ನೆಲದಿಂದ ಮುಗಿಲಿಗೆ!
ಬನ್ನಿ ಬಾಹ್ಯಾಕಾಶ ಯಾನವನ್ನು ಮಾಡೋಣ. ಇಂದಿಗೆ ೧೩.೫ ಶತಕೋಟಿ(ಬಿಲಿಯನ್) ವರ್ಷಗಳ ಹಿಂದಕ್ಕೆ ಕಾಲ. ಅಲ್ಲಿ ನೋಡಿ. ಸಾಸಿವೆ ಕಾಳಿನ ಗಾತ್ರದ ಬಿಂದು! ಈ ಬಿಂದುವನ್ನು ಭಾರತೀಯ ಗ್ರಂಥಗಳು ಅವ್ಯಕ್ತಮ್, ಹಿರಣ್ಯಗರ್ಭ, ಬ್ರಹ್ಮಾಂಡ ಎಂದು ಕರೆದಿವೆ. ಆಧುನಿಕ ವಿಜ್ಞಾನವು ಈ ಬಿಂದುವಿಗೆ ಏಕತ್ರ(ಸಿಂಗ್ಯುಲಾರಿಟಿ) ಎಂದು ನಾಮಕರಣವನ್ನು ಮಾಡಿದೆ. ಆಧುನಿಕ ವಿಜ್ಞಾನದ ಅನ್ವಯ ಈ ಬಿಂದುವಿನ ಗುಣಲಕ್ಷಣಗಳನ್ನು ಯಾರೂ ತಿಳಿಯಲು ಸಾಧ್ಯವಿಲ್ಲ. ಏಕೆಂದರೆ ಈಗ ಅಸ್ತಿತ್ವದಲ್ಲಿರುವ ಗಣಿತವಿಜ್ಞಾನ ಹಾಗೂ ಭೌತವಿಜ್ಞಾನಗಳು ಇಲ್ಲಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಶೂನ್ಯವಾಗುತ್ತವೆ. ಆದರೂ ಆಧುನಿಕ ವಿಜ್ಞಾನದ ಅಭಿಪ್ರಾಯದಂತೆ ಈ ಬಿಂದುವಿನಲ್ಲಿ ಬ್ರಹ್ಮಾಂಡದ ಸಕಲ ದ್ರವ್ಯ(ಮ್ಯಾಟರ್), ಶಕ್ತಿ(ಎನರ್ಜಿ) ಕಾಲ(ಟೈಮ್) ಮತ್ತು ಆಕಾಶ(ಸ್ಪೇಸ್) ಏಕತ್ರವಾಗಿವೆ. ಋಗ್ವೇದವು(R.V ೧.೧೬೪.೩೯) ಒಂದು ಹೆಜ್ಜೆ ಮುಂದೆ ಹೋಗಿ ಇವುಗಳ ಜೊತೆಯಲ್ಲಿ ಆದಿಪ್ರಜ್ಞೆಯೂ(ಕಾನ್ಷಿಯಸ್ನೆಸ್) ಸಹ ಇರುತ್ತದೆ ಎನ್ನುತ್ತದೆ.
ಒಂದು ನಿಗದಿತ ಕಾಲಘಟ್ಟದಲ್ಲಿ ಆ ಬಿಂದುವು ಸ್ಫೋಟಿಸಿತು! ದಶದಿಕ್ಕುಗಳಲ್ಲಿ ವ್ಯಾಪಿಸಿತು. ಈ ಮಹಾಸ್ಫೋಟವು ಯಾಕೆ ಆಯಿತು ಎನ್ನುವುದಕ್ಕೆ ವಿಜ್ಞಾನದ ಬಳಿ ಯಾವುದೇ ಒಂದು ವಿವರಣೆಯಿಲ್ಲ. ಆದರೆ ಋಗ್ವೇದವು(R.V೧೦.೧೨೯.೪) ಈ ಸ್ಫೋಟಕ್ಕೆ ಕಾಮ-ಇಚ್ಛೆ-ಡಿಸೈರ್ ಕಾರಣವೆಂದು ಹೇಳುತ್ತದೆ. ಬ್ರಿಟಿಷ್ ಖಗೋಳವಿಜ್ಞಾನಿ ಫ್ರೆಡ್ ಹೋಯಲ್(೧೯೧೫-೨೦೦೧) ಈ ಮಹಾ ಸ್ಫೋಟಕ್ಕೆ ಬಿಗ್ ಬ್ಯಾಂಗ್ ಎಂದು ನಾಮಕರಣವನ್ನು ಮಾಡಿದ. ಸನಾತನ ಭಾರತೀಯರ ಪರಿಕಲ್ಪನೆಯಲ್ಲಿ ಸೃಷ್ಟಿ-ಸ್ಥಿತಿ-ಲಯಗಳು ಸರಪಳಿಯ ರೂಪದಲ್ಲಿ ಘಟಿಸುತ್ತವೆ. ಹಾಗೆಯೇ ಆಧುನಿಕ ವಿಜ್ಞಾನವು ಸಹ ಬ್ರಹ್ಮಾಂಡಕ್ಕೆ ಒಂದು ನಿಖರವಾದ ಕ್ರಿಯೇಶನ್, ಎಕ್ಸ್‌ಪ್ಯಾನ್ಷನ್ ಹಾಗೂ ಡಿಸ್ಟ್ರಕ್ಷನ್ ಇರುತ್ತದೆ ಎನ್ನುತ್ತದೆ. ಈ ಡಿಸ್ಟ್ರಕ್ಷನ್ ಅಥವ ಲಯವನ್ನು ಮಹಾಪ್ರಳಯ ಅಥವ ಬಿಗ್ ಕ್ರಂಚ್ ಎಂದೂ ಕರೆಯುತ್ತದೆ. ಈ ಸೃಷ್ಟಿ-ಸ್ಥಿತಿ-ಲಯಗಳು ಒಂದು ಚಕ್ರ. ಚಕ್ರ ಎಂದರೆ ಮತ್ತೆ ಮತ್ತೆ ಘಟಿಸುವಂತಹದ್ದು. ಪುನರಾವರ್ತಿಸುವಂತಹದ್ದು. ಸನಾತನ ಭಾರತೀಯ ಗ್ರಂಥಗಳು ಈ ಚಕ್ರವು ೩೧೧.೦೪ ಲಕ್ಷಕೋಟಿ ವರ್ಷಗಳಿಗೊಮ್ಮೆ(೩.೧೧.೦೪ ಟ್ರಿಲಿಯನ್ ಇಯರ್ಸ್) ಘಟಿಸುತ್ತದೆ ಎನ್ನುತ್ತವೆ. ಆಧುನಿಕ ವಿಜ್ಞಾನದ ಬಳಿ ಇಂತಹ ಲೆಕ್ಕಾಚಾರವಿರಲಿ, ಪರಿಕಲ್ಪನೆಯೂ ಇಲ್ಲ!
* * *
ಅಕ್ಟೋಬರ್ ೨೨, ೨೦೦೪. ಭೂಗರ್ಭವಿಜ್ಞಾನಿಗಳ ಸಂಘ, ಲಂಡನ್.
ಒಂದು ವಿಚಿತ್ರ ಸಮಾರಂಭವು ನಡೆಯಿತು!
ಅಲ್ಲಿದ್ದವರು ೬,೦೦೦ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು.
ಯಾರ ಹುಟ್ಟು ಹಬ್ಬವೆಂದಿರಾ? ಬ್ರಹ್ಮಾಂಡದ(ಯೂನಿವರ್ಸ್) ಹುಟ್ಟು ಹಬ್ಬ!
ಬ್ರಹ್ಮಾಂಡವು ೬,೦೦೦ ವರ್ಷಗಳ ಹಿಂದೆ ಹುಟ್ಟಿತು ಎಂದು ಹೇಳಿದವರು ಐರ್ಲೆಂಡಿನ ಆರ್ಚ್ ಬಿಷಪ್ ಜೇಮ್ಸ್ ಉಷರ್(೧೫೮೧-೧೬೫೬).
ಜೇಮ್ಸ್ ಉಷರ್, ಬೈಬಲ್ಲಿನಲ್ಲಿರುವ ಬುಕ್ ಆಫ್ ಜೆನೆಸಿಸ್ ಭಾಗವನ್ನು ಓದಿದ. ಆಳವಾದ ಅಧ್ಯಯನವನ್ನು ಮಾಡಿದ. ಕೊನೆಗೆ ಬ್ರಹ್ಮಾಂಡವು ಕ್ರಿ.ಪೂ. ೨೨ ಅಕ್ಟೋಬರ್, ೪೦೦೪ರಂದು ಬೆಳಿಗ್ಗೆ ೬.೦೦ ಗಂಟೆಗೆ ಹುಟ್ಟಿತು ಎಂದು ಘೋಷಿಸಿದ! ತನ್ನ ಅಧ್ಯಯನಕ್ಕೆ ಪುರಾವೆಯಾಗಿ ಸುಮಾರು ೨,೦೦೦ ಪುಟಗಳ ಟಿಪ್ಪಣಿಯನ್ನು, ಯಾರು ಓದಿದರೂ ನಂಬುವಂತೆ, ಕರಾರುವಾಕ್ಕಾದ ಲ್ಯಾಟಿನ್ ಭಾಷೆಯಲ್ಲಿ ಬರೆದಿದ್ದ.
ಈ ಹೇಳಿಕೆಯ ವಿರೋಧಾಭಾಸವನ್ನು ಇಂದಿನ ಶಾಲಾ ಮಗುವೂ ಓದಿದರೂ ಸಹ ಜೋರಾಗಿ ನಕ್ಕುಬಿಡುತ್ತದೆ!
