇದರಿಂದೆಲ್ಲ ತರವಾಡು ಮನೆಗಳು ಹರಿದು ಹಂಚಿ ಹೋಗಿವೆ. ಸಾಂಪ್ರದಾಯಕ ಕೌಟುಂಬಿಕ ವ್ಯವಸ್ಥೆಯೊಂದು ಛಿದ್ರವಾಗಿದೆ. ಇಂತಹ ಅನೇಕ ವಿವರಗಳ ಮೂಲಕವೇ ಎಂ.ಟಿ. ತಮ್ಮ ಕತೆಗಳಿಗೆ, ಕಾದಂಬರಿಗಳಿಗೆ ಜೀವ ತುಂಬಿದ್ದಾರೆ. ಆಧುನಿಕತೆಯ ಪ್ರವೇಶದಿಂದ ಪರಿವರ್ತನೆಯ ಸಂಕ್ರಮಣದಲ್ಲಿ ಸಂಘರ್ಷಗಳು ಏರ್ಪಟ್ಟಿವೆ. ’ಚೌಕಟ್ಟಿನ ಮನೆ’, ’ಕಾಲ’ ಕಾದಂಬರಿಗಳಲ್ಲಿ ಇಂತಹ ಅನೇಕ ಸೂಕ್ಷ್ಮ ವಿವರಗಳ ಮೂಲಕ ತರವಾಡು ಮನೆಯ ದುಃಸ್ಥಿತಿಯನ್ನು ಚಿತ್ರಿಸಿದ್ದಾರೆ. ಅಲ್ಲಿಯ ಅನೇಕ ಮಾನವೀಯ ವ್ಯಕ್ತಿತ್ವಗಳಿಗೆ ರಕ್ತ ಮಾಂಸಗಳನ್ನು ತುಂಬಿ ಓದುಗರ ಮುಂದೆ ಕಡೆದಿರಿಸಿದ್ದಾರೆ. ಇವರ ಅನೇಕ ಕಥೆಗಳು, ಕಾದಂಬರಿಗಳು ಇದನ್ನು ಪ್ರಮುಖ ಆಶಯವಾಗಿರಿಸಿಕೊಂಡಿವೆ.

ಅನಾಥ ಪ್ರಜ್ಞೆ

ಕೌಟುಂಬಿಕ ವ್ಯವಸ್ಥೆ ವಿಘಟನೆಯಾದಾಗ ಅನೇಕ ಮಾನವೀಯ ಸಂಬಂಧಗಳು ಕಡಿದು ಹೋದವು. ಜಗಳ, ನ್ಯಾಯ, ನಿಷ್ಠುರ ಇತ್ಯಾದಿಗಳಿಂದಾಗಿ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಪ್ರೀತಿ ಬತ್ತಿ ಹೋಯಿತು. ಸ್ವಾತಂತ್ರ್ಯ ನಂತರದ ಹುಸಿ ಭರವಸೆಗಳಿಂದ ನಿರಾಸೆ, ಅಸಹಾಯಕತೆ, ಬದುಕಿನಲ್ಲಿ ತಲೆಹಾಕಿದವು. ತನ್ನವರಿಂದ ಅವಗಣನೆ, ಬಡವರ ತಿರಸ್ಕಾರ ಇವುಗಳಿಂದೆಲ್ಲ ದೂರಾಗಿ ಹೋಟೆಲುಗಳಲ್ಲೋ, ನಗರಗಳಲ್ಲೋ ವ್ಯಕ್ತಿತ್ವ ರೂಪಿಸಿಕೊಳ್ಳಲು ಹೆಣಗಾಡುವ ಅನೇಕ ಯುವಕರಿದ್ದಾರೆ. ನಿರಾಸೆ, ಅಸಹಾಯಕತೆ, ಏಕಾಕಿತನ, ಅನಾಥಪ್ರಜ್ಞೆ ಇವರ ಬದುಕಿನ ಸಂಗತಿಗಳು. ಇಂತಹ ಅನೇಕ ಮನಸ್ಸುಗಳ ಆಳವನ್ನು ಎಂ.ಟಿ. ತಮ್ಮ ಕತೆಗಳ ಮೂಲಕ ಕೆದಕಿದ್ದಾರೆ. ಬಡತನದಿಂದಾದ ಅಸಹಾಯಕತೆ, ಪ್ರೀತಿಸಿ ವಂಚನೆಗೊಳಗಾದವರ ಹತಾಶ ಭಾವನೆ, ಅವಮಾನಿತ ಮನಸ್ಸಿನ ಸೇಡು ಇವುಗಳಿಂದಲೆಲ್ಲ ಅನೇಕ ವ್ಯಕ್ತಿಗಳು ತಮ್ಮ ಬದುಕನ್ನು ನಿರರ್ಥಕಗೊಳಿಸಿದ್ದಾರೆ. ಆಧುನಿಕ ಸಾಮಾಜಿಕ ಪರಿಸರದಲ್ಲಿ ಇಂತಹ ಬೇನೆ ಬೇಗುದಿಗಳಿಗೆ ಒಳಗಾದ ಅನೇಕ ಯುವಕ ಯುವತಿಯರಿದ್ದಾರೆ. ವಾಸುದೇವನ್ ನಾಯರ್ ಕತೆ, ಕಾದಂಬರಿಗಳಲ್ಲಿ ಇವರು ಮರುಹುಟ್ಟು ಪಡೆದಿದ್ದಾರೆ.

ನಾಸ್ಟಾಲ್ಜಿಯಾ

ಎಂ.ಟಿ.ಯವರ ಸಣ್ಣಕತೆಗಳು ಒಂದಲ್ಲ ಒಂದು ರೀತಿಯಲ್ಲಿ ಓದುಗನ ಹೃದಯವನ್ನು ತಟ್ಟುತ್ತವೆ. ಅದಕ್ಕಿರಬಹುದಾದ ಕಾರಣಗಳನ್ನು ಎಂ.ಟಿ.ಯವರ ಬರವಣಿಗೆಯ ವೈಶಿಷ್ಟ್ಯವೆಂದೇ ಗುರುತಿಸಬೇಕು. ಎಂ.ಟಿ.ಯವರು ಸೃಷ್ಟಿಸುವ ಕಥಾಪಾತ್ರಗಳು ಬಾಲ್ಯದ ಅನೇಕ ನೆನಪುಗಳೊಂದಿಗೆ ಸಂವಾದ ನಡೆಸುತ್ತಾ ಬೆಳೆಯುತ್ತವೆ. ಗತಕಾಲದ ನೆನಪುಗಳನ್ನು ಅತ್ಯಂತ ಸೂಕ್ಷ್ಮಮನಸ್ಸಿನಿಂದ ಅಚ್ಚಳಿಯದಂತೆ ನಿರೂಪಿಸುವುದು ಎಂ.ಟಿ.ಯವರ ವೈಶಿಷ್ಟ್ಯಗಳಲ್ಲೊಂದು. ಪುಟ್ಟಮಕ್ಕಳ ಮುಗ್ಧಲೋಕವನ್ನು ಅನುಭವ ತೀವ್ರತೆಯ ನಡುವೆಯೂ ವಾಸ್ತವವಾಗಿ ಚಿತ್ರಿಸುವುದನ್ನು ಇವರ ಕತೆಗಳಲ್ಲಿ ಕಾಣಬಹುದು. ಆ ಸೂಕ್ಷ್ಮಮನಸ್ಸಿನ ನಡುವೆ ಬಾಲ್ಯದ ದಿನಗಳನ್ನು ಆವಾಹಿಸಿ ಭಾಷೆಯಲ್ಲಿ ಕಡೆದು ನಿಲ್ಲಿಸುವ ರೀತಿ ಎಂ.ಟಿ.ಯವರಿಗೇ ಅನನ್ಯವಾದುದು. ಹಳೆಯ ನೆನಪುಗಳು ಘಟನೆಯ ಪ್ರಾಮುಖ್ಯತೆಗಾಗಿ ಅಳಿಯದೆ ಉಳಿದಿರಬಹುದಾದ ಸಂದರ್ಭಗಳು ಒಮ್ಮೆ. ಇನ್ನೊಮ್ಮೆ ನೆನಪುಗಳು ನಿರಂತರವಾಗಿ ಬದುಕಿನಲ್ಲಿ ಬೆಂಬತ್ತಿಕೊಂಡೇ ಬದುಕನ್ನು ರೂಪಿಸುವ ಕಾರಣಕ್ಕಾಗಿಯೂ ಬರುತ್ತಿರುತ್ತವೆ.

ಮೊದಲನೆಯದಕ್ಕೆ ’ತಪ್ಪು ಒಪ್ಪು ಕತೆಯನ್ನು ಉದಾಹರಿಸಬಹುದು. ಅಧ್ಯಾಪಕನಿಗೆ ಅವಮಾನ ಮಾಡಲೆಂದೇ ಹೊಂಚುಹಾಕುತ್ತಿದ್ದ ತುಂಟಾಟದ ದಿನಗಳಲ್ಲಿ ನಡೆದ ಘಟನೆಯೊಂದು ಕಥಾನಾಯಕನ ಮನಸ್ಸಿನಲ್ಲಿ ಮರುಕಳಿಸಿ ದಾಖಲಾಗುತ್ತದೆ. ಹೈಸ್ಕೂಲಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಕೃಷ್ಣನ್ ಮೇಷ್ಟ್ರಿಗೆ ಮಾಡಿದ ಅವಮಾನ, ಅದರಿಂದ ಮನನೊಂದು ಕ್ಷಮೆಕೇಳಲು ಮುಂದಾದ ಅವಕಾಶ ದೊರೆಯದ್ದರಿಂದ ಪಶ್ಚಾತ್ತಾಪಪಟ್ಟ ಘಟನೆಯೊಂದು ಎಷ್ಟೋ ವರ್ಷಗಳ ಬಳಿಕ ಕೃಷ್ಣನ್ ಮೇಷ್ಟ್ರ ಭೇಟಿಯಲ್ಲಿ ಮರುಕಳಿಸುತ್ತದೆ. ಇದು ಬಾಲ್ಯದ ಘಟನೆಯಾಗಿ ಪ್ರಾಮುಖ್ಯತೆ ಪಡೆಯುತ್ತಿದೆಯೆ ಹೊರತಾಗಿ ಇಡೀ ಘಟನೆ ಕಥಾನಾಯಕನ ಬೆಂಬಿಡದೆ ನೆನಪಾಗಿ ಕಾಡುವುದಿಲ್ಲ. ಇದಕ್ಕಿಂತ ಭಿನ್ನವಾದ ಕಥೆ ’ಪಟಾಕಿ’.

