ನನ್ನ ಪ್ರೀತಿಯ ಗೆಳೆಯ ಸರಜೂ…
ಚೆನ್ನಾಗಿ ಸೌಖ್ಯ ಕ್ಷೇಮ! ಈ ಔಪಚಾರಿಕ ಪದಗಳನ್ನು ಬಳಸಲು ತುಸು ಹಿಂಜರಿಕೆಯಾಗ್ತಿದೆ. ಈ ಪ್ರಪಂಚ ಮೊದಲಿನ ಹಾಗೆ ಇಲ್ಲ, ಇದು ಅವರನ್ನು ಅವರವರ ಪಾಡಿಗೆ ಬಿಡುತ್ತಿಲ್ಲ, ಏನೋ ಒಂದು ನಮೂನಿ ಕಿರಿಕ್ ಮಾಡ್ತಿದೆ. ನಮ್ಮನ್ನು ಆಳುವ ವ್ಯವಸ್ಥೆ ಆತಂಕದ ಗೆರೆಗಳಿಂದ ನಮ್ಮ ನಮ್ಮ ಮನಸ್ಸಿನ ಅಂಗಳದಲ್ಲಿ ರಂಗವಲ್ಲಿಗಳನ್ನು ಸೃಷ್ಠಿಸುತ್ತಿದೆ, ಭಯವನ್ನು ಉದ್ದೀಪಿಸುತ್ತಿದೆ, ಪರಸ್ಪರ ನಂಬಿಕೆಯನ್ನು ದುರ್ಬಲಗೊಳಿಸುತ್ತಿದೆ, ನೆರೆಹೊರೆಯವರನ್ನು ಅನುಮಾನದಿಂದ ನೋಡುವಂಥ ಸನ್ನಿವೇಶ ನಿರ್ಮಾಣ ಮಾಡುತ್ತಿದೆ. ಇದರ ಮೇಲೆ ಬರೆ ಎಳೆದಂತೆ ಈ ಕೊರೋನ ಬೇರೆ. ವರ್ತಮಾನದ ಮೈದಾನದಲ್ಲಿ ಭೂತಕಾಲದ ಕ್ರೀಡೋತ್ಸವ ಆರಂಭವಾಗಿದೆ. ಎಂದೋ ಭೌತಿಕವಾಗಿ ನಿರ್ಗಮಿಸಿದ ಅತೃಪ್ತ ಆತ್ಮಗಳು ರಾಜಕಾರಣದ ಚಹರೆ ಧರಿಸಿ ಆಡಳಿತಾತ್ಮಕ ಮೊಗಸಾಲೆಗಳಲ್ಲಿ ಬೈಠಕ್ ನಡೆಸಿವೆ. ಸಾಮಾಜಿಕ ಸನ್ನಿವೇಶವನ್ನು ನಿರ್ದೇಶಿಸುತ್ತಿವೆ. ಅವರನ್ನು ಇವರನ್ನಾಗಿ, ಇವರನ್ನು ಅವರನ್ನಾಗಿ ಬದಲಿಸುತ್ತಿವೆ. ವರ್ತಮಾನದ ಶವಯಾತ್ರೆಗೆ ಪೂರ್ವ ತಯ್ಯಾರಿ ನಡೆಸುತ್ತಿವೆ. ಸೂತಕ ಮೌನದ ನಡುವೆ ಮಾತು ಚಿತೆಗೆ ಸನಿಹದಲ್ಲಿ ನಿಂತಿದೆ. ಈ ಮಾತು ಸಂವಹನದ ಅರ್ಹತೆ ಕಳೆದುಕೊಂಡಿದೆ. ನಾವೆಲ್ಲರು ರಚಿಸಿಕೊಂಡ ನಮ್ಮವೇ ಆದಂಥ ದ್ವೀಪಗಳಲ್ಲಿ ವಾಸಿಸುತ್ತಿದ್ದೇವೆ. ನಮ್ಮ ಅಸ್ತಿತ್ವವನ್ನು ನಾವು ಸರ್ಕಾರಕ್ಕೆ ಅಡವಿರಿಸಿದ್ದೇವೆ. ನಮ್ಮದಲ್ಲದ ಬದುಕನ್ನು ನಾವು ಬದುಕುತ್ತಿದ್ದೇವೆ. ಈ ಸ್ಥಿತೀಲಿರುವ ನಾವು ಸೌಖ್ಯವಾಗಿರಲು ಸಾಧ್ಯವೆ! ಕ್ಷೇಮ ಲಾಭ ವಿಚಾರಿಸಲು ಈ ಮಾತಿನ ಬಳಕೆ ಯೋಗ್ಯವೆ! ಏನೆಂದು ಕೇಳಲಿ! ಹೇಗೆ ಕೇಳಲಿ! ಹಲವು ಕಷ್ಟಕೋಟಲೆಗಳ ಗರಡಿಯಲ್ಲಿ ಪಳಗಿರುವ ನಾನೂ ನೀನು ಹೇಗೊ ಪ್ರಸ್ತುತ ಸನ್ನಿವೇಶವನ್ನು ನಿಭಾಯಿಸಬಲ್ಲೆವು, ಆದರೆ ನಮ್ಮ ನಂತರದ ತಲೆಮಾರಿನವರು ಈ ಸನ್ನಿವೇಶವನ್ನು ಹೇಗೆ ಪರಿಗ್ರಹಿಸುವರು ಎಂಬುದೆ ನಮ್ಮೆಲ್ಲರ ಚಿಂತೆ ಗೆಳೆಯಾ! ನಂತರದ ತಲೆಮಾರುಗಳಲ್ಲಿ ಯಾರು ಯಾವ ವಯಸ್ಸನ್ನು ಅನುಭವಿಸುತ್ತಿರುವರು, ರೋಸಿರುವವರು ತಮ್ಮ ನೈಜ ವಯಸ್ಸನ್ನು ಯಾವ ಕಾರಣಕ್ಕೆ ವಿಸರ್ಜಿಸುತ್ತಿರುವರು, ಅಕಾಲಿಕ ವೃದ್ಯಾಪ್ಯನ ಆವಹಿಸಿಕೊಳ್ಳುತ್ತಿರುವರು. ಇಂಥ ಹಲವು ಕಾರಣಗಳಿಂದ ಕಳೆದೆರಡು ದಶಕಗಳಲ್ಲಿ ಯಾಂತ್ರಿಕತೆ ರೋಬಟುತನ ವಿಜೃಂಭಿಸುತ್ತಿದೆ, ಜೀವನೋತ್ಸಾಹ ಕಷ್ಟಸಹಿಷ್ಣುತೆ ಕಾಣೆಯಾಗಿದೆ. ಇವನ್ನೆಲ್ಲ ಲೇಖಕರಾದ ನಾವು ಅರ್ಥ ಮಾಡಿಕೊಳ್ಳದೆ ಇನ್ನಾರು ಅರ್ಥ ಮಾಡಿಕೊಳ್ಳಲು ಸಾಧ್ಯ ಸರಜೂ!
ಇವರೆಲ್ಲರಿಗೆ ಹೋಲಿಸಿದರೆ ನಮ್ಮ ತಲೆಮಾರೇ ಎಷ್ಟೋ ವಾಸಿ. ಸಮಕಾಲೀನ ಸಾಹಿತ್ಯದಲ್ಲಿ ಫಲವಂತಿಕೆ ಇದ್ದರೆ ಅದಕ್ಕೆ ಅರವತ್ತು ಫ್ಲಸ್‌ನ ನಾವೇ ಕಾರಣ. ಪ್ರಥಮ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಈ ಭೂಲೋಕಕ್ಕೆ ಅವಿರ್ಭವಿಸಿದ ನಮ್ಮಂಥ ಪ್ರಳಯಾಂತಕರು ಒಬ್ಬರೆ ಇಬ್ಬರೆ! ನಾವು ದಾರೆಂದರೆ ಸೊಲುಪ ಹೆಚ್ಚು ಕಡಿಮೆ ನಮ್ಮ ವಾರಿಗೆಯವರಾದ ಡಿ.ಆರ್.ನಾಗರಾಜ, ಅಗ್ರಹಾರ ಕೃಷ್ಣಮೂರ್ತಿ, ಸಿದ್ಧಲಿಂಗಯ್ಯ.. ಹೀಗೆ ಅಸಂಖ್ಯಾತ ಮಂದಿ. ಒಂದೆ ಮಾತಲ್ಲಿ ಹೇಳುವುದಾದರೆ ನಾವು ರಕ್ತಬೀಜಾಸುರರು, ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದ ಅತೃಪ್ತರು ಈ ಶತಮಾನದ ನಾವು. ಮಾತ್ರವಲ್ಲದೆ ನಾವು ಮೃತ್ಯುಂಜಯರು, ಇಚ್ಛಾಪುರುಷರು(ಈ ಮಾತು ನಮ್ಮ ಕಾಲಘಟ್ಟದ ಮಹಿಳೆಯರಿಗೂ ಅನ್ವಯಿಸುವುದು) ವಿಶ್ವವಿದ್ಯಾಲಯಗಳಲ್ಲಿ ಕಲಿತವರಿಗಿಂತ, ಅವರವರ ಖಾಸಗಿ ಅತಂತ್ರ ಬದುಕನ್ನೇ ವಿಶ್ವವಿದ್ಯಾಲಯ ಗಳನ್ನಾಗಿ ಪರಿವರ್ತಿಸಿಕೊಂಡು ಕಲಿತವರು, ಕಲಿಸಿದವರೆ ಹೆಚ್ಚು. ನಮ್ಮ ಬಾಲ್ಯದಲ್ಲಿ ದೇವರು ಮತ್ತು ದೆವ್ವಗಳಿಗೆ ಸಮಾನ ಸ್ಥಾನಮಾನವಿತ್ತು. ಇವೆರಡೂ ನಮ್ಮ ಅನುಭವಗಳೆ! ನಮ್ಮನ್ನು ಶ್ಯಾಣೆಯರನ್ನಾಗಿಸಿದ್ದು ದೆವ್ವಗಳೆ ವಿನಃ ದೇವರುಗಳಲ್ಲ. ನಿಜ ಹೇಳುವುದಾದರೆ ನಮಗೆ ಬರಹದ ಕರಾಮತ್ತನ್ನು ಸಾಂಪ್ರತು ಪರಿಚಯಿಸಿದ್ದು ಕಿಲಾಡಿ ದೆವ್ವಗಳೆ ವಿನಃ ಸಭ್ಯ ದೇವರುಗಳಲ್ಲ. ಕೆಲವು ಸಂದರ್ಭಗಳಲ್ಲಿ ಹತಾಶ ಸ್ಥಿತಿಯಲ್ಲಿದ್ದ ನಮಗೆ ಆಶ್ರಯ ನೀಡಿದ್ದು ನಿರ್ಮಾನುಷ ಸ್ಮಶಾನಗಳೆ ಹೊರತು ನಾಡಪ್ರಭುಗಳಿಂದ ಕಿಕ್ಕಿರಿದ ಬಡಾವಣೆಗಳಲ್ಲ. ಆಗ ನಾವು ನಮ್ಮ ನಮ್ಮ ಮನೆಗಳಿಗಿಂತ ಸಂದುಗೊಂದುಗಳಿಂದ ತುಂಬಿದ್ದ ಬೀದಿಗಳ ಜೊತೆ ಒಡನಾಡಿದೆವು. ಒಂದೆ ಮಾತಲ್ಲಿ ಹೇಳುವುದಾದರೆ ನಾವು ಬಂಡಿ ಜಾಡಿನ ಲೇಖಕರೆ ವಿನಃ ರಾಜ ಹೆದ್ದಾರಿ ಲೇಖಕರಂತು ಖಂಡಿತ ಅಲ್ಲ.
