ಸ್ವರಭಾಸ್ಕರ ಪಂ.ಭೀಮಸೇನ ಜೋಶಿ
ಕಳೆದ ಶತಮಾನದ ಮಹತ್ವದ ಸಂಗತಿ ಎಂದರೆ ಎರಡು ತೇಜಃಪುಂಜ ನಕ್ಷತ್ರಗಳು ಭಾರತೀಯ ಸಂಗೀತ ಆಕಾಶದಲ್ಲಿ ಹುಟ್ಟಿದ್ದು ಮತ್ತು ನಿರ್ವಾತದ ಅವಕಾಶವನ್ನೂ ಸಹ ಉಸಿರ ಲಯಬದ್ಧತೆಯೊಂದಿಗೆ ಕಸಿಮಾಡಿಕೊಂಡು ಸದಾ ಪ್ರಕಾಶಮಾನವಾಗಿ ಬೆಳಕ ನೀಡುವ ಜ್ಯೋತಿಗಳಾಗಿ ಶತಶತಮಾನಗಳ ಕಾಲವೂ ನೆಲೆನಿಲ್ಲುವಂತಾಗಿದ್ದು. ಯಾವುದೇ ಸಾಧ್ಯತೆಗಳೂ ಇಲ್ಲದ ನೆಲದಲ್ಲಿ ಹುಟ್ಟಿ ಸಂಗೀತದ ಬೆನ್ನುಹತ್ತಿ ಊರೂರು ತಿರುಗಿ ಕೇವಲ ತಮ್ಮೊಳಗಿನ ಸ್ವಯಂಪ್ರಭೆಯಿಂದಲೇ ಇಂದಿಗೂ ಮತ್ತು ಮುಂದೆಯೂ ಹೊಳೆಯುವ ಆ ಎರಡು ತಾರೆಗಳೆಂದರೆ ನನಗೆ ಸಂಗೀತದ ವಿದ್ಯೆಯನ್ನು ಧಾರೆಯೆರೆದು, ಪೋಷಿಸಿ ರೂಪಿಸಿದ ಸ್ವರಸಾಮ್ರಾಟ, ಪದ್ಮಭೂಷಣ ಪಂ.ಬಸವರಾಜ ರಾಜಗುರುಗಳು ಹಾಗೂ ಹೆಸರಿಗೆ ತಕ್ಕಂತೆ ಅನ್ವರ್ಥಕವಾಗಿಯೂ ಬಾಳಿ ಬೆಳಗಿದ ಸ್ವರಭಾಸ್ಕರ, ಭಾರತರತ್ನ ಪಂ.ಭೀಮಸೇನ ಜೋಶಿಯವರು. ಈ ಇಬ್ಬರೂ ನನಗೆ ಪ್ರಾಥಃಸ್ಮರಣೀಯರು. ನನ್ನ ಗುರುಗಳು ಜ್ಞಾನದ ಬೆಳಕನ್ನು ನೀಡಿ ಬೆಳೆಸಿದರೆ, ನನ್ನ ಸಂಗೀತ ಕಲಿಕೆಯ ಆರಂಭದ ದಿನಗಳಿಂದಲೂ ತಮ್ಮ ಅತ್ಯದ್ಭುತ ಶಾರೀರದ ಮೂಲಕ ಸೂಜಿಗಲ್ಲಿನಂತೆ ಆಕರ್ಷಿಸಿದ, ನಂತರ ೧೯೮೪-೮೫ನೇ ಕಾಲದ ಹೊತ್ತಿಗೆ ಅದಾಗಲೇ ಓರ್ವ ಕಲಾವಿದನಾಗಿ ಪರಿಗಣಿಸಲ್ಪಡುತ್ತಿದ್ದ ದಿನಗಳಲ್ಲಿ ನನ್ನೊಳಗಿನ ಬೆಳಕಿನ ಬೀಜವನ್ನು ಗುರುತಿಸಿ, ಪ್ರಕಾಶವನ್ನು ಚೆಲ್ಲಿ ಪುಣೆ ಮುಂಬೈ ಅಲ್ಲದೇ ಇಡೀ ಮಹಾರಾಷ್ಟ್ರ ಮತ್ತು ಉತ್ತರ ಹಿಂದೂಸ್ತಾನದ ತುಂಬೆಲ್ಲ ನನ್ನ ಸಂಗೀತ ರಸಯಾತ್ರೆಯ ಆರಂಭಕ್ಕೆ ಪುಣೆಯ ಸವಾಯಿ ಗಂಧರ್ವ ಸಮ್ಮೇಳನದಲ್ಲಿ ಅವಕಾಶ ನೀಡಿ, ಅಂದು ಸೇರಿದ್ದ ಜನಸಾಗರವನ್ನು ನೋಡಿ ಅಧೀರನಾಗಿದ್ದ ನನ್ನ ಬಳಿಗೆ ಬಂದು ಆಶೀರ್ವದಿಸಿ ಧೈರ್ಯ ಕೊಟ್ಟು ಮುನ್ನುಡಿ ಬರೆದದ್ದು, ತದನಂತರದಲ್ಲಿಯೂ ನನ್ನ ಬೆಳವಣಿಗೆಯನ್ನು ನೋಡಿ ಆನಂದಪಟ್ಟಿದ್ದು ಸ್ವರಭಾಸ್ಕರ ಪಂ.ಭೀಮಸೇನರು.
ಆ ಬಳಿಕ ನಾನು ಪ್ರತಿಷ್ಠಿತ ಪುಣೆಯ ಸವಾಯಿ ಗಂಧರ್ವ ಸಂಗೀತ ಸಮ್ಮೇಳನದಲ್ಲಿ ಇದುವರೆಗೆ ಐದು ಬಾರಿ ಹಾಡಿದ್ದೇನೆ. ಪ್ರತಿಬಾರಿಯೂ ಪುಣೆಯ, ಇಡೀ ಮಹಾರಾಷ್ಟ್ರದ ಸಂಗೀತ ರಸಿಕರು ನನಗೆ ಚಪ್ಪಾಳೆಗಳ ಸುರಿಮಳೆಯನ್ನೇಗರೆಯುತ್ತ ಪ್ರೋತ್ಸಾಹ ನೀಡಿ ಆಶೀರ್ವದಿಸಿದ್ದಾರೆ. ೧೯೮೫ರಿಂದ ಆರಂಭವಾದ ಪಂ.ಭೀಮಸೇನರೊಂದಿಗಿನ ಒಡನಾಟದಲ್ಲಿ ಪ್ರತಿಬಾರಿಯೂ ನಾನು ಒಂದುರೀತಿಯ ಗುರು-ಶಿಷ್ಯ ಬಾಂಧವ್ಯದ ಸವಿಯನ್ನು ಉಂಡಿದ್ದೇನೆ. ಆ ಅದಮ್ಯಚೇತನದ ಪ್ರಭಾವಕ್ಕೆ ಸಾಕಷ್ಟು ಒಳಗಾಗಿದ್ದೇನೆ. ತಮ್ಮ ಸಂಗೀತದ ಹಾಗೆ ಎತ್ತರವೂ, ಆಳವೂ, ವಿಶಾಲವೂ ಹಾಗೂ ಘನವೂ ಆದ ಗುರುತತ್ವ ಮತ್ತು ಗುರುತ್ವಶಕ್ತಿಗೆ ಬೆರಗಾಗಿದ್ದೇನೆ.
