ಅನುವಾದಕನ ಮಾತು
ಹತ್ತಾರು ವರ್ಷಗಳ ಹಿಂದೆ ನನ್ನ ಆತ್ಮೀಯ ಸ್ನೇಹಿತರಾಗಿದ್ದ ಎಂ.ಎನ್.ರಾಯಣ್ಣವರ್ ಝೆರಾಕ್ಸ್ ಮಾಡಿಕೊಂಡು ತಂದಿದ್ದ ಒಂದಷ್ಟು ಹಾಳೆಗಳನ್ನು ನನಗೆ ನೀಡಿದರು. ಅವು ಮರಾಠಿ ಭಾಷೆಯಲ್ಲಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್‌ರವರ ಅಪ್ರಕಟಿತ ಭಾಷಣಗಳು. ಡಾ. ಬಾಬಾಸಾಹೇಬ ಅಂಬೇಡ್ಕರ್‌ರ ಈ ಅಪ್ರಕಟಿತ ಭಾಷಣಗಳು ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿದ್ದ ಸಮಗ್ರ ಅಂಬೇಡ್ಕರ್ ಸಂಪುಟದಲ್ಲಿ ಅಡಕವಾಗಿರಲಿಲ್ಲ. ಡಾ. ಅಂಬೇಡ್ಕರ್‌ರು ಕಾಲಕಾಲಕ್ಕೆ ಮಾಡಿದ ಈ ಭಾಷಣಗಳು ಆ ಕಾಲದಲ್ಲಿ ಅಲ್ಲೋಲಕಲ್ಲೋಲವನ್ನೇ ಉಂಟು ಮಾಡಿದ್ದವು. ಅವರ ಭಾಷಣಗಳಿಂದ ಸನಾತನವಾದಿಗಳು ಕೃದ್ಧರಾಗುತ್ತಿದ್ದರು. ಸಾವರ್ಕರರಂತಹ ಉಗ್ರ ಹಿಂದೂವಾದಿಗಳು ಅಂಬೇಡ್ಕರ್‌ರ ಭಾಷಣಗಳನ್ನು ತೀವ್ರವಾಗಿ ಖಂಡಿಸುತ್ತಿದ್ದರು. ಎಂ.ಎನ್.ರಾಯಣ್ಣವರ್‌ರಿಗೆ ಈ ಭಾಷಣಗಳು ಕನ್ನಡದಲ್ಲಿ ಅನುವಾದಗೊಳ್ಳಬೇಕೆಂಬ ಇಚ್ಛೆ ಇತ್ತು. ಈ ಕೆಲಸವನ್ನು ಅವರು ನನಗೆ ವಹಿಸಿಕೊಟ್ಟರು. ಬಾಬಾಸಾಹೇಬರ ಈ ಭಾಷಣಗಳು ಪುಸ್ತಕರೂಪದಲ್ಲಿ ಪ್ರಕಟವಾಗಿರಲಿಲ್ಲ. ಕೆಲವು ಭಾಷಣಗಳು ಬಾಬಾಸಾಹೇಬರೇ ಸಂಪಾದಕರಾಗಿದ್ದ ಜನತಾ, ಬಹಿಷ್ಕೃತ ಭಾರತ, ಮೂಕ ನಾಯಕ ಎಂಬೀ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.
ಒಂದೆರಡು ವರ್ಷಗಳಲ್ಲಿ ನಾಗಪುರದ ಪ್ರಕಾಶನ ಸಂಸ್ಥೆಯೊಂದು ಡಾ. ಬಾಬಾಸಾಹೇಬ ಅಂಬೇಡ್ಕರಾಂಚೀ ಗಾಜಲೇಲೆ ಭಾಷಣೇ ಎಂಬ ಪುಸ್ತಕವೊಂದನ್ನು ಮರಾಠಿಯಲ್ಲಿ ಪ್ರಕಟಿಸಿತು. ಸುದೈವವೆಂಬಂತೆ ಈ ಅಪ್ರಕಟಿತ ಭಾಷಣಗಳು ಈ ಕೃತಿಯಲ್ಲಿ ಪ್ರಕಟಗೊಂಡಿದ್ದವು. ಈಗ ಅವು ಕನ್ನಡಕ್ಕೆ ಬರುತ್ತಿವೆ. ಈ ಭಾಷಣಗಳ ಕನ್ನಡ ಪ್ರಕಟಣೆಯ ಕಾಲದಲ್ಲಿ ಈ ಕೆಲಸಕ್ಕೆ ಒತ್ತಾಸೆ ನೀಡಿದ್ದ ಗೆಳೆಯ ರಾಯಣ್ಣವರ್ ನಮ್ಮಲ್ಲಿಲ್ಲವೆಂಬ ವ್ಯಸನ ನನಗಿದೆ. ಅವರ ಅಭಿಮಾನಕ್ಕೆ ನಾನು ಮೌನದಲ್ಲಿಯೇ ವಂದಿಸುವೆ.
