ಒಗೆದ ಹಚ್ಚಡ
ಹಚ್ಚಡ ಒಗೆಯ ಬೇಕಮ್ಮ ಬಹುಕೊಳೆ
ಮುಚ್ಚಿಕೊಂಡಿಹುದು ನೋಡಮ್ಮ |
ಸ್ವಚ್ಛವ ಮಾಡುತ ಅಚ್ಯುತನಂಘ್ರಿಗೆ
ಬೆಚ್ಚಗೆ ಹೊದೆಸಲು ಇಚ್ಛೆಯ ಮಾಡುತ ||
ಎಂದು ಆರಂಭಗೊಳ್ಳುವ ಕೀರ್ತನೆ, ಮುಂದೆ ಇಂಥ ಹಚ್ಚಡವನ್ನು ಒಗೆಯುವುದು ಹೇಗೆ ಎಂದು ಮನೋಜ್ಞವಾಗಿ ನಿರೂಪಿಸುತ್ತದೆ. ಬಟ್ಟೆ ಒಗೆದವರು, ಬಟ್ಟೆ ಒಗೆಯುವವರು ಎಷ್ಟು ಮಂದಿ ಇಲ್ಲ? ಆದರೆ ಬರಿಯ ಬಟ್ಟೆಯನ್ನು ಒಗೆಯುವುದು ಮಾತ್ರವಲ್ಲ, ಅದರೊಂದಿಗೆ ಬದುಕಿನ ಬಟ್ಟೆಯನ್ನೂ ಸ್ವಚ್ಛವಾಗಿ ಒಗೆದು ಮಡಿ ಮಾಡಿ ಅಚ್ಯುತನಂಘ್ರಿಗೆ ಹೊದಿಸುವ ಯೋಗ್ಯತೆಯುಳ್ಳ ವಸ್ತ್ರವನ್ನಾಗಿಸುವ ಹಿರಿಮೆ ಕೆಲವರಿಗೆ ಮಾತ್ರ ಸಾಧ್ಯ. ಜೊತೆಗೆ ಬಟ್ಟೆ ಒಗೆಯುವ ಸಾಧಾರಣ ಅನುಭವವನ್ನು ನಿರಾಕರಿಸದೆ, ಆ ಮೂಲಕವೇ ಬದುಕಿನ ಸ್ವರೂಪವೇನು, ಅದನ್ನು ಉದ್ಧರಿಸಿಕೊಳ್ಳುವುದು ಹೇಗೆ ಎನ್ನುವ ಅನುಭಾವವನ್ನೂ ಇಷ್ಟು ಮನೋಜ್ಞವಾಗಿ ನಿರೂಪಿಸಿದವರೂ ವಿರಳ. ಭಾವ ಭಾಷೆಗಳ ಬಂಧುರ ಬಂಧದ ನಾದಮಯವಾದ ಇಂಥ ಕೀರ್ತನೆಗಳ ಮೂಲಕ ರಸಜ್ಞರ, ಶ್ರದ್ಧಾಳುಗಳ, ಗಾಯಕರ ಮನಸೆಳೆಯುವ ಅನನ್ಯ ಹರಿದಾಸಿ ಅಂಬಾಬಾಯಿಯವರು. (ಕ್ರಿ.ಶ. ೧೯೦೨-೧೯೪೬?) ಕಿರು ಕೀರ್ತನೆಗಳಿಂದ ಹಿಡಿದು ಮಹಾಕಾವ್ಯದ ಅಪಾರ ಹರಹಿನ ಕಾವ್ಯರಚನೆ ಮಾಡಿದ ಧೀಮಂತೆ. ಅವರ ಕರ್ತೃತ್ವ ಶಕ್ತಿಗೆ ಮತ್ತೊಂದು ಹೊಸಗರಿ ಪ್ರಸ್ತುತದ ಅವರ ’ದಿನಚರಿ’. ಮುದ್ದಾದ, ತಪ್ಪಿಲ್ಲದ, ಅವರದೆ ಅಕ್ಷರಗಳಲ್ಲಿ ಮೂಡಿರುವ ಈ ಕಿರು ದಿನಚರಿಗೆ ಅವರನ್ನು ನಾವು ಎಷ್ಟು ಅಭಿನಂದಿಸಿದರೆ ತಾನೆ ಸಾಕಾದೀತು? ಏಕೆಂದರೆ ಸುಮಾರು ನೂರು ವರ್ಷಗಳ ಹಿಂದಿನ ಮಹಿಳೆಯೊಬ್ಬಳ, ಅದರಲ್ಲೂ ಹರಿದಾಸ ದೀಕ್ಷೆ ಪಡೆದ, ಕೇಶ ಮುಂಡನವಾಗಿರುವ ಮಾಧ್ವ ಬ್ರಾಹ್ಮಣ ಮಡಿ ಹೆಂಗಸೊಬ್ಬಳ ಈ ದಿನಚರಿ ಊಹಿಸಿದಷ್ಟು ರೋಮಾಂಚಕವಾಗಿ ಕಾಣುತ್ತದೆ. ಜೊತೆಗೆ ಅಂದಿನ ಬದುಕನ್ನು ಇಣುಕಿ ನೋಡಲು ಇಲ್ಲಿ ಹತ್ತಾರು ಬೆಳಕಿಂಡಿಗಳಿವೆ.
ಕಾಲಗರ್ಭದಲ್ಲಿ ಹೇಳಹೆಸರಿಲ್ಲದೆ ಕಣ್ಮರೆಯಾಗಿಬಿಡುತ್ತಿದ್ದ ಈ ಅಪೂರ್ವ ದಿನಚರಿಯನ್ನು ಹೀಗೆ ಬೆಳಕಿಗೆ ತಂದು, ಬಲು ದೊಡ್ಡ ಸಾಹಸವನ್ನು ಮಾಡಿರುವ ಡಾಕ್ಟರ್ ಶಾಂತಾನಾಗರಾಜ್ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಈ ಪುಟ್ಟ ದಿನಚರಿ ನಮಗೆ ನೀಡುವ ದೊಡ್ಡ ಅನುಭವಕ್ಕಾಗಿ ಅಂಬಾಬಾಯಿಯವರಿಗಷ್ಟೇ ಅಲ್ಲ, ನಾವು ಡಾಕ್ಟರ್ ಶಾಂತಾ ಅವರಿಗೂ ಆಭಾರಿಗಳೆ.
ಹದಿವಯಸ್ಸಿನಲ್ಲಿಯೇ ವೈಧವ್ಯ, ಬಡತನ, ಪರಾಶ್ರಯ ಮುಂತಾದ ಪಡಬಾರದ ಕಷ್ಟಗಳನ್ನು ಪಟ್ಟು, ದಾಸಶ್ರೇಷ್ಠ ಪರಮಪ್ರಿಯ ಸುಬ್ಬರಾಯದಾಸರಲ್ಲಿ ಹರಿದಾಸ ದೀಕ್ಷೆ, ಅಂಕಿತಗಳನ್ನು ಪಡೆದು, ಕೀರ್ತನೆಗಳನ್ನು ರಚಿಸಿ-ಹಾಡಿ ಸುಂದರ ಕಾಂಡದ ಅಂಬಾಬಾಯಿ ಎಂಬ ಖ್ಯಾತಿಯನ್ನು ಪಡೆದವರಿವರು. ಬದುಕು ಒಂದು ಮಟ್ಟದ ಸಮತಲದಲ್ಲಿರುವಾಗ, ಅದನ್ನು ಬಿಟ್ಟು ಗುರುಗಳ ಆಶೀರ್ವಾದದೊಂದಿಗೆ ತಮ್ಮ ವಿಜಯ ಪ್ರಯಾಣದ ಸಂಚಾರಿ ಬದುಕನ್ನು ಆರಂಭಿಸಿದರು. ಅದು ಸಾಂಸಾರಿಕ ಕಷ್ಟಗಳಿಗೆ ಹೆದರಿ ಪಲಾಯನ ವಾದಿಯಾಗಿ ಕೈಗೊಂಡ ನಿರ್ಧಾರವಲ್ಲ. ಇಂದೂ ಕೂಡ ಎಷ್ಟೋ ಮಹಿಳೆಯರು ಒಂಟಿಯಾಗಿ ಪ್ರಯಾಣ ಮಾಡಲು ಹಿಂಜರಿಯುವಾಗ ಒಂದು ಶತಮಾನದ ಹಿಂದೆ ಏಕಾಂಗಿಯಾಗಿ, ಕೈಯಲ್ಲಿ ಒಂದೇ ಒಂದು ರೂಪಾಯಿ ಹಿಡಿದು, ಎಂದೂ ನೋಡಿರದ ಸ್ಥಳಗಳಿಗೆ, ತನ್ನ ಆಧ್ಯಾತ್ಮಿಕ ಹಂಬಲದಿಂದ, ಅಸೀಮ ಕಷ್ಟ ಸಹಿಷ್ಣುತೆಯಿಂದ, ಅನನ್ಯ ಧೈರ್ಯದಿಂದ ವರ್ಷಾನುಗಟ್ಟಲೆ ಸಂಚಾರ ಮಾಡಿದ ಈ ವಿರಕ್ತೆಯ ವಿಜಯ ಯಾತ್ರೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಕಾಣದ ಊರು, ಅರಿಯದ ಜನ, ಕೇಳದ ಭಾಷೆ, ಊಹಿಸದ ತೊಡಕು ಯಾವುದು ಅವರ ಸಂಚಾರದ ನಿರ್ಧಾರವನ್ನು ಅಲುಗಾಡಿಸಲಿಲ್ಲ.
ಇದರ ಜೊತೆಗೆ ಚಾಚೂತಪ್ಪದೇ ಅನುಸರಿಸುತ್ತಿದ್ದ ಮಡಿಹೆಂಗಸಿನ ಬದುಕಿನ ಅನುಲ್ಲಂಘನೀಯ ಕಠಿಣ ಕಟ್ಟುಪಾಡುಗಳೂ ಇದ್ದವು. ಯಾವುದೋ ಮಠಮಾನ್ಯಗಳಲ್ಲಿ ದೊರೆಯಬಹುದಾದ ಊಟ, ಇಲ್ಲದಿದ್ದರೆ ಆ ಮನೆಗಳಲ್ಲಿ ಯಾಯಿವಾರ ಮಾಡಿ ತಂದ ಅಕ್ಕಿಯಿಂದ ಅನ್ನ ಬೇಯಿಸಿಕೊಳ್ಳಬೇಕಾದ ಅನಿವಾರ್ಯತೆ. ಸ್ನಾನಕ್ಕೊ ಕೆರೆ, ಹೊಳೆ, ಯಾರಾದರೂ ಸಜ್ಜನರು ಆಶ್ರಯ ಕೊಟ್ಟಲ್ಲಿ ವಸತಿ.
ಹಸಿವಾದೊಡೆ ಭಿಕ್ಷಾನಗಳುಂಟು
ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು
ಶಯನಕ್ಕೆ ಪಾಳು ದೇಗುಲಗಳುಂಟು
ಚೆನ್ನಮಲ್ಲಿಕಾರ್ಜುನಾ
ಆತ್ಮಸಂಗಾತಕ್ಕೆ ನೀನೆನಗುಂಟು
ಎಂಬ ಅಕ್ಕಮಹಾದೇವಿಯ ಆತ್ಮಗೀತೆ ಅಂಬಾಬಾಯಿಯವರಿಗೂ ಹೇಳಿ ಮಾಡಿಸಿದಂತಿದೆ. ಇದರೊಂದಿಗೆ ದಿನ ದಿನವೂ ಹಾದಿ-ಬೀದಿಗಳಲ್ಲಿ ತಾಳ-ತಂಬೂರಿ ಹಿಡಿದು ಕೀರ್ತನೆಗಳನ್ನು ಹಾಡುತ್ತಾ, ರಚಿಸುತ್ತಾ, ಆಸಕ್ತರಿಗೆ ಕಲಿಸುತ್ತಾ, ಮಕ್ಕಳಿಗೆ ಭಜನೆ ಮಾಡಿಸುತ್ತಾ, ಪ್ರಾಜ್ಞರೊಂದಿಗೆ ವಾಗ್ವಾದ ನಡೆಸುತ್ತಾ, ಸಮಾಜದಲ್ಲಿ ಭಕ್ತಿ-ಶ್ರದ್ಧೆಗಳು ಊರ್ಜಿತಗೊಳ್ಳಲು ಸ್ವಾರ್ಥದ ಲವಲೇಶವಿಲ್ಲದೆ ಪರ್ಯಟನೆ ಮಾಡಿದ್ದನ್ನು ಅವರ ದಿನಚರಿಯ ಮೂಲಕವೇ ಕಂಡುಕೊಳ್ಳಬಹುದು. ಇದು ಪ್ರತಿದಿನ ತಾನೇನು ಮಾಡುತ್ತಿದ್ದೇನೆ ಎಂಬುದನ್ನು ಗುರುಚರಣದಲ್ಲಿ ನಿವೇದಿಸಲೆಂದು ಬರೆದ ದಿನವಹಿಯೇ ವಿನಃ ಸ್ವಂತದ ಅಗ್ಗಳಿಕೆಯ ದಾಖಲೆಗಲ್ಲ. ಈ ತ್ರುಟಿತ ದಿನಚರಿ ಅಂಬಾಬಾಯಿಯವರ ವ್ಯಕ್ತಿತ್ವದ ಋಜುತೆ, ಸಂಪ್ರದಾಯ ಶರಣತೆ, ಗಟ್ಟಿತನ, ಪುಸ್ತಕ ಪ್ರೀತಿಗಳನ್ನು ಪರೋಕ್ಷವಾಗಿ ತಿಳಿಸುತ್ತದೆ. ಅಷ್ಟೇ ಅಲ್ಲ ಅವರು ಕಂಡ ಪ್ರಪಂಚದ ವಿವಿಧ ನೋಟಗಳನ್ನು ನೀಡುತ್ತದೆ.
