ನನ್ನ ‘ಚೆಮ್ಮೀನ್’ ಕತೆ
ಆಲೋಚನೆಗಳು ಬದಲಾಗುತ್ತ ಬದಲಾಗುತ್ತ ಕಾಲ ತುಂಬಾ ಕಳೆಯಿತು. ಒಂದು ಲೆಕ್ಕದಲ್ಲಿ ಹಾಗೆ ಬದಲಾಗುತ್ತ ಕಾಲ ಹೋದುದು ಒಳ್ಳೆಯದೇ ಆಯಿತು. ಅದು ಮನಸ್ಸಿನಲ್ಲಿಯೇ ಬೆಳೆಯುತ್ತಿತ್ತು. ಈಗ ತೋರುತ್ತಿದೆ ಇನ್ನೂ ಸ್ವಲ್ಪ ಕಾಲ ಕಳೆದಿದ್ದರೆ ಅದು ಇನ್ನಷ್ಟು ಬೆಳೆಯುತ್ತಿತ್ತು.
ಇಷ್ಟೂ ಕಾಲ ಊರಿನೆಲ್ಲೆಡೆ ನಡೆದು ಚೆಮ್ಮೀನ್ ಎಂಬ ಒಂದು ಕಾದಂಬರಿ ಬರೆಯುವವನಿದ್ದೇನೆ ಎಂದು ಊರವರನ್ನು ಹೆದರಿಸಿದ್ದೆ. ಮೀನು ಕಾರ್ಮಿಕರನ್ನು ಸಂಘಟಿಸುವುದು, ವರ್ಗ ಹೋರಾಟಗಳಿಗೆ ಕಾವು ಹೆಚ್ಚಿಸುವುದು ಇತ್ಯಾದಿಗಳನ್ನು ಪ್ರತಿಪಾದಿಸುವ ಕಾದಂಬರಿಯೊಂದನ್ನು ಬರೆಯಬಹುದೆಂದು ಗೆಳೆಯರನೇಕರು ಭಾವಿಸಿದ್ದರು. ಆ ಗೆಳೆಯರಲ್ಲಿ ನನ್ನ ಹಿರಿಯ ಸಹೋದರ ಸಮಾನನಾದ ಮುಂಡಶ್ಯೇರಿ ಮಾಸ್ತರೂ ಇದ್ದರು. ಅದುವರೆಗೆ ನನ್ನ ಸಾಹಿತ್ಯ ಜೀವನದ ವಿಕಾಸ ಪರಿಣಾಮಗಳನ್ನು ಗಮನಿಸಿದವರಿಗೆ ಹಾಗೆಯೇ ಅನ್ನಿಸೀತು. ನಾನು ಅದುತನಕ ಬರೆದುದೆಲ್ಲವೂ ಕಾರ್ಮಿಕ ವರ್ಗದ ಸಂಘಟನೆಯನ್ನು ಮುಂಚೂಣಿಯಲ್ಲಿಟ್ಟು ಎಂದಲ್ಲ, ಆದರೆ ಅದರ ಒಳಹರಿವು ಅದುವೇ ಆಗಿತ್ತು. ಆದರೆ ನನ್ನ ಗೆಳೆಯರು ಅವು ಎಷ್ಟೇ ಹತ್ತಿರವಿದ್ದವರಾಗಿದ್ದರೂ ಹತ್ತಿರದ ಕೆಲವೊಬ್ಬರು ಗೆಳೆಯರು ನನ್ನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿರಲಿಲ್ಲ. ಭೌತಿಕ ಪರಿಸರವನ್ನು ಅವರು ಅರಿತಿರಲಿಲ್ಲವೆಂದು ತೋರುತ್ತದೆ.
ಪ್ರಗತಿಶೀಲ ಸಾಹಿತ್ಯ ರೂಪ ಭದ್ರವಾದ-ಸಾಹಿತ್ಯಕ್ಕೆ ಆಶಯಕ್ಕಿಂತಲೂ ರೂಪವೇ ಮುಖ್ಯವೆಂದು ಪ್ರತಿಪಾದಿಸುವ ಸಾಹಿತ್ಯ ಪಂಥ- ಎಂಬ ಪ್ರಭಾವದಿಂದ ಹೊರಬರಲು ಶ್ರಮಿಸುತ್ತಿದ್ದ ಸಮಯವದು. ಪಿ. ಕೇಶವದೇವ್ ನಾನು, ಏನನ್ನೇ ಬರೆದರೂ ನಾಲ್ಕು ಸುತ್ತಿನಿಂದಲೂ ಕೂಗು ಕೇಕೆ ಹಾಕುವುದು ನಡೆದಿತ್ತು. ಒಮ್ಮೆ ಪ್ರತಿಕ್ರಿಯಿಸಲೂ ಸಾಧ್ಯವಾಗುತ್ತಿರಲಿಲ್ಲ. ದೇವ್‌ಗಾದರೂ ಪುದುಪಳ್ಳಿಯಲ್ಲಿರುವ ಮನೆಯಲ್ಲಿ ಮಲಗಿ ನಿದ್ರಿಸಲು ಕೂಡಾ ಸಾಧ್ಯವಿರಲಿಲ್ಲ ಅಂದರೆ ಬಿಡುತ್ತಿರಲಿಲ್ಲ. ಒಂದು ವಸ್ತುವಿಗೆ ಸಂಬಂಧಿಸಿದ ವಾದ ವಿವಾದದಲ್ಲಿ ದೇವ್ ಮೆಲ್ಲ ಮೆಲ್ಲನೆ ಅವರ ಮನಸ್ಸಿಗೆ ಗೊತ್ತಾಗದಂತೆ ಕಾಂಗ್ರೆಸ್ ಪಕ್ಷವನ್ನು ಸೇರಿದರು ಮತ್ತೆ ನೆಮ್ಮದಿಯಿಂದ ನಿದ್ರಿಸುವುದು ಸಾಧ್ಯವೇ? ದೇವ್‌ಗೆ ಹಟ ಬಂತು. ದೇವ್ ಭೂಮಾಲೀಕನಾದುದು ಪುದುಪಳ್ಳಿಯವರಿಗೆ ಹಿಡಿಸಲಿಲ್ಲ ಎಂದೇ ದೇವ್ ಹೇಳಿದ್ದು. ನನ್ನ ವಿರುದ್ಧವಾದ ಸ್ಟಡಿ ಕ್ಲಾಸುಗಳು ಮೌಲ್ಯ ಕಳೆದುಕೊಳ್ಳಲಿಲ್ಲ. ಅಂದಿನ ವಿಷಯಗಳನ್ನೆಲ್ಲ ಈಗ ನೆನೆಯುವಾಗ ನಗು ಬರುತ್ತಿದೆ. ಅಂದಿನ ವಾದ ಪ್ರತಿವಾದಗಳ ರೀತಿಯೇ ವಿಶಿಷ್ಟವಾಗಿತ್ತು. ಆದರೆ ನನ್ನ ಸುತ್ತಲೂ ಗುಂಪುಗೂಡಿ ವ್ಯಂಗ್ಯವಾಗಿ ಕೂಗುತ್ತಿದ್ದರು. ಪರಿಹಾಸ್ಯ ಮಾಡುತ್ತಿದ್ದರು.
ಒಟ್ಟಿನಲ್ಲಿ ಗೊಂದಲದ ಸಾಹಿತ್ಯ ವಾತಾವರಣ. ಆಗಲೂ ಬರೆದೆ. ಬರೆಯದೆ ಇರಲು ಸಾಧ್ಯವಿರಲಿಲ್ಲ. ಕೆ.ಬಾಲಕೃಷ್ಣನ್ ಕೌಮುದಿಯಲ್ಲಿ ಬರೆದ ಒಂದು ಕತೆಯನ್ನು ನಾನು ನೆನಪು ಮಾಡಿಕೊಳ್ಳುತ್ತಿದ್ದೇನೆ. ಚೆಂಡೆ ಬಾರಿಸುವುದು, ಹೌದು, ಎಲ್ಲೊ ಬೇರೆಯವರಿಗೆ ತೊಂದರೆ ಕೊಡದಿರುವ ಚೆಂಡೆವಾದನವೇ ಸಾಹಿತ್ಯ ಸೃಷ್ಟಿ.
ಅಂದಿನ ತಗಳಿ ಇಂದಿನ ತಗಳಿಯಲ್ಲ. ನನ್ನ ಮನೆಯ ಮುಂದಿನಿಂದಾಗಿ ತಿರುವೆಲ್ಲ-ಅಂಬಲಪುಳ ರಸ್ತೆಯಿದೆ. ಅದೊಂದು ಪ್ರಮುಖ ರಸ್ತೆ. ಸದಾ ವಾಹನ ದಟ್ಟಣೆಯಿರುವ ರಸ್ತೆ. ಈ ರಸ್ತೆ ಹಿಂದೆ ನೀರು ಹರಿಯುವ ಹಳ್ಳವಾಗಿತ್ತು. ನನಗೆ ಈ ಹಳ್ಳದಲ್ಲಿ ಕಟ್ಟಿ ಹಾಕಿದ್ದ ಎರಡು ದೋಣಿಗಳಿದ್ದವು. ನನ್ನ ಮನೆಕೆಲಸಗಳಿಗೆ ಬೇಕಾದ ಕಲ್ಲು, ಗಾರೆ, ಕಟ್ಟಿಗೆ, ಮರಳು ಎಲ್ಲವನ್ನು ದೋಣಿಯಲ್ಲಿಯೇ ತೆಗೆದುಕೊಂಡು ಬರುತ್ತಿದ್ದುದು. ಇಂದು ಕಾಣುವ ಗೇಟ್ ಹಿಂದೆ ನಾನು ಮುಳುಗಿ ಸ್ನಾನ ಮಾಡುತ್ತಿದ್ದ ಕಡವು. ಅಂದು ನಮ್ಮ ಮನೆಯಿರುವ ಸ್ಥಳದ ವಿಶೇಷ ಸೌಕರ್ಯವೆಂದರೆ ಹಳ್ಳದ ಸಮೀಪದಲ್ಲಿರುವುದು. ಇಪ್ಪತ್ತೆಂಟು ಸೆಂಟ್ ಆ ಮನೆಯಿರುವ ಹಿತ್ತಿಲಿನ ವಿಸ್ತೀರ್ಣ. ಅಲ್ಲಿ ಎರಡು ಕೋಣೆಗಳು ಒಂದು ಜಗಲಿಯನ್ನು ಕಲ್ಲು ಕಟ್ಟಿ ತೆಂಗು ಬೊಂಬುಗಳಿಂದ ತೆಂಗಿನಗರಿ ನೇಯ್ದು ಮೇಲ್ಛಾವಣಿ ಮಾಡಿ ಒಂದು ಮನೆ ಕಟ್ಟಿಕೊಂಡಿದ್ದೆ. ಅದರಲ್ಲಿ ನಾನು ಹೆಂಡತಿ ಕಾತ ಮತ್ತು ಮಗಳು ವಾಸ ಮಾಡುತ್ತಿದ್ದೆವು. ಈ ಮನೆಯನ್ನು ಸುಭದ್ರವಾದ ಮನೆಯನ್ನಾಗಿ ಮಾಡಬೇಕೆಂದು ನಾನು ಮತ್ತು ಕಾತ ಆಸೆಪಟ್ಟಿದ್ದೆವು. ಏಳೆಂಟು ಕಾದಂಬರಿ ಹಾಗೂ ತುಂಬಾ ಕತೆಗಳನ್ನು ಬರೆದೆನಾದರೂ ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆ ಕಾದಂಬರಿಗಳಲ್ಲಿ ಕೆಲವೆಲ್ಲ ಪ್ರಸಿದ್ಧಿಯನ್ನು ಪಡೆದಿದ್ದುವು. ಆಗ ಎರಡು ಪ್ರೇರಕ ಶಕ್ತಿಗಳಾಗಿ ಒದಗಿದುವು. ನಾಲ್ಕು ಸುತ್ತಲೂ ಇರುವ ಚೆಂಡೆವಾದನ ಪರಿಹಾಸ್ಯಕ್ಕೆ ಒಂದು ಉತ್ತರ; ಮತ್ತೆ ಮರ ಬಳಸಿ ಛಾವಣಿ ಮಾಡಿ ಹಂಚು ಹೊದಿಸಿ ಗಾಳಿ ಬೆಳಕು ಬರುವ ಒಂದು ಮನೆಯನ್ನು ನಿರ್ಮಿಸುವುದು. ಒಂಬತ್ತನೇ ವಯಸ್ಸಿನಿಂದ ಕಡಲ ತೀರದ ಜೊತೆಗಿನ ಸಾಮೀಪ್ಯ. ಕಡಲಮ್ಮನನ್ನು ಎಲ್ಲಾ ಭಾವದಿಂದಲೂ ಕಂಡಿರುವ ಪರಿಚಯ. ಒಟ್ಟಿನಲ್ಲಿ ಕಡಲಮ್ಮ ಚಾಗರ ಸುಗ್ಗಿ ಎಲ್ಲವೂ ಮನಸ್ಸಿನಲ್ಲಿ ತುಂಬಿ ನಿಂತುವು. ಒಂದು ದಿನ ಬೆಳಗ್ಗೆ ಒಂದು ಸಂಚಿಯನ್ನು ಅದರಲ್ಲಿ ಎರಡು ಮೂರು ಶರ್ಟು ಮುಂಡುಗಳನ್ನು ತುಂಬಿಸಿಕೊಂಡು ಕೋಟ್ಟಯಂಗೆ ಹೋಗಲು ಅಂಬಲಪುಳದಿಂದ ಆಲಪುಳಕ್ಕೆ ಹೋಗಿ ಬೋಟು ಹತ್ತಬೇಕು. ಬೆಳಗ್ಗೆ ತಗಳಿಯಿಂದ ನಡೆದರೆ ಬಸ್ಸು, ಬೋಟು ಹತ್ತಿ ಎರಡು ಗಂಟೆಯ ಹೊತ್ತಿಗೆ ಕೋಟ್ಟಯಂ ತಲುಪಬಹುದು. ಇಂದಿನ ಕೋಟ್ಟಯಂ ಅಲ್ಲಿ ಅಂದು ಅದು ಬೇರೆಯೇ ಒಂದು ಕತೆ.
