ಲಂಡನ್ ಡೈರಿಗೆ ವಿದೇಶದಿಂದೊಂದು ಪತ್ರ
ಹೆಲೋ ಲಂಡನ್ ಡೈರಿ,
ಇಂಗ್ಲೆಂಡ್ ಅಲ್ಲಿ ಕಲ್ಪನೆಗೊಂಡು ಕನ್ನಡನಾಡಿನಲ್ಲಿ ಪುಸ್ತಕರೂಪ ಪಡೆದು ದೇಶ ವಿದೇಶಗಳ ಓದುಗರನ್ನು ಸೇರಿ ಎಲ್ಲರೆದುರು ಬಟ್ಟಬಯಲಾಗುವ ಆತುರದಲ್ಲಿರುವ ನಿನ್ನಲ್ಲಿ ತೆರೆದಿಡಲು ಪ್ರಶ್ನೆಗಳಿವೆ. ಮುಂದೆ ನನ್ನಂತಹ ವಲಸೆ ಜೀವಿಯಾಗಲಿರುವ ನಿನ್ನಲ್ಲಿ ಹಂಚಿಕೊಳ್ಳಲು ಪಿಸುಮಾತುಗಳಿವೆ.
ಯಾವುದು ದೇಶ ಯಾವುದು ವಿದೇಶ? ಹುಟ್ಟಿ ಬೆಳೆದ ನೆಲ ಮಾತ್ರ ದೇಶವೇ? ಬೆಳೆದು ಬೇರುಬಿಟ್ಟ ಅಥವಾ ಉಳಿದೆಲ್ಲ ಆಯುಷ್ಯ ಕಳೆಯಲಿರುವ ದೇಶ ಕೊನೆತನಕವೂ ವಿದೇಶವೇ?
ಊರಿಗೆ ಹೋದಾಗೆಲ್ಲ ಕಾಣುವ ಅಪರಿಚಿತ ಮುಖಗಳ ನಡುವಲ್ಲಿ ಓಣಿ, ಗಟಾರ, ಮಣ್ಣಷ್ಟೇ ಪರಿಚಿತ. ಸಿಗುವ ಪರಿಚಿತ ಮುಖಗಳಲ್ಲಿ ಅಪರಿಚಿತ ಊರೊಂದಿದೆ. ನನಗೆ ಎಟುಕದ ಕತೆಯೊಂದಿದೆ. ಅಯ್ಯೋ ನನಗೀಗ ಈ ಊರಿನ ಆತ್ಮ ಕೂಡ ದಕ್ಕದಲ್ಲ ಎಂಬ ಹತಾಶೆಯೊಂದಿದೆ. ಯಾಕೆಂದರೆ ನಾನೀಗ ವಿದೇಶಿಯಳು! ಎಲ್ಲೆಡೆ ಬರೀ ತಡವುತ್ತ ಸಾಗಿ ಕೊನೆಗೆ ಕಡಲತಡಿಯಲ್ಲಿ ಕೂತರೆ ಮತ್ತೆ ಮತ್ತೆ ಮಗುಚುವ ಅಲೆಗಳಷ್ಟೇ ಪರಿಚಿತ. ನಿರಂತರ ಮಗುಚುವ ಏಕತಾನತೆಯಲ್ಲಿ ದೇಶ ಸಿಕ್ಕುತ್ತದೆ. ಕಳೆದ ಊರೆಲ್ಲ ದೊರೆಯುತ್ತದೆ. ಬೆನ್ನ ಹಿಂದಿನ ಓಣಿಯೆಲ್ಲ ಆಗ ವಿದೇಶ ಅನಿಸುತ್ತದೆ.
