ನನ್ನ ಮಾತು
ಅನೇಕ ವರ್ಷಗಳಿಂದ ನಾನು ಕಂಡ ಕನಸು ಇದೀಗ ನನಸಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯ ಬಗ್ಗೆ ಒಂದು ಕೃತಿಯನ್ನು ರಚಿಸಬೇಕೆಂದು ಬಹಳ ದಿನಗಳಿಂದಲೂ ಹಂಬಲಿಸುತ್ತಿದ್ದೆ. ೨೦೦೭ರಲ್ಲಿ ಪ್ರಕಟವಾದ ನನ್ನ ’ಶಿವಾಜಿ ಮೂಲ ಕನ್ನಡ ನೆಲ’ ಎಂಬ ಸಂಶೋಧನಾ ಕೃತಿಯಲ್ಲಿ ಶಿವಾಜಿ ಮಹಾರಾಜರ ಬಗೆಗೆ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದ್ದೆ. ಆದರೆ ಅದು ಅವರ ಜೀವನ ಚರಿತ್ರೆಯಾಗಿರಲಿಲ್ಲ. ಶಿವಾಜಿ ಮಹಾರಾಜರ ನೈಜ ಇತಿಹಾಸದ ಬಗ್ಗೆ ಒಂದು ಕೃತಿಯನ್ನು ಬರೆಯಲು ಅನೇಕ ಜನರು ಲಾಗಾಯ್ತಿನಿಂದಲೂ ನನ್ನನ್ನು ಒತ್ತಾಯಿಸುತ್ತಿದ್ದರು. ಶಿವಾಜಿ ಮಹಾರಾಜರ ಬಗ್ಗೆ ಕನ್ನಡದಲ್ಲಿ ಬಂದ ಕೃತಿಗಳಲ್ಲಿ ಶೇಕಡಾ ೯೮ರಷ್ಟು ಕೃತಿಗಳು ಮರಾಠಿಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳೇ ಆಗಿವೆ. ಈ ಕೃತಿಗಳಲ್ಲಿ ಮಹಾರಾಜರ ಜೀವನದ ನೈಜ ಚಿತ್ರಣಕ್ಕಿಂತ ಕಥೆಗಳಿಗೆ, ದಂತಕಥೆಗಳಿಗೇ ಅಗ್ರಸ್ಥಾನ ನೀಡಲಾಗಿದೆ. ಮರಾಠಿಯಲ್ಲಿ ಕೃತಿ ರಚನೆ ಮಾಡಿದ ಆಯಾಯ ಲೇಖಕರು ತಮ್ಮ ತಮ್ಮ ಒಲವಿಗನುಗುಣವಾಗಿ, ನಡೆಯದೇ ಇದ್ದ ಹಲಕೆಲ ಪ್ರಸಂಗಗಳನ್ನು, ಘಟನೆಗಳನ್ನು ಕಾಲ್ಪನಿಕವಾಗಿ ಸೃಷ್ಟಿಸಿ ಅವುಗಳನ್ನು ಇತಿಹಾಸದ ಹೆಸರಿನಲ್ಲಿ ಸೇರಿಸಿದ ದೃಷ್ಟಾಂತಗಳೂ ಸಾಕಷ್ಟಿವೆ.
ಛತ್ರಪತಿ ಶಿವಾಜಿ ಮಹಾರಾಜರ ಬಗೆಗೆ ಮರಾಠಿಯಲ್ಲಿ ಅನೇಕ ಸಹಸ್ರ ಕೃತಿಗಳು ಪ್ರಕಟವಾಗಿವೆ; ಕಾದಂಬರಿಗಳು, ನಾಟಕಗಳು, ಸಿನೇಮಾಗಳೂ ಬಂದಿವೆ. ಅವರು ಮಹಾರಾಷ್ಟ್ರದ ಜನರ ದೈವವಾಗಿದ್ದಾರೆ, ಮರಾಠಿ ಜನರ ಶ್ರದ್ಧಾಕೇಂದ್ರಗಳಲ್ಲಿ ಮೊಟ್ಟ ಮೊದಲು ಬರುವ ಹೆಸರೇ ಶಿವಾಜಿ ಮಹಾರಾಜರದ್ದು. ಹಿಂದುಳಿದ, ಸಾಂಸ್ಕೃತಿಕವಾಗಿ ಅಸಹಾಯಕರಾಗಿದ್ದ ಮರಾಠಾ ಸಮುದಾಯಕ್ಕೆ ಶಿವಾಜಿ ಮಹಾರಾಜರು ಒಂದು ಅಸ್ಮಿತೆಯನ್ನು ದೊರಕಿಸಿಕೊಟ್ಟಿದ್ದಾರೆ. ಮರಾಠಾ ಸಮುದಾಯವು ಶಿವಾಜಿ ಮಹಾರಾಜರನ್ನು ದೇವರೆಂದೇ ಪೂಜಿಸುತ್ತದೆ.
