ಮುನ್ನುಡಿ
ಡಾ. ಪುರುಷೋತ್ತಮ ಬಿಳಿಮಲೆ ಅವರು ವಿಜಯ ಕರ್ನಾಟಕ’ದಲ್ಲಿ ನಿಯತವಾಗಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಕಲನ ಬಹುರೂಪ’ಕ್ಕೆ ಮುನ್ನುಡಿಯನ್ನು ಬರೆಯುವ ಕೆಲಸ ಸಂತೋಷದ್ದು ಮತ್ತು ಸವಾಲಿನದ್ದೂ ಹೌದು. ನಾನು ಹಿಂದೆ ಮುಂಗಾರು’ ಮತ್ತು ಪ್ರಜಾವಾಣಿ’ ಪತ್ರಿಕೆಗಳಿಗೆ ಕೆಲವು ಕಾಲ ಅಂಕಣಬರಹ ಬರೆದ ನನ್ನ ಅನುಭವ ಅಂತಹ ನಿಯತಕಾಲಿಕ ಬರವಣಿಗೆಗಳ ಸಂಕಷ್ಟವನ್ನು ನೆನಪು ಮಾಡಿಕೊಡುತ್ತದೆ. ಸಕಾಲಕ್ಕೆ ಬರಹವನ್ನು ಕೊಡುವುದರಿಂದ ತೊಡಗಿ, ನಿರ್ದಿಷ್ಟ ಪದಗಳ ಒಳಗೆ ಅದನ್ನು ಅಡಕ ಮಾಡುವುದರಿಂದ ಮುಂದುವರಿದು, ಪ್ರತೀ ಬಾರಿಯೂ ಹೆಸತಾಗಿ ಮತ್ತು ವಿಶಿಷ್ಟವಾಗಿ ಹಾಗೂ ಓದುಗರಿಗೆ ನೇರವಾಗಿ ಸಂವಹನವಾಗಬಲ್ಲ ರೀತಿಯಲ್ಲಿ ಬರೆಯುವುದು ಬಲು ದೊಡ್ಡ ಸಾಹಸ. ಹಾಗಾಗಿ ಪತ್ರಿಕೆಗಳ ಅನೇಕ ಅಂಕಣಗಳು ವಿಷಯದ ಏಕತಾನತೆಯಿಂದ, ಹೆಸ ಒಳನೋಟಗಳ ಕೊರತೆಯಿಂದ, ಅನುಭವ ಮತ್ತು ಅಧ್ಯಯನಶೀಲತೆಯ ಮಿತಿಯಿಂದ, ಸಂವಹನಶೀಲತೆಯ ಬಿರುಕಿನಿಂದ ಬಳಲುತ್ತವೆ. ಆದರೆ ಡಾ. ಬಿಳಿಮಲೆ ಈ ಎಲ್ಲ ಸವಾಲುಗಳನ್ನು ಎದುರಿಸಿ ಅವುಗಳನ್ನು ಮೀರಿ, ಸುಮಾರು ಮೂರು ವರ್ಷಗಳ ಕಾಲ ಅವರ ಅಂಕಣವನ್ನು ಓದುಗರು ಸದಾ ಎದುರು ನೋಡುವಂತೆ ಬರೆಯುತ್ತ ಬಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪರಿಸರದ ಬಂಟಮಲೆ ಕಾಡಿನ ಬಳಿಯ ವಾಟೆಕಜೆ ಮನೆಯಲ್ಲಿ ಹುಟ್ಟಿ ಬೆಳೆದ ಪುರುಷೋತ್ತಮ ಮುಂದೆ ಬಿಳಿಮಲೆ, ಪಂಜ, ಸುಳ್ಯ, ಮಂಗಳೂರು, ಹಂಪಿಗಳಲ್ಲಿ ಕಲಿತು ಕಲಿಸಿ ಕಲೆತು ಕೊನೆಗೆ ದೆಹಲಿಗೆ ಬಂದಿದ್ದಾರೆ. ಹೀಗೆ ಹಳ್ಳಿಯಿಂದ ದಿಲ್ಲಿಗೆ ಮೆಟ್ಟಿಲುಗಳನ್ನು ಏರುತ್ತಾ ಸಾಗಿದ್ದಾರೆ. ಈಗ ದೆಹಲಿಯ ಅಂತಾರಾಷ್ಟ್ರೀಯ ಅಧ್ಯಯನ ಕೇಂದ್ರದಲ್ಲಿ ಕುಳಿತುಕೊಂಡು ಅಂಕಣಗಳನ್ನು ಬರೆಯುವಾಗ ಅವರ ನೆನಪುಗಳು ಅವರ ಹಳ್ಳಿಯಿಂದ ಆರಂಭವಾಗುತ್ತವೆ. ಬಾಲ್ಯದ ನೆನಪುಗಳನ್ನು ಮರುನೆನೆದುಕೊಳ್ಳುವ ಪ್ರಕ್ರಿಯೆಗೆ ಬಹಳ ಒಳ್ಳೆಯ ಅವಕಾಶವೆಂದರೆ ಅಂಕಣ ಬರಹ. ಅದು ಗತಕಾಲದ ಅನುಭವಗಳ ಕಥನದ ಮೂಲಕ ವರ್ತಮಾನ ಕಾಲಕ್ಕೆ ಪ್ರವೇಶ ಮಾಡಿ, ಒಂದು ಕ್ಷಣ ಬೆರಗನ್ನು ಮತ್ತು ವಿಷಾದವನ್ನು ಒಟ್ಟಿಗೇ ಪಡೆಯುವ ಅಕ್ಷರ ಬಯಲಾಟ’. ಬಹಳ ಮಂದಿ ಹೆಸ ಮೆಟ್ಟಿಲುಗಳನ್ನು ಏರುತ್ತಾ ಹೆದ ಹಾಗೆ ಹಳೆಯ ಮೆಟ್ಟಿಲುಗಳನ್ನು ಮರೆತುಬಿಡುತ್ತಾರೆ, ಇಲ್ಲವೇ ಏರಿದ ಏಣಿಗಳನ್ನು ಕೆಳಕ್ಕೆ ತಳ್ಳಿಬಿಡುತ್ತಾರೆ. ಆದರೆ ಪುರುಷೋತ್ತಮ ಹಾಗೆ ಆಗಿಲ್ಲ ಎನ್ನುವುದೇ ಅವರ ವ್ಯಕ್ತಿತ್ವದ ಮತ್ತು ಬರವಣಿಗೆಯ ಅನನ್ಯತೆ.
