ಕವಿತೆಗೆ ಹೊಸ ವಿಳಾಸ ನೀಡಿದ ಕವಿ
ಇತ್ತೀಚಿನ ಹೊಸ ತಲೆಮಾರಿನ ಕವಿಗಳು ಹೊಚ್ಚ ಹೊಸ ಹುಮ್ಮಸ್ಸಿನಿಂದ ಕವಿತೆಗಳನ್ನು ಬರೆಯುತ್ತಿದ್ದಾರೆ. ಹಳೆಯ ಪ್ರತಿಮೆಗಳನ್ನು ಒಡೆದು ಹೊಸ ಪ್ರತೀಕಗಳನ್ನು ನೀಡಿ ಹೊಸ ನಿರ್ಮಾಣದ ಕಡೆಗೆ ತುಡಿಯುತ್ತಿದ್ದಾರೆ. ಕವಿತೆ ಬರೆಯುವುದು ಕಷ್ಟ ಎಂದರು ಅಡಿಗರು, ಕವಿತೆ ಬರೆಯದಿರುವುದೇ ಕಷ್ಟ ಎಂದರು ರಾಮಾನುಜಂ. ಇಬ್ಬರದ್ದೂ ಆಯಾ ಕಾಲದ ಸತ್ಯವೇ. ಇಬ್ಬರೂ ಒಂದೊಂದು ಯುಗಧರ್ಮವನ್ನು ಪ್ರತಿನಿಧಿಸಿದವರು. ಆಯಾ ಯುಗ ಧರ್ಮಕ್ಕನುಗುಣವಾಗಿ ಇಬ್ಬರೂ ಪರಸ್ಪರ ವಿರುದ್ಧವಾದ ಆಶಯವನ್ನೊಳಗೊಂಡ ಸತ್ಯವನ್ನೇ ಹೇಳಿದ್ದಾರೆ. ಅವರ ಈ ಹೇಳಿಕೆಯನ್ನು ಕನ್ನಡ ಸಾರಸ್ವತಲೋಕವೂ ಒಪ್ಪಿಕೊಂಡಿತು.
ಕಾವ್ಯವು ನಿತ್ಯಂ ಹೊಸದು. ಇಂದು ಬರೆದದ್ದು ನಾಳೆಗೆ ಅದು ಹಳೆಯ ಸರಕು. ಕಾವ್ಯವು ಸಂಗೀತದಂತೆ, ಆಲಾಪದೊಡನೆ ರಾಗ ಸಂಯೋಜನೆ, ತಾನುಗಳ ಮೇಲೆ ತಾನು, ಅರ್ಥದ ಪದರುಗಳ ಮೇಲೆ ಪದರುಗಳು ತೆರೆ ತೆರೆಯುತ್ತ ಹೋಗಬೇಕು. ಕಾವ್ಯ ಬರೀ ಓದಿದರೆ ಸಾಲದು; ಹಾಡಿಕೊಳ್ಳಬೇಕು; ಮಂತ್ರದಂತೆ ಗುಣಗುಣಿಸಬೇಕು; ಭಣಭಣಿಸಬೇಕು ಆಗ ಅದರ ಒಳಗಿನ ಅರ್ಥಗಳೆಲ್ಲ ತೆರೆಯುತ್ತಾ ಹೋಗುತ್ತವೆ ಎಂದು ಬೇಂದ್ರೆಯವರು ಕಾವ್ಯದ ಲಕ್ಷಣವನ್ನು ಹೇಳುತ್ತಾರೆ. ಅನುಭಾವಿ ಕವಿ ಮಧುರ ಚೆನ್ನರು ಪ್ರೀತಿಯನ್ನೇ ಕಾವ್ಯವೆಂದು ಕರೆದು ಅದರಂಥ ವಸ್ತು ಭವದಲ್ಲಿ ಕಾಣೆಯೆಂದು ಹೇಳಿ ಕಾವ್ಯವನ್ನು ಆಧ್ಯಾತ್ಮದ ಉತ್ತುಂಗಕ್ಕೇರಿಸಿದರು. ಇದೆಲ್ಲ ನಿಜವೇ.
ಇತ್ತೀಚಿಗೆ ಹೊಸ ಕವಿಯೊಬ್ಬರ ಕವಿತೆ ಓದುತ್ತಿದ್ದೆ. ಭಾಷೆ, ಪ್ರತಿಮೆ, ಪ್ರತೀಕಗಳ ಜೊತೆಗೆ ಆಟವಾಡುತ್ತಿದ್ದ ಅವರ ಕವಿತೆಯೊಂದರ ನಾಲ್ಕು ಸಾಲು ಹೀಗಿವೆ:
ತಡರಾತ್ರಿ ಎದೆಗೊರಗಿ ಮಲಗಿದ
ಗೆಳತಿ ಗೊಣಗುತ್ತಾಳೆ
ಥಟ್ ಅಂತ
ಹರಿದು ಕೊಡುವ ಶ್ಯಾಟ ಅಲ್ಲ ಕವಿತೆ
ಇಲ್ಲಿಗೆ ಕಾವ್ಯ ವ್ಯಾಖ್ಯಾನದಿಂದ ಸರಿದು ಹೊಸದಾಗಿ ಬರೆಯುತ್ತಿರುವ ಯುವಕವಿ ಸಂತೋಷ ನಾಯಿಕ ಅವರ ಕವಿತೆಯೆಡೆಗೆ ಜಿಗಿಯುತ್ತಿದ್ದೇನೆ.
ಸಂತೋಷ ನಾಯಿಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪೂರ ಎಂಬ ಕುಗ್ರಾಮದ ಹಳ್ಳಿಯ ಹುಡುಗ. ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಇದೀಗ ತನ್ನ ಪಿಎಚ್.ಡಿ.ಯನ್ನು ಮುಗಿಸುತ್ತಿರುವ ಕನಸು ಕಂಗಳ ಯುವಕ. ಇರುವ ಎರಡು ಕಣ್ಣುಗಳಲ್ಲಿ ಒಂದರಲ್ಲಿ ಆಶಾಭಾವದ ದೀಪವನ್ನು ಬೆಳಗಿಸಿ, ಇನ್ನೊಂದರಲ್ಲಿ ನವಕ್ರಾಂತಿಯ ಬೀಜಗಳನ್ನು ಕಣಜದಂತೆ ತುಂಬಿಕೊಂಡು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದಾತ. ಈ ಹುಡುಗ ತನ್ನ ಕುಟುಂಬದಲ್ಲಿ ಮೊದಲ ತಲೆಮಾರಿನ ಅಕ್ಷರವಂತ. ಬೆನ್ನ ಹಿಂದೆ ಬೇಕಾದಷ್ಟು ಅವಮಾನ, ಶೋಷಣೆಗಳ ಗುಡ್ಡವನ್ನು ಹೊತ್ತುಕೊಂಡಿದ್ದರೂ ಮನಸ್ಸಿನಲ್ಲಿ ನಂಜು, ವಿಷ, ಸೇಡು- ಈ ತರಹದ ವೈರಸಗಳನ್ನು ಇಟ್ಟುಕೊಂಡವನಲ್ಲ. ಈ ಹಿಂದೆ ಒಂದೆರಡು ವರ್ಷಗಳ ಮೊದಲು ಆರ್ತ ಎಂಬ ಕವನ ಸಂಕಲನವನ್ನು ಪ್ರಕಟಿಸಿ ಸಾಹಿತ್ಯಾಸಕ್ತರ, ವಿಮರ್ಶಕರ ಗಮನವನ್ನು ತನ್ನೆಡೆಗೆ ಸೆಳೆದುಕೊಂಡ ಕವಿ. ಇದೀಗ ಸಂತೋಷ ನಾಯಿಕ ಹೊಸ ವಿಳಾಸದ ಹೆಜ್ಜೆಗಳು ಕವನ ಸಂಕಲನದಿಂದ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಎರಡನೆಯ ಇನ್ನಿಂಗ್ಸನ್ನು ಆರಂಭಿಸಿದ್ದಾನೆ.
