ಕತ್ತಲೆ ಲೋಕವನು ಬೆಳಗಿದ ದೀಪ
ಬೆಳಗಾವಿ ಜಿಲ್ಲೆಯ ದಲಿತರಿಗೂ ಬೇರೆ ಜಿಲ್ಲೆಗಳ ದಲಿತರಿಗೂ ಒಂದು ಮೂಲಭೂತವಾದ ವ್ಯತ್ಯಾಸವನ್ನು ನಾನು ಬೆಳಗಾವಿಗೆ ಬಂದಂದಿನಿಂದಲೂ ಗಮನಿಸಿದ್ದೆ. ಇಲ್ಲಿಯ ದಲಿತರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಉಚ್ಚ ಸ್ಥರದಲ್ಲಿ ದ್ದವರು. ಇಲ್ಲಿಯ ದಲಿತರ ಅಡ್ಡ ಹೆಸರುಗಳೂ(Siಡಿ ಟಿಚಿmes) ಉಚ್ಚ ವರ್ಣದವರ ಅಡ್ಡ ಹೆಸರುಗಳನ್ನು ಹೋಲುತ್ತಿದ್ದುದನ್ನು ಗಮನಿಸುವಂತಹ ಅಚ್ಚರಿಯ ಸಂಗತಿ. ಈ ಕ್ರಾಂತಿಗೆ ಕಾರಣರಾದವರು ದೇವರಾಯ ಇಂಗಳೆ. ತನ್ನ ಅಗಾಧ ಕಲ್ಪಕತೆಯಿಂದ ಅವರು ಇಲ್ಲಿಯ ದಲಿತರಲ್ಲಿ ಅರಿವಿನ ಜ್ಯೋತಿಯನ್ನು ಬೆಳಗಿಸಿದರು. ಕನ್ನಡ, ಮರಾಠಿ, ಇಂಗ್ಲಿಷ್ಗಳಲ್ಲಿ ಪಾಂಡಿತ್ಯವನ್ನು ಗಳಿಸಿದ್ದ ದೇವರಾಯ, ಶಿಕ್ಷಣದ ಮಹತ್ವವನ್ನು ಅರಿತವರು. ದಲಿತರ ದಾಸ ವಿಮುಕ್ತಿಗೆ ಶಿಕ್ಷಣವೊಂದೇ ರಾಮಬಾಣವೆಂದು ನಂಬಿದ್ದ ದೇವರಾಯ ಹಳ್ಳಿ-ಹಳ್ಳಿಗಳಲ್ಲಿ ಶಾಲೆಗಳನ್ನು ಆರಂಭಿಸಿ ದಲಿತ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಲು ಹೆಣಗಿದವರು.
ದಲಿತರಿಗೆ ಶಾಪವಾಗಿರುವ ದೇವದಾಸಿ ಪದ್ಧತಿಯನ್ನು ಬೇರುಸಹಿತ ಕಿತ್ತೊಗೆಯಲು ದೇವರಾಯ ಪಟ್ಟಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ಅವರು ನಾಟಕ ಕಂಪನಿ ಕಟ್ಟಿ ಊರೂರು, ಹೊಲಗೇರಿಗಳನ್ನು ಅಡ್ಡಾಡಿ ನಾಟಕದ ಮೂಲಕ ಜನರಲ್ಲಿ ಜಾಗೃತಿಯನ್ನುಂಟು ಮಾಡಲು ಯತ್ನಿಸಿದರು. ಹಾಡು, ಕವಿತೆ ಬರೆದು ಅದನ್ನು ಸಮಾಜ ಸುಧಾರಣೆಗಾಗಿ ಉಪಯೋಗಿಸಿದರು. ಗೆಳೆಯರನ್ನು, ಸಮವಿಚಾರಿ ಜನರನ್ನು ಕಲೆಹಾಕಿ ದಲಿತರ ಸರ್ವತೋಮುಖ ಅಭಿವೃದ್ಧಿಗಾಗಿ ಯತ್ನಿಸಿದರು.
ದೇವದಾಸಿ ನಿರ್ಮೂಲನೆ ಬಗ್ಗೆ ಅವರು ಆರಂಭಿಸಿದ ಕಾರ್ಯವನ್ನು ಈಗ ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆ ಮುಂದುವರಿಸಿದೆ. ದೇವದಾಸಿ ಮಕ್ಕಳಿಗಾಗಿ ವಸತಿ ಶಾಲೆಯನ್ನು ಆರಂಭಿಸಿ ಅವರನ್ನು ಮನುಷ್ಯರನ್ನಾಗಿ ರೂಪಿಸುವ, ಸಮಾಜದಲ್ಲಿ ಅವರಿಗೆ ಗೌರವದ ಬದುಕು ನೀಡುವ ಕೆಲಸವನ್ನು ದೇವದಾಸಿ ವಿಮೋಚನಾ ಸಂಸ್ಥೆ ಆರಂಭಿಸಿದೆ. ದೇವರಾಯರ ಅರ್ಧ ನಿಂತ ಕೆಲಸವನ್ನು ಈ ಸಂಸ್ಥೆ ಪೂರ್ತಿ ಮಾಡುತ್ತಲಿದೆ ಎಂದು ಹೇಳಬಹುದು.
ದೇವರಾಯರಿಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜೊತೆಗೆ ಗೆಳೆತನವಿತ್ತು. ಅವರ ಬಗ್ಗೆ ಅಪಾರವಾದ ಒಲವು, ಪ್ರೀತಿ ಮತ್ತು ಅಭಿಮಾನಗಳಿದ್ದವು. ಬಾಬಾಸಾಹೇಬರನ್ನು ಚಿಕ್ಕೋಡಿ, ನಿಪ್ಪಾಣಿ ಮತ್ತು ಬೆಳಗಾವಿಗೆ ಕರೆಸಿ, ಅವರಿಂದ ಇಲ್ಲಿಯ ದಲಿತರಿಗೆ ಮಾರ್ಗದರ್ಶನ ಭಾಷಣಗಳನ್ನು ಏರ್ಪಡಿಸಿದ ಕೀರ್ತಿ ದೇವರಾಯರದ್ದು. ಬೆಳಗಾವಿ ಜಿಲ್ಲೆಯಲ್ಲಿ ಈಗ ರೂಪಿತಗೊಂಡಿರುವ ದಲಿತ ರಾಜಕಾರಣಿಗಳು ದೇವರಾಯರು ಅಂದು ಹಚ್ಚಿದ ಸಸಿಗಳೇ.
ಇಂತಹ ಕ್ರಾಂತಿಕಾರಿಯೊಬ್ಬನ ಬಗ್ಗೆ ಮೊಟ್ಟಮೊದಲು ನನಗೆ ಹೇಳಿದವರು ಎಂ.ಎನ್. ರಾಯಣ್ಣವರ್. ದೇವರಾಯರ ಜೀವನದ ಬಗ್ಗೆ ಯಾರಿಂದಲಾದರೂ ಪಿಎಚ್.ಡಿ ಮಾಡಿಸ ಬೇಕೆಂದು ಅವರ ಅದಮ್ಯ ಆಶೆಯಾಗಿತ್ತು. ನನ್ನ ಪಿಎಚ್.ಡಿ ಪ್ರಬಂಧ ಕನ್ನಡ-ಮರಾಠಿ ದಲಿತ ಸಾಹಿತ್ಯದಲ್ಲಿ ನಾನು ದೇವರಾಯರ ಬಗ್ಗೆ ಪ್ರಸ್ತಾಪಿಸಿದ್ದೇನೆ. ಅವರ ಸಾಹಿತ್ಯದ ಬಗ್ಗೆ ಚರ್ಚಿಸಿದ್ದೇನೆ. ಕರ್ನಾಟಕದ ಮೊಟ್ಟಮೊದಲ ದಲಿತ ಸಾಹಿತಿ ಎಂದು ಅವರನ್ನು ನನ್ನ ಸಂಶೋಧನೆಯಲ್ಲಿ ಗುರುತಿಸಿದ್ದೇನೆ.
ದೇವರಾಯರ ಬಗ್ಗೆ ಪ್ರತ್ಯೇಕ ಆತ್ಮಚರಿತ್ರೆ ರೂಪದ ಕಾದಂಬರಿಯೊಂದನ್ನು ಬರೆಯಬೇಕೆಂದು ನನ್ನ ಬಹುದಿನಗಳ ಆಶೆಯಾಗಿತ್ತು. ಒಂದಿಬ್ಬ ಸಾಹಿತಿಗಳಿಗೆ, ಸಿನಿಮಾ ನಿರ್ದೇಶಕರಿಗೆ ದೇವರಾಯರ ಜೀವನದ ಘಟನೆಗಳನ್ನು ಹೇಳಿದಾಗ ಅವರು ಇದೊಳ್ಳೆ ಸಿನಿಮಾ ಇದ್ದ ಹಾಗಿದೆಯಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಒಂದು ಸಿನಿಮಾಕ್ಕೆ ಬೇಕಾಗುವ ಎಲ್ಲ ಸರಕುಗಳನ್ನು ಹೊಂದಿರುವ ದೇವರಾಯರ ಜೀವನ ಚರಿತ್ರೆ ಅದ್ಭುತವಾದ ಕಥೆ. ಇಲ್ಲಿ ಕಥೆ ಚಕಚಕನೆ ಮುಂದುವರಿದು ಒಂದು ಘಟನೆಯಿಂದ ಇನ್ನೊಂದು ಘಟನೆಗೆ ಅನಿರೀಕ್ಷಿತವಾಗಿ ಬೆಳೆಯುತ್ತದೆ. ದೊಡ್ಡಾಟದ ರೀತಿಯಲ್ಲಿ ವಿಫುಲವಾದ ಪಾತ್ರಗಳು ಇಲ್ಲಿ ಬಂದು ಕಥೆಯನ್ನು ಶ್ರೀಮಂತಗೊಳಿಸುತ್ತವೆ.