ಬಿಳಿಮಲೆ ತಮ್ಮ ಅಂಕಣ ಬರಹಗಳನ್ನು ಐದು ವಿಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಇದು ಕಾಲಾನುಕ್ರಮಣಿಕೆಯ ದೃಷ್ಟಿಯಿಂದ ಪುರುಷೋತ್ತಮರ ಬದುಕಿನ ಪಂಚಸ್ಥಲಗಳ ಹಾಗೆ ಕಾಣಿಸಿಕೊಳ್ಳುತ್ತದೆ. ಆದರೆ ಅವರು ಈ ಐದೂ ಸ್ಥಲಗಳಲ್ಲಿ ಇವತ್ತೂ ಜೀವಂತವಾಗಿದ್ದಾರೆ. ಅವರ ಬಾಲ್ಯದ ನೆನಪುಗಳ ಬರಹಗಳನ್ನು ಮತ್ತೆ ಮತ್ತೆ ಓದಿ ನಾನು ಸಂಭ್ರಮಪಟ್ಟಿದ್ದೇನೆ. ತಮ್ಮ ಬಂಟಮಲೆ ಮನೆಯ ಪಕ್ಕದ ಕಿರುತೊರೆ ಮತ್ತು ಅದರ ಸುತ್ತ ಇರುವ ಬಗೆಬಗೆಯ ಕಥನಗಳು ಮತ್ತು ಆ ಪರಿಸರದಲ್ಲಿ ಬೆರಗುಗಣ್ಣಿನಿಂದ ನೋಡಿದ ಯಕ್ಷಗಾನ ಆಟಗಳು -ಇವೆಲ್ಲ ಪುರುಷೋತ್ತಮ ಅವರ ಮನಸ್ಸಿನಲ್ಲಿ ದಟ್ಟವಾಗಿ ಅಚ್ಚೊತ್ತಿ, ಅವರು ರಾಚನಿಕವಾಗಿ ಗಂಗೆ ಯಮುನೆಯಂತಹ ದೊಡ್ಡ ನದಿಗಳ ಬಗ್ಗೆ ಮತ್ತು ಜಾಗತಿಕ ರಂಗಭೂಮಿಯ ಬಗ್ಗೆ ಕುತೂಹಲದಿಂದ ಚರ್ಚಿಸಲು ಅವಕಾಶ ಕಲ್ಪಿಸುತ್ತವೆ. ನಾವು ಇವತ್ತು ಹೇಳುವ ದೊಡ್ಡ ಶಬ್ದವಾದ ಸಂಸ್ಕೃತಿ’ ಎನ್ನುವುದು ಕಿರುತೊರೆ, ಕಾಗೆ ಮುಟ್ಟಿದ ಕತೆ, ಇಲಿಗಳು, ಬಿದಿರಕ್ಕಿ, ಯಕ್ಷಗಾನ, ಅರೆಭಾಷೆ -ಇವುಗಳ ಮೂಲಕವೇ ಬೆಳೆಯುತ್ತ ಅನುಭವವೇದ್ಯವಾಗುತ್ತ ಬರುತ್ತದೆ. ನಾವು ಅಧ್ಯಯನ ಶಿಸ್ತು ಎಂದು ಭಾವಿಸುವ ಜಾನಪದ’ ಆರಂಭವಾಗುವುದೇ ಕುಟ್ಟ ಬ್ಯಾರಿಯ ಪುಟ್ಟಕತೆ, ಚೌರಿಗರ ಕೃಷ್ಣಪ್ಪನ ಕೀಚಕ ವೇಷ, ಕಳಕೊಂಡ ನಾಲ್ಕಾಣೆ ಮತ್ತು ಯಕ್ಷಗಾನ -ಇಂತಹ ಬಾಲ್ಯದ ಅನುಭವಗಳ ಮೂಲಕ. ಹಾಗಾಗಿಯೇ ಎರಡನೆಯ ಭಾಗದ ಜಾನಪದ ಅಧ್ಯಯನದ ಬೇರುಗಳು ಮೊದಲನೆಯ ಹಂತದ ಬದುಕಿನ ಚೇಷ್ಟೆಗಳಲ್ಲಿವೆ.