ಹೊಸ ವಿಳಾಸದ ಹೆಜ್ಜೆಗಳು ಸಂಕಲನವು ಇನ್ನೂ ಪ್ರಕಟವಾಗುವುದಕ್ಕಿಂತ ಮೊದಲೇ, ಹಸ್ತಪ್ರತಿಯಲ್ಲಿ ಇದ್ದಾಗಲೇ ಕೊಪ್ಪಳದ ಗವಿಸಿದ್ದ ಎನ್. ಬಳ್ಳಾರಿ ರಾಜ್ಯಮಟ್ಟದ ಕಾವ್ಯ ಪ್ರಶಸ್ತಿಗೆ ಭಾಜನವಾಗಿದೆ. ೪೩ ಕವಿತೆಗಳನ್ನೊಳಗೊಂಡ ಇಲ್ಲಿಯ ಕವಿತೆಗಳು ಇತ್ತೀಚಿನ ಕಾವ್ಯಕ್ಕೆ ಹೊಸ ವಿಳಾಸವನ್ನು ನೀಡಿವೆ. ಇಲ್ಲಿಯ ಕವಿತೆಗಳನ್ನು ಓದುತ್ತಾ ಹೋದಂತೆ ಕನ್ನಡದ ಹೊಸ ಕಾವ್ಯಕ್ಕೆ ಬರುತ್ತಿರುವ ಹೊಸ ಹೊಸ ಅನುಭವದ ಆಯಾಮಗಳು ಗೋಚರಿಸುತ್ತವೆ. ಕವಿಗೆ ಜಗತ್ತಿನ ನೋವಿನ ಬಗ್ಗೆ, ಮನುಕುಲವು ಅನುಭವಿಸುತ್ತಿರುವ ಆತಂಕಗಳ ಬಗ್ಗೆ ಅಗಾಧವಾದ ಸಂವೇದನೆ ಇದೆ. ಈ ನೋವಿನಲ್ಲಿಯೂ ಸಂತೋಷ ನಾಯಿಕ ಅವರ ಕವಿತೆಗಳು ಭವಿಷ್ಯದ ಶುಭ ಭರವಸೆಗಳ ಬಗ್ಗೆ ಆಸೆಯನ್ನು ಇರಿಸಿಕೊಂಡಿವೆ. ಕತ್ತಲೆಯನ್ನು ಹಿಂದಿಕ್ಕಿ ಬೆಳಗು ಬಂದೇ ಬರುವುದೆಂಬ ಆಶಾ ಭಾವನೆ ಕವಿಗಿದೆ.
ಕವಿದ ಕತ್ತಲಿನ ಕೆಳಗೆ
ಬೆಳದಿಂಗಳ ಬೆಳಕಿದೆ
ಕತ್ತಲನ್ನು ಸೀಳಿ ಬೆಳದಿಂಗಳ ಬೆಳಕು ಎಲ್ಲೆಡೆ ಚಿಮ್ಮುವುದೆಂದು ಕವಿ ಆಸೆ ಪಡುತ್ತಾನೆ. ಆರಂಭದಲ್ಲಿಯೇ ಕವಿ ಮೌನ ಮುರಿಯುವ ಹುಡುಕಾಟದಲ್ಲಿದ್ದೇನೆ ಎಂದು ಕಾವ್ಯ ಬರೆಯುವ ತನ್ನ ಆಶಯವನ್ನು ಘೋಷಿಸಿಕೊಂಡಿದ್ದಾನೆ. ಮೌನ ಸಹನಶೀಲತೆಗೆ ಪರ್ಯಾಯವಾಗಿದ್ದರೆ, ಅದನ್ನು ಮುರಿಯುವುದು ಅಥವಾ ಧ್ವಂಸ ಮಾಡುವುದು ತಾನಾಗಲೀ ಅಥವಾ ಜನ ಸಮೂಹವಾಗಲೀ ಇನ್ನು ಸಹಿಸಲಾರೆವು ಎಂದು ಬಹಿರಂಗವಾಗಿಯೇ ಕವಿ ಇಲ್ಲಿ ಅನೌನ್ಸ್ ಮಾಡಿದ್ದಾನೆ. ಇಲ್ಲಿಯ ಕವಿತೆಗಳನ್ನು ಈ ನಿಟ್ಟಿನಲ್ಲಿಯೇ ನೋಡಬೇಕು. ಇವು ಮೌನದ ಕವಿತೆಗಳಲ್ಲ; ಮೌನವಾಗಿದ್ದ ಜ್ವಾಲಾಮುಖಿ ಸ್ಪೋಟಗೊಂಡು ಲಾವಾರಸವನ್ನು ಹೊರಗೆ ಉಗುಳುತ್ತಿರುವ ಕವಿತೆಗಳು. ಅದಕ್ಕಾಗಿಯೇ ಸರ್ವರ ಅವನತಿಯನ್ನು ತಡೆಯಲು ಕವಿ ಗಾಂಧಿಯನ್ನು ಕರೆಯುತ್ತಾನೆ.
ವಿದೇಶಿ ವಹಿವಾಟಕ್ಕೆ ಚಿಲಕ ಹಾಕಿ
ಗುಡಿ ಕೈಗಾರಿಕೆ ಕೈಹಿಡಿಯಲು
ರಾಮ ರಾಜ್ಯದ ಕನಸು ಕಾಣಲು
ಸರ್ವಾಧಿಕಾರ ಚಪಲ ಶಮನ ಮಾಡಲು
ಕುತಂತ್ರಕ್ಕೆ ಅಸಹಕಾರ ತಂತ್ರ ಹೆಣೆಯಲು
ಗಾಂಧಿ ಇಂದು ನೀನು ಇರಬೇಕಾಗಿತ್ತು
ಎಂದು ಕವಿ ಆರ್ತ್ರನಾಗಿ ಗಾಂಧಿಯನ್ನು ಆಹ್ವಾನಿಸುತ್ತಿದ್ದಾನೆ. ಕವಿ ಬುದ್ಧನಿಗೆ ಮಾರು ಹೋಗಿದ್ದಾನೆ. ಬುದ್ಧ ತನ್ನ ಮನೆಗೆ ಬಂದಿದ್ದನೆಂದು ಕವಿ ಹೇಳಿಕೊಂಡಿದ್ದಾನೆ.
