ಕೃತಿಕಾರನಾಗಿ ಒಂದು ನಿವೇದನೆ
ಕನಕ-ಪುರಂದರ ನಾಟಕದ ಸೃಷ್ಟಿಯ ಹಿಂದೆ ಒಂದು ಜಗತ್ಕಾರಣವಿದೆ ಎಂದು ನನಗನಿಸುವುದಿಲ್ಲ. ಕನಕ-ಪುರಂದರರಿಬ್ಬರೂ ಚಾರಿತ್ರಿಕ ವ್ಯಕ್ತಿಗಳು. ಈ ಇಬ್ಬರೂ ಮಹನೀಯರನ್ನು ನನ್ನ ಕೃತಿಯ ಪ್ರಮುಖ ಪಾತ್ರಗಳನ್ನಾಗಿಸುವ ಪ್ರಯತ್ನದಲ್ಲಿ; ಅವರ ಕಾಲಘಟ್ಟದಲ್ಲಿ ಅವರೀರ್ವರ ಒಡನಾಟಕ್ಕೆ ಬಂದಿರುವವರನ್ನೂ ಈ ಕೃತಿಯಲ್ಲಿ ಒಳಗೊಳ್ಳುತ್ತಾ ಹೋಗಿದ್ದೇನೆ. ನಾಡಿನ ದಾಸ ಪರಂಪರೆ ಮತ್ತು ದಾಸ ಸಾಹಿತ್ಯ ಪ್ರಕಾರದ ನಿರ್ಮಾತೃಗಳಲ್ಲಿ ಕನಕ-ಪುರಂದರರ ಕೊಡುಗೆ ಅನನ್ಯ. ಕನಕ-ಪುರಂದರರು ಬದುಕಿದ ಕಾಲ ಮತ್ತು ಅವರಿಂದ ಸೃಷ್ಟಿಯಾದ ದಾಸ ಸಾಹಿತ್ಯವನ್ನು ಕೂಲಂಕಷವಾಗಿ ಅವಲೋಕಿಸಿದಾಗ, ಬದುಕೇ ಅಸಂಗತವಾಗಿರುವ ಆಗಿನ ಸಂದರ್ಭದಲ್ಲಿ ಅವರು ಜನಸಾಮಾನ್ಯರ ಬದುಕಿಗೆ ಒಂದು ಸಂಗತ ಪ್ರಜ್ಞೆಯನ್ನು ಒದಗಿಸಲು ಪಟ್ಟಿರುವ ಪ್ರಯತ್ನವನ್ನು ಗುರುತಿಸುವುದು ನನಗೆ ಮುಖ್ಯವೆನಿಸಿದೆ. ಚಾರಿತ್ರಿಕವಾಗಿ ಇಂದಿಗೆ ಭಕ್ತಿಪಂಥವೆಂದು ಗುರುತಿಸಿಕೊಳ್ಳುವ ಈ ಕಾಲಘಟ್ಟದಲ್ಲಿ ಅವರು ಕೈಗೊಂಡ ಈ ಪ್ರಯತ್ನವು; ಉದ್ದೇಶಪೂರ್ವಕವೋ ಅಥವಾ ಇನ್ಯಾವುದೋ ಹುನ್ನಾರವೋ ಎನ್ನುವ ಬಗ್ಗೆ ಸದಭಿರುಚಿಯ ವಿಮರ್ಶೆಯನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಜಿಜ್ಞಾಸೆಯೇ ಈ ಕೃತಿಯ ಮೂಲ ಆಶಯ.
