ಮುನ್ನುಡಿ
ಮಕ್ಕಳಿಗೆ ರಜಾ ಎಂದರೆ ಸಂತೋಷದ, ಹೊಸತನದ, ಕುತೂಹಲ ತುಂಬಿದ ದಿನಗಳು. ಶಾಲೆಯ ಬಿಗಿಯಾದ ಕಟ್ಟುನಿಟ್ಟಿನ ದಿನಚರಿಯಿಂದ ಮುಕ್ತವಾಗಿ ಆಟ, ಮೋಜು, ಸಂಚಾರ, ಸಂಭ್ರಮದ ಹಬ್ಬಗಳು ಅವರ ದಿನಚರಿಯ ಭಾಗವಾಗುತ್ತವೆ. ಇವು ಮಕ್ಕಳಿಗೆ ಹೊಸತನವನ್ನು ಕಂಡುಹಿಡಿಯುವ, ಹೊಸತನ್ನು ಅರ್ಥ ಮಾಡಿಕೊಳ್ಳುವ ಮತ್ತು ಜೀವನದ ಸುಂದರ ಕ್ಷಣಗಳನ್ನು ಅನುಭವಿಸುವ ಅಮೃತ ಕ್ಷಣಗಳು.
ಅವರು ಕಂಡದ್ದನ್ನು, ಕೇಳಿದ್ದನ್ನು, ಓದಿದ್ದನ್ನು ದಾಖಲಿಸುವುದು ಶಿಕ್ಷಣದ ಒಂದು ಅವಿಭಾಜ್ಯ ಅಂಗ. ಭಾವನೆಗಳನ್ನು ಅಕ್ಷರಕ್ಕಿಳಿಸುವುದು ಒಂದು ಸುಂದರ ಪ್ರಕ್ರಿಯೆ. ಹೀಗೆ ಪುಟ್ಟ ಪುಟ್ಟ ಘಟನೆಗಳನ್ನು ದಾಖಲಿಸಿದ ಮಕ್ಕಳು ಮುಂದೆ ಅಸಾಮಾನ್ಯ ಲೇಖಕರಾದದ್ದನ್ನು ಪ್ರಪಂಚ ಕಂಡಿದೆ. ಈ ಲೇಖನಗಳು ಮುಂದೆ ಮರವಾಗಬಹುದದಕ್ಕೆ ಬೀಜರೂಪ.
ಬುಗುರಿ ಹೀಗೆ ಮಕ್ಕಳ ಅನುಭವಗಳ ಅದ್ಭುತ ದಾಖಲೆ. ಪ್ರತಿಯೊಬ್ಬ ಮಗುವಿಗೂ ಅದರದೇ ಆದ ವಿಶಿಷ್ಟ ಅನುಭವವಿದೆ. ಕೆಲವರು ಹಳ್ಳಿಯ ಮನೆಗಳಲ್ಲಿ ಅಜ್ಜಿ-ತಾತನ ಪ್ರೀತಿಯ ಆಲಿಂಗನದಲ್ಲಿ ಕರಗಿ ಹೋಗುತ್ತಾರೆ, ಕೆಲವರಿಗೆ ತಾವು ತಿರುಗಾಡಿದ ಹೊಲ, ಗದ್ದೆ, ನದಿ, ತೋಟಗಳ ನೆನಪು ಕಾಡುತ್ತದೆ, ಇನ್ನೂ ಕೆಲವರು ದೂರದ ಪ್ರದೇಶಗಳಿಗೆ, ನಗರಗಳಿಗೆ ಪ್ರವಾಸ ಹೋಗಿ ಅಲ್ಲಿಯ ಪ್ರೇಕ್ಷಣೀಯ ಸ್ಥಳಗಳ ಇತಿಹಾಸವನ್ನು ತಿಳಿಯುವುದರಲ್ಲಿ ಸಂಭ್ರಮಿಸುತ್ತಾರೆ. ಕೆಲವರಿಗೆ ತಾನು ಕಂಡ ಕಡಲತೀರದ ಕನಸುಗಳು ಇನ್ನೂ ಒಡೆದಿಲ್ಲ, ಮತ್ತೆ ಕೆಲವರ ಬಾಯಿಯಲ್ಲಿ ಆಗ ತಿಂದ ಅನೇಕ ತಿಂಡಿಗಳ ಘಮಲು ಇದೆ, ಕೆಲವು ಮಕ್ಕಳು ತಮ್ಮ ಅನುಭವಕ್ಕೆ ಬಂದ ಪುಟ್ಟ ಘಟನೆಗಳನ್ನು ಅವುಗಳಿಂದ ತಾವು ಪಡೆದ ಪ್ರೇರಣೆಯನ್ನು ಅಷ್ಟೇ ಗಾಢವಾಗಿ ವಿವರಿಸುತ್ತಾರೆ.
ಹೀಗೆ ಬುಗುರಿ ಪೋದಾರ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಸುಕೇಶ ಸೇರಿಗಾರ ಅವರ ಪ್ರೇರಣೆಯ, ಶ್ರೀ ಶ್ರೀಧರ ಭಟ್ಟರ ಪ್ರಚೋದನೆ, ಪರಿಶ್ರಮವಾಗಿ ನಮ್ಮ ಮುಂದೆ ನಿಂತಿದೆ. ಈ ಬುಗುರಿ ಹೀಗೆ ತಿರುಗುತ್ತಲೇ ಇರಬೇಕು. ತಿರುಗುತ್ತಲೇ ಮಕ್ಕಳ ಸೃಜನಶೀಲತೆಯನ್ನು ಕೆಣಕುತ್ತಲೇ ಇರಬೇಕು. ಹೊಸದೊಂದು ಸಾಹಿತ್ಯ ಪ್ರಕಾರಕ್ಕೆ ನಾಂದಿಯಾಗಬೇಕು.
ಬುಗುರಿಯ ಕಥೆಗಳ ಮೂಲಕ ಮಕ್ಕಳು ಹೊಸ ಜಗತ್ತನ್ನು ಅನ್ವೇಷಿಸಲು ಸಿದ್ಧರಾಗಲಿ. ಆಟ, ವಿನೋದ, ಸಾಹಸ ಮತ್ತು ಪ್ರೀತಿ ತುಂಬಿದ ಈ ಪುಟಗಳು ಮಕ್ಕಳ ಜಿಜ್ಞಾಸೆಗೆ, ಕಲಿಕೆಗೆ ಸಂತೋಷದ ಸಂಗತಿಯಾಗಲಿ.
ಸರ್ವವೂ ಶುಭವಾಗಲಿ.
ಬೆಂಗಳೂರು –ಡಾ. ಗುರುರಾಜ ಕರಜಗಿ
೧೦.೦೨.೨೦೨೫
ನುಡಿತೇರು
ನನ್ನ ಪ್ರೀತಿಯ ಪುಟ್ಟ ಗೆಳೆಯರೆ!
ಮೊದಲು ನಿಮಗೆ ಒಂದು ಕಥೆಯನ್ನು ಹೇಳುತ್ತೇನೆ.
ಒಂದು ಶಾಲೆ. ಪಾಠಗಳೆಲ್ಲ ಮುಗಿದವು. ಪರೀಕ್ಷೆಗೆ ಇನ್ನು ೧೫ ದಿನಗಳು ಮಾತ್ರ ಇದ್ದಿತು. ಅಧ್ಯಾಪಕರು ವಿದ್ಯಾರ್ಥಿಗಳನ್ನುದ್ದೇಶಿಸಿ ನಾಳೆಯಿಂದ ನಿಮಗೆ ಪರೀಕ್ಷೆಗೆ ಓದಿಕೊಳ್ಳಲೆಂದು ರಜೆಯನ್ನು ನೀಡುತ್ತಿದ್ದಾರೆ. ಹಾಗಾಗಿ ನೀವು ಇದುವರೆಗೂ ಎಷ್ಟರ ಮಟ್ಟಿಗೆ ಓದಿದ್ದೀರಿ, ಎಷ್ಟರ ಮಟ್ಟಿಗೆ ನೆನಪಿನಲ್ಲಿ ಇಟ್ಟುಕೊಂಡಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಒಂದಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ನೋಡೋಣ ಎಷ್ಟು ಜನರು ಸರಿಯಾದ ಉತ್ತರವನ್ನು ಕೊಡುತ್ತಾರೆ ಅಂತ ಎಂದು ಹೇಳಿದರು. ಕೆಲವು ವಿದ್ಯಾರ್ಥಿಗಳು ’ಹೂಂ! ಕೇಳಿ ಸರ್’ ಎಂದರೆ ಉಳಿದವರು ಕುಳಿತಲ್ಲಿಯೇ ’ಇದೇನಪ್ಪ… ಈಗ ಪ್ರಶ್ನೆ ಕೇಳ್ತಾರಂತೆ. ನಾನು ರಜೆಯಲ್ಲಿ ಓದ್ಕೊಳ್ಳೋಣ ಅಂತ ಇದ್ದೆ’ ಎಂದು ಗೊಣಗ ಲಾರಂಭಿಸಿದರು.
‘ಬೆಳಕು ಒಂದು ಮಾಧ್ಯಮದಿಂದ ಮತ್ತೊಂದು ಮಾಧ್ಯಮವನ್ನು ಪ್ರವೇಶಿಸಿದಾಗ, ಅದು ಬಾಗುತ್ತದೆ. ಇದಕ್ಕೆ ಕಾರಣವೇನು?’ ಎಂದರು. ’ವಕ್ರೀಭವನ ಸರ್’ ಕೂಗಿದರು ಹುಡುಗರು.
‘ವಿದ್ಯುದಾವೇಶಗಳ ಎಸ್ಐ ಏಕಮಾನವೇನು?’ ಎನ್ನುತ್ತಿದ್ದಂತೆಯೇ ಹುಡುಗರು ’ಕೂಲಂಬ್’ ಸರ್ ಎಂದು ಒಟ್ಟಿಗೆ ಕೂಗಿದರು.
‘ಒಂದು ವಾಹಕದಲ್ಲಿ ವಿದ್ಯುತ್ ಹರಿಯುತ್ತಿದ್ದರೆ, ಅದು ಕಾಂತದಂತೆ ವರ್ತಿಸುತ್ತದೆ. ಇದನ್ನು ಏನೆಂದು ಕರೆಯುವರು?’ ತರಗತಿಯಲ್ಲಿ ಸ್ವಲ್ಪ ಹೊತ್ತು ನಿಃಶ್ಯಬ್ದ. ಆನಂತರ ತರಗತಿಯಲ್ಲಿ ಬುದ್ಧಿವಂತೆ ಎನಿಸಿಕೊಂಡ ಹುಡುಗಿ ’ಕಾಂತೀಯ ಪರಿಣಾಮ ಅಲ್ವಾ ಸರ್’ ಎಂದು ಕೇಳಿದಾಗ ’ಹೌದು’ ಎಂದರು.
ಭಾರತದ ಪರಮಾಣು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಯುರೇನಿಯಂ ಬಳಸುತ್ತಿದ್ದಾರೋ ಅಥವ ಥೋರಿಯಂ ಬಳಸುತ್ತಿದ್ದಾರೋ ಹೇಳಿ ನೋಡೋಣ. ಹಾಗೆ ನಿಮ್ಮ ಉತ್ತರಕ್ಕೆ ಕಾರಣವನ್ನೂ ಕೊಡಬೇಕು’ ಎಂದರು. ಕೊನೆಗೆ ಒಬ್ಬ ಹುಡುಗ ಎದ್ದು ನಿಂತು ’ಸರ್.. ನಿಮ್ಮ ಪ್ರಶ್ನೆಗೆ ಅರ್ಧ ಉತ್ತರ ಗೊತ್ತು ಸರ್’ ಎಂದ. ’ಪರವಾಗಿಲ್ಲ ಹೇಳು’ ಎಂದರು. ’ಥೋರಿಯಂ ಸರ್’ ಎಂದ.’ ಹೌದು ನೀನು ಹೇಳಿದ್ದು ಸರಿಯಾಗಿದೆ. ಭಾರತ ಪರಮಾಣು ರಾಷ್ಟ್ರವಾಗುವುದು ಪಾಶ್ಚಾತ್ಯ ದೇಶಗಳಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರು ಪರಮಾಣು ವಿದ್ಯುತ್ ಉತ್ಪಾದನೆಗೆ ಬೇಕಾದ ಯುರೇನಿಯಂ ಧಾತುವನ್ನು ನಿಮಗೆ ಕೊಡುವುದಿಲ್ಲ ಎಂದರು. ಆಗ ನಮ್ಮ ಹೋಮಿ ಭಾಭಾ ಅವರು ’ಚಿಂತೆಯಿಲ್ಲ. ನಿಮ್ಮ ಯುರೇನಿಯಂನ್ನು ನೀವೇ ಇಟ್ಕೊಳ್ಳಿ. ನಾವು ನಮ್ಮ ಥೋರಿಯಂ ಬಳಸಿ ವಿದ್ಯುತ್ ಉತ್ಪಾದನೆ ಮಾಡುತ್ತೇವೆ’ ಎಂದರು. ಹಾಗೆಯೇ ಮಾಡಿಯೂ ತೋರಿಸಿದರು. ನಮ್ಮ ದೇಶದಲ್ಲಿ ಥೋರಿಯಂ ವಿಪುಲವಾಗಿ ಸಿಗುವ ಕಾರಣ, ಇವತ್ತು ನಮ್ಮ ದೇಶವು ಪರಮಾಣು ರಾಷ್ಟ್ರವಾಗಿದೆ’ ಎಂದರು. ಹೀಗೆ ಬಹಳ ಹೊತ್ತು ಪ್ರಶ್ನೋತ್ತರಗಳು ನಡೆದವು.
‘ಮಕ್ಕಳೆ! ನೀವು ಚೆನ್ನಾಗಿ ಉತ್ತರವನ್ನು ನೀಡಿದ್ದೀರಿ. ವಿಜ್ಞಾನದ ಬಗ್ಗೆ, ಗಣಿತದ ಬಗ್ಗೆ, ಇತಿಹಾಸದ ಬಗ್ಗೆ, ಭೂಗೋಳದ ಬಗ್ಗೆ ಎಲ್ಲ ಬಹಳ ಚೆನ್ನಾಗಿ ಉತ್ತರವನ್ನು ನೀಡಿದ್ದೀರಿ. ನನಗೆ ತುಂಬಾ ಸಂತೋಷವಾಗಿದೆ. ಕೊನೆಯ ಒಂದು ಪ್ರಶ್ನೆಯನ್ನು ಕೇಳುತ್ತೇನೆ. ಇದಕ್ಕೆ ಉತ್ತರ ಕೊಟ್ಟವರಿಗೆ ಒಂದು ಫೈವ್ ಸ್ಟಾರ್ ಚಾಕೊಲೆಟ್ ಬಹುಮಾನವನ್ನು ಕೊಡುತ್ತೇನೆ’ ಎಂದರು. ಹುಡುಗರೆಲ್ಲ ಹೋ ಎಂದು ಕೂಗುತ್ತಾ ಕೇಳಿ ಸರ್ ಎಂದು ಒಟ್ಟಿಗೆ ಕೂಗಿದರು.
ವಿದ್ಯಾರ್ಥಿಗಳೇ, ನೀವು ಪ್ರತಿದಿನ ಶಾಲೆಗೆ ಬರುವುದಕ್ಕೆ ಮೊದಲೇ ನಿಮ್ಮ ಕ್ಲಾಸ್ ರೂಮನ್ನು ಸ್ವಚ್ಛಗೊಳಿಸುತ್ತಾಳಲ್ಲ, ಆಕೆಯ ಹೆಸರೇನು?” ಎಂದು ಕೇಳಿದರು.
ತರಗತಿಯಲ್ಲಿ ದಟ್ಟ ಮೌನ ಆವರಿಸಿತು.