ಹ್ಹಾಂ ಅಂದಹಾಗೆ ಸರಜೂ ನಾವು ಲೇಖಕರಾಗಿದ್ದು ತೀರಾ ಆಕಸ್ಮಿಕ ಅಲ್ವೆ! ಬಡಕಲು ಮುಷ್ಟಿಯಲ್ಲಿ ಅಮ್ಮಮ್ಮಾ ಅಂದರೆ ಒಂದರಪಾವು ಕನ್ನಡದ ಅಕ್ಷರಗಳಿದ್ದವು, ಅವೆಲ್ಲವು ಬೆವರಲ್ಲಿ ಅದ್ದಿ ತೆಗೆದಂತಿದ್ದವು. ಆ ಒಂದೊಂದು ಅಕ್ಷರದ ಪುಪ್ಪುಸದಲ್ಲಿ ಕಷ್ಟಕೋಟಲೆಗಳ ಸರಕು ಇತ್ತು. ಅವು ನಮ್ಮ ಕಣ್ಣಿಗೆ ಬೆರಗು ವಿಸ್ಮಯದ ಕನ್ನಡಕವಿರಿಸಿದವು. ನಮ್ಮ ಅಂಗೈಗಳಲ್ಲಿ ಬ್ಲೇಕನ ಮಾಯಾ ದರ್ಪಣವಿರಿಸಿದವು. ಅದರಲ್ಲಿ ಪ್ರಪಂಚದ ವಿದ್ಯಮಾನಗಳನ್ನು ಅಳವಡಿಸಿದವು. ನಮ್ಮ ಸಣಕಲು ಶರೀರದೊಳಗೆ ಉತ್ಸಾಹದ ಗೌರಿಕುಂಡವನ್ನಿರಿಸಿದವು. ನಮ್ಮ ಪಂಚೇಂದ್ರಿಯ ಗಳನ್ನು ನೂರಾರು ಕವಲುಗಳನ್ನಾಗಿಸಿದವು, ಪುರುಷಸೂಕ್ತವೇ ಆಕಾರವೆತ್ತಂತೆ ನಾವು ಪ್ರಜ್ವಲಿಸಿದ್ದಕ್ಕೆ ಕಾರಣ ಅವೆ. ಹ್ಹಾಂ ಇನ್ನೊಂದು ಉಲ್ಲೇಖಾರ್ಹ ಸಂಗತಿ ಅಂದರೆ ಹೋರಾಟದ ಕಾಮನಬಿಲ್ಲಿನ ಒಂದು ತುದೀಲಿ ಪ್ಯಾಸಿಜಂಗೆ ಹೊಸ ವ್ಯಾಖ್ಯಾನ ಬರೆಯಲಾರಂಭಿಸಿದ್ದ ಪ್ರಧಾನಿ ಇಂದಿರಾ ಗಾಂಧಿ, ಅದರ ಇನ್ನೊಂದು ತುದೀಲಿ ಅದೇ ಪ್ಯಾಸಿಜಂನ ರೆಕ್ಕೆಪುಕ್ಕಗಳನ್ನು ಕೋರೆಹಲ್ಲುಗಳನ್ನು ಕತ್ತರಿಸಲೆಂದೆ ಅವತರಿಸಿದ್ದ ಜಯಪ್ರಕಾಶ ನಾರಾಯಣ ಕೋರೈಸಲಾರಂಭಿಸಿದ್ದರು. ಜೆಪಿಯ ನವನಿರ್ಮಾಣ ಚಳವಳಿಯ ಕಡಲಮೊರೆತದೊಳಗೆ ನಾವು ಧುಮುಕಿದ್ದು, ಹಾದಿಗಳಿಲ್ಲದ ಕಡೆ ಹಾದಿಗಳನ್ನು ಸೃಷ್ಠಿಸಿಕೊಂಡಿದ್ದು, ಹಸಿವೆ ಬಾಯಾರಿಕೆಗಳನ್ನೆ ಅಸ್ತ್ರಗಳನ್ನಾಗಿ ಪರಿವರ್ತಿಸಿ ಕೊಂಡಿದ್ದು, ಧಾರವಾಡದ ಕಡಪಾ ಮೈದಾನದಲ್ಲಿ ತೇಜಸ್ವಿ ಚಂಪಾ ನಂಜುಂಡಸ್ವಾಮಿ ಲಂಕೇಶ ಸೇರಿದಂತೆ ನೂರಾರು ಮಹತ್ವದ ಲೇಖಕರ ಸಹಸ್ರಾರು ಭಾಷಣಗಳನ್ನು ಆಲಿಸಿ ಪುಳಕಿತರಾದದ್ದು, ಕಾಲು ಹಾದಿಗಳನ್ನೆ ರಾಜಮಾರ್ಗಗಳನ್ನಾಗಿಸಿಕೊಂಡು ಮೆರವಣಿಗೇಲಿ ಪ್ರತಿಭಟನಾ ಘೋಷಣೆ ಗಳನ್ನು ಮೊಳಗಿಸಿದ್ದು! ಕತ್ತೆಗಳಂತೆ ಸಿಕ್ಕಸಿಕ್ಕದ್ದನ್ನು ಓದಲಾರಂಭಿಸಿದ್ದು. ಹಿಂದೆ ಮುಂದೆ ಯೋಚಿಸದೆ ಸೊಟ್ಟಬಟ್ಟಾ ಬರೆಯಲಾರಂಭಿಸಿದ್ದು, ಅಗೋ ಅಲ್ಲೊಬ್ಬ ಕವಿ, ಇಗೋ ಇಲ್ಲೊಬ್ಬ ಕವಿ! ಹ್ಹಾ ಹ್ಹಾ ಎಲ್ಲೆಲ್ಲು ನೋಡಿದರು ಕವಿಗಳೆ ಕವಿಗಳು ಎಂದು ಸಖೇದಾಶ್ಚರ್ಯದಿಂದ ಉದ್ಗರಿಸಿದ್ದು!
ಸರಜೂ ನಮ್ಮನ್ನು ಲೇಖಕರನ್ನಾಗಿಸಿದ್ದೆ ಆ ಕಾಲಘಟ್ಟದ ಸಮಾಜಮುಖಿ ಚಳವಳಿಗಳು, ಮುಷ್ಕರಗಳು, ಪ್ರತಿಭಟನೆಗಳು ಅಲ್ಲವೆ! ಆ ಚಳವಳಿಗಳಿಂದಾಗಿಯೇ ಲೋಹಿಯಾ ಗಾಂಧಿ ಮಾರ್ಕ್ಸ್ ಮಾವೋ ಚೆಗೆವಾರ ಮತ್ತಿತರರು ನಮ್ಮ ಹೃದಯದ ಬುಲಂದೆ ದರವಾಜುಗಳನ್ನು ತಟ್ಟಿದ್ದು, ಹಲೋ ಸರಜೂ, ಹಲೋ ಕುಂವೀ ಅಂತ ಪಲಕರಿಸಿದ್ದು! ಇದನ್ನು ಓದಿರಿ, ಅದನ್ನು ಓದಿರಿ ಎಂದು ಅವರು ಒತ್ತಾಯಿಸಿದ್ದು! ನಮ್ಮನ್ನು ಒಂಚೂರು ಮನುಷ್ಯರನ್ನಾಗಿಸಿದ್ದು ಆ ಚಳವಳಿಗಳು, ಆ ಓದು ಮತ್ತು ಆ ಇನ್ವಾಲ್ವಮೆಂಟು.
