ಸಾರ್ಥಕ ಜೀವನದ ಸಾರ್ಥಕ ಚಿತ್ರಣ
ಉತ್ತರ ಕನ್ನಡ ಜಿಲ್ಲೆಯ ಹಿರಿಯ ಯಕ್ಷಗಾನ ಸಂಘಟಕರೂ ಹವ್ಯಾಸೀ ತಾಳಮದ್ದಳೆ ಅರ್ಥಧಾರಿಗಳೂ ಆದ ವಯೋವೃದ್ಧರಾದ ನಾರಾಯಣ ಭಟ್ ಮೇಲಿನಘಂಟಿಗೆ ಇವರ ಆತ್ಮಕಥನವನ್ನು ಪೂರ್ಣವಾಗಿ ಓದಿದೆ. ಹೊಸಾಕುಳಿ ನಾರಾಯಣ ಭಟ್ಟರು, ಮೇಲಿನಘಂಟಿಗೆ ನಾರಾಯಣ ಭಟ್ಟರು, ಸಂತೆಗುಳಿ ನಾರಾಯಣ ಭಟ್ಟರು ಎಂದೆಲ್ಲ ಬೇರೆ ಬೇರೆ ವಲಯದಲ್ಲಿ, ಊರುಗಳಲ್ಲಿ ಗುರುತಿಸಲ್ಪಡುವ ನಾರಾಯಣ ಭಟ್ಟರನ್ನು ಕಳೆದ ಎರಡು ದಶಕಗಳಿಂದ ನಾನು ಬಲ್ಲೆ. ಹೀಗೆ ಒಂದೊಂದು ಕಡೆಯಲ್ಲಿ ಅವರ ಹೆಸರಿನ ಹಿಂದಿನ ವಿಶೇಷಣ ಬದಲಾದರೂ ಹೆಸರು ಮಾತ್ರ ನಾರಾಯಣ ಭಟ್ಟರಾಗಿರುವುದೇ ಅವರ ಜೀವನದ ವೈಶಾಲ್ಯದ ಕುರುಹು. ಆದರೆ, ಕೆರೆಮನೆ ಶಿವಾನಂದ ಹೆಗಡೆಯವರು ನಿರೂಪಿಸಿದ ಅವರ ಆತ್ಮಕಥನವನ್ನು ಓದಿ ನೋಡಿದ ಮೇಲೆ ನಮ್ಮವರೇ ಆದ ನಾರಾಯಣ ಭಟ್ಟರ ಕುರಿತು ನಾನು ತಿಳಿದದ್ದು ಎಷ್ಟು ಕಡಿಮೆಯಾಗಿತ್ತು? ಮತ್ತು ಹೀಗೆ ನಮ್ಮ ಸುತ್ತಮುತ್ತಲ ಅನೇಕ ಹಿರಿಯರ ಬದುಕಿನ ಕುರಿತು ನಾವು ಎಷ್ಟು ತಿಳಿದುಕೊಳ್ಳಬೇಕಾಗಿತ್ತೋ ಅಷ್ಟನ್ನು ತಿಳಿದುಕೊಳ್ಳಲಿಲ್ಲವೇನೋ ಎಂದು ಅನಿಸ ತೊಡಗಿತು.
ಸಾಮಾನ್ಯವಾಗಿ ಆತ್ಮಕಥನ ಅಥವಾ ಜೀವನ ಚರಿತ್ರೆಯನ್ನು ಬರೆದುಕೊಳ್ಳಬೇಕಾದವರು ಅಥವಾ ಬರೆಸಬೇಕಾದವರು ಯಾವುದೋ ಒಂದು ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದವರು ಮಾತ್ರ ಎಂಬ ಭಾವನೆಯಿದೆ. ಆದರೆ ಹಾಗೇನೂ ಇಲ್ಲ. ನಮ್ಮ ನಡುವಿನ ಸಾಮಾನ್ಯರಲ್ಲಿ ಸಾಮಾನ್ಯ ಎಂಬ ವ್ಯಕ್ತಿಯ ಬದುಕಿನಲ್ಲಿಯೂ ಉಳಿದವರಿಗೆ ಅಮೂಲ್ಯ ಎನ್ನಬಹುದಾದ ಅನುಭವಗಳಿರಬಹುದು. ಇಂತಹ ಅನುಭವಗಳು ಇತರರಿಗೆ ಸಂವಹನ ಮಾಡುವುದು ಹೇಗೆ- ಅದು ಆತ್ಮಕಥನದ ಮೂಲಕವೇ ಆಗಿದೆ. ಆತ್ಮಕಥನದ ಕುರಿತು ಇರುವ ಇನ್ನೊಂದು ತಪ್ಪು ಕಲ್ಪನೆಯೆಂದರೆ ಅದರಲ್ಲಿ ಬರುವುದೆಲ್ಲ ಸತ್ಯ, ಅಥವಾ ಸತ್ಯವೇ ಆಗಿರಬೇಕೆಂಬ ಹಟ. ನಿಜ. ಆತ್ಮಕಥನವು ಕಟ್ಟು ಕಥೆಯಲ್ಲ. ಆದರೂ ಅಲ್ಲಿ ವರ್ಣಿಸಲ್ಪಡುವ ಘಟನೆಗಳೆಲ್ಲ ಆತ್ಮಕಥನಕಾರನು ಕಂಡ ಸತ್ಯಗಳು. ಮುಂದೆ ಅದು ಸತ್ಯವಲ್ಲ ಎಂದು ನಿರೂಪಿತವಾಗಬಹುದು. ಅಥವಾ ಒಂದೇ ಘಟನೆಯು ಬೇರೆ ಬೇರೆ ಮೂಲಗಳಲ್ಲಿ ಭಿನ್ನವಾಗಿ ಹೇಳಲ್ಪಟ್ಟಾಗ ಆ ಘಟನೆಯ ನಿಜವಾದ ಸ್ವರೂಪದ ಕುರಿತು ಅನುಮಾನ ಹುಟ್ಟಬಹುದು. ಇತಿಹಾಸ ಅಂದರೆ ಅದೇ. ಒಂದು ದೇಶದ ದೊರೆಯ ಆತ್ಮಕಥನವು ಇಡಿಯ ದೇಶದ ಇತಿಹಾಸದ ಭಾಗವಾದರೆ, ಯಾವುದೋ ಒಂದೂರಿನಲ್ಲಿ ಬದುಕಿ ಬಾಳಿದ ವ್ಯಕ್ತಿಯ ಆತ್ಮಕಥನವು ಆ ಊರಿನ ಇತಿಹಾಸದ ಆಕರವಾಗಬಹುದು. ಹಾಗಾಗಿಯೇ ಪ್ರತಿಯೊಬ್ಬನ ಜೀವನಾನುಭವ- ಅವನು ಸಾಮಾನ್ಯನಾಗಿರಲಿ; ಇಲ್ಲ ಅಸಾಮಾನ್ಯ ನಾಗಿರಲಿ ಅದು ಕುತೂಹಲಕರ ಮತ್ತು ಅಮೂಲ್ಯ.