ಈ ಸಂಗ್ರಹದಲ್ಲಿ ಬಾಬಾಸಾಹೇಬರು ಆರಂಭದಲ್ಲಿ ಮಾಡಿದ ಹಲಕೆಲ ಭಾಷಣಗಳ ಜೊತೆಗೆ ಅವರು ಸಾರಾನಾಥದಲ್ಲಿ ಮಾಡಿದ ಕೊನೆಯ ಐತಿಹಾಸಿಕ ಭಾಷಣವೂ ಅಡಕವಾಗಿದೆ. ಅವರ ಮಾತುಗಳಲ್ಲಿ ಅವರಿಗೆ ದಲಿತರ ಬಗ್ಗೆ ಇದ್ದ ಕಳಕಳಿ, ಪ್ರೀತಿ ಹಾಗೂ ಅಸ್ವಸ್ಥತೆ(ಡಿesಣಟessಟಿess) ಗೊತ್ತಾಗುತ್ತದೆ. ಬೌದ್ಧ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದ ಬಾಬಾಸಾಹೇಬರು ತಮ್ಮ ಭಾಷಣಗಳಲ್ಲಿ ಅದರ ತಿರುಳನ್ನು ಹೇಳಿದ್ದಾರೆ. ಕೆಲವು ಸಂದರ್ಭಗಳಲ್ಲಿ ಬಹುಜನ ಸಮಾಜಕ್ಕೆ ಭೌತಿಕ ಲಾಭವಾಗುವಂತಿದ್ದರೆ ಕಾಂಗ್ರೆಸ್‌ನಂತಹ ವೈರಿಯೊಂದಿಗೂ ಒಪ್ಪಂದ ಮಾಡಿಕೊಳ್ಳಬಹುದೆಂಬ ಚಾಣಕ್ಯ ತಂತ್ರವನ್ನು ಸ್ಪಷ್ಟೀಕರಿಸುತ್ತಾರೆ. ೧೯೩೫ರ ಭಾರತ ಸರ್ಕಾರದ ಕಾಯ್ದೆಯ ಪ್ರಕಾರ ಮತದಾನದ ಹಕ್ಕು ಕೇವಲ ಪದವೀಧರರಿಗೆ ಮತ್ತು ತೆರಿಗೆಯನ್ನು ತುಂಬುವ ಧನಿಕರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಭಾರತದ ಸಂವಿಧಾನವನ್ನು ರಚಿಸುವಾಗ ಬಾಬಾಸಾಹೇಬರು ಭಾರತದ ಪ್ರಜೆಗಳಿಗೆಲ್ಲ ಈ ಸೌಲಭ್ಯವನ್ನು ವಿಸ್ತರಿಸಿದರಲ್ಲದೇ ವಯಸ್ಕ ಮತದಾನದ ಪದ್ಧತಿಯನ್ನು ಜಾರಿಗೆ ತಂದರು. ಔಟಿe mಚಿಟಿ, ಔಟಿe ಗಿoಣe ಚಿಟಿಜ ಔಟಿe ಗಿಚಿಟue ಇದು ಬಾಬಾಸಾಹೇಬರು ಭಾರತದ ಪ್ರಜಾಪ್ರಭುತ್ವಕ್ಕೆ ನೀಡಿದ ಮಹಾನ್ ಕೊಡುಗೆ. ಬಾಬಾಸಾಹೇಬರು ಬರೀ ದಲಿತ ಜನಾಂಗದ ನಾಯಕರಾಗಿರಲಿಲ್ಲ. ಅವರಿಲ್ಲದಿದ್ದಿದ್ದರೆ ಹಿಂದುಳಿದ ವರ್ಗಗಳಿಗೆ ಸೇರಿದ ಕಲ್ಯಾಣಸಿಂಗ್, ಉಮಾಭಾರತಿ, ಕರ್ಪೂರಿ ಠಾಕುರ, ದೇವರಾಜ ಅರಸು, ಬಂಗಾರಪ್ಪ, ಮೊಯ್ಲಿ, ಸಿದ್ಧರಾಮಯ್ಯ ಮುಂತಾದವರು ಮುಖ್ಯಮಂತ್ರಿಗಳಾಗುತ್ತಿರಲಿಲ್ಲ.
