ಕನ್ನಡ ಸಾಹಿತ್ಯದ ಶಿಖರ ಸೂರ್ಯ
ಡಾ. ಸರಜೂ ಕಾಟ್ಕರ್
ಕನ್ನಡದ ಅದ್ವಿತೀಯ ಪ್ರತಿಭೆಯಾದ ಡಾ. ಚಂದ್ರಶೇಖರ ಕಂಬಾರ ಕನ್ನಡ ಸಾಹಿತ್ಯದಲ್ಲಿ ಅಸಾಧಾರಣವಾದ ಕೃಷಿಯನ್ನು ಕೈಕೊಂಡ ಅಪ್ಪಟ ಮಣ್ಣಿನ ಕವಿ. ಸಧ್ಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿರುವ ಅವರು ಕನ್ನಡ ಸಾಹಿತ್ಯದ ಸಿದ್ಧಿ ಸಾಧನೆಗಳನ್ನು ರಾಷ್ಟ್ರಮಟ್ಟದಲ್ಲಿ ಎತ್ತಿ ಹಿಡಿದಿರುವ ಬಹುಶ್ರುತ ಲೇಖಕ. ಕನ್ನಡಕ್ಕೆ ಎಂಟನೆಯ ಜ್ಞಾನಪೀಠವನ್ನು ದೊರಕಿಸಿಕೊಟ್ಟ ಕಂಬಾರರು ಕಾವ್ಯ, ನಾಟಕ, ಕಾದಂಬರಿ ಮತ್ತು ಜಾನಪದ ಕ್ಷೇತ್ರದಲ್ಲಿ ಮಹತ್ವದ ಕೃತಿಗಳನ್ನು ನೀಡಿರುವುದಲ್ಲದೆ ಈ ಎಲ್ಲ ಕ್ಷೇತ್ರಗಳಿಗೆ ಹೊಸ ಆಯಾಮವನ್ನು ನೀಡಿದ್ದಾರೆ.
ಉತ್ತರ ಕರ್ನಾಟಕದ ದೇಸಿಯತೆ ಅವರ ಸೃಜನಶೀಲತೆಯ ಭಾಗವಾಗಿದೆ. ಆದರೆ ಈ ದೇಸಿಯತೆಗೆ ಅವರು ಆಧುನಿಕ ಪ್ರಜ್ಞೆಯ ಸ್ಪಶ ನೀಡಿದ್ದಾರೆ. ತೋಂಡಿ ಸಂಪ್ರದಾಯದ (ಮೌಖಿಕ) ಬಗ್ಗೆ ಅಪಾರ ಪ್ರೀತಿ ಇರುವ ಕಂಬಾರರ ಸಾಹಿತ್ಯವು ತೋಂಡಿ ಪರಂಪರೆಯ ಮುಂದುವರೆದ ಭಾಗದಂತೆ ಓದುಗರನ್ನು ಹಿಡಿದಿಡುತ್ತದೆ. ವಸಾಹತುಶಾಹಿಯ ಕರಾಳ ಮುಖಗಳನ್ನು ಅನಾವರಣಗೊಳ್ಳಿಸುತ್ತ, ಜಾಗತೀಕರಣದ ಕ್ರೌರ್ಯಕ್ಕೆ ಪ್ರತಿರೋಧವನ್ನು ಒಡ್ಡುತ್ತ ಅವರ ಸಾಹಿತ್ಯ ಮನುಷ್ಯನ ಅಸ್ತಿತ್ವದ ಬಗ್ಗೆ ಮಾತನಾಡುತ್ತದೆ. ಕನ್ನಡದ ನುಡಿ ಸಂಪತ್ತನ್ನು ಅದರ ಎಲ್ಲ ವೈಭವಗಳೊಂದಿಗೆ ದುಡಿಸಿಕೊಂಡಿರುವ ಅವರ ಕಾವ್ಯ ದಣಿದಿರುವ ಮನಸ್ಸುಗಳನ್ನು ಉಲ್ಲಸಿತಗೊಳಿಸುತ್ತದೆ. ಅವರ ಕಾವ್ಯದಲ್ಲಿ ಬರುವ ರೂಪಕ ವಿಧಾನಗಳು ಕನ್ನಡದಲ್ಲಿ ಹೊಸ ಪ್ರತಿಮಾಲೋಕವನ್ನು ಸೃಷ್ಟಿಸಿ ಕನ್ನಡ ಸಾಹಿತ್ಯದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿವೆ. ಕಂಬಾರರು ಸಾಹಿತ್ಯ ಮಾರ್ಗದಲ್ಲಿ ಸದಾ ಹೊಸದನ್ನು ಶೋಧಿಸುವ ಪ್ರತಿಭೆಯುಳ್ಳವರು. ಅವರು ಶೋಧಿಸಿದ ಮಾರ್ಗದ ಮೇಲೆ ಉಳಿದ ಅನೇಕ ಕವಿಗಳು ತಮ್ಮ ಹಾದಿಯನ್ನು ಕಂಡುಕೊಂಡಿದ್ದಾರೆ.
ಕಂಬಾರರು ಅಪ್ಪಟ ಹಳ್ಳಿಯ ಪ್ರತಿಭೆ. ಈಗಲೂ ಅವರು ಧೋತರ, ಕಸಿ ಅಂಗಿ, ಪಟಗಾ ಪ್ರಿಯರು. ಈ ಇಂಗ್ಲಿಷ್ ಡ್ರೆಸ್ಸಿನಲ್ಲಿ (ಪ್ಯಾಂಟು, ಶರ್ಟು, ಕೋಟು) ಏನೋ ಒಂದು ರೀತಿ ಘುಸಮುಟಿಸಿದಂತಾಗುತ್ತದೆ ಎಂದು ಅವರೇ ಒಂದು ಸಂದರ್ಭದಲ್ಲಿ ಹೇಳಿದ್ದರು. ಅವರ ಮಾತಿನಲ್ಲಿ ಹಳ್ಳಿಯ ಭಾಷೆಯ ಸೊಗಡು ತನ್ನಿಂದ ತಾನೇ ವಿಜ್ರಂಭಿಸುತ್ತದೆ. ಹಳ್ಳಿಯ ಭಾಷೆಗೆ ಕಂಬಾರರು ಒಂದು ಗೌರವವನ್ನು ತಂದುಕೊಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಒಂದು ಸಣ್ಣ ಹಳ್ಳಿ ಘೋಡಗೇರಿ. ಆಧುನಿಕತೆಯ ಯಾವ ಸೌಲಭ್ಯವೂ ಇಲ್ಲದ ಈ ಹಳ್ಳಿಯ ಹುಡುಗ ಸಾಹಿತ್ಯ ಶಾರದೆಯ ಅತ್ಯುನ್ನತ ಪೀಠವನ್ನು ಅಲಂಕರಿಸಿದ್ದರ ಹಿಂದೆ ಅವರ ಪ್ರತಿಭೆ, ಶ್ರಮ, ಪ್ರಾಮಾಣಿಕತೆ ಹಾಗೂ ಛಲದ ಒತ್ತಾಸೆ ಇದೆ. ಹಳ್ಳಿಯಲ್ಲಿ ಕಮ್ಮಾರಿಕೆ ಮಾಡುತ್ತ ಕಬ್ಬಿಣವನ್ನು ಕಾಸುವ ಬಸವಣ್ಣೆಪ್ಪನ ಮಗ ಸಾಹಿತ್ಯಲೋಕದ ಧ್ರುವತಾರೆಯಾದುದರ ಹಿಂದೆ ಆ ಹುಡುಗ ಪಟ್ಟ ಶ್ರಮದ ಬೆವರಿನ ಕಥೆ ಇದೆ. ಗ್ರಾಮ್ಯ ಮತ್ತು ಶಿಷ್ಟ ಎರಡೂ ಭಾಷೆಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸಿರುವ ಚಂದ್ರಶೇಖರ ಕಂಬಾರರ ಸೃಜನಶೀಲತೆ ಒಂದು ಬತ್ತದ ತೊರೆ. ಕಂಬಾರರ ಜೊತೆ ಜೊತೆಗೆ ಬರೆಯುತ್ತಿದ್ದ ಹಲವರು ಈಗ ಏನನ್ನೂ ಬರೆಯುತ್ತಿಲ್ಲ. ಅವರ ಸೃಜನಶೀಲತೆಯ ಕಿಡಿ ಆರಿ ಹೋದಂತೆನ್ನಿಸಿದೆ. ಆದರೆ ಕಂಬಾರರ ಸೃಜನ ಶೀಲತೆಯ ಕಿಡಿ ಈಗಲೂ ಜಾಜ್ವಲ್ಯಮಯವಾಗಿ ಗುಡಿಯಲ್ಲಿಯ ನಂದಾದೀಪದಂತೆ ಉರಿಯುತ್ತಿದೆ. ಪ್ರತಿನಿತ್ಯ ಹೊಸದನ್ನು ಚಿಂತಿಸುವ ಕಂಬಾರರು ಈಗಲೂ ಬರವಣಿಗೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗಷ್ಟೇ ಅವರ ಹೊಸ ನಾಟಕ ಮಹಮೂದ ಗವಾನ ಹೊರ ಬಂದಿದೆ. ಮುಸಲ್ಮಾನರ ಆಳ್ವಿಕೆಯ ಕಾಲದಲ್ಲಿ ಕಳೆದುಹೋಗಿದ್ದ ಇತಿಹಾಸದ ಘಟನೆಯ ಮೇಲೆ ಈ ನಾಟಕ ಬೆಳಕು ಚೆಲ್ಲುತ್ತದೆ. ಇತಿಹಾಸದ ಬಗ್ಗೆ ಕಂಬಾರರ ಒಳನೋಟ ಅಚ್ಚರಿಯನ್ನುಂಟು ಮಾಡುತ್ತದೆ; ಇತಿಹಾಸದಿಂದ ಮರೆಮಾಚಲಾಗಿದ್ದ ಪುಟವನ್ನು ಕಂಬಾರರು ತಮ್ಮ ಸೃಜನಶೀಲ ಪ್ರತಿಭೆಯಿಂದ ಇಲ್ಲಿ ಪುನಃ ಅನಾವರಣ ಗೊಳಿಸಿದ್ದಾರೆ.
ಚಂದ್ರಶೇಖರ ಕಂಬಾರ ೧೯೩೭ ಜನೇವರಿ ೨ರಂದು ಘೋಡಗೇರಿ ಎಂಬ ಕುಗ್ರಾಮದಲ್ಲಿ ಹುಟ್ಟಿದರು. ಎಲ್ಲ ಹಳ್ಳಿಗಳಂತೆ ಘೋಡಗೇರಿಯೂ ಪ್ರೀತಿ, ದ್ವೇಷ, ಕೊಲೆ, ಬಡತನ, ಹಾದರ ಮುಂತಾದವುಗಳನ್ನು ತನ್ನ ಒಡಲೊಳಗೆ ತುಂಬಿಕೊಂಡಿರುವ ಹಳ್ಳಿ. ಈ ಎಲ್ಲ ಗುಣವಿಶೇಷತೆಗಳ ಜೊತೆಗೆ ಹಳ್ಳಿಯು ಸದಾ ಜೀವಂತಿಕೆಯನ್ನು ಉಕ್ಕಿಸುತ್ತಿತ್ತೆಂದು ಕಂಬಾರರೇ ಹೇಳುತ್ತಾರೆ.
ಘೋಡಗೇರಿಯು ಹುಕ್ಕೇರಿ ತಾಲೂಕಿನಲ್ಲಿದ್ದರೂ ಅದರ ವ್ಯವಹಾರವು ಸಮೀಪದ ಗೋಕಾಕ ಜೊತೆಗೆ ಆಗಲೂ ಇತ್ತು; ಈಗಲೂ ಇದೆ. ೧೯೪೨ರ ಸ್ವಾತಂತ್ರ್ಯ ಚಳುವಳಿಯಲ್ಲಿ ಘೋಡಗೇರಿಯ ಕೆಲವು ಜನರು ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಆಂದೋಲನದಲ್ಲಿ ಪಾಲ್ಗೊಂಡಿದ್ದರು. ಈ ಕುಗ್ರಾಮದಲ್ಲಿ ೧೮೬೦ರಲ್ಲಿಯೇ ಕನ್ನಡ ಶಾಲೆಯೊಂದು ಆರಂಭಗೊಂಡಿದ್ದರೂ ವಿದ್ಯಾವಂತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿರಲಿಲ್ಲ. ಊರಿನಲ್ಲಿ ಏನೇ ಸಂಭವಿಸಿದರೂ ಅದು ಪಂಚರ ಸಮ್ಮುಖದಲ್ಲಿ ಇತ್ಯರ್ಥವಾಗುತ್ತಿತ್ತು. ಈ ಪಂಚರ ತೀರ್ಮಾನವನ್ನು ಸುಪ್ರಿಂಕೋರ್ಟ್ ಸಹಿತ ಬದಲಿಸುವಂತಿರಲಿಲ್ಲ. ಈ ಪಂಚಾಯತಿಗೆ ಇಬ್ಬರು ಲಿಂಗಾಯತರು, ಒಬ್ಬ ಮುಸಲ್ಮಾನ, ಒಬ್ಬ ಹರಿಜನ (ದಲಿತ) ಹಾಗೂ ಒಬ್ಬ ಕಂಬಾರ- ಹೀಗೆ ಪಂಚ ಮಂಡಳಿ ಇರುತ್ತಿತ್ತು. ಚಂದ್ರಶೇಖರ ಕಂಬಾರರ ತಂದೆ ಬಸವಣ್ಣೆಪ್ಪ ಈ ಪಂಚ ಮಂಡಳಿಯಲ್ಲಿ ಒಬ್ಬರಾಗಿದ್ದರು. ಹೀಗಾಗಿ ಬಸವಣ್ಣೆಪ್ಪರಿಗೆ ಊರಿನಲ್ಲಿ ದೊಡ್ಡ ಗೌರವವಿತ್ತು. ಈ ಪಂಚಮಂಡಳಿಯನ್ನು ದೈವವೆಂದೇ ಜನರು ಕರೆಯುತ್ತಿದ್ದರು.
ಕನ್ನಡದ ಕಮ್ಮಾರ ಎಂಬ ಶಬ್ದವು ಅಪಭ್ರಂಶಗೊಂಡು ಕಂಬಾರ ಎಂದಾಗಿದೆ. ಚಂದ್ರಶೇಖರ ಕಂಬಾರರ ಮನೆ ಉದ್ಯೋಗ ಕಬ್ಬಿಣ ಕಾಸಿ ಬಡೆಯುವುದಾಗಿದೆ. ಕಂಬಾರರು ಚಿಕ್ಕವರಿದ್ದಾಗ ಈ ತಿದಿಯ ಮೇಲೆ ಕೆಲಸ ಮಾಡಿದ್ದಾರೆ; ಕಬ್ಬಿಣವನ್ನು ಕಾಸಿದ್ದಾರೆ.
ಚಂದ್ರಶೇಖರ ಕಂಬಾರರ ತಂದೆ ಬಸವಣ್ಣೆಪ್ಪ ವಿದ್ಯಾವಂತ. ಅವರಿಗೆ ಬಯಲಾಟ ಮತ್ತು ಹಾಡುಗಾರಿಕೆಯ ಬಗ್ಗೆ ಅಪಾರ ಪ್ರೀತಿ. ಹಳ್ಳಿಗೆ ಲಾವಣಿ, ಗೀಗಿ ಮೇಳಗಳು ಬಂದು ತಮ್ಮ ಕಲಾ ಪ್ರದರ್ಶನವನ್ನು ಪ್ರದರ್ಶಿಸುತ್ತಿದ್ದವು. ಪಾರಿಜಾತ ಕಂಪನಿಗಳೂ ಬಂದು ಆಟವಾಡುತ್ತಿದ್ದವು. ಆ ಕಾಲದ ಪಾರಿಜಾತದ ದಂತಕಥೆಯಾಗಿದ್ದ ಕೌಜಲಗಿ ನಿಂಗಮ್ಮನ ತಂಡವೂ ಘೋಡಗೇರಿಗೆ ಪ್ರತಿವರ್ಷ ಬರುತ್ತಿತ್ತು. ಬಸವಣ್ಣೆಪ್ಪ ಮುಂದೆ ಬಂದು ಕುಳಿತುಕೊಳ್ಳುವವರೆಗೆ ಕೌಜಲಗಿ ನಿಂಗಮ್ಮ ತನ್ನ ಪಾರಿಜಾತ ಪ್ರದರ್ಶನ ಆರಂಭಿಸುವಂತಿರಲಿಲ್ಲ. ಪಾರಿಜಾತ ಮತ್ತು ಲಾವಣಿ ಗೀಗಿ ಮೇಳಗಳ ಒಳ ಹೊರಗಿನ ಸಂಪೂರ್ಣ ಅರಿವಿದ್ದ ಬಸವಣ್ಣೆಪ್ಪ ಕಂಬಾರರ ಮೆಚ್ಚುಗೆ ಸಿಕ್ಕರೆ ಅದೇ ದೊಡ್ಡ ಸರ್ಟಿಫಿಕೇಟ್ ಆಗುತ್ತಿತ್ತು. ಗದುಗಿನ ಮಲ್ಲಿಕಾರ್ಜುನ ಸ್ವಾಮಿಗಳು ಪ್ರತಿ ವರ್ಷ ಪ್ರವಚನಕ್ಕಾಗಿ ಊರಿಗೆ ಬರುತ್ತಿದ್ದರು. ಪ್ರಭುಲಿಂಗ ಲೀಲೆ, ನಿಜಗುಣರ ಶಾಸ್ತ್ರ ಪ್ರವಚನವನ್ನು ಈ ಸ್ವಾಮಿಗಳು ಹೇಳುತ್ತಿದ್ದರು.
ಚಂದ್ರಶೇಖರ ಕಂಬಾರರು ತಮ್ಮ ತಂದೆಯವರ ಬಗ್ಗೆ ಹೇಳಿದ ಒಂದು ಘಟನೆ: ಒಂದು ದಿನ ಪಂಚಾಯತಿ ಸೇರಿತ್ತು. ಆಗ ಬಸವಣ್ಣೆಪ್ಪ ಕುಳಿತ ಉಳಿದ ಪಂಚರಿಗೆ ಹಾಗೂ ಅಲ್ಲಿ ಸೇರಿದ್ದ ಇತರ ಜನರಿಗೆ ಜಗತ್ತಿನಲ್ಲಿ ಅತ್ಯಂತ ಸುಂದರವಾಗಿರುವ ವಸ್ತು ಯಾವುದು? ಎಂದು ಪ್ರಶ್ನೆ ಕೇಳಿದರು. ಒಬ್ಬೊಬ್ಬರು ಒಂದೊಂದು ಉತ್ತರ ಹೇಳಿದರು. ಅವರ ಉತ್ತರದಲ್ಲಿ ಸೂರ್ಯ, ಚಂದ್ರ, ನದಿ, ಗಿಡ-ಮರ, ಕುದುರೆ, ಆನೆ, ತಾಯಿ, ತಂದೆ -ಹೀಗೆ ಅನೇಕ ವಸ್ತುಗಳ ಹೆಸರುಗಳು ಬಂದವು. ಅವುಗಳೆಲ್ಲವನ್ನೂ ಬಸವಣ್ಣೆಪ್ಪ ಇಲ್ಲ ಎಂದರು. ಉಳಿದವರು ಇವೆಲ್ಲವು ಇಲ್ಲದಿದ್ದರೆ ಮತ್ತೆ ಯಾವುದು, ಅದಾದ್ರೂ ಹೇಳಪ್ಪ ಎಂದರು. ಅದಕ್ಕೆ ಬಸವಣ್ಣೆಪ್ಪ ಜಗತ್ತಿನಲ್ಲಿ ಅತ್ಯಂತ ಸುಂದರವಾದದ್ದೆಂದರೆ ಅದು ಬಸುರಿಯಾದ ಹೆಣ್ಣುಮಗಳು ಎಂದರು. ಇದನ್ನು ಎಲ್ಲರೂ ಒಪ್ಪಿ ಹೌದು, ಹೌದು ಎಂದರು.