ಅದೇ!…ಆ ವಯಸ್ಸಾದ ಹೆಂಗಸಿದ್ದಾಳಲ್ಲ. ದೊಡ್ಡ ಕುಂಕುಮ, ತುಸ ಒಣಕಲು ಶರೀರ, ಕಪ್ಪು ಬಣ್ಣ” ಎಂದು ಅವಳನ್ನು ಬಣ್ಣಿಸಲು ಆರಂಭಿಸಿದರು. ಆದರೆ ಆಕೆಯ ಹೆಸರನ್ನು ಯಾವೊಬ್ಬ ವಿದ್ಯಾರ್ಥಿಯೂ ಹೇಳಲಿಲ್ಲ”
ಅಧ್ಯಾಪಕರಿಗೆ ಬೇಸರವಾಯಿತು. ನೀವೆಲ್ಲರೂ ಆಕೆಯ ಹೆಸರನ್ನು ಹೇಳಬಹುದು ಎಂದು ಭಾವಿಸಿದ್ದೆ. ಆದರೆ ನಿಮ್ಮ ಪೈಕಿ ಒಬ್ಬರಿಗೂ ಆಕೆಯ ಹೆಸರು ಗೊತ್ತಿಲ್ಲ. ಹಾಗಂತ ಪ್ರತಿದಿನ ನೀವು ಅವಳನ್ನು ನೋಡಿದ್ದೀರಾ. ಆದರೆ ಆಕೆ ಜತೆ ಮಾತಾಡಿಲ್ಲ. ಅವಳ ಹೆಸರನ್ನು ಕೇಳಿಲ್ಲ. ಆಕೆ ಒಂದು ದಿನ ಬರದಿದ್ದರೆ ನಿಮ್ಮ ತರಗತಿ ಹೇಗೆ ಗೊಬ್ಬರದ ಗುಂಡಿ ಆಗಿರುತ್ತದೆ ಎನ್ನುವುದು ನಿಮಗೆ ಗೊತ್ತು. ಆದರೆ ಹಾಗೆ ಆಗದಂತೆ, ಆಕೆ ನಿತ್ಯವೂ ಸ್ವಚ್ಛಗೊಳಿಸುತ್ತಾಳೆ. ಅಂಥವಳ ಹೆಸರನ್ನು ತಿಳಿದುಕೊಳ್ಳಬೇಕೆಂದು ನಿಮಗೆ ಯಾಕೆ ಅನಿಸಲಿಲ್ಲ? ನಮ್ಮ ಸುತ್ತಮುತ್ತ ಇರುವ ಅನೇಕರು ನಮಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಾಯವನ್ನು ಮಾಡುತ್ತಿರುತ್ತಾರೆ. ಅಂತಹವರ ಬಗ್ಗೆ ಅವರ ಯೋಗಕ್ಷೇಮವನ್ನು ಬಿಡಿ, ಕನಿಷ್ಠ ಅವರ ಹೆಸರೇನು ಎಂಬುದನ್ನಾದರೂ ತಿಳಿದಿರಬೇಕಲ್ಲವೆ! ಇದೇ ಏನು ನಾವು ಕಲಿತಿರುವ ಪಾಠ? ನಮಗೆ ದಿನ ನಿತ್ಯ ನೆರವಾಗುವ ಆಕೆಗೆ ತುಸುವಾದರೂ ಗೌರವ-ಕೃತಜ್ಞತೆಯನ್ನು ತೋರಬೇಕಿತ್ತಲ್ಲವೆ!… ಯಾಕೆ ನಾವು ತೋರುತ್ತಿಲ್ಲ” ಎಂದು ಪ್ರಶ್ನೆಯನ್ನು ಕೇಳಿದರು.
ಎಲ್ಲ ವಿದ್ಯಾರ್ಥಿಗಳು ತುಸು ಅಪರಾಧಿ ಮನೋಭಾವದಿಂದ ತಲೆಯನ್ನು ತಗ್ಗಿಸಿದರು.
ನನ್ನ ಎಳೆಯ ಗೆಳೆಯರೆ!
ನಾನು ಹೇಳಿದ ಕಥೆಯನ್ನು ಹೇಳಿದವರು ನಮ್ಮ ದೇಶದ ಬಹು ದೊಡ್ಡ ಉದ್ಯಮಿ ಭಾರತರತ್ನ ಜಹಾಂಗೀರ್ ರತನ್ಜಿ ದಾದಾಭೋಯ್ ಟಾಟ ಅಥವ ಜೆಆರ್ಡಿ ಟಾಟ (೧೯೦೪-೧೯೯೩). ಟಾಟ ಅವರು ತಮ್ಮ ಅಧ್ಯಾಪಕರಿಂದ ಕಲಿತ ಪಾಠವನ್ನು ತಮ್ಮ ಜೀವನದಾದ್ಯಂತ ಪರಿಪಾಲಿಸಿದರು. ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ವೈಯುಕ್ತಿಕ ಪರಿಚಯವನ್ನು ಅವರು ಪ್ರಜ್ಞಾಪೂರ್ವಕವಾಗಿ ಮಾಡಿಕೊಳ್ಳುತ್ತಿದ್ದರು.
ಮನೆಯೆಂಬ ಪಾಠಶಾಲೆ: ಟಾಟ ಅವರು ಮಾತ್ರವಲ್ಲ, ನಾವೂ ಸಹ ನಮ್ಮ ಬದುಕಿನಲ್ಲಿ ಬರುವ ಅನೇಕ ಜನರ ಹೆಸರನ್ನೂ ತಿಳಿದುಕೊಳ್ಳಲು ಹೋಗುವುದಿಲ್ಲ. ’ಅವರಿರುವುದೋ ನಮಗೆ ಸಹಾಯ ಮಾಡಲಿಕ್ಕೆ’ ಎಂಬ ಧೋರಣೆಯನ್ನು ತಾಳುತ್ತೇವೆ. ಒಂದು ರೀತಿಯ ತಾತ್ಸಾರ ಇಲ್ಲವೇ ಉದಾಸೀನತೆ ನಮ್ಮಲ್ಲಿ ಮನೆ ಮಾಡಿರುತ್ತದೆ. ಇದು ಸರಿಯೇ ಎಂದು ಪ್ರಶ್ನೆಯನ್ನು ಕೇಳಿದರೆ ’ಇದು ಸರಿಯಲ್ಲ. ನಮಗೆ ನೆರವಾದವರನ್ನು ಕೃತಜ್ಞತೆಯಿಂದ ನೆನೆಯಬೇಕಾದದ್ದು ನಮ್ಮ ಕರ್ತವ್ಯ ಮಾತ್ರವಲ್ಲ, ಧರ್ಮವೂ ಹೌದು’ ಎಂಬ ಉತ್ತರವನ್ನು ನೀವು ಕೊಡಬಹುದು. ಆದರೂ ನಾವು ಏಕೆ ಹೀಗೆ ವರ್ತಿಸುತ್ತೇವೆ ಎಂಬ ಪ್ರಶ್ನೆಯು ಮಾತ್ರ ಯಕ್ಷಪ್ರಶ್ನೆಯ ಹಾಗೆ ನಮ್ಮ ಮುಂದೆ ನಿಲ್ಲುತ್ತದೆ.
ಇದಕ್ಕೆ ಕಾರಣ ನಮ್ಮ ಹೆತ್ತವರು, ನಮ್ಮ ಅಧ್ಯಾಪಕರು, ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ನಮ್ಮ ಸಮಾಜ. ನಮ್ಮ ಮಕ್ಕಳಲ್ಲ. ನಮ್ಮ ಮಕ್ಕಳ ಮನಸ್ಸು ಹಸಿಯ ಗೋಡೆಯು ಇದ್ದ ಹಾಗೆ. ಕಲ್ಲನ್ನು ಎಸೆದರೆ ಕಲ್ಲು ಕಚ್ಚಿಕೊಳ್ಳುತ್ತದೆ. ಮುತ್ತಿನಿಂದ ಹೊಡೆದರೆ, ಮುತ್ತು ನಾಟಿಕೊಳ್ಳುತ್ತದೆ. ವಜ್ರದಿಂದ ಹೊಡೆದರೆ ಗೋಡೆಯಲ್ಲಿ ನಾಟುವ ವಜ್ರವು ಅಲ್ಲಿಂದಲೇ ಎಲ್ಲ ಕಡೆಗೆ ತನ್ನ ಪ್ರಭೆಯನ್ನು ಹರಡುತ್ತದೆ.
‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರುವು, ಜನನಿಯಿಂದ ಪಾಠ ಕಲಿತ ನಾವೇ ಧನ್ಯರು’ ಎಂಬ ಅದ್ಭುತವಾದ ಗೀತೆಯನ್ನು ಎಲ್.ಗುಂಡಪ್ಪನವರು ಬರೆದಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಆದರೆ ಇಂದಿನ ತಂದೆ ತಾಯಂದಿರು, ಅಧ್ಯಾಪಕರು, ಶಿಕ್ಷಣ ವ್ಯವಸ್ಥೆ ಹಾಗೂ ಸಮಾಜವು ಗುಂಡಪ್ಪನವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತನ್ನು ನೀಡುತ್ತಿಲ್ಲ ಎನ್ನುವುದು ಕಟು ವಾಸ್ತವ.
ತರ್ಕ ಮತ್ತು ಭಾವನೆಗಳು: ಮನುಷ್ಯನ ಮಿದುಳಿನಲ್ಲಿ ಎರಡು ಅರೆಗೋಳಗಳಿವೆ. ಎಡ ಅರೆಗೋಳ (ಲೆಫ್ಟ್ ಹೆಮಿಸ್ಫಿಯರ್) ಮತ್ತು ಬಲ ಅರೆಗೋಳ (ರೈಟ್ ಹೆಮಿಸ್ಫಿಯರ್). ಎಡ ಮತ್ತು ಬಲ ಅರೆಗೋಳಗಳು ತಮ್ಮದೇ ಆದ ಗುಣಲಕ್ಷಣಗಳನ್ನು ಜನ್ಮದತ್ತವಾಗಿ ಪಡೆದು, ಸ್ವತಂತ್ರವಾಗಿ ಆಲೋಚಿಸಬಲ್ಲ ಹಾಗೂ ಸ್ವತಂತ್ರವಾಗಿ ತೀರ್ಮಾನವನ್ನು ತೆಗೆದುಕೊಳ್ಳಬಲ್ಲ ಸಾಮರ್ಥ್ಯವಿರುವ ರಚನೆಗಳು. ಈ ಎಡ ಮತ್ತು ಬಲ ಅರೆಗೋಳಗಳನ್ನು ಪರಸ್ಪರ ಸಂಪರ್ಕಿಸಬಲ್ಲ ನರಗಳ ಸೇತುವೆಯಿದೆ. ಅದುವೇ ’ಕಾರ್ಪಸ್ ಕೆಲೋಸಮ್’ ಎಂಬ ರಚನೆ. ಈ ನರಸೇತುವೆಯ ಮೂಲಕ ಎಡ ಮತ್ತು ಬಲ ಅರೆಗೋಳಗಳು ಪರಸ್ಪರ ಸಂಪರ್ಕಿಸಬಲ್ಲವು. ವಿಚಾರ ವಿನಿಮಯವನ್ನು ಮಾಡಿಕೊಳ್ಳಬಲ್ಲವು. ಹಲವು ವಿಚಾರಗಳಲ್ಲಿ ಸ್ವತಂತ್ರವಾಗಿ ತೀರ್ಮಾನವನ್ನು ತೆಗೆದುಕೊಂಡರೂ ಸಹ, ಕೆಲವು ವಿಚಾರಗಳಲ್ಲಿ ಪರಸ್ಪರ ವಿಚಾರ ವಿನಿಮಯ ವಿಶ್ಲೇಷಣೆಯನ್ನು ನಡೆಸಿ ಒಟ್ಟಿಗೆ ತೀರ್ಮಾನವನ್ನು ತೆಗೆದುಕೊಳ್ಳುತ್ತವೆ.
ಎಡ ಅರೆಗೋಳವು ಪ್ರಧಾನವಾಗಿ ತಾರ್ಕಿಕ ಮಿದುಳು (ಲಾಜಿಕಲ್ ಬ್ರೇನ್). ತರ್ಕ, ಗಣಿತ, ವಿಜ್ಞಾನ, ಅಂಕೆ ಸಂಖ್ಯೆಗಳು ಎಂದರೆ ಬಹಳ ಇಷ್ಟ. ಅಧ್ಯಾಪಕರು ಕೇಳಿದ ಎಲ್ಲ ಪ್ರಶ್ನೆಗಳಿಗೆ ಕರಾರುವಾಕ್ಕಾಗಿ ಉತ್ತರ ನೀಡಲು ನೆರವಾದದ್ದು ಎಡ ಅರೆಗೋಳ. ಅಂಕೆಸಂಖ್ಯೆ, ಹೆಸರು, ಇಸವಿ ಮುಂತಾದ ಮಾಹಿತಿ ವಿವರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅದರ ಕೆಲಸ. ಬಲ ಅರೆಗೋಳವು ಪ್ರಧಾನವಾಗಿ ಭಾವನಾತ್ಮಕ ಮಿದುಳು (ಇಮೋಶನಲ್ ಬ್ರೇನ್). ಹೆಸರೇ ಸೂಚಿಸುವ ಹಾಗೆ ಭಾವನೆಗಳೇ ಪ್ರಧಾನ. ನಾನು, ನನ್ನ ಅಪ್ಪ, ನನ್ನ ಅಮ್ಮ, ನನ್ನ ಮನೆ, ನನ್ನ ಭಾಷೆ, ನನ್ನ ದೇಶ ಎಂದರೆ ಹೆಮ್ಮೆ. ಸಾಹಿತ್ಯ, ಸಂಗೀತ, ನಾಟಕ, ಅಭಿನಯ, ನೃತ್ಯ ಬಹಳ ಇಷ್ಟ. ಇತರರ ನೋವಿಗೆ ತಕ್ಷಣ ಮಿಡಿಯುತ್ತದೆ. ಸಹಾಯವನ್ನು ಮಾಡಲು ಮುನ್ನುಗ್ಗುವಂತೆ ಪ್ರಚೋದಿಸುತ್ತದೆ. ’ತನ್ನಂತೆ ಪರರ ಬಗೆಯುವ’ ಉದಾತ್ತ ಮಿದುಳು. ಕಸ ಗುಡಿಸುವವಳೂ ಸಹ ಮುಖ್ಯ. ಶಾಲೆಯನ್ನು ಸ್ವಚ್ಛಗೊಳಿಸಿ ನಮಗೆ ನಿತ್ಯವೂ ನೆರವಾಗುತ್ತಿದ್ದಾಳೆ, ಕೊನೆಯ ಪಕ್ಷ ಅವಳ ಹೆಸರನ್ನಾದರೂ ತಿಳಿದುಕೊಳ್ಳಬೇಕು, ಅವಳು ಎದುರು ಸಿಕ್ಕಾಗ, ಅವಳಿಗೆ ಒಂದು ನಮಸ್ತೆಯನ್ನಾದರೂ ಹೇಳಬೇಕು ಎಂದು ಬಲ ಅರೆಗೋಳವು ಆಲೋಚಿಸುತ್ತದೆ.
ಸವ್ಯಸಾಚಿ?: ನಾವು, ನಮ್ಮ ಶಿಕ್ಷಕರು, ನಮ್ಮ ಶಿಕ್ಷಣ ವ್ಯವಸ್ಥೆ ಹಾಗೂ ಸಮಾಜವು ನಮ್ಮ ಮಕ್ಕಳಿಗೆ ಕೇವಲ ಎಡ ಅರೆಗೋಳವು ಪ್ರಬುದ್ಧವಾಗಿ ಬೆಳೆಯುವಂತೆ ತರಬೇತಿಯನ್ನು ನೀಡಬೇಕೋ ಅಥವ ಕೇವಲ ಬಲ ಅರೆಗೋಳವು ಪ್ರಧಾನವಾಗಿ ಬೆಳೆಯುವಂತೆ ಶಿಕ್ಷಣವನ್ನು ನೀಡಬೇಕೋ? ಈ ಪ್ರಶ್ನೆಗೆ ಸರಳ ಉತ್ತರವೆಂದರೆ ನಮ್ಮ ಮಕ್ಕಳನ್ನು ಸವ್ಯಸಾಚಿಗಳನ್ನಾಗಿ ಬೆಳೆಸಬೇಕು. ಮಹಾಭಾರತದ ಅರ್ಜುನನಿಗೆ ಇದ್ದ ೧೦ ಹೆಸರುಗಳಲ್ಲಿ ’ಸವ್ಯಸಾಚಿ’ಯೂ ಒಂದು. ಅರ್ಜುನ ಎಡಗೈಯಿಂದ ಎಷ್ಟು ಚೆನ್ನಾಗಿ ಬಾಣವನ್ನು ಬಿಡಬಲ್ಲವನಾಗಿದ್ದನೋ, ಅಷ್ಟೇ ಚೆನ್ನಾಗಿ ಬಲಗೈಯಿಂದಲೂ ಬಾಣವನ್ನು ಬಿಡಬಲ್ಲವನಾಗಿದ್ದ. ಅವನು ತನ್ನ ಬಲಗೈ ಮತ್ತು ಎಡಗೈಗಳಿಗೆರಡಕ್ಕೂ ಸರಿಸಮಾನವಾದ ತರಬೇತಿಯನ್ನು ನೀಡಿದ್ದ. ಹಾಗೆಯೇ ನಾವು ನಮ್ಮ ಮಕ್ಕಳ ಎಡ ಮತ್ತು ಬಲ ಅರೆಗೋಳಗಳು ಪರಿಪೂರ್ಣವಾಗಿ ಬೆಳೆಯುವುದಕ್ಕೆ ಸಮಾನ ಅವಕಾಶವನ್ನು ಮಾಡಿಕೊಡಬೇಕು.
ಆದರೆ ವಾಸ್ತವತೆ ಏನಾಗಿದೆ?
ನಾವು ನಮ್ಮ ಮಕ್ಕಳ ಎಡ ಅರೆಗೋಳದ ಸಮಗ್ರ ಬೆಳವಣಿಗೆಗೆ ಮಾತ್ರ ಗಮನವನ್ನು ಕೊಡುತ್ತಿದ್ದೇವೆ. ನಮ್ಮ ಮಕ್ಕಳು ಇಂಜಿನಿಯರ್ ಆಗಬೇಕು ಅಥವ ಡಾಕ್ಟರ್ ಆಗಬೇಕು ಇಲ್ಲವೇ ಚಾರ್ಟೆಡ್ ಅಕೌಂಟೆಂಟ್ ಆಗಬೇಕು ಎನ್ನುವುದು ನಮ್ಮ ಹೆತ್ತವರ ಬಯಕೆ. ಈ ಮೂರು ಕ್ಷೇತ್ರಗಳೂ ಎಡ ಅರೆಗೋಳಕ್ಕೆ ಸಂಬಂಧಪಟ್ಟಿವೆ. ಹಾಗಾಗಿ ವಿಜ್ಞಾನಕ್ಕೆ ಮತ್ತು ಗಣಿತಕ್ಕೆ ನಾವು ಆದ್ಯತೆಯನ್ನು ಕೊಡುತ್ತಿದ್ದೇವೆ. ಕರ್ನಾಟಕದ ಯಾವುದೇ ತಾಲೂಕಿನಲ್ಲಿರುವ ಪದವಿಪೂರ್ವ ಕಾಲೇಜಿಗೆ ಹೋಗಿ ನೋಡಿ. ಅಲ್ಲಿ ಸೈನ್ಸ್ ಮತ್ತು ಕಾಮರ್ಸ್ ಮಾತ್ರ ಇರುತ್ತದೆ. ಆರ್ಟ್ಸ್ ಇರುವುದಿಲ್ಲ. ’ಆರ್ಟ್ಸ್ ಎನ್ನುವ ಒಂದು ವಿಷಯವು ಕಳೆದ ೫೦ ವರ್ಷಗಳ ಹಿಂದೆ ಇತ್ತು’ ಎನ್ನುವ ನೆನಪಿನ ಪಳೆಯುಳಿಕೆ ಮಾತ್ರ ಉಳಿದಿದೆ.