ನಾರಾಯಣ ಭಟ್ಟರ ಆತ್ಮಕಥನ ಕೇವಲ ಅವರ ಯಕ್ಷಗಾನ ಆಸಕ್ತಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಅವರ ಬಾಲ್ಯದಿಂದ ಇಂದಿನ ವರೆಗಿನ ಅವರ ಊರ ಸುತ್ತಮುತ್ತಲ ಸಮುದಾಯ ಬದುಕಿದ ರೀತಿಗೆ, ದಾಟಿಬಂದ ಕಷ್ಟ ಸಂಕಷ್ಟಗಳಿಗೆಲ್ಲ ವೇದಿಕೆಯಾಗಿರುವುದು ವಿಶೇಷ. ಭಟ್ಟರ ಬಾಲ್ಯದ ಅಂದರೆ ಕಳೆದ ಶತಮಾನದ ೪೦-೫೦ರ ದಶಕದ ಹೊನ್ನಾವರ ತಾಲೂಕಿನ ಸಾಮಾಜಿಕ ಸ್ಥಿತಿ-ಗತಿಯ ವರ್ಣಮಯ ಚಿತ್ರಣ ಓದುಗರನ್ನು ಅವರ ಬಾಲ್ಯದ ದಿನಗಳಿಗೆ ಕೊಂಡು ಹೋಗುತ್ತವೆ. ಕರ್ಮಠ ವೈದಿಕ ಮನೆತನದಲ್ಲಿ ಹುಟ್ಟಿದ ನಾರಾಯಣ ಭಟ್ಟರು ಪ್ರಾರಂಭದಲ್ಲಿ ವೇದಾಧ್ಯಯನವನ್ನು ಮಾಡಿದರೂ ವೈದಿಕನಾಗಿ ಯಾಕೆ ಮುಂದುವರಿಯುವುದ ಕ್ಕಾಗಲಿಲ್ಲ ಎಂಬುದನ್ನು, ಅಂದಿನ ಸಮಾಜದ ವಾಸ್ತವವನ್ನು ಬಿಚ್ಚಿಡುತ್ತಾ ಮನೋಜ್ಞವಾಗಿ ವರ್ಣಿಸುತ್ತಾರೆ. ಸ್ವಾತಂತ್ರ್ಯ ಬಂದ ಹೊಸತರಲ್ಲಿ ಆಧುನಿಕತೆಗೆ ತನ್ನನ್ನು ತಾನು ಒಡ್ಡಿಕೊಳ್ಳುವ ಗ್ರಾಮೀಣ ಬದುಕು ದಾಟಿಬಂದ ದಿವ್ಯಗಳನ್ನು ಅದರ ಎಲ್ಲ ವಿವರಗಳೊಂದಿಗೆ ನಮ್ಮ ಮುಂದಿಡುವ ಪರಿಯಿಂದಾಗಿ ಯಕ್ಷಗಾನಕ್ಕೆ ಸಂಬಂಧಪಡದ ಓದುಗನಿಗೂ ಇದು ಪ್ರಸ್ತುತವೆನಿಸುತ್ತದೆ. ಆ ಕಾಲದಲ್ಲಿ ಊರಿನಲ್ಲಿ ವ್ಯಾಜ್ಯಗಳನ್ನು ಹೇಗೆ ಬಗೆಹರಿಸುತ್ತಿದ್ದರು; ಗಣ್ಯರು ನಡೆಸುವ ಪಂಚಾಯತಿ ತೀರ್ಮಾನಗಳು ಹುಟ್ಟುಹಾಕುತ್ತಿದ್ದ ಗಂಡಾಂತರಗಳು; ಮದುವೆ, ಮುಂಜಿ ನಡೆಯುತ್ತಿದ್ದ ಬಗೆ; ಕೃಷಿ ಕಾಯಕಗಳು, ವ್ಯಾಪಾರ ವ್ಯವಹಾರಗಳು, ಸಂಪರ್ಕ ಸಂವಹನಗಳು ಸುಧಾರಣೆಯಾಗುತ್ತಾ ಬಂದುದು- ಹೀಗೆ ಸಾಮಾಜಿಕ ಜೀವನದ ಎಲ್ಲ ವಿವರಗಳನ್ನೂ ಅವರು ಕೊಡುತ್ತಾರೆ. ಹಾಗಾಗಿ ಇದು ನಾರಾಯಣ ಭಟ್ಟರ ಆತ್ಮಕಥನ ಮಾತ್ರವಲ್ಲ ಅವರ ಹುಟ್ಟೂರು- ಅದರ ಸುತ್ತಮುತ್ತಲ ಸಮುದಾಯದ ಆತ್ಮಕಥನವೂ ಆಗಿರುವುದು ಸಾರ್ಥಕವೆನಿಸುತ್ತದೆ.