ಎರಡನೆಯದಕ್ಕೆ ’ಪಟಾಕಿ ಕತೆಯನ್ನು ನಿದರ್ಶನವಾಗಿ ತೆಗೆದುಕೊಳ್ಳಬಹುದು. ಇಲ್ಲಿಯ ಕಥಾನಾಯಕ ವಿಷುವಿನ ವೇಳೆ ಪಟಾಕಿ ಸಿಡಿಸುವ ಶಬ್ದವನ್ನು ಕೇಳಿಸಿಕೊಂಡಾಗ ಬಾಲ್ಯದಲ್ಲಿ ತಾನು ಪಟಾಕಿ ಖರೀದಿಸಲು ಭಗವತಿಯ ಹಣ ಕದ್ದುದನ್ನು ನೆನಪಿಸಿಕೊಳ್ಳುತ್ತಾನೆ. ಅಂದು ಆತ ಬದುಕಿದ್ದ ಬಾಲ್ಯದ ದಿನಗಳಲ್ಲಿ ಭಗವತಿಯ ಭಯವೇ ಕಾರಣವಾಗಿ ಇಡೀ ಘಟನೆ ಬಾಲ್ಯದಲ್ಲಿ ಕೆರಳಿಸಿದ ಭಾವನೆಗಳನ್ನು, ಭಯವನ್ನು ಕುರಿತ ಮುಗ್ಧ ನಿರೂಪಣೆಯಾಗಿ ಕತೆ ದಾಖಲಾಗಿದೆ. ಕಥಾನಾಯಕ ಪ್ರೌಢನಾದರೂ ಬಾಲ್ಯದ ದಿನಗಳಲ್ಲಿ ಬಡತನದಿಂದಾಗಿ ಪಟಾಕಿಗಾಗಿ ಹಪಹಪಿಸಿದ ಬಾಲ್ಯದ ನೆನಪು, ಬಡತನವೇ ಕಾರಣವಾಗಿ ಇವರಿಂದ ಅವಗಣನೆಗೆ ಅವಮಾನಕ್ಕೆ ಗುರಿಯಾದ ಆ ಸನ್ನಿವೇಶ ಕಥಾನಾಯಕನ ಮನಸ್ಸಿನಲ್ಲಿ ಅಚ್ಚಳಿಯದ ನೆನಪು. ಎಂ.ಟಿ. ನಿರೂಪಿಸುವ ವಿಧಾನವೂ ಅಷ್ಟೇ ಆತ್ಮೀಯ.

ಹಸಿವು

ಬಾಲ್ಯದ ನೆನಪುಗಳಲ್ಲಿ ಅತ್ಯಂತ ಜೀವಂತವಾಗಿ ಮತ್ತೆ ಮತ್ತೆ ಮರುಕಳಿಸುವ ಚಿತ್ರಣ ಹಸಿವಿನದು. ಎಂ.ಟಿ.ಯ ಅನೇಕ ಕಥಾಪಾತ್ರಗಳು ಬಾಲ್ಯದಲ್ಲಿ ಹಸಿವೆಯಿಂದ ತತ್ತರಿಸಿದವುಗಳು. ಹಸಿವು ಮನುಷ್ಯನ ಮೂಲಭೂತ ಸಮಸ್ಯೆಗಳಲ್ಲೊಂದು. ಅದರಲ್ಲೂ ಮಕ್ಕಳು ಹಸಿವಿನಿಂದ ನರಳುತ್ತಿರುವ ಸ್ಥಿತಿಗೆ ಕಾರಣವಾದ ವ್ಯವಸ್ಥೆ ಹಾಗೂ ಜನರ ಬಗೆಗೆ ಎಂ.ಟಿ.ಗೆ ರೋಷವಿದೆ. ಬೂದಿ ಮುಚ್ಚಿದ ಕೆಂಡದಂತೆ ಅಲ್ಲಿ ವ್ಯಕ್ತವಾಗುವ ಆ ರೋಷ ಅವರ ಕಥನ ತಂತ್ರದ ಒಂದು ಪ್ರಮುಖ ಭಾಗವಾಗಿಯೇ ಬಂದಿದೆ. ಈ ರೋಷ ಎಂದೂ ವಾಚ್ಯವಾಗದೆ ಇಡೀ ಕತೆಯ ಸನ್ನಿವೇಶವೇ ವ್ಯವಸ್ಥೆಯ ವಿರುದ್ಧ ಧ್ವನಿಯೆತ್ತುವಂತೆ ಎಂ.ಟಿ. ಚಿತ್ರಿಸಬಲ್ಲರು. ’ಕರ್ಕಟಕ’ ಇದಕ್ಕೆ ಉತ್ತಮ ಉದಾಹರಣೆ. ಇಲ್ಲಿಯ ಹುಡುಗ ಹಸಿವಿನಿಂದ ನೊಂದಿದ್ದಾನೆ. ಊಟಕ್ಕಾಗಿ ಕಾತರಿಸುತ್ತಿದ್ದಾನೆ. ಅನ್ನ ಏಕೆ? ಅನ್ನ ಬೇಯುವ ಪರಿಮಳಕ್ಕೆ ಸಂತೋಷಪಡುವಷ್ಟು ಹಸಿವಿನಿಂದ ಕಂಗೆಟ್ಟವನು. ಮಧ್ಯಾಹ್ನ ಹಸಿವೆಯನ್ನು ಹಿಂಗಿಸುವುದಕ್ಕೆ ಬೇಕಾದ ಆಹಾರವಿಲ್ಲದೆ ಹುಡುಗ ಊಟದ ನಿರೀಕ್ಷೆಯಲ್ಲಿ ಹಸಿದು ಮನೆಗೆ ಬಂದರೆ; ಅಲ್ಲೂ ಇಲ್ಲದ್ದನ್ನು ಕಂಡು ಸಿಟ್ಟು ಬರುತ್ತದೆ. ರಾತ್ರಿಯ ಹೊತ್ತಿಗಾದರೂ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾಗ ರಾತ್ರಿಗೊಬ್ಬ ನೆಂಟ ಬಂದು ಅದನ್ನು ಇಲ್ಲವಾಗಿಸಿದ. ಮುಗ್ಧಮಕ್ಕಳ ಹಸಿವೆಯನ್ನು, ಕಾತರವನ್ನು ಸೂಕ್ಷ್ಮ ಮನಸ್ಸಿನಿಂದ ಹಂತ ಹಂತವಾಗಿ ದಾಖಲಿಸುವ ಈ ಕತೆ ಎಂ.ಟಿ.ಯವರ ಅತ್ಯಂತ ಮುಖ್ಯ ಕತೆಗಳಲ್ಲೊಂದು. ಹಸಿವೆಯ ನಡುವೆಯೂ ಮನೆತನದ ಗತ್ತುಗೌರವಗಳನ್ನು ಕಾಪಾಡುವ ಹಂಬಲ ತಾಯಿಯದು. ಈ ಕತೆಯಲ್ಲಿ ಅಂತರ್ಗತವಾದ ಹುಡುಗನ ರೋಷ ಅಡುಗೆ ಮನೆಯಲ್ಲಿ ಕೆಲಸ ನಿರ್ವಹಿಸುವವರ ಮೇಲೆ ಕೇಂದ್ರೀಕೃತವಾಗುತ್ತದೆ. ಬಳಿಕ ಅಡುಗೆ ನಿರ್ವಹಿಸುವವರು ಹೊತ್ತಿನ ತುತ್ತು ಬೇಯಿಸಲು ಪರದಾಡುವ ಪಾಡನ್ನು ಗಮನಿಸಿದಾಗ ಮನೆಯ ಒಡೆತನವನ್ನು ನಿರ್ವಹಿಸುವವರ ಮೇಲೆ ಕೇಂದ್ರೀಕರಣಗೊಳ್ಳುತ್ತದೆ. ಇವರೆಲ್ಲರ ಸ್ಥಿತಿಯನ್ನು ಗಮನಿಸಿದಾಗ ಕ್ಯಾನ್ಸರ್‌ನಂತೆ ಬಾಧಿಸುವ ಬಡತನವು ಸಮಾಜವೊಂದರ ಪಿಡುಗಾಗಿ ದಾಖಲಾಗುತ್ತದೆ. ಅದರಲ್ಲೂ ಕರ್ಕಟಕದ ದಿನಗಳಲ್ಲಿ ಬಡತನ ಮಾನವ ಜೀವಿಗಳನ್ನು ಕಡಿದು ತಿನ್ನುವ ಪರಿಸ್ಥಿತಿ ಸಾಮಾಜಿಕವಾಗಿಯೂ ಪ್ರಾಮುಖ್ಯತೆಯನ್ನು ಪಡೆದುಬಿಡುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ’ಕರ್ಕಟಕ’ ಮಲಯಾಳಂ ಸಾಹಿತ್ಯದಲ್ಲಿಯೇ ಅನನ್ಯವಾದ ಸಣ್ಣಕತೆಯೆನಿಸಿದೆ.