೧೯೯೩ನೆಯ ಇಸ್ವಿ ಡಿಸೆಂಬರ್ ೨೭ನೇ ತಾರೀಖು. ಪಂ.ಭೀಮಸೇನರು ನಮ್ಮ ಮನೆ ಹಾಸಣಗಿಗೆ ಬಂದರು. ಎಪ್ಪತ್ತರ ವಯಸ್ಸಿನಲ್ಲಿಯೂ ಸುಮಾರು ೪೫೦ ಕಿಲೋಮೀಟರುಗಳ ದೂರವನ್ನು ತಮ್ಮ ಇಷ್ಟದ ಬೆಂಝ್‌ಕಾರನ್ನು ತಾವೇ ಸ್ವತಃ ಡ್ರೈವ್ ಮಾಡಿಕೊಂಡು ಬಂದರು. ನಮ್ಮದು ಕೂಡುಕುಟುಂಬ. ಹಳ್ಳಿಮನೆ. ಹತ್ತಿರದ ಶಿರಸಿಯಲ್ಲಿ ಹೋಟೆಲ್ ವ್ಯವಸ್ಥೆ ಮಾಡುತ್ತೇನೆಂದರೂ ನಿರಾಕರಿಸಿದ ಗುರುಗಳು ನೇರವಾಗಿ ನಮ್ಮ ಮನೆಗೇ ಮಧ್ಯಾಹ್ನ ಒಂದೂವರೆ ಗಂಟೆಯ ಹೊತ್ತಿಗೆ ತಮ್ಮ ಕುಟುಂಬ ಸಮೇತವಾಗಿ ಬಂದು ತಲುಪಿದರು. ನೆಲದ ಮೇಲೆ ಕುಂತು ಊಟ ಮಾಡಿದರು. ಹವ್ಯಕರ ಸಾಂಬಾರು, ತಂಬಳಿ, ಕೇಸರಿಬಾತಿನ ಊಟವನ್ನು ಇಷ್ಟಪಟ್ಟು ಉಂಡುದಲ್ಲದೇ ನಮ್ಮೂರು ಹೊಂಬಳಕ್ಕ ಬಂದಾಂಗ ಅನಿಸ್ತದ ಎಂದರು. ಜಗುಲಿಯ ಮೇಲೆ ಹಾಸಿದ ಜಮಖಾನೆಯ ಮೇಲೆ ಕುಳಿತು ಎಲೆ ಅಡಿಕೆ ಹಾಕಿದ್ದಲ್ಲದೇ ತಮ್ಮ ಮನೆ ಕಲಾಶ್ರೀಯಲ್ಲಿ ಬೆಳೆದ ಎಲೆಯನ್ನು ನನಗೂ ನೀಡಿದರು. ತದನಂತರದಲ್ಲಿ ಅಷ್ಟೇನೂ ಆರಾಮದಾಯಕವಲ್ಲದ ಆ ಸಪುರಜಮಖಾನೆಯ ಮೇಲೆಯೇ ಅಡ್ಡಾಗಿ ಎರಡು ತಾಸು ಕೊರೆದು ಒರಗಿದರು! ಸರಿಯಾಗಿ ಎಂಟುಗಂಟೆಗೇ ಎದ್ದು ಸ್ನಾನ ಮಾಡಿ ಸಮೀಪದ ಮಂಚೀಕೇರಿಯಲ್ಲಿ ನಾನು ಆಯೋಜಿಸಿದ್ದ ಪಂ.ಬಸವರಾಜ ರಾಜಗುರುಗಳ ನೆನಪಿನ ಸ್ಮೃತಿ ಸಂಗೀತ ಸಮ್ಮೇಳನದ ಸಭಾಂಗಣಕ್ಕೆ ಹಾಜರಾದರು. ಅಂದು ನಮ್ಮ ಊರಿನಲ್ಲಿ ಸಂಗೀತ ದಿಗ್ಗಜ ಪಂ.ಭೀಮಸೇನ ಜೋಷಿ ಹಾಗೂ ಸಾಹಿತ್ಯದ ಮೇರುಶಿಖರ ಡಾ. ಕೋಟ ಶಿವರಾಮ ಕಾರಂತರು ಒಂದೇ ವೇದಿಕೆಯಲಿ ರಾಜಗುರು ಸ್ಮೃತಿ ಸಂಗೀತ ಸಮ್ಮೇಳನವನ್ನು ಉದ್ಘಾಟಿಸಿದರು. ಸುಮಾರು ಹತ್ತು ಸಾವಿರಕ್ಕೂ ಮಿಗಿಲಾಗಿ ಸೇರಿದ್ದ ಶ್ರೋತೃಗಳು ಇದಕ್ಕೆ ಸಾಕ್ಷಿಯಾಗಿದ್ದರು. ಆ ಸಮಯದಲ್ಲಿ ನಾನು ಗುರುಗಳನ್ನು ಸ್ವಾಗತಿಸುವ ಸಂದರ್ಭದಲ್ಲಿ ಇವರ ತಂದೆ-ತಾಯಿಗಳು ಏನನ್ನು ವಿಚಾರ ಮಾಡಿ ಇವರಿಗೆ ಭೀಮಸೇನ ಎಂದು ಹೆಸರಿಟ್ಟರೋ ತಿಳಿಯದು. ಆದರೆ ಆ ಹೆಸರಿಗೆತಕ್ಕ ಹಾಗೆ ಏನೆಲ್ಲವನ್ನೂ ಭೀಮಸೇನ ಮಾದರಿಯಲ್ಲೇ ಮಾಡಿದವರು ಮತ್ತು ಎಲ್ಲವನ್ನೂ ದಕ್ಕಿಸಿಕೊಂಡವರು ಪಂ.