ಯಕ್ಷಗಾನದ ವಿಭಾಗದಲ್ಲಿ ಭಟ್ಟರು ತಮ್ಮ ಕಲಾ ವ್ಯವಸಾಯಕ್ಕಿಂತಲೂ ಕಲಾ ಸಂಘಟನೆಯ ಅನುಭವಗಳನ್ನು ವಿಸ್ತಾರವಾಗಿ ಹೇಳುತ್ತಾ ಹೋಗುತ್ತಾರೆ. ಅವರು ಎಪ್ಪತ್ತರ ದಶಕದಲ್ಲಿ ಸಂಘಟಿಸಿದ ಸಂಯುಕ್ತ ಮೇಳವು ಯಕ್ಷಗಾನ ರಂಗಭೂಮಿಯ ಇತಿಹಾಸದ ಒಂದು ಪ್ರಮುಖ ಅಧ್ಯಾಯವಾಗಬಹುದು. ಉತ್ತರ ಕನ್ನಡ ಜಿಲ್ಲೆಯ ಯಾವುದೇ ಕ್ಷೇತ್ರವನ್ನು ತೆಗೆದುಕೊಂಡರೂ ನೆರೆಯ ಉಡುಪಿ ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಎಲ್ಲವೂ ಇದೆ ಆದರೆ ಏನೂ ಇಲ್ಲ ಎಂಬಂತಹ ಸ್ಥಿತಿ ಇದೆ. ಇದು ಯಾಕೆ? ಎಂದು ಪ್ರಶ್ನಿಸಿಕೊಳ್ಳುತ್ತಿರುವವರಿಗೆ ಉತ್ತರವು ನಾರಾಯಣ ಭಟ್ಟರ ಸಂಘಟನೆಯ ಅನುಭವಗಳ ರಾಶಿಯಲ್ಲಿ ಸಿಗುತ್ತದೆ. ಸಂಘಟನೆಯ ಅವರ ಜೀವನಾನುಭವಗಳು ಇಲ್ಲಿ ಎರಡು ಮಜಲುಗಳಲ್ಲಿ ವಿಸ್ತಾರವಾಗಿ, ಕಲೆಗಿಂತಲೂ ಅಮೂಲ್ಯವಾದ ಕಲೇತರ ವಿವರಗಳೊಂದಿಗೆ ನಿರೂಪಿತವಾಗಿದ್ದು ಯಕ್ಷಗಾನ ಸಂಘಟನೆಯ ಅಧ್ಯಯನಾಸಕ್ತರಿಗೆ ಅಮೂಲ್ಯ ವಸ್ತುವನ್ನು ಒದಗಿಸುತ್ತವೆ. ಒಂದು-ಭಟ್ಟರೇ ಪ್ರಾರಂಭಿಸಿ ನಷ್ಟದಲ್ಲಿ ಪರ್ಯವಸಾನವಾದ ಅವರ ಸಂಯುಕ್ತ ಮೇಳ; ಇನ್ನೊಂದು ಕೆರೆಮನೆ ಶಂಭು ಹೆಗಡೆಯವರು ಸಂಘಟಿಸಿದ ವ್ಯವಸಾಯೀ ಮೇಳದ ದಶಕದ ತಿರುಗಾಟದಲ್ಲಿ ಮೇಳದ ವ್ಯವಸ್ಥಾಪಕರಾಗಿ ಅವರ ಅನುಭವ. ಕೆರೆಮನೆ ಶಂಭು ಹೆಗಡೆ ಮೇಳವನ್ನು ಮಾಡಿ ಹತ್ತಾರು ವರ್ಷ ನಡೆಸಿ ನಿಲ್ಲಿಸಿದರೂ, ಯಕ್ಷಗಾನವನ್ನೇ ನಂಬಿಕೊಂಡು ಬದುಕುವ ಕಲಾವಿದನೊಬ್ಬ ಅತ್ತ ವ್ಯವಸಾಯೀ ಉದ್ದೇಶವನ್ನು ಕೈಗೂಡಿಸಿಕೊಂಡೂ ಕೂಡ ಕಲಾನಿಷ್ಠೆಯೊಂದಿಗೆ ಕಲೆಯ ಸಾಧ್ಯತೆಗಳನ್ನು ವಿಸ್ತರಿಸಿ, ವ್ಯವಸಾಯೀ ಮೇಳಗಳ ಬಿರುಗಾಳಿಯಂತಹ ವ್ಯಾಪಾರೀ ಧೋರಣೆಯ ಮಧ್ಯದಲ್ಲಿ ತನ್ನದೇ ಆದ ಪ್ರಜ್ಞಾವಂತ ಪ್ರೇಕ್ಷಕ ಸಮುದಾಯವನ್ನು ನಾಡಿನಾದ್ಯಂತ ಹುಟ್ಟು ಹಾಕುವುದಕ್ಕೆ ಸಾಧ್ಯ ಎಂಬುದನ್ನು ಸಾಬೀತುಪಡಿಸಿದುದು ಇಡಿಯ ಭಾರತೀಯ ರಂಗಭೂಮಿಯ ಇತಿಹಾಸದಲ್ಲಿಯೇ ಒಂದು ಅನನ್ಯ ವಿದ್ಯಮಾನ. ಈ ಕುರಿತು ಈ ವರೆಗೆ ಡಾ. ಜಿ.ಎಸ್.ಭಟ್ ಸಾಗರ ಅವರು ಬರೆದ ಶಂಭು ಹೆಗಡೆ ಅಧ್ಯಯನದಲ್ಲಿ ಹಲವು ವಿವರಗಳು ಬಂದಿದ್ದರೂ ಆ ಮೇಳದ ಸಂಘಟನಾತ್ಮಕ ಅಂಶಗಳ ಬಗೆಗೆ ನಂಬಲರ್ಹವಾದ ವಿವರಗಳು ಈ ಆತ್ಮಕಥನದಲ್ಲಿ ಲಭ್ಯವಾಗಿವೆ.