ಹಿಟ್ಟು ಅವಲಕ್ಕಿಗಳ ಮೂಲಕ್ಕೆ ಹುಟ್ಟಿದಳೊ
ಹೂಬತ್ತಿ ಹೊಸೆಯಲಿಕೆ ಮೈ ತಳೆದಳೊ
ಎಂಬ ವರಕವಿ ದ.ರಾ.ಬೇಂದ್ರೆಯವರ ಮಾತುಗಳನ್ನು ನೆನೆದುಕೊಳ್ಳಿ. ಕತ್ತಲು ತುಂಬಿದ ಅಡುಗೆ ಕೋಣೆಗಳ ಕೊನೆ ಇರದ ಕೆಲಸಗಳಲ್ಲಿ, ಯಾರಿಗೂ ಬೇಡವಾಗಿ ಪರಾಶ್ರಯದಲ್ಲಿ ಅವಮಾನ-ನಿರಾಸೆಗಳ ಸಂಕಷ್ಟದ ಹಾದಿಯಲ್ಲಿ ಹೇಳ ಹೆಸರಿಲ್ಲದಂತೆ ಅಗಣಿತ ವಿಧವೆಯರು ನಮ್ಮಲ್ಲಿ ಆಗಿ ಹೋಗಿದ್ದಾರೆ. ಹೀಗೆ ಆಗುವ ಎಲ್ಲಾ ಒತ್ತಡಗಳಿದ್ದರೂ ಅದನ್ನು ಮೀರಿ ಅಂಬಾಬಾಯಿ ತಮ್ಮ ಸತ್ವದ ಬಲದಿಂದ ಇತಿಹಾಸದಲ್ಲಿ ತಮಗೊಂದು ಸ್ಥಾನ ಕಲ್ಪಿಸಿ ಕೊಂಡರು. ಸಂಪ್ರದಾಯದ ಹಾದಿಯನ್ನು ಬಿಡದೆ, ಅದರ ವಿಸ್ತಾರವನ್ನು ತಮಗೆ ಬೇಕಾದಂತೆ ಹಿಗ್ಗಿಸಿಕೊಂಡ ಅಪರೂಪದ ವ್ಯಕ್ತಿ ಇವರು.
ಅಂಬಾಬಾಯಿ ಮಡಿ ಹೆಂಗಸಾದರೂ ಪ್ರತಿ ತಿಂಗಳೂ ಹೊರಗಾಗಬೇಕಾದದ್ದು ಪ್ರಕೃತಿ ಸಹಜವಷ್ಟೆ. ಆಗ ಅನುಸರಿಸಬೇಕಾದ ಹಲವು ಕಟ್ಟುಪಾಡುಗಳ ಕಠೋರ ದಿನಗಳನ್ನು ಅಪರಿಚಿತರ ಮನೆಯಲ್ಲಿ ಕಳೆಯಬೇಕಾಗುವ ಹಿಂಸೆಯನ್ನು ಓದುವಾಗ ಇಂದು ಕಂಪಿಸು ವಂಥಾಗುತ್ತದೆ. ತಮ್ಮ ಸಂಪಾದನೆಯ ಅಕ್ಕಿಯನ್ನು ನೀಡಿದ ಮೇಲು ಊಟಕ್ಕೆ ಕರೆಯದ ಕೆಲವು ಮಠಗಳ ಅನುಭವಗಳು, ಉಳಿದುಕೊಳ್ಳಲು ಜಾಗ ಕೊಡದ ಧಾರ್ಮಿಕ ಕೇಂದ್ರಗಳು, ಕತ್ತಲ ಪ್ರಯಾಣಗಳು, ಆಗೀಗ ಕಾಡುವ ಅನಾರೋಗ್ಯ, ವ್ಯಂಗ್ಯ ಕಟಕಿಗಳನ್ನಾಡುವ ಹಲವಾರು ಜನ -ಈ ಎಲ್ಲವುಗಳಿಗೂ ದಿನಚರಿಯಲ್ಲಿ ಸೂಚನೆಗಳಿವೆ. ಇವೆಲ್ಲ ಕಷ್ಟಗಳು ಅಂಬಾಬಾಯಿಯವರಿಗೆ ಕಷ್ಟವಾಗಿ ತೋರಲಿಲ್ಲ. ಏಕೆಂದರೆ ಅವರ ಮನೋಭೂಮಿಕೆ ಬೇರೆಯದಾಗಿತ್ತು.
ನನ್ನನ್ನು ಊಟಕ್ಕೆ ಕರೆಯಬೇಕೆಂದು ದೇವರು ಅವರಿಗೆ ಪ್ರೇರಣೆಯನ್ನು ಕೊಡಲಿಲ್ಲ. ದೈವ ಚಿತ್ತ ಎಂದು ಭಾವಿಸಬಲ್ಲ ಧರ್ಮ ಶ್ರದ್ಧೆ, ಮನಸ್ಸಿನ ಪರಿಪಾಕ ಅವರದಾಗಿತ್ತು. ಅವರ ದಿನಚರಿಯಲ್ಲಿ ಇತರರನ್ನು ದೂರಿರುವ ಒಂದೇ ಒಂದು ಪ್ರಸಕ್ತಿಯೂ ಇಲ್ಲ. ತೇನವಿನ ತೃಣಮಪಿ ನ ಚಲತಿ ಎಂದು ನಂಬಿದ ಮೇಲೆ ಯಾರನ್ನು ಏಕೆ ದೂರುವುದು.
ಕೇವಲ ಧರ್ಮಶ್ರದ್ಧೆ, ದಾಸಭಾವಗಳ ಅಮಾಯಕ ಮೂರ್ತಿ ಆಗಿರಲಿಲ್ಲ ಅಂಬಾಬಾಯಿ. ಅವರು ಇಚ್ಛಾಶಕ್ತಿ, ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳು ಒಗ್ಗೂಡಿದಂತಿದ್ದರು. ನಮ್ರ ಆದರೂ ದಿಟ್ಟತೆಯ ಅವರು ದಾಸರ ಕಟ್ಟೆಯನ್ನು ನಿರ್ಮಿಸಿದ್ದಾಗಲಿ, ಗೋಪಾಲಕೃಷ್ಣನ ವಿಗ್ರಹ ಪಡೆದುಕೊಳ್ಳುವಲ್ಲಾಗಲಿ, ಚೆಂಗಾಗಿ ತಿಲಕದ ಪ್ರಸಂಗದಲ್ಲಾಗಲಿ, ಯಾವ ಅವಘಡಗಳಿಗೂ ಸಿಕ್ಕಿಕೊಳ್ಳದೆ ಅಷ್ಟೊಂದು ಸ್ಥಳಗಳನ್ನು ಸಂದರ್ಶಿಸುವುದರಲ್ಲಾಗಲಿ ಇದು ನಮ್ಮ ಅನುಭವಕ್ಕೆ ಬರುತ್ತದೆ. ’ಕೆರೆಯ ನೀರನ್ನು ಕೆರೆಗೆ ಚೆಲ್ಲಿದಂತೆ’ ಆ ಊರಲ್ಲಿ ದೊರೆತ ಪುಡಿಗಾಸುಗಳನ್ನು ಅಲ್ಲಿಯೇ ವಿನಿಯೋಗಿಸಿ ಮತ್ತೆ ಕಾಲಿ ಕೈಯಲ್ಲಿ ಮುಂದೆ ಹೊರಟವರಿವರು. ಅವರು ಇಳಿದುಕೊಳ್ಳುತ್ತಿದ್ದ ಮನೆಗಳಲ್ಲಿಯೂ ಸಹಜವಾಗಿ ಅವರವರದೇ ಕಾಷ್ಠ ವ್ಯಸನ ಗಳಿರುತ್ತಿದ್ದವು. ಅವಕ್ಕೆಲ್ಲ ಅನವಶ್ಯಕವಾಗಿ ಮೂಗು ತೂರಿಸದೆ, ಎಷ್ಟು ಮಿತವಾಗಿ ಬದುಕಬಹುದು ಅಷ್ಟು ಸಂಕೋಚದಿಂದ, ಯಾರಿಗೂ ತೊಂದರೆ ಕೊಡದೆ ಇದ್ದುದರಿಂದಲೇ ಅವರಿಗೆ ಅಷ್ಟು ಕಾಲ ಪರ ಸ್ಥಳಗಳಲ್ಲಿ, ಪರ ಜನರೊಂದಿಗೆ ಇರಲಾಯಿತು. ಇದಕ್ಕೆ ದಿನಚರಿಯಲ್ಲೆ ಪುರಾವೆಗಳಿವೆ. ಜೊತೆಗೆ ಡಾ. ಶಾಂತಾ ಅವರು ತಮ್ಮ ಲೇಖನದಲ್ಲಿ ಅಂತಹ ಸಂದರ್ಭಗಳನ್ನು ಬೆರಳಿಟ್ಟು ತೋರಿದ್ದಾರೆ. ಹಾಗಿದ್ದೂ ಒಂದು ಪ್ರಸಂಗವನ್ನು ನಾನು ಉಲ್ಲೇಖಿಸಬಯಸುತ್ತೇನೆ.
ಧಾರವಾಡದ ಶನಿವಾರ ಪೇಟೆಯ ಶೇಷಾಚಾರ್ಯರ ಮನೆಯಲ್ಲಿ ಅವರು, ಅವರ ಮಗ ತಮ್ಮ ಹಾಗೂ ಇತರರೊಂದಿಗೆ ಅಂಬಾಬಾಯಿಯವರು ಮಾಧ್ವ ತತ್ವಜ್ಞಾನದ ಪ್ರಮೇಯಗಳನ್ನು ಕುರಿತು ಮಾತನಾಡುತ್ತಿದ್ದ ಸಂದರ್ಭ. ಶೇಷಾಚಾರ್ಯರ ತಮ್ಮ ತಮಗೆ ಬಿದ್ದ ಕನಸೊಂದನ್ನು ಹೇಳಿ ಅದರ ರಹಸ್ಯ ತಿಳಿಯಲಾಗಿಲ್ಲ ಎನ್ನುತ್ತಾರೆ. ಆ ವಿಷಯ ಅಲ್ಲಿದ್ದವರಿಗೆಲ್ಲ ತಿಳಿದಿತ್ತು. ಅಲ್ಲಿಯವರೆಲ್ಲ ಅಂಬಾಬಾಯಿಯವರು ಹೇಳಬಹುದಾದ ವಿವರವನ್ನು ಎದುರು ನೋಡುತ್ತಿದ್ದರು. ಆದರೆ ಅದನ್ನು ತಿಳಿಹೇಳುವಷ್ಟು ತಾನು ದೊಡ್ಡವಳಲ್ಲ ಎಂದು ಭಾವಿಸುವ ಅಂಬಾಬಾಯಿ ಮೌನವಾಗಿರುತ್ತಾರೆ. ತಮ್ಮ ಶ್ರೇಷ್ಠತೆಯನ್ನು, ತಿಳುವಳಿಕೆಯನ್ನು, ವಾಗ್ಮಿತೆಯನ್ನು ಮೆರೆಸಬೇಕೆಂಬ ಹಂಬಲವುಳ್ಳ ಯಾರೂ ಇಂತಹ ಸದವಕಾಶವನ್ನು ಬಿಡುವುದಿಲ್ಲ. ಅಂಬಾಬಾಯಿಯವರು ಏನು ಹೇಳಿದರೂ ಸೈ ಎನ್ನುವ ವಾತಾವರಣ ಅಲ್ಲಿತ್ತು. ಆದರೆ ಆಕೆ ಆ ಬಗ್ಗೆ ಮಾತನಾಡುವುದೇ ಇಲ್ಲ. ಪ್ರಮೇಯದ ಅರ್ಥ, ಇದೆ ಎಂಬುದು ಖಚಿತ, ಅದನ್ನು ಹೇಳಬಹುದು ಆದರೆ ಮತ್ತೊಬ್ಬರು ಕಂಡ ಸ್ವಪ್ನದ ಅರ್ಥವನ್ನು ’ಇದಮಿತ್ಥಂ’ ಎಂದು ಹೇಳುವುದು ಹೇಗೆ? ಆಗ ಮೌನವೇ ಉಚಿತ. ಮಾತನ್ನು ಆಡುವಂತೆಯೆ ಆಡದಿರುವುದನ್ನೂ ರೂಢಿಸಿಕೊಂಡವರು ಮಾತ್ರ ದೊಡ್ಡವರಾಗುತ್ತಾರೆ.
ಅವರ ದಿನಚರಿಯ ಮೂಲಕವೇ ಅವರ ಜೀವನ ವಿವೇಕ ಪುಟಗೊಳ್ಳುತ್ತದೆ. ಗಂಡನ ಮನೆಯಲ್ಲಿ ’ಕೆಟ್ಟ ಕಾಲ್ಗುಣದವಳು’ ಎಂಬ ಅಪಪ್ರಧೆ ಹೊತ್ತು, ಹದಿವಯಸ್ಸಿನಲ್ಲೇ ನಿರ್ಗತಿಗಳಾಗಿ ಹೊರಬಂದ ಈ ವಿಧವೆಗೆ, ಆ ಮನೆಯ ಬಗ್ಗೆ ಬಲವಾದ ಕೋಪ, ತಿರಸ್ಕಾರಗಳಿರುವುದು ಬಹು ಸಹಜ! ಆದರೆ ಅಂಬಾಬಾಯಿ ಆ ಮನೆಯವರೊಂದಿಗೂ ಸೌಹಾರ್ದತೆ ಬೆಳೆಸಿಕೊಂಡರು. ಅಲ್ಲಿಂದಲೇ ತಮ್ಮ ಆರಾಧ್ಯ ದೈವ ಗೋಪಾಲಕೃಷ್ಣನ ಮೂರ್ತಿ ಪಡೆದರು. ತಾವು ವೈರಾಗ್ಯದ ಹಾದಿ ಹಿಡಿದರೂ ಸಂಸಾರವಂದಿಗರಾದ ಸಂಬಂಧಿಗಳ ಬಗೆಗೆ ಎಂದಿಗೂ ಕಟುವಾಗಲಿಲ್ಲ, ಕ್ಷುದ್ರರೆಂದು ಭಾವಿಸಲಿಲ್ಲ, ವ್ಯವಹಾರವನ್ನು ಕಡಿದುಕೊಳ್ಳಲಿಲ್ಲ. ತಂಗಿಗೆ ಪತ್ರ ಬರೆದಾಗ ಆಕೆಯ ಕಿರುಗೂಸನ್ನು ಸಹ ಉಲ್ಲೇಖಿಸುತ್ತಾರೆ. ಹಾಗೆಯೇ ತನಗೆಂದು ಸಂಪ್ರದಾಯ ವಿಧಿಸಿರುವ ಎಲ್ಲ ಜಪ, ತಪ, ವ್ರತ, ನಿಯಮಗಳನ್ನೂ ಚಾಚೂತಪ್ಪದೆ ನಡೆಸಿದರು. ಆದರೆ ಮತ್ತೊಬ್ಬರನ್ನು ಬಲವಂತ ಪಡಿಸಿದ್ದಿಲ್ಲ. ಎದುರಿಗಿರು ವವರನ್ನು ಸಣ್ಣದು ಮಾಡಿ ತಾವು ದೊಡ್ಡವರಾಗುವ ಹಂಬಲ ಅಂಬಾಬಾಯಿಯವರಲ್ಲಿ ಕಾಣುವುದಿಲ್ಲ.