ಆದರೆ ೧೮-೧೯ನೆಯ ಶತಮಾನದ ಯೂರೋಪ್ ಖಂಡವು ಜೇಮ್ಸ್ ಅಷರ್ ಹೇಳಿಕೆಯನ್ನು ಸತ್ಯಸ್ಯ ಸತ್ಯ ಎಂದೇ ಪರಿಗಣಿಸಿತ್ತು. ಖ್ಯಾತ ಭೌತವಿಜ್ಞಾನಿ ಐಸಾಕ್ ನ್ಯೂಟನ್(೧೬೪೩-೧೭೨೬) ತನ್ನದೇ ಆದ ಲೆಕ್ಕಾಚಾರಗಳ ಅನ್ವಯ ಬ್ರಹ್ಮಾಂಡವು ಕ್ರಿ.ಪೂ. ೪೦೦೦ರಲ್ಲಿ ಹುಟ್ಟಿತೆಂದ. ಖ್ಯಾತ ಖಗೋಳ ವಿಜ್ಞಾನಿ ಯೊಹಾನಸ್ ಕೆಪ್ಲರ್(೧೫೭೧-೧೬೩೦) ಬ್ರಹ್ಮಾಂಡದ ಸೃಷ್ಟಿಯಾಗಿ ೩೯೯೨ ವರ್ಷಗಳಾಗಿವೆ ಎಂದು ಲೆಕ್ಕ ಹಾಕಿ ಹೇಳಿದ! ಈ ಇಬ್ಬರು ಮಹನೀಯರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಅಷರ್‌ಗಿಂತಲೂ ಭಿನ್ನವಾದ ಕಾಲಮಾನವನ್ನು ಹೇಳಿದರಾದರೂ, ಅದು ಜೇಮ್ಸ್ ಅಷರ್ ಹೇಳಿದ ಕಾಲಮಾನಕ್ಕಿಂತ ಅಷ್ಟೇನೂ ಭಿನ್ನವಾಗಿರಲಿಲ್ಲ. ವಿಲಿಯಮ್ ಜೋನ್ಸ್(೧೭೪೬-೧೭೯೪) ಆಧುನಿಕ ಭಾರತೀಯ ಇತಿಹಾಸವನ್ನು ರಚಿಸಿದ ಮಹಾನುಭಾವ! ಇವನು ಜೇಮ್ಸ್ ಅಷರ್ ಹೇಳಿದ್ದನ್ನು ಅಕ್ಷರಶಃ ನಂಬಿದ್ದ. ಹಾಗಾಗಿ ಅಷರ್ ಹಿನ್ನೆಲೆಯಲ್ಲಿ ಭಾರತೀಯ ಇತಿಹಾಸವು ಇಂದಿಗೆ ೩,೮೦೦ ವರ್ಷಗಳ ಹಿಂದೆ ಆರಂಭವಾಯಿತು ಎಂದು ಘೋಷಿಸಿದ. ಜೇಮ್ಸ್ ಅಷರ್ ತನ್ನ ಬೈಬಲ್ ಅಧ್ಯಯನದಿಂದ ಬ್ರಹ್ಮಾಂಡವು ೬,೦೦೦ ವರ್ಷಗಳ ಹಿಂದೆ ಆರಂಭವಾಯಿತು ಎನ್ನುವ ವಿಚಾರದ ಹಿನ್ನೆಲೆಯಲ್ಲಿ, ಅಖಂಡ ಭಾರತೀಯ ಇತಿಹಾಸವನ್ನು, ಅಷರ್ ಸೂಚಿಸಿದ ಕಾಲಮಾನಕ್ಕೆ ಅನುಗುಣವಾಗಿ ರಚಿಸಲು ನಿರ್ಧರಿಸಿದ.
* * *
ಫ್ರೆಡ್ರಿಕ್ ಮ್ಯಾಕ್ಸ್ ಮುಲ್ಲರ್(೧೮೨೩-೧೯೦೦) ೧೯ನೆಯ ಶತಮಾನದಲ್ಲಿ, ಸಾಟಿಯಿಲ್ಲದ ಭಾರತೀಯ ಇತಿಹಾಸ, ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ತಿಳಿದಂತಹ ತಜ್ಞ(ಇಂಡಾಲಜಿಸ್ಟ್) ಎಂದು ಹೆಸರನ್ನು ಗಳಿಸಿದ್ದ. ಅವನು ಜನ್ಮತಃ ಜರ್ಮನ್ ಆಗಿದ್ದ. ಆದರೆ ಬ್ರಿಟನ್ನಿನಲ್ಲಿ ವಾಸಿಸುತ್ತಿದ್ದ. ಬ್ರಿಟಿಶ್ ಈಸ್ಟ್ ಇಂಡಿಯ ಕಂಪನಿಯು ಅಪಾರ ಹಣವನ್ನು ನೀಡಿ, ಎಲ್ಲ ಭಾರತೀಯ ಧಾರ್ಮಿಕ ಸಾಹಿತ್ಯವನ್ನು ಇಂಗ್ಲಿಷಿಗೆ ಅನುವಾದಿಸುವಂತೆ ಸೂಚಿಸಿತು. ಅವನು ತುಂಬಾ ಉತ್ಸಾಹದಿಂದ ಒಪ್ಪಿಕೊಂಡ. ಭಾರತೀಯ ಸಾಹಿತ್ಯವನ್ನು ಅನುವಾದಿಸುವುದರ ಜೊತೆಯಲ್ಲಿ, ಅಪಾರ ಹಣವು ದೊರೆಯುವ ಅಪೂರ್ವ ಅವಕಾಶವನ್ನು ಬಳಸಿಕೊಂಡ. ಆದರೆ ಅವನ ಮನಸ್ಸು ಶುದ್ಧವಾಗಿರಲಿಲ್ಲ. ಬಿಳಿತೊಗಲು, ಕ್ರೈಸ್ತಧರ್ಮ ಹಾಗೂ ಯೂರೋಪಿನ ರಾಜಕೀಯಗಳಿಂದ ಪೂರ್ವಗ್ರಹ ಪೀಡಿತನಾಗಿದ್ದ.
ವಿಲಿಯಂ ಜೋನ್ಸ್, ಮ್ಯಾಕ್ಸ್ ಮುಲ್ಲರ್ ಹಾಗೂ ವಿನ್ಸೆಂಟಿ ಸ್ಮಿತ್‌ರವರು ಬಿಷಪ್ ಅಷರ್ ಹೇಳಿದ ಹಾಗೆ, ಬ್ರಹ್ಮಾಂಡ ಸೃಷ್ಟಿಯು ಕ್ರಿ.ಪೂ. ಬೆಳಿಗ್ಗೆ ೯.೦೦ ಗಂಟೆ, ದಿನಾಂಕ ೨೩ ಅಕ್ಟೋಬರ್, ೪೦೦೪ರಂದು ನಡೆಯಿತು ಹಾಗೂ ಮಹಾಪ್ರವಾಹವು(ದಿ ಗ್ರೇಟ್ ಫ್ಲಡ್) ಕ್ರಿ.ಪೂ. ೨,೩೪೯ರಲ್ಲಿ ನಡೆಯಿತು ಎಂಬ ಪರಿಕಲ್ಪನೆಗೆ ಅನುಗುಣವಾಗಿ ಸಮಸ್ತ ಭಾರತೀಯ ಧಾರ್ಮಿಕ ಸಾಹಿತ್ಯ, ಇತಿಹಾಸ, ಸಂಸ್ಕೃತಿಗಳನ್ನೆಲ್ಲ ಹೊಂದಿಸಿ ಬರೆಯಬೇಕು ಎಂದು ತೀರ್ಮಾನಿಸಿದರು.
೧೮೦೬-೧೮೧೮ರ ನಡುವೆ ಜೇಮ್ಸ್ ಮಿಲ್ ಭಾರತೀಯ ಇತಿಹಾಸದ ಬಗ್ಗೆ ೬ ಸಂಪುಟಗಳನ್ನು ಪ್ರಕಟಿಸಿದ. ಇವನು ಭಾರತೀಯ ಇತಿಹಾಸವನ್ನು ಹಿಂದು ಪೀರಿಯಡ್, ಮುಸ್ಲೀಮ್ ಪೀರಿಯಡ್ ಮತ್ತು ಬ್ರಿಟಿಶ್ ಪೀರಿಯಡ್ ಎಂದು ವಿಂಗಡಿಸಿ, ಮೊದಲ ಭಾಗದಲ್ಲಿ ಕೇವಲ ಹಿಂದುಗಳನ್ನು ಹಳಿದ.
ಭಾರತದಲ್ಲಿ ಅಧಿಕಾರಿಗಳಾಗಲಿರುವ ಅಧಿಕಾರಿಗಳಿಗೆ ಶಿಕ್ಷಣವನ್ನು ನೀಡುತ್ತಿದ್ದ ಹಾರ್ಲೆಬರಿ ಶಾಲೆಯಲ್ಲಿ ಇದನ್ನು ಪಠ್ಯವನ್ನಾಗಿಸಿದ. ಜೇಮ್ಸ್ ಮಿಲ್, ಅವನ ಸ್ಟೂವರ್ಟ್ ಮಿಲ್ ಮತ್ತು ಅವನ ಶಿಷ್ಯ ಥಾಮಸ್ ಮೆಕಾಲೆ ಭಾರತೀಯ ಇತಿಹಾಸದ ಜೊತೆಯಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಕ್ರಮಬದ್ಧವಾಗಿ ತಿರುಚುವ ಶೈಕ್ಷಣಿಕ ನೀತಿಯನ್ನು ರೂಪಿಸಿ ಭಾರತದಲ್ಲಿ ಜಾರಿಗೆ ತಂದರು.