ದೇವರಾಯ ಎಂದೂ ತನ್ನ ಬಗ್ಗೆ ತನ್ನ ಹೆಂಡತಿ ಮಕ್ಕಳ ಬಗ್ಗೆ ವಿಚಾರಿಸಿದವರಲ್ಲ; ಅವರದೇನಿದ್ದರೂ ಸಮಾಜ ಚಿಂತನೆ. ಇದರಿಂದ ಮನೆಯ ಕಡೆಗೆ ಅವರ ಲಕ್ಷ್ಯ ಕಡಿಮೆಯಾಗಿ ಅವರ ಮಕ್ಕಳು ಅನನ್ಯ ಬಡತನವನ್ನು ಅನುಭವಿಸಬೇಕಾಯಿತು. ಇಡೀ ಸಮಾಜದ ಕೋಹಿನೂರು ವಜ್ರ ಮನೆಯಲ್ಲಿ ಗಾಜಿಗೆ ಸಮವಾಯಿತು. ಆದರೆ ಈ ಬಗ್ಗೆ ಅವರ ಮಕ್ಕಳು ವಿಷಾದಪಟ್ಟುಕೊಳ್ಳಲಿಲ್ಲ. ತಮ್ಮ ತಂದೆ ಹೇಳಿದ ಸ್ವಾಭಿಮಾನದ ಬದುಕನ್ನು ಈಗಲೂ ಈ ಮಕ್ಕಳು ಬದುಕುತ್ತಿದ್ದಾರೆ. ಅವರ ಆದರ್ಶ ಅನುಕರಣೀಯ.
ಈ ಜೀವನ ಚರಿತ್ರೆಯನ್ನು ಒಂದು ದೀರ್ಘ ಕಥೆಯಂತೆ ಅಥವಾ ಒಂದು ಮಿನಿ ಕಾದಂಬರಿಯಂತೆ ಬರೆದಿದ್ದೇನೆ. ಇಲ್ಲಿ ಘಟನೆಗಳೆಲ್ಲ ಇತಿಹಾಸವಾಗಿರುವುದರಿಂದ ಇಲ್ಲಿ ಕಲ್ಪನೆಗೆ ಅವಕಾಶವಿರಲಿಲ್ಲ. ಆದರೆ ನಾನು ಕೆಲವೆಡೆ ಘಟನೆಗಳನ್ನು ಕಲ್ಪಿಸಿಕೊಂಡು ಮೂಲ ಇತಿಹಾಸಕ್ಕೆ ಧಕ್ಕೆಯಾಗದಂತೆ ಇಲ್ಲಿ ಅಳವಡಿಸಿಕೊಂಡಿದ್ದೇನೆ. ಹಲಕೆಲ ಪಾತ್ರಗಳು ನನ್ನಿಂದ ಸೃಷ್ಟಿಗೊಂಡು ಕಥೆಯ ಒಟ್ಟು ಆಶಯಕ್ಕೆ ಪೂರಕರಾಗುತ್ತಾರೆ. ಇತಿಹಾಸಕ್ಕೆ ಅಪಚಾರವಾಗದ ರೀತಿಯಲ್ಲಿ ಇಲ್ಲಿಯ ಕಲ್ಪನೆಯ ಪಾತ್ರಗಳು ಸ್ಟೇಜಿಗೆ ಬಂದು ತಮ್ಮ ಪಾತ್ರವನ್ನಾಡಿ ಹೋಗುತ್ತವೆ.