ಕಂಬಾರರ ತಾಯಿಯ ಹೆಸರು ಚೆನ್ನಮ್ಮ (ತಮ್ಮ ತಾಯಿಯ ಹೆಸರನ್ನೇ ಅವರು ತಮ್ಮ ಮೊದಲ ಮಗಳಿಗೆ ಇಟ್ಟಿದ್ದಾರೆ). ಚೆನ್ನಮ್ಮ ತುಂಬ ಚೆನ್ನಾಗಿ ಹಾಡುತ್ತಿದ್ದರು; ಅಪರಿಮಿತವಾದ ಕಥೆಗಳನ್ನು ಹೇಳುತ್ತಿದ್ದರು. ನನ್ನ ತಾಯಿ ಕಥೆಗಳ ಕಣಜವೇ ಆಗಿದ್ದಳು. ಆಕೆ ಒಂದು ಸಲ ಹೇಳಿದ ಕಥೆಯನ್ನು ಇನ್ನೊಂದು ಸಲ ಹೇಳುವಾಗ ಅದನ್ನು ಬೇರೆಯದ್ದಾಗಿಯೇ ಹೇಳುತ್ತಿದ್ದಳು. ಕಥೆಯನ್ನು ಹೇಳು ಹೇಳುತ್ತ ಕಥೆಗಳನ್ನು ಕಟ್ಟುತ್ತಿದ್ದಳು ಎಂದು ಕಂಬಾರರು ಹೇಳುತ್ತಾರೆ. ಚೆನ್ನಮ್ಮನ ಸಹೋದರ ರಾಮಪ್ಪ. ಆತನಿಗೆ ಮಕ್ಕಳಿರಲಿಲ್ಲ. ಆತ ಬಾಲಕ ಚಂದ್ರಶೇಖರನನ್ನು ತುಂಬ ಹಚ್ಚಿಕೊಂಡಿದ್ದ. ಆತ ಹರಿಜನಕೇರಿಯ ಅಂಚಿನಲ್ಲಿ ಮನೆ ಮಾಡಿದ್ದ. ಆತನ ಲೋಕವೇ ಬೇರೆಯಾಗಿತ್ತು. ಹೆಂಡ ಮತ್ತು ತಾಂತ್ರಿಕ ಸಾಧನೆ ಅವನಿಗೆ ಪ್ರಿಯವಾಗಿತ್ತು. ರಾತ್ರಿ ಹೊತ್ತು ಆತ ಸಾಧನೆಗಾಗಿ ಸ್ಮಶಾನಕ್ಕೂ ಹೋಗುತ್ತಿದ್ದ. ಆಗ ಬಾಲಕ ಚಂದ್ರಶೇಖರನೂ ಅವನ ಜೊತೆಗೆ ಹೋಗುತ್ತಿದ್ದ. ಬಾಲಕನಾಗಿದ್ದಾಗಲೇ ಚಂದ್ರಶೇಖರ ಕಂಬಾರರು ಮಾಟ ಮಂತ್ರ, ತಾಂತ್ರಿಕ ವಿದ್ಯೆಗಳನ್ನು ಬಲು ಸಮೀಪದಿಂದ ನೋಡಿದರು.
ಆ ಕಾಲದ ಹಳ್ಳಿಯ ಜನಪ್ರಿಯ ನಾಟಕವೆಂದರೆ ಸಂಗ್ಯಾ ಬಾಳ್ಯಾ. ಈ ನಾಟಕ ಹಳ್ಳಿಗೆ ಪ್ರತಿವರ್ಷ ಹತ್ತಾರು ಸಲ ಬರುತ್ತಿತ್ತು. ಈ ನಾಟಕ ಪ್ರೀತಿ, ಪ್ರೇಮ, ಹಾದರ, ಬಡತನ, ಗೆಳೆತನ, ದ್ವೇಷ, ಕ್ರೌರ್ಯದ ಮಿಸಳ್ ಭಾಜಿಯಂತಿರುವ ಆಟ. ಸಂಗ್ಯಾ ಸಿರಿವಂತ, ಬಾಳ್ಯಾ ಬಡವ. ಇಬ್ಬರೂ ಗೆಳೆಯರು. ನಡುವೆ ಗಂಗಿಯ ಪ್ರವೇಶ. ಆಟ ಕೊನೆಗೆ ದುರಂತದಲ್ಲಿ ಕೊನೆಯಾಗುತ್ತದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ನೈಜವಾಗಿ ನಡೆದ ಘಟನೆಯೇ ಈ ನಾಟಕದ ಕಥಾವಸ್ತು. ಬಾಲಕ ಕಂಬಾರ ಈ ಆಟವನ್ನು ಹತ್ತಾರು ಸಲ ನೋಡಿರಬೇಕು. ಆ ಕಾಲದಲ್ಲಿ ಆ ಆಟವನ್ನು ಬಾಲಕರು ನೋಡಲು ಪರವಾನಿಗೆ ಇರಲಿಲ್ಲ. ಆದರೂ ಕಂಬಾರರು ನಾಟಕವನ್ನು ಜನರ ಕಣ್ಣು ತಪ್ಪಿಸಿ ನೋಡುತ್ತಿದ್ದರು. ಈ ಆಟಕ್ಕೆ ಅನಂತರ ಅವರು ಹೊಸ ಜೀವವನ್ನು ನೀಡಿ ಅದು ಇಡೀ ಕರ್ನಾಟಕ ತಲುಪುವಂತೆ ನೋಡಿಕೊಂಡರು; ಆ ಕಾಲದ ಆಟಕ್ಕೆ ಹೊಸ ಸ್ಪರ್ಶವನ್ನು ನೀಡಿದರು.
ಬಾಲಕನಾಗಿದ್ದಾಗ ಚಂದ್ರಶೇಖರ ದನ ಕಾಯುತ್ತಿದ್ದರು. ಆಗ ಅದು ಅವರ ಪ್ರಿಯವಾದ ಕೆಲಸವೂ ಆಗಿತ್ತು. ಶಾಲೆಯನ್ನು ತಪ್ಪಿಸಿ ದನಗಳ ಜೊತೆಗೆ ಕಾಡು ಕಾಡು ಅಡ್ಡಾಡುವುದು, ಕಾಡಿನಲ್ಲಿಯ ಗಿಡ, ಮರ ಪಕ್ಷಿಗಳ ಜೊತೆಗೆ ಮಾತಾಡುತ್ತ, ಹಾಡುತ್ತ ಅಲೆದಾಡುವುದು ಅವರ ಹವ್ಯಾಸವಾಗಿತ್ತು. ಹಳ್ಳಿಯ ಹಿರಿಯರು ಹೇಳುವ ದೇವರು, ದೆವ್ವಗಳ ಕಥೆಗಳನ್ನು ಆಸಕ್ತಿಯಿಂದ ಕೇಳಿ ಅನಂತರ ತಮ್ಮದೇ ಆದ ಶೈಲಿಯಲ್ಲಿ ಅವುಗಳನ್ನು ಗೆಳೆಯರೆದುರು ಮರು ಸೃಷ್ಟಿ ಮಾಡಿ ಹೇಳಿ ಸಂತೋಷಿಸುತ್ತಿದ್ದರು. ಮುರಿದು ಕಟ್ಟುವ ಪ್ರತಿಭೆ ಚಂದ್ರಶೇಖರರಿಗೆ ಅವರ ಬಾಲ್ಯದಿಂದಲೇ ಬಂದಿದೆ. ಘೋಡಗೇರಿಯ ಸಮೀಪದ ಹಳ್ಳಿ ಸುಲಧಾಳದಲ್ಲಿ ಚಂದ್ರಶೇಖರರ ದೊಡ್ಡವ್ವ ಇರುತ್ತಿದ್ದಳು. ಆಕೆ ಅದ್ಬುತ ಕಥೆಗಾರ್ತಿ ಆಗಿದ್ದಳು. ಸೂಟಿಯಲ್ಲಿ ಚಂದ್ರಶೇಖರ ಸುಲಧಾಳಕ್ಕೆ ಹೋಗುತ್ತಿದ್ದರು. ವರ್ಷಕ್ಕೆ ಮೂರು ತಿಂಗಳು ಅವರ ವಾಸ್ತವ್ಯ ಸುಲಧಾಳದಲ್ಲಿಯೇ. ಆಗ ದೊಡ್ಡವ್ವ ಹೇಳಿದ ಕಥೆಗಳು ಅವರ ಮುಂದಿನ ಕಥಾರಚನೆಗೆ ಹೆಚ್ಚು ಸಹಕಾರಿಯಾದವು. ಆ ವಯಸ್ಸಿನಲ್ಲಿಯೇ ಅವರಿಗೆ ಭಾರತದ ಕಥಾಲೋಕದ ಮೂಲ ಬೀಜವಾಗಿರುವ ಮಿಥ್‌ದ ಪರಿಚಯ ವಾಯಿತು. ಕಲ್ಪನೆ ಮತ್ತು ನಂಬಿಕೆಗಳಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲದ ಈ ಮಿಥ್ ಅವರ ಸಾಹಿತ್ಯದ ಸಮೃದ್ಧ ಸೃಷ್ಟಿಗೆ ಕಾರಣವಾಯಿತು.
ಚಂದ್ರಶೇಖರ ಕಂಬಾರರ ಪ್ರಾಥಮಿಕ ಶಿಕ್ಷಣ ಹಳ್ಳಿಯ ಕನ್ನಡ ಶಾಲೆಯಲ್ಲಿಯೇ ಆಯಿತು. ಕನ್ನಡ ಶಾಲೆಯಲ್ಲಿ ಅವರ ಸಹಪಾಠಿಯಾಗಿದ್ದ ಘೋಡಗೇರಿಯ ಶ್ರೀ ಮಗದುಂ ಅವರು ಈಗಲೂ ತಮ್ಮ ಆ ರಮ್ಯ ಚೈತ್ರಕಾಲವನ್ನು ನೆನೆಸಿಕೊಳ್ಳುತ್ತಾರೆ. ಚಂದ್ರಶೇಖರ ಕನ್ನಡ ಶಾಲೆಯಲ್ಲಿ ಕಲಿತದ್ದಕ್ಕಿಂತ ಹೆಚ್ಚು ಆತ ಹೊರಗೆ ಗಿಡಗಳ ಜೊತೆಗೆ, ಹೂವುಗಳ ಜೊತೆಗೆ, ಪಕ್ಷಿಗಳ ಜೊತೆಗೆ, ಚಿಟ್ಟೆಗಳ ಜೊತೆಗೆ ಮಾತನಾಡುತ್ತಿದ್ದ. ಈಗ ನನಗೆ ಅನ್ನಿಸುತ್ತದೆ ಅವೂ ಅವನ ಜೊತೆಗೆ ಮಾತನಾಡುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ.
ಕಂಬಾರರ ಎಲ್ಲ ಕೃತಿಗಳಲ್ಲಿ ಶಿವಾಪುರದ ಪ್ರಸ್ತಾಪ ಬರುತ್ತದೆ. ಘೋಡಗೇರಿ ಮತ್ತು ಶಿವಾಪುರ ಇವು ಬೇರೆ ಬೇರೆ ಊರುಗಳಲ್ಲ. ಘೋಡಗೇರಿ ಎಂದರೆ ಶಿವಾಪುರ; ಶಿವಾಪುರ ಎಂದರೆ ಘೋಡಗೇರಿ. ಕಂಬಾರರಿಗೆ ತಮ್ಮ ಊರಿನ ಬಗ್ಗೆ ಅದೆಷ್ಟು ವ್ಯಾಮೋಹವಿದೆಯೆಂದರೆ ಅವರ ಎಲ್ಲ ಕೃತಿಗಳಲ್ಲೂ ಈ ಶಿವಾಪುರ ಪ್ರತ್ಯಕ್ಷವಾಗುತ್ತದೆ. ಶಿವಾಪುರ ಬಿಟ್ಟು ಕಂಬಾರರ ಕಾವ್ಯ ಇರಲು ಸಾಧ್ಯವೇ ಇಲ್ಲವೆನ್ನುವಷ್ಟರ ಮಟ್ಟಿಗೆ ಶಿವಾಪುರ ಕಂಬಾರರ ಕೃತಿಗಳನ್ನು ಆವರಿಸಿಕೊಂಡಿದೆ. ಕಂಬಾರರು ಹುಟ್ಟಿ ಬೆಳೆದ ಊರು ಘೋಡಗೇರಿ. ಈ ಘೋಡಗೇರಿ ಈ ಹಿಂದೆ ಪಾಶ್ಚಾಪುರ ಸಂಸ್ಥಾನದಲ್ಲಿತ್ತು. ಪಾಶ್ಚಾಪುರವನ್ನು ಒಬ್ಬ ಮುಸ್ಲಿಂ ರಾಜ ಆಳುತ್ತಿದ್ದ. ತನ್ನಲ್ಲಿದ್ದ ಕುದುರೆಗಳನ್ನು ಕಟ್ಟಲು ಅವನಿಗೆ ಒಂದು ಜಾಗ ಬೇಕಾಗಿತ್ತು. ಈಗಿರುವ ಘೋಡಗೇರಿಯನ್ನು ಆತ ಆಯ್ಕೆ ಮಾಡಿಕೊಂಡ. ಕುದುರೆ (ಘೋಡಾ) ಕಟ್ಟುವ ಜಾಗವೇ ಘೋಡಗೇರಿ ಆಯಿತು. ಹಾಗಾದರೆ ಕಂಬಾರರ ಕಾವ್ಯದಲ್ಲಿ ಹಣಕಿ ಹಾಕುವ ಶಿವಾಪುರ ಎಲ್ಲಿದೆಯೆಂದರೆ ಅದನ್ನು ಕಂಬಾರರೇ ವಿವರಿಸುವುದು ಹೀಗೆ: ಈಗಿನ ಘೋಡಗೇರಿಯ ಪಶ್ಚಿಮದಲ್ಲಿ ಸುಮಾರು ಒಂದು ಮೈಲು ದೂರದಲ್ಲಿ ಹಿರಣ್ಯಕೇಶಿ ಮತ್ತು ಘಟಪ್ರಭಾ ನದಿಗಳು ಕೂಡುವ ಕೂಡಲಸಂಗಮ ಇದೆ. ಅಲ್ಲಿ ಒಂದು ಊರಿತ್ತು. ಅದೇ ಶಿವಾಪುರ. ನಮ್ಮ ಪೂರ್ವಜರಿದ್ದುದು ಈ ಊರಿನಲ್ಲಿ. ಆದರೆ ಮೇಲಿಂದ ಮೇಲೆ ಬರುವ ಪ್ರವಾಹ ದಿಂದಾಗಿ ಆ ಶಿವಾಪುರವನ್ನು ಬಿಟ್ಟು ಈಗಿನ ಘೋಡಗೇರಿಗೆ ಬಂದು ನೆಲೆ ನಿಂತರು. ಕುರುಬರ ಹಾಡಿನಲ್ಲಿ ಈ ಸಂಗತಿ ಇದೆ. ಆದರೆ ನಾನು ಕಾವ್ಯದಲ್ಲಿ ಉಪಯೋಗಿಸುವುದು ಸಾಂಕೇತಿಕ ಶಿವಾಪುರವನ್ನು. ಅಂದಿನ ಕೂಡಲಸಂಗಮದ ಶಿವಾಪುರ ಈಗಿನ ಘೋಡಗೇರಿ ಹಾಗೂ ನಾವು ಕಟ್ಟಬೇಕೆಂದ ಕನಸಿನ ಶಿವಾಪುರ-ಈ ಮೂರೂ ಸೇರಿದ ಸಾಂಕೇತಿಕ ಶಿವಾಪುರದ ಶೋಧನೆ ಕನ್ನ ಕವಿತೆ.
ಕಂಬಾರರಿಗೆ ಶಿವಾಪುರ ಕೇವಲ ಒಂದು ಊರು ಅಥವಾ ಸ್ಥಳವಲ್ಲ. ಅವರೇ ಇನ್ನೊಂದು ಸಂದರ್ಭದಲ್ಲಿ ಹೇಳುವಂತೆ ನನ್ನ ಮಟ್ಟಿಗೆ ಶಿವಾಪುರ ಒಂದು ಸ್ವರ್ಗೀಯ ಸ್ಥಳ. ನಾವೀಗ ಆ ಸ್ವರ್ಗವನ್ನು ಕಳೆದುಕೊಂಡಿದ್ದೇವೆ. ನನ್ನ ಎಲ್ಲ ಹಾಡುಗಳು ಈ ಕಳೆದುಹೋದ ಸ್ವರ್ಗದ ಬಗ್ಗೆ ಪರಿತಪಿಸುವಂತಹದ್ದು. ಶಿವಾಪುರ ಇಡೀ ಜಗತ್ತಿನ ಒಂದು ಖರೋಖರ ಪ್ರತಿನಿಧಿ.
ಕಂಬಾರರ ಶಿವಾಪುರ ಹಲವು ಸ್ತರಗಳಲ್ಲಿ ಚರ್ಚೆಗೊಳಗಾಗಿದೆ. ಶಿವಾಪುರ ಎನ್ನುವ ಊರು ಇತ್ತೇ? ಅಥವಾ ಇದೆಯೇ? ಇದ್ದರೆ ಅದು ಎಲ್ಲಿದೆ? ಕವಿಗೂ ಶಿವಾಪುರಕ್ಕೂ ಏನು ಸಂಬಂಧ? ಶಿವಾಪುರವೆಂದರೆ ಬೆಳಗಾವಿ ಜಿಲ್ಲೆಯೇ ಅಥವಾ ಕರ್ನಾಟಕವೇ ಅಥವಾ ಭಾರತವೇ ಅಥವಾ ಜಗತ್ತೇ ಅಥವಾ ಬ್ರಹ್ಮಾಂಡವೇ-ಈ ಮುಂತಾದ ವಿಷಯಗಳು ಸಾಹಿತ್ಯವಲಯದಲ್ಲಿ ವಿಸ್ತೃತವಾದ ಚರ್ಚೆಗೊಳಗಾಗಿವೆ. ಇಂಗ್ಲಿಷ್ ಕಾದಂಬರಿಕಾರ ಆರ್.ಕೆ. ನಾರಾಯಣರ ಕೃತಿಯಲ್ಲಿ ಮಾಲ್ಗುಡಿ ಗ್ರಾಮದ ಹೆಸರು ಬರುತ್ತದೆ. ಅದಕ್ಕೆ ಮತ್ತು ಶಿವಾಪುರಕ್ಕೆ ಹೆಚ್ಚಿನ ಭೇದವಿಲ್ಲ. ಅದೇ ರೀತಿ ಯಶವಂತ ಚಿತ್ತಾಲರ ಕೃತಿಗಳಲ್ಲಿ ಹನೇಹಳ್ಳಿ ಬರುತ್ತದೆ. ಅದೂ ಒಂದು ಶಿವಾಪುರವೇ. ಲೇಖಕನ ಕನಸಿನ ಊರುಗಳು ಈ ರೀತಿ ಸಾರ್ವತ್ರಿಕವಾಗಿ ಚರ್ಚೆಗೊಳಗಾಗಿದೆಯೆಂದರೆ ಆ ಸಾಹಿತಿಯ ಪ್ರತಿಭೆ ಅರಿವಿಗೆ ಬರುತ್ತದೆ.
