ಭೂಮಾನುಭೂತಿಯ ಬರಹಗಳು
ನಮ್ಮ ಹಿಂದಿನ ಕಾವ್ಯಗಳ ಅಲಂಕಾರಿಕರಿಗೆ ’ವ್ಯುತ್ಪತ್ತಿ’ ಎಂಬುದರ ಮೇಲೆ ತೀರದ ವ್ಯಾಮೋಹ. ’ವ್ಯುತ್ಪತ್ತಿ’ ಎಂದರೆ ಬಗೆಬಗೆಯ ಶಾಸ್ತ್ರಗಳು, ಕಾವ್ಯಗಳು, ಪುರಾಣಗಳ ಪರಿಚಯ, ಓದು. ಅದರಿಂದ ಬೆಳಗಿಬಂದ ಒಂದು ಬಗೆಯ ಪ್ರತಿಭೆ. ಕಾವ್ಯದ ರಚನೆಗೆ ಪ್ರತಿಭಾಶಕ್ತಿ, ಅಭ್ಯಾಸಗಳ ಜೊತೆಗೆ ವ್ಯುತ್ಪತ್ತಿಯೂ ಇರಬೇಕು ಎಂಬುದು ಮಮ್ಮಟ, ದಂಡಿ ಮೊದಲಾದವರ ಅಭಿಮತ. ಇಲ್ಲಿ ವ್ಯುತ್ಪತ್ತಿ ಎಂದರೆ ಅಪಾರ ಓದು, ಅನುಭವದಿಂದ ಸಂಪಾದಿಸಿದ ತಿಳಿವು, ಆದರೆ ಪ್ರತಿಭೆಯ ಜೊತೆಗೂಡಿದಾಗ ಅದು ಮಳೆಗಾಲದ ಮೋಡದಂತೆ ಮಿಂಚನ್ನು ಸೃಷ್ಟಿಸುತ್ತದೆ. ವಾಸ್ತವದಲ್ಲಿ ಮೋಡದಲ್ಲಿ ಮಿಂಚು ಅಂದರೆ ಬೆಂಕಿಯಿಲ್ಲ. ಅಲ್ಲಿರುವುದು ನೀರು. ಆದರೆ ನೀರು, ಗಾಳಿ, ಚಲನೆ ಎಲ್ಲದರ ಪರಿಪಾಕದಿಂದ ಅದು ಮಿಂಚನ್ನು ಸೃಷ್ಟಿಸುತ್ತದೆ.
ಸದ್ಯ ಕಾವ್ಯ ಎಂಬುದರ ಅರ್ಥವನ್ನು ಎಲ್ಲ ಬಗೆಯ ಸಾಹಿತ್ಯ ಎಂಬುದಕ್ಕೆ ವಿಸ್ತರಿಸಿಕೊಂಡರೆ ಈ ವ್ಯುತ್ಪತ್ತಿಯ ವ್ಯಾಪ್ತಿಯನ್ನು ನಾವು ನಾರಾಯಣ ಯಾಜಿ ಅವರಲ್ಲಿ ಕಾಣಬಹುದು. ಅವರಲ್ಲಿ ಪುರಾಣಗಳಿಂದ ಪಾಶ್ಚಾತ್ಯ ಸಾಹಿತ್ಯದವರೆಗೆ, ವೇದಗಳಿಂದ ವೇದಾಂತದವರೆಗೆ, ಕಾವ್ಯಗಳಿಂದ ಬ್ಯಾಂಕಿಂಗ್‌ನವರೆಗೆ, ಬುದ್ಧಜಾತಕದಿಂದ ಭಗವದ್ಗೀತೆಯವರೆಗೆ ಗಳಿಸಿಕೊಂಡ ತಿಳಿವಿನ ಅಗಾಧತೆ ಇದೆ. ಅವರು ಬರೆಯಲು ಕುಳಿತುಕೊಂಡಾಗ ಇದೆಲ್ಲವೂ ಸೇರಿ ಧವಳ (ಆಕಾಶ) ಧಾರಿಣಿಗಳ (ಭೂಮಿ) ನಡುವಿನ ಮೋಡದ ಮಿಂಚಾಗುತ್ತದೆ.
ಮೊದಲಿಗೇ ಇರುವ ’ನಿರ್ವಿಕಲ್ಪ ಉಪಾಸನೆಯ ಮಾರ್ಗ: ಗಣಪತಿ’ ಬರಹದಲ್ಲಿ ಇದು ಎದ್ದು ಕಾಣಿಸುತ್ತದೆ. ಗಣಪತಿ-ವಿನಾಯಕನ ಕುರಿತು ಮಾತನಾಡಹೊರಡುವ ಈ ಲೇಖನವು ಜಗತ್ತಿನ ಎಲ್ಲ ಸಮುದಾಯಗಳಲ್ಲಿ ಬಲವಾಗಿ ಬೇರುಬಿಟ್ಟಿರುವ ಮೂರ್ತಿಪೂಜೆಯ ಪರಿಕಲ್ಪನೆ, ಬೈಬಲ್‌ನಲ್ಲಿ ಬರುವ ಮೂರ್ತಿಪೂಜೆಯ ಖಂಡನೆ, ಜಾಗತಿಕ ಸಂಸ್ಕೃತಿಗಳ ಅಧ್ಯಯನಕ್ಕೆ ನೆರವಾಗುವ ಮೂರ್ತಿಶಿಲ್ಪಗಳು, ಗಣೇಶನ ಕುರಿತು ನಡೆದಿರುವ ವೈದಿಕ-ಅವೈದಿಕ ಚರ್ಚೆಗಳು, ಶಂಕರಾಚಾರ್ಯರು ಜಾರಿಗೆ ತಂದ ಪಂಚಾಯತನ ಪೂಜಾ ಪದ್ಧತಿ, ಮೂರ್ತಿಪೂಜೆಯ ಮೂಲಕ ನಿರ್ವಿಕಲ್ಪ ಬ್ರಹ್ಮದ ತಿಳಿವಿನತ್ತ ಸಾಗುವ ಬಗೆ, ಜ್ಞಾನಕಾಂಡ ಇತ್ಯಾದಿಗಳ ಮೂಲಕ ಒಂದು ’ಗ್ರ್ಯಾಂಡ್ ರೈಡ್’ ನೀಡುತ್ತದೆ. ಇದು ಗಣಪತಿಯ ಶಿಲ್ಪ, ದೇಶಕಾಲ ಸ್ವರೂಪ, ಮೂಲ ಕಲ್ಪನೆ ಇತ್ಯಾದಿಗಳ ಮೂಲಕ ಬೆನಕೋಪಾಸನೆಯ ತಾತ್ತ್ವಿಕ ಭಿತ್ತಿಯನ್ನು ಓದುಗನಲ್ಲಿ ಮೂಡಿಸುವ ರೀತಿ. ಒಂದು ವಿಚಾರವನ್ನು ಎತ್ತಿಕೊಂಡರೆ ಅದರ ಮೂಲಚೂಲಗಳನ್ನು ಆದ್ಯಂತವಾಗಿ ಅನ್ವೇಷಿಸಿ ಓದುಗನ ಮುಂದಿಟ್ಟು ’ಯಥೇಚ್ಛಸಿ ತಥಾ ಕುರು’ -ನಿನ್ನ ಅಭಿಪ್ರಾಯ ನೀನೇ ರೂಪಿಸಿಕೋ- ಎನ್ನುವ ಮಾರ್ಗ ಯಾಜಿಯವರದು.