ನಮ್ಮ ಮನೆಯ
ಒಲೆಯ ಮೇಲೆ ಬೇಯಿಸಿದ್ದ
ಅವ್ವನ ಕೈರೊಟ್ಟಿಗಾಗಿ ಕಾಯುತ್ತಿದ್ದ ಬುದ್ಧ
ಎಂದು ಹೇಳುವಲ್ಲಿ ಕವಿ ಬುದ್ಧನಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದ್ದಾನೆ. ಆದರೆ ಜನರು ಬುದ್ಧನನ್ನು ಇರಗೊಡುವುದಿಲ್ಲ. ಮೌಲ್ಯಗಳ ಅವಾಂತರದಿಂದಾಗಿ ಬುದ್ಧನ ಜಾಗೆಯಲ್ಲಿ ಈಗ ಚುಂದ(ಬುದ್ಧನಿಗೆ ಕೊನೆಯ ಭಿಕ್ಷೆ ನೀಡಿದ ಪಾವಾ ಗ್ರಾಮದ ಕಮ್ಮಾರ) ಬಂದಿದ್ದಾನೆ. ಈ ಚುಂದನೂ ಭಿಕ್ಷೆ ಬೇಡಲೆಂದೇ ಆಗಮಿಸಿದವ. ಮೌಲ್ಯಗಳ ಸಂಘರ್ಷವನ್ನು ಕವಿ ಇಲ್ಲಿ ತುಂಬಾ ಸ್ಟ್ರಾಂಗಾಗಿ ಬಿಡಿಸಿಟ್ಟಿದ್ದಾನೆ.
ಚಂದ್ರ ಹಗಲಿನಲ್ಲಿ ಕಣ್ಣಿಗೆ ಕಾಣಿಸುವುದಿಲ್ಲ. ಅವನಿಗೆ ಅತೃಪ್ತ ಹೆಣ್ಣೊಬ್ಬಳ ಶಾಪ ಅಂಟಿ ಕೊಂಡಿದೆ. ಆಕೆಗೆ ಹದಿನೆಂಟು ತುಂಬುತ್ತಿದ್ದಂತೆಯೇ ಅವಳ ತಂದೆ ತಾಯಿ ಪಕ್ಕದೂರಿನ ವರನಿಗೆ ಅವಳನ್ನು ಕಟ್ಟಿದರು. ಆತ ಒಂದೂ ಮಾತನಾಡದ ಗಂಡಸು. ಅವಳ ಪ್ರತಿ ರಾತ್ರಿಗಳು ದುರಂತ ರಾತ್ರಿಗಳಾದವು. ಆಕೆ ಅವನ ಕಿವಿಯಲ್ಲಿ
ಮರುಭೂಮಿಯಲ್ಲಿಯೂ
ಓಯಾಸಿಸನ ಕುರುಹುಗಳಿವೆ
ಎಂದು ಹೇಳಿದರೂ ಆತ ಅವಳಿಗೆ ಬೆನ್ನು ತಿರುಗಿಸಿ ಮಲಗಿದ. ಇದನ್ನೆಲ್ಲಾ ನೋಡುತ್ತಿದ್ದ ಚಂದ್ರ
ಒಂದು ಮಗ್ಗುಲಲ್ಲಿ
ಕಿಟಕಿ ಬಳಿ ಕದ್ದು ನೋಡುವ
ಚಂದ್ರನಿಗಾಗಿ ಕಾದು ಕಾದು
ಚಿಟಿಕಿ ಮುರಿದು ಹಿಡಿಶಾಪ ಹಾಕಿದಳು
ಹಗಲಿನಲಿ ನೀನೆಂದಿಗೂ ಕಾಣದಿರೆಂದು
ಈಗಲೂ ಶಾಪ ಮುಕ್ತನಾಗಿಲ್ಲ ಚಂದ್ರ
ಒಂದು ಜಾನಪದ ನಂಬುಗೆ ಅಥವಾ ದಂತಕಥೆಯನ್ನು ಒಂದು ಸುಂದರ ಕವಿತೆಯನ್ನಾಗಿಸಿದ್ದಾನೆ ಕವಿ. ಇದು ಜನಮನ್ನಣೆಯನ್ನು ಪಡೆಯಬಲ್ಲ ಜನಮಾನಸದ ಕವಿತೆಯಾಗಿದೆ.
ಸೀತೆ, ಊರ್ಮಿಳೆ, ಅಮೃತಮತಿ, ಯಶೋಧರೆ, ಅಕ್ಕ ಮುಂತಾದವರ ಬಗ್ಗೆಯೂ ಕವಿ ಇಲ್ಲಿ ಕವಿತೆ ಕಟ್ಟಿದ್ದಾನೆ. ಇವರೆಲ್ಲರೂ ಲೋಕದಿಂದ ಅವಮಾನಿತರಾದವರು, ಆದರೆ ತಮ್ಮ ಸತ್ವವನ್ನು ಬಿಟ್ಟು ಕೊಡಲಾರದೆಯೇ ತಾನೇ ತಾನಾಗಿ ರೂಪಗೊಂಡವರು. ಈ ಕವಿತೆಗಳಲ್ಲಿ ಕವಿ ಸ್ತ್ರೀ ಪರವಾದ ನಿಲುವನ್ನು ತೆಗೆದುಕೊಂಡು ಸಮಾಜದ ವಿರೋಧದಲ್ಲಿ ಬಂಡೆದಿದ್ದಾನೆ.
ಸಮಕಾಲೀನ ಸಂವೇದನೆಗೆ ಕವಿಯ ಮನ ತುಡಿಯುತ್ತದೆ. ಸುತ್ತಲೂ ನಡೆದಿರುವ ಹಿಂಸಾಕಾಂಡದಿಂದ ಕವಿ ಅಸ್ವಸ್ಥನಾಗಿದ್ದಾನೆ. ಕೊಲೆಗಾರರು ಹಾಡು ಹಗಲೇ ಕತ್ತಿ, ತಲ್ವಾರ, ಬಂದೂಕು, ಪಿಸ್ತೂಲಗಳನ್ನು ಝಳಪಿಸುತ್ತ ವಿಚಾರವಂತರನ್ನು, ಮುಗ್ಧರನ್ನು ಕೊಲ್ಲುತ್ತಿರುವುದನ್ನು ಕಂಡು ಕವಿ ಮನ ಘಾಸಿಗೊಂಡಿದೆ. ಈ ಕ್ರೂರ ಮನಸ್ಸುಗಳನ್ನು ಕೊಳೆತ ಮನಸ್ಸುಗಳು ನಿಯಂತ್ರಿಸುತ್ತವೆ. ಸತ್ತವರ ಬಗ್ಗೆ ತೋರಿಕೆಗಾಗಿ ಶೋಕಾಚರಣೆ ಮಾಡಿದರೂ ಈ ಕೊಳೆತ ಮನಸ್ಸುಗಳು ಒಳಗೊಳಗೆ ಸಂಭ್ರಮಿಸುತ್ತಿವೆ. ಈ ಕೊಳೆತ ಮನಸ್ಸುಗಳ ಬಗ್ಗೆ ಗೊತ್ತಿದ್ದರೂ ಸುಮ್ಮನಿರುವ ಮನಸ್ಸುಗಳ ಬಗ್ಗೆ ಕವಿಗೆ ತೀರಾ ಜಿಗುಪ್ಸೆಯುಂಟಾಗಿದೆ. ಗಲಾಟೆ, ದೊಂಬಿ, ಕೊಲೆ, ಸುಲಿಗೆ ಎಬ್ಬಿಸಿದ ಮಹಾಮಹಿಮರು ಮಾತ್ರ ಸೀಮಾತೀತರಾಗಿದ್ದಾರೆ.