ಸರಜೂ ಆಗ ನೀನು ಹುಬ್ಬಳ್ಳಿಯಾಂವ ಇದ್ದಿ, ಮುಂದೆ ಥೇಟ್ ನಿನ್ನಂಗೆ ಇದ್ದ ನಿನ್ನ ಅಣ್ಣಾವ್ರು ಖಂಡೇರಾವ್ ಪರಿಚಯ ಆಗಿ ನಿನ್ನ ಕಥೀನ ಪ್ರವಚನ ಮಾಡಿದರು. ಅವರು ಥೇಟ್ ನಿನ್ನಂಗೆ ಇದ್ದರು. ಅದಿರಲಿ, ಅದಕ್ಕು ಮೊದಲು ನೀನು ಸತೀಶ ಕೂಡಿ ರಚಿಸಿಕೊಂಡಿದ್ದ ಸಿಂಡಿಕೇಟ್ ಮೂಲಕ ಕವನ ಸಂಕಲನ ಪ್ರಕಟಿಸುತ್ತಿದ್ದಿರಿ, ನಿಮ್ಮಿಬ್ಬರ ಚಿಗುರು ಮೀಸೆಗಳುಳ್ಳ ಫೋಟೋಗಳನ್ನು ಆ ಒನ್ ಬೈಟು ಸಂಕಲನದಲ್ಲಿ ಹಾಕ್ಕೋತ್ತಿದ್ದಿರಿ. ಆಶ್ಚರ್ಯವೆಂದರೆ ಕಾಲೇಜು ಹುಡುಗೀರನ್ನು ಆಕರ್ಷಿಸುತ್ತಿದ್ದುದು ನಿಮ್ಮ ಕವಿತೆಗಳಿಗಿಂತ ಮುಖ್ಯವಾಗಿ ನಿಮ್ಮ ಕಿರಾಪುಳ್ಳ ಫೋಟೋಗಳೆ. ಆಗಿಂದು ಒಂದು ಬದಿಗಿರಲಿ ಸರಜೂ ತೀರಾ ಮೊನ್ನೆ ಮೊನ್ನೆ.. ಅಂದರೆ ನೀನು ಯೌವನ ದಾಟಿ ಪ್ರೌಢಾವಸ್ಥೇನ ತಲುಪಿದ್ದಿ, ಅಂದರೆ ತೊಂಭತ್ತರ ದಶಕದ ಕೊನೆಗೆ ನಾನೂ ನೀನು ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದೆವು, ಅದೂ ನಮ್ಮ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅಧ್ಯಕ್ಷರಾಗಿದ್ದರು, ಆಗ ನಮ್ಮ ಎಂ.ಪಿ.ಪ್ರಕಾಶ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು. ಚದುರಂಗ, ಬೆಸಗರಹಳ್ಳಿ ರಾಮಣ್ಣ, ಕೇಶವಮೂರ್ತಿ, ಶಂಕರ ಮೊಕಾಶಿ ಪುಣೇಕರ, ಮಾಲತಿ ಪಟ್ಟಣಶೆಟ್ಟಿ.. ಹೀಗೆ ಸಾರಸ್ವತ ಲೋಕದ ಅತಿರಥ ಮಹಾರಥರೇ ಅಕಾಡೆಮಿಯ ಸದಸ್ಯರಾಗಿದ್ದರು. ಆಗ ಅಕಾಡೆಮಿ ಪಾರದರ್ಶಕವಾಗಿತ್ತು, ಡೆಮೊಕ್ರೆಟ್ಟಿಕ್ಕಾಗಿತ್ತು. ಆ ಮೂರು ವರ್ಷಗಳ ಅವಧೀನ ಅಕಾಡೆಮಿಯ ಸುವರ್ಣಯುಗ ಅಂತ ಈಗಲೂ ಕರೀತಾರೋ ಮಾರಾಯ. ಆಗ ಹುಡುಕಿಕೊಂಡು ಅಕಾಡೆಮಿಗೆ ಬರುತ್ತಿದ್ದ ಹುಡುಗಿಯರು ಕೇಳುತ್ತಿದ್ದುದು ಒಂದೆ ನಿಮ್ಮ ಪೈಕಿ ಸರಜೂ ಕಾಟಕರ್ ಯಾರ್ರಿ ಅಂತ. ಆಗ ಸಾಹಿತ್ಯದ ದೃಷ್ಟಿಯಿಂದ ನೀನು ಛರಿಷ್ಮಟೆಕ್ಕಾಗಿದ್ದಿ, ಪರ್ಸನ್ನಲ್ಲೀ ಗ್ಲಾಮರಸ್ಸಾಗಿದ್ದಿ(ಈಗಲೂ ಅವೆಲ್ಲವನ್ನು ಒಂಚೂರು ಉಳಿಸಿಕೊಂಡಿರುವಿ ಯೋಚಿಸಬೇಡ, ನಿನ್ನ ಸ್ಮೈಲ್ ನಿನ್ನ ಪ್ಲಸ್ಸ್ ಪಾಯಿಂಟ್) ಕಂಡೋರೆಲ್ಲರನ್ನ ನಕ್ಕೋತ ಮಾತಾಡಿಸುತ್ತಿದ್ದಿ. ಅದಿರ್‍ಲಿ ಅದು ಬೇರೆ ಟಾಪಿಕ್ಕು ಮಾರಾಯ, ಈಗ ನೇರವಾಗಿ ಸಾಹಿತ್ಯ ಕೃಷಿಗೆ ಸಾಧನೆಗೆ ಬರೋಣ.
ಸರಜೂ ಆ ಎಂಭತ್ತರ ದಶಕದ ಆಜು ಬಾಜು ನಾವೆಲ್ಲರು ಸ್ವಯಂಘೋಷಿತ ಕಿಂಗುಗಳೆ. ನಾವೆಲ್ಲರು ಓತೋಪ್ರೋತವಾಗಿ ಓದುತ್ತಿದ್ದೆವು, ಓತೋಪ್ರೋತವಾಗಿ ಬರೆಯುತ್ತಿದ್ದೆವು. ಏನು ಗೀಚಿದರು ಸಾಹಿತ್ಯ ಎಂದು ಭ್ರಮಿಸುತ್ತಿದ್ದೆವು. ನಮ್ಮ ಕೈಯಲ್ಲಿರೋದು ಪೆನ್ನಿನ ಪರಿವೇಷ ಧರಿಸಿರುವ ಏಕೆ- ಫಾರ್‍ಟಿ ಸೆವೆನ್ ಗನ್ನು ಎಂದು ವಾಚಕರನ್ನು ಹೆದರಿಸುತ್ತಿದ್ದೆವು, ನಾವು ಮಹಾ ಸಾಹಿತಿ ವೇಷದಲ್ಲಿರೋ ಮಹಾ ಕ್ರಾಂತಿಕಾರಿ ಎಂದು ಸಮಾಜಕ್ಕೆ ಪೋಜು ಕೊಡುತ್ತಿದ್ದೆವು, ಆ ಸಂದರ್ಭದ ಅಸಂಖ್ಯಾತ ಕವಿಗಳು ವಿಮರ್ಶೆಯ ಹಂಗು ತೊರೆದಿದ್ದರು. ಅದಕ್ಕೆ ಇದ್ದ ಪ್ರಬಲ ಕಾರಣವೆಂದರೆ ಆಗ ವಿಮರ್ಶಕರು ಮಡಿಯುಡಿಯಿಂದ ಕೋಸುಂಬರಿ ಪಾನಕ ಸೇವನೆ ಮಾಡುವವರಾಗಿದ್ದರು. ಅಲ್ಲದೆ ಆ ರೀತಿಯ ಅಭಿವ್ಯಕ್ತಿಗೆ ಆ ಕಾಲಘಟ್ಟದಲ್ಲಿ ತೀವ್ರತೆ ಒತ್ತಡವಿತ್ತು. ಇನ್ನೊಂದು ಮುಖ್ಯ ಸಂಗತಿ ಅಂದರೆ ಸಿದ್ಧಲಿಂಗಯ್ಯನ ಹೊಲೆ ಮಾದಿಗರ ಹಾಡು ಒಂದು ತಲೆಮಾರಿನ ಮೇಲೆ ಅಸಾಧಾರಣ ಪ್ರಭಾವ ಬೀರಿತ್ತು. ಇಕ್ರಿ ಒದೀರಿ ಚರ್ಮ ಎಬ್ಬರಿ.. ಈ ಸಿಡಿಲ ಸದೃಶ ಮಾತುಗಳು ಪ್ರವಾಹದೋಪಾದಿಯಲ್ಲಿ ನಮ್ಮೆಲ್ಲರ ಮೇಲೆ ಅಪ್ಪಳಿಸಿದವು, ಒಂದೆ ಮಾತಲ್ಲಿ ಹೇಳುವುದಾದರೆ ಅಡಿಗರು ಒಂದು ಜನಾಂಗದ ಕಣ್ಣು ತೆರೆಸಿದ ಕವಿ ಅನ್ನಿಸಿಕೊಂಡರೆ ಸಿದ್ಧಲಿಂಗಯ್ಯ ಒಂದು ತಲೆಮಾರಿನ ಕಣ್ಣು ಮುಚ್ಚಿಸಿದ ಕವಿ ಅನ್ನಬಹುದೇನೊ! ಏನೇ ಆಗಲಿ ಸಿದ್ಧಲಿಂಗಯ್ಯ ತಳ ಸಮುದಾಯದ ಕೊರಳುಗಳ ಚಳಿ ಬಿಡಿಸಿದ ಕವಿ. ಅದಿರಲಿ ನಿನ್ನ ಮ್ಯಾನಿಫೆಸ್ಟೋ ಸಂಕಲನದಲ್ಲಿರುವ ಕವಿತೆಗಳೆ ಇದಕ್ಕೆ ನಿದರ್ಶನ.