ಮಹಾರಾಜರಿಗೂ ಕರ್ನಾಟಕಕ್ಕೂ ಅನನ್ಯವಾದ ಸಂಬಂಧಗಳಿವೆ. ಅವರು ತಮ್ಮ ಬಾಲ್ಯವನ್ನು ಕರ್ನಾಟಕದಲ್ಲಿಯೇ ಕಳೆದಿದ್ದಾರೆ. ಅವರ ತಂದೆ ಶಹಾಜಿ ವಿಜಾಪುರದಲ್ಲಿದ್ದಾಗ ಅಥವಾ ಬೆಂಗಳೂರಿನಲ್ಲಿದ್ದಾಗ ಶಿವಾಜಿ ಮಹಾರಾಜರು ತಮ್ಮ ತಂದೆಯ ಜೊತೆಗೆ ಕರ್ನಾಟಕದಲ್ಲಿಯೇ ಇದ್ದರು. ಅವರು ಕನ್ನಡ ಭಾಷೆಯನ್ನೂ ಕಲಿತಿದ್ದರು. ಅವರ ತಂದೆ ಕರ್ನಾಟಕದಲ್ಲಿಯೇ ನಿಧನರಾದರು. ಅವರ ಸಮಾಧಿ ದಾವಣಗೆರೆ ಜಿಲ್ಲೆಯ ಹೊದಿಗೆರೆಯಲ್ಲಿ ಸ್ಥಾಪಿಸಲಾಗಿದೆ. ಮಹಾರಾಜರ ಅಣ್ಣ ಸಂಭಾಜಿಯು ಕೊಪ್ಪಳದ ಹತ್ತಿರದ ಕನಕಗಿರಿಯಲ್ಲಿ ನಡೆದ ಯುದ್ಧದಲ್ಲಿ ಮರಣವನ್ನಪ್ಪಿದ. ಅವನ ಸಮಾಧಿಯನ್ನು ಕನಕಗಿರಿಯಲ್ಲಿ ಕಟ್ಟಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಕಲ್ಲಿನಲ್ಲಿ ಕಟೆದ ಉಬ್ಬು ಶಿಲ್ಪಗಳು ಧಾರವಾಡ ಹತ್ತಿರದ ಯಾದವಾಡ ಗ್ರಾಮದಲ್ಲಿ ಸಂರಕ್ಷಿಸಿ ಇಡಲಾಗಿದೆ. ಈ ಉಬ್ಬು ಶಿಲ್ಪಗಳು ಕಲ್ಲಿನಲ್ಲಿ ಕೆತ್ತಿದ ಮಹಾರಾಜರ ಮೊಟ್ಟ ಮೊದಲ ಕಲ್ಲಿನಲ್ಲಿಯ ಮೂರ್ತಿಗಳೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮಹಾರಾಜರ ಎರಡನೆಯ ಮದುವೆಯು ಕರ್ನಾಟಕದಲ್ಲಿ ಬಲು ವಿಜೃಂಭಣೆಯಿಂದ ನಡೆಯಿತೆಂಬುದನ್ನು ಮಹಾರಾಜರ ಬಗೆಗಿನ ಬಖರಗಳಲ್ಲಿ ಹೇಳಲಾಗಿದೆ. ಮಹಾರಾಜರ ಮೂಲ ಮನೆತನವು ಕರ್ನಾಟಕದ ಗದಗ ಜಿಲ್ಲೆಯ ಸೊರಟೂರಿನದ್ದೆಂದು ಮತ್ತು ಆ ಮನೆತನದ ಮುಖ್ಯಸ್ಥನಾಗಿದ್ದ ಬಳಿಯಪ್ಪನೆಂಬುವವನು ಸೊರಟೂರಿನಿಂದ ಮಹಾರಾಷ್ಟ್ರದ ಪೇಣ ಪ್ರಾಂತಕ್ಕೆ ಕ್ರಿ.ಶ. ೧೨೫೦ರ ಸುಮಾರಿನಲ್ಲಿ ವಲಸೆ ಹೋದನೆಂದೂ ಅವನ ಮುಂದಿನ ತಲೆಮಾರಿನಲ್ಲಿ ಜಗದೇಕ ವೀರನಾದ ಶಿವಾಜಿ ಮಹಾರಾಜರು ಹುಟ್ಟಿದರೆಂದೂ ದಾಖಲೆಗಳಿವೆ. ಮಹಾರಾಜರ ಮನೆದೇವರು ಶ್ರೀಶೈಲದ ಚನ್ನಮಲ್ಲಿಕಾರ್ಜುನನಾಗಿದ್ದನು. ಉತ್ತರ ಭಾರತವನ್ನು ಆಪೋಷನ ತೆಗೆದುಕೊಂಡ ಮುಸಲ್ಮಾನ ದೊರೆಗಳಿಗೆ ದಕ್ಷಿಣದಲ್ಲಿ ತಮ್ಮ ರಾಜ್ಯ ವಿಸ್ತಾರಕ್ಕೆ ಮರಾಠಾ ಸಾಮ್ರಾಜ್ಯವು ದೊಡ್ಡ ಗೋಡೆಯಂತೆ ತಡೆಯನ್ನೊಡ್ಡಿತು. ಔರಂಗಜೇಬನಂತಹ ಮಹಾ ಬಲಾಢ್ಯ ಬಾದಶಹನನ್ನು ಬಗ್ಗಿಸುವುದು ಸುಲಭದ ಮಾತಾಗಿರಲಿಲ್ಲ. ಆದರೆ ಶಿವಾಜಿ ಮಹಾರಾಜರು ದಕ್ಷಿಣದ ಅವನ ದಾಳಿಯನ್ನು ಬಲು ಸಮರ್ಥವಾಗಿ ಹಿಮ್ಮೆಟ್ಟಿಸಿದರು.
ಮಹಾರಾಜರ ಬಗೆಗೆ ನೈಜ ಚಿತ್ರಣವನ್ನು ಕೊಡುವ ಉದ್ದೇಶದಿಂದ ಮರಾಠಿ, ಇಂಗ್ಲಿಷ್ ಹಾಗೂ ಕನ್ನಡದಲ್ಲಿದ್ದ ಅನೇಕ ಗ್ರಂಥಗಳನ್ನು ನಾನು ಪರಾಂಬರಿಸಿದ್ದೇನೆ. ಅನೇಕ ಸಾವಿರ ಪುಟಗಳ ಬಖರಗಳಲ್ಲಿಯ ವಿಷಯವನ್ನು ಆಧಾರವಾಗಿ ತೆಗೆದುಕೊಂಡಿದ್ದೇನೆ. ಸಾಧ್ಯವಾದಷ್ಟು ಮಟ್ಟಿಗೆ ದಂತಕಥೆಗಳಿಗೆ ಆಸ್ಪದ ನೀಡದೆಯೇ ಮಹಾರಾಜರ ನೈಜವಾದ ಇತಿಹಾಸವನ್ನು ಪ್ರಸ್ತುತ ಪಡಿಸಲು ಯತ್ನಿಸಿದ್ದೇನೆ.