ಋಣ ಪೀಡಿತರು: ಅಮೆರಿಕದಲ್ಲಿರುವ ವೈದ್ಯರಲ್ಲಿ ೨೬.೫% ರಷ್ಟು ವೈದ್ಯರು ಭಾರತೀಯ ಮೂಲದವರು. ನಾಸಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿ ಹಾಗೂ ಇಂಜಿನಿಯರುಗಳಲ್ಲಿ ೩೬% ಜನರು ನಮ್ಮ ದೇಶಕ್ಕೆ ಸೇರಿದವರು. ಇವರು ನಮ್ಮ ನಾಡಿನಲ್ಲಿ, ನಮ್ಮ ಸರ್ಕಾರದ ಹಣವನ್ನು ಬಳಸಿಕೊಂಡು, ನಮ್ಮ ದೇಶದ ಅಧ್ಯಾಪಕರಿಂದಲೇ ಪಾಠವನ್ನು ಹೇಳಿಸಿಕೊಂಡವರು. ಆದರೆ ಅವರ ಸೇವೆಯು ಮಾತ್ರ ಭಾರತಕ್ಕೆ ದೊರೆಯುತ್ತಿಲ್ಲ. ಇದೆಂತಹ ವಿಪರ್ಯಾಸ!? ಅವರಿಗೆ ತಾಯಿ, ತಾಯಿನುಡಿ, ತಾಯಿನೆಲದ ಬಗ್ಗೆ ಯಾವುದೇ ಅಭಿಮಾನವಿಲ್ಲ. ಈ ದೇಶದ ಋಣವನ್ನು ಬೆನ್ನಿಗೆ ಕಟ್ಟಿಕೊಂಡು ಹೋಗಿರುವ ಅವರು, ತಾವು ಋಣಮುಕ್ತರಾಗಬೇಕು ಎನ್ನುವ ಕನಿಷ್ಟ ಪರಿವೆಯೂ ಇಲ್ಲದೆ ತಮ್ಮ ಸುಖದಲ್ಲಿ ಮುಳುಗಿದ್ದಾರೆ. ದೈವಋಣ, ಪಿತೃಋಣ, ಆಚಾರ್ಯ ಋಣ ಹಾಗೂ ಸಮಾಜ ಋಣಗಳನ್ನು ತೀರಿಸಬೇಕಾದದ್ದೇ ತಮ್ಮ ಬದುಕಿನ ಮೂಲ ಉದ್ದೇಶ ಎನ್ನುವುದನ್ನು ಇವರೆಲ್ಲ ಮರೆತು ಹೋಗಿದ್ದಾರೆ. ಏಕೆಂದರೆ ಇವರಿಗೆ ಇವರ ಹೆತ್ತವರು ಕೇವಲ ಇವರ ಎಡ ಅರೆಗೋಳದ ಸಮಗ್ರ ಬೆಳವಣಿಗೆಗೆ ಆದ್ಯತೆಯನ್ನು ಕೊಟ್ಟರೇ ಹೊರತು, ಬಲ ಅರೆಗೋಳಕ್ಕೆ ಕನಿಷ್ಟ ಆದ್ಯತೆಯನ್ನೂ ನೀಡುತ್ತಿಲ್ಲ. ಅವರು ತಾವು ಮಾಡಿದ ತಪ್ಪಿಗೆ ಈಗ ಮೌನವಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಮಲೆನಾಡು ಇಂದು ವೃದ್ಧಾಶ್ರಮವಾಗಿದೆ. ಈ ಇಳಿಗಾಲದಲ್ಲಿ ತಮ್ಮ ಮಕ್ಕಳು ಕಳುಹಿಸುವ ಲಕ್ಷಗಟ್ಟಲೆ ಹಣವು, ಅವರಿಗೆ ಅವರ ಮಕ್ಕಳ, ಮೊಮ್ಮಕ್ಕಳ ಪ್ರೀತಿಯನ್ನು ಕೊಟ್ಟೀತೆ? ಅನೇಕ ಹಿರಿಯರು ಹಳ್ಳಿಯಲ್ಲಿದ್ದ ಗದ್ದೆ, ತೋಟ, ಮನೆಯನ್ನು ಮಾರಿಕೊಂಡು ಅನಾಥಾಶ್ರಮವನ್ನು ಸೇರಿರುವುದು ಸುಳ್ಳಲ್ಲ. ಅನಾಥಾಶ್ರಮಗಳಲ್ಲೇ ಎಲ್ಲರೂ ಇದ್ದು, ಯಾರೂ ಇಲ್ಲದವರಂತೆ, ಅನಾಥವಾಗಿ ಸಾಯುತ್ತಿರುವುದು ಸುಳ್ಳಲ್ಲ. ಇದು ಇಂದಿನ ವಾಸ್ತವತೆಯ ಕಟು ಚಿತ್ರಣ.
ಬುಗುರಿ: ನಾನು ಶಿವಮೊಗ್ಗದ ಭಾರತೀಯ ವೈದ್ಯಕೀಯ ಸಂಘದ ಅಮೃತ ಮಹೋತ್ಸವ ಸಮಾರಂಭಕ್ಕೆಂದು ಬಂದಿದ್ದೆ. ಆಗ ನನ್ನನ್ನು ಪೋದಾರ್ ಇಂಟರ್ನ್ಯಾಶನಲ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಸುಕೇಶ ಸೇರಿಗಾರ ಹಾಗೂ ಕನ್ನಡ-ಸಂಸ್ಕೃತ ಪ್ರಾಧ್ಯಾಪಕರಾದ ಶ್ರೀ ಶ್ರೀಧರ ಭಟ್ಟರು ಭೇಟಿಯಾಗಿ ’ಬುಗುರಿ’ ಎಂಬ ಪುಸ್ತಕದ ನೆರಳುಪ್ರತಿ (ಫೋಟೋಕಾಪಿ) ಯನ್ನು ನೀಡಿದರು. ಅದನ್ನು ಈ ದಿನವಷ್ಟೇ ತೆಗೆದು ಓದಲು ಸಾಧ್ಯವಾಯಿತು. ಓದು ತ್ತಿರುವಂತೆಯೇ ಮನಸ್ಸು ತುಂಬಿ ಬಂದಿತು. ಎಲ್ಲೋ ಮನಸ್ಸಿಗೆ ಒಂದಿಷ್ಟು ನೆಮ್ಮದಿ ದೊರೆತದ್ದು ಸುಳ್ಳಲ್ಲ.
ಶ್ರೀಧರ ಭಟ್ಟರು ಒಂದು ಅಪರೂಪದ ಪ್ರಯೋಗವನ್ನು ಮಾಡಿದ್ದಾರೆ. ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ದಸರೆ ರಜೆಯನ್ನು ಮುಗಿಸಿ ಶಾಲೆಗಷ್ಟೇ ಬಂದಿದ್ದರು. ಅಂತಹ ಮಕ್ಕಳಿಗೆ ಅವರು ತಾವು ಕಳೆದ ರಜೆಯನ್ನು ಹೇಗೆ ಕಳೆದಿರಿ ಎನ್ನುವ ಬಗ್ಗೆ ಒಂದು ಲೇಖನವನ್ನು ಬರೆದುಕೊಂಡು ಬರುವಂತೆ ಹೇಳಿದರು. ಅದೂ ಕನ್ನಡದಲ್ಲಿ!… ಒಟ್ಟು ೧೨೦ ಮಕ್ಕಳು ಲೇಖನವನ್ನು ಬರೆದು ಕೊಟ್ಟಿದ್ದಾರೆ! ಶ್ರೀಧರ ಭಟ್ಟರು ಈ ಲೇಖನಗಳನ್ನೆಲ್ಲ ತಿದ್ದಿ ತೀಡಿ ಮತ್ತೆ ಬರೆಯುವಂತೆ ಪ್ರೋತ್ಸಾಹಿಸಿ, ಅಂತಿಮ ಕರಡನ್ನು ಸಿದ್ಧಪಡಿಸಿದ್ದಾರೆ. ಈ ಲೇಖನಗಳನ್ನು ಒಳಗೊಂಡಂತಹ ಒಂದು ಪುಸ್ತಕವನ್ನು ಹೊರತರಬೇಕೆಂದು ಶ್ರೀಧರ ಭಟ್ಟರ ಮಹದಾಸೆ. ಅವರ ಆಸೆಗೆ ಇಂಬು ಕೊಟ್ಟವರು ಶಾಲೆಯ ಪ್ರಾಂಶುಪಾಲರಾದ ಶ್ರೀ ಸುಕೇಶ ಸೇರಿಗಾರ ಅವರು. ಈ ೧೨೦ ಮಕ್ಕಳೂ ಸಹ ಬಹುಶಃ ತಮ್ಮ ಮೊದಲ ಲೇಖನವು ಪುಸ್ತಕ ರೂಪದಲ್ಲಿ ಬರುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ ಸಧ್ಯಕ್ಕೆ ಮೊದಲ ೩೯ ಲೇಖನಗಳು ಮಾತ್ರ ಪುಸ್ತಕ ರೂಪದಲ್ಲಿ ಬರುತ್ತಿದೆ. ಉಳಿದ ಲೇಖನಗಳು ಮುಂದೆ ಎರಡು ಪುಸ್ತಕಗಳ ರೂಪದಲ್ಲಿ ಬರಲಿ ಎಂದು ಆಶಿಸುತ್ತಿದ್ದೇನೆ. ಮೊದಲ ೩೯ ಲೇಖನಗಳನ್ನು ಒಳಗೊಂಡ ಪುಸ್ತಕಕ್ಕೆ ’ಬುಗುರಿ’ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಈ ಪುಸ್ತಕವನ್ನು ಪ್ರಕಾಶಿಸುತ್ತಿರುವವರು ಬಂಧುಗಳಾದ ಸವಿತಾ ಯಾಜಿ ಮತ್ತು ಗಣೇಶ ಯಾಜಿ ದಂಪತಿಗಳು. ತಮ್ಮ ಯಾಜಿ ಪ್ರಕಾಶನದ ಮೂಲಕ ಲೋಕಾರ್ಪಣೆಯನ್ನು ಮಾಡುತ್ತಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭವನ್ನೂ ಹಾರೈಸುತ್ತಿದ್ದೇನೆ.
ನನಗೆ ಈ ಪುಸ್ತಕವು ಇಷ್ಟವಾಗಿದೆ. ಅದಕ್ಕೆ ಕಾರಣಗಳು ಈ ಕೆಳಕಂಡಂತಿವೆ.
೧. ಇದು ಮಕ್ಕಳು ಬರೆದ ಲೇಖನಗಳ ಸಂಗ್ರಹ.
೨. ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿರುವ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು.
೩. ಇಂತಹ ಮಕ್ಕಳು ತಮ್ಮ ’ರಜೆಯ ರಸಾಯನ’ವನ್ನು ಕನ್ನಡದಲ್ಲಿ ನೀಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ.
೪. ಮಕ್ಕಳ ಕೈಯಲ್ಲಿ ಇಂತಹ ಲೇಖನಗಳನ್ನು ಬರೆಯಿಸಬೇಕೆಂಬ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಶ್ರೀಧರ ಭಟ್ಟ ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀ ಸುಕೇಶ ಸೇರಿಗಾರ ಅವರ ಸಾಹಸವನ್ನು ಮೆಚ್ಚಬೇಕು.
೫. ಕೇವಲ ಮಿದುಳಿನ ಎಡಗೋಳಕ್ಕೆ ಗಣಿತ-ವಿಜ್ಞಾನಗಳನ್ನು ಅರೆದು ಕುಡಿಸುತ್ತಿರುವ ಶಾಲೆಗಳಲ್ಲಿ, ಮಕ್ಕಳ ಬಲ ಅರೆಗೋಳದ ವಿಕಸನಕ್ಕೆ ಅಗತ್ಯವಾದ ಸೊಗಸಾದ ಸವಾಲನ್ನು ನೀಡಿ, ಅವರ ಬಲ ಅರೆಗೋಳವೂ ಚೆನ್ನಾಗಿ ಅಭಿವೃದ್ಧಿಯಾಗುತ್ತಿದೆ ಎನ್ನುವುದಕ್ಕೆ ಪುರಾವೆಯ ರೂಪದ ಲೇಖನಗಳಿಲ್ಲಿವೆ.
ಪ್ರಬುದ್ಧ ಪ್ರಯತ್ನ: ಒಂದು ಮಾತನ್ನು ನಾನು ಇಲ್ಲಿ ಸ್ಪಷ್ಟವಾಗಿ ಹೇಳಲೇಬೇಕು. ಇಲ್ಲಿರುವ ಲೇಖನಗಳನ್ನು ನೋಡಿದರೆ, ನಿಜಕ್ಕೂ ಇವನ್ನು ಮಕ್ಕಳು ಬರೆದರೆ ಎಂದು ಬೆರಗಿನಿಂದ ಪ್ರಶ್ನೆಯನ್ನು ಕೇಳಬೇಕಾಗಿದೆ. ಅನೇಕ ಲೇಖನಗಳನ್ನು ಯಾರೋ ಪ್ರಬಂಧ ರಚನೆಯಲ್ಲಿ ಪ್ರಬುದ್ಧತೆಯನ್ನು ಪಡೆದ ಮಹಾನುಭಾವರು ಬರೆದಿರಬೇಕು ಎಂದು ಭಾಸವಾಗುತ್ತದೆ. ಪರಿಕಲ್ಪನೆ, ಭಾಷೆ, ಮುಖ್ಯಾಂಶಗಳ ಆಯ್ಕೆ, ಅವುಗಳ ಮಂಡನೆ ಹಾಗೂ ಮುಗಿಸುವ ಶೈಲಿ ಆಕರ್ಷಕವಾಗಿದೆ.
ಲೇಖನದಲ್ಲಿ ತುಂಬಾ ಶ್ಲಾಘನೀಯ ವಿಚಾರವೆಂದರೆ, ಮಕ್ಕಳು ತಾವು ಕಂಡ ಸ್ಥಳದ ಐತಿಹ್ಯಗಳನ್ನು, ಪುರಾಣಗಳನ್ನು, ದಂತಕಥೆಗಳನ್ನು ಸರಳವಾಗಿ ವಿವರಿಸುವ ಪರಿ. ಮಕ್ಕಳು, ಅಂಕಿಸಂಖ್ಯೆಗಳಿಗೆ ತಮ್ಮ ಹೆತ್ತವರ, ಅಧ್ಯಾಪಕರ ಹಾಗೂ ಗೂಗಲ್ ಮಾಮನ ಸಹಾಯವನ್ನು ಪಡೆದಿರಬಹುದು. ಅದು ತಪ್ಪೇನು ಅಲ್ಲ. ಆದರೆ ಅದನ್ನು ಸಂಗ್ರಹಿಸಿ, ಮಂಡಿಸಿರುವ ಶೈಲಿ ಮುಖ್ಯವಾಗುತ್ತದೆ. ಗೂಗಲ್ ಮಾಮನು ಬೇಕಾಗಿರುವುದಕ್ಕಿಂತ ಬೇಡದೇ ಇರುವ ಮಾಹಿತಿಯನ್ನೇ ಹೆಚ್ಚು ಕೊಡುವುದುಂಟು. ಅಂತಹ ಸಮಯದಲ್ಲಿ ನಮಗೆ ಅಗತ್ಯವಾಗಿರುವ ಮಾಹಿತಿಯನ್ನಷ್ಟೇ ಆರಿಸಿಕೊಳ್ಳುವುದರಲ್ಲಿ ಜಾಣತನವಿದೆ. ಆ ಕೆಲಸವನ್ನು ಮಕ್ಕಳು ಸೊಗಸಾಗಿ ನಿರ್ವಹಿಸಿದ್ದಾರೆ.
‘ಹೂಳೆತ್ತ ಬಂದೆ ಹೊಳಲ್ಕೆರೆಗೆ’ ಎಂಬ ಲೇಖನವನ್ನು ಬರೆದ ಸುರಕ್ಷಾ ಆರ್., ಬಂಜಾರ ಜನಾಂಗದ ಪರಿಚಯವನ್ನು ಮಾಡಿಕೊಡುವ ರೀತಿ, ಸೇವಲಾಲ್ ಹೇಗೆ ಅವರ ಆರಾಧ್ಯ ದೈವವಾದ ಎನ್ನುವ ಕಥೆ, ತಮ್ಮ ಊರಿನಲ್ಲಿರುವ ಮೂರು ಕೆರೆಗಳು ಹಾಗೂ ಅವು ಹೂಳು ತುಂಬಿದ್ದು, ಕುಡಿಯುವ ನೀರಿಗೆ ತೊಂದರೆಯಾಗುತ್ತಿರುವುದನ್ನು ಬರೆದು ಹೂಳೆತ್ತಿ ಮುಂದಿನ ಮಳೆಗಾಲಕ್ಕೆ ಕೆರೆಗಳ ತುಂಬಾ ನೀರು ತುಂಬುವ ಕನಸನ್ನು ಕಾಣುತ್ತಿದ್ದಾರೆ.