ಇದೇ ಪ್ರಮೇಯವನ್ನು ಇತರ ಹಲವು ಬರಹಗಳಿಗೂ ವಿಸ್ತರಿಸಬಹುದು. ಉದಾಹರಣೆಗೆ ಕೃಷ್ಣಾವತಾರದ ಬಗ್ಗೆ ಬರೆದಿರುವ ಬರಹವು ಆರಂಭದಿಂದಲೇ ಪುತಿನ ಅವರ ಗೋಕುಲ ನಿರ್ಗಮನವನ್ನೂ ನಂತರ ಅಡಿಗರ ’ರಾಮನವಮಿಯ ದಿವಸ’ ಕವನವನ್ನೂ ನೆನಪಿಸುತ್ತದೆ; ಜೊತೆಗೆ ಶ್ರೀರಾಮ ತನ್ನ ಬಗ್ಗೆಯೇ ಹೇಳಿಕೊಂಡ ’ಆತ್ಮಾನಂ ಮಾನುಷಂ ಮನ್ಯೇ’ ಎಂಬುದು ಹಾಗೂ ಆದಿಕವಿ ವಾಲ್ಮೀಕಿ ಆತನಲ್ಲಿ ಹದಿನಾರು ಸುಗುಣಗಳಿರುವ ಪುರುಷೋತ್ತಮತ್ವವನ್ನು ಕಾಣಲು ನಡೆಸಿದ ಪ್ರಯತ್ನವೂ ನೆನಪಾಗುತ್ತದೆ. ಕೃಷ್ಣನ ಕಾಲದ ಸಾಮಾಜಿಕ-ರಾಜಕೀಯ ಸ್ಥಿತಿಗತಿ, ರಾಸಲೀಲೆಯ ಆಧ್ಯಾತ್ಮಿಕ ಭಾವ, ಇವೆಲ್ಲವುಗಳು ಹಿನ್ನೆಲೆಯಲ್ಲಿ ಬಂದು ನಿಲ್ಲುತ್ತವೆ. ಅಂದರೆ ಬರಹವೊಂದು ತಾತ್ತ್ವಿಕ ಭಾವಭಿತ್ತಿಯಾಗಿ ಒದಗುವುದಕ್ಕೆ ಬೇಕಾದ ಅಂಗೋಪಾಂಗಗಳು ಯಾಜಿಯವರಲ್ಲಿ ತ್ರಾಸವಿಲ್ಲದೆ ಒದಗಿಬರುತ್ತವೆ.
ನಾವು ಇಂದು ಮರೆತೇಬಿಟ್ಟಿರುವ ಪರಿಕಲ್ಪನೆಗಳಲ್ಲಿ ’ಬಹುಶ್ರುತ’ ಎಂಬುದೂ ಒಂದು. ಹಿಂದಿನ ಕಾಲದ ಪುತಿನ, ಎ.ಎನ್.ಮೂರ್ತಿರಾವ್, ಕುವೆಂಪು ಮೊದಲಾದವರ ಪ್ರಬಂಧಗಳನ್ನು ಓದುವಾಗ ಈ ಬಹುಶ್ರುತತ್ವ ಅವರಲ್ಲಿ ಇರುವುದು ನಮಗೆ ಗೊತ್ತಾಗುತ್ತಿತ್ತು. ಬಹು ಮೂಲ ಗಳಿಂದ ಜ್ಞಾನವನ್ನು ಕ್ರೋಡೀಕರಿಸಿಕೊಂಡ, ಮತ್ತು ಅದನ್ನು ಸೂಕ್ತ ಕಾಲದಲ್ಲಿ ಕೇಳುಗ- ಓದುಗರಿಗೆ ಮನಕ್ಕೆ ಹೋಗುವಂತೆ ರಸವತ್ತಾಗಿ ನೀಡಬಲ್ಲ ವ್ಯಕ್ತಿತ್ವ. ನಾರಾಯಣ ಯಾಜಿ ಅವರಲ್ಲಿ ಇಂಥ ಬಹುಶ್ರುತತ್ವವನ್ನು ನಾವು ಕಾಣಬಹುದು. ’ಗೌತಮ ಬುದ್ಧ’ನ ಬಗ್ಗೆ ಬರೆಯುತ್ತ, ಧಮ್ಮಪದದ ಪಕ್ಕಿಣಕ ವಗ್ಗದಲ್ಲಿ ಬರುವ ಗೌತಮನ ಶ್ರಾವಕರ ಗುಣಗಳನ್ನೂ ಭಗವದ್ಗೀತೆಯಲ್ಲಿ ತಿಳಿಸಲಾಗಿರುವ ಸ್ಥಿತಪ್ರಜ್ಞನ ಗುಣಗಳನ್ನೂ ಅಕ್ಕಪಕ್ಕದಲ್ಲಿಟ್ಟು ನೋಡುವುದನ್ನು ಗಮನಿಸಬಹುದು. ಹಾಗೇ ’ಕಾಳಿದಾಸನ ಅಭಿಜ್ಞಾನ’ ಬರಹದಲ್ಲಿ ಆತನ ಶಾಕುಂತಲ ನಾಟಕದ ಲಕ್ಷಣವನ್ನು, ಮಹಾಭಾರತದ ಮೂಲಕತೆಯನ್ನು ಹಾಗೂ ಪಾಶ್ಚಾತ್ಯ ವಿದ್ವಾಂಸ ಆರ್ಥರ್ ಬೆರ್ರಿಡೇಲ್ ಕೀತ್ ವೈದರ್ಭೀ ಶೈಲಿಯ ಬಗ್ಗೆ ನೀಡಿದ ಟಿಪ್ಪಣಿಗಳನ್ನು ಜೊತೆಯಾಗಿಟ್ಟು ವಿಶ್ಲೇಷಿಸುವುದನ್ನು ಗಮನಿಸಬಹುದು. ಇಲ್ಲಿ ಯಾಜಿಯವರ ಓದಿನ ವ್ಯಾಪ್ತಿವಿಸ್ತಾರಗಳು ನಮಗೆ ಅರಿವಾಗುತ್ತವೆ.