ಜೋಶಿಯವರು ಎಂದು ಅವರ ಇಡೀ ವ್ಯಕ್ತಿತ್ವವನ್ನು ಸೂಚ್ಯವಾಗಿ ಪರಿಚಯಿಸಿದ್ದನ್ನು ಪ್ರೇಕ್ಷಕರು ಕರತಾಡನದ ಮೂಲಕ ಸಮ್ಮತಿಸಿದಾಗ ನನ್ನನ್ನು ನೋಡಿ ಹೃದಯಪೂರ್ವಕ ನಗೆಯಾಡಿದ್ದರು. ಅದ್ಭುತವಾದ ದರಬಾರಿ ಕಾನಡಾ ರಾಗವನ್ನು ಅವೊತ್ತು ಹಾಡಿದ ಗುರುಗಳು ರಾತ್ರಿ ಅಲ್ಲಿಯೇ ಬೆಂಚಿನ ಮೇಲೆ ಕುಳಿತು ಎಲ್ಲ ಕಲಾವಿದರೊಂದಿಗೆ ಊಟ ಮಾಡಿ ಮಲಗಲು ಮನೆಗೇ ಬಂದರು. ಬೆಳಿಗ್ಗೆ ಆರು ಗಂಟೆಗೆಲ್ಲ ಎದ್ದು ನಮ್ಮ ತಂದೆಯವರ ಜತೆಗೆ ತೋಟ, ಕೊಟ್ಟಿಗೆಗಳಿಗೆಲ್ಲ ಹೋಗಿ ಬಂದವರು ನಿಮ್ಮ ತಂದೆಯವರು ನನ್ನ ಅಣ್ಣನಂತೆ ಅನಿಸುತ್ತದೆ. ನೋಡಲೂ ಇಬ್ಬರಲ್ಲೂ ಹೋಲಿಕೆಯಿದೆ ಅಂದು ಮುಕ್ತವಾಗಿ ಹೇಳಿ ಅಂದು ಮಧ್ಯಾಹ್ನದವರೆಗೂ ಹರಟೆ ಹೊಡೆಯುತ್ತ ಉಳಿದದ್ದು ನನ್ನ ಪಾಲಿಗಂತೂ ಅದೃಷ್ಟದ ದಿನ. ದೇವರು ನಮ್ಮ ಮನೆಗೆ ಬಂದು ಉಳಿದ ಸಂಭ್ರ್ರಮ ನಮ್ಮ ಮನೆಯ ಎಲ್ಲರಿಗೆ. ಎತ್ತರಕ್ಕೇರಿದರೂ ಸ್ವಲ್ಪವೂ ಸುಳಿದಾಡದ ಅಹಂಕಾರ, ಅದೆಂಥ ಸರಳ ನಡೆ-ನುಡಿ, ತಮ್ಮದೇ ಮನೆಗೆ ಬಂದ ಹಾಗಾಯಿತು ಎಂದು ಅವರ ಬಾಯಿಂದ ಬಂದ ಉದ್ಘಾರ ಎಲ್ಲವನ್ನೂ ನನ್ನ ಜೀವನದಲ್ಲಿ ಮರೆಯಲಾಗದು.
ಇಂತಹ ಮಹಾನ್ ವ್ಯಕ್ತಿತ್ವದ ಭಾರತರತ್ನ ಭೀಮಣ್ಣ ಕೃತಿಯ ಮೊದಲ ಪ್ರಿಂಟೌಟನ್ನು ಲೇಖಕ ಶಿರೀಷ ಜೋಶಿ ನನಗೆ ನೀಡಿ ಇದಕ್ಕೊಂದು ಮುನ್ನುಡಿಯನ್ನು ನೀವೇ ಬರೆದು ಕೊಡಬೇಕು ಎಂದಾಗ ನಾನು ಸ್ವಲ್ಪ ಹಿಂಜರಿದಿದ್ದೆ. ಯಾಕೆಂದರೆ ಭೀಮಣ್ಣನ ಕುರಿತಾಗಿ ಏನೆಲ್ಲವನ್ನೂ ಅನುಭವಿಸಬಹುದೇ ಹೊರತು ಅದನ್ನು ವಿವರಿಸಲಾಗದಂಥ ವ್ಯಕ್ತಿತ್ವ ಅವರದ್ದು. ಅದರಲ್ಲೂ ಬರವಣಿಗೆ ನನ್ನ ಅಭಿವ್ಯಕ್ತಿ ಮಾಧ್ಯಮವಲ್ಲ. ಆದರೆ ಈ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದಾಗ ಇಂತಹ ಅದ್ಭುತ ಬರವಣಿಗೆಗೆ ಪ್ರತಿಕ್ರಿಯೆಯನ್ನು ನೀಡದಿದ್ದರೆ ಅದು ಭೀಮಣ್ಣ ಅವರಿಗೆ ಅಗೌರವ ಮಾಡಿದಂತಾದೀತು ಎಂದು ಅನಿಸಿದ್ದು ಸುಳ್ಳಲ್ಲ. ಶಿರೀಷ ಜೋಶಿ ಅವರು ಸಂಗೀತ ಬಲ್ಲವರು. ಸೂಕ್ಷ್ಮ ಸಂವೇದಿಗಳು. ಪಂ.ಕುಮಾರ ಗಂಧರ್ವ, ಪಂ.