ಜನಜೀವನದಲ್ಲಿ ದೇಶವಿದೇಶಗಳು ಕಾಣಿಸುತ್ತವೆ. ಗಿಡಮರ ಬಳ್ಳಿಗಳಲ್ಲಿ ದೇಶವಿದೇಶಗಳು ಕಾಡುತ್ತವೆ. ಅಂಕೋಲೆಯನ್ನು ಅಮೆರಿಕವನ್ನಾಗಿಸಿದ್ದು ಯಾವುದು? ಅಮೆರಿಕವನ್ನು ಅಂಕೋಲಾ ಎನಿಸುವಂತೆ ಮಾಡಿದ್ದು ಯಾರು? ಇದು ನನ್ನಂತಹ ನಿನ್ನಂತಹ ಎಲ್ಲ ವಲಸಿಗರ ದ್ವಂದ್ವ ಇರಬಹುದು. ನಾವು ದೇಶ ಬಿಟ್ಟರೂ ನಮ್ಮನ್ನು ಆವರಿಸಿರುವ ದೇಶ ಬರುಬರುತ್ತ ವಿದೇಶ ಅನಿಸಬಹುದು. ನಾವು ಬದುಕುತ್ತಿರುವ ವಿದೇಶ ಬೇಡ ಎಂದರೂ ದೇಶ ಎನಿಸಬಹುದು. ನಾ ಬಿಟ್ಟುಬಂದ ದೇಶ ನನ್ನದಾಗಿದ್ದರೂ ನನ್ನದಲ್ಲ. ನಾ ಈಗ ಅಪ್ಪಿಕೊಂಡ ದೇಶ ನನ್ನದೆಂದರೂ ನನಗೆ ಪೂರ್ತಿ ದಕ್ಕುವುದಿಲ್ಲ. ಎಲ್ಲೂ ಸಲ್ಲದ ದೇಶೀಯರು ವಿದೇಶೀಯರು ನಾವು. ಹಾಗಾಗಿಯೇ ಎಲ್ಲೆಲ್ಲಿಯೂ ಸಲ್ಲುವವರು ಕೂಡ!
ಅಮೆರಿಕದ ಪ್ಲಿಮತ್ ಬೀಚಿನ ತೆರೆಯಲ್ಲಿ ಅಂಕೋಲದ ಹೊನ್ನೆಗುಡಿ ಬೀಚಿನ ಬಿಸಿಯಿಲ್ಲ. ತಣ್ಣನೆಯ ಅಟ್ಲಾಂಟಿಕ್ ಮಹಾಸಾಗರಕ್ಕೆ ನಮ್ಮ ಅರಬ್ಬೀ ಸಮುದ್ರದ ಆಹ್ಲಾದವಿಲ್ಲ. ಕಡಲ ಒಡಲೊಳಗೆ ಮಾತ್ರ ಬಹುಷ್ಯ ನನ್ನ ದೇಶವೂ ವಿದೇಶವೂ ಇದೆ. ಗಾಳಿಯಲ್ಲಿ ತೇಲಿಬಂದ ಅದೆಂತಹದೋ ಕರಿದ ವಾಸನೆಯಲ್ಲಿ ಅಂಕೋಲದ ಶೆಟ್ಟಿ ಹೋಟೆಲಿನ ಬೋಂಡಾ ವಾಸನೆ ಅಂದಿನ ನನ್ನ ಬಾಲ್ಯದ ಶಾಲೆಯ ಧ್ವಜವಂದನೆಯನ್ನಷ್ಟೇ ಅಲ್ಲ, ಈಗ ಇಲ್ಲಿ ಬೋಸ್ಟನ್ನಿನ ದೇವಸ್ಥಾನದ ಉದ್ದದ ಕ್ಯೂದಲ್ಲಿ ಮಗಳು ನಿಂತು ದಕ್ಕಿಸಿಕೊಂಡ ವಡೆಯನ್ನೂ ನೆನಪಿಸುತ್ತದೆ. ನೆನಪು ಕಟ್ಟಿಕೊಡುವ ದೇಶ ನನ್ನದೆಂದುಕೊಂಡರೆ ಅಲ್ಲೂ ಇಲ್ಲೂ ಊರು ತುಂಬಾ ನೆನಪು. ಮೈಯೆಲ್ಲಾ ನೆನಪ ಒನಪು.
ನೆನಪ ನೆಡುತ್ತಾ ಹೋದಂತೆಲ್ಲ ದೇಶ ಕಟ್ಟುತ್ತಾ ಒಡೆಯುತ್ತಾ ಹೋಗುವ ಮನಕ್ಕೆ ದೇಶ ಎಲ್ಲೋ ವಿದೇಶವೂ ಅಲ್ಲೇ.
ನಿನ್ನ ಬಿಡುಗಡೆಯ ಈ ಹೊತ್ತಲ್ಲಿ ಇಕೋ, ಇದು ನನ್ನ ದೇಶದಿಂದ ಈ ವಿದೇಶಿಯಳ ದೊಂದು ಪತ್ರ ನಿನಗೆ.