ಇಂತಹ ಅದ್ಭುತವಾದ ಕಥೆಯಲ್ಲಿ ನನ್ನ ಆಸಕ್ತಿಯನ್ನು ಕುದುರಿಸಿದ ಗೆಳೆಯ ಎಂ.ಎನ್. ರಾಯಣ್ಣವರ್ ಅವರಿಗೆ ನಾನು ಋಣಿಯಾಗಿದ್ದೇನೆ. ರಾಯಣ್ಣವರ್ ಕಂಡ ಕನಸನ್ನು ಮುಂದುವರಿಸಿದವರು ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿಜಾಪುರದ ನಿರ್ದೇಶಕರಾಗಿರುವ ಪ್ರಸಿದ್ಧ ಇತಿಹಾಸತಜ್ಞ ಪ್ರೊ. ಎಸ್.ಕೆ.ಕಲ್ಲೋಳಿಕರ್ ಅವರು. ದೇವರಾಯ ರಲ್ಲಿ ಅದಮ್ಯ ಆಸಕ್ತಿ ತೋರಿಸಿದ ಪ್ರೊ. ಕಲ್ಲೋಳಿಕರ್ ತಮ್ಮ ಇಬ್ಬರು ವಿದ್ಯಾರ್ಥಿಗಳಿಂದ ದೇವರಾಯರ ಮೇಲೆ ಎರಡು ಎಂಫಿಲ್ ಪ್ರಬಂಧಗಳನ್ನು ಮಾಡಿಸಿದ್ದಾರೆ. ನನ್ನ ಬರವಣಿಗೆ ಯಲ್ಲಿ ಈ ಎರಡೂ ಎಂಫಿಲ್ ಪ್ರಬಂಧಗಳ ಮಾಹಿತಿಗಳನ್ನು ಉಪಯೋಗಿಸಿಕೊಂಡಿದ್ದೇನೆ.
ಕಥೆಯನ್ನು ಕೇಳಿದ ಪ್ರೊ. ಕಲ್ಲೋಳಿಕರ್ ಅವರ ಸಹೋದರ ಶಂಭು ಕಲ್ಲೋಳಿಕರ್ ಸಂತೋಷಪಟ್ಟರು. ಶಂಭು ಕಲ್ಲೋಳಿಕರ್ ಹಿರಿಯ ಐಎಎಸ್ ಅಧಿಕಾರಿ. ತಮಿಳುನಾಡಿ ನಲ್ಲಿದ್ದಾರೆ. ಈ ಕಥೆಯನ್ನು ಒಂದು ಡಾಕ್ಯುಮೆಂಟ್ರಿ ತರಹ ಹಿಡಿದಿಡಲು ಯೋಚಿಸುತ್ತಿದ್ದೇನೆ ಎಂದು ಶಂಭು ಕಲ್ಲೋಳಿಕರ್ ಹೇಳಿದರು. ಅವರನ್ನು ಆ ದಿಸೆಯಲ್ಲಿ ಪ್ರೇರೇಪಿಸಿದವರು ಪಾಯಪ್ಪ ಮೇಘಣ್ಣವರ್. ಇವರೆಲ್ಲರಿಗೂ ನನ್ನ ಕೃತಜ್ಞತೆಗಳು ಸಲ್ಲುತ್ತವೆ.
ಕಥೆಯಲ್ಲಿ ಕಥನಾಯಕ ದೇವರಾಯ ಇಂಗಳೆಯವರನ್ನು ನಾನು ಏಕವಚನದಲ್ಲಿ ಸಂಬೋಧಿಸಿದ್ದೇನೆ. ಕಥೆಯ ಸರಾಗ ಚಲನೆಗೆ ಆಪ್ತತೆಯ ಶೈಲಿ ಅವಶ್ಯಕವಾಗಿದ್ದರಿಂದ ಈ ತಂತ್ರವನ್ನು ಅನುಸರಿಸಬೇಕಾಯಿತು. ಈ ತಂತ್ರದಿಂದ ದೇವರಾಯ, ಓದುಗರಿಗೆ ಇನ್ನೂ ಹತ್ತಿರವಾಗುತ್ತಾರೆ ಎಂದು ನಾನು ಭಾವಿಸಿದ್ದೇನೆ.
ದೇವರಾಯ ಇಂಗಳೆಯವರ ಅರ್ಧಕ್ಕೆ ನಿಂತ ಕೆಲಸವನ್ನು ಸಮರ್ಥವಾಗಿ ಮತ್ತು ಪ್ರಾಮಾಣಿಕವಾಗಿ ಮುಂದುವರಿಸುತ್ತಿರುವ ಅಥಣಿಯ ದೇವದಾಸಿ ವಿಮೋಚನಾ ಸಂಸ್ಥೆ, ಪುಸ್ತಕ ಪ್ರಕಟಣೆಯ ಕಾರ್ಯಕ್ಕಾಗಿಯೂ ಮುಂದೆ ಬಂದದ್ದು ಒಂದು ಯೋಗಾಯೋಗವೆಂದೇ ಹೇಳಬೇಕು. ಅದಕ್ಕಾಗಿ ಸಂಸ್ಥೆಯ ರೂವಾರಿ ಬಿ.ಎಲ್.ಪಾಟೀಲ ಹಾಗೂ ನಿರ್ದೇಶಕರಾಗಿರುವ ವಿ.ಎಸ್.ಮನವಾಡೆ ಮತ್ತು ಅವರ ಸಿಬ್ಬಂದಿ ವರ್ಗಕ್ಕೆ ನಾನು ಕೃತಜ್ಞನಾಗಿದ್ದೇನೆ.