ಸರಜೂ ಆ ಸಂದರ್ಭದಲ್ಲಿ ವಿಜಯ ಪಾಟೀಲ ಮಂಗ್ಳೂರು ವಿಜಯ ನಮ್ಮ ನಿಮ್ಮೆಲ್ಲರ ಕವಿತೆಗಳನ್ನು ಸಂಗ್ರಹಿಸಿ ಕಪ್ಪು ಜನರ ಕೆಂಪು ಕಾವ್ಯ ಅನ್ನೊ ಹೆಸರಿನ ಕವನ ಸಂಕಲನ ಪ್ರಕಟಿಸಿದರು. ಅದಕ್ಕೆ ಲಂಕೇಶ್ ಮಾಸ್ತರ ಅರ್ಥಪೂರ್ಣವಾದ ಕಾವ್ಯಶೈಲೀಲಿ ಮುನ್ನುಡಿ ಕರುಣಿಸಿದರು. ಅದೇ ನಮ್ಮ ತಲೆಮಾರಿನ ಚಂಡೆಮದ್ದಳೆ ಅನ್ನಬಹುದು. ಆ ಸಂಕಲನ ಯುವಕವಿಗಳ ಕೈದೀವಿಗೆ ಅನ್ನಿಸಿತು. ಅದೇ ಮುಂದೆ ಕರ್ನಾಟಕ ಬರಹಗಾರರ ಒಕ್ಕೂಟ ಮತ್ತು ಬಂಡಾಯ ಸಂಘಟನೆಗೆ ನಾಂದಿ ಹಾಡಿತೆನ್ನಬಹುದು. ಆದರೆ ಒಂದು ವಿಷಾದದ ಸಂಗತಿ ಅಂದರೆ ಆ ಸಂಕಲನದ ಮೂಲಕ ಭರವಸೆ ಮೂಡಿಸಿದ್ದ ಎಯ್ಟಿ ಪರ್ಸೆಂಟ್ ಕವಿಗಳು ನಿಧಾನವಾಗಿ ಕಣ್ಮರೆಯಾದರು. ಅಲ್ಲದೆ ಅದರ ಸಂಪಾದಕ ದ್ವಯರ ಪೈಕಿ ಗೆಳೆಯ ವಿಜಯ ಪಾಟೀಲ ಭೌತಿಕವಾಗಿ ನೇಪಥ್ಯಕ್ಕೆ ಸರಿದ. ಅವರೆಲ್ಲರ ಪೈಕಿ ಅತಿ ಹೆಚ್ಚು ಅಂದಿನಿಂದ ಇಂದಿನವರೆಗೆ ಹೆಚ್ಚು ಕ್ರಿಯಾಶೀಲವಾಗಿರುವ ಏಕೈಕ ಲೇಖಕನೆಂದರೆ ನಿಸ್ಸಂದೇಹವಾಗಿ ನೀನು.
ನನ್ನ ಪ್ರೀತಿಯ ಗೆಳೆಯ ಸರಜೂ..
ಅತ್ಯಂತ ಆಕರ್ಷಕವಾದ ನಾಮವಾಚಕವಿರಿಸಿಕೊಂಡಿರುವ, ಉತ್ತರಾದಿ ಘರಾಣಾದ ಬಹುಪಾಲು ಲೇಖಕರಿಗೆ ಇವನು ನಮ್ಮವನಿರಬಹುದು ಎಂದು ಪ್ರಾದೇಶಿಕ ಭ್ರಮೆ ಹುಟ್ಟಿಸುವ ನೀನು, ಅದೇ ಮುಗುಳ್ನಗೆನ ಕಳೆದ ಐದು ದಶಕಗಳಿಂದ ಕೊಹಿನೂರು ವಜ್ರದಂತೆ ತುಟಿ ನಡುವೆ ಮತ್ತು ಮುಖದ ಬಹುತೇಕ ಕವಳಿಕೆಗಳಲ್ಲಿ ಜೋಪಾನ ಜತನದಿಂದ ರಕ್ಷಿಸಿಕೊಂಡು ಬಂದಿರುವ ನೀನು, ಇತ್ತ ಹಿರಿ ಕಿರಿಯ ಸಾಹಿತಿಗಳೊಂದಿಗು, ಅತ್ತ ಪ್ರಸಿದ್ಧ ಅಪ್ರಸಿದ್ಧ ರಾಜಕಾರಣಿಗಳೊಂದಿಗು ಸಮಾನ ಸಂಬಂಧವಿರಿಸಿಕೊಂಡಿರುವ ನೀನು, ಗುಜರಾತಿ ಮರಾಠಿ ಹಿಂದಿ ಇಂಗ್ಲೀಷ್ ಕನ್ನಡ ಹೀಗೆ ಪಂಚಭಾಷಾ ಪ್ರವೀಣನೆನಿಸಿರುವ ನೀನು, ಇದುವರೆಗೆ ಎಪ್ಪತ್ತಕ್ಕು ಅಧಿಕ ಬಹುಮಾನ ಪುರಸ್ಕಾರಗಳಿಗೆ ಭಾಜನನಾಗಿರುವ ನೀನು, ನಾಡಿನ ಬಹುತೇಕ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವ ನೀನು, ಪರಿಚಯವಾದೊಡನೆ ಅಂಟರುಪುಳಿಕೆಯಂತೆ ಎದುರಾಳಿಯನ್ನು ಪಾರವಾಶ್ಯಗೊಳಿಸುವ ನೀನು, ಅಜಾತಶತ್ರುವೆಂಬ ಬಿರುದಿಗೆ ಪಾತ್ರವಾಗಿರುವ ನೀನು! ಹ್ಹಾ ಹ್ಹಾ ಸರಜೂ ಒಂದೆ ವಾಕ್ಯದಲ್ಲಿ ಹೇಳುವುದಾದರೆ ನೀನು ಆಸೇತು ಹಿಮಾಚಲದಾದ್ಯಂತ ವ್ಯಾಪಿಸಿರುವ ಸರ್ವಾಂತರ್‍ಯಾಮಿ ಕಣಯ್ಯಾ. ಒಮ್ಮೆ ಬೆಂಗಳೂರಿನ ಪ್ರಸಿದ್ಧ ಸಜ್ಜನ ಸಾಹಿತಿ ಕೇಳಿದರು ಅಲ್ರೀ ಕುಂವೀ ನಾಡಿನ ಬಹುತೇಕ ಪ್ರಶಸ್ತಿಗಳು ಸರಜೂನ ತಲುಪಲು ತುದಿಗಾಲಲ್ಲಿ ಕಾಯ್ತಿರ್‍ತಾವಲ್ಲ, ಏನಿದರ ಕರಾಮತ್ತು! ಈ ಛೆರಿಷ್ಮಾ ಇರೋದು ನಿನ್ನಂಥ ನಸೀಬಸ್ಥರಿಗೆ ಮಾತ್ರ.
ಕನ್ನಡದಲ್ಲಿ ಹತ್ತಾರು ಸವಕಲು ಗಾದೆ ಮಾತುಗಳಿವೆ, ಕನ್ನಡದ ಆಸ್ತಿ ನಮ್ಮ ಮಾಸ್ತಿ, ಆಡು ಮುಟ್ಟದ ಸೊಪ್ಪಿಲ್ಲ, ಕಾರಂತರು ಬರೆಯದೆ ಇರುವ ಪ್ರಾಕಾರವಿಲ್ಲ ಹೀಗೆ. ಈ ಗಾದೆ ಮಾತು ಅತ್ಯಂತ ಪ್ರಾಲಿಫಿಕ್ ರೈಟರಾದ ನಿನಗು ಅನ್ವಯಿಸುವುದು. ಕಳೆದ ಐದು ದಶಕಗಳಲ್ಲಿ ಕಾವ್ಯ, ಕಥೆ, ಕಾದಂಬರಿ, ನಾಟಕ, ಪ್ರವಾಸ, ಅನುವಾದ ಹೀಗೆ ಸಾಹಿತ್ಯದ ಬಹುತೇಕ ಪ್ರಾಕಾರಗಳಲ್ಲಿ ಎಪ್ಪತ್ತಕ್ಕು ಹೆಚ್ಚು ಕೃತಿಗಳನ್ನು ಪ್ರಕಟಿಸಿರುವಿ, ಕನ್ನಡ ಮಾತ್ರವಲ್ಲದೆ ಮರಾಠಿ ಗುಜರಾತಿ ಹಿಂದಿ ಇಂಗ್ಲೀಷ್ ಭಾಷೆಗಳ ಹಿರಿ ಕಿರಿಯ ಲೇಖಕರಿಗೆ ಹಲೋ ಹಾಯ್ ಹಾಯ್ ಅಂತ ಸೌಜನ್ಯ ಪೂರ್ವಕವಾಗಿ ಮಾತಾಡಿಸುವ ಪರಿಪಾಟವಿರಿಸಿಕೊಂಡಿರುವಿ, ಅಲ್ಲಲ್ಲಿ ಅತ್ಯುತ್ತಮ ಕೃತಿಗಳನ್ನು ಓದಿ ಅದರ ಅನುಭವವನ ನನ್ನಂಥ ಗೆಳೆಯರಿಗೆ ನಿರಂತರ ದಾಸೋಹ ಗೈಯುತ್ತಿರುವಿ. ಬರೆದಿರುವ ಕಾದಂಬರಿಗಳ ಮೂಲಕ ಸಿನೆಮಾ ಮಂದಿನ ಆಕರ್ಷಿಸುತ್ತಿರುವಿ, ಸಿನೆಮಾಕ್ಕೆ ಸಂಬಂಧಿಸಿದಂತೆ ಉತ್ತಮ ಕಥಾ ಲೇಖಕ ಪ್ರಶಸ್ತಿಗಳನ ಸಹ ಮುಡಿಗೇರಿಸಿಕೊಂಡಿರುವಿ. ಪಡೆದಿರುವ ಪ್ರಶಸ್ತಿಗಳ ಪರಿಕರಗಳನ್ನು(ನಗದು ಹಣವನ್ನು ಹೊರತುಪಡಿಸಿ) ಮನೆಯ ಮೇಲ್ಮಹಡಿಯ ಕೋಣೆಯಲ್ಲಿ ನೀಟಾಗಿ ಅಲಂಕರಿಸಿರುವಿ. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ದಂಗೆ ಹೆಸರಿನ ಕಾದಂಬರೀನ ಪ್ರಕಟಣೆಗೆ ಸಜ್ಜು ಪಡಿಸಿರುವಿ!