ನಿನ್ನ ತಿರುಗಾಟ ಖುಲಾಸೆ ವಲಸೆ ರೋಚಕವಾಗಿರಲಿ, ಪಿಸುಮಾತುಗಳು ನೆನಪಿರಲಿ.
ವೈಶಾಲಿ ಹೆಗಡೆ, ಬೋಸ್ಟನ್, ಅಮೆರಿಕ
ಕೃತಜ್ಞತೆಗಳು
ಹೈಸ್ಕೂಲು ದಿನಗಳಲ್ಲಿ ಯುವವಿಭಾಗದಲ್ಲಿ ಬರಹಗಳನ್ನು ಪ್ರಕಟಿಸಿದ ಮುಂಗಾರು ಪತ್ರಿಕೆ, ಇಂಗ್ಲೆಂಡಿಗೆ ಬಂದ ಹೊಸದರಲ್ಲಿ ಕೆಂಡಸಂಪಿಗೆ ಎನ್ನುವ ಅಂತರ್ಜಾಲ ಪತ್ರಿಕೆಯನ್ನು ಪರಿಚಯಿಸಿದ ಸ್ನೇಹಿತ ಚಿನ್ಮಯ್ ಭಟ್, ಕೆಂಡಸಂಪಿಗೆಯಲ್ಲಿ ಬರೆಯಲು ನೀವೇನೂ ಖ್ಯಾತ ಬರಹಗಾರರೇ ಆಗಬೇಕಿಲ್ಲ ಎನ್ನುವ ಸಾಲನ್ನು ತನ್ನ ಅಂತರ್ಜಾಲ ಪುಟದಲ್ಲಿ ಫಳಫಳ ಹೊಳೆಸುತ್ತ, ಗಂಟೆಯ ಟಿಣ್ ಟಿಣ್ ಸದ್ದಿನೊಂದಿಗೆ ಮಕ್ಕಳನ್ನು ಆಕರ್ಷಿಸುವ ಬೊಂಬಾಯಿ ಮಿಠಾಯಿಯವನಂತೆ ಸೆಳೆದ, ಆಗಾಗ ಕಿವಿಹಿಂಡಿ ಬರೆಸಿದ, ಪ್ರಕಟಣೆಗೆ ಮಾರ್ಗದರ್ಶನ ನೀಡಿದ, ಬೆನ್ನುಡಿ ಬರೆದ ಸಂಪಿಗೆಯ ಸಂಪಾದಕ ಅಬ್ದುಲ್ ರಶೀದರು, ಲಂಡನ್ ಅಲ್ಲಿ ಭೇಟಿ ಆದಾಗ ಕನ್ನಡದಲ್ಲೇ ಬರೆಯುತ್ತಿರಿ ಎಂದ ಅನಂತಮೂರ್ತಿ ಅವರು, ಅನತಿ ದೂರದಲ್ಲಿದ್ದು ಪತ್ರದ ಎರಡು ಸಾಲುಗಳಲ್ಲೇ ಹುರಿದುಂಬಿಸುವ ಹಿರಿಯ ತಿರುಮಲೇಶರು, ಹಲವು ಬರಹಗಳಿಗೆ ಭಾವಚಿತ್ರ ಒದಗಿಸಿ ಜೀವತುಂಬಿದ ಮಿತ್ರರಾದ ದಿನೇಶ್ ಮಾನೀರ್, ಗಣಪತ್ ರಾವ್, ವಿಜಯ ಹೆಗಡೆ, ಗಣಪತಿ ಭಟ್, ಸ್ಟೀವ್ ವಿಲ್ಸನ್, ಜನಪ್ರತಿನಿಧಿಯಲ್ಲಿ ಬರೆಸಿದ ಸುಬ್ರಹ್ಮಣ್ಯ ಪಡುಕೋಣೆಯವರು, ಪ್ರಜಾವಾಣಿ ಹಾಗು ಸುಧಾಗಳಲ್ಲಿ ಮೊದಲ ಬಾರಿ ಜಾಗ ಇತ್ತ ಇಸ್ಮಾಯಿಲ್, ರಘುನಾಥ್ ಚ.