ಇಂದಿನ ಪ್ರೈವೇಟ್ ಬಸ್‌ಸ್ಟ್ಯಾಂಡಿನಲ್ಲಿ ಅಂದು ಏಳೆಂಟು ಕೋಣೆಗಳಿರುವ ಒಂದು ಎರಡು ಮಹಡಿಗಳ ಕಟ್ಟಡವಿತ್ತು. ಅದೊಂದು ಲಾಡ್ಜ್. ಮಿ. ಮತ್ತಾಯಿ ಎಂಬೊಬ್ಬರು ಅದನ್ನು ನಡೆಸುತ್ತಿದ್ದರು. ಮಿ. ಮತ್ತಾಯಿ ಹಿಂದೆ ರಸ್ತೆ ಬದಿಯಲ್ಲಿ ಒಂದು ಸಸ್ಯಾಹಾರಿ ಉಪಾಹಾರ ಗೃಹವನ್ನು ನಡೆಸುತ್ತಿದ್ದರು. ಅಲ್ಲಿನ ಆಹಾರ ನಿಜವಾಗಿ ತುಂಬಾ ಶುಚಿಯಾಗಿರುತ್ತಿತ್ತು. ಕ್ಷಮಿಸಬೇಕು; ಕೋಟ್ಟಯಂನವರು ಮಿ. ಮತ್ತಾಯಿಗೆ ಕೊಟ್ಟ ಹೆಸರು ಮತ್ತಾಯಿ ಪೋತ್ತಿ ಎಂದು.
ಮತ್ತಾಯಿ ನಡೆಸುತ್ತಿದ್ದ ಲಾಡ್ಜ್ ಕಾರಪುಳಿ ಅರಯ್ಕಲ್ ಕುಟುಂಬದವರಿಗೆ ಸೇರಿದ್ದು ಅಂದು ಎಸ್.ಪಿ.ಸಿ.ಎಸ್.(ಸಾಹಿತ್ಯ ಪ್ರವರ್ತಕ ಸಹಕರಣ ಸಂಘ)ನ ಸೇಲ್ಸ್ ಮ್ಯಾನೇಜರ್ ಆಗಿದ್ದ ಡಿ.ಸಿ. ಕಿಳಕ್ಕೇಮುರಿ ನನ್ನನ್ನು ಮತ್ತಾಯಿಗೆ ಒಪ್ಪಿಸಿದರು(೧೯೫೬ರಲ್ಲಿ ಕೋಟ್ಟಯಂಗೆ ಬಂದ ತಗಳಿ ಬರೆಯಲು ಪ್ರಶಾಂತವಾದ ಸ್ಥಳವನ್ನರಸಿ ಬಂದಿದ್ದರೆಂದು, ಅದೇ ಲಾಡ್ಜ್‌ನಲ್ಲಿ ತಗಳಿ ಚೆಮ್ಮೀನ್ ಬರೆದರೆಂದು ಡಿ.ಸಿ. ಕಿಳಕ್ಕೇಮುರಿ ಒಂದೆಡೆ ಬರೆದುಕೊಂಡಿದ್ದಾರೆ).
ನನ್ನ ಅಪ್ಪ ದೋಣಿ, ಬಲೆ ಕೊಂಡು ತರೋದಕ್ಕೆ ಹೋಗ್ತಾರೆ ಎಂದು ಅಂದು ಬರೆಯ ತೊಡಗಿದೆ. ನಾನು ಒಂಬತ್ತನೇ ವಯಸ್ಸಿನಿಂದಲೇ ಕೇಳಿಸಿಕೊಳ್ಳುತ್ತ ಬಂದ ಮಾತಿನ ರೀತಿಯಿದು.
ಯಾವಾಗಲೂ ಸಂಜೆ ಹೊತ್ತಿಗೆ ಬೋಟ್‌ಹೌಸ್ ಲಾಡ್ಜಿಗೆ(ಅದು ಮಿ. ಮತ್ತಾಯಿ ನಡೆಸುತ್ತಿದ್ದ ಲಾಡ್ಜಿನ ಹೆಸರು) ಬರುತ್ತಿದ್ದವರಲ್ಲಿ ಒಂದು ಹೆಸರು ಹೇಳುವುದಕ್ಕಿದೆ. ಸಿ.ಜೆ. ಥೋಮಸ್. ಸಿ.ಜೆ.ಯವರು ಬರುತ್ತಿದ್ದುದಕ್ಕೂ ಒಂದು ಉದ್ದೇಶವಿತ್ತು. ಅಂದಂದು ಬರೆದುದನ್ನು ಓದುವುದು. ಒಂದು ಅಕ್ಷರವನ್ನೂ ಮಾತನಾಡುವುದೆಂದಿಲ್ಲ. ಓದುತ್ತಾ ಹೋಗುವುದು. ಹಾಗೆ ಚೆಮ್ಮೀನ್ ಮೊದಲು ಓದಿದವರು ಸಿ.ಜೆ. ಥೋಮಸ್ ಎಂದೇ ಹೇಳಬಹುದು. ಅಂದು ಸಿ.ಜೆ. ಸಾಹಿತ್ಯ ಪ್ರವರ್ತಕ ಸಹಕರಣ ಸಂಘದಲ್ಲಿ ಕವರ್ ಡಿಸೈನರ್ ಆಗಿದ್ದರು.
ನಿತ್ಯ ಸಂದರ್ಶಕರಲ್ಲಿ ಇನ್ನೊಬ್ಬರು ಡಿ.ಸಿ. ಕಿಳಕ್ಕೇಮುರಿ. ಹಾಗೆ ಎಂಟನೇ ಪುಟದಲ್ಲಿ ಚೆಮ್ಮೀನ್ಗೆ ಅಡಿಗೆರೆಯೆಳೆದರು. ಮತ್ತಾಯಿ ಪೋತ್ತಿ ಸ್ವಲ್ಪ ಬಿಯರ್ ಕುಡಿಯಲು ನನಗೆ ಅನುಮತಿ ನೀಡಿದರು.
ಶಂಕರಮಂಗಳ ಮನೆ ಕಟ್ಟಲು ಕಷ್ಟಪಡಬೇಕಾಗಿ ಬರಲಿಲ್ಲ. ಚೆಮ್ಮೀನ್ ಪುಸ್ತಕ ತುಂಬಾ ಮಾರಾಟವಾಗಿತ್ತು. ಮರದಿಂದ ಛಾವಣಿ ನಿರ್ಮಿಸಿ ಹಂಚು ಹೊದಿಸಿದೆ. ಮೂರ್‍ನಾಲ್ಕು ಕೋಣೆಗಳನ್ನು ಸೇರಿಸಿ ಕಟ್ಟಿಸಿದೆ. ಇಪ್ಪತ್ತೆಂಟು ಸೆಂಟ್ ಹಿತ್ತಿಲು ವಿಸ್ತಾರಗೊಂಡುದು ಎಲ್ಲವೂ ಬೇರೊಂದು ಕತೆ.
ಮಲಯಾಳಂನಲ್ಲಿ ಮೊದಲ ಸಾಹಿತ್ಯ ಅಕಾಡೆಮಿ ಅವಾರ್ಡ್ ಸಿಕ್ಕ ಕಾದಂಬರಿ ಚೆಮ್ಮೀನ್. ಜವಾಹರ್‌ಲಾಲ್ ನೆಹರು ತಮ್ಮ ಕೈಗಳಿಂದ ಅದನ್ನು ನನಗೆ ಕೊಟ್ಟರು. ಡಾ. ಎಸ್.ರಾಧಾಕೃಷ್ಣನ್ ಅದನ್ನು ನೋಡುತ್ತ ಕುಳಿತು ಚಪ್ಪಾಳೆ ತಟ್ಟಿದರು. ಆ ಹಣದಿಂದ ಕೊಲ್ಲತ್ತಡಿ ಪಾಡದಲ್ಲಿ ಅರುವತ್ತು ಪರೆ ಭತ್ತ ಬೆಳೆಯುವ ಜಾಗ ಖರೀದಿಸಿದೆ.
ಚೆಮ್ಮೀನ್ ಹಲವು ಭಾಷೆಗಳಲ್ಲಿ ಅನುವಾದವಾಗಿದೆ. ಮೊತ್ತಮೊದಲಿಗೆ ಚೆಕ್ ಭಾಷೆಯಲ್ಲಿ ಅನುವಾದವಾಯಿತು. ಕಮಿಲ್‌ಸ್ವೆಲಿಬಿಲ್ ಎಂಬವರು ಅನುವಾದಿಸಿದರು. ಅವರು ತಮಿಳು ವಿದ್ವಾಂಸರು. ಮತ್ತೆ ಮಲಯಾಳಂ ಕಲಿತರು. ಮದರಾಸಿಗೆ ಬಂದಿದ್ದಾಗ ಚೆಮ್ಮೀನ್ ಎಂಬ ಮಲಯಾಳಂ ಕಾದಂಬರಿ ಬಗೆಗೆ ಕೇಳಿದ್ದರು. ಅವರಿಗೆ ಚೆಮ್ಮೀನ್ ಅರ್ಥ ಮಾಡಿಕೊಳ್ಳಲು ಕಷ್ಟವಾಗಲಿಲ್ಲ. ಅನುವಾದ ಮಾಡಿದರು. ರಂಡಿಡಙಳಿಯನ್ನೂ ಅವರು ಚೆಕ್ ಭಾಷೆಗೆ ಅನುವಾದಿಸಿದರು. ಬಳಿಕ ಯುನೆಸ್ಕೋ ನೇತೃತ್ವದಲ್ಲಿ ಎಲ್ಲಾ ಯುರೋಪಿಯನ್ ಭಾಷೆಗಳಿಗೂ ಚೆಮ್ಮೀನ್ ಅನುವಾದಗಳಾದುವು. ನಡುವೆ ಒಂದು ವಿಷಯ. ಚೆಕ್ ಭಾಷೆಯ ಅನುವಾದದ ನಂತರ ರಷ್ಯನ್ ಅನುವಾದವೂ ಬಂತು. ಏಷ್ಯನ್ ಭಾಷೆಗಳಲ್ಲಿ ಅಂದರೆ ಅರಬಿಕ್, ಜಪಾನೀಸ್, ವಿಯೆಟ್ನಾಮೀಸ್, ಸಿಂಗಾಳೀಸ್, ಚೈನೀಸ್ ಈ ಭಾಷೆಗಳಿಗೆ ಅನುವಾದವಾದುವು. ಚೆಂಡೆ ಬಾರಿಸುತ್ತಾ ಜಯಘೋಷ ಮಾಡಿಕೊಂಡು ಅನ್ಯಖಂಡಗಳಿಗೆ ಹಾರಿದ್ದರಿಂದ ಇಷ್ಟೆಲ್ಲ ಫಲಿಸಿತು. ಅದು ದೊಡ್ಡ ಯಶಸ್ಸೆಂದು ಹೇಳುವುದಿಲ್ಲ. ತಪ್ಪಾಗಿರಬಹುದು. ಕಾಲವೇ ಅದನ್ನು ತಿಳಿಸಬಹುದು.
೧೯೯೫ –ತಗಳಿ ಶಿವಶಂಕರ ಪಿಳ್ಳೆ
‘ಚೆಮ್ಮೀನ್ ಕನ್ನಡಾನುವಾದ: ಪ್ರಸ್ತಾವನೆ
ಚೆಮ್ಮೀನ್ ಮಲಯಾಳಂ ಭಾಷೆಯ ಕಾದಂಬರಿ. ಇದನ್ನು ಬರೆದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ತಗಳಿ ಶಿವಶಂಕರ ಪಿಳ್ಳೆ. ಇದರ ಕನ್ನಡ ಅನುವಾದ ಕೆಂಪು ಮೀನು ಎಂಬ ಹೆಸರಿನಲ್ಲಿ ೧೯೬೪ರಲ್ಲಿಯೇ ಪ್ರಕಟವಾಗಿದೆ. ಅನುವಾದಕರು ನಾ.ಕಸ್ತೂರಿ.
ಸಾಮಾನ್ಯವಾಗಿ ಮಲಯಾಳಂ ಕನ್ನಡ ಅನುವಾದಗಳನ್ನು ಕುರಿತು ಮಾತನಾಡುವಾಗಲೆಲ್ಲ ಕೆಂಪು ಮೀನು ಅನುವಾದ ಶೀರ್ಷಿಕೆಯೇ ಸಮರ್ಪಕವಲ್ಲ ಎಂಬ ಮಾತು ಮುಂಚೂಣಿಗೆ ಬರುತ್ತಿರುತ್ತದೆ. ಕೆಂಪು ಮೀನು ಎಂಬುದು ಮೂಲ ಕಾದಂಬರಿಯ ಚೆಮ್ಮೀನ್‌ಗೆ ಪರ್ಯಾಯ ಪದವಲ್ಲ. ಮಲಯಾಳಂ ಪರಿಸರದ ಓದುಗರಿಗೆ ಅದು ಗೊತ್ತಿರಬಹುದು. ಕೆಂಪು ಮೀನು ವಾಸ್ತವವಾಗಿ ಈ ಹೆಸರಿನಿಂದ ಗುರುತಿಸುವ ಹಾಗೊಂದು ಮೀನು ಇಲ್ಲ. ಮೀನುಗಳ ಪರಿಚಯವೇ ಇಲ್ಲದವರಿಗೆ ಅದು ವಿಷಯವೇ ಅಲ್ಲ.
ಚೆಮ್ಮೀನನ್ನು ಕೆಂಪು ಮೀನು ಎಂದು ಅನುವಾದಿಸುವುದಕ್ಕೆ ಕಾರಣವಿದೆ. ಮೂಲ ದ್ರಾವಿಡದಿಂದ ಕನ್ನಡವೇ ಮೊದಲಾದ ಭಾಷೆಗಳು ಕವಲೊಡೆದು ಪ್ರತ್ಯೇಕವಾಗುವ ಸಂದರ್ಭದಲ್ಲಿ ಮೂಲ ದ್ರಾವಿಡದ ಪದಾದಿಯ ಕಕಾರಗಳು ಕೆಲವು ಭಾಷೆಗಳಲ್ಲಿ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಚಕಾರವಾಗುವ ಪ್ರವೃತ್ತಿ ಇದೆಯೆಂಬುದನ್ನು ಭಾಷಾವಿಜ್ಞಾನಿಗಳು ಗುರುತಿಸಿದ್ದಾರೆ. ಇದನ್ನು ಕಕಾರ ತಾಲವ್ಯೀಕರಣ ಎಂದು ಹೇಳಲಾಗುತ್ತದೆ. ಈ ತಾಲವ್ಯೀಕರಣ ಪ್ರವೃತ್ತಿಗಳು ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ವ್ಯವಸ್ಥಿತವಾಗಿ ನಡೆದಿವೆ. ಆದರೆ ಕನ್ನಡದಲ್ಲಿ ನಡೆದಿಲ್ಲ ಎಂಬುದು ನಿಜವಾದರೂ ಕೆಲವು ಅಪವಾದಗಳು ಸಿಗುತ್ತವೆ. ಉದಾಹರಣೆಗೆ, ಕೆಂದೆಂಗು-ಚೆಂದೆಂಗು, ಕೆಂದಳಿರು-ಚೆಂದಳಿರು, ಕೇರೆ-ಚೇರ, ಕೇನೆ-ಚೇನೆ ಹೀಗೆ. ಈ ನೆಲೆಯಲ್ಲಿ ಮೂಲ ದ್ರಾವಿಡದ ಕೆಮ್ಮೀನ್ ತಾಲವ್ಯೀಕರಣಗೊಂಡು ಚೆಮ್ಮೀನ್ ಆಗಿರಬಹುದು. ಕೆಮ್ಮೀನ್ ಚೆಮ್ಮೀನ್ ಆಗಿದೆ ಎಂಬ ತರ್ಕದಲ್ಲಿ ಕೆಮ್ಮೀನ್ ಎಂಬುದಕ್ಕೆ ಕೆಂಪು ಮೀನು ಎಂಬ ಅರ್ಥದಲ್ಲಿ ಈ ಪದವನ್ನು ಬಳಸಲಾಗಿದೆ. ಭಾಷಾವಿಜ್ಞಾನದ ದೃಷ್ಟಿಯಿಂದ ಈ ಅನುವಾದ ಸರಿಯಿರಬಹುದು. ಹಾಗಾಗಿ ಕೆಂಪು ಮೀನು ಕನ್ನಡ ಪದ ಸಮರ್ಥನೀಯವೇ ಆಗಬಹುದು.