ಖ್ಯಾತ ಕಾದಂಬರಿಕಾರ ಡಾ. ಯು.ಆರ್. ಅನಂತಮೂರ್ತಿ ರಾಷ್ಟ್ರಗಳು ಅಳಿದರೂ ಶಿವಾಪುರ ಅಳಿಯುವುದಿಲ್ಲವೆಂದು ಒಂದೆಡೆ ಬರೆದಿದ್ದಾರೆ. ಶಿವಾಪುರದ ಮೂಲಕ ಕಂಬಾರರು ಅಚ್ಚ ಕನ್ನಡವಾಗಿರುವ ಒಂದು ಸಣ್ಣ ಪ್ರದೇಶದ ಬಾಳುವ ಶಕ್ತಿಯನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ಅನಂತಮೂರ್ತಿ ಅಭಿಪ್ರಾಯಪಡುತ್ತಾರೆ. ಈ ಶಿವಾಪುರ ಕವಿಗೆ ಎಲ್ಲವನ್ನೂ ಕೊಟ್ಟಿದೆ. ಮುಖ್ಯವಾಗಿ ಎಲ್ಲವನ್ನೂ ನೋಡುವ ಕಣ್ಣನ್ನು, ಅರಿಯುವ ಬುದ್ಧಿಯನ್ನು, ಮಿಡುಕುವ ಹೃದಯವನ್ನು ನೀಡಿದೆ.
ಆಗ ಏಳನೆಯ ಈಯತ್ತೆಗೆ ಮುಲ್ಕೀ ಎಂದು ಕರೆಯುತ್ತಿದ್ದರು. ಕಂಬಾರರು ಹಳ್ಳಿಯಲ್ಲಿ ಮುಲ್ಕೀ ಪರೀಕ್ಷೆ ಮುಗಿಸಿ ಹೈಸ್ಕೂಲಿಗೆಂದು ಸಮೀಪದ ಗೋಕಾಕದಲ್ಲಿರುವ ಮುನ್ಸಿಪಲ್ ಹೈಸ್ಕೂಲ್ ಸೇರಿದರು. ಈ ಶಾಲೆಯಲ್ಲಿ ಕಾದಂಬರಿಕಾರ ಕೃಷ್ಣಮೂರ್ತಿ ಪುರಾಣಿಕರು ಗುರುಗಳಾಗಿದ್ದರು. ಪುರಾಣಿಕರು ಆಗಲೇ ಕಾದಂಬರಿಕಾರರೆಂದು ಹೆಸರು ಮಾಡಿದ್ದರು. ಅವರು ಪ್ರತಿ ರವಿವಾರ ಸಾಹಿತ್ಯದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿ ಗಳನ್ನು ಒಂದೆಡೆಗೆ ಸೇರಿಸಿ ಸಾಹಿತ್ಯದ ಚರ್ಚೆ ನಡೆಸುತ್ತಿದ್ದರು. ವಿದ್ಯಾರ್ಥಿಗಳು ತಾವು ಬರೆದ ಕಥೆ, ಕವಿತೆ, ಪ್ರಬಂಧಗಳನ್ನು ಅಲ್ಲಿ ಓದುತ್ತಿದ್ದರು. ಪುರಾಣಿಕರು ಅವುಗಳನ್ನು ಕೇಳಿ ಅವಶ್ಯವೆನ್ನಿಸಿದಲ್ಲಿ ಅವುಗಳನ್ನು ತಿದ್ದುತ್ತಿದ್ದರು. ಚಂದ್ರಶೇಖರರಿಗೆ ಸಾಹಿತ್ಯ ಅವರ ಹುಟ್ಟಿನೊಂದಿಗೇ ಒಲಿದು ಬಂದಿತ್ತು. ಚಂದ್ರಶೇಖರರು ತಾವು ಬರೆದದ್ದನ್ನು ಈ ಗೋಷ್ಠಿಯಲ್ಲಿ ಓದಿ, ಪುರಾಣಿಕರಿಂದ ಶಹಾಭಾಶ್ ಎನ್ನಿಸಿಕೊಂಡರು. ಚಂದ್ರಶೇಖರರ ಪ್ರತಿಭೆಯನ್ನು ಆಗಲೇ ಗುರುತಿಸಿದ ಕೃಷ್ಣಮೂರ್ತಿ ಪುರಾಣಿಕರು ಚಂದ್ರಶೇಖರರಿಗೆ ಎಲ್ಲ ತರಹದ ಪ್ರೋತ್ಸಾಹನೆಯನ್ನು ನೀಡಿದರು. ಮನೆಗೆ ಕರೆದುಕೊಂಡು ಹೋಗಿ ತಮ್ಮ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ಓದಲೆಂದು ಕೊಡುತ್ತಿದ್ದರು. ಕಂಬಾರರು ಹಸಿದ ಹುಡುಗನಂತೆ ಪುರಾಣಿಕರು ಕೊಟ್ಟ ಪುಸ್ತಕಗಳನ್ನು ಲಗುಬಗೆಯಿಂದ ಓದಿ ಮುಗಿಸುತ್ತಿ ದ್ದರು. ಪುರಾಣಿಕರ ಕೃಪೆಯಿಂದಾಗಿ ಕಂಬಾರರು ಆ ಕಾಲದ ಶ್ರೇಷ್ಠ ಸಾಹಿತಿಗಳ ಅನೇಕಾನೇಕ ಪುಸ್ತಕಗಳನ್ನು ಓದುವಂತಾಯಿತು.
ಗೋಕಾಕದಲ್ಲಿ ಕಂಬಾರರು ಸಂಬಂಧಿಕರೊಬ್ಬರ ಮನೆಯಲ್ಲಿದ್ದು ಹೈಸ್ಕೂಲು ಕಲಿಯುತ್ತಿದ್ದರು. ಆದರೆ ಅದ್ಯಾಕೋ ಅದು ಸರಿ ಹೊಂದಲಿಲ್ಲ. ಕಂಬಾರರು ವಾಸ್ತವ್ಯಕ್ಕಿದ್ದ ಮನೆಯಿಂದ ಹೊರ ಬೀಳಬೇಕಾದ ಪರಿಸ್ಥಿತಿ ಉಂಟಾಯಿತು. ಹೊರಗೆ ಖೋಲಿ ಹಿಡಿದು ಶಾಲೆ ಕಲಿಯಬೇಕೆಂದರೆ ಮನೆಯ ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರಲಿಲ್ಲ. ಬೇರೆ ದಾರಿ ಇಲ್ಲದೆಯೇ ಕಂಬಾರರು ಶಾಲೆಗೆ ಶರಣು ಹೊಡೆದು ಗೋಕಾಕದಿಂದ ಊರಿಗೆ ಗುಡಚಾಪಿ ಕಟ್ಟಬೇಕಾಯಿತು. ಊರಿಗೆ ಬಂದು ಮತ್ತೆ ದನ ಕಾಯಲಾರಂಭಿಸಿ ದರು.
ತಾವು ಊರು ಬಿಡುವ ನಿರ್ಧಾರವನ್ನು ಅವರು ಪುರಾಣಿಕರಿಗೆ ಹೇಳಿರಲಿಲ್ಲ. ಎಂಟ್ಹತ್ತು ದಿನಗಳಾದರೂ ಕಂಬಾರ ಶಾಲೆಯಲ್ಲಿ ಕಾಣಿಸದಿದ್ದಾಗ ಪುರಾಣಿಕರು ಅವರ ಬಗ್ಗೆ ವಿಚಾರಿಸಿದರು. ಸುದ್ದಿ ತಿಳಿದಾಗ ಪುರಾಣಿಕರು ತುಂಬ ನೊಂದುಕೊಂಡರು. ಆದರೆ ಸುಮ್ಮನಿರಲಿಲ್ಲ. ಕೂಡಲೇ ಘೋಡಗೇರಿಗೆ ಬಂದು ಬಸವಣ್ಣೆಪ್ಪರನ್ನು ಭೇಟಿಯಾಗಿ ಅವರ ಮಗ ಅದೆಷ್ಟು ಪ್ರತಿಭಾವಂತನಿದ್ದಾನೆಂದು ಹೇಳಿ ಅವನಿಗೆ ವಾಪಸ್ಸು ಶಾಲೆಗೆ ಕಳಿಸಬೇಕೆಂದು ಒತ್ತಾಯಿಸಿದರು. ತನ್ನ ಮಗ ಶಾಲೆ ಕಲಿಯಬಾರದೆಂದೇನೂ ಬಸವಣ್ಣೆಪ್ಪರಿಗೆ ಅನ್ನಿಸಿರಲಿಲ್ಲ. ಆದರೆ ಬಡತನದಿಂದಾಗಿ ಅದು ಸಾಧ್ಯವಾಗುತ್ತಿಲ್ಲವೆಂದು ಬಸವಣ್ಣೆಪ್ಪ ಪುರಾಣಿಕರಿಗೆ ಹೇಳಿದರು. ಆದರೆ ಪಟ್ಟು ಬಿಡದ ಪುರಾಣಿಕರು ಚಂದ್ರಶೇಖರ ರನ್ನು ತಮ್ಮ ಜೊತೆಗೆ ವಾಪಸ್ಸು ಕರೆದುಕೊಂಡು ಮತ್ತೆ ಶಾಲೆಗೆ ಸೇರಿಸಿದರು. ಶಾಲೆಯ ಫೀಯನ್ನು ಮಾಫಿ ಮಾಡಿಸಿದರು. ಮುಂಡಾಸದ ಎಂಬ ಇನ್ನೊಬ್ಬ ಶಿಕ್ಷಕರು ಶಾಲೆಯಲ್ಲಿದ್ದರು. ಅವರು ಪುರಾಣಿಕರಿಗೆ ಬೇಕಾದವರು. ಅವರಿಗೆ ಹೇಳಿ ಬಾಲಕ ಚಂದ್ರಶೇಖರನ ವಸತಿ ವ್ಯವಸ್ಥೆಗಾಗಿ ಯತ್ನಿಸಲು ಒತ್ತಾಯಿಸಿದರು. ಮುಂಡಾಸದ ಗುರುಗಳು ಸಾವಳಗಿ ಮಠದ ಭಕ್ತರು. ಗೋಕಾಕದಲ್ಲಿ ಸಾವಳಗಿ ಮಠದ ಶಾಖಾ ಮಠವಿದೆ. ಮುಂಡಾಸದ ಗುರುಗಳು ಸಾವಳಗಿಯ ಪೀಠಾಧ್ಯಕ್ಷರಾಗಿದ್ದ ಸಿದ್ಧರಾಮ ಸ್ವಾಮಿಗಳನ್ನು ಭೇಟಿಯಾಗಿ ಅವರಿಗೆ ಬಾಲಕ ಚಂದ್ರಶೇಖರನ ಪ್ರತಿಭೆಯನ್ನೂ ಆ ಪ್ರತಿಭೆಗೆ ಅಡ್ಡವಾಗಿ ನಿಂತಿರುವ ಬಡತನವನ್ನೂ ವಿವರಿಸಿದರು. ಸಿದ್ಧರಾಮ ಸ್ವಾಮಿಗಳು ಚಂದ್ರಶೇಖರನ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ತಮ್ಮ ಮಠದಲ್ಲಿ ಮಾಡಿಸಿದರು. ಚಂದ್ರಶೇಖರನ ಹೈಸ್ಕೂಲು ಅಭ್ಯಾಸದ ಅಡೆತಡೆಗಳೆಲ್ಲ ಮಂಜು ಕರಗಿದಂತೆ ಕರಗಿ ಅವರು ಮತ್ತೆ ಶಾಲೆಗೆ ಹಾಜರಿ ಹಾಕಿದರು.
ಸಾವಳಗಿಯ ಮಠದ ಬಗ್ಗೆ ಹಾಗೂ ಸಿದ್ಧರಾಮ ಸ್ವಾಮಿಗಳ ಬಗ್ಗೆ ಮಾತನಾಡುವಾಗ ಕಂಬಾರರು ತುಂಬ ಭಾವುಕರಾಗುತ್ತಾರೆ. ಸಾವಳಗಿ ಮಠದ ಬಗ್ಗೆ ಕಂಬಾರರಿಗೆ ತುಂಬ ಭಕ್ತಿ ಮತ್ತು ಗೌರವ. ತಮ್ಮ ಪ್ರತಿ ನಾಟಕದಲ್ಲಿ, ಕಾವ್ಯದಲ್ಲಿ ಸ್ವಾಮಿಗಳನ್ನು ಭಕ್ತಿಯಿಂದ ಸ್ಮರಿಸಿಕೊಳ್ಳುತ್ತಾರೆ. ಅವರ ಪ್ರಭಾವ ಕಂಬಾರರ ಜೀವನದ ಮೇಲೆ ಸಾಕಷ್ಟು ಆಗಿರುವುದರಿಂದ ಈಗಲೂ ಕಂಬಾರರು ಪ್ರತಿವರ್ಷ ನಡೆಯುವ ಸಾವಳಗಿಯ ಜಾತ್ರಾ ಮಹೋತ್ಸವವನ್ನು ತಪ್ಪಿಸುವುದಿಲ್ಲ. ತಮ್ಮ ಉಳಿದೆಲ್ಲ ಕಾರ್ಯಕ್ರಮವನ್ನು ರದ್ದುಗೊಳಿಸಿ ಜಾತ್ರೆಗೆ ಹಾಜರಿ ಹಾಕುತ್ತಾರೆ. ಸಿದ್ಧರಾಮ ಸ್ವಾಮಿಗಳಿಗೆ ಮಠದಲ್ಲಿ ತಾವು ಆಶ್ರಯ ನೀಡಿದ ಬಾಲಕ ಅಸಾಮಾನ್ಯನೆಂಬ ಅರಿವಾಗಿತ್ತು. ಸುಗ್ಗಿಯ ಕಾಲದಲ್ಲಿ ಸ್ವಾಮಿಗಳು ಭಿಕ್ಷೆಗೆ ಹೊರಡುತ್ತಿದ್ದರು. ಭಿಕ್ಷೆ ಮುಗಿಸಿಕೊಂಡು ಸಾವಳಗಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಗೋಕಾಕದ ತಮ್ಮ ಶಾಖಾ ಮಠದಲ್ಲಿರುವ ಚಂದ್ರಶೇಖರ ಕಂಬಾರರಿಗಾಗಿ ಒಂದು ಚೀಲ ನವಣೆಯನ್ನು ಇಟ್ಟು ಹೋಗುತ್ತಿದ್ದರು. ಅದು ಬಾಲಕ ಚಂದ್ರಶೇಖರ ಕಂಬಾರರಿಗಾಗಿರುವ ನವಣೆ. ಅವರ ಹೃದಯ ತಾಯಿಯ ಹೃದಯ. ನನ್ನ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ. ಆಗ ನಾನೊಂದು ಕಥೆ, ಲಾವಣಿ ಬರೆದಿದ್ದೆ. ಅವು ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಅವುಗಳನ್ನು ನೋಡಿ ಸ್ವಾಮಿಗಳಿಗೆ ನನ್ನ ಮೇಲೆ ಮತ್ತಷ್ಟು ಅಭಿಮಾನ ಉಂಟಾಯಿತು. ಎಲ್ಲರೆದುರು ಅದನ್ನು ಹೇಳುತ್ತಿದ್ದರು. ನಮ್ಮ ಹುಡುಗ ಎಂಥಾ ಚೆಂದ ಹಾಡು ಬರ್‍ದಾನ ಕೇಳ್ರಿ ಎಂದು ಹೇಳಿ ಅದನ್ನು ನನ್ನಿಂದ ಹಾಡಿಸುತ್ತಿದ್ದರು. ಗೋಕಾಕದ ಹತ್ತಿರ ಯೋಗಿಕೊಳ್ಳವೆಂಬುದೊಂದಿದೆ. ಒಂದು ದಿನ ಯೋಗಿಕೊಳ್ಳಕ್ಕೆ ನಾವು ವಿದ್ಯಾರ್ಥಿಗಳೆಲ್ಲ ಪ್ರವಾಸಕ್ಕೆ ಹೋಗಿದ್ದೆವು. ಈ ಪ್ರವಾಸದ ಬಗ್ಗೆಯೇ ನಿಬಂಧ ಬರೆಯಲು ಸ್ವಾಮಿಗಳು ಹೇಳಿದರು. ನನ್ನ ನಿಬಂಧಕ್ಕೆ ಮೊದಲ ಬಹುಮಾನ ಬಂದಿತು. ಸ್ವಾಮಿಗಳು ಐದು ರೂಪಾಯಿ ಬಹುಮಾನ ನೀಡಿದರು. ಜಾತ್ರೆಯಲ್ಲಿ ಸಾವಿರಾರು ಜನರೆದುರು ನಿಬಂಧವನ್ನು ಓದಿಸಿದರು ಎಂದು ಚಂದ್ರಶೇಖರ ಕಂಬಾರರು ಆ ದಿನಗಳನ್ನು, ಘಟನೆಯನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
ಗೋಕಾಕ ತಾಲೂಕಿನ ಮಲಾಮರಡಿ ಬಸವರಾಜ ಕಟ್ಟೀಮನಿಯವರ ಊರು. ಅದು ಸುಲಧಾಳಕ್ಕೆ ಬಲು ಸಮೀಪ. ಕಂಬಾರರು ದೊಡ್ಡವ್ವನ ಊರಾದ ಸುಲಧಾಳಕ್ಕೆ ಸೂಟಿಗಾಗಿ ಹೋದಾಗ ಕಟ್ಟೀಮನಿಯವರನ್ನೂ ಭೇಟಿಯಾಗುತ್ತಿದ್ದರು. ತಾವು ಬರೆದುದನ್ನು ಕಟ್ಟೀಮನಿಯವರಿಗೆ ತೋರಿಸುತ್ತಿದ್ದರು. ಅವರ ಕವಿತೆಗಳನ್ನು ಕೇಳಿದ, ಓದಿದ ಕಟ್ಟೀಮನಿಯವರು ಯುವ ಕವಿಯನ್ನು ಪ್ರೋತ್ಸಾಹಿಸಿದರು. ತಮ್ಮ ಸಾಹಿತಿ ಮಿತ್ರರಿಗೆ ಈ ಯುವ ಕವಿಯನ್ನು ಪರಿಚಯಿಸಿದರು. ಕುವೆಂಪುರವರ ಕವಿತೆಗಳನ್ನು ಓದಲು ಹೇಳಿದರು. ಕಂಬಾರರು ಕುವೆಂಪು, ಮಧುರಚನ್ನರ ಕವಿತೆಗಳನ್ನು ಓದಿ ಆ ಕಾವ್ಯಕ್ಕೆ ಮಾರು ಹೋದರು. ಕಂಬಾರರ ಹದಿ ಹರೆಯದ ಕವಿತೆಗಳಲ್ಲಿ ಈ ಇಬ್ಬರ ಕಾವ್ಯಶೈಲಿಯ, ಗಾಢ ಪ್ರಭಾವವಿರುವುದನ್ನು ಕಾಣಬಹುದು. ಎಸ್.ಎಸ್.ಎಲ್.ಸಿ.ಗೆ ಬರುವಷ್ಟರಲ್ಲಿ ಕಂಬಾರರು ಕಾವ್ಯ ರಚನೆಯಲ್ಲಿ ಸಾಕಷ್ಟು ಪಕ್ವಗೊಂಡಿದ್ದರು. ಕಾವ್ಯ ಸರಸ್ವತಿ ಅವರ ಹಿಡಿದ ಕೈಯನ್ನು ಬಿಡಲಿಲ್ಲ; ಕನ್ನಡದಲ್ಲಿ ಕಂಬಾರ ಸಾಹಿತ್ಯಯುಗ ಆರಂಭವಾಯಿತು.