ಹ್ಹಾಹ್ಹಾ ನಿನ್ನ ಜೀವನೋತ್ಸಾಹವೆ!
ದಂಗೆ!
ಹಿಂದೊಮ್ಮೆ ಫೋನ್‌ನಲ್ಲಿ ಈ ದಂಗೆ ಕುರಿತು ವಿವರಿಸಿದ್ದಿ ಗೆಳೆಯಾ. ಹಿರಿಯರ್‍ಯಾರೋ ಒಂಚೂರು ಹೇಳಿದರು, ಅದನ್ನೆ ವಿಸ್ತರಿಸಿ ಕಾದಂಬರಿ ಮಾಡೀನಿ ಅಂತ. ಕೇಳಿಸಿಕೊಳ್ಳೋದು, ಕೇಳಿದ್ದನ್ನೆ ಮರು ನಿರೂಪಿಸುವುದು.. ಇದೆಲ್ಲ ಅನುವಾದ ಪ್ರಕ್ರಿಯೆಯ ವಿವಿಧ ಮುಖಗಳೆ. ಮೊನ್ನೆ ದಿವಸ ನೀನು ಫೋನ್ ಮಾಡಿದಾಗ ನಾನು ಮೈಸೂರು ಬಂಡೀಪುರ, ಊಟಿ, ಯಳಂದೂರು ನಾಗರಹೊಳೆಗಳಿತ್ಯಾದಿ ಪ್ರವಾಸಿ ತಾಣಗಳನ ನೋಡಿಕೋತ ಹೊರಟಿದ್ದೆ. ಆ ಸಮಯವಲ್ಲದ ಸಮಯದಲ್ಲಿ ನೀನು ಪೋನಲ್ಲಿ ಶುರು ಹಚ್ಚಿದಿ. ಈ ಕಥೀನ ನೀನೆ ಪುನಃ ಇನ್ನೊಮ್ಮೆ ಮರುನಿರೂಪಿಸಿದಿ. ಇದು ಸಿನೆಮಾಗಲಿಕ್ಕ ಹೇಳಿ ಮಾಡಿಸಿದಂತಿದೆ ಎಂದು ಭಾವಿಸುವಷ್ಟರಲ್ಲಿ ನೀನೆ ಇದಕ್ಕ ಎರಡು ಮೂರು ಪುಟ ಮುನ್ನುಡೀನ ಬರಕೊಡು ಅಂತ ಆಜ್ಞಾಪಿಸಿದಿ. ಗೆಳೆಯರಿಗೆ ಆಜ್ಞಾಪಿಸೋದು ನಿನ್ನ ಜನ್ಮಸಿದ್ಧ ಹಕ್ಕು ಅದ. ಪ್ರಕಾಶಕರು ಯಾರೂಂತ ಕೇಳಿದಕ ನೀನು!
ಓಹ್ ಯಾಜಿ! ಗಣೇಶ್ ಯಾಜಿ! ಅವರೋರ್ವ ಅದ್ಭುತ ಗೆಳೆಯ ಮಾರಾಯ. ಹೊನ್ನಾವರ ಮೂಲದ ಬಹುಮುಖ ಪ್ರತಿಭಾಶಾಲಿ ನಿಸ್ಸಂದೇಹವಾಗಿ, ಸಾಹಿತ್ಯ ಕಲೆ ರಂಗಭೂಮಿ ಮಾತ್ರವಲ್ಲದೆ ಇನ್ನಿತರೇ ಸೃಜನಶೀಲ ಪ್ರಕಾರಗಳನ್ನು ಶ್ರೀಮಂತಗೊಳಿಸಿರುವ ಸಹೃದಯಿಗಳು ಅವರು. ನಮ್ಮ ಈ ಯಾಜಿ ಪ್ರಕಾಶನದ ಗಣೇಶ ನನ್ನ ಪ್ರಾಚೀನ ಗೆಳೆಯ. ಕನ್ನಡ ವಿಶ್ವವಿದ್ಯಾಲಯಕ್ಕೆ ಬರುವ ಪೂರ್ವದಲ್ಲೆ ಈ ವಾಮನ ಬೆಂಗಳೂರು ಮತ್ತಿತರ ಕಡೆ ರಂಗಭೂಮೀಲಿ ಕ್ರಿಯಾಶೀಲರಾಗಿದ್ದರು. ಜೊತೆಗೆ ಅಪೂರ್ವ ಛಾಯಾಚಿತ್ರಗ್ರಾಹಕ. ನನ್ನ ಮಹತ್ವಾಕಾಂಕ್ಷೆಯ ಎಪಿಕ್ ಶೈಲಿ ಅರಮನೆ ಕಾದಂಬರಿಯ ಅಕ್ಷರ ಜೋಡಣೆ ಮತ್ತು ಅದರ ಪ್ರತಿಪುಟ ವಿನ್ಯಾಸ ಗೊಳಿಸಿದವರು ಈ ಯಾಜಿ ದಂಪತಿಗಳು. ಇವರು ಯಾಜಿ ಪ್ರಕಾಶನ ಆರಂಭಿಸಿ ನೂರಾರು ಮೌಲಿಕ ಕೃತಿಗಳನ ಪ್ರಕಟಿಸಿ ಎಲ್ಲರಿಂದಲೂ ಸೈ ಅನ್ನಿಸಿಕೊಂಡಿದ್ದಾರೆ. ಪ್ರತಿಸಲ ಕಂಡಾಗಲೂ ನಿನ್ನ ನಾಮಸ್ಮರಣೆ ಮಾಡದೆ ಮಾತು ಆರಂಭಿಸುವುದಿಲ್ಲ. ಇವರಿಗೆ ನಿನ್ನ ಮೇಲೆ ಅಷ್ಟೊಂದು ಪ್ರೀತಿ ಮಾರಾಯ.
ಗಣೇಶ್ ದಂಗೆಯ ಪ್ರಿಂಟೌಟ್ ಕಳಿಸುವ ಪೂರ್ವದಲ್ಲೆ ನಾನು ಅದನ್ನು ಡೌನ್‌ಲೋಡ್ ಮಾಡಿಕೊಂಡು ಮುವ್ವತ್ತು ಹೆಚ್ಚು ಪುಟಗಳನ್ನು ಓದಿದ್ದೆ. ಜನಪ್ರಿಯ ಸಿನೆಮಾ ಮಾಡೋದಕ್ಕೆ ಹೇಳಿ ಮಾಡಿಸಿದಂತಿದೆ ಅಂತ ಹೇಳಿದ್ದೊಂದೆ ತಡ ಗಣೇಶ ಆ ಸಾಹಸಾನ ಸ್ವಾರಸ್ಯಪೂರ್ಣವಾಗಿ ವಿವರಿಸಿದರು. ಹೌದು ಈ ನವರಸಭರಿತ ದಂಗೆ ಕಾದಂಬರಿ ಸಮರ್ಥ ನಿರ್ದೇಶಕನ ಕೈಲಿ ಸಿಕ್ಕರೆ ಒಳ್ಳೆ ಸಿನೆಮಾ ಆಗೋದಂತು ಗ್ಯಾರಂಟಿ.
ಸರಜೂ ನನಗು ಸಿನೆಮಾ ಅಂದರೆ ಪಂಚಪ್ರಾಣ. ನನ್ನ ಸಂಗ್ರಹದಲ್ಲಿ ಎರಡು ಸಹಸ್ರಕ್ಕು ಹೆಚ್ಚು ಸಿನೆಮಾಗಳಿವೆ. ದಿನಕ್ಕೊಂದಾದರು ಸಿನೆಮಾ ನೋಡೋದು ನನ್ನ ದಿನಚರಿಯ ಪ್ರಮುಖ ಭಾಗ. ಸಿನೆಮಾ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವುದು. ಸಿನೆಮಾ ಮನುಷ್ಯನನ್ನು ಅತ್ಯುತ್ತಮ ನಾಗರಿಕನನ್ನಾಗಿಸುವುದು, ಸಿನೆಮಾ ನೋಡುವವರು ಇರುವ ದೇಶ ಸುಭಿಕ್ಷ. ಸಿನೆಮಾ ನೋಡುವವರು ಸಾತ್ವಿಕರಾಗುವವರು. ಇದು ನನ್ನ ಫಿಲಾಸಫಿ, ಇದು ನನ್ನ ಸಿದ್ಧಾಂತ.