ಬಾಬಾಸಾಹೇಬರ ಈ ಭಾಷಣಗಳನ್ನು ತುಂಬ ಶ್ರದ್ಧೆಯಿಂದ, ಪ್ರೀತಿಯಿಂದ, ಅಭಿಮಾನದಿಂದ ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ಹೊಸಪೇಟೆಯ ಯಾಜಿ ಪ್ರಕಾಶನದ ಗಣೇಶ ಯಾಜಿ ಮತ್ತು ಸವಿತಾ ಯಾಜಿ ಅಷ್ಟೇ ಪ್ರೀತಿ, ಅಭಿಮಾನಗಳಿಂದ ಬಹುಸುಂದರವಾಗಿ ಅಚ್ಚು ಹಾಕಿದ್ದಾರೆ. ಗಣೇಶ ಯಾಜಿ ಮತ್ತು ಪ್ರಕಾಶನದ ಒಡತಿ ಸವಿತಾ ಯಾಜಿ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಬಾಬಾಸಾಹೇಬರ ಈ ಅಪ್ರಕಟಿತ ಭಾಷಣಗಳ ಬಗ್ಗೆ ದೇವನೂರ ಮಹಾದೇವ, ಸಿದ್ಧಲಿಂಗಯ್ಯ, ಅರವಿಂದ ಮಾಲಗತ್ತಿ, ಕಾಳೇಗೌಡ ನಾಗವಾರ, ಅರ್ಜುನ ಗೊಳಸಂಗಿ, ಕುಂ.ವೀರಭದ್ರಪ್ಪ, ರಾಘವೇಂದ್ರ ಪಾಟೀಲ, ಬರಗೂರ ರಾಮಚಂದ್ರಪ್ಪ, ಎಂ.ಎಂ.ಕಲಬುರ್ಗಿ, ಗುರುಲಿಂಗ ಕಾಪಸೆ, ಚಂದ್ರಶೇಖರ ಕಂಬಾರ ಮುಂತಾದ ಪ್ರಭೃತಿಗಳಿಗೆ ಹೇಳಿದಾಗ ಅವರೆಲ್ಲ ಥ್ರಿಲ್ರಾಗಿ ಆದಷ್ಟು ಬೇಗ ಕೃತಿ ಹೊರಗೆ ಬರಲಿಯೆಂದು ಹಾರೈಸಿದರು. ಇವರೆಲ್ಲರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಗೆಳೆಯರಾದ ಸತೀಶ ಕುಲಕರ್ಣಿ, ಮನು ಬಳಿಗಾರ, ರಾಮಕೃಷ್ಣ ಮರಾಠೆ, ರವಿ ಕೋಟಾರಗಸ್ತಿ, ಎಂ.ಕೆ.ಜೈನಾಪುರ, ಎ.ಬಿ.ಘಾಟಗೆ, ಶಿವರುದ್ರ ಕಲ್ಲೋಳಿಕರ್, ಅರವಿಂದ ಮೂಲಿಮನಿ, ಮಹಾಂತೇಶ ಚಲವಾದಿ, ಸುಬ್ರಾವ ಎಂಟೆತ್ತಿನವರ, ಅಶೋಕ ಐನಾವರ ಅವರ ಪ್ರೀತಿಗೆ ನನ್ನ ನೆನಕೆಗಳು.
ಪತ್ನಿ ಸುಮಾ, ಮಕ್ಕಳಾದ ಸಂಸ್ಕೃತಿ ರಾಕೇಶ ರಾಮಗಡ ಹಾಗೂ ಶ್ರೇಯಸ್ ಅವರುಗಳ ಅದಮ್ಯ ಪ್ರೀತಿಗೆ ಕೃತಜ್ಞತೆಗಳು.