ಪುರುಷೋತ್ತಮ ಅವರು ಸುಳ್ಯದ ನೆಹರು ಸ್ಮಾರಕ ಕಾಲೇಜಿನಲ್ಲಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾಗ ಯಕ್ಷಗಾನ ಮತ್ತು ನಾಟಕಗಳಲ್ಲಿ ಪಾತ್ರ ಮಾಡುವ ಹುಮ್ಮಸ್ಸಿನ ಜೊತೆಗೆ ಬಂಡಾಯ ಸಂಘಟನೆಗಳಲ್ಲಿ ಸೈದ್ಧಾಂತಿಕವಾಗಿ ತೊಡಗಿಸಿ ಕೊಂಡಿದ್ದರು. ಈ ಮನೋಧರ್ಮ ಅವರ ಸುಪ್ತಪ್ರಜ್ಞೆಯಲ್ಲಿ ಬಾಲ್ಯದಿಂದಲೇ ಬಂದುದು ಎನ್ನುವುದು ಅವರ ವಿದ್ಯೆಯಿಲ್ಲದ ಜಾತಕ ಮತ್ತು ನನ್ನ ಶಾಲೆ’ ಎಂಬ ಬರಹದಲ್ಲಿ ಸೂಚಿತವಾಗಿದೆ. ಮನೆಮುರುಕರು ಮತ್ತು ಮಂಗಳೂರು ಮಲ್ಲಿಗೆ’ ಎಂಬ ಲೇಖನ ಈ ದೃಷ್ಟಿಯಿಂದ ಪ್ರಾದೇಶಿಕ ಸಂಸ್ಕೃತಿಯನ್ನು ನೋಡುವಂಥದ್ದು. ಕರಾವಳಿಯ ಮೂರು ಕೋಮುಗಳ ನಡುವಿನ ಸಾಮರಸ್ಯವನ್ನು ಅವರು ಮಂಗಳೂರು ಮಲ್ಲಿಗೆ’ಯ ರೂಪಕದ ಮೂಲಕ ಹೇಳುವ ಬಗೆ ಮಾರ್ಮಿಕವಾದುದು- ಕರಾವಳಿಯ ಪುಟ್ಟ ಮಂಗಳೂರು ಮಲ್ಲಿಗೆ ಎಲ್ಲೆಡೆಯು ಪ್ರಸಿದ್ಧ. ಅದನ್ನು ಒಂದು ಕೋಮಿನವರು ಬೆಳೆಸುತ್ತಾರೆ, ಇನ್ನೊಂದು ಕೋಮಿನವರು ಸಾಗಾಣಿಕೆ ಮಾಡುತ್ತಾರೆ, ಮತ್ತೊಂದು ಕೋಮಿನವರು ಮಾರಾಟ ಮಾಡುತ್ತಾರೆ. ಮಲ್ಲಿಗೆಯ ಪರಿಮಳ ಎಲ್ಲೆಡೆಯೂ ಪಸರಿಸಿಕೊಳ್ಳುತ್ತದೆ. ಈ ಅರ್ಥದಲ್ಲಿ ಮಂಗಳೂರು ಮಲ್ಲಿಗೆಯು ಕೋಮು ಸೌಹಾರ್ದತೆಗೊಂದು ಸಂಕೇತ.
ಅರೆಭಾಷೆಯನ್ನು ಮಾತೃ ಭಾಷೆಯಾಗಿ ಉಳ್ಳ ಪುರುಷೋತ್ತಮ ಪರಿಸರದ ಭಾಷೆ ತುಳುವಿನ ಬಗ್ಗೆ ನಡೆಸಿದ ಅಧ್ಯಯನ ಮತ್ತು ಪ್ರಕಟಿಸಿದ ಕಾಳಜಿ ಅಪೂರ್ವವಾದುದು. ತುಳು ಭಾಷೆಗೆ ಸಂವಿಧಾನದ ಮಾನ್ಯತೆ’ ಎನ್ನುವ ಲೇಖನದಲ್ಲಿ ತುಳುಭಾಷೆಯ ಶಕ್ತಿಯನ್ನೂ ತುಳುವರ ದೌರ್ಬಲ್ಯವನ್ನೂ ಒಟ್ಟಿಗೆ ಅನಾವರಣ ಮಾಡುತ್ತಾರೆ. ಬಾಲ್ಯದಿಂದಲೇ ಯಕ್ಷಗಾನಕ್ಕೆ ತೆರೆದುಕೊಂಡ ಅವರು ಅದರ ಮಾಯಾಲೋಕವನ್ನೂ ವಾಸ್ತವ ಜಗತ್ತನ್ನೂ ಸೂಕ್ಷ್ಮವಾಗಿ ಗ್ರಹಿಸಿಕೊಂಡ ಬರಹಗಳು ಇಲ್ಲಿವೆ. ತಾಳಮದ್ದಲೆಯ ಭಾಷಾಲೋಕ ಮತ್ತು ತುಳು ಯಕ್ಷಗಾನದ ದೇಸಿಲೋಕ ಇವೆರಡನ್ನೂ ಸಾಮಾಜಿಕವಾಗಿ ವಿವರಿಸುವ ಕ್ರಮ ವಿಶಿಷ್ಟವಾದುದು.
ಬಹುರೂಪ’ದ ಎರಡನೆಯ ಭಾಗದಲ್ಲಿ ಬಿಳಿಮಲೆ ತಮ್ಮ ಊರು ಮತ್ತು ಜಿಲ್ಲೆಗಳನ್ನು ಮೀರಿ ಕರ್ನಾಟಕದ ವ್ಯಾಪ್ತಿಗೆ ಬರುತ್ತಾರೆ. ಕನ್ನಡ ಭಾಷೆ ಮತ್ತು ಕರ್ನಾಟಕದ ಜಾನಪದದ ಬಹುರೂಪಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕನ್ನಡ ಭಾಷೆಗೆ ರಾಷ್ಟ್ರೀಯ ಮತ್ತು ಜಾಗತಿಕ ಮನ್ನಣೆ’ ಎನ್ನುವ ಲೇಖನದಲ್ಲಿ ಕರ್ನಾಟಕದ ರಾಜಕೀಯ ಮತ್ತು ಆಡಳಿತದ ವ್ಯಕ್ತಿಗಳ ನಿರಾಸಕ್ತಿ ಹೇಗೆ ಕನ್ನಡಕ್ಕೆ ರಾಷ್ಟ್ರೀಯ ಮನ್ನಣೆ ದೊರೆಯಲು ಅಡ್ಡಿಯಾಗಿದೆ ಎನ್ನುವ ವಿವರಗಳು ದೊರೆಯುತ್ತವೆ. ಕನ್ನಡ ದೇಸಿ ಅಂದರೆ ನೀರುಳ್ಳಿ’ ಎನ್ನುವ ಬರಹ ಒಂದು ರೂಪಕವಾಗಿ ಕನ್ನಡ ಸಂಸ್ಕೃತಿಯ ಗ್ರಹಿಕೆಯ ಬಹುಬಗೆಯ ನೋಟಗಳನ್ನು ಧ್ವನಿಸುತ್ತದೆ. ಹೀಗೆ ಹೇಳುವಾಗಲೇ ಬಹುಧರ್ಮಗಳ ಸಂಕೀರ್ಣ ರೂಪವೇ ಕನ್ನಡ ಸಂಸ್ಕೃತಿ ಎನ್ನುವ ಧ್ವನಿ ಗಟ್ಟಿಯಾಗಿದೆ. ನೀರುಳ್ಳಿಯನ್ನು ಸುಲಿಯುತ್ತ ಬಂದು ಕೊನೆಗೆ ಏನೂ ಉಳಿಯದ ಸ್ಥಿತಿ ಬರುವ ಹಾಗೆ ಕರ್ನಾಟಕದ ಸಂಸ್ಕೃತಿಯಿಂದ ತಮಗೆ ಒಪ್ಪಿಗೆಯಾಗದ ಅಂಶಗಳನ್ನು ತಿರಸ್ಕರಿಸುವ ಅಪಾಯವನ್ನು ಇಲ್ಲಿ ಮಾರ್ಮಿಕವಾಗಿ ಸೂಚಿಸಲಾಗಿದೆ. ಕರ್ನಾಟಕದ ಜಾನಪದ ಅಧ್ಯಯನ, ಕರ್ನಾಟಕದ ಜಾತ್ರೆಗಳು, ಪುರಾಣಗಳು, ಕಲೆಗಳು -ಇವುಗಳನ್ನು ಕುರಿತ ಇಲ್ಲಿನ ಬರಹಗಳು ಕಿರಿದರೊಳ್ ಪಿರಿದರ್ಥವನ್ನು ಹೇಳುವ ಮಾದರಿಯವು. ಕುಮ್ಮಟದುರ್ಗ, ಮೈಲಾರಲಿಂಗ ಜಾತ್ರೆ, ಕಳಸದ ಕತೆ, ಲಿಖಿತ ಪುರಾಣಗಳು ಮತ್ತು ಜನಪದ ಪುರಾಣಗಳು, ಕನ್ನಡ ಪಂಚಭೂತಗಳು, ಕರ್ನಾಟಕದ ಐತಿಹ್ಯಗಳು -ಹೀಗೆ ಕರ್ನಾಟಕ ಜಾನಪದದ ಒಂದೊಂದು ವಿಷಯವೂ ಇಲ್ಲಿ ಸಂಕ್ಷಿಪ್ತವಾಗಿ ಚರ್ಚೆಗೆ ಒಳಗಾಗಿದೆ. ಕ್ಷೇತ್ರಕಾರ್ಯದ ಮಾಹಿತಿಯನ್ನು, ಜಾನಪದ ಅಧ್ಯಯನದ ಒಳನೋಟವನ್ನು ಮತ್ತು ಸಾಂಸ್ಕೃತಿಕ ಪ್ರವಾಸದ ಸೂಚನೆಯನ್ನು ಒಟ್ಟಿಗೆ ಕೊಡುವ ಸಮನ್ವಯದ ಮಾದರಿಯಲ್ಲಿ ಇಲ್ಲಿನ ಬರಹಗಳು ಇವೆ. ಕರ್ನಾಟಕ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ಏಕಿಲ್ಲ’ ಎಂಬ ಲೇಖನದ ರಚನೆಯು ಕನ್ನಡ ಭಾಷೆಗೆ ರಾಷ್ಟ್ರೀಯ ಮನ್ನಣೆ ಏಕಿಲ್ಲ ಎನ್ನುವ ಮಾದರಿಯದ್ದು. ಕೇರಳದಂತಹ ರಾಜ್ಯದ ಜೊತೆಗೆ ಹೆಲಿಸಿಕೊಂಡು ಜಾಗತಿಕಮಟ್ಟದಲ್ಲಿ ಕರ್ನಾಟಕವು ಗೈರುಹಾಜರಾಗುವುದಕ್ಕೆ ಇರುವ ರಾಜಕೀಯ ಕಾರಣಗಳನ್ನು ತುಂಬಾ ನೇರವಾಗಿ ಇಲ್ಲಿ ಪ್ರಸ್ತಾವಿಸಲಾಗಿದೆ. ಪ್ರಾದೇಶಿಕ ಪಕ್ಷಗಳು ಎನ್ನುವ ಹೆಸರಿನಲ್ಲಿ ಕರ್ನಾಟಕದಲ್ಲಿ ಮತ್ತು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಈಗ ನಡೆಯುತ್ತಿರುವ ಹೆಂದಾಣಿಕೆಯ ರಾಜಕೀಯ ಹೇಗೆ ಪ್ರಾದೇಶಿಕತೆ’ ಎನ್ನುವ ಪರಿಕಲ್ಪನೆಗೆ ಅವಹೇಳನ ಎನ್ನುವ ಸಂಗತಿಯನ್ನು ಸಮರ್ಪಕ ವಿವರಗಳೊಂದಿಗೆ ಚರ್ಚಿಸಲಾಗಿದೆ.