ದಂಗೆನ ಓದಿದೆ, ತ್ರಾಸನ್ನಿಸಲಿಲ್ಲ, ಕಾದಂಬರಿ ಒಳಗಿನ ಕಥೆ, ಆದರೆ ಅದು ಕಥೆ ಅಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಐತಿಹಾಸಿಕ ವಿದ್ಯಮಾನಗಳು ಕೃತಿಯಲ್ಲಿವೆ. ಆದ್ದರಿಂದ ಇದು ಐತಿಹಾಸಿಕವು ಹೌದು, ಸ್ವಾತಂತ್ರ್ಯ ಹೋರಾಟದ ಕಥೆಯೂ ಹೌದು, ಜೊತೆಗೆ ಬ್ರಿಟೀಷರ ಅಧೀನದಲ್ಲಿದ್ದ ಚಿಕ್ಕಪುಟ್ಟ ಸಂಸ್ಥಾನಿಕರ ಆಡಳಿತದ ವೈಖರಿಯ ಚಿತ್ರಣವು ಹೌದು. ವಿಜಯನಗರ ಸಾಮ್ರಾಜ್ಯ ಪತನಾನಂತರ ಸಾಮಾಜಿಕ ಅರಾಜಕತೆ ಉಂಟಾಯಿತು. ಬಲಿಷ್ಠ ಪಾಳ್ಳೇಪಟ್ಟುಗಳು ಆ ಅರಾಜಕತೆ ಲಾಭ ಪಡೆದವು. ಉತ್ತರದಲ್ಲಿ ಪೇಶ್ವೆಗಳು, ದಕ್ಷಿಣದಲ್ಲಿ ಹೈದರಾಲಿ ಟಿಪ್ಪು ಸುಲ್ತಾನರು ಪಾಳ್ಳೇಪಟ್ಟುಗಳ ಮೇಲೆ ಬಿಗಿ ಹಿಡಿತ ಸಾಧಿಸಿದರು. ಪೇಶ್ವೆಗಳು ಮತ್ತು ಟಿಪ್ಪುಸುಲ್ತಾನರ ಪತನದ ಬಳಿಕ ಇಂಡಿಯಾ ಸಂಪೂರ್ಣವಾಗಿ ಈಸ್ಟ್ ಇಂಡಿಯಾ ಕಂಪನಿ ತೆಕ್ಕೆಗೆ ಬಂತು. ಸಹಾಯಕ ಸೈನ್ಯ ಪದ್ಧತಿ, ದತ್ತು ನಿಷೇಧ ಮತ್ತಿತರ ಕಾನೂನುಗಳನ್ನು ಜಾರಿಗೊಳಿಸಿ ತಮ್ಮ ಅಧೀನದ ಸಂಸ್ಥಾನಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸಿದ್ದು ಬ್ರಿಟೀಷರು. ಜಮಖಂಡಿ ರಾಮದುರ್ಗ ನರಗುಂದ ಇವೇ ಮೊದಲಾದ ಸಂಸ್ಥಾನಗಳ ಪ್ರತಿಕಥನಗಳು ಅವುಗಳ ಆಂತರಿಕ ಕಲಹಗಳು ರೋಚಕವಾಗಿವೆ. ಈ ದಂಗೆಯಲ್ಲಿ ಗೌರೀಪುರ ಹೆಸರಿನ ಸಂಸ್ಥಾನ ಸಹ ಅವುಗಳಿಗಿಂತ ಭಿನ್ನವಲ್ಲ. ಜರ್ಮನ್ ದಾಸ್ ಬರೆದಿರುವ ಮಹಾರಾಜಾಸ್, ಮಹಾರಾಣೀಸ್ ಕೃತಿಗಳು ಈ ದೇಶದ ಚಿಕ್ಕಪುಟ್ಟ ಸಂಸ್ಥಾನಗಳ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಅವನ್ನು ನೀನು ಓದಿರಲೂಬಹುದು. ಕೆಲವು ರಾಜರುಗಳು ಆರ್ಥಿಕ ತೊಂದರೆ ಪರಿಹರಿಸಿ ಕೊಳ್ಳಲು ಕಳ್ಳರ ಪಿಂಡಾರಿಗಳ ಥಗ್‌ಗಳ ನೆರವು ಪಡೆಯುವ ವಿವರಗಳು ಮೆಡೋಸ್ ಟೇಲರ್‌ನ ಕನ್‌ಫೆಷನ್ ಆಫ್ ಥಗ್ ಕೃತಿಯಲ್ಲಿದೆ.
ದಂಗೆಯಲ್ಲಿನ ಗೌರೀಪುರ ಸಂಸ್ಥಾನ ಸಹ ಅವುಗಳಿಗಿಂತ ಭಿನ್ನವಿಲ್ಲ. ಇಲ್ಲಿನ ಸಂಗ್ರಾಮಸಿಂಹ ಹೆಸರಿನ ಸಂಸ್ಥಾನಿಕ ಕ್ರೂರಿ, ಕಾಮ ಪಿಶಾಚಿ. ಹಂಬೀರ್ ಹೆಸರಿನ ಪೋಲಿಸ್ ಆಫೀಸರ್ ಸಹ ಪರಮ ನೀಚ ಮತ್ತು ತಲೆ ಹಿಡುಕ. ಇವರಿಬ್ಬರ ಚಿತ್ರಣ ಮೈನವಿರೇಳಿಸುವಂತಿದೆ. ಸೂರ್ಯವಂಶಿಯ ಕೊಲೆ ಮೂಲಕ ಕಥೆ ಆರಂಭವಾಗುತ್ತದೆ. ಇಲ್ಲಿ ದುಷ್ಟರು ಇರುವಂತೆ ಶಂಕರರಾವು ಹೆಸರಿನ ದಿವಾನ ಇದ್ದಾನೆ. ಈತ ಸಭ್ಯ ಮತ್ತು ಅಸಹಾಯಕ. ಈತನ ಪ್ರಯತ್ನದ ಫಲ ಗೆಳೆಯನ ಮಗ ವಸಂತ ಸರ್ಕಾರಿ ವೈದ್ಯನೆಂದು ಗೌರೀಪುರದಲ್ಲಿ ನೇಮಕವಾಗುತ್ತಾನೆ. ಈತ ವೈದ್ಯನಷ್ಟೆ ಅಲ್ಲ, ಪ್ರಗತಿಪರ ಚಿಂತಕ, ರಾಷ್ಟ್ರಪ್ರೇಮಿ. ವಸಂತ ಈ ಕಾದಂಬರಿಯ ನಾಯಕ. ಶಂಕರರಾವು ದಂಪತಿಗಳಿಗೆ ಗಾಯತ್ರಿ ಹೆಸರಿನ ಮಗಳಿದ್ದಾಳೆ, ಆಕೆ ಈ ಕಾದಂಬರಿಯ ದುರಂತ ನಾಯಕಿ. ಗಾಯತ್ರಿಯ ಅಂದ ಚೆಂದವನ್ನು ಕವಿಯಾದ ನೀನು ಹೃದಯಸ್ಪರ್ಶಿಯಾಗಿ ವರ್ಣಿಸಿರುವಿ. ಆದರೆ ಆಕೆ ಸಂಗ್ರಾಮಸಿಂಹನಿಂದ ಅತ್ಯಾಚಾರಕ್ಕೊಳಗಾಗಿ ಸಾಯುತ್ತಾಳೆ. ಆಕೆ ಸಾವು ವಸಂತನನ್ನು ಸ್ವಾತಂತ್ರ್ಯ ಹೋರಾಟಗಾರನನ್ನಾಗಿ ಪರಿವರ್ತಿಸುತ್ತದೆ. ಹಂಬೀರ್ ಸಂಸ್ಥಾನಿಕನ ಪತ್ನಿ(ರಾಣಿ ಅಮರಜಾದೇವಿ) ಜೊತೆ ಮಲಗಿರುವ ದೃಶ್ಯವನು ನೋಡಿದ ಬಳಕ ಸಂಗ್ರಾಮಸಿಂಹನ ಮನಃಪರಿವರ್ತನೆ ಆಗಬಹುದಿತ್ತಲ್ಲವೆ! ಅದು ಆಗುವುದಿಲ್ಲ. ಮುಂದೆ ಆಳುವ ವ್ಯವಸ್ಥೆಯ ಕ್ರೌರ್ಯ ಗೌರೀಪುರ ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಆಸ್ಪದ ಕಲ್ಪಿಸುತ್ತದೆ. ವಸಂತನ ನೇತೃತ್ವದಲ್ಲಿ ಅಪಾರ ಸಂಖ್ಯೇಲಿದ್ದ ಪ್ರಜೆಗಳು ರಾಜವಾಡೆ ಮೇಲೆ ದಾಳಿ ನಡೆಸುವರು ಅನ್ನುವಲ್ಲಿಗೆ ಕಾದಂಬರಿ ಮುಗಿಯುವುದು.
ಇಷ್ಟು ಕಾದಂಬರಿಯ ಒಳ ಹೂರಣ. ಇಲ್ಲಿ ಆಳುವ ವ್ಯವಸ್ಥೆಯ ದಬ್ಬಾಳಿಕೆ ಕ್ರೌರ್ಯ ಅತ್ಯಾಚಾರ ಕೊಲೆಗಳು, ಅದೆ ವ್ಯವಸ್ಥೆಯೊಳಗೆ ಪ್ರತಿಭಟನಾ ಸಾಮಾಗ್ರಿಗಳು, ಪರಸ್ಪರ ಪ್ರೇಮಿಸುವ ಆದರ್ಶ ಯುವ ಮನಸ್ಸುಗಳು, ದೇಶಭಕ್ತಿ! ಈ ಎಲ್ಲಾ ಪರಿಕರಗಳನ್ನು ಕಥಾ ಹಂದರಕ್ಕೆ ಬಂಧಿಸಲಾಗಿದೆ. ಇಲ್ಲಿನ ಭಾಷೆ ಸರಳ. ರೋಚಕತೆಯಿಂದ ಕಾದಂಬರಿ ಒಂದೇ ಗುಕ್ಕಿಗೆ ಓದಿಸಿ ಕೊಳ್ಳುತ್ತದೆ. ಆದರೆ ಓದಿದ ಬಳಿಕ ಓದುಗನ ಮನಸ್ಸಲ್ಲಿ ಉಳಿಯುವುದು ಏನು ಎಂಬುದು ಯಕ್ಷಪ್ರಶ್ನೆ. ಈ ಪ್ರಶ್ನೆಗೆ ನೀನೇ ಸಮಾಧಾನ ನೀಡಬೇಕು. ಕಾರಣ ನೀನು ಪಕ್ವ ಅನುಭವಸ್ಥ ಬರಹಗಾರ, ಕಪ್ಪು ಬಿಳುಪುಗಳ ನಡುವಿನ ಅಂತರ ನಿನಗೆ ಗೊತ್ತು. ನಿನ್ನ ಗೌರೀಪುರ ಹೆಸರಿನ ಇನ್ನೊಂದು ಕಾದಂಬರಿ ಇದಕ್ಕಿಂತ ಭಿನ್ನವಿದೆ. ಆದರೆ ನೀನು ಇದನ್ನು ಉದ್ದೇಶಪೂರ್ವಕವಾಗಿ ಸಿನಿಮೀಯವಾಗಿ ಬರೆದಿರುವಿ. ಹೀಗೆ ಆರಂಭಿಸಿ ಹಾಗೆ ಮುಗಿಸಿರುವಿ. ಈ ಕಾದಂಬರಿ ಸಮರ್ಥ ನಿರ್ದೇಶಕರ ಗಮನ ಸೆಳೆಯಬೇಕು. ಆ ಸಂಭವನೀಯ ಸಿನೆಮಾದ ಚಿತ್ರಕತೆ ಸಂಭಾಷಣೆನ ನೀನೆ ಬರೆದರೆ ಇನ್ನು ಒಳ್ಳೆಯದು.