ಇತಿಹಾಸದ ವ್ಯಂಗ್ಯ

ವ್ಯಕ್ತಿ, ಸಮಾಜ ಹಾಗೂ ಕುಟುಂಬದಲ್ಲಿ ಎಲ್ಲರಿಂದಲೂ ಅವಗಣನೆಗೊಳಗಾದಾಗ ಆಗಬಹುದಾದ ಹತಾಶ ಬದುಕಿನ ಕತೆ ’ಇರುಳಿನ ಆತ್ಮ’. ಹುಚ್ಚನಾಗಬೇಕಾಗಿ ಬಂದ ಒಬ್ಬ ಯುವಕನ ಹೃದಯದ ಭಾವನೆಗಳನ್ನು ಈ ಕತೆಯಲ್ಲಿ ಹಿಡಿದಿಡಲಾಗಿದೆ. ಇಲ್ಲಿಯ ವೇಲಾಯುಧ ಹುಚ್ಚನಲ್ಲ. ಮನೆಯ ವಾತಾವರಣ ಅವನನ್ನು ಹುಚ್ಚನನ್ನಾಗಿಸಿದೆ. ಮನೆಯ ಸಂಪೂರ್ಣ ಆಸ್ತಿಗಳಿಗೆ ಹಕ್ಕುದಾರನಾಗಬೇಕಾದ ಹುಡುಗನನ್ನು ಹುಚ್ಚನನ್ನಾಗಿಸಿ ಕೋಣೆಯಲ್ಲಿ ಕೂಡಿಹಾಕಲಾಗಿದೆ. ಹಣ, ಆಸ್ತಿ, ಅಂತಸ್ತುಗಳ ಕಾರಣಗಳಿಗಾಗಿ ಮಾನವೀಯತೆಯನ್ನು ಬಲಿಕೊಟ್ಟು, ಬುದ್ಧಿಮಾಂದ್ಯನಾದ ವೇಲಾಯುಧನನ್ನು ಕಟ್ಟಿ ಹಾಕಲಾಗಿದೆ. ತಾರುಣ್ಯದ ಆಸೆ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಕತ್ತಲೆಯಲ್ಲಿ ಬದುಕುವ ಈ ಮಾನವ ಜೀವಿಯ ಆಕೃತಿಯನ್ನು, ಅಸ್ತಿತ್ವವನ್ನು ಸುತ್ತಲ ಜನ ನಿರಾಕರಿಸಿದ್ದಾರೆ. ಇರುಳೂ ಕಾಣಿಸದು. ಆತ್ಮವೂ ಕಾಣಿಸದು. ಹಾಗೆಯೇ ಇರುಳಿನಲ್ಲಿ ಇರುಳಿನ ಆತ್ಮನಾಗಿರುವ ವೇಲಾಯುಧನ ಯಾವ ಮೊರೆಯು ಹೊರಜಗತ್ತಿಗೆ ಕೇಳಿಸದು. ಸುತ್ತಲ ಜನರ ಆರೋಪಗಳನ್ನು ಸುಳ್ಳಾಗಿಸಿ ಸತ್ಯವನ್ನು ನಂಬಿಸುವಂತೆ ಮಾಡಬೇಕು ಎಂದು ಆತ ಮಾಡುವ ಪ್ರಯತ್ನಗಳೆಲ್ಲ ವಿಫಲವಾಗುತ್ತವೆ. ಮನಸ್ಸಿನ ಏಕಮಾತ್ರ ಆಶಾಕಿರಣವಾಗಿದ್ದ ಅಮ್ಮುಕುಟ್ಟಿ ಸಹ ಅವನನ್ನು ಅರ್ಥೈಸಿಕೊಳ್ಳದೇ ಹೋದಾಗ ವೇಲಾಯುಧ ನಿಜವಾಗಿ ಹುಚ್ಚನಾಗುತ್ತಾನೆ. ಮತ್ತೆ ಇರುಳಿನ ಆತ್ಮವಾಗಿಯೇ ಉಳಿಯುವ ದೃಢ ನಿರ್ಧಾರ ಮಾಡುತ್ತಾನೆ. ಬೆಳೆದು ಹೊಸ ಬದುಕನ್ನು ಬದುಕಬೇಕಾದ ಯುವಕನೊಬ್ಬನನ್ನು ಪರಿಸ್ಥಿತಿಯ ಕೈಗೊಂಬೆಯಾಗಿ ಹುಚ್ಚನನ್ನಾಗಿಸಿದ ಈ ಕತೆಯು ಹೃದಯ ವಿದ್ರಾವಕವೆನಿಸಿದೆ.

ಚಿತ್ತಭ್ರಮಣೆಗೊಳಗಾದ ವೇಲಾಯುಧನು ಕಾವಲುಗಾರರ ಕಣ್ಮರೆಸಿ ಎರಡು ಬಾರಿ ತಪ್ಪಿಸಿಕೊಂಡು ಹೊರಹೊರಡುತ್ತಾನೆಂಬುದು ಮಾತ್ರ ಕತೆ. ಆ ಸಂದರ್ಭದಲ್ಲಿ ಮತ್ತೆ ಅದಕ್ಕೂ ಮುನ್ನ ಆತ ಅನುಭವಿಸಿದ ಬದುಕು, ಆತನ ಭಯ, ಯಾತನೆ, ಸ್ನೇಹ, ದ್ವೇಷ, ಕನಸು ಎಲ್ಲವೂ ಮನಸ್ಸಿನ ರಂಗಭೂಮಿಯ ತೆರೆ ಸರಿದು ಪ್ರದರ್ಶನಗೊಳ್ಳುವ ಭಾವತೀವ್ರತೆಯಿದೆ. ಜೀವಿಯ ಕರುಳು ಕೊರೆಯುವ ಪೀಡನೆಯೂ ತರವಾಡಿನ ವ್ಯಕ್ತಿತ್ವಗಳ ಚಿತ್ರಣವು, ಇತಿಹಾಸವೂ ಪ್ರತಿಧ್ವನಿಸಿದೆ. ಹುಚ್ಚನನ್ನು ತರವಾಡಿನ ವಕ್ತಾರನನ್ನಾಗಿಸುವ ಮೂಲಕ ಕತೆ ಇತಿಹಾಸವನ್ನೇ ವ್ಯಂಗ್ಯವಾಗಿಸಿದೆ. ಸಾಂಕೇತಿಕವಾಗಿಸಿದೆ.

ತಂದೆಯ ಅನುಪಸ್ಥಿತಿ

‘ಅಕ್ಕಯ್ಯ’ ಮಲಯಾಳಂ ಸಾಹಿತ್ಯದಲ್ಲಿಯೇ ವಿನೂತನವೆನಿಸಿದ ಕತೆ. ಎಂ.ಟಿ.ಯ ಕತೆಗಳಲ್ಲಿ ತಾಯಿಯ ಪರಿಕಲ್ಪನೆ ಒಂದು ಶ್ರದ್ಧೇಯವಾದ ಅಂಶ. ಮಕ್ಕಳ ದೈನಂದಿನ ಬದುಕಿನಲ್ಲಿ ಅನುಭವಕ್ಕೆ ಬರುವ ತಂದೆಯ ಗೈರುಹಾಜರಿ. ಕೆಲವು ಕತೆಗಳಲ್ಲಿ ತಂದೆಯ ಗೈರುಹಾಜರಿ ಮಾತ್ರವಲ್ಲ, ತಂದೆಯ ಅಭಾವ ಕೂಡ ಒಂದು ಪ್ರಮುಖ ಆಶಯವೇ. ಹೆಂಡತಿಯನ್ನು, ಮಕ್ಕಳನ್ನು ಕೈಬಿಟ್ಟ ತಂದೆ, ಕೆಲಸದ ಕಾರಣಗಳಿಗಾಗಿ ದೂರದಲ್ಲಿರುವ ತಂದೆ, ತಂದೆಯಿಲ್ಲದೆ ಹುಟ್ಟಿದ ಮಕ್ಕಳಿಗೆ ಅಭಾವವೆನಿಸಿದ ತಂದೆ ಹೀಗೆ ಈ ಅಭಾವಗಳೆಲ್ಲ ಕಥಾಸನ್ನಿವೇಶದಲ್ಲಿ ಪ್ರಮುಖವಾದ ಘಟಕವಾಗಿಯೇ ಬಂದಿದೆ. ಈ ಹಿನ್ನೆಲೆಯಲ್ಲಿ ಅಕ್ಕಯ್ಯ ಕತೆಗೆ ಪ್ರಾಮುಖ್ಯವಿದೆ. ’ಅಕ್ಕಯ್ಯ’ ಅನೈತಿಕ ಸಂಬಂಧದಿಂದ ಹುಟ್ಟಿದ ಕಾರಣಕ್ಕಾಗಿ ಹೆತ್ತವಳನ್ನು ಅಮ್ಮನೆಂದು ಕರೆಯುವ ಹಕ್ಕನ್ನು ನಿರಾಕರಿಸಲಾದ ಹುಡುಗನ ಮೂಲಕ ದಾಖಲಾಗಿದೆ. ಅಮ್ಮನನ್ನು ಅಕ್ಕನೆಂದೇ ಭಾವಿಸಿ ತಂದೆ ಯಾರೆಂದು ತಿಳಿಯದ ಬಾಲಕ ಈತ. ಅಕ್ಕ ತಾಯಿಯಾದರೂ ತಾಯಿಮಕ್ಕಳ ಬಾಂಧವ್ಯಕ್ಕಿಂತ ಅಕ್ಕ ಮತ್ತು ತನ್ನ ಬಾಂಧವ್ಯವೇ ಶ್ರೇಷ್ಠವೆಂದು ನಂಬಿದ ಹುಡುಗ. ಕೊನೆಗೂ ಅಕ್ಕಯ್ಯ ಪರಿಸ್ಥಿತಿಗೆ ಕಟ್ಟುಬಿದ್ದು ಬೇರೊಬ್ಬನನ್ನು ಮದುವೆ ಮಾಡಿಕೊಂಡು ಮಗನಿಂದ ದೂರಾಗಬೇಕಾದ ಅನಿವಾರ್ಯ ಸನ್ನಿವೇಶ ಈ ಕತೆಯಲ್ಲಿ ಅತ್ಯಂತ ಮಾರ್ಮಿಕವಾಗಿ ದಾಖಲಾಗಿದೆ. ಇಲ್ಲಿನ ಅಕ್ಕಯ್ಯ ಅನೈತಿಕವಾಗಿ ಮಗನನ್ನು ಹಡೆದ ತಪ್ಪಿಗೆ ಸಹೋದರನಿಂದ, ತನ್ನವರಿಂದ ಅನಿವಾರ್ಯವಾಗಿ ದೂರಾಗಬೇಕಾದ ಮಾನಸಿಕವಾದ ನೋವನ್ನನುಭವಿಸುವವಳು. ಹಡೆದ ಮಗನಿಂದ ಅಕ್ಕಯ್ಯನೆಂದೇ ಕರೆಸಿಕೊಂಡು ಮಾತೃತ್ವದ ಸುಖವನ್ನು ಕಾಣುತ್ತಿದ್ದವಳು. ಆದರೆ ಪರಿಸ್ಥಿತಿ ಆ ಸುಖವನ್ನು ಆಕೆಗೆ ಒದಗಿಸಿಕೊಡುವಂತಿಲ್ಲ. ಸಮಸ್ಯೆಯ ಕ್ರೂರ ಹಸ್ತಕ್ಕೆ ಬಲಿಯಾಗಿ ಹಡೆದ ಮಗನನ್ನು ಅಗಲಬೇಕಾಗುತ್ತದೆ. ಕರುಳು ಕಿವುಚುವ ಕತೆ ಒಮ್ಮೆ ಭಾವುಕವಾಗುವ ಮತ್ತೊಮ್ಮೆ ವಾಸ್ತವದ ವ್ಯವಸ್ಥೆಯ ಕಠೋರ ಸತ್ಯವನ್ನು ನಿರ್ದಯವಾಗಿ ತೆರೆದಿರಿಸುತ್ತದೆ. ತಾಯಿ ಎಂದರೇನೆಂದು ತಿಳಿಯದ ಮುಗ್ಧಬಾಲಕ ಒಂದೆಡೆ, ಮಗನಾಗಿದ್ದರೂ ಮಗನೆಂದು ಬಹಿರಂಗವಾಗಿ ಪ್ರಕಟಿಸಲಾರದ ತಾಯಿ ಇನ್ನೊಂದೆಡೆ, ಈ ಇಬ್ಬರ ಮಾನಸಿಕ ಸಂಘರ್ಷ ಕತೆಯಲ್ಲಿ ದಾಖಲಾದ ಬಗೆ ವಿನೂತನವಾದುದು.