ಮುಖೇಡಿಯಾಗದೆ ಸ್ತ್ರೀ ಪುರುಷರೊಂದಿಗೆ ಉಚಿತವಾಗಿ ಬೆರೆಯುತ್ತಿದ್ದರು. ಏಕಾಂಗಿಯಾಗಿ ಹೊರಟ ಹೆಂಗಸಿಗೆ ಕೊಂಕು ನೋಟ, ವ್ಯಂಗ್ಯದ ಮಾತು, ತಿರಸ್ಕಾರ ಅವಮಾನಗಳು ಬರಲಿಲ್ಲವೆಂದಲ್ಲ. ಆದರೆ ಅವರು ಅದನ್ನೇ ದೊಡ್ಡದು ಮಾಡಿ ತಮ್ಮ ದುರ್ವಿಧಿಗಾಗಿ ಅಳುತ್ತಾ ಕೂರಲಿಲ್ಲ. ಅವುಗಳನ್ನು ಪಕ್ಕಕ್ಕೆ ಸರಿಸಿ, ತಮಗೆ ಸರಿ ಕಂಡದ್ದನ್ನೇ ಮಾಡಿದರು. ಇಲ್ಲಗಳ ಪಟ್ಟಿ ಹಾಕಲಿಲ್ಲ ಇದ್ದದನ್ನೇ ಭೂಮ ಮಾಡಿಕೊಂಡರು. ಯೋ ವೈ ಭೂಮಾ ತತ್ಸುಖಂ.
ಅವರನ್ನು ಆದರಿಸಿದವರು ಎಷ್ಟು ಮಂದಿ? ಬ್ರಾಹ್ಮಣರು, ಬ್ರಾಹ್ಮಣೇತರರು ಅವರನ್ನು ಗೌರವಿಸಿದರು. ರೈಲು, ಬಸ್ಸು, ಪೋಸ್ಟು, ಕಾಫಿ, ಅಮಲ್ದಾರ್ರು, ಪ್ರಿಂಟುಗಳ ಪರಿಚಯ ಅಂಬಾಬಾಯಿ ಅವರಿಗಿದ್ದರೂ, ಅವರು ಹೇಳುವ ನೂರು ವರ್ಷಗಳ ಹಿಂದಿನ ಬದುಕು ಶತಮಾನಗಟ್ಟಲೆ ಹಳೆಯದರಂತೆ ತೋರುತ್ತದೆ. ಅವರು ಒಂದರ್ಥದಲ್ಲಿ ಆಧುನಿಕರು, ಮತ್ತೊಂದು ಅರ್ಥದಲ್ಲಿ ಪ್ರಾಚೀನರು. ತಮ್ಮ ಬದುಕನ್ನು ತಮ್ಮ ಕೈಗೆ ತೆಗೆದುಕೊಂಡ ಅನನ್ಯತೆಯ ಆಕೆ, ತನ್ನ ಸಮಕಾಲೀನ ಸ್ವತಂತ್ರಪೂರ್ವ ಭಾರತದ ವಿದ್ಯಮಾನಗಳ ಬಗೆಗೆ, ತಲ್ಲಣಗಳ ಬಗೆಗೆ, ಆಧುನೀಕರಣದ ಬಗೆಗೆ ಮೌನ ತಾಳಿದ್ದಾರೆ. ಅವರಿಗೆ ತಮ್ಮ ಅಂತರಂಗದಲ್ಲಿರಬಹುದಾದ ತಳಮಳಗಳನ್ನಾಗಲಿ, ಬಹಿರಂಗದ ರಾಜಕೀಯ ವಿಪ್ಲವ ಗಳನ್ನಾಗಲಿ ತೋರಿಸುವ ಉದ್ದೇಶವಿಲ್ಲ. ಅವುಗಳೂ ಇದ್ದಿದ್ದರೆ ಈ ದಿನಚರಿ ಎಂತಹ ಸ್ವರೂಪವನ್ನು ಪಡೆಯುತ್ತಿತ್ತೊ! ಯಾವಾಗಲೂ ಆಗುವಂತೆ ಸ್ವಲ್ಪ ಭೀತಿಯಾಯಿತು ಎಂದೊ, ಕೃಷ್ಣ ಕಾಪಾಡಿದ ಎಂದು ಅಪರೂಪಕ್ಕೊಮ್ಮೆ ಉದ್ಗರಿಸುತ್ತಾರೆ. ಎಂತೆಂತಹ ಭೀತಿಗಳೊ ಓದುಗರು ಊಹಿಸಿಕೊಳ್ಳಬೇಕಷ್ಟೆ.
ನಮ್ಮ ಪುರಾಣ ಕಥೆಗಳು, ರಾಮಾಯಣ, ಮಹಾಭಾರತ, ಭಾಗವತ ಪ್ರಸಂಗಗಳು, ದಶಾವತಾರ ವರ್ಣನೆಗಳೆಲ್ಲ ಅವರ ಹಾಡುಗಳಲ್ಲಿ ಹಾಸುಹೊಕ್ಕಾಗಿವೆ. ಗೋದಾವರಿ, ತುಂಗೆ ಮುಂತಾದ ನದಿಗಳನ್ನು ಕುರಿತ ಅವರ ರಚನೆಗಳು ಮನೋಜ್ಞವಾಗಿದೆ. ಗೀತ ರಚನೆ ಅವರಿಗೆ ಅನಾಯಾಸವಾಗಿ ಲಭಿಸಿದೆ. ಸುಮಾರು ೪೦೦ಕ್ಕೂ ಹೆಚ್ಚು ಚಿಕ್ಕ, ದೊಡ್ಡ ಕೀರ್ತನೆಗಳನ್ನೂ, ಉಗಾ ಭೋಗಗಳನ್ನೂ, ರಾಮಾಯಣ ಮಹಾ ಕಾವ್ಯವನ್ನೂ ರಚಿಸಿರುವ ಅಂಬಾಬಾಯಿಯವರು ಭಕ್ತಿ, ಸ್ತೋತ್ರ ಮತ್ತು ಮಾಧ್ವ ತತ್ವಜ್ಞಾನಗಳನ್ನು ತಮ್ಮ ಪರಿಧಿಯಾಗಿಸಿಕೊಂಡಿದ್ದಾರೆ. ಈಗಾಗಲೇ ಹೇಳಿದಂತೆ ಅದರಾಚೆಗಿನ ಪ್ರಪಂಚ ಅವರಿಗೆ ವರ್ಜ್ಯ. ಅಂಬಾಬಾಯಿ ಅವರ ಸಮಕಾಲೀನರೇ ಆದ ನಂಜನಗೂಡು ತಿರುಮಲಾಂಬ (೧೮೮೭-೧೯೮೨), ಆರ್.ಕಲ್ಯಾಣಮ್ಮ (೧೮೯೨-೧೯೬೫), ಸರಸ್ವತಿಬಾಯಿ ರಾಜಾವಾಡೆ (೧೯೧೩-೧೯೯೪) ಮುಂತಾದ ನಮ್ಮ ಮೊದಲ ಲೇಖಕಿಯರು ಕನ್ನಡ ಸಾಹಿತ್ಯದ, ಬದುಕಿನ ಚಹರೆಗಳನ್ನೇ ಬದಲಿಸುತ್ತಿದ್ದಾಗ ಅಂಬಾಬಾಯಿಯವರು ಅದಕ್ಕೆ ಭಿನ್ನವಾಗಿ ತಾವು ನಂಬಿದ ಹಾದಿಯಲ್ಲಿ ಏಕಾಂಗಿಯಾಗಿ, ಏಕಾಗ್ರತೆಯಿಂದ ನಡೆದರು. ಇಡೀ ಭಾರತ ಬ್ರಿಟಿಷರ ಬಂಧನದಿಂದ ಬಿಡುಗಡೆ ಬಯಸುತ್ತಿದ್ದಾಗ ಅವರು ತಮ್ಮ ಭವ ಬಂಧನದಿಂದ ಬಿಡುಗಡೆ ಬಯಸುತ್ತಿದ್ದರು. ತನ್ನ ಸುತ್ತಲಿನ ಬದುಕಿಗೆ ಧುಮುಕಿ ಸವಾಲುಗಳನ್ನು ಎದುರಿಸುವವನು ದೊಡ್ಡ ಸಾಹಿತಿಯಾಗುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದರೆ ಅವನು ಒಂದು ನಿರ್ದಿಷ್ಟ ವಲಯಕ್ಕೆ ಮಾತ್ರ ಆಪ್ತನಾಗಿ ಉಳಿದುಕೊಳ್ಳುವ ತೊಡಕು ಉಂಟಾಗುತ್ತದೆ. ಅಂಬಾಬಾಯಿ ಅವರ ಕಾವ್ಯ ರಚನೆಗೂ ಈ ತೊಡಕು ಉಂಟಾದೀತೇನೋ.
ಪತ್ರಜೀವಿಯಾಗಿದ್ದ ಆಕೆಯಿಂದ ೧೯೪೬ರ ನಂತರ ಮನೆಯವರಿಗೆ ಯಾವ ಸುದ್ದಿ, ಸಮಾಚಾರಗಳು ಇಲ್ಲದೆ ಶಾಶ್ವತ ಮೌನ ಏರ್ಪಟ್ಟು, ಅವರಿಗೆ ಏನಾಗಿರಬಹುದು ಎಂಬ ಮಾಹಿತಿಯು ಇಲ್ಲವಾಗಿದೆ. ಇದ್ದ ಅಲ್ಪಕಾಲದಲ್ಲಿ ಹೆಸರು ಮಾಡಿ ಸದ್ದಿಲ್ಲದೆ ಸರಿದು ಹೋದರು. ಎಲ್ಲ ಅನುಕೂಲಗಳಿದ್ದು ಏನನ್ನೂ ಸಾಧಿಸದವರ ಎದುರು ಇಲ್ಲಗಳೇ ಎಲ್ಲವೂ ಆಗಿದ್ದ ಅಂಬಾಬಾಯಿಯವರು ಏರಿದ ಎತ್ತರ ಸ್ಫೂರ್ತಿದಾಯಕವಾದದ್ದು. ತಮ್ಮ ಭಾವ-ಬದುಕುಗಳ ಹಚ್ಚಡ ಎಂದು ಮಲಿನವಾಗದಂತೆ ಒಗೆದುಕೊಂಡಿದ್ದ ಇವರು ಸ್ತ್ರೀ ಚೈತನ್ಯದ ಒಂದು ದಿಟ್ಟ ಅಭಿವ್ಯಕ್ತಿಯಾಗಿದ್ದಾರೆ.
ಡಾ. ಪಿ.ಎಸ್.ಗೀತಾ
ಪ್ರಸ್ತಾವನೆ
ಸ್ವಾತಂತ್ರ್ಯ ಪೂರ್ವದಲ್ಲಿ ಮಹಿಳೆಯರು ಬರವಣಿಗೆಗೆ ತೊಡಗಿಕೊಂಡದ್ದು ಬೆರಳೆಣಿಕೆಯಷ್ಟು ಜನ. ಆದರೆ ಮಹಿಳೆ ಏಕಾಂಗಿಯಾಗಿ ಪ್ರವಾಸ ಮಾಡಿದ್ದು ಮತ್ತು ತಮ್ಮ ಪ್ರವಾಸದ ಅನುಭವಗಳನ್ನು ’ದಿನಚರಿ’ (ಡೈರಿ) ರೂಪದಲ್ಲಿ ದಾಖಲಿಸಿದ್ದು ಇಲ್ಲವೇ ಇಲ್ಲ ಎನ್ನಬಹುದು. ಇಂಥಾ ಬರವಣಿಗೆಯೊಂದು ಇತಿಹಾಸದಲ್ಲಿ ಅಡಗಿದ್ದು ಇದೀಗ ಬೆಳಕಿಗೆ ಬಂದಿದೆ. ಆಕೆಯೇ ಹರಿದಾಸ ಕವಯಿತ್ರಿ ಅಂಬಾಬಾಯಿ. ಇಂದು ಮಹಿಳೆ ವಿದ್ಯಾವಂತಳೂ ಉದ್ಯೋಗಸ್ಥಳೂ ಆಗಿ ಆರ್ಥಿಕ ಸ್ವಾತಂತ್ರ್ಯ ಮತ್ತು ಧೈರ್ಯದ ವ್ಯಕ್ತಿತ್ವವನ್ನೂ ಪಡೆದಿದ್ದಾಳೆ. ಮೊಬೈಲ್ ಎನ್ನುವ ಅಂಗೈನ ಜಾದೂ ವಸ್ತುವಿನಿಂದ ಏನು ಬೇಕಾದರೂ ಸಾಧಿಸಬಲ್ಲ ವ್ಯವಸ್ಥೆಯನ್ನು ಪಡೆದುಕೊಂಡಿದ್ದಾಳೆ. ದೇಶ ಸುತ್ತುವ ಉಮೇದು ಮತ್ತು ಬ್ಯಾಂಕಿನಲ್ಲಿನ ಗಂಟು ಎರಡಿದ್ದರೆ ಸಾಕು, ಅವಳು ಅತ್ಯಂತ ವ್ಯವಸ್ಥಿತವಾಗಿ ಮತ್ತು ಸುರಕ್ಷಿತವಾದ ವಲಯದಲ್ಲಿ (ಕಂಫರ್ಟ್ ಝೋನ್) ವಿಶ್ವದ ಮೂಲೆ ಮೂಲೆಗೂ ಸಂಚರಿಸಬಲ್ಲಳು. ಅಂಥಾ ’ಸೋಲೋ ಟ್ರಿಪ್’ಗಳು ಇಂದು ಜನಪ್ರಿಯವೇ ಆಗಿದೆ. ಬರೆಯುವ ಜಾಣತನವಿದ್ದವರು ತಮ್ಮ ಪ್ರವಾಸ ಕಥನವನ್ನು ರಂಗುರಂಗಾಗಿ ಬರೆದು ಪ್ರಕಟಿಸಿ, ಕುತೂಹಲವುಳ್ಳ ಓದುಗರಿಗೂ ತಲುಪಿಸಿ ಪ್ರಸಿದ್ಧರೂ ಆಗಬಹುದು. ಅಂಥ ಅನುಕೂಲಗಳನ್ನು ಇಂದಿನ ಸಮಾಜದಲ್ಲಿ ಅತ್ಯಂತ ಸರಾಗವಾಗಿ ಸಾಧ್ಯಮಾಡಿಕೊಳ್ಳಬಹುದು.