ಎಸ್.ಎಸ್.ಎಲ್.ಸಿ. ಮುಗಿಯಿತು. ಕಾಲೇಜು ಕಲಿಯಲು ಆಗ ಬೆಳಗಾವಿಗೆ ಬರಬೇಕಾಗಿತ್ತು. ಮತ್ತೆ ಬಡತನ ಅಡ್ಡ ಬಂದಿತು. ಕಂಬಾರರು ಸಿದ್ಧರಾಮ ಸ್ವಾಮಿಗಳಲ್ಲಿ ಹೋಗಿ ಕಾಲೇಜು ಕಲಿಯುವ ತಮ್ಮ ಆಸೆಯನ್ನು ಅರುಹಿದರು. ಸ್ವಾಮಿಗಳು ಅವರ ಕೋರಿಕೆಯನ್ನು ಕೂಡಲೇ ಒಪ್ಪಿಕೊಳ್ಳಲಿಲ್ಲ. ಕೆಲ ಹೊತ್ತು ಧ್ಯಾನನಿರತರಾಗಿ ಕುಳಿತರು. ಅಷ್ಟರಲ್ಲಿ ಮಠದ ಘಂಟೆ ಢಣ್ ಎಂದಿತು. ಸ್ವಾಮಿಗಳು ಧ್ಯಾನದಿಂದ ಹೊರಗೆ ಬಂದು ಸಾವಳಗಿ ಸ್ವಾಮಿಗಳು ನಿನಗೆ ಆಶೀರ್ವಾದ ಮಾಡಿದ್ದಾರೆ. ವಿದ್ಯಾಭ್ಯಾಸಕ್ಕೆ ಯಾವ ಕಷ್ಟವೂ ಬರುವುದಿಲ್ಲವೆಂದು ಹೇಳಿ ಕಂಬಾರರಿಗೆ ೩೦೦ ರೂಪಾಯಿಗಳನ್ನು ನೀಡಿ ಕಾಲೇಜಿಗೆ ಹೆಸರು ಹಚ್ಚಿಸಲು ಹೇಳಿದರು. ಕಂಬಾರರು ಈ ಘಟನೆಯನ್ನು ನೆನಪಿಸಿ ಕೊಳ್ಳುವಾಗ ತುಂಬ ಭಾವುಕರಾಗುತ್ತಾರೆ. ಆ ಕಾಲದಲ್ಲಿ ೩೦೦ ರೂಪಾಯಿಗಳೆಂದರೆ ಈಗ ಅದು ಹತ್ತು ಲಕ್ಷ ರೂಪಾಯಿಗೆ ಸಮ. ನನ್ನ ಮೇಲೆ ಸ್ವಾಮಿಗಳ ದೊಡ್ಡ ಆಶೀರ್ವಾದವಿದೆ ಎಂದು ಕಂಬಾರರು ಸ್ವಾಮಿಗಳನ್ನು ಬಾರಿ ಬಾರಿಗೆ ನೆನಪಿಸಿಕೊಳ್ಳುತ್ತಾರೆ.
ಕಂಬಾರರು ಬೆಳಗಾವಿಗೆ ಬಂದು ಸುಪ್ರಸಿದ್ಧ ಲಿಂಗರಾಜ ಕಾಲೇಜಿಗೆ ಹೆಸರು ಹಚ್ಚಿದರು. ಕುಗ್ರಾಮದಿಂದ ಬಂದ ಕಂಬಾರರಿಗೆ ನಗರದ ಥಳಕು ಬಳಕು ದಿಗಿಲು ಮೂಡಿಸಿದ್ದು ನಿಜ. ತಾನು ಹಳ್ಳಿಯಿಂದ ಬಂದವನು; ತನಗೆ ಕನ್ನಡ ಬಿಟ್ಟರೆ ಬೇರೆ ಯಾವ ಭಾಷೆಯೂ ಬರದು; ಪಟ್ಟಣಿಗರ ನಯ ನಾಜೂಕು ನನ್ನಲ್ಲಿಲ್ಲ; ಅವರಂತೆ ಅರಿವೆಗಳನ್ನು ತೊಡುವುದೂ ಗೊತ್ತಿಲ್ಲವೆಂಬ ಕೀಳರಿಮೆಗೆ ಕೆಲಕಾಲ ಬಲಿಯಾಗಿದ್ದರು. ತಾನಾಯಿತು ತನ್ನ ಕಾಲೇಜಾಯಿತು ಎಂಬಂತೆ ಆರಂಭದ ವರ್ಷವನ್ನು ಕಳೆದರು. ಇಲ್ಲಿ ಅವರಿಗೆ ವಸತಿಯ ಆಶ್ರಯವನ್ನು ನೀಡಿದವರು ನಾಗನೂರು ಸ್ವಾಮಿಗಳು. ಸ್ವಾಮಿಗಳ ಹಾಸ್ಟೆಲಿನಲ್ಲಿಯೇ ಪ್ರಸಾದದ ವ್ಯವಸ್ಥೆ ಇದ್ದುದರಿಂದ ಹೊಟ್ಟೆಯ ಸಮಸ್ಯೆಯೂ ಬಗೆಹರಿದಿತ್ತು. ಕಾಲೇಜಿನ ಮೊದಲ ವರ್ಷದ ಕಾಲೇಜು ಮಿಸಲೆನಿಯಲ್ಲಿ ಕಂಬಾರರ ಒಂದು ಕವಿತೆ ಪ್ರಕಟವಾಗಿತ್ತು. ಅದು ಅದೇ ಕಾಲೇಜಿನಲ್ಲಿ ಕನ್ನಡ ಕಲಿಸುತ್ತಿದ್ದ ಪ್ರೊ. ಎಸ್.ಎಸ್. ಭೂಸನೂರಮಠರ ಕಣ್ಣಿಗೆ ಬಿದ್ದಿತು. ಕವಿತೆಯ ಹೂರಣ, ಲಯ, ಭಾಷಾ ಸಮೃದ್ಧತೆ ಹಾಗೂ ಸಹಜಭಾವ, ಪ್ರೊ. ಭೂಸನೂರಮಠರಿಗೆ ಹಿಡಿಸಿದವು. ಯಾರೀಂವಾ ಕಂಬಾರ? ಎಂದೆನ್ನುತ್ತ ಅವರು ಕಂಬಾರರನ್ನು ಕರೆ ಕಳಿಸಿ ಯುವ ಕವಿಯನ್ನು ಅಳೆದು ತೂಗಿದರು. ಇದು ನಿಜವಾದ ಬಂಗಾರ, ೨೨ ಕ್ಯಾರೆಟ್ ಅಲ್ಲವೆಂದು ಅವರಿಗೆ ಮನವರಿಕೆಯಾಗಿದ್ದರಿಂದ ಅವರು ಕಂಬಾರರ ಬೆನ್ನಿಗೆ ನೆರಳಾಗಿ ನಿಂತರು. ಕಂಬಾರರು ಪ್ರೊ. ಭೂಸನೂರಮಠರಿಗೆ ಪ್ರತಿದಿನವೂ ಭೇಟಿಯಾಗುತ್ತಿದ್ದರು. ಕಂಬಾರರ ಸಾಹಿತ್ಯ ಪ್ರಗತಿಯನ್ನು ಕಂಡ ಪ್ರೊ. ಭೂಸನೂರಮಠರು ಅವರಿಗೆ ಸರಿಯಾದ ಮಾರ್ಗದರ್ಶಕರಾಗಿ ಅವರ ಬೆನ್ನು ಕಾಯ್ದರು.
ಕಂಬಾರರ ಇಂದಿನ ಸಾಹಿತ್ಯಿಕ ಏಳ್ಗೆಯಲ್ಲಿ ಪ್ರೊ. ಭೂಸನೂರಮಠರವರ ದೇಣಿಗೆಯು ಸಾಕಷ್ಟಿದೆ. ಅದಕ್ಕೆಂದೇ ಕಂಬಾರರು ಸಾವಳಗಿಯ ಜಗದ್ಗುರುಗಳ ಅನಂತರದ ಸ್ಥಾನವನ್ನು ಪ್ರೊ. ಭೂಸನೂರಮಠರಿಗೆ ನೀಡಿದ್ದಾರೆ. ತಮ್ಮ ನಾಟಕದ ನಾಂದಿ ಪದ್ಯದಲ್ಲಿ ಅವರನ್ನು ಸ್ಮರಿಸಿ ಅವರ ಉಪಕಾರಕ್ಕೆ ಕೃತಜ್ಞತೆಯನ್ನು ತೋರಿಸಿದ್ದಾರೆ. ಕಂಬಾರರು ತಮ್ಮ ಎಲ್ಲ ಕೃತಿಗಳಲ್ಲಿಯೂ ತಾವು ಗೌರವಿಸುವ ಮೂರು ಶ್ರದ್ಧಾಕೇಂದ್ರಗಳನ್ನು ಸ್ಮರಿಸುತ್ತಾರೆ. ಅವರ ಮೊದಲ ಶ್ರದ್ಧಾಕೇಂದ್ರ ಶಿವಾಪುರ. ಅದು ಅವರ ಕನಸಿನ ಊರು. ಎರಡನೆಯ ಶ್ರದ್ಧಾಕೇಂದ್ರ ಸಾವಳಗಿಯ ಜಗದ್ಗುರುಗಳಾದ ಸಿದ್ಧರಾಮ ಸ್ವಾಮಿಗಳು. ಇವರು ಕಂಬಾರರಿಗೆ ಸದಾಶಯದ ಆಶೀರ್ವಾದ ನೀಡಿದವರು. ಮೂರನೆಯ ಶ್ರದ್ಧಾಕೇಂದ್ರ ಪ್ರೊ. ಎಸ್.ಎಸ್. ಭೂಸನೂರಮಠರು. ಇವರು ಕಂಬಾರರ ಹದಿಹರೆಯದಲ್ಲಿ ಅವರ ಸಾಹಿತ್ಯಕ ಜೀವನವು ಒಂದು ಅರ್ಥಪೂರ್ಣ ದಾರಿ ಕಂಡುಕೊಳ್ಳಲು ಸಹಾಯ ಮಾಡಿದವರು. ಈ ಮೂರೂ ಶ್ರದ್ಧಾಕೇಂದ್ರಗಳಿಗೆ ಕಂಬಾರರು ಯಾವಾಗಲೂ ಕೃತಜ್ಞರಾಗಿ ದ್ದಾರೆ.
ಪ್ರೊ. ಭೂಸನೂರಮಠರ ಬಗ್ಗೆಯೇ ಕಂಬಾರರ ಒಂದು ಸುಪ್ರಸಿದ್ಧವಾದ ಕವಿತೆ ಇದೆ. ಸಂಗಮ ದೇವರು ಎಂಬುದು ಕವಿತೆಯ ತಲೆಬರಹ. ೧೯೮೮ರಲ್ಲಿ ಕಂಬಾರರು ಈ ಕವಿತೆಯನ್ನು ಬರೆದರು. ಅದರಲ್ಲಿ ಭೂಸನೂರಮಠರ ಬಗ್ಗೆ ತಮ್ಮ ಭಕ್ತಿಯನ್ನು ತೋರ್ಪಡಿಸಿಕೊಂಡಿದ್ದಾರೆ.
ಯಾರೋ ಯಾರೋ ಮೈಬಂಗಾರದ ಜಂಗಮರಿವರ್‍ಯಾರೋ
ಸೈ ನನ ಸದ್ಗುರು ಸಂಗಮ ದೇವರು ಬಾ ಶಿವನೇ ಬಾರೋ
ಈ ಭೂಸನೂರಮಠರು ಕಂಬಾರನೆಂಬ ಹಳ್ಳಿ ಹುಡುಗನನ್ನು ಅಪ್ಪಿಕೊಂಡವರು. ಹಸಿಯ ಮಣ್ಣು ಹುಸಿಯಲ್ಲವೆಂದು ಹಸಿರಿಗೆ ಖುಷಿಯಾದವರು ಎಂದು ಕಂಬಾರರು ತನ್ನಂತಹ ಹಸಿಯ ಮಣ್ಣನ್ನು ಹುಸಿಯಲ್ಲವೆಂದು ಅವರು ಜಗತ್ತಿಗೆ ಸಾರಿ ಹೇಳಿದರೆಂದು ಕೃತಜ್ಞತೆಯನ್ನು ತೋರಿಸುತ್ತಾರೆ.
ಭೂಸನೂರಮಠರ ಹೃದಯ ತುಂಬ ವಾತ್ಸಲ್ಯಪೂರ್ಣವಾದುದು. ಈ ವಾತ್ಸಲ್ಯ ಕಂಬಾರರ ಸಾಹಿತ್ಯ ಸೃಷ್ಟಿಗೆ ಹುರುಪು ನೀಡಿತು. ಆಗ ಭೂಸನೂರಮಠರು ವಚನಸಾಹಿತ್ಯ ಸಂಗ್ರಹ ಕೃತಿಯನ್ನು ಸಂಪಾದಿಸುತ್ತಿದ್ದರು. ಅವರಿಗೆ ಒಬ್ಬ ಪ್ರಾಮಾಣಿಕ, ಕವಿ ಹೃದಯದ, ಪರಿಶ್ರಮಿ ಸಹಾಯಕ ಬೇಕಾಗಿದ್ದ. ಈ ಗುಣಗಳನ್ನು ಕಂಬಾರರಲ್ಲಿ ಕಂಡ ಭೂಸನೂರ ಮಠರು ಕಂಬಾರರನ್ನು ತಮ್ಮ ಸಹಾಯಕನನ್ನಾಗಿ ನೇಮಿಸಿಕೊಂಡರು. ವಚನಗಳನ್ನು ಓದಿ ಅದನ್ನು ಅರ್ಥೈಸಿ, ಪ್ರತಿ ಮಾಡಬೇಕಾಗಿತ್ತು. ಈ ಕೆಲಸವನ್ನು ಕಂಬಾರರು ಬಲು ಶ್ರದ್ಧೆಯಿಂದ ಮಾಡಿದರು. ಇದರಿಂದ ಕಂಬಾರರಿಗೆ ಹನ್ನೆರಡನೆಯ ಶತಮಾನದ ಸಮೃದ್ಧ ಸಂಸ್ಕೃತಿಯ ಬಾಗಿಲು ತೆರೆದಂತಾಯಿತು. ಪ್ರತಿಯೊಂದು ವಚನಗಳನ್ನು ಓದಿ ಅದನ್ನು ಅರ್ಥೈಸುವ ಸಾಮರ್ಥ್ಯ ತನ್ನಿಂದ ತಾನೇ ನಡೆದು ಬಂದಿತು. ವಚನಗಳ ಭಾಷೆ, ಸಂದರ್ಭ, ಅದರ ಲಯ, ಅರ್ಥ, ಆಶಯಗಳನ್ನು ವಿದ್ಯಾರ್ಥಿ ದೆಶೆಯಲ್ಲಿಯೇ ಅವರು ಕರಗತ ಮಾಡಿಕೊಂಡರು. ಹನ್ನೆರಡನೆಯ ಶತಮಾನದ ಸಾಹಿತ್ಯವು ಕಂಬಾರರ ಮುಂದಿನ ಸಾಹಿತ್ಯದ ಮುನ್ನುಡಿ ಬರೆಯಿತು. ವಚನಗಳ ಪ್ರಭಾವವೂ ಅವರ ಸಾಹಿತ್ಯದಲ್ಲಿ ಮೂಡಿರುವು ದನ್ನು ಕಾಣಬಹುದು.
ಆಗ ಸುಮತೀಂದ್ರ ನಾಡಿಗ್ ಲಿಂಗರಾಜ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು. ಕಂಬಾರರ ಕಾವ್ಯ ಪ್ರತಿಭೆಯನ್ನು ಕಂಡ ನಾಡಿಗ್ ಕಂಬಾರರ ಗೆಳೆಯರಾದರು. ಕಂಬಾರರು ಇಂಟರ್‌ನಲ್ಲಿ ಓದುತ್ತಿರುವಾಗ ಬೆಂಬತ್ತಿದ ಕಣ್ಣು ಎಂಬ ಏಕಾಂಕ ನಾಟಕ ಬರೆದರು. ನಾಡಿಗ್ ಈ ನಾಟಕವನ್ನು ಓದಿ ಮೆಚ್ಚಿ ಅದನ್ನು ಧಾರವಾಡ ಆಕಾಶವಾಣಿಗಾಗಿ ಪ್ರಸಾರ ಮಾಡಲು ನಿರ್ಧರಿಸಿದರು. ನಾಡಿಗ್ ಹಾಗೂ ಇನ್ನೊಬ್ಬ ಅಧ್ಯಾಪಕರಾಗಿದ್ದ ಶ್ರೀನಿವಾಸ ಮೂರ್ತಿಯವರು ಈ ಬಾನುಲಿ ನಾಟಕದಲ್ಲಿ ಅಭಿನಯಿಸಿದರು. ಈ ನಾಟಕ ಆಕಾಶವಾಣಿಯಲ್ಲಿ ಪ್ರಸಾರವಾದಾಗ ಲಿಂಗರಾಜ ಕಾಲೇಜಿನಲ್ಲಿ ಅಷ್ಟೇ ಅಲ್ಲ ಇಡೀ ಬೆಳಗಾವಿಯಲ್ಲಿ ಒಂದೇ ಸುದ್ದಿ. ಅದು: ವಿದ್ಯಾರ್ಥಿಯೊಬ್ಬ ಬರೆದ ನಾಟಕದಲ್ಲಿ ಅಧ್ಯಾಪಕರುಗಳು ಪಾತ್ರ ಮಾಡಿದರಂತೆ. ಈ ಘಟನೆಯಿಂದ ಕಂಬಾರರು ರಾತ್ರೋರಾತ್ರಿ ಸಾಹಿತ್ಯಿಕ ಹೀರೋ ಆಗಿ ಹೊರಹೊಮ್ಮಿದರು.