ಈ ಗ್ರಂಥದ ಮೂರನೆಯ ಭಾಗದಲ್ಲಿ ಬಿಳಿಮಲೆ ಅವರು ದೆಹಲಿಯಲ್ಲಿ ಕುಳಿತುಕೊಂಡು ಕರ್ನಾಟಕವನ್ನು ಮತ್ತು ಭಾರತವನ್ನು ನೋಡುತ್ತಾರೆ. ದೇಶದ ರಾಜಧಾನಿಯಾದ ದೆಹಲಿಯು ಅಧಿಕಾರದ ಕೇಂದ್ರವಾಗಿ ಮಾತ್ರವಲ್ಲದೆ, ರಾಜ್ಯಗಳ ಗುರುತುಗಳಿಗೆ ಬಯಲು ಆಗುವ ಇತಿಹಾಸದ ವಿವರಗಳನ್ನು ಕೊಡುತ್ತಾರೆ. ಹಾಗಾಗಿ ಕನ್ನಡದ ಗುರುತು, ಕನ್ನಡಿಗರ ವಲಸೆ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ, ಗಡಿ ದಾಟಿದ ಯಕ್ಷಗಾನ -ಇವೆಲ್ಲವನ್ನು ರಾಷ್ಟ್ರೀಯತೆಯ ಸಂಕೀರ್ಣ ಪರಿಕಲ್ಪನೆಯ ಒಳಗೆ ನೋಡುವ ದೃಷ್ಟಿಕೋನ ಕಾಣಿಸುತ್ತದೆ. ಸ್ಥಳೀಯತೆ ಮತ್ತು ಪ್ರಾದೇಶಿಕತೆಗಳು ತಮ್ಮ ಅನನ್ಯತೆಗಳನ್ನು ಉಳಿಸಿಕೊಂಡು ರಾಷ್ಟ್ರೀಯತೆಯ ಒಳಗೆ ಕ್ರಿಯಾಶೀಲ ಆಗುವುದು ಬಹಳ ಮುಖ್ಯ ವಾದುದು. ಆದ್ದರಿಂದಲೇ ರಾಷ್ಟ್ರೀಯ ದೃಷ್ಟಿಕೋನ ಎನ್ನುವುದು ಬಂಟಮಲೆ, ಬಿಳಿಮಲೆ, ಪಂಜ, ಸುಳ್ಯ, ತುಳುನಾಡು ಮತ್ತು ಕರ್ನಾಟಕ -ಇವನ್ನು ಬಿಟ್ಟು ಬೇರೆಯಾಗಿ ಇರಲು ಸಾಧ್ಯವಿಲ್ಲ.
ಬಹುರೂಪ’ದ ನಾಲ್ಕನೆಯ ಭಾಗದಲ್ಲಿ ಪುರಾಣ, ಇತಿಹಾಸ ಮತ್ತು ವರ್ತಮಾನಗಳನ್ನು ಮುಖಾಮುಖಿ ಮಾಡಿ ನದಿಗಳು, ಕ್ಷೇತ್ರಗಳು ಮತ್ತು ಪುರಾಣಕತೆಗಳನ್ನು ವಿವರಿಸಲಾಗಿದೆ. ಸಿಂಧೂ, ಗಂಗೆ, ಯಮುನೆ, ಸರಸ್ವತಿ ನದಿಗಳ ಸಂಕಥನಗಳು ಬಹುಮುಖಿ ಸಾಮಗ್ರಿಗಳ ವಿವೇಚನೆಯ ಮೂಲಕ ತುಂಬಾ ಮಹತ್ವದ್ದಾಗಿವೆ. ಈ ನಾಲ್ಕು ನದಿಗಳ ಪುರಾಣ, ಇತಿಹಾಸ ಮತ್ತು ವರ್ತಮಾನವನ್ನು ಬಿಳಿಮಲೆ ತಮ್ಮ ವ್ಯಾಪಕ ಅಧ್ಯಯನ ಮತ್ತು ಲವಲವಿಕೆಯ ಕ್ಷೇತ್ರಕಾರ್ಯದ ಮೂಲಕ ಹೆಸ ಪುರಾಣ ಕತೆಗಳಂತೆ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಕತೆ’ ಎನ್ನುವ ಪದ ಬಹಳ ಇಷ್ಟವಾದುದು-ಗಂಗೆಯ ಕತೆ, ಹನುಮಂತನ ಕತೆ, ಹಲವು ಮಹಾಭಾರತಗಳ ಕತೆ, ಮಧ್ಯಕಾಲೀನ ಭಾರತದ ಪ್ರೇಮಕತೆಗಳು -ಹೀಗೆ ನದಿ, ದೇವತೆ ಮತ್ತು ಪುರಾಣ ಸಂಬಂಧಿ ಕತೆಗಳು ಇಲ್ಲಿ ಬಹು ಪದರಗಳ ಜೋಡಣೆಯಿಂದ ಕಥನಗಳಾಗಿವೆ. ಮಥುರಾ, ವಾರಣಾಸಿ ಮತ್ತು ಕುರುಕ್ಷೇತ್ರಗಳ ಪುರಾಣ, ಇತಿಹಾಸ ಮತ್ತು ವರ್ತಮಾನಗಳ ವೈರುಧ್ಯಗಳು ಮತ್ತು ರೂಪಾಂತರಗೊಂಡ ಬಗೆಗಳು ಇಲ್ಲಿ ಜಾಹೀರುಗೊಂಡಿವೆ. ಹಾಗಾಗಿಯೇ ಅವರ ದೃಷ್ಟಿಯಲ್ಲಿ ಮಥುರೆಯಲ್ಲಿ ಕೃಷ್ಣ ಮಾರಾಟದ ವಸ್ತುವಾದರೆ, ಕುರೂಪಗೊಂಡದ್ದು ಕುರುಕ್ಷೇತ್ರ ಮತ್ತು ಬೆಳಕಿಲ್ಲದ ನಗರ ವಾರಣಾಸಿ. ಸಾಂಸ್ಥಿಕ ಧರ್ಮಗಳು ವ್ಯಾಪಾರೀ ಧರ್ಮಗಳಾಗುವ ಅಪಮೌಲ್ಯದ ಕತೆಗಳು ಇಲ್ಲಿನ ಬರಹಗಳು.