ಹಡೆದೊಡಲ ಬಾಂಧವ್ಯ

ಎಂ.ಟಿ.ಯವರ ಕತೆಗಳ ಇನ್ನೊಂದು ಪ್ರಮುಖ ಆಶಯ ತಂದೆ ಮತ್ತು ಮಕ್ಕಳ ಬಾಂಧವ್ಯ. ಇವರ ಅನೇಕ ಕತೆಗಳಲ್ಲಿ ಹುಟ್ಟಿಸಿದ ತಂದೆಯ ಕಾರಣಕ್ಕಾಗಿ ಅವಮಾನಕ್ಕೊಳಗಾಗುವ, ಹುಟ್ಟಿಸಿದ ತಂದೆ ಯಾರೆಂದರಿಯದೆ ಸಮಾಜದಲ್ಲಿ ಗೇಲಿಗೊಳಗಾಗುವ ಅನೇಕ ಮಕ್ಕಳಿದ್ದಾರೆ. ಹುಟ್ಟಿಸಿದಾತ ತಂದೆ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಮುಂದಾಗದ ಕಾರಣಕ್ಕಾಗಿ ಬದುಕಿನಲ್ಲಿ ನೊಂದು ಬೇಯುತ್ತಿರುವ ಅನೇಕ ಮಕ್ಕಳು ಎಂ.ಟಿ.ಯವರ ಕತೆಗಳಲ್ಲಿ ಬರುತ್ತಾರೆ. ’ನರಿಯ ಮದುವೆ’ ಹುಡುಗ ತನ್ನ ತಂದೆ ಆಚಾರಿ ಎಂಬ ಕಾರಣಕ್ಕಾಗಿ ಓರಗೆಯ ಜೊತೆಗಾರರಿಂದ ಅವಹೇಳನದ ಮಾತುಗಳನ್ನು ಕೇಳಬೇಕಾಗಿ ಬಂತು. ತಂದೆಯಾದವ ನಿಗೂಢವಾಗಿದ್ದು ಅವಮಾನಕ್ಕೆ ಕಾರಣನಾದದ್ದರಿಂದ ಉಕ್ಕಿದ ಅವರ ರೋಷ ಕೊನೆಗೇ ಗೇಲಿ ಮಾಡಿದವನನ್ನು ಬಲಿ ತೆಗೆದುಕೊಳ್ಳುವ ಹಂತಕ್ಕೆ ತಲುಪುತ್ತದೆ. ನಾಯರ್ ಜನಾಂಗದಲ್ಲಿ ಹುಟ್ಟಿ ನಾಯರರ ಸ್ಥಾನಮಾನವು ದೊರೆಯದೆ, ತಂದೆ ಆಚಾರಿ ಜಾತಿಯವನಾದ್ದರಿಂದ ಆ ಸಂಬಂಧಗಳನ್ನು ಬಹಿರಂಗವಾಗಿ ಹೇಳಿಕೊಳ್ಳುವ ಮುಜುಗರದಲ್ಲಿ ಬದುಕು ಸಾಗಿಸಬೇಕಾದ ತಾಯಿಯ ಮಗನಾಗಿ ಈ ಹುಡುಗ ನೋವನ್ನನುಭವಿಸುತ್ತಾನೆ. ತನ್ನ ಓರಗೆಯವರೇ ಏಕೆ ತಾಯಿಯ ಹಿರಿಯ ಮಗನಾದರೂ ತಮ್ಮನೆಂದು ಗೌರವಿಸುವಷ್ಟು, ಕೃಪೆ ತೋರದ, ತೋರಿಸುವುದಕ್ಕೆ ಅವಕಾಶ ನೀಡದ ಸಾಮಾಜಿಕ ವ್ಯವಸ್ಥೆಯ ಬಗೆಗೆ ಈತನ ರೋಷ ಕತೆಯಲ್ಲಿ ದಾಖಲಾಗಿದೆ. ಬದುಕಿನಲ್ಲಿ ನೋವಿನ ಮೂರ್ತಿಯಾದ ಈ ಕತೆಯ ಅಮ್ಮ ಬೇರೆ ಬೇರೆ ಮನೆಗಳಲ್ಲಿ ಮನೆಗೆಲಸ ನಿರ್ವಹಿಸಿ ಮಗನನ್ನು ಸಾಕುತ್ತಾಳೆ. ನಾಯರ್ ಸ್ತ್ರೀಯಾದ ಅವಳ ಗಮನ ದೃಷ್ಟಿಯಿಂದ ಕತೆ ದಾಖಲಾಗಿದೆ. ತನ್ನ ತಂದೆ ಆಚಾರಿ ನಾರಾಯಣನ್ ಎಂಬ ತಿಳುವಳಿಕೆ ಅವನನ್ನು ಕೋಪೋದ್ರಿಕ್ತನನ್ನಾಗಿಸುತ್ತದೆ. ಗೆಳೆಯರ ಹಾಗೂ ಊರವರ ನಡುವೆ ತಾನು ಅಪಹಾಸ್ಯ ಕ್ಕೊಳಗಾಗ ಬೇಕಾದುದಕ್ಕೆ ಅದೇ ಕಾರಣ ಎಂಬುದು ಅವನಲ್ಲಿ ಬೇರೂರಿದೆ. ಹೀಗೊಬ್ಬ ಮಗನಾದುದೇ ತನ್ನ ಬದುಕಿನ ದುರಂತಕ್ಕೆ ಕಾರಣ ಎಂಬ ಅವ್ಯಕ್ತ ನೋವು ಅಮ್ಮನಿಗಿದೆ. ಅದರಿಂದಾಗಿ ಆರ್ದ್ರವಾದ ಒಂದು ತಾಯಿ ಮಗನ ಸಂಬಂಧದ ಕತೆಯಿದು.

ಸೇಡಿನ ಮನಸ್ಸು

ಎಂ.ಟಿ.ಯವರ ಕತೆಗಳ ವಿಶಿಷ್ಟವಾದ ಇನ್ನೊಂದು ಪ್ರಮುಖ ಆಶಯ ಸೇಡಿನ ಮನೋಭಾವ. ಬಾಲ್ಯದ ಹಾಗೂ ಅನುಭವದ ಅನೇಕ ಘಟನೆಗಳಿಂದ ಇವರ ಕತೆಗಳ ಬಹುತೇಕ ಪಾತ್ರಗಳು ಅಂತರಾಳದಲ್ಲಿ ಸೇಡಿನ ಮನೋಭಾವವನ್ನು ಗಟ್ಟಿಗೊಳಿಸುತ್ತಲೇ ಬೆಳೆಯುತ್ತವೆ. ಸೇಡನ್ನು ತೀರಿಸುವ, ಅದಕ್ಕಾಗಿಯೇ ಬದುಕುವ ಹಂಬಲವನ್ನು, ಛಲವನ್ನು ಮೆರೆಯುವ ಅನೇಕ ಪಾತ್ರಗಳಿವೆ. ಸಣ್ಣಕತೆಗಳಲ್ಲೂ ಇಂತಹ ಅನೇಕ ಪಾತ್ರಗಳನ್ನು ಎಂ.ಟಿ. ಸೃಷ್ಟಿಸಿದ್ದಾರೆ. ’ನರಿಯ ಮದುವೆ’ಯ ಹುಡುಗ ತಂದೆ ನಾರಾಯಣ ಆಚಾರಿಯು ಬಹಿರಂಗವಾಗಿ ತಂದೆ ಎಂದು ಒಪ್ಪಿಕೊಳ್ಳದ್ದರಿಂದ ಅವನ ಮೇಲಿನ ಸೇಡು ತೀರಿಸುವ ಛಲವುಳ್ಳವನಾಗಿದ್ದಾನೆ. ಅವನಿಗೆ ಅವಹೇಳನ ಮಾಡಿದ ವ್ಯಕ್ತಿಗಳ ವಿರುದ್ಧ ಸೇಡಿನ ರೋಷ ಪ್ರಕಟಿಸಿ ಕೊನೆಗೂ ಕೊಲೆಯಲ್ಲಿ ಮುಕ್ತಾಯವಾಗುತ್ತದೆ. ಆ ಸೇಡಿನ ಸ್ವರೂಪ ಹೇಗಿದೆಯೆಂದರೆ ಮಹಾಭಾರತದ ಭೀಮನ ರೋಷಕ್ಕೆ ಕಡಿಮೆ ಇಲ್ಲದಂತೆ ಅಭಿವ್ಯಕ್ತಿಗೊಂಡಿದೆ. ಇದು ’ಲಾಕ್ಷಾಗೇಹದಾಹಕ್ಕಿದು ವಿಷಮ ವಿಷಾನ್ನಕಿದ ನಾಡ ಜೂದಿಗಿದು…’ ಎಂಬಂತೆ ಒಂದೊಂದೇ ಕಲ್ಲನ್ನು ಎಸೆಯುವ ಮೂಲಕ ಎಲ್ಲರ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳುತ್ತಾನೆ. ’ಅಲೆ ಮತ್ತು ದಡ’ದ ಬಾಪುಟ್ಟಿಯೂ ತನ್ನನ್ನು ವಂಚಿಸಿದ ವ್ಯಕ್ತಿಗಳ ವಿರುದ್ಧ ಸೇಡಿನ ಮನೋಭಾವವುಳ್ಳವನಾಗಿದ್ದಾನೆ. ಆದರೆ ಅಂತಿಮ ಕ್ಷಣದಲ್ಲಿ ಸೇಡು ಮತ್ತು ಕರುಣೆಯ ಸಂಘರ್ಷದಲ್ಲಿ ಕರುಣೆಯೇ ಗೆದ್ದು ಮಾನವೀಯತೆ ವಿಜೃಂಭಿಸುವುದನ್ನು ಕಾಣಬಹುದು. ’ಇರುಳಿನ ಆತ್ಮದ’ ವೇಲಾಯುಧನೂ ಸಹ ತನಗೆ ಹೊಡೆದ ಅಚ್ಯುತನಾಯರಿಂದ ಹಿಡಿದು ತನ್ನನ್ನು ಹುಚ್ಚನೆಂದು ಹೇಳುವ ಎಲ್ಲರ ವಿರುದ್ಧ ಸೇಡು ತೀರಿಸುವುದಕ್ಕಾಗಿಯೇ ಬದುಕುವ ಹಂಬಲವನ್ನು ಉಳಿಸಿಕೊಂಡಿದ್ದ. ಸೇಡು ಇನ್ನೊಬ್ಬರ ಬದುಕನ್ನು ಕೊನೆಗೊಳಿಸಬಹುದು. ಆದರೆ, ಬದುಕುವ ಹಂಬಲವನ್ನು ನಿರಂತರವಾಗಿ ಉಳಿಸಿಕೊಡುತ್ತದೆ ಎಂಬುದನ್ನು ಎಂ.ಟಿ.ಯವರ ಬಹುತೇಕ ಕತೆಗಳಲ್ಲಿ ಕಾಣಬಹುದು. ಅವಮಾನ, ತಿರಸ್ಕಾರ, ಬಡತನ ಇವುಗಳಿಂದೆಲ್ಲ ಪೋಷಿತವಾದ ಹಿಂಸಾರಹಿತವಾದ ಸೇಡು ಬದುಕನ್ನು ನಿರ್ದಿಷ್ಟ ಗುರಿಯತ್ತ ನಿರಂತರವಾಗಿ ಕೊಂಡೊಯ್ಯುತ್ತದೆ. ಜೊತೆಗೆ ಬದುಕಿನ ಬಗೆಗೆ ಪೀತಿಯನ್ನು ಹುಟ್ಟಿಸುತ್ತದೆ. ಶೋಷಣೆಗೆ ಕಾರಣವಾದ ವ್ಯವಸ್ಥೆಯು ನಾಶಕ್ಕೂ ಕಾರಣವಾಗುತ್ತದೆ. ಎಂ.ಟಿ. ಈ ಆಶಯಗಳನ್ನು ತಮ್ಮ ಕತೆಗಳ ತುಂಬ ಹುದುಗಿಸಿದ್ದಾರೆ. ಸಾಮಾಜಿಕ ಪ್ರಗತಿಯ ಒಂದು ಭಾಗವಾಗಿಯೇ ಇವುಗಳನ್ನು ಕತೆಗಳಲ್ಲಿ ಕಾಣಬಹುದು. ಅವಮಾನ, ತಿರಸ್ಕಾರ, ಬಡತನ ಇವುಗಳಿಂದೆಲ್ಲ ಪೋಷಿತವಾದ ಹಿಂಸಾರಹಿತವಾದ ಸೇಡು ಬದುಕನ್ನು ನಿರ್ದಿಷ್ಟ ಗುರಿಯತ್ತ ನಿರಂತರವಾಗಿ ಕೊಂಡೊಯ್ಯುತ್ತದೆ. ಜೊತೆಗೆ ಬದುಕಿನ ಬಗೆಗೆ ಪ್ರೀತಿಯನ್ನು ಹುಟ್ಟಿಸುತ್ತದೆ. ಶೋಷಣೆಗೆ ಕಾರಣವಾದ ವ್ಯವಸ್ಥೆಯು ನಾಶಕ್ಕೂ ಕಾರಣವಾಗುತ್ತದೆ. ಎಂ.ಟಿ. ಈ ಆಶಯಗಳನ್ನು ತಮ್ಮ ಕತೆಗಳ ತುಂಬ ಹುದುಗಿಸಿದ್ದಾರೆ. ಸಾಮಾಜಿಕ ಪ್ರಗತಿಯ ಒಂದು ಭಾಗವಾಗಿಯೇ ಇವುಗಳನ್ನು ಕತೆಗಳಲ್ಲಿ ದಾಖಲಿಸಿರಬೇಕು.