ಆ ಮೂಲಕ ಗೊತ್ತಾಗುವುದೆಂದರೆ, ಲೇಖಕರು ತಕ್ಷಣ ರಂಜಿಸುವ ಮಾತುಗಳನ್ನು ಬರೆದು ವಿರಮಿಸುವುದರಲ್ಲಿ ಆಸಕ್ತರಲ್ಲ. ’ಅಲ್ಪವಾದುದರಲ್ಲಿ ಸುಖವಿಲ್ಲ, ಭೌಮವಾದುದೇ ಸುಖ’ (ಯೋ ವೈ ಭೂಮಾ ತತ್ಸುಖಂ, ನಾಲ್ಪೇ ಸುಖಮಸ್ತಿ) ಎಂಬ ಛಾಂದೋಗ್ಯೋಪನಿಷತ್ತಿನ ಮಾತಿನಲ್ಲಿ ಯಾಜಿಯವರಿಗೆ ಅಚಂಚಲ ವಿಶ್ವಾಸ. ಓದಿ ಮುಗಿಸಿದ ಕೂಡಲೇ ಮಂಜಿನಂತೆ ಕರಗಿಹೋಗುವ ವಾಕ್ಯಗಳ ಬದಲು, ತುಸುಕಾಲ ನೆನಪಿನಲ್ಲಿ ಉಳಿಯುವ ವಿಚಾರಗಳು. ಮನರಂಜಿಸುವ ಗದ್ಯದ ಬದಲು ವಿಚಾರವೊಂದರ ವಿಶ್ವಾತ್ಮಕ ಆಯಾಮವನ್ನು ಹುಡುಕುವ ರಚನೆಗಳು ಎಂದು ಇವನ್ನು ಗ್ರಹಿಸಬಹುದು. ಅದರ ಜೊತೆಗೇ ’ಯೋ ವೈ ಭೂಮಾ ತದಮೃತಂ, ಯದಲ್ಪಂ ತನ್‌ಮರ್ತ್ಯಂ’ ಎಂಬ ಎಚ್ಚರ ಕೂಡ ಅವರಿಗೆ ಇದೆ. ಅಂದರೆ ಅಮೃತವು ಸಿಗುವುದು ಅಪರಂಪಾರವಾದ ಭೂಮ ಅಥವಾ ಭವ್ಯತೆಯಲ್ಲಿ. ಹೀಗಾಗಿ ಯಾಜಿಯವರ ಬರಹಗಳು ಅಸೀಮಿತ ಭೌಮತೆಯ ಅವಕಾಶದಲ್ಲಿ ಯಾನ ಹೊರಡುತ್ತವೆ. ಈ ಕೃತಿಯ ಎಲ್ಲ ಬರಹಗಳಲ್ಲೂ ಇದನ್ನು ಗಮನಿಸಬಹುದು.
ಆದರೆ ಯಾಜಿಯವರ ಬರವಣಿಗೆಯ ಪ್ರಧಾನ ಒಲವು ಇರುವುದು ಪುರಾಣ ಹಾಗೂ ಉಪನಿಷತ್ತುಗಳಲ್ಲಿ ಎನ್ನಬಹುದು. ಇವರ ಮೊದಲ ಕೃತಿ ’ನೆಲಮುಗಿಲು’ ಉಪನಿಷತ್ತುಗಳ ಕುರಿತು ಗಾಢವಾದ ಹಲವು ಬರಹಗಳನ್ನು ಹೊಂದಿದೆ. ಈ ಕೃತಿಯಲ್ಲಿ ಅಂಥ ಕೆಲವು ಬರಹಗಳಿವೆ. ಉಪನಿಷತ್ತುಗಳ ಜ್ಞಾನದ ಸ್ವಾರಸ್ಯ ಎಲ್ಲಿದೆ ಎಂದರೆ ಭೌಮಾನುಭೂತಿ ಅಥವಾ ಬ್ರಹ್ಮಾನುಭೂತಿಯನ್ನು ತಿಳಿಯಾದ ಮಾತುಗಳಲ್ಲಿ ಶಿಷ್ಯರಿಗೆ ವಿವರಿಸುವುದರಲ್ಲಿ. ಶಬ್ದದಲ್ಲಿ ವಸ್ತುವಿಲ್ಲ; ಆದರೆ ಶಬ್ದದಲ್ಲಿ ಅರ್ಥವಿದೆ. ಅರ್ಥವನ್ನು ಶಬ್ದ ಹಿಂಬಾಲಿಸುತ್ತದೆ, ಋಷಿಗಳಲ್ಲಿ ಅರ್ಥವೇ ಶಬ್ದವನ್ನು ಹಿಂಬಾಲಿಸುತ್ತದೆ ಎನ್ನುವಾಗ ಈ ಶಬ್ದದ ಸೀಮೆಯೂ ಅಸೀಮತೆಯೂ ನಮಗೆ ಅರ್ಥವಾಗಬೇಕು. ಉಪನಿಷತ್ತು ಹೀಗೆ ದ್ವಂದ್ವಮಯವಾದ ನಿರ್ದ್ವಂದ್ವವನ್ನು ಹಿಡಿಯುವ, ನಮ್ಮ ಪರಂಪರೆಗೇ ವಿಶಿಷ್ಟವಾದ ಒಂದು ಕ್ರಮ. ಅದನ್ನು ಯಾಜಿಯವರು ಸ್ವಾರಸ್ಯಕರ ಹಾಗೂ ಸಂಗ್ರಹ ರೂಪದಲ್ಲಿ ನಮ್ಮ ಮುಂದೆ ಇಡುತ್ತಾರೆ. ಉಪನಿಷತ್ತಿನ ’ನೇತಿ’ ಕ್ರಮವನ್ನು ಅವರು ವಿವರಿಸುವ ಸರಳವಾದ ರೀತಿಯಲ್ಲಿ ಇದನ್ನು ಗಮನಿಸಬಹುದು.