ವಿನ್ಸೆಂಟ್ ಆರ್ಥರ್ ಸ್ಮಿತ್(೧೮೪೩-೧೯೨೦) ಎಂಬ ಬ್ರಿಟಿಷ್ ಅಧಿಕಾರಿಯು ೧೯೦೬ರಲ್ಲಿ ‘Early History of India in ೧೯೦೪ ಎಂಬ ಪುಸ್ತಕವನ್ನು ಬರೆದ. ಈ ಪುಸ್ತಕದ ೧/೩ ಭಾಗವು ಕೇವಲ ಅಲೆಗ್ಸಾಂಡರನ ದಂಡಯಾತ್ರೆಯ ವರ್ಣನೆಗೆ ಮೀಸಲಿಟ್ಟ. “The triumphant progress of Alexander from the Himalayas to the sea demonstrated the inherent weakness of the greatest Asiatic armies when confronted with European skill and discipline” ಎಂದು ಬರೆದು, ಭಾರತೀಯ ಸೇನೆಗಳ ಅಸಾಮರ್ಥ್ಯವನ್ನು ಎತ್ತಿ ಹೇಳಿ, ಯೂರೋಪಿಯನ್ನರ ಸಮರ ತಂತ್ರವನ್ನು ಹೊಗಳುತ್ತಾ, ಅಲೆಗ್ಸಾಂಡರನು ಸಮುದ್ರ ತೀರದವರೆಗೆ ಭಾರತವನ್ನು ಗೆದ್ದ ಎಂದು ಬೊಗಳೆ ಬಿಟ್ಟ.
ವಾಸ್ತವದಲ್ಲಿ ಅಲೆಗ್ಸಾಂಡರ್ ಭಾರತದ ವಾಯವ್ಯ ಅಂಚನ್ನು ತಲುಪಿದನಷ್ಟೇ. ಹೀಗೆ ಬರೀ ಹಸಿ ಹಸಿ ಸುಳ್ಳನ್ನು ಬರೆಯುವುದನ್ನು ತಪಸ್ಸಿನೋಪಾದಿಯಲ್ಲಿ ಕಾರ್ಯರೂಪಕ್ಕೆ ತಂದರು. ಹೆಗೆಲಿಯನ್ ಮತ್ತು ಮಾರ್ಕ್ಸಿಯನ್ ಸಿದ್ಧಾಂತಗಳು ಬ್ರಿಟಿಶರು ಆರಂಭಿಸಿದ ಹಾನಿಯನ್ನು ಮುಂದುವರೆಸಿದವು. ಮಾರ್ಕ್ಸ್ ಅನ್ವಯ “all that is good in Indian civilization is the contribution of conquerors” ಅಂದರೆ ಇವರ ದೃಷ್ಟಿಯಲ್ಲಿ ಕುಶಾನರ ಕಾಲ ಭಾರತದ ಸ್ವರ್ಣಯುಗವಾಗಿತ್ತು. ಶಾತವಾಹನರ ಮತ್ತು ಗುಪ್ತರ ಕಾಲವು ಕಗ್ಗತ್ತಲ ಯುಗವಾಗಿತ್ತು. ‘The period from the Gupta’s to the conquest of Muslims in the 12th century A.D. has been termed as the “Period of Feudalism” i.e. “Dark Age” during which everything degenerated’ ಎಂದರು.
ಕಮ್ಯುನಿಸ್ಟರು ಭಾರತೀಯ ಇತಿಹಾಸಕ್ಕೆ ಇಂತಹ ಹಗಲು ಮೋಸವನ್ನು ಮಾಡಿದರೂ ಸಹ, ಅವರು ಬರೆದ ಇತಿಹಾಸವನ್ನೇ ಸಾರ್ವಕಾಲಿಕ ಸತ್ಯ ಎಂಬಂತೆ ನಮ್ಮ ಇತಿಹಾಸದ ಪಠ್ಯಪುಸ್ತಕಗಳು ನಮಗೆ ಪಾಠವನ್ನು ಹೇಳಿಕೊಂಡು ಬಂದಿವೆ. ವಾಸ್ತವದಲ್ಲಿ ಭಾರತದ ಸ್ವರ್ಣಯುಗವನ್ನು ಗುಪ್ತರ ಸಾಮ್ರಾಜ್ಯದಲ್ಲಿ ಕಾಣಬಹುದು. ಚಂದ್ರಗುಪ್ತ ಮೌರ್ಯ, ಸಮುದ್ರಗುಪ್ತ, ಅಶೋಕ, ಹರ್ಷವರ್ಧನ, ಇಮ್ಮಡಿ ಪುಲಿಕೇಶಿ, ರಾಜರಾಜ ಚೋಳ, ರಾಜೇಂದ್ರ ಚೋಳ, ಕೃಷ್ಣದೇವರಾಯ, ಛತ್ರಪತಿ ಶಿವಾಜಿ ಮುಂತಾದವರೆಲ್ಲ ಈ ದೇಶ ಕಂಡ ವೀರ ಸಾಮ್ರಾಟರೇ ಅಲ್ಲ. ಇವರು ಈ ದೇಶದ ಸಂಸ್ಕೃತಿಗೆ ಏನೇನೂ ಕೊಡಲಿಲ್ಲ ಎನ್ನುವುದು ಅಭಿಮತ. ೧೫೨೦ರಲ್ಲಿ ಪೋರ್ಚುಗೀಸ್ ಪ್ರವಾಸಿ ಡೊಮಿಂಗೋ ಪೇಸ್ ವಿಜಯನಗರ ಸಾಮ್ರಾಜ್ಯದ ಬಗ್ಗೆ ‘As large as Rome, and very beautiful to the sight… the best provided city in the world’ ಎಂದು ಬರೆದದ್ದು ಬಹುಶಃ ಸುಳ್ಳೇ ಇರಬೇಕು!
* * *
ಭಾರತೀಯರಿಗೆ ಐತಿಹಾಸಿಕ ಪ್ರಜ್ಞೆ ಇಲ್ಲವೇ ಇಲ್ಲ ಎನ್ನುವುದು ಪಾಶ್ಚಾತ್ಯ ವಿದ್ವಾಂಸರ ನಿಲುವು. ವೇದ, ಉಪನಿಷತ್ತು, ಪುರಾಣಗಳಲ್ಲಿ ಉಕ್ತವಾಗಿರುವ ಒಳ ಪುರಾವೆಗಳನ್ನು ಐತಿಹಾಸಿಕ ದಾಖಲೆಗಳು ಎಂದು ಅವರು ಪರಿಗಣಿಸುವುದಿಲ್ಲ. ನಾವು ನಮ್ಮ ರಾಮಾಯಣ ಮತ್ತು ಮಹಾಭಾರತವನ್ನು ಇತಿಹಾಸ ಎಂದು ನಂಬಿದ್ದೇವೆ. ಅವರು ಅದನ್ನು ಒಪ್ಪುವುದಿಲ್ಲ. ವಾಲ್ಮೀಕಿ ಮಹರ್ಷಿಗಳು ರಾಮಾಯಣದಲ್ಲಿ ದಾಖಲಿಸಿರುವ ರಾಮನ ಜನ್ಮ ವಿವರಣೆಯನ್ನು ಕಂಪ್ಯೂಟರಿಗೆ ಊಡಿದರೆ, ರಾಮನು ಜನವರಿ ೧೦, ೫೧೧೪ರಂದು, ಅಂದರೆ ಇಂದಿಗೆ ೭,೧೨೨ ವರ್ಷಗಳ ಹಿಂದೆ ಹುಟ್ಟಿದ ಎನ್ನುವ ಮಾಹಿತಿಯು ದೊರೆಯುತ್ತದೆ. ಕ್ರಿ.ಪೂ. ೫,೦೦೦ ವರ್ಷಗಳ ಹಿಂದೆ ಭಾರತದಲ್ಲಿ ಇನ್ನೂ ನವಶಿಲಾಯುಗವಿತ್ತು. ಸಿಂಧು-ಸರಸ್ವತಿ ಸಂಸ್ಕೃತಿಯಾಗಲಿ, ವೇದಗಳ ಕಾಲವಾಗಲಿ ಆರಂಭವೇ ಆಗಿರಲಿಲ್ಲ. ಅಂತಹುದರಲ್ಲಿ ಅಷ್ಟು ಹಿಂದೆ ರಾಮನು ಹುಟ್ಟಿರಲು ಸಾಧ್ಯವೇ ಇಲ್ಲ ಎನ್ನುವುದು ಅವರ ವಾದ. ವಿಷ್ಣು ಪುರಾಣವು, ಕೃಷ್ಣನ ಆಯಸ್ಸು ೧೨೫ ವರ್ಷ ೭ ತಿಂಗಳು ೮ ದಿನಗಳು ಎನ್ನುತ್ತದೆ. ಕಲಿಯುಗದ ಆರಂಭದ ದಿನವೇ ಶ್ರೀಕೃಷ್ಣನು ದೇಹತ್ಯಾಗವನ್ನು ಮಾಡಿದ ಎನ್ನುವ ವಿಷಯವೂ ಭಾಗವತದಲ್ಲಿ ದೊರೆಯುತ್ತದೆ. ಖಾಗೋಳಿಕ ಪುರಾವೆಗಳ ಅನ್ವಯ ಕ್ರಿ.ಪೂ. ೩೧೩೮ರಲ್ಲಿ ಕುರುಕ್ಷೇತ್ರ ಯುದ್ಧವು ನಡೆಯಿತು. ಅಲ್ಲಿಂದ ೩೬ ವರ್ಷ ಕಳೆದ ನಂತರ ಅಂದರೆ ಕ್ರಿಸ್ತಪೂರ್ವ ೩೧೦೨ರಲ್ಲಿ ಶ್ರೀಕೃಷ್ಣ ದೇಹಾಂತ್ಯವಾಯಿತು ಎನ್ನುವುದು ಪುರಾಣಗಳಲ್ಲಿ ವಿಚಾರ. ಆದರೆ ಪಾಶ್ಚಾತ್ಯರು ಮಹಾಭಾರತವು ನಡೆದದ್ದೇ ಕ್ರಿ.ಪೂ. ೩೦೦ರಲ್ಲಿ ಎನ್ನುತ್ತಾರೆ. ಹಾಗಾಗಿ ಇವರು ಮೆಚ್ಚುವಂತ, ಒಪ್ಪುವಂತಹ ಇತಿಹಾಸವನ್ನು ರಚಿಸಲು ನಮ್ಮಿಂದ ಸಾಧ್ಯವೇ ಇಲ್ಲ.