‘ಹೋಯ್ ಕುಂದಾಪ್ರ ಬಂತು ಮಾರಾಯ್ರೆ’ ಲೇಖನವನ್ನು ಬರೆದ ಉನ್ನತಿ ಶೆಟ್ಟಿಯ ಲವಲವಿಕೆಯ ಭಾಷೆಯನ್ನು ನೋಡಿ. ’ಮಾರನೆಯ ದಿನ ಬೆಳಿಗ್ಗೆ ೧೦.೦೦ ಗಂಟೆಗೆ ನನ್ನ ಮುಖಕ್ಕೆ ಯಾರೋ ಟಾರ್ಚ್ ಬಿಟ್ಟಂತೆ ಅನ್ನುಸ್ತು. ಕಣ್ಬಿಟ್ ನೋಡಿದ್ರೆ ಸೂರ್ಯ ತಲೆ ಮೇಲೆ ಕುಂತಿದ್ದ. ನಮ್ಗೆ ಆಶ್ಚರ್ಯವಾಯಿತು. ಏಕೆ ಅಂತ ಕೇಳ್ತೀರಾ? ಶಾಲೆ ಇರಬೇಕಾದರೆ ಅಮ್ಮ ಆರು ಗಂಟೆಗೆ ಮಂಗಳಾರತಿ ಮಾಡಿ ಎಬ್ಬಿಸುತ್ತಿದ್ದರು. ಎಬ್ಸೋದು ಅಂದ್ರೆ ಹ್ಯಾಗೆ? ಅಡುಗೆ ಮನೆಯಿಂದಲೇ ’ಉನ್ನತಿ…ಪುಟ್ಟಿ ಉನ್ನು’ ಎಂದು ಪ್ರೀತಿಯಿಂದ ಕರೆಯುತಿದ್ರು. ಅದ್ಕೆ ಎದ್ರೋ ಬಚಾವ್. ಎರಡ್ನೇ ಸಲ ಸೀದಾ ನಮ್ಮ ಕೋಣೆಗೆ ಬಂದ್ರು. ಚಾದ್ರ ಎಳುದ್ರು. ರಟ್ಟೆಗೆ ಕೈ ಹಾಕಿ ಎಬ್ಸೋದೆ. ’ಏಳ್ತ್ರೋ ಖರ್ಚಿಗೆ ಬೇಕೋ’ ’ಅಮ್ಮಾ…’ ಅಂತ ಮೈಮುರಿತಿದ್ರೆ ಕಥೆ ಅಷ್ಟೇ. ಅಮ್ಮನ ರೌದ್ರಾವತಾರಕ್ಕೆ ನಾನು ಎದ್ದವಳೆ ಓಡ್ತಿದ್ದೆ. ಆದರೆ ಇವತ್ತು ಅಮ್ಮ ಏನೂ ಹೇಳಲೇ ಇಲ್ಲ. ನನಗೆ ಬಹಳ ಖುಷಿಯೋ ಖುಷಿ’ ಹೀಗೆ ಸೊಗಸಾದ ಭಾಷೆಯಲ್ಲಿ ಕುಂದಾಪುರ ಊರು, ಮಲ್ಪೆಯ ಬೀಚು, ಕೋಡಿ ಬೀಚು, ಅಣ್ಣ ಕೊಟ್ಟ ಹುಟ್ಟು ಹಬ್ಬದ ಬ್ರೇಸ್ಲೆಟ್ ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಕಲೆ ಅವರಿಗೆ ಸಿದ್ಧಿಸಿದೆ.
ಅಕ್ಷೋಭ್ಯ ಎಸ್. ನಾಡಿಗ್ ತಮ್ಮ ಹೆಸರಿನ ಅಕ್ಷೋಭ್ಯದ ಅರ್ಥವನ್ನು ವಿವರಿಸಿದ್ದು ವಿಶೇಷ. ಇವರು ಕೂಡ್ಲಿಯ ಅಜ್ಜನ ನೇತೃತ್ವದಲ್ಲಿ ಮಾಡಿದ ಅಭಿಮನ್ಯುವಿನ ಪಾತ್ರದ ವಿವರಣೆಯು ಅದ್ಭುತವಾಗಿದೆ. ಅದನ್ನು ಅವರ ಭಾಷೆಯಲ್ಲಿಯೇ ಕೇಳಬೇಕು.
’ಡೊಳ್ಳಿನ ಜೊತೆಗೆ ನನ್ನ ಹೃದಯವೂ ಧಬ್-ಧಬ್ ಅನ್ನುತ್ತಿತ್ತು. ವೇದಿಕೆಯ ಮೇಲಿಟ್ಟ ಇನ್ನೊಂದು ಹೆಜ್ಜೆಯೂ ಇಡೀ ರಂಗಮಂದಿರಕ್ಕೆ ಕೇಳಿಸಿತು. ಎಡಕ್ಕೆ ಕುಣಿದು, ಬಲಕ್ಕೆ ಕುಣಿದು ಮೂರುಹೆಜ್ಜೆ ಹಿಂದೆ ಹೋಗಿ ನಿಂತು
ಭಳಿರೇ! ಬಾಪುರೆ! ಮಝರೆ!’ ಎಂದಾಗ, ಈ ಪಾರ್ಥನ ಮಗನಾದ ಅಭಿಮನ್ಯುವನ್ನು ಪ್ರಶಂಸಿಸುವವರೇ” ಈ ಭೀಷ್ಮರು, ದ್ರೋಣರು, ಅವರೇನು, ವೀರಭಟರೊ ಅಥವಾ ಬರೇ, ಹೊಗಳುಭಟ್ಟರೊ? ಮಕ್ಕಳಾಟಿಕೆಯಂತಿರುವ ಪದ್ಮವ್ಯೂಹವನ್ನು ಭೇದಿಸಿದ್ದಕ್ಕೆ ಇಂತಹ ಹೊಗಳಿಕೆಯೇ?” (ಗಹಗಹಿಸಿ ನಗುತ್ತ) ಈ ಭೀಷ್ಮ, ದ್ರೋಣ, ಕೃಪಾಚಾರ್ಯರು, ಅವರೇ ಏಕೆ? ಸಾಕ್ಷಾತ್ ದುರ್ಯೋದನ ದುಶ್ಯಾಸನಾದಿಗಳು ನನ್ನ ಎದುರಾಗಲಿ!”
ನನ್ನ ಗುರು, ಹಾಗು ಸ್ವಾಮಿ ಶ್ರೀಕೃಷ್ಣನ ಅನುಗ್ರಹ ಇರುವ ತನಕ ನನಗೆ ಯಾರೂ ಏನು ಮಾಡಲಾರರು!” ಎಂದು ಘರ್ಜಿಸಿದೆ. ನನ್ನ ಕೈಯಲ್ಲಿರುವುದು ದುಷ್ಟರ ಸಂಹಾರ ಸಂಕೇತವಾದ ಮಹಾ ಧನಸ್ಸು! ಇದು”. ನನ್ನ ಬತ್ತಳಿಕೆಯಲ್ಲಿರುವುದು ದುಷ್ಟರ ಹೃದಯ ಭೇದಿಸುವ ಉಗ್ರ ಶರಗಳು ಇವು!” ಹೇ! ವೀರಯೋಧರೇ ಈ ರಣಾಂಗಣದಲ್ಲಿ, ಈ ವೀರ-ರಣಾಂಗಣದಲ್ಲಿ, ಈ ಅರ್ಜುನ-ಸುಭದ್ರೆಯ ಪುತ್ರನೂ ನಿಮ್ಮನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದಾನೆ. ಬನ್ನಿ, ಬನ್ನಿ, ಬನ್ನಿ, ಜೈ ಶ್ರೀಕೃಷ್ಣ, ಜೈ ಶ್ರೀಕೃಷ್ಣ, ಜೈ ಶ್ರೀಕೃಷ್ಣ!” ಎಂದು ಪ್ರತಿಧ್ವನಿಸುವಂತೆ ಆರ್ಭಟಿಸಿದೆ. ಇಡೀ ರಂಗಸ್ಥಳವೇ ಕರತಾಡನದಿಂದ ತುಂಬಿ ಹೋಯಿತು.
ಉತ್ಸಾಹದಿಂದ ಒಂದೊಂದೇ ಹೆಜ್ಜೆಯನ್ನು ಮುಂದಿಡುತ್ತಾ ರಂಗಸ್ಥಳದ ಮುಂದಕ್ಕೆ ಬಂದೆ. ಇನ್ನೇನು ವೇದಿಕೆಯಿಂದ ಮುಂದೆ ಹಾರಬೇಕೆನ್ನುವಷ್ಟರಲ್ಲಿ! ಪ್ರೇಕ್ಷಕರೆಲ್ಲರೂ ಹೋ… ಎಂದು ಕೂಗಿದರು. ಆಗ ಎಚ್ಚರಗೊಂಡು ಹಿಂದೆ ಹೋದೆ. ಮುಂದೆ ಹಾರಿದ್ದರೆ ಕೈಕಾಲು ಮುರಿಯುತ್ತಿತ್ತೇನೋ. ಸದ್ಯ ಬಚಾವ್ ಆದೆ. ನಾನು ಅಕ್ಷೋಭ್ಯ ಎಂಬುದನ್ನೇ ಮರೆತು ಅಭಿಮನ್ಯುವೇ ಆಗಿದ್ದೆ. ಅಷ್ಟರಮಟ್ಟಿಗೆ ಪಾತ್ರದಲ್ಲಿ ತಲ್ಲೀನನಾಗಿದ್ದೆ’.
ಈ ವಿವರಣೆಯನ್ನು ಓದಿದರೆ, ಇದು ೮ನೆಯ ತರಗತಿಯ ಬಾಲಕನು ಬರೆದ ಬರಹವೇ ಎಂದು ಆಶ್ಚರ್ಯವಾಗುತ್ತದೆ. ನನ್ನನ್ನು ವಿಶೇಷವಾಗಿ ಸೆಳೆದದ್ದು ಅಕ್ಷೋಭ್ಯನ ಪಾತ್ರ ತಲ್ಲೀನತೆ ಹಾಗೂ ಸಕಾಲದಲ್ಲಿ ಎಚ್ಚೆತ್ತುಕೊಂಡು ಕೈಕಾಲುಗಳನ್ನು ಮೂಲರೂಪ ದಲ್ಲಿಯೇ ಉಳಿಸಿಕೊಂಡು ಬಂದ ವಿವರಣೆಯು ಸೊಗಸಾಗಿದೆ.
ಪ್ರತೀಕ್ಷಾ ಎಂ. ಪ್ರಸಾದ್ ಬರೆದ ’ಕಂಡೆ ನಾ ದೇವಗಂಗೆ’ ಎಂಬ ಲೇಖನ. ಅದರಲ್ಲಿ ನನ್ನನ್ನು ಸೆಳೆದ ಭಾಗವನ್ನು ಇಲ್ಲಿ ಹಾಗೆಯೇ ನೀಡುತ್ತಿದ್ದೇನೆ.
’ದೇವಗಂಗೆ ಕೊಳ ಕೆಳದಿ ನಾಯಕರು ಆಳಿದ ಬಹುಮುಖ್ಯ ಸ್ಥಳವಾಗಿತ್ತು. ಇದು ಕ್ರಿ.ಶ. ೧೬೪೦ರಲ್ಲಿ ಕೆಳದಿ ನಾಯಕರ ರಾಜಧಾನಿಯಾಗಿತ್ತು. ’ದೇವಗಂಗೆ’ ಎಂಬ ಹೆಸರೇ ನಮ್ಮ ಮನಸ್ಸನ್ನು ಪವಿತ್ರಳನ್ನಾಗಿ ಮಾಡುತ್ತದೆ. ಇಲ್ಲಿ ಸಣ್ಣ ಪುಟ್ಟ ಕೊಳಗಳೊಂದಿಗೆ ಒಂದು ದೊಡ್ಡ ಕೊಳವಿದೆ. ದೊಡ್ಡ ಕೊಳ ಚೌಕಾಕಾರದಲ್ಲಿದ್ದರೆ, ಉಳಿದ ಪುಟ್ಟ ಕೊಳಗಳು ವೃತ್ತಾಕಾರವಾಗಿದ್ದು ಕಮಲದ ದಳಗಳನ್ನು ಹೊಂದಿದೆ. ದೂರದಿಂದ ನೋಡಿದರೆ ಕಮಲದಿಂದ ನೀರು ಉಕ್ಕಿ ಹರಿದುಬಂದಂತೆ ಕಾಣುತ್ತದೆ. ಒಟ್ಟು ಏಳು ಕೊಳಗಳಿದ್ದು ಇದರ ದಡದಲ್ಲಿ ಶಿವನ ಗುಡಿಯು ಸಹ ಇದೆ. ಗಂಗೆ ಇದ್ದ ಮೇಲೆ ಶಿವನಿರಬೇಕಲ್ಲವೆ. ದೊಡ್ಡ ಕೊಳದಲ್ಲಿ ಮುಳುಗಿ ಹೋಗುವಷ್ಟು ಆಳವಿಲ್ಲದಿದ್ದರು ಒಬ್ಬ ವ್ಯಕ್ತಿಯ ಕುತ್ತಿಗೆಯ ವರೆಗೆ ಬರುವಷ್ಟು ನೀರು ತುಂಬಿರುತ್ತದೆ. ಸಣ್ಣ ಸಣ್ಣ ಕೊಳದಲ್ಲಿ ದೊಡ್ಡವರು ಕಾಲಿಟ್ಟು ನೀರಾಡುತ್ತ ಕುಳಿತರೆ, ಸಣ್ಣವರು ದೊಡ್ಡ ಕೊಳದಲ್ಲಿ ಈಜಾಡಿ ಆನಂದಿಸಿದರು. ಯಾವಾಗಲೂ ಶಾಂತವಾಗಿರುವ ಈ ಪ್ರದೇಶ ಇಂದು ಗಲಾಟೆ ಸಂತೆಯಾಗಿತ್ತು. ಇದಕ್ಕೆ ಕಾರಣ ನಾವೆ! ಅಂದು ನಾವು ಮಾಡಿದ ಗಲಾಟೆಯಿಂದಾಗಿ ಸುತ್ತಮುತ್ತ ಕಾಡಿನಲ್ಲಿರುವ ಪ್ರಾಣಿಗಳು ಇನ್ನೊಂದು ವಾರ ಈ ಕೊಳಕ್ಕೆ ನೀರು ಕುಡಿಯಲು ಬರಲಿಕ್ಕಿಲ್ಲ. ಹಿಮಾಲಯದಲ್ಲಿ ಹುಟ್ಟಿದ ಆ ಗಂಗೆ ಭಕ್ತರ ಪಾಪಗಳನ್ನೆಲ್ಲ ತನ್ನ ಮಡಲಿಗೆ ಹಾಕಿಕೊಳ್ಳುತ್ತ ೩೬೫ ದಿವಸವೂ ಮೈದುಂಬಿ ಹರಿಯುತ್ತಾಳೆ. ಈ ದೇವಗಂಗೆಯೂ ಹಾಗೆ ವರ್ಷಪೂರ್ತಿ ಕೊಳ ತುಂಬಿ ಹರಿಯುತ್ತಲೇ ಇರುತ್ತದೆ. ನಗರದ ಜಾತ್ರೆಯ ಸಂದರ್ಭದಲ್ಲಿ ವೆಂಕಟರಮಣನ ಉತ್ಸವಮೂರ್ತಿಯು ಇಲ್ಲಿಗೆ ಬರುವುದರಿಂದ ಈ ಕೊಳಕ್ಕೆ ದೇವಗಂಗೆ ಎಂಬ ಹೆಸರು ಬಂದಿರಬಹುದೆಂದು ನನ್ನ ಕಲ್ಪನೆ. ಇಂತಹ ಪವಿತ್ರ ಸ್ಥಳಕ್ಕೆ ಇಲ್ಲಿ ಬಂದವರು ಪಾಪ ಮಾಡಿ ಹೋಗದಿದ್ದರೆ ಸಾಕು. ಅದುವೇ ಈ ಇತಿಹಾಸ ಸ್ಥಳಕ್ಕೆ ನಾವು ಮಾಡುವ ದೊಡ್ಡ ಉಪಕಾರವಾಗುತ್ತದೆ.’
ಪ್ರತೀಕ್ಷಾಳ ವರ್ಣನೆಯನ್ನು ನೋಡಿ. ಇದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಕೊನೆಯ ಸಾಲನ್ನು ಗಮನಿಸಿ ನೋಡಿ. ’ಇಂತಹ ಪವಿತ್ರ ಸ್ಥಳಕ್ಕೆ ಇಲ್ಲಿ ಬಂದವರು ಪಾಪ ಮಾಡಿ ಹೋಗದಿದ್ದರೆ ಸಾಕು’ ಎನ್ನುವ ಪರಿಸರ ಕಾಳಜಿ ಹಾಗೂ ಜನಸಾಮಾನ್ಯರ ಬೇಜವಾಬ್ದಾರಿ ತನವನ್ನು ಒಂದೇ ಸಾಲಿನಲ್ಲಿ ಕಟ್ಟಿಕೊಡುತ್ತಾರೆ.