ಕಳೆದ ಒಂದು ಶತಮಾನದಲ್ಲಿ ಯಕ್ಷಗಾನ ಸಂಘಟನೆಯಲ್ಲಿ ಆದ ಅವಸ್ಥಾಂತರಗಳೇ ಒಂದು ಪ್ರತ್ಯೇಕ ಅಧ್ಯಯನಕ್ಕೆ ವಸ್ತುವಾಗಬಹುದು. ಆದರೆ ಈ ವರೆಗೆ ಈ ನಿಟ್ಟಿನಲ್ಲಿ ಯಕ್ಷಗಾನದ ಉಳಿದ ಅಂಗೋಪಾಂಗಗಳ ಮೇಲೆ ನಡೆದಷ್ಟು ಚಿಂತನ-ಮಂಥನ ನಡೆದಂತೆ ನಿಸುವುದಿಲ್ಲ. ಇದಕ್ಕೆ ಕಾರಣ ಮೇಳ ನಡೆಸಿದವರು ಅಕ್ಯಾಡೆಮಿಶಿಯನ್ ಆಗಿಲ್ಲದಿರುವುದು ಮತ್ತು ಅಕ್ಯಾಡೆಮಿಶಿಯನ್ ಆಗಿರುವ ಸಂಶೋಧಕರು ಅಥವಾ ಚಿಂತಕರು ಸಂಘಟನೆಯಲ್ಲಿ ಜೀವಂತ ಅನುಭವಗಳನ್ನು ಗಳಿಸದಿದ್ದುದು ಪ್ರಮುಖ ಕಾರಣ ಅಂದುಕೊಳ್ಳಬಹುದು. ಇರಲಿ. ಆದರೂ ಈ ವರೆಗೆ ಬಂದ ಅನೇಕ ಕಲಾವಿದರ ಆತ್ಮಕಥನಗಳು ಈ ಕಾಲಘಟ್ಟದ ಮೇಳಗಳ ಸಂಘಟನೆಯ ಮೇಲೆ ಬೆಳಕು ಚೆಲ್ಲುತ್ತಾ ಒಂದು ಪಾರ್ಶ್ವ ನೋಟವನ್ನು ನಮಗೆ ಒದಗಿಸುತ್ತವೆ. ಉತ್ತರ ಕನ್ನಡ ಉಳಿದೆರಡು ಜಿಲ್ಲೆಗಳಿಗಿಂತ ಈ ವಿಷಯದಲ್ಲಿ ಭಿನ್ನ. ಉತ್ತರ ಕನ್ನಡದಲ್ಲಿ ನಾಮಾಂಕಿತ ಕಲಾವಿದರುಗಳಿದ್ದರೂ ಇಲ್ಲಿ ಪೂರ್ಣ ಪ್ರಮಾಣದ ವ್ಯವಸಾಯೀ ಮೇಳವು ಹುಟ್ಟಿ ಉಳಿದು ಬೆಳೆದು ಬಂದಿಲ್ಲ. ಇದು ಎಲ್ಲರೂ ಒಪ್ಪುವ ಸತ್ಯ. ಆದರೆ ನನ್ನ ಪ್ರಕಾರ ಇದು ಈ ಪ್ರದೇಶದ ಗುಣವೂ ಹೌದು ಅವಗುಣವೂ ಹೌದು. ಈ ವರೆಗೆ ಬಂದ ಉಳಿದೆರಡು ಜಿಲ್ಲೆಗಳ ಮೇಳಗಳ ಸ್ಥೂಲ ಇತಿಹಾಸ ಮತ್ತು ನಾರಾಯಣ ಭಟ್ಟರ ಈ ಆತ್ಮಕಥನದಲ್ಲಿ ಅನಾವರಣಗೊಂಡ ಅಂಶಗಳು ಇದನ್ನೇ ನಿರೂಪಿಸುತ್ತವೆ. ಶಿವರಾಮ ಹೆಗಡೆ, ದೇವರು ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ, ಗೋವಿಂದ ನಾಯ್ಕ್ ಹೀಗೆ ಲಾಗಾಯ್ತಿನಿಂದ ಉತ್ತರ ಕನ್ನಡದ ಹೆಚ್ಚಿನ ಹಳೆಯ ಕಾಲದ ಮೇಳಗಳು ಕಲಾವಿದರಿಂದಲೇ ಸಂಘಟಿತವಾಗಿದ್ದು ಕಲಾವಿದರ ಪ್ರತಿಭೆಯನ್ನೇ ನಂಬಿಕೊಂಡು ಹುಟ್ಟಿಕೊಂಡುದು ವಿಶೇಷ. ಇದರ ಬದಲಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮೇಳಗಳು ಹೆಚ್ಚಾಗಿ ಸಂಘಟಿತವಾದದ್ದು ಕಲಾವಿದರಲ್ಲದ ಉದ್ಯಮಿಗಳಿಂದ. ಆ ಕಾರಣಕ್ಕಾಗಿಯೇ ಬಹು ಹಿಂದೆಯೇ ತೆಂಕಿನ ಮೇಳಗಳಲ್ಲಿ ಜನಾಕರ್ಷಣೆಗಾಗಿ ಯಕ್ಷಗಾನೀಯ ಸಂಗತಿಗಳು ಎಗ್ಗಿಲ್ಲದೇ ರಂಗಸ್ಥಳವನ್ನು ಪ್ರವೇಶಿಸಿದುದು ಕಂಡುಬರುತ್ತದೆ. ಜನಾಕರ್ಷಣೆಗಾಗಿ ಯಾವ ತಂತ್ರವನ್ನಾದರೂ ಕಲೆಯ ಮೇಲಿನ ದಯೆ ದಾಕ್ಷಿಣ್ಯವಿಲ್ಲದೇ ಅಳವಡಿಸಿಕೊಳ್ಳುವುದಕ್ಕೆ ಮೇಳದ ಯಜಮಾನರಿಗೆ ಯಾವ ಆತಂಕವೂ, ಅಪರಾಧೀ ಪ್ರಜ್ಞೆಯೂ ಬಾಧಿಸುವುದಿಲ್ಲ. ಈ ಅಂಶಕ್ಕೆ ಜನಸಮುದಾಯದ ಈ ವರೆಗಿನ ಅನುಭವ, ಕಲಾವಿದರ ಆತ್ಮಕಥನ ಮತ್ತು ಇಂದಿಗೂ ನಡೆಯುತ್ತಿರುವ ವ್ಯವಸಾಯೀ ಮೇಳಗಳ ಪ್ರದರ್ಶನದ ಕರುಣಾಜನಕ ಸ್ಥಿತಿ ಜ್ವಲಂತ ಸಾಕ್ಷಿ. ಈ ಅಂಶವನ್ನು ಭಟ್ಟರು ತಮಗರಿವಿಲ್ಲದೇ ವಿಸ್ತಾರವಾದ ವಿವರಗಳೊಂದಿಗೆ ಇಲ್ಲಿ ಅನಾವರಣಗೊಳಿಸುತ್ತಾರೆ. ಕಲೆಯ ಮೇಲಿನ ಸೆಳೆತಕ್ಕೆ ಸಿಕ್ಕಿ ನಾರಾಯಣ ಭಟ್ಟರು ನಡೆಸಿದ ಮೇಳ ಆತ್ಮಾವಲೋಕನಕ್ಕೆ ಹಾದಿ ಮಾಡಿಕೊಟ್ಟಿತು. ಹಲವು ಕಲಾವಿದರ, ವ್ಯಕ್ತಿಗಳ ಸತ್ವಪರೀಕ್ಷೆಯನ್ನು ಮಾಡಿತು. ಇದೀಗ ಅವರ ಬೆಲೆಬಾಳುವ ಅನುಭವ, ಸಂಯಮದಿಂದ ಓದಿದರೆ ಕಲಾವಿದರಿಗೆ ಮತ್ತು ಸಂಘಟಕರಿಗೆ ಹೊಸ ಬೆಳಕನ್ನು ನೀಡಬಹುದು. ಕಲೆಗಿಂತಲೂ ಕಲಾವಿದನೇ ಮುಖ್ಯವಾಗುವ ಕಲಾವಿದ ಕೇಂದ್ರಿತವಾದ ಉತ್ತರ ಕನ್ನಡದ ಮನೋಧರ್ಮವು ಇಲ್ಲಿ ಸಮರ್ಥ ಕಲಾವಿದರಿದ್ದರೂ, ಪೋಷಿಸುವ ವಿಶಾಲ ಸಮುದಾಯವಿದ್ದರೂ, ಕಲಾವಿದರು ಬೇರೆ ಜಿಲ್ಲೆಯ ಮೇಳಗಳಲ್ಲಿ ದುಡಿಯುವ ಅನಿವಾರ್‍ಯ ಸ್ಥಿತಿಯನ್ನು ನಿರ್ಮಿಸಿದೆ. ಅನ್ಯ ಪ್ರದೇಶದ ಮೇಳದಲ್ಲಿ ನಿರಂತರ ದುಡಿದ ಕಲಾವಿದರು, ಕ್ರಮೇಣ ತಮ್ಮ ಪ್ರದೇಶದ ಸಂಪ್ರದಾಯ, ಪದ್ಧತಿ, ಪರಂಪರೆಯನ್ನು ಮರೆಯುವುದರ ಜೊತೆಗೆ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನೇ ಕಳೆದು ಕೊಂಡು ವಿಸ್ಮೃತಿಗೆ ಒಳಗಾಗಬಹುದೆಂಬ ಚಾರಿತ್ರಿಕ ಸತ್ಯವನ್ನು ಭಟ್ಟರ ಮೇಳದ ಅನುಭವ ವರ್ಣಮಯವಾಗಿ ಸಾಕ್ಷೀಕರಿಸುತ್ತದೆ.
ಆದರೆ ತಾಂತ್ರಿಕ ಸಂಗತಿಗಳಲ್ಲಿ ಪ್ರಯೋಗಶೀಲತೆಗೆ ಕೊರತೆಯಿರಲಿಲ್ಲ. ಉದಾಹರಣೆಗೆ ಬೆಳಕಿನ ವ್ಯವಸ್ಥೆಗೆ ಸಂಬಂಧಿಸಿದುದು. ಬೆಳಕಿನ ವ್ಯವಸ್ಥೆಯಲ್ಲಿ ಎಷ್ಟೇ ಬದಲಾವಣೆಗಳಾದರೂ ಉತ್ತರ ಕನ್ನಡದಲ್ಲಿ ಯಾವ ಯಕ್ಷಗಾನ ಮೇಳದವರೂ ಗ್ಯಾಸ್‌ಲೈಟ್ ಬಿಟ್ಟು ಬೇರೆ ಯೋಚನೆಯೇ ಮಾಡಿದಂತಿಲ್ಲ. ಇಂತಹ ಸಂದರ್ಭದಲ್ಲಿರುವಾಗ ಮೊಟ್ಟಮೊದಲು ಯಕ್ಷಗಾನದಲ್ಲಿ ಬೆಳಕಿಗೆ ವಿದ್ಯುತ್ ದೀಪದ ಬಳಕೆ ಮಾಡಿರುವುದು ಶ್ರೀ ಮಹಾಗಣಪತಿ ಪ್ರಾಸಾದಿತ ಯಕ್ಷಗಾನ ಮಂಡಳಿ ಉತ್ತರ ಕನ್ನಡ ಸಂಯುಕ್ತ ಎಂದು ಅವರು ಬರೆಯುತ್ತಾರೆ. ಹಾಗೆಯೇ ಶಂಭು