ಚೆಮ್ ಎಂಬುದು ಮಲಯಾಳಂನಲ್ಲಿ ಕೆಂಪನ್ನು ಸೂಚಿಸುವ ಧಾತು. ಉದಾಹರಣೆಗೆ ಚೆಮ್ಮಾನ್-ಕೆಂಪು ಜಿಂಕೆ, ಚೆಮ್ಮಾನಂ-ಕೆಂಪು ಆಕಾಶ ಇತ್ಯಾದಿ ಆದರೆ ವಾಸ್ತವದ ಚೆಮ್ಮೀನಿನ ಚೆಮ್ ಕೆಂಪು ಎಂಬರ್ಥದಲ್ಲಿ ಇರಬಹುದು. ಆದರೆ ಅವುಗಳಲ್ಲಿ ಬಿಳಿ ಬಣ್ಣದವುಗಳು ಇವೆ. ಆದರೆ ಒಣಗಿಸಿದ ಚೆಮ್ಮೀನು ನಸುಗೆಂಪು ಬಣ್ಣದಲ್ಲಿಯೇ ಇರುತ್ತದೆ. ಆದರೆ ಉಳಿದ ಮೀನುಗಳಂತೆ ಬೆಳ್ಳಗಿರುವುದಿಲ್ಲ.
ಹಾಗೆಯೇ ಮಲಯಾಳಂನಲ್ಲಿ ಚೆಂಬಲ್ಲಿ (Red Snapper) ಎಂಬ ಮೀನಿದೆ. ಇದರ ಬಣ್ಣ ನಸುಗೆಂಪು. ಕಾಸರಗೋಡು ಪ್ರದೇಶದಲ್ಲಿ ಏರಿ, ಕೆಂಪೇರಿ ಅಥವಾ ಚೆಂಬೇರಿ ಹೆಸರಿನ ಮೀನುಗಳಿವೆ. ಇವುಗಳಲ್ಲಿ ಕೆಂಪೇರಿ ಅಥವಾ ಚೆಂಬೇರಿಯ ಬಣ್ಣವೂ ನಸುಗೆಂಪು ಎಂಬುದನ್ನಿಲ್ಲಿ ನೆನಪಿಸಿಕೊಳ್ಳಬಹುದು. ಮಲಯಾಳಂನಲ್ಲಿ ಚೋನ ಮೀನು ಎಂಬುದೊಂದು ಬಗೆಯಿದೆ. ಚೋನ ಮೀನು ಎಂದರೆ ಕೆಂಪು ಮೀನು ಎಂದೇ ಅರ್ಥ. ಇದನ್ನು ಪುದಿಯಾಪ್ಳೆ ಮೀನು (ಮದುಮಗ ಮೀನು) ಎಂದು ಹೇಳಲಾಗುತ್ತದೆ. ಕಾಸರಗೋಡು ಕನ್ನಡದಲ್ಲಿ ಇದಕ್ಕೆ ಮದುವಳ್ತಿ ಮೀನು ಎಂದು ಹೇಳಲಾಗುತ್ತದೆ. ಹಾಗಾಗಿ ಕೆಂಪು ಮೀನು ಎಂದರೆ Red fish ಎಂದೇ ಅರ್ಥವಾಗುತ್ತದೆ. ಆಗ ಅದನ್ನು ಚೆಮ್ಮೀನು ಎಂದು ಅರ್ಥೈಸಲಾಗದು.
ಅನುವಾದದ ದೃಷ್ಟಿಯಿಂದ ನೋಡಿದರೆ ಕೆಂಪು ಮೀನು ಒಂದು ಸಾಂಕೇತಿಕ ಪದ. ಕನ್ನಡ ಸಂದರ್ಭದಲ್ಲಿ ಅನುವಾದದ ಮೂಲಕ ದೊರೆತ ಹೊಸತೊಂದು ಸಂಯುಕ್ತ ಪದ. ಇದು ಕಾದಂಬರಿಯ ಮಟ್ಟಿಗೆ ನಿರ್ದಿಷ್ಟವಾಗಿ ಒಂದು ಮೀನನ್ನು ಉದ್ದೇಶಿಸಿದ ನಾಮಪದ. ಇದರಿಂದ ಸಂವಹನಕ್ಕೆ ತೊಡಕೇನೂ ಇಲ್ಲ. ವಾಸ್ತವದ ಮೀನೊಂದನ್ನು ನಿರ್ದೇಶಿಸುವುದಿಲ್ಲ ಎಂದು ಮಾತ್ರ. ಮೂಲಭಾಷೆಯ ಚೆಮ್ಮೀನ್ ಎಂಬುದನ್ನು ಸಾಂಕೇತಿಕವಾಗಿ ತೆಗೆದುಕೊಂಡಾಗ ಕೆಂಪು ಮೀನು ಶೀರ್ಷಿಕೆ ಸಮರ್ಪಕವಾಗಿಯೇ ಇದೆ.
ಮೂಲ ಭಾಷೆಯನ್ನು ಬಲ್ಲವರಿಗೆ ಹಾಗೂ ಆ ಸಂಸ್ಕೃತಿಯ ಪರಿಚಯ ಇರುವವರಿಗೆ ಚೆಮ್ಮೀನ್ ಎಂದರೆ ಕೆಂಪು ಮೀನು ಅಲ್ಲ ಎಂದು ತಿಳಿಯುತ್ತದೆ. ಹಾಗೆಯೆ ಚೆಮ್ಮೀನ್‌ಗೆ ಸಿಗಡಿ, ಸೀಗಡಿ ಎಂದು ಕನ್ನಡದಲ್ಲಿ ಬಳಕೆಯಲ್ಲಿರುವ ಪದ. ಅದೂ ದಕ್ಷಿಣದ ಕರಾವಳಿ ಕನ್ನಡದಲ್ಲಿ. ಉತ್ತರ ಕರಾವಳಿಯ ಕುಂದಾಪುರದಲ್ಲಿ ಚೆಟ್ಲೀ ಎಂದು, ಕಾರವಾರದಲ್ಲಿ ಅದನ್ನು ಶೆಟ್ಲಿ ಎಂದು ಹೇಳಲಾಗುತ್ತದೆ. ಉತ್ತರ ಒಳನಾಡಿನಲ್ಲಿ ಶೀಂಗಡಿ, ಶಿಂಗಡಿ ಎಂದೂ ಬಳಕೆಯಲ್ಲಿದೆ. ಅಂದರೆ ಕನ್ನಡ ನಾಡಿನಲ್ಲಿಯೇ ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತದೆ. ಅಂದರೆ ಚೆಮ್ಮೀನ್ನ ಯಥಾವತ್ತಾದ ಕನ್ನಡ ಅನುವಾದವಾಗಿ ಯಾವ ಪದವನ್ನು ಬಳಸಬೇಕು ಎಂಬುದೂ ಗೊಂದಲವೇ. ಕಲಾಕೃತಿಗೆ ವಾಸ್ತವದ ಹಂಗು ಬೇಕಾಗಿಲ್ಲ. ವಾಸ್ತವವನ್ನು ಮೀರಿ ಆಸ್ವಾದನ ಯೋಗ್ಯವಾಗುವುದೇ ಸಾಹಿತ್ಯ ಕಲೆಯ ಗುಣಾಂಶ ಎಂಬುದೇ ಸರಿಯಿರಬಹುದು. ಆಗ ವಾಸ್ತವದ ಗೊಂದಲವನ್ನು ಕೃತಿ ಮೀರಿ ನಿಲ್ಲಬಹುದು. ಹಾಗಾಗಿ ಪ್ರಸ್ತುತ ಮೂಲ ಕಾದಂಬರಿ ಶೀರ್ಷಿಕೆಯನ್ನು ನೆನಪಿಸುವ ಅನುವಾದ ಚೆಮ್ಮೀನು ಸೂಕ್ತ ಎಂದೇ ಭಾವಿಸಲಾಗಿದೆ. ಇಂಗ್ಲೀಷನ್ನು ಒಳಗೊಂಡಂತೆ ಅನೇಕ ಭಾಷೆಗಳ ಅನುವಾದಗಳಲ್ಲಿ ಚೆಮ್ಮೀನ್ ಎಂಬ ಶೀರ್ಷಿಕೆಯನ್ನೇ ಬಳಸಿಕೊಳ್ಳಲಾಗಿದೆ. ಇಂಗ್ಲೀಷ್‌ನ Prawn ಅಥವಾ Shrimp ಎಂದು ಅನುವಾದಿಸಲಿಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು(ಕೊನೆಯಲ್ಲಿರುವ ಅನುವಾದ ಪಟ್ಟಿಯನ್ನು ನೋಡಬಹುದು). ಡಚ್ ಭಾಷಾಂತರದ ಶೀರ್ಷಿಕೆ ಕರುತ್ತಮ್ಮ(Karoethamma) ಎಂದಿದೆ. ಇದು ಕರುತ್ತಮ್ಮಳ ಕಥೆಯೇ ಅಲ್ಲವೇ?
ಕೊಂಕಣಿ ಭಾಷೆಯಲ್ಲಿ ಸುಂಗಟ ತುಳುವಿನಲ್ಲಿ ಎಟ್ಟಿ ಎಂಬಿತ್ಯಾದಿಯಾಗಿ ಕನ್ನಡ ನಾಡಿನಲ್ಲಿಯೇ ವಿಭಿನ್ನವಾಗಿ ಹೆಸರಿಸಲಾಗುತ್ತದೆ. ಹಾಗೆಯೇ ಮಲಯಾಳಂನಲ್ಲಿಯೇ ಚೆಮ್ಮೀನ್ ಎಂದು ಕೆಲವು ಪ್ರದೇಶಗಳಲ್ಲಿ ಮಾತ್ರ ಹೇಳಲಾಗುತ್ತದೆ. ಕೆಲವೆಡೆ ಕೊಂಜಿ, ಇಟ್ಟಿ ಎಂದೇ ಸಾಮಾನ್ಯವಾಗಿ ಬಳಕೆಯಲ್ಲಿರುವ ಪದ. ಅಲ್ಲದೆ ಚಿಳಿಚೀಮಂ, ಚಿಂಗಡಂ, ನಳಮೀನಂ ಇತ್ಯಾದಿ ಹೆಸರುಗಳು ಇವೆ. ಬರಹದ ಭಾಷೆ, ಅಕ್ಷರಸ್ಥರ ಬಳಕೆಯ ಭಾಷೆ ಇತ್ಯಾದಿಗಳಲ್ಲಿ ಇತ್ತೀಚಿನ ದಶಕಗಳಲ್ಲಿ ಚೆಮ್ಮೀನ್ ಎಂಬುದು ಕೇರಳದಲ್ಲಿ ಸಾರ್ವತ್ರಿಕವಾಗಿ ಕೇಳಿಸುತ್ತಿರುವ ಪದ. ಇತ್ತೀಚೆಗೆ ಕಾಸರಗೋಡಿನ ಬಹುತೇಕ ಕನ್ನಡಿಗರ ಬಳಕೆಯಲ್ಲಿ ಚೆಮ್ಮೀನ್ ಎಂಬುದು ಚೆಮ್ಮೀನು ಎಂದೇ ಇದೆ. ಆದರೆ ಚೆಮ್ಮೀನಿಗೆ ಕೆಂಪು ಮೀನು ಎಂದು ಎಲ್ಲಿಯೂ ಬಳಕೆಯಲ್ಲಿ ಇಲ್ಲ.
ಇದರ ಶೀರ್ಷಿಕೆ ಕಳೆದ ಮೂರ್‍ನಾಲ್ಕು ದಶಕಗಳ ಅವಧಿಯಲ್ಲಿ ವೇದಿಕೆಗಳಲ್ಲಿ ಬಹುಚರ್ಚಿತ ವಿಷಯ. ಕಾದಂಬರಿಯ ಶೀರ್ಷಿಕೆ ಕೇವಲ ಸಾಂಕೇತಿಕವಾಗಿ ಮಾತ್ರ ಇದೆ. ಅದರಲ್ಲಿ ಚೆಮ್ಮೀನಿನ ಕತೆಯೇನೂ ಇಲ್ಲ. ಆದರೆ ಚೆಮ್ಮೀನೇ ಮೊದಲಾದ ಸಮುದ್ರೋತ್ಪನ್ನಗಳನ್ನು ಅವಲಂಬಿಸಿ ಕಡಲತೀರದಲ್ಲಿ ಬದುಕುವ ಸಮುದಾಯವೊಂದರ ಬದುಕಿನ ವಿವರಗಳನ್ನು ಹೃದ್ಯವಾಗಿ ಅನಾವರಣಗೊಳಿಸುವ ಕಾದಂಬರಿಯಿದು.
