ಪ್ರಸ್ತಾವನೆ ಮತ್ತು ಲೇಖಕರ ಮಾತು
ಯುಗಾವತಾರ, ರಾಜ್ಯಾಭಿಷೇಕ ಶಕಕರ್ತ, ಹಿಂದವೀ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರು ಈ ದೇಶಕ್ಕೆ ಪರಮಾತ್ಮನು ಕರುಣಿಸಿದ ವರದಾನ. ಇಸ್ಲಾಮೀಯ ದಾಳಿಯಿಂದ ತತ್ತರಿಸುತ್ತಿದ್ದ ಸನಾತನ ಭಾರತ ದೇಶವನ್ನು ಗುಲಾಮೀ ಸ್ಥಿತಿಯಿಂದ ಮೇಲಕ್ಕೆತ್ತಿ, ಆತ್ಮಸ್ಥೈರ್ಯವನ್ನು ತುಂಬಿ, ಹಿಂದೂ ಧರ್ಮ ರಕ್ಷಣಾರ್ಥ ಅಗ್ರೇಸರರಾಗಿ ಅವರು ನಡೆಸಿದ ನಿರಂತರ ಯುದ್ಧಗಳು ಪ್ರಚಂಡ ಧಾರ್ಮಿಕ ಪ್ರತಿರೋಧವಲ್ಲದೇ ಮತ್ತಿನ್ನೇನು?
ಅವರು ಮೂವತ್ತೈದು ವರ್ಷಗಳ ಕಾಲ ನಿರಂತರವಾಗಿ ಹೋರಾಡಿದ್ದ ಇನ್ನೂರ ಮೂವತ್ತೊಂದು ಯುದ್ಧಗಳು ಕೇವಲ ಒಂದು ರಾಜವಂಶದ ಉನ್ನತಿಗಾಗಲಿ ಅಥವಾ ವೈಯಕ್ತಿಕ ಸಾಮ್ರಾಜ್ಯ ಸ್ಥಾಪಿಸಲಿಕ್ಕಾಗಿಯಲ್ಲ, ಅದು ಹಿಂದವೀ ಸ್ವರಾಜ್ಯ ಸ್ಥಾಪಿಸಲೆಂದಾಗಿತ್ತು. ಅದು ಹಿಂದೂ ಧರ್ಮವನ್ನು ರಕ್ಷಿಸಲಾಗಿತ್ತು. ಅದು ನಮ್ಮ ಜನತೆಯನ್ನು ಗುಲಾಮರನ್ನಾಗಿಸಿ ಮಾರುತ್ತಿದ್ದ ವಿದೇಶಿ ಅಧರ್ಮಿ ಶಕ್ತಿಗಳಿಂದ ಕಾಪಾಡಲೆಂದೇ ಅಸ್ತಿತ್ವಕ್ಕೆ ಬಂದಿತ್ತು. ಅವರ ಪವಾಡಸದೃಶ ಸಾಧನೆಗಳನ್ನು ಕಂಡಾಗ ಸಾಕ್ಷಾತ್ ಶಿವನೇ ಅವತರಿಸಿ ಬಂದನೇನೋ ಎಂದೆನಿಸದೇ ಇರದು.
ಆದರೂ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳು ಶಿವಾಜಿ ಮಹಾರಾಜರನ್ನು ಅವಹೇಳನ, ಅಪಹಾಸ್ಯ, ಆರೋಪಗಳನ್ನು ಹೊರಿಸುವುದು, ತಪ್ಪು ಕಲ್ಪನೆಗಳನ್ನು ಜನರಲ್ಲಿ ಹರಿಬಿಡುವುದು, ಕಟ್ಟುಕತೆಗಳನ್ನು (Imaginary Pseudo Narratives) ಸೃಷ್ಟಿಸುವುದನ್ನೇ ತಮ್ಮ ವೃತ್ತಿ ಮತ್ತು ಪ್ರವೃತ್ತಿಯಾಗಿ ಬೆಳೆಸಿ ಕೊಂಡಿದ್ದಾರೆ. ಇದು ವ್ಯಾಪಕವಾಗಿ ಹರಡುತ್ತಿದ್ದು ಯುವಜನರನ್ನು ತಪ್ಪುದಾರಿಗೆ ಸೆಳೆಯುತ್ತಿದೆ. ಅಂತಹ ಅಸಂಬದ್ಧ ತಕರಾರು, ವಿತಂಡವಾದ, ಆರೋಪಗಳು, ಸುಳ್ಳು ಮಾಹಿತಿಗಳು, ಆಧಾರರಹಿತ ಕಲ್ಪಿತಕತೆಗಳು ಎಲ್ಲವನ್ನು ಸಮರ್ಪಕವಾಗಿ, ಸಾಕ್ಷ್ಯಾಧಾರ ಸಮೇತ ಅಲ್ಲಗಳೆದು ನಮ್ಮ ಸಮಾಜದ ಯುವಜನತೆಯನ್ನು ಸರಿದಾರಿಗೆ ತರುವ ಹೊಣೆಗಾರಿಕೆ ಎಲ್ಲಾ ಶಿವಾಜಿ ಭಕ್ತರ ಮೇಲಿದೆ. ಆದ್ದರಿಂದಲೇ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯುತ್ತಿರುವ ಅನೇಕ ಕಲ್ಪಿತಕತೆಗಳನ್ನು ಹೆಕ್ಕಿ ಕೊಂಡು, ಅವುಗಳನ್ನು ವಾಸ್ತವಿಕ ಐತಿಹಾಸಿಕ ಪುರಾವೆಗಳ ದರ್ಪಣದಿಂದ ಒರೆಗೆ ಹಚ್ಚಿ ಒಂದೊಂದಾಗಿ ಅನಾವರಣಗೊಳಿಸುವ ನಿಟ್ಟಿನಲ್ಲಿ ಹೊರಹೊಮ್ಮಿದ ಅನೇಕ ಬರೆಹಗಳನ್ನು ಕಲೆಹಾಕಿ, ಬರೆದಂತಹ ಗ್ರಂಥವಿದು.
