ಮುನ್ನುಡಿ
ಪ್ರಿಯ ಶ್ರೀ ಪ್ರಕಾಶ ವಸ್ತ್ರದ,
ನನ್ನ ಎಲ್ಲ ಧಾರವಾಹಿಗಳಲ್ಲೂ ನಾನು ಲಾಯರ್ ಪಾತ್ರ ಮಾತ್ರ ಮಾಡುವುದು. ಏಕೆಂದರೆ ನನಗೆ ಬರುವುದು ಅದೊಂದೇ. ಅದರಿಂದ ನಾನು ಕೊಂಚ ಖ್ಯಾತಿಯನ್ನು ಗಳಿಸಿದ್ದೆ ಎಂದು ನೆನಪು. ನನ್ನ ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಹೋದ್ಯೋಗಿ ಸೈದು ಬಂದು ನನ್ನನ್ನು ಒಂದು ದಿವಸ ಅವರ ಊರಿನ ಲಾಯರೊಬ್ಬರು ಬೆಂಗಳೂರಿಗೆ ಬರುತ್ತಿದ್ದಾರೆಂದು ಅವರು ಬಂದಾಗ ನನ್ನನ್ನು ನೋಡಲು ಸಾಧ್ಯವೇ ಎಂದು ಕೇಳಿದರು. ನಾನು ಧಾರವಾಹಿಯ ಬಗ್ಗೆ ಮಾತನಾಡಲು ಬರುತ್ತಿದ್ದಾರೆಂದು ಒಂದು ಕ್ಷಣ ಭಾವಿಸಿದೆ. ನಾನು ಆಗಲಿ ಎಂದು ಸೈದುಗೆ ಹೇಳಿದ ಮೇಲೆ ಕೆಲವು ದಿನಗಳ ನಂತರ ನೀವು ಮತ್ತು ನಿಮ್ಮ ಮಗ ಯುವ ನ್ಯಾಯವಾದಿ ಆತನು ಲಾಯರ್ ಎಂದು ಹೇಳಿದಿರಿ. ಸುಹಾಸ ಎಂದು ಹೇಳಿದ ಹಾಗೆ ನೆನಪು. ಅವರ ಜೊತೆ ಬಂದಿರಿ. ಬಹಳ ಹೊತ್ತು ಕೂತು ಮಾತನಾಡಿದಿರಿ. ನಂತರ ನೀವು ಟೈಪ್ ಮಾಡಿದ ಒಂದು ಪುಸ್ತಕದ ಕರಡು ಪ್ರತಿಯನ್ನು ನನಗೆ ಕೊಟ್ಟು ಇದು ನಾನು ವೃತ್ತಿ ಬದುಕಿನ ಬಗ್ಗೆ ಬರೆದಿರುವ ಅಡ್ವೊಕೇಟ್ ಡೈರಿ ಎನ್ನುವ ಪುಸ್ತಕ, ನಾನು ನಡೆಸಿದ ಕೇಸುಗಳ ಆಧಾರದ ಮೇಲೆ ಬರೆದಿರುವ ಪುಸ್ತಕ, ಇದಕ್ಕೆ ಮುನ್ನುಡಿ ಬರೆದು ಕೊಡಬೇಕೆಂದು ಕೇಳಿದಿರಿ.
ಆ ಕ್ಷಣದಲ್ಲಿ ನಾನು ಹೂಂ ಎಂದರೂ ಕೂಡ ನನಗೆ ಅದು ಇಷ್ಟರಮಟ್ಟಿಗೆ ಸವಾಲಿನ ಪ್ರಶ್ನೆಯಾಗಿ ಪರಿಣಮಿಸುತ್ತದೆ ಎಂದು ಗೊತ್ತಿರಲಿಲ್ಲ. ಸವಾಲು ಏಕೆಂದರೆ ಇಂತಹ ಒಳ್ಳೆಯ ಪುಸ್ತಕಕ್ಕೆ ಮುನ್ನುಡಿಯೇ ಬೇಕಾಗಿಲ್ಲ. ಸವಾಲು ಏಕೆಂದರೆ ಪುಸ್ತಕದಷ್ಟೇ ಚೆನ್ನಾಗಿ ಮುನ್ನುಡಿಯನ್ನು ಬರೆಯಬೇಕಾಗುತ್ತದೆ. ಇಷ್ಟು ಚಂದದ ಪುಸ್ತಕಕ್ಕೆ ಚಂದದ ಮುನ್ನುಡಿ ಹೇಗೆ ಬರೆಯಲಿ ಎಂದು ಸವಾಲು ಮನಸ್ಸಿನಲ್ಲೇ ಹುಟ್ಟಿಕೊಂಡಿತು. ನಿಜ ಹೇಳಲೆ ಇಂತಹ ಒಳ್ಳೆಯ ಪುಸ್ತಕಕ್ಕೆ ಮುನ್ನುಡಿಯೇ ಬೇಕಾಗಿಲ್ಲ. ಯಾವುದೋ ಉತ್ತಮವಾದ ಸಂಗೀತ ಅಥವಾ ನಮಗಿಷ್ಟವಾದ ಹಾಡುಗಳನ್ನು ಕೇಳಲು ಕೂತಿದ್ದಾಗ ಯಾರಾದರು ಬಂದು ಕೆಟ್ಟದಾಗಿ ಭಾಷಣ ಮಾಡಲು ಸುರು ಮಾಡಿದರೆ ಆ ಭಾಷಣ ಮಾಡುವವರನ್ನು ಎಲ್ಲರೂ ಬೈಯ್ಯುತ್ತಾರೆ ಅಲ್ಲವೆ? ಹಾಗೆಯೇ ಈ ಮುನ್ನುಡಿ ಕೂಡ. ನಿಮ್ಮ ಸೊಗಸಾದ ಅಡ್ವೊಕೇಟ್ ಡೈರಿ ಎನ್ನುವ ಪುಸ್ತಕದ ಮುಂಚೆ ಬೇಸರ ಮೂಡಿಸುವ ಬರಹ ಮಾತ್ರ ಈ ಮುನ್ನುಡಿ ಆಗಬಹುದು ಎನ್ನಿಸುತ್ತದೆ.
ನಿಮ್ಮ ಈ ಅಡ್ವೊಕೇಟ್ ಡೈರಿಗೆ ಯಾವುದೇ ಮುನ್ನುಡಿಯ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದೆನಷ್ಟೇ. ಅತ್ಯಂತ ಕುತೂಹಲ ಭರಿತವಾದ ಕೇಸುಗಳ ಪ್ರಕರಣಗಳ ಕಥೆಯನ್ನು ನೀವು ಹೇಳಿದ್ದೀರಿ. ಸಾಮಾನ್ಯವಾಗಿ ಕೆಲವರು ಕಾನೂನಿನ ಕೇಸುಗಳ ಬಗ್ಗೆ ಹೇಳುವಾಗ ಅದರ ಭಾವನಾತ್ಮಕ ಮಗ್ಗುಲುಗಳನ್ನು ಹೆಚ್ಚು ವಿವರಿಸಲು ಹೋಗುವುದಿಲ್ಲ. ಕೇವಲ ಕಾನೂನು ಮತ್ತು ಕೇಸು ಹೇಗೆ ನಡೆಯಿತು ಎಂಬುದರ ಘಟನೆಯ ವಿವರಗಳು ಅಥವಾ ಆ ಜಗಳದ ವಿವರಗಳು ಮಾತ್ರ ಅಲ್ಲಿರುತ್ತವೆ. ಆದರೆ ನೀವು ಅದನ್ನು ಹೇಳುತ್ತಾ ವಿಭಿನ್ನವಾದ ಜಗತ್ತನ್ನೇ ತೆರೆದಿಟ್ಟಿದ್ದೀರಿ. ಆ ಜಗತ್ತು ಅತ್ಯಂತ ಕುತೂಹಲ ಹುಟ್ಟಿಸುವ ಜಗತ್ತು ಎಂದು ನನಗನ್ನಿಸುತ್ತದೆ.
ಮೊಟ್ಟ ಮೊದಲು ನನ್ನ ಮನಸ್ಸನ್ನು ತುಂಬಾ ಸಂಕಟಕ್ಕೆ ಅಥವಾ ಒಂದು ರೀತಿಯ ಗಾಢ ವಿಷಾಧದ ಅನುಭವಕ್ಕೆ ದೂಡಿದ್ದು ನೀವು ದಾಖಲಿಸಿರುವ ನಿಮ್ಮ ಮೊದಲನೆಯ ಪ್ರಕರಣ. ನಿಮ್ಮ ಮೊದಲನೆಯ ಪ್ರಕರಣ ಹಿಂದೆ ನೋಡದೆ ನಡೆದೇ ಬಿಟ್ಟಳು’ ಎನ್ನುವ ಒಂದು ಪ್ರಸಂಗ. ಈ ಘಟನೆ ಎದೆಯಾಳಕ್ಕೆ ಇಳಿದು ಮನಸ್ಸನ್ನು ಅಲುಗಾಡಿಸುವ ಒಂದು ಮನೋಜ್ಞ ಚಿತ್ರಣ ಅದು. ನನ್ನ ಪಾಲಿಗೆ ಅದು ಒಂದು ನ್ಯಾಯಾಲಯದಲ್ಲಿ ನಡೆಯುವ ಕೇಸು ಎನಿಸುವುದಿಲ್ಲ. ಅದೊಂದು ಬದುಕಿನ ಮತ್ತು ಬದುಕು ಕೊಡುವ ವಿಚಿತ್ರ ನೋವುಗಳನ್ನು ಪ್ರತಿನಿಧಿಸುವ ನ್ಯಾಯಾಲಯದಲ್ಲಿ ನಡೆದ ಪ್ರಕರಣ ಎಂದು ನಾನು ಭಾವಿಸಿದ್ದೇನೆ. ಮನಸ್ಸಿಗೆ ನಾಟುವ ಹಾಗೆ ಅದನ್ನು ನೀವು ಬರೆದಿದ್ದೀರಿ. ಯಾವುದೋ ಮದುವೆಯಾದ ಹೆಣ್ಣು ಮಗಳೊಬ್ಬಳು ಗಂಡ ಮತ್ತು ಮಕ್ಕಳ ಜೊತೆ ಇರುವಾಗ ತನ್ನ ಸ್ನೇಹಿತೆಯೊಬ್ಬಳು ಪುಣೆಗೆ ಮದುವೆಗೆ ಕರೆದಳೆಂದು ಹೋಗಿ ಎಷ್ಟು ದಿನವಾದರು ಹಿಂದಿರುಗದೆ ಪಾಪ ಕೂಪದಲ್ಲಿ ಬಿದ್ದು ಮತ್ತೆ ನೀವು ಆಕೆಯನ್ನು ಬಲವಂತವಾಗಿ ಕಾನೂನಿನ ಮೂಲಕ ಕೋರ್ಟಿಗೆ ಹಾಜರಾಗುವಂತೆ ಮಾಡಿದಾಗ ಆಕೆ ಬಂದು ತಾನು ಯಾವುದೇ ರೀತಿಯಲ್ಲೂ ಎಂದೆಂದಿಗೂ ಗಂಡ, ಮಕ್ಕಳ ಜೊತೆ ಬದುಕುವುದಿಲ್ಲವೆಂದು ನಿಷ್ಟುರವಾಗಿ, ಕ್ರೌರ್ಯದಿಂದ ಹೇಳಿ ಮಕ್ಕಳು ಅವಳನ್ನು ಯಾಚಿಸುವ ಅಳುಮುಖದಿಂದ ತಾಯಿಯನ್ನು ನೋಡುತ್ತಿದ್ದರೂ ಕೂಡ ಮಾತಾಡದೇ ಬೆನ್ನು ತಿರುಗಿಸಿ ಹೊರಟು ಹೋಗುತ್ತಾಳೆ. ಒಬ್ಬ ತಾಯಿಯೊಬ್ಬಳು ಈ ರೀತಿ ವರ್ತಿಸಿದ್ದನ್ನು ನಾನು ಕಂಡೇ ಇರಲಿಲ್ಲ. ಒಂದು ದೀರ್ಘವಾದ ನಿಟ್ಟುಸಿರು ನನ್ನೊಳಗೆ ಬಂತು ಅದನ್ನು ಓದಿದಾಗ. ಅನೇಕ ದಿನಗಳಾದ ಮೇಲೆ ಇಂದಿಗೂ ಆ ಚಿತ್ರ ನನ್ನನ್ನು ಕಾಡುತ್ತಿದೆ. ತಾಯಿಯೊಬ್ಬಳು ಆಧುನಿಕ ಆಕರ್ಷಣೆಗೆ ಮತ್ತು ಹಣದ ಆಸೆಗೆ ಬಿದ್ದು ಗಂಡನನ್ನು, ಮಕ್ಕಳನ್ನು ಬಿಟ್ಟು ಹೋಗುವ ಈ ಪ್ರಕರಣವನ್ನು ಓದಿದಾಗ ನನ್ನ ಮನಸ್ಸು ವಿಭಿನ್ನ ರೀತಿಯಲ್ಲಿ ವಿಷಾಧದ, ಗಾಢವಾದ ಅನುಭವಕ್ಕೆ ತೆರೆದುಕೊಂಡಿತು. ಈ ಪ್ರಕರಣದಿಂದ ಅನೇಕ ಪ್ರಕರಣಗಳು ನನ್ನ ಮನಸ್ಸನ್ನು ತಟ್ಟಿದವು.
ಈ ಪುಸ್ತಕದಲ್ಲಿ ನೀವು ಬರಿಯ ಕಥೆ ಹೇಳುವ ವಕೀಲನಾಗಿ ಉಳಿದಿಲ್ಲ. ಇವತ್ತಿನ ಸಮಾಜದ ಸ್ಥಿತಿಯಲ್ಲಿ ಆಧುನಿಕ ಕಾನೂನು ಯಾವ ಯಾವ ರೂಪ ಪಡೆದು ಸಮಾಜವನ್ನು ಮುಟ್ಟುತ್ತಿದೆ ಎಂಬುದನ್ನು ವಿವರವಾಗಿ ಹೇಳಿದ್ದೀರಿ. ಕಾನೂನಿನ ಅನೇಕ ಮುಖಗಳನ್ನು, ವಿವರಗಳನ್ನು ಇಲ್ಲಿನ ಪ್ರಕರಣದ ಮೂಲಕ ಹೇಳುತ್ತಾ ಹೋಗುತ್ತೀರಿ. ಸ್ತ್ರಿಧನದ ಬಗ್ಗೆ ಇರಬಹುದು, ಮದುವೆಯಾಚೆಗಿನ ಸಂಬಂಧದಲ್ಲಿ ಹುಟ್ಟಿದ ಮಕ್ಕಳ ಆಸ್ತಿಯ ಹಕ್ಕಿನ ಬಗ್ಗೆ ಇರಬಹುದು ಅಥವಾ ಡಿಎನ್‌ಎ ಪಿತೃತ್ವದ ಪರೀಕ್ಷೆಯ ಬಗ್ಗೆ ಇರಬಹುದು, ಡಾರ್ವಿನ್ನನ ಸಿದ್ಧಾಂತವನ್ನು ಅಳವಡಿಸಿದ ರೀತಿ ಇರಬಹುದು, ಮೃತ್ಯು ಪತ್ರದ ನಖಲಿ ಅಥವಾ ಅಸಲಿ ಪ್ರಶ್ನೆ ಇರಬಹುದು ಇಂತಹ ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ನಡೆದಿರುವ ಬಗ್ಗೆಯೂ ಬಹಳ ಚೆನ್ನಾಗಿ ಬರೆದಿದ್ದೀರಿ. ಮತ್ತು ಕಾನೂನಿನ ಮನುಷ್ಯತ್ವದ ಅರಿವು ಉಂಟಾಗುವಂತೆ ಮಾಡಿದ್ದೀರಿ.
ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದ ಮತ್ತೊಂದು ಪ್ರಸಂಗ ಎಂದರೆ ಒಬ್ಬ ವೃದ್ಧ ಅಸಹಾಯಕ ಆಸ್ತಿವಂತ ತಂದೆ ಆತನಿಗಿರುವ ಎಲ್ಲಾ ಹೆಣ್ಣು ಮಕ್ಕಳು ಆತನ ವಿರುದ್ಧ ದಾವೆ ಹಾಕಿ ಆಸ್ತಿಯನ್ನು ಕಿತ್ತುಕೊಳ್ಳುವಂತಹ ಪ್ರಸಂಗ. ಏಳೆಂಟು ಹೆಣ್ಣು ಮಕ್ಕಳು ಹಾಗೆ ಮಾಡುತ್ತಾರೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಂದೆಯನ್ನು ಹೆಚ್ಚು ಪ್ರೀತಿ ಮತ್ತು ವಿಶ್ವಾಸದಿಂದ ಕಾಣುತ್ತಾರೆ. ಆದರೆ ಈ ಪ್ರಕರಣದಲ್ಲಿ ಒಂದು ರೀತಿಯಲ್ಲಿ ಹೆಣ್ಣು ಮಕ್ಕಳು ನಿರ್ಲಿಪ್ತವಾಗಿ ಪ್ರೀತಿಯನ್ನು ಪಕ್ಕಕ್ಕಿಟ್ಟು ಕ್ರೌರ್ಯದಿಂದ ಆಸ್ತಿಗಾಗಿ, ಹಣಕ್ಕಾಗಿ ತಂದೆಯ ವಿರುದ್ಧ ದಾವೇ ಹೂಡುವುದು, ದಾವೆ ಹೂಡಿ ತಂದೆ-ತಾಯಿಯನ್ನ ನೋವಿನ ಕೂಪದಲ್ಲಿ ಹಾಕುವುದು ಈ ಪ್ರಕರಣದ ತಿರುಳು. ಇದನ್ನು ಓದಿ ನನ್ನ ಮನಸ್ಸು ಅಲ್ಲಾಡಿ ಹೋಯಿತು.
ನೀವು ಬರಿಯ ಕೇಸಿನ ಬಗ್ಗೆ ಹೇಳುವುದಿಲ್ಲ. ನೀವು ಅದನ್ನು ಹೇಳುತ್ತಾ ಹೇಳುತ್ತಾ ತತ್ವಜ್ಞಾನಿಯಾಗುತ್ತೀರಿ. ಮದುವೆ ಎನ್ನುವುದು ಹೆಣ್ಣು-ಗಂಡಿನ ಕೇವಲ ಸಂಬಂಧ ಮಾತ್ರವಲ್ಲ. ಅದರ ಆಚೆಗೆ ನೋವು ಕೊಡುವ ಸಂಬಂಧ ಅನೇಕ ಬಾರಿ ಆಗಬಹುದು. ಮದುವೆ ಎಂದರೆ ಇಷ್ಟೇನಾ, ದಾಂಪತ್ಯವೆಂದರೆ ಇಷ್ಟೇನಾ, ತಂದೆ-ಮಗಳ ಸಂಬಂಧ ಇಷ್ಟೇನಾ, ತಾಯಿ-ಮಕ್ಕಳ ಸಂಬಂಧ ಇಷ್ಟೇನಾ, ಒಂದು ಆಸ್ತಿಗಾಗಿ, ಹಣಕ್ಕಾಗಿ ಎಲ್ಲ ಪ್ರೀತಿಗಳನ್ನು ಸಂಬಂಧಗಳನ್ನು ಹೇಗೆ ಬಲಿ ಕೊಡುತ್ತಾ ಹೋಗುತ್ತಾರೆ ಮತ್ತು ಒಂದು ಆಸ್ತಿಗಾಗಿ, ಹಣಕ್ಕಾಗಿ ಎಲ್ಲ ಮೋಸಕ್ಕೂ ಹೇಗೆ ತಯಾರಾಗುತ್ತಾರೆ ಹತ್ತಿರದವರು ಎಂಬುದರ ಬಗ್ಗೆ ಬರೆಯುತ್ತೀರಿ. ಆ ನೋವು ಮಾತ್ರವಲ್ಲ ಆಸ್ತಿಯನ್ನು ತನ್ನವರಿಗಾಗಿ, ತನ್ನವರು ಸಂತೋಷವಾಗಿರಲು ಬಿಟ್ಟು ತ್ಯಾಗ ಮಾಡಿ ಮನಸ್ಸನ್ನು ಮುಟ್ಟುವಂತಹ ಚಿತ್ರಣವನ್ನು ಕೂಡ ಕೊಡುತ್ತೀರಿ.