ಬಹುರೂಪ’ದ ಕೊನೆಯ ಭಾಗದ ಲೇಖನಗಳು ವಿಶ್ವದ ಹರಹಿನಲ್ಲಿ ಬಿಳಿಮಲೆ ಕಂಡದ್ದು ಮತ್ತು ಕೇಳಿದ್ದು. ಜಪಾನಿನಲ್ಲಿ ಕಂಡ ಆಚರಣೆಗಳು ಮತ್ತು ಕೇಳಿದ ಕತೆಗಳು ಅವರಿಗೆ ಅವರ ಬಾಲ್ಯವನ್ನು ನೆನಪಿಸುತ್ತವೆ. ಜಾಗತಿಕ ಸಂಸ್ಕೃತಿಯನ್ನು ಸ್ಥಳೀಯ ಸಂಸ್ಕೃತಿಯ ಜೊತೆಗೆ ಮುಖಾಮುಖಿ ಯಾಗಿಸಿ ನೋಡುವ ಕ್ರಮವೇ ಸಂಸ್ಕೃತಿ ಅಧ್ಯಯನದ ತೌಲನಿಕ ಮಾದರಿಯದ್ದು. ಗ್ಲೋಬಲ್ ಮತ್ತು ಲೋಕಲ್‌ಗಳನ್ನು ಎದುರುಬದುರು ಇರಿಸಿದಾಗ ಗ್ಲೋಬಲ್‌ನ್ನು ಲೋಕಲ್ ಮೂಲಕ ನೋಡುವ ಕ್ರಮವನ್ನು ಗ್ಲೋಕಲ್’ ಎಂದು ಕರೆಯಬಹುದು. ಜಪಾನಿನ ಸೃಷ್ಟಿಪುರಾಣದ ಜಿಗಣೆಗಳು ಬಂಟಮಲೆಯ ಜಿಗಣೆಗಳನ್ನು, ಜಪಾನಿನ ಕಮಿ’ ತುಳುನಾಡಿನ ಕುಲೆ’ಗಳನ್ನು ನೆನಪಿಸುವ ಮೂಲಕ ವಿಶ್ವಾತ್ಮಕ ಸಂಸ್ಕೃತಿ ನಿರ್ಮಾಣದ ಸಮಾನ ಆಸಕ್ತಿಯನ್ನು ಪ್ರಕಟಿಸುತ್ತದೆ. ಸೂರ್ಯನನ್ನು ಹೆಣ್ಣು ಎನ್ನುವ ಜಪಾನಿ ಪುರಾಣ ಭಾರತೀಯ ಪುರಾಣಗಳಿಗಿಂತ ಭಿನ್ನವಾಗಿ ತಾಯಿಯ ಸೃಷ್ಟಿಯ ಕಲ್ಪನೆಯನ್ನು ಕೊಡುತ್ತದೆ. ದೇಹ ಮತ್ತು ಸಂಸ್ಕೃತಿ’ ತುಂಬಾ ಅಪೂರ್ವ ಒಳನೋಟಗಳನ್ನು ಉಳ್ಳ ಲೇಖನ. ಯಕ್ಷಗಾನದಂತಹ ನಮ್ಮ ರಂಗಕಲೆಗಳು ದೇಹದ ಕೆಳಭಾಗವನ್ನು ಹಿಂಭಾಗವನ್ನು ಮತ್ತು ಎಡಭಾಗವನ್ನು ನಿರ್ಲಕ್ಷ್ಯ ಮಾಡಿರುವುದರ ಹಿಂದಿನ ತಾತ್ವಿಕತೆಯ ಪೂರ್ವಗ್ರಹವನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಅನಾಟಮಿ, ಕಲಾರೂಪ ಮತ್ತು ನಮ್ಮ ತಾತ್ತ್ವಿಕತೆಗಳ ನಡುವಿನ ಅಂತರ್‌ಸಂಬಂಧವನ್ನು ಅಧ್ಯಯನ ಮಾಡಲು ಈ ಪುಟ್ಟ ಲೇಖನ ಉತ್ತಮ ಮಾರ್ಗದರ್ಶಿಯಾಗಿದೆ.
ಡಾ. ಪುರುಷೋತ್ತಮ ಬಿಳಿಮಲೆ ತುಂಬಾ ಸಂಕೀರ್ಣವಾದ ಸಂಗತಿಗಳನ್ನು ತಮ್ಮ ಅಂಕಣ ಬರಹಗಳಲ್ಲಿ ಬಿಡಿಬಿಡಿಯಾಗಿ ಚರ್ಚಿಸುತ್ತಾರೆ. ನಿಜವಾದ ಅರ್ಥದಲ್ಲಿ ಇಡೀ ಪುಸ್ತಕದ ಎಲ್ಲ ಬರಹಗಳು ಕೆಲವು ಮುಖ್ಯ ತಾತ್ವಿಕತೆಗಳ ಅಭಿವ್ಯಕ್ತಿಯ ಭಿನ್ನ ರೂಪಗಳು. ಅವನ್ನೆಲ್ಲ ಒಂದುಗೂಡಿಸಿದಾಗ ರಾಷ್ಟ್ರೀಯತೆ ಪ್ರಾದೇಶಿಕತೆ ಮತ್ತು ಸ್ಥಳೀಯತೆಗಳ ಸಂಬಂಧ, ಧರ್ಮ ಮತ ಜಾತಿ ಮತ್ತು ಭಾಷೆಗಳ ಸಂಬಂಧ, ಸಾಹಿತ್ಯ ಜಾನಪದ ಮತ್ತು ಕಲೆಗಳ ಸಂಬಂಧ -ಹೀಗೆ ಅನೇಕ ಪರಿಮಾಣಗಳ ಮೂಲಕ ಪುನಾರಚನೆ ಮಾಡಬಹುದು.