ಜರಿಯದಿರು ದೇಶವನು ಸ್ವಾತಂತ್ರ್ಯ ಇಹುದೆನುತ
ಇರಿಸದಿರು ನಿನ್ನಾವ ದ್ವೇಷವದರಲ್ಲಿ |
ಇರುವ ನಿನ್ನಯ ಮನೆಗೆ ನೀನೆ ಬೆಂಕಿಯನಿಡುವ
ಅರೆಮರುಳನಾಗದಿರು – ನವ್ಯಜೀವಿ ||
-ಶ್ರೀ ಸತ್ಯೇಶ್ ಬೆಳ್ಳೂರ್, ದಿಕ್ಸೂಚಿ, ಚೌಪದಿ ೬೭೧
(ಅರೆಮರುಳ = ವಿವೇಚನೆ ಇಲ್ಲದವ)
ಈ ಅರೆಜ್ಞಾನಿಗಳನ್ನು ದೂಷಿಸಿ ಪ್ರಯೋಜನವಿಲ್ಲ. ಶಿವಾಜಿಯಿಂದ ಪ್ರೇರಿತರಾಗಿ ಕ್ಷಾತ್ರ ತೇಜವನ್ನು ಉದ್ದೀಪನಗೊಳಿಸುವ ಸ್ಫೂರ್ತಿ ನೀಡಬಲ್ಲ ಇತಿಹಾಸದಿಂದ ಭಾರತ ದೇಶದ ಜನತೆಯು ಬ್ರಿಟಿಷರ ಕಾಲದಿಂದಲೂ ವಂಚಿತರಾಗಿದ್ದಾರೆ. ಅವರು ಅವರಿಗೆ ಕಲಿಸಿದ್ದೇ ಕೆಲವು ಇತಿಹಾಸಕಾರರು ಬರೆದ ಪುಸ್ತಕಗಳು. ಅದರಿಂದ ಹೊಮ್ಮುವ ಅರೆಬೆಂದ ಲೇಖನಗಳು ಜನರನ್ನು ವಿಸ್ಮೃತಿಯೆಡೆಗೆ ಪುನಃ ಕೊಂಡೊಯ್ಯುತ್ತಿದೆ. ಅದನ್ನು ಜಾಗೃತಗೊಳಿಸಬೇಕಾದ ಅವಶ್ಯಕತೆ ಇಂದು ಎಂದಿಗಿಂತಲೂ ಹೆಚ್ಚಾಗಿದೆ. ನಮ್ಮ ದೇಶಕ್ಕೆ ನಾವೇ ಬೆಂಕಿಯನಿಡುವ ಮೂರ್ಖತನ ನಾವು ಮಾಡದೇ ಇರೋಣ.
೧೭೭೬ರವರೆಗೂ ’ಹಿಂದವೀ ಸ್ವರಾಜ್ಯ’ವೆಂದೇ ಕರೆಯುತ್ತಿದ್ದ ಬ್ರಿಟಿಷರು, ಅನಂತರದ ಕಾಲದಲ್ಲಿ ಅಚಾನಕ್ಕಾಗಿ ’ಮರಾಠ ಸಾಮ್ರಾಜ್ಯ’ವೆಂಬ ಶಬ್ದವನ್ನು ಆಗಿನ ಪೇಶ್ವೆಯೊಡನೆ ಮಾಡಿಕೊಂಡ ಒಡಂಬಡಿಕೆಯಲ್ಲಿ ಮತ್ತು ದಾಖಲೆಗಳಲ್ಲಿ ಉಪಯೋಗಿಸಲು ಪ್ರಾರಂಭಿಸಿದರು. ಅದರ ಹಿಂದಿನ ಕುತಂತ್ರವೇನೆಂದು ನಾವೂ ಊಹಿಸಬಹುದು.
ಹಿಂದವೀ ಸ್ವರಾಜ್ಯದ ಸಂಪೂರ್ಣ ಅಧಿಕಾರವನ್ನು ಹೊಂದಿದ್ದ ಪೇಶ್ವೆಯವರು ಅದೇಕೆ ಆಕ್ಷೇಪಿಸಲಿಲ್ಲ ಎಂಬ ವಿಚಾರವು ಇತಿಹಾಸದಲ್ಲಿ ಕಾಣಬರುವುದಿಲ್ಲ. ದೇಶಭಕ್ತರನ್ನು ಒಂದು ಗೂಡಿಸಬಲ್ಲ, ’ಸ್ವರಾಜ್ಯ’ ಎಂಬ ವಿಶಾಲ ಅರ್ಥದ ಸ್ಫೂರ್ತಿಯನ್ನು ಮೊಟಕುಗೊಳಿಸಲು, ಅಥವಾ ಅದರ ಭಾವನಾತ್ಮಕ ಸಂವೇದನೆಯನ್ನು ಒಂದು ಭಾಷೆ ಮತ್ತು ಒಂದು ರಾಜ್ಯಕ್ಕೆ ಸೀಮಿತಗೊಳಿಸಿ ದೇಶಭಕ್ತರ ಚಿಂತನೆಯನ್ನು ಸಂಕುಚಿತಗೊಳಿಸಲು ’ಮರಾಠ ಸಾಮ್ರಾಜ್ಯ’ವೆಂಬ ಪದವನ್ನು ಹುಟ್ಟುಹಾಕಿರಬೇಕು. ಭೇದೋಪಾಯದಲ್ಲಿ (Divide and Rule) ನಿಷ್ಣಾತ ಬ್ರಿಟಿಷರ ಹುನ್ನಾರವಿರಬೇಕು.
ಮರಾಠಿ ಭಾಷಿಗರು ತಮ್ಮ ಭಾಷಾಭಿಮಾನದಿಂದ ’ಮರಾಠ ಸಾಮ್ರಾಜ್ಯ’ವೆಂಬ ಪದವನ್ನು ಸ್ವಾಭಾವಿಕವಾಗಿ ಸ್ವಾಗತಿಸಿರಬಹುದು. (ಒಂದು ವೇಳೆ ಬ್ರಿಟಿಷರು ಹೊಯ್ಸಳ ಅಥವಾ ವಿಜಯನಗರ ಸಾಮ್ರಾಜ್ಯಗಳನ್ನು ’ಕನ್ನಡ ಸಾಮ್ರಾಜ್ಯ’ವೆಂದು ಹೆಸರಿಸಿದ್ದರೆ, ನಾವು ಕನ್ನಡಿಗರೂ ಅಷ್ಟೇ ಸಂತಸಪಡುತ್ತಿದ್ದೆವೋ ಏನೋ.) ಆದರೆ ಶಿವಾಜಿ ಮಹಾರಾಜರು ಸ್ಥಾಪಿಸಿದ್ದ ’ಹಿಂದವೀ ಸ್ವರಾಜ್ಯ’ದ ಕಾರ್ಯಸ್ಥಾನ ದೇಶದಾದ್ಯಂತ, ಅಂದರೆ ಪಶ್ಚಿಮದಲ್ಲಿ ಗಾಂಧಾರ ಪ್ರಾಂತದ ’ಅಟಕ್’ನಿಂದ ಹಿಡಿದು ಪೂರ್ವದಲ್ಲಿ ಒಡಿಶಾ ಪ್ರಾಂತದ ’ಕಟಕ್’ವರೆಗೂ ವಿಸ್ತರಿಸಿತ್ತು. ಅಖಂಡ ಭಾರತದಲ್ಲೆಲ್ಲ ಹರಡಿದ್ದ ’ಹಿಂದವೀ ಸ್ವರಾಜ್ಯ’ದ ಹೆಸರನ್ನು ಮರೆಮಾಚಿ, ಅದಕ್ಕೆ ಸಂಕುಚಿತ ಭಾವದ ’ಮರಾಠ ಸಾಮ್ರಾಜ್ಯ’ವೆಂದು ಹೆಸರಿಸಿ, ಶಿವಾಜಿಯಂತಹ ಪ್ರಖರ ದೇಶಭಕ್ತರನ್ನು ಕೇವಲ ಮರಾಠ ಕುಲಕ್ಕೆ ಮತ್ತು ಮರಾಠಿ ಭಾಷೆಗೆ ಸೀಮಿತಗೊಳಿಸಿದರು! ಛತ್ರಪತಿ ಶಿವಾಜಿ ಮಹಾರಾಜರು, ರಾಜಮಾತೆ ಜೀಜಾಬಾಯಿ, ಸ್ವಾಮಿ ಶ್ರೀ ಸಮರ್ಥ ರಾಮದಾಸರು ಮತ್ತು ಶಹಾಜಿ ಮಹಾರಾಜರು ಇತ್ಯಾದಿ ಎಲ್ಲರೂ ಬಹು ಆಪ್ತತೆಯಿಂದ ಹೆಸರಿಸಿದ್ದ ’ಹಿಂದವೀ ಸ್ವರಾಜ್ಯ’ವೆಂಬ ಮೂಲ ಹೆಸರಿನಿಂದಲೇ ನಾವು ಕರೆಯಬೇಕು ಎಂದು ಆಶಿಸುತ್ತೇನೆ. ’ಸ್ವರಾಜ್ಯ’ ಪದದಲ್ಲಿ ಜನರನ್ನು ಒಗ್ಗೂಡಿಸುವ, ಜನಸಾಮಾನ್ಯರನ್ನು ಜೋಡಿಸುವ ಶಕ್ತಿಯಿದೆ. ಅದರಲ್ಲಿ ಪೂಜ್ಯತೆ, ಪಾವಿತ್ರ್ಯತೆ, ತ್ಯಾಗ ಮತ್ತು ಸಮರ್ಪಣೆಯ ಭಾವವನ್ನು ಬಿಂಬಿಸುವ ಸಾರ್ಥಕತೆ ಇದೆ. ಅದನ್ನು ಕೈಬಿಡಬಾರದು. ಆದಷ್ಟು ಬಳಸಬೇಕು.
೧೮೧೯ರ ಬ್ರಿಟಿಷ್ ಮತ್ತು ಮರಾಠರ ನಡುವಿನ ಶರಣಾಗತಿಯ ಒಪ್ಪಂದದ ಕರಾರಿನಂತೆ ಪೇಶ್ವೆ ಬಾಜೀರಾವ್‌ನು (ದ್ವಿತೀಯ) ದೇಶಭ್ರಷ್ಟನಾಗಿ, ದೂರದ ಕಾನ್ಪುರದ ಬಳಿ ಇರುವ ಬಿತೂರ್ ಎಂಬ ಊರಿನಲ್ಲಿರುವ ಒಂದು ಚಿಕ್ಕ ಅರಮನೆಯಲ್ಲಿ ಗೃಹಬಂಧನಕ್ಕೊಳಪಟ್ಟನು. ಪೇಶ್ವೆಯನ್ನು ರಾಜಕೀಯ ಪದವಿಯಿಂದ ಮತ್ತು ಆಡಳಿತ ಹೊಣೆಯಿಂದ ಶಾಶ್ವತವಾಗಿ ನಿವೃತ್ತಿಗೊಳಿಸಿದರು. ಒಂದು ಕಾಲದಲ್ಲಿ ಮುಘಲರು ಮತ್ತು ದೇಶದ ವೈರಿಗಳೆಲ್ಲರೂ ಹೆಸರು ಕೇಳಿಯೇ ಗಡಗಡ ನಡುಗುತ್ತಿದ್ದ ಪ್ರಭಾವಿ ಮರಾಠ ಸಾಮ್ರಾಜ್ಯದ ಪೇಶ್ವೆಯ ಕಾಲವು ಕೊನೆಯಾಗಿತ್ತು. ೧೭೭೨ರಿಂದ ೧೮೪೮ ನಡುವಿನ ಈ ಕಾಲಘಟ್ಟದ ಇತಿಹಾಸವನ್ನು ಪ್ರಖ್ಯಾತ ಇತಿಹಾಸಕಾರ ಶ್ರೀ ಗೋವಿಂದ ಸಖಾರಾಮ್ ಸರ್ದೇಸಾಯಿಯವರು ‘The History of The Marathas’ ಎಂಬ ಗ್ರಂಥದ ಮೂರನೇ ಸಂಪುಟಕ್ಕೆ ‘Sunset over Maharashtra’ ಅಂದರೆ, ’ಮರಾಠ ಸಾಮ್ರಾಜ್ಯದ ಸೂರ್ಯಾಸ್ತ ಅಥವಾ ಅಸ್ತಂಗತ’ ಎಂಬರ್ಥದ ಶೀರ್ಷಿಕೆಯನ್ನು ನೀಡಿ ತಮ್ಮ ತೀವ್ರ ವ್ಯಥೆಯನ್ನು ವ್ಯಕ್ತಪಡಿಸಿದ್ದರು. ಆದರೆ ಸರ್ ಜಾದುನಾಥ ಸರ್ಕಾರರು ಅವರನ್ನು ಪತ್ರಮುಖೇನ ಸಂಪರ್ಕಿಸಿ, ಅದನ್ನು ‘Advent of New Sunrise’ ಅಂದರೆ ’ನವೀನ ಸೂರ್ಯೋದಯದ ಆಗಮನ’ (ಬ್ರಿಟಿಷ್ ಸಾಮ್ರಾಜ್ಯದ ಸೂರ್ಯೋದಯ) ಎಂಬ ಶೀರ್ಷಿಕೆಯನ್ನೇ ಕೊಡಬೇಕೆಂದು ವಯಸ್ಸಿನಲ್ಲಿ ತಮಗಿಂತಲೂ ಐದು ವರ್ಷ ಹಿರಿಯರಾದ ಶ್ರೀ ಸರ್ದೇಸಾಯಿ ಅವರಿಗೆ ಬಹಳಷ್ಟು ಒತ್ತಾಯಿಸಿದ್ದರಂತೆ!