ಉಪನಿಷತ್ತು-ಪುರಾಣದ ಕೆಲವು ಪಾತ್ರಗಳ ಜೊತೆಗೂ ಅವರು ಒಡನಾಡಿದ್ದಾರೆ. ದೇವಕಿ, ಸುವರ್ಚಲೆ, ಮುದ್ಗಲಾನಿ, ರಂತಿದೇವ ಮೊದಲಾದವರ ಬಗ್ಗೆ ಇರುವ ಲೇಖನಗಳಲ್ಲಿ ಯಾಜಿಯವರ ವ್ಯುತ್ಪತ್ತಿಯ ಜೊತೆಗೆ ಪಾತ್ರಚಿತ್ರಣದ ಸಾಮರ್ಥ್ಯವೂ ಕೆಲಸ ಮಾಡಿರುವುದನ್ನು ಕಾಣಬಹುದು. ಈ ನಿಟ್ಟಿನಲ್ಲಿ ಇತರರಿಗೆ ಇಲ್ಲದ ಗುಣವಿಶೇಷವೊಂದು ಯಾಜಿಯವರಿಗೆ ಇದೆ. ಅದೇನೆಂದರೆ ಅವರು ಯಕ್ಷಗಾನ ತಾಳಮದ್ದಳೆಯ ಪಳಗಿದ ಅರ್ಥಧಾರಿ. ಇಲ್ಲಿ ಅರ್ಥಧಾರಿಯು ಪ್ರಸಂಗಕೃತಿಗೂ ಕತೆಗೂ ನಿಷ್ಠನಾಗಿದ್ದರೂ ಅದರೊಳಗಿದ್ದುಕೊಂಡೇ ಸಾಕಷ್ಟು ಈಜಾಡುವ, ತನ್ನ ವರ್ತನೆ ಸ್ವಭಾವಗಳಿಗೆ ಸ್ವತಂತ್ರ ವ್ಯಾಖ್ಯೆಗಳನ್ನು ರೂಪಿಸಿಕೊಳ್ಳುವ ಅಪಾರ ಅವಕಾಶವಿದೆ. ಹೀಗೆ ಸೃಷ್ಟಿಯಾಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಯಾಜಿಯವರು ಇಡೀ ಕತೆಗೇ ಹೊಸದೊಂದು ಆಯಾಮವನ್ನು ಸೃಷ್ಟಿಸುತ್ತಾರೆ. ಇಲ್ಲಿ ವರ್ತನಾವಿಶ್ಲೇಷಣೆಯ ಜೊತೆಗೆ, ಭಾವನಾತ್ಮಕ ನೆಲೆಯಲ್ಲೂ ಅರ್ಥಧಾರಿ ಕೆಲಸ ಮಾಡಬೇಕಾಗುತ್ತದೆ. ವಿನಾಯಕ, ಶ್ರೀರಾಮ, ಕೃಷ್ಣರ ಚಿತ್ರಣದಲ್ಲೂ ಇದನ್ನು ನೋಡಬಹುದು.
ಈ ಬರಹಗಳು ಆಕಾಶ ಹಾಗೂ ಭೂಮಿಯ ನಡುವೆ ಸಲೀಸಾಗಿ ಯಾನ ಕೈಗೊಳ್ಳುತ್ತವೆ. ಪುರಾಣೇತಿಹಾಸಗಳ ಕ್ಲಾಸಿಕ್ ಸಾಹಿತ್ಯಗಳ ಆಕಾಶ ತತ್ವಗಳ ಜೊತೆಜೊತೆಗೇ ನಮ್ಮಂಥ ಸಾಮಾನ್ಯ ಮಾನವರ ನೆಲಕ್ಕಂಟಿದ ಬದುಕಿನ ಭೂಮಿ ತತ್ವವೂ ಹದವಾಗಿ ಬೆರೆತುಕೊಂಡಿವೆ. ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಸ್ವಾತಂತ್ರ್ಯ ಹೋರಾಟದ ಬಗ್ಗೆ ಈ ಕೃತಿಯ ಪ್ರಮುಖ ಲೇಖನಗಳಲ್ಲಿ ಕೆಲವಿವು. ಇವು ನಮ್ಮ ಐತಿಹಾಸಿಕ ನೆಲೆಗಟ್ಟಿನಲ್ಲಿ ಈ ಅದ್ವಿತೀಯ ಪುರುಷರ ಆದರ್ಶಗಳು ಕಾಣ್ಕೆಗಳು ಹೇಗಿದ್ದವು ಎಂಬುದರ ನಿಡುನೋಟವನ್ನು ನೀಡುತ್ತವೆ. ಧರ್ಮ ಮತ್ತು ರಾಜಕೀಯ ಗುರಿಸಾಧನೆ ಒಂದನ್ನೊಂದು ಬಿಟ್ಟಿರದ ಗಾಂಧೀಜಿಯೇ ಅವರ ಬರಹದ ಚರಮಲಕ್ಷ್ಯ. ಇದನ್ನೇ ಶಾಸ್ತ್ರಿಯವರಿಗೂ ವಿಸ್ತರಿಸಿ ಕೊಳ್ಳಬಹುದು.
ಇಲ್ಲಿರುವ ಎಲ್ಲ ಬರಹಗಳೂ ಮೊದಲು ಅಂಕಣವಾಗಿ ಪ್ರಕಟವಾದಂಥವು. ಅಂಕಣ ಬರಹಗಳಿಗೆ ಒಂದು ಸಾಂದರ್ಭಿಕತೆ ಇರಬೇಕಾದುದು ಅನಿವಾರ್ಯ. ಇಲ್ಲೂ ಇದೆ. ಬಹಳಷ್ಟು ಸಲ ಈ ಸಾಂದರ್ಭಿಕತೆ ಬರಹದ ಸೀಮಿತತೆಗೆ ಕಾರಣವಾಗಿಬಿಡುತ್ತದೆ. ಆದರೆ ಇಲ್ಲಿ ಹಾಗಾಗಿಲ್ಲ. ಇವು ಹಲವು ವರ್ಷ ಬಿಟ್ಟು ಓದಿದರೂ ಸಕಾಲಿಕ, ಸಮಕಾಲೀನ ಆಗುವಂತಿವೆ. ಇದು ಕೂಡ ಇವುಗಳ ಈ ಕೃತಿಯ ಸಾರ್ವಕಾಲಿಕತೆಗೆ ಕಾರಣವಾಗಿರುವ ಇನ್ನೊಂದು ಅಂಶ. ಡೆಡ್‌ಲೈನ್‌ನೊಳಗೆ ಏನೋ ಒಂದನ್ನು ಬರೆದು ಪಾರಾಗಬಯಸುವ ’ಸಲೀಸು ಅಂಕಣಕಾರ’ರ ಗುಣ ಇಲ್ಲಿನ ಬರಹಗಳಲ್ಲಿ ಇಲ್ಲ. ನಾನು ಕೂಡ ವಿಸ್ತಾರವಾಗಿರುವ ಇಲ್ಲಿನ ಲೇಖನಗಳನ್ನು ಪತ್ರಿಕಾ ಅಂಕಣದ ಶಬ್ದಮಿತಿಗೆ ಒಗ್ಗಿಸಲು ಹೆಣಗಾಡಿದ್ದು ನೆನಪಾಗುತ್ತದೆ. ಯಾಕೆಂದರೆ ಸ್ವಾರಸ್ಯ ಕೆಡದಂತೆ ಇವುಗಳ ವಾಕ್ಯಗಳಿಗೆ ಕತ್ತರಿ ಹಾಕಲು ಸಾಧ್ಯವಾಗುತ್ತಿರಲಿಲ್ಲ. ಅದು ಇವುಗಳ ಶಕ್ತಿ. ಯಾಜಿಯವರು ಇಂಥ ಇನ್ನಷ್ಟು ಕೃತಿಗಳ ಮೂಲಕ ನಮ್ಮ ಅರಿವಿನ ಸೀಮೆಯನ್ನು ವಿಸ್ತರಿಸಲಿ.