ಸುಮಾರು ಹದಿನೈದು ವರ್ಷಗಳ ಹಿಂದೆ ಹಂಪ ನಾಗರಾಜಯ್ಯ ಪ್ರಜಾವಾಣಿ ಪತ್ರಿಕೆಯಲ್ಲಿ ದೇವರಾಯ ಇಂಗಳೆಯವರ ಬಗ್ಗೆ ಲೇಖನವೊಂದನ್ನು ಬರೆದು ಕತ್ತಲೆಯಲ್ಲಿರುವ ಕಥೆಯ ಮೇಲೆ ಬೆಳಕು ಚೆಲ್ಲಿದ್ದರು. ಈ ನಿಟ್ಟಿನಲ್ಲಿ ಕೆಲಸವನ್ನು ಮಾಡು ಎಂದು ನನಗೂ ಹುರಿದುಂಬಿಸಿದ್ದರು. ಬೆಂಗಳೂರಿನಲ್ಲಿದ್ದೂ ದೂರದ ಇಂಗಳೆಯ ದೇವರಾಯರ ಬಗ್ಗೆ ಆಸಕ್ತಿ ವಹಿಸಿದ ಹಂಪ ನಾಗರಾಜಯ್ಯನವರಿಗೂ ನನ್ನ ನೆನಕೆಗಳು ಸಲ್ಲುತ್ತವೆ.
ಬರಗೂರು ರಾಮಚಂದ್ರಪ್ಪ, ಎಂ.ಎಂ.ಕಲಬುರ್ಗಿ, ಗುರುಲಿಂಗ ಕಾಪಸೆ, ಚಂದ್ರಶೇಖರ್ ಕಂಬಾರ, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ, ಮನು ಬಳಿಗಾರ, ಸತೀಶ್ ಕುಲಕರ್ಣಿ, ಅರವಿಂದ ಮಾಲಗತ್ತಿ, ಕುಂವೀ, ಆರ್.ಜಿ.ಹಳ್ಳಿ ನಾಗರಾಜ್, ಹೆಚ್.ಇಬ್ರಾಹಿಂ, ಚನ್ನಬಸವಣ್ಣ, ಚೆನ್ನಣ್ಣ ವಾಲೀಕಾರ ಈ ಎಲ್ಲರಿಗೂ ನನ್ನ ಕೃತಜ್ಞತೆಗಳು.
ಎಂ.ಕೆ.ಜೈನಾಪುರ, ರಾಮಕೃಷ್ಣ ಮರಾಠೆ, ರವಿ ಕೋಟಾರಗಸ್ತಿ, ಡಿ.ಎಸ್.ಚೌಗಲೆ, ಅಶೋಕ ಐನಾವರ, ಅರವಿಂದ ಮೂಲಿಮನಿ, ಎಚ್.ಬಿ.ವಾಲೀಕಾರ, ಬಾಬುರಾವ್ ನಡೋಣಿ ಮುಂತಾದ ಗೆಳೆಯರಿಗೆ, ಇಂಡಿಯನ್ ಎಕ್ಸ್ಪ್ರೆಸ್ ಕಂಪನಿಯ ಎಲ್ಲ ಸಹೋದ್ಯೋಗಿಗಳಿಗೆ,
ಬಾಳಿನಲ್ಲಿಯ ಸುಖದುಃಖಗಳನ್ನು ಸಮವಾಗಿ ಹಂಚಿಕೊಂಡಿರುವ ಪತ್ನಿ ಸುಮಾ ಹಾಗೂ ಮಕ್ಕಳು ಸಂಸ್ಕೃತಿ, ಶ್ರೇಯಸ್ ಅವರುಗಳಿಗೆ ನಾನು ಕೃತಜ್ಞನಾಗಿದ್ದೇನೆ.