’ನೀವು ’ಮರಾಠ ಸಾಮ್ರಾಜ್ಯದ ಸೂರ್ಯಾಸ್ತ’ವೆಂದು ಕರೆಯುವ ರಾಜ್ಯದ ತಿರುಳು ಮತ್ತು ಸಂಸ್ಕೃತಿ ಎರಡೂ ಕೊಳೆತು ನಾರುತ್ತಿತ್ತು. ಆದ್ದರಿಂದ, ಆ ಕುಸಂಸ್ಕೃತಿಯು ಕೊನೆಯಾಗಿದ್ದು ’ನವೀನ ಸೂರ್ಯೋದಯದ ಆಗಮನ’ವಾಗಿದೆ. ಬ್ರಿಟಿಷರು ಡಿಸೆಂಬರ್ ೧೮೦೨ರಂದು ಹಸ್ತಕ್ಷೇಪ ಮಾಡದಿದ್ದಲ್ಲಿ ಬಹುಶಃ ಪ್ರಕೃತಿಯೇ ಕೊಳೆತ ನಾರುವ ಸಂಸ್ಕೃತಿಯನ್ನು ಮುಂದುವರೆಯಲು ಬಿಡದೇ ನಾಶಮಾಡುತ್ತಿತ್ತು. ಗತಕಾಲವನ್ನು, ಸತ್ತವರನ್ನು ಮತ್ತು ಮುಂದೆಂದಿಗೂ ಮರುಕಳಿಸಲಾಗದ ಸಂಗತಿಗಳನ್ನು ನೆನೆದು ಮರುಗಬಾರದು. ನವಯುಗವು ಪ್ರಾರಂಭವಾಗಿದೆ, ಆಧುನಿಕ ಜಗತ್ತು ಪ್ರಸ್ತಾಪಿಸುವ ಸದವಕಾಶವನ್ನು ಬಳಸಿಕೊಂಡು, ಹೊಸವಿಚಾರದ ಪ್ರಗತಿ ಪ್ರವಾಹದಲ್ಲಿ ಸುಲಭವಾಗಿ ಈಜಿ ಮುಂದೆ ಸಾಗಬೇಕು. ಭಾವೋದ್ರೇಕ ಸೆಳೆತಕ್ಕೆ ಒಳಗಾಗದೆ ನಾವು ಗತಿಸಿದ ಮರಾಠ ಇತಿಹಾಸದಿಂದ ಪಾಠವನ್ನು ಕಲಿತು, ದೂರದೃಷ್ಟಿಯಿಂದ ಆಧುನಿಕ ಬ್ರಿಟಿಷ್ ಸಂಸ್ಕೃತಿಯ ಆಗಮನವನ್ನು ಸ್ವಾಗತಿಸಬೇಕು.’ ಎಂಬೆಲ್ಲ ತರ್ಕಗಳನ್ನು ಮುಂದಿಟ್ಟು ಶ್ರೀ ಸರ್ದೇಸಾಯಿ ಅವರನ್ನು ಮನಗಾಣಿಸಲು, ಶೀರ್ಷಿಕೆಯ ಬದಲಾವಣೆಗಾಗಿ ಓಲೈಸಲು ಸರ್ ಜಾದುನಾಥ ಸರ್ಕಾರರು ಪ್ರಯತ್ನಿಸಿದ್ದರು.
ಆದರೆ ದೇಶಪ್ರೇಮಿ ಶ್ರೀ ಸರ್ದೇಸಾಯಿಯವರು ಸರ್ ಜಾದುನಾಥ ಸರ್ಕಾರರ ನಿವೇದನೆಯನ್ನು ತಿರಸ್ಕರಿಸಿದರು ಮತ್ತು ದಿಟ್ಟತನದಿಂದ ತಮ್ಮ ಗ್ರಂಥದ ಶೀರ್ಷಿಕೆಯನ್ನು ಬದಲಿಸಲಿಲ್ಲ. ಕಾಲವು ಬದಲಾಗಿತ್ತು, ಏಕೆಂದರೆ ಈ ಗ್ರಂಥವು ಪ್ರಕಟಣೆಗೊಂಡಿದ್ದು ೧೯೪೮ರಲ್ಲಿ, ಅಂದರೆ ಭಾರತದೇಶವು ಸ್ವಾತಂತ್ರ್ಯ ಪಡೆದ ಅನಂತರ! ಶ್ರೀ ಸರ್ದೇಸಾಯಿಯವರು ತಮ್ಮ ಗ್ರಂಥದ ಅಡಿ-ಟಿಪ್ಪಣಿಯಲ್ಲಿ (Footnote) ಖೇದದಿಂದ ಈ ಸಂಗತಿಯನ್ನು ನಮೂದಿಸಿದ್ದಾರೆ. ನಮ್ಮ ದೇಶದ ಇತಿಹಾಸವನ್ನು ಸೋಲಿನ ಇತಿಹಾಸವೆಂದೇ ಬಿಂಬಿಸುವ ಅಷ್ಟೊಂದು ತುಡಿತವಾದರೂ ಏಕೆ?
ಮರಾಠ ಸಾಮ್ರಾಜ್ಯದ ಮೇಲಿನ ಸರ್ ಜಾದುನಾಥ ಸರ್ಕಾರರಿಗಿದ್ದ ತಾತ್ಸಾರ ಎಷ್ಟಿತ್ತೆಂದರೆ ‘The Fall of Mughal Empire’ ಎಂಬ ಐತಿಹಾಸಿಕ ಗ್ರಂಥವನ್ನು ರಚಿಸುವಾಗ ಅವರು ಯಾವುದೇ ಮರಾಠ ಮೂಲ ದಾಖಲೆಗಳನ್ನು ಪರಾಮರ್ಶಿಸದೆ, ಕೇವಲ ಮುಘಲ, ಫ್ರೆಂಚ್ ಮತ್ತು ಬ್ರಿಟಿಷ್ ಪ್ರಶಂಸಕರ (ಮರಾಠ ಸಾಮ್ರಾಜ್ಯದ ವೈರಿಗಳ) ಏಕಪಕ್ಷೀಯ ಹೇಳಿಕೆಗಳನ್ನೇ, ಮರಾಠರನ್ನು ಉಪೇಕ್ಷಿಸಿ ಬರೆದಿದ್ದನ್ನೇ ಸತ್ಯವೆಂದು ಪರಿಗಣಿಸಿ ಬರೆದ ಇತಿಹಾಸವನ್ನು ’ಕಲ್ಪಿತಕತೆ’ ಎನ್ನಬಹುದೇ ವಿನಾ ಸತ್ಯಾಧಾರಿತ ಪ್ರಾಮಾಣಿಕ ಇತಿಹಾಸವೆನ್ನಲಾಗದು. ತಾನು ಕೇವಲ ಸಿಯಾರ್, ಕಾಫೀ ಖಾನ್, ಸಲೀಮುಲ್ಲಾನ ಬರೆಹಗಳನ್ನು ಇಂಗ್ಲಿಷಿಗೆ ತರ್ಜುಮೆಗೊಳಿಸಿದ ಎಫ್. ಗ್ಲ್ಯಾಡ್‌ವಿನ್‌ನ (F. Gladwin) ಬರೆಹಗಳನ್ನೇ ಆಧಾರವಾಗಿಟ್ಟುಕೊಂಡು ಬರೆದೆನೆಂದು (ಸಂಪುಟ-೧, ಪುಟ ೪೭, ಅಡಿಟಿಪ್ಪಣಿ) ತಪ್ಪೊಪ್ಪಿಕೊಂಡಿದ್ದಾರೆ! ಅದರಲ್ಲಿ ಅನೇಕ ತಪ್ಪುಗಳಿದ್ದವು ಎಂದು ಅವರೇ ಒಪ್ಪಿಕೊಂಡಿದ್ದಾರೆ. ಸಾಮಾನ್ಯವಾಗಿ ಯಾವುದೇ ಸತ್ಯಶೋಧಕ ಇತಿಹಾಸಕಾರನು ಮರಾಠ ರಾಜರು, ಪೇಶ್ವೆಗಳು ಅಥವಾ ಅವರ ಸರದಾರರು ಶುದ್ಧ ಸಂಸ್ಕೃತದಲ್ಲಿ ಬರೆದ ಪತ್ರಗಳನ್ನು ಮತ್ತು ಮೂಲ ದಾಖಲೆಗಳನ್ನು ಉಲ್ಲೇಖಿಸುವುದನ್ನು ಮರೆಯಲಾರನು. ಮರಾಠೇತರ ಸಾಕ್ಷ್ಯಾಧಾರವೆಂದರೆ ’ಮರಾಠ-ದ್ವೇಷಿ’ (ಸ್ವರಾಜ್ಯ-ದ್ವೇಷಿ) ಇತಿಹಾಸವೆಂದೇ ಪರಿಗಣಿಸಬೇಕಾಗುತ್ತದೆ. ಅವುಗಳು ಭಾರತೀಯರನ್ನು ದಾರಿತಪ್ಪಿಸುತ್ತಿವೆ.
ಇತಿಹಾಸವನ್ನು ವಸ್ತುನಿಷ್ಠೆಯಿಂದ (Objective) ಮನನ-ಚಿಂತನ-ತಪಸ್ಯಾಪೂರ್ವಕ ಅಧ್ಯಯನ ಮಾಡಿದಾಗ ಅದು ಪರಾವಿದ್ಯೆಯಂತೆ ನಿತ್ಯ-ಸತ್ಯ, ನಿತ್ಯ-ಶುದ್ಧ ಇತಿಹಾಸವಾಗುತ್ತದೆ. ಶ್ರೀ ಜಿ.ಎಸ್.ಸರ್ದೇಸಾಯಿ ಅವರಂತಹ ಇತಿಹಾಸಕಾರರು ಈ ಎರಡನೆಯ ವರ್ಗಕ್ಕೆ ಸೇರಿದವರು.
ಎಂಟುನೂರು ವರ್ಷಗಳ ದೀರ್ಘಕಾಲ ವಿದೇಶಿ ಆಕ್ರಮಣಕಾರರನ್ನು ಮೆಟ್ಟಿ, ಸದೆಬಡಿದು ಮತ್ತೆ ತಲೆಯೆತ್ತಿ ನಿಂತ ಭಾರತ ದೇಶದ್ದು ಗೆಲುವಿನ ಇತಿಹಾಸ. ಅದು ಸೋಲಿನ ಇತಿಹಾಸವಾಗಲು ಸಾಧ್ಯವಿಲ್ಲ! ಅದನ್ನು ನಾವು ಮರೆಯಬಾರದು.
’ಇತಿಹಾಸದಿಂದ ಪಾಠ ಕಲಿಯದವರು ದುರಂತವನ್ನು ಪುನಃ ಮರುಕಳಿಸಲು ಆಸ್ಪದ ನೀಡುತ್ತಾರೆ’ ಎನ್ನುವುದು ಸರ್ವಕಾಲಿಕ ಸತ್ಯ. ಈ ದಿಟ್ಟಿನಲ್ಲಿ ಮಿತ್ರ ಶ್ರೀ ಸತ್ಯೇಶ್ ಬೆಳ್ಳೂರ್ ಅವರ ’ನವ್ಯಜೀವಿ’ಯ ಒಂದು ಮುಕ್ತಕ ನೆನಪಿಗೆ ಬರುತ್ತದೆ:
ಮರೆತುಬಿಟ್ಟರೆ ಹೇಗೆ ಕ್ರಾಂತಿಮಂತ್ರಗಳನ್ನು
ತೊರೆದುಬಿಟ್ಟರೆ ಹೇಗೆ ವೀರಗಾಥೆಗಳ |
ಮರಳಲೀ ನೆನಪುಗಳು ಮನ ಹಾದಿ ತಪ್ಪಿರಲು
ಹುರಿಯೇರಲೆನ್ನಾತ್ಮ -ನವ್ಯಜೀವಿ ||
-ಶ್ರೀ ಸತ್ಯೇಶ್ ಬೆಳ್ಳೂರ್
(’ದಿಕ್ಸೂಚಿ’, ಪುಟ ೧೬೮, ಚೌಪದಿ ಸಂಖ್ಯೆ ೬೭೪)
(ಹುರಿಯೇರು = ಬಲವಾಗು, ದೃಢವಾಗು)
ಅಂದರೆ ಕ್ಷಾತ್ರತೇಜವನ್ನು, ಇತಿಹಾಸವನ್ನು, ನಮ್ಮ ವೀರರನ್ನು ಮತ್ತು ಅವರ ವೀರಗಾಥೆಗಳನ್ನು ಮರೆತುಬಿಟ್ಟರೆ ದೇಶವು ಹಾದಿ ತಪ್ಪುತ್ತದೆ. ಕ್ಷಾತ್ರದಿಂದಲೇ ಸಂಸ್ಕೃತಿ ಮತ್ತು ಮಣ್ಣಿನ ಧರ್ಮಗಳ ಉಳಿವು. ವಿಸ್ಮೃತಿಯಿಂದ ಅಳಿವು.
ಆದ್ದರಿಂದ, ನಮ್ಮ ಕ್ಷಾತ್ರತೇಜವು ದೃಢವಾಗಿರಲು ನಮ್ಮ ಪೂರ್ವಜರ ವೀರಗಾಥೆಗಳನ್ನು ಸ್ಮರಿಸುತ್ತಿರು, ಎಂಬುದಾಗಿ ಕವಿ, ಚಿಂತಕರು ಮತ್ತು ಮ್ಯಾನೇಜ್ಮೆಂಟ್ ಗುರು ಶ್ರೀ ಸತ್ಯೇಶ್ ಬೆಳ್ಳೂರ್ ಅವರು ತಮ್ಮ ’ನವ್ಯಜೀವಿ’ ಎಂಬ ಪುಟ್ಟಪುಟ್ಟ ಚೌಪದಿಗಳಲ್ಲಿ ವಿಷಯದ ಅಗಾಧತೆಯನ್ನು ಸುಲಭವಾಗಿ ಅರ್ಥವಾಗುವಂತೆ ಹಂಚಿಕೊಂಡಿದ್ದಾರೆ. ಆದ್ದರಿಂದ, ನಮ್ಮ ದೇಶದ ಸಂಸ್ಕೃತಿ ಮತ್ತು ಧರ್ಮದ ರಕ್ಷಣೆಗಾಗಿ ತಮ್ಮ ಆತ್ಮವನ್ನೇ ಬಲಿದಾನಗೈಯಲು ಹಿಂಜರಿಯದ ಅಸಂಖ್ಯ ವೀರರ ಮತ್ತು ವೀರಾಂಗನೆಯರ ಚರಿತ್ರೆ, ಅವರ ಸಾಹಸಗಾಥೆಗಳು, ಅವರ ಯಶೋಗಾಥೆಗಳು ಭಾರತೀಯರೆಲ್ಲರಿಗೂ ತಿಳಿದಿರಬೇಕು. ಅದರಿಂದಲೇ ಎಲ್ಲರಿಗೂ ದೇಶಕ್ಕಾಗಿ ಮತ್ತು ನಮ್ಮವರಿಗಾಗಿ ಬದುಕಬೇಕೆನ್ನುವ ಸ್ಫೂರ್ತಿ ನಿಸ್ಸಂದೇಹವಾಗಿ ಚಿಮ್ಮುವುದು. ದೇಶಕ್ಕೆ ನೂರ್ಕಾಲ ಒಳಿತಾಗುವುದು.