ಆದರೆ ಇತ್ತೀಚಿಗಿನ ಸಾಮಾಜಿಕ, ರಾಜಕೀಯ ಸಂದರ್ಭದಲ್ಲಿ ಸಮಾಧಾನಚಿತ್ತದಿಂದ, ಸದಭಿರುಚಿಯಿಂದ ಯಾವುದೇ ಕೃತಿಯನ್ನು ಸ್ವೀಕರಿಸುವ ಮನೋಧರ್ಮಕ್ಕೆ ಸಾಮೂಹಿಕ ಸನ್ನಿ ಹಿಡಿದಿದೆ. ಈ ಪ್ರಸಕ್ತ ಕಾಲದ ಮಹಿಮೆಯಿಂದಾಗಿ ನಮ್ಮೊಳಗಿನ ಯಾವುದೇ ಅಭಿವ್ಯಕ್ತಿಗಳು, ಪರಿಕಲ್ಪನೆಗಳು, ಏಕಪ್ರಕಾರ ಚಿಂತನೆಯ ದಾಳಿಗೆ ಒಳಪಟ್ಟು ಧೂಳೀಪಟವಾಗುತ್ತಿವೆ. ಸಾಹಿತ್ಯ ಗೋಷ್ಠಿಗಳು ಕೇವಲ ಕೋಲಾಹಲ ಪ್ರಿಯರ ವಿದ್ವತ್‌ಗೋಷ್ಠಿಗಳಾಗಿ ಪರಿಣಮಿಸಿ ಅದು ನಮ್ಮೊಳಗೆ ವಿರಸವನ್ನು ಹೆಚ್ಚಿಸುವುದೇ ವಿನಹ ರಸೋತ್ತೇಜಕವಾಗಿ ಅಲ್ಲ.
ನನ್ನ ಪ್ರಕಾರ ಸಾಹಿತ್ಯ ಕ್ಷೇತ್ರ ಇಂದು ಮುಕ್ತ ಅಭಿವ್ಯಕ್ತಿಯ ಕ್ಷೇತ್ರವಾಗಿ ಉಳಿದಿಲ್ಲ ಅಂದರೆ, ಈ ಹಿಂದೆ ಅದು ಮುಕ್ತವಾಗಿಯೇ ಇತ್ತು ಅನ್ನುವುದು ನನ್ನ ಅಭಿಮತವಲ್ಲ. ಮುಕ್ತ ಅಭಿವ್ಯಕ್ತಿ ಸದಭಿರುಚಿ ಎಲ್ಲೆ ಮೀರಿ ವಿಪರೀತ ಮಟ್ಟಕ್ಕೆ ಹೋಗಿದೆ ಎನ್ನುವುದು ನನ್ನ ಅಭಿಪ್ರಾಯ. ಈ ತಲ್ಲಣಗಳೇ ಕನಕ-ಪುರಂದರ ಬದುಕಿನೊಳಹೊಕ್ಕು ಅವರ ಕಾಲದಲ್ಲಿ ಓಡಾಡಿ, ಅವರ ಒಡನಾಟದಲ್ಲಿರುವವರೊಂದಿಗೆ ಮಾತಾಡಿ, ಕೃತಿ ಕಾರ್ಯಕ್ಕೆ ತೊಡಗಲು ಒದಗಿರುವ ಪ್ರೇರಣೆಯೇ ಜಗತ್ಕಾರಣ ಎಂದು ನನಗನಿಸಿದೆ.
ಅಂತೂ, ಕಳೆದ ಎರಡು ವರ್ಷಗಳಲ್ಲಿ ನಡೆಸಿದ ಅಧ್ಯಯನದ ಫಲವಾಗಿ ಕನಕ-ಪುರಂದರ ರಂಗಪಠ್ಯ ಸೃಷ್ಟಿಯಾಗಿದೆ. ನನ್ನಿಂದ ಸೃಷ್ಟಿಯಾಗಿದೆ ಅಂದರೆ ಅದು ಅಹಂಕಾರದ ಮಾತು. ಜಗತ್ಕಾರಣವಾಗಿ ನನ್ನಿಂದ ಮೂಡಿದೆ ಅಂದರೆ ನನ್ನ ವಾಮವಾದಿ ಮಿತ್ರರ ಬಾಯಿಗೆ ಕವಳವಾಗಿ ಬಿಡುತ್ತೇನೆ. ಜಗತ್ಕಾರಣವಾಗಲಿ, ದರ್ಶನಶಾಸ್ತ್ರವಾಗಲಿ, ತ್ರಿವಿಧ ಪ್ರಮಾಣ ಪ್ರಮೇಯಗಳೇ ಆಗಲಿ ನಾನು ಬುದ್ಧನಿಗೆ ಶರಣು ಹೋಗುತ್ತೇನೆ. ಬುದ್ಧನ೧ ಪ್ರಕಾರ ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಆತ ಮೌನ ತಳೆಯುತ್ತಾನೆ. ಬುದ್ಧನ ದರ್ಶನದಲ್ಲಿ ಅದಕ್ಕೆ ಮಹಾಮೌನ ಅಂತಾನೂ ಅಂತಾರೆ. ಒಂದು: ನಾನು ಯಾರು, ಎಲ್ಲಿಂದ ಬಂದೆ, ಎಲ್ಲಿಗೆ ಹೋಗುತ್ತೇನೆ? ಎರಡು: ಈ ಜಗತ್ತು ಎಲ್ಲಿಂದ ಬಂತು? ಎಲ್ಲಿಗೆ ಹೋಗುತ್ತದೆ? ಮೂರು: ದೇವರಿದ್ದಾನೋ ಇಲ್ಲವೋ? ಈ ಪ್ರಶ್ನೆಗಳಿಗೆ ಬುದ್ಧ ಉತ್ತರಿಸುವುದಿಲ್ಲ. ಒಂದು ರೀತಿಯಲ್ಲಿ ಈ ಪ್ರಶ್ನೆಗಳೆಲ್ಲವೂ ಆಧ್ಯಾತ್ಮಿಕವಾಗಿ ಹಾನಿಕಾರಕ. ಈ ಸಂದರ್ಭದಲ್ಲಿ ನನಗೆ ಬುದ್ಧನ ಈ ಮಹಾಮೌನ ಅನುಕೂಲಕರವಾಗಿದೆ. ಬುದ್ಧ ಈ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅಂತಾನೆ ವ್ಯಕ್ತಿಯೊಬ್ಬನಿಗೆ ಬಾಣ ನೆಟ್ಟಿದೆ, ರಕ್ತ ಹರಿಯುತ್ತಿದೆ, ಅವ ನೋವಿನಿಂದ ನರಳುತ್ತಿದ್ದಾನೆ, ಅವನ ವೇದನೆಗೆ, ದುಃಖಕ್ಕೆ ಸೂಕ್ತ ಚಿಕಿತ್ಸೆ, ಉಪಶಮನ ನೀಡುವುದನ್ನು ಬಿಟ್ಟು ಈ ಬಾಣ ಎಲ್ಲಿಂದ ಬಂತು? ಯಾವ ದಿಕ್ಕಿನಿಂದ ಬಂತು? ಯಾರು ಬಿಟ್ಟರು; ಇತ್ಯಾದಿ ಪ್ರಶ್ನೆಗಳನ್ನು ಕೇಳುವುದು ಅಗತ್ಯವೇ?
ಇಂತಹದೇ ಒಂದು ಸಾಂಸ್ಕೃತಿಕ ಉಪಶಮನಕಾರಿ ಚಿಕಿತ್ಸಕ ಮನೋಭಾವವು ಇಂದಿನ ನಮ್ಮ ಸಾಮಾಜಿಕ, ರಾಜಕೀಯ ಸಂದರ್ಭದಲ್ಲಿ ಸೃಷ್ಟಿಯಾಗಬೇಕು ಎನ್ನುವುದು ನನ್ನ ಆಶಯ. ಸರಿಸುಮಾರು ೧೨ನೇ ಶತಮಾನದಿಂದ ೧೬ನೇ ಶತಮಾನದ ನಡುವೆ ದಕ್ಷಿಣ ಭಾರತದ ವಿವಿಧ ರಾಜಮನೆತನಗಳ ರಾಜ್ಯವಿಸ್ತರಣೆಯ ದಾಹ, ಒಳಜಗಳ, ದೊಂಬಿ, ದಂಗೆ, ದಂಡಯಾತ್ರೆ ಮುಂತಾದವುಗಳಿಗೆ ಕಾರಣೀಭೂತವಾದ ಚಾರಿತ್ರಿಕ ಅಂಶಗಳಿಗೆ ಅತ್ಯಂತ ಕರಾರುವಕ್ಕಾದ ಸಾಕ್ಷಿ ಪುರಾವೆಗಳು ಲಭ್ಯವಿದ್ದರೂ, ಅವುಗಳನ್ನು ನಾಡಿನ ಜನತೆಗೆ ಪ್ರಸ್ತುತ ಪಡಿಸಿದವರ ವಿಶಾಲ ದೃಷ್ಟಿಕೋನದ ಕೊರತೆ ಮತ್ತು ಅವರ ವ್ಯಕ್ತಿಗತ ಮತಾಚರಣೆಯ ಹಿತಾಸಕ್ತಿಗಳಿಂದಾಗಿ ಸೃಷ್ಟಿಯಾದ ಚಾರಿತ್ರಿಕ ಟಿಪ್ಪಣಿಗಳ ಮೇಲೆ ಅವಲಂಬಿತವಾಗುವುದು ಎಷ್ಟು ಸರಿ?