ಭಾರತೀಯರಿಗೆ ೧೮ ಪುರಾಣಗಳೇ ಐತಿಹಾಸಿಕ ದಾಖಲೆಗಳು. ಪುರಾಣಗಳ ಅನ್ವಯ ಇತಿಹಾಸವೆಂದರೆ ಸರ್ಗ, ಪ್ರತಿಸರ್ಗ, ಮನ್ವಂತರ, ವಂಶ ಮತ್ತು ವಂಶಚರಿತ್ರೆಗಳ ದಾಖಲೆ. ಪುರಾಣಗಳು ಅರ್ಜುನನ ಮೊಮ್ಮೊಗನಾದ ಪರೀಕ್ಷಿತನ ಕಾಲವನ್ನು ಭಾರತೀಯ ಇತಿಹಾಸದ ಆರಂಭಕಾಲ ಎನ್ನುತ್ತವೆ. ಅಲ್ಲಿಂದ ಭಾರತದ ವಿವಿಧ ಭಾಗಗಳನ್ನು ಆಳಿದ, ವಿವಿಧ ಕಾಲಘಟ್ಟಗಳಲ್ಲಿ ಆಳಿದ ರಾಜವಂಶಗಳ ಹಾಗೂ ರಾಜರ ಹೆಸರನ್ನು ಪಟ್ಟಿ ಮಾಡುತ್ತವೆ. ಎಫ್.ಇ.ಪರ್ಗಿಟರ್ ಹಾಗೂ ಆರ್.ಸಿ.ರಾಯಚೌಧುರಿಯವರು ಪುರಾಣಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಅನುಸರಿಸಿ ರಾಜವಂಶಗಳನ್ನು ಕ್ರಮಬದ್ಧವಾಗಿ ದಾಖಲಿಸುವ ಪ್ರಯತ್ನವನ್ನು ಮೊದಲು ನಡೆಸಿದರು.
ಮೋಕ್ಷಮೂಲ ಭಟ್ಟ ಎಂದು ಭಾರತೀಯರಿಂದ ಹೊಗಳಿಸಿಕೊಂಡ ಮ್ಯಾಕ್ಸ್ ಮುಲ್ಲರ್, ಭಾರತೀಯ ಇತಿಹಾಸದ ೧೨೦೦ ವರ್ಷಗಳನ್ನು ಸ್ವಾಹಾ ಮಾಡಿರುವುದನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ದೊಡ್ಡ ದುರಂತವಾಗಿದೆ. ಈತನು ಆದಿ ಶಂಕರಾಚಾರ್ಯರು ಕ್ರಿ.ಶ. ೭೮೮ರಲ್ಲಿ ಹುಟ್ಟಿದ ಎಂದು ಸಾರಿಬಿಟ್ಟ. ಕಲ್ಹಣನು ತನ್ನ ರಾಜತರಂಗಿಣಿಯಲ್ಲಿ ಕಾಶ್ಮೀರದ ೭೦ನೆಯ ಅರಸ ಗೋಪಾದಿತ್ಯನು ಕ್ರಿ.ಪೂ. ೩೬೬ರಲ್ಲಿ ಶ್ರೀನಗರದ ಕಣಿವೆಯಲ್ಲಿ ೧೦೦೦ ಎತ್ತರ ಇರುವ ಬೆಟ್ಟದಲ್ಲಿ ಶ್ರೀಶಂಕರಾಚಾರ್ಯರ ಆಲಯವನ್ನು ಕಟ್ಟಿಸಿರುವುದಾಗಿ ದಾಖಲಿಸಿರುವುದನ್ನು ಬಿಟ್ಟಿರುವುದು ಅವನ ಜಾಣ ಮರೆವಿಗೆ ಒಂದು ನಿದರ್ಶನ. ಅಂದರೆ ಮ್ಯಾಕ್ಸ್ ಮುಲ್ಲರ್ ಅನ್ವಯ, ಶಂಕರಾಚಾರ್ಯರು ಹುಟ್ಟುವುದಕ್ಕೆ ೧,೧೫೪ ವರ್ಷಗಳ ಹಿಂದೆಯೇ ಗೋಪಾದಿತ್ಯನು ಶಂಕರಾಚಾರ್ಯರ ಆಲಯವನ್ನು ಕಟ್ಟಿಸಿದ ಎಂದಾಗುತ್ತದೆ. ನೇಪಾಳದ ರಾಜವಂಶ ಚರಿತ್ರೆಯಲ್ಲಿ, ಸೂರ್ಯವಂಶದ ದೊರೆ ವೃಷದೇವ ವರ್ಮನ ಆಡಳಿತದಲ್ಲಿ, ಅಂದರೆ ಕ್ರಿ.ಪೂ. ೪೮೭ರಲ್ಲಿ ಭಾರತದ ದಕ್ಷಿಣದಿಂದ ಆದಿಶಂಕರರು ನೇಪಾಳಕ್ಕೆ ಬಂದು, ಬೌದ್ಧರನ್ನು ವಾಕ್ಯಾರ್ಥದಲ್ಲಿ ಸೋಲಿಸಿದರೆಂದು ಬರೆದಿರುವುದು, ಮ್ಯಾಕ್ಸ್ ಮುಲ್ಲರನ ಕಣ್ಣುಗಳಿಗೆ ಬೀಳಲೇ ಇಲ್ಲ. ಆದಿಶಂಕರರ ಸಮಕಾಲೀನರಾದ ಚಿತ್ಸುಖಾಚಾರ್ಯರು ಬರೆದಿರುವ ಬೃಹತ್ ಶಂಕರವಿಜಯದಲ್ಲಿ ಕ್ರಿ.ಪೂ. ೫೦೯ರಲ್ಲಿ ಶಂಕರರ ಜನ್ಮವಾಯಿತೆಂದು ಬರೆದಿರುವುದನ್ನು ಮ್ಯಾಕ್ಸ್ ಮುಲ್ಲರ್ ಸಂಪೂರ್ಣವಾಗಿ ಬಿಟ್ಟು ಬಿಟ್ಟು, ಕ್ರಿ.ಶ. ೭೮೮ರಲ್ಲಿ ಹುಟ್ಟಿದ ಕಂಚಿಪೀಠದ ೩೮ನೆಯ ಆಚಾರ್ಯರಾದ ಅಭಿನವ ಶಂಕರರನ್ನೇ ಶಂಕರಾಚಾರ್ಯರು ಎಂದು ಬಿಂಬಿಸಿಬಿಟ್ಟ. ಎಂತಹ ಐತಿಹಾಸಿಕ ಪ್ರಮಾದ! ಇದನ್ನೇ ನಾವು ನಮ್ಮ ಪಠ್ಯಪುಸ್ತಕಗಳಲ್ಲಿ ಇಂದಿಗೂ ಬೋಧಿಸುತ್ತಾ ಬಂದಿದ್ದೇವೆ. ನಾವು ಎಂದಿಗೆ ಬದಲಾಗಿ, ನಮ್ಮ ಸರಿಯಾದ ಇತಿಹಾಸವನ್ನು ದಾಖಲಿಸುತ್ತೇವೆ ಎನ್ನುವುದು ಸಧ್ಯಕ್ಕೆ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.
* * *
ಶ್ರೀ ನಾರಾಯಣ ಯಾಜಿ ಅವರ ಹೊಸ ಲೇಖನಗಳ ಸಂಗ್ರಹ, ಅವನಿ ಅಂಬರ. ಇದು ವಾಸ್ತವದಲ್ಲಿ ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ೨೦ ಲೇಖನಗಳ ಸಂಗ್ರಹ ಎಂದರೆ ಅದು ಅತಿಶಯೋಕ್ತಿಯಾಗಲಾರದು. ಈ ಸಂಕಲನದಲ್ಲಿ ೨ ಮತ್ತು ೩ನೆಯ ಲೇಖನಗಳಾಗಿರುವ ನಾಸದೀಯ ಸೂಕ್ತ ಹಾಗೂ ಕಸ್ಮೈ ದೇವಾಯ ಹವಿಷಾ ವಿಧೇಮ ಎಂಬ ಲೇಖನಗಳನ್ನು ಓದಿದಾಗ, ನನಗೆ ಮೇಲಿನ ಎಲ್ಲ ವಿಚಾರಗಳು ನೆನಪಿಗೆ ಬಂದವು. ಅದನ್ನು ಇಲ್ಲಿ ತಮ್ಮೊಡನೆ ಹಂಚಿಕೊಂಡಿದ್ದೇನೆ.