ಸ್ಥಳೀಯತೆಯ ಸಂಸ್ಕೃತಿ ಮತ್ತು ಬದುಕಿನ ಆರಂಭದ ದಿನಗಳ ಅನುಭವದ ಮೂಲಕ ನಾಡನ್ನು ದೇಶವನ್ನು ಮತ್ತು ವಿಶ್ವವನ್ನು ಕಾಣುವ ದೃಷ್ಟಿಕೋನ; ಮೌಖಿಕ ಸಂಸ್ಕೃತಿಯನ್ನು ತಳದಲ್ಲಿ ಮತ್ತು ಕೇಂದ್ರದಲ್ಲಿ ಇಟ್ಟುಕೊಂಡು ಅದರ ಮೂಲಕ ಪುರಾಣ ಮತ್ತು ಶಿಷ್ಟಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವುದು; ಯಕ್ಷಗಾನ ರಂಗಭೂಮಿಯ ಆಕೃತಿಯ ಮೂಲಕ ರಾಷ್ಟ್ರೀಯ ಮತ್ತು ವಿಶ್ವದ ರಂಗಭೂಮಿ ಕಲೆಗಳನ್ನು ಅಭ್ಯಾಸ ಮಾಡುವುದು; ಭಾಷೆ ಮತ್ತು ನಾಡಿನ ಅನನ್ಯತೆಯನ್ನು ಸ್ಥಾಪಿಸಲು ನಿರ್ದಿಷ್ಟ ಯೋಜನೆಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದು; ಜಾತೀಯತೆ ಮತ್ತು ಕೋಮುವಾದಗಳು ಜನಪದ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ಧಾಳಿಯನ್ನು ಸಂಸ್ಕೃತಿಯ ಒಳಗಿನಿಂದಲೇ ಪ್ರತಿರೋಧಿಸುವುದು; ಪರಂಪರೆಯ ಸಂಸ್ಕೃತಿಯನ್ನು ಗಲೀಜು ಮಾಡುವ ಆಧುನಿಕತೆಯ ಹುನ್ನಾರಗಳನ್ನು ಬಯಲು ಮಾಡುವುದು-ಇವೆಲ್ಲವನ್ನೂ ತಾಳಮದ್ದಲೆಯ ಅರ್ಥಗಾರಿಕೆಯಂತೆ ಹರಿಕತೆಯ ಪ್ರವಚನದಂತೆ ತುಂಬ ಆಪ್ತವಾಗಿ ಸ್ವಾರಸ್ಯಕರವಾಗಿ ಅನುಭವ ಕಥನ ಮತ್ತು ಗ್ರಂಥ ಪಠನಗಳ ಉಪಕತೆಗಳೊಂದಿಗೆ ಓದುಗರ ಜೊತೆಗೆ ಹಂಚಿಕೊಳ್ಳುವುದು. ಇದು ಬಿಳಿಮಲೆ ಬಹುರೂಪ’ದ ಆಂಜನೇಯ ಶಕ್ತಿ.
ಮಂಗಳೂರು ಡಾ. ಬಿ.ಎ.ವಿವೇಕ ರೈ
ಪರಿವಿಡಿ
ಸವಿನುಡಿ / ೩
ಮುನ್ನುಡಿ / ೫
ಕೃತಜ್ಞತೆಗಳು / ೧೦
ಎರಡನೆಯ ಮುದ್ರಣಕ್ಕೆ ಎರಡು ಮಾತು / ೧೧
ಭಾಗ ಒಂದು
೧. ಕಿರು ತೊರೆಯ ನೀರು ಮತ್ತು ಕಾಗೆ ಮುಟ್ಟಿನ ಕತೆ / ೩
೨. ಇಲಿಗಳು, ಬಿದಿರಕ್ಕಿ ಮತ್ತು ಕಾಡಿನ ಹುಳುಗಳು / ೧೦
೩. ವಿದ್ಯೆ ಇಲ್ಲದ ಜಾತಕ ಮತ್ತು ನನ್ನ ಶಾಲೆ / ೧೩
೪. ಕುಟ್ಟ ಬ್ಯಾರಿಯ ಪುಟ್ಟ ಕತೆ / ೧೮
೫. ಚೌರಿಗರ ಕೃಷ್ಣಪ್ಪನ ಕೀಚಕ ವೇಷ / ೨೧
೬. ಕಳಕೊಂಡ ನಾಲ್ಕಾಣೆ ಮತ್ತು ಯಕ್ಷಗಾನ / ೨೫
೭. ತುಳು ಪರಿಕಲ್ಪನೆಯ ಸುತ್ತ-ಮುತ್ತ / ೨೮
೮. ತುಳು ಭಾಷೆಗೆ ಸಂವಿಧಾನದ ಮಾನ್ಯತೆ / ೩೭
೯. ತುಳು ಯಕ್ಷಗಾನಗಳು / ೪೧
೧೦. ಯಕ್ಷಗಾನ: ಪರಂಪರೆ ಮತ್ತು ಬದಲಾವಣೆ / ೪೪
೧೧. ತಾಳ ಮದ್ದಳೆಯ ವಿರಾಟ್‌ಸ್ವರೂಪ / ೪೭
೧೨. ಅರೆಭಾಷೆಯ ಅನನ್ಯತೆಯ ಹುಡುಕಾಟದತ್ತ / ೫೦
೧೩ ಮನೆಮುರುಕರು ಮತ್ತು ಮಂಗಳೂರು ಮಲ್ಲಿಗೆ / ೫೩
ಭಾಗ ಎರಡು
೧೪. ಸಣ್ಣ ಭಾಷೆಗಳ ಸಬಲೀಕರಣ / ೫೯
೧೫.ಕನ್ನಡ ದೇಸೀ ಅಂದರೆ ನೀರುಳ್ಳಿ / ೬೨
೧೬. ಕನ್ನಡ ಭಾಷೆಗೆ ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ / ೬೫