ಹ., ಹನೀಫರು, ಉದಯವಾಣಿಯಲ್ಲಿ ಬ್ರಿಸ್ಟಲ್ ಟಪ್ಪಾಲ್ ಅಂಕಣ ಸಂಯೋಜಿಸಿದ, ಸಾಪ್ತಾಹಿಕ ಸಂಪದದಲ್ಲಿ, ತುಷಾರದಲ್ಲಿ ಬರಹಗಳಿಗೆ ಅನುವು ಮಾಡಿಕೊಟ್ಟ ಪೃಥ್ವಿರಾಜ್ ಕವತ್ತಾರರು, ಪ್ರಜಾವಾಣಿಯ ಭಾನುವಾರದ ಪುರವಣಿಯಲ್ಲಿ ಲೇಖನಗಳನ್ನು ಸ್ವೀಕರಿಸಿದ, ದೀಪಾವಳಿ ವಿಶೇಷಾಂಕದಲ್ಲಿ ಬರೆಸಿದ ಶೈಲಜಾ ಹೂಗಾರರು, ಬರಹಗಳಿಗೆ ಓದು ಮತ್ತು ವಸ್ತುನಿಷ್ಠ ವಿಮರ್ಶೆಯನ್ನು ನೀಡುವ ಚೇತನಸ್ವರೂಪಿ ಮರವಂತೆ ಮನೆಯವರು ಮತ್ತು ಬಂಧುಗಳು, ಬರವಣಿಗೆಯ ಹಿಂಸೆಯನ್ನು ತಾಳಿಕೊಂಡು ಬಂದ ಹೆಂಡತಿ ಮಕ್ಕಳು, ಮರವಂತೆಯಿಂದ ಬ್ರಿಟನ್ನಿನ ತನಕ ಅಂಗನವಾಡಿ ಶಾಲೆ ಕಾಲೇಜು ಹಾಸ್ಟೆಲ್ ವೃತ್ತಿಜೀವನ ಆಟದ ಬಯಲಿನಲ್ಲಿ ಸಿಕ್ಕ ದೋಸ್ತಿಗಳು ಗುರುಗಳು ವಸ್ತುಗಳು ವಿಷಯಗಳು ಆಗುಹೋಗುಗಳು, ಬ್ರಿಸ್ಟಲ್ ಕನ್ನಡ ಬಳಗ, ಅನಿವಾಸಿ ಯು.ಕೆ. ಬಳಗದವರು, ಬರಹಗಳನ್ನು ಓದಿದ ಮೆಚ್ಚಿದ ಟೀಕಿಸಿದ ಪರಿಚಯಸ್ಥರು ಅನಾಮಿಕರು, ಪತ್ರಿಕಾ ಸಂಪರ್ಕ ಒಡನಾಟಗಳನ್ನು ಹೆಚ್ಚಿಸಿದ ಗೆಳೆಯ ನಾರಾಯಣ ಎ., ಪುಸ್ತಕವನ್ನು ಪ್ರಕಟಿಸಲು ಉತ್ತೇಜನ ನೀಡಿದ ಮಿತ್ರರಾದ ದೀಪಕ್ ಬಿ.