ಅವನಿ ಅಂಬರದಲ್ಲಿರುವ ೨೬ ಲೇಖನಗಳಲ್ಲಿ ನನಗೆ ಮೆಚ್ಚಿಗೆಯಾದಂತಹ ಕೆಲವು ಲೇಖನಗಳ ಬಗ್ಗೆ ನನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದೇನೆ. ಅಂದ ಮಾತ್ರಕ್ಕೆ ಉಳಿದ ಲೇಖನಗಳು ಕಳಪೆ ಎಂದರ್ಥವಲ್ಲ. ಅವೂ ಉತ್ಕೃಷ್ಟವಾಗಿರುವಂತಹವೆ! ಪ್ರತಿಯೊಂದು ಲೇಖನವನ್ನೂ ವಿಶ್ಲೇಷಿಸಲು ಸ್ಥಳ ಸಂಕೋಚದ ಸಮಸ್ಯೆ ಒಂದಾದರೆ, ಇನ್ನೊಂದು ಎಲ್ಲವನ್ನೂ ನಾನೇ ಹೇಳಿದರೆ, ಓದುಗರಾದ ನಿಮ್ಮ ಓದುವ ಸುಖವನ್ನು ನಾನು ಕಸಿದಂತಾಗುತ್ತದೆ. ಹಾಗಾಗಿ ಕೆಲವು ಲೇಖನಗಳನ್ನು ಮಾತ್ರ ಸ್ಮರಿಸಿಕೊಳ್ಳುತ್ತೇನೆ.
ನಾಸದೀಯ ಸೂಕ್ತವು ನಿಜಕ್ಕೂ ಅದ್ಭುತವಾದಂತಹ ಸೂಕ್ತ. ಬಿಗ್ ಬ್ಯಾಂಗ್ ಸಿದ್ಧಾಂತವು ವಿವರಿಸುವ ಬ್ರಹ್ಮಾಂಡದ ಉಗಮದ ಬಗ್ಗೆ ಪ್ರಾಥಮಿಕ ಜ್ಞಾನ ಇರುವವರೂ ಸಹ, ನಾಸದೀಯ ಸೂಕ್ತದಲ್ಲಿರುವ ವಿಚಾರವನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ತಾರ್ಕಿಕವಾಗಿ ಯೋಚಿಸಬಲ್ಲ ಯಾರಾದರೂ ಸರಿ, ನಾಸದೀಯ ಸೂಕ್ತದಲ್ಲಿ ಇರುವ ವಿಚಾರಗಳನ್ನು ಖಂಡಿತ ಒಪ್ಪುತ್ತಾರೆ. ನಮ್ಮ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವಿಜ್ಞಾನ ವಿದ್ಯಾರ್ಥಿಗಳಿಗೆ ಈ ನಾಸದೀಯ ಸೂಕ್ತದ ಪರಿಚಯವನ್ನು ಮಾಡಬೇಕಾಗಿದೆ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಋಷಿಮುನಿಗಳ ಚಿಂತನ-ಮಂಥನ-ಹೊಳಹುಗಳ ಪರಿಚಯವು ನಮಗಾಗುತ್ತದೆ. ಇಂದಿನ ಆಧುನಿಕ ವಿಜ್ಞಾನದಲ್ಲಿ ಮುನ್ನಡೆಯಲು ಅಗತ್ಯವಾದ ಸ್ಫೂರ್ತಿ ಮತ್ತು ದಾರಿಯನ್ನು ತೋರಲು ಶಕ್ತವಾಗಿವೆ. ಆದರೆ ನಮ್ಮ ದೇಶದಲ್ಲಿ ಸಂಸ್ಕೃತ ಭಾಷೆಗೆ ತೋರುತ್ತಿರುವ ಪ್ರಜ್ಞಾಪೂರ್ವಕ ಅನಾದರವು ನಮಗೇ ಮುಳುವಾಗುತ್ತದೆ ಎನ್ನುವುದನ್ನು ನಾವು ಲೆಕ್ಕಕ್ಕೇ ತೆಗೆದುಕೊಂಡಿಲ್ಲ. ಹಾಗಾಗಿ ಇಂದು ನಮ್ಮ ಸನಾತನ ಜ್ಞಾನಕ್ಕಾಗಿ ನಾವು ವಿದೇಶಿ ಸಂಸ್ಕೃತ ತಜ್ಞರ ಮೊರೆ ಹೋಗ ಬೇಕಾದಂತಹ ದುಃಸ್ಥಿತಿಯು ಉಂಟಾಗಿದೆ. ಆದರೂ ನಾವು ಎಮ್ಮೆ ನಿನಗೆ ಸಾಟಿಯಿಲ್ಲ ಎಂದುಕೊಂಡು ಮುಂದೆ ಸಾಗುತ್ತಿದ್ದೇವೆ.
ಅರ್ಜುನನ ವಿಷಾಧಯೋಗವು ಭಗವದ್ಗೀತೆಯ ೧೮ ಅಧ್ಯಾಯಗಳಲ್ಲಿ ಮೊದಲನೆಯದು. ಈ ಅಧ್ಯಾಯದಲ್ಲಿ ಮಹತ್ವವಾದ ಹಾಗೂ ಆಳವಾದ ತಾತ್ವಿಕ ಬೋಧನೆಗಳಿವೆ. ಭಗವದ್ಗೀತೆಯ ಉಳಿದ ಭಾಗಗಳಿಗೆ ವೇದಿಕೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ಅಧ್ಯಾಯವು ಓರ್ವ ಸಾಮಾನ್ಯ ಮನುಷ್ಯನ ಅಂತರಂಗದ ತುಮುಲವನ್ನು ಪ್ರತಿನಿಧಿಸುತ್ತದೆ. ಇಲ್ಲಿ ಕರ್ತವ್ಯ, ನೈತಿಕತೆ, ಸ್ವಯಂ-ಅನುಮಾನ ಮತ್ತು ಜೀವನದ ಸ್ವರೂಪದಂತಹ ಸಾರ್ವತ್ರಿಕ ವಿಷಯಗಳು ಮುನ್ನೆಲೆಗೆ ಬರುತ್ತದೆ. ಅರ್ಜುನ ಮತ್ತು ಕೃಷ್ಣನ ನಡುವಿನ ಸಂಪೂರ್ಣ ಸಂವಾದಕ್ಕೆ ಮುನ್ನುಡಿಯನ್ನು ಬರೆಯುತ್ತದೆ. ನಂತರದ ಧರ್ಮ(ಧರ್ಮದ ಕರ್ತವ್ಯ), ಕರ್ಮ(ಕ್ರಿಯೆ) ಮತ್ತು ಆಧ್ಯಾತ್ಮಿಕ ವಿಮೋಚನೆಯ ಬೋಧನೆಗಳಿಗೆ ಅಡಿಪಾಯವನ್ನು ಹಾಕುತ್ತದೆ. ಅರ್ಜುನನ ಆಂತರಿಕ ಹೋರಾಟವು ನೈತಿಕ ಸಂದಿಗ್ಧತೆಗಳು ಮತ್ತು ಅಸ್ತಿತ್ವವಾದದ ಪ್ರಶ್ನೆಗಳೊಂದಿಗೆ ಹೋರಾಡುವ ಮಾನವ ಅನುಭವವನ್ನು ಪ್ರತಿಬಿಂಬಿಸುತ್ತದೆ, ಈ ಅಧ್ಯಾಯವು ಚರ್ಚಿಸುವ ವಿಚಾರಗಳು ಸಾರ್ವಕಾಲಿಕವು. ಹಿಂದೆ-ಇಂದು-ಮುಂದೆ ಮಾನವ ಸಂಸ್ಕೃತಿಗಳ ಮತ್ತು ಕಾಲಾವಧಿಯ ಶ್ರೀಸಾಮಾನ್ಯರಿಗೆ ಸದಾ ಪ್ರಸ್ತುತವಾಗಿರುವಂತೆ ರಚನೆಯಾಗಿದೆ. ಇದನ್ನು ಯಾಜಿಯವರು ಮನಮುಟ್ಟುವ ಹಾಗೆ ವಿಶ್ಲೇಷಿಸಿದ್ದಾರೆ.
ಸ್ವರ್ಗ-ನರಕಗಳ ಪರಿಕಲ್ಪನೆಯು, ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಜಗತ್ತಿನ ಎಲ್ಲ ದೇಶಗಳಲ್ಲಿ ಅವರದ್ದೇ ಆದ ರೀತಿಯಲ್ಲಿ ಅಸ್ತಿತ್ವದಲ್ಲಿವೆ. ವಾಸ್ತವದಲ್ಲಿ ಸ್ವರ್ಗ-ನರಕಗಳು ಇವೆಯೆ? ಬಲ್ಲವರಾರು? ಸತ್ತ ಮೇಲೆ ಏನಿಹುದೆಂದು ತಿಳಿದು ಯಾರೂ ಇದುವರೆಗೂ ನಮಗೆ ಹೇಳಿಲ್ಲ. ಹಾಗಾಗಿ ಸ್ವರ್ಗ-ನರಕಗಳು ಇಲ್ಲವೇ ಇಲ್ಲ ಎನ್ನುವ ಜನರು ನಮ್ಮಲ್ಲಿ ಕಡಿಮೆಯೇನಿಲ್ಲ. ನಮ್ಮ ಗರುಡಪುರಾಣವು ಹಾಗೂ ನಚಿಕೇತ ಪ್ರಸಂಗವು ನರಕದ ವರ್ಣನೆಯನ್ನು ನೀಡುತ್ತದೆ. ಆದರೆ ಅದನ್ನು ನಂಬುವವರು ಇರುವಷ್ಟೇ ನಂಬದವರೂ ಇದ್ದಾರೆನ್ನುವುದು ಸ್ಪಷ್ಟ. ಹಾಗಾಗಿ ಬಸವಣ್ಣನವರು ಹೇಳುವ ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ ಎನ್ನುವ ಮಾತು ನಿಜಕ್ಕೂ ಅರ್ಥಪೂರ್ಣವಾಗಿದೆ. ಸ್ವರ್ಗ-ನರಕಗಳೆರಡೂ ಇದೇ ಭೂಮಿಯಲ್ಲಿವೆ. ಅವನ್ನು ಕಟ್ಟಿಕೊಳ್ಳುವವರೂ ನಾವೇ! ಇದನ್ನೇ ವ್ಯಾಸರೂ ಸಹ ಪರೋಪಕಾರವನ್ನು ಮಾಡಿದರೆ ಪುಣ್ಯವು, ಪರರಿಗೆ ಹಿಂಸೆಯನ್ನು ಮಾಡಿದರೆ ಪಾಪವು ಲಭಿಸುತ್ತದೆ(ಅಷ್ಟಾದಶೇಶು ಪುರಾಣೇಷು ವ್ಯಾಸಸ್ಯ ವಚನದ್ವಯಂ | ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಮ್ ||) ಎಂದು ಹೇಳಿದ್ದಾರೆ.