ನಾವು ಭಾರತೀಯರು ನಿರಾಶವಾದವನ್ನೇಕೆ ಜ್ಞಾನದ ದ್ಯೋತಕವೆಂದು ಪರಿಗಣಿಸುತ್ತೇವೆ? ನಿರಾಶಾವಾದವನ್ನು ಅನೇಕರು ಜ್ಞಾನ ಮತ್ತು ಬುದ್ಧಿವಂತಿಕೆಯ ಸಂಕೇತವೆಂದು ತಪ್ಪಾಗಿ ಪರಿಗಣಿಸಿ ಮೈಮರೆಯುತ್ತಾರೆ. ರಾಷ್ಟ್ರೀಯತೆ ಮತ್ತು ದೇಶಾಭಿಮಾನದ ಮೇಲೆ ನಿರಂತರ ಪ್ರಹಾರ ಮಾಡುತ್ತಿರುವ ಕೆಲವರು ಒಂದು ವ್ಯವಸ್ಥಿತ ರೀತಿಯಲ್ಲಿ ನಮ್ಮನ್ನು, ನಮ್ಮ ಜನರನ್ನು, ನಮ್ಮ ಸಂಪ್ರದಾಯ, ಆಚಾರ, ವಿಚಾರಗಳನ್ನು, ನಮ್ಮ ಧರ್ಮ ಮತ್ತು ಮಹಾಪುರುಷರನ್ನು ಹೀಯಾಳಿಸುತ್ತ, ನಮ್ಮ ಮನೋಧೈರ್ಯವನ್ನು ಕುಗ್ಗಿಸಲು ನಿರತರಾಗಿದ್ದಾರೆ. ಐತಿಹಾಸಿಕ ಪುರಾವೆ ಮತ್ತು ಮಾಹಿತಿಯಾಧಾರದ ಮೇಲೆ ಅವರ ಕಲ್ಪಿತಕತೆಗಳನ್ನು ಅನಾವರಣಗೊಳಿಸಬೇಕು. ಅವಿವೇಕತನದ ಮಹಾಪೂರಕ್ಕೊಂದು ಅಣೆಕಟ್ಟು ಹಾಕಬೇಕು.
ಇನ್ನೊಂದು ಮಾತು. ಯಾವ ದೃಷ್ಟಿಯಿಂದಲೂ ನಾನು ಇತಿಹಾಸಕಾರನಲ್ಲ. ಶಿಕ್ಷಣದಿಂದ ನಾನೊಬ್ಬ ಸಂವಹನ ಅಭಿಯಂತರ (ಟೆಲಿಕಾಂ ಇಂಜಿನಿಯರ್), ವೃತ್ತಿ ತರಬೇತಿಯಿಂದ ವಿಕ್ರಯಾರ್ಜುನನಾಗಿದ್ದೆ (Sales Professional) ಮತ್ತು ಪ್ರವೃತ್ತಿಯಿಂದ ದೇಶಭಕ್ತರ ಒಡನಾಟದಲ್ಲಿ ಸಂತುಷ್ಟನಾಗುತ್ತೇನೆ. ಎಲ್ಲಕ್ಕಿಂತ ಮಿಗಿಲಾಗಿ ನಾನೊಬ್ಬ ಶಿವಾಜಿ ಭಕ್ತನೆನ್ನಲು ಹೆಮ್ಮೆಯೆನಿಸುತ್ತದೆ. ದೇಶಕ್ಕಾಗಿ ಮಡಿದವರ ಚರಿತ್ರೆಯನ್ನು ಓದುವಾಗ ಅವರು ಪಟ್ಟ ಪರಿಶ್ರಮಕ್ಕೆ ಮನಮಿಡಿಯುತ್ತದೆ. ಶಿವಾಜಿ ಮಹಾರಾಜರ ಕುರಿತಾಗಿ ನೂರಾರು ಲೇಖಕರು ಬರೆದಂತಹ ಹಲವಾರು ಗ್ರಂಥಗಳನ್ನು ಓದಲು ಉತ್ಸುಕನಾಗಿರುತ್ತೇನೆ. ಅಷ್ಟಕ್ಕೇ ಸೀಮಿತ ನನ್ನ ಪರಿಮಿತಿ. ಓದುವಾಗ ನನ್ನ ಮನ-ಹೃದಯವನ್ನು ತಟ್ಟಿದ ವಸ್ತುಕತೆಗಳನ್ನು ಇಷ್ಟಪಟ್ಟು, ಅವುಗಳ ಚಿಂತನೆಯಲ್ಲೇ ವಿಷಯನಿಷ್ಠೆಯಿಂದ ಬರೆಯಲು ಪ್ರಯತ್ನಿಸುತ್ತೇನೆ.
ಇದು ನನ್ನ ಮೂರನೇ ಕೃತಿ. ಲೇಖಕನಾಗಿ ನನ್ನನ್ನು ಸದಾ ಕಾಲ ಪ್ರೋತ್ಸಾಹಿಸಿ, ಪೋಷಿಸಿ, ಬೆಳೆಸಿದ ಮಿತ್ರ ಶ್ರೀ ಸತ್ಯೇಶ್ ಬೆಳ್ಳೂರ್ ಅವರಿಗೆ ಎಷ್ಟು ಕೃತಜ್ಞತೆಯನ್ನು ಸಲ್ಲಿಸಿದರೂ ಅದು ಕಡಿಮೆಯೇ. ನನ್ನ ಮೊದಲೆರಡು ಗ್ರಂಥಗಳಿಗೂ ಅಪಾರ ಅಕ್ಕರೆಯಿಂದ ಮುತುವರ್ಜಿ ವಹಿಸಿ ಅವುಗಳೆಲ್ಲವೂ ಯಶಸ್ವಿಯಾಗಿ ಲೋಕಾರ್ಪಣೆಯಾಗುವ ತನಕ ಹಿತೈಷಿಯಂತೆ ಬೆಂಬಲಿಸಿದ್ದನ್ನು ಯಾವತ್ತಿಗೂ ಸ್ಮರಿಸುತ್ತೇನೆ. ಏನಾದರೋದು ಕ್ಲಿಷ್ಟಕರ ಸವಾಲೊಡ್ಡಿ ಈ ವಿಚಾರ ದೃಷ್ಟಿಯಿಂದ ನೀನು ಬರೆಯಬೇಕು ಎಂದು ಸೂಚಿಸಿ, ಅದಕ್ಕೆ ಪೂರಕವಾದ ಸಲಹೆಗಳನ್ನು ನೀಡುವವರು ಎಷ್ಟು ಜನರಿದ್ದಾರೆ? ಸತ್ಯೇಶ್ ಅಂತಹ ಸರಳ, ವಿರಳ ವ್ಯಕ್ತಿ.