೧೭. ಪಠ್ಯ ವಿಸ್ತರಣೆಯ ಬಗೆಗೆ / ೬೮
೧೮. ಎದೆಗೆ ಬಿದ್ದ ಅಕ್ಷರ / ೭೧
೧೯. ಕಳಶದ ಕತೆ / ೭೫
೨೦. ಕರ್ನಾಟಕ ಜಾನಪದ ಅಧ್ಯಯನಗಳು: ಹಳೆಯ ದಾರಿಯಲ್ಲಿಯೇ ನಡಿಗೆ / ೭೮
೨೧.ಕರ್ನಾಟಕ ಐತಿಹ್ಯಗಳ ವಿಶ್ವಕೋಶ / ೮೧
೨೨. ಕುಮ್ಮಟ ಜಾತ್ರೆಗೆ ಹೆಗಿ ಬನ್ನಿ / ೮೪
೨೩.ಲಿಖಿತ ಪುರಾಣಗಳು ಮತ್ತು ಜನಪದ ಪುರಾಣಗಳು / ೮೭
೨೪.ಮೈಲಾರ ಲಿಂಗ ಮತ್ತು ಖಂಡೋಬ ಮರಾಠಿ-ಕನ್ನಡ ಸಂಬಂಧಗಳತ್ತ ಕಿರುನೋಟ / ೯೦
೨೫. ಕನ್ನಡ ಪಂಚಭೂತಗಳು / ೯೩
೨೬. ಸಾವಿನ ಹಾಡುಗಳು / ೯೬
೨೭. ಜಾತ್ರೆಗಳು ಮತ್ತು ವಚನ ಪಠ್ಯಗಳು / ೯೯
೨೮. ವಿದೇಶೀ ವಿದ್ವಾಂಸರ ಕನ್ನಡ ಸೇವೆ / ೧೦೨
೨೯. ಕರ್ನಾಟಕ ಜನಪದ ಕಲೆಗಳಿಗೆ ಯುನೆಸ್ಕೋ ಮನ್ನಣೆ ಏಕಿಲ್ಲ? / ೧೦೫
೩೦. ಒಂದರೊಳಗೆ ಇನ್ನೊಂದು ಹೆಣೆದುಕೊಂಡ ಪ್ರತಿ ಕಥನಗಳು / ೧೦೯
೩೧. ಪ್ರಾದೇಶಿಕ ಪಕ್ಷಗಳು ಮತ್ತು ಪ್ರಜಾಪ್ರಭುತ್ವ / ೧೧೨
ಭಾಗ ಮೂರು
೩೨. ದೆಹಲಿಯಲ್ಲೊಂದು ಕನ್ನಡದ ಗುರುತು / ೧೧೬
೩೩. ಕನ್ನಡಿಗರ ವಲಸೆಯ ಸುತ್ತ ಮುತ್ತ / ೧೧೯
೩೪. ರಾಜಧಾನಿ ದೆಹಲಿಗೆ ನೂರು ವರುಷ / ೧೨೨
೩೫.ರಾಷ್ಟ್ರೀಯ ಶಿಕ್ಷಣ ನೀತಿಗೆ ಒತ್ತಾಯ / ೧೨೫
೩೬. ಜಾತೀಯತೆ, ಕೋಮುವಾದ ಮತ್ತು ಜನ ಸಂಸ್ಕೃತಿಗಳು / ೧೨೮
೩೭. ಅರವನ್ ತಲೆಗಳು ಮತ್ತು ಸವದತ್ತಿಯ ಉಭಯಲಿಂಗಿಗಳು / ೧೩೧
೩೮. ದಲಿತ ಬಹುಳತೆಯ ಕಡೆಗೆ / ೧೩೪
೩೯. ಗಡಿದಾಟಿದ ಕಲೆ: ಯಕ್ಷಗಾನ / ೧೩೬
೪೦.ಕೃಷ್ಣ ಮತ್ತು ಭಾರತೀಯ ರಂಗಭೂಮಿ / ೧೪೧
ಭಾಗ ನಾಲ್ಕು
೪೧. ಮತಾಂಧರಿಗೆ ಬಲಿಯಾದ ಬಾಮಿಯಾನ್ ಬುದ್ಧ / ೧೪೬
೪೨. ಹಿಂದೂಗಳಿಗಿಲ್ಲದ ಸಿಂಧೂ ನದಿ / ೧೪೯
೪೩. ಗಂಗೆಯ ಕತೆ / ೧೫೨
೪೪. ಯಮುನೆಯ ವಾಸ್ತವಗಳು / ೧೫೫
೪೫. ಕಳೆದುಹೆದ ಸರಸ್ವತಿ / ೧೫೮
೪೬. ಮಥುರಾ ನಗರದಲ್ಲಿ ಇಂದು ಕೃಷ್ಣ ಮಾರಾಟದ ವಸ್ತು / ೧೬೧
೪೭. ಕುರೂಪಗೊಂಡ ಕುರುಕ್ಷೇತ್ರ / ೧೬೪
೪೮. ಬೆಳಕಿಲ್ಲದ ನಗರ-ವಾರಣಾಸಿ / ೧೬೭
೪೯. ಹನುಮಂತನ ಕತೆ / ೧೭೦
೫೦. ಹಲವು ಮಹಾಭಾರತಗಳ ಕತೆ / ೧೭೩
೫೧. ಮಧ್ಯಕಾಲೀನ ಭಾರತದ ಪ್ರೇಮಕತೆಗಳು / ೧೭೮
೫೨. ಮಾನವಿಕಗಳಲ್ಲಿ ಮೌಖಿಕ ನಿರೂಪಣೆಗಳಿಗೆ ಮನ್ನಣೆ / ೧೮೧
ಭಾಗ ಐದು
೫೩. ಆಡಂ ಮತ್ತು ಈವ್‌ಗಳನ್ನು ಬಿಟ್ಟು ಜಿಗಣೆಗಳ ಕಡೆಗೆ / ೧೮೫
೫೪. ಕಮಿ ಮತ್ತು ಕುಲೆ / ೧೮೮
೫೫. ಆಫ್ರಿಕಾದ ಕನ್ನಡ ಹಾಡುಗಳು / ೧೯೧
೫೬. ದೇಹ ಮತ್ತು ಸಂಸ್ಕೃತಿ / ೧೯೫
೫೭. ಇಚಿರೋ ಹೇಳಿದ ಕೊಜಿಕಿ ಕತೆ / ೧೯೮
Reviews
There are no reviews yet.