ಯಾಂತ್ರಿಕ ಬದುಕು

‘ಬೀಜಗಳು’ ಪರಂಪರಾಗತವಾಗಿ ಬಂದ ಆಚರಣೆಗಳು ಕೃತಕ ಮಾನವೀಯ ಸಂಬಂಧವನ್ನು ಮಾತ್ರ ಉಳಿಸಿವೆಯೆಂಬುದನ್ನು ಪ್ರಕಟಿಸುವ ಕತೆ. ಸಂಪ್ರದಾಯದಂತೆ ನಡೆದುಕೊಂಡು ಬಂದ ಆಚಾರ ವಿಚಾರಗಳೆಲ್ಲ ಬದುಕಿನಲ್ಲಿ ಅರ್ಥ ಕಳೆದುಕೊಂಡರೂ ಅದನ್ನು ಸಂಪೂರ್ಣವಾಗಿ ತೊರೆಯಲಾರದೆ, ಭಾಗವಹಿಸಿದರೂ ಅದರಲ್ಲಿ ಒಳಗೊಳ್ಳದಂತಿರುವ ವ್ಯಕ್ತಿಯೊಬ್ಬನ ಮಾನಸಿಕ ಸ್ಥಿತಿಯನ್ನು ಈ ಕತೆ ಅಭಿವ್ಯಕ್ತಿಸಿದೆ. ತಂದೆ ಮಕ್ಕಳೆಲ್ಲರ ಸಮಾಗಮಕ್ಕೆ ಒಂದು ಅವಕಾಶವೆಂಬಂತೆ ತಿಥಿಯನ್ನು ವ್ಯಾಖ್ಯಾನಿಸಿಕೊಳ್ಳುವ, ಅದು ನೆರವೇರದೆ ಇದ್ದಾಗ ತಂದೆಯ ಮನಸ್ಸಿನಲ್ಲಿ ನಡೆಯುವ ತಾಕಲಾಟಗಳು, ಅವುಗಳನ್ನು ವಿನಯವಾಗಿ ನಿರಾಕರಿಸುವ ಹಿರಿಯ ಸಹೋದರರು, ಕಿರಿಯವನೆಂಬ ಕಾರಣಕ್ಕೆ ಎಲ್ಲವನ್ನು ಒಪ್ಪಿಕೊಂಡು ನಡೆದುಕೊಳ್ಳಬೇಕಾದ ವ್ಯವಸ್ಥೆಗಳಿಂದ ಪಲಾಯನ ಮಾಡಲೆತ್ನಿಸುವ ಉಣ್ಣಿಯ ಮಾನಸಿಕ ಸಂಘರ್ಷ ಇವೆಲ್ಲ ಈ ಕತೆಯಲ್ಲಿ ದಾಖಲಾಗಿದೆ. ಪಿಂಡವನ್ನು ಕಾಗೆ ಮುಟ್ಟಿದರೆ ಸತ್ತು ಹೋದ ಹಿರಿಯರ ಆತ್ಮಗಳಿಗೆ ತಲುಪುತ್ತದೆ ಎಂಬ ನಂಬಿಕೆಯಲ್ಲಿ ಬೆಳೆದ ಸಮಾಜ. ಅದರಲ್ಲಿಯೇ ಹುಟ್ಟಿ ಬೆಳೆದ ಉಣ್ಣಿಗೂ ಅದನ್ನು ಧಿಕ್ಕರಿಸಿ ನಿಲ್ಲಲಾರದ ಅಳುಕು. ಇವು ಕತೆಯುದ್ದಕ್ಕೂ ವಾಸ್ತವವಾಗಿ ಅಭಿವ್ಯಕ್ತಗೊಂಡಿದೆ.

ಭಾವಸ್ಪರ್ಶಿ

ಪರಿಸ್ಥಿತಿಯ ಕಾರಣಕ್ಕೆ ತಪ್ಪಿತಸ್ಥಳಾದ ತಾಯಿಯೊಬ್ಬಳು ಮಕ್ಕಳ ಗಂಡನ ಸಂಬಂಧವನ್ನು ಕಡಿದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿಯನ್ನು ’ಗಲ್ಲಿಯಬೆಕ್ಕು ಮೂಕಬೆಕ್ಕು’ ದಾಖಲಿಸಿದೆ. ವಸ್ತುವಿನ ದೃಷ್ಟಿಯಿಂದ ಕತೆ ಆಕರ್ಷಕವೆನಿಸಿದರೂ ಅದಕ್ಕೂ ಮಿಗಿಲಾಗಿ ಇಲ್ಲಿಯ ನಿರೂಪಣಾತಂತ್ರ ಅತ್ಯಂತ ಕುತೂಹಲಕಾರಿಯಾಗಿದೆ. ಒಮ್ಮೆ ವಸ್ತುಸ್ಥಿತಿಯನ್ನು ದಾಖಲಿಸುವ, ಮರುಕ್ಷಣದಲ್ಲಿಯೇ ಭಾವುಕವಾಗಿ ತನ್ನ ನೆನಪುಗಳನ್ನು ಬಿಚ್ಚಿಡುತ್ತಾ ಸಾಗುವ ಕತೆಯು ಕೊನೆಗೂ ಭಾವಭಾರದಿಂದ ಓದುಗನ ಹೃದಯವನ್ನು ಸ್ತಬ್ಧಗೊಳಿಸಿಬಿಡುತ್ತದೆ. ಇದನ್ನು ತಂತ್ರದ ದೃಷ್ಟಿಯಿಂದ ಎಂ.ಟಿ.ಯವರ ವಿಶಿಷ್ಟಕತೆ ಎನ್ನಬಹುದು. ಪ್ರಜ್ಞಾಪ್ರವಾಹ ತಂತ್ರದಲ್ಲಿಯೇ ದಾಖಲಾಗುವ ಈ ಕತೆಯ ಕಥನಕ್ರಿಯೆಗಳು ಭಾವನೆಗೆ ಒತ್ತು ನೀಡುತ್ತವಾದರೂ ಪಾತ್ರಗಳು ವಾಸ್ತವದ ನೆಲೆಗಟ್ಟಿನಲ್ಲಿಯೇ ಎಚ್ಚರವಾಗಿ ಕ್ರಮಿಸುವ ರೀತಿ ವಿಶಿಷ್ಟವೆನಿಸಿದೆ. ಸಾಮಾನ್ಯರ ಕೈಯಲ್ಲಿ ಭಾವುಕವಾಗಬಹುದಾಗಿದ್ದ ಈ ಕತೆ ವಾಸ್ತವದ ಅನೇಕ ಸೂಕ್ಷ್ಮ ವಿವರಗಳ ಮೂಲಕವೇ ಓದುಗನ ಭಾವಕ್ಕೆ ಅಪ್ಪಳಿಸುತ್ತದೆ. ಕಥನಕ್ರಿಯೆ ಹಾಗೂ ಕಥನ ತಂತ್ರದ ದೃಷ್ಟಿಯಿಂದ ಎಂ.ಟಿ.ಯವರ ಈ ಕತೆಗೆ ವಿಶಿಷ್ಟ ಸ್ಥಾನವಿದೆ.