ನನ್ನ ’ಶಿವಾಜಿ ಮೂಲ ಕನ್ನಡ ನೆಲ’ ಕೃತಿಯನ್ನು ಬಳ್ಳಾರಿಯ ಲೋಹಿಯಾ ಪ್ರಕಾಶನದ ಚನ್ನಬಸವಣ್ಣನವರು ತಮ್ಮ ಪ್ರಕಾಶನದ ೧೦೦ನೆಯ ಕೃತಿಯನ್ನಾಗಿ ಹೊರ ತಂದಿದ್ದರು. ಈಗ ಅದರ ಏಳು ಆವೃತ್ತಿಗಳು ಹಾಗೂ ಒಂದು ಜನಪ್ರಿಯ ಆವೃತ್ತಿಗಳು ಪ್ರಕಟವಾಗಿವೆ. ಛತ್ರಪತಿ ಶಿವಾಜಿ ಮಹಾರಾಜರ ಬಗೆಗೆ ಈಗ ಬರೆದ ಈ ಕೃತಿಯನ್ನು ಹೊಸಪೇಟೆಯ ಯಾಜಿ ಪ್ರಕಾಶನವು ತಮ್ಮ ಪ್ರಕಾಶನದ ೧೦೦ನೆಯ ಕೃತಿಯನ್ನಾಗಿ ಪ್ರಕಟಿಸುತ್ತಿದೆ. ಇದೊಂದು ಯೋಗಾಯೋಗವೆಂದು ನಾನು ಭಾವಿಸಿದ್ದೇನೆ. ಚನ್ನಬಸವಣ್ಣನವರ ಮೂಲಕವಾಗಿ ಶಿವಾಜಿ ಮಹಾರಾಜರು ಕರ್ನಾಟಕದ ಮನೆ ಮನೆಗೆ ಹೋಗಿದ್ದನ್ನು ಮರೆಯುವ ಹಾಗಿಲ್ಲ. ಚನ್ನಬಸವಣ್ಣ ನವರನ್ನು ನಾನು ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳುತ್ತಿದ್ದೇನೆ.
ಶಿವಾಜಿ ಮಹಾರಾಜರ ಬಗೆಗಿನ ಈ ಕೃತಿಯ ಹಲ ಕೆಲ ಅಧ್ಯಾಯಗಳನ್ನು ಗೆಳೆಯರೆದುರು ರೀಡಿಂಗ್‌ಗಾಗಿ ಇಟ್ಟುಕೊಳ್ಳುತ್ತಿದ್ದೆ. ಅಲ್ಲಿ ಅವರು ನೀಡಿದ ಸಲಹೆ ಸೂಚನೆಗಳು ಬಲು ಮಹತ್ವದ್ದಾಗಿರುತ್ತಿದ್ದವು. ಈ ಗೆಳೆಯರೆಲ್ಲರ ಉಪಕಾರವನ್ನು ಸ್ಮರಿಸುತ್ತೇನೆ.
ಕರ್ನಾಟಕದಲ್ಲಿ ಮರಾಠಾ ಸಮುದಾಯದ ಜನಸಂಖ್ಯೆ ೬೦ರಿಂದ ೬೨ ಲಕ್ಷದವರೆಗೆ ಇದೆ. ೨೦೧೮ರಲ್ಲಿ ಕರ್ನಾಟಕ ಸರ್ಕಾರವು ಲಿಂಗಾಯತರದ್ದು ಪ್ರತ್ಯೇಕ ಧರ್ಮವೋ ಅಥವಾ ಅವರು ಹಿಂದೂ ಧರ್ಮದ ಅಡಿಯಲ್ಲಿಯೇ ಬರುತ್ತಾರೆಯೋ ಎಂಬುದನ್ನು ನಿರ್ಣಯಿಸಲು ಜಸ್ಟೀಸ್ ನಾಗಮೋಹನದಾಸ ಅವರ ಅಧ್ಯಕ್ಷತೆಯಲ್ಲಿ ’ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ನಿರ್ಣಯ ಆಯೋಗ’ವನ್ನು ರಚಿಸಿದ್ದಿತು. ಈ ಆಯೋಗದಲ್ಲಿ ನಾನೂ ಒಬ್ಬ ಸದಸ್ಯನಾಗಿದ್ದೆ. ಆಯೋಗವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಕರ್ನಾಟಕದಲ್ಲಿರುವ ವಿವಿಧ ಜಾತಿಗಳ ಜನಸಂಖ್ಯೆಯ ವಿವರಗಳನ್ನು ಪೂರೈಸಬೇಕೆಂದು ಕೇಳಿಕೊಂಡಿತು. ಸರ್ಕಾರವು ೨೦೧೫ರಲ್ಲಿ ನಡೆಸಿದ ಜಾತಿ ಗಣತಿಯ ವಿವರಗಳನ್ನು ನೀಡಿತು. ಆ ಜಾತಿಗಣತಿಯ ವರದಿಯಲ್ಲಿ ಕರ್ನಾಟಕದಲ್ಲಿ ಮರಾಠಾ ಸಮುದಾಯದ ಜನಸಂಖ್ಯೆ ೫೮ ಲಕ್ಷ ಎಂದು ಹೇಳಲಾಗಿತ್ತು. ೨೦೧೫ರಿಂದ ೨೦೨೪ರ ವರೆಗಿನ ಅವಧಿಯಲ್ಲಿ ಕನಿಷ್ಟ ಎರಡು ಅಥವಾ ನಾಲ್ಕು ಲಕ್ಷದಷ್ಟು ಜನಸಂಖ್ಯೆ ಏರಿದ್ದರೂ ಕನಿಷ್ಟ ೬೦ ಲಕ್ಷದಷ್ಟು ಮರಾಠರು ಕರ್ನಾಟಕದಲ್ಲಿದ್ದಾರೆ. ಈ ಮರಾಠರ ಪೂರ್ವಜರು ಮಹಾರಾಷ್ಟ್ರದಿಂದ ಶಹಾಜಿ ಜೊತೆಗೆ ಅಥವಾ ಶಿವಾಜಿ ಮಹಾರಾಜರ ಜೊತೆಗೆ ಕರ್ನಾಟಕಕ್ಕೆ ವಲಸೆ ಬಂದವರು. ಇತಿಹಾಸದ ಪುಟಗಳಲ್ಲಿ ದೇವಗಿರಿಯ ಯಾದವರು ಯವನರಿಂದ ಪರಾಭವ ಗೊಂಡ ನಂತರ ಆ ಭಾಗದಲ್ಲಿದ್ದ ಮರಾಠಾ ಸಮುದಾಯವು ದೊಡ್ಡ ಪ್ರಮಾಣದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳಕ್ಕೆ ವಲಸೆ ಬಂದರೆಂದೂ ದಾಖಲಿಸಲಾಗಿದೆ. ಶ್ರವಣಬೆಳಗೊಳದಲ್ಲಿರುವ ಗೊಮ್ಮಟೇಶ್ವರನ ಪಾದದ ಬಳಿ ’ಚಾವುಂಡರಾಯ ಕರವೀಲೆ’ ಮತ್ತು ’ಚಾವುಂಡರಾಯ ಸುತ್ತಾಲೆ ಕರವೀಲೆ’ ಎಂದು ಮರಾಠಿ ಲಿಪಿಯಲ್ಲಿಯೇ ಮರಾಠಿ ವಾಕ್ಯಗಳನ್ನು ಕೆತ್ತಲಾಗಿದೆ. ಗೊಮ್ಮಟನ ಕಾಲ ಕ್ರಿ.ಶ. ೯೭೫. ಈ ದಾಖಲೆಯನ್ನು ನೋಡಿದರೆ ಮರಾಠಾ ಸಮುದಾಯದ ಕರ್ನಾಟಕದ ಜೊತೆಗಿನ ಬಾಂಧವ್ಯವು ಹತ್ತನೆಯ ಶತಮಾನಕ್ಕೆ ಹೋಗುತ್ತದೆ.