ಯಾವುದೋ ಒಂದು ಕಾರ್ಯಕ್ರಮಕ್ಕಾಗಿ ಶಿವರಾಮ ಕಾರಂತರು ಬೆಳಗಾವಿಗೆ ಬಂದಿದ್ದರು. ಅವರನ್ನು ನಾಡಿಗ್‌ರು ತಮ್ಮ ಮನೆಗೂ ಆಹ್ವಾನಿಸಿದ್ದರು. ಕಾರಂತರು ಬರುತ್ತಾರೆಂದು ಕಂಬಾರರಿಗೆ ನೀನೂ ಬಾ ಎಂದು ಕರೆದರು. ಮುಗ್ಧ ಮನಸ್ಸಿನ ಕಂಬಾರರು ಒಂದು ಹಿಡಿಯಷ್ಟು ಕವಿತೆಗಳನ್ನು ತೆಗೆದುಕೊಂಡು ನಾಡಿಗ್‌ರ ಮನೆಗೆ ಹೋದರು. ನಾಡಿಗ್‌ರು ಕಂಬಾರರನ್ನು ಕಾರಂತರಿಗೆ ನನ್ನ ಯುವ ವಿದ್ಯಾರ್ಥಿ ಮಿತ್ರ ಎಂದು ಪರಿಚಯಿಸಿದರು. ಕಾರಂತರು ಕಂಬಾರರಿಗೆ ಕವಿತೆಗಳನ್ನು ಓದಲು ಹೇಳಿದರು. ಕಂಬಾರರು ಹೆದರುತ್ತಲೇ ಅವರೆದುರು ಒಂದೆರಡು ಕವಿತೆಗಳನ್ನು ಓದಿದರು. ಕಂಬಾರರ ಕವಿತೆಯಲ್ಲಿರುವ ಭಾಷಾ ಚಮತ್ಕಾರಕ್ಕೆ ಬೆರಗಾದ ಕಾರಂತರು ಈ ಹುಡುಗ ದೊಡ್ಡ ಕವಿ ಆಗ್ತಾನೆ ಎಂದು ಹೇಳಿ ಬೆನ್ನು ತಟ್ಟಿದರು.
ಬಿ.ಎ. ಮುಗಿಯುವ ಹೊತ್ತಿಗೆ ಕಂಬಾರರ ಮೊದಲ ಕವನ ಸಂಕಲನ ಮುಗುಳು ಪ್ರಕಟವಾಯಿತು. ಈ ಸಂಕಲನದಲ್ಲಿ ಕೆಲವೇ ಕೆಲವು ಕವಿತೆಗಳಿವೆ. ಅದು ಕವಿಯ ಮೊದಲ ಸಂಕಲನವಾದರೂ ಅಲ್ಲಿಯ ಕವಿತೆಗಳು ಅಪಕ್ವವೆಂದೆನ್ನಿಸುವುದಿಲ್ಲ. ಕಂಬಾರರಿಗೆ ಆ ಕಾಲದಲ್ಲಿ ಕುವೆಂಪು ಕಾವ್ಯದ ಪ್ರಭಾವವಿತ್ತು. ಈ ಸಂಕಲನದ ಕವಿತೆಗಳಲ್ಲೂ ಆ ಪ್ರಭಾವವನ್ನು ಕಾಣಬಹುದು. ಕವಿತೆಗಳಲ್ಲಿ ಕಂಬಾರರು ಮಂಡಿಸಿದ ವಿಷಯಗಳು ಹೊಚ್ಚಹೊಸದಾಗಿದ್ದವು. ಸಂಕಲನದ ಮೊದಲನೆಯ ಕವಿತೆಯು ಈ ರೀತಿ ಇದೆ:
ಮೊನ್ನೆ ತಾಯಿಯ ಹೆಸರು ಮರೆತೆ
ನಿನ್ನೆ ತಂದೆಯ ಹೆಸರು ಮರೆತೆ
ಈ ದಿನ ನನ್ನ ಹೆಸರೇ ಮರೆವಾಗಿ
ಹೀಗೆ ಒಂದೊಂದೇ ಮರೆಯುತ್ತ
ಇಂಚಿಂಚು ಇಲ್ಲವಾಗುತ್ತ
ಗಾಳಿಯಾಗುತ್ತ ಬಯಲು ತುಂಬಿದಂತೆನಿಸಿ
ನನ್ನ ಕವಿತೆಗೆ ಕಣ್ಣು ಬಂದು
ನನ್ನ ನೋಡಿದಂತೆನಿಸಿ
ನಾಚಿಕೊಂಡೆ
ಈ ಕವಿತೆಯನ್ನು ಕಂಬಾರರು ೧೯೫೬ ಅಥವಾ ೧೯೫೭ರ ಸುಮಾರಿನಲ್ಲಿ ಬರೆದಿರ ಬಹುದೆನ್ನಿಸುತ್ತದೆ (ಮುಗುಳು ಪ್ರಕಟವಾದದ್ದು ೧೯೫೮ರಲ್ಲಿ). ಈ ಕವಿತೆಯನ್ನು ಅವಲೋಕಿಸಿದರೆ ಕವಿಯ ಮುಂದಿನ ಕಾವ್ಯಭವಿಷ್ಯತ್ತು ಹೇಗಿರಬಹುದೆಂದು ಸಹಜವಾಗಿ ಅಂದಾಜಿಸಬಹುದು. ಈ ಕವಿತೆ ಬರೆಯುವ ಕಾಲಕ್ಕೆ ಕಂಬಾರರಿಗೆ ಗೋಪಾಲಕೃಷ್ಣ ಅಡಿಗರ ಸಂಪರ್ಕವೂ ಬಂದಿತ್ತು. ಅಡಿಗರನ್ನು ನಾಡಿಗ್‌ರೇ ಕಂಬಾರರಿಗೆ ಪರಿಚಯಿಸಿ ದ್ದರು. ಕಂಬಾರರು ಅಡಿಗರ ಜೊತೆಗೆ ನಿರಂತರವಾಗಿ ಪತ್ರವ್ಯವಹಾರವನ್ನು ಇಟ್ಟುಕೊಂಡಿ ದ್ದರು. ಆ ಕಾಲದಲ್ಲಿ ಅಡಿಗರು ಅದೇ ತಾನೇ ನವ್ಯದತ್ತ ಹೊರಳುತ್ತಿದ್ದರು. ಪಾಶ್ಚಾತ್ಯ ಕವಿಗಳ ಪ್ರಭಾವವು ಭಾರತದ ಕವಿಗಳ ಮೇಲೂ ಆಗುತ್ತಲಿದ್ದ ಕಾಲವದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು ಕೇವಲ ಒಂದು ದಶಕ ಮಾತ್ರ ಸಂದಿತ್ತು. ಹಳೆಯದರಿಂದ ಹೊರಗೆ ಬರಲಾಗದೇ, ಹೊಸದನ್ನು ಅಪ್ಪಿಕೊಳ್ಳಲಾಗದೇ ಒಂದು ರೀತಿಯ ತ್ರಿಶಂಕು ಸ್ಥಿತಿಯಲ್ಲಿ ಭಾರತೀಯರಿದ್ದರು. ಭಾವನಾತ್ಮಕ ಮನಸ್ಸಿನ ಕವಿಗಳ ಮನಸ್ಸು ಕ್ಷೆಭೆಗೆ ಒಳಪಟ್ಟಿತ್ತು. ಅಂತಹ ಸಂದರ್ಭದಲ್ಲಿ ಹುಟ್ಟಿರಬಹುದಾದ ಕವಿತೆ ಇದೆಂದು ನನ್ನ ಗ್ರಹಿಕೆ. ಯುವ ವಯಸ್ಸಿನ ಕವಿ ಬರೆದ ಅಥವಾ ಕವಿಯ ಆರಂಭದ ಸ್ಥಿತಿಯ ಕವಿತೆ ಇದೆಂದು ಅನ್ನಿಸುವುದಿಲ್ಲ. ಕವಿತೆಯ ಹೊರ ಅರ್ಥ, ಒಳ ಅರ್ಥ ಎಲ್ಲವೂ ನಿಚ್ಚಳವಾಗಿದೆ. ಮನುಷ್ಯನಾದವನು ಎಲ್ಲವನ್ನು ಮರೆಯುತ್ತ ಕೊನೆಗೆ ತನ್ನನ್ನು ಮರೆಯುತ್ತಾನೆ. ಆದರೆ ಅಂತಿಮದಲ್ಲಿ ಕವಿಯ ಕವಿತೆಗೆ ಕಣ್ಣು ಬಂದು ಆತ ಮತ್ತೆ ಮೊದಲಿನಂತಾಗುತ್ತಾನೆ. ಇಲ್ಲಿ ಕವಿ ಕಳೆದುಕೊಂಡಿದ್ದನ್ನು ಮತ್ತೆ ವಾಪಸ್ಸು ಪಡೆಯುತ್ತಾನೆ.
ಕಾಲೇಜು ಶಿಕ್ಷಣ ಮುಗಿದನಂತರ ಕಂಬಾರರು ಎಂ.ಎ. ಕಲಿಯಲು ಧಾರವಾಡಕ್ಕೆ ಹೋದರು. ಧಾರವಾಡದ ವಾತಾವರಣವು ಬೆಳಗಾವಿಯ ವಾತಾವರಣಕ್ಕಿಂತ ಭಿನ್ನವಾ ದುದು. ಅಲ್ಲಿಯ ಸಾಹಿತ್ಯಿಕ ವಾತಾವರಣ ಅವರಿಗೆ ಹಿಡಿಸಿತು. ವಿಶ್ವವಿದ್ಯಾಲಯದ ಸಮೀಪವೇ ದ.ರಾ. ಬೇಂದ್ರೆ ಇರುತ್ತಿದ್ದರು. ಬೇಂದ್ರೆಯವರ ಕಾವ್ಯ ಪ್ರತಿಭೆಗೆ ಕಂಬಾರರು ಮಾರು ಹೋಗಿದ್ದರು. ಎಂ.ಎ.ಯಲ್ಲಿ ಅವರಿಗೆ ಎಂ.ಎಂ. ಕಲಬುರ್ಗಿ, ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ, ಗಿರಡ್ಡಿ ಗೋವಿಂದರಾಜ ಸಹಪಾಠಿಗಳಾಗಿದ್ದರು. ಕಲಬುರ್ಗಿ ಮತ್ತು ಕಂಬಾರರು ಕನ್ನಡ ವಿಭಾಗದ ಸಹಪಾಠಿಗಳಾಗಿದ್ದರೆ ಇವರಿಗಿಂತ ಒಂದು ವರ್ಷ ಚಿಕ್ಕವರಾದ ಚಂದ್ರಶೇಖರ ಪಾಟೀಲ ಮತ್ತು ಗಿರಡ್ಡಿ ಗೋವಿಂದರಾಜ ಇಂಗ್ಲೀಷ ವಿಭಾಗದಲ್ಲಿ ಕಲಿಯುತ್ತಿದ್ದರು. ಸಿದ್ಧಲಿಂಗ ಪಟ್ಟಣಶೆಟ್ಟಿ ಹಿಂದೀ ವಿಭಾಗದಲ್ಲಿ ಎಂ.ಎ. ಮಾಡುತ್ತಿದ್ದರು.
ಮುಗುಳು ಕವನ ಸಂಕಲನ ಪ್ರಕಟವಾಗಿದ್ದರಿಂದ ಕಂಬಾರರಿಗೆ ಕವಿ ಎನ್ನುವ ಪಟ್ಟ ಆಗಲೇ ದೊರೆತಿತ್ತು. ಎಂ.ಎ.ಯಲ್ಲಿ ಅವರು ಕವಿತೆ ಬರೆಯುವುದರಿಂದ ಮತ್ತು ತಾವು ಬರೆದದ್ದನ್ನು ಹಾಡುವುದರಿಂದ ಕ್ಲಾಸಿನಲ್ಲಿ ಪಾಪ್ಯುಲರ್ ಆಗಿದ್ದರು ಎಂದು ಡಾ. ಎಂ.ಎಂ. ಕಲಬುರ್ಗಿಯವರು ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಬರೆದ ಲೇಖನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ವರ್ಷದ ಕೊನೆಗೆ ವಿದ್ಯಾರ್ಥಿಗಳ ಬೀಳ್ಕೊಡುಗೆಯ ಸಮಾರಂಭದಲ್ಲೂ ಕಂಬಾರರು ಕವಿತೆಯ ಮೂಲಕವೇ ತಮ್ಮ ಮನದಾಳದ ಮಾತನ್ನು ಹೇಳಿದ್ದರೆಂದೂ ಕಲಬುರ್ಗಿಯವರು ಬರೆದಿದ್ದಾರೆ.
ಗೆಳೆಯ ಬರತೇನಿ ಮನದಾಗ್ಹಿಡಿ ನೆನಪ..
ನಾನು ನೀನು ಯಾರೋ ಏನೋ ಎಂತೋ
ಅಂತು ಕೂಡಿಸಿತು ಪ್ರೇಮದ ತಂತು
ಈ ಕವಿತೆಯನ್ನು ದೊಡ್ಡ ದನಿಯಲ್ಲಿ ಕಂಬಾರರು ಹಾಡಿದಾಗ ಅಲ್ಲಿದ್ದ ಎಲ್ಲ ಗೆಳೆಯರ, ಪ್ರಾಧ್ಯಾಪಕರ ಕಣ್ಣಾಲಿಗಳು ತುಂಬಿ ಬಂದಿದ್ದವಂತೆ. ಕೆಲವು ವಿದ್ಯಾರ್ಥಿ ಗೆಳೆಯರು ಅತ್ತೂ ಬಿಟ್ಟರಂತೆ. ಅವರ ಈ ಕವಿತೆಯನ್ನು ಉಳಿದ ವಿಭಾಗದ ವಿದ್ಯಾರ್ಥಿಗಳು ನಕಲು ಮಾಡಿ ತಮ್ಮ ಕ್ಲಾಸಿನ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಡುತ್ತಿದ್ದರಂತೆ -ಈ ರೀತಿಯ ದಂತಕಥೆಗಳು ಆಗ ವಿಶ್ವವಿದ್ಯಾಲಯದಲ್ಲಿ ಚಾಲ್ತಿಯಲ್ಲಿದ್ದವು.
ಎಂ.ಎ. ಮುಗಿಯುತ್ತಿದ್ದಂತೆಯೇ ಅವರ ಮಹತ್ವಾಕಾಂಕ್ಷಿ ಕಾವ್ಯ ಹೇಳತೇನಿ ಕೇಳ ಪ್ರಕಟವಾಯಿತು. ಲಾವಣಿ ರೂಪದಲ್ಲಿರುವ ಈ ಕಾವ್ಯ ಇಡೀ ಕನ್ನಡ ಸಾಹಿತ್ಯದ ಲಕ್ಷ್ಯವನ್ನು ತನ್ನೆಡೆಗೆ ಸೆಳೆದುಕೊಂಡಿತು. ಆಗ ನವ್ಯ ಪ್ರಕಾರ ಜನರಿಗೆ ತಲೆಚಿಟ್ಟು ಹಿಡಿಸಿತ್ತು. ಜನರು ಹೊಸದನ್ನು ಬೇಡುತ್ತಿದ್ದರು. ಕಂಬಾರರ ಹೇಳತೇನ ಕೇಳ ಒಂದು ಕಥನ ಕಾವ್ಯ. ಇದೊಂದು ಆಧುನಿಕ ಲಾವಣಿ. ಈ ಕವಿತೆ ಬರೆದ ಹೊಸದರಲ್ಲಿ ಕಂಬಾರರು ಖ್ಯಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರಿಗೆ ಭೇಟಿಯಾಗಿ ಅದನ್ನು ಅವರೆದುರು ಓದಿದರು. ಕಂಬಾರರ ಭಾಷಾ ವೈಭವಕ್ಕೆ ಬೆರಗಾದ ಡಾ. ಕುರ್ತಕೋಟಿಯವರು ಕಂಬಾರರನ್ನು ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿಯವ ರೆಡೆಗೆ ಕರೆದುಕೊಂಡು ಹೋಗಿದ್ದರಂತೆ. ಆಗ ಜಿ.ವಿ. ಜೋಶಿಯವರ ಮಗ ತೀರಿಕೊಂಡಿದ್ದ. ಜೋಶಿಯವರು ಪುತ್ರಶೋಕದಲ್ಲಿದ್ದರು. ಕುರ್ತಕೋಟಿಯವರು ಕಂಬಾರರಿಗೆ ಹೇಳತೇನ ಕೇಳ ಹಾಡಲು ಹೇಳಿದಾಗ ಕಂಬಾರರು ಅದನ್ನು ಹಾಡಿದರು. ಅವರ ಹಾಡಿನ ಪ್ರತಿಭೆಗೆ ಜೋಶಿ ಚಿತ್‌ಪಟ್ ಆಗಿ ಹೋದರು. ಕುರ್ತಕೋಟಿಯವರೇ ಹೇಳುವಂತೆ ಕಂಬಾರರ ಹಾಡುಗಾರಿಕೆ ಮುಗಿಯುವಷ್ಟರಲ್ಲಿ ಜಿ.ಬಿ. ಜೋಶಿಯವರು ಪುತ್ರಶೋಕದ ದುಗುಡ ನಿವಾರಿಸಿಕೊಂಡು ಉಲ್ಲಸಿತರಾಗಿದ್ದರು. ಈ ಕೃತಿಯನ್ನು ಮನೋಹರ ಗ್ರಂಥ ಮಾಲೆಯೇ ಪ್ರಕಟಿಸಿತು. ಕುರ್ತಕೋಟಿಯವರು ಒಂದೆಡೆ ದಾಖಲಿಸಿದಂತೆ ಕಂಬಾರರು ತಮ್ಮ ಹೇಳತೇನ ಕೇಳ ಕವಿತೆಯನ್ನು ಮನೋಹರ ಗ್ರಂಥಮಾಲೆಯಲ್ಲಿ ಓದಿದರು. ಆ ಕವಿತೆಯ ಪ್ರಭಾವದಿಂದ ನಾವಿನ್ನೂ ಬಿಡುಗಡೆಯನ್ನು ಪಡೆದಿಲ್ಲ. ಅದೊಂದು ಸ್ವಯಂಪೂರ್ಣವಾದ ಕೃತಿ; ದೇವತಾಸ್ತುತಿಯಿಂದ ಮೊದಲುಗೊಂಡು ಜಾನಪದ ಲಾವಣಿಯ ಎಲ್ಲ ನಿಯಮ ಮತ್ತು ರೂಢಿಗಳನ್ನು ತಪ್ಪದೇ ಅನುಸರಿಸುತ್ತ ಆಧುನಿಕವೆನ್ನಬಹುದಾದ ಅರ್ಥವಂತಿಕೆಯನ್ನು ಬೀರುವ ಕೃತಿ. ಅದರ ವಸ್ತು ಒಂದು ಜಾನಪದ ಪೌರಾಣಿಕ ಕಥೆ. ಈ ಹಾಡಿನ ಮೈಮರೆಸುವ ಲಯ, ಹಳ್ಳಿಗಾಡಿನ ಶಬ್ದಕ್ಕೊಂದು ಚಿತ್ರ ಮೂಡಿಸುವ ಭಾಷೆ, ಅತಿ ಮಾನುಷವಾದ ಪಾತ್ರಸೃಷ್ಟಿ ಮೊದಲಾದ ಗುಣಗಳೆಲ್ಲ ಜನಪದ ಕಾವ್ಯದಲ್ಲಿ ಮಾತ್ರ ದೊರೆಯುವ ಅಂಶಗಳು ಎಂದು ಕಂಬಾರರ ಕಾವ್ಯದ ಶಿಲ್ಪಕ್ಕೆ ಬಂಗಾರದ ಚೌಕಟ್ಟನ್ನು ಹಾಕಿದರು.