ಗೆಳೆಯ ಸರಜೂ ಒಂದೆ ಮಾತಲ್ಲಿ ಹೇಳುವುದಾದರೆ ನಿನ್ನ ಈ ಹೊಸ ಕೃತಿ ನನ್ನೊಳಗಿನ ಸಾಮಾನ್ಯ ವಾಚಕನಿಗೆ ಹಿಡಿಸಿತು, ನೀನು ನಮ್ಮ ನಡುವಿನ ಪ್ರಾಲಿಫಿಕ್ ರೈಟರ್ರು. ನೀನು ಭಾಷೆಯನ್ನು ಬರೆಯುವ ಲೇಖಕ. ನಿನ್ನಂಥವರಿಂದ ಭಾಷೆ ಉಳಿಯುವುದು ಬೆಳೆಯುವುದು. ಈ ಕಾದಂಬರಿ ಒತ್ತಟ್ಟಿಗಿರಲಿ, ಹ್ಹಾಂ ಅಂದಹಾಗೆ ಫೋನಲ್ಲಿ ಮರಾಠಿ ಪ್ರವಾಸ ಕಥನ ಕುರಿತು ಹೇಳಿದೆಯಲ್ಲ. ಅದನ್ನು ಕೂಡಲೆ ಸೃಜನಶೀಲವಾಗಿ ಅನುವಾದಿಸು. ಅದು ಇದಕ್ಕಿಂತ ವೆರ್ರಿ ಇಂಪಾರ್ಟೆಂಟು.
ಓದಿಸಿಕೊಳ್ಳುವ ಕಥೆ ಕಾದಂಬರಿಗಳಿಗೆ ಮುನ್ನುಡಿ ಹಂಗು ಬೇಕಿಲ್ಲ. ಅವೆಲ್ಲ ಸಹಜವಾಗಿ ವಾಚಕನ ಹೃದಯನ ಗೆಲ್ಲಬೇಕು, ಆವರಿಸಿಕೊಳ್ಳಬೇಕು. ನಿನ್ನ ಮೇಲಿನ ಪ್ರೀತಿಗಾಗಿ ಇಷ್ಟೆಲ್ಲ ಬರೆದೆ. ದಂಗೆ ಎಂಬ ಹೂವಿನ ಜೊತೆ ಮುನ್ನುಡಿ ಎಂಬ ನಾರು ಸಹ ಸ್ವರ್ಗ ಸೇರಲಿ ಎಂಬ ಉದ್ದೇಶದಿಂದ. ನೀನು ವಿರಮಿಸುವ ಲೇಖಕ ಅಲ್ಲ. ನೀನು ಅವಿಶ್ರಾಂತ ಬರಹಗಾರ. ಬರೀ ಬರೀ ಬರೀ.. ಗೆಳೆಯನಾಗಿ ನಾನು ಅಷ್ಟು ಮಾತ್ರ ಹೇಳುವುದು. ಇಷ್ಟೆಲ್ಲ ಬರೆಯಲು ಸುವರ್ಣಾವಕಾಶ ನೀಡಿದ ನಿನಗೆ ಕೃತಜ್ಞತೆಗಳನ್ನು ಹೇಳುತ್ತ..
–ಕುಂವೀ
ಕಾದಂಬರಿ ಓದುವ ಮುನ್ನ
ನಾನಾಗ ಕನ್ನಡದ ಪ್ರಮುಖ ದಿನಪತ್ರಿಕೆಯಾದ ಸಂಯುಕ್ತ ಕರ್ನಾಟಕದ ಬೆಳಗಾವಿ ಜಿಲ್ಲೆಯ ಜಿಲ್ಲಾ ವರದಿಗಾರನಾಗಿದ್ದೆ. ಆಗ ಸಂಯುಕ್ತ ಕರ್ನಾಟಕದ ಸಂಪಾದಕರಾಗಿದ್ದವರು ಪ್ರಖ್ಯಾತ ಕಾದಂಬರಿಕಾರರಾಗಿದ್ದ ರಾವಬಹಾದ್ದೂರ ಅವರು. ಅವರು ಬರೆದ ಗ್ರಾಮಾಯಣ ಎಂಬ ಕಾದಂಬರಿ ಅವರಿಗೆ ಭಾರೀ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ತಮ್ಮ ಯವ್ವನದ ದಿನಗಳಲ್ಲಿ ಅವರು ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕರಾಗಿ ಕೆಲಸ ಮಾಡಿದ್ದರು. ಆದರೆ ಒಂದೆಡೆ ಶಿಸ್ತಾಗಿ ಕೂತು ಕೆಲಸ ಮಾಡುವ ವೃತ್ತಿ ಅವರದಾಗಿರಲಿಲ್ಲ. ಅಲೆದಾಟವು ಅವರ ಪ್ರವೃತ್ತಿ ಆಗಿದ್ದರಿಂದ ಸಂಯುಕ್ತ ಕರ್ನಾಟಕದಲ್ಲಿ ಒಳ ಬಂದಂತೆಯೇ ಅವರು ಹೊರ ಹೋಗಿಬಿಟ್ಟಿದ್ದರು. ಅನಂತರ ಕಥೆ, ಕಾದಂಬರಿಗಳನ್ನು ಬರೆದು ತುಂಬಾ ಪ್ರಸಿದ್ಧಿಗೆ ಬಂದರು.
ಆಗ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸು ಅವರಿಗೆ ಸಮೀಪದವರಾಗಿ ಆಗಾಗ ವಿಧಾನಸೌಧದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದರು. ಆಗ ಸಂಯುಕ್ತ ಕರ್ನಾಟಕ ಪತ್ರಿಕೆಯ ಮಾಲೀಕತ್ವವು ಬದಲಾಗಿ ಆರಂಭದಲ್ಲಿ ಖಾದ್ರಿ ಶಾಮಣ್ಣನವರು ಅನಂತರ ಪ.ಸು.ಭಟ್ಟರವರು ಸಂಪಾದಕರಾಗಿದ್ದರು. ದೇವರಾಜ ಅರಸು ಅವರಿಗೆ ಸಮೀಪದವರಾಗಿದ್ದರಿಂದ ರಾವಬಹಾದ್ದೂರರು ಸಂಪಾದಕರ ಕುರ್ಚಿಗೆ ಬಂದು ಕುಳಿತುಕೊಂಡಿದ್ದರು. ಶ್ರೇಷ್ಠ ಕಾದಂಬರಿಕಾರರಾಗಿದ್ದಂತೆಯೇ ಅವರು ಸರ್ವಶ್ರೇಷ್ಠ ಬೇಶಿಸ್ತಿನ ಮನುಷ್ಯರಾಗಿದ್ದರು. ಅಚ್ಚುಕಟ್ಟುತನ ಮತ್ತು ತುಂಬ ಶಿಸ್ತನ್ನು ಅಪೇಕ್ಷಿಸುವ ಸಂಪಾದಕ ಪದವು ತಮ್ಮಂಥವರಿಗಲ್ಲ ಎಂಬ ಅರಿವು ಅವರಿಗಿದ್ದಂತೆ ತೋರುತ್ತದೆ. ಹೀಗಾಗಿ ಸಂಪಾದಕರ ಕುರ್ಚಿಯ ಮೇಲೆ ಕುಳಿತುಕೊಂಡಿದ್ದರೂ ಅವರೆಂದೂ ಸೀರಿಯಸ್ ಸಂಪಾದಕರಂತೆ ನಡೆದುಕೊಳ್ಳಲಿಲ್ಲ.
ಆಗ ಅವರು ಬೆಂಗಳೂರಿನ ರಾಮಕೃಷ್ಣ ಲಾಡ್ಜಿನ ಖಾಯಂ ನಿವಾಸಿ. ಅವರ ಜೊತೆಗೆ ಅವರ ಆಪ್ತ ಗೆಳೆಯ ಸತ್ಯಕಾಮ ಇರುತ್ತಿದ್ದರು. ಸತ್ಯಕಾಮ ತುಂಬಾ ಸೀರಿಯಸ್ ಲೇಖಕ, ಕಾದಂಬರಿಕಾರ. ಚಿಕ್ಕ ಚಿಕ್ಕ ವಾಕ್ಯಗಳ ಅವರ ಕಾದಂಬರಿಗಳು ಓದುಗರನ್ನು ಹುಚ್ಚು ಹಿಡಿಸಿದ್ದವು. ರಾವಬಹಾದ್ದೂರರ ಕಾದಂಬರಿಗಳು ದಟ್ಟವಾದ ಗ್ರಾಮೀಣ ಅನುಭವವನ್ನು ಅನಾವರಣ ಗೊಳಿಸಿದ್ದವು. ರಾವಬಹಾದ್ದೂರರ ಗ್ರಾಮಾಯಣ ಕಾದಂಬರಿಯು ಹಳ್ಳಿಯ ಜನಜೀವನದ ರಾಮಾಯಣವೇ ಆಗಿದ್ದಿತ್ತು.