ಜೆ., ಪ್ರದೀಪ ಕೆಂಚನೂರು, ಯಾಕೂಬ್ ಖಾದರ್ ಗುಲ್ವಾಡಿ, ಆತ್ಮೀಯರಾದ ಸತೀಶ್ ಚಪ್ಪರಿಕೆ, ಹಿರಿಯರಾದ ನಾಗೇಶ್ ಹೆಗಡೆಯವರು, ಹುರುಪಿನಲ್ಲಿ ಪ್ರಕಟಿಸುತ್ತಿರುವ, ಪ್ರಕಟಣೆಯ ಅನುಭವವನ್ನು ಮಧುರವಾಗಿಸಿದ ಗಣೇಶ ಯಾಜಿ, ಸವಿತಾ ಯಾಜಿ ದಂಪತಿಗಳು ಹಾಗು ಯಾಜಿ ಪ್ರಕಾಶನ ಬಳಗದವರು, ಮುನ್ನುಡಿಯ ಖಾಲಿಯನ್ನು ವಿದೇಶದಿಂದ ಪತ್ರ ಬರೆದು ತುಂಬಿಸಿದ ವೈಶಾಲಿ ಹೆಗಡೆ, ಹೊರಪುಟಗಳಿಗೆ ರೂಪ ಅಲಂಕಾರ ನೀಡಿದ ಅರುಣಕುಮಾರ್, ಮುದ್ರಿಸಿದ ಇಳಾ ಮುದ್ರಣಾಲಯ ಬೆಂಗಳೂರು, ತನಗಿಷ್ಟ ಬಂದಾಗಲೆಲ್ಲ ಸುರಿಯುವ ಇಂಗ್ಲೆಂಡ್ ಮಳೆ ಮತ್ತದರ ಹಿನ್ನೆಲೆಯಲ್ಲಿ ಕೂತ ಲಂಡನ್ ಬೀದಿ, ಚಾರಿತ್ರಿಕ ಬಿಗ್ ಬೆನ್ ಗಡಿಯಾರ ಪುರಾತನ ಕಟ್ಟಡಗಳಿಂದ ಕೂಡಿದ ಚಿತ್ರವನ್ನು ಮುಖಪುಟಕ್ಕೆ, ಪಾರಿವಾಳಗಳು ಮನುಷ್ಯರಿಗಿಂತ ಸ್ವಚ್ಛಂದವಾಗಿ ಬದುಕುವ ಲಂಡನ್ ನೋಟದ ಹಾಗು ಇಂಗ್ಲೆಂಡಿನ ನಿರ್ಜನ ಇಕ್ಕಟ್ಟಿನ ಅನಾಮಿಕ ಬೀದಿಯ ಚಿತ್ರಗಳನ್ನು ಬೆನ್ನುಪುಟಕ್ಕೆ ಬಳಸುವುದನ್ನು ಸಾಧ್ಯವಾಗಿಸಿದ ಅಂತರ್ಜಾಲ ಪುಟಗಳು (www.pexels.com, www.unsplash.com) ಪ್ರಕಟಣೆ ಪುಸ್ತಕ ವಿನ್ಯಾಸದ ಮಾಮೂಲಿ ಶಿಷ್ಟಾಚಾರಗಳಿಂದ ಬಿಡಿಸಿಕೊಳ್ಳಲು ಉಮೇದು ನೀಡಿದ ಜಯಂತ ಕಾಯ್ಕಿಣಿಯವರು, ಬರೆಯುವ ಮೊದ ಮೊದಲ ದಿನಗಳಿಂದಲೂ ಉತ್ಸಾಹ ತುಂಬಿದ, ಈಗ ಬೆನ್ನುಡಿ ಬರೆದುಕೊಟ್ಟು ಮತ್ತೆ ಬೆನ್ನು ತಟ್ಟಿರುವ ವೈದೇಹಿಯವರು, ಬರವಣಿಗೆಯ ಒಳ ಹೊರಗೆ ನನ್ನನ್ನು ತೀವ್ರವಾಗಿ ಆವರಿಸಿರುವ ಯಕ್ಷಗಾನ ಎನ್ನುವ ಕಲೆ ವಿದ್ಯಮಾನ ಮಾಯೆ ಮೋಡಿ.