ಕರ್ನಾಟಕದಲ್ಲಿರುವ ಮರಾಠಾ ಸಮುದಾಯವು ಸಂಪೂರ್ಣವಾಗಿ ಕನ್ನಡೀಕರಣಗೊಂಡು ತನಗೆ ಅನ್ನ, ಆಶ್ರಯ ನೀಡಿದ ಈ ನಾಡಿನ ಶ್ರೇಯೋಭಿವೃದ್ಧಿಗಾಗಿ ಲಾಗಾಯ್ತಿನಿಂದಲೂ ಶ್ರಮಿಸುತ್ತ ಬಂದಿದೆ. ಕರ್ನಾಟಕದ ಅಭಿವೃದ್ಧಿಯಲ್ಲಿ ಈ ಸಮುದಾಯದ ಪಾಲೂ ಸಾಕಷ್ಟು ದೊಡ್ಡ ಪ್ರಮಾಣದಲ್ಲಿದೆ. ಕರ್ನಾಟಕದಲ್ಲಿರುವ ಅನೇಕ ಮರಾಠರಿಗೆ ಮರಾಠಿಯೇ ಬರುವುದಿಲ್ಲ. ಅವರು ಮನೆಯಲ್ಲಿ ಕನ್ನಡವನ್ನೇ ಮಾತನಾಡುತ್ತಾರೆ. ಉತ್ತರ ಕರ್ನಾಟಕದ ಅನೇಕ ಮರಾಠಾ ಕುಟುಂಬಗಳು ಲಿಂಗಾಯತ ಆಚರಣೆಗಳನ್ನು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿ ಕೊಂಡಿದ್ದಾರೆ.
ರಾಜ್ಯದಲ್ಲಿ ಇಷ್ಟು ಬೃಹತ್ ಪ್ರಮಾಣದಲ್ಲಿ ಮರಾಠಾ ಜನಸಮುದಾಯವಿದ್ದರೂ ಅವರಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ರಾಜ್ಯದ ಎಲ್ಲ ಮರಾಠರನ್ನು ಸಂಘಟಿಸಿ ಅವರನ್ನೆಲ್ಲ ಒಗ್ಗೂಡಿಸುವ ನಾಯಕತ್ವದ ಅವಶ್ಯಕತೆ ಈಗ ಬೇಕಾಗಿದೆ. ರಾಜ್ಯದ ಮರಾಠರಲ್ಲಿ ಏಕತೆ ಇಲ್ಲದಿರುವುದರಿಂದ ಯಾವ ಸರ್ಕಾರಗಳೂ ಇವರತ್ತ ತಿರುಗಿಯೂ ನೋಡದಂಥ ಪರಿಸ್ಥಿತಿಯು ನಿರ್ಮಾಣವಾಗಿದೆ. ಏಕತೆಯಿಂದಲೇ ತಮ್ಮ ಉದ್ಧಾರವು ಸಾಧ್ಯವೆಂಬುದನ್ನು ರಾಜ್ಯದ ಮರಾಠಾ ಸಮುದಾಯವು ಅರಿತುಕೊಳ್ಳಬೇಕಾಗಿದೆ.
ಈ ಹಿಂದೆ ಅಂದರೆ ಫೆಬ್ರವರಿ ೨೦, ೨೦೨೦ರಲ್ಲಿ ನಾನು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ’ತರಂಗ’ ವಾರ ಪತ್ರಿಕೆಯಲ್ಲಿ ಮುಖಪುಟದ ಒಂದು ದೀರ್ಘ ಲೇಖನವನ್ನು ಬರೆದಿದ್ದೆ. ಆ ಲೇಖನಕ್ಕೆ ಬಂದ ಸಮೃದ್ಧ ಪ್ರತಿಕ್ರಿಯೆಗಳು ನನ್ನನ್ನು ಪುಳಕಿತನನ್ನಾಗಿಸಿದ್ದವು. ಆ ಲೇಖನದಲ್ಲಿ ನಾನು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ರವೀಂದ್ರನಾಥ ಟಾಗೋರರು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಬರೆದ ಒಂದು ದೀರ್ಘ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದೆ. ಈ ಕವಿತೆಗೆ ಟಾಗೋರರು ’ಶಿವಾಜಿ ಉತ್ಸವ’ ಎಂದು ತಲೆಬರಹವನ್ನು ನೀಡಿದ್ದರು. ಅದನ್ನವರು ೧೯೦೪ರಲ್ಲಿಯೇ ಬರೆದು ಪ್ರಕಟಿಸಿದ್ದರು. ಛತ್ರಪತಿ ಶಿವಾಜಿ ಮಹಾರಾಜರ ಕತೃತ್ವ ಶಕ್ತಿಯನ್ನು, ಅವರ ಶೌರ್ಯ, ಸಾಹಸಗಳನ್ನು ವಿಶ್ವಕವಿ ಶ್ಲಾಘಿಸಿದ್ದರು. ಬಂಗಾಲಿ ಭಾಷೆಯ ಈ ಕವಿತೆಯನ್ನು ಮರಾಠಿಯ ಸುಪ್ರಸಿದ್ಧ ಲೇಖಕರೂ ಹಿರಿಯ ಐಎಎಸ್ ಅಧಿಕಾರಿಗಳು ಆಗಿರುವ ಡಾ. ನರೇಂದ್ರ ಜಾಧವರು ಮರಾಠಿಯಲ್ಲಿ ಅನುವಾದಿಸಿದ್ದರು. ಡಾ. ನರೇಂದ್ರ ಜಾಧವರು ’ಆಮ್ಹಿ ಆಣಿ ಆಮಚೆ ಬಾಪ್’ (ನಾವು ಮತ್ತು ನಮ್ಮ ಅಪ್ಪ) ಎಂಬ ಆತ್ಮಚರಿತ್ರೆಯ ಲೇಖಕರು. ನರೇಂದ್ರ ಜಾಧವ ಹಾಗೂ ಅವರ ಇಬ್ಬರು ಸಹೋದರರು ಕೂಡಿ ತಮ್ಮ ಅಪ್ಪನ ಆತ್ಮಚರಿತ್ರೆಯನ್ನು ಬರೆದಿದ್ದಾರೆ. ನರೇಂದ್ರ ಜಾಧವರು ಮರಾಠಿಯಲ್ಲಿ ಬರೆದ ಈ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿ ಅದನ್ನಿಲ್ಲಿ ಅಳವಡಿಸಿದ್ದೇನೆ.