ಧ್ವನ್ಯಾತ್ಮಕ

ವಸ್ತುಸ್ಥಿತಿಗಳು ವಾಚ್ಯವಾಗದೆ ಧ್ವನ್ಯಾತ್ಮಕವಾಗುವೆಡೆಗೆ ಕತೆಗಾರನ ಶ್ರದ್ಧೆಯನ್ನು ಕೇಂದ್ರೀಕರಿಸಿದ ಕತೆ ’ದುಃಖ ಕಣಿವೆಗಳು. ಒಂದೊಂದನ್ನು ವರ್ಣಿಸುವಾಗ ಮಾತುಗಳು ರೂಪು ಪಡೆಯುವಾಗ ಮಾನಸಿಕ ಸ್ಥಿತಿಯನ್ನು ಅವಲಂಬಿಸಿಯೆ ಕತೆ ಮುಂದುವರಿಯುತ್ತದೆ. ಮನುಷ್ಯನ ಭಾವಾಂತರೀಕ್ಷದ ಸೃಷ್ಟಿಯಾಗಿ ’ದುಃಖ ಕಣಿವೆಗಳು’ ಮುಖ್ಯವೆನಿಸುತ್ತದೆ. ’ದುಃಖ ಕಣಿವೆಗಳು’ ಕತೆಯಲ್ಲಿ ಸ್ನೇಹದ ಎಷ್ಟೇಟಿನ ಕಾನ್ವೆಂಟನ್ನು ಕಂಡಾಗ ಮದುವೆಯ ಮಾರ್ಕೆಟಿನಲ್ಲಿ ಹಲವು ಬಾರಿ ಪ್ರದರ್ಶಿಸಿಕೊಂಡು ಸ್ವೀಕರಿಸುವವರಿಲ್ಲದೆ ಆಶಾಭಗ್ನವಾಗಿ ಬದುಕುವ ಪರಿಶುದ್ಧಳು, ಸಹಾಯಕ ಪ್ರಜ್ಞೆಯಿಂದ ನೆನಪಿಸಿ ಇಲ್ಲಿನ ಯಾವ ಹೃದಯ ವಿಷಾದಿಸುತ್ತದೆ.

ಅನುಭವದ ಅನುಭವ

ಎಂ.ಟಿ.ಯವರ ಕತೆಗಳಲ್ಲಿ ಕಥಾಂಶ ಕಡಿಮೆಯಿರುತ್ತದೆ. ಕತೆಗಿಂತಲೂ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ವಿವರಿಸುವ ಮೂಲಕವೇ ಕತೆಯನ್ನು ಅನುಭವವಾಗಿಸುವಂತೆ ಅಭಿವ್ಯಕ್ತಿಸುವುದು ಎಂ.ಟಿ.ಯವರ ವೈಶಿಷ್ಟ್ಯ. ಇಲ್ಲಿರುವ ಪಟಾಕಿ, ಯಾಂತ್ರಿಕ, ಕರ್ಕಟಕ ಕತೆಗಳಲ್ಲಿ ಹೇಳಿಕೊಳ್ಳುವ ಕಥಾಂಶಗಳೇನಿಲ್ಲ. ಆದರೆ ವಿವರಗಳು ಓದುತ್ತ ಹೋದಂತೆ ದೃಶ್ಯವಾಗಿ ಅರಳುವ, ಆ ಮೂಲಕ ಸನ್ನಿವೇಶಗಳು ಅನುಭವ ವೇದ್ಯವಾಗುವಂತೆ ಎಂ.ಟಿ. ಬರೆಯುತ್ತಾರೆ. ಪುಟ್ಟದೊಂದು ಜೀವನ ವೃತ್ತಾಂತವನ್ನು ಆಧರಿಸಿ ಕೆಲವೇ ಮಾತುಗಳ ಮೂಲಕ ಕತೆಯಾಗಿಸುವುದು ಎಂ.ಟಿ.ಯವರ ವೈಶಿಷ್ಟ್ಯ. ಅನುಕಂಪ ಹಾಗೂ ಆತ್ಮನಿಂದನೆಯನ್ನು ಅನುಭವಿಸಿ ಬೆಳೆದ ಪಾತ್ರಗಳೇ ಹೆಚ್ಚಿನವು. ಬಾಲ್ಯದ ಮುಗ್ಧತೆ, ವ್ಯಸನಗಳು ಕೌಮಾರ್ಯದ ರುಗ್ಣತೆ, ಯೌವ್ವನದ ಅವಶೇಷಗಳು, ನಿರಾಸೆಗಳು ಮಧ್ಯವಯಸ್ಕನ ಪತನಭೀತಿ ಇಂತಹ ಅನೇಕ ಸಮಸ್ಯೆಗಳನ್ನು ಎಂ.ಟಿ. ತಮ್ಮ ಕತೆಗಳಲ್ಲಿ ಅನಾವರಣಗೊಳಿಸಿದ್ದಾರೆ.

ಪ್ರಜ್ಞಾಪ್ರವಾಹ ತಂತ್ರ

ಎಂ.ಟಿ.ಯವರದು ಪ್ರಜ್ಞಾಪ್ರವಾಹ ತಂತ್ರ. ಕಾವ್ಯಾತ್ಮಕ ಭಾಷೆ, ಮಿತಮಾತಿನ ಅಚ್ಚುಕಟ್ಟಾದ ಬರೆವಣಿಗೆ. ಸಂಕೇತಗಳ ಮೂಲಕ, ಮೌನದ ಮೂಲಕ ಅರ್ಥಸ್ಫುರಣೆಗೊಳ್ಳುವಂತೆ ಬರೆಯುವ ರೀತಿ ವಿನೂತನ. ಬಡತನ, ದಾರಿದ್ರ್ಯ ಇದರಿಂದುಂಟಾದ ಅವಹೇಳನ ಇತ್ಯಾದಿಗಳನ್ನು ಬರೆಯುವ ಆತ್ಮನಿವೇದನಾ ರೀತಿಯ ಶೈಲಿ ಹೃದಯ ಕಲಕುತ್ತದೆ. ಇವರದು ಹೃದಯದ ಮಾತು. ಹೃದಯಕ್ಕಾದ ಮಾತು. ಈ ಮಾತಿನ ಹಿಂದೆ ದೇವರನ್ನು ಮೈಮೇಲೆ ಬರಿಸಿಕೊಂಡಾಗ ತೊಡುವ ಕಾಲಿನ ’ಗಗ್ಗರ’ ಹಾಗೂ ಕೈಯ್ಯ ’ಕತ್ತಿಗೆ’ ಒಂದು ತುತ್ತು ಅನ್ನಕೊಡುವಷ್ಟು ಬೆಲೆಯಿಲ್ಲ ಎಂಬುದನ್ನರಿಯದ ಪಾತ್ರಿಯ (ಕಾಲ ಗಗ್ಗರ ಮತ್ತು ದರ್ಶನ ಕತ್ತಿ) ಕುರಿತ ಮಾನವೀಯ ಅನುಕಂಪವಿದೆ. ತನ್ನ ವ್ಯಕ್ತಿತ್ವಕ್ಕೆ ಮಸಿಬಳಿದರೂ ಸ್ಥಿತಪ್ರಜ್ಞನಾಗಿ ಎಲ್ಲವನ್ನು ವಹಿಸಿಕೊಂಡ ’ಡಾರ್ ಎಸ್ ಸಲಾಂ’ ಕತೆಯ ಮೇಜರ್ ಮುಕುಂದನ ಹತಾಶ ಬದುಕನ್ನು ಕುರಿತ ಆತ್ಮೀಯತೆಯಿದೆ. ವ್ಯವಸ್ಥೆಗೆ ಕಟ್ಟುಬಿದ್ದು ಹೆಂಡತಿಯಾದವಳನ್ನು ಪ್ರೀತಿಸಲಾಗದೆ ಪ್ರೀತಿಸಿದವಳನ್ನು ಮದುವೆಯಾಗುವ ಧೈರ್ಯವಿಲ್ಲದೆ ವಿಲವಿಲ ಒದ್ದಾಡುವ ’ಬಂಧನ’ ಕತೆಯ ಶೇಶುವಿನ ಹಳವಂಡದ ಕುರಿತ ಖೇದವಿದೆ. ಇವುಗಳನ್ನೆಲ್ಲ ಇವರ ಭಾಷೆ ಒಮ್ಮೆ ಭಾವುಕತೆಯ ಅಧಿಕಾರದಿಂದ ವಶೀಕರಿಸುವ, ಮತ್ತೊಮ್ಮೆ ನಮ್ಮೆಲ್ಲರಲ್ಲಿ ಅವ್ಯಕ್ತವಾಗಿರುವ ಅನಾಥ ಪ್ರಜ್ಞೆಯನ್ನು, ನಿರಾಸೆಯನ್ನು ಕೆದಕುವುದನ್ನು ಕಾಣಬಹುದು. ಓದುಗನ ’ನಾಸ್ಟಾಲ್ಜಿಯಾ’ಗಳನ್ನು ತಟ್ಟಿ ಎಚ್ಚರಿಸುವುದೇ ಇವರ ಕತೆಗಳ ಮಾಂತ್ರಿಕ ಶಕ್ತಿ.