ನನ್ನ ಎರಡನೆಯ ಕೃತಿ ’ರಣಧುರಂಧರ ಛತ್ರಪತಿ ಶಿವಾಜಿ ಮಹಾರಾಜರ ಹತ್ತು ನಿರ್ಣಾಯಕ ಯುದ್ಧಗಳು ಮತ್ತು ಅವರ ಕಟ್ಟಕಡೆಯ ಯುದ್ಧ- ಒಂದು ವಿಶ್ಲೇಷಣೆ’ ಎಂಬ ಗ್ರಂಥವನ್ನು ಯಶಸ್ವಿಯಾಗಿ ಪ್ರಕಟಿಸಿ, ಮುದ್ರಿಸಿದ ಎಲ್ಲಾ ಪ್ರತಿಗಳು ಒಂದೇ ವಾರದೊಳಗೆ ಖರ್ಚಾಗಿ, ಎರಡನೇ ಬಾರಿ ಹೆಚ್ಚು ಪ್ರತಿಗಳನ್ನು ಮುದ್ರಿಸಲು ಹಾಕಿದ್ದು, ನಮ್ಮೆಲ್ಲರಿಗೂ ಅತ್ಯಂತ ಸಂತಸ ನೀಡಿದೆ. ಈ ಸಂದರ್ಭದಲ್ಲಿ ’ಇನ್ನು ಮುಂದೆ ನಿಮ್ಮೆಲ್ಲ ಪುಸ್ತಕಗಳನ್ನು ನಾವೇ ಪ್ರಕಟಿಸುತ್ತೇವೆ. ನೀವಿನ್ನು ’ಯಾಜಿ’ ಬಳಗದವರು. ನಿಮ್ಮನ್ನು ಬಿಟ್ಟುಕೊಡುವುದಿಲ್ಲ’ ಎಂದು ಹೇಳಿ, ಯಾಜಿ ಪ್ರಕಾಶನದವರೇ ಈ ನನ್ನ ಮೂರನೆಯ ಕೃತಿಯನ್ನು ಪ್ರಕಟಿಸುತ್ತಿರುವುದು ಅತ್ಯಂತ ಹರ್ಷದಾಯಕ. ಶ್ರೀ ಗಣೇಶ ಯಾಜಿ ಮತ್ತು ಶ್ರೀಮತಿ ಸವಿತಾ ಯಾಜಿ ದಂಪತಿಗಳ ವಿಶ್ವಾಸ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞತಾಪೂರ್ವಕ ವಂದನೆಗಳು.
ಈ ಗ್ರಂಥಕ್ಕೆ ಸೊಗಸಾದ ಮುಖಪುಟ ವಿನ್ಯಾಸಗೊಳಿಸಿದ ಶ್ರೀ ರವೀಂದ್ರ ವಿಶ್ವಜ್ಞ, ಆರ್‍ಟೆಕ್, ಧಾರವಾಡ ಅವರಿಗೂ ಮತ್ತು ಚಂದವಾಗಿ ಮುದ್ರಿಸಿದ ರಾಷ್ಟ್ರೋತ್ಥಾನ ಬೆಂಗಳೂರು ಅವರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಬಿಡುವಿರದ ಕಾರ್ಯದೊತ್ತಡದ ನಡುವೆಯೂ, ’ಶಿವಾಜಿ ಬಗ್ಗೆ ಪುಸ್ತಕ….’ ಎಂದು ಹೇಳಿದಾಕ್ಷಣ ಒಪ್ಪಿಕೊಂಡು, ಸ್ಫೂರ್ತಿದಾಯಕ ಬೆನ್ನುಡಿಯನ್ನು ಬರೆದುಕೊಟ್ಟ ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಸನ್ಮಾನ್ಯ ಸಂಸದ ಸದಸ್ಯರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕವಾಗಿ ಮುನ್ನೂರೈವತ್ತನೆಯ ವಾರ್ಷಿಕೋತ್ಸವದ ಸಂಭ್ರಮದ ವರ್ಷದಲ್ಲೇ ನನ್ನ ಮೂರನೇ ಗ್ರಂಥವು ಪ್ರಕಟಣೆಯಾಗುತ್ತಿರುವುದು ಅತ್ಯಂತ ಹರ್ಷದಾಯಕ. ಇವುಗಳು ವಾಚಕಪ್ರಭುಗಳ ಹೃದಯದಲ್ಲಿ ಶಿವಾಜಿ ಮಹಾರಾಜರೆಂದರೆ ಒಂದು ರೀತಿಯ ಚಿರಋಣಿಯ ಭಕ್ತಿಭಾವದ ಚಿಲುಮೆ ಚಿಮ್ಮಿದರೆ ನನ್ನ ಪ್ರಯತ್ನ ಸಾರ್ಥಕ.