–ಡಾ. ಸರಜೂ ಕಾಟ್ಕರ್
ಕನ್ನಡ, ಮರಾಠಿಯ ಮೊಟ್ಟಮೊದಲ ದಲಿತ ಸಾಹಿತಿ
ದೇವರಾಯ ಮಿನಿ ಕಾದಂಬರಿ ೨೦೦೨ರಲ್ಲಿ ಪ್ರಥಮ ಮುದ್ರಣವಾಗಿ ಅಥಣಿಯ ವಿಮೋಚನಾ ಪ್ರಕಾಶನದ ಬಿ.ಎಲ್.ಪಾಟೀಲರು ಪ್ರಕಟಿಸಿದ್ದರು. ಈಗ ಇಪ್ಪತ್ತು ವರ್ಷಗಳ ನಂತರ ಅದರ ಎರಡನೆಯ ಮುದ್ರಣ ಬೆಳಕು ಕಾಣುತ್ತಿದೆ. ಎರಡನೆಯ ಮುದ್ರಣದ ಹೊಣೆ ಹೊತ್ತುಕೊಂಡಿರುವವರು ಹೊಸಪೇಟೆಯ ಯಾಜಿ ಪ್ರಕಾಶನದ ಗಣೇಶ್ ಯಾಜಿ ಹಾಗೂ ಸವಿತಾ ಯಾಜಿ ಅವರು. ಕಾದಂಬರಿಯ ಈ ಎರಡನೆಯ ಮುದ್ರಣ ಸಹಜವಾಗಿ ನನಗೆ ಖುಷಿಯನ್ನುಂಟು ಮಾಡಿದೆ. ಸಹಜವಾದ ಈ ಸಂತೋಷವನ್ನು ನೀಡಿರುವ ಯಾಜಿ ದಂಪತಿಗಳಿಗೆ ನಾನು ಕೃತಜ್ಞನಾಗಿದ್ದೇನೆ.
ದೇವರಾಯ ಪ್ರಕಟವಾದಾಗ ಕನ್ನಡ ದಲಿತ ಸಾಹಿತ್ಯದಲ್ಲಿ ಒಂದು ಹೊಸ ಸಂಚಲನವೇ ಉಂಟಾಯಿತು. ದೇವರಾಯರನ್ನು ನಾನು ಕನ್ನಡದ ಮೊಟ್ಟಮೊದಲ ದಲಿತ ಲೇಖಕನೆಂದು ಗುರುತಿಸಿದ್ದೆ. ದೇವರಾಯ ಕನ್ನಡ, ಮರಾಠಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಸಾಹಿತ್ಯವನ್ನು ರಚಿಸಿದವರು. ಮರಾಠಿ ದಲಿತ ಲೇಖಕರಿಗೆ ದೇವರಾಯರು ಬರೆದ ಮರಾಠಿ ಸಾಹಿತ್ಯ ಈ ಮೊದಲು ಗೊತ್ತಿರಲಿಲ್ಲ. ನನ್ನ ಕಾದಂಬರಿಯಿಂದ ಅಥವಾ ನಾನು ಬರೆದ ಲೇಖನಗಳಿಂದ ಅಥವಾ ವಿವಿಧ ವಿಚಾರ ಸಂಕಿರಣಗಳಲ್ಲಿ ನಾನು ಮಂಡಿಸಿದ ಪ್ರಬಂಧಗಳಿಂದ ಅವರಿಗೆ ದೇವರಾಯರ ಸಾಹಿತ್ಯದ ಪರಿಚಯವಾಯಿತು. ಅಚ್ಚರಿಯೆಂದರೆ ದೇವರಾಯರಿಗಿಂತ ಮೊದಲು ಮರಾಠಿಯಲ್ಲಿ ದಲಿತಪ್ರಜ್ಞೆಯೊಂದಿಗೆ ಸೃಜನಶೀಲ ಸಾಹಿತ್ಯವನ್ನು ಯಾರೂ ಬರೆದಿರಲಿಲ್ಲ. ಹೀಗಾಗಿ ಮರಾಠಿ ಭಾಷೆಯ ಮೊಟ್ಟಮೊದಲ ದಲಿತ ಲೇಖಕರೆಂಬ ಕೀರ್ತಿಗೂ ಅವರು ಪಾತ್ರರಾದರು. ಅವರ ಬಗ್ಗೆ ಹಲವಾರು ಲೇಖನಗಳು ಮರಾಠಿಯಲ್ಲಿ ಬಂದವು.