ಎಂ.ಎ. ಮುಗಿದ ನಂತರ ಕಂಬಾರರು ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ ಕನ್ನಡದ ಅಧ್ಯಾಪಕರೆಂದು ಸೇರಿಕೊಂಡರು. ಅದು ೧೯೬೨ರ ಕಾಲ. ಕಾಲೇಜಿನಲ್ಲಿ ಖ್ಯಾತ ಕವಿ ಎ.ಕೆ. ರಾಮಾನುಜಂ ಅವರು ಇಂಗ್ಲಿಷ್ ಕಲಿಸುತ್ತಿದ್ದರು. ಪ್ರೊ. ಭೂಸನೂರ ಮಠರಂತೂ ಕಾಲೇಜಿನಲ್ಲಿ ಈ ಹಿಂದಿನಿಂದಲು ಇದ್ದರು. ಕಂಬಾರರಿಗೆ ಇವರಿಬ್ಬರ ಸ್ನೇಹ, ಪ್ರೀತಿ, ಅಭಿಮಾನ ಎಲ್ಲವೂ ದೊರೆಯಿತು. ರಾಮಾನುಜಂ ಅವರಿಗೆ ಕಂಬಾರರ ಜಾನಪದ ಸಾಹಿತ್ಯದ ಸಾಮರ್ಥ್ಯ ಗೊತ್ತಾಗಲು ತಡವಾಗಲಿಲ್ಲ. ಕಂಬಾರ ಹಾಗೂ ರಾಮಾನುಜಂ ಆತ್ಮೀಯರಾದರು. ಆಗ ರಾಮಾನುಜಂ ಜಾನಪದ ಕಥೆಗಳನ್ನು ಸಂಗ್ರಹಿಸುತ್ತಿದ್ದರು. ಅವರಿಗೆ ಕಂಬಾರರು ಸಾಥ್ ನೀಡಿದರು. ರಾಮಾನುಜಂರವರಿಗಾಗಿ ಕಂಬಾರರು ಅನೇಕ ಜಾನಪದ ಕಥೆಗಳನ್ನು ಸಂಗ್ರಹಿಸಿ ನೀಡಿದರು. ಬೆಳಗಾವಿಯಲ್ಲಿ ೨ ವರ್ಷಗಳ ಕಾಲ ಇದ್ದ ಕಂಬಾರರು ಅನಂತರ ೧೯೬೪ರಲ್ಲಿ ಸಾಗರಕ್ಕೆ ಹೋದರು. ಆಗ ಸಾಗರ ಕಾಲೇಜಿನ ಪ್ರಿನ್ಸಿಪಾಲರು ಗೋಪಾಲಕೃಷ್ಣ ಅಡಿಗರು. ಕಂಬಾರರಿಗೆ ಅಡಿಗರ ಬಗ್ಗೆ ವಿಶೇಷವಾದ ಗೌರವ ಆದರಗಳಿದ್ದವು. ಈ ಮೊದಲು ಅವರು ಅಡಿಗರ ಕಾವ್ಯ ಮೋಡಿಗೆ ಒಳಗಾಗಿದ್ದರು. ಈಗ ಅಡಿಗರಿಂದಾಗಿ ನವ್ಯದ ಸಂಪರ್ಕ ಹೆಚ್ಚಾಯಿತು. ಆದರೆ ಕಂಬಾರರ ಮೂಲ ಕಾವ್ಯ ದ್ರವ್ಯ ಜಾನಪದದ್ದು. ಅವರು ನವ್ಯ ಮತ್ತು ಜಾನಪದದ ಅಪರೂಪದ ಹೊಸ ಮಿಶ್ರಣವನ್ನು ತಯಾರಿಸಿ ಅದನ್ನು ತಮ್ಮ ಕಾವ್ಯದಲ್ಲಿ ಪ್ರಯೋಗಿಸಿ ದರು. ಸಾಗರದಲ್ಲಿದ್ದಾಗಲೇ ಅವರು ಋಷ್ಯಶೃಂಗ ನಾಟಕ ಬರೆದರು. ಇಲ್ಲಿಯ ಭಾಷಾಶೈಲಿ ನವ್ಯ ಹಾಗೂ ಜಾನಪದದ ಮಿಶ್ರಣವಾಗಿದೆ. ಈ ನಾಟಕಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿತು. ಭಾರತೀಯ ಭಾಷೆಗಳಲ್ಲಿ ರಚನೆಗೊಂಡ ಮೊಟ್ಟ ಮೊದಲ ಆಧುನಿಕ ಬಯಲಾಟವೆಂದು ಇದನ್ನು ಗುರುತಿಸಲಾಗುತ್ತದೆ.
ಸಾಗರದಲ್ಲಿ ಕೆ.ವಿ. ಸುಬ್ಬಣ್ಣನವರ ಸ್ನೇಹವೂ ದೊರೆಯಿತು. ಸೂಕ್ಷ್ಮ ಮನಸ್ಸಿನ ರಾಜಕಾರಣಿಯಾಗಿದ್ದ ಶಾಂತವೇರಿ ಗೋಪಾಲಗೌಡರ ಪರಿಚಯವೂ ಆಯಿತು. ಗೋಪಾಲಗೌಡರು ಸಾಹಿತ್ಯದ ಆರಾಧಕರು. ಅವರು ಎಲ್ಲಿಯೇ ಹೋದರೂ ಅವರ ಬ್ಯಾಗಿನಲ್ಲಿ ಒಂದು ಪುಸ್ತಕ ಇರಲೇಬೇಕು. ಕಂಬಾರರ ಕಾವ್ಯ ಗೇಯತೆಗೆ ಅವರೂ ಮಾರುಹೋಗಿದ್ದರು. ಶಿವಮೊಗ್ಗೆಗೆ ರಾಮ ಮನೋಹರ ಲೋಹಿಯಾ ಅವರು ಬಂದಾಗ ಗೋಪಾಲಗೌಡರು ಅವರನ್ನು ಕಂಬಾರರ ಮನೆಗೆ ಕರೆದುಕೊಂಡು ಹೋಗಿದ್ದರು. ಕಂಬಾರರು ತಮ್ಮ ಕವಿತೆಗಳನ್ನು ಲೋಹಿಯಾರವರ ಎದುರು ಹಾಡಿದರು. ಭಾಷೆ ಗೊತ್ತಿರದಿದ್ದರೂ ಲೋಹಿಯಾರಿಗೆ ಅವರ ಕವಿತೆಗಳು ಅರ್ಥವಾದವು.
೧೯೬೮ರಲ್ಲಿ ಕಂಬಾರರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಕನ್ನಡ ಕಲಿಸಲೆಂದು ಹೋದರು. ಆಗ ಅಲ್ಲಿ ರಾಮಾನುಜಂ ಇಂಗ್ಲಿಷ್ ಕಲಿಸುತ್ತಿದ್ದರು. ಅವರ ಕಾರಣವಾಗಿಯೇ ಕಂಬಾರರು ಅಲ್ಲಿಗೆ ಹೋಗಿದ್ದು. ಅಲ್ಲಿಯ ರಂಗಪ್ರಯೋಗಗಳಿಂದ ಕಂಬಾರರು ಬಲು ಪ್ರಭಾವಿತರಾದರು. ಆಗ ಅಮೇರಿಕೆಯಲ್ಲಿ ಲಿವಿಂಗ್ ಥಿಯೇಟರ್ ಪ್ರಯೋಗ ಪ್ರಚಾರದಲ್ಲಿತ್ತು. ರಂಗಭೂಮಿಯಲ್ಲಿ ನಟಿಸುವ ನಟರು ಮತ್ತು ಅದನ್ನು ನೋಡುವ ಪ್ರೇಕ್ಷಕರು ಕೂಡಿಯೇ ನಾಟಕ ಪ್ರಯೋಗಿಸುವ ಹೊಸ ತಂತ್ರವೇ ಲಿವಿಂಗ್ ಥಿಯೇಟರ್. ಇದರಲ್ಲಿ ಪ್ರೇಕ್ಷಕನೂ ನಾಟಕ ಕ್ರಿಯೆಯಲ್ಲಿ ಭಾಗಿಯಾಗುತ್ತಾನೆ. ಆತ ಮತ್ತು ನಟರ ನಡುವೆ ಸಹಜ ಬಾಂಧವ್ಯ ಏರ್ಪಡುತ್ತದೆ. ಈ ಪ್ರಯೋಗಗಳನ್ನು ನೋಡಿದಾಗ ಕಂಬಾರರಿಗೆ ಇದನ್ನು ಕನ್ನಡದಲ್ಲಿ ಪ್ರಯೋಗಿಸಬೇಕೆಂದು ಅನ್ನಿಸಿತು. ಅವರ ಈ ಯೋಚನಾಕ್ರಮದಿಂದ ಹುಟ್ಟಿ ಬಂದ ನಾಟಕವೇ ಜೋಕುಮಾರಸ್ವಾಮಿ. ಅಮೇರಿಕೆಯಿಂದ ಬೆಂಗಳೂರಿಗೆ ಬಂದ ಕಂಬಾರರು ೧೯೭೦ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗಕ್ಕೆ ಸೇರಿಕೊಂಡರು. ಆಗ ಬೆಂಗಳೂರಿನಲ್ಲಿ ಎಲ್ಲೆಡೆ ಹವ್ಯಾಸಿ ನಾಟಕಗಳ ಅಬ್ಬರವಿತ್ತು. ಹಲಕೆಲ ನಾಟಕಗಳು ಅರ್ಥವಿಲ್ಲದೇ ಬರೀ ವಾಚಾಳಿಯಾಗಿದ್ದವು. ಕಂಬಾರರು ತಮ್ಮ ಜೋಳಿಗೆಯಲ್ಲಿದ್ದ ಜೋಕುಮಾರಸ್ವಾಮಿ ನಾಟಕವನ್ನು ಹೊರ ತೆಗೆದರು. ಬಯಲಾಟದಂತೆ ರಚಿತವಾದ ಈ ನಾಟಕ ಕುಸಿಯಬಹುದಾಗಿದ್ದ ಕನ್ನಡ ರಂಗಭೂಮಿಗೆ ಹೊಸ ಚಾಲನೆ ನೀಡಿತು. ಈ ನಾಟಕದಲ್ಲಿ ಹಾಡು ಕುಣಿತಗಳು ಯಥೇಚ್ಛವಾಗಿ ಬಳಕೆಗೊಂಡಿವೆ. ಈ ನಾಟಕವನ್ನು ಓದಿ ನಿರ್ದೇಶಕ ಬಿ.ವಿ. ಕಾರಂತರು ಇದಪ್ಪ, ನಿಜವಾದ ನಾಟಕವೆಂದು ಉದ್ಗಾರ ತೆಗೆದರಂತೆ. ಅವರೇ ಇದನ್ನು ನಿರ್ದೇಶಿಸಿ ದರು. ೧೯೭೨ರಲ್ಲಿ ಪ್ರದರ್ಶನಗೊಂಡ ಈ ನಾಟಕ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿತು. ಜೋಕುಮಾರಸ್ವಾಮಿ ಇಡೀ ಕರ್ನಾಟಕವನ್ನು ಅಡ್ಡಾಡಿ ಜನರನ್ನು ಮೋಡಿ ಮಾಡಿತು. ಈ ನಾಟಕದಿಂದ ಕಂಬಾರರು ಕರ್ನಾಟಕದ ಮನೆಮಾತಾದರು. ಈ ನಾಟಕದ ಯಶಸ್ಸಿನ ಕಾರಣವಾಗಿ ಹಾಡು, ಕುಣಿತ, ಸೂತ್ರಧಾರ ಇರುವಂಥ ಅನೇಕ ನಾಟಕಗಳು ರಚನೆ ಗೊಂಡು ಪ್ರದರ್ಶಿಸಲ್ಪಟ್ಟವು ಎಂದರೆ ಈ ನಾಟಕದ ಯಶಸ್ಸು ಅರ್ಥವಾದೀತು. ಜೋಕುಮಾರಸ್ವಾಮಿ ಒಂದೂವರೆ ದಶಕದಷ್ಟು ದೀರ್ಘಕಾಲದವರೆಗೆ ರಂಗಭೂಮಿಯನ್ನು ಆಳಿತು.
ಕಂಬಾರರು ಬೆಂಗಳೂರು ನಿವಾಸಿಗಳಾದ ಮೇಲೆ ನಗರ ಸಂಸ್ಕೃತಿಯ ದುಗುಡು, ದುಮ್ಮಾನ, ಕೃತಕ ನಡವಳಿಕೆ, ಸ್ವಾರ್ಥ ಜೀವನ, ಒಳಗೊಂದು ಹೊರಗೊಂದು ಜೀವನ- ಇವುಗಳನ್ನು ಬಲು ಸಮೀಪದಿಂದ ನೋಡುವ, ಅನುಭವಿಸುವ ಸಂದರ್ಭಗಳು ಬಂದವು. ಅಮೇರಿಕೆಗೆ ಹೋಗಿ ಬಂದಿದ್ದರೂ ಕಂಬಾರರ ಹಳ್ಳಿ ಹೈದನ ಮುಗ್ಧತೆ ಇನ್ನೂ ಹೋಗಿರಲಿಲ್ಲ; ಈಗಲೂ ಹೋಗಿಲ್ಲ. ನಗರ ಜೀವನಕ್ಕೆ ಸಂಬಂಧಪಟ್ಟ ಹರಕೆಯ ಕುರಿ ನಾಟಕವನ್ನು ಬರೆದು ಅಲ್ಲಿ ನಗರ ಜೀವನದ ಪೊಳ್ಳುತನವನ್ನು ಬಯಲು ಮಾಡಿದ್ದಾರೆ. ಇಲ್ಲಿ ಅವರು ನಗರದ ಶಿಷ್ಟ ಭಾಷೆಯನ್ನು ನಾಟಕಕ್ಕಾಗಿ ಬಳಸಿಕೊಂಡಿದ್ದಾರೆ.
೧೯೭೫ರಲ್ಲಿ ಕಂಬಾರರ ಔಡಿigiಟಿ ಚಿಟಿಜ ಜeveಟoಠಿmeಟಿಣ oಜಿ ಏಚಿಟಿಟಿಚಿಜಚಿ ಜಿoಟಞ ಖಿheಚಿಣಡಿe ಮಹಾಪ್ರಬಂಧಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಿತು. ಜಾನಪದ ಲೋಕದ ಜೊತೆಗೆ ಗಾಢವಾದ ಸಂಬಂಧವಿರುವ ಕಂಬಾರರು ಜಾನಪದದ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಅನೇಕ ಪರಿಣಾಮಕಾರಿಯಾದ ಸಲಹೆ ಸೂಚನೆಗಳನ್ನು ತಮ್ಮ ಮಹಾಪ್ರಬಂಧದಲ್ಲಿ ಮಂಡಿಸಿದ್ದಾರೆ. ಕಂಬಾರರು ಜಾನಪದ ಕ್ಷೇತ್ರವನ್ನು ತಮ್ಮದೇ ಆದ ವಿಶಿಷ್ಟ ದೃಷ್ಟಿಕೋನದಿಂದ ನೋಡಿದ್ದರಿಂದ ಅವರ ಸಲಹೆ ಸೂಚನೆಗಳು ಬಹು ಮಹತ್ವದ್ದಾದವುಗಳಾಗಿವೆ. ಜಾನಪದದ ಬಗ್ಗೆ ಅವರು ಅನೇಕ ವಿಮರ್ಶಾತ್ಮಕ ಲೇಖನಗಳನ್ನು ಬರೆದಿದ್ದಾರೆ. ಅವರು ದೇಸಿ ಚಿಂತಕರು; ಹೀಗಾಗಿ ಅವರ ಎಲ್ಲ ಚಿಂತನೆಗಳು ಈ ನೆಲಕ್ಕೆ ಹತ್ತಿರದವುಗಳಾಗಿವೆ.
ಕಂಬಾರರ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರ ವಿಸ್ತರಿಸುತ್ತಿದ್ದಂತೆಯೇ ಚಲನಚಿತ್ರ ರಂಗವೂ ಅವರನ್ನು ಕೈ ಬೀಸಿ ಕರೆಯಿತು. ಈ ಹಿಂದೆ ಬಸವರಾಜ ಕಟ್ಟೀಮನಿಯವರ ಮಾಡಿ ಮಡಿದವರು ಕಾದಂಬರಿ ಆಧಾರಿತ ಚಿತ್ರದಲ್ಲಿ ಲಾವಣಿ ಹಾಡುವ ಕಲಾವಿದನ ಪಾತ್ರವನ್ನು ಮಾಡಿದ್ದರು. ಕಂಬಾರರಿಗೆ ತಮ್ಮ ನಾಟಕಗಳು ಚಲನಚಿತ್ರಗಳಾಗಲು ಯೋಗ್ಯವೆಂದು ಅನ್ನಿಸಿತು. ಅದರ ಪರಿಣಾಮವಾಗಿ ಋಷ್ಯಶೃಂಗ ಚಲನಚಿತ್ರರೂಪದಲ್ಲಿ ಬಂದಿತು. ಈ ಚಿತ್ರವು ಅನೇಕ ಪ್ರಶಸ್ತಿಗಳನ್ನು ಗಳಿಸಿತು. ಈ ಯಶಸ್ಸಿನಿಂದ ಉತ್ತೇಜಿತರಾದ ಕಂಬಾರರು ಕಾಡುಕುದುರೆಯನ್ನು ಚಿತ್ರವನ್ನಾಗಿಸಿದರು. ಅದೂ ರಾಷ್ಟ್ರೀಯ ಪ್ರಶಸ್ತಿ ಪಡೆದು ಕನ್ನಡಕ್ಕೆ ದೊಡ್ಡ ಹೆಸರನ್ನು ತಂದಿತು. ನಾಯಿಕಥೆ ನಾಟಕವು ಸಂಗೀತಾ ಹೆಸರಿನಲ್ಲಿ ಚಲನಚಿತ್ರವಾಯಿತು.