ಇಲ್ಲಿ ಸರಳವಾದ ಒಂದು ಕತೆ ಇದೆ. ಇದು ತ್ರಿಕೋನ ಪ್ರೇಮದ ಕತೆ. ಕರುತ್ತಮ್ಮ ಎಂಬ ಹುಡುಗಿ ಹಾಗೂ ಪರೀಕುಟ್ಟಿ ಮತ್ತು ಪಳನಿ ಎಂಬ ಹುಡುಗರ ನಡುವಿನ ಪ್ರೇಮ ಸಂಬಂಧ ಕತೆ. ಚೆಂಬನ್‌ಕುಞ್ಞು, ಚಕ್ಕಿ ದಂಪತಿಗಳಿಗೆ ಇಬ್ಬರು ಹೆಣ್ಣುಮಕ್ಕಳು. ಕರುತ್ತಮ್ಮ ಮತ್ತು ಪಂಚಮಿ. ಕಡಲತೀರದಲ್ಲಿ ಮೀನು ವ್ಯಾಪಾರ ಮಾಡುವ ಮುಸ್ಲಿಂ ಯುವಕ ಪರೀಕುಟ್ಟಿ ಸಣ್ಣ ಸಾಹುಕಾರ. ಬಾಲ್ಯದಿಂದಲೇ ಕರುತ್ತಮ್ಮಳ ಒಡನಾಡಿ. ಬಡಬೆಸ್ತನಾದ ಚೆಂಬನ್‌ಕುಞ್ಞನಿಗೆ ಸ್ವಂತವಾದ ದೋಣಿ, ಬಲೆಗಳನ್ನು ಖರೀದಿಸಿ ಮೀನು ಹಿಡಿದು ಹಣಗಳಿಸಿ ಶ್ರೀಮಂತನಾಗುವ ಆಸೆ. ಕರುತ್ತಮ್ಮಳಿಗಾಗಿ ಏನನ್ನೂ ಮಾಡಲು ಸಿದ್ಧನಿರುವ ಪರೀಕುಟ್ಟಿ ಚೆಂಬನ್‌ಕುಞ್ಞನಿಗೆ ದೋಣಿ ಕೊಂಡುಕೊಳ್ಳಲು ಹಣಕೊಡುತ್ತಾನೆ. ದೋಣಿಯನ್ನು ಕೊಂಡುಕೊಳ್ಳುವ ತೀವ್ರವಾದ ಆಸೆಯಲ್ಲಿ ಚೆಂಬನ್‌ಕುಞ್ಞನಿಗೆ ಪರೀಕುಟ್ಟಿಯ ಔದಾರ್ಯದ ರಹಸ್ಯ ಗೊತ್ತಾಗುವುದೂ ಇಲ್ಲ. ತಂದೆ ಪರೀಕುಟ್ಟಿಯಿಂದ ಹಣ ಪಡೆದುಕೊಳ್ಳುವುದು ಕರುತ್ತಮ್ಮಳಿಗೆ ಇಷ್ಟವಿಲ್ಲ. ಏಕೆಂದರೆ ತನ್ನ ತಂದೆ ಪರೀಕುಟ್ಟಿಯ ಹಣದ ಋಣಕ್ಕೆ ಬಿದ್ದ ಮೇಲೆ ಅವನ ವ್ಯಾಮೋಹದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂಬುದು ಕರುತ್ತಮ್ಮಳಿಗೂ ಗೊತ್ತು. ಆದರೆ ಆಕೆ ತನ್ನ ಪ್ರೇಮದ ವಿಷಯವನ್ನು ಬಹಿರಂಗವಾಗಿ ಹೇಳಿಕೊಳ್ಳುವ ಸ್ಥಿತಿಯಲ್ಲಿಯೂ ಇಲ್ಲ.
ಚೆಂಬನ್‌ಕುಞ್ಞ ಸ್ವಂತ ದೋಣಿಯಲ್ಲಿ ದುಡಿದು ಶ್ರೀಮಂತನಾಗುತ್ತಾನೆ. ಆದರೆ ಪರೀಕುಟ್ಟಿಯ ಸಾಲವನ್ನು ಹಿಂತಿರುಗಿಸುವುದಿಲ್ಲ. ಶ್ರೀಮಂತಿಕೆಯೊಡನೆ ಅವನ ಅಹಂಕಾರವೂ ಹೆಚ್ಚುತ್ತದೆ. ಸುತ್ತಮುತ್ತಲ ಜನರೊಡನೆ ಅವನ ವರ್ತನೆ ಕ್ರೂರವಾಗಿರುತ್ತದೆ. ಆಗಾಗ ಪರೀಕುಟ್ಟಿಯೊಡನೆ ಕರುತ್ತಮ್ಮ ಮಾತನಾಡುವುದನ್ನು ನೋಡಿದ ಜನರು ಚೆಂಬನ್‌ಕುಞ್ಞನಿಗೆ ಹಠಾತ್ತನೆ ಉಂಟಾದ ಶ್ರೀಮಂತಿಕೆಗೂ ಕರುತ್ತಮ್ಮಳ ಸೌಂದರ್ಯಕ್ಕೂ ತಳುಕು ಹಾಕಿ ಮಾತನಾಡುತ್ತಾರೆ. ಮೀನುಗಾರರ ಸಂಪ್ರದಾಯದಂತೆ ಬೇರೆ ಜಾತಿಯವನನ್ನು ಕರುತ್ತಮ್ಮ ಮದುವೆಯಾಗುವಂತಿಲ್ಲ. ಆಕೆಯ ತಂದೆಗೆ ಬಂದ ಶ್ರೀಮಂತಿಕೆ ಹಾಗೂ ತ್ಯಾಗದಿಂದ ಪರೀಕುಟ್ಟಿಗೆ ಬಂದ ಬಡತನ ಕರುತ್ತಮ್ಮಳ ಪ್ರೇಮಕ್ಕೆ ಮುಳುವಾಯಿತು. ಇವರ ಪ್ರೇಮವನ್ನು ತಿಳಿದ ಕರುತ್ತಮ್ಮಳ ಹೆತ್ತವರು ದೂರದೂರಿನ ಅನಾಥನೂ ಬಡವನೂ ಆದರೆ ಮೀನು ಹಿಡಿಯುವುದರಲ್ಲಿ ಗಟ್ಟಿಗನಾದ ಪಳನಿ ಎಂಬವನೊಡನೆ ಅವಸರವಾಗಿ ಮದುವೆ ಮಾಡಿಕೊಡಲು ನಿಶ್ಚಯಿಸುತ್ತಾರೆ. ಪಳನಿ ಪ್ರೀತಿಯನ್ನೇ ಅರಿಯದ ಆದರೆ ದೈಹಿಕವಾಗಿ ಬಲಾಢ್ಯನಾದ ಹುಡುಗ. ಕರುತ್ತಮ್ಮಳಿಗಾಗಿ ತಂದೆಯೇ ಆಯ್ಕೆ ಮಾಡಿದ ಗಂಡು. ಆದರೆ ಪಳನಿಯಂತಹ ಬಡವನಿಗೆ ಕರುತ್ತಮ್ಮಳಂತಹ ಸೌಂದರ್ಯವತಿಯನ್ನು ಅವಸರದಲ್ಲಿ ಮದುವೆ ಮಾಡಿ ಕೊಡಬೇಕಾದರೆ ಆಕೆಯಲ್ಲಿ ಏನೋ ದೋಷವಿರಬೇಕು ಎಂದು ಜನರ ಗುಸು ಗುಸು ಆರಂಭವಾಗುತ್ತದೆ. ಪರೀಕುಟ್ಟಿಯ ತ್ಯಾಗ, ಔದಾರ್ಯ, ನಿಷ್ಕಳಂಕ ಪ್ರೇಮ ಎಲ್ಲವನ್ನು ಮರೆತು ಆದರ್ಶ ಮರಕಾಲ್ತಿಯಾಗಿ ಬದುಕಬೇಕೆಂಬ ಕನಸು ಕಂಡ ಪಳನಿಯೊಂದಿಗೆ ಸಂಸಾರ ಹೂಡಿದ ಕರುತ್ತಮ್ಮಳಿಗೆ ಅವಳ ಗುಪ್ತಪ್ರೀತಿ ಹಾಗೂ ಸೌಂದರ್ಯ ಕಾಡತೊಡಗುತ್ತದೆ.
ಗಂಡ ಪಳನಿಯೊಡನೆ ಹೊಂದಿಕೊಂಡು ಬಾಳುವೆ ನಡೆಸಲು ಪ್ರಯತ್ನಿಸುತ್ತಾಳೆ. ಆದರೆ ಪಳನಿಯ ಸಂಶಯ ಹೆಚ್ಚುತ್ತದೆ. ಜನರು ತಲೆಗೊಂದರಂತೆ ಮಾತನಾಡುತ್ತಾರೆ. ಪರಿಣಾಮ ಬದುಕು ಕುಸಿಯತೊಡಗುತ್ತದೆ. ಪಳನಿಯ ಸಂಗಡಿಗರೂ ಅವನನ್ನು ಕೈ ಬಿಡುತ್ತಾರೆ. ಕಾರಣವೇನೆಂದರೆ ಪ್ರಾಣ ಭಯ. ಹೆಂಡತಿಯ ಪಾತಿವ್ರತ್ಯವೇ ಕಡಲಿಗೆ ಹೋದ ಬೆಸ್ತರ ಪ್ರಾಣ ಕಾಪಾಡುವ ಶಕ್ತಿ ಎಂಬುದು ಅವರ ನಂಬಿಕೆ.
ಮನಸ್ಸಿಗೆ ಶಾಂತಿಯೇ ಇಲ್ಲದ ಪಳನಿ ಕಾರ್ಮೋಡ, ಬಿರುಗಾಳಿಯಿಂದ ಒಂದು ರಾತ್ರಿಯಲ್ಲಿ ಸಮುದ್ರಕ್ಕೆ ಹೋಗುತ್ತಾನೆ. ಪಳನಿಯ ಗಾಳಕ್ಕೆ ದೊಡ್ಡ ಮೀನೊಂದು ಕಚ್ಚುತ್ತದೆ. ಎಳೆದು ಪಳನಿ ಬಳಲುತ್ತಾನೆ. ಕಡಲು ಪ್ರಕ್ಷುಬ್ಧವಾಗಿತ್ತು. ಅಲೆಮಾಲೆಗಳು ಅವನನ್ನು ಆವರಿಸುತ್ತವೆ. ಅವನಿಗೆ ಸತ್ವವನ್ನೂ ಭರವಸೆಯನ್ನು ನೀಡಬೇಕಾದ್ದು ಕರುತ್ತಮ್ಮನ ಪ್ರೀತಿ ಮತ್ತು ಅವಳ ಚಾರಿತ್ರ್ಯ. ಅವ ಗಟ್ಟಿಯಾಗಿ ಕರುತ್ತಮ್ಮ! ಎಂದು ಕೂಗುತ್ತಾನೆ. ಆ ವೇಳೆಗೆ ಆಕೆ ಕಡಲ ತಡಿಯಲ್ಲಿ ಚೆಂಬನ್‌ಕುಞ್ಞನಿಗೆ ಹುಚ್ಚು ಎಂದು ತಿಳಿಸಲು ಬಂದ ಪರೀಕುಟ್ಟಿಯ ತೋಳಸೆರೆ ಯಾಗಿದ್ದಳು. ಅವರ ಸಾನಿಧ್ಯ ಗಾಢಪ್ರೇಮದಲ್ಲಿ ಅಲ್ಲೋಲ ಕಲ್ಲೋಲವಾಗಿ ಸಾವಿನಲ್ಲಿ ಕೊನೆಯಾಗುತ್ತದೆ. ಬೆಸ್ತರ ನಂಬಿಕೆಗೆ ಅನುಗುಣವಾಗಿ ಹೆಂಡತಿ ಕರುತ್ತಮ್ಮ ಕಳಂಕಿತೆಯಾದಾಗಲೇ ಗಂಡ ಪಳನಿ ಸಮುದ್ರದಲ್ಲಿ ಸಾವನ್ನಪ್ಪುತ್ತಾನೆ.
ಇದರಲ್ಲಿ ಕರುತ್ತಮ್ಮ ಮತ್ತು ಪರೀಕುಟ್ಟಿ ಎಂಬ ಯುವತಿ ಯುವಕರ ಪ್ರೇಮಕತೆಯೇ ಕೇಂದ್ರ ವಸ್ತು. ಇಬ್ಬರೂ ವಿಭಿನ್ನ ಧರ್ಮಗಳಿಗೆ ಸೇರಿದ ಕಾರಣಕ್ಕಾಗಿ ಪ್ರಣಯ ಭಾವನೆಗಳನ್ನು ಬಲಿಕೊಡಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಬದುಕುತ್ತಿರುವವರು. ಸಮಾಜದ ಕಣ್ಣಿಗೆ ನಿಕೃಷ್ಟರಾಗಿ ಕಾಣಿಸಿಕೊಳ್ಳುತ್ತ ಹೆಜ್ಜೆ ಹೆಜ್ಜೆಗೂ ಅವಮಾನಿತರಾಗುವ ಪ್ರೇಮಜೀವಿಗಳು. ಇವರಿಬ್ಬರ ಪ್ರಣಯವನ್ನು ನಿರ್ಬಂಧಿಸಿರುವುದು ಒಂದೆಡೆ ಪರಸ್ಪರರ ಧರ್ಮವೇ ಆಗಿದ್ದರೂ ಅದನ್ನು ಮೀರಿ ಕಡಲತೀರದ ಆ ಜನಸಮುದಾಯದಲ್ಲಿನ ಪರಂಪರಾಗತವಾಗಿ ಬಂದ ನಂಬಿಕೆಯೂ ಇನ್ನಷ್ಟು ಪ್ರಬಲವಾಗಿದೆ.
ಕರುತ್ತಮ್ಮ ಮುಸಲ್ಮಾನನಾದ ಪರೀಕುಟ್ಟಿಯನ್ನು ಪ್ರೀತಿಸಿದ್ದೇ ಕಡಲತೀರದಲ್ಲಿ ಅವಳ ಅಧಃಪತನಕ್ಕೆ ಕಾರಣ. ಅವಳ ಅಧಃಪತನ ಎಂದರೆ ಕೇವಲ ಅವಳ ಅಧಃಪತನ ಮಾತ್ರವಲ್ಲ. ಅವಳ ಕುಟುಂಬದ ಅಧಃಪತನ. ಜೊತೆಗೆ ಅವಳ ಸಮುದಾಯದ ಅಧಃಪತನ. ಅಂತಿಮವಾಗಿ ಅವಳು ಹುಟ್ಟಿದ ಕಡಲತೀರದ ಸರ್ವ ಬೆಸ್ತ ಸಮಾಜದ ಅಧಃಪತನ. ಅಷ್ಟೇ ಅಲ್ಲ ಕಡಲಿಗೆ ಮೀನು ಹಿಡಿಯಲು ಹೋಗುವ ಗಂಡನ ಪ್ರಾಣವು ಮನೆಯಲ್ಲಿರುವ ಹೆಂಡತಿಯ ಪಾತಿವ್ರತ್ಯದಲ್ಲಿದೆ ಎಂಬ ಆ ಸಮುದಾಯದ ನಂಬಿಕೆಯಿಂದಾಗಿ ಇಡೀ ಕಡಲತೀರದ ಸಮಾಜವೇ ಆತಂಕಪಡಬೇಕಾದ ದುಃಸ್ಥಿತಿಗೆ ಕರುತ್ತಮ್ಮ ಕಾರಣಳಾಗುತ್ತಾಳೆ. ಆಕೆಯ ಶೀಲ ಮದುವೆಯಾಗಲಿರುವ ಗಂಡನ ಪ್ರಾಣವನ್ನು ರಕ್ಷಿಸುವಷ್ಟು ಪ್ರಬಲವಾಗಿದೆ. ಅದನ್ನು ಉಳಿಸಿಕೊಳ್ಳಬೇಕಾದ ಹೊಣೆ ಕರುತ್ತಮ್ಮಳದು. ಆ ಪ್ರಜ್ಞೆ ಅವಳಲ್ಲಿ ಸದಾ ಜಾಗೃತವಾಗಿದೆ.