ಅನ್ನವಾಗಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಒಂದು ಅಗುಳನ್ನು ಪರೀಕ್ಷಿಸಿದರೆ ಸಾಕಂತೆ. ನಾನಾದರೋ ಮೂರು ಅಗುಳನ್ನು ಪರೀಕ್ಷಿಸಿ ಮೆಚ್ಚಿದ್ದೇನೆ. ಇಲ್ಲಿರುವ ಪ್ರತಿಯೋರ್ವ ವಿದ್ಯಾರ್ಥಿಯ ಲೇಖನವೂ ಒಂದಲ್ಲ ಒಂದು ರೀತಿಯಲ್ಲಿ ಸೊಗಸಾಗಿಯೇ ಇದೆ. ಆದರೆ ಅವೆಲ್ಲವನ್ನು ವಿವರಿಸಿ ಹೇಳಲು ಪುಟಮಿತಿಯು ಅನುಮತಿಯನ್ನು ನೀಡುತ್ತಿಲ್ಲ. ಹಾಗಾಗಿ ಎಲ್ಲ ಬಾಲ ಲೇಖಕ-ಲೇಖಕಿಯರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತಿದ್ದೇನೆ. ತಮಗೆ ಬರೆಯಲು ಪ್ರೋತ್ಸಾಹವನ್ನು ನೀಡಿದ ಅಧ್ಯಾಪಕ ಶ್ರೀಧರ ಭಟ್ಟರಿಗೆ, ಮಾರ್ಗದರ್ಶನ ವನ್ನು ನೀಡಿದ ನಿಮ್ಮ ಹೆತ್ತವರಿಗೂ ಹಾಗೂ ಪ್ರಕಾಶಕರಿಗೂ ಎಷ್ಟು ಋಣಿಗಳಾಗಿದ್ದರೂ ಸಾಲದು. ವಿಜ್ಞಾನವೇ ಎಲ್ಲೆಡೆ ಆರ್ಭಟಿಸುತ್ತಿರುವಾಗ, ಬಲ ಅರೆಗೋಳವನ್ನು ಸಶಕ್ತವಾಗಿ ಬಳಸಿಕೊಂಡು, ನಿಮ್ಮ ಹೃದಯಕ್ಕೆ ಮಾತ್ರವಲ್ಲ, ಓದುವ ಎಲ್ಲರ ಹೃದಯಗಳಿಗೆ ಮುದ ನೀಡುತ್ತಿರುವ ನಿಮ್ಮ ಬರಹಗಳನ್ನು ನಮ್ಮ ಕನ್ನಡಿಗರು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾರೆ ಎಂದು ಭಾವಿಸುತ್ತೇನೆ. ನಿಮ್ಮ ’ಬುಗುರಿ’ಯು ಇತರ ಶಾಲಾ ವಿದ್ಯಾರ್ಥಿಗಳಿಗೂ ಪ್ರೇರಣೆಯನ್ನು ನೀಡಲಿ. ಬುಗುರಿಯಂತಹ ಮತ್ತಷ್ಟು ಕೃತಿಗಳು ಹೊರಬರಲಿ ಎಂದು ಆಶಿಸುತ್ತಿದ್ದೇನೆ.
ಬುಗುರಿಯ ನನ್ನ ಪುಟ್ಟ ಗೆಳೆಯರಿಗೊಂದು ಮನವಿ. ನಿಮ್ಮ ಬರಹ ಕೃಷಿಯನ್ನು ನಿರಂತರವಾಗಿ ಮುಂದುವರೆಸಿ. ನಿಮ್ಮ ಲೇಖನದ ಗುಣಮಟ್ಟವನ್ನು ನೀವು ಉಳಿಸಿಕೊಂಡರೆ, ನಿಮ್ಮಲ್ಲಿ ಪ್ರತಿಯೊಬ್ಬರೂ ಸಹ ನಿಮ್ಮ ನಿಮ್ಮದೇ ಆದ ಪ್ರಬಂಧ ಸಂಕಲನಗಳನ್ನು ತರಬಹುದು. ಅಂತಹ ಕೆಲಸವು ನಡೆಯಲಿ ಎಂದು ನಾನು ಮನಃಪೂರ್ವಕವಾಗಿ ಆಶಿಸುತ್ತಿದ್ದೇನೆ.
ಬುಗುರಿ ಪುಸ್ತಕಕ್ಕೆ ’ನುಡಿತೇರು’ ಸಲ್ಲಿಸಲು ಅವಕಾಶವನ್ನು ಮಾಡಿಕೊಟ್ಟ ಪೋದಾರ ಸಂಸ್ಥೆಯ ಅಧ್ಯಕ್ಷರಿಗೆ, ಶಾಲೆಯ ಆಡಳಿತ ಮಂಡಳಿ ಸರ್ವ ಸದಸ್ಯರಿಗೆ, ಪ್ರಾಂಶುಪಾಲರಾದ ಶ್ರೀ ಸುಕೇಶ ಸೇರಿಗಾರ, ಶ್ರೀಧರ ಭಟ್ಟ, ಯಾಜಿ ದಂಪತಿಗಳಿಗೆ ಹಾಗೂ ಎಲ್ಲ ಮಕ್ಕಳಿಗೆ ನನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಸಮಸ್ತ ಸನ್ಮಂಗಳಾನಿ ಭವಂತು.
ಬೆಂಗಳೂರು ಡಾ|| ನಾ. ಸೋಮೇಶ್ವರ
೧೦.೦೨.೨೦೨೫
ಸದಾಶಯ
ಆತ್ಮೀಯರೆ,
ಪೋದಾರ್ ಇಂಟರ್ನ್ಯಾಷನಲ್ ಶಾಲೆ ಶಿವಮೊಗ್ಗ ಇಲ್ಲಿಯ ಎಂಟನೇ ತರಗತಿಯ ವಿದ್ಯಾರ್ಥಿಗಳು ಕಳೆದ ವರ್ಷ ಅಕ್ಟೋಬರ್ ಹಾಗೂ ಡಿಸೆಂಬರ್ ರಜೆಯಲ್ಲಿ ತಾವು ಮಾಡಿದ ಪ್ರವಾಸ, ಪೋಷಕರು, ಸಂಬಂಧಿಕರು ಹಾಗು ನೆಂಟರಿಷ್ಟರೊಂದಿಗೆ ಕಳೆದ ಆ ದಿನಗಳಲ್ಲಿ ತಾವು ಪಡೆದ ಅನುಭವವನ್ನು ಕಥನದ ಮೂಲಕ ಓದುಗರಿಗೆ ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದಕ್ಕೆ ’ಬುಗುರಿ’ ಎಂದು ಹೆಸರಿಟ್ಟಿದ್ದು; ಶೈಕ್ಷಣಿಕ, ಸಾಂಸ್ಕೃತಿಕ ಪ್ರಗತಿಶೀಲತೆಯಿಂದಾಗಿ ಈ ಹೊತ್ತಿಗೆಯು ನಮ್ಮ ಮಕ್ಕಳಲ್ಲಿ ಅಡಗಿರುವ ನೈಜ ಸೃಜನಶೀಲತೆಗೆ ಹಿಡಿದ ಕೈಗನ್ನಡಿಯಾಗಿದೆ. ಗ್ರಂಥವು ನಮ್ಮ ಮಕ್ಕಳ ಇಚ್ಛಾ, ಕ್ರಿಯಾ ಹಾಗು ಜ್ಞಾನಶಕ್ತಿಗಳ ಸಂಗಮ ಸ್ವರೂಪವಾಗಿದೆ. ಕಲಿಕೆ ಎಂಬುದು ಕೇವಲ ತರಗತಿ ಯಲ್ಲೊಂದೇ ಅಲ್ಲ; ಸುತ್ತಮುತ್ತಲ ವಾತಾವರಣ, ಪರಿಸರ, ಜನರ ಸಂಪರ್ಕ, ನೋಡಿದ ನೋಟಗಳಿಂದ ಕಲಿಯಬಹುದೆಂಬುದನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳು ನಿರೂಪಿಸಿದ್ದಾರೆ. ’ನವನವೊನ್ಮೇಶ ಶಾಲಿನೀ ಪ್ರತಿಭಾ’ ಎಂಬ ಮಾತಿಗೆ ನಮ್ಮ ವಿದ್ಯಾರ್ಥಿಗಳು ಅತ್ಯುತ್ತಮ ಉದಾಹರಣೆ ಎಂದರೂ ತಪ್ಪಾಗಲಾರದು. ಲೇಖನ ಬರೆದ ನಮ್ಮ ಶಾಲೆಯ ಎಲ್ಲಾ ಮಕ್ಕಳಿಗೂ ತುಂಬುಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಿಮ್ಮ ಈ ಕಾರ್ಯ ನಮ್ಮ ಶಾಲೆಯ ಇತಿಹಾಸದಲ್ಲೊಂದು ಮೈಲುಗಲ್ಲಾಗಲಿದೆ.
೧೨೦ ವಿದ್ಯಾರ್ಥಿಗಳು ತಮ್ಮ ಪ್ರತಿ ದಿವಸದ ರಜಾನುಭವವನ್ನು ಬರೆದಿದ್ದು; ಮೊದಲ ಆವೃತ್ತಿಯಲ್ಲಿ ೩೯ ವಿದ್ಯಾರ್ಥಿಗಳ ಬರಹರೂಪದ ’ಬುಗುರಿ’ ಎಂಬ ಕೃತಿಯು ಲೋಕಾರ್ಪಣೆಗೊಂಡಿದೆ. ಮಕ್ಕಳಿಂದ ಇಂತಹ ಲೇಖನವನ್ನು ಬರೆಯಿಸುವ ಸಾಹಸವನ್ನು ನಮ್ಮ ಶಾಲೆಯ ಸಂಸ್ಕೃತ ಹಾಗೂ ಕನ್ನಡ ಶಿಕ್ಷಕರಾದ ಶ್ರೀಧರ ಭಟ್ಟ, ನಿಟ್ಟೂರು ಅವರ ಪರಿಶ್ರಮವನ್ನು ನಾನಿಲ್ಲಿ ಗೌರವಿಸಲೇ ಬೇಕಾಗುತ್ತದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ; ಅವರ ಸೃಜನಶೀಲತೆಯನ್ನು ಲೇಖನದ ಮೂಲಕ ಪ್ರಕಟಪಡಿಸುವ ವರೆಗೆ ಮಕ್ಕಳ ಬೆನ್ನೆಲುಬಾಗಿ ನಿಂತಿರುವುದು ಅವರ ’ವೃತ್ತಿ ಧರ್ಮಕ್ಕೆ ಹಿಡಿದ ಕೈಗನ್ನಡಿ’ಯಾಗಿದೆ. ಸರಳ ಮತ್ತು ಅತ್ಯಂತ ಪ್ರಭಾವಶಾಲಿಯಾದ ನಿರೂಪಣೆಯಿಂದ ಕೂಡಿದ ಈ ಕೃತಿಯು ಎಲ್ಲಾ ಭಾಷೆಗಳಲ್ಲೂ ಅನುವಾದಗೊಳ್ಳಲಿ. ಇದು ಮುಂದಿನ ಪೀಳಿಗೆಯವರಲ್ಲಿ ಕನ್ನಡ ಸಾಹಿತ್ಯಾಸಕ್ತಿಯನ್ನು ಬೆಳೆಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಈ ’ಬುಗುರಿ’ ಎಂಬ ಹೊತ್ತಿಗೆಯು ಓದುಗರಲ್ಲಿ ತಾವು ಸಹ ಇಂತಹ ಬರವಣಿಗೆಯನ್ನು ಬರೆಯಬೇಕೆಂಬ ಆಸಕ್ತಿ, ಉತ್ಸಾಹ ಮೂಡಿಸುತ್ತದೆ.
ಸುಂದರ ಮುಖಪುಟ ರಚಿಸಿದ ಅರುಣಕುಮಾರ್, ಬೆಂಗಳೂರು ಇವರಿಗೆ, ಈ ಪುಸ್ತಕದ ತಿದ್ದುಪಡಿ, ಪುಟವಿನ್ಯಾಸ ಮತ್ತು ಮುದ್ರಣದ ಜವಾಬ್ದಾರಿ ಹೊತ್ತ ಹೊಸಪೇಟೆಯ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಮತ್ತು ಶ್ರೀ ಗಣೇಶ ಯಾಜಿ ಅವರುಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಈ ಪುಸ್ತಕವು ಅಧ್ಯಯನಕ್ಕೆ ಯೋಗ್ಯವಾದ ಗ್ರಂಥವಾಗಿದ್ದು ಮುಂದಿನ ದಿನಗಳಲ್ಲಿ ಶಾಲಾಮಟ್ಟದಿಂದ ವಿಶ್ವವಿದ್ಯಾನಿಲಯದ ವರೆಗೂ ಪಠ್ಯಪುಸ್ತಕದಲ್ಲಿ ಒಂದು ಭಾಗ ವಾಗಲೆಂದು ನಾನು ಆಶಿಸುತ್ತೇನೆ.
ಶುಭಕಾಮನೆಗಳೊಂದಿಗೆ
–ಸುಕೇಶ ಸೇರಿಗಾರ
ಪ್ರಾಂಶುಪಾಲರು
ಪೋದಾರ್ ಇಂಟರ್ನ್ಯಾಷನಲ್ ಶಾಲೆ, ಶಿವಮೊಗ್ಗ
ಮಕ್ಕಳ ಭಾವನೆಗಳ ಹೆಜ್ಜೆಗುರುತು
ಆತ್ಮೀಯ ಓದುಗರೇ,
ನಿನ್ನೆಯ ಕನಸುಗಳನ್ನು ನಾಳೆಯ ಸತ್ಯವಾಗಿ ರೂಪಿಸುವ ಮಕ್ಕಳ ಕಲ್ಪನೆಗಳ ಜಗತ್ತಿಗೆ ಸುಸ್ವಾಗತ. ’ಬುಗುರಿ’ ಎಂಬ ಮಕ್ಕಳ ರಜಾನುಭವ ಕಥನವು ನಮ್ಮ ಶಾಲೆಯ ಬಾಲಮತಿಗಳ ಅನಂತ ಭಾವನೆಗಳ ನಾಜೂಕಿನ ಚಿತ್ರಣ. ಈ ಕಥಾ ಸಂಕಲನವು ನಮ್ಮ ಮನಸ್ಸುಗಳ ಸೂಕ್ಷ್ಮ ಸಾರವನ್ನು ಸೆರೆಹಿಡಿಯುತ್ತದೆ. ಅವರ ನಗು, ಕುತೂಹಲ ಮತ್ತು ಸಾಹಸದ ಹಾಡುಗಳನ್ನು ಪ್ರತಿಬಿಂಬಿಸುತ್ತದೆ. ಈ ಕಥೆಗಳು ಮಕ್ಕಳ ರಜಾ ದಿನಗಳಲ್ಲಿ ತಾವು ಪಡೆದ ಪ್ರೀತಿ, ಸಂತಸ ಮತ್ತು ಅನುಭವಗಳ ಚಿತ್ರಣವನ್ನೊಳಗೊಂಡ ಸತ್ಯಸಂಗತಿಯಾಗಿದೆ. ತಾಯ್ತಂದೆಯರೊಡನೆ ಕಳೆದ ಕ್ಷಣಗಳು, ಅಜ್ಜಿ ತಾತಂದಿರ ಹತ್ತಿರ ಪಡೆದ ಜ್ಞಾನಕಣಗಳು ಮತ್ತು ಗೆಳೆಯರೊಂದಿಗೆ ಆಡಿದ ಆಟದ ಸಾಹಸಗಳು, ಪ್ರವಾಸದಲ್ಲಿ ತಾವು ನೋಡಿ, ತಿಳಿದು ಅನುಭವಿಸಿದ ರೋಚಕ ಕಥಾನಕಗಳ ನಿಜ ಸಂಗತಿಯನ್ನು ಒಳಗೊಂಡಿರುತ್ತವೆ. ಸುತ್ತುವ ಬುಗುರಿಯಂತೆ, ಈ ಕಥೆಗಳು ಸುಲಲಿತವಾಗಿ ಓದುಗರನ್ನು ತನ್ನೊಂದಿಗೆ ಸುತ್ತಿಸುತ್ತವೆ, ಈ ಮಕ್ಕಳ ರಜೆಯ ನೆನಪುಗಳು ಹುಣ್ಣಿಮೆ ರಾತ್ರಿಯ ಹಿತಾನುಭವವನ್ನು ವಾಚಕನಿಗೆ ನೀಡುತ್ತದೆ. ಪ್ರತಿಯೊಂದು ಕಥೆಯು ಮಗುವಿನ ಹೃದಯದ ಆಳದಲ್ಲಿನ ಒಂದು ನೋಟವೇ ಆಗಿದೆ. ಇವು ಹೂವಿನಂತೆ ಅರಳಿವೆ, ನೀರು ತುಂಬಿದ ಮೋಡದಂತೆ ಮಳೆ ಸುರಿಸಿ ತಂಪನ್ನೆರೆದಿವೆ. ಮೋಡಿ ಮಾಡುವ ಬಣ್ಣಬಣ್ಣಗಳಿಂದ ಅಲಂಕರಿಸಲ್ಪಟ್ಟಿವೆ. ಸಾಗರದ ಅಲೆಗಳ ಸದ್ದಿನಂತೆದ್ದು, ಕಾಡಿನ ಮೂಕ ಕಾವ್ಯದಂತಿದೆ. ಎಲ್ಲ ಗದ್ದಲಗಳ ನಡುವೆಯೂ ಮಾಂತ್ರಿಕ ಕನ್ನಡಿಯಂತೆ ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ, ನಮ್ಮ ಶಾಲೆಯ ಕನ್ನಡ ಶಿಕ್ಷಕರಾದ ಶ್ರೀ ಶ್ರೀಧರ ಭಟ್ಟರು ಮಕ್ಕಳನ್ನು ಸ್ವತಹ ಅಧ್ಯಯನಕ್ಕೆ ತೊಡಗುವಂತೆ ಮಾಡಿ, ಅವರೊಳಗಡಗಿದ್ದ ಅನುಭವಕ್ಕೆ ಸುಂದರ, ಸರಳ ನಿರೂಪಣೆ ಯೊಂದಿಗೆ ರಜಾನುಭವವೆಂಬ ಹೊಸ ಕೃತಿಯನ್ನು ಕನ್ನಡ ಸಾರಸ್ವತಲೋಕಕ್ಕೆ ಕೊಡುಗೆಯಾಗಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿಯ ಮಕ್ಕಳೆ,
ಹೊಸ ದೃಷ್ಟಿಕೋನದ ಮೂಲಕ ಜೀವನದ ಸರಳ ಸೌಂದರ್ಯವನ್ನು ನೋಡಲು ಈ ಬರವಣಿಗೆಯು ನಿಮ್ಮನ್ನು ಪ್ರೇರೇಪಿಸಲಿ. ನಿಮ್ಮಿಂದ ಕಾಣಲ್ಪಡುವ ಹೊಸಹೊಸ ಕನಸುಗಳು ಒಳ್ಳೆಯ ಕಾರ್ಯಕ್ಕೆ ಪ್ರೇರೇಪಿಸಲಿ. ಆತ್ಮೀಯ ವಿದ್ಯಾರ್ಥಿಗಳೇ, ಸದ್ದುಮಾಡದೆ ತಿರುಗುವ ಈ ’ಪದಗಳ ಬುಗುರಿಯು’ ಹೀಗೆಯೇ ತಿರುಗುತ್ತಾ ತಮ್ಮದೇ ಆದ ಕಥೆಗಳನ್ನು ರಚಿಸಲಿ. ನಿಮ್ಮ ಲೇಖನ ಕೌಶಲ್ಯ ಇನ್ನಷ್ಟು ಬೆಳಗಿ ಕನ್ನಡಸಾಹಿತ್ಯಕ್ಕೆ ದೊಡ್ಡ ಕೊಡುಗೆ ನಿಮ್ಮಿಂದ ಸಿಗುವಂತಾಗಲಿ.