ಶಿವಾಜಿ ಮಹಾರಾಜರ ಬಗ್ಗೆ ಸಮರ್ಥ ರಾಮದಾಸರು ಹಲವಾರು ಶ್ಲೋಕಗಳನ್ನು ಬರೆದಿದ್ದಾರೆ. ಮಹಾರಾಜರ ಬಗ್ಗೆ ’ಜಾಣತಾ ರಾಜಾ’ ಎಂಬ ವಿಶೇಷ ವಿಶೇಷಣವನ್ನು ನೀಡಿದವರೇ ಸಮರ್ಥ ರಾಮದಾಸರು. ಮಹಾರಾಜರ ಬಗ್ಗೆ ಅವರು ಬರೆದ ಒಂದು ಶ್ಲೋಕವನ್ನು ನಾನು ಅತ್ಯಂತ ಸರಳ ಕನ್ನಡದಲ್ಲಿ ಅನುವಾದಿಸಿ, ಅದನ್ನಿಲ್ಲಿ ಅಳವಡಿಸಿದ್ದೇನೆ. ಸಮರ್ಥರ ’ಜಾಣತಾ ರಾಜಾ’ ಎಂಬ ವಿಶೇಷಣವನ್ನು ನಾನಿಲ್ಲಿ ’ವಿವೇಕಿ ರಾಜನು’ ಎಂದು ಅನುವಾದಿಸಿದ್ದೇನೆ. ಅವರ ಈ ಶ್ಲೋಕವನ್ನು ಕೃತಿಯ ಆರಂಭದಲ್ಲಿಯೇ ನೀಡಲಾಗಿದೆ.
ಈ ಕೃತಿಯಲ್ಲಿ ಶಿವಾಜಿ ಮಹಾರಾಜರ ಜೀವನಕ್ಕೆ ಸಂಬಂಧಪಟ್ಟ ಮೂರು ಅಪರೂಪದ ಲೇಖನಗಳನ್ನು ಅಳವಡಿಸಿದ್ದೇನೆ. ಛತ್ರಪತಿ ಶಿವಾಜಿ ಮಹಾರಾಜರ ರಾಜ ಮುದ್ರೆಯ ಬಗೆಗೆ ಅನೇಕ ಶ್ರೀಸಾಮಾನ್ಯರರಿಗೆ ಸರಿಯಾದ ಅರಿವು ಇಲ್ಲ. ಈ ರಾಜಮುದ್ರೆಯನ್ನು ಮಹಾರಾಜರು ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಉಪಯೋಗಿಸುತ್ತಿದ್ದರೆಂದು ದಾಖಲೆಗಳ ಸಹಿತವಾಗಿ ಇಲ್ಲಿ ವಿವರಿಸಿದ್ದೇನೆ. ಮಹಾರಾಜರು ತಮ್ಮ ಧ್ವಜವನ್ನಾಗಿ ಅಳವಡಿಸಿಕೊಂಡಿದ್ದ ಭಗವಾ ಅಥವಾ ಕೇಸರಿ ಬಣ್ಣದ ಧ್ವಜವನ್ನೂ ಸಹ ಅವರು ತಮ್ಮ ಹದಿನಾರನೆಯ ವಯಸ್ಸಿನಿಂದಲೇ ಉಪಯೋಗಿಸುತ್ತಿದ್ದರು. ರಾಜಮುದ್ರೆಯ ವಿಸ್ತೃತ ಅರ್ಥವನ್ನೂ ಆ ಅಧ್ಯಾಯದಲ್ಲಿ ನೀಡಲು ಯತ್ನಿಸಿದ್ದೇನೆ.
ಛತ್ರಪತಿ ಶಿವಾಜಿ ಮಹಾರಾಜರ ಅಸಲಿ ಭಾವಚಿತ್ರಕ್ಕೆ ಸಂಬಂಧಪಟ್ಟ ಅಧ್ಯಾಯವನ್ನೂ ಇಲ್ಲಿ ನೀಡಿರುವೆ. ೧೯೨೦ರ ಮೊದಲು ಛತ್ರಪತಿ ಶಿವಾಜಿ ಮಹಾರಾಜರದ್ದೆಂದು ಭಾವಿಸಲಾಗಿದ್ದ ಅಥವಾ ಚಲಾವಣೆಯಲ್ಲಿದ್ದ ಭಾವಚಿತ್ರವು ಅವರದ್ದಾಗಿರದೇ ಅವರ ಸೈನ್ಯದಲ್ಲಿದ್ದ ಒಬ್ಬ ಮುಸಲ್ಮಾನ ಸರದಾರನದ್ದಾಗಿತ್ತೆಂಬುದು ವಿಚಿತ್ರವಾದರೂ ಸತ್ಯವಾದ ಹಕೀಕತ್ತಾಗಿತ್ತು. ಮಹಾರಾಜರು ಇಷ್ಟು ಬೃಹತ್ತಾದ ಸಾಮ್ರಾಜ್ಯವನ್ನು ಕಟ್ಟಿದ್ದರೂ ಚಿತ್ರ ಕಲಾವಿದರಿಂದ ಒಂದೇ ಒಂದು ಪೇಂಟಿಂಗ್ ಅನ್ನು ಮಾಡಿಸಿಕೊಂಡಿರಲಿಲ್ಲ. ಅವರಿಗಿಂತ ಮೊದಲಿನ ರಾಜರು ಅಥವಾ ಮುಸಲ್ಮಾನ ಬಾದಶಹಾರುಗಳು ಉದಾಹರಣೆಗೆ ರಾಣಾ ಪ್ರತಾಪಸಿಂಹ, ಪೃಥ್ವಿರಾಜ ಚವ್ಹಾಣ, ಅಕಬರ, ಔರಂಗಜೇಬ ಮುಂತಾದವರ ಪೇಂಟಿಂಗ್‌ಗಳು ದಂಡಿಯಾಗಿ ಲಭ್ಯವಿವೆ. ಮಹಾರಾಜರ ಪ್ರತಿದಿನದ ಕಾರ್ಯಚಟುವಟಿಕೆಗಳ ಮತ್ತು ಯುದ್ಧದ ವಿವರಗಳ ಬಗೆಗಿನ ದಾಖಲೆಗಳು ಬಖರಗಳಲ್ಲಿ ವಿಸ್ತೃತವಾಗಿ ದೊರೆತರೂ ಅವರ ಭಾವಚಿತ್ರದ ಬಗೆಗೆ ಯಾವ ಪ್ರಸ್ತಾಪವೂ ಅವುಗಳಲ್ಲಿ ಇಲ್ಲ. ಮಹಾರಾಜರ ಅಸಲಿ ಭಾವಚಿತ್ರವನ್ನು ಹುಡುಕಿ ತೆಗೆದ ಶ್ರೇಯಸ್ಸು ಪ್ರಖ್ಯಾತ ಇತಿಹಾಸ ಸಂಶೋಧಕರಾದ ಡಾ. ವಾ.ಸೀ.ಬೇಂದ್ರೆಯವರಿಗೆ ಸಲ್ಲುತ್ತದೆ. ಈ ವಿವರಗಳನ್ನು ಇಲ್ಲಿ ಒಂದು ಅಧ್ಯಾಯವನ್ನಾಗಿ ರೂಪಿಸಿದ್ದೇನೆ.