ಕರುತ್ತಮ್ಮ ತನ್ನ ಬಾಲ್ಯದ ಗೆಳೆಯನನ್ನು ಅವಳಿಗರಿಯದೆಯೇ ಪ್ರೀತಿಸಿದ್ದು ವಯೋಸಹಜವಾದ ಭಾವನೆಗಳ ಕಾರಣಕ್ಕೆ. ಆದರೆ ಆಕೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಮಾನವ ನಿರ್ಮಿತ ಧರ್ಮಗಳ ನಡುವಿನ ಅಸ್ಪೃಶ್ಯ ಪರಿಸರ. ಹಾಗೆಯೇ ಕಡಲತೀರದ ಬೆಸ್ತ ಸಮುದಾಯವು ಪರಂಪರಾಗತವಾಗಿ ನಂಬಿಕೊಂಡು ಬಂದ ಕಟ್ಟುಕಟ್ಟಳೆಗಳು. ಇವುಗಳ ಕಾರಣದಿಂದ ಪ್ರೀತಿಯನ್ನೇ ಉಸಿರಾಡಿದ ಜೀವಗಳೆರಡರ ದುರಂತ ಅಂತ್ಯ ಕಾಣಬೇಕಾಯಿತು. ಇಬ್ಬರ ಪ್ರೇಮವೂ ನಿಷ್ಕಳಂಕವಾದುದು. ಆದರೆ ಬೆಸ್ತರ ಬದುಕಿನ ಕಟ್ಟುಕಟ್ಟಳೆಗಳನ್ನು ಅನುಸರಿಸಿಯೇ ಕರುತ್ತಮ್ಮ ತನ್ನ ಬಾಳನ್ನು ರೂಪಿಸಬೇಕೆಂಬ ನಿಲುವಿರುವ ಸಮುದಾಯ. ಪ್ರಕೃತಿ ಸಹಜ ಕಾಮನೆಗಳನ್ನು ಲೆಕ್ಕಿಸದೆ ಮಾನವಾತೀತ ಶಕ್ತಿಯನ್ನು ನಂಬುವ ಕಡಲತೀರದ ಬೆಸ್ತ ಸಮಾಜ ಕರುತ್ತಮ್ಮ ಪರೀಕುಟ್ಟಿಯರ ಪ್ರಣಯವನ್ನು ಜಾತಿ ಧರ್ಮದ ಕಾರಣಕ್ಕಾಗಿಯೇ ವಿರೋಧಿಸುತ್ತಿದೆ. ಹಾಗೆ ನೋಡಿದರೆ ಕಾದಂಬರಿಯಲ್ಲಿಯೇ ದೊರೆಯುವ ಸೂಚನೆಯಂತೆ ಆ ತೀರದಲ್ಲಿ ಅಂತಹ ಅನೇಕ ಘಟನೆಗಳು ನಡೆದಿವೆ. ಅವುಗಳು ಮೌಖಿಕವಾಗಿ ಪರಂಪರಾಗತವಾಗಿ ಕತೆ ಕಟ್ಟಿ ಹಾಡುಗಳ ಮೂಲಕ ಅವುಗಳನ್ನು ಸಮಕಾಲೀನ ಬೆಸ್ತ ಸಮುದಾಯಗಳವರು ತಿಳಿದುಕೊಂಡಿದ್ದಾರೆ. ಕರುತ್ತಮ್ಮ ಮತ್ತು ಪರೀಕುಟ್ಟಿಯ ಪ್ರೇಮಕತೆ ಕಡಲತೀರದ ಮಾತುಕತೆಯ ವಸ್ತುವಾಗಿ ಪ್ರಚಾರ ಪಡೆಯುತ್ತದೆ. ಪ್ರೇಮಿಗಳ ಬದುಕನ್ನು ದುರಂತಾಂತ್ಯಗೊಳಿಸುತ್ತದೆ.
ಪ್ರಗತಿಪರ ವಾಸ್ತವವಾದಿ ಬರಹಗಾರರಾದ ತಗಳಿಯವರ ಚೆಮ್ಮೀನ್ ಪ್ರಕಟವಾದ ನಂತರ ಅನೇಕ ವಾದ ವಿವಾದಗಳಿಗೆ ಕಾರಣವಾಯಿತು. ಇದೊಂದು ರೊಮ್ಯಾಂಟಿಕ್ ಕತೆಯನ್ನೊಳಗೊಂಡ ಕಾದಂಬರಿ. ಕಡಲತೀರದ ಬೆಸ್ತರ ನಂಬಿಕೆಯನ್ನೇ ಆಶ್ರಯಿಸಿ ಅದನ್ನು ಬೆಂಬಲಿಸುವಂತೆ ಕತೆ ಹೆಣೆದುದೇ ಇದಕ್ಕೆ ಕಾರಣ. ಹಾಗೆಯೇ ಕಡಲತೀರದ ವಾಸಿಗಳನ್ನು ಕಟ್ಟುಕಟ್ಟಳೆಗಳ ನಡುವೆ ಭಯಭೀತಿಗೊಳಪಡಿಸುವ ಕತೆಯ ಹೂರಣವೂ ಅಮಾಯಕ ಮುಗ್ಧ ಜನರನ್ನು ಆತಂಕಕ್ಕೀಡು ಮಾಡುವಂತಿದೆ. ರೀತಿನೀತಿಗಳಿಗೆ ಅತೀತರಾಗಿ ಬದುಕಿದರೆ ಕಡಲು ಕ್ಷೆಭೆಗೊಳಗಾಗಿ ತೀರದ ಗುಡಿಸಲುಗಳ ಮೇಲೆ ಅಲೆಯಪ್ಪಳಿಸಿ ಬಿಡಬಹುದು. ಕಡಲ ಹಾವುಗಳು ತೀರದಲ್ಲಿ ಹರಿದಾಡ ಬಹುದು. ಕಡಲ ಪ್ರಾಣಿಗಳು ದಡಕ್ಕೆ ಬಂದು ಅಪಾಯ ಸೃಷ್ಟಿಸಬಹುದು. ಹೀಗೆ ಜನ ಸಮುದಾಯವೊಂದು ನಂಬಿಕೆಯನ್ನು ಸದಾ ಕಾಯ್ದುಕೊಂಡು ಅಮಾನುಷ ಶಕ್ತಿಗಳಿಗೆ ಅಡಿಯಾಳು ಗಳಾಗಿ ಬದುಕುವುದನ್ನು ಇಲ್ಲಿ ಕಾಣಬಹುದು.
ಕಡಲತೀರದ ಎರಡು ಗ್ರಾಮಗಳ ಬದುಕನ್ನು ಹೆಣ್ಣೊಬ್ಬಳ ಶೀಲದ ನೆಲೆಯಲ್ಲಿ ವಿಸ್ತರಿಸುತ್ತಲೇ ಮುಗ್ಧ ಜನರ ಅಸಹಾಯಕತೆಯನ್ನು ಅಮಾನವೀಯ ನೆಲೆಯಲ್ಲಿ ಸಮಕಾಲೀನ ಸಮಾಜ ವ್ಯಾಖ್ಯಾನಿಸಿದೆ. ಮಾನವೀಯ ಸಂಬಂಧಗಳನ್ನು ಬಿಗಿಗೊಳಿಸಬೇಕಾಗಿದ್ದ ಪ್ರೇಮ ಹತಾಶ ಸ್ಥಿತಿಯಲ್ಲಿಯೇ ಬೆಳೆದು ದುರಂತದಲ್ಲಿ ಕೊನೆಯಾಗುತ್ತದೆ. ತಗಳಿಯ ಆಶಯ ಹಾಗೂ ಚಿಂತನೆಗಳ ವೈಚಾರಿಕ ಆಯಾಮಗಳನ್ನು ಇದು ಗೌಣವಾಗಿಸಿರಬಹುದು. ಆದರೆ ಕಾದಂಬರಿಯಾಗಿ ಜನಪ್ರಿಯವಾಗಿ ಕಾದಂಬರಿಕಾರರಿಗೂ ಮಲಯಾಳಂ ಭಾಷೆಗೂ ಕೀರ್ತಿಯನ್ನು ತಂದು ಕೊಟ್ಟಿದೆ.
ಮಲಯಾಳಂನಲ್ಲಿ ಇಷ್ಟೊಂದು ಅನುವಾದಗಳನ್ನು ಕಂಡ ಆಧುನಿಕ ಕೃತಿ ಇನ್ನೊಂದಿಲ್ಲ. ಪ್ರಸ್ತುತ ಕಾದಂಬರಿ ೧೯೫೬ರಲ್ಲಿ ಪ್ರಕಟವಾಗಿ ಅದೇ ವರ್ಷ ನಾಲ್ಕು ಮುದ್ರಣಗಳನ್ನು ಕಂಡಿದೆ. ಮುಂದೆ ೧೯೨೧ರ ವರೆಗೂ ಇಪ್ಪತ್ತಕ್ಕೂ ಹೆಚ್ಚು ಮುದ್ರಣಗಳನ್ನು ಕಂಡು ಲಕ್ಷೆಪ ಲಕ್ಷ ಪ್ರತಿಗಳು ಓದುಗರ ಕೈಸೇರಿವೆ. ಪ್ರಸ್ತುತ ದಿನಮಾನಗಳಲ್ಲಿ ಚೆಮ್ಮೀನ್ ಕಾದಂಬರಿಗೆ ಅಪಾರ ಸಂಖ್ಯೆಯ ಓದುಗರಿದ್ದಾರೆ. ಮಲಯಾಳಂನ ನಿತ್ಯಹರಿತ ಎನ್ನಬಹುದಾದ ಕಾದಂಬರಿಯಿದು.
ತಗಳಿಯವರು ಕತೆ ಬರೆಯುತ್ತಿಲ್ಲ. ಅವರು ಕತೆ ಹೇಳುತ್ತಿದ್ದಾರೆ. ಜಾನಪದ ಕಥನ ಹಾಗೂ ಐತಿಹಾಸಿಕ ಪರಂಪರೆಗಳು ಮೇಳೈಸಿದ ಕಥನ ಕ್ರಮವನ್ನು ತಗಳಿಯವರಲ್ಲಿ ಕಾಣಬಹುದು. ಸರಳವಾದ, ಪುಟ್ಟ ಪುಟ್ಟ ವಾಕ್ಯಗಳ ಮೂಲಕವೇ ಪರಿಣಾಮಕಾರಿಯಾಗಿ ಕತೆ ಹೇಳುವ ಕಲೆ ತಗಳಿ ಅವರಿಗೆ ಕರತಲಾಮಲಕ. ಹೃದ್ಯವಾದ ಭಾಷೆಯಲ್ಲಿ, ಸರಳವಾಗಿ ಮಾತುಗಳನ್ನು ಜೋಡಿಸುವ ಅವರ ನಿರೂಪಣೆಯಲ್ಲಿ ಜಾನಪದ ಸೊಗಡಿದೆ. ಮೂಲ ಕೃತಿಯ ಜಾನಪದ ಭಾಷೆಯ ಸೊಗಡನ್ನು ಪುನರ್‌ಸೃಷ್ಟಿಸುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅದು ನೆಲದ ಭಾಷೆಯಲ್ಲಿ ಅಭಿವ್ಯಕ್ತಗೊಂಡಿದೆ.
ತಗಳಿ ಅವರು ಜಾನಪದರ ಬದುಕನ್ನು ಅಕ್ಷರ ರೂಪಕ್ಕಿಳಿಸುತ್ತಾರೆ. ಅವರ ಭಾವನೆಗಳನ್ನು ಅಭಿವ್ಯಕ್ತಿಸುತ್ತಾರೆ. ಅವರಿಗೆ ಜನಪದರ ಬದುಕಿನ ವ್ಯಾಕರಣ ಗೊತ್ತು. ಆ ಬದುಕಿನ ವ್ಯಾಕರಣದ ಜೊತೆ ಜೊತೆಗೆ ಭಾಷೆಯೊಂದನ್ನು ಸಾಹಿತ್ಯದ ಗಾದಿಗೆ ಏರಿಸಿಬಿಡುವ ಸಾಮರ್ಥ್ಯ ತಗಳಿಯವರಿಗೆ ವಿಶಿಷ್ಟವಾದುದು. ಕೇರಳದ ಕುಟ್ಟನಾಡಿನ ಅದರಲ್ಲಿಯೂ ತಳ ಸಮುದಾಯಗಳ ಭಾಷೆ ತಗಳಿಯ ಬರಹಗಳಲ್ಲಿ ಢಾಳಾಗಿಯೇ ಬಂದಿದೆ. ತಗಳಿಯ ಅನುಭವಕ್ಕೆ ನಿಲುಕಿದ ತಳ ಸಮುದಾಯಗಳ ಬದುಕಿನ ಕ್ರಮ, ಕೃಷಿ ಕೂಲಿಕಾರ್ಮಿಕರ ನೋವು ನಲಿವುಗಳು ಅವುಗಳನ್ನು ಅವರು ತೋಡಿಕೊಳ್ಳುತ್ತಿದ್ದ ಭಾಷಿಕ ಸ್ವರೂಪ ಎಲ್ಲವೂ ತಗಳಿಗೆ ಅನುಭವಗಳ ಭಾಗ. ಆಲಂಕಾರಿಕವಾದ ಭಾಷೆಯ ಬಳಕೆಯಲ್ಲಿ ಕೃತಕವಾದ ಬರವಣಿಗೆಯ ವಿಧಾನವಿಲ್ಲ. ಎಲ್ಲವೂ ಸಹಜವಾದ ಹೃದಯದ ಭಾಷೆಯಾಗಿ ಅಭಿವ್ಯಕ್ತಿಸುವ ತಗಳಿಗೆ ಶಿಷ್ಟ ಬರಹದ ಭಾಷೆಯ ಬಳಕೆಯ ಹಂಗಿಲ್ಲ.