ನಾನು ಇಂಗ್ಲಿಷಿನಲ್ಲಿ ಅನೇಕ ಲಾಯರುಗಳು ಬರೆದಿರುವ ಈ ಬಗೆಯ ಪುಸ್ತಕಗಳನ್ನು ಓದಿದ್ದೇನೆ. ಸಾಮಾನ್ಯವಾಗಿ ಅವರು ಹೇಗೆ ಗೆಲ್ಲುತ್ತಾರೆ ಎಂಬುದರ ಬಗ್ಗೆ ಮಾತ್ರ ಆ ಪುಸ್ತಕ ಇರುತ್ತದೆ. ನೀವು ಇದರಲ್ಲಿ ಆ ಕೇಸಿಗೆ ಸಂಬಂಧಪಟ್ಟ ವ್ಯಕ್ತಿಗಳ ಸಂಬಂಧದ ಎಲ್ಲ ಮುಖಗಳನ್ನು ವಿವರಿಸುತ್ತೀರಿ. ಇಂದಿನ ಸಮಾಜದಲ್ಲಿ ಬಗೆಬಗೆಯಲ್ಲಿ ಬರುತ್ತಿರುವ ಆಧುನಿಕ ಕಾನೂನುಗಳನ್ನು ಸಂಸಾರಗಳು ಹೇಗೆ ಎದುರಿಸುತ್ತವೆ ಅದರಿಂದ ನೋವು ಮತ್ತು ನಲಿವುಗಳು ಎರಡನ್ನೂ ಹೇಗೆ ಪಡೆಯಬಲ್ಲರು ಎಂಬ ಸಂಕೀರ್ಣ ಸಮಸ್ಯೆಗಳನ್ನೂ ಮುಂದಿಡುತ್ತೀರಿ. ಆದರೆ ಹೆಚ್ಚಿನ ದಾವೆಗಳು ಕುಟುಂಬಗಳು ಛಿದ್ರವಾಗುವುದನ್ನು ಹೇಳುತ್ತಾ ಹೋಗುತ್ತವೆ. ಅದನ್ನು ಕಂಡು ನೋವಾಗುತ್ತದೆ. ಆಸ್ತಿ ಮತ್ತು ಹಣ ಸಂಬಂಧಗಳನ್ನು ಬೇರ್ಪಡಿಸುವುದರಲ್ಲಿ ಬಹಳ ದೊಡ್ಡ ಪಾತ್ರವನ್ನು ವಹಿಸುತ್ತಿದೆ ಅಲ್ಲವೇ.
ಎಲ್ಲವೂ ನೋವೆ ಆಗಬೇಕೆಂದಿಲ್ಲ. ನೋವು ತರುವ ಪ್ರಕರಣಗಳಷ್ಟೇ ನಲಿವು ತರುವ ಪ್ರಕರಣಗಳು ಕೂಡ ನಿಮ್ಮ ಪುಸ್ತಕದಲ್ಲಿವೆ. ಒಂದು ವಿಚ್ಛೇದನದ ಕತೆಯನ್ನು ಹೇಳುತ್ತೀರಿ. ಅದರಲ್ಲಿ ಗಂಡ-ಹೆಂಡತಿ ವಿಚ್ಛೇದನಕ್ಕಾಗಿ ಅವರವರ ತಂದೆ-ತಾಯಿಯ ಒತ್ತಾಯದಿಂದ ಅರ್ಜಿ ಹಾಕಿರುತ್ತಾರೆ. ಅವರು ವಿಚ್ಛೇದನ ಪಡೆಯಲು ಕೋರ್ಟಿಗೆ ಅಲೆಯುವಂತೆ ಅವರ ತಂದೆ-ತಾಯಿಗಳು ಮಾಡುತ್ತಾರೆ. ಒಂದು ದಿನ ಆ ಗಂಡ-ಹೆಂಡತಿ ಕೋರ್ಟಿನ ದಾವೆಯ ದಿನಾಂಕದಂದು ಕೋರ್ಟಿನಲ್ಲಿ ಕೇಸ್ ಕೂಗಿಸಿದಾಗ ಅಲ್ಲಿಂದ ನಾಪತ್ತೆಯಾಗಿ ಕೋರ್ಟಿಗೆ ಹಾಜರಾಗುವುದಿಲ್ಲ. ಮತ್ತೆ ಎಷ್ಟೋ ದಿನಗಳ ನಂತರ ನಿಮಗೆ ಫೋನ್ ಮಾಡುತ್ತಾರೆ. ನಮಗೆ ವಿಚ್ಛೇದನ ಬೇಡ, ತಂದೆ-ತಾಯಿ ವಿಚ್ಛೇದನಕ್ಕೆ ಬಲವಂತಪಡಿಸಿದ್ದಾರೆ. ಹಾಗಾಗಿ ನಾವು ಅರ್ಜಿ ಹಾಕಿದೆವು. ಅವರು ನಮ್ಮ ಸಂಸಾರದಲ್ಲಿ ತಲೆ ಹಾಕುವುದು ನಮಗೆ ಇಷ್ಟವಿಲ್ಲ. ನಮಗೆ ಒಟ್ಟಿಗೆ ಬದುಕಲು ಇಷ್ಟ. ನಮಗೆ ವಿಚ್ಛೇದನ ಬೇಡ. ಆದ್ದರಿಂದ ದೂರ ಹೊರಟು ಹೋಗುತ್ತಿದ್ದೇವೆ ಎಂಬಂತಹ ಮನಸ್ಸಿಗೆ ಆಹ್ಲಾದ ತರುವಂತಹ, ಉಲ್ಲಾಸ ತರುವಂತಹ ಚಿತ್ರಣವನ್ನು ಕೊಡುತ್ತೀರಿ. ಅದನ್ನು ಓದಿ ತುಂಬಾ ಸಂತೋಷವಾಯಿತು ನನಗೆ. ಯಾವುದು ನ್ಯಾಯವೋ ಆ ಕಡೆ ನಿಮ್ಮ ಮನಸ್ಸು ಹಾತೊರೆಯುತ್ತಿರುತ್ತದೆ. ಕಾನೂನಿನ ಮೂಲಕ ಅಸಹಾಯಕರಿಗೆ ಹೇಗೆ ಪರಿಹಾರ ಕೊಡಿಸಬೇಕು ಎಂಬುದನ್ನು ನಿಮ್ಮ ಅನೇಕ ಪ್ರಕರಣಗಳಲ್ಲಿ ತೋರಿಸಿದ್ದೀರಿ. ಗೆದ್ದ ಪ್ರಕರಣಗಳು ಮಾತ್ರವಲ್ಲ ಸೋತ ಪ್ರಕರಣಗಳನ್ನು ಕೂಡ ಬರೆದಿದ್ದೀರಿ. ಒಬ್ಬ ಬರಹಗಾರನಿಗಿರಬೇಕಾದ ಬದುಕಿನ ನಿಷ್ಟೆ ಅದು.