ಮಹಾರಾಜರ ಜೀವನಕ್ಕೆ ಸಂಬಂಧಪಟ್ಟ ಇನ್ನೊಂದು ಲೇಖನವೂ ಈ ಕೃತಿಯಲ್ಲಿದೆ. ಅದು ಅವರ ಸಮಾಧಿಯ ಬಗೆಗಿನ ಲೇಖನ. ಮರಾಠಾ ಸಾಮ್ರಾಜ್ಯದ ಪತನದ ನಂತರ ಮಹಾರಾಜರ ಸಮಾಧಿಯು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟು, ಅನಂತರದ ದಿನಗಳಲ್ಲಿ ಅದು ಎಲ್ಲಿದೆ ಎಂಬುದೇ ಜನರಿಗೆ ಗೊತ್ತಿರಲಿಲ್ಲ. ಅದನ್ನು ಹುಡುಕಿದ ಶ್ರೇಯಸ್ಸು ಮಹಾತ್ಮ ಫುಲೆಯವರಿಗೆ ಸಲ್ಲುತ್ತದೆ. ಈ ಪ್ರಕರಣವು ಮಹಾರಾಜರ ಜೀವನಕ್ಕೆ ಸಂಬಂಧಪಟ್ಟಿದ್ದರಿಂದ ಅದನ್ನೂ ಈ ಕೃತಿಯಲ್ಲಿ ಸೇರಿಸಿದ್ದೇನೆ.
ಹಿತೈಷಿಗಳಾದ ನಾಡೋಜ ಡಾ. ಮನು ಬಳಿಗಾರ, ಸತೀಶ ಕುಲಕರ್ಣಿ, ಡಾ. ರಾಮಕೃಷ್ಣ ಮರಾಠೆ, ಡಾ. ಎ.ಬಿ.ಘಾಟಗೆ, ಎಂ.ಕೆ.ಜೈನಾಪುರ, ಚಂದ್ರಕಾಂತ ಪೋಕಳೆ, ರವಿ ಕೋಟಾರಗಸ್ತಿ, ಯ.ರು.ಪಾಟೀಲ, ಕೆ.ಎಚ್.ಚನ್ನೂರ, ಗಣೇಶ ಕದಂ, ಶಿರೀಶ ಜೋಶಿ, ಡಾ. ವಿಠಲರಾವ ಗಾಯಕ್ವಾಡ, ಮಹಾಂತೇಶ ಚಲುವಾದಿ, ನಾಗರಾಜ ಗಣೇಶಗುಡಿ, ಅಜೀತ ಘೋರ್ಪಡೆ ಈ ಎಲ್ಲ ಗೆಳೆಯರ ಪ್ರೀತಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಬೆಳಗಾವಿ ಜಿಲ್ಲೆಯ ನಿಡಸೋಸಿ ಮಠದ ಶ್ರೀ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ತಮ್ಮ ಪೂರ್ವಾಶ್ರಮದಲ್ಲಿ ನನ್ನ ಕಾಲೇಜು ಸ್ನೇಹಿತರಾಗಿದ್ದರು. ನನ್ನ ಬರವಣಿಗೆಗಳ ಬಗೆಗೆ ಅವರಿಗೆ ಅಪಾರವಾದ ಅಭಿಮಾನ. ನಾನು ಬರೆದ ಸಾಹಿತ್ಯದ ಬಗ್ಗೆ ಅವರು ಬಾಗಲಕೋಟೆಯಲ್ಲಿ ಎರಡು ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ನಿಡಸೋಸಿಯ ಜಗದ್ಗುರುಗಳಂತೆಯೇ ಗದಗ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳು ಹಾಗೂ ಅಥಣಿ ಮೋಟಗಿ ಮಠದ ಶ್ರೀ ಚನ್ನಬಸವ ಮಹಾಸ್ವಾಮಿಗಳು ನನ್ನ ಶ್ರದ್ಧಾಕೇಂದ್ರಗಳಾಗಿದ್ದಾರೆ. ಇವರೆಲ್ಲರೂ ನನ್ನ ಬಗ್ಗೆ ಯಾವಾಗಲೂ ಪ್ರೀತಿಯನ್ನು ಇಟ್ಟುಕೊಂಡವರು ಮತ್ತು ಹೆಮ್ಮೆಪಡುವಂತಹವರು. ಇವರೆಲ್ಲರ ನಿಸ್ಪೃಹ ಪ್ರೀತಿಗೆ ನನ್ನ ನಮನಗಳು ಸಲ್ಲುತ್ತವೆ.
ಈ ಕೃತಿಯ ಬರವಣಿಗೆಯ ಬಗ್ಗೆ ಸಾಕಷ್ಟು ಆಸಕ್ತಿಯನ್ನು ತೆಗೆದುಕೊಂಡಿರುವ ಕರ್ನಾಟಕದ ಉನ್ನತ ಪೊಲೀಸ್ ಅಧಿಕಾರಿಯಾಗಿರುವ ಹೇಮಂತ ನಿಂಬಾಳ್ಕರ ಹಾಗೂ ಅವರ ಪತ್ನಿ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರಿಗೂ ನನ್ನ ಕೃತಜ್ಞತೆ ಸಲ್ಲುತ್ತವೆ.