ಆದರೆ ೧೯೩೮ರ ಕಾಲಘಟ್ಟದಲ್ಲಿ ಮಹಿಳೆಯ ಸ್ಥಿತಿ ಹೇಗಿತ್ತು ಎನ್ನುವುದನ್ನು ನಂಜನಗೂಡಿನ ತಿರುಮಲಾಂಬ ಮತ್ತು ಬೆಂಗಳೂರಿನ ಆರ್.ಕಲ್ಯಾಣಮ್ಮ ಅವರ ಬರಹಗಳಿಂದ ತಿಳಿಯ ಬಹುದು. ಪರಧರ್ಮೀಯರ ಆಳ್ವಿಕೆಯ ಕಾರಣವಾಗಿ ಭಾರತದ ಜನ ನಲುಗಿ ಹೋಗಿದ್ದರು. ಹೆಣ್ಣುಮಕ್ಕಳ ಸ್ಥಿತಿಯಂತೂ ನಾಲ್ಕು ಗೋಡೆಗಳ ಒಳಗೆ ಬಂಧಿತವಾಗಿದ್ದ ಕಾಲವದು. ಕುಟುಂಬ ವ್ಯವಸ್ಥೆ ಮತ್ತು ತಮ್ಮ ತಮ್ಮ ಧರ್ಮಗಳನ್ನು ಉಳಿಸಿಕೊಳ್ಳುವ ಒತ್ತಡದಲ್ಲಿ ಪುರುಷಪ್ರಧಾನ ಸಮಾಜ ಬಿಗಿ ಚೌಕಟ್ಟು ನಿರ್ಮಿಸಿದ ಕಾಲದಲ್ಲಿ ಅವರು ಓದು ಬರಹ ಕಲಿತು, ಪತ್ರಿಕೆ ನಡೆಸಿ, ಜನಪ್ರಿಯರಾದದ್ದೇ ನಿಜಕ್ಕೂ ದೊಡ್ಡ ಸಾಧನೆಯಾಗಿತ್ತು. ಆದರೂ ಅವರ ಬದುಕು ತಂದೆ ತಾಯಿ ಮತ್ತು ಕುಟುಂಬದ ಪರಿಧಿಯೊಳಗೇ ಸುತ್ತಬೇಕಾಗಿತ್ತೇ ವಿನಃ ಏಕಾಂಗಿಯಾಗಿ ಪ್ರವಾಸ ಮಾಡುವುದನ್ನು ಅವರು ಕನಸಿನಲ್ಲೂ ನೆನಸಿರಲಾರರು. ಇಂಥಾ ಒಂದು ಸಾಹಸವನ್ನು ಅಂಬಾಬಾಯಿ ಮಾಡಿದ್ದು ಇಂದಿಗೂ ಅತ್ಯಂತ ಸೋಜಿಗದ ಸಂಗತಿ. ಇಂದಿನ ಆಧುನಿಕ ಮಹಿಳೆಯ ಏಕಾಂಗಿ ಪ್ರವಾಸದ ಉದ್ದೇಶ, ದೇಶವಿದೇಶಗಳನ್ನು ನೋಡುವುದು ಮತ್ತು ಅದರಿಂದ ಅಪೂರ್ವವಾದ ಅನುಭವವನ್ನು ಪಡೆಯುವುದೇ ಆಗಿರುತ್ತದೆಯೇ ವಿನಃ ಅದಕ್ಕಿಂತಾ ಉದಾತ್ತವಾದ ಉದ್ದೇಶವೇನೂ ಕಾಣುವುದಿಲ್ಲ. ಆದರೆ ಅಂಬಾಬಾಯಿಯವರ ಪ್ರವಾಸ ಇದುವರೆವಿಗೂ ಯಾರೂ ಮಾಡಿಲ್ಲದ ಮತ್ತು ಇಂದಿಗೂ ಯಾರಿಗೂ ಮಾಡಲಾಗದ ಘನ ಉದ್ದೇಶವನ್ನು ಹೊಂದಿತ್ತು ಎನ್ನುವುದು ಅಚ್ಚರಿಯಲ್ಲಿ ಅಚ್ಚರಿಯನ್ನು ಹುಟ್ಟಿಸುವಂಥದ್ದು.
ಭಕ್ತ ಮೀರಾಬಾಯಿ ಮತ್ತು ಅಕ್ಕಮಹಾದೇವಿಯವರು ಕೃಷ್ಣಭಕ್ತಿ ಮತ್ತು ಶಿವಭಕ್ತಿಯನ್ನು ಪ್ರಕಟಿಸುತ್ತಾ ’ಭಗವಂತನೇ ತಮ್ಮ ಪತಿ’ ಎನ್ನುವ ಐಕ್ಯಭಾವದಲ್ಲಿ ತಮ್ಮ ತಮ್ಮ ಸಾಧನೆಯ ಪ್ರಗತಿಯನ್ನು ಕಂಡುಕೊಂಡರು. ಅಂಬಾಬಾಯಿಯವರಾದರೋ ’ಹರಿಭಕ್ತಿ’ಯನ್ನು ಸಾಮಾನ್ಯರಿಗೂ ಜಾತಿಭೇದವಿಲ್ಲದೇ ಹಂಚುತ್ತಾ ಪ್ರಚಾರಮಾಡಿ, ಈ ಬದುಕಿನ ಜಂಜಾಟ ದಿಂದ ಜನ ನೆಮ್ಮದಿ ಕಂಡುಕೊಳ್ಳಲಿ ಎನ್ನುವ ಏಕೈಕ ಘನ ಉದ್ದೇಶದಿಂದ ಪ್ರವಾಸ ಮಾಡಿದರು ಎನ್ನುವುದನ್ನು ಗಮನಿಸಬೇಕಾಗಿದೆ. ಈ ಉದ್ದೇಶವೂ ಸಹ ಅತ್ಯಂತ ಅಪರೂಪವೇ.
ಚಿತ್ರದುರ್ಗದ ಅಂಬಾಬಾಯಿ ಹುಟ್ಟಿದ್ದು ೧೧.೧೧.೧೯೦೨ರಲ್ಲಿ (ಶುಭಕೃತು ನಾಮ ಸಂವತ್ಸರದ ಕಾರ್ತೀಕ ಶುದ್ಧ ದಶಮಿಯಂದು). ಭೀಮಸೇನರಾವ್ ಮತ್ತು ಭಾರತಿ ಬಾಯಿಯವರ ಎರಡನೇ ಪುತ್ರಿ ಈಕೆ. ಒಬ್ಬ ಅಣ್ಣ, ಒಬ್ಬ ತಮ್ಮ ಮತ್ತು ತಂಗಿ ಸೇರಿ ನಾಲ್ಕು ಜನ ಒಡ ಹುಟ್ಟಿದವರು. ತಂದೆತಾಯಿಯ ಜೊತೆ ಅಜ್ಜಿಯೂ (ತಂದೆಯ ತಾಯಿ) ಇದ್ದು ಒಟ್ಟು ಏಳು ಜನರ ಸಂಸಾರವು ತಂದೆಗೆ ಬರುತ್ತಿದ್ದ ಮೂರು ರೂಪಾಯಿ ಸಂಬಳದಲ್ಲಿ ನಡೆಯಬೇಕಿತ್ತು. ಬಡತನ ಹಾಸಿಹೊದ್ದಿತ್ತು. ಆದರೂ ಈಕೆ ಬಾಲ್ಯದಲ್ಲೇ ಬಹಳ ಚುರುಕು ಬುದ್ಧಿಯುಳ್ಳವರಾಗಿದ್ದರಿಂದ ತಂದೆ ಈ ಮಗು ಸಾಮಾನ್ಯದ್ದಲ್ಲ ಎಂದು ಗುರುತಿಸಿದ ಪರಿಣಾಮವಾಗಿ, ಹೆಣ್ಣುಮಕ್ಕಳನ್ನು ಶಾಲೆಗೆ ಸೇರಿಸದ ಸಾಮಾಜಿಕ ಕಟ್ಟಲೆಯನ್ನು ಮೀರಿ ತಂದೆಯ ಒತ್ತಾಸೆಯಿಂದ ಶಾಲೆಗೆ ಸೇರುವ ಅವಕಾಶ ಲಭಿಸಿತು. ನಾಲ್ಕನೇ ತರಗತಿಯವರೆಗೆ ವಿದ್ಯಾಭ್ಯಾಸ ಲಭಿಸಿತು. ಮನೆಯ ವಾತಾವರಣವೂ ಈ ಬಾಲೆಗೆ ಉತ್ತೇಜಿತವೇ ಆಗಿತ್ತು. ಅನಕ್ಷರಸ್ಥೆಯಾದರೂ ಇವರ ಅಜ್ಜಿ ಸಾವಿರಾರು ದೇವರನಾಮಗಳನ್ನು ನೆನಪಿನ ಆಧಾರದಿಂದಲೇ ಕಲಿತು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಜೊತೆಗೆ ಸುತ್ತಮುತ್ತಲಿನ ಮಹಿಳೆಯರಿಗೆ ಹೇಳಿಕೊಡುತ್ತಿದ್ದರು. ಅಂಬಾಬಾಯಿಯವರಿಗೂ ಇನಿದನಿ ಇದ್ದದ್ದರಿಂದ ಅಜ್ಜಿಯ ಜೊತೆಗೆ ಹಾಡುವುದೂ ಅಭ್ಯಾಸವಾಯಿತು. ಮುಂದೆ ಇದು ನೂರಾರು ದೇವರನಾಮಗಳನ್ನು ರಚಿಸಿ, ತಾವೇ ರಾಗ ಸಂಯೋಜಿಸಿ ಹಾಡುವುದಕ್ಕೆ ಬುನಾದಿಯಾಯಿತು. ಅಕ್ಷರಸ್ಥೆಯಾದ ಅಂಬಾಬಾಯಿ, ತಮ್ಮ ಅಜ್ಜಿಯ ಮುಂದೆ ಕುಮಾರವ್ಯಾಸ ಭಾರತವನ್ನು ರಾಗವಾಗಿ ಓದುವ ಅಭ್ಯಾಸವನ್ನೂ ಮಾಡಿಕೊಂಡಿದ್ದರು. ಇದರಿಂದ ಅವರ ಪದಸಂಪತ್ತು ವೃದ್ಧಿಯಾಯಿತು.
ಸಮಾಜದ ಕಟ್ಟಲೆಯನ್ನು ದಾಟಿ ತಂದೆ ಮಗಳನ್ನು ವಿದ್ಯಾವಂತಳನ್ನಾಗಿಸಿದರೂ, ಮದುವೆಯ ವಿಚಾರದಲ್ಲಿ ಅಂದಿನ ಸಮಾಜ ನಿಬಂಧನೆಗೆ ಒಳಗಾಗಿ ಹತ್ತು ವರ್ಷಕ್ಕೇ ಶಾಲೆ ಬಿಡಿಸಿ ಅಂಬಾಬಾಯಿಯವರನ್ನು ಚಿತ್ರದುರ್ಗದ ಹೊರವಲಯದಲ್ಲಿದ್ದ ಗೋಪಾಲಪುರದ ಹನುಮಂತಾಚಾರ್ಯರಿಗೆ ಕೊಟ್ಚು ಮದುವೆ ಮಾಡಲಾಯಿತು. ಗಂಡನ ಮನೆತನವೇನೋ ಸಾಕಷ್ಟು ಶ್ರೀಮಂತಿಕೆಯನ್ನು ಪಡೆದಿದ್ದರೂ ಅಂಬಾಬಾಯಿಯವರ ಪಾಲಿಗೆ ಅದು ಮರೀಚಿಕೆಯೇ ಆಯಿತು. ಏಕೆಂದರೆ ತಮ್ಮ ೧೨-೧೩ನೇ ವಯಸ್ಸಿನಲ್ಲಿಯೇ ಊರಮಾರಿಯಂತೆ ಅವತರಿಸಿದ ಪ್ಲೇಗ್ ಕಾಯಿಲೆಯಲ್ಲಿ ಗಂಡನನ್ನೂ ತಂದೆಯನ್ನೂ ಒಂದೇ ದಿನ ಕಳೆದುಕೊಂಡ ನತದೃಷ್ಟೆ ಯಾದರು. ಗಂಡನ ಮನೆಯವರು ಹಣದಿಂದ ಶ್ರೀಮಂತರಾದರೂ ಮಾನವೀಯತೆಯ ದೃಷ್ಟಿಯಿಂದ ಅತಿ ಬಡವರೇ. ಪುಟ್ಟ ವಿಧವೆ ಅಂಬಾಬಾಯಿಗೆ ಅಂದಿನ ಪದ್ಧತಿಯಂತೆ ಕೇಶಮುಂಡನ ಮಾಡಿಸಿದ್ದೇ ಅಲ್ಲದೇ ಕೆಟ್ಟಕಾಲ್ಗುಣದ ಪಟ್ಟಕಟ್ಟಿ ನಿರ್ದಯತೆಯಿಂದ ತೌರಿಗಟ್ಟಿದರು. ತೌರಿನಲ್ಲಾದರೋ ತಂದೆಯಿಲ್ಲ. ಅಣ್ಣ ಮತ್ತವನ ತುಂಬು ಸಂಸಾರ. ತಾಯಿ ಮತ್ತು ಅಜ್ಜಿ ಇಬ್ಬರು ಮಡಿಹೆಂಗಸರೊಂದಿಗೆ ಈ ಪುಟ್ಟ ಮಡಿ ಹೆಂಗಸು ಆ ಕಾಲದ ಎಲ್ಲ ಕಟ್ಟುಪಾಡುಗಳನ್ನು ಪಾಲಿಸುತ್ತಾ ಬಾಳಬೇಕಾಯಿತು. ೧೨-೧೩ರ ಈ ಪುಟ್ಟ ಮಗು ಅದೆಷ್ಟು ದಿನ ರಾತ್ರಿ ಊಟ ಮಾಡುವಂತಿಲ್ಲದೇ ಅಳುತ್ತಾ ಕಾಲಕಳೆಯಿತೋ ಲೆಕ್ಕವಿಟ್ಟವರು ಯಾರು? ತಣ್ಣೀರು ಸ್ನಾನ, ಒಪ್ಪತ್ತಿನ ಊಟ, ಶುಭಸಂದರ್ಭಗಳಲ್ಲಿ ಮುಖತೋರಬಾರದ ನಿರ್ಬಂಧ, ಆಟವಾಡುತ್ತಾ ನಲಿಯಬೇಕಾಗಿದ್ದ ಮಗುವಿನ ತಲೆಯ ಮೇಲೆ ಚಪ್ಪಡಿಕಲ್ಲು ಎಳೆದಂಥಾ ಬದುಕು. ಅಣ್ಣ ತನ್ನ ಬಡತನದ ಸ್ಥಿತಿಯಲ್ಲಿ, ಹೆಂಡತಿ ಮಕ್ಕಳನ್ನಲ್ಲದೇ ಅಜ್ಜಿ, ತಾಯಿ ಮತ್ತು ತಂಗಿ ಈ ಮೂರೂ ಜನ ವಿಧವೆಯರ ತುತ್ತಿನ ಚೀಲವನ್ನೂ ತುಂಬಬೇಕಾದ ಅನಿವಾರ್ಯತೆಯಲ್ಲಿ ಅಸಹನೆಗೆ ಒಳಗಾಗುತ್ತಿದ್ದ. ಆತನ ಹೆಂಡತಿ ಸಹ ಇದಕ್ಕೆ ಧನಿಗೂಡಿಸಿದ ಪರಿಣಾಮವಾಗಿ ಈ ಪರಾವಲಂಬಿ ವಿಧವೆಯರು ಇನ್ನಿಲ್ಲದಂಥಾ ಅವಮಾನ ತಿರಸ್ಕಾರಗಳಿಗೆ ಗುರಿಯಾಗ ಬೇಕಾಯಿತು. ವೃದ್ಧರಾದ ತಾಯಿ ಮತ್ತು ಅಜ್ಜಿಯರು ನಿರುಪಾಯರಾಗಿದ್ದರು. ಆದರೆ ಚುರುಕುಮತಿಯ ಅಂಬಾಬಾಯಿ ಇದಕ್ಕೊಂದು ಪರಿಹಾರ ಮಾರ್ಗವನ್ನು ಹುಡುಕುತ್ತಿದ್ದರು. ಹದಿಹರೆಯದ ಆಕೆಗೆ ಆಗ ತೋರಿದ್ದು ಆರೋಗ್ಯವಾಗಿದ್ದ ತನ್ನ ದೇಹವನ್ನೇ ಕಾಯಕದ ಮಾರ್ಗವನ್ನಾಗಿಸಿಕೊಳ್ಳುವುದು. ಅಣ್ಣನ ಮನೆಯ ಸಕಲ ಜವಾಬ್ದಾರಿಯನ್ನೂ ಹೊತ್ತು ಅಡುಗೆ, ಕಸಮುಸುರೆ, ಬಟ್ಟೆ ಒಗೆಯುವ, ಮಕ್ಕಳನ್ನೂ ಮೀಯಿಸುವ, ಅತ್ತಿಗೆಯ ಬಸುರಿತನ ಬಾಣಂತನಗಳ ಕರ್ತವ್ಯಗಳನ್ನು ನಿಭಾಯಿಸುವ ಸಕಲವನ್ನೂ ತಮ್ಮ ತಲೆಯ ಮೇಲೆ ಹೊತ್ತರು. ಆ ಮನೆಯ ರಥ ಈಕೆಯ ಶ್ರಮವಿಲ್ಲದೇ ಒಂದಿಂಚೂ ಮುಂದೆ ಚಲಿಸದಾಯಿತು. ಮುಂದೆ ತಮ್ಮ ಮತ್ತು ತಂಗಿಯೂ ಮದುವೆಯಾಗಿ ತಮ್ಮ ತಮ್ಮ ಬದುಕುಗಳನ್ನು ರೂಪಿಸಿಕೊಂಡರು. ಈಗ ಮೂರೂ ಮನೆಗಳ ಸಕಲ ಕೈಂಕರ್ಯಗಳಿಗೂ ಅಂಬಾಬಾಯಿ ಹೆಗಲು ಕೊಟ್ಟರು. ಅತ್ಯಂತ ಸಹನೆಯಿಂದ ಮತ್ತು ನಗುಮುಖದಿಂದ ದುಡಿಯುವ ಈಕೆ ಒಡಹುಟ್ಟಿದವರಿಗೆ ಅನಿವಾರ್ಯವಷ್ಟೇ ಅಲ್ಲ, ಆದರಣೀಯವೂ ಆದರು. ಇದಲ್ಲದೇ ಹತ್ತಿರದ ನೆಂಟರಿಷ್ಟರ ಮನೆಯ ಕಷ್ಟ ಕಾರ್ಪಣ್ಯಕ್ಕೂ ಅಂಬಾಬಾಯಿಯವರ ತೋಳು ಸದಾ ಸಿದ್ಧವೇ ಆಗಿರುತ್ತಿತ್ತು. ಅಂಬಾ ಇದ್ದರೆ ಹತ್ತು ಜನ ಇದ್ದಂತೆ ಎನ್ನುವ ಮಾತು ಕುಟುಂಬದಲ್ಲಿ ಜನಜನಿತವಾಯಿತು. ಆಕೆಯ ಪುಟ್ಟ ಕೈಗಳು ಅದೆಷ್ಟು ಜನರಿಗೆ ಬಾಣಂತನ ಮಾಡಿತೋ, ಅದೆಷ್ಟು ಮಕ್ಕಳನ್ನು ಮೀಯಿಸಿತೋ, ಅದೆಷ್ಟು ರಾತ್ರಿಗಳ ನಿದ್ದೆಗೆಟ್ಟು ಮಗುವನ್ನು ತೊಡೆಯ ಮೇಲಿಟ್ಟು ಲಾಲಿಹಾಡಿ ಮಲಗಿಸಿತೋ, ಅದೆಷ್ಟು ಸೇರು ಮೆಣಸಿನಪುಡಿ ಅವಲಕ್ಕಿಗಳನ್ನು ಕುಟ್ಟಿ ಪೂರೈಸಿತೋ, ಮದುವೆ ಮನೆಗಳಿಗೆ ಅದೆಷ್ಟು ಹಪ್ಪಳ ಸಂಡಿಗೆಗಳನ್ನು ತಯಾರಿಸಿತೋ ಲೆಕ್ಕ ವಿಟ್ಟವರ್ಯಾರು?
ಬದುಕು ಹೀಗೇ ಉರುಳುತ್ತಿತ್ತು. ತನ್ನನ್ನು ತಾನು ಕಾಯಕಕ್ಕೆ ತೊಡಗಿಸಿಕೊಂಡರೂ ’ತನ್ನ ದಾರಿ ಇದಲ್ಲವೆನ್ನುವ’ ನೋವು ಅವರೊಳಗೆ ಕುದಿಯುತ್ತಿತ್ತು. ಪ್ರತಿಭೆ ಒಳಗೆ ಪುಟಿಯುತ್ತಿದ್ದರೂ ಅದಕ್ಕೊಂದು ಮಾರ್ಗ ಕಾಣದೇ ಕಂಗಾಲಾಗಿದ್ದರು. ಹೀಗೇ ಇಪ್ಪತ್ತೊಂಬತ್ತು ವರ್ಷಗಳು ಜಾರಿಯೇ ಹೋದವು. ಆಗ ಅಚಾನಕವಾಗಿ ಅಂಬಾಬಾಯಿಯವರ ಪ್ರತಿಭೆಗೆ ಭಾಗ್ಯದ ಬಾಗಿಲು ತೆರೆದಂತೆ ಒಂದು ಘಟನೆ ನಡೆಯಿತು. ಆಕೆಯ ತಮ್ಮ ರೈಲ್ವೆ ಇಲಾಖೆ ಯಲ್ಲಿ ಕೆಲಸ ಮಾಡುತ್ತಿದುದರಿಂದ, ಬೆಂಗಳೂರಿನಲ್ಲಿ ಒಂದು ಬಾಡಿಗೆ ಔಟ್ ಹೌಸಿನಲ್ಲಿ ವಾಸವಾಗಿದ್ದರು. ಆಗ ಅಂಬಾಬಾಯಿಯವರೂ ತಮ್ಮ ಅಜ್ಜಿ ಮತ್ತು ತಾಯಿಯೊಂದಿಗೆ ತಮ್ಮನ ಮನೆಯಲ್ಲಿದ್ದರು. ಮೇನ್ ಹೌಸಿನ ಗೃಹಸ್ಥರ ಮನೆಗೆ ದೇವರಾಯನದುರ್ಗದ ಪರಮಪ್ರಿಯ ಸುಬ್ಬರಾಯ ದಾಸರೆನ್ನುವವರು ಪ್ರವಚನ ನೀಡಲು ಬಂದರು. ಅಂದು ಅಲ್ಲಿ ಸುತ್ತಮುತ್ತಲಿನ ಮನೆಯವರೆಲ್ಲಾ ಪ್ರವಚನ ಕೇಳಲು ಸೇರಿದ್ದರು. ಅವರಲ್ಲಿ ಅಂಬಾಬಾಯಿಯವರೂ, ತಮ್ಮನ ಕುಟುಂಬದವರೂ ಇದ್ದರು. ಪ್ರವಚನ ಮುಗಿದಮೇಲೆ ’ದಾಸಪಂಥ’ದಲ್ಲಿ ಆಸಕ್ತಿ ಇದ್ದವರಿಗೆ ತಾವು ಅಂಕಿತನಾಮವನ್ನು ಕೊಡುವುದಾಗಿಯೂ ಮತ್ತು ತಾವು ಕೊಟ್ಟ ಅಂಕಿತ ಸ್ತೋತ್ರವನ್ನು ಪ್ರತಿನಿತ್ಯ ಒಮ್ಮೆ ಪಠಿಸಿದರೂ ಕ್ಲೇಷ ಕಳೆಯುವುದೆಂದೂ ಸುಬ್ಬರಾಯದಾಸರು ಘೋಷಿಸಿದರು. ತಮ್ಮ, ತಮ್ಮನ ಹೆಂಡತಿ, ಅಜ್ಜಿ, ತಾಯಿ ನಾಲ್ಕೂ ಜನ ಸಂತೋಷದಿಂದ ಅಂಕಿತವನ್ನು ಸ್ವೀಕರಿಸಿದರು. ತುಂಬ ಸಂಕೋಚ ಪ್ರವೃತ್ತಿಯ ಅಂಬಾಬಾಯಿ ಮುಂದೆ ಬರದೇ ಜನಜಂಗುಳಿಯ ಹಿಂದೆ ಮುಖಮರೆಸಿಕೊಂಡು ಹಿಂಜರಿಯುತ್ತಾ ನಿಂತಿದ್ದರು. ಇದನ್ನು ಆ ಗುರುಗಳ ಸೂಕ್ಷ್ಮ ಕಣ್ಣುಗಳು ಗಮನಿಸಿಬಿಟ್ಟವು. ಆ ದಿನ ಏನೂ ಹೇಳದೇ ಹೊರಟುಹೋದ ಗುರುಗಳು ಮರುದಿನ (ದಿನಾಂಕ ೨೮.೩.೧೯೩೧, ಪ್ರಜೋತ್ಪತ್ತಿನಾಮ ಸಂವತ್ಸರದ ಚೈತ್ರ ಶುದ್ಧ ಶ್ರೀರಾಮ ನವಮಿಯಂದು) ಮತ್ತೆ ಬಂದು ಅಂಬಾಬಾಯಿಯವರನ್ನೇ ಕರೆದು, ಅವರೊಂದಿಗೆ ಹಿತವಾದ ಭರವಸೆಯ ಮಾತುಗಳನ್ನಾಡಿ, ’ಶ್ರೀ ಗೋಪಾಲಕೃಷ್ಣ ವಿಠಲ’ ಎನ್ನುವ ಅಂಕಿತ ವನ್ನಿತ್ತು ಸಾಂತ್ವನವನ್ನೂ ನೀಡಿದರು.
ಅಂಕಿತ ಸಿಕ್ಕ ಘಟನೆಯ ನಂತರ ಅಂಬಾಬಾಯಿಯವರ ಬದುಕು ಬಹಳ ದೊಡ್ಡ ತಿರುವನ್ನು ಪಡೆಯಿತು. ಅವರ ಕವಿಮನದಲ್ಲಿ ಭಕ್ತಿಕಾವ್ಯದ ಚಿಲುಮೆ ಉಕ್ಕಿ ಹರಿಯಿತು. ಅಂಕಿತ ಸಿಕ್ಕಿದ್ದು ತಾತ್ವಿಕವಾಗಿ ದೇವರ ಕೀರ್ತನೆಗಳನ್ನು ರಚಿಸಲು ಪರವಾನಿಗಿ ಸಿಕ್ಕಂತಾಯಿತು. ಶ್ರೀಪಾದರಾಜರಿಂದ ಪ್ರಾರಂಭವಾದ ಈ ಭಕ್ತಿಪಂಥ ಪುರಂದರದಾಸರೇ ಮುಂತಾದ ಅಪರೋಕ್ಷ ಜ್ಞಾನಿಗಳಿಂದ ಮುಂದುವರೆದು, ’ಗುರುಮುಖೇನ ಅಂಕಿತ ಪಡೆದವರು ಮಾತ್ರ ದೇವರ ಕೀರ್ತನೆ ರಚಿಸಲು ಯೋಗ್ಯರು’ ಎನ್ನುವ ನಂಬಿಕೆ ಬಲವಾಗಿ ಬೇರೂರಿದ್ದ ಕಾಲದಲ್ಲಿ ಅಂಬಾಬಾಯಿಯವರಿಗೆ ಅಂಕಿತವನ್ನೇ ಅಲ್ಲದೇ ಜ್ಞಾನದ ಕಣ್ಣನ್ನೂ ಗುರುಗಳು ದಯಪಾಲಿಸಿದ್ದರು. ಹಲವೇ ತಿಂಗಳುಗಳಲ್ಲಿ ಹಲವಾರು ದೇವರನಾಮಗಳನ್ನು ರಚಿಸಿ ಹೆದರುತ್ತಲೇ ಗುರುಗಳ ಮುಂದೆ ಅರ್ಪಿಸಿದರು. ಬಹಳ ಜ್ಞಾನಿಗಳಾದ ಗುರುಗಳಿಗೆ ಈ ಶಿಷ್ಯೆಯಲ್ಲಿರುವ ಪ್ರತಿಭೆಯಲ್ಲಿ, ಶಬ್ದಸಂಪತ್ತು, ಕನ್ನಡ ಭಾಷೆಯ ಮೇಲಿರುವ ಹಿಡಿತ, ಸಂಗೀತ ಶಕ್ತಿಯಾದ ನಾದ ಮತ್ತು ಲಯಜ್ಞಾನ ಎಲ್ಲವೂ ಇರುವುದರ ಅರಿವಾಯಿತು. ಆ ಹೊತ್ತಿಗೆ ಪರಮಪ್ರಿಯ ಸುಬ್ಬರಾಯದಾಸರು ನೂರಾರು ಜನರಿಗೆ ಅಂಕಿತವನ್ನು ನೀಡಿ ಅನೇಕ ಶಿಷ್ಯರನ್ನು ಪಡೆದಿದ್ದರು. ಶಿಷ್ಯರ ಆತ್ಮ ಉದ್ಧಾರಕ್ಕಾಗಿ ’ಪಾರಮಾರ್ಥಿಕ ಚಂದ್ರೋದಯ’ ಎನ್ನುವ ಮಾಸಪತ್ರಿಕೆಯನ್ನು ಏಕಾಂಗಿಯಾಗಿ ಪ್ರಕಟಿಸುತ್ತಾ, ತಾವೇ ಮನೆಮನೆಗೆ ಹೋಗಿ ಅದರ ವಿತರಣೆ ಮಾಡುತ್ತಾ ಅಕ್ಷರಶಃ ಹರಿದಾಸ ಕೈಂಕರ್ಯವನ್ನು ಪಾಲಿಸುತ್ತಿದ್ದರು. ಅಂಬಾಬಾಯಿಯವರಿಗೆ ’ಪಾರಮಾರ್ಥಿಕ ಚಂದ್ರೋದಯ’ ಹೊಸ ವೇದಿಕೆಯಾಯಿತು. ಅವರಿಂದ ರಚಿತವಾದ ಭಕ್ತಿಕಾವ್ಯದ ಕಾರಂಜಿ ಅಡೆತಡೆಯಿಲ್ಲದೇ ಈ ಪತ್ರಿಕೆಯ ಪುಟಗಳಲ್ಲಿ ಉಕ್ಕಿಹರಿಯಿತು.