ಪ್ರಸ್ತುತ ಅನುವಾದವು ಮೂಲವನ್ನು ಯಥಾವತ್ತಾಗಿ ಕನ್ನಡದಲ್ಲಿ ನಿರೂಪಿಸುವ ಯತ್ನವಾಗಿದೆ. ಮೂಲದ ಆಶಯ ಭಾಷೆ, ನುಡಿಗಟ್ಟು, ಶೈಲಿಗಳನ್ನು ಬಹುತೇಕ ಉಳಿಸಿಕೊಂಡೇ ಕನ್ನಡದಲ್ಲಿ ರೂಪಿಸಲಾಗಿದೆ. ತಗಳಿ ಶಿವಶಂಕರ ಪಿಳ್ಳೆಯವರ ಬರವಣಿಗೆಯ ಧಾಟಿ, ಸಾಂಸ್ಕೃತಿಕ ವಿವರಗಳು, ಭಾಷಿಕ ಸ್ವರೂಪ ಇತ್ಯಾದಿಗಳನ್ನು ಇಲ್ಲಿನ ಅನುವಾದದಲ್ಲಿಯೂ ಉಳಿಸಿಕೊಳ್ಳಲು ಯತ್ನಿಸಲಾಗಿದೆ. ಕನ್ನಡದಲ್ಲಿ ಸಂವಹನ ಆಗಬೇಕು ಎಂದು ಲಕ್ಷ್ಯವಿರಿಸಿ ರೂಪಿಸಿದ ಅನುವಾದವಿದು. ಹಾಗಾಗಿ ಇಲ್ಲಿನ ಭಾಷೆಯಲ್ಲಿ ಅಸಹಜತೆ, ತೊಡಕುಗಳು ಅನುಭವಕ್ಕೆ ಬರಬಹುದು. ಆದರೆ ಸಂವಹನ ಕಷ್ಟವಾಗಲಾರದು. ಎಲ್ಲಾ ಅನುವಾದಗಳ ಸಂದರ್ಭಗಳಲ್ಲಿಯೂ ಅನುಸರಿಸುವ ವಿಧಾನವನ್ನೇ ಇಲ್ಲಿಯೂ ಉಳಿಸಿಕೊಳ್ಳಲಾಗಿದೆ. ಇದು ಮೂಲ ಕನ್ನಡ ಕೃತಿಯಂತೆ ಓದಿಸಿಕೊಳ್ಳಬಾರದು ಎಂಬುದೇ ಇಲ್ಲಿನ ಮುಖ್ಯ ಲಕ್ಷ್ಯ. ಪ್ರತಿ ಹಂತದಲ್ಲಿಯೂ ಇದೊಂದು ಅನ್ಯಭಾಷಾ ಕೃತಿಯೆಂದು ಓದುಗರನ್ನು ಸದಾ ಜಾಗೃತ ಸ್ಥಿತಿಯಲ್ಲಿರಿಸಿ ಓದಿಸಿಕೊಳ್ಳುವಂತಾಗಬೇಕು. ಆಗ ಮಾತ್ರ ನಮ್ಮದಲ್ಲದ ಸಂಸ್ಕೃತಿಯೊಂದರ ಬಗೆಗೆ ಪ್ರಜ್ಞಾಪೂರ್ವಕವಾಗಿ ಯೋಚಿಸುವಂತಾಗಬಹುದು. ಹಾಗೆಯೇ ಬರಹಗಾರರ ದೃಷ್ಟಿಕೋನ ಭಾಷೆಯ ನಿರೂಪಣೆಯ ಕ್ರಮ ಇವೆಲ್ಲ ಸ್ವಲ್ಪಮಟ್ಟಿಗಾದರೂ ಮನವರಿಕೆಯಾಗಬಹುದು ಎಂಬ ನಂಬಿಕೆಯೂ ಇದೆ.
ಮೂಲದ ವಿವರಗಳನ್ನು ಸಂಪೂರ್ಣ ಕನ್ನಡೀಕರಿಸುವ ಅನುವಾದ ವಿಧಾನ ಓದುಗರಿಗೆ ರಸಾಸ್ವಾದನೆಯ ದೃಷ್ಟಿಯಿಂದ ಹಿತವಾಗಬಹುದು. ಆದರೆ ಅನುವಾದವು ಮೂಲ ಲೇಖಕರ ಭಾಷಿಕ ನಿರೂಪಣೆಯ ನಿಯಂತ್ರಣದಲ್ಲಿಯೇ ಸಾಗಬೇಕು ಎಂಬುದು ಅಷ್ಟೇ ಮುಖ್ಯವಾಗಿದೆ. ಆಗ ಮಾತ್ರ ನಮ್ಮದಲ್ಲದ ಭಾಷೆಯ ದೃಷ್ಟಿಕೋನ, ಆಶಯಗಳು, ಸಾಂಸ್ಕೃತಿಕ ವಿವರಗಳು ಕನ್ನಡ ಸಂಸ್ಕೃತಿಯನ್ನು ಮೀರಿದ ಅರ್ಥವ್ಯಾಪ್ತಿಯನ್ನು ಪಡೆದುಕೊಳ್ಳಬಹುದು. ಮೂಲ ಕಾದಂಬರಿ ಹುಟ್ಟಿದ ನೆಲದ ಆಚಾರ, ವಿಚಾರ, ಜೀವನ ವಿಧಾನಗಳು ಹಾಗೆಯೇ ಸಮಕಾಲೀನ ಚಿಂತನೆಗಳು ಎಲ್ಲವೂ ಲಕ್ಷ್ಯ ಭಾಷೆಯ ಪರಿಸರದಲ್ಲಿ ವಿನೂತನವಾಗಿ ಗೋಚರಿಸಬಹುದು. ಹೀಗಾದಾಗ ಮಾತ್ರ ಅನುವಾದ ಕೆಲಸ ಸಾರ್ಥಕವಾಗಬಹುದು.
ತಗಳಿಯವರ ಭಾಷೆಯನ್ನು ಅನುವಾದದಲ್ಲಿಯೂ ಹಿಡಿದಿಡುವುದು ಕಷ್ಟ. ಅದು ಗ್ರಾಮೀಣ ಆಡುನುಡಿಯೊಂದರ ಯಥಾವತ್ತಾದ ದಾಖಲೆ. ಕಡಲತೀರದ ಮೀನುಗಾರರ ಆಡುಭಾಷೆಯನ್ನು ಲೇಖಕರು ಸ್ವತಹ ಅನುಭವದ ಭಾಗವಾಗಿಸಿಕೊಂಡವರು. ಅವರು ಬಳಸಿದ ಪದಗಳು ನಿಘಂಟುಗಳಲ್ಲಿಯೂ ಇಲ್ಲ. ನಿಘಂಟುಗಳಲ್ಲಿ ದೊರೆಯುವ ಪದಗಳಿಗೂ ಅವುಗಳ ಅರ್ಥಗಳಿಗಿಂತ ಬೇರೆಯೇ ಅರ್ಥದಲ್ಲಿ ಅವುಗಳ ಅರ್ಥಗಳಿಗಾಗಿ ಆಯಾ ಜನಸಮುದಾಯದ ಬಳಕೆಯ ಸಂದರ್ಭವನ್ನೇ ಆಶ್ರಯಿಸಬೇಕಾಗಿದೆ. ಹಾಗಾಗಿ ಯಥಾವತ್ತಾದ ಅನುವಾದ ಎಂದಾಗಲೂ ತಗಳಿಯವರ ಭಾಷೆಗೆ ಸಂಬಂಧಿಸಿದಂತೆ ಅವರ ಪ್ರಯೋಗ, ಉಪಮೆ, ವಾಕ್ಯ ಇತ್ಯಾದಿಗಳನ್ನು ಬಹುಮಟ್ಟಿಗೆ ಉಳಿಸಿಕೊಳ್ಳುವ ಪ್ರಯತ್ನ ಮಾತ್ರ. ನೇರ ಅನುವಾದದ ಸಂದರ್ಭದಲ್ಲಿ ಮೂಲ ಭಾಷೆಯೊಂದನ್ನು ಅನುಸರಿಸಿದ ಮರು ನಿರೂಪಣೆಯಲ್ಲಿ ಮಿತಿಗಳು, ತೊಡಕುಗಳೂ ಇದ್ದೇ ಇರುತ್ತವೆ. ಅದನ್ನು ಮೀರಿ ಕನ್ನಡ ಓದುಗರ ಗ್ರಹಿಕೆಗೆ ನಿಲುಕುವಂತೆ ಸಂವಹನಗೊಳ್ಳಬೇಕಾಗಿದೆ. ಅದನ್ನು ಯಥಾಸಾಧ್ಯ ಇಲ್ಲಿ ಮಾಡಲಾಗಿದೆ.
* * *
ಈಗಾಗಲೇ ಕನ್ನಡಕ್ಕೆ ಬಂದಿರುವ ಕೃತಿಯೊಂದರ ಮತ್ತೊಂದು ಅನುವಾದ ಯಾಕೆ ಎಂಬ ಸಂದೇಹ ಓದುಗರನ್ನು ಕಾಡಬಹುದು. ಅದಕ್ಕಾಗಿ ಕೆಲವು ವಿವರಗಳನ್ನು ಇಲ್ಲಿ ವಿಸ್ತರಿಸಬಹುದು.
ಅನುವಾದವೆನ್ನುವುದು ಒಂದು ಗ್ರಹಿಕೆಯ ಕ್ರಮ. ಹಾಗಾಗಿ ಒಂದು ಮೂಲಕೃತಿ ಓದುಗರಿಗೆ ಹಲವು ರೀತಿಯ ಗ್ರಹಿಕೆಗೆ ನಿಲುಕಬಹುದು. ಈ ಅರ್ಥದಲ್ಲಿ ಕೃತಿಯೊಂದಕ್ಕೆ ಎಷ್ಟು ಓದುಗ ರಿರುತ್ತಾರೋ, ಅಷ್ಟೂ ರೀತಿಯಲ್ಲಿ ಗ್ರಹಿಸುವುದು ಸಾಧ್ಯ. ಮೂಲ ಕೃತಿಯನ್ನು ಓದಿದಾಗ ಇನ್ನೊಂದು ಅನುವಾದದ ಅಗತ್ಯವನ್ನು ಕಾಣುವುದು ಆಯಾ ಅನುವಾದಕರ ವಿಭಿನ್ನ ಗ್ರಹಿಕೆಯ ಕಾರಣಕ್ಕೇ ಆಗಿರುತ್ತದೆ. ಹಾಗಾಗಿ ಚೆಮ್ಮೀನ್ ಕಾದಂಬರಿಯನ್ನು ಮಲಯಾಳಂನಲ್ಲಿ ಓದಿದಾಗ ಮತ್ತು ಕೆಂಪು ಮೀನು ಓದಿದಾಗ ಇನ್ನೊಂದು ಅನುವಾದವನ್ನು ಕನ್ನಡದಲ್ಲಿ ರೂಪಿಸಬಹುದೆಂದು ಅನಿಸಿತು. ಅದಕ್ಕೆ ಇರುವ ಕೆಲವೊಂದು ಕಾರಣಗಳನ್ನು ಗ್ರಹಿಕೆಯ ಮಿತಿಯಲ್ಲಿಯೇ ಇಲ್ಲಿ ಮಂಡಿಸಲಾಗಿದೆ.
ಯಾವುದೇ ಅನುವಾದ ಪರಿಪೂರ್ಣವಲ್ಲ ಎಂಬ ತಿಳುವಳಿಕೆಯಿಂದಲೇ ಪ್ರಸ್ತುತ ಅನುವಾದವನ್ನು ರೂಪಿಸಲಾಗಿದೆ. ಅದೇ ತಿಳುವಳಿಕೆಯಿಂದಲೇ ಈಗಾಗಲೇ ಬಂದಿರುವ ಕೆಂಪು ಮೀನು ಅನುವಾದದ ಕೆಲವೊಂದು ಮಿತಿಗಳೆಡೆಗೆ ಪ್ರಸ್ತುತ ಓದುಗರ ಗಮನ ಸೆಳೆಯಬಹುದು.
ಮೂಲ ಮಲಯಾಳಂ ಕಾದಂಬರಿಯನ್ನು ಹಾಗೂ ಕೆಂಪು ಮೀನು ಅನುವಾದವನ್ನು ತೌಲನಿಕವಾಗಿ ಪರಿಶೀಲಿಸಿದರೆ ಅದು ಯಥಾವತ್ತಾದ ಅನುವಾದವಲ್ಲ ಎಂಬುದು ವೇದ್ಯವಾಗುತ್ತದೆ. ನಾ.ಕಸ್ತೂರಿಯವರು ಕೆಂಪು ಮೀನು ಹೆಸರಿನಲ್ಲಿ ಚೆಮ್ಮೀನ್ ಕಾದಂಬರಿಯನ್ನು ಮರು ನಿರೂಪಿಸಿದ್ದಾರೆ ಎಂಬುದೇ ಸರಿ. ಒಂದು ಬಗೆಯಲ್ಲಿ ಕನ್ನಡದಲ್ಲಿ ಮರುಸೃಷ್ಟಿಗೊಂಡ ನಿರೂಪಣೆ. ಕನ್ನಡ ಓದುಗರಿಗೆ ಆಪ್ತವಾಗಿ ಅರ್ಥ ಮಾಡಿಸಲು ನಾ. ಕಸ್ತೂರಿಯವರು ಕನ್ನಡದ ನುಡಿಗಟ್ಟುಗಳನ್ನು ಸಾಂದರ್ಭಿಕವಾಗಿ ಬಳಸಿದ್ದಾರೆ. ಮೂಲ ಕಾದಂಬರಿ ಮೌನವಾಗಿ ಭಾವಸ್ಫುರಣೆ ನೀಡಿದ ಜಾಗವನ್ನು ಅನುವಾದಕರು ವರ್ಣಿಸಿ ವಿವರಿಸಲು ಪ್ರಯತ್ನ ಮಾಡಿದ್ದಾರೆ. ಮೂಲ ಕಾದಂಬರಿಯ ಆಶಯವನ್ನು ವಾಚ್ಯವಾಗಿ ಹೃದ್ಯಭಾಷೆಯಲ್ಲಿ ನಿರೂಪಿಸಿದ್ದಾರೆ. ಕೆಲವು ಸಂದರ್ಭದಲ್ಲಿ ಸಾಂಸ್ಕೃತಿಕ ಜಟಿಲತೆಗಳೂ ಗಮನಕ್ಕೆ ಬಾರದಂತೆ ಕನ್ನಡದಲ್ಲಿ ಬರೆಯುವ ಯತ್ನ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಕೆಲವೊಂದು ಸಾಂಸ್ಕೃತಿಕ ವಿವರಗಳನ್ನು ಗ್ರಹಿಸುವಲ್ಲಿಯೂ ಮಿತಿಯಿರುವುದು ಕಾಣಿಸುತ್ತದೆ.
ನಿದರ್ಶನಕ್ಕಾಗಿ ಕೆಲವೊಂದು ಸಂದರ್ಭಗಳನ್ನು ನೋಡಬಹುದು.