–ಸರಜೂ ಕಾಟ್ಕರ್
ಐದನೆಯ ಆವೃತ್ತಿಗೆ ಒಂದೆರಡು ಮಾತು
ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಬಗ್ಗೆ ಇತ್ತೀಚಿಗೆ ಬಹಳಷ್ಟು ಚರ್ಚೆ, ವಾದ-ವಿವಾದ ನಡೆಯುತ್ತಿರುವ ಸಂದರ್ಭದಲ್ಲಿಯೇ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರ ಬಹುಚರ್ಚಿತ ಸುಪ್ರಸಿದ್ಧ ಭಾಷಣಗಳು ಕೃತಿಯು ಐದನೆಯ ಮುದ್ರಣ ಕಾಣುತ್ತಿದೆ. ಇದು ಕನ್ನಡದ ಜನತೆ ಬಾಬಾಸಾಹೇಬರ ಬಗೆಗೆ ಇಟ್ಟ ಗೌರವ, ಅಭಿಮಾನಕ್ಕೆ ಸಾಕ್ಷಿಯಾಗಿದೆ. ಇತ್ತೀಚಿಗೆ ವಿಧಾನ ಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ಆಯ್ಕೆಗೊಂಡ ಅನೇಕ ಸದಸ್ಯರುಗಳು ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದು ಪ್ರಮಾಣ ವಚನವನ್ನು ಸ್ವೀಕರಿಸಿರುವುದು ಡಾ. ಬಾಬಾ ಸಾಹೇಬರ ವಿಚಾರ ಸರಣಿಗಳಿಗೆ ಸಲ್ಲಿಸಿದ ಗೌರವವೇ ಆಗಿದೆ.
ಡಾ. ಅಂಬೇಡ್ಕರ್‌ರು ಜಗತ್ತಿನಲ್ಲಿಯೇ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟ ಸಂವಿಧಾನವನ್ನು ಭಾರತಕ್ಕೆ ನೀಡಿದರು. ಸಂವಿಧಾನದ ಮೊದಲ ವಾಕ್ಯವೇ We ಣhe ಠಿeoಠಿಟe oಜಿ Iಟಿಜiಚಿ (ಭಾರತ ದೇಶದ ಪ್ರಜೆಗಳಾದ ನಾವು) ಎಂದಿದೆ. ಡಾ. ಅಂಬೇಡ್ಕರ್‌ರ ಸಂವಿಧಾನದಲ್ಲಿ ಮನುಷ್ಯನಿಗೆ ಮೊಟ್ಟಮೊದಲ ಸ್ಥಾನವಿದೆ. ಯಾವ ಜಗತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ರನ್ನು ಮನುಷ್ಯನೆಂದು ಗುರುತಿಸಲು ನಿರಾಕರಿಸಿತ್ತೋ ಆ ಜಗತ್ತಿನ ಸಕಲ ಜನರಿಗೂ ಡಾ. ಅಂಬೇಡ್ಕರ್‌ರು ನೀವುಗಳೆಲ್ಲ ಸರಿಸಮಾನರು; ನೀವುಗಳೆಲ್ಲ ಮನುಷ್ಯರು ಎಂದು ಹೇಳಿರುವುದು ಡಾ. ಬಾಬಾಸಾಹೇಬರ ಮಾನವೀಯ ಕಳಕಳಿಗೆ ಸಾಕ್ಷಿಯಾಗಿದೆ.
ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರ ಚಿಂತನೆಗಳು ಸಾರ್ವಕಾಲಿಕ ಚಿಂತನೆಗಳಾಗಿವೆ. ಯಾವ ರೀತಿ ೧೨ನೇ ಶತಮಾನದ ವಚನಕಾರರ ವಚನಗಳನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದೇ ರೀತಿಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಅವರ ಚಿಂತನೆಗಳು ಚಿರಕಾಲ ಬಾಳುವ ಚಿಂತನೆಗಳಾಗಿವೆ.