ಮುಂದೆ ಎಂಟು ವರ್ಷಗಳ ಕಾಲ ಅಂಬಾಬಾಯಿಯವರು ನೂರಾರು ದೇವರನಾಮಗಳನ್ನೇ ಅಲ್ಲದೇ ಮುನ್ನೂರು, ನಾನ್ನೂರು ನುಡಿಗಳ ದೀರ್ಘ ಕಾವ್ಯಗಳನ್ನೂ, ಕೃಷ್ಣಲೀಲೆ ಪ್ರಹ್ಲಾದ ಚರಿತ್ರೆ ಮುಂತಾದ ಕಥನ ಕಾವ್ಯಗಳನ್ನೂ ರಚಿಸಿದರು. ಆಗಾಗ್ಗೆ ಇವರ ತಮ್ಮನ ಮತ್ತು ತಂಗಿಯ ಕುಟುಂಬ ದೇವರಾಯನದುರ್ಗಕ್ಕೆ ಗುರುಗಳ ದರ್ಶನಕ್ಕೆ ಹೋಗುವಾಗ ಜೊತೆಗೆ ಅಂಬಾಬಾಯಿಯೂ ತಪ್ಪದೇ ಜೊತೆಗೂಡುತ್ತಿದ್ದರು. ಗುರುಗಳು ಬೆಂಗಳೂರಿಗೆ ಬಂದಾಗ ಅಂಬಾಬಾಯಿಯವರ ತಮ್ಮನ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಇದರ ಪರಿಣಾಮವಾಗಿ ಗುರುಗಳ ವಿದ್ವತ್ಪೂರ್ಣವಾದ ಪ್ರವಚನಗಳನ್ನು ಕೇಳುವ ಸುಯೋಗ ಒದಗಿತು. ಮತ್ತು ಗುರುಗಳು ಆಧ್ಯಾತ್ಮದ ಪ್ರೌಢ ಪುಸ್ತಕಗಳನ್ನು ತಾವೂ ಓದುತ್ತಿದ್ದುದೇ ಅಲ್ಲದೇ ತಮ್ಮ ಶಿಷ್ಯವರ್ಗಕ್ಕೂ ಓದಲು ಪ್ರೇರೇಪಿಸುತ್ತಿದ್ದರು. ತೀಕ್ಷ್ಣಮತಿಯ ಅಂಬಾಬಾಯಿಗೆ ಈ ಪ್ರಕಾರವಾಗಿ ಓದುವಿಕೆ ಮತ್ತು ಪ್ರವಚನ ಕೇಳುವಿಕೆಗಳಿಂದ ಭಗವಂತನ ಬಗ್ಗೆ ಇದ್ದ ಅರಿವಿನ ಜ್ಞಾನ ಇನ್ನಷ್ಟು ವಿಸ್ತಾರವಾಯಿತು. ಇದು ಅವರಲ್ಲಿದ್ದ ಕಾವ್ಯಶಕ್ತಿಗೆ ಧೀಃಶಕ್ತಿಯನ್ನೂ ಒದಗಿಸಿತು. ಉಪಮಾನ ಉಪಮೇಯಗಳಿಂದ, ಕಾವ್ಯಾಲಂಕಾರಗಳಿಂದ ಮತ್ತು ಕಾವ್ಯಪ್ರತಿಮೆಗಳಿಂದ ಅವರ ಕೀರ್ತನೆಗಳು ಅಲಂಕೃತಗೊಂಡವು. ಪುರಂದರದಾಸರಂತೆ ಕನಕದಾಸರಂತೆ ಅರ್ಥ ಗರ್ಭಿತವೂ, ಪರತತ್ವವನ್ನು ಸರಳ ಸುಂದರ ರೀತಿಯಲ್ಲಿ ಸಂಗೀತಮಯವಾಗಿ ವಿವರಿಸುವಂಥಾ ದೇವರನಾಮಗಳು ರಚನೆಯಾದವು. ಇಂಥಾ ಅನೇಕ ಕೀರ್ತನೆಗಳನ್ನು ಇದಕ್ಕೆ ಉದಾಹರಣೆ ಯಾಗಿ ಕೊಡಬಹುದು. ಜೀವನ ಮತ್ತು ಈ ದೇಹವನ್ನು ಹೊದೆಯುವ ಹಚ್ಚಡದ ಪ್ರತಿಮೆಯಾಗಿಸಿ ಹಚ್ಚಡ ಒಗೆಯಬೇಕಮ್ಮ ಬಹುಕೊಳೆ ಮುಚ್ಚಿಕೊಂಡಿಹುದು ನೋಡಮ್ಮ ಎನ್ನುವ ಕೀರ್ತನೆಯಲ್ಲಿ ಮನುಷ್ಯ ಜೀವನದ ’ಅತಿ ಮತ್ತು ಮಿತಿ’ಗಳನ್ನು ಒಗಟು ಮಾತುಗಳಲ್ಲೇ ವಿವರಿಸುತ್ತಾರೆ. ಮುತ್ತೈದೆಯಾಗಿಹೆನು ಮುರಹರನ ದಯದಿ ಎಂದು ಹಾಡುತ್ತಾ, ’ಲಿಂಗಪತಿ ಶರಣಸತಿ’ ಎನ್ನುವ ತತ್ವವನ್ನು ವಚನಕಾರರು ಹೇಳಿದಂತೆ, ಹರಿದಾಸ ಪಂಥದ ಶ್ರೇಷ್ಠರಾದ ಪುರಂದರ ದಾಸರೇ ಮೊದಲಾದ ಎಲ್ಲ ಹರಿದಾಸರೂ ಭಗವಂತನನ್ನು ಯಜಮಾನನ ಸ್ಥಾನದಲ್ಲಿರಿಸಿ ’ತಾವು ಅವನ ದಾಸದಾಸಿ’ ಎಂದು ನಿವೇದಿಸಿ ಕೊಳ್ಳುವ ಮಾರ್ಗವನ್ನು ಅಂಬಾಬಾಯಿಯವರೂ ಹಿಡಿಯುತ್ತಾರೆ. ಹೀಗೆ ಅವರ ನೂರಾರು ಕೀರ್ತನೆಗಳು ಅತಿ ಬೆರಗನ್ನೂ ಅರ್ಥ ಕುತೂಹಲವನ್ನೂ, ಭಕ್ತಿಯ ಮೋಹಕ ಶಕ್ತಿಯನ್ನೂ ವಿವರಿಸುತ್ತವೆ.
೧೯೩೧ರಿಂದ ೧೯೩೮ರ ವರೆಗೆ ನೂರಾರು ಕೀರ್ತನೆಗಳನ್ನೂ ದೀರ್ಘ ಕೃತಿಗಳನ್ನೂ ರಚಿಸಿ ಗುರುಗಳ ಶಿಷ್ಯವೃಂದದಲ್ಲಿ ಅತ್ಯಂತ ಜನಪ್ರಿಯರಾಗುತ್ತಾರೆ. ಯಾವ ಮಹಿಳೆ ಬಾಲ್ಯದಲ್ಲೇ ಗಂಡನನ್ನು ಕಳೆದುಕೊಂಡು ’ಕೆಟ್ಟ ಕಾಲ್ಗುಣದವಳು’ ಎಂದು ಹೀಯಾಳಿಸಿ ಕೊಂಡಿದ್ದಳೋ ಆಕೆಯೀಗ ಬೆಂಗಳೂರು, ದೇವರಾಯನದುರ್ಗ ಮತ್ತು ಚಿತ್ರದುರ್ಗಗಳಲ್ಲೂ ’ಅತಿ ಪ್ರತಿಭಾನ್ವಿತ ಹರಿದಾಸ ಮಹಿಳೆ’ ಎನ್ನುವ ಅಭಿದಾನಕ್ಕೆ ಪಾತ್ರಳಾಗುತ್ತಾಳೆ. ಆಕೆಯನ್ನು ಜನ ಆದರಿಸುತ್ತಾರೆ. ತಮ್ಮ ಮನೆಗೆ ಕರೆಸಿ ಭಜನೆಗಳನ್ನು ಮಾಡಿಸುತ್ತಾರೆ. ಹೆಣ್ಣುಮಕ್ಕಳು ಆಕೆಯಿಂದ ದೇವರನಾಮಗಳನ್ನು ಕಲಿಯುತ್ತಾರೆ. ೧೯೩೪ರಲ್ಲಿ ಅಂಬಾಬಾಯಿಯವರಿಂದ ಪವಾಡಸದೃಶವಾದ ಕೃತಿಯೊಂದು ಮೂಡಿಬರುತ್ತದೆ. ಗುರುಗಳು ಒಮ್ಮೆ ಗಂಡಸರು ತಮ್ಮ ಜೀವನೋದ್ಧಾರಕ್ಕಾಗಿ ಗಾಯತ್ರಿಮಂತ್ರ, ವಾಯುಸ್ತುತಿ ಇತ್ಯಾದಿ ಸಂಸ್ಕೃತ ರಚನೆಗಳನ್ನು ಹೇಳಿಕೊಳ್ಳುತ್ತಾರೆ. ಮಹಿಳೆಯರಿಗೆ ಇವುಗಳನ್ನು ಹೇಳುವ ಅಧಿಕಾರವಿಲ್ಲ. ಆದ್ದರಿಂದ ನೀನು ಅವರಿಗಾಗಿ ಸರಳ ಕನ್ನಡದಲ್ಲಿ ದೀರ್ಘಕೃತಿಗಳನ್ನು ರಚಿಸು ಎಂದಪ್ಪಣೆ ಕೊಟ್ಟ ಪರಿಣಾಮವಾಗಿ ಹಲವು ದೀರ್ಘಕೃತಿಗಳೇನೋ ರಚಿತವಾದರೂ, ಅಂಬಾಬಾಯಿಯವರ ಕಾವ್ಯಶಕ್ತಿ ಮತ್ತೊಂದು ಮಹತ್ತರವಾದ ರಚನೆಗೆ ಹಾತೊರೆಯುತ್ತದೆ. ಅದರ ಪರಿಣಾಮ ವಾಗಿಯೇ ’ಶ್ರೀ ರಾಮಕಥಾಮೃತ ಕಾವ್ಯ’ ಮಹಾಕಾವ್ಯ ಮೂಡಿ ಬರುತ್ತದೆ. ೮.೧೨.೧೯೩೪ ರಂದು (ಭಾವಸಂವತ್ಸರದ ಮಾರ್ಗಶಿರ ಶುದ್ಧ ಬಿದಿಗೆಯಂದು) ಪ್ರಾರಂಭವಾದ ಕಾವ್ಯ ೧೯.೨.೧೯೩೫ರಂದು (ಅದೇ ಸಂವತ್ಸರದ ಮಾಘ ಶುದ್ಧ ಚತುರ್ದಶಿಯಂದು) ಮುಕ್ತಾಯ ಗೊಳ್ಳುತ್ತದೆ(ಒಟ್ಟು ಎಪ್ಪತ್ಮೂರು ದಿನಗಳಲ್ಲಿ ಈ ಮಹಾಕಾವ್ಯ ರಚನೆಯಾಗಿದೆ). ಈ ಕಾವ್ಯರಚನೆ ಇತಿಹಾಸದಲ್ಲಿ ’ಅಂಬಾಬಾಯಿ ಆಧುನಿಕ ಕನ್ನಡದ ಮೊದಲ ಮಹಿಳಾ ಮಹಾ ಕವಿ’ ಎನ್ನುವ ದಾಖಲೆಯನ್ನು ಬರೆಯುತ್ತದೆ. ಸರಳ ಕನ್ನಡದಲ್ಲಿರುವ ಈ ಮಹಾಕಾವ್ಯ ಹಾಡುಗಬ್ಬವಾಗಿದೆ. ಕುಸುಮಷಟ್ಪದಿಯಲ್ಲಿ ರಚಿತವಾಗಿ ೨,೫೦೧ ಪದ್ಯಗಳ ವಿಸ್ತಾರವನ್ನು ಹೊಂದಿದೆ. ವಾಲ್ಮೀಕಿ ರಾಮಾಯಣದಂತೇ ಬಾಲಕಾಂಡದಿಂದ ಹಿಡಿದು ಯುದ್ಧಕಾಂಡಗಳ ವರೆಗೆ ಎಲ್ಲಾ ಕಾಂಡಗಳನ್ನೂ ಹೊಂದಿದೆ.