ಸೂರ್ಯಚಂದ್ರರು ಇರುವವರೆಗೆ ಹೆಸರು ಉಳಿಯುವ ಇನ್ನೊಂದು ಬಹುದೊಡ್ಡ ಕೆಲಸವನ್ನು ಕಂಬಾರರು ಮಾಡಿದ್ದು, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ. ಈ ವಿಶ್ವವಿದ್ಯಾಲಯದ ಸ್ಥಾಪನೆ ಕನ್ನಡಿಗರ ಕನಸಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅವರನ್ನು ನೇಮಿಸಿ ಸರ್ಕಾರ ಅವರ ಮೇಲೆ ಬಹುದೊಡ್ಡ ಜವಾಬ್ದಾರಿ ಯನ್ನು ಹೇರಿತ್ತು. ಹಂಪಿಯ ಬಿಸಿಲು, ಅಲ್ಲಿಯ ಕಲ್ಲುಬಂಡೆಗಳು, ಧೂಳು ಇವುಗಳ ಜೊತೆಗೆ ಕಂಬಾರರು ಹೆಣಗಬೇಕಿತ್ತು. ಈ ವಿಶ್ವವಿದ್ಯಾಲಯವು ಇಡೀ ದೇಶದಲ್ಲಿ ವಿಭಿನ್ನವಾದ, ವಿಶಿಷ್ಟವಾದ ಅತ್ಯಂತ ಅರ್ಥಪೂರ್ಣವಾದ ವಿಶ್ವವಿದ್ಯಾಲಯವಾಗ ಬೇಕೆಂಬುದು ನನ್ನ ಆಸೆ ಎಂದು ಕಂಬಾರರು ಕುಲಪತಿ ಸ್ಥಾನವನ್ನು ಸ್ವೀಕರಿಸುತ್ತಿದ್ದಂತೆಯೇ ಹೇಳಿದ್ದರು. ವಿಶ್ವವಿದ್ಯಾಲಯದ ರೂಪುರೇಷೆಗಳು ಹೇಗಿರಬೇಕೆಂಬುದನ್ನು ಚರ್ಚಿಸಲು, ಅಭಿಪ್ರಾಯ ಸಂಗ್ರಹಿಸಲು ಅವರು ನಾಡಿನಾದ್ಯಂತ ದಣಿವರೆಯದೇ ಅಡ್ಡಾಡಿದರು. ವಿಶ್ವವಿದ್ಯಾಲಯದ ಕಟ್ಟಡಗಳು ಹತ್ತರ ಜೊತೆಗೆ ಹನ್ನೊಂದರಂತಾಗಬಾರದೆಂದು ಅನೇಕ ವಿಶಿಷ್ಟವಾಗಿರುವ ಹೊಸ ವಿನ್ಯಾಸಗಳನ್ನು ತಯಾರಿಸಿಕೊಂಡರು. ಅಲ್ಲಿರುವ ಕಲ್ಲು ಬಂಡೆಗಳಿಗೆ ಆಧುನಿಕ ವಾಸ್ತು ಸ್ಪರ್ಶ ನೀಡಿ ಅವುಗಳಲ್ಲಿ ಜೀವ ತುಂಬಿದರು. ಈ ಕಾರ್ಯದಲ್ಲಿ ತೊಡಗಿದಾಗ ಅವರು ಮನೆ ಮಾರು ಎಲ್ಲವನ್ನೂ ಮರೆತುಬಿಟ್ಟಿದ್ದರು. ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಅತ್ಯುತ್ತಮ ಅಧ್ಯಾಪಕರನ್ನು ಹುಡುಕಿ ತೆಗೆದು ಅವರ ಮನಮೊಲಿಸಿ ಅವರನ್ನು ಹಂಪಿಗೆ ಕರೆದುಕೊಂಡು ಬಂದರು. ಅವರ ಕನಸಿನ ಕನ್ನಡ ವಿಶ್ವವಿದ್ಯಾಲಯ ಇಡೀ ಭಾರತದಲ್ಲಿಯೇ ವಿಶಿಷ್ಟವಾದು ದಾಗಿದೆ. ಬೆಂಗಾಡಾಗಿದ್ದ ಪ್ರದೇಶವನ್ನು ಸುಂದರ ಶಿಲ್ಪದಲ್ಲಿ ಪರಿವರ್ತಿಸುವುದು ಸಾಹಸದ ಕೆಲಸವೇ ಸರಿ. ಅವರು ವಿಶ್ವವಿದ್ಯಾಲಯವನ್ನು ಕಟ್ಟುತ್ತಿರುವಾಗ ಅವರ ಈ ಪ್ರಯತ್ನವನ್ನು ಬೋರ್ಗಲ್ಲ ಮೇಲೆ ನೀರು ಸುರಿದಂತೆ ಎಂದು ನಗ್ಯಾಡಿದ ಜನರೇ ಅವರ ಈ ಅದ್ಭುತವಾದ ಸೃಷ್ಟಿ ನೋಡಿ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಯಿತು. ಈ ಕಟ್ಟಡಗಳ ಅದ್ಬುತ ವಿನ್ಯಾಸವನ್ನು ನೊಡಲೆಂದೇ ಭಾರತದ ಬೇರೆ ಬೇರೆ ವಿಶ್ವವಿದ್ಯಾಲಯ ಗಳಿಂದ ತಜ್ಞರು ಕನ್ನಡ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಿದ್ದು ನನಗೆ ನೆನಪಿದೆ.
ಇಲ್ಲಿಯ ಕಟ್ಟಡಗಳ ವಿನ್ಯಾಸ ವೈಶಿಷ್ಟ್ಯಪೂರ್ಣವಾಗಿದೆ. ಕಟ್ಟಡಗಳಿಗೆ ಕಂಬಾರರು ಅತ್ಯಂತ ವಿಶಿಷ್ಟವಾದ ಹೆಸರುಗಳನ್ನು ನೀಡಿದ್ದಾರೆ. ಅಕ್ಷರ, ಕ್ರಿಯಾಶಕ್ತಿ, ತ್ರಿಪದಿ, ಕಾಯಕದ ಮನೆ, ಗಿರಿಸೀಮೆ ಮುಂತಾದ ಹೆಸರುಗಳ ಕಟ್ಟಡಗಳು ಅಲ್ಲಿ ಎದ್ದು ನಿಂತಿವೆ. ಬುಡಕಟ್ಟು ಅಧ್ಯಯನ ವಿಭಾಗದ ಕಟ್ಟಡಗಳನ್ನು ನೋಡಿದರೆ ಅವು ಬುಡಕಟ್ಟಿನವರ ಮನೆಗಳಂತೆ ರೂಪಿಸಲ್ಪಟ್ಟಿವೆ. ಬಯಲು ರಂಗಮಂದಿರಕ್ಕೆ ಕಂಬಾರರು ಇಟ್ಟ ಹೆಸರು ನವರಂಗ. ವಿಶ್ವವಿದ್ಯಾಲಯದಲ್ಲಿ ಒಂದು ಬೃಹತ್ ವಸ್ತು ಸಂಗ್ರಹಾಲಯವನ್ನು ಆರಂಭಿಸ ಬೇಕೆಂದು ಯೋಚಿಸಿ, ಅದನ್ನೂ ಆರಂಭಿಸಲಾಯಿತು. ಪುಸ್ತಕದ ಬಲ ಗೊತ್ತಿದ್ದ ಕಂಬಾರರು ಆರಂಭದಿಂದಲೇ ಪ್ರಸಾರಾಂಗ ವಿಭಾಗಕ್ಕೆ ಭದ್ರ ಬುನಾದಿಯನ್ನು ಹಾಕಿದರು. ಜಗತ್ತಿನ ಎಲ್ಲ ಜ್ಞಾನವು ಕನ್ನಡಕ್ಕೆ ತರಬೇಕೆಂಬ ಉದ್ದೇಶದಿಂದ ಅನೇಕ ಯೋಜನೆಗಳನ್ನು ರೂಪಿಸಿದರು. ಬೇರೆ ಬೇರೆ ವಿಷಯಗಳಿಗೆ ಸಂಬಂಧಪಟ್ಟ ಎಂಟು ವಿಶ್ವಕೋಶಗಳ ಪ್ರಕಟಣೆಗೆ ನಾಂದಿ ಹಾಡಿದರು. ವೈದ್ಯಕೀಯ ಕೋಶ, ಗ್ರಾಮದೇವತೆಗಳ ಕೋಶ, ಕೃಷಿ ಪದಕೋಶ, ಜನಪದ ಕಲೆಗಳ ಕೋಶ, ಸಮಾಜಸೇವಾ ಕೋಶಗಳು ಪ್ರಸಾರಾಂಗ ದಿಂದ ಪ್ರಕಟಗೊಂಡವು. ಬುಡಕಟ್ಟು ಹಿರೋಗಳ ಅಧ್ಯಯನಕ್ಕಾಗಿ ಬುಡಕಟ್ಟು ಮಹಾಕಾವ್ಯ ಮಾಲೆಯನ್ನು ಆರಂಭಿಸ ಲಾಯಿತು. ಈ ಮಾಲೆಯಲ್ಲಿ ಮಂಟೇಸ್ವಾಮಿ, ಕುಮಾರರಾಮ, ಜುಂಜಪ್ಪ, ಮಲೆ ಮಹಾದೇಶ್ವರ ಮೊದಲಾದ ಬುಡಕಟ್ಟು ಸಮಾಜದ ನಾಯಕರುಗಳು ಪುಸ್ತಕ ರೂಪದಲ್ಲಿ ಪ್ರಕಟಗೊಂಡರು. ಪ್ರಚಾರೋಪನ್ಯಾಸ ಪುಸ್ತಕಗಳು, ವಿಜ್ಞಾನ ಸಂಗಾತಿ, ಪುಸ್ತಕ ಮಾಹಿತಿ, ಕನ್ನಡ ಅಧ್ಯಯನ ಇವುಗಳನ್ನು ಕಂಬಾರರು ಆರಂಭಿಸಿದರು. ವಿಶ್ವವಿದ್ಯಾಲಯದ ಕಾನ್ವೋಕೇಶನ್‌ನ್ನು ನುಡಿಹಬ್ಬ ವೆಂದು ಅಪ್ಪಟ ಕನ್ನಡದಲ್ಲಿ ಕರೆದು ಅದಕ್ಕೆ ದೇಸಿಯ ಸ್ವರೂಪವನ್ನು ನೀಡಿದರು. ಬೇರೆ ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್ ಪದವಿಯನ್ನು ನಾಡೋಜ ಎಂದು ಶುದ್ಧ ಕನ್ನಡದಲ್ಲಿ ಹೆಸರಿಸಿದರು. ಈ ವಿಶ್ವವಿದ್ಯಾಲಯದ ಒಟ್ಟು ರಚನೆ ಮತ್ತು ಸ್ವರೂಪವನ್ನು ನೋಡಿ ದೇಶಿಯರು, ವಿದೇಶಿಯರು ಎಲ್ಲರೂ ಮೆಚ್ಚುವಂತಹದ್ದಾಗಿರುವುದು ಕಂಬಾರರಿಗೆ ದೊರೆತ ದೊಡ್ಡ ಗೌರವವಾಗಿದೆ.
ಕಂಬಾರರ ಪ್ರತಿಭೆಯನ್ನು ಹುಡುಕಿಕೊಂಡು ಅನೇಕ ಪ್ರಶಸ್ತಿ, ಪದವಿಗಳು ತಾವಾಗಿಯೇ ಅವರ ಮನೆ ಬಾಗಿಲನ್ನು ತಟ್ಟಿದವು. ಆರಂಭದಲ್ಲಿ ಅವರು ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಸದಸ್ಯರಾಗಿದ್ದರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ರಂಗಾಯಣದ ಸದಸ್ಯರಾಗಿದ್ದ ಕಂಬಾರರು ಅನಂತರ ರಾಷ್ಟ್ರೀಯ ನಾಟಕ ಶಾಲೆಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಭೂಪಾಲದ ಭಾರತಭವನ ಮತ್ತು ಅಮೇರಿಕೆಯ ಫೋರ್ಡ್ ಫೌಂಡೇಶನ್‌ಗಳು ಕಂಬಾರರ ಅನುಭವಗಳ ಲಾಭ ಪಡೆದುಕೊಂಡಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಕಂಬಾರರು ಅದರ ಉಪಾಧ್ಯಕ್ಷರಾಗಿ ಈಗ ಸಧ್ಯ ಅಧ್ಯಕ್ಷರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷಪದದ ಚುನಾವಣೆ ನಡೆದಾಗ ತಮ್ಮ ಪ್ರತಿಸ್ಪರ್ಧಿಗಿಂತ ಅತ್ಯಧಿಕ ಮತಗಳನ್ನು ಪಡೆದು ಅವರು ವಿಜಯಶಾಲಿಯಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಸದಸ್ಯರ ಸಂಖ್ಯೆಗಿಂತ ಹಿಂದೀ ಮಾತನಾಡುವ ಉತ್ತರ ಭಾರತದ ರಾಜ್ಯಗಳ ಸದಸ್ಯರ ಸಂಖ್ಯೆ ಜಾಸ್ತಿ. ಅಧ್ಯಕ್ಷ ಪದದ ಸ್ಪರ್ಧೆಯಲ್ಲಿ ಹಿಂದಿ ಭಾಷೆಯ ಸುಪ್ರಸಿದ್ಧ ಲೇಖಕರಿದ್ದರೂ ಹಿಂದಿ ಮಾತನಾಡುವ ರಾಜ್ಯಗಳ ಸದಸ್ಯರು ಆಯ್ಕೆ ಮಾಡಿದ್ದು ಕಂಬಾರ ಅವರನ್ನು. ಇದು ಅವರ ಸಾಹಿತ್ಯವು ಇಡೀ ಭಾರತವನ್ನು ತಲುಪಿದೆಯೆಂದು ಸಾಬೀತುಪಡಿಸುತ್ತದೆ. ಜೊತೆಗೆ ಇದು ಕನ್ನಡದ ಸಾಮರ್ಥ್ಯವನ್ನು ತೋರಿಸುತ್ತದೆ.
ಕಂಬಾರರ ಕಾವ್ಯ ಅವರ ಸರೀಕರ ಕಾವ್ಯಕ್ಕಿಂತ ಭಿನ್ನವಾಗಿದೆ. ನವೋದಯ ಮತ್ತು ನವ್ಯದ ಭರಾಟೆಯ ಕಾಲದಲ್ಲಿ ತಮ್ಮ ಬರವಣಿಗೆಯನ್ನು ಆರಂಭಿಸಿದ ಕಂಬಾರರಿಗೆ ಈ ಮಾರ್ಗ ತನ್ನದಲ್ಲವೆಂದೆನಿಸಿರಬೇಕು. ತನ್ನ ಹಳ್ಳಿಯಲ್ಲಿ ಅರಳಿರುವ ಸಮೃದ್ಧವಾದ ಜಾನಪದ ಸಾಹಿತ್ಯದ ಮಾರ್ಗವನ್ನು ಅವರು ತಮ್ಮದಾಗಿಸಿಕೊಂಡರು. ಆದರೆ ಅಲ್ಲೂ ಅವರಿಗೆ ಹಲವು ಸವಾಲುಗಳಿದ್ದವು. ಅಷ್ಟರಲ್ಲಾಗಲೇ ಬೇಂದ್ರೆ ಮತ್ತು ಬೆಟಗೇರಿ ಕೃಷ್ಣಶರ್ಮ ಜಾನಪದ ಲಯವನ್ನು ತಮ್ಮ ಕವಿತೆಗಳಿಗೆ ಅಳವಡಿಸಿಕೊಂಡು ಬರೆಯುತ್ತಿ ದ್ದರು. ಈ ಸಂದರ್ಭದಲ್ಲಿ ಕಂಬಾರರಿಗೆ ಸಾಹಿತ್ಯದಲ್ಲಿ ತಾವು ಕೊನೆಯವರೆಗೆ ಉಳಿಯ ಬೇಕೆಂದರೆ ತಮ್ಮದೇ ಆದ ಒಂದು ಮಾರ್ಗವನ್ನು ಅನ್ವೇಷಿಸುವುದು ಅನಿವಾರ್ಯವಾಗಿತ್ತು. ಹಠಕ್ಕೆ ಬಿದ್ದವರಂತೆ ಅವರು ತಮ್ಮದೇ ಆದ ಒಂದು ಕಾವ್ಯ ಪರಂಪರೆಯನ್ನು ಹುಟ್ಟುಹಾಕಿ ಈ ಹಿಂದಿನ ಜನಪದ ಕಾವ್ಯವನ್ನು ಹಿಗ್ಗಿಸಿ ಅದಕ್ಕೆ ಹೊಸ ಅರ್ಥವನ್ನು ನೀಡಿದರು. ಜನಪದ ಮಿಥ್‌ಗಳನ್ನು ಹೊಸ ರೀತಿಯಲ್ಲಿ ಹೇಳಿದರು. ಹಳೆಯ ಮಿಥ್‌ಗಳನ್ನು ಭಂಗಿಸಿ ಅವುಗಳಿಗೆ ಆಧುನಿಕತೆಯ ಸ್ಪರ್ಶ ನೀಡಿದರು. ಕಂಬಾರರ ಮಹಾಕಾವ್ಯ ಚಕೋರಿಯಲ್ಲಿ ಇಲ್ಲಿಯವರೆಗೆ ಯಾರೂ ಪ್ರಯೋಗಿಸದ ವಿಶಿಷ್ಟ ಭಾಷೆ ಇದೆಯೆನ್ನುವು ದನ್ನು ವಿಮರ್ಶಕರು ಗುರುತಿಸಿದ್ದಾರೆ. ಚಕೋರಿಯಲ್ಲಿ ಉಪಯೋಗಿಸಿದ ಭಾಷೆ ಕಂಬಾರರ ಭಾಷಾಸಿದ್ಧಿಗೆ ಸಮರ್ಥವಾದ ಉದಾಹರಣೆಯಾಗಿದೆಯೆಂದು ಜಾನಪದ ತಜ್ಞ ಬಸವರಾಜ ಮಲಶೆಟ್ಟಿ ತಮ್ಮದೊಂದು ಲೇಖನದಲ್ಲಿ ಹೇಳಿದ್ದಾರೆ. ಒಮ್ಮೆ ವಚನರೂಪಿ ಶಿಷ್ಟ ಸ್ವರೂಪ, ಇನ್ನೊಂದು ಸಲ ಅಪ್ಪಟ ಜನಪದ ಧಾಟಿಯಲ್ಲಿ ಮೂಡಿಬರುವ ನಿರೂಪಣ ಶೈಲಿ ಅಚ್ಚರಿಯನ್ನುಂಟು ಮಾಡುತ್ತದೆ.
ಕಂಬಾರರ ನಾಟಕಗಳೂ ವಿಶಿಷ್ಟವಾದವುಗಳು. ಕಂಬಾರರು ನಾಟಕ ಬರೆಯುವ ಕಾಲಕ್ಕೆ ಕನ್ನಡ ರಂಗಭೂಮಿ ಜೀವಚ್ಚವವಾಗಿತ್ತು. ಕಂಬಾರರ ನಾಟಕಗಳು ರಂಗಭೂಮಿಗೆ ಚಲನಶೀಲತೆಯನ್ನು ನೀಡಿದವು. ಅವರ ನಾಟಕಗಳಿಂದ ರಂಗಭೂಮಿಗೆ ಮತ್ತೆ ಸುವರ್ಣ ಯುಗ ಪ್ರಾಪ್ತವಾದಂತಾಯಿತು. ಜೋಕುಮಾರಸ್ವಾಮಿಯಲ್ಲಿ ಉಳುವವನೇ ಹೊಲ ದೊಡೆಯ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಲಾಗಿದೆ. ಜೋಕುಮಾರಸ್ವಾಮಿ ಪ್ರದರ್ಶನ ಗೊಂಡಲ್ಲೆಲ್ಲ ಪ್ರತಿ ಪ್ರಯೋಗವೂ ಹೌಸ್‌ಫುಲ್ ಆಗಿರುತ್ತಿದ್ದುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.
ಕಂಬಾರರು ಕಾದಂಬರಿ ಬರೆಯುವಾಗ ಯಾರನ್ನೂ ಅನುಸರಿಸುತ್ತಿರಲಿಲ್ಲ. ಒಂದು ಕಾಲಘಟ್ಟದ ಗ್ರಾಮೀಣ ಪರಿಸರ, ಬದುಕನ್ನು ಜನರೆದುರು ತೆರೆದಿಟ್ಟು ಅದನ್ನು ದಾಖಲಿಸ ಬೇಕೆಂಬುದು ಅವರ ಆಶಯವಾಗಿತ್ತು. ತಮ್ಮ ಎಲ್ಲ ಕಾದಂಬರಿಗಳಲ್ಲಿಯೂ ಅವರು ಅದನ್ನು ಸಾಧ್ಯಮಾಡಿ ತೋರಿಸಿದ್ದಾರೆ.