ಬಸವರಾಜ ರಾಜಗುರು ಅವರ ಕುರಿತಾಗಿ ಬರೆದ ಪುಸ್ತಕಗಳನ್ನು ನಾನು ಓದಿ ತುಂಬ ಇಷ್ಟಪಟ್ಟಿದ್ದೇನೆ. ಭಾರತರತ್ನ ಭೀಮಣ್ಣ ಕೃತಿ ಕೂಡ ಅತ್ಯಂತ ಸಂವೇದನಾಶೀಲ ಬರವಣಿಗೆ. ಭೀಮಣ್ಣನವರ ವ್ಯಕ್ತಿತ್ವವನ್ನು ಅವರ ಗಾಯನದಷ್ಟೇ ಘನವಾಗಿ ತೆರೆದುಕೊಡುತ್ತ ಹೋಗುವ ಈ ಕೃತಿ ಒಂದಿಡೀ ಸಾಂಸ್ಕೃತಿಕ ಇತಿಹಾಸವನ್ನು ಎಳೆಎಳೆಯಾಗಿ ಪೋಣಿಸುತ್ತ, ವ್ಯಕ್ತಿವ್ಯಕ್ತಿಗಳ ಅಂತರ್‌ಸಂಬಂಧಗಳನ್ನು, ಪರಂಪರೆಯನ್ನು ಬೆಳೆಸುವಲ್ಲಿ ಕೈಜೋಡಿಸಿದ ಅದೆಷ್ಟೋ ಮಹಾನುಭಾವರ ಕೊಡುಗೆಗಳನ್ನು ಆಪ್ತವಾಗಿ, ಕಿರಾನಾ ಘರಾಣೆಯ ಕುಸುರಿ ಕೆಲಸಗಳುಳ್ಳ ಸ್ವರಸಂಯೋಜನೆಯ ಸರ್ಗಮ್‌ಗಳ ಹಾಗೆ, ಕೆಲವೊಮ್ಮೆ ಸಮ್ ಟು ಸಮ್ ತಾನುಗಳ ಹಾಗೆ, ಇನ್ನೊಮ್ಮೆ ಭೀಮಸೇನರ ದರಬಾರಿ ರಾಗದ ಮೀಂಡುಗಳಂತೆ ಅಭಿವ್ಯಕ್ತಿಸುವ ಪರಿಗೆ ನಾನು ಮನಸೋತಿದ್ದೇನೆ. ಶಿರೀಷ್ ಜೋಶಿಯವರ ಅಧ್ಯಯನ, ಸಂಶೋಧನೆ ಮತ್ತು ಸೂಕ್ಷ್ಮವಾದ ಸಂವೇದನೆಗೆ ಹಿಡಿದ ಕೈಗನ್ನಡಿಯಂತಿರುವ ಈ ಕೃತಿ ಇವತ್ತಿನ ಪೀಳಿಗೆಯ ಯುವಕರಿಗೆ ಅನೇಕ ಸಂಗತಿಗಳನ್ನು ಸೂಕ್ಷ್ಮವಾಗಿ ತಿಳಿಸುತ್ತ ಅರಿವಿನಲೋಕದ ವಿಸ್ತಾರಕ್ಕೆ ದೀವಟಿಗೆಯಾಗಿ ಒದಗಬಲ್ಲದು ಎಂಬುದರ ಬಗ್ಗೆ ಎರಡು ಮಾತಿಲ್ಲ.
ಭೀಮಣ್ಣ ಅವರ ಸಂಗೀತ ರಸಯಾತ್ರೆಯ ಮೈಲುಮೈಲಿಗಳನ್ನೂ ಗುರುತಿಸುತ್ತ, ಕ್ರಿಟಿಕಲ್ ಆಗಿ ವಿಮರ್ಶಿಸುತ್ತ, ರೆಫರೆನ್ಸ್‌ಗಳ ಮೂಲಕ ಅದನ್ನು ಪರಾಮರ್ಶಿಸುತ್ತ ಒಂದು ಸುದೀರ್ಘವಾದ ಮತ್ತು ಅಷ್ಟೇ ಪ್ರಬುದ್ಧವಾದ ರಾಗವಿಸ್ತಾರದ ಹಾಗೆ ಬರವಣಿಗೆಯನ್ನು ಮಾಡುವುದು ಅಷ್ಟು ಸುಲಭವಲ್ಲ. ಅದೂ ಕೂಡ ಸಮಯ, ಶ್ರಮ, ಅಧ್ಯಯನ, ಚಿಂತನೆ, ಮನನ ಮುಂತಾಗಿ ಅನೇಕ ಹಂತಗಳನ್ನು ಹಾದು ಶಬ್ದಗಳ ಮೂಲಕ ಅಭಿವ್ಯಕ್ತಿಗೊಳ್ಳುವ ಹೊತ್ತಿಗೆ ಸಂಗೀತಗಾರ ನೊಬ್ಬನಿಗೆ ಕಾರ್ಯಕ್ರಮದ ಮೊದಲು ಹೆರಿಗೆ ಬೇನೆಯಂತಹ ಸಂಕಟವಿರುತ್ತದೆಯೋ ಹಾಗೆಯೇ ಕೃತಿಕಾರನೊಬ್ಬನಿಗೆ ಅದು ಪೂರ್ಣ ಮುಗಿಯುವವರೆಗೂ ಇದ್ದೇ ಇರುತ್ತದೆ. ಆ ರೀತಿಯ ನೋವನ್ನು ಅನುಭವಿಸಿ ಯಶಸ್ವಿಯಾಗಿ, ಸಮರ್ಪಕವಾಗಿ ಮತ್ತು ಸಮರ್ಥವಾಗಿ ಭಾರತರತ್ನ ಭೀಮಣ್ಣ ಕೃತಿಯನ್ನು ಶಿರೀಷ ಕಟ್ಟಿಕೊಟ್ಟಿದ್ದಾರೆ. ಸಂಗೀತದ ಕುರಿತಾಗಿ ಯಾವ ಜ್ಞಾನವಿಲ್ಲದಿದ್ದವರೂ ಕೂಡ ಇಲ್ಲಿ ವಿವರಿಸಲಾದ ಸಂಗತಿಗಳ ಮೂಲಕ ಈ ಕೃತಿಯನ್ನು ಆಸ್ವಾದಿಸಬಹುದು. ಸಂಗೀತದ ವಿದ್ಯಾರ್ಥಿಗಳಿಗಂತೂ ಇದು ಅಧ್ಯಯನಕ್ಕೆ ಪೂರಕವಾದ ಅತ್ಯುತ್ತಮ ಪರಾಮರ್ಶನ ಗ್ರಂಥ.