ಡಾ. ಬಾಬಾಸಾಹೇಬ್ರ ಬರೆಹಗಳ ವ್ಯಾಪ್ತಿಯನ್ನು ಅವಲೋಕಿಸಿದರೆ ನಿಜಕ್ಕೂ ಅಚ್ಚರಿ ಯಾಗುತ್ತದೆ. ಅವರು ಭಾಷೆಯ ಬಗ್ಗೆ, ಸಂಸ್ಕೃತಿ ಬಗ್ಗೆ, ಆರ್ಥಿಕತೆ ಬಗ್ಗೆ, ವೇದ ಪುರಾಣ ಶೃತಿ ಆಗಮಗಳ ಬಗ್ಗೆ, ಸರ್ವಧರ್ಮಗಳ ಬಗ್ಗೆ, ಜಾತಿಗಳ ಬಗ್ಗೆ, ಸಮಾನತೆಯ ಬಗ್ಗೆ, ರಾಜಕಾರಣದ ಬಗ್ಗೆ, ಸಾಮಾಜಿಕ ಕಳಕಳಿಯ ಬಗ್ಗೆ ಹೀಗೆ ಅನೇಕ ವಿಷಯಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಅವರ ಭಾಷಣಗಳು ಪ್ರಬುದ್ಧ ವಿಚಾರಗಳನ್ನೊಳಗೊಂಡ ಮಾತುಗಳಾಗಿವೆ. ಸರ್ವಶ್ರೇಷ್ಠ ರಾಷ್ಟ್ರ ಪ್ರೇಮಿಗಳಾದ ಅವರು ರಾಷ್ಟ್ರದ ಸಮಗ್ರತೆಯ ಬಗೆಗೂ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದಾರೆ. ಬುದ್ಧ, ಬಸವನ ನಂತರದ ಕೊಂಡಿಯಾಗಿ ಡಾ. ಬಾಬಾಸಾಹೇಬರು ಕಾಣಿಸಿಕೊಂಡಿದ್ದಾರೆ.
ಇಂತಹ ಮಹಾಪುರುಷನ ಮರಾಠಿ ಭಾಷೆಯಲ್ಲಿದ್ದ ಹಲಕೆಲ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸುವ ಭಾಗ್ಯವು ನನಗೆ ಒದಗಿ ಬಂದಿತು. ಅವರ ಭಾಷಣಗಳನ್ನು ತುಂಬ ಅಭಿಮಾನದಿಂದ, ಶ್ರದ್ಧೆಯಿಂದ ಕನ್ನಡಕ್ಕೆ ತಂದಿರುವೆ. ಕನ್ನಡ ಓದುಗರು ತೆರೆದ ತೋಳುಗಳಿಂದ ನನ್ನ ಈ ಪ್ರಯತ್ನವನ್ನು ಸ್ವಾಗತಿಸಿದರು. ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರ ಈ ಅಭಿಮಾನಿಗಳಿಗೆಲ್ಲ ನಾನು ಕೃತಜ್ಞನಾಗಿದ್ದೇನೆ.
ಈ ಕೃತಿಯ ಮೊದಲನೆಯ, ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ಆವೃತ್ತಿಯನ್ನು ಪ್ರಕಟಿಸಿದ ಹೊಸಪೇಟೆಯ ಯಾಜಿ ಪ್ರಕಾಶನವು ಐದನೆಯ ಆವೃತ್ತಿಯನ್ನೂ ಪ್ರಕಟಿಸುತ್ತಿದೆ. ಯಾಜಿ ಪ್ರಕಾಶನದ ಸವಿತಾ ಯಾಜಿ ಅವರಿಗೆ ಹಾಗೂ ಗೆಳೆಯ ಗಣೇಶ ಯಾಜಿ ಅವರಿಗೆ ಕೃತಜ್ಞನಾಗಿದ್ದೇನೆ. ಅವರ ಮೂಲಕ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ರ ವಿಚಾರಗಳು ಇಂದು ಮನೆಮನೆಗೆ ತಲುಪಿವೆ. ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು ಸಲ್ಲುತ್ತವೆ.
ಪತ್ನಿ ಸುಮಾ ಹಾಗೂ ಉಳಿದ ಆತ್ಮೀಯರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿರುವೆ.
ಕೊಂಡು ಓದುವ ಗ್ರಂಥಪ್ರೇಮಿ ಓದುಗರಿರದಿದ್ದರೆ ಈ ಕೃತಿ ಐದನೆಯ ಆವೃತ್ತಿಯಾಗಿ ಪ್ರಕಟವಾಗಲು ಸಾಧ್ಯವಾಗುತ್ತಿರಲಿಲ್ಲ ಅವರಿಗೂ ನನ್ನ ನೆನಕೆಗಳು.
ಡಾ. ಸರಜೂ ಕಾಟ್ಕರ್
Our Books

Reviews
There are no reviews yet.