ಕೃತಿರಚನೆಯ ಪೂರ್ವದಲ್ಲಿ ನಾಡಿನ ಸಾಹಿತ್ಯ ಕ್ಷೇತ್ರದ ದಿಗ್ಗಜರಲ್ಲೊಬ್ಬರಾದ ಕಾರ್ನಾಡರು ಅವರ ನಾಟಕಗಳಲ್ಲಿ, ಪ್ರಮುಖವಾಗಿ ತಲೆದಂಡ, ಟಿಪ್ಪು ಮತ್ತು ರಾಕ್ಷಸತಂಗಡಿ ಈ ತ್ರಿವಳಿಗಳನ್ನು, ನಾಟಕರೂಪದಲ್ಲಿ ಚರಿತ್ರೆಯನ್ನು ಕಟ್ಟುವ ಪ್ರಕಾರಕ್ಕೆ ಭಿನ್ನವಾದ ಭಾಷ್ಯವನ್ನು ಒದಗಿಸಿದ್ದಾರೆ. ಒಂದು ಅರ್ಥದಲ್ಲಿ ರಾಕ್ಷಸತಂಗಡಿಯನ್ನು ಓದಿದ ಬಳಿಕ ಬಿಟ್ಟ ಪದಗಳನ್ನು ತುಂಬಿಸಿಕೊಳ್ಳಿ ಎಂದು ಕಾರ್ನಾಡರು ಸ್ವಲ್ಪ ಜಾಗ ನಮಗೂ ಬಿಟ್ಟಿದ್ದಾರೆ ಎಂಬ ಧ್ವನಿಯಿದೆ.
ಈ ನಿಟ್ಟಿನಲ್ಲಿ ರಾಕ್ಷಸತಂಗಡಿಯ (ತಾಳಿಕೋಟೆ ಕದನ) ಸಂದರ್ಭದ ಪೂರ್ವೋತ್ತರದಲ್ಲಿ ಖಾಲಿಬಿಟ್ಟ ಜಾಗಗಳನ್ನು ಕನಕ-ಪುರಂದರ ರಂಗಪಠ್ಯದ ಮೂಲಕ ತುಂಬಿಸಿಕೊಡುವ ಅಲ್ಪ ಪ್ರಯತ್ನ ನನ್ನದು. ಕನಕ-ಪುರಂದರರ ಜೀವನದಲ್ಲಿ ಪವಾಡವಾಯಿತೋ ಅಥವಾ ಅವರು ಒಟ್ಟು ಜೀವನವನ್ನೇ ಒಂದು ಪವಾಡದ ರೀತಿಯಲ್ಲಿ ಬದುಕಿದ್ದರೋ? ನಾನರಿಯೆ. ಇನ್ನೊಂದು ಆಯಾಮದಲ್ಲಿ ಅವಲೋಕಿಸುವುದಾದರೆ; ದಾಸಾನುದಾಸರಾಗಿರುವ ಜನಸಾಮಾನ್ಯರಿಗೆ ಅನಿವಾರ್ಯವಾಗಿ ಕನಕ-ಪುರಂದರರನ್ನು ಪವಾಡ ಪುರುಷರನ್ನಾಗಿಸುವ ಮೂಲಕ ತಮಗೆ ದಕ್ಕಬೇಕಾದ ಸಾಮಾಜಿಕ ಸಾಮ್ಯತೆಯನ್ನು ಹೊಂದುವ ಅಗತ್ಯ ಬಿದ್ದಿರಬೇಕು. ಆಗಿನ ಆ ಸಂದರ್ಭದಲ್ಲಿ ಉಳ್ಳವರ ಛತ್ರಛಾಯೆಯಲ್ಲಿರುವ ಮಠಮಾನ್ಯಗಳಿಗೆ ಹಾಗು ಅದರ ಅಧ್ವರ್ಯುಗಳಿಗೆ ಆ ಹೊತ್ತಿನ ಸಾಮಾಜಿಕ ಅಸಮತೆಯನ್ನು ಒಪ್ಪಿಕೊಳ್ಳಲಾಗದಷ್ಟು ಅಸಮಾಧಾನ ಭುಗಿಲೆದ್ದಿರಲೇಬೇಕು. ಇಲ್ಲದಿದ್ದಲ್ಲಿ ಉಡುಪಿಯಲ್ಲಿ ಕೃಷ್ಣ ಕನಕನಿಗೆ ತೆರೆದುಕೊಳ್ಳುವುದು. ಪಂಡರಾಪುರ೨ದಲ್ಲಿ ಪುರಂದರರು ಅಪವಾದಕ್ಕೆ ತುತ್ತಾಗಿ ವಿಠಲನ ದಯೆಯಿಂದ ಪಾರಾಗುವಂತಹ ಸನ್ನಿವೇಶದ ನಿರ್ಮಾಣ ವಿಶೇಷವೆನಿಸುತ್ತದೆ. ಈ ಸನ್ನಿವೇಶವು ಪವಾಡದಿಂದ ಸೃಷ್ಟಿಯಾಯಿತೋ ಅಥವಾ ಪವಾಡಕ್ಕಾಗಿಯೇ ಒಂದು ಸನ್ನಿವೇಶವನ್ನು ಸೃಷ್ಟಿಸಲಾಯಿತೋ ಅನ್ನುವ ಸಂದೇಹ ಎತ್ತುವುದಕ್ಕಿಂತಲೂ; ಎರಡೂ ಭಿನ್ನ ವರ್ಗಗಳ ನಡುವೆ ಮತ್ತು ಒಂದು ಸಾಮಾಜಿಕ ಸಮತೆಯನ್ನು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿರುವ ಎಲ್ಲಾ ಲಕ್ಷಣಗಳು ನನಗೆ ಗೋಚರಿಸಿದೆ. ಆದುದರಿಂದಲೇ ಎರಡೂ ಪಂಗಡಗಳಿಗೆ ಸೇರಿದ ಸಮಾನಮನಸ್ಕರು ಜೊತೆಗೂಡಿಯೇ ಭಕ್ತಿಪಂಥದ ನಿರೂಪಣೆಯನ್ನು ಸೃಷ್ಟಿಸಿರಬೇಕು ಎನ್ನುವ ತೀರ್ಮಾನಕ್ಕೆ ನಾನು ಬಂದುಬಿಟ್ಟಿದ್ದೇನೆ.
ಕನಕ-ಪುರಂದರ ರಂಗಪಠ್ಯವಾಗಿರುವುದರಿಂದ ಇದನ್ನು ಪೂರ್ತಿ ಪ್ರಮಾಣದ ರಂಗಕೃತಿ ಅಥವಾ ಸಾಹಿತ್ಯಕೃತಿ ಎಂಬ ಪ್ರತ್ಯೇಕತೆಯನ್ನು ಮಾಡಲು ನಾನು ಅಶಕ್ತ. ನನ್ನ ಪ್ರಕಾರ ಇದನ್ನು ಬಳಸಿಕೊಳ್ಳಲು ಇಚ್ಛಿಸುವವರಿಗೆ ಗ್ರಹಿಕೆಗೆ ಒಂದು ಆಕರ ಸಾಮಗ್ರಿ ಮಾತ್ರ.
ಕುಡುಪು, ೨೦ ಸೆಪ್ಟೆಂಬರ್ ೨೦೨೪ ಮೋಚ
Reviews
There are no reviews yet.