ಸ್ವರ್ಗ-ನರಕಗಳ ಬಗ್ಗೆ ಯಾಜಿಗಳ ಅವಲೋಕನವು ಯಶಸ್ವಿಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿಯು ತಂದೆ-ತಾಯಿಗಳ ನಂತರದ ಸ್ಥಾನವನ್ನು ಗುರುವಿಗೆ ನೀಡಿದೆ. ಕವಿ ಎಲ್.ಗುಂಡಪ್ಪನವರು ಮನೆಯೇ ತಾನೆ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು ಎಂದು ತಾಯಿಗೆ ಮೊದಲ ಗುರುವಿನ ಸ್ಥಾನವನ್ನು ನೀಡಿದರು. ದತ್ತಾತ್ರೇಯ ಮಹರ್ಷಿಗಳು ನಮ್ಮ ಪ್ರಕೃತಿಯಲ್ಲಿರುವ ನೆಲ, ನೀರು, ಗಾಳಿ, ಬೆಂಕಿ, ಆಕಾಶ, ಸೂರ್ಯ, ಚಂದ್ರರೇ ಮುಂತಾದ ೨೪ ಪ್ರಾಕೃತಿಕ ಗುರುಗಳ ಮಹತ್ವವನ್ನು ತಿಳಿಸಿ, ಅವು ಹೇಗೆ ನಮಗೆ ಗುರುಸ್ವರೂಪಿಗಳಾಗಿವೆ ಎನ್ನುವುದನ್ನು ವಿವರಿಸಿದರು. ನಮ್ಮ ಬದುಕಿನಲ್ಲಿ ಬರುವ ಎಲ್ಲ ಮಹನೀಯರನ್ನು ನಾವು ಲೌಕಿಕ ಗುರುಗಳು ಹಾಗೂ ಅಧ್ಯಾತ್ಮಿಕ ಗುರುಗಳು ಎನ್ನುವ ಹಿನ್ನೆಲೆಯಲ್ಲಿ ಪರಿಭಾವಿಸಬಹುದು. ಇವರಿಬ್ಬರೂ ನಮಗೆ ತೀರಾ ಅಗತ್ಯವೆ! ಈ ಹಿನ್ನೆಲೆಯಲ್ಲಿಯೇ ಪುಲಿಗೆರೆಯ ಸೋಮನಾಥನು ವರ್ಣ ಮಾತ್ರಂ ಕಲಿಸಿದವನ್ ಗುರು ಎಂದ.
ಹಾಗಾಗಿಯೇ ಜಿ.ಎಸ್.ಶಿವರುದ್ರಪ್ಪನವರು ಬದುಕನ್ನು ಋಣಗಳ ಗಣಿ ಎಂದರು. ನಮ್ಮ ಸಂಸ್ಕೃತಿಯು ಆಚಾರ್ಯ ಋಣವನ್ನು ತೀರಿಸಬೇಕಾದದ್ದು ನಮ್ಮ ಕರ್ತವ್ಯ ಎನ್ನುತ್ತದೆ. ಗುರುವಿನ ಮಹತ್ವವನ್ನು ತಿಳಿಸುವ ಗುರು ಎನ್ನುವ ಅಲೌಕಿಕ ಪದ ವಿಲಾಸ ನನಗೆ ಇಷ್ಟವಾದ ಮತ್ತೊಂದು ಬರಹ.
ನಮ್ಮ ಬ್ರಹ್ಮಾಂಡವು ೯೨ ನಮೂನೆಯ ಪರಮಾಣುಗಳಿಂದ ರೂಪುಗೊಂಡಿದೆ. ಸುಮಾರು ೭೦ ಕೆಜಿ ತೂಗುವ ವಯಸ್ಕನ ದೇಹದಲ್ಲಿ ಸುಮಾರು ೩೭.೨ ಲಕ್ಷಕೋಟಿ ಜೀವಕೋಶಗಳಿವೆ. ಈ ಎಲ್ಲ ಜೀವಕೋಶಗಳನ್ನು ಲಕ್ಷಕೋಟಿ ಲಕ್ಷಕೋಟಿ ಲಕ್ಷಕೋಟಿ(೭*೧೦^೨೭) ಪರಮಾಣುಗಳು ರೂಪಿಸಿವೆ. ಬ್ರಹ್ಮಾಂಡವನ್ನು ನಿರ್ಮಿಸಿರುವ ೯೨ ನಮೂನೆಯ ಪರಮಾಣುಗಳಲ್ಲಿ ೬೦ ನಮೂನೆಯ ಪರಮಾಣುಗಳು ನಮ್ಮ ಒಡಲನ್ನು ರೂಪಿಸಿವೆ. ಆ ಬ್ರಹ್ಮಾಂಡವನ್ನು ರೂಪಿಸಿರುವ ಪರಮಾಣುಗಳೇ ನಮ್ಮ ದೇಹವನ್ನೂ ರೂಪಿಸಿವೆ. ನಾವು ಸತ್ತಾಗ, ನಮ್ಮನ್ನು ಹೂತರೂ ಸರಿ, ಸುಟ್ಟರೂ ಸರಿ ನಮ್ಮ ದೇಹದ ಎಲ್ಲ ಪರಮಾಣುಗಳು ಆ ಬ್ರಹ್ಮಾಂಡವನ್ನು ಸೇರುತ್ತವೆ. ಅದೇ ಪರಮಾಣುಗಳು ಸೂರ್ಯನ ಉಪಸ್ಥಿತಿಯಲ್ಲಿ ದ್ಯುತಿಸಂಶ್ಲೇಷಣೆಯ(ಫೋಟೋಸಿಂಥೆಸಿಸ್) ಮೂಲಕ ಗ್ಲೂಕೋಸ್ ಆಗಿ, ಅದೇ ಗ್ಲೂಕೋಸ್ ಮುಂದೆ ಆಹಾರ ಪದಾರ್ಥಗಳಿಗೆ ಕಾರಣವಾಗಿ ಜೀವಿಯ ಅಸ್ತಿತ್ವಕ್ಕೆ ಕಾರಣವಾಗಿವೆ. ಹಾಗಾಗಿ ತಾತ್ವಿಕವಾಗಿ ಬ್ರಹ್ಮಾಂಡವು ಬೇರೆಯಲ್ಲ. ನಾವು ಬೇರೆಯಲ್ಲ. ವಿಜ್ಞಾನವು ಒಪ್ಪಿರುವ ಈ ಪರಿಕಲ್ಪನೆಯನ್ನು ಸಮಗ್ರವಾಗಿ ಅದ್ವೈತ ಸಿದ್ಧಾಂತವು ಅನೇಕ ಸಹಸ್ರಮಾನಗಳಿಂದ ಪ್ರತಿನಿಧಿಸುತ್ತದೆ. ಉಪನಿಷತ್ತುಗಳ ಮಹಾವಾಕ್ಯಗಳಾದ ತತ್ ತ್ವಮ್ ಅಸಿ, ಅಹಂ ಬ್ರಹ್ಮಾಸ್ಮಿ, ಪ್ರಜ್ಞಾನಮ್ ಬ್ರಹ್ಮ ಹಾಗೂ ಅಯಮ್ ಆತ್ಮಾ ಬ್ರಹ್ಮ ಎಂಬ ಮಾತುಗಳ ಅಂತರಾಳವನ್ನರಿಯಲು ಒಂದು ಜನ್ಮವು ಸಾಲದು. ಈ ನಾಲ್ಕನೆಯ ಮಹಾವಾಕ್ಯದ ಬಗ್ಗೆ ಯಾಜಿಯವರು ಬರೆದಿರುವ
ಅದ್ವೈತದ ಗೂಢವನ್ನು ಸಾರುವ ಮಹಾಮಂತ್ರ: ಅಯಮಾತ್ಮಾ ಬ್ರಹ್ಮ ಈ ಸಂಕಲನದಲ್ಲಿರುವ ಮತ್ತೊಂದು ಗಮನೀಯ ಹಾಗೂ ಗಣನೀಯ ಲೇಖನ.