ಕೃತಿಯನ್ನು ತಪ್ಪಿಲ್ಲದಂತೆ ಡಿಟಿಪಿ ಮಾಡಿದ ಶಂಕರ ಭೀ. ಅತ್ತೀಮರದ ಅವರಿಗೆ ಹಾಗೂ ಮುಖಪುಟ ರಚಿಸಿದ ಮೋನಪ್ಪ ಎಚ್.ಎಸ್. ಅವರಿಗೆ ನನ್ನ ನೆನಕೆಗಳು ಸಲ್ಲುತ್ತವೆ.
ಈ ನನ್ನ ಮಹತ್ವಾಕಾಂಕ್ಷಿ ಕೃತಿಯನ್ನು ನನ್ನ ಅಪ್ಪ ದಿ. ಹಣಮಂತರಾವ್ ದೌಲತರಾವ್ ಕಾಟ್ಕರ್ ಹಾಗೂ ಅವ್ವ ದಿ. ಗೌರಾಬಾಯಿ ಹಣಮಂತರಾವ್ ಕಾಟ್ಕರ್ ಅವರಿಗೆ ಅರ್ಪಿಸಿದ್ದೇನೆ. ನನ್ನ ಅಪ್ಪ ಹುಬ್ಬಳ್ಳಿಯ ಮರಾಠಿ ಪ್ರಾಥಮಿಕ ಶಾಲೆ ನಂಬರ್ ೧ರ ಮುಖ್ಯಾಧ್ಯಾಪಕರಾಗಿದ್ದರು. ನಿರಂತರ ೪೫ ವರ್ಷಗಳ ಕಾಲ ಶಿಕ್ಷಕರಾಗಿದ್ದ ಅವರು ಮೂರು ತಲೆಮಾರುಗಳ ಶಿಕ್ಷಕರೆಂದು ಖ್ಯಾತಿ ಪಡೆದಿದ್ದರು. ತಮ್ಮ ಸಂಪರ್ಕಕ್ಕೆ ಬಂದ ಅಸಂಖ್ಯ ವಿದ್ಯಾರ್ಥಿಗಳಿಗೆ ಅವರು ಶಿವಾಜಿ ಮಹಾರಾಜರ ಬಗ್ಗೆ ಕಥೆ, ದಂತ ಕಥೆಗಳನ್ನು ಹೇಳಿ ಅವರಲ್ಲಿ ಶಿವ ಛತ್ರಪತಿಯ ಬಗ್ಗೆ ಭಕ್ತಿ, ಅಭಿಮಾನ, ಗೌರವ ಪ್ರೀತಿಗಳನ್ನು ಉಂಟು ಮಾಡಿದ್ದರು. ನನ್ನ ಅವ್ವ ಅನಕ್ಷರಸ್ಥೆಯಾಗಿದ್ದರೂ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ ಸುಸಂಸ್ಕಾರವಂತರನ್ನಾಗಿಸಿದಳು. ಅವ್ವ ಅಪ್ಪ ಇಂದು ದೈಹಿಕವಾಗಿ ಇರದಿದ್ದರೂ ಅವರ ಆಶೀರ್ವಾದದ ನೆರಳು ನನ್ನ ಕುಟುಂಬದ ಮೇಲಿದೆ. ಈ ದಿವ್ಯ ಚೇತನಗಳಿಗೆ ನನ್ನ ಗೌರವಾದರಗಳನ್ನು ಸಲ್ಲಿಸುತ್ತಿದ್ದೇನೆ.
ಕೃತಿಯ ಪ್ರತಿ ಅಧ್ಯಾಯದ ಮೇಲ್ಭಾಗದಲ್ಲಿ ಉಪಯೋಗಿಸಿದ ಛತ್ರಪತಿ ಶಿವಾಜಿ ಮಹಾರಾಜರ ಅಶ್ವಾರೂಢ ರೇಖಾಚಿತ್ರವನ್ನು ತೆಗೆದವರು ನಾಡಿನ ಪ್ರಖ್ಯಾತ ಕಲಾವಿದರಾದ ನಾಡೋಜ ವಿ.ಟಿ. ಕಾಳೆಯವರು. ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಕೃತಿಯನ್ನು ತುಂಬ ಮುತುವರ್ಜಿಯಿಂದ ಪ್ರಕಟಿಸಿದ ಹೊಸಪೇಟೆಯ ಯಾಜಿ ಪ್ರಕಾಶನದ ಸವಿತಾ ಯಾಜಿ ಮತ್ತು ಗಣೇಶ ಯಾಜಿಯವರಿಗೆ ನಾನು ಕೃತಜ್ಞನಾಗಿದ್ದೇನೆ.
ನನ್ನ ಪತ್ನಿ ಸುಮಾಳ ಸಹಕಾರವಿಲ್ಲದಿದ್ದಿದ್ದರೆ ಈ ಕೃತಿಯನ್ನು ಬರೆಯುವುದು ಅಶಕ್ಯವಾಗಿದ್ದಿತು. ಶಿವಾಜಿ ಮಹಾರಾಜರ ನೈಜ ಇತಿಹಾಸವನ್ನು ಹುಡುಕುತ್ತ ಅನೇಕ ಸಲ ನಾನು ಬೇರೆ ಬೇರೆ ಊರುಗಳಿಗೆ ಹೋಗಿದ್ದುಂಟು. ಈ ಸಂದರ್ಭಗಳಲ್ಲಿ ನನಗೆ ಬೆನ್ನೆಲುಬಾಗಿ ನಿಂತವಳು ಸುಮಾ. ಅವಳಿಗೆ ಹಾಗೂ ಮಕ್ಕಳಾದ ಸಂಸ್ಕೃತಿ, ಅಳಿಯ ರಾಕೇಶ ರಾಮಗಡ, ಶ್ರೇಯಸ್, ಅಳಿಯ ಸಂತೋಷ ಪಾಟೀಲ, ಮೊಮ್ಮಕ್ಕಳಾದ ಪ್ರಿಶಾ ಹಾಗೂ ಸಿರಿ ಅವರುಗಳ ಪ್ರೀತಿಗೆ ಕೃತಜ್ಞನಾಗಿದ್ದೇನೆ.