ಕಂಬಾರರ ಸಾಹಿತ್ಯ ಪ್ರತಿಭೆಗೆ ಪ್ರಶಸ್ತಿಗಳು ದಂಡಿಯಾಗಿ ಬಂದಿವೆ. ಐದು ಸಲ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಾರೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ, ಕಲ್ಕತ್ತೆಯ ನಂದೀಕರ್ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ಕಬೀರ್ ಸಮ್ಮಾನ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆಂಧ್ರಪ್ರದೇಶದ ಜೋಷುವಾ ಸಾಹಿತ್ಯ ಪ್ರಶಸ್ತಿ, ದೇವರಾಜ ಅರಸು ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ರವೀಂದ್ರನಾಥ ಠಾಗೋರ ಸಾಹಿತ್ಯ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್, ಸಾಹಿತ್ಯ ಬಂಗಾರ ಪ್ರಶಸ್ತಿ, ಬಸವರಾಜ ಕಟ್ಟೀಮನಿ ಕಾದಂಬರಿ ಪ್ರಶಸ್ತಿ ಹೀಗೆ ಹತ್ತು ಹಲವಾರು ಪ್ರಶಸ್ತಿಗಳು ಇವರ ಮನೆ ಬಾಗಿಲು ತಟ್ಟಿವೆ. ಅವರ ಸಾಹಿತ್ಯದ ಬಗ್ಗೆ ಹಲವಾರು ಜನರು ಎಂ.ಫಿಲ್, ಪಿ.ಎಚ್‌ಡಿ ಮಾಡಿದ್ದಾರೆ. ಕರ್ನಾಟಕ ಸರ್ಕಾರವು ಅವರ ಸಾಹಿತ್ಯ ಸೇವೆಯ ಗೌರವಕ್ಕಾಗಿ ಅವರನ್ನು ವಿಧಾನಪರಿಷತ್ತಿಗೆ ಸದಸ್ಯರೆಂದು ನಾಮಕರಣ ಮಾಡಿತ್ತು. ಕನ್ನಡಕ್ಕೆ ಎಂಟನೆಯ ಜ್ಞಾನಪೀಠವನ್ನು ತಂದುಕೊಟ್ಟಿರುವ ಚಂದ್ರಶೇಖರ ಕಂಬಾರರು ಇದೀಗ ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ ೮೪ನೆಯ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರೆಂದು ಆಯ್ಕೆಗೊಂಡಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿಗೆ ಡಾ. ಮನು ಬಳಿಗಾರರು ಅಧ್ಯಕ್ಷರಾಗಿ ಆಯ್ಕೆಯಾಗು ತ್ತಿದ್ದಂತೆಯೇ ಅವರು ಕನ್ನಡದ ಮೇರು ಸಾಹಿತಿಗಳ ಹೆಸರಿನಲ್ಲಿ ಅವರು ಹುಟ್ಟಿದ ಊರಿನಲ್ಲಿ ಒಂದು ಸಾಹಿತ್ಯ ಭವನವನ್ನು ಕಟ್ಟುವ ಯೋಜನೆಯನ್ನು ಪ್ರಕಟಿಸಿದರು. ಒಬ್ಬ ಸಾಹಿತಿಗೆ ಆತ ಹುಟ್ಟಿದ ಊರಿನಲ್ಲಿಯೇ ಸೂರ್ಯ ಚಂದ್ರರು ಇರುವವರೆಗೆ ಗೌರವಿಸುವ ಅದ್ಭುತವಾದ ಯೋಜನೆ ಇದು. ಇಡೀ ಭಾರತದಲ್ಲಿ ಎಲ್ಲಿಯೂ ಈ ತರದ ಗೌರವ ಸಾಹಿತಿಗಳಿಗೆ ಸಿಕ್ಕಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು ಈ ಕೆಲಸಕ್ಕಾಗಿ ೨೫ರಿಂದ ೩೦ ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಡಾ. ಚಂದ್ರಶೇಖರ ಕಂಬಾರ (ಘೋಡಗೇರಿ) ಡಾ. ಶಂ.ಬಾ. ಜೋಶಿ (ಡೇರಕೊಪ್ಪ, ಸವದತ್ತಿ ತಾಲೂಕು), ಹಾಗೂ ಡಾ. ಡಿ.ಎಸ್. ಕರ್ಕಿ (ಹಿರೇಕೊಪ್ಪ, ರಾಮದುರ್ಗ ತಾಲೂಕು) ಇವರ ಹೆಸರುಗಳಲ್ಲಿ ಅವರು ಹುಟ್ಟಿದ ಊರುಗಳಲ್ಲಿ ಈ ಭವನಗಳು ತಲೆ ಎತ್ತಲಿವೆ. ಇತ್ತೀಚಿಗಷ್ಟೇ ಘೋಡಗೇರಿಯಲ್ಲಿ ಡಾ. ಚಂದ್ರಶೇಖರ ಕಂಬಾರ ಸಾಹಿತ್ಯ ಭವನ ಕಟ್ಟಲು ಅಡಿಗಲ್ಲು ಪೂಜೆ ನೆರವೇರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾಗಿರುವ ಡಾ. ಮನು ಬಳಿಗಾರರು ಈ ಭವನವನ್ನು ಆಗಸ್ಟ್ ೧೫ರೊಳಗಾಗಿ ಕಟ್ಟಿ ಮುಗಿಸುವುದಾಗಿ ಹೇಳಿದ್ದಾರೆ.
ಈ ವಿಷಯದಲ್ಲಿಯೂ ಡಾ. ಕಂಬಾರರು ಮೊದಲಿಗರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಮೇರು ಸಾಹಿತಿಗಳ ಹೆಸರಿನಲ್ಲಿ ಸಾಹಿತ್ಯ ಭವನ ಕಟ್ಟುತ್ತಿರುವುದರಲ್ಲಿ ಡಾ. ಕಂಬಾರರ ಹೆಸರಿನ ಭವನವೇ ಮೊಟ್ಟ ಮೊದಲು.
ಡಾ. ಕಂಬಾರರು ಎಲ್ಲದರಲ್ಲಿಯೂ ನಾಯಕರೇ ಹೌದು. ಎಲ್ಲದರಲ್ಲಿಯೂ ಮುಂಚೂಣಿ ನಾಯಕರು!
* * *
ಡಾ. ಚಂದ್ರಶೇಖರ ಕಂಬಾರರು ಧಾರವಾಡದಲ್ಲಿ ನಡೆಯುವ ೮೪ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಆಯ್ಕೆಗೊಂಡಾಗ ಅವರ ಕವಿತೆಗಳನ್ನು ಅವರು ಹುಟ್ಟಿದ ೨೦, ೩೦, ೪೦ ವರ್ಷಗಳ ನಂತರ ಹುಟ್ಟಿದ ಕವಿಗಳು ಅದ್ಹೇಗೆ ಅರ್ಥೈಸಿಕೊಳ್ಳುತ್ತಿದ್ದಾರೆಂಬ ಜಿಜ್ಞಾಸೆಗೆ ಒಳಗಾದೆ. ಈಚೆ ಬರೆಯುವ ಕವಿಗಳನ್ನು ಸಂಪರ್ಕಿಸಿ ಅವರನ್ನು ಕಂಬಾರ ಕಾವ್ಯಕ್ಕೆ ಮುಖಾಮುಖಿಯನ್ನಾಗಿಸಿದೆ. ಅವರೆಲ್ಲರೂ ಕಂಬಾರ ಕಾವ್ಯವನ್ನು ಬಹು ಗಂಭೀರವಾಗಿ ಇಲ್ಲಿ ಅರ್ಥೈಸಿದ್ದಾರೆ. ಇಲ್ಲಿ ಬರೆದ ಕೆಲವು ಕವಿಗಳು ಕಂಬಾರರನ್ನು ಪ್ರತ್ಯಕ್ಷವಾಗಿ ಭೇಟಿಯಾಗಿಲ್ಲ. ಆದರೆ ಕಂಬಾರರ ಕಾವ್ಯವನ್ನು ಅವರು ಇನ್ನಿಲ್ಲದಂತೆ ಅಧ್ಯಯನ ಮಾಡಿದವರು; ಪ್ರೀತಿಸಿದವರು. ಹಿರಿಯ ಕವಿಯ ಎದುರು ಹೊಸ ಕವಿಗಳನ್ನು ಮುಖಾಮುಖಿ ಮಾಡಿಸುವ ಉದ್ದೇಶ ನನಗಿತ್ತು; ಅದು ಯಶಸ್ವಿಯಾಗಿದೆ ಎಂದು ನನಗೆ ಸಂತೋಷವಾಗಿದೆ.
ಕಂಬಾರರ ಬಗ್ಗೆ ಒಂದು ದೀರ್ಘ ಲೇಖನವನ್ನೇ ನಾನು ಬರೆದಿದ್ದೇನೆ. ಕಂಬಾರ ಕಾವ್ಯ ಪ್ರವೇಶದ ಮೊದಲು ಕವಿಯ ಈ ರೀತಿಯ ಪರಿಚಯ ಇರಬೇಕೆಂದು ನನಗೆ ಅನ್ನಿಸಿತ್ತು. ಜೊತೆಗೆ ನಾನು ಮಾಡಿದ ಕಂಬಾರರ ಒಂದು ಸಂದರ್ಶನವೂ ಇದರಲ್ಲಿ ಅಡಕವಾಗಿದೆ. ಕಂಬಾರರು ತಮ್ಮ ಕಾವ್ಯದಂತೆಯೇ ಅಲ್ಲಿಯ ಪ್ರಶ್ನೆಗಳಿಗೆ ಕಾವ್ಯಾತ್ಮಕ ವಾಗಿಯೇ ಉತ್ತರಗಳನ್ನು ನೀಡಿದ್ದಾರೆ. ಈ ಕೃತಿಯನ್ನು ರೂಪಿಸುವಾಗ ಸತೀಶ ಕುಲಕರ್ಣಿ, ಮನು ಬಳಿಗಾರ, ರಾಮಕೃಷ್ಣ ಮರಾಠೆ, ಚಂದ್ರಕಾಂತ ಪೋಕಳೆ, ವಿಕ್ರಮ ವಿಸಾಜಿ ಮುಂತಾದ ಗೆಳೆಯರು ಸಲಹೆ, ಸೂಚನೆ, ಸಹಾಯ, ಸಹಕಾರಗಳನ್ನು ನೀಡಿದರು. ಇವರುಗಳ ಜೊತೆಗೆ ಎಂ.ಕೆ. ಜೈನಾಪುರ, ರವಿ ಕೋಟಾರಗಸ್ತಿ, ಜಯಶ್ರೀ ಕಂಬಾರ, ಎ.ಬಿ. ಘಾಟಗೆ ಅವರುಗಳು ಸಹಾಯದ ಹಸ್ತ ಚಾಚಿದ್ದಾರೆ. ಅವರೆಲ್ಲರಿಗೂ ಕೃತಜ್ಞತೆಗಳು.
ಕೃತಿ ಪ್ರಕಟಿಸುತ್ತಿರುವ ಹೊಸಪೇಟೆಯ ಯಾಜಿ ಪ್ರಕಾಶನದ ಸವಿತಾ ಯಾಜಿ ಹಾಗೂ ಗೆಳೆಯ ಗಣೇಶ್ ಯಾಜಿಯವರಿಗೂ ಕೃತಜ್ಞನಾಗಿದ್ದೇನೆ.
ಪತ್ನಿ ಸುಮಾ, ಮಕ್ಕಳು ಸಂಸ್ಕೃತಿ, ರಾಕೇಶ ರಾಮಘಡ, ಶ್ರೇಯಸ್, ಸಂತೋಷ ಪಾಟೀಲ್ ಹಾಗೂ ಮೊಮ್ಮಗಳು ಪ್ರಿಶಾ ಅವರ ಪ್ರೀತಿಗೆ ಋಣಿ.
ಪುಟ ತೆರೆದರೆ…
ಸವಿನುಡಿ / ೫
ಕನ್ನಡ ಸಾಹಿತ್ಯದ ಶಿಖರ ಸೂರ್ಯ / ೭
೧. ಕಾಡುಕುದುರೆ / ೧
ಕಡಿವಾಣವಿಲ್ಲದ ಕಂಬಾರರ ಕಾಡುಕುದುರೆಯ ನೆಗೆದಾಟ -ಡಾ. ಬಸವರಾಜ ಸಾದರ
೨. ಗೌತಮ ಕಂಡ ಪ್ರಥಮ ದರ್ಶನ / ೯
ಗೌತಮನ ಕಥನದಲ್ಲಿ ಕಾಣುವ ಕಾಮಪ್ರಜ್ಞೆ -ಚಂದ್ರಕಾಂತ ಪೋಕಳೆ
೩. ಆ ಮರ ಈ ಮರ / ೧೪
ದಾರ್ಶನಿಕ ಕವನ -ಡಾ. ರಾಮಕೃಷ್ಣ ಮರಾಠೆ
೪. ನಾಟಕದ ರಾಜನೂ ಕೋಡಂಗಿಯೂ / ೧೯
ಕೋಡಂಗಿ ರಾಜನಾಗುವ ವರ್ತಮಾನದ ಕಥನ -ಎಚ್.ಎಲ್. ಪುಷ್ಪಾ
೫. ತಕರಾರಿನವರು / ೨೪
ಮಾತಿನ ತಾಕತ್ತಿನ ತಕರಾರಿನವರು -ಸತೀಶ ಕುಲಕರ್ಣಿ
೬. ಗಾಂಧೀಜಿ ಸ್ವರ್ಗದಿಂದ ಇಳಿದು ಬಂದಾಗ / ೨೭
ವಿಭಿನ್ನ ನೆಲೆಯ ಗಾಂಧೀ ದರ್ಶನ -ಡಾ. ವಿಠಲರಾವ್ ಟಿ. ಗಾಯಕ್ವಾಡ್
೭. ಬಿಸಿಲಗುದುರೆಯನೇರಿ ಹೋದಾ / ೩೭
ಮಾನವೀಯತೆ, ಪ್ರೇಮ ಮತ್ತು ಜೀವನ ಪ್ರೀತಿಗಳ ಸಮ್ಮಿಶ್ರಣ ಚಕೋರಿಯೆಂಬ ಮಹಾಕಾವ್ಯವು
-ಡಾ. ವಿಕ್ರಮ ವಿಸಾಜಿ
೮. ಒಂದಾದರೆ ಅರಳಿದ ಹೂವಿರಲಿ ಶಿವನೆ / ೫೦
ಮುಗ್ಧತೆಯಲ್ಲಿ ಬದುಕನ್ನು ನೋಡಿದ ಭಾವಗೀತೆ -ಡಾ. ಎಸ್. ವ್ಹಿ. ಪ್ರಭಾವತಿ
೯. ಮೂಡಲಮನೆ / ೫೩
ಮೂಡಲಮನೆ… ನಮ್ಮನೆ-ನಿಮ್ಮನೆ -ಡಾ. ರಂಗರಾಜ ವನದುರ್ಗ
೧೦. ನವಿಲೇ ನವಿಲೇ / ೫೬
ಕನ್ನಡ ಸಾಹಿತ್ಯದ ಅಪೂರ್ವ ಕಥನ ಕವನ -ಡಾ. ಎಸ್.ಎಸ್. ಅಂಗಡಿ
೧೧. ನನ್ನ ಪಾತ್ರ / ೬೪
ಚಂದ್ರಶೇಖರ ಕಂಬಾರರ ಪಾತ್ರ ಮತ್ತು ಕನ್ನಡಿ -ಡಾ. ಸತ್ಯಾನಂದ ಪಾತ್ರೋಟ
೧೨. ಇಟ್ಟಿಗೆಯ ಪಟ್ಟಣ / ೬೮
ಆಧುನಿಕತೆಯ ಅನಿಷ್ಠ ಪರಿಣಾಮ ಸಾರುವ ಕವಿತೆ -ನಾಗರೇಖಾ ಗಾಂವಕರ
೧೩. ಕೇಳೆನ್ನ ದೇಶವೆ / ೭೪
ಕಂಬಾರರ ಈ ಕವಿತೆ ನನ್ನೊಳಗೆ ಅವಿತೂ… -ವಿಜಯಕಾಂತ ಪಾಟೀಲ
೧೪. ಅಜ್ಜ ಅಜ್ಜಿ / ೭೮
ಸರಳ ಸಾಮಾನ್ಯ ಪದ್ಯದ ಗಹನ ಒಳಾರ್ಥ -ಮಮತಾ ಅರಸೀಕೆರೆ
೧೫. ಸಾವಿರದ ಶರಣವ್ವ ಕರಿಮಾಯಿ ತಾಯೇ / ೮೪
ಗ್ರಾಮದೇವತೆಯ ವಿಶಿಷ್ಟ ವರ್ಣನೆಗಳ ನಡುವೆ -ಶ್ರೀನಿವಾಸ ಜೋಕಟ್ಟೆ
೧೬. ಚಂದ್ರ / ೮೮
ಚಂದ್ರಶೇಖರನೆಂಬ ಚಂದ್ರ -ಡಾ. ಶೋಭಾ ನಾಯಕ
೧೭. ಅಂಬೇಡಕರರು ಇವರು / ೯೨
ಮಹಾಮಾನವನ ನಿಜ ಚಿತ್ರಣ -ಡಾ. ಎ.ಬಿ. ಘಾಟಗೆ
೧೮. ನಿನ್ನ ಕಣ್ಣು / ೯೬
ಕಣ್ಣೆಂಬ ಜಾಲಂದ್ರದ ಬೆಳಕು -ಡಾ. ಶಾರದಾ ಮುಳ್ಳೂರ
೧೯. ಶಿವಾಪುರದ ಹಾಡು / ೧೦೧
ಸಾಹಿತ್ಯವು ಶೂನ್ಯದಿಂದ ಸೃಷ್ಟಿಯಾಗುವಂಥದ್ದಲ್ಲ -ಡಾ. ಪಿ. ನಾಗರಾಜ
೨೦. ಕನ್ನಡ ತಾಯಿಯ ಸುಪ್ರಭಾತ / ೧೦೫
ಸಾವಿರದ ಶರಣೋ -ಸಂಕಮ್ಮ ಜಿ. ಸಂಕಣ್ಣನವರ
೨೧. ಬರಿಗೈ ಅನಾಥ / ೧೦೯
ಏನೂ ಇಲ್ಲದ ವ್ಯಕ್ತಿಯ ಭಾವನೆಗಳು -ವಾಗೀಶ ಹೂಗಾರ
೨೨. ಸೂರ್ಯನೆಂಬ ಮರ / ೧೧೨
ಕಂಬಾರರ ಕಲ್ಪನಾತೀತ ಮಹಾರೂಪಕ -ಗಾಯತ್ರಿ ರವಿ
೨೩. ಹೊಸ ಬಾಳಿಗೆ ಹೊರಟ ಮಗಳಿಗೆ / ೧೧೫
ಧೈರ್ಯ ತುಂಬುವ ಅಪ್ಪ -ಲತಾ ರಮೇಶ ವಾಲಿ
೨೪. ಶ್ರಾವಣದ ಒಂದು ದಿನ / ೧೨೧
ಹೊಸತಿಗೆ ಹಂಬಲಿಸುವ ಪ್ರತಿ ಜೀವಕ್ಕೂ ಶ್ರಾವಣ -ರಾಜೇಶ್ವರಿ ರವಿ ಸಾರಂಗಮಠ
೨೫. ನಾಯಕ ಅಥವಾ ಡೊಳ್ಳಿನ ಹಾಡು / ೧೨೪
ನಾಯಕ: ಅಮಾಯಕರ ಆತಂಕ -ಡಾ. ಜಯಶ್ರೀ ಸಿ. ಕಂಬಾರ
೨೬. ಮರತೇನಂದರ ಮರೆಯಲಿ ಹೆಂಗಾ / ೧೩೦
ಕಾಮಾಲೆ ಕಣ್ಣಿನ ಸೂರ್ಯ! -ಡಾ. ಸರಜೂ ಕಾಟ್ಕರ್
Reviews
There are no reviews yet.