–ಹರೀಶ್ ಕೇರ, ಪತ್ರಕರ್ತ
ಧವಳ ಧರಣಿಯ ಮುತ್ತುಗಳನ್ನು ತೆರೆದಿಡುವ ಮುನ್ನ
ವೇದ, ಉಪನಿಷತ್ತು, ಪುರಾಣ, ಇತಿಹಾಸಗಳು ನನ್ನ ಪಾಲಿಗೆ ಹೊತ್ತು ಕಳೆಯುವ ಸಾಧನವಲ್ಲ. ಅದರಲ್ಲಿರುವ ತತ್ತ್ವಗಳು ಮನುಷ್ಯನ ಬದುಕಿಗೆ ತೋರುವ ದಾರಿದೀವಿಗೆಗಳು ಎಂದು ನಂಬಿದವ ನಾನು. ಮಹಾಕಾವ್ಯಗಳನ್ನು ಬರೆದ ವಾಲ್ಮೀಕಿ, ವ್ಯಾಸರು ಆ ಕಾಲಕ್ಕೆ ಛಂದಸ್ಸನ್ನು ಉಪಯೋಗಿಸಿ ತಮ್ಮ ಕಾವ್ಯದ ವ್ಯಾಪ್ತಿಗೆ ತಂದ ವಿಷಯಗಳು ಇಂದೂ ಸಹ ಪ್ರಸ್ತುತವಾಗಿವೆ ಎಂದರೆ ಅದು ಅವರ ಪ್ರಖರ ಅಧ್ಯಯನದ ಫಲವಾಗಿದೆ. ಅವರು ಹಾಕಿಕೊಟ್ಟ ವಿಷಯ ನಿರೂಪಣೆಯಾಗಲೀ, ಅನ್ಯಾನ್ಯ ಸೂಕ್ತಗಳಾಗಲೀ, ಉಪಮೆಗಳಾಗಲೀ, ಕಾಲವನ್ನು ಮೀರಿ ನಿಂತಂತವುಗಳು. ಇಂದು ನಾವು ಯಾವುದೇ ಉದಾಹರಣೆಯನ್ನು ತೆಗೆದುಕೊಂಡರೂ ಮಹಾಕಾವ್ಯಗಳಲ್ಲಿ ಅದರ ಹೊಳವು ಸಿಗುತ್ತದೆ. ಉಪನಿಷತ್ತಿನ ಋಷಿಗಳು ಸತ್ಯದ ಹುಡುಕಾಟಕ್ಕಾಗಿ ತಮ್ಮ ಬದುಕಿನ ಸುಖವನ್ನೇ ಮುಡುಪಾಗಿಟ್ಟವರು. ವೇದಗಳಲ್ಲಿ ಬರುವ ಗಣತಂತ್ರದ ವ್ಯವಸ್ಥೆ ನಂತರ ಕಾಲಾನುಕ್ರಮದಲ್ಲಿ ಅದು ನಿರಂಕುಶ ಪ್ರಭುತ್ವಕ್ಕೆ ದಾರಿ ಮಾಡಿಕೊಟ್ಟಿರುವುದು ಇವೆಲ್ಲವೂ ಇಂದು ಮತ್ತೊಮ್ಮೆ ಪುನಃ ಓದುವಿಕೆಗೆ ಕಾಯುತ್ತಿದೆ. ಸುವರ್ಚಲೆಯಂತಹ ದಿಟ್ಟ ಹೆಣ್ಣುಮಗಳು ತನ್ನ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವಾಗ ಅಪ್ಪ ಹೇಳಿದ ಅಂತ ಜೋತುಬೀಳಲಿಲ್ಲ. ತನ್ನ ನಿರ್ಧಾರಕ್ಕೆ ಅನುಗುಣವಾದ ಪತಿ ಸಿಗುವ ತನಕ ಕಾದಿದ್ದಳು. ಮುದ್ಗಲಾನಿ ವೇದಕಾಲದಲ್ಲಿಯೇ ರಥವನ್ನು ಓಡಿಸುವಲ್ಲಿ ನಿಪುಣಳಾಗಿದ್ದಳು.
ನಮ್ಮ ತಲೆಮಾರಿನವರಿಗೆ ಸುಲಭದ ಪಂಚಾಂಗದ ಹಿನ್ನೆಲೆ ಮತ್ತು ಅಧಿಕಮಾಸ ಯಾಕೆ ಬರುತ್ತದೆ ಎನ್ನುವುದನ್ನು ಸರಳವಾಗಿ ತಿಳಿಸಿಕೊಟ್ಟ ಪಂಚಾಂಗ, ಗ್ರಹಣದ ಸಮಯವನ್ನು ನಿಖರವಾಗಿ ತಿಳಿಸುವ ಪ್ರಾಚೀನರ ಲೆಕ್ಕಾಚಾರ ಇವುಗಳನ್ನೆಲ್ಲ ಓದಿ ಬೆರಗಾಗಿದ್ದೇನೆ. ಈ ಲೇಖನಗಳು ವಿಸ್ತಾರ ಟಿ.ವಿ.ಯವರ ಡಿಜಿಟಲ್ ಅಂಗಳದಲ್ಲಿ ನಿರಂತರವಾಗಿ ಅಂಕಣ ರೂಪದಲ್ಲಿ ಬರುತ್ತಿವೆ. ಅದರಲ್ಲಿನ ಆಯ್ದ ಲೇಖನಗಳನ್ನು ಧವಳ ಧಾರಿಣಿ” ಎನ್ನುವ ಕೃತಿ ರೂಪದಲ್ಲಿ ಇದೀಗ ಯಾಜಿ ಪ್ರಕಾಶನದ ಸವಿತಾ ಯಾಜಿ ಮತ್ತು ಗಣೇಶ ಯಾಜಿ ದಂಪತಿಗಳು ಹೊರತರುತ್ತಿದ್ದಾರೆ. ಅಕ್ಷರ ಎಂದರೆ ಕ್ಷಯವಾಗದೇ ಇರುವುದು ಎನ್ನುವ ಅರ್ಥವಿದೆ. ಬದುಕು ಎನ್ನುವುದರ ಅರ್ಥ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕವಲ್ಲ; ಸಾಧನೆಗಾಗಿರುವ ಪಥಗಳು. ಪಥ ಗುರಿಯತ್ತ ಸಾಗುವುದಿಲ್ಲ. ಆದರೆ ಅದರ ಮೇಲೆ ಸಾಗಿದರೆ ಗುರಿ ತಲುಪುತ್ತೇವೆ. ಹಾಗೇ ತತ್ತ್ವಶಾಸ್ತ್ರಗಳು. ಬೆಳಕನ್ನು ಅರಸುವವರಿಗೆ ಕೈದೀವಿಗೆಯಾಗುತ್ತದೆ. ಬದುಕು ಶುಭ್ರವಾಗಿರಬೇಕು ಎನ್ನುವುದರ ಸಂಕೇತವೇ ಧವಳ. ಈ ಧವಳತ್ವವನ್ನು ಮೈಗೂಡಿಸಿಕೊಂಡರೆ ಸಂತಸಪಡುವವಳು ಈ ಧಾರಿಣಿಯೇ. ಅದರ ಎಡೆಗೆ ನಮ್ಮ ಪಯಣ ಸಾಗಲಿ ಎನ್ನುವ ಆಶಯದೊಂದಿಗೆ ಈ ಕೃತಿಯನ್ನು ಓದುಗರ ಅಂಗಣಕ್ಕೆ ಅರ್ಪಿಸುತ್ತಿದ್ದೇನೆ.