ಒಂಭತ್ತು ಅಧ್ಯಾಯಗಳಲ್ಲಿ ವಿಸ್ತರಿಸಿಕೊಳ್ಳುತ್ತ ಸಾಗುವ ಭಾರತರತ್ನ ಭೀಮಣ ವಿಕಾಸಗೊಳ್ಳುವ ಪರಿಯನ್ನು ಎಳೆಯ ಮೊಗ್ಗಿನಿಂದಾರಂಭಿಸಿ ಆ ಕಾಲದ ಸಾಮಾಜಿಕ, ಸಾಂಸ್ಕೃತಿಕ ಚಿತ್ರಣವನ್ನು ಮೊದಲ ಅಧ್ಯಾಯ ಕನ್ನಡತಿ ತಾಯೆ ಬಾ ವಿಲಂಬಿತ ಚೀಸಿನ ಮುಖದಂತೆ ತೆರೆದು ತೋರಿಸಿದರೆ ಗುರುವಿನ ಗುಲಾಮನಾಗುವ ತನಕ, ಗುರುಬಿನ ಕೌನ ಬತಾವೆ ಬಾಟ, ಬೇಗುನ ಗುನ ಗಾವೆ ಮುಂತಾದ ಅಧ್ಯಾಯಗಳಲ್ಲಿ ಒಂದೊಂದಾಗಿ ವಿಕಾಸದ ಮೆಟ್ಟಿಲನ್ನು ಏರುವ ಸವಾಲು ಮತ್ತು ಸಾಧನೆಗಳ ವಿವರಗಳು ಮಂದ್ರದಿಂದ ತಾರಸಪ್ತಕದವರೆಗಿನ ಸ್ವರಸಂಚಾರಗಳಿಂದ ಸಂಚಲನವುಂಟು ಮಾಡುವ ಶಕ್ತಿಯೊಂದಿಗೆ ಎದೆಗೆ ತಟ್ಟುತ್ತವೆ. ನಂಬಿದೆ ನಿನ್ನ ನಾದದೇವತೆಯೆ ಅಧ್ಯಾಯವು ಮೇಲಿನ ಷಡ್ಜವನ್ನು ಇನ್ನೇನು ತಾಕಲು ಯತ್ನಿಸುವ ಕಲಾವಿದ ನಿಷಾದದಲ್ಲಿ ನಿಂತು ಮತ್ತೆ ಕೆಳಗಿಳಿದು ಏರುತ್ತ ಸಾಗುವ, ಇನ್ನೇನು ಮೇಲಿನ ಷಡ್ಜ ತಾಗಬೇಕು ಎನ್ನುವಷ್ಟರಲ್ಲಿ ಇದುವರೆಗಿನ ರಾಗವಿಸ್ತಾರವನ್ನು ಅವಲೋಕಿಸಿ ನಂತರ ಸಡನ್ನಾಗಿ ಷಡ್ಜವನ್ನು ಮುಟ್ಟಿ ನಿಲ್ಲುವ ಪರಿಯನ್ನು ನೆನಪಿಸುತ್ತದೆ. ಹಿಂಡೋಲ-ಬಹಾರ ಅಧ್ಯಾಯ ಭೀಮಣ್ಣನ ಖಾಸಗಿ ಬದುಕಿನ ಆಂದೋಲನಗಳನ್ನು ಕಂಪಿಸಿ ಅಂತರಾ ಭಾಗದ ರಾಗವಿಸ್ತಾರದ ಹಾಗೆ ಕಂಡುಬಂದರೆ ಮಿಲೆ ಸುರ ಮೇರಾ ತುಮ್ಹಾರಾ, ಬಾಜೆರೆ ಮುರಲಿಯಾ ಬಾಜೆ, ಗಂಧರ್ವಲೋಕ ಮುಂತಾದವುಗಳು ರಾಗವೊಂದರ ಉತ್ತರಾಂಗವನ್ನು ಬೆಳೆಸಿದಂತೆ ಅನುಭವ ವಿಸ್ತಾರಕ್ಕೆ ಒಯ್ಯುತ್ತವೆ. ಕೊನೆಯಲ್ಲಿ ನೀಡಲಾದ ಅನುಬಂಧಗಳು ಈ ಎಲ್ಲ ಮಾಹಿತಿಗಳಿಗೆ ಪೂರಕವಾಗಿ ವಿಷಯ ಜ್ಞಾನವನ್ನು ಒದಗಿಸುತ್ತ ಒಟ್ಟಾರೆಯಾಗಿ ಈ ಕೃತಿ ಒಂದು ಪ್ರಬುದ್ಧ ರಾಗ ವಿಸ್ತಾರದ ಹಾಗೆ ಕಂಡುಬರುತ್ತದೆ. ಮೂರು ತಾಸುಗಳ ಕಾಲ ಎಡೆಬಿಡದೆ ಓದಿ ನಾನು ಕೊನೆಯ ಪುಟವನ್ನು ತಿರುವಿಹಾಕಿದಾಗ ಭೀಮಸೇನ ಜೋಷಿಯವರ ದರಬಾರಿ, ಮಾರವಾ, ಮಾಲಕಂಸ್, ಶುದ್ಧ ಕಲ್ಯಾಣ, ಪೂರಿಯಾ, ತೋಡಿ, ಮುಂತಾದ ರಾಗಗಳನ್ನು ಕೇಳಿದ ನಂತರ ಬಹುಕಾಲ ಉಳಿಯುವ ಗುಂಗಿನಂತೆ ಭಾರತರತ್ನ ಭೀಮಣ್ಣ ಕೃತಿ ನನ್ನನ್ನು ಆವರಿಸಿಕೊಂಡಿದೆ.
ಇಂತಹ ಒಂದು ರಾಗಧಾರಿ ಅನುಭವ ಮತ್ತು ಜ್ಞಾನವಿಸ್ತಾರಪೂರಕ ಪ್ರಬುದ್ಧ ಕೃತಿಯನ್ನು ಹೆಣೆದ ಶಿರೀಷ್ ಜೋಶಿಯವರನ್ನು ನಾನು ಕೃತಜ್ಞತಾಪೂರ್ವಕವಾಗಿ ಅಭಿನಂದಿಸುತ್ತೇನೆ. ಕನ್ನಡದ ಮಟ್ಟಿಗೆ ಈ ಕೃತಿ ಬಹು ಮಹತ್ವದ ಸಾಂಸ್ಕೃತಿಕ ಇತಿಹಾಸದ ದಾಖಲೀಕರಣವಾಗಿ, ಪಂ.ಭೀಮಸೇನ ಜೋಶಿ ಅವರ ಜನ್ಮಶತಮಾನೋತ್ಸವದ ಈ ಹೊತ್ತಿನಲ್ಲಿ ಬೆಳಕನ್ನು ಕಾಣುತ್ತಿರುವುದು ಸ್ವರಭಾಸ್ಕರನಿಗೆ ಕನ್ನಡ ನುಡಿಯ ಮೂಲಕ ಸಲ್ಲಿಸುವ ಸೂರ್ಯ ನಮಸ್ಕಾರ!