ಗುರುಪ್ರಸಾದ ಭಟ್, ಉಡುಪಿ
ಪುಟ ತೆರೆದಂತೆ…
ಸವಿನುಡಿ / ೫
ಪ್ರಸ್ತಾವನೆ ಮತ್ತು ಲೇಖಕರ ಮಾತು / ೭
ಶಿವಾಜಿ ಮಹಾರಾಜರ ಗುಣ ವಿಶೇಷಣ ವ್ಯಕ್ತಿತ್ವ ಮತ್ತು
ಕೆಲವು ಇತಿಹಾಸಕಾರರು ಸೃಷ್ಟಿಸಿರುವ ಕಲ್ಪಿತಕತೆಗಳು
(Imaginary Pseudo Narratives)
೧. ಶಿವಾಜಿ ಧರ್ಮನಿರಪೇಕ್ಷತೆಯ ಮೂರ್ತರೂಪ/ಪರಾಕಾಷ್ಠೆ
ಮೆರೆದ ಹಿಂದೂ ರಾಜ / ೧೭
೨. ಕೇಸರಿ ಬಾವುಟದ (ಭಗವಾಧ್ವಜ) ಮೂಲ / ೨೪
೩. ಶಿವಾಜಿ ಮಹಾರಾಜ ಬಹುಭಾಷಾ ಪ್ರವೀಣ / ೩೦
೪. ಶಿವಾಜಿ: ಅಪ್ಪಟ ಕ್ಷತ್ರಿಯ ಕುಲ ವತಂಸ / ೩೮
೫. ಪಟ್ಟಾಭಿಷೇಕದ ಮುನ್ನ ನಡೆದಿತ್ತೆನ್ನಲಾಗುವ ಶಿವಾಜಿಯ ಮರುವಿವಾಹಗಳು / ೪೨
೬. ಶಿವಾಜಿ ಎಂದೂ ಔರಂಗಜೇಬನ ಸೇವಕನಾಗಿರಲಿಲ್ಲ / ೫೦
೭. ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯ (೧೬೮೦ರ ಭೂಪಟ) / ೫೮
೮. ಶಿವಾಜಿ ಆಗ್ರಾ ಸೆರೆಮನೆಯಿಂದ ಚಮತ್ಕಾರವಾಗಿ ತಪ್ಪಿಸಿಕೊಂಡು
ರಾಯಗಡ ತಲುಪಲು ಪ್ರಯಾಣಿಸಿದ ಮಾರ್ಗ ಯಾವುದು? / ೬೪
೯. ಭಾರತದಲ್ಲಿ ಪ್ರಥಮಬಾರಿಗೆ ಗುಲಾಮಗಿರಿಯನ್ನು
ನಿರ್ಮೂಲನೆಗೊಳಿಸಿದ್ದು ಶಿವಾಜಿ! ಬ್ರಿಟಿಷರಲ್ಲ! / ೬೮
೧೦. ಭಾರತದಲ್ಲಿ ಮೊತ್ತಮೊದಲು ಸತಿಸಹಗಮನವನ್ನು ರದ್ದುಪಡಿಸಿದ್ದು ಬ್ರಿಟಿಷರಲ್ಲ! / ೭೪
೧೧. ಶಿವಾಜಿ ’ಬೆಟ್ಟದ ಇಲಿ’ (ಹಾಸ್ಯಾಸ್ಪದ)! / ೮೨
೧೨. ಶಿವಾಜಿಯ ಶತ್ರುಗಳು ಮುಘಲರು ಮತ್ತು ಅದಿಲಶಾಹಿ ಸಾಮ್ರಾಜ್ಯ,
ಕನ್ನಡಿಗರಲ್ಲ! / ೮೭
೧೩. ಕೆಳದಿ ನಾಯಕ ಸಂಸ್ಥಾನದ ಶ್ರೀಮಂತ ಬಂದರು
ಪ್ರದೇಶ ಬಸ್ರೂರನ್ನು ಶಿವಾಜಿ ಪೋರ್ತುಗೀಸ್‌ರಿಂದ ವಿಮೋಚನೆಗೊಳಿಸಿದರು / ೯೫
೧೪. ಗತಿಸಿದ ವಿಜಯನಗರ ಸಾಮ್ರಾಜ್ಯಕ್ಕೆ ಮತ್ತು ರಾಜಪರಂಪರೆಗೆ
ಮರಾಠರು ತೋರಿದ ಗೌರವ, ಸನ್ಮಾನ ಮತ್ತು ಕಳಕಳಿ / ೧೦೫
೧೫. ಭಾರತದಲ್ಲಿ ಮೊತ್ತಮೊದಲು ಯುದ್ಧದಲ್ಲಿ ರಾಕೆಟ್
ಉಪಯೋಗಿಸಿದ್ದು ಯಾರು? / ೧೧೦
೧೬. ಶಿವಾಜಿಯನ್ನು ಅವಹೇಳನ ಮಾಡಿದ್ದಕ್ಕೆ ಜವಾಹರ್ ಲಾಲ್ ನೆಹರು
ಕ್ಷಮೆ ಯಾಚಿಸಿದ್ದರು / ೧೨೦
೧೭. ಶಿವಾಜಿ ಮಹಾರಾಜರ ಪ್ರಖ್ಯಾತ ’ಭವಾನಿ ಖಡ್ಗ’ ಎಲ್ಲಿದೆ? / ೧೨೫
೧೮. ಶಿವಾಜಿ ಮಹಾರಾಜರ ಅಕಾಲ ಮೃತ್ಯುವಿಗೆ ವಿಷಪ್ರಾಶನ ಕಾರಣವೆ? ಐತಿಹಾಸಿಕ ಪುರಾವೆಗಳ ವಿಶ್ಲೇಷಣೆ / ೧೩೩
೧೯. ಶಿವಾಜಿ ಮಹಾರಾಜ ಮತ್ತು ಬುಂದೇಲ ರಾಜ ಛತ್ರಸಾಲರ ಸಂಬಂಧ / ೧೪೪
೨೦. ಮರಾಠರ ಚುಟುಕು ಹೆಸರುಗಳ ಸಂಸ್ಕೃತ ಮೂಲ / ೧೪೯
೨೧. ಶಿವಾಜಿ ಮಹಾರಾಜರಿಗೆ ತಂತ್ರವಿಧಿಯನುಸಾರ
ಎರಡನೇ ಬಾರಿ ಪಟ್ಟಾಭಿಷೇಕ ಏಕೆ ಮಾಡಿದರು? / ೧೫೩
೨೨. ಶಿವಾಜಿ ಶಾಕಾಹಾರಿಯೇ ಅಥವಾ ಮಾಂಸಾಹಾರಿಯೇ? / ೧೫೬
೨೩. ಶಿವಾಜಿಯ ಅಂತ್ಯಕ್ರಿಯೆಯನ್ನು ಅವರ ಪುತ್ರರಿಂದ ಏಕೆ ಮಾಡಿಸಲಿಲ್ಲ / ೧೬೦
೨೪. ಶಿವಾಜಿ ಮಹಾರಾಜರು ರಾಯಗಡ ಕೋಟೆಯ ಮೇಲೆ
ಯಾವುದೇ ಮಸೀದಿ ಕಟ್ಟಿಸಲಿಲ್ಲ / ೧೬೨
೨೫. ಆರ್ಥಿಕವಾಗಿ ಪುರಂದರ ಸಂಧಿಯ ಪರಿಣಾಮವೇನು?
ಸಂಕಷ್ಟವೇ ಅಥವಾ ಸಂಪ್ರಾಪ್ತಿಯೇ? / ೧೬೫
೨೬. ಶಿವಾಜಿ ಮಹಾರಾಜರ ಜನ್ಮ ೧೬೨೭ ಅಥವಾ ೧೬೩೦: ವಿವಾದವೇಕೆ? / ೧೭೧
೨೭. ಶಿವಾಜಿ ಬ್ರಾಹ್ಮಣರ ಪಕ್ಷಪಾತಿಯಲ್ಲ / ೧೮೦
೨೮. ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ಘಟನೆ: ನಡೆದಿದ್ದೇನು? / ೧೯೦
ಉಪಸಂಹಾರ / ೧೯೮
ಆಧಾರ ಗ್ರಂಥಗಳು / ೨೦೪
Reviews
There are no reviews yet.