ಶುಭಾಶಯಗಳೊಂದಿಗೆ ..
–ನೇತ್ರಾ ಹೆಚ್.
ಉಪ-ಪ್ರಾಂಶುಪಾಲರು
ಪೋದಾರ್ ಇಂಟರ್ನ್ಯಾಷನಲ್ ಸ್ಕೂಲ್, ಶಿವಮೊಗ್ಗ
ಮನದ ಮಾತು
ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಶಿಕ್ಷಕನಾಗಿ ಕಳೆದ ಎಂಟು ವರ್ಷಗಳಿಂದ ಪಾಠ ಮಾಡುತ್ತಿದ್ದೇನೆ. ಮಕ್ಕಳಲ್ಲಿ ಸದಾ ಹೊಸತನ್ನೇ ಬಯಸುವುದು ನನ್ನ ಹೆಬ್ಬಯಕೆ. ಅವರಿಗೆ ತಿಳಿದ ವಿಷಯವನ್ನೇ ಆಧಾರವಾಗಿಟ್ಟುಕೊಂಡು ಏನಾದರೂ ಮಾಡಲೇಬೇಕೆಂದು ಹೊರಟೆ. ೨೦೨೩ ಅಕ್ಟೋಬರ್ ೨೫ರಂದು ದಸರಾ ರಜೆಯನ್ನು ಮುಗಿಸಿ ಮಕ್ಕಳೆಲ್ಲ ತಮ್ಮ ತಮ್ಮ ತರಗತಿಯಲ್ಲಿ ಕುಳಿತಿದ್ದರು. ಎಂದಿನಂತೆ ನಾನು ತರಗತಿಗೆ ಹೋದೆ. ನೇರವಾಗಿ ಪಾಠಕ್ಕೆ ಪ್ರವೇಶ ಮಾಡದೆ ಅವರು ಕಳೆದ ರಜೆಯ ಬಗ್ಗೆ ಕೇಳಬೇಕೆಂಬ ಆಸೆ ಮೂಡಿತು. ಕೆಲವು ಮುಖಗಳಲ್ಲಿ ಹೊಸ ಕಾಂತಿ ಇದ್ದರೆ, ಇನ್ನು ಕೆಲವರು ಏನೋ ಕಳೆದುಕೊಂಡವರಂತೆ, ಮತ್ತೆ ಕೆಲವರಲ್ಲಿ ಏನೋ ಹುಡುಕುತ್ತಿದ್ದವರಂತೆ ಇತ್ತು. ಹೀಗಾಗಿ ಅವರನ್ನೆಲ್ಲ ನನ್ನತ್ತ ಸೆಳೆಯಲು ಮಾತಿಗಿಳಿಯುತ್ತ ರಜೆಯನ್ನು ಹೇಗೆ ಕಳೆದಿರಿ ಮಕ್ಕಳೆ ಎಂದೆ. ಒಬ್ಬ ಹೇಳಿದ ಸರ್ ನಾನು ಮೈಸೂರಿಗೆ ಹೋಗಿದ್ದೆ. ಮಗದೊಬ್ಬ ನಾನು ತಮಿಳುನಾಡಿಗೆ ಹೋಗಿದ್ದೆ. ನಾನು ಲಡಾಕಿಗೆ ಹೋಗಿದ್ದೆ ಎಂದಳು ಮಗದೊಬ್ಬಳು. ಹೀಗೆ ಅವರವರ ಪ್ರವಾಸದ ಅನುಭವಗಳನ್ನು ಹಂಚಿಕೊಂಡರು. ಪ್ರವಾಸಕ್ಕೆ ಹೋಗದೆ ಮನೆಯಲ್ಲೇ ಕಾಲ ಕಳೆದೆವು ಎನ್ನುವವರನ್ನು ಕುರಿತು ನೀವು ಹತ್ತು ದಿವಸಗಳ ರಜೆಯನ್ನು ಹೇಗೆ ಕಳೆದಿರಿ, ಒಂದಿಷ್ಟು ಉಗಿಸಿಕೊಂಡು, ಮತ್ತೊಂದಿಷ್ಟು ಬೈಸಿಕೊಂಡು, ಕೊಟ್ಟ ಹೋಮ್ ವರ್ಕ್ ಮಾಡದೆ ರಜೆಯನ್ನು ಮುಗಿಸಿ ಬಂದಿದ್ದೇವೆ ಎಂದರು. ನವರಾತ್ರಿ ಉತ್ಸವದಲ್ಲಿ ಹತ್ತಿರದ ಬಂಧುಗಳ ಮನೆಗ ಹೋಗಿಬಂದೆವು ಎಂದರು. ಮನೆಯಲ್ಲಿ ಅಮ್ಮನಂತೂ ಈ ರಜೆಯನ್ನು ಯಾಕಾದರೂ ಕೊಟ್ಟಿದ್ದಾರಪ್ಪ ಎಂದು ಗೊಣಗಿಕೊಂಡಿದ್ದೇ ಜಾಸ್ತಿ ಎಂದಳು ವಿದ್ಯಾರ್ಥಿನಿಯೊಬ್ಬಳು. ಹೀಗೆ ಅವರೊಂದಿಗೆ ಮಾತನಾಡುತ್ತ ರಜಾದಿನದಲ್ಲಿ ಕೊಟ್ಟ ಗೃಹಕಾರ್ಯಗಳ ಬಗ್ಗೆ ಕೇಳಿದಾಗ ೯೦ ಪ್ರತಿಶತ ವಿದ್ಯಾರ್ಥಿಗಳಿಂದ ಮೌನದ ಉತ್ತರವಾಗಿತ್ತು. ’ಮೌನಂ ಸಮ್ಮತಿ ಲಕ್ಷಣಂ’ ಎಂದು ತಿಳಿದುಕೊಂಡು ನೀವೆಲ್ಲ ಹೋಮ್ವರ್ಕ್ ಕೊಡಿ ಎಂದೆ ಎಲ್ಲರ ಬಾಯಿಂದಲೂ ಒಂದೇ ಉತ್ತರ ಸರ್ ನಾಳೆ ಕೊಡ್ತೇವೆ ಎಂದರು ಒಕ್ಕೊರಲಿನಿಂದ. ನಾನೂ ನಿರುತ್ತರನಾದೆ. ಕಾರಣ ಬಹುಮತ ಅವರ ಕಡೆಗಿತ್ತು. ಸರಿ ಹಾಗೆ ಮಾಡಿ ಎಂದು ಸಮಾಧಾನ ಮಾಡಿಕೊಂಡು ನಾನು ನಿಮಗೆ ಬೇರೊಂದು ಹೋಮ್ ವರ್ಕ್ ಕೊಡುತ್ತೇನೆ ಎಂದಾಗ ಎಲ್ಲರ ಬಾಯಿಂದಲೂ ಹಾಂ ಮತ್ತೊಂದಾ! ಎಂಬ ಉದ್ಗಾರ ಬಂತು. ಯಾವ ಹೋಮ್ ವರ್ಕ್ ಸರ್? ಯಾವಾಗ ಕೊಡಬೇಕು ಸರ್? ಗೂಗಲ್ನಲ್ಲಿ ಸಿಗುತ್ತದಾ ಸರ್?, ಅಮ್ಮ ಅಪ್ಪನ ಸಹಾಯ ಪಡೆಯಬಹುದಾ ಸರ್? ಎ೪ ಶೀಟ್ನಲ್ಲಿ ಬರೆಯಬೇಕಾ ಸರ್? ಹೀಗೆ ಒಂದರ ಹಿಂದೆ ಒಂದರಂತೆ ಪ್ರಶ್ನೆಗಳು ತೂರಿಬಂದವು. ಆ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಕೊಟ್ಟ ಉತ್ತರಕ್ಕೆ ಮತ್ತೊಂದು ಪ್ರಶ್ನೆ. ಒಟ್ಟಿನಲ್ಲಿ ಹೇಳಬೇಕಾದರೆ ಹೋಮ್ ವರ್ಕ್ ಕೊಡಬೇಕೋ, ಬಿಡಬೇಕೋ ಎಂಬ ಗೊಂದಲವನ್ನೇ ಹುಟ್ಟುಹಾಕಿದರು. ಒಂದು ನಿಮಷ ಮೌನವಾದೆ. ಆಗ ತರಗತಿಯೂ ಶಾಂತವಾಯಿತು. ಹೀಗಿದ್ದಾಗ ವಿದ್ಯಾರ್ಥಿಯೊಬ್ಬ ಎದ್ದು ನಿಂತು ಏನ್ ಹೋಮ್ ವರ್ಕ ಸರ್ ಎಂದು ಕೇಳಿದ. ನಿಮ್ಮ ರಜಾ ದಿನದ ಅನುಭವಗಳನ್ನು ಬರೆಯಿರಿ ಎಂದೆ. ಕೆಲವು ವಿದ್ಯಾರ್ಥಿಗಳಂತೂ ಗೊಳ್ಳೆಂದು ನಕ್ಕು ಬಿಟ್ಟರು. ಯಾಕೆಂದು ಕೇಳಿದೆ. ಮನೆಯಲ್ಲೇ ಕುಳಿತ ನಮಗೆ ಏನೂ ಅನುಭವವೇ ಆಗಿಲ್ಲವೆಂದರು. ಅದನ್ನೇ ಬರೆಯಿರಿ ಎಂದೆ. ಅಂತೂ ಇಂತೂ ಎಲ್ಲರೂ ತಮ್ಮ ತಮ್ಮ ಅನುಭವವನ್ನು ಬರೆಯಲು ಪ್ರೀತಿಯಿಂದ ಒಪ್ಪಿಕೊಂಡರು. ಮತ್ತೆ ಚರ್ಚೆ ಪ್ರಾರಂಭವಾಯಿತು. ಅದಕ್ಕೆಲ್ಲ ಉತ್ತರಕೊಡುವ ಹೊತ್ತಿಗೆ ಅವತ್ತಿನ ಅವಧಿ ಮುಗಿಯಿತು.
ಮರುದಿವಸದಿಂದ ತರಗತಿಗೆ ಹೋದಾಗಲೆಲ್ಲ ಇದರ ಬಗ್ಗೆ ಚರ್ಚಿಸುತ್ತಿದ್ದೆ. ಹೇಗೆ ಬರೆಯಬೇಕೆಂದು ವಿವರವಾಗಿ ತಿಳಿಸಿದೆ. ಒಂದುವಾರದ ನಂತರ ಕೆಲವರು ತಮ್ಮ ರಜಾದಿನದ ಅನುಭವ ಬರೆದುಕೊಂಡು ಬಂದರು. ಹದಿನೈದು ದಿವಸವಾಗುವ ಹೊತ್ತಿಗೆ ಮುಕ್ಕಾಲು ಪ್ರತಿಶತ ವಿದ್ಯಾರ್ಥಿಗಳ ಸ್ವಾನುಭವದ ಲೇಖನ ನನ್ನ ಟೇಬಲ್ ಮೇಲಿತ್ತು. ಒಂದೊಂದೆ ನಿಧಾನವಾಗಿ ಓದುತ್ತ, ಕರೆಕ್ಷನ್ ಮಾಡುತ್ತ, ಅವರನ್ನೇ ಪ್ರತ್ಯೇಕವಾಗಿ ಕರೆದೆ. ಅವರು ಬರೆದ ಲೇಖನದ ಕೊನೆಯ ಹಾಳೆಯಲ್ಲಿ ಒಂದಿಷ್ಟು ಬದಲಾವಣೆ ಬಯಸಿ; ನೋಡಿದ ಸ್ಥಳಗಳ ಮಾಹಿತಿಯನ್ನು ಸಂಗ್ರಹಿಸಲು ಹೇಳಿ ಪುನಃ ಬರೆಯಲು ಕೊಟ್ಟೆ. ಮೊದಲನೇ ಸಲ ಬರೆದಾಗಲೇ ಹಲವಾರು ವಿದ್ಯಾರ್ಥಿಗಳು ಅತ್ಯುತ್ತಮವಾಗಿಯೇ ಬರೆದಿದ್ದರು. ನನ್ನ ನಿರೀಕ್ಷೆ ಬಹಳಷ್ಟಿತ್ತು. ಎರಡನೇ ಸಲ ಬರೆದುಕೊಂಡು ಬಂದಾಗ ಇವರ ಬರವಣಿಗೆ ಹಾಗು ಲೇಖನದಲ್ಲಿ ಬಹಳಷ್ಟು ಹೊಸತನವಿತ್ತು. ಮಾಹಿತಿಯನ್ನು ಸಂಗ್ರಹಿಸಿದ್ದರು. ಇದನ್ನೆಲ್ಲ ಓದಿ ನನಗೂ ಉತ್ಸಾಹ ಹೆಚ್ಚಾಯಿತು. ಹೀಗಾಗಿ ಅವರಿಂದಲೇ ಮೂರನೇ ಸಲ ಬರೆಯಲು ಹೇಳಿದಾಗ ಹಲವಾರು ವಿದ್ಯಾರ್ಥಿಗಳು ಪ್ರೀತಿಯಿಂದಲೇ ಬರೆದರು. ನನ್ನ ಮೇಲಿನ ಭಯಕ್ಕೋ, ಗೌರವಕ್ಕೋ ನಾಕಾಣೆ. ಬದಲಾವಣೆ ಬಯಸಿ ಬಯಸಿ ನಾಲ್ಕೈದು ಸಲ ಬರೆಯಿಸುವ ಹೊತ್ತಿಗೆ ಮಕ್ಕಳಲ್ಲಿಯೂ ಉತ್ಸಾಹ ಹೆಚ್ಚಾಗಿತ್ತು.