ಪ್ರಕಾಶ್, ನಿಮ್ಮ ಒಂದೊಂದು ಪ್ರಕರಣವೂ ಕೂಡ ಒಂದೊಂದು ಕಾದಂಬರಿಯಷ್ಟು ಕತೆಗಳನ್ನು ಹೊತ್ತಿದೆ. ನಿಮ್ಮ ಈ ಪುಸ್ತಕವನ್ನು ಓದಿದವರು ಕೂತೂಹಲವನ್ನು ಮಾತ್ರ ತಣಿಸಿಕೊಳ್ಳುವುದಿಲ್ಲ. ಇತ್ತೀಚಿನ ಆಸ್ತಿ ಕಾನೂನಿನ ಬಹುತೇಕ ಅಂಶಗಳ ಬಗ್ಗೆ ಅರಿವು ಪಡೆಯುತ್ತಾರೆ. ಹಾಗಾಗಿ ಸಾಮಾನ್ಯ ಓದುಗನಿಗೂ ಈ ಕೃತಿ ಪ್ರಿಯವಾಗುತ್ತದೆ.
ಈ ಪುಸ್ತಕದಲ್ಲಿ ತಪ್ಪುಗಳೇ ಇಲ್ಲವೆಂದು ನಾನು ಹೇಳುವುದಿಲ್ಲ. ಅನೇಕ ರೀತಿಯಲ್ಲಿ ನೀವು ಪಾಟಿ ಸವಾಲಿನ ವಿವರಗಳನ್ನು ಪೂರ್ತಿ ಹೇಳುವುದಿಲ್ಲ. ಮತ್ತು ಒಳ್ಳೆಯ ಪ್ರಕರಣಗಳನ್ನು ಮಾತ್ರ ಚೆನ್ನಾಗಿ ಬರೆದಿರುವಿರಿ ಎಂದು ಹೇಳಲಾರೆ. ಅನೇಕ ಸಾಮಾನ್ಯ ಪ್ರಕರಣಗಳನ್ನು ಕೂಡ ನೀವು ಬರೆದಿದ್ದೀರಿ. ಒಬ್ಬ ಬರಹಗಾರನಿಗಿರಬೇಕಾದ ಮಿತಿ ಅದು. ಮುನ್ನುಡಿ ಬರೆಯುತ್ತಾ ಹೋದರೆ ನಾನು ನೂರು ಪೇಜುಗಳ ಮುನ್ನುಡಿ ಬರೆಯಬಲ್ಲೆ. ಆದರೆ ಅದು ಸಾಧ್ಯವಿಲ್ಲ. ನಿಮಗೆ ಅಭಿನಂದನೆಗಳು. ಅಡ್ವೊಕೇಟ್ ಡೈರಿ ಎನ್ನುವ ಬಹಳ ಒಳ್ಳೆಯ ಪುಸ್ತಕವನ್ನು ಬರೆದಿದ್ದೀರಿ. ಇಂತಹ ಪುಸ್ತಕಗಳನ್ನು ಮತ್ತೆ ಮತ್ತೆ ಬರೆಯುತ್ತಿರಿ.
ನಮಸ್ಕಾರ.
ಟಿ.ಎನ್.ಸೀತಾರಾಮ್, ಬೆಂಗಳೂರು
ಚಲನಚಿತ್ರ-ಧಾರಾವಾಹಿ, ನಟ-ನಿರ್ದೇಶಕರು
ಶುಭನುಡಿ
ಸಮಾಜಮುಖಿ ನ್ಯಾಯವಾದಿಯೊಬ್ಬ ತನ್ನ ವೃತ್ತಿ ಬದುಕಿನಲ್ಲಿ ಕಂಡ ಅನೇಕ ಘಟನೆಗಳನ್ನು, ಸಂದರ್ಭಗಳನ್ನು, ಅನುಭವಗಳನ್ನು ರಸವತ್ತಾಗಿ ವಿವರಿಸುತ್ತ ಜನಸಾಮಾನ್ಯರಿಗೆ ಕಾನೂನಿನ ತಿಳುವಳಿಕೆ ನೀಡತೊಡಗಿದಾಗ ಇಂಥ ಅನನ್ಯ ಕೃತಿಗಳ ರಚನೆಯಾಗುತ್ತದೆ.
ನನ್ನ ಆತ್ಮೀಯರೂ, ಸ್ನೇಹಿತರೂ ಆದ ಶ್ರೀ ಪ್ರಕಾಶ ವಸ್ತ್ರದರವರು ಈ ಅಂಕಣ ಬರೆಹಗಳ ಮೂಲಕ ಅದಾಗಲೇ ಲಕ್ಷಗಟ್ಟಲೇ ಜನರ ಮನಸ್ಸು ತಟ್ಟಿದವರು. ಅವರ ಅನೇಕ ಅಂಕಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್’ ಆದದ್ದು ಅದಕ್ಕೊಂದು ನಿದರ್ಶನ. ಈಗ ಆ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ದಾಖಲೀಕರಣಗೊಳಿಸಿದ್ದು ಅಭಿನಂದನೀಯ ಕಾರ್ಯ.
ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯಲ್ಲಿ ೧೯೨೩ರ ಸಪ್ಟೆಂಬರ್ ೨೨ರಂದು ಅಡ್ವೊಕೇಟ್ ಡೈರಿ’ಯ ಮೊದಲ ಕಂತು ಪ್ರಕಟಗೊಂಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತ ಅವರು ಅಡ್ವೊಕೇಟ್ ಡೈರಿ ಅನ್ನುವ ನನ್ನ ಅಂಕಣದಲ್ಲಿ ಮೊದಲ ಬರೆಹ ಸುಮ್ಮನೆ ಹೋಗಿಬಿಟ್ಟ. ನನ್ನ ವಕೀಲಿ ವೃತ್ತಿ ಜೀವನದಲ್ಲಿ ಹಲವಾರು ಜನರ ಆನಂದ, ಸಂತೋಷ, ದುಃಖ-ದುಮ್ಮಾನ ಕಂಡಿದ್ದೇನೆ. ಮಾನವೀಯತೆ ಹೃದಯದ, ವಿಚಿತ್ರ ವರ್ತನೆಯ, ಬಗೆ ಬಗೆಯ ಕಕ್ಷಿದಾರರನ್ನು, ಸಹೋದ್ಯೋಗಿಗಳನ್ನು ಕಂಡಿದ್ದೇನೆ. ಇಷ್ಟು ವರ್ಷದ ಅನುಭವದ ತಲ್ಲಣಗಳನ್ನು ಈ ಅಂಕಣದಲ್ಲಿ ಕಥೆಯಾಗಿ ದಾಖಲಿಸುತ್ತ ಹೋಗುತ್ತೇನೆ” ಎಂಬ ಮಾತುಗಳನ್ನು ಹೇಳಿದ್ದರು. ಅದಕ್ಕೆ ತಕ್ಕುದಾಗಿಯೇ ಸುಮ್ಮನೇ ಹೋಗಿಬಿಟ್ಟ’ ಪ್ರಕಟಗೊಂಡಾಗಲೇ ಮೊದಲ ಬಾಲ್‌ಗೇನೇ ಸಿಕ್ಸರ್ ಬಾರಿಸಿಬಿಟ್ಟಿದ್ದರು. ಅತ್ಯಂತ ಮನಮುಟ್ಟುವ ಬರೆಹದಿಂದಾಗಿ ಸಾವಿರಾರು ಅಭಿಮಾನಿಗಳನ್ನು ಗಳಿಸಿಕೊಂಡುಬಿಟ್ಟರು. ಇಡೀ ಲೇಖನದಲ್ಲಿ ವಕೀಲ-ಕಕ್ಷಿದಾರ ಸಂಬಂಧ ದಿಂದಾಚೆಗಿನ ಮಾನವ ಸಂಬಂಧದ ಮಿಡಿತ ಎದ್ದು ತೋರಿತ್ತು. ವೃತ್ತಿಯಿಂದಾಚೆಗಿನ ಈ ಬದ್ಧತೆಯಿಂದಾಗಿಯೇ ಪ್ರಕಾಶರವರ ಲೇಖನಗಳು ಮನಮುಟ್ಟುತ್ತವೆ.
ಅದಾದ ನಂತರ ನಿರಂತರವಾಗಿ ಪ್ರತಿ ಶನಿವಾರ ಅವರ ಅಂಕಣ ಬರೆಹಗಳನ್ನು ಎದುರು ನೋಡುವ ಅಭಿಮಾನಿ ಬಳಗವೇ ಸಿದ್ಧವಾಯಿತು. ಅಭಿಮಾನಿಗಳನ್ನು ನಿರಾಸೆಗೊಳಿಸದೇ ಕಾನೂನನ್ನು ಜನಸಾಮಾನ್ಯರಿಗೆ ತಿಳಿಹೇಳುವ ಕೈಂಕರ್ಯದಲ್ಲಿ ತೊಡಗಿಕೊಂಡಂತೆ ಅನೇಕ ವಿಧದ ಘಟನೆಗಳನ್ನು ಸೋದಾಹರಣವಾಗಿ ದಾಖಲೀಕರಿಸಿದರು. ಡಿ.ಎನ್.ಎ. ಟೆಸ್ಟ್- ಪಿತೃತ್ವ ಪರೀಕ್ಷೆ; ಕಾನೂನು ಸಾಕ್ಷಿಗಿಂತ ಆತ್ಮ ಸಾಕ್ಷಿ ಮಿಗಿಲು; ಕನಸು, ಕಲ್ಪನೆ, ಭಾವನೆ, ಕಳ್ಳತನವಾಗಿದೆ; ಹಿಂದೆ ನೋಡದೇ ನಡೆದೇಬಿಟ್ಟಳು; ಯಾಕಪ್ಪ ಇದೆಲ್ಲ ನಿನಗೆ ಬೇಕಿತ್ತಾ; ಸುಳ್ಳು ಸಾಕ್ಷಿದಾರ, ಚೌಕ್ ಹನಮಂತ ಮುಂತಾದವು ಅತ್ಯಂತ ಆಕರ್ಷಕ, ಅರ್ಥಪೂರ್ಣ ಶೀರ್ಷಿಕೆ ಹೊಂದಿದ ಅವರ ಲೇಖನಗಳು. ಪ್ರತಿಯೊಂದು ಲೇಖನದಲ್ಲೂ ಕಾನೂನಿನ ಸೂಕ್ಷ್ಮ ಅಂಶಗಳನ್ನು ಜನರಿಗೆ ತಿಳಿಯುವ ಹಾಗೆ ಹೇಳಿದ್ದು ಅವರ ಪ್ರತಿಭೆಗೆ ಸಾಕ್ಷಿ ಒದಗಿಸುತ್ತವೆ.
ಪ್ರಕಾಶರವರ ಬರವಣಿಗೆಯ ಶೈಲಿ ಮನಕ್ಕೆ ಮುದ ನೀಡುವಂಥದ್ದು. ಸಾಮಾನ್ಯರಿಗೆ ಕಠಿಣವಾಗಬಹುದಾದ ಹಲವು ಕಾನೂನಿನ ನಿಯಮಗಳನ್ನು ಸರಳೀಕರಿಸಿ ಬರೆಯುವಲ್ಲಿ ಅವರ ಪ್ರತಿಭೆ, ಶ್ರಮ, ಬದ್ಧತೆ ಎದ್ದು ಕಾಣುತ್ತದೆ. ಅವರ ವಕೀಲಿ ವೃತ್ತಿಯಲ್ಲಿ ನಡೆದ ನೈಜ ಘಟನೆ ಗಳನ್ನು ಕಥಾರೂಪದಲ್ಲಿ ನಿರೂಪಿಸುವಲ್ಲಿ ಅವರ ಸಾಹಿತ್ಯಕ ಪ್ರತಿಭೆ ಎದ್ದು ಕಾಣುತ್ತದೆ. ಆಕರ್ಷಕ ಮತ್ತು ಅರ್ಥಪೂರ್ಣ ತಲೆಬರಹಗಳು ಕೂಡ ಅವರ ಭಾಷಾನೈಪುಣ್ಯಕ್ಕೆ ಸಾಕ್ಷಿಯಾಗಿವೆ.