ವರ್ಷಕ್ಕೆ ಮೂರು ಅಥವಾ ನಾಲ್ಕು ಸಲ ಜಿಲ್ಲಾ ವರದಿಗಾರರ ಮೀಟಿಂಗು ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಆ ಮೀಟಿಂಗೆಂದರೆ ಒಂದು ರೀತಿಯಲ್ಲಿ ವರದಿಗಾರರಿಗೆ ಪರೀಕ್ಷೆ ಇದ್ದಂತೆ. ಆ ಮೀಟಿಂಗುಗಳಲ್ಲಿ ಪತ್ರಿಕೆಯ ಒಟ್ಟು ಸ್ಥಿತಿಗತಿಗಳು ಚರ್ಚಿಸಲ್ಪಡುತ್ತಿದ್ದವು. ಹಿಂದೆ ಆಗಿಹೋಗಿರುವ ಸೋಲುಗಳು, ವೈಫಲ್ಯಗಳು ಮುಂದೆ ಬರಬಹುದಾದ ಚಾಲೆಂಜ್‌ಗಳು -ಹೀಗೆ ಕಾರ್ಯಯೋಜನೆಗಳು ಈ ಮೀಟಿಂಗುಗಳಲ್ಲಿ ನಿರ್ಧರಿಸಲ್ಪಡುತ್ತಿದ್ದವು.
ಇಂತಹದ್ದೇ ಒಂದು ಮೀಟಿಂಗಿಗೆ ಬೆಳಗಾವಿಯಿಂದ ಬೆಂಗಳೂರಿಗೆ ನಾನು ಹೋಗಿದ್ದೆ. ಆಗ ನನ್ನ ಜೊತೆಗೆ ಕಾದಂಬರಿಕಾರ ದು.ನಿಂ.ಬೆಳಗಲಿಯವರೂ ಬಂದಿದ್ದರು. ಬೆಳಗಲಿಯವರು ಬನಹಟ್ಟಿಯಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದರೂ ಪ್ರತಿ ತಿಂಗಳು ಬೆಳಗಾವಿಗೆ ಬರುತ್ತಿದ್ದರು. ಅವರ ವಾಸ್ತವ್ಯ ನನ್ನ ರೂಮಿನಲ್ಲಿಯೇ. ಅವರು ರಾವಬಹಾದ್ದೂರರಿಗೂ ತುಂಬ ಸಮೀಪದ ಗೆಳೆಯರಾಗಿದ್ದರು. ಇವರು ಬನಹಟ್ಟಿಯವರಾದರೆ ರಾವಬಹಾದ್ದೂರರು ಜಮಖಂಡಿಯವರು; ಪರಸ್ಪರ ಹತ್ತು ಹನ್ನೆರಡು ಕಿಲೋಮೀಟರಿನ ಊರುಗಳು. ಬೆಳಗಲಿಯವರು ಸತ್ಯಕಾಮರಿಗೂ ಬೇಕಾದವರಾಗಿದ್ದರು.
ಸಂಯುಕ್ತ ಕರ್ನಾಟಕದ ಅಧಿಕೃತ ಮೀಟಿಂಗ್ ಮುಗಿದ ನಂತರ ಅಂದು ಸಂಜೆ ನಾನು, ಬೆಳಗಲಿ ಇಬ್ಬರೂ ರಾವಬಹಾದ್ದೂರರ ರೂಮಿಗೆ ಹೋದೆವು. ರಾವಬಹಾದ್ದೂರರ ಜೊತೆಗೆ ಎಂದಿನಂತೆಯೇ ಸತ್ಯಕಾಮರೂ ಇದ್ದರು. ಅದು ಇದು ಮಾತಾಡುತ್ತಿರುವಾಗ ರಾವಬಹಾದ್ದೂರರು ಸ್ವಾತಂತ್ರ್ಯಪೂರ್ವದಲ್ಲಿ ಬೆಳಗಾವಿ ಜಿಲ್ಲೆಯ ಸಂಸ್ಥಾನದಲ್ಲಿ ನಡೆದ ಒಂದು ಸತ್ಯ ಕಥೆಯನ್ನು ಹೇಳಿದರು. ಸಂಸ್ಥಾನಿಕನ ದರ್ಪ, ಸರ್ವಾಧಿಕಾರತ್ವ, ಕ್ರೂರತನ ಇವುಗಳಿಂದ ರೋಸಿಹೋದ ಅಲ್ಲಿಯ ಪ್ರಜೆಗಳು ದಂಗೆಯೆದ್ದು ಸಂಸ್ಥಾನಿಕನನ್ನು ಕೊಂದು ಹಾಕುತ್ತಾರೆ. ಇದನ್ನು ಹೇಳಿ ಇದು ಒಂದು ಕಾದಂಬರಿಯನ್ನಾಗಿ ಮಾಡಬಹುದು ಎಂದರು. ಸುಮಾರು ೪೦ ವರ್ಷಗಳ ಹಿಂದೆ ರಾವಬಹಾದ್ದೂರರಿಂದ ಕೇಳಿದ ಕತೆ ನನ್ನ ಮನದಲ್ಲಿ ಭದ್ರವಾಗಿ ಕೂತಿತ್ತು. ಆ ಕಥೆಗೆ ಕಲ್ಪನೆಯ ಚಿತ್ತಾರ ಬಿಡಿಸಿ ಅದಕ್ಕೊಂದು ರೂಪು ಕೊಟ್ಟು ಮನದಲ್ಲಿ ಕೂತಿದ್ದ ಪಾತ್ರಗಳನ್ನು ಅಕ್ಷರರೂಪದಲ್ಲಿ ಇಳಿಸಿದ್ದೇನೆ. ಅವರು ಹೇಳಿದ ಕಥೆಯ ಎಳೆಯೊಂದನ್ನೇ ನಾನಿಲ್ಲಿ ತೆಗೆದುಕೊಂಡಿದ್ದು; ಉಳಿದುದೆಲ್ಲ ನನ್ನ ಕಲ್ಪನಾ ಸಾಮ್ರಾಜ್ಯವು. ಕಾದಂಬರಿಯ ಸ್ಕ್ರಿಪ್ಟನ್ನು ಓದಿ ಹೇಳಬೇಕೆಂದರೆ ರಾವಬಹಾದ್ದೂರರು ಇಲ್ಲ; ಸತ್ಯಕಾಮರೂ ಇಲ್ಲ; ಬೆಳಗಲಿಯವರೂ ಇಲ್ಲ. ಈ ಮೂವರು ಎಲ್ಲಿದ್ದಾರೆಯೋ ಅಲ್ಲಿಂದಲೇ ಸಂತೋಷ ಪಡುತ್ತಾರೆ ಎಂದು ನಾನು ನಂಬಿದ್ದೇನೆ.
ಈ ಕೃತಿಯನ್ನು ಯಾಜಿ ಪ್ರಕಾಶನದ ಸವಿತಾ ಯಾಜಿ ಅವರು ಪ್ರಕಟಿಸಿದ್ದಾರೆ. ಅವರಿಗೆ ಹಾಗೂ ಗೆಳೆಯ ಗಣೇಶ್ ಯಾಜಿ ಅವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಈ ಕಾದಂಬರಿಯನ್ನು ಕನ್ನಡ ಕಾದಂಬರಿ ಕ್ಷೇತ್ರದ ದಿಗ್ಗಜರಾದ ರಾಘವೇಂದ್ರ ಪಾಟೀಲ, ರೇಖಾ ಕಾಖಂಡಕಿ, ಬಾಳಾಸಾಹೇಬ ಲೋಕಾಪುರ, ಪಿ.ಚಂದ್ರಿಕ ಹಾಗೂ ಪ್ರಸಿದ್ಧ ಅನುವಾದಕರಾದ ಚಂದ್ರಕಾಂತ ಪೋಕಳೆ ಇವರು ಮೊದಲ ಓದುಗರಾಗಿ ಓದಿದ್ದಾರೆ; ಓದಿ ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ. ಅವರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಕಾದಂಬರಿಗೆ ಮುನ್ನುಡಿಯನ್ನು ಬರೆಯಲು ನನ್ನ ಪ್ರಾಚೀನ ಗೆಳೆಯ, ಪ್ರಖ್ಯಾತ ಕಾದಂಬರಿಕಾರ ಕುಂ.ವೀರಭದ್ರಪ್ಪನಿಗೆ ಕೇಳಿದೆ. ಅವನು ಮುನ್ನುಡಿ ರೂಪದ ಒಂದು ಸುಂದರವಾದ ಲಲಿತ ಪ್ರಬಂಧವನ್ನೇ ಬರೆದು ರವಾನಿಸಿದ್ದಾನೆ. ಕೃತಿಗೆ ಈ ರೀತಿಯ ಭಿನ್ನವಾದ ಮುನ್ನುಡಿಯನ್ನೂ ಬರೆಯಬಹುದೆಂಬ ಹೊಸ ಮಾರ್ಗವನ್ನು ತೋರಿಸಿದ್ದಾನೆ. ಶತ ಶತಮಾನಗಳ ಕಾಲದ ಅವನ ಈ ಪ್ರೀತಿಗೆ ಕೃತಜ್ಞತೆಗಳು.
ಗೆಳೆಯರಾದ ನಾಡೋಜ ಡಾ. ಮನು ಬಳಿಗಾರ, ಸತೀಶ್ ಕುಲಕರ್ಣಿ, ಎಂ.ಕೆ.ಜೈನಾಪುರ, ರವಿ ಕೋಟಾರಗಸ್ತಿ, ಡಾ. ರಾಮಕೃಷ್ಣ ಮರಾಠೆ, ಡಾ. ಎ.ಬಿ.ಘಾಟಗೆ ಅವರಿಗೂ ಕೃತಜ್ಞ ನಾಗಿದ್ದೇನೆ.
ಬಾಳ ಸಂಗಾತಿ ಸುಮಾ, ಮಕ್ಕಳಾದ ಸಂಸ್ಕೃತಿ-ರಾಕೇಶ್ ರಾಮಗಡ, ಶ್ರೇಯಸ್-ಸಂತೋಷ್ ಪಾಟೀಲ್ ಹಾಗೂ ಮೊಮ್ಮಕ್ಕಳಾದ ಪ್ರಿಷಾ ಹಾಗೂ ಸಿರಿ ಇವರೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿ ಆಗಿರುವೆ.
–ಸರಜೂ ಕಾಟ್ಕರ್
Reviews
There are no reviews yet.