-ಯೋಗೀಂದ್ರ ಮರವಂತೆ
ಪುಟ ತೆರೆದಂತೆ…
೧. ಆಂಗ್ಲರ ಕನ್ನಡಕದಲ್ಲಿ ಭಾರತ
೨. ಅಳಿದ ಗೋಪುರದ ಉಳಿದ ಪ್ರಶ್ನೆಗಳು
೩. ವಲಸೆ ವೈವಿಧ್ಯತೆ ವಿಕಾಸಗಳ ಕಥೆ ಹೇಳುವ ಸಮೋಸಾ
೪. ನಾವು ನಮ್ಮಂತೆ ಅವರು ಅವರಂತೆ
೫. ಆಂಗ್ಲರು ಮೆಚ್ಚುವ ಇಂಡಿಯನ್ ಕರಿ
೬. ಹೀಗಿದೆ ನೋಡಿ ನಮ್ಮ ದೀಪಾವಳಿ
೭. ಸೋಮವಾರವೆಂಬ ಏರುದಾರಿ ಶುಕ್ರವಾರ ಎನ್ನುವ ಇಳಿಜಾರು
೮. ಕಗ್ಗತ್ತಲ ಬ್ರಿಟನ್ನಿನಲ್ಲಿ ಕ್ರಿಸ್ಮಸ್ ಬೆಳಕಮಾಲೆ
೯. ಐರಿಷ್ ಅಜ್ಜನ ಧರ್ಮಪಾಠಗಳು
೧೦. ಸಣ್ಣ ಶಾಲೆಯ ಸುತ್ತಲ ಸಣ್ಣ ವಿಷಯಗಳು
೧೧. ಶಾಂತವಾಗಿರಿ ಸುಮ್ಮನೆ ಸಾಗುತ್ತಿರಿ
೧೨. ನವೆಂಬರ ಎಂದರೆ ಮೀಸೆಯ ಮಾಸ
೧೩. ಹಗಲೆಂದರೆ ಬೆಳಕಿನ ಉಳಿತಾಯವಂತೆ
೧೪. ಮೌನವಾದ ಲಂಡನ್‌ನ ಸಮಯಪಾಲಕ
೧೫. ಇಂಗ್ಲಿಷ್ ಟೂರಿಸ್ಟ್ ಕಂಡಂತೆ ಇಂಡಿಯಾ
೧೬. ಮಡಿದರೂ ಮಾತನಾಡುವ ರಾಜಕುಮಾರಿ
೧೭. ಇಂಗ್ಲೆಂಡ್ ಅರಮನೆಯ ಫೇರಿಟೇಲ್ ಮದುವೆ
೧೮. ಕನ್ನಡ ಸಮ್ಮೇಳನದ ಹೊತ್ತಿನ ಇಂಗ್ಲಿಷ್ ಯೋಚನೆಗಳು
೧೯. ಇಂಗ್ಲೆಂಡಿನ ಚಳಿಗಾಲದ ಅಜ್ಜನ ಕಥೆ
೨೦. ಪಂಚತಂತ್ರವಾದ ಪ್ರಜಾತಂತ್ರ
೨೧. ವಲಸೆ, ಒಂಟಿತನ ಮತ್ತು ಬೆಕ್ಕು
೨೨. ಕನಸಾಗಿ ಹೋದ ಚಳಿಮುಸುಕಿದ ಹಿಮಸುರಿದ ದಿನಗಳು
೨೩. ಎರಡು ಹುಲಿಗಳ ಅಕಾಲಿಕ ಮರಣ
೨೪. ಚಳಿಗಾಲದ ಮಧ್ಯಂತರದ ತಣ್ಣಗಿನ ಲಹರಿಗಳು
೨೫. ಇನ್ನೂ ಸಾಲುಗಳನ್ನು ಸೇರಿಸಿಕೊಳ್ಳುತ್ತಿರುವ ಕೀಟ್ಸನ ಆಟಮ್ ಕವಿತೆ
೨೬. ಸಾಹಿತ್ಯ ಮತ್ತು ಸಿನೆಮಾ: ಲಂಡನ್ನಲ್ಲಿ ಅನಂತಮೂರ್ತಿಯವರ ಮಾತುಗಳು
೨೭. ಇಲ್ಲಿ ಕಂಡ ಮಳೆಕನಸು
೨೮. ರಜೆ ಎಂಬ ಸಿರಿತನ ಮತ್ತು ಬಡತನ
೨೯. ಮಲೆನಾಡ ಮಳೆದಿನದ ಮಾತುಗಳು ಮೌನಗಳು
೩೦. ಭಾನುವಾರದ ಇಟಾಲಿಯನ್ ಕಟಿಂಗ್
೩೧. ಅನಿವಾಸಿಗಳ ಇಂಗ್ಲೆಂಡಿನಲ್ಲಿ ರಿಸರ್ವೇಶನ್
೩೨. ಆಗಷ್ಟ್ ತಿಂಗಳ ಅಂದದ ಬೇಸಿಗೆ
೩೩. ಕಳೆದು ಹೋಗುವ ಬೆಕ್ಕುಗಳ ಕುರಿತು
೩೪. ಶರತ್ಕಾಲದ ಇಂಗ್ಲಿಷ್ ದಸರಾ
೩೫. ವಿಭಜನೆಯ ಕತೆಗಳು ಕೇಳದಾದವೇಕೆ?
Reviews
There are no reviews yet.