ನಾ. ಕಸ್ತೂರಿ ಅವರ ಅನುವಾದ ಕೃತಿಯ ಕೆಲವೊಂದು ಸಂದರ್ಭಗಳನ್ನು ಮೂಲ ಕೃತಿಯ ಜೊತೆಗಿರಿಸಿ ಪರಿಶೀಲಿಸಬಹುದು. ಅನುವಾದ ಕೃತಿಯ ಕೆಲವೊಂದು ಇತಿಮಿತಿಗಳನ್ನು ಕಂಡು ಕೊಳ್ಳುವುದು ಇದರಿಂದ ಸಾಧ್ಯವಾಗಬಹುದು.
ಉದಾಹರಣೆಗೆ:
ಮಲಯಾಳಂನಲ್ಲಿ ಅವಳ್ ಒಟ್ಟಮುಂಡಾಣ್ ಉಡುತ್ತಿರುಕ್ಕುನ್ನದ್ ಅವಳು ತೆಳ್ಳಗಿನ ಪಂಚೆಯನ್ನು ಉಟ್ಟಿದ್ದಳು ಅಥವಾ ಅವಳು ಉಟ್ಟಿರುವುದು ಒತ್ತೆ ಮುಂಡು ಎಂದಾಗಬಹುದು. ಇದರ ಕನ್ನಡ ಅನುವಾದ ಕೆಂಪು ಮೀನಿನಲ್ಲಿ ಹೀಗಿದೆ: ಅವಳು ಕುಪ್ಪಸ ತೊಟ್ಟಿರಲಿಲ್ಲ; ಒಂದು ತುಂಡು ಸುತ್ತಿದ್ದಳು. ಸೊಂಟಕ್ಕೆ ಅಷ್ಟೆ.
ತೆಳ್ಳಗಿನ ಮುಂಡು ಎಂದರೆ ಒತ್ತೆ ಮುಂಡು-ಡಬಲ್ ವೇಸ್ಟಿ ಅಲ್ಲ ಸಿಂಗಲ್ ವೇಸ್ಟಿ ಎಂದರ್ಥ-ಅದು ತೆಳುವಾಗಿದ್ದು ಅಂಗಗಳ ನೆರಳು ಕಾಣಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಇದರಿಂದ ಇನ್ನೊಬ್ಬರು ದಿಟ್ಟಿಸಿ ನೋಡಿದರೆ ಉಟ್ಟುಕೊಂಡವರಿಗೆ ಮುಜುಗರ, ಸಂಕೋಚ ಆಗುವುದು ಸಹಜ. ಅವಳು ಕುಪ್ಪಸ ತೊಟ್ಟಿರಲಿಲ್ಲ ಎಂಬ ವಿವರ ಮೂಲದಲ್ಲಿಲ್ಲ.
ಇನ್ನೊಂದು ಸಂದರ್ಭ ಹೀಗಿದೆ: ಕಡಲ ಅಂಚಿನಲ್ಲಿ ನಿಂತ ಕೂಸು ನಿಷ್ಕಾರಣವಾಗಿ ಅಳುವುದಕ್ಕೆ ಮೊದಲು ಮಾಡಿತು. ಹುಚ್ಚನಂತೆ, ತನಗೇನಾಗುತ್ತಿದೆ ಎಂಬುದರ ಗಮನವೇ ಇಲ್ಲದೆ ಅದರ ತಂದೆ ಹೋಗುತ್ತಿದ್ದುದು ನಿಷ್ಕಳಂಕತೆಯ ಪ್ರತೀಕವಾದ ಆ ಶಿಶುವಿಗೆ ವೇದ್ಯ ವಾಯಿತೋ, ಏನೋ! ಬಲ್ಲವರಾರು?
ಗಡಿಕಾಣದ ಪಡುಕಡಲೆಡೆಗೆ ತನ್ನ ತಂದೆ ಹೊರಟಿರುವುದನ್ನು ಅರಿತು ಹೆದರಿ ಅಳುತ್ತಿರಬಹುದು ಅದು. ಪಳನಿಗೆ ಆ ರೋದನ ಕೇಳಲಿಲ್ಲ. ಗಾಳಿ ಮೂಡಲಿಗೆ ಬೀಸುತ್ತಿದೆ. ಆದರೆ, ಕಡಲಾನೆಯ ಬೆನ್ನೆಲುಬನ್ನು ಮುರಿದಾಗಿನ ಅಟ್ಟಹಾಸವನ್ನು ಗಾಳಿ ಆವರಿಸಿದ್ದ ಅಂಚಿಗೂ ತಂದು ತಲುಪಿಸಿತು. ಕರುತ್ತಮ್ಮ ಕೇಳಿದಳೇನು? ಇಲ್ಲ, ಅವಳ ಕಿವಿಗಳು ಅಷ್ಟು ಪರಿಶುದ್ಧವಲ್ಲ!(ಕೆಂಪು ಮೀನು, ಪು. ೨೩೬).
ಮೂಲ ಮಲಯಾಳಂ ಹೀಗಿದೆ: ಕಡಲ್‌ಕರಯಿಲ್ ನಿನ್ನ ಕುಞ್ಞು ಕಾರ್‍ಯಮಿಲ್ಲಾದೆ ಕರಞ್ಞು. ಒರು ಪಕ್ಷೆ, ಬ್ರಾಂತು ಪಿಡಿಚ್ಚಪೋಲೆ ಆವೇಶಂಕೊಂಡ್ ಅದಿಂಡೆ ಅಚ್ಚನ್ ಪೋಗುನ್ನದ್ ನಿಷ್ಕಳಂಕತಯುಡೆ ರೂಪಮಾಯ ಆ ಕುಞ್ಞಿನು ಕಾಣಮಾಯಿರಿಕ್ಕಾಂ. ಅಚ್ಚನ್ ಅದಿರಿಲ್ಲಾತ್ತ ಪಡಿಞರೇಕ್ಕ್ ಪೋಗುನ್ನದು ಕಂಡು ಕರಯುಗಮಾಯಿರಿಕ್ಕಾಂ. ಪಳನಿ ಆ ಕರಚ್ಚಿಲ್ ಕೇಟ್ಟಿಲ್ಲ. ಕಾಟ್ಟ್ ಕಿೞಕ್ಕೋಟ್ಟಾಣ್. ಎನ್ನಾಲ್ ಕಡಲಾನಯುಡೆ ನಟ್ಟೆಲ್ಲ್ ತಗರ್ತ್ ಆ ಮತ್ಸರತ್ತಿಲೆ ಅವಂಡೆ ಅಲರ್‌ಚ್ಚ ಕಾಟ್ಟ್ ವಹಿಚ್ಚ್‌ಕೊಂಡು ವನ್ನು. ಕರುತ್ತಮ್ಮ ಕೇಟ್ಟೋ? ಇಲ್ಲ; ಅವಳುಡೆ ಚೆವಿಗಳಿಲ್ ಅದೆತ್ತುಗಯಿಲ್ಲ. ಅದಿನುಳ್ಳ ವಿಶುದ್ಧಿ ಅವಳ್‌ಕ್ಕಿಲ್ಲ(ಚೆಮ್ಮೀನ್ ಪು. ೨೬೩).
ಮಲಯಾಳಂನ ಯಥಾವತ್ತಾದ ಅನುವಾದ: ಕಡಲತೀರದಲ್ಲಿ ಮಗು ಕಾರಣವಿಲ್ಲದೆ ಅಳುತ್ತಿದೆ. ಒಂದು ವೇಳೆ ಹುಚ್ಚು ಹಿಡಿದಂತೆ ಆವೇಶದಿಂದ ಅದರ ಅಪ್ಪ ಹೋಗುತ್ತಿರುವುದನ್ನು ನಿಷ್ಕಳಂಕದ ರೂಪವಾದ ಆ ಮಗು ಕಾಣುತ್ತಿದ್ದಿರಬಹುದು. ಅಪ್ಪ ಮೇರೆಯಿಲ್ಲದ ಪಡುವಣಕ್ಕೆ ಹೋಗುವುದನ್ನು ಕಂಡು ಅಳುತ್ತಿದ್ದಿರಬಹುದು. ಪಳನಿಗೆ ಆ ರೋದನ ಕೇಳಿಸಲಿಲ್ಲ. ಗಾಳಿ ಮೂಡುದಿಕ್ಕಿಗೆ ಬೀಸುತ್ತಿದೆ. ಆದರೆ ಕಡಲಾನೆಯ ಬೆನ್ನೆಲುಬು ಮುರಿದಾಗಿನ ಅವನ ಅಟ್ಟಹಾಸವನ್ನು ಗಾಳಿ ಹೊತ್ತು ತಂದಿತು. ಕರುತ್ತಮ್ಮ ಕೇಳಿಸಿಕೊಂಡಳೋ? ಇಲ್ಲ! ಅವಳ ಕಿವಿಗಳಿಗೆ ಅದು ತಲುಪಲಾರದು. ಅದಕ್ಕೆ ಬೇಕಾದ ಪರಿಶುದ್ಧಿ ಅವಳಿಗೆ ಇಲ್ಲ.
ಇಲ್ಲಿನ ಕೆಂಪು ಮೀನು ಅನುವಾದದಲ್ಲಿ ಕೊನೆಯ ವಾಕ್ಯ ಕರುತ್ತಮ್ಮ ಕೇಳಿದಳೇನು? ಅವಳ ಕಿವಿಗಳು ಅಷ್ಟು ಪರಿಶುದ್ಧವಲ್ಲ ಎಂದಿದೆ. ಇದು ಕಾದಂಬರಿಯ ಆಶಯದ ದೃಷ್ಟಿಯಿಂದ ಸರಿಹೊಂದುವುದಿಲ್ಲ. ಇದು ಮೂಲದಲ್ಲಿ ಕರುತ್ತಮ್ಮಳಿಗದು ಕೇಳಿಸಿತೋ? ಇಲ್ಲ. ಅವಳ ಕಿವಿಗಳಿಗೆ ಅದು ತಲುಪಲಾರದು. ಅದಕ್ಕೆ ಬೇಕಾದ ಪರಿಶುದ್ಧಿ ಅವಳಿಗಿಲ್ಲ ಎಂದಿದೆ. ಕಾದಂಬರಿಯು ಕರುತ್ತಮ್ಮಳ ಪರಿಶುದ್ಧಿ ಅಂದರೆ ಚಾರಿತ್ರ್ಯವನ್ನು ಉದ್ದೇಶಿಸಿದೆ. ಕಡಲಿಗೆ ಹೋದ ಗಂಡನ ಪ್ರಾಣ ದಡದಲ್ಲಿರುವ ಹೆಂಡತಿಯ ಚಾರಿತ್ರ್ಯದಲ್ಲಿದೆ ಎಂಬ ಆಶಯ ಕಾದಂಬರಿಯದು. ಮದುವೆಗೂ ಮೊದಲೇ ಪರೀಕುಟ್ಟಿಯಲ್ಲಿ ಅನುರಕ್ತಳಾಗಿದ್ದ ಕರುತ್ತಮ್ಮ ಪರಿಶುದ್ಧಳಲ್ಲ ಎಂಬುದು ಧ್ವನಿ. ಆದರೆ ಅನುವಾದದಲ್ಲಿ ಆ ಧ್ವನಿ ಇಲ್ಲವಾಗಿದೆ. ಅನುವಾದದಲ್ಲಿ ಅವಳ ಕಿವಿಗಳ ಶ್ರವಣ ಶಕ್ತಿಯ ಕೊರತೆಯನ್ನು ಸೂಚಿಸುವಂತಿದೆ.
ಕೆಲವೊಮ್ಮೆ ಕಾದಂಬರಿಯು ಧ್ವನಿಸುವ ಅರ್ಥವು ಅನುವಾದದಲ್ಲಿ ವಾಚ್ಯವಾಗುವುದಿದೆ. ಅಂತಹ ಸಂದರ್ಭವೊಂದನ್ನು ಇಲ್ಲಿ ಗಮನಿಸಬಹುದು.
….. ಏನೂ ಜರುಗಲಿಲ್ಲವೆಂಬಂತೆ ಮರುದಿವಸ ಶಾಂತವಾಗಿ ಸುಂದರವಾಗಿ ಕಡಲು ಕತ್ತಲೆ ಕಳೆದು ಎಚ್ಚರಗೊಂಡಿತು.
ಮುಂಜಾನೆ ಎದ್ದ ಕೆಲವರು ಬೆಸ್ತರು ತಮ ತಮಗೆ ಹೇಳಿಕೊಂಡರು. ರಾತ್ರಿ ಹೊರಗಡಲಲ್ಲಿ ಭಾರೀ ಬಿರುಗಾಳಿ ಎದ್ದಿತು ಎಂದು. ಅಲೆಗಳು ಕೆಲವು ಗುಡಿಸಲುಗಳ ಅಂಗಳದೊಳಕ್ಕೂ ನುಗ್ಗಿ ನೊಣೆದುವಂತೆ. ತೀರದ ಬಿಳಿಯ ಮರಳ ಮೇಲೆ ಕಡಲ ಹಾವುಗಳು ಹರಿದುವು.
ಅಮ್ಮ ಅಪ್ಪ ಎಂದು ತೊದಲಿ ಅಳುತ್ತಿದ್ದ ಕೂಸನ್ನೆತ್ತಿಕೊಂಡು, ಪಂಚಮಿ ತೀರದಲ್ಲಿ ನಿಂತು ಅಳುತ್ತಿದ್ದಾಳೆ.
ರಾತ್ರಿ ಗಾಳ ಹಾಕಿ ಮೀನು ಹಿಡಿಯಲು ಹೋದ ಭಾವ ಇನ್ನೂ ಬಂದಿಲ್ಲ! ನಿದ್ರೆಗೆ ಎಂದು ಮಲಗಿದ ಕರುತ್ತಮ್ಮನೂ ಪತ್ತೆ ಇಲ್ಲ.
ಅವಳು ಅಳುತ್ತಾ ಕೂಸನ್ನು ಮುದ್ದಾಡಿಸಿ ಅದರ ಅಳುವನ್ನೆ ನಿಲ್ಲಿಸಿದಳು.
ಎರಡು ದಿನಗಳು ಕಳೆದ ಮೇಲೆ, ಬಿಗಿದಪ್ಪಿಕೊಂಡಿದ್ದ ಎರಡು ಕಳೇಬರಗಳನ್ನು-ಸ್ತ್ರೀ ಪುರುಷರು-ಕಡಲತೀರಕ್ಕೆ ಆ ಅಲೆಗಳು ಹೊಡೆದು ತಂದು ಸೇರಿಸಿದುವು ಕರುತ್ತಮ್ಮ-ಪರೀಕುಟ್ಟಿ ಇವರ ಕಳೇಬರಗಳವು.