ಇಂಥ ಅನನ್ಯ ಕೃತಿಯನ್ನು ಕನ್ನಡಕ್ಕೆ ನೀಡಿದ ಪ್ರಕಾಶ ವಸ್ತ್ರದರವರನ್ನು ಅಭಿನಂದಿಸುತ್ತ ಅವರಿಂದ ಇನ್ನೂ ಹಲವು ಕೃತಿಗಳನ್ನು ನಿರೀಕ್ಷಿಸೋಣ.
ಡಾ|| ಶಿವಾನಂದ ಕುಬಸದ
ಶಸ್ತ್ರಚಿಕಿತ್ಸಕರು, ಕುಬಸದ ಆಸ್ಪತ್ರೆ, ಮುಧೋಳ
ಆಶಯ ನುಡಿ
ನಮ್ಮ ಸಮಾಜ ಕಾನೂನು ಸಾಕ್ಷರವಾಗಬೇಕು, ತನ್ಮೂಲಕ ನಮ್ಮನ್ನು ಕಾನೂನು ಪ್ರಜ್ಞೆಯ ಶಿಸ್ತಿನ ಸಮುದಾಯವಾಗಿಸಲು ಏನೆಲ್ಲ ಪ್ರಯತ್ನಗಳು ಎಲ್ಲೆಡೆ ಸಾಗಿವೆ. ವಿಪರ್ಯಾಸವೆಂದರೆ ಆ ಬಹುತೇಕ ಪ್ರಯತ್ನಗಳು ಜನರ ಭಾಷೆಯಲ್ಲಿ ನಡೆಯುತ್ತಿಲ್ಲ, ಜನರ ಮಧ್ಯೆ ನಡೆಯುತ್ತಿಲ್ಲ. ನಮ್ಮ ಒಣ ವಿದ್ವತ್ತಿನ ಕಾನೂನು ಸಂಬಂಧೀ ಭಾಷಣ, ಕಾರ್ಯಾಗಾರಗಳಿಂದ ಜನ ಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ.
ಸರಳವಾಗಿ ತಿಳಿಸಿ ಹೇಳಬಹುದಾದ್ದನ್ನು ತಿಳಿಯಲಾರದಂತೆ ಹೇಳುವುದೇ ಕಾನೂನು ಎಂತಲೋ ಕಾನೂನು ಕಬ್ಬಿಣದ ಕಡಲೆ ಎಂತಲೋ ವ್ಯಾಖ್ಯಾನಗಳು ಕಾನೂನು ಅರಿವಿನ ಕುರಿತು ಹುಟ್ಟ ಲಾರಂಭಿಸಿವೆ. ಇಂಥ ಸನ್ನಿವೇಶದಲ್ಲಿ ಸನ್ಮಿತ್ರ ಪ್ರಕಾಶ್‌ರಂತಹ ತೀರ ಕೆಲವರು ನಮ್ಮ ಸಾಂಪ್ರದಾಯಿಕ ಮಾಧ್ಯಮ ಬಳಸಿ ವಿಭಿನ್ನ ನೆಲೆಯಲ್ಲಿ ತಮ್ಮ ವೃತ್ತಿಯಲ್ಲಿ ನಿರ್ವಹಿಸಿದ ಪ್ರಕರಣಗಳನ್ನು ಕಕ್ಷಿದಾರರ ಹಿತಾಸಕ್ತಿಗೆ ಚ್ಯುತಿಯಾಗದಂತೆ ಲೇಖನಗಳನ್ನಾಗಿಸಿದ್ದು ಶ್ಲಾಘನೀಯ. ಕಾನೂನು ಓದು ತೀರ ನೀರಸವೆಂಬ ಅಭಿಪ್ರಾಯವನ್ನು ಅಡ್ವೊಕೇಟ್ ಡೈರಿ” ಸುಳ್ಳಾಗಿಸಿದೆ. ಪ್ರತೀ ಲೇಖನವು ಶಿರೋನಾಮೆಯಿಂದ ಅಂತ್ಯದವರೆಗೂ ಓದುಗನನ್ನು ಹಿಡಿದಿಟ್ಟುಕೊಳ್ಳು ವಂತಿರುವುದು ವಿಶೇಷತೆ. ಕಾನೂನು ಅಜ್ಞಾನ, ಅಕ್ಷಮ್ಯ ಎಂಬ ಸಿದ್ಧಾಂತವೇನೋ ಸರಿ. ಆದರೆ ಅದರ ಅಳವಡಿಕೆ ಅರ್ಥಪೂರ್ಣವಾಗಬೇಕಾದರೆ ಕಾನೂನು ಅರಿವು ಸಾರ್ವತ್ರಿಕವಾಗಬೇಕು.
ಈ ನಿಟ್ಟಿನಲ್ಲಿ ನಾಡಿನ ಜನಪ್ರಿಯ ದೈನಿಕ ಸಂಯುಕ್ತ ಕರ್ನಾಟಕದಲ್ಲಿ ೪೦ ಕಂತುಗಳಲ್ಲಿ ಮೂಡಿಬಂದ ಈ ಲೇಖನಗಳು ಸಾಕಷ್ಟು ಜನರ ತಿಳುವಳಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಿದ್ದು ಇದೀಗ ಸಂಕಲನ ರೂಪದೊಂದಿಗೆ ಲಭ್ಯವಾಗುತ್ತಿರುವುದು ಇನ್ನಷ್ಟು ಪ್ರಯೋಜನಕಾರಿ. ಈ ಲೇಖನಗಳು ಜನ ಸಾಮಾನ್ಯರನ್ನು ಉದ್ದೇಶಿಸಿ ಬರೆಯಲಾಗಿದ್ದರೂ ಕಾನೂನು ವಿದ್ಯಾರ್ಥಿಗಳು, ವಕೀಲರು ಸಹ ಇವುಗಳನ್ನು ತಮ್ಮ ಅಧ್ಯಯನಕ್ಕೆ ಬಳಸಿಕೊಳ್ಳುವಷ್ಟು ವಿವರಣೆಗಳಿರುವುದು ಮತ್ತೊಂದು ವೈಶಿಷ್ಟ್ಯ.