ತಲೆಯೊಳಗಿರುವ ಇವೆಲ್ಲವೂ ಹೊರಬರಲು ಕಾರಣೀಕರ್ತರಾದವರು ಹಿರಿಯ ಪತ್ರಕರ್ತರು, ವಿಸ್ತಾರ ಮೀಡಿಯಾದ ಮುಖ್ಯ ಸಂಪಾದಕ ಮತ್ತು ಕಾರ್ಯನಿರ್ವಾಹಕರಾದ ಶ್ರೀ ಹರಿಪ್ರಕಾಶ ಕೋಣೆಮನೆಯವರು. ವಿಜಯ ಕರ್ನಾಟಕ” ದಿನಪತ್ರಿಕೆಯ ಸಂಪಾದಕರಾಗಿದ್ದಾಗ ನನ್ನನ್ನು ಒತ್ತಾಯಿಸಿ ಬರೆಯಿಸಿದ ಕಾರಣ ರೂಪುಗೊಂಡಿರುವುದು ನೆಲ-ಮುಗಿಲು” ಅಂಕಣ. ನಂತರ ಈಗಿನ ಸಂಪಾದಕರಾದ ಶ್ರೀ ಸುದರ್ಶನ ಚನ್ನಂಗಿಹಳ್ಳಿಯವರೂ ಸಹ ಅದೇ ಪ್ರೀತಿಯನ್ನು ತೋರಿದರು. ಮೊದಲ ಭಾಗ ಯಾಜಿ ಪ್ರಕಾಶನದಿಂದಲೇ ನೆಲ ಮುಗಿಲು” ಎನ್ನುವ ಕೃತಿಯಾಗಿ ಓದುಗರ ಗಮನವನ್ನು ಸೆಳೆದಿರುವುದು ಲೇಖಕನಾದ ನನಗೆ ಖುಷಿಕೊಟ್ಟ ಸಂಗತಿ. ಧಾರವಾಡದ ’ಭೂಮಿ ಪ್ರತಿಷ್ಠಾನ’ ವಿಮರ್ಶಾ ಕೃತಿಗಾಗಿ ಕೊಡಮಾಡುವ ಪುರಸ್ಕಾರವನ್ನು ನೀಡಿ ಗೌರವಿಸಿದೆ. ಅದರ ಎರಡನೇ ಭಾಗ ಅವನಿ-ಅಂಬರ”ವಾಗಿ ಕಳೆದ ವರ್ಷ ಹೊರಬಂದಿದೆ. ಇಲ್ಲಿರುವ ಎಲ್ಲಾ ಬರಹಗಳು ವಿಸ್ತಾರ ಟಿ.ವಿ.ಯವರ ಡಿಜಿಟಲ್‌ನಲ್ಲಿ ಅಂಕಣವಾಗಿ ಬಂದಂತಹವು ಗಳೇ. ಇದಕ್ಕೆ ಮೂಲ ಕಾರಣ ವಿಸ್ತಾರದ ಸಂಸ್ಥಾಪಕರಾದ ಶ್ರೀ ಹರಿಪ್ರಕಾಶ ಕೋಣೆಮನೆಯವರು. ನನ್ನನ್ನು ಓರ್ವ ಅಂಕಣಕಾರನನ್ನಾಗಿ ರೂಪಿಸಿದ್ದಾರೆ. ಅವರನ್ನು ಮರೆಯುವಂತೆಯೂ ಇಲ್ಲ. ಅವರಿಗೆ ಮೊತ್ತಮೊದಲು ಧನ್ಯವಾದಗಳನ್ನು ಹೇಳಲೇ ಬೇಕು. ನನ್ನ ಈ ಕೃತಿ ಅವರಿಗೆ ಅರ್ಪಣೆ.
ಮೊದಲಿಗೆ ವಿಜಯ ಕರ್ನಾಟಕ ದಿನಪತ್ರಿಕೆ ನಂತರ ವಿಸ್ತಾರದಲ್ಲಿ ಪತ್ರಕರ್ತರಾಗಿರುವ ಮಿತ್ರ ರಮೇಶಕುಮಾರ ನಾಯಕ, ಎಂ.ಎಸ್.ಶರತ್, ಕೃಷ್ಣ ಭಟ್ಟರು ಅವರ ಸಹಕಾರವನ್ನು ಮರೆಯುವಂತೆಯೇ ಇಲ್ಲ. ಸದಾ ಬರಹಗಳಿಗೆ ಪ್ರೋತ್ಸಾಹಿಸುತ್ತಿರುವ ಶಶಿಧರ ಹೆಗಡೆ, ವಿದ್ಯಾರಶ್ಮಿ ಪೆಲತ್ತಡ್ಕ, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ, ಪತ್ರಕರ್ತರಾದ ಕೃಷ್ಣ ಭಟ್ಟ, ಶಶಿಧರ ಹೆಗಡೆ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು.