ಅತ್ತ ಚಿಕ್ಕ ಅಳೀಕ್ಕಲ್ ಎಂಬ ಊರಿನ ಹತ್ತಿರ, ಗಾಳ ನುಂಗಿದ ಸ್ರಾವೊಂದನ್ನು ಅಲೆಗಳು ತೀರಕ್ಕೆ ತಂದು ಬಿಸಾಡಿದುವು(ಕೆಂಪು ಮೀನು, ಪು. ೨೪೫-೪೬).
ಮೂಲ ಮಲಯಾಳಂ ಹೀಗಿದೆ: ಒನ್ನುಂ ಸಂಭವಿಚ್ಚಿಟ್ಟಿಲ್ಲಾತದು ಪೋಲೆ ಶಾಂತಮಾಯ ಪಿಟ್ಟೇನ್ನುಂ ಪ್ರಭಾತತ್ತಿಲ್ ಕಡಲುಣರ್ನು.
ಅಙ ಪುರಕ್ಕಡಲಿಲ್ ವಲಿಯ ಕೋಳಾಯಿರುನ್ನು ಎನ್ನ್ ರಾತ್ರಿಯಿಲುಣರ್ನ ಚಿಲ ಅರಯನ್ಮಾರ್ ಪರಞು. ತಿರ ಚಿಲವೀಟುಗಳುಡೆ ಮುಟ್ಟತ್ತೋಳಂ ಅಡಿಚ್ಚು ಕಯರಿ. ಆ ವೆಳ್ಳಮಣಲಿಲ್ ಕಡಲ್ ಪಾಂಬುಗಳೆಯುಂ ಕಂಡು.
ಅಮ್ಮಚ್ಚಿಯೆಯುಂ ಅಚ್ಚನೆಯುಂ ವಿಳಿಚ್ಚು ಕರಯುನ್ನ ಕುಞಿನೆಯುಂ ಎಡುತ್ತುಕೊಂಡ್ ಕಡಲ್‌ಕ್ಕರಯಿಲ್ ನಿನ್ನು ಪಂಚಮಿ ಕರಯುಗಯಾಣ್. ತಲೇನ್ನಾಳ್ ರಾತ್ರಿಯಿಲ್ ಚೂಂಡಯ್ಕ್ ಪೋಯ ಚೇಟನ್ ತಿರಿಚ್ಚು ವನ್ನಿಲ್ಲ. ಉರಙನ್ ಕಿಡನ್ನ ಕರುತ್ತಮ್ಮಯುಮಿಲ್ಲ.
ಅವಳ್ ಕರಯುಗಯುಂ ಕುಞ್ಞಿನೆ ಆಶ್ವಸಿಪಿಕ್ಕುಗಯುಂ ಚೆಯ್ದು. ರಂಡ್‌ನಾಳ್ ಕೞಞು ಆಲಿಂಗನಬದ್ಧರಾಯ ಒರು ಸ್ತ್ರೀಯುಡೆಯುಂ ಪುರುಷಂಡೆಯುಂ ಶವ ಶರೀರಂಗಳ್ ಕಡಪುರತ್ತು ಅಡಿಞ್ಞು ಕಯರಿ. ಅದ್ ಕರುತ್ತಮ್ಮಯುಂ ಪರೀಕುಟ್ಟಿಯು ಮಾಯಿರುನ್ನು.
ಅಙ ಚೆರಿಯೞಕಲ್ ಕಡಪುರತ್ತು ಚೂಂಡ ವಿೞುಙಿಯ ಒರು ಶ್ರಾವುಂ ಅಡಿಞ ಕಯರಿ(ಚೆಮ್ಮೀನ್, ಪು. ೨೭೪).
ಮೂಲ ಕೃತಿಯ ಯಥಾವತ್ತಾದ ಅನುವಾದ: ಏನೂ ನಡೆದೇ ಇಲ್ಲ ಎಂಬಂತೆ ಶಾಂತವಾಗಿ ಮರುದಿನ ಕಡಲು ಎಚ್ಚರಗೊಂಡಿತು.
ಅತ್ತ ಹೊರಕಡಲಿನಲ್ಲಿ ಭಾರೀ ಬಿರುಗಾಳಿಯೆದ್ದಿತ್ತೆಂದು ರಾತ್ರಿಯಲ್ಲಿ ಎಚ್ಚರವಾಗಿದ್ದ ಮೀನುಗಾರರು ಮಾತನಾಡುತ್ತಿದ್ದರು. ಅಲೆಗಳು ಕೆಲವು ಮನೆಗಳ ಅಂಗಳದವರೆಗೂ ಏರಿ ಬಂದುವು. ಆ ಬೆಳ್ಳಗಿನ ಮರಳಿನಲ್ಲಿ ಹರಿದಾಡುವ ಕಡಲ ಹಾವುಗಳನ್ನು ಕಂಡರು.
ಅಮ್ಮನನ್ನು ಅಪ್ಪನನ್ನು ಕರೆಯುತ್ತ ಅಳುವ ಮಗುವನ್ನು ಎತ್ತಿಕೊಂಡು ಕಡಲ ತೀರದಲ್ಲಿ ನಿಂತು ಪಂಚಮಿ ಅಳುತ್ತಿದ್ದಾಳೆ. ಹಿಂದಿನ ದಿನ ರಾತ್ರಿ ಗಾಳಕ್ಕೆ ಹೋದ ಭಾವ ಮರಳಿ ಬರಲಿಲ್ಲ. ನಿದ್ದೆ ಮಾಡಲು ಮಲಗಿದ್ದ ಕರುತ್ತಮ್ಮಳೂ ಇಲ್ಲ.
ಅವಳು ಅಳುತ್ತ ಮಗುವನ್ನೂ ಸಮಾಧಾನಪಡಿಸುತ್ತಿದ್ದಳು.
ಎರಡು ದಿನಗಳ ಬಳಿಕ ಆಲಿಂಗನ ಬದ್ಧರಾದ ಸ್ತ್ರೀ ಪುರುಷರ ಶವಶರೀರಗಳು ಕಡಲ ತೀರಕ್ಕೆ ತಲುಪಿದುವು. ಅವು ಕರುತ್ತಮ್ಮ ಮತ್ತು ಪರೀಕುಟ್ಟಿಯರ ಕಳೇಬರಗಳು.
ಅತ್ತ ಚೆರಿಯಳೀಕ್ಕಲ್ ಕಡಲತೀರದಲ್ಲಿ ಗಾಳ ನುಂಗಿದ ತಾಟೆ ಮೀನೊಂದು ದಡ ಸೇರಿತು.
ಇದು ಕಾದಂಬರಿಯ ಕೊನೆಯ ಭಾಗ. ಇಲ್ಲಿನ ಕನ್ನಡ ಅನುವಾದ(ಕೆಂಪು ಮೀನು)ದಲ್ಲಿ ವಿವರಣಾತ್ಮಕವಾಗಿ ಕಾದಂಬರಿಯ ಆಶಯವನ್ನು ಮರುರೂಪಿಸಿದೆ. ಕೊನೆಯ ವಾಕ್ಯಗಳಲ್ಲಿ ಎರಡು ಶರೀರಗಳನ್ನು ಹಾಗೂ ಗಾಳನುಂಗಿದ ಸ್ರಾವನ್ನು ತಂದು ತೀರಕ್ಕೆ ತಲುಪಿಸಿದುದು ಅಲೆಗಳು ಎಂದು ವಾಚ್ಯವಾಗಿದೆ. ಆದರೆ ಮೂಲದಲ್ಲಿ ಮಹಿಳೆ ಹಾಗೂ ಪುರುಷನ ಶರೀರಗಳು ತೀರಕ್ಕೆ ತಲುಪಿದುವು ಎಂದೇ ಅಭಿವ್ಯಕ್ತಿಸಲಾಗಿದೆ. ಇದು ಪರೀಕುಟ್ಟಿ ಮತ್ತು ಕರುತ್ತಮ್ಮಳ ಪ್ರೇಮಯಾನವನ್ನು ಸಂಕೇತಿಸುತ್ತಿದೆ. ಅಲೆಗಳ ಕಾರಣಕ್ಕಾಗಿಯೇ ಮತ್ತು ಆ ದೇಹಗಳು ತೀರ ತಲುಪಿದ್ದು ವಾಸ್ತವವಿರಬಹುದು. ಕಾದಂಬರಿಕಾರರು ಅದನ್ನು ವಾಚ್ಯ ಮಾಡಿಲ್ಲ. ಅವರಿಬ್ಬರೂ ದೂರಾದವರು ಒಂದಾಗಿ ಸಾವನ್ನು ಆಲಿಂಗಿಸಿದರು. ಸಾವಿನಲ್ಲೂ ಆಲಿಂಗಿಸಿಕೊಂಡೇ ಇದ್ದರಲ್ಲದೆ ಅವರೇ ಪ್ರೇಮದ ದಡ ಸೇರಿದರೂ ಎಂಬುದು ಕಾದಂಬರಿ ಹೊರಡಿಸುವ ವಿಶಿಷ್ಟ ಧ್ವನಿ.
ಹಾಗೆಯೇ ಗಾಳನುಂಗಿದ ಮೀನು ಕಡಲತೀರಕ್ಕೆ ತಲುಪಿತ್ತು. ಅದನ್ನು ವಾಸ್ತವದಲ್ಲಿ ಅಲೆಗಳೇ ದಡ ಸೇರಿಸಿರಬಹುದು. ಆದರೆ ಹಾಗೆಂದು ಕಾದಂಬರಿಕಾರರು ಹೇಳಿಲ್ಲ. ಆ ತಾಟೆ ಮೀನು ಸಾಹಸಿ ಮೀನು. ಪ್ರಾಣವನ್ನು ತೆಗೆಯಲು ಕಾರಣವಾದ ಮೀನು. ಈ ಮೀನಿನ ಸಾಹಸಕ್ಕೆ ಪೂರಕವಾದದ್ದು ಕರುತ್ತಮ್ಮಳ ಚಾರಿತ್ರ್ಯ. ಅದು ತನ್ನ ಸಾಹಸದಲ್ಲಿ ಸತ್ತರೂ ದಡ ಸೇರಿದೆ. ಪ್ರೀತಿಯಲ್ಲಿ ಕರುತ್ತಮ್ಮ ಪರೀಕುಟ್ಟಿಯರೂ(ವಿವರಗಳಿಗೆ ನೋಡಿ: ಮೋಹನ ಕುಂಟಾರ್-ಕನ್ನಡ ಮಲಯಾಳಂ ಭಾಷಾಂತರ ಪ್ರಕ್ರಿಯೆ, ಪು. ೧೨೮-೧೩೨).
ಈಗಾಗಲೇ ಹೇಳಿರುವಂತೆ ಚೆಮ್ಮೀನ್ಗೆ ಕನ್ನಡದಲ್ಲಿ ಒಂದೇ ಹೆಸರಿಲ್ಲ. ಹಾಗೆಯೇ ಕಾದಂಬರಿಯಲ್ಲಿ ಬರುವ ಮತ್ತಿ, ಶ್ರಾವ್ ಮೊದಲಾದ ಮೀನುಗಳಿಗೂ ಕನ್ನಡದಲ್ಲಿ ಪ್ರಾದೇಶಿಕವಾಗಿ ಬೇರೆ ಬೇರೆ ಹೆಸರುಗಳಿವೆ.
ಮತ್ತಿ ಮೀನಿಗೆ ಮಲಯಾಳಂನಲ್ಲಿ ಚೋಳೆ ಎಂದೂ ಹೇಳಲಾಗುತ್ತದೆ. ಕನ್ನಡದಲ್ಲಿ ಬೂತಾಯಿ, ತಾರ್ಲಿ, ತಾರ್ಳೆ ಎಂಬಿತ್ಯಾದಿಯಾಗಿ ಹೆಸರಿಸಲಾಗಿದೆ. ಹಾಗೆಯೇ ಶ್ರಾವ್ ಕನ್ನಡ ಪ್ರದೇಶಗಳಲ್ಲಿ ಸೊರಳು, ಚಾಟೆ, ಟಾಟೆ, ಚಾಟಿ, ತಾಟೆ ಎಂಬಿತ್ಯಾದಿಯಾಗಿ ಹೇಳಲಾಗುತ್ತದೆ.
ಹಾಗೆಯೇ ಕನ್ನಡದಲ್ಲಿ ಬಳಕೆಯಲ್ಲಿರುವ ಕೆಲವೊಂದು ಪದಗಳು ಮಲಯಾಳಂನಲ್ಲಿಯೂ ಬಳಕೆಯಲ್ಲಿವೆ. ಅವುಗಳಿಗೆ ಕನ್ನಡಕ್ಕಿಂತಲೂ ಬೇರೆಯೇ ಆದ ಅರ್ಥಗಳಿವೆ. ಅವುಗಳನ್ನು ಕೆಂಪು ಮೀನು ಕೃತಿಯಲ್ಲಿ ಕಾಣಬಹುದು.
ಉದಾಹರಣೆಗೆ: ಸಮರ, ಪ್ರಶ್ನೆ, ವಿಕಾರ, ಕರಳ್, ಮತ್ಸರ, ಕಾಮುಕ ಇತ್ಯಾದಿ ಪದಗಳನ್ನು ಕೆಂಪು ಮೀನಿನಲ್ಲಿ ಕನ್ನಡದ ಅರ್ಥದಲ್ಲಿಯೇ ಬಳಸಲಾಗಿದೆ. ಈ ಮಲಯಾಳಂ ಪದಗಳಿಗೆ ಕನ್ನಡದ ಅರ್ಥ ಅನುಕ್ರಮವಾಗಿ ಮುಷ್ಕರ, ಸಮಸ್ಯೆ, ಭಾವನೆ, ಹೃದಯ, ಸ್ಪರ್ಧೆ, ಪ್ರೇಮಿ ಎಂದಾಗಬೇಕು. ಹೀಗೆ ಇನ್ನು ಅನೇಕ ಪದಗಳನ್ನು ಗುರುತಿಸಬಹುದು.
ಹೀಗೆ ಪ್ರಸ್ತುತ ಅನುವಾದವನ್ನು ಕೆಂಪು ಮೀನು ಕೃತಿಯ ಜೊತೆಗಿರಿಸಿ ಪರಿಶೀಲಿಸಿದರೆ ಇಂತಹ ಅನೇಕ ಮಿತಿಗಳು ಗೋಚರಿಸಬಹುದು. ಇದು ಸಾಮಾನ್ಯ ಓದಿಗಿಂತಲೂ ಅಧ್ಯಯನಾಸಕ್ತರ ಕುತೂಹಲಕ್ಕೆ ಕಾರಣವಾಗಬಹುದು ಎಂಬುದಕ್ಕಾಗಿ ಮಾತ್ರ ಇದನ್ನು ಉಲ್ಲೇಖಿಸಬೇಕಾಯಿತು.
-ಮೋಹನ ಕುಂಟಾರ್
Reviews
There are no reviews yet.