ಮೊದಲ ಬಾರಿಗೆ ವಿದ್ಯಾರ್ಥಿಗಳು ಅನುಭವ ಕಥನ ಬರೆದುಕೊಂಡು ಬಂದಾಗ ಅದೊಂದು ಸಾಮಾನ್ಯ ಅಸ್ಥಿಪಂಜರದಂತಿತ್ತು. ಪುನಹ ಪುನಹ ಬರೆಯಿಸುತ್ತಾ ಹೋದಂತೆ ಮಾಂಸಮಜ್ಜ, ರಕ್ತ, ಚರ್ಮ, ಅಂಗಾಂಗಗಳು, ಅವಯವಗಳು, ಮೈಕೈ ತುಂಬಿಕೊಂಡ, ಸುಂದರವಾದ ಲೇಖನವು ಸಿದ್ಧವಾಯಿತು. ಈ ಎಲ್ಲ ಲೇಖನದ ನಿರೂಪಕನಾಗಿ ಅದಕ್ಕೊಂದು ಪ್ರಾಣ ಪ್ರತಿಷ್ಠೆ ಮಾಡಿ, ಯಾರ ದೃಷ್ಟಿಯೂ ತಾಗದಂತೆ ಬೊಟ್ಟೊಂದನಿಟ್ಟೆ. ಅಲ್ಲಲ್ಲಿ ಅಪೂರ್ಣವಾದ ವಾಕ್ಯಕ್ಕೆ ರೂಪವನ್ನು ಕೊಟ್ಟೆ, ಅಕ್ಕಸಾಲಿಗನು ಬಂಗಾರಕ್ಕೆ ಬೆಸುಗೆ ಹಾಕುವಂತೆ ಮಕ್ಕಳು ಬರೆದ ಈ ಅನುಭವ ಕಥನಕ್ಕೆ ಬೆಸುಗೆ ಮಾಡುವ ಕೆಲಸವನ್ನಷ್ಟೇ ಮಾಡಿದೆ. ಈ ಲೇಖನವನ್ನೋದುತ್ತ ಹೋದಂತೆ ಒಮ್ಮೆ ನೇಪಾಳಕ್ಕೂ, ಮತ್ತೊಮ್ಮೆ ಗೋವಾಕ್ಕೂ, ಇನ್ನೊಮ್ಮೆ ರಾಮಾಯಣಕ್ಕೂ ಮಗದೊಮ್ಮೆ ಇತಿಹಾಸಕ್ಕೂ ಕರೆದುಕೊಂಡು ಬಂದು ವರ್ತಮಾನದಲ್ಲಿ ನಿಲ್ಲಿಸುತ್ತಿತ್ತು. ಮಕ್ಕಳೊಂದಿಗೆ ಕುಳಿತು ಪ್ರತಿಯೊಂದು ಲೇಖನದ ಬಗ್ಗೆ ಚರ್ಚಿಸಿ, ಬಿಟ್ಟುಹೋದ ಸಂಗತಿಗಳಿದ್ದರೆ ಮರು ಸೇರಿಸಿ, ಮೊತ್ತೊಮ್ಮೆ ಅವರಿಂದ ಓದಿಸಿ, ಬರೆಯಿಸಿದೆ. ಈ ಎಲ್ಲಾ ಲೇಖನಗಳ ಹಸ್ತಪ್ರತಿಯನ್ನು ಜೋಪಾನವಾಗಿ ಸಂಗ್ರಹಿಸಿಟ್ಟುಕೊಂಡಿದ್ದೇನೆ. ಮೊದಲನೇ ಆವೃತ್ತಿಯಲ್ಲಿ ನಲವತ್ತು ಲೇಖನಗಳನ್ನು ಆಯ್ಕೆ ಮಾಡಿಕೊಂಡೆ. ಮಕ್ಕಳೆಲ್ಲ ಸರ್ ಇದನ್ನು ಏನ್ ಮಾಡ್ತೀರಿ? ಎಂದು ಕೇಳಿದಾಗ ಹೊತ್ತಿಗೆಯ ರೂಪದಲ್ಲಿ ಹೊರ ಬರುತ್ತಿದೆ ಎಂದೆ. ಆಗ ಅವರ ಮುಖದಲ್ಲಿ ಕಂಡ ಆ ಹೊಳಪು, ಉತ್ಸಾಹ ಹೇಳತೀರದು. ತಮ್ಮ ಶ್ರಮ ವ್ಯರ್ಥವಾಗದೆ ಸಾರ್ಥಕ್ಯ ವಾಯಿತೆಂಬ ಧನ್ಯತಾಭಾವ ಅವರ ಮುಖದಲ್ಲಿತ್ತು. ಒಟ್ಟು ನೂರಾ ಇಪ್ಪತ್ತು ಲೇಖನಗಳನ್ನು ಮಕ್ಕಳು ಬರೆದ್ದಾರೆ. ಮುಂದಿನ ದಿನಗಳಲ್ಲಿ ಮಕ್ಕಳೊಂದಿಗೆ ಚರ್ಚಿಸಿ, ಉಳಿದ ಅನುಭವ ಕಥನವನ್ನು ಪುಸ್ತಕ ರೂಪದಲ್ಲಿ ತರುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಈ ಹಂತದಲ್ಲಿ ಯಾರೂ ಬೇಸರಿಸಬಾರದೆಂದು ನನ್ನ ಪ್ರೀತಿಯ ಶಿಷ್ಯಂದಿರಲ್ಲಿ ವಿನಂತಿಸುತ್ತೇನೆ. ಈ ಪುಸ್ತಕವನ್ನು ನಾನು ಮಾಡಿದ್ದೇನೆಂದರೆ ಅಕ್ಷಮ್ಯ ಅಪರಾಧವಾದೀತು. ನನ್ನ ಮುದ್ದು ವಿದ್ಯಾರ್ಥಿಗಳ ಅನುಭವವು ನನ್ನಿಂದ ಈ ಕೆಲಸ ಮಾಡಿಸಿತು. ಇದು ನನ್ನ ಮೊದಲ ಹೆಜ್ಜೆ. ತಪ್ಪು ಒಪ್ಪುಗಳಾಗಿದ್ದರೆ ಮಡಲಿಗೆ ಹಾಕಿಕೊಂಡು, ಕೈ ಹಿಡಿದು ಮುನ್ನಡೆಸಿರಿ.
ಲೇಖನವೆಲ್ಲ ಪುಸ್ತಕದ ರೂಪಕ್ಕೆ ಬಂತು ನಿಜ. ಇದಕ್ಕೊಂದು ನಾಮಕರಣ ಶಾಸ್ತ್ರ ವಾಗಬೇಕಲ್ಲ. ಹೀಗೆ ಯೋಚಿಸಿ ನನ್ನ ಸಹೋದ್ಯೋಗಿ ಮಿತ್ರರಲ್ಲಿ ಹೆಸರನ್ನಿಡುವಂತೆ ಕೇಳಿಕೊಂಡೆ. ವಿದ್ಯಾರ್ಥಿಗಳೂ ಸಹ ಹೊಸಹೊಸ ಹೆಸರನ್ನು ಸೂಚಿಸಿದರು. ’ರಜೆಯ ರಸಾಯನ, ವಿರಾಮಕ್ಕೊಂದು ಅಲ್ಪವಿರಾಮ, ರಜೆಯೆಂದರೆ ಇಷ್ಟೆ ಸಾಕೆ. ರಜೆಯ ಕಥೆ ನನ್ನೂರ ಜೊತೆ. ಎಲ್ಲಿ ಜಾರಿತೊ ರಜೆಯು. ನಿಲ್ಲಿ ಓಡದಿರಿ ರಜಾದಿನಗಳೆ ನನ್ನ ಹಾಗೇ ಬಿಟ್ಟು’ ಹೀಗೆ ಹಲವಾರು ಅತ್ಯುತ್ತಮ ಹೆಸರುಗಳನ್ನೇ ಸೂಚಿಸಿದ್ದರು. ಆದರೂ ಎಲ್ಲರ ಬಾಯಲ್ಲಿ ನಲಿಯುವಂತ ಚಿರಪರಿಚಿತವಾದ ಹೆಸರಿಗಾಗಿ ತಡಕಾಡಿದಾಗ ಸನ್ಮಿತ್ರ ನವೀನ್ ಇವರು ’ಬಣ್ಣದ ಬುಗುರಿ’ ಎಂದು ಇಡಬಹುದಲ್ಲವೇ? ಆದರೆ ಅದು ಬೇರೊಂದು ಪುಸ್ತಕಕ್ಕೆ ಹೆಸರಿಟ್ಟಾಗಿತ್ತು. ಹಾಗಾಗಿ ’ಬುಗುರಿ’ ಎಂಬುದೇ ಸೂಕ್ತವೆಂದು ಆ ಹೆಸರು ಅಂತಿಮವಾಯಿತು. ತಿರುಗುವ ಬುಗುರಿಗೂ ಕುಳಿತಲ್ಲಿ ಕೂರದ ಈ ಮಕ್ಕಳಿಗೂ ಬಹಳ ಹೋಲಿಕೆ ಇದೆಯಲ್ಲವೆ.
ಪ್ರೀತಿಯ ಮಕ್ಕಳೆ, ಈ ಲೇಖನ ಬರೆಯುವಲ್ಲಿ ನಿಮ್ಮ ಶ್ರಮ ಬಹಳಷ್ಟಿದೆ. ನನ್ನ ನಿರೀಕ್ಷೆಗೆ ನಿಮ್ಮ ಬರವಣಿಗೆಯಿರಬೇಕೆಂದು ಬಯಸಿ, ಮತ್ತೆ ಮತ್ತೆ ಬರೆಸಿದೆ. ಇದಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳದೆ ಪ್ರೀತಿಯಿಂದ ಬರೆದು ನನಗೊಪ್ಪಿಸಿದ್ದೀರಿ. ನಿಮ್ಮೆಲ್ಲರ ಹೆಸರನ್ನು ಪ್ರತ್ಯೇಕವಾಗಿ ಬರೆಯಲು ಸಾಧ್ಯವಿಲ್ಲದ ಕಾರಣ ೮ನೇ ತರಗತಿಯ ’ಎ’ ವಿಭಾಗದಿಂದ ಹಿಡಿದು ’ಇ’ ವಿಭಾಗದ ಎಲ್ಲ ವಿದ್ಯಾರ್ಥಿಗಳಿಗೂ ನನ್ನ ಹೃದಯಪೂರ್ವಕ ಆಶೀರ್ವಾದಗಳು. ನಿಮ್ಮಂತಹ ಒಳ್ಳೆಯ ಶಿಷ್ಯರನ್ನು ಪಡೆದಿದ್ದರಿಂದ ನನ್ನ ಶಿಕ್ಷಕವೃತ್ತಿಯೇ ಪಾವನವಾಯಿತು. ನನಗೆ ಸಹಕರಿಸಿದ ನಿಮಗೆಲ್ಲರಿಗೂ ಧನ್ಯವಾದಗಳು. ನನ್ನ ಬೆನ್ನೆಲುಬಾಗಿ ನಿಂತ ನಿಮ್ಮೆಲ್ಲ ಪೋಷಕರಿಗೂ ನಮನಗಳು. ಮಕ್ಕಳು ಬರೆದ ಬರಹಗಳನ್ನು ಪುಸ್ತಕ ರೂಪಕ್ಕೆ ಅಳವಡಿಸಲು ಸಹಕರಿಸಿದ ಸಂಸ್ಥೆಯ ಅಧ್ಯಕ್ಷರುಗಳಾದ ಡಾ. ಪವನ್ ಪೋದಾರ್ ಮತ್ತು ಶ್ರೀ ಗೌರವ್ ಪೋದಾರ್ ಇವರಿಗೆ ಆಭಾರಿ ಯಾಗಿದ್ದೇನೆ. ನಮ್ಮ ಶಾಲೆಯ ಪ್ರಾಂಶುಪಾಲರಾದ ಸುಖೇಶ ಸೇರಿಗಾರರು ಬೆನ್ನುತಟ್ಟಿ ಭಟ್ಟರೆ ನಾನಿದ್ದೇನೆ. ನೀವು ಮುಂದುವರಿಯಿರಿ. ನಿಮಗೆ ಯಾವೆಲ್ಲ ಸಹಾಯ ಸಹಕಾರ ಬೇಕೋ ನಾ ನೀಡುತ್ತೇನೆ ಎಂದು ಹೇಳಿ ಉತ್ಸಾಹ ತುಂಬಿದ ಇವರಿಗೆ, ನೂರೆಂಟು ನಮನಗಳು. ಪ್ರತಿಯೊಂದು ಲೇಖನವನ್ನು ಓದಿ, ಅಕ್ಷರ ದೋಷಗಳನ್ನು ಸರಿಪಡಿಸುವಲ್ಲಿ ನಮ್ಮ ಶಾಲೆಯ ಕನ್ನಡ ವಿಭಾಗ ನನ್ನೊಂದಿಗೆ ಟೊಂಕಕಟ್ಟಿ ನಿಂತಿದೆ. ಸನ್ಮಿತ್ರ ಶ್ರೀಪತಿ ಕೆ.ಎನ್., ಶಫಿ ಉಲ್ಲಾಖಾನ, ಸಹೋದರಿಯರಾದ ಶ್ರೀಮತಿ ಸ್ಮಿತಾ ಗೋಸಾವಿ, ಶ್ರೀಮತಿ ಅಶ್ವಿನಿ ದುಂಮ್ಮಳ್ಳಿ, ಶ್ರೀಮತಿ ರೂಪಾ ಸಿ.ಎಲ್., ಶ್ರೀಮತಿ ಮಂಜುಳಾ ಕೆ.ಪಿ., ಶ್ರೀಮತಿ ಅಕ್ಷತಾ ಜಿ., ಶ್ರೀಮತಿ ರೂಪಾ ಬಿ.ಎಲ್., ಶ್ರೀಮತಿ ಅನಿತಾ ಇವರೆಲ್ಲರೂ ನಮ್ಮ ಶಾಲೆಯ ಕನ್ನಡ ವಿಭಾಗದ ಅತ್ಯುತ್ತಮ ಶಿಕ್ಷಕರು. ಗಣಿತ ಶಿಕ್ಷಕರಾದ ರಾಘವೇಂದ್ರ ಡಿ. ’ಬುಗುರಿ’ ಪುಸ್ತಕದ ಶೀರ್ಷಿಕೆಯ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಶ್ರೀಮತಿ ಮೇಘಾ, ಕುಮಾರಿ ಶ್ರೀವಾಣಿ ಇವರೆಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಶ್ರೀಮತಿ ನೇತ್ರಾ ಉಪಪ್ರಾಂಶುಪಾಲರು, ಶ್ರೀಮತಿ ಅನುರಾಧಾ ಸಂಯೋಜಕರು ಪ್ರೌಢಶಾಲಾ ವಿಭಾಗ ಇವರೆಲ್ಲರೂ ಈ ಪುಸ್ತಕವನ್ನು ಲೋಕಾರ್ಪಣೆ ಮಾಡುವಲ್ಲಿ ಕಾರ್ಯಕ್ರಮವನ್ನು ರೂಪಿಸಿರುತ್ತಾರೆ. ನಮ್ಮ ಶಾಲೆಯ ತಂತ್ರಜ್ಞಾನ ವಿಭಾಗದ ಮುಖ್ಯಸ್ಥರಾದ ಹೇಮಂತ್ ಕುಮಾರ, ಶ್ರೀಮತಿ ಭಾಗ್ಯ ಇವರು ಪುಸ್ತಕದ ಪ್ರಚಾರ ವಿಭಾಗದ ಜವಾಬ್ದಾರಿಯನ್ನು ಸುಂದರವಾಗಿ ನಿರ್ವಹಿಸಿದ್ದಾರೆ. ’ಬುಗುರಿ’ ಎಂಬ ಈ ಹೊತ್ತಿಗೆಗೆ ’ಹೊನ್ನುಡಿ’ ಬರೆದು ಮಕ್ಕಳ ಬೆನ್ನುಚಪ್ಪರಿಸಿದ ಡಾ. ಗುರುರಾಜ ಕರ್ಜಗಿ ಅವರಿಗೆ, ’ನುಡಿತೇರು’ ಬರೆದು ಗ್ರಂಥದ ಘನತೆ ಹೆಚ್ಚಿಸಿದ ಡಾ. ನಾ. ಸೋಮೇಶ್ವರ ಅವರಿಗೆ, ಮುಖಪುಟ ರಚಿಸಿದ ಶ್ರೀ ಅರುಣಕುಮಾರ್ ಅವರಿಗೆ, ಅಕ್ಷರದೋಷವನ್ನು ತಿದ್ದಿತೀಡಿ, ಪುಟವಿನ್ಯಾಸಗೊಳಿಸಿ ಅಚ್ಚುಕಟ್ಟಾಗಿ ಮುದ್ರಣದ ಹೊಣೆ ಹೊತ್ತ ಹೊಸಪೇಟೆಯ ಯಾಜಿ ಪ್ರಕಾಶನದ ಶ್ರೀಮತಿ ಸವಿತಾ ಯಾಜಿ ಮತ್ತು ಶ್ರೀ ಗಣೇಶ ಯಾಜಿ ಅವರಿಗೆ ಈ ಲೇಖನ ಮಾಲಿಕೆಯ ಮಾರ್ಗದರ್ಶಕ ಹಾಗು ನಿರೂಪಕನಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಇಂತಹ ಮಹಾಕಾರ್ಯಕ್ಕೆ ಕೈಹಾಕುವಾಗ ಗುರುಹಿರಿಯರ ಆಶೀರ್ವಾದದ ಜೊತೆಗೆ ದೈವಾನುಗ್ರಹವೂ ಬಹಳ ಮುಖ್ಯ. ಮಕ್ಕಳಿಂದ ಇಂಥ ಲೇಖನ ಬರೆಯಿಸುವ ತೀರ್ಮಾನ ಕೈಗೊಂಡಾಗ ರವೀಂದ್ರನಗರದ ಬಲಮುರಿ ಗಣಪತಿ ಸಾನಿಧ್ಯದಲ್ಲಿದ್ದೆ. ನಮ್ಮ ಮಕ್ಕಳಿಗೆ ಹೊಸಹೊಸ ಯೋಚನೆಗಳಿಗೆ ಅಕ್ಷರ ರೂಪ ಕೊಡುವ ಶಕ್ತಿ ನೀಡು. ಮಕ್ಕಳೂ ಸಹ ಪ್ರೀತಿಯಿಂದ ಬರೆಯುವಂತೆ ನೀನೇ ಅವರ ಬುದ್ಧಿಯನ್ನು ಪ್ರಚೋದಿಸು ತಂದೆ. ಈ ಲೇಖನಗಳೆಲ್ಲ ಪುಸ್ತಕರೂಪಕ್ಕೆ ಬರುವಂತಾದರೆ ನಿನ್ನ ಪಾದಕ್ಕೇ ಅರ್ಪಿಸುವೆ ಭಗವಂತ ಎಂದು ಬೇಡಿಕೊಂಡಿದ್ದೆ. ಈ ಹೊತ್ತಿಗೆಯಲ್ಲಿ ಮಕ್ಕಳ ಭಾವಚಿತ್ರಗಳಿವೆ, ಪೋಷಕರೂ ಜೊತೆಗೆ ನಿಂತಿದ್ದಾರೆ, ಪ್ರಕೃತಿಯ ಒಂದು ಭಾಗವೇ ಇದರೊಳಗಿದೆ. ಹೀಗಾಗಿ ಇವರೆಲ್ಲರಿಗೂ ಒಳಿತನ್ನು ಬಯಸಿ ನನ್ನಿಂದ ಬರೆಯಿಸಲ್ಪಟ್ಟ ಈ ’ಬುಗುರಿ’ ಎಂಬ ಲೇಖನ ಮಾಲಿಕೆಯ ಹೊತ್ತಿಗೆಯು ರವೀಂದ್ರನಗರದ ಪ್ರಸನ್ನ ಗಣಪತಿಯ ಪಾದಕಮಲಕ್ಕೆ ಅರ್ಪಿಸುವೆ.