ಪ್ರಕಾಶ್ ಈ ಲೇಖನಗಳ ರಚನೆ ಮೂಲಕ ನಾಡಿನ ಕಾನೂನು ಲೇಖಕರ ಬಳಗಕ್ಕೆ ಸೇರುತ್ತಿರುವುದು ಹೆಮ್ಮೆಯ ಸಂಗತಿ. ಭವಿಷ್ಯದಲ್ಲಿ ಇನ್ನಷ್ಟು, ಮತ್ತಷ್ಟು ಕಾನೂನು ವಿದ್ಯಾಪ್ರಸಾರದ ಮಹಾಯಜ್ಞದಲ್ಲಿ ತಮ್ಮನ್ನು ಲೇಖಕರು ತೊಡಗಿಸಿಕೊಳ್ಳಲಿ ಎಂಬ ಸದಾಶಯದೊಂದಿಗೆ.
ಬಸವಪ್ರಭು ಹೊಸಕೇರಿ
ನ್ಯಾಯವಾದಿ, ಕಾರ್ಯಾಧ್ಯಕ್ಷರು
ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ
ಪುಟ ಸರಿದಂತೆ…
ಸವಿನುಡಿ / ೩
ಮುನ್ನುಡಿ / ೫
ಶುಭನುಡಿ / ೧೦
ಆಶಯ ನುಡಿ / ೧೨
ವೃತ್ತಿ, ಸಾಹಿತ್ಯ, ಬದುಕು, ಬವಣೆ, ಒಂದು ಸುತ್ತು… / ೧೪
೧. ಹಿಂದೆ ನೋಡದೆ ನಡೆದುಬಿಟ್ಟಳು / ೨೭
೨. ಕೂಡಿ ಬಾಳೋಣ / ೩೦
೩. ಸ್ತ್ರೀಧನ ಆಸ್ತಿ: ಉತ್ತರಾಧಿಕಾರಿ ನೀವಲ್ಲಾ… ನೀವಲ್ಲಾ… / ೩೩
೪. ಅನೈತಿಕ ಸಂಬಂಧದ ಮಕ್ಕಳಿಗೂ ಕಾನೂನು ರಕ್ಷಣೆ / ೩೭
೫. ಜಿಜ್ಞಾಸೆ: ಮೃತ ಮಗನ ಸ್ವತ್ತಿನಲ್ಲಿ ತಾಯಿಗೆ ಪಾಲು / ೪೧
೬. ಸುಳ್ಳು ಸಾಕ್ಷಿದಾರ ಚೌಕ್ ಹಣಮಂತ / ೪೫
೭. ವಂಶವೃಕ್ಷ ಸಾಕ್ಷೀಕರಿಸುವ ಹೆಳುವರ ಸಂತತಿ / ೪೯
೮. ಕಾಣೆಯಾಗಿದ್ದಾರೆ: ಎಲ್ಲೇ ಇದ್ದರೂ ಬೇಗನೆ ಬನ್ನಿರಿ / ೫೨
೯. ಸಂಶಯದ ಸುಳಿಯಲ್ಲಿ ಸಿಲುಕಿದ ಮೃತ್ಯುಪತ್ರ / ೫೬
೧೦. ಸುಮ್ಮನೆ ಹೋಗಿಬಿಟ್ಟ / ೬೦
೧೧. ಎಷ್ಟು ಆಸ್ತಿ ಇದ್ದರೆ ಏನೈತಿ, ಸುಖಾನೆ ಇಲ್ಲ / ೬೪
೧೨. ನ್ಯಾಯಾಲಯದ ಮೇಲೆ ಇಟ್ಟ ನಂಬಿಕೆ ಹುಸಿಯಾಗಲಿಲ್ಲ / ೬೮
೧೩. ಡಾರ್ವಿನ್ಸ್ ಸಿದ್ಧಾಂತ, ಮದುವೆ, ಎತ್ತನೆತ್ತ ಸಂಬಂಧ… / ೭೨
೧೪. ಹಾಲುಂಡ ತವರೀಗೆ ಏನೆಂದು ಹರಸಲಿ / ೭೬
೧೫. ಯಾಕಪ್ಪ, ಇದೆಲ್ಲ ನಿನಗೆ ಬೇಕಿತ್ತಾ? / ೮೦
೧೬. ನಾಮ ನಿರ್ದೇಶನ / ೮೪
೧೭. ಕಾನೂನು ಸಾಕ್ಷಿಗಿಂತ, ಆತ್ಮಸಾಕ್ಷಿ ಮಿಗಿಲು / ೮೮
೧೮. ಸತ್ಯ ಪ್ರಮಾಣ ಮಾಡಿ ಸುಳ್ಳು ಹೇಳಿದ ಮ್ಯಾನೇಜರ್ / ೯೧
೧೯. ಮತ್ತೊಮ್ಮೆ ಮದುವೆ… / ೯೪
೨೦. ಡಿ.ಎನ್.ಏ. ಟೆಸ್ಟ್ ಎಂಬ ಪಿತೃತ್ವ ಪರೀಕ್ಷೆ / ೯೮
೨೧. ನಿಮ್ಮ ಮಗನಂತೆ ನೋಡಿಕೊಳ್ಳಿ, ಅಷ್ಟೆ ಸಾಕು! / ೧೦೬
೨೨. ನನ್ನ ಬೆಲೆ ಇಷ್ಟೇನಾ? ಉತ್ತರವಿಲ್ಲದ ಪ್ರಶ್ನೆ / ೧೧೦
೨೩. ಕಾಟೇರ ಸಿನೆಮಾ ಉಳುವವನೆ ಭೂ ಒಡೆಯ / ೧೧೪
೨೪. ಇದೆಂತಹ ತತ್ವಜ್ಞಾನ!! / ೧೧೮
೨೫. ಸತ್ಯ-ಅಸತ್ಯದ ಸಂಘರ್ಷ: ಸತ್ಯಕ್ಕೆ ಜಯ / ೧೨೧
೨೬. ವಿಕೃತ ಮನಸ್ಸಿನ ಕೊನೆಯ ಅಸ್ತ್ರ, ಅವಮಾನ / ೧೨೫
೨೭ ಬಯಲಾಯಿತು ಮೋಸದ ಆಟ! ಉಳಿಯಿತು ಸೂರು / ೧೨೯
೨೮. ನಾ ನಿನ್ನ ಬಿಡಲಾರೆ, ಜೊತೆಗೂ ಬಾಳಲಾರೆ / ೧೩೩
೨೯. ಕನಸು, ಕಲ್ಪನೆ, ಭಾವನೆಗಳು ಕಳುವಾಗಿವೆ / ೧೩೭
೩೦. ಡಿಸೆಂಬರ್ ಮೂರು, ವಕೀಲರ ದಿನಾಚರಣೆ / ೧೪೧
Reviews
There are no reviews yet.