೧೮.೧೨.೨೦೨೧ – ಪಂ.ಗಣಪತಿ ಭಟ್, ಹಾಸಣಗಿ
ಭಾನುವಾರ, ಹಾಸಣಗಿ
ನನ್ನ ಮಾತು
ಪಂ. ಭೀಮಸೇನ ಜೋಶಿಯವರ ಕುರಿತು ಈಗಾಗಲೇ ಹಲವಾರು ಕೃತಿಗಳು ಕನ್ನಡ, ಹಿಂದಿ, ಇಂಗ್ಲೀಷ್ ಮತ್ತು ಮರಾಠಿ ಭಾಷೆಯಲ್ಲಿ ಪ್ರಕಟವಾಗಿವೆ. ಆದಾಗ್ಯೂ ಅವರ ಕುರಿತ ಇನ್ನೊಂದು ಕೃತಿಯ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಯನ್ನು ಒಳಗಿಟ್ಟುಕೊಂಡೇ ಈ ಕೃತಿಯ ರಚನೆಗೆ ಕೈ ಹಾಕಿದ್ದೇನೆ. ಇಂಥದೊಂದು ಕೃತಿ ಪಂಡಿತಜಿಯವರ ಕುರಿತು ಬರಬೇಕಿತ್ತು ಎಂದು ಬಲವಾಗಿ ಅನ್ನಿಸಿದ್ದರಿಂದ ಈ ಕೃತಿಯ ಬರವಣಿಗೆಯಾಗಿದೆ. ನನ್ನ ಅನ್ನಿಸಿಕೆಗೆ ಬಲವಾದ ಕಾರಣಗಳೂ ಇವೆ.
ಇದುವರೆಗೆ ಪಂಡಿತಜಿಯವರ ಕುರಿತು ಬಂದಿರುವ ಕೃತಿಗಳಿಗಿಂತ ವಿಭಿನ್ನವಾದ ಕೃತಿಯನ್ನು ರಚಿಸುವುದು ನನ್ನ ಉದ್ದೇಶವಾಗಿದೆ. ಪಂಡಿತಜಿಯವರ ವ್ಯಕ್ತಿತ್ವ, ಸಾಂಗೀತಿಕ ಸಾಧನೆಗಳು, ಸಂಗೀತಕ್ಕಾಗಿ ಅವರು ಪಟ್ಟ ಕಷ್ಟನಷ್ಟಗಳು ಇವೆಲ್ಲವನ್ನು ಈಗಾಗಲೇ ಹಲವಾರು ಲೇಖಕರು ದಾಖಲಿಸಿದ್ದಾರೆ. ಆದರೆ ಜೀವನದಲ್ಲಿ ನಡೆದ ಸಂಗತಿಗಳು ಅವರ ಸಂಗೀತದ ಮೇಲೆ ಯಾವ ರೀತಿ ಪ್ರಭಾವ ಬೀರಿವೆ ಎಂಬ ಅನ್ವೇಷಣೆಯ ಪಯಣದ ಫಲಸ್ವರೂಪ ಈ ಕೃತಿ. ಇದರ ಜೊತೆಗೆ ಅವರ ಕಾಲದ ಸಂಗೀತದ ಇತಿಹಾಸ, ಬದಲಾವಣೆಯನ್ನು ದಾಖಲಿಸುವುದೂ ನನ್ನ ಉದ್ದೇಶವಾಗಿದೆ.
ಮುಖ್ಯವಾಗಿ, ಸಂಗೀತ ಲೋಕದಲ್ಲಿ ಅವರು ತಮ್ಮದೇ ಮೂರ್ತಿಯನ್ನು ಯಾವ ರೀತಿ ಪ್ರತಿಷ್ಠಾಪಿಸಿಕೊಂಡಿದ್ದಾರೆ ಎಂಬುದನ್ನು ನಿರೂಪಿಸುವ ಪ್ರಯತ್ನವನ್ನೂ ಇಲ್ಲಿ ಮಾಡಿದ್ದೇನೆ. ಪಂಡಿತಜಿ ಹಲವು ದಶಕಗಳ ಹಿಂದೆ ಹಾಡಿದ ಪುರಂದರದಾಸರ ಕೀರ್ತನೆಯ ಮೊದಲ ಸಾಲು ಮೂರುತಿಯನೆ ನಿಲ್ಲಿಸೋ. ಅದನ್ನು ಪಂಡಿತಜಿ ವಿಟ್ಠಲನ ಮೂರ್ತಿ ಕಣ್ಣ ಮುಂದೆ ಕಟ್ಟುವಂತೆ ಸೊಗಸಾಗಿ ಹಾಡಿದ್ದಾರೆ. ಈ ಕೀರ್ತನೆಯನ್ನು ಕೇಳಿದಾಗಲೆಲ್ಲ ಪಂಡಿತಜಿ ಒಬ್ಬ ಕಲಾವಿದ ಹೇಗಿರಬೇಕು ಎಂಬ ಪ್ರತಿಮಾಮೂರ್ತಿಯನ್ನು ಸಂಗೀತಲೋಕದ ಮುಂದೆ ನಿಲ್ಲಿಸಿದ್ದಾರೆ ಎಂದನ್ನಿಸುತ್ತಿತ್ತು. ಆ ಮೂರ್ತಿಯನ್ನು ಯಥಾವತ್ತಾಗಿ ಓದುಗರ ಮುಂದೆ ನಿಲ್ಲಿಸುವ ಪ್ರಯತ್ನ ನನ್ನದು.
ಅವರ ವ್ಯಕ್ತಿತ್ವ, ಅವರ ಸಂಗೀತ, ಅದರ ಮೂಲಚೂಲಗಳನ್ನು ನನ್ನದೇ ಆದ ರೀತಿಯಲ್ಲಿ ಅರಿತುಕೊಳ್ಳುವ ಮತ್ತು ಅದನ್ನು ಓದುಗರ ಮುಂದಿಡುವ ಪ್ರಯತ್ನವೂ ಈ ಕೃತಿಯಲ್ಲಿದೆ. ಹಾಗಾಗಿ ಸಂಗೀತಶಾಸ್ತ್ರದ ಕೆಲವು ಸಂಗತಿಗಳನ್ನು ಇಲ್ಲಿ ವಿವರಿಸಲಾಗಿದೆ. ಕೆಲವರಿಗೆ ಇವು ಅನಗತ್ಯವೆನ್ನಿಸಿದರೂ, ಅವರ ಸಂಗೀತವನ್ನು ಪ್ರೀತಿಸುವ ನನ್ನಂಥ ಹಲವಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಬಲ್ಲ ಸಂಗತಿಗಳಾಗಿವೆ ಎಂದು ಭಾವಿಸಿ ಅವುಗಳನ್ನು ಸೇರ್ಪಡೆ ಗೊಳಿಸಿದ್ದೇನೆ.