ರಾಮಾಯಣ ರಚನೆಯಾದ ಮೇಲೆ ಅಂಬಾಬಾಯಿಯವರ ಜನಪ್ರಿಯತೆ ಮತ್ತೆರಡು ಹಂತಗಳನ್ನೇರುತ್ತದೆ. ಗುರುಗಳು ಮತ್ತವರ ಶಿಷ್ಯರೂ ತಮ್ಮ ತಮ್ಮ ಊರು ಮನೆಗಳಿಗೆ ಕರೆಸಿಕೊಂಡು ಅವರಿಂದ ರಾಮಾಯಣ ಸಪ್ತಾಹವನ್ನು ಹಾಡಿಸುವುದರ ಮೂಲಕ ಸಂಭ್ರಮವನ್ನು ಆಚರಿಸುತ್ತಾರೆ. ಭಗವಂತ ಕೊಟ್ಟ ಇಂಪಾದ ಕಂಠ ಮತ್ತು ಕಾವ್ಯರಚನೆಯ ಪ್ರತಿಭೆ ಅವರನ್ನು ಹಾಡುಹಕ್ಕಿಯನ್ನಾಗಿ ರೂಪಿಸುತ್ತದೆ. ಈ ಹಾಡುಹಕ್ಕಿ ರಾಮಾಯಣವನ್ನೇ ಹಾಡುತ್ತಾ ಹಾಡುತ್ತಾ ಗುರುಗಳ ಶಿಷ್ಯಕೋಟಿಗಳ ಊರುಗಳಲ್ಲಿ ಹಾರಾಡುತ್ತಾ ವಿಹರಿಸುತ್ತದೆ. ಈ ನಡುವೆ ’ಅಂಬಾಬಾಯಿಯವರಿಂದ ಸುಂದರಕಾಂಡ ಹಾಡಿಸಿದರೆ ಆ ಮನೆಗೆ ಶುಭವಾಗುತ್ತದೆ’ ಎನ್ನುವ ಸಣ್ಣ ನಂಬಿಕೆ ಚಿತ್ರದುರ್ಗದಲ್ಲೆಲ್ಲಾ ಹರಡಿ, ಪರಿಚಿತರು, ಅಪರಿಚಿತರೂ ಬೇಡಿಕೆಗಳನ್ನು ಮುಂದಿಟ್ಟು ಬಿಡುವಿಲ್ಲದಂತೆ ಕಾರ್ಯಕ್ರಮಗಳನ್ನು ನೀಡುತ್ತಾ ಅಂಬಾಬಾಯಿ ಯವರನ್ನು ಪ್ರಸಿದ್ಧಿಯ ತುತ್ತತುದಿ ಗೇರಿಸುತ್ತಾರೆ! ಅಂಬಾಬಾಯಿಯವರನ್ನು ಇಂದಿಗೂ ಚಿತ್ರದುರ್ಗದ ಕೆಲವು ಹಿರಿಯ ತಲೆಗಳು ’ಸುಂದರಕಾಂಡದ ಅಂಬಾಬಾಯಿ’ ಎನ್ನುವ ಪ್ರಿಯ ಹೆಸರಿನಿಂದಲೇ ನೆನಪಿಸಿಕೊಳ್ಳುತ್ತಾರೆ. ಎಲ್ಲಿಯ ’ಕೆಟ್ಟ ಕಾಲ್ಗುಣದ ವಿಧವೆ? ಎಲ್ಲಿಯ ಶುಭಶಕುನದ ಹಕ್ಕಿ?’ ಕಾಲ ಯಾವುದನ್ನಾದರೂ ಬದಲಾಯಿಸಿ ಬಿಡಬಹುದು ಎನ್ನುವುದಕ್ಕೆ ಅಂಬಾಬಾಯಿಯವರ ಜೀವನವೇ ಒಂದು ಸಾಕ್ಷಿ!
’ಸುಖೇ ದುಃಖೇ ಸಮೇ ಕೃತ್ವಾ’ ಎನ್ನುವ ಭಗವದ್ಗೀತೆಯ ಬೋಧೆಯನ್ನು ಅಂಬಾಬಾಯಿಯವರು ಹುಟ್ಟುತ್ತಲೇ ತಮ್ಮ ಜೀವನ ತತ್ವವನ್ನಾಗಿಸಿಕೊಂಡಿದ್ದರು. ಬಾಲ್ಯದ ಹತ್ತು-ಹನ್ನೆರಡು ವರ್ಷಗಳನ್ನು ಉಜ್ವಲ ಕಲಿಕೆಯ ಪರ್ವವನ್ನಾಗಿಸಿಕೊಂಡರು. ಅಜ್ಜಿಯಿಂದ ಸಾವಿರಾರು ದೇವರನಾಮಗಳನ್ನು ರಾಗಲಯಗಳ ಸಹಿತ ಹಾಡುವುದನ್ನು ಮತ್ತು ಅಜ್ಜಿಯಂತೆಯೇ ನೆನಪಿನಲ್ಲಿಡುವುದನ್ನೂ ಕಲಿತರು. ಶಾಲಾ ವಿದ್ಯಾಭ್ಯಾಸದ ಬಲದಿಂದ ಕುಮಾರವ್ಯಾಸ ಭಾರತದಂಥಾ ಪ್ರೌಢಕಾವ್ಯವನ್ನು ಓದಿ ಅರ್ಥಮಾಡಿಕೊಳ್ಳುವ ಮಾನಸಿಕ ಶಕ್ತಿಯನ್ನು ಪಡೆದರು. ಇದರಿಂದ ಅವರ ಭಾಷಾ ಪ್ರೌಢಿಮೆ ಉನ್ನತಸ್ಥರಕ್ಕೇರಿತು. ಬದುಕನ್ನು ಪ್ರಬುದ್ಧ ರೀತಿಯಲ್ಲಿ ಸ್ವೀಕರಿಸಿ ವಿಶ್ಲೇಷಿಸುವ ಮನೋಬಲ ಸ್ಥಿರವಾಯಿತು. ಆದ್ದರಿಂದಲೇ ೧೨-೧೩ನೇ ವಯಸ್ಸಿನಲ್ಲಿ ಲಭಿಸಿದ ವೈಧವ್ಯವನ್ನು ಕುಸಿಯದೇ, ತನ್ನ ಅದೃಷ್ಟವನ್ನು ಹಳಿಯದೇ, ಪರರನ್ನು ನಿಂದಿಸದೇ ತುತ್ತು ಅನ್ನಕ್ಕಾಗಿ ಹಗಲಿರುಳೂ ಜೀತದ ಬದುಕನ್ನು ಮನೋಬಲದಿಂದಲೇ ನಿಭಾಯಿಸಿದರು. ಬಾಲ್ಯದ ಹದಿಮೂರು ವರ್ಷದ ನಂತರ ಮುಂದಿನ ಹದಿನಾರು ವರ್ಷಗಳ ದೀರ್ಘಕಾಲ ಇಂಥಾ ಬದುಕನ್ನು ನಿಭಾಯಿಸುವುದು ಮತ್ತು ನಂತರವೂ ಹೊಸ ಕಾವ್ಯಸೃಷ್ಟಿಯ ಉತ್ಸಾಹ ಬದುಕಿಗೆ ಪದಾರ್ಪಣ ಮಾಡುವುದೂ ಬಹುಶಃ ಅಂಬಾಬಾಯಿಯವರಂತಹ ಉದಾತ್ತ ಜೀವಿಗಳಿಗೆ ಮಾತ್ರ ಸಾಧ್ಯವೆನಿಸುತ್ತದೆ.
೧೯೩೧ರಲ್ಲಿ ಅಂಕಿತ ಪಡೆದ ನಂತರ ಕಾವ್ಯರಚನೆಗೆ ತೊಡಗಿದ ಈ ಕೀರ್ತನಕಾರ್ತಿಗೆ ಕೆಲವೇ ವರ್ಷಗಳಲ್ಲಿ ಜನಾದರಣೆ ಸಿಕ್ಕು ಬದುಕು ಮತ್ತೊಂದು ತಿರುವಿಗೆ ಹೊರಳುತ್ತದೆ. ಆದರೆ ಅವರ ಮಾಗಿದ ಮನಸ್ಸು ಕಷ್ಟದಲ್ಲಿ ಕುಸಿಯದೇ ಗಟ್ಟಿಯಾಗಿದ್ದ ಮನಸ್ಸು. ಈ ಪ್ರಸಿದ್ಧಿಯ ಸುಖದಲ್ಲಿ ಹಿಗ್ಗದಿರುವಂತೆ, ಅಹಂಕಾರಕ್ಕೆ ಒಳಗಾಗದೇ ’ದಾಸರ ದಾಸರ ದಾಸರಮನೆಯ ದಾಸನಯ್ಯಾ ನಾನು’ ಎಂದು ಕನಕದಾಸರು ಬಿನ್ನವಿಸುವಂತೆ ಮತ್ತೆ ದಾಸದೀಕ್ಷೆಯ ಆಳಕ್ಕಿಳಿಯುತ್ತಾರೆ. ಜನಪ್ರಿಯತೆಯಿಂದ ದೂರ ಸರಿಯಲು ಬಯಸುತ್ತಾರೆ. ಆದ್ದರಿಂದಲೇ ಬದುಕನ್ನು ಪ್ರಯತ್ನಪೂರ್ವಕವಾಗಿ ದಾಸದೀಕ್ಷೆಗೆ ಮುಡಿಪಾಗಿಸುತ್ತಾರೆ. ಯಾವುದನ್ನು ಸಾಧಾರಣ ಜನ ’ಕಷ್ಟ, ಹೀನಾಯ’ ಎಂದೆಲ್ಲಾ ಭಾವಿಸುತ್ತಾರೋ, ಅಂಥಾ ಯಾಯಿವಾರ (ಕೇವಲ ನಾಲ್ಕಾರು ಮನೆಯಲ್ಲಿ ಮಾತ್ರ ಭಕ್ತಿಯಿಂದ ದೇವರನಾಮವನ್ನು ಹೇಳುತ್ತಾ ಭಿಕ್ಷೆ ಕೇಳುವುದಕ್ಕೆ ಯಾಯಿವಾರವೆನ್ನುತ್ತಾರೆ) ಪ್ರವೃತ್ತಿಯನ್ನು ಆರಿಸಿಕೊಳ್ಳುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿ, ತಾಳತಂಬೂರಿಗಳನ್ನು ಹಿಡಿದು, ಹಾಡುತ್ತಾ ಬೀದಿಬೀದಿಗಳಲ್ಲಿ ತಿರುಗಿ, ನಾಲ್ಕು ಮನೆ ಭಿಕ್ಷೆ ಬೇಡಿ, ಅದರಿಂದ ಲಭಿಸುವ ಧಾನ್ಯದಲ್ಲಿ ಅಡುಗೆ ಮಾಡಿ ಒಪ್ಪತ್ತು ಊಟ ಮಾಡುವ ಈ ದಾಸ ದೀಕ್ಷೆಯನ್ನು ಹೀಗೆ ಅಳವಡಿಸಿಕೊಂಡ ಹರಿದಾಸ ಮಹಿಳೆ ಹಿಂದೆ ಹುಟ್ಟಿರಲಿಲ್ಲ, ಮುಂದೆ ಕಾಣಲಿಲ್ಲ. ಪುರಂದರದಾಸರು, ಕನಕದಾಸರು, ವಿಜಯದಾಸರೇ ಮೊದಲಾದ ಅನೇಕ ದಾಸರ ನಿಯಮವನ್ನು ಅನುಸರಿಸಿ ಕಾಲಿಗೆ ಗೆಜ್ಜೆಕಟ್ಟಿ ಬೀದಿಬೀದಿಯಲ್ಲಿ ಹಾಡುತ್ತಾ ನಡೆದ ಮೊದಲ ಮತ್ತು ಕಡೆಯ ಹರಿದಾಸ ಮಹಿಳೆ ಅಂಬಾಬಾಯಿ. ಇದಕ್ಕೆ ಕಾರಣವನ್ನು ಅವರು ತಮ್ಮದೇ ಮಾತಿನಲ್ಲಿ ಹೀಗೆ ಹೇಳಿದ್ದಾರೆ:
ಶ್ರೀಮನ್ ಮಧ್ವಮತ ಸಂಪ್ರದಾಯದ ಅನುಸಾರ ಶ್ರೀ ವ್ಯಾಸರಾಯ ಪುರಂದರ ದಾಸರಾದಿಯಾದ ಪ್ರಭೃತಿಗಳ ಶಿಷ್ಯ ಪರಂಪರ್ಯದಲ್ಲಿ ಉತ್ಪನ್ನರಾದ ಶ್ರೀ ಮುದ್ದುಮೋಹನ ದಾಸರಾಯರ ಮುಖ್ಯ ಶಿಷ್ಯರಾಗಿ, ಈ ವರ್ತಮಾನ ಕಲಿಗಾಲದಲ್ಲಿ ಖಿಲವಾದ ದಾಸತ್ವವನ್ನು ಕ್ರಮಪ್ರಕಾರ ಅಂಕಿತೋಪದೇಶದಿಂದ ಉದ್ಧರಿಸಿ, ದಾಸತ್ವಸ್ಥಾಪನಾಚಾರ್ಯರೆನಿಸಿದ ಶ್ರೀ ಆನಂದರತ್ನ ಪರಮಪ್ರಿಯ, ಪ್ರಾಜ್ಞಮೌಳಿ ಭೂಕಲ್ಪತರು ಶ್ರೀಮಾನ್ ತಂದೆ ಮುದ್ದುಮೋಹನ ವಿಠಲದಾಸರಾಯರು ಅನುಗ್ರಹಪೂರ್ವಕ ಈಗ್ಗೆ ಎಂಟು ವರ್ಷಗಳ ಹಿಂದೆ ಶ್ರೀ ಗೋಪಾಲಕೃಷ್ಣ ವಿಠಲನೆಂಬ ಅಂಕಿತೋಪದೇಶವನ್ನು ಮಾಡಿದರು. ಆಗಿನಿಂದ ಈವರೆಗೆ ಅನೇಕ ಅನುಭವಗಳೂ, ಗುರುಕರುಣವೂ, ಪದಪದ್ಯಗಳ ರಚನೆಯೂ ಲಭಿಸಿರುತ್ತದೆ. ಶ್ರೀ ಗುರುಗಳ ಕರುಣವೂ ಅಭಿವೃದ್ಧಿಸುತ್ತಾ ಬರುತ್ತಿದ್ದು, ನಡೆಯತಕ್ಕ ಸಾಧನೆಗಳು ನಡೆಯುತ್ತಲೇ ಬಂದು, ಶ್ರೀ ಗುರುಕೃಪೆಯಿಂದ ಶತೃಗಳೇ ಮಿತ್ರರಾಗಿ, ಎಲ್ಲವೂ ತನಗೆ ತಾನೇ ಶಾಂತವಾಗಿ, ಸುಖವಾಗಿರುವ ಕಾಲವು ಶ್ರೀ ಲಕ್ಷ್ಮೀ ನರಸಿಂಹನ ಕೃಪೆಯಿಂದ ಒದಗಿತು. ಕಷ್ಟದಲ್ಲಿ ತಲೆ ತಪ್ಪಿಸಿಕೊಳ್ಳುವುದು ವೈರಾಗ್ಯವಲ್ಲ. ಪರರ ಬಲವದ್ಬಂಧಕ್ಕೆ ವಹಿಸುವುದು ವೈರಾಗ್ಯವಲ್ಲ. ಬಂದಂಥಾ ಕಷ್ಟ ನಿಷ್ಠುರಗಳನ್ನು ಜಯಿಸಿ, ಪರಿಣಾಮಗಳನ್ನು ಪರೀಕ್ಷಿಸಿ ಸರ್ವರೂ ಸಂತೋಷದಿಂದ ಅಭಿಮಾನಿಸುತ್ತಿದ್ದ ಕಾಲದಲ್ಲಿ, ಸಂತೋಷದಿಂದ ಸ್ವಜನಾಭಿಮಾನ ತ್ಯಾಗಪೂರ್ವಕ ಶ್ರೀ ಹರಿಗುರು ಚರಣಾರಾಧಕ ತತ್ಪರವಾಗುವುದೇ ಶ್ರೀ ಹರಿಗುರು ಪ್ರೀತಿಕರ ವೈರಾಗ್ಯವೆಂದು ಕಾಲ ನಿರೀಕ್ಷಿಸುತ್ತಾ ಇರುವಾಗ, ಅಂಥಾ ಸುಸಮಯವು ಈಗ ಶ್ರೀ ಗುರುಕೃಪೆಯಿಂದ ಲಭಿಸಿತು.