ಮಂದಿರ ಮಸೀದಿ ಚರ್ಚುಗಳ ಗೋಡೆಗೆ
ಮತ ಮುದ್ರೆ ಅಂಟಿಸಿದ ಸೀಮಾತೀತರು
ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ
ಎಂದು ಹೇಳುವ ಕವಿ ಒಂದಿಲ್ಲ ಒಂದು ದಿನ ಅಥವಾ ಇಂದಿಲ್ಲದಿರೇ ನಾಳೆ ನೀವು ಮಾತನಾಡುತ್ತೀರಿ ಎಂದು ಹೇಳುತ್ತಾನೆ. ಆದರೆ ಇವರು ಮಾತನಾಡುವ ಹೊತ್ತಿಗೆ ಅವರು ಇವರ ನಾಲಿಗೆಯನ್ನೇ ಕತ್ತರಿಸಿ ಹಾಕಿರುತ್ತಾರೆ.
ಸಂಚು ಹೂಡಿದವ ಇಂದಿಲ್ಲ ನಾಳೆ
ನಿಮ್ಮ ಕುತ್ತಿಗೆಗೇ ಬರುತ್ತಾನೆ
ಮಗನ ಕೈಗೆ ಕತ್ತಿ ಕೊಟ್ಟು ಅಪ್ಪನನು
ಮುಗಿಸಲು ಹೇಳುತ್ತಾನೆ
ಗೆಳೆಯನ ಕೈಗೆ ಪಿಸ್ತೂಲು ಕೊಟ್ಟು
ಮಿತ್ರನನ್ನೇ ಕೊಲ್ಲಲು ಹೇಳುತ್ತಾನೆ
ಗುಡಿಯಲಿ ಗೋಮಾಂಸ ಹಾಕೆಂದು ಹೇಳುತ್ತಾನೆ
ಮಸೀದಿಯಲಿ ಸತ್ತ ಹಂದಿಯನು ಒಗೆಯಲು ಆಜ್ಞಾಪಿಸುತ್ತಾನೆ
ಆಗ ನೀವು ಮಾತನಾಡುತ್ತೀರಿ
ನಾವು ಸುಮ್ಮನಿದ್ದರೂ ನೀವು ಮಾತನಾಡುತ್ತೀರಿ!
ಸಂತೋಷ ನಾಯಿಕ ಗಡಿನಾಡಿನ ಕವಿ. ಬೆಳಗಾವಿ ಪರಿಸರದ ಕನ್ನಡ ಮತ್ತು ಮರಾಠಿ ಧಾಂದಲೆ ಅವರ ಚಿತ್ತವನ್ನು ಕಲಕಿದೆ. ಒಂದೇ ನೆಲದ, ಒಂದೇ ಕುಲದ ಕನ್ನಡಿಗರ ಮತ್ತು ಮರಾಠಿಗರ ನಡುವಿನ ವಿರಸ ಕವಿ ಮನವನ್ನು ಘಾಸಿಗೊಳಿಸಿದೆ. ಅವರಿಬ್ಬರೂ ಒಂದೇ ಎಂದು ಕವಿ ಹೇಳುತ್ತಾನೆ.
ಅವನು ಹುಟ್ಟಿದ್ದು
ಇವನು ಸತ್ತಿದ್ದು
ಒಂದೇ ನೆಲದಲಿ
……………………….
ಅವನ ಆಯಿ
ಇವನ ತಾಯಿ
ಒಂದೇ ಸೀರೆಯಲಿ
ಅವನ ಝೆಂಡಾ
ಇವನ ಬಾವುಟ
ಒಂದೇ ಬಟ್ಟೆಯಲಿ
ಹೀಗೆ ಹೇಳುತ್ತಾ ಕೊನೆಗೆ ಕವಿ ಕನ್ನಡ ಮತ್ತು ಮರಾಠಿಯು ಒಂದೇ ಚರಿತ್ರೆಯಲ್ಲಿ ದಾಖಲಾಗುತ್ತವೆಂದು ಆಸೆ ಪಡುತ್ತಾನೆ.
ಅವನ ಮರಾಠಿ
ಇವನ ಕನ್ನಡ
ಒಂದೇ ಚರಿತ್ರೆಯಲಿ
ಈ ಸಂಕಲನದ ಬಹಳಷ್ಟು ಕವಿತೆಗಳು ಪ್ರೀತಿಯ ಹಲವು ಸ್ವರೂಪಗಳನ್ನು ಇಲ್ಲಿ ಅನಾವರಣಗೊಳಿಸುತ್ತವೆ. ಸಂತೋಷ ನಾಯಿಕ ಅವರ ಕಾವ್ಯವು ಹುಡುಕಾಟದ ಕಾವ್ಯವಾಗಿದೆ. ಈ ಹುಡುಕಾಟವು ಸಂತೋಷ ಅವರ ಕಾವ್ಯದ ಸ್ಥಾಯೀಭಾವವಾಗಿದೆ. ಕಾವ್ಯ ಭಾಷೆ ಮತ್ತು ಧೋರಣೆಗಳಲ್ಲಿ ಒಂದು ಹದವನ್ನು ಸ್ಥಾಪಿಸುವಲ್ಲಿ ಸಂತೋಷ ನಾಯಿಕ ತಮ್ಮ ಈ ಸಂಕಲನದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
ಸಂತೋಷ ನಾಯಿಕ ಕಾವ್ಯ ಪ್ರಕ್ರಿಯೆಯನ್ನು ಗಂಭೀರವಾಗಿಯೇ ಪರಿಗಣಿಸಿದ್ದಾರೆ. ಕಾವ್ಯವನ್ನು ಹುಡುಕುತ್ತಲೇ ಹುಡುಗಾಟದಿಂದ ಅವರು ಸಾಕಷ್ಟು ದೂರವಿದ್ದಾರೆ. ಕವಿತೆ ಮತ್ತು ಕವಿ ಯಶಸ್ವಿ ಯಾಗಲು ಇಷ್ಟು ಸಾಕು.
ಡಾ. ಸರಜೂ ಕಾಟ್ಕರ್, ಬೆಳಗಾವಿ
ಗೋಡೆಗಂಟಿದ ಕಲೆಗಳೆಂಬ ಕವಿತೆಗಳು
ಯುವಕವಿ ಸಂತೋಷ ನಾಯಿಕ ಅವರ ಹೊಸ ವಿಳಾಸದ ಹೆಜ್ಜೆಗಳು ಸಂಕಲನದ ಕವಿತೆಗಳನ್ನು ಓದುತ್ತಾ, ಓದುತ್ತಾ ಹಲವು ವಿಚಾರಗಳು ಕಾಡಲಾರಂಭಿಸಿದವು. ಕವಿತೆ, ಕವಿತೆಗಳ ಓದು, ಕವಿತೆಗಳ ಸುತ್ತಾ ನಡೆಯುವ ಚರ್ಚೆ ಇವೆಲ್ಲವೂ ಕವಿ ಬಳಗಕ್ಕೆ ಅಪ್ಯಾಯಮಾನವಾದ ಸಂಗತಿಗಳು. ಸಾವಧಾನದ ಓದು ಮತ್ತು ಅವುಗಳನ್ನು ಕುರಿತಾದ ಚರ್ಚೆ ಒಳಗಣ ಕವಿತ್ವವನ್ನು ಗಟ್ಟಿಗೊಳಿಸುತ್ತದೆ, ಹೊಸ ಚಿಂತನೆಗಳನ್ನು ನಮ್ಮ ಮುಂದೆ ಹರಡುತ್ತಾ ಹೋಗುತ್ತದೆ.
ಕವಿ, ಕವಿಗಡಣದ ಸಂಖ್ಯೆ ಎಂದಿಗಿಂತಲೂ ವೇಗವಾಗಿ ಹೆಚ್ಚುತ್ತಿದೆ. ಅದರ ಜೊತೆಜೊತೆಗೆ ಹೊಸ ಲವಲವಿಕೆಯ ಕವಿತೆಗಳು ದೇಶ, ಭಾಷೆ, ಗಡಿ ರೇಖೆಗಳನ್ನು ದಾಟಿ ಕನ್ನಡಕ್ಕೆ ಕಾಲಿಡುತ್ತಿವೆ. ಕವಿಗಡಣದ ನಡುವೆ ಕಾಲಿಡಲೂ ಸ್ಥಳವಿಲ್ಲ ಎಂಬುವಂತಹ ಮಾತು ಕಾವ್ಯದ ಶ್ರೀಮಂತ ಫಸಲನ್ನು ಸಂಕೇತಿಸುತ್ತದೆ. ೧೨ನೇ ಶತಮಾನದಲ್ಲಿ ವಿವಿಧ ವರ್ಗಕ್ಕೆ ಸೇರಿದ ವಚನಕಾರ್ತಿಯರು/ ವಚನಕಾರರು ಅಪಾರ ಸಂಖ್ಯೆಯಲ್ಲಿ ತಮ್ಮ ಕುಲಮೂಲ ಚಹರೆಗಳೊಂದಿಗೆ, ಕಾಯಕಗಳ ವಿವರಗಳೊಂದಿಗೆ ಹೊಸ ಸಮಾಜ ಕಟ್ಟುವ ಹುರುಪಿನಲ್ಲಿ ಕಾಲಿಟ್ಟರು. ಈ ಬೆಳವಣಿಗೆ ಏಕಕಾಲಕ್ಕೆ ಸಮಾಜೋಧಾರ್ಮಿಕ, ಆರ್ಥಿಕತೆ, ಭಾಷಾ ಚಳುವಳಿಯಾಗಿಯೇ ಕಂಡುಬಂದಿತು. ಅಕ್ಷರಭಾಗ್ಯದಿಂದ ವಂಚಿತರಾದ ದೊಡ್ಡ ಸಮೂಹವೊಂದು ಏಕಾಏಕಿ ಬರೆಯಲಾರಂಭಿಸಿದ್ದು, ಮಾತನಾಡಲಾರಂಭಿಸಿದ್ದು ಒಂದು ಸೋಜಿಗದ ಘಟನೆಯೆಂಬಂತೆ ನಡೆದು ಹೋಯಿತು. ಕನ್ನಡವೆಂಬ ಭಾಷಾ ಬಳಕೆಯ ಹೊಸ ಸಾಧ್ಯತೆಗಳು ವಿಸ್ತಾರಗೊಂಡವು.
ಮತ್ತೆ ಮತ್ತೆ ಯಾಕೆ ಹನ್ನೆರಡನೇ ಶತಮಾನದೆಡೆಗೆ ಹೊರಳಿ ನೋಡುತ್ತಾ ನಾವೆಲ್ಲರೂ ಮಾತನಾಡುತ್ತೇವೆಂದರೆ ಅದು ಇಂದಿನ ಕವಿಸಮುದಾಯಕ್ಕೆ ಮರೆಯದ ಚರಿತ್ರೆಯಾಗಿದೆ. ಕಾವ್ಯವೆಂದರೆ ಗೊರವರ ಡುಂಡುಂಚಿಯೇ ಎಂದು ಹಿಂದೆಯೇ ನಮ್ಮ ಹಿರಿಯ ಕವಿಗಳು ಪ್ರಶ್ನಿಸಿದ್ದರು. ಅದು ಎಲ್ಲರಿಗೂ ಸುಲಭವಾಗಿ ಸಿಗುವಂತದ್ದೇ, ಬರೆಯಲು ಬರುವಂತದ್ದೇ ಎಂಬ ಚರ್ಚೆಯಿಂದ ಸಾಗಿ ಬಹುದೂರಕ್ಕೆ ನಾವು ಬಂದು ನಿಂತಿದ್ದೇವೆ. ನಿಜದ ಮಾತೆಂದರೆ ದಿನನಿತ್ಯದ ವ್ಯಾಪಾರಗಳನ್ನು ವ್ಯಾಪಾರವೆಂದು ಪರಿಗಣಿಸದೆ ಅವುಗಳ ಜೊತೆಗೆ ನಮ್ಮನ್ನು ಲವಲವಿಕೆಯಿಂದ ತೊಡಗಿಸಿಕೊಂಡು ಅವುಗಳಿಗೆ ಜೀವತುಂಬಿದ ಪ್ರತಿಕ್ರಿಯೆಗಳನ್ನು ಅಕ್ಷರದ ಮೂಲಕ ಕೊಡುವುದಾದರೆ ಅದು ಸಾಹಿತ್ಯವೆನಿಸಿಕೊಳ್ಳುತ್ತದೆ. ಅದಕ್ಕೆ ಪದ್ಯದ ನಯವನ್ನು ತುಂಬುವುದಾದರೆ ಅದು ಕವಿತೆಯಾಗುತ್ತದೆ. ಇದೆಲ್ಲವನ್ನೂ ನಾವು ಬಲ್ಲೆವು. ಹೀಗಿದ್ದೂ ಕವಿತೆ ಬರೆಯುವಾಗ ಒಬ್ಬ ಕವಿ ಇನ್ನೊಬ್ಬ ಕವಿ/ಕವಯಿತ್ರಿಯಿಂದ ಯಾಕೆ ಭಿನ್ನರಾಗುತ್ತಾರೆ. ಈ ಬಿಡಿಸಲಾಗದ ಒಗಟೇ ಕವಿತೆಯ ಮರ್ಮ.
ಸಂತೋಷ ಅವರ ಕವಿತೆ ಓದುವಾಗ ಹೊಸತನದ ಗಾಳಿಯ ಅರಿವಾಗುತ್ತದೆ. ಭಾಷಾ ಲಾಲಿತ್ಯವನ್ನು ಬಳಸಿಕೊಳ್ಳುತ್ತಲೇ, ಎಲ್ಲರೂ ಎದುರಾಗುವ ವಿದ್ಯಮಾನಗಳನ್ನು ಹೇಳುತ್ತಲೇ, ಒಂದು ತಲೆಮಾರಿನ ಹರೆಯದ ಸಲ್ಲಾಪಗಳ ಕತೆಗಳನ್ನು ಬಿಚ್ಚಿಡುತ್ತಲೇ ಕವಿಯಾಗಿ ಬೆಳೆಯುವ ಕ್ರಮ ಮೆಚ್ಚುಗೆ ತರುವಂತದ್ದಾಗಿದೆ. ಕತೆಯಾಗಬಹುದಾದ ವಿವರಗಳನ್ನು ಕವಿತೆ ಕಟ್ಟುವ ಕ್ರಮಕ್ಕೆ ಬಾಗಿಸಿಕೊಳ್ಳುವ ಕ್ರಮ ಈ ಕವಿ ಮುಂದೆಯೂ ಬಹುದೂರ ಸಾಗಬಹುದು ಎಂಬ ನಿರೀಕ್ಷೆಯನ್ನು ಹುಟ್ಟಿಸುತ್ತದೆ.
ಮುಖ್ಯವಾಗಿ ಈ ಕವಿತೆಗಳು ನಿರ್ದಿಷ್ಟ ವಯೋಮಾನ, ವಾತಾವರಣದಲ್ಲಿ ರೂಪುಗೊಂಡ ಕವಿತೆಗಳಾಗಿವೆ. ಕವಿ ಜೀವಿಸುವ ಪರಿಸರ ಮತ್ತು ಸಮಾಜ ಅವನ ಬರಹದ ಬದುಕನ್ನು ನಿರ್ಧರಿಸುತ್ತಿರುತ್ತದೆ. ಇದು ಸಹಜವೂ ಕೂಡ. ಇವು ಇಂದಿನ ಯುವಜನಾಂಗ ಎದುರಿಸುತ್ತಿರುವ ಸಮಸ್ಯೆಗಳು, ಅಭಿವ್ಯಕ್ತಿಯ ಸವಾಲುಗಳು ಸಹ ಎಂಬುದನ್ನು ನಾವು ಮರೆಯುವಂತಿಲ್ಲ. ಉದಾಹರಣೆಗೆ ಗೋಡೆಗಂಟಿದ ಕಲೆಗಳು ಎಂಬ ಕವಿತೆಯ ಕೆಳಗಿನ ಸಾಲುಗಳನ್ನು ಗಮನಿಸಿ.
ನೆತ್ತಿಯ ಮೇಲೆ ಸುತ್ತಿಗೆಯ ಹೊಡೆತ
ಬಿದ್ದಿರುವ ಪೆಟ್ಟುಗಳ ದಾಖಲೆ ಇದೆ
ಶಿಲೆಗಳ ಮೇಲೆ ಕಿರುಬೆರಳಿನ ನೆತ್ತರ
ಶಾಸನ ಬರೆಯುವ ತವಕದಲ್ಲಿದೆ
ಗೋಡೆಯ ತುತ್ತತುದಿಯಲಿ
ಕಾಗೆಯೊಂದು ಹಾಡು ಹಾಡುತ್ತಿದೆ
ಇಲ್ಲಿ ಯಾರೊಬ್ಬರೂ ಕೇಳಲು ತಯಾರಿಲ್ಲ
ಈ ಗೋಡೆಗಳು ಆ ರಾಗದ ದಾಟಿಗೆ ತಲೆದೂಗುತ್ತಿವೆ
ಗೋಡೆಗಂಟಿದ ಕಲೆಗಳು ಎಂಬ ಹೆಸರೇ ಸಾಂಕೇತಿಕವಾದದ್ದು. ಗೋಡೆಯಲ್ಲಿನ ಬರಹಗಳು, ಕಲೆಗಳು ಒಂದು ಊರಿನ, ಒಂದು ಪ್ರದೇಶದ, ಒಂದು ದೇಶದಲ್ಲಿನ ವಿದ್ಯಮಾನಗಳನ್ನು ಕಟ್ಟಿಕೊಡಬಲ್ಲವು. ವರ್ತಮಾನದ ಆಗುಹೋಗುಗಳನ್ನು ಹೇಳಬಲ್ಲವು. ನೆಟ್ಟ ಕಲ್ಲಿನ ಶಾಸನದಂತೆ ಚರಿತ್ರೆಯನ್ನು ಸೃಷ್ಟಿಸಬಲ್ಲವು. ಕಲೆಗಳೆಂದರೆ ಅದು ಅಲ್ಲಿನ ವಿದ್ಯಮಾನಗಳಿಗೆ ಇಟ್ಟ ಕರಿಚುಕ್ಕೆ ಎಂದೂ ಸಹ ಆಗಬಲ್ಲುದು. ಈ ಕವಿತೆಯಲ್ಲಿನ ಗೋಡೆಗಳು ಹೇಳುವ ಹೆಸರಿಲ್ಲದ ದೌರ್ಜನ್ಯದಲ್ಲಿ ಮರೆಯಾಗುವ ಪ್ರೇಮದ ಕತೆಗಳನ್ನು, ಒಲ್ಲದ ಒಲುಮೆಗಳ ದುರಂತವನ್ನು, ಬಲಾತ್ಕಾರ ಬಹಿಷ್ಕಾರಗಳ ನೋವುಗಳನ್ನು, ಮರ್ಯಾದಾ ಹತ್ಯೆಗಳ ಪರಂಪರೆಯನ್ನು, ಸಮ್ಮಿಲನದ ಒಲವನ್ನು, ವಿಫಲ ಪ್ರೇಮದ ದುರಂತವನ್ನು, ಜೊತೆಗೆ ಶುಭವಾಗಲೆಂಬ ಹಾರೈಕೆಯ ನುಡಿಗಳನ್ನು ಮೂಕಸಾಕ್ಷಿಗಳಾಗಿ ಬಿಂಬಿಸಬಲ್ಲವು. ಗೋಡೆಗಳ ಕಲೆಗಳೆಂದರೆ ಒಂದು ರೀತಿಯ ಮೂಕ ಸಾಕ್ಷ್ಯಚಿತ್ರವೆಂದು ಕವಿ ಗುರುತಿಸುವ ಕ್ರಮ ಗಮನ ಸೆಳೆಯುತ್ತದೆ.