ಪಂಡಿತಜಿ ಕೇವಲ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಮೀಸಲಾದವರಲ್ಲ. ಅವರ ಸಂಗೀತದ ಆಳಗಲಗಳು ತುಂಬ ವಿಸ್ತಾರವನ್ನು ಪಡೆದಿವೆ. ಅವುಗಳ ಬಗೆಗೆ ಒಂದಿಷ್ಟು ಟಿಪ್ಪಣಿಗಳನ್ನು ಮತ್ತು ಇತಿಹಾಸವನ್ನು ದಾಖಲಿಸಿದ ಕಾರಣದಿಂದ ಆ ಕುರಿತಾದ ವಿವರಗಳು ದೀರ್ಘವಾಗಿವೆ. ಇನ್ನುಳಿದದ್ದನ್ನು ಕೃತಿಯೇ ಹೇಳುವುದರಿಂದ ನನ್ನ ಮಾತು ಇಲ್ಲಿಗೆ ಸಾಕು.
ಈ ಕೃತಿ ರಚನೆಯಲ್ಲಿ ನೆರವು ಒದಗಿಸಿದ ಮಹನೀಯರನ್ನು ನೆನೆಯುವುದು ನನ್ನ ಕರ್ತವ್ಯ. ಈ ಹೊತ್ತಿಗೆಯನ್ನು ರಚಿಸುವ ಹೊತ್ತಿನಲ್ಲಿ ಹಲವಾರು ಗ್ರಂಥಗಳ ನೆರವನ್ನು ಪಡೆದಿದ್ದೇನೆ. ಅವುಗಳ ವಿವರ ಗ್ರಂಥದ ಕೊನೆಗಿದೆ. ನನ್ನ ಸಾಹಿತ್ಯ ಚಟುವಟಿಕೆಗಳನ್ನು ಪ್ರೀತಿ-ವಾತ್ಸಲ್ಯಗಳಿಂದ ಗಮನಿಸುತ್ತಿರುವ ಗದುಗಿನ ತೋಂಟದ ಡಾ. ಸಿದ್ಧರಾಮ ಸ್ವಾಮೀಜಿಯವರು, ನಿಡಸೋಸಿಯ ಪೂಜ್ಯನೀಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿಯವರು ಹಾಗೂ ನನ್ನ ಮೇಲೆ ಅಪಾರ ಪ್ರೀತಿಯನ್ನು ಕರುಣಿಸಿದ ಕನ್ನಡದ ಸ್ವಾಮೀಜಿ ಎಂದೇ ಖ್ಯಾತರಾಗಿರುವ ಸಿದ್ಧಸಂಸ್ಥಾನಮಠದ ಪೂಜ್ಯನೀಯ ಅಲ್ಲಮಪ್ರಭು ಸ್ವಾಮೀಜಿಯವರನ್ನು ನೆನೆಯದಿರಲಾರೆ.
ಪ್ರಖ್ಯಾತ ನಿರ್ದೇಶಕದ್ವಯ ದೊರೆ ಭಗವಾನ್‌ರಲ್ಲಿ ಒಬ್ಬರಾದ ಭಗವಾನ್ ಅವರು ಸಂಧ್ಯಾರಾಗ ಸಿನಿಮಾಕ್ಕೆ ಪಂಡಿತಜಿಯವರು ಹಾಡಿದಾಗಿನ ಕೆಲವು ಘಟನೆಗಳನ್ನು ನನಗೆ ವಿವರಿಸಿದ್ದಾರೆ. ಹಾಗೆಯೇ ಪಂಡಿತಜಿಯವರ ಜೀವನಕ್ಕೆ ಸಂಬಂಧಿಸಿದ ಕೆಲವು ಅಪರೂಪದ ಘಟನೆಗಳನ್ನು ಡಾ. ಸರಜೂ ಕಾಟ್ಕರ್ ಹೇಳಿದ್ದಾರೆ. ಪಂಡಿತಜಿಯವರ ಮನೆತನಕ್ಕೆ ಸಂಬಂಧಿಸಿದ ಕೆಲವು ವಿವರಗಳನ್ನು ಪಂಡಿತಜಿಯವರ ಸೋದರ ಸಂಬಂಧಿ ಮುಕುಂದ ಜೋಶಿಯವರು ಒದಗಿಸಿದ್ದಾರೆ. ಇವರನ್ನೆಲ್ಲ ನೆನೆಯದಿರಲಾರೆ.
ಪಂಡಿತಜಿಯವರ ಅಭಿನಂದನಾ ಗ್ರಂಥ ಸ್ವರಾಧಿರಾಜವನ್ನು ಮರಾಠಿಯ ಲೇಖಕ, ಸಂಗೀತಜ್ಞ, ಸಂಗೀತ ವಿಮರ್ಶಕ ಶ್ರೀ ನಂದನ ಹೇರ್ಲೇಕರ್ ಅವರು ಒದಗಿಸಿ ಉಪಕರಿಸಿದ್ದಾರೆ. ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಈ ಪುಸ್ತಕವನ್ನು ಕೆಲವು ಆತ್ಮೀಯರ ಸಮ್ಮುಖದಲ್ಲಿ ಓದಿದ್ದೇನೆ. ರಂಗತಜ್ಞ ಡಾ. ರಾಮಕೃಷ್ಣ ಮರಾಠೆ, ಡಾ. ಎ.ಬಿ.ಘಾಟಗೆ. ಬಿ.ಕೆ.ಕುಲಕರ್ಣಿ, ಗಾಯಕ ಶ್ರೀಧರ ಕುಲಕರ್ಣಿ, ಸಂಗೀತಗಾರ ನಿರಂಜನಮೂರ್ತಿ, ಚಿತ್ರಕಲಾವಿದ ಬಾಳು ಸದಲಗೆ, ಡಾ. ಪಿ.ಜಿ.ಕೆಂಪಣ್ಣವರ, ಗಾಯಕ ಗುರುರಾಜ ಕುಲಕರ್ಣಿ, ಗುರುನಾಥ ಕುಲಕರ್ಣಿ, ಅನಂತ ಪಪ್ಪು, ಎನ್.ಬಿ.ದೇಶಪಾಂಡೆ, ನಾರಾಯಣ ಗಣಾಚಾರಿ, ಜಯಂತ ಜೋಶಿ, ಪ್ರಸಾದ ಕಾರಜೋಳ ಮೊದಲಾದವರೆಲ್ಲ ಓದುವಾಗ ಹಾಜರಿದ್ದರು. ಹಲವು ಸಲಹೆಗಳನ್ನು ನೀಡಿದ ಇವರಿಗೆಲ್ಲ ನನ್ನ ವಂದನೆಗಳು ಸಲ್ಲುತ್ತವೆ.