ನನ್ನ ಅಂಕಣದ ಮೊದಲ ಓದುಗರಾದ ಹಿರಿಯ ಪತ್ರಕರ್ತ ಮತ್ತು ವಿಮರ್ಶಕ ಶ್ರೀ ಅಶೋಕ ಹಾಸ್ಯಗಾರರು ನನ್ನ ನಿಡುಗಾಲದ ಮಿತ್ರರು. ಅವರು ಇಲ್ಲಿನ ಸಮಗ್ರ ಲೇಖನವನ್ನು ಪ್ರಕಟಣ ಪೂರ್ವದಲ್ಲಿಯೇ ಓದಿ ಸೂಕ್ತ ಸಲಹೆಗಳನ್ನು ಕೊಟ್ಟಿದ್ದಾರೆ. ಭಾರತೀಯ ಪುರಾಣ, ಮಹಾಕಾವ್ಯ ಮತ್ತು ವೇದೋಪನಿಷತ್ತುಗಳಲ್ಲಿ ಅಪಾರಜ್ಞಾನ ಹೊಂದಿರುವ ವೇದಬ್ರಹ್ಮ ಸೂರಾಲು ದೇವಿಪ್ರಸಾದ ತಂತ್ರಿಗಳು ಯಾವತ್ತಿಗೂ ನನ್ನ ಬೆಂಬಲಕ್ಕೆ ನಿಂತವರು ಇವರನ್ನೆಲ್ಲ ಸ್ಮರಿಸಿದಷ್ಟು ಕಡಿಮೆಯೇ. ಅದೇ ರೀತಿ ನಿರಂತರವಾಗಿ ನನ್ನ ಬರವಣಿಗೆಯನ್ನು ಮೆಚ್ಚಿ ಬೆನ್ನು ತಟ್ಟುತ್ತಿರುವ ಹಿರಿಯ ಪತ್ರಕರ್ತರಾದ ಅರುಣಕುಮಾರ ಹಬ್ಬು ಅವರನ್ನು ಮರೆಯಲಾರೆ. ಅವರ ಅಣ್ಣಂದಿರಾದ ರಾಮಚಂದ್ರ ಹಬ್ಬು, ಮೋಹನ ಹಬ್ಬು ಸಹೋದರ ಜಯಪ್ರಕಾಶ ಹಬ್ಬು, ಉದಯಕುಮಾರ ಹಬ್ಬು, ಪ್ರೊ. ಕೆ.ಇ.ರಾಧಾಕೃಷ್ಣ, ನನ್ನ ಆತ್ಮೀಯ ಮಿತ್ರ ಕವಿ ಮತ್ತು ಕತೆಗಾರ ರಾಜು ಹೆಗಡೆ ಮಾಗೋಡು, ಕಾಲನ ಕರೆಗೆ ಸಂದುಹೋದ ಅನಂತ ವೈದ್ಯ ಯಲ್ಲಾಪುರ, ಲಕ್ಷ್ಮೀನಾರಾಯಣ ಶಾಸ್ತ್ರಿ ಬೆಳಗಾವಿ, ದೂರದ ಜಮಖಂಡಿಯಲ್ಲಿದ್ದರೂ ತನ್ನ ಆಶು ಕವಿತ್ವದ ಮೂಲಕ ಸದಾ ನನ್ನ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಿರುವ ನನ್ನ ಸಹೋದರ ಸಮಾನ ನಾರಾಯಣ ಶಾಸ್ತ್ರಿ ಹಾಗೂ ವಿಧಾನ ಸೌಧದಲ್ಲಿ ಉನ್ನತ ಹುದ್ದೆಯಲ್ಲಿರುವ ಮತ್ತು ಸಾಹಿತ್ಯ ಪ್ರೇಮಿ ತುಕಾರಾಮ ಕಲ್ಯಾಣಕರ್, ಸದಾ ನನ್ನ ಲೇಖನವನ್ನು ಓದಿ ತಮ್ಮ ಅನಿಸಿಕೆಗಳನ್ನು ದಾಖಲಿಸುವ ವಿಜಯಪುರದ ಶ್ರೀ ಬಿ.ವಿ.ಕುಲಕರ್ಣಿ, ನಿತ್ಯಾನಂದ ಹೆಗಡೆ ಇವರೆಲ್ಲರೂ ನನ್ನ ಸಾಹಿತ್ಯದ ಪೋಷಕರುಗಳು. ಇವರೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.
ನನ್ನ ಆಯಿ ಶ್ರೀಮತಿ ಶಾರದಾ ಯಾಜಿ ನನಗೆ ಸಾಹಿತ್ಯದ ಗೀಳನ್ನು ಹತ್ತಿಸಿದವರು. ಅದೇ ರೀತಿ ನಿರಂತರವಾಗಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ನನ್ನ ಸೋದರ ಮಾವಂದಿರಾದ ಎಸ್. ಎಸ್.ಹೆಗಡೆ ನಿವೃತ್ತ ಶಿಕ್ಷಕರು, ಸಪ್ತಕದ ಜಿ.ಎಸ್.ಹೆಗಡೆ, ನನ್ನ ಚಿಕ್ಕಮ್ಮ ಪೂರ್ಣಿಮಾ ಹೆಗಡೆ ಇವರಲ್ಲಿ ಆಶೀರ್ವಾದವನ್ನು ಬೇಡುವೆ. ನನ್ನ ತಮ್ಮಂದಿರಾದ ಮಂಜುನಾಥ ಮತ್ತು ನಾಗರಾಜ ಮಗಳು ಮೇಧಾ, ಅಳಿಯ ಚಿದಂಬರಂ, ಮಗ ಮನು ಇವರೆಲ್ಲರೂ ನನ್ನ ಉಸಿರು.
ನನ್ನ ಸಾಹಿತ್ಯದ ಮೊದಲ ಓದು ಮತ್ತು ಅಕ್ಷರಗಳನ್ನು ತಿದ್ದುವ ನನ್ನ ಹೆಂಡತಿ ಮಂಗಲಾಳ ಸಹಕಾರವನ್ನು ನೆನಪಿಸಿಕೊಳ್ಳಲೇ ಬೇಕು.