ಹೀಗೆ ಚಿಂತಿಸಿದ ಅಂಬಾಬಾಯಿಯವರು ಅಶನಾರ್ಥಕ್ಕಾಗಿ ಅಣ್ಣ, ತಮ್ಮ, ತಂಗಿ ಯಾರೊಬ್ಬರ ಮನೆಯಲ್ಲೂ ವಾಸ ಮಾಡದೇ ತಮ್ಮ ಗುರುಗಳ ಸಹಾಯ ಪಡೆದು ಗುರುಗಳ ಶಿಷ್ಯರಿರುವ ಊರುಗಳಲ್ಲಿ ಸಂಚರಿಸುತ್ತಾ, ಆ ಶಿಷ್ಯರೊಂದಿಗೆ ಸಹಕರಿಸುತ್ತಾ, ಜಾತಿಮತ, ಹೆಣ್ಣುಗಂಡು ಈ ಯಾವ ಭೇದವನ್ನೂ ಎಣಿಸದೇ ಹರಿಭಕ್ತಿಯನ್ನು ಸಾರುವಂಥಾ ಕೈಂಕರ್ಯವನ್ನು ಕೈಗೊಳ್ಳುತ್ತಾರೆ. ಅವರ ಪ್ರವಾಸದ ವಸ್ತುಗಳು- ಮೈಮೇಲೆ ಒಂದು ಕೃಷ್ಣಾಜಿನದಲ್ಲೊಂದು ಸೀರೆ, ಬರೆಯಲು ಕಾಗದ ಮತ್ತು ಮಸಿದೌತಿ, ಪ್ರತಿನಿತ್ಯ ತಣ್ಣೀರು ಸ್ನಾನ, ಒಂದು ಪುಟ್ಟ ಟ್ರಂಕಿನಲ್ಲಿ ಪುಟ್ಟದೊಂದು ಅಗ್ಗಿಷ್ಟಿಕೆ, ಅಡುಗೆಗೆ ಒಂದೆರಡು ಸಣ್ಣ ಪಾತ್ರೆಗಳು ಇವಿಷ್ಟು ಸಾಮಾನುಗಳು. ಮಲಗಲು ಪರಿಚಿತರ ಮನೆಯಂಗಳ, ಒಪ್ಪತ್ತಿನ ಊಟಕ್ಕೆ ಗುರುಮಠ ಅಥವಾ ಶಿಷ್ಯರ ಮನೆ ಅಥವಾ ತಾವೇ ಅಡಿಗೆ ಮಾಡಿಕೊಳ್ಳುವುದು. ಕಡ್ಡಾಯವಾಗಿ ನಾಲ್ಕು ಮನೆ ಯಾಯಿವಾರ, ಬಂದ ಧಾನ್ಯವನ್ನು ದೇವಾಲಯಕ್ಕೆ ಸಮರ್ಪಣೆ -ಇಂಥಾ ಸರಳಾತಿಸರಳ ಬದುಕನ್ನು ಎಂಟು ವರ್ಷಗಳ ಕಾಲ ನಡೆಸಿದ ಧೀರ ಮಹಿಳೆ ಅಂಬಾಬಾಯಿ. ಅವರಿಗೆ ತಮ್ಮ ಗುರುಗಳಿಂದಲೇ ಬಂದ ಒಂದು ಹವ್ಯಾಸವಿತ್ತು. ಪ್ರತಿನಿತ್ಯ ಎಲ್ಲಿದ್ದರೂ ತಮ್ಮ ಗುರುಗಳಿಗೆ ಪತ್ರವನ್ನು ಬರೆಯುವುದು. ತಾವು ಮಾಡಿದ ಹರಿ ಸೇವೆಯನ್ನು ಅವರ ಪದಕಮಲದಲ್ಲಿ ಅರ್ಪಿಸುವುದು. ಗುರುಗಳೂ ಸಹ ಪತ್ರಕ್ಕೆ ಪ್ರತಿಪತ್ರವನ್ನು ತಪ್ಪದೇ ಬರೆಯುತ್ತಿದ್ದರು. ಪತ್ರದ ಹರವು ಸಾಲದೆಂದು ಮತ್ತು ತಾವು ಸಂಚರಿಸಿದ ಊರು, ಭೇಟಿಯಾದ ಶಿಷ್ಯರು, ನೋಡಿದ ದೇವಾಲಯಗಳು, ಮಾಡಿದ ಕೆಲಸಗಳು ಎಲ್ಲವನ್ನೂ ವಿವರವಾಗಿ ಬರೆದು ಗುರುಚರಣಕ್ಕೆ ಒಪ್ಪಿಸಲು ಒಂದು ಪುಟ್ಟ ನೋಟ್ ಬುಕ್‌ನಲ್ಲಿ ’ದಿನಚರಿ’ಯನ್ನು ಬರೆಯಲು ಪ್ರಾರಂಭಿಸಿದರು. ಇದರಲ್ಲಿ ಒಟ್ಟು ೮೧ ದಿನಗಳ ವಿವರಗಳಿವೆ. ೩.೧೧.೧೯೩೮ರಿಂದ ಪ್ರಾರಂಭವಾದ ಈ ದಿನಚರಿ, ೨೬.೦೧.೧೯೩೯ರಂದು (ಪುಸ್ತಕ ಖಿಲವಾಗಿ ಹರಿದಿರುವುದರಿಂದ) ನಿಲ್ಲುತ್ತದೆ. ರಟ್ಟುಗಳು ಹರಿದೇ ಹೋಗಿರುವ, ಪುಟಗಳೂ ಜರ್ಜರಿತವಾಗಿರುವ ಈ ನೋಟ್ ಬುಕ್‌ನ ಬರವಣಿಗೆ ಇನ್ನೂ ಇದ್ದಿರಬಹುದಾದರೂ ಸಧ್ಯಕ್ಕೆ ಸಿಕ್ಕಿರುವುದು ಇಷ್ಟು ಮಾತ್ರ.
ಈ ದಿನಚರಿ ಆ ಕಾಲಘಟ್ಟದ ಜನಜೀವನವನ್ನು ತೆರೆದಿಡುತ್ತದೆ. ಅಂದಿನ ಸಮಾಜ ’ಯಾಯಿವಾರ’ವನ್ನು ಕೇವಲ ಭಿಕ್ಷೆ ಎಂದು ಹೀನಾಯ ಮಾಡದೇ ಅತ್ಯಂತ ಗೌರವದಿಂದ ನಡೆದುಕೊಂಡಿರುವುದು ತಿಳಿಯುತ್ತದೆ. ಹೀಗೆ ಏಕಾಂಗಿಯಾಗಿ ಸಂಚರಿಸುವ ಮಹಿಳೆಯನ್ನು ಊರವರು ಅತಿ ವಿಶ್ವಾಸದಿಂದ ನಡೆಸಿಕೊಂಡಿರುವ ಸಜ್ಜನಿಕೆಯನ್ನು ಪ್ರಸ್ತುತಪಡಿಸುತ್ತದೆ. ಮಹಿಳೆಯರು ಮತ್ತು ಜಾತಿಮತ ಲೆಕ್ಕಿಸದೇ ಭಕ್ತಿಪಂಥವನ್ನು ಎಲ್ಲರೂ ಆದರಿಸುತ್ತಿದ್ದರೆನ್ನುವ ವಿಷಯ ಆಪ್ತವಾಗುತ್ತದೆ. ಮಾನವೀಯ ನೆಲೆಯಲ್ಲಿ ಪ್ರತಿಯೊಬ್ಬರೂ ಮಾಡುವ ಸಹಾಯ ದೈವತ್ವದ ದರ್ಶನ ಮಾಡಿಸುತ್ತದೆ. ಮತ್ತು ಅಲ್ಲಲ್ಲಿ ಅಂಬಾಬಾಯಿಯವರು ಎದುರಿಸುವ ಅವಮಾನ ತಿರಸ್ಕಾರಗಳನ್ನು ತಿಳಿಸುತ್ತಾ, ಅದನ್ನು ಅವರು ಯಾವ ಕೋಪತಾಪಗಳಿಲ್ಲದೇ, ಮತ್ತು ಸ್ವಾನುಕಂಪವಿಲ್ಲದೇ ಸಾತ್ವಿಕವಾಗಿ ಸಹಿಸಿ ಗೆದ್ದ ವಿಚಾರವನ್ನೂ ತಿಳಿಸುತ್ತದೆ. ಈ ಎಲ್ಲ ದೃಷ್ಟಿಗಳಿಂದ ಈ ’ದಿನಚರಿ’ ಕನ್ನಡ ಸಾಹಿತ್ಯಲೋಕಕ್ಕೆ ಅದ್ವಿತೀಯ ಕೊಡುಗೆಯಾಗಿದೆ.
ದಿನಚರಿಯ ರೂಪುರೇಷೆಗಳು ಹೀಗಿವೆ- ಪ್ರತಿದಿನದ ಅನುಭವವನ್ನು ರಾತ್ರಿ ಮಲಗುವ ಮುನ್ನ ನಾಲ್ಕಾರು ಸಾಲುಗಳಲ್ಲಿ ಇಂಗ್ಲಿಷ್ ದಿನಾಂಕ ಮತ್ತು ಸಂಪ್ರದಾಯವಾದ ವಾರ ತಿಥಿಗಳ ಸಹಿತ ಉಲ್ಲೇಖಿಸುತ್ತಾರೆ. ಏಕಾದಶಿಯಂದು ನಿಟ್ಟುಪವಾಸವಾದ ಕಾರಣ ಭಜನೆ ಮತ್ತು ಪಾರಾಯಣದ ವಿವರ ನೀಡುತ್ತಾರೆ. ಈಗ ಸಿಕ್ಕಿರುವ ನೋಟ್ ಬುಕ್ ಮೊದಲ ಮತ್ತು ಕಡೆಯ ಅನೇಕ ಪುಟಗಳನ್ನು ಕಳೆದುಕೊಂಡು ಕೇವಲ ಹದಿನೆಂಟು ಪುಟಗಳಿವೆ. ಆದರೆ ಅದರಲ್ಲಿ ಎಂಬತ್ತೊಂದು ದಿನದ ವಿವರಗಳಿವೆ. ಕೆಲವು ಪುಟಗಳಲ್ಲಿ ಎರಡು ಮೂರು ದಿನಗಳ ವಿವರಗಳಿದ್ದರೆ, ಕೆಲವು ಪುಟಗಳಲ್ಲಿ ನಾಲ್ಕಾರು ದಿನಗಳ ವಿವರಗಳಿವೆ. ಮೊದಲ ಮೂರು ಪುಟಗಳ ಮುಂಭಾಗದ ಕೆಳಗಿನ ಎಡತುದಿ ಅರ್ಧಚಂದ್ರಾಕಾರವಾಗಿ ಹರಿದುಹೋಗಿದೆ. ಆದರೂ ಈ ಪುಟಗಳು ಬಹಳಷ್ಟು ಕಥೆಗಳನ್ನು ಹೇಳುತ್ತವೆ. ಮಹಿಳೆ ಯೊಬ್ಬಳು ಮಾಡಿದ ಏಕಾಂಗಿ ಸಾಹಸವನ್ನು ವಿವರಿಸುತ್ತದೆ. ಆಕೆಯ ಆಕಾಂಕ್ಷೆಗಳಿಗೆ ಇಂಬು ನೀಡಿದ ಅಂದಿನ ಸಮಾಜದ ಸ್ಥಿತಿಗೆ ಕನ್ನಡಿಯನ್ನು ಹಿಡಿಯುತ್ತದೆ.
ನನ್ನ ಪಿಹೆಚ್.ಡಿ.ಗಾಗಿ ಮಾಡಿದ ಸಂಶೋಧನೆ ಅಂಬಾಬಾಯಿಯವರ ಬದುಕು ಬರಹವನ್ನೇ ಕುರಿತಾದ್ದರಿಂದ, ಅವರ ಅಣ್ಣತಮ್ಮಂದಿರ ಮಕ್ಕಳನ್ನು ಸಂದರ್ಶನ ಮಾಡಿ ಪಡೆದ ವಿಷಯಗಳಿಂದಲೂ ಈ ದಿನಚರಿಯ ಅನೇಕ ವಿಚಾರಗಳು ಇಲ್ಲಿ ಚಿಕ್ಕದಾಗಿ ದಾಖಲಾಗಿದ್ದರೂ, ಅದರ ಹಿಂದು ಮುಂದಿನ ಸಂಗತಿಗಳು, ಅವರು ಭೇಟಿ ಮಾಡಿದ ಜನರ ವಿವರಗಳು, ಅವರು ಮಾಡಿದ ಕೆಲಸಗಳ ಮುಂದುವರೆದ ಭಾಗಗಳು ಇತ್ಯಾದಿಗಳ ಅರಿವು ಅವರ ಕುಟುಂಬದವರು ತಿಳಿಸಿದ್ದರಿಂದಲೂ, ಓದುಗರಿಗೆ ಈ ದಿನಚರಿ ವಿವರವಾಗಿ ಅರ್ಥವಾಗಲೆಂಬ ಕಾರಣಕ್ಕೆ ಪ್ರತಿಪುಟದಲ್ಲೂ ಅಂಬಾಬಾಯಿಯವರ ದಿನಚರಿಯ ಸಾಲುಗಳನ್ನು (ಮೂಲ ಪಠ್ಯವನ್ನು) ಅವರದೇ ಮಾತುಗಳಲ್ಲಿ ದಾಖಲಿಸಿ, ನಂತರ ಅದಕ್ಕೆ ಇತರ ವಿವರಗಳನ್ನು ಅಗತ್ಯವೆನಿಸಿದರೆ ನನ್ನ ಮಾತುಗಳಲ್ಲಿಯೂ ವಿವರಿಸಿದ್ದೇನೆ. ಓದುಗರು ಈ ಹೊಸ ರೀತಿಯ ಕ್ರಮವನ್ನು ಸ್ವೀಕರಿಸಬೇಕೆಂದು ಪ್ರಾರ್ಥಿಸುತ್ತೇನೆ.
ಡಾ. ಶಾಂತಾನಾಗರಾಜ್
Reviews
There are no reviews yet.