ಹೆಗಡೆಯವರು ಮೇಳ ಮಾಡಿದಾಗ ಲಾರಿಯ ಒಂದೇ ಲೋಡಿನಲ್ಲಿ ಮೇಳದ ಎಲ್ಲಾ ಖುರ್ಚಿಗಳನ್ನೂ ಸಾಗಿಸುವುದಕ್ಕೆ ಅನುಕೂಲವಾಗುವಂತೆ ಆಗ ತಾನೆ ಜನಪ್ರಿಯವಾಗುತ್ತಿದ್ದ ಕಬ್ಬಿಣದ ಸಲಾಕೆಯಿಂದ ವಿಶಿಷ್ಟ ವಿನ್ಯಾಸದಲ್ಲಿ ಕಬ್ಬಿಣದ ಆರಾಮ ಖುರ್ಚಿಗಳನ್ನು ಆವಿಷ್ಕರಿಸಿದರು. ಈ ಮಾದರಿಯ ಖುರ್ಚಿಯಲ್ಲಿಯೇ ಇಂದಿಗೂ ವ್ಯವಸಾಯೀ ಮೇಳಗಳಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವುದು ಎಂಬ ಸತ್ಯ ಹೆಚ್ಚಿನವರಿಗೆ ಗೊತ್ತಿಲ್ಲ. ಭಟ್ಟರ ಮತ್ತು ಶಂಭು ಹೆಗಡೆಯವರ ಮೇಳದ ಅನುಭವಗಳು ಕಲಾತ್ಮಕ ವಿಭಾಗದಲ್ಲಿ ಅಷ್ಟೇ ಅಲ್ಲ ತಾಂತ್ರಿಕ ವಿಭಾಗದಲ್ಲಿಯೂ ಪ್ರಯೋಗಶೀಲತೆಯ ಕೊರತೆಯನ್ನು ಎತ್ತಿ ತೋರಿಸುತ್ತವೆ. ತಾಂತ್ರಿಕ ಸುಧಾರಣೆ ಎಂದರೆ ಲಗ್ಗೆ ಇಡುತ್ತಿರುವ ಹೊಸ ಹೊಸ ತಂತ್ರಜ್ಞಾನವನ್ನು ಇದ್ದದ್ದನ್ನು ಇದ್ದಂತೆ ಅಳವಡಿಸಿಕೊಳ್ಳುವುದೂ ಅಲ್ಲ; ಅಥವಾ ಅವುಗಳನ್ನು ಸಾರಾಸಗಟಾಗಿ ದೂರವಿಡುವುದೂ ಅಲ್ಲ. ಯಾವುದೋ ಒಂದು ವಿಶಿಷ್ಟವಾದ ಪ್ರಾದೇಶಿಕವಾದ ಸೀಮಿತ ಉದ್ದೇಶಕ್ಕೆ ಅನುಕೂಲವಾಗುವಂತೆ ಪಳಗಿಸಿಕೊಳ್ಳುವುದು ತಂತ್ರಜ್ಞಾನ ಸ್ವೀಕಾರದ ಆದರ್ಶ ಮಾದರಿ ಅಂದುಕೊಳ್ಳಬಹುದು. ನಾವು ಇಂದು ನೋಡುವ ಮೇಳದ ಟೆಂಟು, ರಂಗಸ್ಥಳ, ಚೌಕಿ, ಬೆಳಕು, ಧ್ವನಿವರ್ಧಕ ಎಲ್ಲವುಗಳೂ ವಿದಾಯಕವಾದ ಬದಲಾವಣೆಯನ್ನು ನಿರೀಕ್ಷಿಸುತ್ತಿವೆ. ಇಂದಿಗೂ ನಲವತ್ತು ವರ್ಷದ ಹಿಂದಿನ ತಂತ್ರಜ್ಞಾನವೇ ಇದೆ- ಪರಿಕರಗಳೆಲ್ಲ ಹೊಸತು ಅಷ್ಟೇ.
ಆಢ್ಯ ಮನೆತನವೊಂದು ಯಕ್ಷಗಾನವನ್ನು ಪೋಷಿಸುತ್ತಾ ಪೋಷಿಸುತ್ತಾ ಯಕ್ಷಗಾನದಿಂದಲೇ ಒಡವೆ ಬಂಗಾರ ಆಸ್ತಿಪಾಸ್ತಿಯನ್ನೆಲ್ಲ ಕಳೆದುಕೊಂಡು ಯಕ್ಷಗಾನದಿಂದ ಹೆಚ್ಚಿನದೇನನ್ನೂ ತಿರುಗಿ ಪಡೆಯದಿದ್ದರೂ ಯಕ್ಷಗಾನದಿಂದಲೇ ನಮ್ಮ ಬದುಕು ಸುಂದರವಾಯಿತು ಎಂದು ಅಂದುಕೊಳ್ಳುವಲ್ಲಿಯೇ ಸಂತೋಷವನ್ನು ಕಾಣುವ ಒಂದು ಮನೆತನದ ಕಲಾಪ್ರೀತಿಯು, ಕಾವ್ಯಾತ್ಮಕವಾದ ಮಾತಿನಲ್ಲಿ ಒಡಮೂಡುವ ಧ್ವನಿಯಂತೆ ಇಲ್ಲಿ ನಿರೂಪಿಸಲ್ಪಟ್ಟಿದೆ.
ತಮ್ಮ ಜೀವಿತಕಾಲದಲ್ಲಿ ತಾವು ಕಂಡ ತಲೆಮಾರುಗಳ ಕಲಾವಿದರ ಕಲಾಪ್ರಸ್ತುತಿಯನ್ನು ತಮ್ಮ ನೆನಪಿನ ಬಲದಿಂದ ಹಾಗೂ ತಮ್ಮ ಜ್ಞಾನ ಮತ್ತು ಅನುಭವದ ಮಿತಿಯಲ್ಲಿ ಚಿತ್ರಿಸುತ್ತಾರೆ.