ಕತೆಗಾರನ ಕತೆ

ಪಾತ್ರಗಳ ಮನೋವಿಕಾರಗಳನ್ನು ಹೃದಯ ತಟ್ಟುವಂತೆ ಚಿತ್ರಿಸುವುದೂ ವಸ್ತು ವಾಚ್ಯವಾಗದೆ ಹೆಚ್ಚು ಧ್ವನ್ಯಾತ್ಮಕವಾಗುವಂತೆ ಎಚ್ಚರವಹಿಸುವುದು, ಪ್ರತ್ಯಕ್ಷವಾಗಿ ಕಾಣುವ ಭೌತಿಕ ವಿವರಗಳನ್ನು ಕುರಿತು ಬರೆಯದೆ, ಮನಸ್ಸಿನ ಆಳದಲ್ಲಿ ಹುದುಗಿದ ಭಾವನೆಗಳನ್ನು ಬೆದಕುವುದು ಎಂ.ಟಿ.ಯವರ ವೈಶಿಷ್ಟ್ಯ. ದೇಶ ವಿದೇಶಗಳಲ್ಲಿ ಸುತ್ತಾಡಿದ ಅನುಭವಗಳು ಕೃತಿಗಳಲ್ಲಿ ದಾಖಲಾದರೂ ಇವರ ಅನೇಕ ಪಾತ್ರಗಳು ತಾವು ಹುಟ್ಟಿ ಬೆಳೆದ ಕುಡಲೂರು ಗ್ರಾಮದಿಂದಲೇ ಒಡಮೂಡಿದವುಗಳು. ಅಲ್ಲಿಯ ನದಿ, ಕಾಡು, ಜನ, ಬಾವಿ ಇವುಗಳ ಹಿನ್ನೆಲೆಯಲ್ಲಿ ಪ್ರಾದೇಶಿಕವಾಗಿ ಗಟ್ಟಿಗೊಳ್ಳುತ್ತಾ ವ್ಯಕ್ತಿಯ ಮನೋವಿಕಾರಗಳು ಸಾರ್ವತ್ರಿಕವಾಗುವಂತೆಯೂ ಬರೆಯುವ ವೈಖರಿ ಎಂ.ಟಿ.ಯವರಿಗೇ ಅನನ್ಯವಾದುದು. ಕ್ಷುಲ್ಲಕವೆಂದು ನಿರ್ಲಕ್ಷಿಸಬಹುದಾದ ಹಲವು ವಸ್ತುಸ್ಥಿತಿಗಳು ವಾಸ್ತವದಲ್ಲಿ ಸಂವೇದನಾಶೀಲನಾದ ಒಬ್ಬ ಬರೆಹಗಾರನ ದೃಷ್ಟಿಯಲ್ಲಿ ಮೂರ್ತಗೊಂಡು ಹೇಗೆ ಪ್ರಾಮುಖ್ಯಗೊಳ್ಳುತ್ತವೆ ಎಂಬುದಕ್ಕೆ ಎಂ.ಟಿ.ಯವರ ಕತೆಗಳೇ ನಿದರ್ಶನಗಳಾಗಿವೆ.

ಹಳ್ಳಿಯ ನಿಷ್ಕಳಂಕ ಬದುಕು, ಭಾವ ಎಂ.ಟಿ.ಯನ್ನು ಪ್ರಭಾವಿಸಿವೆ. ಭಾವನೆಗಳನ್ನು ಸಾಹಿತ್ಯ ಕುಸುಮವನ್ನಾಗಿಸುವಲ್ಲಿ ಇವರು ಓದುಗರ ನಂಬಿಕೆಯನ್ನು ಜಾಗ್ರತೆಯಿಂದ ಗೆಲ್ಲುತ್ತಾರೆ. ಎಂ.ಟಿ.ಯ ಲೇಖನಿ ಕಥಾಪಾತ್ರಗಳ ಮನಸ್ಸಿನ ಮೂಲಕ ಸಂಚರಿಸುತ್ತಿರುತ್ತದೆ. ಮಾನಸಿಕ ಪ್ರೇರಣೆಗಳ ಮೂರ್ತರೂಪಗಳಾಗಿ ಇವರ ಕತೆಗಳು ಮೈ ಪಡೆದಿವೆ. ಇವುಗಳಲ್ಲಿ ಕಥಾ ಪಾತ್ರಗಳ ಆಂತರಿಕ ಸ್ವಗತ ಅವುಗಳ ಅನಿವಾರ್ಯ ಭಾಗಗಳಾಗಿವೆ. ಕಥಾ ಪಾತ್ರಗಳ ಮಾನಸಿಕ ಆವಿಷ್ಕಾರ ಹಾಗೂ ಓದುಗರ ಮನಸ್ಸಿನ ಪರಸ್ಪರ ತಾದಾತ್ಮ್ಯ ಇವರ ಕತೆಗಳ ಮೂಲಕ ಏರ್ಪಡುತ್ತದೆ. ಇವೇ ಎಂ.ಟಿ. ವಾಸುದೇವನ್ ನಾಯರ್ ಕಲೆ.

ಕತೆಗಳ ಅನುವಾದದ ಬಗೆಗೆ

ಪ್ರಮುಖವಾಗಿ ಚರ್ಚೆಗೊಳಗಾದ ಎಂ.ಟಿ.ಯವರ ಉತ್ತಮ ಕತೆಗಳೆಂದು ಈಗಾಗಲೇ ವಿಮರ್ಶಕರೂ ಗುರುತಿಸಿದ ೧೯೫೨ರಿಂದ ೧೯೬೯ರ ಅವಧಿಯಲ್ಲಿ ಬರೆದ ಇಪ್ಪತ್ತೈದು ಕತೆಗಳನ್ನು ಆಯ್ಕೆ ಮಾಡಿ ಅನುಕ್ರಮವಾಗಿ ಜೋಡಿಸಲಾಗಿದೆ. ಕತೆಗಳನ್ನು ಕನ್ನಡಿಸುವಾಗ ಎಂ.ಟಿ.ಯವರ ಶೈಲಿಯನ್ನು ನೇರವಾಗಿ ಅನುವಾದಿಸಿದ್ದೇನೆ. ಕನ್ನಡದ ಜಾಯಮಾನಕ್ಕೆ ಹೊಂದಿಸಲು ಹೊಸ ಸೇರ್ಪಡೆಯನ್ನೋ, ಕೈಬಿಡುವುದನ್ನೋ ಮಾಡದೆ ವಾಕ್ಯ ವಾಕ್ಯಗಳನ್ನು ಪದಶಃ ಅನುವಾದ ಮಾಡಲು ಪ್ರಯತ್ನಿಸಿದ್ದೇನೆ. ಕನ್ನಡದ ಸಂದರ್ಭದಲ್ಲಿ ಅನುವಾದ ಕೃತಕವೆನಿಸಿದರೆ ಅದಕ್ಕೆ ಇದೂ ಒಂದು ಕಾರಣವಾಗಿರಬಹುದು. ಅನುವಾದ ಸೃಜನಶೀಲವಾಗಿ ಓದಿಸಿಕೊಳ್ಳಬೇಕು. ನಿಜ. ಆದರೆ ಮೂಲಬರೆಹದಲ್ಲಿ ನಿಷ್ಠೆಯಿರಿಸಿಕೊಳ್ಳಬೇಕೆಂಬುದು ಅದಕ್ಕಿಂತ ಹೆಚ್ಚು ಮುಖ್ಯ ಎಂದು ನನಗೆ ಅನ್ನಿಸಿದೆ. ಆಗ ಮಾತ್ರ ನಮ್ಮದಲ್ಲದ ಸಂಸ್ಕೃತಿಯೊಂದನ್ನು ಅನುವಾದದ ಮೂಲಕ ಕೊಡುವುದು ಸಾಧ್ಯ ಎಂದು ಭಾವಿಸಿದ್ದೇನೆ. ಹಾಗಾಗಿ ಅನುವಾದ ಮಾಡುವಾಗ ಅನುವಾದಕನ ಭಾಷೆಗಿಂತ ಮೂಲ ಲೇಖಕರ ಶೈಲಿಯ ಪರಿಚಯ ಆಗಬೇಕಾಗಿದೆ. ಇವು ಕನ್ನಡದ ಕತೆಗಳಾಗಿ ಅನುವಾದಗೊಳ್ಳುವುದಕ್ಕಿಂತಲೂ ಮಲಯಾಳಂ ಕತೆಗಳಾಗಿಯೇ ಕನ್ನಡದಲ್ಲಿ ಗ್ರಹೀತವಾಗಬೇಕು ಎಂಬುದು ಇಲ್ಲಿಯ ಉದ್ದೇಶ. ಇಷ್ಟಾಗಿಯೂ ಮಲಯಾಳಂನಲ್ಲಿಯೇ ಓದಿದಾಗ ಕೊಡುವ ಧ್ವನಿಶಕ್ತಿಯನ್ನು ಈ ಅನುವಾದ ಕೊಡುತ್ತಿಲ್ಲ ಎಂಬ ಅತೃಪ್ತಿ ಈಗಲೂ ಉಳಿದಿದೆ. ಇದನ್ನು ಅನುವಾದಕನ ಮಿತಿಯೆಂದೇ ಓದುಗರು ತಿಳಿಯಬಹುದು. ಎಂ.ಟಿ.ವಿ.ಯವರ ಶೈಲಿಯ ಪರಿಚಯ ಅಲ್ಪಮಟ್ಟಿಗಾದರೂ ಆದರೆ ನನ್ನ ಶ್ರಮ ಸಾರ್ಥಕ ಎಂದು ನಂಬಿದ್ದೇನೆ.

–ಡಾ. ಮೋಹನ ಕುಂಟಾರ್

 

ಪುಟ ತೆರೆದಂತೆ…

ಸವಿನುಡಿ / ೫

ಎಂ.ಟಿ.ಯವರ ಕತೆಗಳಿಗೆ ಮುನ್ನುಡಿಯ ಮಾತುಗಳು / ೭

ಕತೆಯ ತೋರುದಾರಿಗಳು / ೧೫

ಎಂ.ಟಿ.ವಾಸುದೇವನ್ ನಾಯರ್‌ರ ಕಥಾಸಾಹಿತ್ಯ / ೨೭

ಕೃತಜ್ಞತೆಗಳು / ೪೨

೦೧.  ಮಂತ್ರವಾದಿ / ೪೫

೦೨.  ಭೂಮಿಯ ಸ್ವರ್ಗ / ೫೮

೦೩.  ಭಾಗ್ಯ / ೮೦

೦೪.  ಅಪರಾಧಿ / ೯೩

೦೫.  ಹಸಿವಿಲ್ಲದ ದೈವಗಳು / ೧೦೫

೦೬.  ತಪ್ಪು-ಒಪ್ಪು / ೧೧೨

೦೭. ತಾಂತ್ರಿಕ / ೧೨೪

೦೮. ಪಟಾಕಿ / ೧೪೧

೦೯. ಅಕ್ಕಲ್‌ದಾಮದಲ್ಲಿ ಹೂಗಳು ಅರಳುವಾಗ / ೧೫೪

೧೦. ಮುಸುಕು / ೧೬೫

೧೧. ನಿನ್ನ ನೆನಪಿಗೆ / ೧೭೯

೧೨. ಅಕ್ಕಯ್ಯ / ೧೯೨

೧೩. ಅಲೆ ಮತ್ತು ದಡ / ೨೧೧

೧೪. ದುಃಖ ಕಣಿವೆಗಳು / ೨೨೫

೧೫. ಇರುಳಿನ ಆತ್ಮ / ೨೪೩

೧೬. ಬೀಜಗಳು / ೨೭೬

೧೭. ಕರ್ಕಟಕ / ೨೯೬

೧೮. ಹೇಡಿ / ೩೧೭

೧೯. ಬಂಧನ / ೩೩೦

೨೦. ಶಾಂತಿಪರ್ವ / ೩೫೧

೨೧. ಪ್ರೀತಿಯ ಮುಖಗಳು / ೩೬೬

೨೨. ನರಿಯ ಮದುವೆ / ೩೭೯

೨೩. ಪತನ / ೩೯೫

೨೪. ಸ್ಥಳ ಪುರಾಣ / ೪೧೨

೨೫. ಗಲ್ಲಿಯಬೆಕ್ಕು ಮೂಕಬೆಕ್ಕು / ೪೧೯

Reviews (0)

Reviews

There are no reviews yet.