ದೇವರಾಯ ಕಾದಂಬರಿಯನ್ನು ಪ್ರಖ್ಯಾತ ಸಿನಿಮಾ ದಿಗ್ದರ್ಶಕರಾದ ಮಣಿರತ್ನಂ ಅವರು ಹಿಂದಿಯಲ್ಲಿ ಸಿನಿಮಾ ಮಾಡುವವರಿದ್ದರು. ದೇವರಾಯ ಪಾತ್ರಕ್ಕೆ ಖ್ಯಾತ ನಟ ನಾನಾ ಪಾಟೇಕರ್ರು ಆಯ್ಕೆಯಾಗಿದ್ದರು. ನಾನಾ ಪಾಟೇಕರ್ ಆ ಪಾತ್ರದ ಬಗ್ಗೆ ನನ್ನ ಜೊತೆಗೆ ಅನೇಕ ಸಲ ಮಾತನಾಡಿದ್ದರು. ಆದರೆ ನನ್ನದೇ ಅನಾಸ್ಥೆಯಿಂದ ಅಥವಾ ನನ್ನ ವೃತ್ತಿಯ ಒತ್ತಡದಿಂದ ಈ ಚಲನಚಿತ್ರದ ಪ್ರಾಜೆಕ್ಟ್ ಕೈಬಿಡಬೆಕಾಯಿತು. ಮಣಿರತ್ನಂ ಅವರು ಎಂಟು ದಿನಗಳಿಗೊಮ್ಮೆ ಚೆನ್ನೈಗೆ ಬರಲು ನನಗೆ ಹೇಳುತ್ತಿದ್ದರು. ನನ್ನ ವೃತ್ತಿಯ ಚೌಕಟ್ಟಿನಲ್ಲಿ ಅದು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಕಾದಂಬರಿಯನ್ನು ಚಲನಚಿತ್ರವಾಗಿಸುವ ಯೋಜನೆಯನ್ನು ಕೈ ಬಿಟ್ಟೆವು.
ದೇವರಾಯ ಕಾದಂಬರಿಯ ಬಗ್ಗೆ ಹಾಗೂ ಕಾದಂಬರಿ ನಾಯಕ ದೇವರಾಯ ಇಂಗಳೆ ಅವರ ಬಗ್ಗೆ ಕನ್ನಡ ಸಾಹಿತ್ಯದಲ್ಲಿ ತುಂಬ ಸಕಾರಾತ್ಮಕವಾದ ವಿಮರ್ಶೆಗಳು ಬಂದವು. ಕೆಲವು ಸಾಹಿತಿಗಳು ದೇವರಾಯ ಇಂಗಳೆಯವರು ಹುಟ್ಟಿದ ಊರನ್ನು ನೋಡ ಬೇಕೆಂದು ಮೈಸೂರು, ಮಂಡ್ಯ, ಕಲಬುರ್ಗಿ, ಹುಬ್ಬಳ್ಳಿ, ಧಾರವಾಡ, ಹೆಸಪೇಟೆ, ಹಂಪಿಗಳಿಂದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳೆ ಎಂಬ ಕಗ್ಗಳ್ಳಿಗೆ ಬಂದು ಇಂಗಳೆಯವರ ಮಕ್ಕಳು, ಮೊಮ್ಮಕ್ಕಳು-ಮರಿಮಕ್ಕಳನ್ನು ಭೇಟಿಯಾಗಿ ದೇವರಾಯ ಇಂಗಳೆಯವರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಂಡರು. ಹಲವಾರು ಕಡೆಯಲ್ಲಿ ದೇವರಾಯ ಇಂಗಳೆಯವರ ಬಗ್ಗೆ ವಿಚಾರ ಸಂಕಿರಣಗಳು ನಡೆದವು. ಕೆಲವರು ತಮ್ಮ ಮಕ್ಕಳಿಗೆ ದೇವರಾಯ ಎಂಬ ಹೆಸರನ್ನು ಇಟ್ಟರು.