ನಂಬಿಕೆಗೆ ಅರ್ಹವಲ್ಲದ ಪ್ರಣಯ, ದಾಂಪತ್ಯಗಳು ಕವಿಯನ್ನು ಅಗತ್ಯಕ್ಕಿಂತಲೂ ಹೆಚ್ಚು ಕಾಡಿದಂತೆ ತೋರುತ್ತದೆ. ವರ್ತಮಾನ ಕಾಲದಲ್ಲಿ ಕುಸಿಯುತ್ತಿರುವ ಸಂಬಂಧಗಳ ಸ್ವರೂಪ ಇದಕ್ಕೆ ಕಾರಣವಿದ್ದರೂ ಇರಬಹುದು. ಪ್ರತಿ ಸಂಬಂಧದಲ್ಲಿ ಇಣುಕುವ ಅಪನಂಬಿಕೆ ಇದಕ್ಕೆ ಕಾರಣವಿರಬಹುದು. ವೇಗವಾಗಿ ಬದಲಾಗುತ್ತಿರುವ ಮನುಷ್ಯ ಸಂಬಂಧಗಳಲ್ಲಿ ನಾವು ಒಡನಾಡು ತ್ತಿದ್ದೇವೆ. ಸಂಬಂಧಗಳು ಬುಡಮಟ್ಟದಿಂದ ತಲೆಕೆಳಗಾಗುತ್ತಿವೆ. ಕುಟುಂಬ ವ್ಯವಸ್ಥೆಯೂ ಮೊದಲಿನಂತಿಲ್ಲದೆ ಅಪರಾಧದ ಪ್ರಕರಣಗಳು ಹೆಚ್ಚುತ್ತಲಿವೆ. ಇಂತಹ ಸಂದರ್ಭಗಳಲ್ಲಿ ಕವಿಯೊಬ್ಬ ಕವಿತೆಯನ್ನು ಹೇಗೆ ಬರೆಯಬಲ್ಲ. ಪಾಬ್ಲೋ ನೆರೂಡಾ ಲೈಲಾಕ್, ಲಿಲ್ಲಿ, ರೋಜಾಗಳ ಬಗ್ಗೆ ತಾನು ಬರೆಯಬೇಕೆನ್ನುವವರ ನಿರೀಕ್ಷೆಗಳಿಗೆ ಬೀದಿಯ ಮೇಲೆ ರಕ್ತವಿದೆ, ರಕ್ತವಿದೆ ಬೀದಿಯ ಮೇಲೆ ಎಂದು ಕವಿತೆಯ ಮೂಲಕ ಪ್ರತಿಕ್ರಿಯಿಸಿದ್ದು ನೆನಪಾಗುತ್ತದೆ. ಕವಿಯೂ ಸಹ ಕಾಲದ ಕೂಸಾಗಿರುವುದರಿಂದ ಕಾಲದ ವಿದ್ಯಮಾನಗಳಿಂದ ಕಳಚಿಕೊಂಡು ಬರೆಯುವುದು ಕಷ್ಟ. ಈ ಹಿನ್ನೆಲೆಯಲ್ಲಿ ಅವನು ಒಂದೂ ಮಾತನಾಡಲಿಲ್ಲ, ನಾವು ಯಾವುದಕ್ಕೆ ಸಾಕ್ಷಿ, ಒಡಲ ಕುಡಿದ ನೀರವ, ನಮ್ಮೂರ ಸೀತೆಯರು… ಕವಿತೆಗಳು ಮುಖ್ಯವಾಗುತ್ತವೆ.
ಸರ್ವೆಕಲ್ಲು ಪ್ರಸ್ತುತ ಕಲುಷಿತವಾದ ಸಮಗ್ರ ಭಾರತದ ಚಿತ್ರಣವನ್ನು ಕಟ್ಟಿಕೊಡುವ ಆಶಯದ ಕವಿತೆ.
ತಲೆ ಎತ್ತಿದ ಲೈಟ್ ಕಂಬಗಳ ಕೆಳಗೆ
ಈದ್ ಚಂದಿರನ ಮಬ್ಬು ಬೆಳಕಿನಲಿ
ಅವ್ವ ಗಡಿಬಿಡಿಯಲಿ
ಸರ್ವೆಕಲ್ಲಿಗೆ ಎಡವಿ ಬಿದ್ದಾಗ
ಅಪ್ಪ ಕೈಹಿಡಿದಾಗ
ಬಂದೂಕು ತಲ್ವಾರ್ ಹಿಲಾಲ್ ಹಿಡಿದು ನಿಂತರು
ಅಪ್ಪನನ್ನು ಕತ್ತರಿಸಿದರು
ಅವ್ವನನ್ನು ಸುಟ್ಟರು
ಈ ಕವಿತೆಯು ವರ್ತಮಾನದ ಸಂಕಟಗಳನ್ನು ಕುರಿತು ತುಂಬಾ ಲೆಕ್ಕಚಾರದಿಂದ ಕಟ್ಟಿದ ಕವಿತೆಯಾಗಿದೆ. ಕವಿತೆಯಲ್ಲಿ ಎರಡು ರೀತಿಯ ಕ್ರಮಗಳಿವೆ. ವರ್ತಮಾನಕ್ಕೆ ಸ್ಪಂದಿಸುವ ಸಂಕಟದಲ್ಲಿ ಪ್ರಜ್ಞಾಪೂರ್ವಕವಾಗಿ ಬರೆದಂತಹವು ಮತ್ತು ಬದುಕಿನ ಲಯಗಳನ್ನು ಅದು ಇದ್ದಂತೆಯೇ ಅಭಿವ್ಯಕ್ತಿಸುವ ಸಹಜ ಕ್ರಮ. ಶಕ್ತ ಕವಿ ಎರಡರಲ್ಲೂ ಬರೆಯಲೇಬೇಕಾಗುತ್ತದೆ. ಈ ಮೇಲಿನ ಕವಿತೆಯಲ್ಲಿ ಮೊದಲ ಭಾಗದಲ್ಲಿ ರಹೀಮನ ಮನೆಯಲ್ಲಿ ವಿಲ್ಸನ್‌ನೊಂದಿಗೆ ಇಫ್ತಿಹಾರ್ ಮುಗಿಸಿಕೊಂಡು ಕವಿ ಮನೆ ತಲುಪಿದರೆ ಎರಡನೆಯ ಭಾಗದಲ್ಲಿ ಕವಿ ಮತ್ತು ಸಲೀಮ್ ಕ್ರಿಸ್ಮಸ್ ರಾತ್ರಿಯನ್ನು ಮೇರಿ ಮನೆಯಲ್ಲಿ ಕಳೆದು ಅರ್ಧರಾತ್ರಿಯಲ್ಲಿ ತಮ್ಮ ಮನೆ ಸೇರುತ್ತಾರೆ. ಎರಡೂ ಸಂದರ್ಭಗಳು ಬದಲಾಗುತ್ತಿರುವ ಯುವಜನಾಂಗದ ಜಾತಿಮತ ಮೀರಿದ ಸೌಹಾರ್ದಯುತವಾದ ಬದುಕನ್ನು, ವಿಶ್ವಮಾನವರಾಗುವಲ್ಲಿ ಬದಲಾಗಬೇಕಾದ ನಮ್ಮ ನಡೆಯನ್ನು ಸ್ಪಷ್ಟವಾಗಿ ಹೇಳುತ್ತವೆ.