* * *
ಶ್ರೀ ನಾರಾಯಣ ಯಾಜಿಯವರ ನೆಲಮುಗಿಲು ಲೇಖನಗಳ ಸಂಕಲನ ಈಗಾಗಲೇ ಪ್ರಕಟವಾಗಿ ಧಾರವಾಡದ ಭೂಮಿ ಪ್ರತಿಷ್ಠಾನ ನೀಡುವ ಪ್ರಶಸ್ತಿಯನ್ನು ಗಳಿಸಿದೆ. ಪ್ರಸ್ತುತ ಸಂಕಲನ ಅವನಿ ಅಂಬರವೂ ಸಹ ಪ್ರಶಸ್ತಿಗಳನ್ನು ಗಳಿಸಲು ಎಲ್ಲ ರೀತಿಯಿಂದಲೂ ಯೋಗ್ಯತೆಯನ್ನು ಪಡೆದಿರುವ ಸಂಕಲನವಾಗಿದೆ. ಪ್ರಶಸ್ತಿಗಳನ್ನು ಪಡೆಯಲಿ ಎಂದೇ ಹೃತ್ಪೂರ್ವಕವಾಗಿ ಆಶಿಸುತ್ತಿದ್ದೇನೆ. ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆಯಲು ನಾನು ಅರ್ಹ ಎಂದು ಭಾವಿಸಿ, ನನ್ನ ತೊದಲನುಡಿಗಳಿಗೆ ಅವಕಾಶ ಮಾಡಿಕೊಟ್ಟ ಶ್ರೀ ನಾರಾಯಣ ಯಾಜಿ ಹಾಗೂ ಗಣೇಶ್ ಯಾಜಿ ದಂಪತಿಗಳಿಗೆ ನಾನು ಕೃತಜ್ಞನಾಗಿದ್ದೇನೆ.
ಸಮಸ್ತ ಸನ್ಮಂಗಳಾನಿ ಭವಂತು.
೨೪.೧೨.೨೦೨೩ ಡಾ. ನಾ.ಸೋಮೇಶ್ವರ, ಬೆಂಗಳೂರು
ಪುಟ ತೆರೆದಂತೆ…
ಸವಿನುಡಿ / ೫
ನೆಲದಿಂದ ಮುಗಿಲಿಗೆ! / ೭
ಅವನಿಯ ಹೊದ್ದು ಅಂಬರವೇರುವ ತವಕ / ೧೫
೦೧. ದೇಶ ಮತ್ತು ಕಾಲಾತೀತ ಬೆಳಕು: ಅದೇ ಪ್ರಣವ /೨೧
೦೨. ನಾಸಾದೀಯ ಸೂಕ್ತ / ೨೭
೦೩. ಕಸ್ಮೈ ದೇವಾಯ ಹವಿಷಾ ವಿಧೇಮ / ೩೩
೦೪ ಭಗವದ್ಗೀತೆಯ ವಿಷಾದಯೋಗ / ೪೧
೦೫. ನಡುಗಿಸದ ನರಕ; ಪ್ರಮೋದವಲ್ಲದ ಸ್ವರ್ಗ / ೫೧
೦೬. ಗುರು ಎನ್ನುವ ಅಲೌಕಿಕ ಪದ ವಿಲಾಸ / ೫೫
೦೭. ವೇದಾಂತ ಪ್ರಪಂಚದ ಮಹಾನ್ ಅಂತೇವಾಸಿ: ಉದ್ದಾಲಕ ಆರುಣಿ / ೬೦
೦೮. ಅದ್ವೈತದ ಗೂಢವನ್ನು ಸಾರುವ ಮಹಾಮಂತ್ರ: ಅಯಮಾತ್ಮಾ ಬ್ರಹ್ಮ / ೬೬
೦೯ ವಿಘ್ನಕರ್ತನೂ ವಿಘ್ನಹರ್ತನೂ ಆದ ವಿನಾಯಕನ ವಿಶ್ವವ್ಯಾಪಕತ್ವ / ೭೬
೧೦ ಮಾನುಷೀ ಲೀಲೆಯಿಂದ ಲೋಕವನ್ನೇ ಅಚ್ಚರಿಗೊಳಿಸಿದ ಪುರುಷೋತ್ತಮ / ೮೧
೧೧ ಹುತ್ತಗಟ್ಟಿದ ಭಿತ್ತಿಯಲ್ಲಿ ಒಡಮೂಡಿದ ಕರ್ತವ್ಯಪರಾಯಣತೆ / ೮೭
೧೨ ಭರತ: ರಘುಕುಲದ ಬೆಳಕು / ೯೩
೧೩ ದೊರೆ ಕುರುಡ: ಕಿವುಡ ಮತ್ತು ಮೂಕ ಸಭಾಸದರು / ೯೯
೧೪ ಗೌತಮ ಬುದ್ಧ: ನಿಮಗೆ ನೀವೇ ಬೆಳಕಾಗಿರಿ ಎಂದು ಸಾರಿದವ / ೧೦೪
೧೫ ಜ್ಞಾನದ ಜ್ಯೋತಿಯನ್ನು ಹೊತ್ತಿಸಿ ಅಂಧಕಾರವನ್ನು ದೂರ ಮಾಡುವ ದೀಪಾವಳಿ / ೧೦೮
೧೬ ಅದ್ವೈತ ಸಿದ್ಧಾಂತ ಮತ್ತು ಶಂಕರಾಚಾರ್ಯರು / ೧೧೩
೧೭ ಭರತನ ನಾಟ್ಯಶಾಸ್ತ್ರ / ೧೧೯
೧೮ ತಿಳಿಸುವ ಮಾತಲ್ಲ, ತಿಳಿಯದೆ ತಿಳಿಯುವ ಮಾತಲ್ಲ / ೧೨೫
೧೯ ಚಿಗುರೆಲೆ ಮೂಡುವಾಗ ಸಂತೋಷದಿಂದ ಜಾರಿದ ಹಣ್ಣೆಲೆ / ೧೩೧
೨೦ ಪ್ರಾಚೀನ ಕಾಲದಲ್ಲಿಯೇ ಸಾಗರ ದಾಟಿದ ಕನ್ನಡದ ಕಂಪು / ೧೩೬
೨೧ ಭಾರತದ ರಾಜಕೀಯ ಚರಿತ್ರೆಯಲ್ಲೊಂದು ಬೆಳ್ಳಿಗೆರೆ / ೧೪೧
೨೨ ಗಾಂಧೀ ಪಥವೆನ್ನುವ ದಧೀಚಿ ಮಾರ್ಗ / ೧೪೭
೨೩ ನಿಷ್ಠುರ ಕಾಠಿಣ್ಯವಾದಿ ಸ್ವಾತಂತ್ರ್ಯ ಹೋರಾಟಗಾರ ಕರ್ಮಯೋಗಿ ವಲ್ಲಭಬಾಯಿ ಪಟೇಲರು / ೧೫೨
೨೪ ವಾಮನಮೂರ್ತಿಯ ತ್ರಿವಿಕ್ರಮ ಹೆಜ್ಜೆಗಳು / ೧೬೨
೨೫ ಗೇಯ್ ದೆ ಮುಪಾಸ್ಸಾ: ಮುಗ್ಧ ಮನಸ್ಸಿನ ಬಂಡಾಯದ ಲೇಖಕ / ೧೬೯
೨೬ ನಿಕೋಲಾಸ್ ಮೇಯರ್ ಮತ್ತು ಫ್ರಾನ್ಸಿಸ್ಕೋ ಗೋಯಾ / ೧೭೫
ಗ್ರಂಥಋಣ / ೧೮೧
yajiprakashana@gmail.com –
ನಾರಾಯಣ ಯಾಜಿಯವರ ಕೃತಿ “ಅವನಿ ಅಂಬರ”
ಅಧ್ಯಾತ್ಮದಿಂದ ಲೌಕಿಕದವರೆಗಿನ ವಿಷಯಗಳ ಒಳನೋಟ -ಪ್ರೊ. ರಾಮಚಂದ್ರ ಹಬ್ಬು
ನಾರಾಯಣ ಯಾಜಿಯವರು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ “ನೆಲಮುಗಿಲು ಅಂಕಣ” ಭಾರತೀಯ ತತ್ವಶಾಸ್ತ್ರಗಳನ್ನು ಒಂದು ಹೊಸ ಒಳನೋಟಗಳೊಂದಿಗೆ ಬರುತ್ತಿತ್ತು. ಇದೀಗ ಅದು ಎರಡು ಭಾಗಗಳಲ್ಲಿ ಪುಸ್ತಕವಾಗಿ ಹೊರಬಂದಿದೆ. ಅದರ ಎರಡನೆಯ ಭಾಗ “ಅವನಿ ಅಂಬರ” ವೆನ್ನುವ ಹೆಸರಿನಿಂದ ಯಾಜಿ ಪ್ರಕಾಶನದಿಂದ ಪ್ರಕಟವಾಗಿದೆ. ಅವನಿ ಲೌಕಿಕ. ಅಂಬರ ಪಾರಮಾರ್ಥಿಕ. ವೇದ ಉಪನಿಷತ್ತುಗಳು ಜ್ಞಾನ ಭಂಡಾರ. ಅಂತೆಯೇ ರಾಮಾಯಣ, ಮಹಾಭಾರತಗಳು ಕೇವಲ ಪುರಾಣಗಳಲ್ಲ. ಅವು ನಮ್ಮದೇಶದ ಇತಿಹಾಸವನ್ನು, ಸಂಸ್ಕೃತಿಯನ್ನು, ಪರಂಪರೆಯನ್ನು ಪ್ರತಿಬಿಂಬಿಸುವ ಮಹಾ ಗ್ರಂಥಗಳು. ಆದರೆ ಮ್ಯಾಕ್ಸ್ ಮುಲ್ಲರ್ ನಂಥ ಪಾಶ್ಚಾತ್ಯ ವಿದ್ವಾಂಸರು ತಮ್ಮ ದೃಷ್ಠಿಕೋನದಿಂದ ಇವನ್ನೆಲ್ಲವನ್ನು ವಿಶ್ಲೇಷಿಸಿ, ಅಪಾರ್ಥವನ್ನೇ ಕಲ್ಪಿಸಿದ್ದಾರೆ. ವೇದೋಪನಿಷತ್ತುಗಳ ಅರ್ಥಗಳ ಒಳನೋಟವನ್ನು ನಮ್ಮ ಮುಂದಿಡುತ್ತ, ನಾರಾಯಣ ಯಾಜಿಯವರು ಅತ್ಯಂತ ನಿಖರವಾಗಿ, ವಸ್ತು ನಿಷ್ಠವಾಗಿ ‘ಅವನಿ ಅಂಬರ’ದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ಈ ಪುಸ್ತಕದಲ್ಲಿ ಒಟ್ಟು ೨೬ ಅಧ್ಯಾಯಗಳು ಇದ್ದು, ಅವು ಯಾಜಿಯವರ ಓದಿನ ವೈಶಾಲ್ಯವನ್ನು ಮತ್ತು ವಿಷಯ ವ್ಯಾಪ್ತಿಯನ್ನು ಸೂಚಿಸುತ್ತವೆ. ಅವನಿ ಅಂಬರ ಈ ಮೇಲೆ ವಿವರಿಸಿದ ವಿಚಾರಗಳಿಗಷ್ಟೇ ಸೀಮಿತಗೊಳ್ಳದೆ, ಗಾಂಧಿ, ಸರ್ದಾರ್ ಪಟೇಲ್, ಲಾಲ್ ಬಹಾದ್ದೂರ್ ಶಾಸ್ತ್ರಿ, ಗೌತಮ್ ಬುದ್ಧ, ಶಂಕರಾಚಾರ್ಯ ಇವರ ವ್ಯಕ್ತಿತ್ವದ ಮೇಲೆ ಮತ್ತು ವಿಚಾರಗಳ ಮೇಲೆ ಬೆಳಕನ್ನು ಚೆಲ್ಲುತ್ತದೆ. ಜೊತೆಗೆ ಫ್ರೆಂಚ ಲೇಖಕ ಗೇಯ್ ದೆ ಮುಪಾಸ್ಸಾ ನ ‘ಬಾಲ್ ಆಫ್ ಫ್ಯಾಟ್’ ಕೃತಿಯ, ಅಮೇರಿಕೆಯ ಚಲನ ಚಿತ್ರ ನಿರ್ದೇಶಕ , ನಿಕೋಲಾಸ್ ಮೇಯರ್ ನ ಯುದ್ಧ ಭೀಕರತೆಯನ್ನು ತೋರಿಸುವ ‘The Day After, ಎಂಬ ಚಲನೆ ಚಿತ್ರದ, ಹಾಗೇನೇ , ಯುದ್ಧದ ದುರಂತವನ್ನು ವಿವರಿಸುವ ಸ್ಪೇನ್ ಚಿತ್ರಕಾರ, ಫ್ರಾನ್ಸಿಸ್ಕೋ ಗೋಯಾನ ‘Disaster of War’ ಎಂಬ ಕಪ್ಪು ವರ್ಣ ಚಿತ್ರಗಳ ಸರಣಿಯ ವಿಶ್ಲೇಷಣೆ ಇದೆ. ಓಂ ಕಾರ ಪ್ರಣವದ ವ್ಯಾಖ್ಯೆ ಯನ್ನು ನೀಡುತ್ತಾ, ಅವರು ಅದು ದೇಶ ಮತ್ತು ಕಾಲಾತೀತ ಬೆಳಕು ಎನ್ನುತ್ತಾರೆ. ಹಿಂದು ಧರ್ಮದಲ್ಲಿನ ಓಂ ಕಾರವು, ಕ್ರಿಶ್ಚಿಯನ್ ಧರ್ಮದ ಅಮೆನ್ ಈ ಶಬ್ದದಲ್ಲಿ ಇಸ್ಲಾಮ್ ಧರ್ಮದ ಆಮೀನ್ ದಲ್ಲಿ ಪ್ರತಿಧ್ವನಿಸುವುದನ್ನು ನಾವು ಕಂಡಾಗ, ಯಾಜಿಯವರ ವ್ಯಾಖ್ಯೆಯ ಯಥಾರ್ಥತೆ ನಮಗೆ ಅರಿವಾಗುತ್ತದೆ. ಬ್ರಹ್ಮಾಂಡದ ಸೃಷ್ಠಿಯ ಕುರಿತಾದ ಋಗ್ವೇದದ ನಾಸಾದೀಯ ಸೂಕ್ತದ ಕುರಿತು ಬರೆಯುತ್ತ ಅವರು ಅದು ಸತ್ಯ ಮತ್ತು ಅಸತ್ ಗಳು ವಿವರಣೆ ನೀಡುತ್ತಾ, ಭಗವಂತ ಮತ್ತು ಅವನ ಸೃಷ್ಠಿಯ ಅವಿನಾ ಭಾವ ಸಂಬಂಧವನ್ನು ಸೂಚಿಸುತ್ತದೆ ಎನ್ನುತ್ತಾರೆ. ಕಸ್ಮೈ ದೇವಾಯ ಹವಿಷಾ ವಿಧೇಯ, ಇದು ಯಾವ ದೇವರಿಗೆ ಹವಿಸ್ಸು ನೀಡಲಿ ಎಂದಾಗದೆ, ಸರ್ವ ಗುಣ ವಿಶಿಷ್ಠವಾದ, ಸುಖ ಸ್ವರೂಪನಾದ ದೇವರಿಗೆ ಹವಿಸ್ಸನ್ನು ಅರ್ಪಿಸೋಣ ಎಂದಾಗುತ್ತದೆ ಎನ್ನುತ್ತಾರೆ ಯಾಜಿ. ಅವರು ದೃಷ್ಟಿಯಲ್ಲಿ ಭಗವದ್ಗೀತೆಯ ವಿಷಾದ ಯೋಗ, ಅರ್ಜುನನ ವಿಷಾದವನ್ನಲ್ಲ, ಆದರೆ ಅವನ ಕರುಣಾ ರಸವನ್ನು ಹೊರಹೊಮ್ಮಿಸುತ್ತದೆ. ನರಕ ನಡುಗಿಸದು, ಸ್ವರ್ಗ ಪ್ರಮೋದವಲ್ಲ ವೆಂಬ ಅಧ್ಯಾಯವೊಂದರಲ್ಲಿ , ಅವೆರಡೂ ನಮ್ಮಲ್ಲಿಯೇ ಇದೆ ಎಂದು ಯಾಜಿ ವಿವರಿಸುತ್ತಾರೆ. ಗಣಪತಿ ತನ್ನ ಸರಳತೆಯಿಂದ ಜನ ಸಾಮಾನ್ಯರಿಗೆ ಇಷ್ಟವಾಗುವ ದೇವತೆ ಎನ್ನುತ್ತಾರೆ. ಮಹಾ ಭಾರತದ ದ್ರೌಪದಿ ವಸ್ತ್ರಾಪಹರಣವನ್ನು ವಿವರಿಸುತ್ತ ಅವರು, ಕುರುಡು ಮತ್ತು ಕಿವುಡು ದೊರೆ ಮತ್ತು ಮೂಕ ಸಭಾಸದರ ಮಧ್ಯೆ ದ್ರೌಪದಿ ವೀರ ಮಹಿಳೆ ಎಂದು ಹೊಗಳುತ್ತಾರೆ. ರಾಮಾಯಣದ ಭರತ , ಹದಿನಾಲ್ಕು ವರ್ಷಗಳ ರಾಮನ ವನವಾಸದ ಸಂದರ್ಭದಲ್ಲಿ, ಒಳ್ಳೆ ಆಡಳಿತ ನೀಡಿ, ರಾಮ ರಾಜ್ಯದ ಸ್ಥಾಪನೆಗೆ ಭದ್ರ ಬುನಾದಿ ಹಾಕಿದ ನಾಯಕನಾಗಿ ಯಾಜಿಯವರಿಗೆ ಗೋಚರಿಸುತ್ತಾನೆ. ವಿಶ್ವಾಮಿತ್ರ ಋಷಿಗಳು ರಾಮನ ವನವಾಸದ ಸಂದರ್ಭದಲ್ಲಿ ಉತ್ತಿಷ್ಠ, ಉತ್ತಿಷ್ಠ ಎನ್ನುತ್ತಾ ರಾಮನಲ್ಲಿ ರಾಮತ್ವವನ್ನು ಜಾಗೃತಗೊಳಿಸುವವರಾಗಿ ಕಾಣುತ್ತಾರೆ. ದಾಂಪತ್ಯದ ಕುರಿತಾದ ಲೇಖನ ಮತ್ತು ಚಿಗುರೆಲೆ ಮೂಡಿದಾಗ ಸಂತೋಷದಿಂದ ಹಣ್ಣೆಲೆ ಜಾರಬೇಕು ಎಂಬ ಸಂದೇಶ ನೀಡುವ ವೃದ್ಧಾಪ್ಯದ ಕುರಿತಾದ ಲೇಖನಗಳನ್ನು ಓದಿಯೇ ಖುಷಿ ಪಡಬೇಕು. ಇವು ಪುಸ್ತಕದ ಕೆಲ ಸ್ಯಾಂಪಲ್ ಗಳು. ಯಾಜಿಯವರು ಭಾಷೆಯನ್ನು ಸಮರ್ಥವಾಗಿ ದುಡಿಸುತ್ತಾರೆ. ಕತೆ, ಉಪಕತೆಯ ಮೂಲಕ ಶುಷ್ಕವಾಗಬಹುದಾದ ವಿಚಾರವನ್ನೂ ವಿಷಯ ಗಾಂಭೀರ್ಯಕ್ಕೆ ಬಾಧೆ ಬರದ ರೀತಿಯಲ್ಲಿ ರಸವತ್ತಾಗಿ ಹೇಳುವ ಕಲೆ ಯಾಜಿಯವರಿಗೆ ಸಾಧಿಸಿದೆ. ಓದುಗರು ಪುಸ್ತಕವನ್ನು ಓದಿಯೇ ಆ ರಸಸ್ವಾದವನ್ನು ಪಡೆಯಬೇಕು