–ಡಾ. ಸರಜೂ ಕಾಟ್ಕರ್
ಪುಟ ತೆರೆದಂತೆ…
ಸವಿನುಡಿ / ೭
ನನ್ನ ಮಾತು / ೯
ಶಿವಾಜಿ ಉತ್ಸವ / ೧೯
೧. ಶಿವಪೂರ್ವ ಕಾಲದಲ್ಲಿ ಆವರಿಸಿದ ಕತ್ತಲೆ / ೨೩
೨. ಭೋಸಲೆ ಮನೆತನದ ಇತಿಹಾಸ / ೩೪
೩. ಶಹಾಜಿರಾಜೆ ವೃತ್ತಾಂತ / ೪೪
೪. ಯುಗಪುರುಷನ ಜನನ / ೪೮
೫. ಶಿವಾಜಿ ಮಹಾರಾಜರ ಶಿಕ್ಷಣ / ೫೬
೬. ಸ್ವರಾಜ್ಯ ಸ್ಥಾಪನೆಗೆ ಶುಭ ಮುಹೂರ್ತ / ೬೩
೭. ಸ್ವಸತ್ತಾ ವೃದ್ಧಿ / ೬೮
೮. ಶಹಾಜಿಗೆ ಸಂಕಷ್ಟ / ೭೪
೯. ಮೊಗಲರ ಜೊತೆಗಿನ ಸಂಬಂಧ / ೮೧
೧೦. ಆದಿಲಶಹಾನ ಮೇಲೆ ಮತ್ತೊಮ್ಮೆ ದಾಳಿ / ೮೪
೧೧. ಅಫಜಲ್‌ಖಾನ / ೮೮
೧೨. ಆದಿಲಶಹಾನ ಇನ್ನೊಬ್ಬ ಸರದಾರನ ಪರಾಜಯ / ೯೭
೧೩. ಆದಿಲಶಹಾನ ಮುಖಭಂಗ / ೧೦೪
೧೪. ಪಿತೃ ದರ್ಶನ / ೧೦೮
೧೫. ನೌಕಾಪಡೆ ಸ್ಥಾಪನೆ / ೧೧೧
೧೬. ಶಾಹಿಸ್ತೇಖಾನನ ಆಕ್ರಮಣ / ೧೧೪
೧೭. ಸುರತ, ಹುಬ್ಬಳ್ಳಿ, ಕಾರವಾರ ಲೂಟಿ / ೧೨೨
೧೮. ಜಯಪುರದ ಮಿರ್ಜಾರಾಜಾ ಜಯಸಿಂಹ / ೧೨೬
೧೯. ಆಗ್ರಾಕ್ಕೆ ಪ್ರಯಾಣ / ೧೩೪
೨೦. ಕಳೆದುಕೊಂಡಿದ್ದ ಕೋಟೆಗಳ ಪುನರ್‌ವಿಜಯ / ೧೪೫
೨೧. ಕೋಟೆ ಗೆದ್ದೆವು ಆದರೆ ಸಿಂಹವನ್ನು ಕಳೆದುಕೊಂಡೆವು / ೧೪೯
೨೨. ಮೊಗಲರ ಜೊತೆಗೆ ಮತ್ತೆ ಯುದ್ಧ / ೧೫೪
೨೩. ಆದಿಲಶಾಹಿ ಜೊತೆಗೆ ಮತ್ತೆ ಯುದ್ಧ / ೧೬೩
೨೪. ರಾಜ್ಯಾಭಿಷೇಕ / ೧೭೧
೨೫. ರಾಜ್ಯವ್ಯವಸ್ಥೆ / ೧೮೫
೨೬. ರಾಜಮುದ್ರೆ / ೨೦೬
೨೭. ಮೊಗಲ ಮತ್ತು ಆದಿಲಶಾಹಿಗಳ ಜೊತೆ ಮತ್ತೆ ಯುದ್ಧ / ೨೦೯
೨೮. ಮತಾಂತರಗೊಂಡಿದ್ದ ನೇತಾಜಿ ಪಾಲಕರ ಮರಳಿ ಸ್ವಧರ್ಮಕ್ಕೆ / ೨೧೪
೨೯. ಕರ್ನಾಟಕದತ್ತ ಮಹಾರಾಜರ ಚಿತ್ತ / ೨೨೧
೩೦. ಶಿವಾಜಿ ಮಹಾರಾಜರ ಹತ್ಯೆಗೆ ಯತ್ನ / ೨೪೩
೩೧. ಮೊಗಲರ ವಿರುದ್ಧ ಕೊನೆಯ ಯುದ್ಧ / ೨೫೮
೩೨. ಇಂಗ್ಲಿಷರು ಮತ್ತು ಸಿದ್ದಿ / ೨೬೮
೩೩. ಶಿವಾಜಿ ಮಹಾರಾಜರು ಗೆದ್ದ ಕೋಟೆಗಳು / ೨೭೩
೩೪. ಮಹಾರಾಜರ ಖಜಾನೆಯಲ್ಲಿದ್ದ ಸಂಪತ್ತಿನ ವಿವರಗಳು / ೨೭೯
೩೫. ಮಹಾರಾಜರ ಸೈನ್ಯದ ಪ್ರಮುಖ ಸೇನಾನಿಗಳು / ೨೮೧
೩೬. ಸಜ್ಜನ ಸೇವೆ / ೨೮೫
೩೭. ಸಾಧು ಸಂತರ ಬಗ್ಗೆ ಶ್ರದ್ಧೆ / ೩೦೩
೩೮. ಅಂತಕಾಲ / ೩೦೮
೩೯. ಶಿವಾಜಿ ಮಹಾರಾಜರ ಅಸಲಿ ಭಾವಚಿತ್ರ / ೩೧೫
೪೦. ಶಿವಾಜಿ ಮಹಾರಾಜರ ಸಮಾಧಿ / ೩೨೧
ಅನುಬಂಧಗಳು
೧. ಛತ್ರಪತಿ ಶಿವಾಜಿ ಮಹಾರಾಜರ ಕುಲವೃತ್ತಾಂತ / ೩೨೫
೨. ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಪ್ರಮುಖ ಘಟನೆಗಳು / ೩೨೭
೩. ಛತ್ರಪತಿ ಶಿವಾಜಿ ಮಹಾರಾಜರ ವಂಶವೃಕ್ಷ – ೧ / ೩೩೪
೪. ಛತ್ರಪತಿ ಶಿವಾಜಿ ಮಹಾರಾಜರ ವಂಶವೃಕ್ಷ – ೨ / ೩೩೮
೫. ಗ್ರಂಥಋಣ / ೩೩೯
೬. ಡಾ. ಸರಜೂ ಕಾಟ್ಕರ್ ಜೀವನ ವಿವರ / ೩೪೪
Reviews
There are no reviews yet.