ವ್ಯಕ್ತಿಯೊಬ್ಬ ದೀರ್ಘಾಯುವಾಗಿ ಆರೋಗ್ಯವಂತನಾಗಿರುವುದಕ್ಕೆ ಕಾರಣವೇನು? ಎಂಬ ಪ್ರಶ್ನೆ ಎದುರಾದಾಗಲೆಲ್ಲ ಹಲವು ಕಾರಣಗಳನ್ನು ನೀಡಲಾಗುತ್ತದೆ. ಅವುಗಳಲ್ಲಿ ಒಂದು- ಜೀವನದಲ್ಲಿ ಮನಸ್ಸು ನಿರಾಳವಾಗಿದ್ದರೆ ದೇಹವು ಆರೋಗ್ಯಪೂರ್ಣವಾಗಿರುತ್ತದೆ ಎಂದು. ಮನಸ್ಸು ನಿರಾಳವಾಗಿರಬೇಕಾದರೆ ಜೀವನದಲ್ಲಿ ನೋವುಗಳ ಪ್ರಮಾಣ ಕಡಿಮೆ ಇರಬೇಕೆಂದೂ ಅಥವಾ ನೋವುಗಳನ್ನು ಸಹಿಸುವ ಶಕ್ತಿಯಿರಬೇಕೆಂದು ಬೋಧಿಸಲಾಗುತ್ತದೆ. ನೋವುಗಳನ್ನು ಸಹಿಸುವ ಶಕ್ತಿ ಒಬ್ಬೊಬ್ಬರಿಗೆ ಒಂದೊಂದು ಮೂಲದಿಂದ ಬರಬಹುದು. ನಾರಾಯಣ ಭಟ್ಟರು ತಮ್ಮ ವೈಯಕ್ತಿಕ ಜೀವನದಲ್ಲಿ ಎರಡು ಜೀವನಕ್ಕಾಗುವಷ್ಟು ನೋವನ್ನು ಉಂಡವರು. ಆದರೂ ಇಂದಿಗೂ ಆರೋಗ್ಯವಂತರಾಗಿರುವುದರ ಗುಟ್ಟೇನು? ತಮ್ಮ ಜೀವನಾನುಭವವನ್ನು ಬಿಚ್ಚಿಡುವಲ್ಲಿಯ ಅವರ ಉತ್ಸಾಹದಲ್ಲಿ ಈ ಪ್ರಶ್ನೆಗೆ ಉತ್ತರ ದೊರೆಯುತ್ತದೆ. ಯಕ್ಷಗಾನದ ಮೇಲಿನ ಅವರ ಪ್ರೀತಿಯು ಅವರನ್ನು ಆರೋಗ್ಯದಿಂದ ಇಟ್ಟಿದೆ. ಅವರಿಗೆ ಅಭಿನಂದನೆಗಳು. ಹಾಗೂ ಸುವ್ಯವಸ್ಥಿತವಾಗಿ ಮತ್ತು ಕಲಾತ್ಮಕವಾಗಿ ಈ ಜೀವನ ಚಿತ್ರಣವನ್ನು ಕಟ್ಟಿಕೊಟ್ಟ ನಿರೂಪಕ ಕೆರೆಮನೆ ಶಿವಾನಂದ ಹೆಗಡೆಯವರು ಕೂಡ ಅಭಿನಂದನಾರ್ಹರು.
ಯಕ್ಷಗಾನದ ಸಮಗ್ರವಾದ ಇತಿಹಾಸವನ್ನು ಬರೆಯುವ ಅಥವಾ ಬರೆಸುವ ಸಾಹಸಕ್ಕೆ ಈ ವರೆಗೆ ಯಾರೂ ಕೈಹಾಕಿಲ್ಲ. ಗೆದ್ದಲು ತಿಂದ ಹಳೆಯ ಭಾವಚಿತ್ರವೊಂದರ ಚಿಂದಿಯಾದ ಚೂರುಗಳಂತಿವೆ ಯಕ್ಷಗಾನದ ಇತಿಹಾಸ. ಅವುಗಳನ್ನು ಒಗ್ಗೂಡಿಸಿ ಒಂದು ಸಾಂಗತ್ಯಪೂರ್ಣವಾದ ಮತ್ತು ತರ್ಕಸಮ್ಮತವಾದ ಚಿತ್ರವನ್ನು ಕೊಡುವುದು ದೊಡ್ಡ ಸಾಹಸವಾಗಬಹುದು. ಈ ಸಾಹಸದ ಕಾಯಕದ ಸಂದರ್ಭದಲ್ಲಿ ಸಂತೆಗುಳಿ ನಾರಾಯಣ ಭಟ್ಟರ ಆಟದ ಮೇಳ ಈ ಆತ್ಮಕಥನವು ನಂಬಲರ್ಹವಾದ ಮಾಹಿತಿಯನ್ನು ನೀಡುವುದೆಂದು ಆತ್ಮವಿಶ್ವಾಸದಿಂದ ಹೇಳಬಹುದು.
–ಕಡತೋಕಾ ಗೋಪಾಲಕೃಷ್ಣ ಭಾಗವತ
ಸಂಪಾದಕ, ಯಕ್ಷರಂಗ ಮಾಸಪತ್ರಿಕೆ
ಎಲ್ಲವನ್ನೂ ಮರೆತು ಬಾಳು ಸಾಗಬೇಕು ಅಲ್ಲವೇ? ಶ್ರೀಯುತ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥನದಲ್ಲಿ ಈ ಒಂದು ಮಾತು ಬರುತ್ತದೆ. ಅವರ ಅನುಭವ ಕಥನವನ್ನು ಸುಂದರವಾಗಿ ನಿರೂಪಿಸಿದ ಕಲಾವಿದ ಕೆರೆಮನೆ ಶಿವಾನಂದ ಹೆಗಡೆಯವರು. ಉತ್ತರ ಕನ್ನಡದ ಮೂರು ತಲೆಮಾರುಗಳ ಯಕ್ಷಗಾನ ಚರಿತ್ರೆಯ ಒಳನೋಟವನ್ನು ನಾನು ವಿಸ್ಮಯದಿಂದ ಅವಲೋಕಿಸಿದ್ದೇನೆ.