Be the first to review “M T Vasudevan Nair Kategalu” Cancel reply

Your email address will not be published. Required fields are marked *

Shipping & Delivery

wd-ship-1
wd-ship-2

  • Shipping Policy

    Shipping Policy – 3 to 5 working days

    Refund – 5 to 7 days

    Cancellation – Cancellation charges will be applied 30% of the booked amount

    Return – Not available

    CANCELLATION POLICY:

    Once an order is submitted, it automatically goes to the packing department and we begin preparing to ship out the product. In case of cancellation, you can cancel the order from “My Account – Orders” page before the tax gets dispatched from our warehouse. Orders cannot be cancelled if the order is dispatched from the warehouse. Cancellation charges will be applied 30% of the booked amount.

    SHIPPING POLICY:

    We ship only within India

    SHIPPING CHARGES:

    Shipping Charges for all parts of India

    INR 60 applied as shipping charge for orders

    Different slab of shipping charges is levied for out of state orders.

    We deliver to all major cities in India. If your location is not serviced by our courier, we will contact and try to send article by other service provider.

    SHIPPING MODE:

    Standard surface shipping by Road.

    All products are delivered by reputed courier companies.

    PRIVACY POLICY

    The terms “We” / “Us” / “Our”/” Company” individually and collectively refer to yajiprakashana@gmail.com and the terms “You” /” Your” / “Yourself” refer to the users.

    This Privacy Policy is an electronic record in the form of an electronic contract formed under the information Technology Act, 2000 and the rules made thereunder and the amended provisions pertaining to electronic documents / records in various statutes as amended by the information Technology Act, 2000. This Privacy Policy does not require any physical, electronic or digital signature.

    This Privacy Policy is a legally binding document between you and yajiprakashana@gmail.com (both terms defined below). The terms of this Privacy Policy will be effective upon your acceptance of the same (directly or indirectly in electronic form, by clicking on the I accept tab or by use of the website or by other means) and will govern the relationship between you and yajiprakashana@gmail.com for your use of the website “www.yajipublications.com”.

    This document is published and shall be construed in accordance with the provisions of the Information Technology (reasonable security practices and procedures and sensitive personal data of information) rules, 2011 under Information Technology Act, 2000; that require publishing of the Privacy Policy for collection, use, storage and transfer of sensitive personal data or information.

    Please read this Privacy Policy carefully by using the Website, you indicate that you understand, agree and consent to this Privacy Policy. If you do not agree with the terms of this Privacy Policy, please do not use this Website.

    By providing us your Information or by making use of the facilities provided by the Website, You hereby consent to the collection, storage, processing and transfer of any or all of Your Personal Information and Non-Personal Information by us as specified under this Privacy Policy. You further agree that such collection, use, storage and transfer of Your Information shall not cause any loss or wrongful gain to you or any other person.

    USER INFORMATION

    To avail certain services on our websites, users are required to provide certain information for the registration process namely: – a) your name, b) email address, c) sex, d) age, e) PIN code, f) credit card or debit card details g) medical records and history h) sexual orientation, i) biometric information, j) password etc., and / or your occupation, interests, and the like. The Information as supplied by the users enables us to improve our sites and provide you the most user-friendly experience.

    All required information is service dependent and we may use the above said user information to, maintain, protect, and improve its services (including advertising services) and for developing new services

    Such information will not be considered as sensitive if it is freely available and accessible in the public domain or is furnished under the Right to Information Act, 2005 or any other law for the time being in force.

    COOKIES

    To improve the responsiveness of the sites for our users, we may use “cookies”, or similar electronic tools to collect information to assign each visitor a unique, random number as a User Identification (User ID) to understand the user’s individual interests using the Identified Computer. Unless you voluntarily identify yourself (through registration, for example), we will have no way of knowing who you are, even if we assign a cookie to your computer. The only personal information a cookie can contain is information you supply. A cookie cannot read data off your hard drive. Our advertisers may also assign their own cookies to your browser (if you click on their ads), a process that we do not control.

    Our web servers automatically collect limited information about your computer’s connection to the Internet, including your IP address, when you visit our site. (Your IP address is a number that lets computers attached to the Internet know where to send you data — such as the web pages you view.) Your IP address does not identify you personally. We use this information to deliver our web pages to you upon request, to tailor our site to the interests of our users, to measure traffic within our site and let advertisers know the geographic locations from where our visitors come.

    LINKS TO THE OTHER SITES

    Our policy discloses the privacy practices for our own web site only. Our site provides links to other websites also that are beyond our control. We shall in no way be responsible in way for your use of such sites.

    INFORMATION SHARING

    We share the sensitive personal information to any third party without obtaining the prior consent of the user in the following limited circumstances:

    (a) When it is requested or required by law or by any court or governmental agency or authority to disclose, for the purpose of verification of identity, or for the prevention, detection, investigation including cyber incidents, or for prosecution and punishment of offences. These disclosures are made in good faith and belief that such disclosure is reasonably necessary for enforcing these Terms; for complying with the applicable laws and regulations.

    (b) We propose to share such information within its group companies and officers and employees of such group companies for the purpose of processing personal information on its behalf. We also ensure that these recipients of such information agree to process such information based on our instructions and in compliance with this Privacy Policy and any other appropriate confidentiality and security measures.

    INFORMATION SECURITY

    We take appropriate security measures to protect against unauthorized access to or unauthorized alteration, disclosure or destruction of data. These include internal reviews of our data collection, storage and processing practices and security measures, including appropriate encryption and physical security measures to guard against unauthorized access to systems where we store personal data.

    All information gathered on our website is securely stored within our controlled database. The database is stored on servers secured behind a firewall; access to the servers is password-protected and is strictly limited. However, as effective as our security measures are, no security system is impenetrable. We cannot guarantee the security of our database, nor can we guarantee that information you supply will not be intercepted while being transmitted to us over the Internet. And, of course, any information you include in a posting to the discussion areas is available to anyone with Internet access.

    However, the internet is an ever evolving medium. We may change our Privacy Policy from time to time to incorporate necessary future changes. Of course, our use of any information we gather will always be consistent with the policy under which the information was collected, regardless of what the new policy may be.

    Note:

    All the product images displayed here for demo/display purposes only. Original products may vary.

    Any disputes subjected to Hospet (583201) Jurisdiction only.

 

Related products

-20%
Compare
Quick view
Add to wishlist
Add to cart

Bhaaratharatna Bheemanna ( Journey of Melodies)

Shirish Joshi, Our Books, ಜೀವನಚರಿತ್ರೆ
₹260.00 Original price was: ₹260.00.₹208.00Current price is: ₹208.00. Rs
-36%
Compare
Quick view
Add to wishlist
Add to cart

Hasirushalu Baarukolu (ಪ್ರೊ. ಎಂಡಿಎನ್ ಅವರ ಚಿಂತನೆ ಹಾಗೂ ಹೋರಾಟಗಳ ವಿಶ್ಲೇಷಣೆ)

Dr. Savitha B.C., Our Books, ಸಂಶೋಧನೆ
₹350.00 Original price was: ₹350.00.₹225.00Current price is: ₹225.00. Rs
-20%
Compare
Quick view
Add to wishlist
Add to cart

Advocate Dairy

Prakash M Vastrad, Our Books, ಅಂಕಣ ಬರಹ
₹220.00 Original price was: ₹220.00.₹176.00Current price is: ₹176.00. Rs
-32%
Compare
Quick view
Add to wishlist
Add to cart

Bommanahalli Jangama

Dr. Sheela Hosamane, Our Books, ಸಂಕೀರ್ಣ
₹220.00 Original price was: ₹220.00.₹150.00Current price is: ₹150.00. Rs
-32%
Compare
Quick view
Add to wishlist
Add to cart

Aatada Mela

Keremane Shivananda Hegde, Our Books, ಆತ್ಮಕತೆ
₹220.00 Original price was: ₹220.00.₹150.00Current price is: ₹150.00. Rs
-25%
Compare
Quick view
Add to wishlist
Add to cart

Danivariyada Guru (M.M.Kalburgi’s Life And Literary Thoughts)

Dr. F.T.Hallikeri, Our Books, ಸಂಕೀರ್ಣ
₹200.00 Original price was: ₹200.00.₹150.00Current price is: ₹150.00. Rs
-20%
Compare
Quick view
Add to wishlist
Add to cart

Premapatra: Vaikom Muhammad Basheer Kathegalu (Anthology of stories)

Dr. Mohana Kuntar, Our Books, ಅನುವಾದ, ಸಣ್ಣಕತೆ
₹350.00 Original price was: ₹350.00.₹280.00Current price is: ₹280.00. Rs
-35%
Compare
Quick view
Add to wishlist
Add to cart

Eradu Kannu Onde Drusthi (Atte-Sose)

Sudha Sharma Chavatti, Our Books, ಸಂಕೀರ್ಣ
₹200.00 Original price was: ₹200.00.₹130.00Current price is: ₹130.00. Rs

YP logoPNG 03 09 24 (1)
  • Yaji Publications, C/o Umamaheshwar Building Near Seenambhat Office 4th Ward, Patel Nagar Hosapete Vijayanagar Dist. Karnataka 583201
  • Phone: +91-7019637741 +91-9449922800
  • Email: yajiprakashana@gmail.com
Share:

Recent Publication
  • ಜುಲೈ ೨೨ ೧೯೪೭
    January 30, 2025 No Comments
  • ಕಾಲನ ಕೂಸು
    January 30, 2025 No Comments
USEFUL LINKS
  • Privacy Policy
  • Returns
  • Terms & Conditions
  • Contact Us
  • Latest Post
Footer Menu
  • New Books
  • Contact Us
  • Latest News
Yaji Prakashana 2025 CREATED BY Kalahamsa Infotech. PREMIUM WEBSITE SOLUTIONS.
  • Menu
  • Categories
  • New Books
  • Contact Us
  • Latest News
  • Home
  • Shop
  • Authors
  • Portfolio
  • About us
  • Contact us
  • Wishlist
  • Compare
  • Login / Register
Shopping cart
Close
Sign in
Close

Lost your password?

No account yet?

Create an Account
Start typing to see products you are looking for.
error: Content is protected !!
Shop
Wishlist
2 items Cart
My account