* ಈ ಕಾದಂಬರಿಗೆ ವಿದ್ವತ್ಪೂರ್ಣ ಮುನ್ನುಡಿ ಬರೆದ ಸುಪ್ರಸಿದ್ಧ ಸಂಗೀತ ವಿದ್ವಾಂಸ ಪಂ.ಗಣಪತಿ ಭಟ್ ಹಾಸಣಗಿಯವರು-
* ಪಂಡಿಜಿಯವರ ಬಗೆಗೆ ಮೂರು ಅಪರೂಪದ ಲೇಖನಗಳನ್ನು ಒದಗಿಸಿ, ಅವುಗಳಲ್ಲಿನ ವಿವರಗಳನ್ನು ಬಳಸಿಕೊಳ್ಳಲು ಅನುಮತಿಸಿದ ಹಿರಿಯ ಲೇಖಕ, ಪ್ರಖ್ಯಾತ ಕತೆಗಾರ ಎಸ್. ದಿವಾಕರ ಸರ್ ಅವರು-
* ಈ ಕೃತಿಯ ರಚನೆಯಲ್ಲಿ ಸಹಕಾರ ನೀಡಿದ ಅಶೋಕ ಗರಗಟ್ಟಿ, ಜಿ.ಎ.ಕುಲಕರ್ಣಿ(ಬಂಡೂ ಮಾಸ್ತರ) ಪಂ.ಆನಂದ ಜೋಶಿ, ಪಂ.ಅನಂತ ತೇರದಾಳ, ಶ್ರೀಮತಿ ಮಾಯಾ ಚಿಕ್ಕೆರೂರ, ಹಾಸ್ಯ ನುಡಿಕಾರ ಅರವಿಂದ ಹುನಗುಂದ-
* ನನ್ನ ಲೇಖನಗಳನ್ನು ಪ್ರಕಟಿಸುತ್ತಿರುವ ಕನ್ನಡ ಪತ್ರಿಕೆಗಳ ಸಂಪಾದಕರುಗಳು ಹಾಗೂ ಸಂಪಾದಕ ಮಂಡಳಿ-
* ಲೋಕೋಪಯೋಗಿ ಹಾಗೂ ಜಲಸಂಪನ್ಮೂಲ ಇಲಾಖೆಯ ಎಲ್ಲ ಅಧಿಕಾರಿವರ್ಗ ಹಾಗೂ ಸಹೋದ್ಯೋಗಿ ಗೆಳೆಯರು-
* ಆತ್ಮೀಯ ಗೆಳೆಯರು, ಸಾಹಿತ್ಯ ಮಿತ್ರರು, ಮಾಧ್ಯಮದ ಗೆಳೆಯರು-
* ಸಂಗೀತ ಪ್ರತಿಷ್ಠಾನ ಬೆಳಗಾವಿ, ರಂಗಸಂಪದ ಬೆಳಗಾವಿ, ಅಭಿನಯ ಭಾರತಿ ಧಾರವಾಡ, ರಂಗ ಆರಾಧನಾ ಸಂಸ್ಥೆ ಸವದತ್ತಿ, ಗೋವಾ ಕನ್ನಡ ಸಮಾಜ ಪಣಜಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಅಥಣಿ ಗೆಳೆಯರು-
* ಆಕಾಶವಾಣಿ ಧಾರವಾಡ ಕೇಂದ್ರದ ಎಲ್ಲ ಗೆಳೆಯರು-
* ಕೃತಿಯ ಪ್ರಕಟಣೆಯ ಭಾರ ಹೊತ್ತಿರುವ ಹೊಸಪೇಟೆಯ ಯಾಜಿ ಪ್ರಕಾಶನದ
ಶ್ರೀ ಗಣೇಶ ಯಾಜಿ ಮತ್ತು ಪ್ರಕಾಶಕಿ ಶ್ರೀಮತಿ ಸವಿತಾ ಯಾಜಿಯವರು-
* ಕಾದಂಬರಿಯನ್ನು ಸೊಗಸಾಗಿ ಮುದ್ರಿಸಿದ ರೆಪ್ರೊ ಇಂಡಿಯಾ ಲಿಮಿಟೆಡ್, ಮುಂಬಯಿ ಮಾಲೀಕರು ಹಾಗೂ ಅದರ ಸಿಬ್ಬಂದಿ ವರ್ಗ-
* ನನ್ನ ಬರವಣಿಗೆಯನ್ನು ಆಸಕ್ತಿಯಿಂದ ಗಮನಿಸುವ ಆತ್ಮೀಯ ಗೆಳೆಯರು, ಪತ್ನಿ ವಿದೂಷಿ ಮಂಜುಳಾ, ಮಗಳು ಶ್ರದ್ಧಾ, ಅಳಿಯ ದೀಪಕ ಹಾಗೂ ಮಗ ಶ್ರೀನಾಥ, ಸೊಸೆ ಶ್ರೀಶುಭಾ, ಮೊಮ್ಮಕ್ಕಳಾದ ದಿವಿಜ್ ಮತ್ತು ಪ್ರದಾತ-
ಇವರನ್ನೆಲ್ಲ ನೆನೆಯಲು ಹರ್ಷವೆನಿಸುತ್ತದೆ.
–ಶಿರೀಷ್ ಜೋಶಿ
ಪುಟ ತೆರೆದಂತೆ…
ಸವಿನುಡಿ / ೩
ಸ್ವರಭಾಸ್ಕರ ಪಂ.ಭೀಮಸೇನ ಜೋಶಿ / ೫
ನನ್ನ ಮಾತು / ೧೦
೧. ಕನ್ನಡತಿ ತಾಯೇ ಬಾ… / ೧೫
೨. ಗುರುವಿನ ಗುಲಾಮನಾಗುವ ತನಕ / ೩೦
೩. ಗುರು ಬಿನ ಕೌನ ಬತಾವೆ ಬಾಟ / ೫೫
೪. ಬೇಗುನ ಗುನ ಗಾವೆ / ೭೭
೫. ನಂಬಿದೆ ನಿನ್ನ ನಾದ ದೇವತೆಯೆ / ೧೦೫
೬. ಹಿಂಡೋಲಬಹಾರ / ೧೫೦
೭. ಮಿಲೆ ಸುರ ಮೇರಾ ತುಮ್ಹಾರಾ / ೧೫೮
೮ ಬಾಜೆ ರೆ ಮುರಳಿಯಾ ಬಾಜೆ / ೧೬೯
೯. ಗಂಧರ್ವಲೋಕ / ೧೮೫
ಅನುಬಂಧಗಳು / ೧೯೯
Reviews
There are no reviews yet.