ಸಾವು, ನೋವು, ಅನೇಕ ಯಾತನೆಗಳಿಂದ ಕೂಡಿದ ಅವರ ಬಾಳಿನಲ್ಲಿ ಸ್ವೀಕಾರವೊಂದೇ ಬಾಳಿನ ಶಾಂತಿಗಿರುವ ಮಾರ್ಗ. ಸತ್ಯ ಸೌಂದರ್ಯಗಳನ್ನು ಜತನಗೊಳಿಸಿಕೊಂಡು ಬಾಳುವ ಮಾರ್ಗ. ಜತೆಗೇ ಒಂದು ಚಾರಿತ್ರಿಕ ಜೀವನ ಸಾಹಸವನ್ನು ಸೃಷ್ಟಿಸಿ, ಅನುಭವಿಸಿ ನಿವೃತ್ತಿಯಲ್ಲಿ ಯಾವ ಕಹಿಯನ್ನೂ ಇಟ್ಟು ಕೊಳ್ಳದೆ ಇರುವ ಮಾರ್ಗ ಎಂಬುದು ಸಂತೆಗುಳಿ ನಾರಾಯಣ ಭಟ್ಟರ ಜೀವನ ಅನುಭವ ಕಥನದಲ್ಲಿ ಮಾರ್ಮಿಕವಾಗಿ ಮೂಡಿ ಬಂದಿದೆ.
ಇವರ ಅನುಭವವನ್ನು ಓದುವಾಗ ಉತ್ತರ ಕನ್ನಡದ ಮಹತ್ವದ ಸಾಹಿತಿ ವಿ.ಟಿ.ಶೀಗೇಹಳ್ಳಿಯವರ ತಲಗಳಿ ಕಾದಂಬರಿಯ ನೆನಪು ಜತೆಗೇ ಹುಟ್ಟಿಕೊಳ್ಳುತ್ತದೆ. ಸಂತೆಗುಳಿ ನಾರಾಯಣ ಭಟ್ಟರು ಎಲ್ಲವನ್ನು ನೆಚ್ಚಿ, ಹಚ್ಚಿ, ಮೆಟ್ಟಿ, ಮೆರೆದು ಬಾಳಿ ಎಲ್ಲವನ್ನು ಮರೆತು ಬಾಳಿದ ಬದುಕು ಉತ್ತರ ಕನ್ನಡದ ಹಿರಿಯ ಬಾಳಿಗ ನೊಬ್ಬನ ಸೃಜನಶೀಲತೆಯ ಮೆರಗನ್ನೂ ತೋರಿಸುತ್ತದೆ.
ಸನ್ಮಿತ್ರ ಕಲಾವಿದ ಕೆರೆಮನೆ ಶಿವಾನಂದ ಹೆಗಡೆಯವರ ಅನೇಕ ಸಾಹಸಗಳಲ್ಲಿ ಸಂತೆಗುಳಿ ನಾರಾಯಣ ಭಟ್ಟರ ಅನುಭವ ಕಥನದ ಸಂಗ್ರಹ ಅನೇಕ ರೀತಿಯ ಯಕ್ಷಗಾನದ ಆಯಾಮ ಗಳನ್ನು ಅಭಿವ್ಯಕ್ತಗೊಳಿಸುತ್ತದೆ. ವಿಸ್ಮೃತಿಯ ಈ ತಲೆಮಾರಿಗೆ ಇದೊಂದು ಅಪೂರ್ವ ಸಾಕ್ಷಿಯೆಂದು ನಾನು ಭಾವಿಸುತ್ತೇನೆ.
-ಗುರುರಾಜ ಮಾರ್ಪಳ್ಳಿ
ಪುಟ ತೆರೆದಂತೆ…
ಸವಿನುಡಿ / ೩
ಸಾರ್ಥಕ ಜೀವನದ ಸಾರ್ಥಕ ಚಿತ್ರಣ / ೫
ನಿರೂಪಕನ ಮಾತು / ೧೧
೧. ಪೇಳುವೆನೀಕಥಾಮೃತವ… / ೧೭
೨. ಇರುವಂಥ ಸ್ಥಳ / ೩೨
೩. ರೆಕ್ಕೆ ಕಟ್ಟಿ ಹೆಜ್ಜೆ ಇಟ್ಟೆ / ೩೫
೪. ಗಜಮುಖದವಗೆ ಗಣಪಗೆ / ೪೨
೫. ಮೇಳವೆಂಬ ಬಿಸಿಲ್ಗುದುರೆ… / ೬೨
೬. ಬಂದನು ದೇವರ ದೇವಾ… / ೭೩
೭. ಮರೆಯಲಾರದ ಮಹಾಚೇತನರು / ೯೨
೮. ಹೀಗೂ ಉಂಟು… / ೧೨೦
೯. ಹೊನ್ನಾವರ ತಾಲೂಕಿನ ಸಾಸ್ಕೃತಿಕ ಶ್ರೀಮಂತಿಕೆ / ೧೩೭
೧೦. ದಕ್ಕಲಿ ಜಸ ನಿನಗೆ / ೧೪೫
೧೧. ಆತ್ಮಕಥೆಗೊಂದು ಅಕ್ಷರ ರೂಪ / ೧೪೭
೧೨. ಬಾಳ ಮುಸ್ಸಂಜೆಯಲಿ… / ೧೪೯
ನಾರಾಯಣ ಭಟ್ಟರಿಗೆ ಸಂದ ಪ್ರಶಸ್ತಿ-ಸನ್ಮಾನಗಳು / ೧೫೨
ಛಾಯಾಚಿತ್ರಗಳು / ೧೫೩
Reviews
There are no reviews yet.