ಬಾಗಲಕೋಟೆಯ ಘನಶಾಮ ಭಾಂಡಗೆಯವರು ದೇವರಾಯ ಕಾದಂಬರಿಯನ್ನು ಓದಿ, ಅದನ್ನು ಚಲನಚಿತ್ರವಾಗಿಸಲು ಬಯಸಿದರು. ಬೆಂಗಳೂರಿನ ವಿಶಾಲ್ರಾಜ್ ಅವರು ಚಿತ್ರವನ್ನು ನಿರ್ದೇಶಿಸಿದರು. ದೇವರಾಯ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್ ಅಭಿನಯಿಸಿದರು. ಈ ಚಿತ್ರವು ರಾಜ್ಯದ ಎಲ್ಲೆಡೆ ಪ್ರದರ್ಶಿತವಾಗಿ ಅಪಾರ ಯಶಸ್ಸು ಕಂಡಿತು. ರಾಜ್ಯ ಸರ್ಕಾರದ ಸಾಮಾಜಿಕ ಕಳಕಳಿಯ ಚಿತ್ರವೆಂಬ ಪ್ರಶಸ್ತಿಗೂ ಪಾತ್ರವಾಯಿತು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಚಲನಚಿತ್ರವನ್ನು ಹುಡುಕಿಕೊಂಡು ಬಂದವು. ಕಾದಂಬರಿಯಿಂದ ಕೇವಲ ಅಕ್ಷರಬಲ್ಲವರಿಗೆ ಪರಿಚಿತರಾಗಿದ್ದ ದೇವರಾಯ ಇಂಗಳೆಯವರು ಚಲನಚಿತ್ರ ಮಾಧ್ಯಮದಿಂದ ಅಕ್ಷರಸ್ಥರು, ಅನಕ್ಷರಸ್ಥರು -ಹೀಗೆ ಸಕಲ ಜನವರ್ಗಕ್ಕೂ ತಲುಪಿದರು. ಈ ಚಿತ್ರವನ್ನು ಎಲ್ಲ ಶಾಲೆಗಳಲ್ಲಿ ಪ್ರದರ್ಶಿಸಬೇಕೆಂದು ಸರ್ಕಾರವು ಆಜ್ಞೆಯನ್ನು ಹೊರಡಿಸಿದ್ದರಿಂದ ಕರ್ನಾಟಕದ ಎಲ್ಲ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಈ ಚಲನಚಿತ್ರದ ಪ್ರದರ್ಶನ ನಡೆಯಿತು. ಕರ್ನಾಟಕ ಸರ್ಕಾರವು ನಡೆಸಿದ ಫಿಲ್ಮ್ ಫೆಸ್ಟಿವಲ್ನಲ್ಲಿ ಈ ಚಲನಚಿತ್ರವನ್ನು ಉದ್ಘಾಟನಾ ಚಿತ್ರವೆಂದು ತೋರಿಸಲಾಯಿತು.
ದೇವರಾಯ ಇಂಗಳೆಯವರ ಸಮಗ್ರ ಸಾಹಿತ್ಯವು ಉಪಲಬ್ಧವಾಗಿರದಿದ್ದರೂ ಅವರ ಮೇಲೆ ಹತ್ತಾರು ಪಿಎಚ್.ಡಿ ಅಧ್ಯಯನಗಳು ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆದಿವೆ. ಇದೊಂದು ಚಮತ್ಕಾರವೆಂದು ನನಗೆ ಅನ್ನಿಸುತ್ತದೆ. ಹತ್ತಾರು ವಿದ್ಯಾರ್ಥಿಗಳು ಇಂಗಳೆಯವರ ಮೇಲೆ ಪ್ರಬಂಧ ಬರೆದು ಎಂಫಿಲ್ ಪದವಿಗಳನ್ನು ಪಡೆದಿದ್ದಾರೆ.
೨೦೦೨ರಲ್ಲಿ ದೇವರಾಯ ಕಾದಂಬರಿ ಪ್ರಕಟವಾಗಿ ಅದರ ಪ್ರತಿಗಳು ಅಲಭ್ಯವಾಗಿದ್ದವು. ಅನೇಕ ಜನ ವಿದ್ಯಾರ್ಥಿಗಳು, ಪುಸ್ತಕ ಪ್ರೇಮಿಗಳು, ದಲಿತ ಹೋರಾಟಗಾರರು, ಸಾಹಿತಿಗಳು ಪ್ರತಿಗಳಿಗಾಗಿ ಕೇಳುತ್ತಿದ್ದರು. ಎರಡನೆಯ ಮುದ್ರಣವಾಗದ್ದರಿಂದ ಕಾದಂಬರಿಯು ಸಿಗುತ್ತಿರಲಿಲ್ಲ. ಇದೀಗ ಈ ಕೊರತೆಯನ್ನು ಹೊಸಪೇಟೆಯ ಯಾಜಿ ಪ್ರಕಾಶನವು ನೀಗಿಸಿದೆಯೆಂದು ಸಂತೋಷವಾಗುತ್ತಿದೆ.
ಬಾಳ ಸಂಗಾತಿ ಸುಮಾ, ಮಕ್ಕಳಾದ ಸಂಸ್ಕೃತಿ-ರಾಕೇಶ್ ರಾಮಗಡ, ಶ್ರೇಯಸ್-ಸಂತೋಷ ಪಾಟೀಲ ಹಾಗೂ ಮೊಮ್ಮಕ್ಕಳಾದ ಪ್ರಿಶಾ ಹಾಗೂ ಸಿರಿ ಅವರುಗಳನ್ನು ನೆನೆಯುತ್ತೇನೆ.
–ಸರಜೂ ಕಾಟ್ಕರ್
Reviews
There are no reviews yet.