ಇಂತಹ ಕವಿಮನಸ್ಸು ಚಲಿಸಬೇಕಾದ ದಾರಿಯನ್ನು, ಕಂಡುಕೊಳ್ಳಬೇಕಾದ ಮಾನವೀಯ ನೆಲೆಗಳನ್ನು, ಎಲ್ಲರೊಳಗಾಗಿ ಬದುಕಲೇಬೇಕಾದ ಅನಿವಾರ್ಯತೆಯನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದು.
ಮತ್ತೆ ಮತ್ತೆ ಓದುವಂತೆ ಮಾಡಬಲ್ಲ ಹಲವಾರು ಒಳ್ಳೆಯ ಕವಿತೆಗಳು ಈ ಸಂಕಲನದಲ್ಲಿವೆ. ಲೋಕದ ಎಲ್ಲೆಗಳನ್ನು ದಾಟಿ ಸಾಗುವ ಕವಿಮನಸ್ಸಿನ ಲಹರಿಗಳನ್ನು, ವೈಚಾರಿಕತೆಯನ್ನು ಇಲ್ಲಿನ ಕವಿತೆಗಳು ಒಳಗೊಂಡಿವೆ.
ಒಂದಷ್ಟು ಒಳ್ಳೆಯ ಕವಿತೆಗಳು ಈ ಸಂಕಲನದಲ್ಲಿರುವುದರಿಂದಲೇ ಸಂತೋಷ ನಾಯಿಕ ನಮ್ಮ ನಾಳಿನ ಕವಿಗಳಲ್ಲಿ ಒಬ್ಬರಾಗಿ ನಿಲ್ಲಬಲ್ಲರು ಎಂಬ ನಂಬಿಕೆ ನನಗಿದೆ. ಇಂತಹ ಸಾಲಿಗೆ ಸೇರಲಿರುವ ನಮ್ಮ ಕವಿಗೆ ಈ ಮೂಲಕ ಶುಭ ಹಾರೈಸುತ್ತೇನೆ.
ಡಾ. ಎಚ್.ಎಲ್.ಪುಷ್ಪ, ಬೆಂಗಳೂರು
ಪರಿವಿಡಿ
ಸವಿನುಡಿ / ೫
ಕವಿತೆಗೆ ಹೊಸ ವಿಳಾಸ ನೀಡಿದ ಕವಿ / ೭
ಗೋಡೆಗಂಟಿದ ಕಲೆಗಳೆಂಬ ಕವಿತೆಗಳು / ೧೩
ಮತ್ತೆ ಮತ್ತೆ ಶೋಧಿಸಲೇಬೇಕಿವೆ ಹೊಸ ವಿಳಾಸದ ಹೆಜ್ಜೆಗಳನ್ನು / ೧೭
ನೆತ್ತರದ ಹೆಜ್ಜೆಗಳು ಈ ಕವಿತೆಗಳು / ೧೯
೦೧. ಹುಡುಕಾಟ / ೨೫
೦೨. ಚರಿತ್ರೆ ಮಾತಾಡುತ್ತದೆ / ೨೬
೦೩. ಇಂದಿಲ್ಲ ನಾಳೆ ನೀವೇ ಮಾತನಾಡುತ್ತೀರಿ / ೨೮
೦೪. ಅವನು-ಇವನು / ೩೦
೦೫. ನಮ್ಮ ಮನೆಗೆ ಬುದ್ಧ ಬಂದಿದ್ದ / ೩೨
೦೬. ಸರ್ವೆಕಲ್ಲು / ೩೪
೦೭. ನಮ್ಮೂರಿನ ಸೀತೆಯರು / ೩೭
೦೮. ಯುದ್ಧ ಮತ್ತು ಹೆಣ್ಣು / ೩೯
೦೯. ಖಾಲಿ ಪುಟದ ಸಾಲುಗಳು / ೪೧
೧೦. ಒಡಲು ಕುಡಿದ ನೀರವ / ೪೩
೧೧. ಯಶೋಧರೆ / ೪೪
೧೨. ನಾವು ಯಾವುದಕ್ಕೆ ಸಾಕ್ಷಿ? / ೪೬
೧೩. ಹೆಜ್ಜೆಗಳು / ೪೯
೧೪. ಊರ್ಮಿಳೆ / ೫೦
೧೫. ಒಂದು ಸರ್ಕಲ್ಲಿನ ಕಥೆ / ೫೨
೧೬. ಅವಳ ಸ್ವಾತಂತ್ರ್ಯ / ೫೪
೧೭. ಎಲ್ಲಿ? / ೫೬
೧೮. ಗಡಿ / ೫೭
೧೯. ಬೈ ಟು ಕಾಫಿ / ೫೮
೨೦. ಯುದ್ಧ ವಿರೋಧಿ ಗೋಡೆ / ೬೧
೨೧. ಅಕ್ಕ / ೬೨
೨೨. ವಿಷಯ / ೬೩
೨೩. ಹಕ್ಕಿ ಮತ್ತು ಹುಡುಗಿ / ೬೪
೨೪. ಅವನು ಒಂದೂ ಮಾತನಾಡಲಿಲ್ಲ / ೬೫
೨೫. ದಾಸಿ / ೬೭
೨೬. ಯಾರಿವರು? / ೬೯
೨೭. ದಶಮಾನೋತ್ಸವ / ೭೧
೨೮. ಗೋಡೆಗಂಟಿದ ಕಲೆಗಳು / ೭೩
೨೯. ಅವಳು ಮತ್ತು ಬೆಳಗು / ೭೫
೩೦. ಹೊಸ ವಿಳಾಸದ ಹೆಜ್ಜೆಗಳು / ೭೭
೩೧. ದನ ಕಾಯುವ ಹುಡುಗ / ೮೦
೩೨. ನೀವು ಯಾರನ್ನಾದರೂ ಪ್ರೀತಿಸಿದ್ದೀರಾ? / ೮೨
೩೩. ಕ್ಯಾಂಪಸ್ ಸ್ಟ್ಯಾಚು / ೮೪
೩೪. ನಮ್ಮ ತಕರಾರಿದೆ / ೮೬
೩೫. ಈ ನೆಲ / ೮೭
೩೬. ಬಂದೂಕು / ೮೯
೩೭. ನಾನು ಮೂರ್ಖನಲ್ಲ / ೯೨
೩೮. ಹೂದೋಟದ ಹುಡುಗಿಯರು / ೯೪
೩೯. ಗಡಿಪಾರಾಗಿದ್ದಾಳೆ / ೯೫
೪೦. ಗಾಂಧಿ ಇಂದು ನೀನು ಇರಬೇಕಾಗಿತ್ತು / ೯೬
೪೧. ಇಂದಿನ ಪಾಠಗಳು / ೯೭
೪೨. ಪ್ರೀತಿ / ೯೯
೪೩. ಸತ್ತಿರುವುದು ಗೌರಿ ಅಲ್ಲ / ೧೦೦
Reviews
There are no reviews yet.