ಈ ಕೃತಿಯನ್ನು ಪ್ರಾರಂಭದ ದಿನಗಳಿಂದಲೂ ತಾನೇ ಪ್ರಕಟಿಸುತ್ತೇನೆ ಎಂದು ಒತ್ತಾಯಿಸಿ ಈಗ ಪ್ರಕಟಿಸುತ್ತಿರುವ ಹಾಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹತ್ವದ ಕೃತಿಗಳನ್ನು ಅತ್ಯಂತ ಕಿರಿದು ವರ್ಷಗಳಲ್ಲಿಯೇ ಕೊಟ್ಟ ನನ್ನ ದಾಯಾದಿ ಬಂಧು ಯಾಜಿ ಪ್ರಕಾಶನದ ಗಣೇಶ ಯಾಜಿ ಮತ್ತು ಸವಿತಾ ಯಾಜಿ ದಂಪತಿಗಳಿಗೆ ಧನ್ಯವಾದಗಳು. ಮುಖಪುಟವನ್ನು ಅರ್ಥಪೂರ್ಣ ವಾಗಿ ಚಿತ್ರಿಸಿಕೊಟ್ಟ ಎಚ್.ಎಸ್.ಮೋನಪ್ಪ ಮತ್ತು ಸುಂದರವಾಗಿ ಮುದ್ರಿಸಿದ ರಾಷ್ಟ್ರೋತ್ಥಾನ ಮುದ್ರಣಾಲಯದ ಸರ್ವರಿಗೆ ಕೃತಜ್ಞತೆಗಳು.
ಕೊಂಡು ಓದುವ ನನ್ನೆಲ್ಲಾ ಸನ್ಮಿತ್ರರಿಗೆ ಮತ್ತೊಮ್ಮೆ ಕೃತಜ್ಞತಾಪೂರ್ವಕ ನಮನಗಳು.
ಸಾಲೇಬೈಲು ನಾರಾಯಣ ಯಾಜಿ
೧೭.೧೨.೨೦೨೪
ಪುಟ ತೆರೆದಂತೆ…
ಸವಿನುಡಿ / ೫
ಭೂಮಾನುಭೂತಿಯ ಬರಹಗಳು / ೭
ಧವಳ ಧರಣಿಯ ಮುತ್ತುಗಳನ್ನು ತೆರೆದಿಡುವ ಮುನ್ನ / ೧೧
೧. ನಿರ್ವಿಕಲ್ಪ ಉಪಾಸನೆಯ ಮಾರ್ಗ: ಗಣಪತಿ / ೧೫
೨. ಅಳುವ ಇಳೆಯ ಉಳಿಸಿದ ಕೃಷ್ಣಾವತರಣ / ೨೪
೩. ಜಗದ್ವಂದ್ಯನನ್ನು ಹೆತ್ತೂ ತಬ್ಬಲಿಯಾದ ಮಹಾತಾಯಿ: ದೇವಕಿ / ೩೧
೪. ವೇದಾಂತ ಆಧಾರಿತ ಸಮಾಜವಾದವನ್ನು ಕೊಟ್ಟ ದಾರ್ಶನಿಕ / ೩೬
೫. ದುಷ್ಟ ವಿನಾಶಿನಿ ಜಯದುರ್ಗೆ / ೪೨
೬. ಶೃಂಗಾರದ ಪ್ರತಿರೂಪ ಮತ್ತು ಧರ್ಮಪ್ರಜ್ಞೆಯ ದಿಟ್ಟ ಸ್ತ್ರೀ: ಶಕುಂತಲೆ / ೪೬
೭. ಲಲಿತಾ ತ್ರಿಪುರಸುಂದರಿ / ೫೫
೮. ನೇತಿ ನೇತಿ: ವಾಸ್ತವ ಮತ್ತು ತೋರಿಕೆಯಲ್ಲಿ ಸತ್ಯದ ಹುಡುಕಾಟ / ೬೨
೯. ಮಾನಸಿಕ ವಿಷಾದದ ಅಂತಿಮ ಫಲವೇ ಯುದ್ಧವೆಂದು ಸಾರಿದ ವಿಷಾದಯೋಗ / ೬೮
೧೦. ಗುರುಶಿಷ್ಯ ಪರಂಪರೆ / ೭೮
೧೧. ಅತಿಥಿ ಸತ್ಕಾರವೇ ದೈವಕೈಂಕರ್ಯವೆಂದ ದಂಪತಿಗಳು: ಮುದ್ಗಲ ಮತ್ತು ಮುದ್ಗಲಾನಿ / ೮೪
೧೨. ಶಾಕ್ಯಮುನಿ ಗೌತಮ: ಮಧ್ಯಮಮಾರ್ಗದ ಹರಿಕಾರ / ೯೦
೧೩. ಚಂದ್ರವಂಶದ ದೊರೆ ರಂತಿದೇವ / ೯೬
೧೪. ಸೃಷ್ಟಿಯ ಹಿಂದಿರುವ ಪೂರ್ಣತೆಯೇ ಅರ್ಧನಾರೀಶ್ವರತ್ವ / ೧೦೦
೧೫. ಸುವರ್ಚಲೆ / ೧೦೫
೧೬. ರಾಮನೆನ್ನುವ ಆದರ್ಶ: ಅವಲೋಕನ / ೧೧೧
೧೭. ಯುಗಾದಿ ಹಬ್ಬ: ಬೇಂದ್ರೆ ಮತ್ತು ಕುವೆಂಪು ತೋರಿಸಿದ ದರ್ಶನ / ೧೧೭
೧೮. ಅಧಿಕ ಮತ್ತು ಕ್ಷಯ ಮಾಸ: ಭಾರತೀಯರ ಕಾಲಗಣನೆಯ ಕೌತುಕ / ೧೨೩
೧೯. ರಾಮಕೃಷ್ಣ ಪರಮಹಂಸರ ತಪಸ್ಸಿನ ಸಾಫಲ್ಯದ ಫಲ ಸ್ವಾಮಿ ವಿವೇಕಾನಂದ / ೧೨೮
೨೦. ಪ್ರಾಚೀನ ಭಾರತದ ಗಣತಂತ್ರ ವ್ಯವಸ್ಥೆ / ೧೩೪
೨೧. ಡಾ. ಬಿ.ಆರ್.ಅಂಬೇಡ್ಕರ್: ಅವಮಾನವನ್ನು ಅರಗಿಸಿ ಬೆಳೆದ ಮಹಾಪುರುಷ / ೧೪೫
೨೨. ಗಾಂಧಿ ಎನ್ನುವುದು ಒಂದು ಯುಗಧರ್ಮ / ೧೫೩
೨೩. ಲಾಲ್ ಬಹಾದ್ದೂರ್ ಶಾಸ್ತ್ರಿ : ಆತ್ಮನಿರ್ಭರ ಭಾರತದ ರುವಾರಿ / ೧೫೯
೨೪. ಸ್ವಾತಂತ್ರ್ಯ ಚಳುವಳಿಯಲ್ಲಿ ರೈತ ಹೋರಾಟದ ಬೇರುಗಳು / ೧೬೬
೨೫. ಮಾಗಿ ಮುಸುಕಿದ ಇಳೆಯ ಬೆಳಗುವ ನೀರಾಜನ: ದೀಪಾವಳಿ / ೧೭೬
Reviews
There are no reviews yet.