ಮಕ್ಕಳಿಗಾಗಿಯೇ ಬರೆದ ಅನೇಕ ಮಕ್ಕಳ ಕಥೆ, ನಾಟಕ, ಪದ್ಯ, ಪತ್ರಲೇಖನ ಇತ್ಯಾದಿ ಸಾಹಿತ್ಯ ಪ್ರಕಾರವು ಕನ್ನಡ ಭಾಷೆಯಲ್ಲಿದೆ. ಆದರೆ ಮಕ್ಕಳೇ ಬರೆದ ತಮ್ಮ ರಜಾದಿನದ ದಿನಚರಿಯನ್ನು ಕನ್ನಡ ಸಾಹಿತ್ಯಕ್ಕೆ ಪರಿಚಯಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿಂದ ಕನ್ನಡ ಸಾರಸ್ವತಲೋಕಕ್ಕೆ ’ದಿನಚರಿ’ ಸಾಹಿತ್ಯವೆಂಬ ಹೊಸ ಪ್ರಕಾರವನ್ನು ಈ ’ಬುಗುರಿ’ ಪುಸ್ತಕವು ಹುಟ್ಟುಹಾಕಿದೆಯೆಂದರೂ ಅತಿಶಯೋಕ್ತಿಯಲ್ಲ. ೩೮ ಲೇಖನ ಗಳನ್ನೊಳಗೊಂಡ ಈ ’ಬುಗುರಿ’ಯಲ್ಲಿ ಗತಕಾಲದ ಇತಿಹಾಸವಿದೆ, ವರ್ತಮಾನದಲ್ಲಿ ತಾವು ನೋಡಿದ ಸತ್ಯಸಂಗತಿಗಳಿವೆ. ರಜೆಯಲ್ಲಿ ತವು ಕಳೆದ ರಸನಿಮಿಷಗಳ ವಿವರಣೆಯಿದೆ. ಸ್ಥಳೀಯ ಪ್ರವಾಸ, ಹೊರರಾಜ್ಯ, ಹಾಗು ವಿದೇಶ ಪ್ರವಾಸಗಳ ಅನುಭವವಿದೆ. ಮಕ್ಕಳು ನೋಡಿದ ಕ್ಷೇತ್ರದ ಸ್ಥಳಪುರಾಣ, ಸ್ಥಳಗಳ ಮಹತ್ವ, ರಾಜಮಹಾರಾಜರು ಆಳಿದ ರೋಚಕ ಕಥೆಗಳಿವೆ. ಪ್ರವಾಸಕ್ಕೆ ಹೋಗುವ ಮಾರ್ಗದರ್ಶನ, ಅಲ್ಲಿ ಪಾಲಿಸಬೇಕಾದ ನೀತಿನಿಯಮ, ಕೋಟೆಕೊತ್ತಲಗಳ ರಕ್ಷಣೆಗೆ ಸಾರ್ವಜನಿಕರ ಪಾತ್ರ, ನಮ್ಮ ದೇಶದ ಸಂಸ್ಕೃತಿ, ಹಬ್ಬಹರಿದಿನಗಳ ಪ್ರಾಮುಖ್ಯತೆ, ಸಂಪ್ರದಾಯ, ಆಚರಣೆ ಎಲ್ಲವನ್ನೂ ಒಳಗೊಂಡಿರುವ ಈ ’ಬುಗುರಿ’ ಪುಸ್ತಕದ ಲೇಖನಗಳು ಓದುಗನ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಒಂದಿಷ್ಟು ಮಾಹಿತಿ ಲಭಿಸುತ್ತದೆ.
ವಾಚಕರ ಅಭಿಪ್ರಾಯವನ್ನು ಮುಕ್ತಮನಸ್ಸಿನಿಂದ ಸ್ವೀಕರಿಸುತ್ತೇನೆ. ಪುಸ್ತಕವನ್ನು ಕೊಂಡು ಓದಿ, ಮಕ್ಕಳ ಈ ಸಾಹಸಕ್ಕೆ ತಮ್ಮ ಬೆಂಬಲವಿರಲಿ.
‘ಬುಗುರಿ’
ಬೆಚ್ಚನೆಯ ನೆನಹುಗಳು ಮನದೊಳಗೆ ಅವಿದಿತ್ತು.
ನೆನೆದಾಗಲೆಲ್ಲ ಓಡೋಡಿ ಬರುತಿತ್ತು.
ಒಮ್ಮೆ ಊರು, ಇನ್ನೊಮ್ಮೆ ಪರವೂರು
ಮತ್ತೊಮ್ಮೆ ದೇಶ, ಮಗದೊಮ್ಮೆ ಹೊರದೇಶ
ಮಿಂದೆದ್ದು ಗಿರಿತೊರೆಜಲಪಾತಗಳಲ್ಲಿ
ಯಾತ್ರೆ ಜಾತ್ರೆ ಮೈ ಮರೆತು ದೇಗುಲದಿ
ಮೆಟ್ಟಿಲ ಮೇಲೊಮ್ಮೆ, ಸೇತುವೆಯ ಕೆಳಗೊಮ್ಮೆ
ಬಣ್ಣಬಣ್ಣದ ಸೆಲ್ಫಿಯ ಚಿತ್ತಾರ ’ಬುಗುರಿ’
ಅಕ್ಕರೆಯ ಬರಹಕ್ಕೆ ತಿರುತಿರುಗಿ ಆ ’ಬುಗುರಿ’
’ಹೊತ್ತಿಗೆಯ’ ಒಡಲೊಳಗೆ ಎಲ್ಲವನು ಹೊತ್ತು
ಜಗವ ತೋರುವ ’ಬುಗುರಿ’ ನಿಂತಲ್ಲೆ ನಿಲ್ಲದು
ನಿಮ್ಮ ಮನದಂಗಳಕೆ ಬರುತಿಹುದು ’ಬುಗುರಿ’
’ಹೊತ್ತಿಗೆಯ ಬುಗುರಿ’ ’ಹೊತ್ತೊಯ್ಯಿರಿ ಬುಗುರಿ’
’ಹೊತ್ತಿಗೆಯ ಬುಗುರಿ’ ’ಹೊತ್ತೊಯ್ಯಿರಿ ಬುಗುರಿ’
ಶ್ರೀಧರ ಭಟ್ಟ, ನಿಟ್ಟೂರು
ಕನ್ನಡ ಮತ್ತು ಸಂಸ್ಕೃತ ಶಿಕ್ಷಕರು
ಒಳ ಪುಟಗಳಲ್ಲಿ…
ಸವಿನುಡಿ -ಸವಿತಾ ಯಾಜಿ / ೩
ಮುನ್ನುಡಿ -ಡಾ. ಗುರುರಾಜ ಕರಜಗಿ / ೫
ನುಡಿತೇರು -ಡಾ|| ನಾ. ಸೋಮೇಶ್ವರ / ೭
ಸದಾಶಯ -ಸುಕೇಶ ಸೇರಿಗಾರ / ೧೮
ಮಕ್ಕಳ ಭಾವನೆಗಳ ಹೆಜ್ಜೆಗುರುತು -ನೇತ್ರಾ ಹೆಚ್. / ೨೦
ಮನದ ಮಾತು -ಶ್ರೀಧರ ಭಟ್ಟ, ನಿಟ್ಟೂರು / ೨೨
೧. ಭಾರತದ ನೆಲ್ಲಿ, ನೇಪಾಳದ ಉಪ್ಪು -ಸೃಷ್ಟಿ ಕಂಗೊಂದಿ ಬದ್ರಿನಾಥ್ / ೩೧
೨. ಅಜ್ಜಿಮನೆಯೆಂಬ ಮಾಯಾನಗರಿ -ಪಾರ್ವತಿ ಎನ್. ನಿಶಾನಿಮಠ್ / ೪೫
೩. ಮತ್ತೆ ಕಾಡುವ ಆ ದಿನಗಳು -ತನ್ವಿ ಎಲ್.ಹೆಚ್. / ೫೧
೪. ರಜೆಗೊಂದು ಸಲಾಮ್ -ಯಶಸ್ವಿನಿ ಗೌಡ ಎನ್. / ೫೮
೫. ವಿರಾಮಕ್ಕೊಂದು ಅಲ್ಪವಿರಾಮ -ಜ್ಞಾನವಿ ಎಸ್. / ೭೩
೬. ಮುಗಿಯದೀ ಪಯಣ -ಚಿರಂತನ್ ಎಸ್.ಪಿ. / ೭೯
೭. ಗೂಗಲ್ ಕುಮಾರಿ -ಇಂಚರಾ ಪಿ. / ೯೦
೮. ರಜೆಯ ಕಥೆ ನನ್ನೂರಿನ ಜೊತೆ -ಕುಶಾಲ್ ಎಸ್.ಟಿ. / ೯೬
೯. ಹೂಳೆತ್ತ ಬಂದೆ ಹೊಳಲ್ಕೆರೆಗೆ -ಸುರಕ್ಷಾ ಆರ್. / ೧೦೨
೧೦. ಚೆನ್ನ(ಚೆನ್ನಾ)ಗಿರಿ -ಖುಷಿ ಎಂ. ಸಭಾವಟ್ / ೧೧೦
೧೧. ರಜೆಯೆಂದರೆ ಇಷ್ಟೇ ಸಾಕೇ? -ಉನ್ನತಿ ಎನ್.ಯು. / ೧೨೧
೧೨. ಸುಮತಿಯ ನೀಡು ಸಬರ್ಮತಿ -ಶ್ರೇಯಾ ಜಿ.ಎಂ. / ೧೩೨
೧೩. ಸಕ್ಕರೆಯ ಸಿಹಿ ಕೊಟ್ಟ ಸಕ್ಕರೆಬೈಲು -ತಿಷಾ ಜೈನ್ ಬಿ.ವಿ. / ೧೪೫
೧೪. (ಲಾರ್ಡ್) ರಿಪ್ಪನ್ಪೇಟೆ -ಗೋಕುಲ್ ಸಿಂಗ್ ಕೆ. / ೧೫೦
೧೫. ನಾ ಕಳೆದ ಬಂಗಾರದ ದಿನಗಳು -ಜಾನ್ಹವಿಕಾ ಎಸ್.ಇ. / ೧೫೭
೧೬. ರಜಾ ರಜಾ ಕೋಳಿ ಮಜಾ -ಜನ್ಯಾ ಆರ್. ಗೌಡ / ೧೬೬
೧೭. ಬಿಟ್ಟುಬಿಡದೆ ಕಾಡಿದ (ರಜೆಯ) ಜ್ವರ -ಧೀಮಂತ್ ಬಿ.ಟಿ. / ೧೭೪
೧೮. ಎಲ್ಲಿ ಜಾರಿತೋ ರಜೆಯು -ಪೂರ್ವಿ ಎಂ.ಎನ್. / ೧೭೯
೧೯. ರಜೆಯೆಂಬ ಕಣಕ -ಮಾನ್ಯ ಎಸ್. ವೀರೇಶ / ೧೮೬
೨೦. ಮಂಜುಗಡ್ಡೆಯಂತೆ ಕರಗಿತು -ಧೃತಿಶ್ರೀ ವಿ. / ೧೯೪
೨೧. ಗೋವಾ ಎಂದರೆ ಬರಿ ಬೀಚಲ್ಲ… -ನೂತನ ಎಸ್.ಜಿ. / ೨೦೦
೨೨. ಲಡಾಖಿನೊಳಗೊಂದು ಸುತ್ತು -ನೇಶ ಅರ್ಚನ ಮಠ / ೨೧೪
೨೩. ಭಳಿರೆ! ಬಾಪುರೆ ಮಝರೆ! -ಅಕ್ಷೆಭ್ಯ ಎಸ್. ನಾಡಿಗ್ / ೨೨೭
೨೪. ಗುಡ್ ನೈಟ್ ಹಾಲಿಡೆ -ಆಕರ್ಷ ವಿ. / ೨೩೫
೨೫. ಹುಟ್ಟೂರಿನಿಂದ ತ್ರೇತಾಯುಗಕ್ಕೆ -ಶಮ ಹೆಚ್.ಎಲ್. / ೨೪೫
೨೬. ಲವ್ ಯು ಜಿಂದಗಿ -ಸಾತ್ವಿಕ ಎಸ್. ಗೌಡ / ೨೫೨
೨೭. ಅಜ್ಜಿಯೆಂದರೆ ಇಷ್ಟೊಂದು ಡೇಂಜರ್ರಾ! -ಪೃಥ್ವಿ ಕೆ. / ೨೫೭
೨೮. ಹಯ್.. ಕುಂದಾಪ್ರ ಬಂತು ಮಾರಾಯ್ರೆ -ಉನ್ನತಿ ಶೆಟ್ಟಿ / ೨೬೪
೨೯. ರಜೆಯ ಮಜಾವತಾರ -ಗ್ರೀಷ್ಮಾ ವಿ.ಆರ್. / ೨೭೦
೩೦. ಮನೆ ತುಂಬ ಶಾಂತಿಯೋ ಶಾಂತಿ! ಶೌರ್ಯ ಟಿ. ವೀರೇಶ್ / ೨೭೭
೩೧. ಕ್ಷಣ ಹೊತ್ತು, ರಜೆ ಮುತ್ತು -ಹಂಸ ಎಂ. ಗೌಡ / ೨೮೩
೩೨. ಕಂಡೆ ನಾ ದೇವಗಂಗೆ -ಪ್ರತೀಕ್ಷಾ ಎಂ. ಪ್ರಸಾದ್ / ೨೮೮
೩೩. ಬದಲಾವಣೆಯ ಹಠ ಗಾಳಿಪಟ -ವಿಹಾಸ ಕೆ. ಗೌಡ / ೨೯೪
೩೪. ಊರೂರು ಸುತ್ತೋಣ ಬನ್ನಿ -ಯಶಸ್ವಿನ ಕೆ.ಎಸ್. / ೨೯೭
೩೫. ಡಿಸೆಂಬರ ೩೧ರ ಮಧ್ಯರಾತ್ರಿ -ಅಡ್ರಿಯಲ್ ಇಯಾನಾ ಕುಂದರ್ / ೩೦೭
೩೬. ಮರೆಯಲಾಗದ ನೆನಪುಗಳು -ಅನರ್ಘ್ಯ ಪಿ. / ೩೧೪
೩೭. ವೆಲ್ಕಂ ಟು ನಾಗು -ನಾಗಚೈತನ್ಯ ಪಿ.ಬಿ. / ೩೨೨
೩೮. ಗೋಡೆಯ ಮೇಲಿನ ಟಾರ್ಚ್ ಬೆಳಕು -ಅಖಿಲ್ ಅಹಮದ್ / ೩೩೦
೩೯. ಶೆಟ್ಟರ ಭತ್ತದ ಗದ್ದೆ -ನಯನಾ ಎ. / ೩೩೫
ವಿದ್ಯಾರ್ಥಿಗಳ ಚಿತ್ರಸಂಗಮ
Asha.R –
Excellent Book with lot of Information of many places. All of the children have written fabulous and also its fun to read
yajiprakashana@gmail.com –
Bhavana –
Congratulations to all these little authors.
A very good book. I can say it is a nostalgic one. Children have expressed their holidays through a story in a very beautiful language.
Great efforts by the teacher, school and parents.
Book is very handy and paper quality of the book is good.
An inspiration to youngsters, to showcase their creativity.
Best wishes to the whole team.👍🏼😍
yajiprakashana@gmail.com –
thanks madam
Renuka Naik –
Congrajulations to the young authors!
It is a wonderful opportunity for the students to showcase their wonderful and innovative ideas and talents. The idea of the book is very occasional and nostalgic to say as this is all about the students sharing their experiences of about their holidays that they had. So, in other words its a kind of small step towards their successful journey of life. It is an effective and wonderful inspiration to other students and youngsters to develop and spread the creativity among the society.
With all the great vision, all the very best towards your upcoming works and keep going and learning, dear young minds!🤗👍
Shridhar bhat –
Beautiful book
Ramesh –
ಪುಸ್ತಕ ತುಂಬಾ ಚೆನ್ನಾಗಿ ಇತ್ತು. ಎಲ್ಲರ ಪಯಣ ತುಂಬಾ ಚೆನ್ನಾಗಿ ಇತ್ತು. ಎಲ್ಲರೂ ಈ ಪುಸ್ತಕ ವನ್ನು ಓದಲೇ ಬೇಕು.